Published: 2025-10-12

Table of Contents

Table of Contents

I to XVII

ಕರ್ವಾಲೊ ಮತ್ತು ಸಾಮಾಜಿಕ ವಾಸ್ತವಗಳು

ಸಂತೋಷ ಉಂಡಾಡಿ, ಎಸ್.ಎಮ್. ಗಂಗಾಧರಯ್ಯ

01 to 08

ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ರಚಿಸಿರುವ ಕರ್ವಾಲೊ ಕಾದಂಬರಿ 1980ರಲ್ಲಿ ರಚನೆಯಾಗಿ, ಇಂದಿನವರೆಗೆ 70 ಮರು ಮುದ್ರಣಗಳನ್ನು ಕಂಡಿದೆ. ಹಲವಾರು ಭಾರತೀಯ ಮತ್ತು ಇತರೆ ದೇಶಗಳ ಭಾಷೆಗೆ ಅನುವಾದಗೊಂಡಿದೆ. ತೇಜಸ್ವಿಯವರ ಎಲ್ಲಾ ಕೃತಿಗಳು ಪರಿಸರದ ಆಗುಹೋಗುಗಳನ್ನು ಮತ್ತಿತರ ಸಂಗತಿಗಳನ್ನು ಅತ್ಯಂತ ಸಹಜವಾದ ವಾಸ್ತವ ನೆಲೆಗಟ್ಟಿನಲ್ಲಿ ನಿರೂಪಿಸುತ್ತವೆ. ಈ ಕಾದಂಬರಿ ತನ್ನ ವಿಶೇಷವಾದ ಕಥೆ ಮತ್ತು ನಿರೂಪಣ ಶೈಲಿಯಿಂದ ಕನ್ನಡ ಸಾಹಿತ್ಯದಲ್ಲಿ ಭಿನ್ನವಾಗಿ ನಿಲ್ಲುತ್ತದೆ.
ತೇಜಸ್ವಿಯವರು ತಮ್ಮ ಕೃತಿಗಳಲ್ಲಿ ಉತ್ಪ್ರೇಕ್ಷಿತವಾದ, ಅತೀ ಕಾಲ್ಪನಿಕವಾದ ಕಥೆಗಳನ್ನು ಹೇಳುವುದಿಲ್ಲ. ಅವರ ಕೃತಿಗಳಲ್ಲಿ ಹೆಚ್ಚಾಗಿ ನಮಗೆ ಕಾಣುವುದು, ಸಮಾಜದ ಯಥಾವತ್ತಾದ ಚಿತ್ರಣ. ಸಮಾಜದ ಅಂಕುಡೊಂಕುಗಳನ್ನು, ಓರೆಕೋರೆಗಳನ್ನು ಅವರು ಯಾವುದೇ ಬಿಡೆಯಿಲ್ಲದೇ ಚಿತ್ರಿಸುತ್ತಾರೆ. ಸಮಾಜದ ಬದುಕನ್ನು ತದ್ರೂಪವಾಗಿ ಸಾಹಿತ್ಯದಲ್ಲಿ ತರುವ ಮೂಲಕ ಅಲ್ಲಿಯೆ ಒಂದು ತಮಾಷೆಯನ್ನು, ಹಾಸ್ಯವನ್ನು, ವ್ಯಂಗ್ಯವನ್ನು ಸೃಷ್ಟಿಸುತ್ತಾರೆ.
ಕರ್ವಾಲೊ ಕಾದಂಬರಿಯು ಜೀವ ವಿಕಾಸದ ನೆಲೆಯನ್ನು ಶೋಧಿಸುವ ಮನುಷ್ಯನ ವಿಫಲ ಪ್ರಯತ್ನದ ಕಥೆಯನ್ನು ಹೇಳುವ ಕೃತಿಯಾಗಿದೆ. ವಿಜ್ಞಾನದ ಮೂಲಕ ಜೀವನ ಸಾಕ್ಷಾತ್ಕಾರವನ್ನು ಪಡೆದುಕೊಳ್ಳುವ ಹಂಬಲವನ್ನು ಇದು ಪ್ರಕಟಿಸುತ್ತದೆ. ಈ ಕಾದಂಬರಿಯ ಮೂಲ ನೆಲೆ ಹುಡುಕಾಟವೇ. ಹುಡುಕಾಟ ಮನುಷ್ಯನ ಆದಿಮ ಪ್ರವೃತ್ತಿಗಳಲ್ಲಿ ಒಂದು. ಮನುಷ್ಯ ಭೂಮಿಯ ಮೇಲೆ ಅಸ್ತಿತ್ವಪಡೆದಾಗಿನಿಂದ ಸದಾ ಕುತೂಹಲಿಯಾಗಿ ತನ್ನ ಹುಡುಕುವ ಮೂಲಭೂತ ಗುಣವನ್ನು ಕಾಪಾಡಿಕೊಂಡಿದ್ದಾನೆ. ಇಲ್ಲಿ ಕರ್ವಾಲೊ ಕೂಡ ಮಂದಣ್ಣ, ನಿರೂಪಕರು ಮತ್ತು ತನ್ನ ಗೆಳೆಯರ ಬಳಗದೊಂದಿಗೆ ಹಾರುವ ಓತಿಯನ್ನು ಹುಡುಕುವ ಕಥೆಯು ನಮಗೆ ತೆರೆದುಕೊಳ್ಳುತ್ತದೆ. ಅದರ ಮಧ್ಯದಲ್ಲಿ ಸಾಮಾಜಿಕ ಬದುಕು, ರಾಜಕೀಯ, ಮದುವೆ ಪ್ರಸಂಗ, ಪ್ರಕೃತಿಯ ವಿನಾಶ ಮುಂತಾದ ಅಂಶಗಳು ಕಾಣಿಸಿಕೊಳ್ಳುತ್ತವೆ.

Read More »

ಸಂಸ್ಕೃತ ಅಲಂಕಾರ ಗ್ರಂಥಗಳ ಕನ್ನಡ ಅನುವಾದ

ಗೋಪಾಲಕೃಷ್ಣ ಭಟ್ಟ

09 to 21

ಕನ್ನಡ ಸಾಹಿತ್ಯ ಸುಮಾರು 1300 ವರ್ಷಗಳ ಇತಿಹಾಸದಲ್ಲಿ ಭಾಷಾಂತರಗಳಿಂದ ಸಮೃದ್ಧವಾಗಿದೆ. ಈ ಭಾಷಾಂತರ ಪರಂಪರೆ ಮತ್ತು ಪ್ರಕ್ರಿಯೆಯನ್ನು ಕವಿರಾಜಮಾರ್ಗ ಕಾಲದಿಂದಲೇ ಗುರುತಿಸಬಹುದು. ಸಂಸ್ಕೃತಪ್ರಾಕೃತಗಳಿಂದ ಹಾಗೂ ಇಂಗ್ಲಿಷಿನಿಂದ ಭಾಷಾಂತರ ಗ್ರಂಥಗಳ ರಚನೆಯಾಗಿದೆ. ಆದರೆ ಪ್ರಾಚೀನ ಕನ್ನಡ ಸಾಹಿತ್ಯವೆಲ್ಲ ಭಾಷಾಂತರವೆಂದು ಹೇಳುವುದು ಸೂಕ್ತವಲ್ಲ. ಆದರೆ ಹಿಂದಿನ ಕನ್ನಡ ಕವಿಗಳು ಸಂಸ್ಕೃತ ಪ್ರಾಕೃತಗಳಿಂದ ಸ್ವೀಕರಿಸುತ್ತಿದ್ದರೆಂಬ ವಿಶಾಲ ಅರ್ಥದಲ್ಲಿ ಅವರ ಕೃತಿಗಳನ್ನು ಭಾಷಾಂತರ ಎನ್ನಬಹುದು. ಆದರೆ ಕವಿಗಳ ಕಾವ್ಯದಲ್ಲಿ ಪ್ರತಿಭೆ, ಸ್ವೋಪಜ್ಞತೆಗಳನ್ನು ಕಾಣಬಹುದಾದ್ದರಿಂದ ಅವುಗಳನ್ನು ಭಾಷಾಂತರವೆಂಬುದಕ್ಕಿಂತ ಸ್ವತಂತ್ರ ಕೃತಿಗಳೆಂದೇ ಹೇಳಬೇಕಾಗುತ್ತದೆ. ಒಟ್ಟಿನಲ್ಲಿ ಪ್ರಾಚೀನ ಕನ್ನಡ ಕೃತಿಗಳು ಸ್ಥೂಲವಾಗಿ ಅಂಶತಃ ಭಾಷಾಂತರಗಳೇ ಆಗಿವೆ. ಅಲಂಕಾರಶಾಸ್ತ್ರ ಗ್ರಂಥಗಳ ಕನ್ನಡ ಭಾಷಾಂತರದ ವಿಷಯಕ್ಕೆ ಬಂದರೆ ಆಧುನಿಕವಾಗಿ ನಮ್ಮ ಕಣ್ಣಮುಂದೆ ನಿಲ್ಲುವ ವ್ಯಕ್ತಿಯೆಂದರೆ ಡಾ. ಕೆ ಕೃಷ್ಣಮೂರ್ತಿಯವರು. ಇವರು ಭಾಗಶಃ ಹೆಚ್ಚಿನ ಎಲ್ಲ ಸಂಸ್ಕೃತ ಲಾಕ್ಷಣಿಕ ಗ್ರಂಥಗಳನ್ನು ಕನ್ನಡಕ್ಕೆ ಭಾಷಾಂತರಿಸಿ ವಿಮರ್ಶಿಸಿದ್ದಾರೆ ಕೂಡ. ಕನ್ನಡ ಧ್ವನ್ಯಾಲೋಕ ಮತ್ತು ಲೋಚನ ಸಾರ (1961), ಕನ್ನಡ ಕಾವ್ಯಾಲಂಕಾರ (1961), ಕನ್ನಡ ಕಾವ್ಯಾಲಂಕಾರಸೂತ್ರವೃತ್ತಿ (1967), ಕನ್ನಡ ಕಾವ್ಯಪ್ರಕಾಶ (1973) ಕನ್ನಡ ಕಾವ್ಯಮೀಮಾಂಸೆ (1969), ಕನ್ನಡ ಕಾವ್ಯಾದರ್ಶ (1975), ಔಚಿತ್ಯ ವಿಚಾರ ಚರ್ಚಾ, ರಸೋಲ್ಲಾಸ, ಭಾರತೀಯ ಕಾವ್ಯಮೀಮಾಂಸೆ ತತ್ತ್ವ ಮತ್ತು ಪ್ರಯೋಗ (1971) ಕೃಷ್ಣಮೂರ್ತಿಯವರ ಪ್ರಸಿದ್ಧ ಭಾಷಾಂತರ ಗ್ರಂಥಗಳು. ಅದೇ ರೀತಿ ಧನಂಜಯನ ದಶರೂಪಕವನ್ನು (1958) ಕೆ.ವಿ. ಸುಬ್ಬಣ್ಣ ಕನ್ನಡಕ್ಕೆ ಅನುವಾದಿಸಿದ್ದಾರೆ.
ಸಂಸ್ಕೃತ ಅಲಂಕಾರಶಾಸ್ತ್ರ ಗ್ರಂಥಗಳ ಕನ್ನಡ ಭಾಷಾಂತರಗಳ ಪರಿಶೀಲನೆಯ ಈ ಪ್ರಕ್ರಿಯೆಯಲ್ಲಿ ಡಾ. ಕೆ. ಕೃಷ್ಣಮೂರ್ತಿಯವರ ಹೆಸರಿಗೆ ಅಗ್ರಪಟ್ಟ. ಆದರೂ ಪ್ರಸ್ತುತ ಪ್ರಬಂಧದಲ್ಲಿ ಅವರ ಎಲ್ಲಾ ಅನುವಾದ ಗ್ರಂಥಗಳ ಪರಿಶೀಲನೆ ಸಾಧ್ಯವಾಗಲಿಲ್ಲ. ಸಮಯಾಭಾವವೊಂದೆಡೆಯಾದರೆ ಪ್ರಬಂಧವಿಸ್ತಾರತೆಯ ಭಯ ಕೂಡ ಅದಕ್ಕೆ ಬಹುಮುಖ್ಯ ಕಾರಣ. ಆದರೂ ದೊರೆತ ಅವರ ಪುಸ್ತಕಗಳನ್ನು ಯಥಾಮತಿ ಚರ್ಚಿಸಿ ವಿಶ್ಲೇಷಿಸಲಾಗಿದೆ. ಶಾಸ್ತ್ರಗ್ರಂಥಗಳನ್ನು ಕನ್ನಡದಲ್ಲಿ ಓದುವ ಮತ್ತು ಅರ್ಥೈಸಿಕೊಳ್ಳುವ ಸುಯೋಗ ಈ ಭಾಷಾಂತರ ಪ್ರಕ್ರಿಯೆಯಿಂದ ಸಾಧ್ಯವಾಗಿದೆ ಎಂಬಲ್ಲಿಗೆ ಪ್ರತಿಯೊಬ್ಬ ಓದುಗನ ಜೀವನ ಹಾಗೂ ಭಾಷಾಂತರಕಾರರ ಶ್ರಮ ಸಾರ್ಥಕವಾಗಿದೆ.

Read More »

ಸಾಹಿತ್ಯ ಮತ್ತು ಮಾಧ್ಯಮಗಳ: ಪರಸ್ಪರ ಪ್ರಭಾವಗಳು

ಶಿವಾನಂದ ತಡವಳ

22 to 28

ಸಾಹಿತ್ಯವು ಮಾನವನ ಆಂತರಿಕ ಭಾವನೆ, ಚಿಂತನೆ ಮತ್ತು ಅನುಭವಗಳ ಪ್ರತಿಬಿಂಬವಾಗಿದ್ದು, ಮಾಧ್ಯಮವು ಆ ಭಾವನೆಗಳನ್ನು ಸಮಾಜದ ಮುಂದೆ ತಲುಪಿಸುವ ಸೇತುವೆಯಾಗಿದೆ. ಹಳೆಯ ಕಾಲದಲ್ಲಿ ಸಾಹಿತ್ಯವು ಮೌಖಿಕ ಸಂಪ್ರದಾಯ, ಪಾಠಮಾಲೆ, ಪುಸ್ತಕಗಳ ಮೂಲಕ ಮಾತ್ರ ಜನರಿಗೆ ತಲುಪುತ್ತಿದ್ದರೆ, ಇಂದಿನ ಯುಗದಲ್ಲಿ ಪತ್ರಿಕೆ, ರೇಡಿಯೋ, ದೂರದರ್ಶನ, ಸಿನೆಮಾ, ಇಂಟರ್ನೆಟ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ತ್ವರಿತವಾಗಿ ವಿಶ್ವವ್ಯಾಪಕವಾಗುತ್ತಿದೆ. ಈ ಪ್ರಕ್ರಿಯೆಯಿಂದ ಸಾಹಿತ್ಯವು ವಿಸ್ತಾರವಾಗಿರುವುದಲ್ಲದೆ ಅದರ ರೂಪಶೈಲಿಗಳಲ್ಲಿಯೂ ಮಹತ್ವದ ಬದಲಾವಣೆಗಳು ಸಂಭವಿಸಿವೆ. ಮಾಧ್ಯಮಗಳ ಪ್ರಭಾವದಿಂದ ಹೊಸ ಸಾಹಿತ್ಯ ಪ್ರಕಾರಗಳು ಹುಟ್ಟಿಕೊಂಡಿವೆ. ರೇಡಿಯೋ ನಾಟಕ, ಟಿವಿ ಧಾರಾವಾಹಿ, ಚಲನಚಿತ್ರ, ಇಪುಸ್ತಕ, ಬ್ಲಾಗ್, ಮೈಕ್ರೋಫಿಕ್ಷನ್ ಮುಂತಾದವು. ಓದುಗರ ವಿಸ್ತರಣೆ, ಚರ್ಚೆವಿಮರ್ಶೆಯ ನೂತನ ವೇದಿಕೆಗಳು, ಸಾಹಿತ್ಯದ ಜೀವಂತಿಕೆ ಹೆಚ್ಚಿಸುವಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರವಹಿಸಿವೆ. ಸಾಹಿತ್ಯ–ಮಾಧ್ಯಮಗಳು ಪರಸ್ಪರ ಪೂರಕವಾಗಿದ್ದು, ಸಮನ್ವಯದಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಮೌಲ್ಯಾಧಾರಿತ ಸಾಹಿತ್ಯದ ವಿಸ್ತಾರ ಸಾಧ್ಯವಾಗುತ್ತದೆ.

Read More »

ಜಾನಪದ ಸಾಹಿತ್ಯ ಮತ್ತು ಆಧುನಿಕತೆ

ಗುರುರಾಜ ಎಸ್. ನವಲಗುಂದ

29-36

ಜಾನಪದ ಸಾಹಿತ್ಯವು ಕೇವಲ ಗ್ರಾಮೀಣ ಪ್ರದೇಶದ ಅಥವಾ ಅನಕ್ಷರಸ್ಥರ ಬದುಕಿನ ಅಭಿವ್ಯಕ್ತಿಯಲ್ಲ. ಇದು ಮಾನವ ನಾಗರಿಕತೆಯ ಮೂಲಬೇರುಗಳನ್ನು ಅರಸುವ ಹಾಗೂ ಮನುಷ್ಯನ ಅಸ್ತಿತ್ವದ ಮೂಲಭೂತ ಪ್ರಜ್ಞೆಯನ್ನು ಒಳಗೊಂಡಿರುವ ಒಂದು ಸಾರ್ವಕಾಲಿಕ ಜ್ಞಾನ ಭಂಡಾರವಾಗಿದೆ. ಇಡೀ ಜಗತ್ತಿನ ಶಿಷ್ಟ ಸಾಹಿತ್ಯದ ಮೂಲವನ್ನು ಜಾನಪದದಲ್ಲಿ ಕಾಣಬಹುದು ಎಂದು ವಿದ್ವಾಂಸರು ಪ್ರತಿಪಾದಿಸಿದ್ದಾರೆ. ಈ ತತ್ವವನ್ನು ಬಿ. ಎಂ. ಶ್ರೀ ಅವರು ʼಜನವಾಣಿ ಬೇರು; ಕವಿವಾಣಿ ಹೂವುʼ ಎಂಬ ಹೃದಯಸ್ಪರ್ಶಿ ರೂಪಕದ ಮೂಲಕ ಸಮರ್ಥವಾಗಿ ವಿವರಿಸಿದ್ದಾರೆ. ಆಧುನಿಕತೆಯು ಕೇವಲ ತಂತ್ರಜ್ಞಾನದ ಪ್ರಗತಿಯಲ್ಲ, ಬದಲಾಗಿ ಮಾನವನ ಜೀವನಶೈಲಿ, ಚಿಂತನೆ ಮತ್ತು ಮೌಲ್ಯಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುವ ಒಂದು ಪ್ರವಾಹವಾಗಿದೆ. ಜಾನಪದ ಮತ್ತು ಆಧುನಿಕತೆಯ ನಡುವಿನ ಸಂಬಂಧವು ಸರಳವಾಗಿದೆಯೆಂದು ಭಾವಿಸುವುದು ಸರಿಯಲ್ಲ; ಇದು ಸಂಘರ್ಷ, ಹೊಂದಾಣಿಕೆ, ಮತ್ತು ಪರಸ್ಪರ ಪ್ರಭಾವದ ಒಂದು ಸಂಕೀರ್ಣ ಕ್ರಿಯೆಯಾಗಿದೆ. ಮಹಾತ್ಮ ಗಾಂಧೀಜಿಯವರು ಆಧುನಿಕತೆಯನ್ನು ʼಮೊಸಳೆ ಮೇಲಿನ ಸವಾರಿʼಗೆ ಹೋಲಿಸಿ, ಅದರ ಅಪಾಯದ ಬಗ್ಗೆ ಎಚ್ಚರಿಸಿದ್ದಾರೆ.
ಪ್ರಸ್ತುತ ಪ್ರಬಂಧವು ಜಾನಪದ ಸಾಹಿತ್ಯದ ಮೂಲ ಸ್ವರೂಪ ಮತ್ತು ಲಕ್ಷಣಗಳನ್ನು ವ್ಯಾಖ್ಯಾನಿಸಿ, ಆಧುನಿಕತೆಯು ಅದರ ಮೇಲೆ ಬೀರಿದ ಸವಾಲುಗಳು ಮತ್ತು ಪರಿಣಾಮಗಳನ್ನು ವಿಶ್ಲೇಷಿಸುತ್ತದೆ. ಜಾನಪದವು ಹೇಗೆ ಈ ಸವಾಲುಗಳನ್ನು ಎದುರಿಸಿ ಹೊಸ ರೂಪಗಳಲ್ಲಿ ಪುನರ್ ವ್ಯಾಖ್ಯಾನಗೊಂಡಿದೆ ಮತ್ತು ಆಧುನಿಕ ಕನ್ನಡ ಸಾಹಿತ್ಯದಲ್ಲಿ ಯಾವ ರೀತಿಯಲ್ಲಿ ಪ್ರಸ್ತುತವಾಗಿದೆ ಎಂಬುದನ್ನು ಇದು ಚರ್ಚಿಸುತ್ತದೆ. ಈ ಪ್ರಬಂಧದಲ್ಲಿ ಜಾನಪದವು ಸಂಪೂರ್ಣವಾಗಿ ನಾಶವಾಗದೆ, ಹೊಸ ಕಾಲಕ್ಕೆ ತಕ್ಕಂತೆ ಹೊರಳು ದಾರಿಯಲ್ಲಿದೆ ಎಂಬ ಪ್ರಮುಖ ಅಂಶವನ್ನು ಪರಿಶೀಲನೆಗೆ ಒಳಪಡಿಸಿ ನೋಡಲಾಗಿದೆ. ಡಾ. ಹಾ. ಮಾ. ನಾಯಕ ಅವರು ಫೋಕ್ಲೋರ್ (Folkore) ಎಂಬ ಪಾಶ್ಚಾತ್ಯ ಪದಕ್ಕೆ ಜಾನಪದ ಎಂಬ ಶಬ್ದವನ್ನು ಸಮಾನಾರ್ಥಕವಾಗಿ ಬಳಕೆಗೆ ತಂದರು, ಇದು ಜನಪದರ ಸಾಹಿತ್ಯ, ಸಂಗೀತ, ನೃತ್ಯ ಮತ್ತು ಆಟ ಸೇರಿದಂತೆ ಅವರ ಸಮಗ್ರ ಜ್ಞಾನವನ್ನು ಒಳಗೊಂಡಿದೆ. ಪ್ರಸ್ತುತ ಪ್ರಬಂಧದಲ್ಲಿ ವಿಷಯದ ಬಹುಆಯಾಮಗಳನ್ನು ಗಹನವಾಗಿ ಪರಿಶೀಲಿಸುವ ಯೋಜನೆ ಹೊಂದಿದೆ.

 

Read More »

ಜನಪದ ಸಾಹಿತ್ಯ ಮತ್ತು ಆಧುನಿಕತೆ: ಒಂದು ಅವಲೋಕನ

ಆನಂದ ಬಾರಿಕರ

37 to 49

ಜನಪದ ಸಾಹಿತ್ಯ ಮತ್ತು ಆಧುನಿಕತೆಯ ನಡುವಿನ ಸಂಬಂಧವು ಸಂಕೀರ್ಣ ಮತ್ತು ಬಹುಮುಖಿಯಾಗಿದೆ. ಜನಪದ ಸಾಹಿತ್ಯವು ಆಧುನಿಕ ಜಗತ್ತಿನ ಸಂದರ್ಭದಲ್ಲಿ ತನ್ನ ಸಾಂಪ್ರದಾಯಿಕ ರೂಪ, ವಿಷಯ ಮತ್ತು ಮಹತ್ವವನ್ನು ಹೇಗೆ ಉಳಿಸಿಕೊಳ್ಳುತ್ತದೆ ಎಂಬುದನ್ನು ಈ ಸಂಬಂಧವು ತೋರಿಸುತ್ತದೆ. ಜನಪದ ಸಾಹಿತ್ಯವು ಒಂದು ಸಮುದಾಯದ ಬದುಕಿನ ಶೈಲಿ, ಸಂಸ್ಕೃತಿ ಮತ್ತು ನಂಬಿಕೆಗಳನ್ನು ಪ್ರತಿಬಿಂಬಿಸುತ್ತದೆ. ಇದು ಮೂಲತಃ ಕೃಷಿ ಸಂಸ್ಕೃತಿ, ದೇವರುದಿಂಡಿರು, ಜಾತ್ರೆ, ಹಬ್ಬಗಳು ಮತ್ತು ಕುಟುಂಬ ಸಂಬಂಧಗಳಿಗೆ ಸಂಬಂಧಿಸಿದೆ. ಜನಪದ ಹಾಡುಗಳು, ಕಥೆಗಳು, ಒಗಟುಗಳು ಮತ್ತು ಗಾದೆ ಮಾತುಗಳು ಮೌಖಿಕವಾಗಿ ತಲೆಮಾರುಗಳಿಂದ ಹರಿದುಬಂದಿವೆ. ಈ ಸಾಹಿತ್ಯವು ಒಂದು ಸಮುದಾಯದ ಸಾಮೂಹಿಕ ಸ್ಮೃತಿ ಮತ್ತು ಜ್ಞಾನದ ಆಗರವಾಗಿದೆ. 
ಪ್ರಸ್ತುತ ಲೇಖನದಲ್ಲಿ ಜಾನಪದ ಸಾಹಿತ್ಯ ಮೇಲೆ ಆಧುನಿಕತೆಯ ಪರಿಣಾಮಗಳು ಮತ್ತು ಒಡ್ಡಿರುವ ಸವಾಲುಗಳ ಪರಾಮರ್ಶನ ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಜಾನಪದ ಸಾಹಿತ್ಯ ಮತ್ತು ಆಧುನಿಕರಣದಲ್ಲಿ ಪ್ರಧಾನವಾಗಿ ಶಿಕ್ಷಣ, ನಗರೀಕರಣ, ತಂತ್ರಜ್ಞಾನ ಇವು ಆಧುನಿಕ ಸಂದರ್ಭದಲ್ಲಿ ಜನಪದ ಸಾಹಿತ್ಯದ ಪುನರುಜ್ಜೀವನಕ್ಕೆ ಕಾರಣವಾಗಿವೆ. ಟಿ.ವ್ಹಿ., ಕಂಪ್ಯೂಟರ್, ಲ್ಯಾಪ್‌ಟಾಪ್ ಮತ್ತು ಮೋಬೈಲ್ ಮಾಧ್ಯಮಗಳಲ್ಲಿರುವ ಯೂಟ್ಯೂಬ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಂತಹ ತಂತ್ರಜ್ಞಾನಗಳ ಮೂಲಕ ಪ್ರಸಾರವಾಗುವ ಸಂಸ್ಕೃತಿ ಕಾರ್ಯಕ್ರಮಗಳಲ್ಲಿ, ಸಿನಿಮಾ, ರಂಗಭೂಮಿ ನಾಟಕಗಳಲ್ಲಿ ಜನಪದ ಹಾಡುಗಳು, ಕಥೆಗಳು ಆಧುನಿಕ ರೂಪದಲ್ಲಿ ಬಳಸಲ್ಪಡುತ್ತಿವೆ. ಆಧುನಿಕತೆಯು ಜನಪದ ಸಾಹಿತ್ಯಕ್ಕೆ ಸವಾಲುಗಳನ್ನು ಒಡ್ಡಿದರೂ, ಅದು ಅದಕ್ಕೆ ಹೊಸ ಜೀವನ ಮತ್ತು ವೇದಿಕೆಗಳನ್ನು ಒದಗಿಸಿದೆ. ಇದು ಜನಪದ ಸಾಹಿತ್ಯದ ರೂಪವನ್ನು ಬದಲಿಸಿರಬಹುದು, ಆದರೆ ಅದರ ಮೂಲ ಸಾರ ಮತ್ತು ಮೌಲ್ಯಗಳು ಇಂದಿಗೂ ಉಳಿದಿವೆ. ಹೀಗೆ ಪ್ರಸ್ತುತ ಲೇಖನದಲ್ಲಿ ಕೆಲವು ಪ್ರಮುಖ ವಿಷಯಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನವನ್ನು ಸಾದ್ಯಂತವಾಗಿ ಮಾಡಿದೆ.

Read More »

ನೀತಿಬೋಧಕ ಸಾಹಿತ್ಯದ ಅಧ್ಯಯನದಲ್ಲಿ ಸಂಸ್ಕೃತ ಭಾಷೆಯ ಪ್ರಾಮುಖ್ಯತೆ

ಪ್ರಕಾಶ ಎನ್. ಹೆಗಡೆ

50 to 55

ಸಂಸ್ಕೃತವು ಭಾರತದ ಪುರಾತನ ಮತ್ತು ಶಾಸ್ತ್ರೀಯ ಭಾಷೆಯಾಗಿದ್ದು, ಇದು ಭಾರತೀಯ ಸಾಹಿತ್ಯ, ತತ್ತ್ವಶಾಸ್ತ್ರ ಮತ್ತು ಧಾರ್ಮಿಕ ಗ್ರಂಥಗಳ ಮೂಲವಾಗಿದೆ. ಋಗ್ವೇದದಂತಹ ವಿಶ್ವದ ಮೊದಲ ಗ್ರಂಥಗಳು ಇದರಲ್ಲಿ ರಚಿಸಲ್ಪಟ್ಟಿವೆ. ವಿಜ್ಞಾನ, ಗಣಿತ, ವೈದ್ಯಕೀಯ ಮತ್ತು ಖಗೋಳಶಾಸ್ತ್ರ, ನೀತಿಶಾಸ್ತ್ರ ಮುಂತಾದ ಕ್ಷೇತ್ರಗಳಲ್ಲಿನ ಭಾರತೀಯ ಪ್ರಗತಿಗೆ ಸಂಸ್ಕೃತವೇ ಅಡಿಪಾಯವಾಯಿತು. ಅಲ್ಲದೇ ಆಧುನಿಕ ಭಾರತೀಯ ಭಾಷೆಗಳ ಶಬ್ದಕೋಶಕ್ಕೆ ಸಂಸ್ಕೃತವು ಕೊಡುಗೆ ನೀಡಿದೆ.ಇದು ಇಂದಿಗೂ ಕೆಲವು ಧಾರ್ಮಿಕ ಆಚರಣೆಗಳಲ್ಲಿ ಮತ್ತು ಶೈಕ್ಷಣಿಕ ವಲಯಗಳಲ್ಲಿ ಬಳಕೆಯಲ್ಲಿದೆ. ಸಂಸ್ಕೃತವು ವೇದಗಳು, ಉಪನಿಷತ್ತುಗಳು, ಮಹಾಭಾರತ ಮತ್ತು ರಾಮಾಯಣದಂತಹ ಮಹಾಕಾವ್ಯಗಳ ರಚನೆಗೆ ಕಾರಣವಾಯಿತು. ಇದು ಭಾರತೀಯ ಜ್ಞಾನದ ಭಂಡಾರವಾಗಿದ್ದು, ಆಳವಾದ ಆಧ್ಯಾತ್ಮಿಕ ಮತ್ತು ಬೌದ್ಧಿಕ ಚಿಂತನೆಗಳಿಗೆ ಅಡಿಪಾಯ ಹಾಕಿದೆ. ಸಂಸ್ಕೃತವು ಗಣಿತ, ಖಗೋಳಶಾಸ್ತ್ರ (ಉದಾಹರಣೆಗೆ ಆರ್ಯಭಟನ ಆರ್ಯಭಟೀಯ) ಮತ್ತು ವೈದ್ಯಕೀಯ (ಉದಾಹರಣೆಗೆ ಸುಶ್ರುತ ಸಂಹಿತೆ) ಕ್ಷೇತ್ರಗಳಲ್ಲಿನ ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಗೆ ಸಹಾಯ ಮಾಡಿತು. ಸಂಸ್ಕೃತವು ಹಲವಾರು ಭಾರತೀಯ ಭಾಷೆಗಳಿಗೆ ತಾಯಿಯೆಂದು ಪರಿಗಣಿಸಲಾಗಿದೆ. ಇದು ಇಂಗ್ಲಿಷ್ ಸೇರಿದಂತೆ ಅನೇಕ ಭಾಷೆಗಳ ಶಬ್ದಕೋಶಕ್ಕೆ ಪದಗಳನ್ನು ಒದಗಿಸಿದ್ದು ಹೊಸ ತಾಂತ್ರಿಕ ಪದಗಳನ್ನು ರೂಪುಗೊಳಿಸಲು ಸಹಾಯ ಮಾಡಿದೆ. ಸಂಸ್ಕೃತವು ಭಾರತೀಯ ಸಂಸ್ಕೃತಿ ಮತ್ತು ನಾಗರಿಕತೆಯ ಅವಿಭಾಜ್ಯ ಅಂಗವಾಗಿದೆ. ಹಿಂದೂ ಧಾರ್ಮಿಕ ಆಚರಣೆಗಳಲ್ಲಿ ಮತ್ತು ಪೂಜಾ ವಿಧಾನಗಳಲ್ಲಿ ಇದು ಇಂದಿಗೂ ಬಳಕೆಯಲ್ಲಿದೆ. ಸಂಸ್ಕೃತವು ಕಡಿಮೆ ಪದಗಳಲ್ಲಿ ಹೆಚ್ಚು ಅರ್ಥಗಳನ್ನು ನೀಡುವ ಸಾಮರ್ಥ್ಯವನ್ನು ಹೊಂದಿರುವುದರಿಂದ ವಿಶ್ವಮಾನ್ಯತೆ ಗಳಿಸಿದೆ.

Read More »

ಕನ್ನಡ ಸಾಹಿತ್ಯ ಮತ್ತು ಸಾಮಾಜಿಕ ಮಾಧ್ಯಮಗಳು

ಉಷಾರಾಣಿ, ಮಹೇಶ ಚಿಂತಾಮಣಿ

56 to 63

ಕನ್ನಡ ಸಾಹಿತ್ಯ ನಿಂತ ನೀರಲ್ಲ. ಅದು ಹರಿಯುವ ಜಲಧಾರೆ. ಅದು ನವನವೋನ್ಮೇಷಶಾಲಿನಿ. ಕನ್ನಡ ಸಾಹಿತ್ಯದ ಚರಿತ್ರೆ ಹಾಗೂ ಬೆಳವಣಿಗೆಯನ್ನು ನಾವು ಗಮನಿಸಿದರೆ ಇದು ಮನದಟ್ಟಾಗುತ್ತದೆ. 21ನೇ ಶತಮಾನದ ತಂತ್ರಜ್ಞಾನದಲ್ಲಿ ಆದ ಕ್ರಾಂತಿಕಾರಕ ಬದಲಾವಣೆ ಕನ್ನಡ ಸಾಹಿತ್ಯದ ಮೇಲೂ ತನ್ನ ಗಾಢವಾದ ಪ್ರಭಾವವನ್ನು ಬೀರಿದೆ. ನಮ್ಮ ಅನ್ವೇಷಣೆಯ ಫಲವಾಗಿ ಅನೇಕ ಆವಿಷ್ಕಾರಗಳು ನಡೆದು, ಮೊಬೈಲ್ ನಮ್ಮ ಕೈಸೇರಿತು. ಈಗ ಅದು ಮನುಷ್ಯನ ಅವಿಭಾಜ್ಯ ಅಂಗದಂತಾಗಿದೆ. ಮನುಷ್ಯರು ಮೊಬೈಲನ್ನು ಮರೆತು ಕೂಡ ಮರೆಯಲಾರರು. ಒಂದು ವಸ್ತು ಅನೇಕ ಉಪಯೋಗ ಎನ್ನುವಂತೆ ಮೊಬೈಲ್‌ನಲ್ಲಿ ಗಡಿಯಾರ, ಕ್ಯಾಲ್ಕುಲೇಟರ್, ಕ್ಯಾಮೆರಾ, ಆಕಾಶವಾಣಿ, ಇವುಗಳಷ್ಟೇ ಅಲ್ಲದೇ ಅಂತರ್ಜಾಲ (ಇಂಟರ್ನೆಟ್) ಇದ್ದರೆ ಇಡೀ ಭೂಮಂಡಲದ ಯಾವುದೇ ವಿಷಯಗಳನ್ನು ಕ್ಷಣಮಾತ್ರದಲ್ಲಿ ಮಾಹಿತಿ ನೀಡುವ ಗೂಗಲ್ ಜೊತೆಗೆ ಪೂರಕವಾದ ಅನೇಕ ಆಪ್‌ಗಳು ಲಭ್ಯವಿವೆ. ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನದ ಕ್ಷೇತ್ರದಲ್ಲಿ ಹೊಸ ಸಂಚಲನವನ್ನುಂಟು ಮಾಡಿರುವ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಮನುಷ್ಯನ ಸಾಧನೆ ಹಾಗೂ ಪ್ರಗತಿಯ ದ್ಯೋತಕವಾಗಿದೆ.

Read More »

ರಂಗಕಲಾವಿದೆಯರಿಗೆ ಪುನರ್ವಸತಿಯ ಅಗತ್ಯ

ರವಿ ಎನ್.ಸಿ.

64 to 72

ಮಾನವನ ಸೃಜನಶೀಲ ಅಭಿವ್ಯಕ್ತಿಗಳಲ್ಲಿ ರಂಗಕಲೆ ಬಹಳ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ. ಅದು ಪರಿಣಾಮಕಾರಿಯಾದ ಮಾಧ್ಯಮವೂ ಹೌದು. ಎಲ್ಲ ಆಯಾಮಗಳಲ್ಲೂ ಗ್ರಹಿಸಿದಾಗ ರಂಗಕಲೆ ಸಾಂಸ್ಕೃತಿಕವಾದ ಮಹತ್ವವನ್ನು ಪಡೆದುಕೊಂಡಿದೆ. ಆದರೆ ತಲೆಮಾರು ಕಳೆದಂತೆ ಕಾಲಚಕ್ರ ಉರುಳಿದಂತೆ ಆದ ಬದಲಾವಣೆಗಳಿಂದ ಈ ರಂಗಭೂಮಿಯಲ್ಲಿ ದುಡಿಯುವ ಕಲಾವಿದೆಯರಿಗೆ ಸಿಗಬೇಕಾದ ಸೌಲಭ್ಯಗಳು, ಆ ಕಲಾವಿದರಿಂದ ಬಹುದೂರ ಸರಿದಿವೆ. ಯಾಕೆ ನಮ್ಮ ಸಮಾಜದಲ್ಲಿ ಈ ರೀತಿಯಾದ ವೈಪರೀತ್ಯಗಳು ನಡೆಯುತ್ತದೆ ಎಂಬುದನ್ನು ಅರಿಯಲು ನಾನು ಪ್ರಯತ್ನಿಸುತ್ತಿದ್ದೇನೆ. ಇಲ್ಲಿ ಪ್ರಧಾನವಾಗಿ ಗಮನಿಸುವುದು ರಂಗಕಲಾವಿದೆಯರಿಗೆ ಸಿಗಬೇಕಾದ ಪುನರ್ವಸತಿಗಳ ಕುರಿತು.
ಸರ್ಕಾರ ವೃತ್ತಿ ಕಂಪನಿಗಳ ಉಳಿವಿಗೆ ಯಾವುದೇ ನಿಶ್ಚಿತವಾದ ಯೋಜನೆಯನ್ನು ರೂಪಿಸಿಲ್ಲವಾದ್ದರಿಂದ ಆ ಕಂಪನಿಗಳ ಕಲಾವಿದೆಯರೂ ತಮ್ಮ ವೃದ್ಧಾಪ್ಯದಲ್ಲಿ ದಾರಿ ಕಾಣದೆ ಕಂಗಾಲಾಗಿದ್ದಾರೆ. ರಂಗಕಲಾವಿದೆಯರು ವೃದ್ಧಾಪ್ಯದಲ್ಲಿ ಬದುಕಿನ ನಿಶ್ಚಿತ ದಾರಿ ಕಾಣದೆ ಕಂಗೆಟ್ಟಿದ್ದಾರೆ. ಸರ್ಕಾರ ರಂಗಕಲಾವಿದೆಯರ ಉಳಿವಿಗೆ ನಿಶ್ಚಿತವಾದ ಯೋಜನೆಗಳನ್ನು ಇನ್ನೂ ಹೆಚ್ಚಿನ ಮಟ್ಟದಲ್ಲಿ ಹಾಕಿಕೊಂಡು ಸರಿಯಾಗಿ ಕಾರ್ಯಗತಗೊಳಿಸಿ ರಂಗಕಲಾವಿದೆಯರ ವೃದ್ಧಾಪ್ಯದ ಸಮಸ್ಯೆಗಳಿಗೆ ಪುನರ್ವಸತಿ ನೀಡಬೇಕಿದೆ. ಚಿಂದೋಡಿ ಲೀಲಾರಂತಹ ಕಂಪನಿ ಕಲಾವಿದೆ ಕರ್ನಾಟಕ ರಾಜ್ಯ ನಾಟಕ ಅಕಾಡೆಮಿ ಅಧ್ಯಕ್ಷರಾಗಿದ್ದಾಗ ಕೆಲವು ರಂಗಕಲಾವಿದರ ಮಾಹಿತಿ ಕಲೆಹಾಕಿ ರಂಗಕಲಾವಿದರಿಗೆ ಸ್ವಲ್ಪ ಮಟ್ಟಿನ ಆರ್ಥಿಕ ನೆರವನ್ನು ಒದಗಿಸಿದ್ದರು.

Read More »

ತಂತ್ರಜ್ಞಾನ ಯುಗದಲ್ಲಿ ಸಾಹಿತ್ಯ ಸೃಷ್ಟಿಯ ಸಾಂಸ್ಕೃತಿಕ ಮಹತ್ವ

ಎಲ್.ಎಸ್. ಪಡತಾರೆ

73 to 78

ಪ್ರಸ್ತುತದಲ್ಲಿ ತಂತ್ರಜ್ಞಾನವು ಮನುಷ್ಯನನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಮಹಾಪಥವಾಗಿದೆ. ಲೋಕದಲ್ಲಿ ಮಾನವ ಜೀವನವು ಸಂಪೂರ್ಣವಾಗಿ ತಾಂತ್ರಿಕ ನೆಲೆಗಟ್ಟಿನಲ್ಲಿ ನಿಂತಂತಿದೆ. ತಂತ್ರಜ್ಞಾನವೆನ್ನುವುದು ಮನುಷ್ಯನ ಉದ್ಧಾರಕ್ಕೆ ಇರುವ ಹೆಬ್ಬಾಗಿಲಾದರೂ, ಅವನ ಒಳಿತಿಗಾಗಿ ಸರಿಯಾದ ದಾರಿಯನ್ನು ಸೃಷ್ಟಿಸುವ ನೈಜಶಕ್ತಿ ತಂತ್ರಜ್ಞಾನಕ್ಕಿಲ್ಲ. ಬೌದ್ಧಿಕವಾಗಿ ಮನುಷ್ಯ ಎಡವಿದಾಗ ತಂತ್ರಜ್ಞಾನವು ತಾತ್ಕಾಲಿಕವಾದ ಪರಿಹಾರವನ್ನು ಸೂಚಿಸಬಹುದು. ಆದರೆ ಆದ ಗಾಯಕ್ಕೆ ಸೂಕ್ಷ್ಮಸಂವೇದನೆಯ ಔಷಧಿಯನ್ನು ನೀಡುವ ಶಕ್ತಿ ತಂತ್ರಜ್ಞಾನಕ್ಕಿಲ್ಲ ಎಂಬುದು ಅಷ್ಟೇ ಸತ್ಯವಾಗಿದೆ. ಆದರೆ ಆಯಾ ಕಾಲದ ಸಾಹಿತ್ಯದ ಸೃಷ್ಟಿಯು ಮನುಷ್ಯನಿಗಾದ ನೋವನ್ನು ಶಮನಮಾಡುವ ಶಕ್ತಿಯನ್ನು ಹೊಂದಿದೆ. ಆ ಕಾರಣದಿಂದ ಸಾಹಿತ್ಯವನ್ನು ಅನುಭವ ಜನ್ಯದ “ಅನುಭವಾಮೃತ”ವೆಂದು ಹಿರಿಯರು ಸಂಬೋಧಿಸಿದ್ದಾರೆ. ಹಿಂದಿನ ಸಂಪ್ರದಾಯದ ಯುಗಕ್ಕೂ ಇಂದಿನ ತಂತ್ರಜ್ಞಾನದ ಯುಗಕ್ಕೂ ಅಗಾಧವಾದ ವ್ಯತ್ಯಾಸವನ್ನು, ನಮ್ಮ ಇಂದಿನ ಜೀವನ ಶೈಲಿಯಿಂದ ಕಂಡುಕೊಂಡಿದ್ದೇವೆ. ಮಾನವ ಜನಾಂಗವು ಅನೇಕ ಬದಲಾವಣೆಯ ಮಹಾಪರ್ವಗಳನ್ನು ಆಧರಿಸಿ ಅಭಿವೃದ್ಧಿಯೆಂದು ಹೇಳುವ ನಮ್ಮ ಈ ಸಮಾಜ ಆಂತರಿಕವಾದ ಗಟ್ಟಿತನವನ್ನು ಎಷ್ಟರಮಟ್ಟಿಗೆ ಸಾಧಿಸಿಕೊಂಡಿದೆ ಎಂಬುದನ್ನು ನಾವು ಪ್ರಶ್ನೆ ಮಾಡಿದಾಗ ಅದಕ್ಕೆ ನಮ್ಮ ಸೃಜನಶೀಲ ಸಾಹಿತ್ಯವು ಬಹುದೊಡ್ಡ ಮಟ್ಟದ ಉತ್ತರವನ್ನು ನೀರಸವೆಂಬಂತೆ ಸೂಚಿಸುವುದನ್ನು ಕಳೆದ ಎರಡು ದಶಕದಿಂದ ನೋಡುತ್ತಿದ್ದೇವೆ. ಈ ಲೇಖನದಲ್ಲಿ ನಾನು ತಾಂತ್ರಿಕ ಯುಗವೊಂದರಲ್ಲಿ ಸಾಹಿತ್ಯವು ಯಾವೆಲ್ಲ ಹಿನ್ನೆಲೆಯಿಂದ ಹೊಸಹೊಸ ರೂಪವನ್ನು ಪಡೆಯುತ್ತದೆ ಎಂಬುದನ್ನು ಚರ್ಚೆ ಮಾಡುತ್ತ, ಸತ್ವಭರಿತವಾದ ಸಾಹಿತ್ಯ ಸೃಷ್ಟಿಯ ಹಿನ್ನೆಲೆ ಮುನ್ನಲೆಗಳನ್ನು ವಿವರಿಸಲು ಇಚ್ಛಿಸುತ್ತೇನೆ. ಜೊತೆಗೆ ಬರವಣಿಗೆಗೆ ಇರುವ ಪ್ರಖರವಾದ ಶಕ್ತಿ ಎಂಥಹದ್ದು ಎಂಬುದನ್ನು ಇಲ್ಲಿ ತೋರಿಸಲು ಪ್ರಯತ್ನಿಸುತ್ತೇನೆ.

Read More »

ಸಾಹಿತ್ಯ ಮತ್ತು ಆಧುನಿಕ ಮಾಧ್ಯಮಗಳು: ಒಂದು ಅವಲೋಕನ

ಬಸವರಾಜ ಎಂ. ಜನಗೌಡ

79 to 87

ಸಾಹಿತ್ಯವು ಮಾನವನ ಭಾವನೆ, ಅನುಭವ, ಕಲ್ಪನೆ ಹಾಗೂ ಚಿಂತನೆಗಳ ಕಲಾತ್ಮಕ ಪ್ರತಿಬಿಂಬವಾಗಿದ್ದು, ಮಾಧ್ಯಮಗಳು ಆ ಸಾಹಿತ್ಯವನ್ನು ಜನಸಾಮಾನ್ಯರಿಗೆ ತಲುಪಿಸುವ ಶಕ್ತಿಶಾಲಿ ಸಾಧನಗಳಾಗಿವೆ. ಪುರಾತನ ಕಾಲದಿಂದ ಇಂದಿನ ಡಿಜಿಟಲ್ ಯುಗದವರೆಗೆ ಸಾಹಿತ್ಯ ಮತ್ತು ಮಾಧ್ಯಮಗಳು ಪರಸ್ಪರ ಪೂರಕವಾಗಿ ಕಾರ್ಯನಿರ್ವಹಿಸುತ್ತಿವೆ.
ಪತ್ರಿಕೆ, ಮ್ಯಾಗಜೀನು, ರೇಡಿಯೋ, ದೂರದರ್ಶನ, ಚಲನಚಿತ್ರ ಹಾಗೂ ಇಂಟರ್ನೆಟ್‌ಗಳು ಸಾಹಿತ್ಯದ ಪ್ರಚಾರಕ್ಕೆ ಹೊಸ ಆಯಾಮ ನೀಡುತ್ತಿವೆ. ಇದರಿಂದ ಸಾಹಿತ್ಯವು ಹೆಚ್ಚಿನ ಜನರಿಗೆ ತಲುಪಿ ಸಮಾಜಮುಖಿ ಜಾಗೃತಿ ಮೂಡಿಸುವಲ್ಲಿ ಸಹಕಾರಿಯಾಗಿದೆ. ಆದರೆ ವಾಣಿಜ್ಯೀಕರಣ, ಅಗ್ಗದ ಮನರಂಜನೆ ಮತ್ತು ಓದಿನ ಸಂಸ್ಕೃತಿಯ ಕುಗ್ಗುವಿಕೆಗಳು ನಮ್ಮನ್ನು ಮೃಗೀಯ ಭಾವನೆಯತ್ತ ಸಾಗಿಸುತ್ತಿವೆ. ಮಾನವ ಸುಸಂಸ್ಕೃತವಾಗಿ ಬೆಳೆಯಲು ಸಾಹಿತ್ಯ ಮತ್ತು ಮಾಧ್ಯಮಗಳ ಅರಿವು ಬೇಕು. ಸಾಹಿತ್ಯ ಮತ್ತು ಮಾಧ್ಯಮಗಳು ಸಮನ್ವಯದಲ್ಲಿ ಸಾಗಿದಾಗಲೇ ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಪರಿಣಾಮಕಾರಿಯಾಗುತ್ತವೆ ಎಂಬುದು ಈ ಲೇಖನದ ತಾತ್ಪರ್ಯ. ಈ ಸಂದರ್ಭದಲ್ಲಿ ಸಾಹಿತ್ಯ ಮತ್ತು ಆಧುನಿಕ ಮಾಧ್ಯಮಗಳು: ಒಂದು ಅವಲೋಕನ ಎಂಬ ವಿಷಯವನ್ನು ಚರ್ಚಿಸಲಾಗಿದೆ.

Read More »

ಕನ್ನಡ ಸಾಹಿತ್ಯ ಸಂದರ್ಭ: ಭಾಷಾಂತರದ ಚಾರಿತ್ರಿಕ ಚಹರೆ

ಗಜಾನನ ನಾಯ್ಕ, ಜಿ. ವೀರಭದ್ರಗೌಡ

88 to 100

ಭಾಷೆಯ ಪ್ರಕ್ರಿಯೆಗಳು ವೈವಿಧ್ಯಮಯ. ಭಾಷಾಂತರವು ಅವುಗಳಲ್ಲಿ ಒಂದು ವಿಶಿಷ್ಟ ಪ್ರಕ್ರಿಯೆಯಾಗಿದೆ. ಪ್ರತಿ ಭಾಷೆಯ ಸಾಹಿತ್ಯ ಸಂದರ್ಭದಲ್ಲಿ ಅದರದೇ ಆದ ಚಾರಿತ್ರಿಕ ಚಹರೆಗಳನ್ನು ಸೃಷ್ಟಿಸಿದೆ. ಪ್ರಸ್ತುತ ಲೇಖನದಲ್ಲಿ ಕನ್ನಡ ಸಾಹಿತ್ಯ ಪರಂಪರೆಯನ್ನು ಭಿನ್ನ ಕಾಲಘಟ್ಟದ ಭಾಷಾಂತರದ ನಿರ್ದಿಷ್ಟ ಪ್ರೇರಣೆಗಳಿಂದ; ವಸಾಹತು ಪೂರ್ವದ ಕಾಲಘಟ್ಟ, ವಸಾಹತು ಕಾಲಘಟ್ಟ, ವಸಾಹತೋತ್ತರ ಕಾಲಘಟ್ಟಗಳೆಂದು ಗುರುತಿಸಿಕೊಂಡು, ಆಯಾ ಕಾಲಘಟ್ಟದ ಭಾಷಾಂತರ ಚಹರೆಗಳನ್ನು ಸ್ಥೂಲವಾಗಿ ಅವಲೋಕಿಸಲಾಗಿದೆ.
ವಸಾಹತು ಪೂರ್ವ ಕಾಲಘಟ್ಟದಲ್ಲಿ ʼಸ್ವʼ ಮತ್ತು ʼಅನ್ಯʼವೆಂದು ಅಥವಾ ʼಭಾಷಾಂತರʼವೆಂದು ಪರಿಗಣಿಸಿಲ್ಲ. ಕವಿ ಪ್ರತಿಭೆ, ಪ್ರೌಢಿಮೆಗಳಿಂದ ಸ್ವವೆಂದು ಪರಿಗಣಿಸಲಾಗಿದೆ. ವಸಾಹತು ಕಾಲಘಟ್ಟದಲ್ಲಿ ಮೂಲಅನ್ಯ/ಭಾಷಾಂತರ ಸಾಹಿತ್ಯವೆಂದು ನೋಡುವ ದೃಷ್ಟಿಕೋನವನ್ನು ಬೆಳೆಸಿದೆ. ವಸಾಹತೋತ್ತರ ಕಾಲಘಟ್ಟದಲ್ಲಿ, ವಸಾಹತು ಕಾಲಘಟ್ಟದ ಚಟುವಟಿಕೆಗಳನ್ನು ಮೂಲನಿಷ್ಠತೆಯಿಂದ ವ್ಯವಸ್ಥಿತವಾಗಿ ವಿಸ್ತರಿಸಿಕೊಳ್ಳಲಾಗಿದೆ. ಇದರ ಪರಿಣಾಮವಾಗಿ ಕನ್ನಡ ಸಾಹಿತ್ಯದ ಪ್ರಕ್ರಿಯೆ ಸ್ವರೂಪದಲ್ಲಿ ಅಭೂತಪೂರ್ವ ಬದಲಾವಣೆಗಳು ಏರ್ಪಟ್ಟು, ವಸ್ತು ದೃಷ್ಟಿಯಿಂದ ವೈವಿಧ್ಯವಾಗಿ ವಿಕಾಸವಾಗಲು ಕಾರಣವಾಗಿರುವ ಭಾಷಾಂತರದ ಚಾರಿತ್ರಿಕ ಚಹರೆಗಳನ್ನು ಲೇಖನದ ಮಿತಿಯಲ್ಲಿ ಅವಲೋಕಿಸಿದೆ. ಜೊತೆಗೆ ಆ ನಿಟ್ಟಿನ ಸೂಕ್ಷ್ಮ ಅಧ್ಯಯನಗಳಿಗೆ ಸಮೃದ್ಧವಾಗಿ ಪ್ರೇರಣೆಯಾಗಬಲ್ಲದೆಂದು ವಿಶ್ವಾಸಿಸಿದೆ.

Read More »

ಆಧುನಿಕ ಸಾಹಿತ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನದ ಪಾತ್ರ

ಅಂಜನಾ ಮಠದ

101 to 105

ಸಾಹಿತ್ಯ ಎಂಬ ಪದವು ಶಬ್ದ ಮತ್ತು ಅರ್ಥಗಳ ಸಾಮರಸ್ಯವನ್ನು ಸೂಚಿಸುತ್ತದೆ. ಆಧುನಿಕ ಸಾಹಿತ್ಯದ ರಚನೆಯು 19ನೇ ಶತಮಾನದ ಕೊನೆಯಿಂದ ಪ್ರಾರಂಭವಾಯಿತು. ಕೈಗಾರಿಕೀಕರಣ, ಜಾಗತೀಕರಣ ಮತ್ತು ತಾಂತ್ರಿಕ ಪ್ರಗತಿಯ ಮೂಲಕ ಸಮಾಜದ ತ್ವರಿತ ವಿಕಸನದೊಂದಿಗೆ, ಸಾಹಿತ್ಯವೂ ಅದಕ್ಕನುಗುಣವಾಗಿ ರೂಪಾಂತರಗೊಂಡಿದೆ. ಆಧುನಿಕ ತಂತ್ರಜ್ಞಾನವು ಸಾಹಿತ್ಯದ ಮೇಲೆ ಸಾಕಷ್ಟು ಪ್ರಭಾವವನ್ನು ಬೀರಿದೆ. ಕೃತಕ ಬುದ್ಧಿಮತ್ತೆ, ವರ್ಚುವಲ್ ರಿಯಾಲಿಟಿ, ಕಣ್ಗಾವಲು ಮತ್ತು ಡಿಜಿಟಲ್ ಗುರುತಿನಂತಹ ತಂತ್ರಜ್ಞಾನಗಳನ್ನು ಬರಹಗಾರರು ತಮ್ಮ ಕಾದಂಬರಿಗಳಲ್ಲಿ ಅಳವಡಿಸಿಕೊಂಡಿರುವುದನ್ನು ಕಾಣಬಹುದು. ತಂತ್ರಜ್ಞಾನವು ಬರಹಗಾರರು, ತಮ್ಮ ಕೃತಿಗಳನ್ನು ರಚಿಸುವ ವಿಧಾನವನ್ನು ಮೂಲಭೂತವಾಗಿ ಬದಲಾಯಿಸಿದೆ. ಇಸಾಹಿತ್ಯ ಪ್ರವೇಶದ ಪರಿಣಾಮವಾಗಿ ನಗರ ಪ್ರದೇಶಗಳಲ್ಲಿ ಆಡಿಯೋಬುಕ್‌ಗಳ ಬಳಕೆಯಲ್ಲಿ ಉತ್ತೇಜನವನ್ನು ಕಾಣಬಹುದು. ಆಧುನಿಕ ಭಾರತೀಯ ಲೇಖಕರು ತಮ್ಮ ಕಾದಂಬರಿಗಳಲ್ಲಿ ತಂತ್ರಜ್ಞಾನ, ಡಿಜಿಟಲ್ ಜೀವನ ಮತ್ತು ಕಣ್ಗಾವಲಿನ ವಿಷಯಗಳನ್ನು ಹೆಚ್ಚಾಗಿ ಸೇರಿಸಿಕೊಳ್ಳುತ್ತಿದ್ದಾರೆ. ಇದರ ಪರಿಣಾಮವಾಗಿ ದೇಶೀಯ ಮತ್ತು ಅಂತರಾಷ್ಟ್ರೀಯ ಸಮುದಾಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅನುಕೂಲವಾಗಿದೆ. ತಂತ್ರಜ್ಞಾನವನ್ನು ಬಳಸಿಕೊಂಡು ಬರಹಗಾರರು ಆಡುಭಾಷೆಯ ಪ್ರದರ್ಶನ, ಸೂಕ್ಷ್ಮಕಾವ್ಯ ಮತ್ತು ಸಣ್ಣ ಕಾದಂಬರಿಗಳನ್ನು ಹಂಚಿಕೊಳ್ಳಲು ಇನ್‌ಸ್ಟಾಗ್ರಾಮ್, ಟ್ವಿಟರ್ ಮತ್ತು ಯುಟ್ಯೂಬ್‌ಗಳನ್ನು ಬಳಸುತ್ತಿದ್ದಾರೆ. ಕೋವಿಡ್ ನಂತರ, ಸಾಹಿತ್ಯಿಕ ಕಾರ್ಯಕ್ರಮಗಳು ಹೈಬ್ರಿಡ್ ಮತ್ತು ಆನ್‌ಲೈನ್ ಸ್ವರೂಪಗಳನ್ನು ಪಡೆದುಕೊಂಡಿವೆ. ಇದರಿಂದ ದೇಶವಿದೇಶಗಳಲ್ಲಿನ ಪ್ರೇಕ್ಷಕರು ವಾಸ್ತವಿಕವಾಗಿ ಅಧಿವೇಶನಗಳಿಗೆ (Seminar/Workshop/Conference) ಉಪಸ್ಥಿತರಾಗಲು ಅವಕಾಶ ಮಾಡಿಕೊಟ್ಟಿವೆ. ಆಧುನಿಕ ಸಾಹಿತ್ಯ ಮತ್ತು ತಂತ್ರಜ್ಞಾನವು ಆಳವಾಗಿ ಹೆಣೆದುಕೊಂಡಿದ್ದು, ಪರಸ್ಪರ ಪರಿವರ್ತನಾತ್ಮಕ ರೀತಿಯಲ್ಲಿ ಪ್ರಭಾವ ಬೀರುತ್ತ, ತಂತ್ರಜ್ಞಾನವು ಅಭಿವೃದ್ಧಿಗೊಂಡಂತೆ ಸಾಹಿತ್ಯ ರಚನೆ ಮತ್ತು ವಿಧಾನಗಳು ಕೂಡ ಬದಲಾಗುತ್ತಿವೆ. ಪ್ರಸ್ತುತ ಜೀವನ ಶೈಲಿಯಲ್ಲಿ ತಂತ್ರಜ್ಞಾನ ಹೊರತಾಗಿ ಯಾವುದನ್ನು ಸಾಧಿಸಲು ಸಾಧ್ಯವಿಲ್ಲ. ಇದಕ್ಕೆ ಸಾಹಿತ್ಯವೂ ಹೊರತಾಗಿಲ್ಲ. ಆದ್ದರಿಂದ ತಂತ್ರಜ್ಞಾನ ಮತ್ತು ಸಾಹಿತ್ಯದ ಸಂಯೋಜನೆಯು ಮಾನವನ ಭವಿಷ್ಯವನ್ನು ರೂಪಿಸಿಕೊಳ್ಳಲು ಒಂದು ಪ್ರಮುಖ ಅಸ್ತ್ರ ಎಂದು ಹೇಳಬಹುದು.

 

Read More »

ಯಕ್ಷಗಾನ: ಕುಮಟಾ ಗೋವಿಂದ ನಾಯ್ಕರ ʼಹನುಮಂತನʼ ಪಾತ್ರದ ಸಾಂಸ್ಕೃತಿಕ ಮಹತ್ವ

ಸತೀಶ ಜಿ. ನಾಯ್ಕ

106 to 118

ಯಕ್ಷಗಾನದಲ್ಲಿ ಕುಮಟಾ ಗೋವಿಂದ ನಾಯ್ಕರ ಸಾಧನೆ ಬಹಳ ದೊಡ್ಡದು. ರಾಮಾಯಣ, ಮಹಾಭಾರತ ಪ್ರಸಂಗಗಳ ಹನುಮಂತನ ಪಾತ್ರಗಳ ನಿರ್ವಹಣೆಯ ಮೂಲಕ ಗೋವಿಂದ ನಾಯ್ಕರನ್ನು “ಅಭಿನವ ಹನುಮಂತ”, “ಕಲಿಯುಗದ ಹನುಮಂತ” ಎಂದೆಲ್ಲ ಕರೆಯುವಂತೆ ಮಾಡಿತು. ಯಕ್ಷಗಾನ ರಾಮಾಯಣ ಮತ್ತು ಭಾರತ ಪ್ರಸಂಗಗಳಾದ ಮಾರುತಿ ಪ್ರತಾಪ, ವೀರಮಣಿ ಕಾಳಗ, ರಾಮಾಂಜನೇಯ ಕಾಳಗ, ಲಂಕಾದಹನ, ಶರಸೇತುಬಂಧ, ಚೂಡಾಮಣಿ, ಅಂಗದ ಸಂಧಾನ, ಇಂದ್ರಜಿತ್ ಕಾಳಗ, ಹನುಮದ್ವಿಲಾಸ, ವಾಲಿವಧೆ, ಉಂಗುರ ಸಂಧಿ, ಜಾಂಬವತಿ ಕಲ್ಯಾಣ, ಅತಿಕಾಯ ಕಾಳಗ, ಸೀತಾಪಹರಣ, ಸೇತುಬಂಧ, ಲವಕುಶ ಕಾಳಗ, ರಾವಣವಧೆ, ಸೌಗಂಧಿಕಾ ಪುಷ್ಪಹರಣ ಮುಂತಾದ ಎಷ್ಟೋ ಕಥಾಭಾಗದಲ್ಲಿ ಬರುವ ಹನುಮಂತನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಎಲ್ಲಾ ಪ್ರಕಾರದ ಹನುಮಂತನ ಪಾತ್ರಗಳಿಗೂ ಹೆಸರುವಾಸಿ. ಗೋವಿಂದ ನಾಯ್ಕರ ಹನುಮಂತ ಧೀರ, ಗಂಭೀರ, ಅಷ್ಟೇ ಶಾಂತ, ಶೃಂಗಾರ. ಭಾವನಾತ್ಮಕವಾದ ತವನಿಧಿ. ಭಕ್ತಿರಸದ ಮಹೋನ್ನತ ಪ್ರತೀಕ. ಮುಗ್ಧತೆಯ ಉತ್ತುಂಗ. ಮಾತಿನ ಮಲ್ಲನಲ್ಲ. ವೈಚಾರಿಕ ವಿವೇಚನಾ ಮೂರ್ತಿ. ಇನ್ನು ಬಹಳ ಮುಖ್ಯವಾಗಿ ಅವರ ಪ್ರವೇಶಕ್ರಮದ ಶೈಲಿ ಅತ್ಯಾಕರ್ಷಕವಾದದ್ದು. ʼಹನುಮಂತʼನಾಗಿ ರಂಗವೇರಿದರೆ ಸಾಕ್ಷಾತ್ ರಾಮಾಯಣದ ಹನುಮಂತನ ಆವಾಹನೆ ಆದ ಹಾಗೆ. ʼರಘೋತ್ತಮ ರಾಮ ರಮಾಕಾಂತ ರಾಮʼ ಎನ್ನುವ ಅಷ್ಟತಾಳದ ಮುಕ್ತಾಯಕ್ಕೆ ಪದ್ಮಾಸನದಲ್ಲೇ ಪೀಠ ಏರುವ ಅವರ ಶೈಲಿ ನೋಡುಗರಿಗೆ ರೋಮಾಂಚನ. ಗೋವಿಂದ ನಾಯ್ಕರ ಹನುಮಂತನ ಪಾತ್ರವೆಂದರೆ ಪರಂಪರೆಯ ಅನುಷ್ಠಾನದೊಂದಿಗಿನ ನಾವೀನ್ಯತೆಯ ಪ್ರತೀಕ. ಶಿಷ್ಟ, ವಿಶಿಷ್ಟ, ಬದ್ಧ, ಪ್ರಬುದ್ಧ. ಪ್ರತಿಯೊಂದು ಪ್ರಸಂಗದ ವಿವಿಧ ಸನ್ನಿವೇಶಗಳಲ್ಲೂ ಭಿನ್ನವಾಗಿಯೇ ಕಾಣಿಸಿಕೊಳ್ಳುತ್ತಾ ವೈವಿಧ್ಯತೆಗೆ ಹೆಸರಾದರು. ಇಲ್ಲಿ ಗೋವಿಂದ ನಾಯ್ಕರ ಹನುಮಂತನ ಪಾತ್ರದ ಕುರಿತು ಇರುವ ವಿಶೇಷತೆಯನ್ನು ತಿಳಿಸುತ್ತಾ ಅದರ ಸಾಂಸ್ಕೃತಿಕ ಮಹತ್ವವನ್ನು ಹೇಳಲಾಗುವುದು.

Read More »

ಜನಪದ ಸಾಹಿತ್ಯ: ಆಧುನಿಕ ತಲ್ಲಣಗಳು

ಶಂಭನಗೌಡ ನೀರಲಗಿ

119 to 126

ಈ ಲೇಖನದಲ್ಲಿ ಜನಪದ ಸಾಹಿತ್ಯ: ಆಧುನಿಕ ತಲ್ಲಣಗಳು ಎಂಬ ವಿಷಯವನ್ನು ಚರ್ಚಿಸಲಾಗಿದೆ. ಕನ್ನಡ ಸಾಹಿತ್ಯದಲ್ಲಿ ಜನಪದ ಸಾಹಿತ್ಯವು ಬೇರುಗಳಂತಿದೆ. ಜನಪದ ಗೀತೆ, ಕಥೆ, ನೃತ್ಯ, ಕಲೆ, ಆಚರಣೆ, ಸಂಪ್ರದಾಯಗಳ ಮೂಲಕ ಜನರ ಬದುಕು, ನಂಬಿಕೆ, ಸಂಸ್ಕೃತಿ ಹಾಗೂ ಜೀವನ ಮೌಲ್ಯಗಳು ವ್ಯಕ್ತವಾಗುತ್ತವೆ. ಆದರೆ, ಆಧುನಿಕ ಯುಗದಲ್ಲಿ ತಂತ್ರಜ್ಞಾನ, ಜಾಗತೀಕರಣ, ಆರ್ಥಿಕ ಬದಲಾವಣೆಗಳು ಹಾಗೂ ಸಮಾಜದ ಜೀವನಶೈಲಿಗಳ ಬದಲಾವಣೆಗಳಿಂದ ಜನಪದ ಕಲೆಆಚರಣೆಗಳು ನಿಧಾನವಾಗಿ ನಶಿಸುತ್ತಿರುವುದನ್ನು ಗಮನಿಸಬಹುದು. ಹಿಂದೆ ಜನರ ಬದುಕಿನ ಅಂಗವಾಗಿದ್ದ ಗೀತೆ, ಗಾದೆ, ಬಯಲಾಟ, ಜಾತ್ರಾಹಬ್ಬಗಳು ಈಗ ವೇದಿಕೆಮಟ್ಟದ ಪ್ರದರ್ಶನಗಳಾಗಿ ಬದಲಾಗುತ್ತಿವೆ. ಪಾರಂಪರಿಕ ಜ್ಞಾನವನ್ನು ಮಾರುಕಟ್ಟೆಗೊಳಿಸುವ ಪ್ರಕ್ರಿಯೆಯೂ ಹೆಚ್ಚಾಗಿದೆ. ಇಂತಹ ಸ್ಥಿತಿಯಲ್ಲಿ ಜನಪದ ಕಲೆಸಾಹಿತ್ಯವನ್ನು ಉಳಿಸಿ ಬೆಳೆಸುವುದು ಅವಶ್ಯಕ. ನವಮಾಧ್ಯಮ ಹಾಗೂ ತಂತ್ರಜ್ಞಾನಗಳನ್ನು ಬಳಸಿಕೊಂಡು ಜನಪದ ಪರಂಪರೆಯನ್ನು ಆಧುನಿಕ ಜೀವನದೊಂದಿಗೆ ಹೆಜ್ಜೆ ಹಾಕುವ ಪ್ರಯತ್ನವೇ ಇಂದಿನ ಅಗತ್ಯ. ಹೀಗಾಗಿ, ಜನಪದದ ಜೀವಂತಿಕೆ ಕೇವಲ ಸಂಗ್ರಹದಲ್ಲಿ ಅಲ್ಲ, ಬದಲಾಗಿ ಅದರ ಅನುಷ್ಠಾನ, ಪ್ರಸಾರ ಹಾಗೂ ಹೊಸ ಪೀಳಿಗೆಗೆ ತಲುಪಿಸುವಿಕೆಯಲ್ಲಿ ಇದೆ ಎಂಬುದು ಲೇಖನದ ಸಾರವಾಗಿದೆ.

Read More »

ಕನ್ನಡ ನಾಟಕಗಳಲ್ಲಿ ಭಾಷಾ ಬಳಕೆ

ಭಾರತಿ ಎಸ್. ಗದ್ದಿ

133 to 139

ಸಾಹಿತ್ಯ ಪ್ರಕಾರಗಳಲ್ಲಿ ನಾಟಕ ಒಂದು ಅದ್ಭುತವಾದ ಕಲಾ ಮಾಧ್ಯಮ ಮತ್ತು ಸಮಾಜದಲ್ಲಿ ಮಹತ್ವದ ಪಾತ್ರ ವಹಿಸಿದೆ. ಇದು ಆತ್ಮವಿಶ್ವಾಸ, ಸಂವಹನ ಮತ್ತು ಸೃಜನಾತ್ಮಕ ಕೌಶಲ್ಯಗಳನ್ನು ಚರ್ಚಿಸಲು ಮತ್ತು ಅರ್ಥಮಾಡಿಕೊಳ್ಳುವ ವೇದಿಕೆಯಾಗಿದೆ. ನಾಟಕವು ಕೇವಲ ಮನರಂಜನೆಯಲ್ಲ, ಬದಲಿಗೆ ಸಮಾಜದ ಪ್ರತಿಬಿಂಬ. ಪ್ರೇಕ್ಷಕರಿಗೆ ಭಾವನಾತ್ಮಕವಾಗಿ, ಸರಳ ಸಂಭಾಷಣೆಗಳ ಮೂಲಕ ಹಾಗೂ ಆಡುಮಾತಿನ ಸರಳ ಭಾಷೆಯಿಂದ ಜನರ ಮನಸ್ಸನ್ನು ಸೆಳೆಯುತ್ತದೆ. ನಾಟಕವು ಸಮಾಜವನ್ನು ಸರಿಯಾದ ದಾರಿಯಲ್ಲಿ ನಡೆಸುವ ಕೈದೀವಿಗೆಯಾಗಿದೆ.
ನಾಟಕಗಳು ಒಂದು ಕಾಲದ ಜನಜೀವನ ಹಾಗೂ ಕಲಾಭಿರುಚಿಯನ್ನು ಮುಂದಿನ ಜನಾಂಗಕ್ಕೆ ಪರಿಚಯ ಮಾಡಿಕೊಡುವ ಸಾಧನವಾಗಿವೆ. ಧಾರ್ಮಿಕ ಪ್ರವೃತ್ತಿಯವರಿಗೆ ಧರ್ಮಮಾರ್ಗವನ್ನೂ, ವಿಲಾಸಿಗಳಿಗೆ ದಿವ್ಯಪ್ರೇಮದ ಮಹತಿಯನ್ನೂ, ಅಜ್ಞಾನಿಗಳಿಗೆ ಸುಜ್ಞಾನವನ್ನೂ, ಪಂಡಿತರಿಗೆ ವಿಮರ್ಶಾ ವಿಧಾನವನ್ನೂ, ನೊಂದವರಿಗೆ ಸಾಂತ್ವನವನ್ನೂ ನೀಡುತ್ತವೆ.

Read More »

ಜಾನಪದ ಸಾಹಿತ್ಯ ಮತ್ತು ಆಧುನಿಕತೆ

ಮಮತಾಜಬೇಗಂ ತಾಸಿಲ್ದಾರ

133 to 139

ಈ ಲೇಖನದಲ್ಲಿ ಜಾನಪದ ಸಾಹಿತ್ಯ ಮತ್ತು ಆಧುನಿಕತೆ ನಡುವಿನ ಸಂಬಂಧವನ್ನು ವಿಶ್ಲೇಷಿಸಲಾಗಿದೆ. ಜನಪದ ಸಾಹಿತ್ಯವು ಹಳ್ಳಿಗಳ ಜೀವನ, ಹಾಡು, ಕಥೆ, ಗಾದೆ, ಆಚರಣೆ, ನಂಬಿಕೆ ಮತ್ತು ಕಲಾಪರಂಪರೆಯನ್ನು ಒಳಗೊಂಡಿದ್ದು, ಭಾರತೀಯ ಸಂಸ್ಕೃತಿಯ ಬೇರುಗಳನ್ನು ಪ್ರತಿನಿಧಿಸುತ್ತದೆ. ಇನ್ನೊಂದೆಡೆ, ಆಧುನಿಕತೆ ಎಂಬುದು ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ನಗರೀಕರಣ ಮತ್ತು ಜಾಗತೀಕರಣದಿಂದ ರೂಪುಗೊಂಡ ಹೊಸ ಜೀವನಶೈಲಿಯ ಸಂಕೇತವಾಗಿದೆ. ಜನಪದ ಸಾಹಿತ್ಯವು ಸರಳತೆ, ಭಾವನಾತ್ಮಕತೆ ಮತ್ತು ಸಾಂಸ್ಕೃತಿಕ ಪರಂಪರೆಯ ಪ್ರತಿಬಿಂಬವಾಗಿದ್ದರೆ, ಆಧುನಿಕತೆ ಯುಕ್ತಿಚಿಂತನೆ, ವೈಯಕ್ತಿಕ ಸ್ವಾತಂತ್ರ್ಯ ಮತ್ತು ಹೊಸ ಕಲಾತ್ಮಕ ರೂಪಗಳಿಗೆ ಒತ್ತು ನೀಡುತ್ತದೆ. ತಂತ್ರಜ್ಞಾನದಿಂದ ಜನಪದ ಸಾಹಿತ್ಯವು ಜಾಗತಿಕ ವೇದಿಕೆಯನ್ನು ತಲುಪಿದೆ. ಜಾನಪದವನ್ನು ಶಿಕ್ಷಣದಲ್ಲಿ ಅಳವಡಿಸುವುದು, ಉತ್ಸವಮೇಳಗಳನ್ನು ಆಯೋಜಿಸುವುದು, ಕಲಾವಿದರಿಗೆ ಪ್ರೋತ್ಸಾಹ ನೀಡುವುದು ಹಾಗೂ ಮಾಧ್ಯಮಗಳ ಬಳಕೆಯ ಮೂಲಕ ಪುನರುಜ್ಜೀವನಗೊಳಿಸುವುದು ಅವಶ್ಯಕ. ಹೀಗಾಗಿ, ಜಾನಪದವು ಮೂಲವಾಗಿದ್ದು, ಆಧುನಿಕತೆ ಅಭಿವೃದ್ಧಿಯಾಗಿರುವುದರಿಂದ, ಇವೆರಡರ ಸಂಗಮವೇ ನಿಜವಾದ ಪ್ರಗತಿಗೆ ದಾರಿ ಮಾಡಿಕೊಡುತ್ತದೆ.

Read More »

ವಿಜ್ಞಾನ ಮತ್ತು ಸಾಹಿತ್ಯದ ತಾತ್ವಿಕತೆಗಳು

ಸುಮನ ಕಾಮಣ್ಣವರ

140 to 142

ವಿಜ್ಞಾನ ಮತ್ತು ಸಾಹಿತ್ಯ ಇವೆರಡೂ ಮಾನವ ಜೀವನವನ್ನು ಸುಂದರಗೊಳಿಸುವ ಅದ್ಭುತ ಜ್ಞಾನಶಕ್ತಿಗಳು. ವಿಜ್ಞಾನವು ಬೌದ್ಧಿಕತೆಯನ್ನು ಬೆಳೆಸುವ, ವೈಜ್ಞಾನಿಕ ಲೋಕವನ್ನು ತೆರೆದಿಡುವ ಮಹಾಪಥವಾಗಿದೆ. ಸಾಹಿತ್ಯವು ಭಾವನೆಗಳನ್ನು ಪೋಷಿಸುವ, ಉದ್ದೀಪನಗೊಳಿಸುವ ಮಹಾಶಕ್ತಿಯಾಗಿದೆ. ಒಂದು ಕಡೆ ವಿಜ್ಞಾನವು ಯುಕ್ತಿ, ಪ್ರಯೋಗ, ಆವಿಷ್ಕಾರಗಳ ಮೂಲಕ ಮಾನವ ಜೀವನವನ್ನು ಧೀಮಂತಗೊಳಿಸಿದರೆ, ಮತ್ತೊಂದೆಡೆ ಸಾಹಿತ್ಯವು ಕಲೆ, ಕಾವ್ಯ ನಾಟಕ, ಮಹಾಕಾವ್ಯಗಳ ಮೂಲಕ ಹೃದಯಕ್ಕೆ ಇಂಬು ನೀಡುತ್ತದೆ. ಇಂದಿನ ದಿನಗಳಲ್ಲಿ ವಿಜ್ಞಾನದ ಜ್ಞಾನವಿಲ್ಲದೆ ಜೀವನವೇ ಇಲ್ಲ. ಎಲ್ಲವುಗಳ ಬಗ್ಗೆ ತಿಳಿವಳಿಕೆ ಬೇಕು. ಅದರಲ್ಲೂ ನಮ್ಮ ಬದುಕಿಗೆ ವಿಜ್ಞಾನದ ಅರಿವು ಬೇಕು. ಆದರೆ ನಮ್ಮ ಜೀವನದ ಆಂತರ್ಯವನ್ನು ಇಮ್ಮಡಿಗೊಳಿಸುವ ಸಾಹಿತ್ಯದ ಓದಿನ ಅರಿವೂ ಬೇಕು. ನಮ್ಮ ಮನಸ್ಸಿಗೆ ಸಂತೋಷವನ್ನು ನೀಡುವ ಕಾವ್ಯ, ಕಥೆ, ನಾಟಕ, ಚುಟುಕು ಪರಿಚಯವಿಲ್ಲದಿದ್ದರೆ ಜೀವನ ಬಂಜರವಾಗುತ್ತದೆ. ಇದಕ್ಕೆ ಡಿವಿಜಿ, ಮಾನವ ಜೀವನವು ಬಹಳ ಸರ್ವಶ್ರೇಷ್ಠವಾದುದು, ಎಲ್ಲವನ್ನೂ ಒಳಗೊಂಡಾಗ ಮಾತ್ರ ಅದು ಸಾಧ್ಯವಾಗುತ್ತದೆ ಎಂದಿದ್ದಾರೆ. ಸಾಹಿತ್ಯವು ಮನುಷ್ಯನಿಗೆ ಮಾನವೀಯ ಮೌಲ್ಯಗಳನ್ನು ನೀಡುತ್ತ, ಅದು ಭಾವನಾತ್ಮಕತೆಯನ್ನು ಬೆಳೆಸುತ್ತದೆ. ಪ್ರೀತಿ, ಕರುಣೆ, ಪರೋಪಕಾರ, ಮಾಧುರ್ಯದ ಮಹತ್ವವನ್ನು ತಿಳಿಸುತ್ತದೆ. ವಿಜ್ಞಾನ ಜೀವನಕ್ಕೆ ಸೌಲಭ್ಯ ನೀಡಿದರೆ, ಸಾಹಿತ್ಯ ಜೀವನಕ್ಕೆ ಅಗಾಧವಾದ ಅರ್ಥವನ್ನು ನೀಡುತ್ತದೆ. ಹಾಗಾಗಿ ವಿಜ್ಞಾನ ಮತ್ತು ಸಾಹಿತ್ಯದ ತಾತ್ವಿಕತೆಗಳು ಪರಸ್ಪರ ಪೂರಕವಾದವು. ಇವೆರಡರ ಸಮನ್ವಯದಲ್ಲಿ ಮಾತ್ರ ಮಾನವ ಜೀವನ ಪರಿಪೂರ್ಣವಾಗುತ್ತದೆ. ಈ ಲೇಖನದಲ್ಲಿ ಈ ಎರಡು ಕ್ಷೇತ್ರದ ಅರಿವು ಎಷ್ಟು ಮುಖ್ಯವೆನ್ನುವುದನ್ನು ಚರ್ಚೆಮಾಡುತ್ತೇನೆ.

Read More »

ಕರಾವಳಿ ಪರಿಸರದ ಆಧುನಿಕ ಸಾಹಿತ್ಯದಲ್ಲಿ ದಲಿತರ ಬದುಕಿನ ತಲ್ಲಣಗಳು

ಸುಧೀಶ್

143 to 50

ದಲಿತ ಸಾಹಿತ್ಯದ ಹಿನ್ನೆಲೆಯೊಂದಿಗೆ, ಕರಾವಳಿ ಪರಿಸರದ ಆಧುನಿಕ ದಲಿತ ಸಾಹಿತ್ಯದ ವಿಶೇಷತೆಗಳನ್ನು ತಿಳಿಸುವುದರೊಂದಿಗೆ, ದಲಿತರ ಬದುಕಿನ ತಲ್ಲಣಗಳನ್ನು ವಿವರಿಸುವ ಉದ್ದೇಶವು ಈ ಪ್ರಬಂಧಕ್ಕಿದೆ. ಕರಾವಳಿ ಲೇಖಕರ ಶಿಕ್ಷಣದ ಹಿನ್ನೆಲೆ, ಭಾಷಾ ಸಂದಿಗ್ಧತೆಗಳು, ಜೊತೆಗೆ ಸಾಂಸ್ಕೃತಿಕ ಭಿನ್ನತೆಗಳ ಕಿರು ಚರ್ಚೆಯನ್ನು ನಡೆಸಲಾಗಿದೆ. ಪ್ರಸಿದ್ಧ ಗದ್ಯ, ಪದ್ಯ ಕಥೆಗಾರರು, ಕವಿಗಳ ಮೂಲಕ ದಲಿತ ಲೇಖಕರ ಸಾಹಿತ್ಯದ ಪರಿಚಯವನ್ನು ಮಾಡಲಾಗಿದೆ. ಇಲ್ಲಿ ಪ್ರಧಾನವಾಗಿ ಜನಾರ್ಧನ ಎರ್ಪಕಟ್ಟೆಯವರ ʼಎರ್ಪಕಟ್ಟೆ ಕಥೆಗಳುʼ, ಸುರೇಶ್ ಮರಿಣಾಪುರರ ʼಚಿಂಬುರಿʼ ಕಾದಂಬರಿ, ರಾಧಾಕೃಷ್ಣ ಉಳಿಯತ್ತಡ್ಕರವರ ಕವಿತೆಗಳು, ಸುರೇಶ್‌ರವರ ಕವಿತೆಗಳು, ಪದ್ಮಾವತಿ ಏದಾರ್ ಮೊದಲಾದವರ ಕವನ ಸಂಕಲನದ ವಸ್ತುವಿಷಯವನ್ನು ಚರ್ಚೆಮಾಡಲಾಗಿದೆ. ಮುಖ್ಯವಾಗಿ ಪ್ರಕೃತ ಕಾಲದ ಕರಾವಳಿ ದಲಿತ ಯುವ ಬರಹಗಾರರ ಬದುಕಿನ ತಲ್ಲಣಗಳನ್ನು ಅವರ ಸಾಹಿತ್ಯದ ವಸ್ತುವಿಷಯದ ದೃಷ್ಟಿಯಿಂದ ಅಭ್ಯಸಿಸಲಾಗಿದೆ. ಬಹಳ ಮುಖ್ಯವಾಗಿ ಕರಾವಳಿಯ ದಲಿತ ಸಾಹಿತಿಗಳ ಬರಹಗಳ ವೈಶಿಷ್ಟ್ಯತೆಯನ್ನು, ಭಾಷಾ ಸೊಗಡನ್ನು ಕುರಿತು ಅವರ ಬರಹಗಳ ಉದಾಹರಣೆಯೊಂದಿಗೆ ವಿಶ್ಲೇಷಣೆ ಮಾಡಲಾಗಿದೆ.

Read More »

ಆಧುನಿಕ ಯುಗದಲ್ಲಿ ಕರ್ನಾಟಕ ಸಂಸ್ಕೃತಿಯ ರೂಪಾಂತರ

ಎಸ್.ಎಸ್. ಶಿಂಗಟೆ

151 to 159

ಕರ್ನಾಟಕವು ಜನಪದ ಕಲೆ, ಹಬ್ಬಹರಿದಿನಗಳು, ಸಾಹಿತ್ಯ, ಸಂಗೀತ, ನೃತ್ಯ, ಆಹಾರ ಸಂಸ್ಕೃತಿ ಸೇರಿದಂತೆ ಅನೇಕ ವೈವಿಧ್ಯಮಯ ಸಾಂಸ್ಕೃತಿಕ ಅಂಶಗಳನ್ನು ಹೊಂದಿದೆ. ಆದರೆ ಜಾಗತೀಕರಣ, ತಂತ್ರಜ್ಞಾನ, ಮಾಧ್ಯಮ ಪ್ರಭಾವ, ನಗರೀಕರಣ ಮತ್ತು ಪಾಶ್ಚಾತ್ಯ ಸಂಸ್ಕೃತಿಯ ಹೊಳೆಯು ಪರಂಪರೆಯ ರೂಪದಲ್ಲಿ ಹಲವು ಬದಲಾವಣೆಗಳನ್ನು ತಂದಿದೆ. ಲೇಖನದಲ್ಲಿ ಹಳೆಯ ಸಂಸ್ಕೃತಿಯ ಸ್ಥಿತಿ, ಆಧುನಿಕ ಯುಗದ ಪ್ರಭಾವ, ಸಂಯೋಜಿತ ಸಂಸ್ಕೃತಿ, ಎದುರಾಗುತ್ತಿರುವ ಸವಾಲುಗಳು ಮತ್ತು ಸಂಸ್ಕೃತಿಯನ್ನು ಸಂರಕ್ಷಿಸುವ ಮಾರ್ಗಗಳನ್ನು ಚರ್ಚಿಸಲಾಗಿದೆ. ಹಳೆಯದು ಮತ್ತು ಹೊಸದರ ನಡುವೆ ಸಮತೋಲನ ಸಾಧಿಸುವುದು ಭವಿಷ್ಯದ ಕರ್ನಾಟಕ ಸಂಸ್ಕೃತಿಯ ನಿರಂತರತೆಗೆ ಅಗತ್ಯವೆಂಬ ನಿರ್ಣಯಕ್ಕೆ ಲೇಖನ ತಲುಪುತ್ತದೆ. ಈ ಲೇಖನವು “ಆಧುನಿಕ ಯುಗದಲ್ಲಿ ಕರ್ನಾಟಕ ಸಂಸ್ಕೃತಿಯ ರೂಪಾಂತರ” ಎಂಬ ವಿಷಯದ ಸುತ್ತ ಸಾಂಪ್ರದಾಯಿಕ ಮತ್ತು ಆಧುನಿಕ ಜೀವನ ಶೈಲಿಗಳ ನಡುವಿನ ಬದಲಾವಣೆಗಳನ್ನು ವಿಶ್ಲೇಷಿಸುತ್ತದೆ.

Read More »

ಸಮಕಾಲೀನ ಕನ್ನಡ ಭಾಷಾಂತರ: ಪ್ರಕ್ರಿಯಾತ್ಮಕ ಸ್ವರೂಪ

ಜಿ. ವೀರಭದ್ರಗೌಡ, ಗಜಾನನ ನಾಯ್ಕ

160 to 171

ಸಾಹಿತ್ಯ, ಭಾಷಾಂತರ ಪ್ರಕ್ರಿಯೆ ಹಾಗೂ ಪ್ರಕ್ರಿಯಾ ಫಲಗಳ ಸಂಬಂಧವು ಬಹು ಸೂಕ್ಷ್ಮವಾದದ್ದಾಗಿದೆ. ಪ್ರತಿ ಭಾಷೆಯ ಸಾಹಿತ್ಯದಲ್ಲಿ ಭಾಷಾಂತರವು ಒಂದು ಅನಿವಾರ್ಯ ಪ್ರಕ್ರಿಯೆಯಾಗಿ ಅದರ ಸಾಹಿತ್ಯಿಕ ಪ್ರೇರಣೆ ಪ್ರಭಾವವು ಸೂಕ್ಷ್ಮ ರೀತಿಯಲ್ಲಿ ಏರ್ಪಟ್ಟಿರುತ್ತದೆ. ಈ ಅಂಶ ಆಯಾ ಸಾಹಿತ್ಯದ ಅಧ್ಯಯನ ಮತ್ತು ಅವಲೋಕನಕ್ಕೆ ಅಗತ್ಯವಾದದ್ದಾಗಿದೆ. ಸಮಕಾಲೀನ ಕನ್ನಡ ಭಾಷಾಂತರ ಸಾಹಿತ್ಯವು ಕಳೆದ ಶತಮಾನದ ಬಹುತೇಕ ಸ್ವರೂಪವನ್ನು ಮುಂದುವರೆಸಿಕೊಂಡು ಬಂದಿದ್ದರೂ ಹೆಚ್ಚು ಪ್ರೋತ್ಸಾಹ ನೆಲೆಗಳನ್ನು ವ್ಯವಸ್ಥಿತವಾಗಿ ವಿಸ್ತರಿಸಿಕೊಂಡಿದೆ. ಕೆಲವು ಭಾಷಾಂತರಬದ್ಧ ಸಂಸ್ಥೆಗಳ ಯೋಜನೆ ಹಾಗೂ ಪ್ರೋತ್ಸಾಹಗಳು ನಿರ್ದಿಷ್ಟ ಪ್ರಕ್ರಿಯಾತ್ಮಕ ಸ್ವರೂಪವು ರೂಪಗೊಳ್ಳಲು ಕಾರಣವಾಗಿದೆ. ಈ ಸಂಗತಿಯನ್ನು ಪ್ರಸ್ತುತ ಲೇಖನವು ಸ್ಥೂಲವಾಗಿ ಅವಲೋಕಿಸುತ್ತದೆ.
ಸಮಕಾಲೀನ ಕನ್ನಡ ಭಾಷಾಂತರದ ಪ್ರೋತ್ಸಾಹಗಳು, ಅವುಗಳ ಧೋರಣೆ, ಭಾಷಾಂತರಕಾರರ ವೈವಿಧ್ಯತೆ, ಭಾಷಾಂತರ ಮಾದರಿ ವಿನ್ಯಾಸಗಳು, ಭಾಷಾಂತರ ಸಾಹಿತ್ಯವನ್ನು ಮುಖ್ಯವಾಗಿಸಿಕೊಂಡು ಅವಲೋಕನವನ್ನು ಕೈಗೊಂಡಿದೆ. ಸಮಕಾಲೀನ ಸಂದರ್ಭದಲ್ಲೂ ಒಂದು ನಿರ್ದಿಷ್ಟ ಗುಂಪನ್ನು ರಚಿಸಿಕೊಂಡು ಸ್ವಾತಂತ್ರ್ಯೋತ್ತರ ಭಾಷಾಂತರ ಸಾಹಿತ್ಯ ಚರಿತ್ರೆಯನ್ನು ರೂಪಿಸಿಕೊಂಡರೆ, ಕನ್ನಡ ಸಾಹಿತ್ಯ ಅಧ್ಯಯನದ ದಾರಿ ಮತ್ತು ಸಾಧ್ಯತೆಗಳು ಬದಲಾಗುತ್ತವೆಂಬುದನ್ನು ಪರೋಕ್ಷವಾಗಿ ಗಮನಕ್ಕೆ ತರುತ್ತದೆ. ಜೊತೆಗೆ ನಮ್ಮ ಅರಿವು ಇನ್ನೂ ವಿಸ್ತಾರ ಮತ್ತು ವೈವಿಧ್ಯವಾಗಿರುತ್ತದೆ ಎಂಬುದನ್ನು ಪ್ರಸ್ತುತ ಲೇಖನವು ತನ್ನ ಆಶಯವಾಗಿಸಿಕೊಂಡಿದೆ.

Read More »

ಹಾಲುಮತ ಜನಪದ ಮಹಾಕಾವ್ಯದಲ್ಲಿನ ಶೈಲಿ ಮತ್ತು ತಂತ್ರ

ನೀಲಕಂಠ ಪೂಜಾರ

172 to 184

ಈ ಲೇಖನದಲ್ಲಿ ಹಾಲುಮತ ಜನಪದ ಮಹಾಕಾವ್ಯದಲ್ಲಿನ ಶೈಲಿ ಮತ್ತು ತಂತ್ರವನ್ನು ವಿಶ್ಲೇಷಿಸಲಾಗಿದೆ. ಶೈಲಿಯು ಕಾವ್ಯದ ಆಂತರ್ಯದ ಅಂಶವಾಗಿದ್ದು, ಅದು ಕವಿಯ ಚಿಂತನೆ, ಭಾವನೆ, ಸಮಾಜ ಸಂಸ್ಕೃತಿಗಳ ಪ್ರತಿಬಿಂಬವನ್ನು ಹೊತ್ತು ತರುತ್ತದೆ. ಹಾಲುಮತ ಮಹಾಕಾವ್ಯಗಳಲ್ಲಿ ಪ್ರಾಸಬದ್ಧತೆ, ಶಬ್ದಚಿತ್ರಗಳು, ಛಂದೋ ವೈವಿಧ್ಯ, ಮೌಖಿಕ ಪರಂಪರೆಯ ಪದಪ್ರಯೋಗಗಳು ಪ್ರಮುಖವಾಗಿ ಕಾಣುತ್ತವೆ. ಜನಪದೀಯ ಸಾಂಸ್ಕೃತಿಕ ವೀರರು, ಭಕ್ತಿ, ವೀರಗಾಥೆಗಳು ಹಾಗೂ ಸಾಮಾಜಿಕ ಪರಂಪರೆಗಳನ್ನು ಶಬ್ದಚಿತ್ರಗಳ ಮೂಲಕ ಕಾವ್ಯಮಯವಾಗಿ ಅಭಿವ್ಯಕ್ತಿಸಲಾಗಿದೆ. ಗದ್ಯಪದ್ಯ ಸಮ್ಮಿಶ್ರ ರೂಪ, ಆಡುಭಾಷೆಯ ವೈಶಿಷ್ಟ್ಯ, ಪುನರಾವರ್ತನೆ, ಉಪಮೆ ಮತ್ತು ಸ್ವಭಾವೋಕ್ತಿ ಬಳಕೆ ಹಾಲುಮತ ಮಹಾಕಾವ್ಯದ ಶೈಲಿಶಿಲ್ಪವನ್ನು ಸಮೃದ್ಧಗೊಳಿಸುತ್ತವೆ. ಈ ಮೂಲಕ ಹಾಲುಮತ ಮಹಾಕಾವ್ಯವು ಜನಜೀವನ, ನಂಬಿಕೆ, ಸಂಸ್ಕೃತಿ ಮತ್ತು ಕಲಾತ್ಮಕ ಕೌಶಲ್ಯದ ಅನನ್ಯ ದಾಖಲೆಗಳಾಗಿ ಪರಿಣಮಿಸಿದೆ.

Read More »

ಮೋಹನ ಕುಂಟಾರ ಅವರ ಅನುವಾದಗಳ ಅಧ್ಯಯನ

ರಾಜಶೇಖರ ಬಿರಾದಾರ

185 to 193

ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿ 30 ವರ್ಷಗಳ ಸಾರ್ಥಕ ಅಧ್ಯಾಪನ ವೃತ್ತಿಯೊಂದಿಗೆ ಮೋಹನ ಕುಂಟಾರ ಅವರು ಅನುವಾದ ಸಾಹಿತ್ಯವನ್ನು ಕುರಿತು ಸಾಕಷ್ಟು ಅಧ್ಯಯನ ಮತ್ತು ಸಂಶೋಧನೆಗಳನ್ನು ನಡೆಸಿದ್ದಾರೆ. ಮಲಯಾಳಂ ಭಾಷೆಯಿಂದ ಹಲವು ಉಪಯುಕ್ತ ಕೃತಿಗಳನ್ನು ಕನ್ನಡಕ್ಕೆ ತರುವುದರ ಜೊತೆಗೆ ಭಾಷಾಂತರವನ್ನು ಕುರಿತು ಹಲವು ಮಹತ್ವದ ಶಾಸ್ತ್ರ ಗ್ರಂಥಗಳನ್ನು ಹೊರತಂದಿದ್ದಾರೆ. ಭಾಷಾಂತರ ಮತ್ತು ಭಾಷಾಂತರ ಅಧ್ಯಯನಗಳು ಇವರ ಪ್ರಧಾನವಾದ ಆಸಕ್ತಿಯ ಕ್ಷೇತ್ರಗಳಾಗಿವೆ. ಭಾಷಾಂತರ ಅಧ್ಯಯನದ ಪ್ರಮೇಯಗಳನ್ನು, ಸಿದ್ಧಾಂತಗಳನ್ನು ಆನ್ವಯಿಕ ನೆಲೆಯಲ್ಲಿ ಚಾರಿತ್ರಿಕವಾಗಿ ದೃಷ್ಟಾಂತಗಳ ಸಮೇತ ವಿವರಿಸುವ, ವಿಶ್ಲೇಷಿಸುವ, ಅರ್ಥೈಸುವ ಕಲೆ ಅವರ ವೈಶಿಷ್ಟ್ಯತೆಯಾಗಿದೆ. ಅಧ್ಯಯನ ಹಾಗೂ ಅಧ್ಯಾಪನದಲ್ಲಿನ ಅವರ ಶಿಸ್ತು, ವಸ್ತುನಿಷ್ಠತೆ ಹಾಗೂ ಹಿತಮಿತ ವಚನವು ಕೃತಿಗಳಲ್ಲಿಯೂ ಪಡಿಮೂಡಿರುವುದು ಮತ್ತೊಂದು ವಿಶೇಷತೆಯಾಗಿದೆ.
ಕುಂಟಾರ ಅವರು ʼಭಾಷಾಂತರದ ವಿಭಿನ್ನ ನೆಲೆಗಳುʼ, ʼಭಾಷಾಂತರ ಪ್ರಕ್ರಿಯೆ ಪ್ರೇರಣೆ ಪ್ರಭಾವʼ, ʼಮಾಧ್ಯಮಗಳು ಮತ್ತು ಭಾಷಾಂತರʼ, ʼಅನುವಾದ, ಅನುಸೃಷ್ಟಿ, ರೂಪಾಂತರʼ, ʼಅನುವಾದ ಒಲವು ನಿಲುವುʼ, ʼಕನ್ನಡಮಲಯಾಳಂ ಭಾಷಾಂತರ ಪ್ರಕ್ರಿಯೆʼ, ʼಅನುವಾದ ಸಾಹಿತ್ಯʼ ಮತ್ತು ʼಅನುವಾದ ಹೆಜ್ಜೆ ಗುರುತುʼ ಎಂಬ ಎಂಟಕ್ಕೂ ಹೆಚ್ಚು ಭಾಷಾಂತರ ಶಾಸ್ತ್ರವನ್ನು ವಿವೇಚಿಸುವ ಮಹತ್ವದ ಕೃತಿಗಳ ಜೊತೆಗೆ ನೂರಕ್ಕೂ ಹೆಚ್ಚು ಮೌಲ್ಯಯುತ ಲೇಖನಗಳ ಮೂಲಕ ಕನ್ನಡ ಸಾರಸ್ವತ ಲೋಕವನ್ನು ಅದರಲ್ಲೂ ಭಾಷಾಂತರಶಾಸ್ತ್ರ ವಲಯವನ್ನು ಶ್ರೀಮಂತಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೋಹನ ಕುಂಟಾರ ಅವರ ಅನುವಾದ ಕುರಿತ ಶಾಸ್ತ್ರ ಕೃತಿಗಳ ವಸ್ತು, ಆಶಯ ಹಾಗೂ ಸ್ವರೂಪಗಳನ್ನು ವಿಶ್ಲೇಷಣೆಗೆ ಒಳಪಡಿಸುವುದು ಈ ಲೇಖನದ ಉದ್ದೇಶವಾಗಿದೆ.

Read More »

ಯೋಗ ಶಿಕ್ಷಣದಲ್ಲಿ ಸಂಸ್ಕೃತ ಭಾಷೆಯ ಮಹತ್ವ

ಜ್ಯೋತಿ ಗೋಕಾವಿ

194 to 205

ನಮ್ಮ ಪ್ರಾಚೀನ ವಾಙ್ಮಯವೆಲ್ಲ ಸಂಸ್ಕೃತ ಭಾಷೆಯನ್ನು ಆಧರಿಸಿದೆ. ವೈದಿಕ ವಾಙ್ಮಯವೇ ಆಗಲಿ, ರಾಮಾಯಣ, ಮಹಾಭಾರತ, ಸ್ಮೃತಿಗ್ರಂಥಗಳು, ದರ್ಶನಗಳು, ಧರ್ಮಗ್ರಂಥಗಳು, ಮಹಾಕಾವ್ಯ, ಲಘುಕಾವ್ಯಗಳು, ನಾಟಕಗಳು, ಗದ್ಯಕಾವ್ಯ, ಗೀತಕಾವ್ಯ, ನೀತಿಗ್ರಂಥಗಳು ಹೀಗೆ ಸಾವಿರಾರು ಗ್ರಂಥ ಪ್ರಕಾರಗಳು ಸಂಸ್ಕೃತ ಭಾಷೆಯಲ್ಲಿ ಮಾತ್ರ ಸಿಗುತ್ತವೆ. ಇದಲ್ಲದೇ ವ್ಯಾಕರಣ, ಗಣಿತ, ಜ್ಯೋತಿಷ್ಯ, ವಾಸ್ತುಕಲೆ, ಅರ್ಥಶಾಸ್ತ್ರ, ರಾಜನೀತಿ, ಛಂದಸ್, ಅಲಂಕಾರ ಮೊದಲಾದ ಶಾಸ್ತ್ರಗಳೆಲ್ಲ ಸಂಸ್ಕೃತದಲ್ಲಿವೆ. ಹಾಗಾಗಿ, ವಾಙ್ಮಯವು ವಿಪುಲವಾದದ್ದು, ಅಪಾರವಾದದ್ದು. ಪ್ರಾಚೀನ ಕಾಲದಲ್ಲಿ ಇದು ಕೇವಲ ವಿದ್ವಾಂಸರ ಭಾಷೆಯಾಗಿರದೇ ಜನಸಾಮಾನ್ಯರ ಲೌಕಿಕ ವ್ಯವಹಾರದಲ್ಲಿ ಆಡು ಭಾಷೆಯೂ ಆಗಿತ್ತು. ಎಲ್ಲ ಶಾಸ್ತ್ರಗಳ ಪ್ರಾಚೀನ ಗ್ರಂಥಗಳು ಸಂಸ್ಕೃತ ಭಾಷೆಯಲ್ಲಿವೆ. ಇದಕ್ಕೆ ಯೋಗಶಾಸ್ತ್ರ ಸಹ ಹೊರತಲ್ಲ.
ಯೋಗವು ಪ್ರಾಚೀನ ಭಾರತದ ಒಂದು ಅತ್ಯಮೂಲ್ಯ ಕೊಡುಗೆಯಾಗಿದೆ. ಭಾರತದ ವೈಜ್ಞಾನಿಕ ಪ್ರತಿಭೆಯ ಒಂದು ಭಾಗವೂ ಹೌದು. ಯೋಗಕ್ಕೆ ಸುಮಾರು ಐದು ಸಾವಿರ ವರ್ಷಗಳಷ್ಟು ಹಳೆಯ ಇತಿಹಾಸವಿದೆ. ಯೋಗ ಶಾಸ್ತ್ರವು ಸಾಕ್ಷಾತ್ ಆದಿನಾಥ ಶಿವನಿಂದ ಉಪದೇಶಿಸಲ್ಪಟ್ಟಿದೆ ಎಂದು ಹೇಳಲಾಗಿದೆ. ಯೋಗದ ಉಲ್ಲೇಖವು ವೇದಗಳು, ಉಪನಿಷತ್ತುಗಳು, ಭಗವದ್ಗೀತೆ, ಪುರಾಣಗಳಲ್ಲಿ ಕಂಡುಬರುತ್ತದೆ. ಯೋಗದ ಪ್ರಥಮ ಉಲ್ಲೇಖವು ಋಗ್ವೇದದಲ್ಲಿ ಕಂಡುಬಂದಿದೆ ಎಂದು ಹೇಳಲಾಗುತ್ತದೆ. ಅನೇಕ ಋಷಿಮುನಿಗಳು, ಯೋಗಿಗಳು, ಸಿದ್ಧಸಾಧಕರು ಯೋಗ ಪರಂಪರೆಯನ್ನು ಬೆಳೆಸಿಕೊಂಡು ಬಂದಿದ್ದಾರೆ. ಅವರು ಅನೇಕ ಯೋಗ ಗ್ರಂಥಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಸ್ವಾತ್ಮಾರಾಮ ವಿರಚಿತ ಹಠಯೋಗ ಪ್ರದೀಪಿಕಾ, ಮಹರ್ಷಿ ಘರಂಡರು ವಿರಚಿಸಿದ ಘೇರಂಡ ಸಂಹಿತಾ (ಘಟಸ್ಥ ಯೋಗ), ಹರಗೌರಿ ಸಂವಾದವಾದ ಶಿವಸಂಹಿತಾ, ಮಹರ್ಷಿ ಶ್ರೀನಿವಾಸ ಭಟ್ಟರು ರಚಿಸಿದ ಹಠರತ್ನಾವಳಿ, ಮಹರ್ಷಿ ಗೋರಕ್ಷನಾಥರು ರಚಿಸಿದ ಗೋರಕ್ಷ ಷಟ್ಕ ಮುಂತಾದವುಗಳು ಹಠಯೋಗ ಗ್ರಂಥಗಳಾಗಿವೆ. ಇಷ್ಟೇ ಅಲ್ಲದೇ ಮಹರ್ಷಿ ಪತಂಜಲಿ ಅವರಿಂದ ರಚಿಸಲ್ಪಟ್ಟ ಯೋಗದರ್ಶನವು ಭಾರತೀಯ ತತ್ವಶಾಸ್ತ್ರದ ಆಸ್ತಿಕ ದರ್ಶನಗಳಲ್ಲಿ ಒಂದಾಗಿದೆ. ಆದ್ದರಿಂದ ಯೋಗ ಶಾಸ್ತ್ರದ ಸಂಪೂರ್ಣ ಹಾಗೂ ಯಥಾರ್ಥ ಜ್ಞಾನವನ್ನು ಹೊಂದಲು ಸಂಸ್ಕೃತ ಭಾಷಾ ಜ್ಞಾನ ಅತೀ ಮುಖ್ಯ ಪಾತ್ರವನ್ನು ವಹಿಸುತ್ತದೆ.

Read More »

ಭಾಷಾ ಶಿಕ್ಷಣದಲ್ಲಿ ಸಾಹಿತ್ಯದ ಪಾತ್ರ

ಸುಕನ್ಯಾ ಅಪ್ಪಾರಾಯ ಗೋಂದಳಿ

206 to 211

ವಿವಿಧ ಹಂತದ ಭಾಷಾ ಶಿಕ್ಷಣದಲ್ಲಿ ಸಾಹಿತ್ಯ ಕೃತಿಗಳ ಅಳವಡಿಕೆಯಾಗುತ್ತಿದೆ. ಭಾಷಾ ಶಿಕ್ಷಣದಲ್ಲಿ ಸಾಹಿತ್ಯದ ಬಳಕೆ ಬೇಕೇ ಬೇಡವೇ ಎಂಬ ಜಿಜ್ಞಾಸೆಗೆ ಕೆಲವು ದೃಷ್ಟಿಕೋನಗಳು ಸಮರ್ಥನೆ ಒದಗಿಸಬಲ್ಲವು. ಒಂದು ಮಗುವಿನಿಂದ ಹಿಡಿದು ಒಬ್ಬ ಪ್ರಬುದ್ಧ ವ್ಯಕ್ತಿಯವರೆಗೆ ಬದುಕಿನ ಈ ಪ್ರಪಂಚದ ಎಲ್ಲಾ ಅನುಭವಗಳನ್ನು ಅರ್ಥೈಸಿಕೊಳ್ಳಲು ಇರುವ ಮಾಧ್ಯಮ ಭಾಷೆ. ಭಾಷೆ ಶಿಕ್ಷಣದ ಕಲಿಕೆಯ ತಳಪಾಯ ಎನ್ನುವುದಾದರೆ ಭಾಷೆಯನ್ನು ಕಲಿಯುವ ಪರಿಣಾಮಕಾರಿ ವಿಧಾನಗಳು ಹಾಗೂ ತಂತ್ರಗಳೇನು? ತಂತ್ರಗಳಲ್ಲಿ ಸಾಹಿತ್ಯವು ಒಂದು ಪ್ರಧಾನ ಅಂಶವನ್ನು ಹೊಂದಿದೆಯೇ? ಒಟ್ಟಿನಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಶಿಕ್ಷಣದಲ್ಲಿ ಹಾಗೂ ಅದರ ಅವಿಭಾಜ್ಯ ಅಂಗವಾದ ಭಾಷಾ ಕಲಿಕೆಯಲ್ಲಿ ಸಾಹಿತ್ಯಕ್ಕೆ ಇರುವ ಸ್ಥಾನವನ್ನು ರಾಷ್ಟ್ರೀಯ ಪಠ್ಯಕ್ರಮ 2005ರಲ್ಲಿ ಪ್ರಸ್ತಾಪಗಳು ಮುನ್ನಲೆಗೆ ತರುತ್ತವೆ.

Read More »

ಜಾನಪದ ಗೀತೆಗಳ ವೈವಿಧ್ಯತೆ

ಸೋಮಶೇಖರಪ್ಪ ಹೆಚ್.

212 to 219

ಈ ಲೇಖನದ ಪ್ರಮುಖ ಉದ್ದೇಶವು ಜನಪದ ಗೀತೆಗಳ ವೈವಿಧ್ಯತೆಯನ್ನು ವಿಶ್ಲೇಷಿಸುವುದರೊಂದಿಗೆ, ಅವುಗಳಲ್ಲಿ ಅಡಗಿರುವ ಸಾಮಾಜಿಕ, ಸಾಂಸ್ಕೃತಿಕ ಮತ್ತು ಭಾವನಾತ್ಮಕ ಅಂಶಗಳನ್ನು ಅನಾವರಣಗೊಳಿಸುವುದಾಗಿದೆ. ಜನಪದ ಗೀತೆಗಳು ಕೇವಲ ಕಲಾತ್ಮಕ ಗೀತೆಗಳಲ್ಲ, ಬದಲಾಗಿ ಅವು ಜನಜೀವನದ ಸಾಂಸ್ಕೃತಿಕ ದಾಖಲೆಗಳಾಗಿವೆ. ನಿತ್ಯಜನ ಜೀವನದ ಒಂದು ಭಾಗವಾದ ಜಾನಪದ ಗೀತೆಗಳು ಅತ್ಯಂತ ವೈವಿಧ್ಯಮಯವಾಗಿ ಕನ್ನಡ ನಾಡಿನ ಪ್ರಾದೇಶಿಕ ಸೊಗಡುಗಳನ್ನು ನಮ್ಮ ಮುಂದಿನ ಪೀಳಿಗೆಗೆ ಜೋಪಾನ ಮಾಡಿವೆ ಎಂದರೆ ತಪ್ಪಲ್ಲ. ಇಂದಿನ ಪಾಶ್ಚಾತ್ಯ ಶೈಲಿಯ ಸಂಗೀತದ ಮಧ್ಯೆ ಜಾನಪದ ಗೀತೆಗಳು ತನ್ನ ಹಿಂದಿನ ವೈಭವವನ್ನು ಕಳೆದುಕೊಳ್ಳುವಂತಿದೆ. ಜನಪದ ಗೀತೆಗಳು ಸಾಂಸ್ಕೃತಿಕ ಆಸ್ತಿ. ವಿವಿಧ ಕ್ಷೇತ್ರಗಳಾದ ಕೃಷಿ, ಮದುವೆ, ಹಬ್ಬಹರಿದಿನ, ಧಾರ್ಮಿಕ ಆಚರಣೆಗಳು, ಜನನಮರಣದ ಸಂಪ್ರದಾಯಗಳು ಮೊದಲಾದ ವಿಚಾರಗಳನ್ನು ಗೀತೆಗಳ ರೂಪದಲ್ಲಿ ಕಟ್ಟಿಕೊಡಲಾಗಿದೆ. ಅವು ಪ್ರಾದೇಶಿಕ ವೈಶಿಷ್ಟ್ಯತೆ, ಸ್ಥಳೀಯ ಸಾಂಸ್ಕೃತಿಕ ಮತ್ತು ಜನಜೀವನದ ಹೋರಾಟಹರ್ಷಗಳನ್ನು ಪ್ರತಿಬಿಂಬಿಸುತ್ತವೆ. ಭಾವನಾತ್ಮಕ ಅಂಶಗಳಾದ ಪ್ರೀತಿಪ್ರೇಮ, ತಾಯಿಮಗುವಿನ ಬಾಂಧವ್ಯ, ಶೌರ್ಯ, ಧಾರ್ಮಿಕ ಭಕ್ತಿ ಮತ್ತು ಸಮೂಹ ಜೀವನದ ಒಗ್ಗಟ್ಟನ್ನು ಅವು ಸ್ಪಷ್ಟಪಡಿಸುತ್ತವೆ. ಜನಪದ ಗೀತೆಗಳ ವೈವಿಧ್ಯತೆ ಭಾರತೀಯ ಸಂಸ್ಕೃತಿಯ ಸಮೃದ್ಧ ಪರಂಪರೆಯ ಜೀವಂತ ನಿದರ್ಶನವಾಗಿದೆ. ಅವು ಕೇವಲ ಹಳೆಯ ಕಾಲದ ನೆನಪುಗಳಲ್ಲ, ಬದಲಾಗಿ ಆಧುನಿಕ ಕಾಲದಲ್ಲಿಯೂ ಜನರಿಗೆ ಪ್ರೇರಣೆ ಮತ್ತು ಸಾಂಸ್ಕೃತಿಕ ಗುರುತಿನ ಭಾವನೆ ನೀಡುತ್ತಿವೆ. ಹೀಗಾಗಿ ಜನಪದ ಗೀತೆಗಳ ಅಧ್ಯಯನವು ಭಾರತೀಯ ಸಮಾಜದ ಅಂತರಂಗವನ್ನು ಅರ್ಥಮಾಡಿಕೊಳ್ಳಲು ಹಾಗೂ ಅದರ ಸಾಂಸ್ಕೃತಿಕ ಏಕತೆಯನ್ನು ಅರಿಯಲು ಮಹತ್ವದ್ದಾಗಿದೆ.

Read More »

ಜಾನಪದ ಸಾಹಿತ್ಯ ಮತ್ತು ಆಧುನಿಕತೆಯ ಪ್ರಭಾವ

ಲಕ್ಷ್ಮೀ ಎಲ್. ಪೂಜಾರಿ

220 to 226

ಜಾನಪದ ಸಾಹಿತ್ಯವು ತಲೆತಲೆಮಾರುಗಳಿಂದ ಬೆಳೆದು ಬಂದಿರುವ ಸಾಂಸ್ಕೃತಿಕ ಸಂಪ್ರದಾಯವಾಗಿದ್ದು, ಇದು ಸಮಾಜದ ಜನಪದ ಸಂಸ್ಕೃತಿಯ ಒಂದು ಭಾಗ. ಜನರ ಪದವೇ ಜಾನಪದ. ಜನಪದ ಆಕಾಶದಷ್ಟು ಆಳ. ಅದರಲ್ಲಿ ಹಲವು ಪ್ರಕಾರಗಳಿವೆ. ಗಾದೆ, ಒಡಪು, ಒಗಟು ಹೀಗೆ. ವಿಶಿಷ್ಟ ಸಾಹಿತ್ಯವಾದ ಜನಪದ ಸಾಹಿತ್ಯವನ್ನು ಬಿ.ಎಂ.ಶ್ರೀ. ʼಜನವಾಣಿ ಬೇರು ಕವಿವಾಣಿ ಹೂವುʼ ಎಂದು ಕರೆದಿದ್ದಾರೆ. ʼಜಾನಪದ ಎಂದರೆ ಹಳ್ಳಿ, ಹಳ್ಳಿ ಎಂದರೆ ಜಾನಪದʼ ಎನ್ನುವಷ್ಟರ ಮಟ್ಟಿಗೆ ಹುದುಗಿ ಹೋಗಿರುವ ಜಾನಪದ ಹಳ್ಳಿಗರ ಒಂದು ವಿಶಿಷ್ಟ ಸಾಂಸ್ಕೃತಿಕ ರೂಪ. ನಗರೀಕರಣದ ಪ್ರಭಾವ ಕೂಡ ಸಾಕಷ್ಟು ಬೀರಿದೆ. ನಗರಗಳ ಬೆಳವಣಿಗೆಯಿಂದ ಹಳ್ಳಿಗಳಲ್ಲಿ ಜನರು ಉದ್ಯೋಗ ಅರಸಿ ನಗರಕ್ಕೆ ಹೋಗುವುದರಿಂದ ಹಳ್ಳಿಗಳಲ್ಲಿ ನಗರೀಕರಣದ ಪ್ರಭಾವ ಪ್ರಾರಂಭವಾಯಿತು. 200 ವರ್ಷಗಳ ಕಾಲ ಆಳ್ವಿಕೆ ಮಾಡಿದಂತಹ ಬ್ರಿಟಿಷರಿಗಿಂತ 20 ವರ್ಷಗಳಲ್ಲಿ ಆಗಿರುವ ಪ್ರಭಾವ ಎಂತಹದು ಎನ್ನುವುದನ್ನು ಗುರುತಿಸಬಹುದು. ಜನಪದರು ಆಧುನಿಕತೆಯ ಪ್ರಭಾವದಿಂದ ಆಧುನಿಕ ಮಾಧ್ಯಮಗಳಾದ ಟಿ.ವಿ., ಮೊಬೈಲ್, ಗಣಕಯಂತ್ರಗಳ ಬಳಕೆಯಿಂದ ಹಿಂದಿನಿಂದಲೂ ಬಂದಂತಹ ಹಾಡುಕುಣಿತಗಳು ಇಂದು ಕಾಣದ ಹಾಗೆ ಆಗಿವೆ. ಜನಪದರು ಮನರಂಜನೆಯನ್ನು ತಮ್ಮ ಬದುಕಿನ ಅನುಭವಗಳ ಮೂಲಕ ಪಡೆಯುತ್ತಿದ್ದರು. ಈಗ ಮಾಧ್ಯಮಗಳ ಪ್ರಭಾವದಿಂದ ಅದು ಕಣ್ಮರೆಯಾಗುತ್ತಿದೆ. ಜಾನಪದ ಜನರ ಪದವಾಗಿತ್ತು. ಜನಪದರು ತಾವು ಅನುಭವಿಸಿದ ಅನುಭವಗಳನ್ನು ಹಾಡು, ನೃತ್ಯ, ಕುಣಿತ, ಆಟಗಳ ಮೂಲಕ ವ್ಯಕ್ತಪಡಿಸುತ್ತಿದ್ದರು. ಇವುಗಳೇ ಅವರಿಗೆ ಮನರಂಜನೆಯಾಗಿತ್ತು. ಯಾವುದೇ ಮಾಧ್ಯಮಗಳಿರಲಿಲ್ಲ. ತಾವೇ ಈ ರೀತಿಯಾಗಿ ಖುಷಿ ಪಡುತ್ತಾ ಕಾಲ ಕಳೆಯುತ್ತಿದ್ದರು.

Read More »

ಸಾಹಿತ್ಯದ ಮೇಲೆ ಮಾಧ್ಯಮಗಳ ಪ್ರಭಾವ

ಶ್ರೀದೇವಿ ಪ. ದೊಡ್ಡಮನಿ

227 to 233

ಈ ಲೇಖನದಲ್ಲಿ ಸಾಹಿತ್ಯದ ಮೇಲೆ ಮಾಧ್ಯಮಗಳ ಪ್ರಭಾವವನ್ನು ವಿಶ್ಲೇಷಿಸಲಾಗಿದೆ. ಭಾಷೆ ಮತ್ತು ಸಾಹಿತ್ಯ ಮಾನವ ಸಂವಹನದ ಮೂಲಭೂತ ಸಾಧನಗಳಾಗಿದ್ದು, ಅವುಗಳ ಪ್ರಸಾರ ಮತ್ತು ವ್ಯಾಪಕತೆಗೆ ಮಾಧ್ಯಮಗಳು ಪ್ರಮುಖ ಪಾತ್ರವಹಿಸಿವೆ. ಮುದ್ರಣ ಮಾಧ್ಯಮದಿಂದ ಪ್ರಾರಂಭವಾದ ಈ ಪ್ರಕ್ರಿಯೆ, ರೇಡಿಯೋ, ದೂರದರ್ಶನ, ಸಿನಿಮಾ, ಇಂಟರ್‌ನೆಟ್, ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಹೊಸ ಆಯಾಮಗಳನ್ನು ಪಡೆದಿದೆ. ಮಾಧ್ಯಮಗಳು ಸಾಹಿತ್ಯವನ್ನು ಜನಪ್ರಿಯಗೊಳಿಸುವುದರ ಜೊತೆಗೆ ಶಿಕ್ಷಣ, ಮನರಂಜನೆ, ಪ್ರಚಾರ ಮತ್ತು ಸಮಾಜ ಪರಿವರ್ತನೆಯ ಸಾಧನಗಳಾಗಿವೆ. ಸಾಹಿತ್ಯದ ಪ್ರಚಾರಪ್ರಸಾರ, ಕಲೆ ಸಂಸ್ಕೃತಿಯ ಉಳಿವು ಮತ್ತು ನವ್ಯ ಸಾಹಿತ್ಯ ಸೃಜನಶೀಲತೆಗೆ ಮಾಧ್ಯಮಗಳು ಆಧಾರವಾಗಿವೆ. ತಂತ್ರಜ್ಞಾನಾಧಾರಿತ ಡಿಜಿಟಲ್ ಯುಗದಲ್ಲಿ ಸಾಹಿತ್ಯ ಎಲ್ಲರಿಗೂ ಸುಲಭವಾಗಿ ಲಭ್ಯವಾಗುತ್ತಿರುವುದು ಇದರ ವಿಶೇಷತೆ. ಹೀಗಾಗಿ, ಪಾರಂಪರಿಕ ಮಾಧ್ಯಮಗಳ ನೆಲೆಯ ಮೇಲೆ ಆಧುನಿಕ ಮಾಧ್ಯಮಗಳು ಸಾಹಿತ್ಯದ ವೈವಿಧ್ಯತೆಯನ್ನು ಹೆಚ್ಚಿಸಿ, ನವಪೀಳಿಗೆಯ ಸೃಜನಾತ್ಮಕ ಚಿಂತನೆಗೆ ದಾರಿ ಮಾಡಿಕೊಟ್ಟಿವೆ ಎಂಬುದು ಈ ಲೇಖನದ ಸಾರವಾಗಿದೆ.

Read More »

ಜಾನಪದ ಸಾಹಿತ್ಯದಲ್ಲಿ ಆಧುನಿಕತೆಯ ಚಹರೆಗಳು

ಎಸ್.ಜಿ. ಕೊಂಡೆಕರ

234 to 241

ಜಾನಪದ ಸಾಹಿತ್ಯವು ಜನಜೀವನದ ಅನುಭವ, ಭಾವನೆ, ನಂಬಿಕೆಗಳ ಪ್ರತಿಬಿಂಬವಾಗಿದ್ದು, ಕಾಲದ ಬದಲಾವಣೆಯೊಂದಿಗೆ ಜಾನಪದವೂ ಹೊಸ ರೂಪದಲ್ಲಿ ಅಭಿವ್ಯಕ್ತಗೊಳ್ಳುತ್ತಿದೆ. ಆಧುನಿಕತೆಯ ಪ್ರಭಾವದಿಂದ ಜಾನಪದ ಗೀತೆಗಳು, ಕಥೆಗಳು, ಹಬ್ಬ–ಜಾತ್ರೆಗಳು, ನೃತ್ಯ–ಸಂಗೀತಗಳು ನವೀನ ವಿಷಯಗಳನ್ನು ಒಳಗೊಂಡು ಸಮಾಜದಲ್ಲಿ ಜಾಗೃತಿಯ ಸಾಧನವಾಗುತ್ತಿವೆ. ತಂತ್ರಜ್ಞಾನ, ಮಾಧ್ಯಮಗಳು, ಜಾಗತೀಕರಣ ಇವುಗಳ ನೆರವಿನಿಂದ ಜಾನಪದವು ಪ್ರಾದೇಶಿಕ ಗಡಿಗಳನ್ನು ಮೀರಿ ಜಾಗತಿಕ ವೇದಿಕೆಯತ್ತ ಸಾಗುತ್ತಿದೆ. ಹಳೆಯ ಪರಂಪರೆಯ ತಾತ್ವಿಕ ಅಂಶಗಳನ್ನು ಉಳಿಸಿಕೊಂಡೇ ಹೊಸ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಮೌಲ್ಯಗಳನ್ನು ಒಳಗೊಳ್ಳುತ್ತಿರುವುದು ಇದರ ಆಧುನಿಕತೆಯ ಮುಖ್ಯ ಲಕ್ಷಣವಾಗಿದೆ. ಹೀಗಾಗಿ ಜಾನಪದ ಸಾಹಿತ್ಯವು ಕೇವಲ ಪಾರಂಪರಿಕ ಧಾರೆ ಮಾತ್ರವಲ್ಲದೆ, ಆಧುನಿಕ ಸಮಾಜದ ಚಿಂತನೆ, ಬದಲಾವಣೆ ಮತ್ತು ಸಂವೇದನೆಗಳನ್ನು ಪ್ರತಿಬಿಂಬಿಸುವ ಜೀವಂತ ಕಲಾ–ಸಂಸ್ಕೃತಿಯ ರೂಪವಾಗಿ ಹೊರಹೊಮ್ಮುತ್ತಿದೆ.

Read More »

ಜಾಗತೀಕರಣ ಮತ್ತು ಬರವಣಿಗೆಯ ಪ್ರಕಾರಗಳು

ಯಲ್ಲಕ್ಕ ಎಸ್. ಭಜಂತ್ರಿ

242 to 246

ಜಾಗತೀಕರಣವು ಬರವಣಿಗೆಯ ಪ್ರಪಂಚದ ಮೇಲೆ ಅಗಾಧ ಪ್ರಭಾವ ಬೀರಿದೆ. ಜಾಗತೀಕರಣವು ಪ್ರಪಂಚದಾದ್ಯಂತ ಆರ್ಥಿಕತೆಗಳು, ಸಂಸ್ಕೃತಿಗಳು ಮತ್ತು ಜನರ ನಡುವೆ ಹೆಚ್ಚುತ್ತಿರುವ ಪರಸ್ಪರ ಸಂಪರ್ಕವನ್ನು ಸೂಚಿಸುತ್ತದೆ. ಇದು ಅಂತರರಾಷ್ಟ್ರೀಯ ವ್ಯಾಪಾರ, ಹೂಡಿಕೆ ಮತ್ತು ತಂತ್ರಜ್ಞಾನದ ಪ್ರಗತಿಯಿಂದ ಪ್ರಾರಂಭವಾಗಿದೆ. ಜಾಗತೀಕರಣದ ಈ ಪ್ರಕ್ರಿಯೆಯು ಬರವಣಿಗೆಯ ಮೇಲೆ ಹಲವಾರು ರೀತಿಯಲ್ಲಿ ಪ್ರಭಾವ ಬೀರಿದೆ.

Read More »

ಆಧುನಿಕ ಸಾಹಿತ್ಯ ಮತ್ತು ತಂತ್ರಜ್ಞಾನ

ಪೂಜಾ ಎಮ್ ಭಜಂತ್ರಿ

247 to 251

21ನೇ ಶತಮಾನದ ಮಾನವ ನಾಗರಿಕತೆಯು ಕಂಡುಕೊಂಡ ಮಹತ್ತರ ಸಾಧನೆಗಳಲ್ಲಿ ತಂತ್ರಜ್ಞಾನವೂ ಒಂದು. ಈ ತಂತ್ರಜ್ಞಾನ ಕೇವಲ ಯಂತ್ರಗಳ ಮತ್ತು ಯಂತ್ರಾಂಶಗಳ ಪ್ರಪಂಚಕ್ಕೆ ಸೀಮಿತವಾಗದೆ, ನಮ್ಮ ಜೀವನ ಶೈಲಿ, ಆಲೋಚನೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೇಲೆ ಆಳವಾದ ಪ್ರಭಾವ ಬೀರಿದೆ. ಸಾಹಿತ್ಯವೂ ಇದಕ್ಕೆ ಹೊರತಾಗಿಲ್ಲ. ಆಧುನಿಕ ಸಾಹಿತ್ಯವು ತಂತ್ರಜ್ಞಾನವನ್ನು ತನ್ನ ಪ್ರಕಟಣೆಯ ಮಾಧ್ಯಮವಾಗಿ, ಸಾಧನವಾಗಿ ಮತ್ತು ಕಥಾವಸ್ತುವಿನ ಪ್ರಮುಖ ಭಾಗವಾಗಿ ಬಳಸಿಕೊಳ್ಳುತ್ತಿದೆ. ಒಂದು ಕಾಲದಲ್ಲಿ ಕೇವಲ ಕಾಗದದ ಮೇಲೆ ಸೀಮಿತವಾಗಿದ್ದ ಸಾಹಿತ್ಯ ಇಂದು ಕಂಪ್ಯೂಟರ್ ಪರದೆಯಿಂದ ಮೊಬೈಲ್ ಫೋನ್ ಮೂಲಕ ಧ್ವನಿ ರೂಪದಲ್ಲಿ ಓದುಗರನ್ನು ತಲುಪುತ್ತಿದೆ. ಈ ಪ್ರಬಂಧದಲ್ಲಿ ಆಧುನಿಕ ಸಾಹಿತ್ಯ ಮತ್ತು ತಂತ್ರಜ್ಞಾನದ ನಡುವಿನ ಸೂಕ್ಷ್ಮ ಮತ್ತು ಸಂಕೀರ್ಣ ಸಂಬಂಧಗಳನ್ನು, ಅವುಗಳ ಪರಸ್ಪರ ಪ್ರಭಾವಗಳನ್ನು, ಸವಾಲುಗಳನ್ನು ಮತ್ತು ಭವಿಷ್ಯದ ಸಾಧ್ಯತೆಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ.

Read More »