Published: 2025-10-25

Table of Contents

Table of Contents

I to XVI

ಮುದ್ದೇಬಿಹಾಳ ಪ್ರದೇಶದ ಮುಸ್ಲಿಮರ ಹಬ್ಬ ಮತ್ತು ಉರುಸುಗಳು: ಒಂದು ಅವಲೋಕನ

ರಾಜೇಸಾ ಮುಜಾವರ, ಎಮ್.ಎನ್. ಬೆನ್ನೂರ

01 to 07

ಮುದ್ದೇಬಿಹಾಳ ಪ್ರದೇಶದ ಮುಸ್ಲಿಮರ ಹಬ್ಬಗಳು ಮತ್ತು ಉರುಸುಗಳು ಬಿಜಾಪುರ ಪ್ರದೇಶದಲ್ಲಿ ಪ್ರಸಿದ್ಧಿ ಪಡೆದಿವೆ. ಈ ಪ್ರದೇಶವು ಹಿಂದೂ ಮತ್ತು ಮುಸ್ಲಿಮರ ಭಾವೈಕ್ಯದ ನೆಲೆಯಾಗಿದೆ. ಮೊಹರಂ, ರಂಜಾನ್, ಬಕ್ರೀದ್, ಈ ಎಲ್ಲಾ ಹಬ್ಬಗಳನ್ನು ಭಾವೈಕ್ಯತೆಯಿಂದ ಆಚರಿಸುತ್ತಾರೆ. ವಿಶೇಷವಾಗಿ ಲೋಟಗೇರಿ, ಸುಲ್ತಾನಪುರ, ಮುದ್ದೇಬಿಹಾಳ, ಮುಕಿಹಾಳ, ಅಯ್ಯನಗುಡಿ ಮತ್ತು ಕಾನಿಕೇರಿ ಘಾಳಪೂಜಿ ಗ್ರಾಮಗಳ ಜನರು ಮೊಹರಂ ಹಬ್ಬವನ್ನು ಸಮಭಾವದಿಂದ ಆಚರಿಸುತ್ತಾರೆ. ಆ ಎಲ್ಲ ಗ್ರಾಮಗಳ ಜನರು, ನಾಡಗೌಡರು ಮತ್ತು ದೇಶಮುಖ ಮನೆತನದವರು ಈ ಹಬ್ಬದಲ್ಲಿ ಭಾಗವಹಿಸಿ ವಿವಿಧತೆಯಲ್ಲಿ ಏಕತೆಯನ್ನು ಸಾರುತ್ತಾರೆ.

Read More »

ನವರಸಪುರದ ಧಾರ್ಮಿಕೇತರ ಪಾರಂಪರಿಕ ಕಟ್ಟಡಗಳು ಮತ್ತು ಜವಾಬ್ದಾರಿ

ಸಂಗಮೇಶ ಕಚ್ಚು, ಎಂ.ಎನ್. ಬೆನ್ನೂರ

08 to 13

ನವರಸಪುರ - ಅದು ಕೇವಲ ಒಂದು ನಗರವಲ್ಲ, ಅದು ಆದಿಲ್ ಶಾಹಿಯ ಕಲಾ, ಸಂಸ್ಕೃತಿ, ಮತ್ತು ವೈಭವದ ಜೀವಂತ ಪ್ರತಿಮೆಯಾಗಿದೆ; ಇಲ್ಲಿ ನವರಸ್ ಮಹಲ್, ನಾರಿ ಮಹಲ್, ತಿಗಣಿ ಮಹಲ್, ಶಹನವಾಜ್ ಖಾನನ ವಾಡೆ ಇತ್ಯಾದಿ ಶಿಲ್ಪಕಲೆಯ ಮೌನ ಸಾರಥಿಗಳಾಗಿ ಇಂದಿಗೂ ಇತಿಹಾಸವನ್ನ ಕಥೆ ಹೇಳುತ್ತಿವೆ. ನವರಸಪುರ ನಗರವು ಆದಿಲ್ ಶಾಹಿ ಕಾಲದ ಸಾಂಸ್ಕೃತಿಕ ನಗರವಾಗಿತ್ತು. ಹಲವಾರು ರೀತಿಯ ಕಲಾತ್ಮಕ ಶಿಲ್ಪ ಶೈಲಿ ಮತ್ತು ವೈಭವಯುತವಾದ ಕಟ್ಟಡ ಹೊಂದಿದ ಯೋಜಿತ ನಗರವಾಗಿತ್ತು. ಧಾರ್ಮಿಕೇತರ ಎಂದರೆ ಸಾಮಾನ್ಯವಾಗಿ ಅರಮನೆ, ಉದ್ಯಾನವನಗಳು, ಕಾರಂಜಿಗಳು, ಸಂಗೀತಕ್ಕೆ ಕಟ್ಟಡಗಳನ್ನ ಒಳಗೊಂಡಿತ್ತು. ಹೀಗಾಗಿ ಎರಡನೇ ಇಬ್ರಾಹಿಂ ಆದಿಲ್ ಶಾಹಿಯು ತನ್ನ ಜೀವನದ ಬಹುಭಾಗವನ್ನ ಇಲ್ಲಿ ಕಳೆದನು. ನವರಸಪುರ ನಗರ ಆದಿಲ್ ಶಾಹಿ ಕಾಲದ ಉಪನಗರ ಮತ್ತು ನವರಸ್ ಮಹಲ್, ನಾರಿ ಮಹಲ್, ತಿಗಣಿ ಮಹಲ್, ಶಹನವಾಜ ಖಾನನ ವಾಡೆ ಕಾಣಬಹುದು. ನವರಸಪುರದ ಧಾರ್ಮಿಕೇತರ ಪಾರಂಪರಿಕ ಕಟ್ಟಡಗಳು ಸಾಂಸ್ಕೃತಿಕ, ಐತಿಹಾಸಿಕ ಮತ್ತು ವೈಶಿಷ್ಟ್ಯಪೂರ್ಣ ಶೈಲಿಯ ಪ್ರತಿರೂಪಗಳಾಗಿವೆ. ಇವು ಕಾಲಾನುಗತವಾಗಿ ಹಾಳಾಗುತ್ತಿರುವುದರಿಂದ ಸಂರಕ್ಷಣೆಯ ಅಗತ್ಯತೆ ಹೆಚ್ಚುತ್ತಿದೆ. ಈ ಕಟ್ಟಡಗಳು ಧಾರ್ಮಿಕ ಸ್ವರೂಪವಿಲ್ಲದಿದ್ದರೂ, ಸಮುದಾಯದ ಚರಿತ್ರೆ, ದಿನಚರಿ ಮತ್ತು ಸ್ಥಳೀಯ ಪರಂಪರೆಯ ಪ್ರತಿರೂಪವಾಗಿವೆ. ನಗರೀಕರಣ, ನಿರ್ಲಕ್ಷ್ಯ ಮತ್ತು ಸಂರಕ್ಷಣೆಯ ಕೊರತೆಯಿಂದ ದಡದಲ್ಲಿವೆ (ಇದು ‘ಅಪಾಯದಲ್ಲಿವೆ’ ಎಂಬ ಅರ್ಥ ಕೊಡುವ ಪದವಾಗಿರಬಹುದು, ಆದರೆ ಮೂಲ ಲೇಖನ ಬದಲಿಸಿಲ್ಲ). ಈ ಅಧ್ಯಯನ, ಇಂಥ ಕಟ್ಟಡಗಳ ಮಹತ್ವವನ್ನು ವಿವರಿಸುತ್ತಿದ್ದು, ಸ್ಥಳೀಯ ಸಂಸ್ಥೆಗಳು, ಸರ್ಕಾರ ಹಾಗೂ ನಾಗರಿಕರು ಸಂರಕ್ಷಣೆಯಲ್ಲಿ ಪಾತ್ರವಹಿಸುವ ಅಗತ್ಯವನ್ನು ಎತ್ತಿಹಿಡಿಯುತ್ತದೆ.

Read More »

ಶಾಹುಮಹಾರಾಜರ ಸುಧಾರಣೆಗಳು ಹಾಗೂ ಪರಿಣಾಮಗಳು

ಅರುಣ ಚಿ. ಕಲ್ಲೋಳಿಕರ

14 to 19

ಜಗತ್ತಿನಲ್ಲಿ ಗೌತಮ ಬುದ್ಧನಿಂದ ಪ್ರಾರಂಭವಾದ ಸಾಮಾಜಿಕ, ಧಾರ್ಮಿಕ ಸುಧಾರಣಾ ಚಳುವಳಿ, ನಂತರ ಬಸವೇಶ್ವರ, ಜ್ಯೋತಿಭಾ ಫುಲೆ, ನಾರಾಯಣ ಗುರು, ಪೆರಿಯಾರ ರಾಮಸ್ವಾಮಿ ಅಯ್ಯಂಗಾರ, ಶಾಹೂಮಹಾರಾಜ, ಸಯ್ಯಾಜಿರಾವ್ ಗಾಯಕವಾಡ ಹಾಗೂ ಡಾ. ಅಂಬೇಡ್ಕರರ ವರೆಗೆ ಮುಂದುವರೆದು, ಆಧುನಿಕ ಭಾರತ ನಿರ್ಮಿಸುವಲ್ಲಿ ಈ ಚಳುವಳಿ ಪ್ರಮುಖ ಪಾತ್ರ ವಹಿಸಿತು. ಹಿಂದೂ ಧಾರ್ಮಿಕ ಸಾಮಾಜಿಕ ಶೋಷಣೆಯ ವಿರುದ್ಧ, ಮೌಡ್ಯತೆಗಳ ವಿರುದ್ಧ ತಮ್ಮ ರಾಜ್ಯದಲ್ಲಿ ಸಾಮಾಜಿಕ, ಧಾರ್ಮಿಕ ಸುಧಾರಣಾ ಚಳುವಳಿ ಪ್ರಾರಂಭಿಸಿದರು. ಈ ಸುಧಾರಣೆಗೆ ಮೂಲ ಪ್ರೇರಣೆಯಾದದ್ದು ಜ್ಯೋತಿಭಾ ಪುಲೆ ಅವರ ಚಳುವಳಿ. ಇವರು ಅಂಬೇಡ್ಕರ ಅವರಿಗೆ ನೀಡಿದ ಸಹಾಯದಿಂದ ಭಾರತದ ಶ್ರೇಷ್ಠವಾದ ಸಂವಿಧಾನ ರಚಿಸಲು ಸಾಧ್ಯವಾಯಿತು. ಶಾಹುಮಹಾರಾಜರ ಮೂಲ ಹೆಸರು “ಯಶವಂತರಾವ್”. ಕೊಲ್ಲಾಪೂರ ಸಂಸ್ಥಾನದ ರಾಜ ನಾಲ್ವಡಿ ಶಿವಾಜಿ ತೀರಿಕೊಂಡ ನಂತರ ಆತನಿಗೆ ಮಕ್ಕಳಿರಲಿಲ್ಲ. (ಇತನ ಹೆಂಡತಿ ಆನಂದಿಬಾಯಿ). ಇಂತಹ ಸಂದರ್ಭದಲ್ಲಿ ಕೊಲ್ಲಾಪುರ ರಾಜಮನೆತನದ ದೂರದ ಸಂಬಂಧಿಯಾದ ಕಾಗಲ್ ಪ್ರದೇಶದ ಮುಖ್ಯಸ್ಥನಾದ ಅಪ್ಪಾಸಾಹೇಬ ಜಯಸಿಂಗ್‌ರಾವ್ ಘಾಟಗೆರವರು ಮುಧೋಳ ಸಂಸ್ಥಾನದ ರಾಧಾಬಾಯಿಯನ್ನು ವಿವಾಹವಾಗಿದ್ದರು. ಈ ದಂಪತಿಗಳಿಗೆ 1874 ರಲ್ಲಿ ಯಶವಂತರಾವ್ ಎಂಬ ಮಗ ಜನ್ಮತಾಳಿದನು. ಆತನು 10 ವರ್ಷದವನಿದ್ದಾಗ ಕೊಲ್ಲಾಪುರ ಸಂಸ್ಥಾನದ ರಾಣಿ ಆನಂದಿಬಾಯಿ 1884 ರಲ್ಲಿ ಯಶವಂತರಾವ್‌ನನ್ನು ದತ್ತು ಪಡೆದುಕೊಂಡಳು. ಆತನಿಗೆ ಶಾಹುಮಹಾರಾಜ ಎಂದು ಮರುನಾಮಕರಣ ಮಾಡಿದಳು. ಆನಂತರ ಕೊಲ್ಲಾಪುರ ಸಂಸ್ಥಾನದ ರಾಜನ್ನಾಗಿ ಮಾಡಿದರು. ಪ್ರಾರಂಭದಲ್ಲಿ ಶಾಹುಮಹಾರಾಜರಿಗೆ ಒಳ್ಳೆಯ ಶಿಕ್ಷಣ ನೀಡಲಾಯಿತು. ಕೇಶವರಾವ ಗೋಖಲೆ ಮತ್ತು ರಘುನಾಥರಾವ್ ಸಬನಿಸ್ ಅವರು ಪ್ರಾರಂಭಿಕ ಶಿಕ್ಷಣ ನೀಡಿದರು. ನಂತರ 1889 ರಿಂದ 1892ರ ಕಾಲಘಟ್ಟದಲ್ಲಿ ಶಾಹು ಅವರ ಶಿಕ್ಷಣವು ಧಾರವಾಡದಲ್ಲಿ “ಸರ್ ಸ್ಟೂವರ್ಟ್ ಫ್ರೇಜರ್” ಅವರ ಉಸ್ತುವಾರಿಯಲ್ಲಿ ನಡೆಯಿತು.

Read More »

ಬಸವೇಶ್ವರ, ಗಾಂಧೀಜಿ ಹಾಗೂ ಅಂಬೇಡ್ಕರ್‌ರವರ ಸಾಮಾಜಿಕ ಸಮಾನತೆಯ ಚಿಂತನೆಗಳು

ಶ್ರೀಶೈಲ ಬಬಲಾದ

20 to 26

ಭಾರತೀಯರು ಆತ್ಮ ಪರಮಾತ್ಮನೆಂಬ ವ್ಯಕ್ತಿ ಕೇಂದ್ರಿತ ಸಿದ್ಧಾಂತದಿಂದ ಸಮಾಜ ಕೇಂದ್ರಿತ ಸಿದ್ಧಾಂತಕ್ಕೆ ಸಾಮಾಜಿಕ ವ್ಯವಸ್ಥೆಯನ್ನು ವಿಸ್ತರಿಸಿದ್ದರು. ಸಮಾಜವೆನ್ನುವುದು ಸಂಕೀರ್ಣ ವ್ಯವಸ್ಥೆ, ಅದರ ಎಲ್ಲ ಸ್ತರಗಳನ್ನು ಎಲ್ಲ ಮಗ್ಗುಲಗಳನ್ನು ಬದಲಿಸಲು ಮಾಡಿದ ಪ್ರಯತ್ನವಾಗಿದೆ. ಹನ್ನೆರಡನೇ ಶತಮಾನದಲ್ಲಿ ಬಸವಣ್ಣನಿಂದಾಗಿ ವ್ಯಕ್ತಿ ಸ್ವಾತಂತ್ರ್ಯ ಪಡೆದ ಜನವರ್ಗವು ವ್ಯಕ್ತಪಡಿಸಿದ ಅಭಿಪ್ರಾಯದಿಂದ ವಚನ ಸಾಹಿತ್ಯದ ಉದಯ. ಆದ್ದರಿಂದ ಸಾಮಾಜಿಕ ಸಮಾನತೆಯ ಚಿಂತನೆಗಳು ಹೊರಬಂದವು. ವರ್ಣಭೇದ, ವರ್ಗಭೇದ ಹಾಗೂ ಲಿಂಗಭೇದ ನಿರಾಕರಣೆಗಳಂತಹ ವಿಚಾರ ಸ್ಫೋಟಗೊಂಡವು. ಬಸವಣ್ಣನವರು “ಎಲ್ಲಿ ಕುಲಗಳಿಲ್ಲವೋ, ಎಲ್ಲಿ ಜಾತಿಗಳಿಲ್ಲವೋ, ಎಲ್ಲಿ ಲಿಂಗಭೇದವಿಲ್ಲವೋ, ಎಲ್ಲಿ ವರ್ಗಭೇದವಿಲ್ಲವೋ” ಅದಕ್ಕೆ ಶರಣಸಂಕುಲ ಎಂದು ಕರೆಯುತ್ತಾರೆ.

Read More »

ಸಾಂಸ್ಕೃತಿಕ ಭಾವೈಕ್ಯತೆ ಮೂಡಿಸಿದ ಬಾಂಬೆ ಕರ್ನಾಟಕದ ಬಾಗೇನಾಡು

ಬಸವರಾಜ ಕೊಕಟನೂರ

27 to 35

ಬೆಳಗಾವಿ ಜಿಲ್ಲೆಯ ತಾಲೂಕು ಕೇಂದ್ರವಾಗಿದ್ದು, ಇಂದಿನ ರಾಯಬಾಗ ಕ್ಷೇತ್ರವಾಗಿದೆ. ಪ್ರಾಚೀನ ಕರ್ನಾಟಕದಲ್ಲಿ ಇದನ್ನು ‘ಕುಂತಣ ಬಾಗೇ’, ‘ಕುಹುಂಡೇ ಮಂಡಲದ’ ಒಂದು ಭಾಗವಾಗಿತ್ತು. ಇದನ್ನು ತೆಂಕಣಬಾಗೆ ಎಂದು ಗುರುತಿಸುವರು. ಕ್ರಮೇಣ ಪೋವಿನಬಾಗೇ, ಪೋಬಾಗೆ, ಬಾಗೆ ಫೋಬಾಗೆ, ಬಾಗಿ ಎಂದು ಹೆಸರು ಬದಲಿಸಿಕೊಂಡಿತು. ಜನರ ಬಾಯಲ್ಲಿ ಇವತ್ತಿಗೆ ರಾಯಬಾಗ ಎಂದು ಕರೆದರು. ಇಂದಿಗೂ ಈ ಪರಿಸರವನ್ನು ಬಾಗೇನಾಡು ಎಂದು ಕರೆಯುವುದು ರೂಢಿ ಇದೆ. ಇದು ಪ್ರಾದೇಶಿಕವಾಗಿ ರಾಯಬಾಗ ಸ್ಥಳವನ್ನು ಹೊಂದಿದ್ದು, ತನ್ನದೇ ಆದ ಇತಿಹಾಸವನ್ನು ಸಾರುತ್ತದೆ. ಇಲ್ಲಿ ಅನೇಕ ಆದಿ ಮಾನವನ ನೆಲೆಗಳು ಕಂಡು ಬಂದಿದ್ದು, ಕದಂಬರು, ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ನಂತರದಲ್ಲಿ ಬಹುಮನಿ ಸುಲ್ತಾನರು, ಮರಾಠರು ಹೀಗೆ ಅನೇಕ ರಾಜಮನೆತನಗಳು ಸಂಸ್ಥಾನಗಳು ಆಳಿದ ನಾಡು.

Read More »

ವಸಾಹತು ಕಾಲದ ವಿಜಯಪುರ ಜಿಲ್ಲೆಯ ಆಡಳಿತ ಕಟ್ಟಡಗಳು ಮತ್ತು ಅವುಗಳ ಸಂರಕ್ಷಣೆ

ಪಿ.ಬಿ. ಬಿರಾದಾರ್

36 to 41

ವಸಾಹತು ಕಾಲದ ವಿಜಯಪುರ ಜಿಲ್ಲೆಯಲ್ಲಿ ಬ್ರಿಟಿಷರು ಆಡಳಿತಾತ್ಮಕ ಕಟ್ಟಡಗಳ ಸಂರಕ್ಷಣೆಗೆ ಹೆಚ್ಚಿನ ಗಮನ ನೀಡಿದರು. 1848ರ ನಂತರ ಬ್ರಿಟಿಷರು ಜಿಲ್ಲೆಯನ್ನು ನೇರವಾಗಿ ಆಡಳಿತಕ್ಕೆ ತೆಗೆದುಕೊಂಡು, ಕಲಾದಗಿ ಜಿಲ್ಲೆಯಿಂದ ಜಿಲ್ಲಾ ಕೇಂದ್ರವನ್ನು ವಿಜಯಪುರಕ್ಕೆ ವರ್ಗಾಯಿಸುವುದರ ಮೂಲಕ ಇಲ್ಲಿನ ಕಟ್ಟಡಗಳ ದುರಸ್ತಿ ಕಾರ್ಯ ಮತ್ತು ಸಂರಕ್ಷಣೆಗೆ ಆದ್ಯತೆ ನೀಡಿದರು. ಈ ಸಂದರ್ಭದಲ್ಲಿ ಆದಿಲ್‌ಶಾಹಿ ವಾಸ್ತುಕಲಾ ಸ್ಮಾರಕಗಳನ್ನು ದುರಸ್ತಿಗೊಳಿಸಿ ಸಾರ್ವಜನಿಕ ಹಾಗೂ ಆಡಳಿತ ಸೇವೆಗಳಿಗೆ ಬಳಸಿದರು. ಆಡಳಿತ ಕಚೇರಿಗಳು, ನ್ಯಾಯಾಲಯ, ಖಜಾನೆ, ಪೊಲೀಸ್ ಕಚೇರಿ ಸೇರಿದಂತೆ ಮುಂತಾದ ಸೇವೆಗಳನ್ನು ನಖರಖಾನಾ, ಅರಕಿಲ್ಲೆ, ಆಸರ್‌ ಮಹಲ್, ಮುಸ್ತಫ ಖಾನ್ ಸರಾಯಿ, ಅದಾಲತ್ ಮಹಲ್, ದೌಲಿಯಾ ಯಾಕೂತ್ ಮಹಲ್, ಚೀನಿ ಮಹಲ್, ಆನಂದ ಮಹಲ್ ಇತ್ಯಾದಿ ಕಟ್ಟಡಗಳನ್ನು ಬ್ರಿಟಿಷರು ಸರಿಪಡಿಸಿ ತಮ್ಮ ಆಡಳಿತ ಕಾರ್ಯಗಳಿಗೆ ಉಪಯೋಗಿಸಿದರು. ಈ ಕಟ್ಟಡಗಳಲ್ಲಿ ಭಾರತೀಯ ಮತ್ತು ಪಾಶ್ಚಾತ್ಯ ವಾಸ್ತು ಶೈಲಿಯ ಸಂಯೋಜನೆ ಕಂಡುಬರುತ್ತದೆ. ಬ್ರಿಟಿಷರು ನಿರಂತರ ದುರಸ್ತಿ, ಪ್ರವೇಶ ನಿಯಂತ್ರಣ, ಭದ್ರತಾ ಕ್ರಮ, ದಾಖಲೆ ತಯಾರಿ ಮತ್ತು ಸಾರ್ವಜನಿಕ ಜಾಗೃತಿಯ ಮೂಲಕ ಈ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಯನ್ನು ಮುಂದುವರೆಸಿದರು. ಈ ಕಾರ್ಯಗಳಿಂದ ವಿಜಯಪುರದ ವಾಸ್ತುಶಿಲ್ಪ, ಆಡಳಿತ ಪರಂಪರೆ ಮತ್ತು ಸಾಮಾಜಿಕ ಇತಿಹಾಸವನ್ನು ಅಧ್ಯಯನ ಮಾಡಲು ಅನುಕೂಲವಾಯಿತು. ಈ ವಿಷಯದಲ್ಲಿ ನಾವು ಬ್ರಿಟಿಷರಿಗೆ ಋಣಿಯಾಗಿದ್ದೇವೆ.

Read More »

ವಿಶ್ವಪಾರಂಪರಿಕ ತಾಣ ಪಟ್ಟದಕಲ್ಲಿನ ಸ್ಮಾರಕಗಳ ಸಂರಕ್ಷಣೆ ಹಾಗೂ ಜವಾಬ್ದಾರಿಗಳು

ಎಸ್. ಎಸ್. ಘಂಟಿಮಠ

42 to 46

ಬಾಗಲಕೋಟೆ ಜಿಲ್ಲೆಯ ಪ್ರಸಿದ್ಧ ವಿಶ್ವ ಪರಂಪರೆಯ ತಾಣವಾದ ಪಟ್ಟದಕಲ್ಲು ಐತಿಹಾಸಿಕ ತಾಣಗಳಲ್ಲಿ ಒಂದಾಗಿದೆ. ಇದು ಬಾದಾಮಿ ಚಾಲುಕ್ಯರ ಕಾಲದ ಐತಿಹಾಸಿಕ ಸ್ಥಳವಾಗಿದ್ದು, ಬಾದಾಮಿಗೆ 10 ಕಿ.ಮೀ ದೂರದಲ್ಲಿದೆ. ಮಲಪ್ರಭಾ ನದಿಯ ದಡದಲ್ಲಿರುವ ಇದಕ್ಕೆ ಕಸುವೊಳಲು ಅಥವಾ ಕಿಸುವೊಳಲು ಎಂದು ಕರೆಯುವರು. ಇಲ್ಲಿ ಕ್ರಿ.ಶ 6ನೇ ಶತಮಾನದಿಂದ 10ನೇ ಶತಮಾನದವರೆಗೂ ಬಾದಾಮಿ ಚಾಲುಕ್ಯರು ಹಾಗೂ ರಾಷ್ಟ್ರಕೂಟರ ಕಾಲದಲ್ಲಿ ಉಚ್ಚ್ರಾಯ ಸ್ಥಿತಿಗೇರಿತ್ತು.
“ಸ್ಥಳೀಯ ಶಾಸನಗಳಲ್ಲಿ ಇದನ್ನು ಪಟ್ಟಬಂಧೋತ್ಸಹ ಸಕಲ ವಿಷಯ ಪಟ್ಟಣಾಧಿಪತಿ ಶ್ರೀಮತಿ ಕಿಸುವೊಳಲ್” ಎಂದು ಕರೆಯುವರು. ಇದನ್ನು 1987 ರಲ್ಲಿ ವಿಶ್ವಪರಂಪರೆ ಪಟ್ಟಿಗೆ ಸೇರಿಸಲಾಗಿದೆ. ಇಲ್ಲಿ ಚಾಲುಕ್ಯ ರಾಜರಾದ ವಿಜಯಾದಿತ್ಯ ಮತ್ತು 2ನೇ ವಿಕ್ರಮಾದಿತ್ಯನ ಕಾಲದಲ್ಲಿ ನಿರ್ಮಾಣಗೊಂಡಿರುವ 10 ದೇವಾಲಯಗಳಿವೆ. ಚಾಲುಕ್ಯರ ಕಾಲದಲ್ಲಿ ಪಟ್ಟದಕಲ್ಲು ವಾಸ್ತುಶಿಲ್ಪದ ಪ್ರಯೋಗಶಾಲೆಯಾಗಿತ್ತು. ಹೀಗಾಗಿ ದ್ರಾವಿಡ, ವೇಸರ ಹಾಗೂ ನಾಗರ ಶೈಲಿಯ ದೇವಾಲಯಗಳನ್ನು ಇಲ್ಲಿ ಕಾಣಬಹುದು. ಪಟ್ಟದಕಲ್ಲಿನ ಪ್ರಮುಖ ದೇವಾಲಯಗಳೆಂದರೆ: ವಿರೂಪಾಕ್ಷ ದೇವಾಲಯ, ಮಲ್ಲಿಕಾರ್ಜುನ ದೇವಾಲಯ, ಪಾಪನಾಥ ದೇವಾಲಯ, ಗಳಗನಾಥ ದೇವಾಲಯ, ಜೈನ ನಾರಾಯಣ ದೇವಾಲಯ ಮುಂತಾದವುಗಳು.

Read More »

ವಿಜಯಪುರ ಜಿಲ್ಲೆಯ ಸ್ಮಾರಕಗಳ ಸಂರಕ್ಷಣೆ ಮತ್ತು ಸೌಲಭ್ಯ

ಗೋವರ್ಧನ ಪಿ. ಬಿ.

47 to 51

ದಕ್ಷಿಣ ಭಾರತದ ರಾಣಿ, ಗುಂಬಜ್‌ಗಳ ನಗರ ಎಂದೇ ಪ್ರಸಿದ್ಧಿ ಪಡೆದ ವಿಜಯಪುರವು ಕರ್ನಾಟಕ ಚರಿತ್ರೆಯಲ್ಲಿ ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕವಾಗಿ ಬಹು ಮುಖ್ಯ ಪಾತ್ರವನ್ನು ವಹಿಸಿದೆ. ಜಿಲ್ಲೆಯಲ್ಲಿ ಪ್ರಾಚೀನ ಕಾಲದಿಂದಲೂ ಕೃಷ್ಣ, ಮಲಪ್ರಭಾ, ಘಟಪ್ರಭಾ, ಭೀಮಾ, ಡೋಣಿ ಎಂಬ ಐದು ನದಿಗಳು ಹರಿಯುವುದರಿಂದ ಪಂಚ ನದಿಗಳ ನಾಡು ಎಂದೇ ಪ್ರಸಿದ್ಧವಾಗಿತ್ತು. ಹಾಗಾಗಿ ಈ ಜಿಲ್ಲೆಯಲ್ಲಿ ಕರ್ನಾಟಕದ ಎರಡು ಪ್ರಸಿದ್ಧ ರಾಜಮನೆತನಗಳಾದ ಬಾದಾಮಿ ಚಾಲುಕ್ಯರು ಮತ್ತು ಆದಿಲ್ ಶಾಹಿಗಳು ತಮ್ಮ ರಾಜಧಾನಿ ಕೇಂದ್ರಗಳನ್ನು ಹೊಂದಿ ತಮ್ಮ ಆಡಳಿತ ಅವಧಿಯಲ್ಲಿ ಸಾಕಷ್ಟು ಸ್ಮಾರಕಗಳನ್ನು ಜಿಲ್ಲೆಯಾದ್ಯಂತ ನಿರ್ಮಾಣ ಮಾಡಿದರು. ವಿಜಯಪುರವನ್ನು ರಾಜಧಾನಿ ಕೇಂದ್ರವನ್ನಾಗಿ ಹೊಂದಿದ್ದ ಆದಿಲ್‌ಶಾಹಿಗಳು ಭಾರತೀಯ ವಾಸ್ತುಶಿಲ್ಪ ವೈಭವಕ್ಕೆ ಅಮೂಲ್ಯ ಕಾಣಿಕೆ ನೀಡಿದ್ದಾರೆ. ಕರ್ನಾಟಕದ ಕಲಾ ಪರಂಪರೆಯಲ್ಲಿ ಆದಿಲ್ ಶಾಹಿಗಳ ರಚನೆಗೆ ಗಣ್ಯ ಸ್ಥಾನವಿದೆ. ದಕ್ಷಿಣ ಭಾರತದಲ್ಲಿ ಇಸ್ಲಾಮಿಕ್ ವಾಸ್ತುಶಿಲ್ಪ ಇವರ ಕಾಲದಲ್ಲಿ ಪರಮೋತ್ಕೃಷ್ಟತೆ ಮುಟ್ಟಿತು. ಇವರು ಕಲಾತ್ಮಕ ದೃಷ್ಟಿಯಿಂದ ವಿಜಯಪುರವನ್ನು ಸುಂದರ ಕಟ್ಟಡಗಳಿಂದ ಅಲಂಕರಿಸಿದರು. ಅವರು ತಮ್ಮ ಕಾಲದ ಸಂಪತ್ತನ್ನೆಲ್ಲ ಭವ್ಯ ಕಟ್ಟಡಗಳಿಗೆ ವಿನಿಯೋಗಿಸಿದರು. ಅವರ ಬದುಕು ಕಲೆಗೆ ಮೀಸಲಾಗಿತ್ತು, ಅವರ ಕೀರ್ತಿ ನಿಂತಿರುವುದು ಈ ಭವ್ಯ ಕಟ್ಟಡಗಳ ಮೇಲೆ. ವಿಜಯಪುರಕ್ಕಿಂತ ಹೆಚ್ಚು ಭವ್ಯ ಕಟ್ಟಡಗಳನ್ನು, ಕಲಾ ವೈಭವವನ್ನು ಪಡೆದಿರುವ ನಗರಗಳು ಭಾರತದಲ್ಲಿ ವಿರಳವೆಂದೇ ಹೇಳಬಹುದು. ಆದ್ದರಿಂದಲೇ ವಿಜಯಪುರವನ್ನು ದಕ್ಷಿಣ ಭಾರತದ ರಾಣಿ ಎಂದು ಕರೆಯಲಾಗಿದೆ. ಇಲ್ಲಿನ ಕಟ್ಟಡಗಳು ಮೊಗಲ್ ಕಟ್ಟಡಗಳ ಜೊತೆ ಸ್ಪರ್ಧಿಸಲು ಯೋಗ್ಯವಾಗಿವೆ. ಬಿಜಾಪುರ ಶೈಲಿಯು ಬೀದರ್‌ನ ಬರಿದ್ ಶಾಹಿ ಶೈಲಿಯ ವಿಕಸಿತ ರೂಪವಾಗಿದ್ದು, ದೆಹಲಿ ಸುಲ್ತಾನ ಶೈಲಿಗಿಂತ ಭಿನ್ನವಾಗಿದ್ದು ತನ್ನದೇ ಸ್ವಂತಿಕೆಯನ್ನು ಹೊಂದಿದೆ. ಇಲ್ಲಿನ ಕಟ್ಟಡಗಳು ಹಿಂದೂ - ಮುಸ್ಲಿಂ ಶೈಲಿಯಾದ ಇಂಡೋ- ಸೆರಾಸಾನಿಕ್ ಶೈಲಿಯಲ್ಲಿವೆ. ಡಾ. ಎಂ. ಹೆಚ್. ಕೃಷ್ಣ ಅವರು ಹೇಳಿರುವಂತೆ ದೆಹಲಿ ಮತ್ತು ಆಗ್ರಾ ನಗರಗಳನ್ನು ಬಿಟ್ಟರೆ ಭಾರತೀಯ ಮುಸ್ಲಿಂ ವಾಸ್ತುಶಿಲ್ಪಕ್ಕೆ ಬಿಜಾಪುರವೇ ತವರಾಗಿದೆ. ಬೃಹತ್ ಪ್ರಮಾಣದಲ್ಲಿ ಗುಂಬಜ್‌ಗಳನ್ನು ಕಟ್ಟಿದವರಲ್ಲಿ ಆದಿಲ್ ಶಾಹಿಗಳೇ ಮೊದಲಿಗರು. ಬಿಜಾಪುರದ ಗುಮ್ಮಟಗಳು ಜಗತ್ತಿನಲ್ಲಿಯೇ ಅತ್ಯುತ್ತಮವಾದವುಗಳೆಂದು ಕಲಾ ವಿಮರ್ಶಕರು ಹೊಗಳಿದ್ದಾರೆ.
ಬಿಜಾಪುರ ವಾಸ್ತುಶಿಲ್ಪ ಶೈಲಿಯ ಲಕ್ಷಣಗಳೆಂದರೆ ಕಮಲದಳದ ಮೇಲೇರುವ ಅರ್ಧ ಗೋಳಾಕಾರದ ಗುಮ್ಮಟಗಳು, ಕಟ್ಟಡದ ಮೇಲ್ಭಾಗದಲ್ಲಿ ಮಿನಾರ್‌ಗಳಿಂದ ಅಲಂಕೃತವಾಗಿರುತ್ತದೆ. ಚತುಷ್ಕೇಂದ್ರ ಮಾದರಿಯ ಕಮಾನುಗಳನ್ನು ಒಳಗೊಂಡಿರುತ್ತವೆ. ಈ ಕಟ್ಟಡಗಳ ವಿಶೇಷತೆ ಎಂದರೆ ಕಂಬಗಳು ಇಲ್ಲದಿರುವುದು. ಅದರ ಬದಲಾಗಿ ದಪ್ಪ ಗೋಡೆಗಳೇ ಕಂಬಗಳಂತಿರುತ್ತವೆ. ಗೋಡೆಯ ಮೇಲೆ ಚಾಚು ಅಲಂಕಾರದಿಂದ ಕೂಡಿರುವುದು ಈ ಶೈಲಿಯ ವಿಶೇಷವಾಗಿದೆ.
ವಿಜಯಪುರದ ಆದಿಲ್ ಶಾಹಿಗಳ ಸ್ಮಾರಕಗಳನ್ನು ಅರಮನೆಗಳು, ಮಸೀದಿಗಳು ಮತ್ತು ಗೋರಿಗಳು ಎಂದು ಮೂರು ಭಾಗಗಳಾಗಿ ನೋಡಬಹುದಾಗಿದೆ.
ಅರಮನೆಗಳು - ವಿಜಯಪುರದಲ್ಲಿ 20ಕ್ಕೂ ಹೆಚ್ಚು ಅರಮನೆಗಳಿದ್ದು ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಗಗನ ಮಹಲ್, ಮೆಹತರ್ ಮಹಲ್, ಅಸಾರ್ ಮಹಲ್, ಸಂಗೀತ ಮಹಲ್, ಮೋತಿ ಮಹಲ್, ಆನಂದ ಮಹಲ್, ಸಾತ್ ಮಹಲ್, ಚೀನಿ ಮಹಲ್, ಚಂದ ಚಾವಡಿ, ಜಲ ಮಂದಿರಗಳು ಪ್ರಮುಖವಾದವು.

Read More »

ವಸಾಹತು ಶಾಹಿ ಕಾಲದ ಬಾಂಬೆ ಕರ್ನಾಟಕದಲ್ಲಿ ಸಾಮಾಜಿಕ ಚಳುವಳಿ

ಎಸ್.ಎಂ. ಹೆಳವರ

52 to 59

ಬ್ರಿಟಿಷರ ವಸಾಹತುಶಾಹಿ ಆಳ್ವಿಕೆಯ ಕಾಲದಲ್ಲಿ ಬಾಂಬೆ ಕರ್ನಾಟಕದಲ್ಲಿ ಸಾಮಾಜಿಕ ಬದಲಾವಣೆಗಳು ಪ್ರಾರಂಭವಾದವು. ಜಾತಿಯತೆ, ಅಸ್ಪೃಶ್ಯತೆ, ಅಂಧಶ್ರದ್ಧೆ, ಮೂಢನಂಬಿಕೆ, ಅಜ್ಞಾನ, ಅಂಧಕಾರ, ಮಹಿಳೆಯರ ಮೇಲಿನ ಅನ್ಯಾಯ ಹಾಗೂ ಹಿಂದುಳಿದ ವರ್ಗಗಳ ಶೋಷಣೆಯನ್ನು ಪರಿಹರಿಸಲು ಅನೇಕ ಸುಧಾರಣಾ ಚಳುವಳಿಗಳು ಹುಟ್ಟಿಕೊಂಡವು. ಪ್ರಾರ್ಥನಾ ಸಮಾಜ, ಆರ್ಯ ಸಮಾಜ, ಲಿಂಗಾಯತ ಮಠಗಳು ಧಾರ್ಮಿಕ ಸಾಮಾಜಿಕ ಸುಧಾರಣೆಗಳಲ್ಲಿ ಮುಂಚೂಣಿಗೆ ಬಂದವು. ಜ್ಯೋತಿಬಾ ಪುಲೆ, ಸಾವಿತ್ರಿಬಾಯಿ ಪುಲೆ, ಶಾಹೂ ಮಹಾರಾಜರು, ಅಂಬೇಡ್ಕರ್, ದಯಾನಂದ ಸರಸ್ವತಿ ಮುಂತಾದವರ ಪ್ರೇರಣೆಯಿಂದ ಅಸ್ಪೃಶ್ಯತೆ ನಿವಾರಣೆ, ಮಹಿಳಾ ಶಿಕ್ಷಣ, ವಿಧವಾ ಮರುವಿವಾಹ, ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ಹೋರಾಟಗಳು ನಡೆದವು. ಕ್ರೈಸ್ತ ಮಿಷನರಿಗಳು ಶಿಕ್ಷಣದ ಪ್ರಚಾರದಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಚಳುವಳಿಗಳು ಸಮಾನತೆ, ಸ್ವಾತಂತ್ರ್ಯ ಮತ್ತು ನ್ಯಾಯದ ಬಯಕೆಗಳನ್ನು ಬಿತ್ತಿದವು. ಸಾಮಾಜಿಕ ಜಾಗೃತಿಯಿಂದ ರಾಷ್ಟ್ರೀಯ ಚಳುವಳಿಗೂ ಬಲ ಒದಗಿ ಬಂದಿತು. ಹೀಗಾಗಿ ವಸಾಹತುಶಾಹಿ ಕಾಲದ ಬಾಂಬೆ ಕರ್ನಾಟಕದ ಸಾಮಾಜಿಕ ಚಳುವಳಿಗಳು ಸಮಾಜ ಸುಧಾರಣೆಯೊಂದಿಗೆ ಸ್ವಾತಂತ್ರ್ಯ ಹೋರಾಟಕ್ಕೂ ಪ್ರೇರಣೆಯಾದವು.

Read More »

ಭಾರತದಲ್ಲಿ ಭೂ ಹಿಡುವಳಿ ವ್ಯವಸ್ಥೆ

ಜಗದೀಶ

60 to 65

ಯಾವುದೇ ಒಂದು ರಾಷ್ಟ್ರದ ಆರ್ಥಿಕ ವ್ಯವಸ್ಥೆಯನ್ನು ನಿರ್ಧರಿಸುವಲ್ಲಿ ಕೃಷಿ ಮತ್ತು ಉದ್ದಿಮೆಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಭಾರತವು ಹಳ್ಳಿಗಳ ನಾಡು. ಕೃಷಿಯೇ ಇಲ್ಲಿಯ ಜನರ ಜೀವನಾಡಿ, ನಮ್ಮ ಅರ್ಥ ವ್ಯವಸ್ಥೆಯ ಬೆನ್ನೆಲುಬು. ಕೃಷಿಯು ಗ್ರಾಮೀಣ ಜನರ ಸಾಮಾಜಿಕ, ಆರ್ಥಿಕ, ಧಾರ್ಮಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತದೆ. ಹೀಗೆ ಭೂಮಿಯು ಆರ್ಥಿಕ ಅಭಿವೃದ್ಧಿಗಾಗಿ, ದೇಶದ ಬೆಳವಣಿಗೆಗಾಗಿ ಮತ್ತು ವ್ಯಕ್ತಿಯ ಬದುಕಿಗಾಗಿ ಪ್ರಮುಖವಾಗಿದ್ದು, ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಾಮಾನ್ಯ ಅರ್ಥದಲ್ಲಿ ಭೂ ಹಿಡುವಳಿ ಪದ್ಧತಿ ಎಂದರೆ ಸಾಗುವಳಿ ಮಾಡುವ ವ್ಯಕ್ತಿಯು ಹೊಂದಿರುವ ಭೂಮಿ ಮತ್ತು ಅದರ ಬಗೆಗೆ ಅವನ ಹಕ್ಕು ಮತ್ತು ಜವಾಬ್ದಾರಿಯನ್ನು ನಿರ್ಧರಿಸುವ ಪದ್ಧತಿಯಾಗಿದೆ, ಅಂದರೆ ಭೂ ಸ್ವಾಮ್ಯದ ಬಗ್ಗೆ ವ್ಯಕ್ತಿ ಹೊಂದಿರುವ ಅಧಿಕಾರವನ್ನು ಮತ್ತು ಶಾಸನಬದ್ಧವಾದ ಹಕ್ಕನ್ನು ತೋರಿಸಿಕೊಡುತ್ತದೆ. ಭೂ ಒಡೆತನ ಪದ್ಧತಿಯನ್ನು ಭೂ ಹಿಡುವಳಿ ಪದ್ಧತಿ, ಭೂ ಸ್ವಾಮ್ಯ ಪದ್ಧತಿ ಎಂದೂ ಸಹ ಕರೆಯುತ್ತಾರೆ. ಭೂ ಹಿಡುವಳಿ ಪದ್ಧತಿಯನ್ನು ಆಂಗ್ಲ ಭಾಷೆಯಲ್ಲಿ LAND TENURE ಎನ್ನುತ್ತಾರೆ. TENURE ಎಂಬ ಪದವು TENIYO ಎಂಬ ಲ್ಯಾಟಿನ್ ಭಾಷೆಯ ಪದದಿಂದ ಬಂದಿದ್ದು, ಹಿಡಿಯುವುದು, ಇಟ್ಟುಕೊಳ್ಳುವುದು ಎಂಬ ಅರ್ಥವನ್ನು ಹೊಂದಿದೆ.

Read More »

ಆಧುನಿಕ ಸಮಾಜದ ನಿರ್ಮಾಣದಲ್ಲಿ ಶಾಹು ಮಹಾರಾಜರ ಕೊಡುಗೆಗಳು

ಮಲ್ಲಿಕಾರ್ಜುನ ರಾ. ಜರಕುಂಟಿ

66 to 71

ಆಧುನಿಕ ಭಾರತದ ಸಾಮಾಜಿಕ ಪುನರ್‌ನಿರ್ಮಾಣದಲ್ಲಿ ಶಾಹು ಮಹಾರಾಜರ ಕೊಡುಗೆಗಳು ಅಪ್ರತಿಮವಾಗಿವೆ. ಜಾತಿ-ಆಧಾರಿತ ಅಸಮಾನತೆ, ಅಸ್ಪೃಶ್ಯತೆ ಮತ್ತು ಶೋಷಣೆಯ ವಿರುದ್ಧ ಅವರು ಶಕ್ತಿಯುತ ಹೋರಾಟ ನಡೆಸಿ ಸಮಾಜದಲ್ಲಿ ಸಮಾನತೆ ಮತ್ತು ನ್ಯಾಯದ ಬುನಾದಿ ಹಾಕಿದರು. ಶಿಕ್ಷಣದ ಹಕ್ಕನ್ನು ಎಲ್ಲ ವರ್ಗಗಳಿಗೂ ಮುಕ್ತಗೊಳಿಸಿ, ವಿಶೇಷವಾಗಿ ದಲಿತರು, ಬಡವರು ಹಾಗೂ ಮಹಿಳೆಯರಿಗೆ ಉಚಿತ ಶಿಕ್ಷಣವನ್ನು ಕಲ್ಪಿಸಿದರು. ಸಮಾಜದಲ್ಲಿ ಹಿಂದುಳಿದ ವರ್ಗಗಳಿಗೆ ಉದ್ಯೋಗಾವಕಾಶ ಹಾಗೂ ರಾಜಕೀಯ ಪ್ರತಿನಿಧಿತ್ವ ನೀಡುವಲ್ಲಿ ಶಾಹು ಮಹಾರಾಜರು ಅಗ್ರಗಣ್ಯರಾಗಿದ್ದರು. ಅವರ ದೃಷ್ಟಿಕೋನದಲ್ಲಿ “ಸಮಾನತೆ, ಸ್ವಾತಂತ್ರ್ಯ ಮತ್ತು ಬಾಂಧವ್ಯ” ಎಂಬ ತತ್ವಗಳು ಪ್ರತಿಫಲಿಸಿದವು. ಶಾಹು ಮಹಾರಾಜರ ನೂತನ ನೀತಿಗಳು ಸಾಮಾಜಿಕ ನ್ಯಾಯದ ಬಾಗಿಲು ತೆರೆಯುವಂತೆ ಮಾಡಿದ್ದು, ಭಾರತದಲ್ಲಿ ಪ್ರಜಾಪ್ರಭುತ್ವದ ನೆಲೆಬೀಳುವಿಕೆಗೆ ಬಲವಾದ ನೆಲೆ ಒದಗಿಸಿತು. ಹೀಗಾಗಿ ಅವರು ಆಧುನಿಕ ಸಮಾಜದ ಶಿಲ್ಪಿಗಳಾಗಿ ಇತಿಹಾಸದಲ್ಲಿ ಸದಾ ಸ್ಮರಣೀಯರಾಗಿದ್ದಾರೆ.

Read More »

ಜಮಖಂಡಿ ಪರಿಸರದ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ

ಶ್ರೀನಿವಾಸ ಎಸ್. ಕಟ್ಟಿಮನಿ

72 to 78

ಜಮಖಂಡಿ ತಾಲೂಕು ಐತಿಹಾಸಿಕವಾಗಿ ಮಹತ್ವದ ಸ್ಥಳವಾಗಿದ್ದು, ತಾಲೂಕಿನಾದ್ಯಂತ ಅನೇಕ ಐತಿಹಾಸಿಕ ಕಟ್ಟಡಗಳನ್ನು ಹೊಂದಿದೆ. ದೇವಸ್ಥಾನಗಳು, ಶಾಲೆಗಳು, ಬಂಗಲೆಗಳು, ಸರ್ಕಾರಿ ಕಟ್ಟಡಗಳು ಸೇರಿದಂತೆ ಅನೇಕ ಕಟ್ಟಡಗಳಿದ್ದು, ಪ್ರತಿಯೊಂದು ವಿಶಿಷ್ಟ ಶೈಲಿಯ ವಾಸ್ತುಶಿಲ್ಪ ಹೊಂದಿವೆ. ಅಷ್ಟೊಂದು ಸೂಕ್ಷ್ಮವಲ್ಲದ ಕಟ್ಟಡ ಶೈಲಿಗಳಾದರೂ ಐತಿಹಾಸಿಕ ಕಾಲದ ವೈಶಿಷ್ಟ್ಯ ತಿಳಿಯಲು ಪ್ರಮುಖ ಆಕರಗಳಾಗುತ್ತವೆ. ನಮ್ಮ ಸುತ್ತಮುತ್ತಲಿನ ಅಂತಹ ಕೆಲವು ಪ್ರಮುಖ ಕಟ್ಟಡಗಳನ್ನು ಈ ಲೇಖನದಲ್ಲಿ ಕಾಣಬಹುದಾಗಿದೆ. ಇಂತಹ ಕಟ್ಟಡಗಳನ್ನು ಅಧ್ಯಯನದ ದೃಷ್ಟಿಯಿಂದ ಪ್ರಮುಖವಾಗಿ ಧಾರ್ಮಿಕ, ಅರಮನೆ, ಆಡಳಿತಾತ್ಮಕ, ಸಾರ್ವಜನಿಕ ಎಂದು 4 ಭಾಗಗಳಾಗಿ ವಿಭಾಗಿಸಲಾಗಿದೆ.

Read More »

ಸ್ಮಾರಕ ಶಿಲ್ಪಗಳ ಪಾರಂಪರಿಕ ಮಹತ್ವ

ಎಸ್.ಪಿ. ಕೊಕಟನೂರ

79 to 88

ಪ್ರಾಚೀನ ಭಾರತದ ಇತಿಹಾಸದಲ್ಲಿ ಅರಸರ ಯಶಸ್ಸಿಗೆ ಶ್ರಮಿಸಿದ ಹಾಗೂ ಬೆನ್ನೆಲುಬಾಗಿ ನಿಂತಿದ್ದ ಸಾಮಾನ್ಯ ವರ್ಗದ ಜನರು ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟಿದ್ದ ಹಲವು ಉದಾಹರಣೆಗಳು ಸಿಗುತ್ತವೆ. ನಮ್ಮ ಪರಿಸರದಲ್ಲಿ ಕಂಡುಬರುವ ವೀರಗಲ್ಲು, ಮಾಸ್ತಿಗಲ್ಲು, ನಿಷಿಧಿಗಲ್ಲು ಹಾಗೂ ಇತರೆ ಬಲಿದಾನ ಶಿಲ್ಪಗಳಂತಹ ಸ್ಮಾರಕ ಶಿಲ್ಪಗಳು ತ್ಯಾಗದ ಸಂಕೇತವಾಗಿ ನಮಗೆ ಕಂಡುಬರುತ್ತವೆ. ಬೇರೆ ಕಾಲಾವಧಿಯಲ್ಲಿ ನಿರ್ಮಿತಗೊಂಡಿರುವ ಸ್ಮಾರಕ ಶಿಲ್ಪಗಳೂ ಸಮಕಾಲೀನ ಇತಿಹಾಸದ ಪ್ರಮುಖವಾದ ಆಕರಗಳೆನ್ನಬಹುದು. ವಿವಿಧ ಕಾರಣಗಳಿಂದ ಮರಣ ಹೊಂದಿದ ವ್ಯಕ್ತಿಗಳ ನೆನಪಿಗಾಗಿ ನಿಲ್ಲಿಸಿರುವಂತಹ ಶಿಲೆಗಳಾಗಿವೆ. ಬೃಹತ್ ಶಿಲಾಯುಗದಿಂದಲೇ ಇವುಗಳನ್ನು ನೆಡುವ ರೂಢಿ ಇತ್ತೆಂದು ನಮಗೆ ತಿಳಿದು ಬರುವ ಸಂಗತಿಯಾಗಿದೆ. ಸ್ಮಾರಕ ಶಿಲ್ಪಗಳು ವಿವಿಧ ಕಾರಣಗಳಿಗಾಗಿ ಮಡಿದ ವ್ಯಕ್ತಿಗಳ ತ್ಯಾಗ-ಬಲಿದಾನಗಳ ಸಂಕೇತವಾಗಿವೆ.

Read More »

ಮುಧೋಳ ಪರಿಸರದ ಪುರಾತತ್ವ ನೆಲೆಗಳ ಸಂರಕ್ಷಣೆ

ಸುನೀಲ ಕುಸ್ತಿ

89 to 95

ಮುಧೋಳ ಎಂಬುದು ಬಾಗಲಕೋಟೆ ಜಿಲ್ಲೆಯ ತಾಲೂಕು ಕೇಂದ್ರವಾಗಿದ್ದು, ಜಿಲ್ಲಾ ಕೇಂದ್ರದಿಂದ ವಾಯವ್ಯ ದಿಕ್ಕಿಗೆ 60 ಕಿ.ಮೀ. ದೂರದಲ್ಲಿದೆ. ಈ ಪ್ರದೇಶವನ್ನು ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣ ಚಾಳುಕ್ಯರು, ಕಲಚೂರಿಗಳು, ಬಿಜಾಪುರ ಆದಿಲ್‌ಶಾಹಿಗಳು, ಮರಾಠಾ ಸಂಸ್ಥಾನಿಕರು ಮತ್ತು ಬ್ರಿಟಿಷರು ಆಳ್ವಿಕೆ ಮಾಡಿದ್ದಾರೆ. ಈ ಪರಿಸರದ ಅನೇಕ ಶಾಸನಗಳು, ನಾಣ್ಯಗಳು, ಸ್ಮಾರಕಗಳು, ಮೂರ್ತಿಶಿಲ್ಪಗಳು ಮತ್ತು ಇತರೆ ಪುರಾತತ್ವೀಯ ಅವಶೇಷಗಳು ಇದೊಂದು ಪ್ರಮುಖ ಐತಿಹಾಸಿಕ ನೆಲೆ ಎನ್ನುವುದನ್ನು ಸಾಬೀತುಪಡಿಸುತ್ತವೆ. ‘ಮುಧೋಳ’ ಎಂಬ ಸ್ಥಳನಾಮದ ಕುರಿತು ಇಲ್ಲಿನ ಸ್ಥಳೀಯ ಶಾಸನಗಳೇ ಉಲ್ಲೇಖಗಳನ್ನು ನೀಡುತ್ತವೆ. ಮುಧೋಳದಲ್ಲಿರುವ ಕಲ್ಮೇಶ್ವರ ದೇವಾಲಯದಲ್ಲಿನ ಶಾಸನವು ‘ಮುದವಳನಾಡು’ಎಂಬ ಸ್ಥಳನಾಮದ ಉಲ್ಲೇಖವನ್ನು ನೀಡುತ್ತದೆ. ‘ಮುದವಳನಾಡು’ ಎಂಬುದೇ ಪ್ರಸ್ತುತ ಮುಧೋಳ ಎಂಬ ಹೆಸರಿನಿಂದ ಕರೆಯಲಾಗುತ್ತಿದೆ. ಇದೇ ನಗರದಲ್ಲಿರುವ ಗವಿಮಠದಲ್ಲಿನ ಶಾಸನವು ಮುಧೋಳನ್ನು ‘ಮುದುವೊಳಲ’ಎಂಬ ಹೆಸರಿನಿಂದ ಗುರುತಿಸುತ್ತದೆ. ಅಲ್ಲದೆ ಇಂದಿನ ಮುಧೋಳ ನಗರಕ್ಕೆ ಹಿಂದೆ ‘ಮುದುವೊಳಲು’ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತೆಂಬುದು ರನ್ನನ ಆಗಮಿಕ ಗ್ರಂಥವಾದ ‘ಅಜಿತತೀರ್ಥಂಕರ ಪುರಾಣ ತಿಲಕ’ದಿಂದಲೂ ತಿಳಿದುಬರುತ್ತದೆ.

Read More »

ಭಾರತದ ಪ್ರವಾಸೋದ್ಯಮದ ಅಭಿವೃದ್ಧಿ: ಭವಿಷ್ಯದ ಭಾರತ@2047

ಸುರೇಶ ಮಾಡಮಗೇರಿ

96 to 101

ಭಾರತವು ವಿಶ್ವದಲ್ಲೇ ಅತಿ ಶ್ರೀಮಂತ ಸಾಂಸ್ಕೃತಿಕ, ಐತಿಹಾಸಿಕ ಹಾಗೂ ನೈಸರ್ಗಿಕ ಸಂಪತ್ತಿನ ನೆಲೆಯಾಗಿದ್ದು, ಪ್ರವಾಸೋದ್ಯಮದ ಬೆಳವಣಿಗೆಯಲ್ಲಿ ಅಪಾರ ಸಾಧ್ಯತೆಗಳನ್ನು ಹೊಂದಿದೆ. 2047 ರೊಳಗೆ “ವಿಕಸಿತ ಭಾರತ” ಎಂಬ ದೃಷ್ಟಿಕೋಣದತ್ತ ಸಾಗುವ ಸಂದರ್ಭದಲ್ಲಿ, ಪ್ರವಾಸೋದ್ಯಮ ಕ್ಷೇತ್ರವು ಆರ್ಥಿಕ ವೃದ್ಧಿಗೆ, ಉದ್ಯೋಗಾವಕಾಶಗಳ ಸೃಷ್ಟಿಗೆ ಹಾಗೂ ಜಾಗತಿಕ ಮಟ್ಟದಲ್ಲಿ ಭಾರತದ ಸಾಂಸ್ಕೃತಿಕ ಹೆಗ್ಗಳಿಕೆಗೆ ಪ್ರಮುಖ ಪಾತ್ರ ವಹಿಸಲಿದೆ. ಹಸಿರು ಪ್ರವಾಸೋದ್ಯಮ, ಡಿಜಿಟಲ್ ತಂತ್ರಜ್ಞಾನ ಬಳಕೆ, ಗ್ರಾಮೀಣ ಪ್ರವಾಸೋದ್ಯಮ ಹಾಗೂ ಪರಿಸರ ಸ್ನೇಹಿ ಯೋಜನೆಗಳ ಮೂಲಕ ದೇಶವು ವಿಶ್ವದ ಪ್ರಮುಖ ಪ್ರವಾಸಿ ಗುರಿ ಕೇಂದ್ರವಾಗಿ ಹೊರಹೊಮ್ಮುವ ಭರವಸೆ ಇದೆ. ಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿ ಭಾರತದ ಸಮಗ್ರ ಪ್ರಗತಿಗೆ ದಾರಿತೋರಿಸಿ, “ಭವಿಷ್ಯದ ಭಾರತ 2047” ರ ಕನಸನ್ನು ನನಸಾಗಿಸಲು ಶಕ್ತಿಶಾಲಿ ಸಾಧನವಾಗಲಿದೆ.

Read More »

ಅಸ್ಪೃಶ್ಯತೆ ನಿರ್ಮೂಲನೆಗೆ ಜ್ಯೋತಿಬಾ ಫುಲೆ ಅವರ ಕೊಡುಗೆಗಳು

ಮಯೂರ ರಾಮಚಂದ್ರ ಕುದರಿ

102 to 110

ಅಸ್ಪೃಶ್ಯತೆಯು ಭಾರತೀಯ ಸಮಾಜದ ಇತಿಹಾಸದಲ್ಲಿ ಅತ್ಯಂತ ಕ್ರೂರ ಮತ್ತು ಆಳವಾಗಿ ಬೇರೂರಿರುವ ಸಾಮಾಜಿಕ ಅನಿಷ್ಟವಾಗಿದೆ. ಈ ವ್ಯವಸ್ಥೆಯು ಅಸ್ಪೃಶ್ಯ ಸಮುದಾಯದ ಜನರನ್ನು ಮೂಲಭೂತ ಮಾನವ ಹಕ್ಕುಗಳಿಂದ ವಂಚಿಸಿ, ಅವರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಪ್ರಗತಿಯನ್ನು ಸಂಪೂರ್ಣವಾಗಿ ತಡೆಯುತ್ತಿತ್ತು. 19ನೇ ಶತಮಾನದ ಮಹಾರಾಷ್ಟ್ರದಲ್ಲಿ, ಮಹಾತ್ಮ ಜ್ಯೋತಿರಾವ್ ಫುಲೆ ಅವರು ಈ ದುಷ್ಟ ಪದ್ಧತಿಯ ಮೂಲಾಧಾರವನ್ನೇ ಪ್ರಶ್ನಿಸಿದ ಮತ್ತು ಅದರ ವಿರುದ್ಧ ಧೈರ್ಯವಾಗಿ ಹೋರಾಡಿದ ಕ್ರಾಂತಿಕಾರಕ ಚಿಂತಕ ಹಾಗೂ ಸಮಾಜ ಸುಧಾರಕರಾಗಿದ್ದರು. ಅವರು ಶಿಕ್ಷಣವನ್ನು ಸಬಲೀಕರಣದ ಪ್ರಾಥಮಿಕ ಆಯುಧವನ್ನಾಗಿ ಬಳಸಿಕೊಂಡು, ಮಹಿಳೆಯರು ಮತ್ತು ಅಸ್ಪೃಶ್ಯರಿಗಾಗಿ ಶಾಲೆಗಳನ್ನು ಸ್ಥಾಪಿಸಿದರು, ಅಷ್ಟೇ ಅಲ್ಲದೆ ’ಸತ್ಯಶೋಧಕ ಸಮಾಜ’ವನ್ನು ಕ್ರಾಂತಿಕಾರಕ ಸಂಘಟನೆಯಾಗಿ ರೂಪಿಸಿದರು; ಹಾಗೂ ‘ಗುಲಾಮಗಿರಿ’ ಮತ್ತು ’ಶೆತ್ಕಾರ್ಯಾಚಾ ಆಸೂಡ’ದಂತಹ ಸಾಹಿತ್ಯಿಕ ಕೃತಿಗಳ ಮೂಲಕ ಜಾತಿ ವ್ಯವಸ್ಥೆಯ ಐತಿಹಾಸಿಕ ಮತ್ತು ಧಾರ್ಮಿಕ ಆಧಾರಗಳನ್ನು ಬಯಲಿಗೆಳೆದರು. ಈ ಐತಿಹಾಸಿಕ ಅಧ್ಯಯನವು ಫುಲೆ ಅವರ ಬಹುಮುಖಿ ಹೋರಾಟವನ್ನು ಮತ್ತು ಅದರ ಹಿಂದಿರುವ ಚಿಂತನಾಶೀಲ ಚೌಕಟ್ಟನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸುತ್ತದೆ. ಅಲ್ಲದೆ, ಅವರ ಸಮಾನತೆ, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ತತ್ವಗಳು ಕೇವಲ ಐತಿಹಾಸಿಕ ಘಟನೆಗಳಾಗಿರದೆ, ಸಮಕಾಲೀನ ಭಾರತದಲ್ಲಿ ನಡೆಯುತ್ತಿರುವ ಸಾಮಾಜಿಕ ನ್ಯಾಯದ ಹೋರಾಟಗಳಿಗೆ ಇಂದಿಗೂ ಪ್ರಸ್ತುತ ಮತ್ತು ಪ್ರೇರೇಪಕವಾಗಿವೆ ಎಂಬುದನ್ನು ಈ ಲೇಖನವು ಪ್ರತಿಪಾದಿಸುತ್ತದೆ.

Read More »

ಬಾದಾಮಿ ಪರಿಸರದ ಶೈವ ದೇವಾಲಯಗಳ ಸಂರಕ್ಷಣೆ

ಮುಕುಂದರ ಬ. ದೊಡ್ಡಮನಿ

111 to 117

ಇಂದಿನ ಕಾಲದಲ್ಲಿ ಪುರಾತನ ದೇವಾಲಯಗಳ ಸಂರಕ್ಷಣೆ ಅತ್ಯಂತ ಅಗತ್ಯವಾಗಿದೆ. ಪ್ರವಾಸೋದ್ಯಮ, ಪರಿಸರ ಮಾಲಿನ್ಯ, ಮಾನವನ ನಿರ್ಲಕ್ಷ್ಯ ಮತ್ತು ಪ್ರಕೃತಿಜನ್ಯ ಹಾನಿಗಳಿಂದಾಗಿ ಬಾದಾಮಿ ದೇವಾಲಯಗಳು ಹಾನಿಗೊಳಗಾಗುತ್ತಿವೆ. ಈ ಹಿನ್ನೆಲೆಯಲ್ಲಿ ಬಾದಾಮಿ ಪ್ರದೇಶದಲ್ಲಿರುವ ಶೈವ ದೇವಾಲಯಗಳ ಇತಿಹಾಸ, ಕಲಾತ್ಮಕ ವೈಶಿಷ್ಟ್ಯ, ಅವು ಎದುರಿಸುತ್ತಿರುವ ಸವಾಲುಗಳು ಹಾಗೂ ಅವುಗಳ ಸಂರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳನ್ನು ಈ ಸಂಶೋಧನಾ ಪ್ರಬಂಧದಲ್ಲಿ ವಿಶ್ಲೇಷಿಸಲಾಗಿದೆ.

Read More »

ಸ್ಮಾರಕಗಳ ಸಂರಕ್ಷಣೆ ಮತ್ತು ಪುನಶ್ಚೇತನಗೊಳಿಸುವಲ್ಲಿ ಸರಕಾರ ಮತ್ತು ಯುವ ಜನತೆಯ ಪಾತ್ರ

ಸದಾಶಿವ ಎಸ್. ಮುಗಳಿ

118 to 124

ಭಾರತವು ಅನಾದಿ ಕಾಲದಿಂದಲೂ ತನ್ನ ವಿಶಾಲ ಪರಂಪರೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿದ್ದು, ಐತಿಹಾಸಿಕ ಮಹತ್ವ ಮತ್ತು ಹಿರಿಮೆಯನ್ನು ಹೊಂದಿರುವ ಅನೇಕಾನೇಕ ಪ್ರಾಚೀನ ತಾಣಗಳು ಮತ್ತು ಪಾರಂಪರಿಕ ಸ್ಮಾರಕಗಳಿಗೆ ನೆಲೆಯಾಗಿ ನಿಂತಿದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಜ್ಞಾನ ವ್ಯವಸ್ಥೆಗಳು, ಸಂಪ್ರದಾಯಗಳು ಮತ್ತು ಸಾಂಸ್ಕೃತಿಕ ನೀತಿಗಳನ್ನು ರಕ್ಷಿಸಲು ಮತ್ತು ಉತ್ತೇಜಿಸಲು ಸರಕಾರ ಪ್ರಾಮುಖ್ಯತೆಯನ್ನು ನೀಡುತ್ತಿದೆ. ದೇಶದಾದ್ಯಂತ ಪಸರಿಸಿರುವ ಪ್ರಾಚೀನ ಕಲಾ ಕುರುಹುಗಳನ್ನು ರಕ್ಷಿಸಿ, ಸಂರಕ್ಷಿಸಿ ಮೂಲ ಸ್ವರೂಪದಲ್ಲಿ ಕಾಯ್ದುಕೊಂಡು ಭವ್ಯ ಭಾರತದ ಭವಿತವ್ಯದ ಪೀಳಿಗೆಗೆ ಕೊಂಡೊಯ್ಯುವಲ್ಲಿ ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರಕಾರ ಮತ್ತು ಆಯಾ ರಾಜ್ಯ ಸರಕಾರಗಳು ಪ್ರಥಮ ಪ್ರಾಶಸ್ತ್ಯ ನೀಡುತ್ತಿರುವುದು ದೇಶದ ಸಮಗ್ರತೆ ಮತ್ತು ಏಕತೆಯನ್ನು ಗಟ್ಟಿಗೊಳಿಸುವಲ್ಲಿ ಮಹತ್ವದ ಪಾತ್ರವಹಿಸುತ್ತಿವೆ. ಸ್ವತಂತ್ರ ಪೂರ್ವದಲ್ಲಿ ಸ್ಥಾಪಿತವಾದ ದೇಶದ ಅತೀ ಹಳೆಯ ಸಂಸ್ಥೆಗಳಲ್ಲಿ ಒಂದಾಗಿರುವ ಪುರಾತತ್ವ ಇಲಾಖೆಯು ಸಂಸ್ಕೃತಿ ಮಂತ್ರಾಲಯದ ಅಡಿಯಲ್ಲಿ ದೇಶದ ಪ್ರಾಚೀನ ಸ್ಮಾರಕಗಳನ್ನು ಸಂರಕ್ಷಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಸ್ವಚ್ಛ ಭಾರತ ಅಭಿಯಾನ, ವಿಶ್ವ ಯೋಗ ದಿವಸ, ಅನಿವಾಸಿ ಭಾರತೀಯ ದಿವಸ, ಅಂತರರಾಷ್ಟ್ರೀಯ ಸಭೆ ಸಮ್ಮೇಳನಗಳು, ರಾಷ್ಟ್ರೀಯ ಅಂತರರಾಷ್ಟ್ರೀಯ ಕ್ರೀಡಾಕೂಟಗಳು ನಮ್ಮ ಪರಂಪರೆಯ ಸಂವರ್ಧನೆಯಲ್ಲಿ ಕೈಜೋಡಿಸುತ್ತಿವೆ. ಭಾರತ ಇಂದು ವಿಶ್ವದಲ್ಲಿ ಅತ್ಯಧಿಕ ಯುವ ಜನತೆಯನ್ನು ಹೊಂದಿದ ದೇಶವಾಗಿದೆ. ಈ ಯುವ ಜನತೆಯನ್ನು ದೇಶದ ಪರಂಪರೆ, ಪ್ರಾಚೀನ ಕುರುಹುಗಳ ರಕ್ಷಣೆಯಲ್ಲಿ ಪಾಲುದಾರರನ್ನಾಗಿ ಮಾಡಿಕೊಳ್ಳುವ ವಿಪುಲ ಅವಕಾಶಗಳಿವೆ.

Read More »

ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಯ ಮಹತ್ವ ಹಾಗೂ ಜವಾಬ್ದಾರಿ

ಓಂಕಾರ ಜ. ಯರಗಟ್ಟಿಕರ

125 to 130

ಐತಿಹಾಸಿಕ ಸ್ಮಾರಕಗಳು ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಇತಿಹಾಸದ ಜೀವಂತ ಸಾಕ್ಷಿಗಳಾಗಿವೆ. ಅವುಗಳು ಕೇವಲ ಕಲ್ಲಿನ ಕಟ್ಟಡಗಳು ಅಥವಾ ಶಿಲ್ಪಕೃತಿಗಳು ಮಾತ್ರವಲ್ಲ, ಬದಲಾಗಿ ಪೀಳಿಗೆಯಿಂದ ಪೀಳಿಗೆಗೆ ಸಾಗುತ್ತಿರುವ ಜ್ಞಾನದ ಧಾರೆ, ಕಲೆಯ ಪ್ರತಿಬಿಂಬ ಮತ್ತು ರಾಷ್ಟ್ರೀಯ ಗೌರವದ ಸಂಕೇತ. ಇವುಗಳ ಸಂರಕ್ಷಣೆ ನಮ್ಮ ಸಂಸ್ಕೃತಿಯ ಅಸ್ತಿತ್ವವನ್ನು ಉಳಿಸುವ ಪ್ರಮುಖ ಕೀಲಿಕೈ. ಆದರೆ ಪ್ರಕೃತಿ ವೈಪರೀತ್ಯ, ಮಾಲಿನ್ಯ, ನಿರ್ಲಕ್ಷ್ಯ ಮತ್ತು ಮಾನವೀಯ ಅಲಕ್ಷ್ಯದಿಂದ ಸ್ಮಾರಕಗಳು ಹಾನಿಗೊಳಗಾಗುತ್ತಿರುವುದು ಗಂಭೀರ ಸಮಸ್ಯೆ. ಇಂತಹ ಸಂದರ್ಭಗಳಲ್ಲಿ ಸ್ಮಾರಕಗಳ ಸಂರಕ್ಷಣೆ ಕೇವಲ ಸರ್ಕಾರ ಅಥವಾ ಪುರಾತತ್ವ ಇಲಾಖೆಯ ಹೊಣೆಗಾರಿಕೆ ಮಾತ್ರವಲ್ಲ, ಪ್ರತಿಯೊಬ್ಬ ನಾಗರಿಕನ ನೈತಿಕ ಜವಾಬ್ದಾರಿ. ಸ್ಮಾರಕಗಳನ್ನು ಕಾಪಾಡುವುದರಿಂದ ಪ್ರವಾಸೋದ್ಯಮ ಬೆಳೆದು ಆರ್ಥಿಕ ಪ್ರಗತಿಗೂ ಸಹಾಯವಾಗುತ್ತದೆ. ಅದರ ಜೊತೆಗೆ ಇತಿಹಾಸ ಅಧ್ಯಯನ, ಪಾರಂಪರಿಕ ಜ್ಞಾನ ಮತ್ತು ಸಾಮಾಜಿಕ ಏಕತೆಗೆ ಬಲ ಒದಗಿಸುತ್ತದೆ.

Read More »

ತೇರದಾಳ ಪರಿಸರದ ಬೃಹತ್ ಶಿಲಾಯುಗದ ನೆಲೆಗಳು

ರಮೇಶ ಕುಂಬಾರ

131 to 135

‘ಚರಿತ್ರೆ’ ಕೇವಲ ಗತಕಾಲದ ಕಥನವಲ್ಲ. ಬದಲಾಗಿ ಅದು ವರ್ತಮಾನದ ಮಾನವನ ಸಮಗ್ರ ಮತ್ತು ವ್ಯವಸ್ಥಿತ ದಾಖಲೆಯೂ ಹೌದು. ಚರಿತ್ರೆ ಮಾನವನ ಸಮಗ್ರ ಜೀವನಕ್ರಮ ಮತ್ತು ಘಟನಾವಳಿಗಳನ್ನು ಕಾಲಾನುಕ್ರಮದಲ್ಲಿ ಅಧ್ಯಯನ ಮಾಡುವ ಜ್ಞಾನ ಶಿಸ್ತುವಾಗಿದ್ದು, ಮಾನವ ಪ್ರಗತಿಯನ್ನು ಅರಿಯಲು ಅದು ಸಹಾಯಕವಾಗಿದೆ. ಚರಿತ್ರೆಯನ್ನು ಮರೆತವನು ಚರಿತ್ರೆಯನ್ನು ಸೃಷ್ಟಿಸಲಾರ. “ಚರಿತ್ರೆ ಎಂದರೆ ಅದು ಸಮಯ ಸಂದರ್ಭದ ಕೂಸು ಮತ್ತು ಅದು ಯಾವಾಗಲೂ ಇತಿಹಾಸಕಾರನ ಆಯ್ಕೆಯಾಗಿರುತ್ತದೆ” ತಾಲೂಕು ಕೇಂದ್ರ ಜಮಖಂಡಿಯಿಂದ ಪಶ್ಚಿಮಕ್ಕೆ 29 ಕಿ.ಮೀ. ದೂರದಲ್ಲಿರುವ ತೇರದಾಳವು ಹಲವಾರು ವಿಭಿನ್ನ ವೈಶಿಷ್ಟ್ಯತೆಗಳಿಗೆ ಹೆಸರುವಾಸಿಯಾಗಿದೆ. ತೇರದಾಳ ಪರಿಸರದ 5 ಕಿ.ಮೀ. ಅಂತರದಲ್ಲಿಯೇ ಉತ್ತರಕ್ಕೆ ಕೃಷ್ಣಾ ನದಿ ಪೂರ್ವದತ್ತ ಹರಿಯುತ್ತಿದೆ. ಇದು ಅಂದಿನ ದಿನಮಾನಗಳಲ್ಲಿ ಜನವಸತಿ ನೆಲೆಗಟ್ಟುಗಳ ಅವಶೇಷಗಳಿಂದ ತುಂಬಿದೆ. ಅಲ್ಲದೆ ಇದೇ ಪರಿಸರದ 4 ಕಿ.ಮೀ. ದೂರದಲ್ಲಿ ‘ಕಡ್ಲಿಪಲ್ಲಿ’ ಎಂಬ ಗುಡ್ಡದ ಉತ್ತರ ದಿಕ್ಕಿಗೆ ಬರುವ ಹಳಿಂಗಳಿ, ಹನಗಂಡಿ, ಮದನಮಟ್ಟಿ, ಆಸಂಗಿಯ ಸುತ್ತಮುತ್ತಲಿನ ಪರಿಸರದಲ್ಲಿ ಬೃಹತ್ ಶಿಲಾಯುಗದ ಗೋರಿಗಳಿದ್ದು ಸುಮಾರು 1000ಕ್ಕಿಂತ ಹೆಚ್ಚು ಕಂಡುಬರುತ್ತವೆ.

Read More »

ಕಿತ್ತೂರು ತಾಲೂಕಿನ ಐತಿಹಾಸಿಕ ಸ್ಮಾರಕಗಳು

ರಾಮಕೃಷ್ಣ ಇಲಕಲ್ಲ

136 to 142

‘ಓಲ್ಡ್ ಈಸ್ ಗೋಲ್ಡ್’ ಎಂಬ ನಾಣ್ಣುಡಿಯಂತೆ, ಹಳೆಯದೆಲ್ಲಾ ಉತ್ತಮವಾಗಿರುತ್ತದೆ. ಪ್ರಾಚೀನ ಸಂಸ್ಕೃತಿಯ ನೆಲೆಗಳು, ಸಮಾಧಿಗಳು, ದೇವಾಲಯಗಳು, ಸ್ಥಂಭಗಳು, ವಿಗ್ರಹಗಳು, ಶಿಲ್ಪಕಲೆಗಳು, ಶತಮಾನಗಳ ಹಿಂದಿನ ವಸ್ತುಗಳು ಹಾಗೂ ಪಾರಂಪರಿಕ ಕಟ್ಟಡಗಳು, ಅರಮನೆ, ಬಸದಿ, ಕೋಟೆ, ಸಮಾಧಿಗಳು, ಇತ್ಯಾದಿ. ಇವೆಲ್ಲವೂ ಪ್ರಾಚೀನ ಪರಂಪರೆಯ ಕಲೆ, ಜ್ಞಾನ, ವಿಜ್ಞಾನ, ವಾಸ್ತು ವಿದ್ಯೆ, ಸಂಸ್ಕೃತಿ, ಸಂಪ್ರದಾಯ, ನಂಬಿಕೆಗೆ ಪ್ರಬಲ ಸಾಕ್ಷಿಗಳು ಆಗಿವೆ. ಎಲೆ ಮರೆ ಕಾಯಿಯಂತೆ ಉಳಿದ ಇತಿಹಾಸ ಹೇಳುವ ಸ್ಮಾರಕಗಳು ನಮ್ಮ ರಾಜ್ಯದ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನಲ್ಲಿ ಕಂಡುಬರುತ್ತವೆ. ಈ ಐತಿಹಾಸಿಕ ಪ್ರದೇಶದಲ್ಲಿ ಹಲವಾರು ಐತಿಹಾಸಿಕ ಪ್ರಮುಖ ಸ್ಮಾರಕಗಳು ಕಿತ್ತೂರು ತಾಲೂಕಿನ ಹಲವಾರು ಗ್ರಾಮಗಳಲ್ಲಿ ಕಂಡುಬಂದಿವೆ. ಅಂತಃ ಐತಿಹಾಸಿಕ ಪ್ರಮುಖ ಸ್ಮಾರಕಗಳ ಪರಿಚಯವನ್ನು ಈ ಲೇಖನದ ಮೂಲಕ ಮಂಡಿಸಿರುವೆ. ಇದಕ್ಕಾಗಿ ಸ್ಥಳೀಯ ಅಧ್ಯಯನ ಮತ್ತು ಸಂಬಂಧಿಸಿದ ಐತಿಹಾಸಿಕ ದಾಖಲೆಗಳನ್ನು ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗ, ಕಿತ್ತೂರು ಇವರ ಸಹಕಾರದ ಮೂಲಕ ಅಧ್ಯಯನ ಮಾಡಿರುವೆ.

Read More »

ಐತಿಹಾಸಿಕ ಪಾರಂಪರಿಕ ತಾಣ ಬೆಳಗಲಿ

ಮಹಾಲಿಂಗ ರಂಗಾಪೂರ

143 to 147

ಬಾದಾಮಿ ಚಾಲುಕ್ಯರು ಹಾಗೂ ಕಲ್ಯಾಣ ಚಾಲುಕ್ಯರ ಆಡಳಿತಾವಧಿಯಲ್ಲಿದ್ದ ಒಂದು ನಾಡು ಬೆಳಗಲಿ. ಇಂದಿನ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಒಂದು ಪಟ್ಟಣ ಪಂಚಾಯತಿ ಆಗಿರುವ ಈ ಗ್ರಾಮವು ಕವಿಚಕ್ರವರ್ತಿ ರನ್ನನ ಜನ್ಮಸ್ಥಳ ಎಂದು ಹೇಳಲಾಗಿದೆ. ಪ್ರವಾಸೋದ್ಯಮ ಇಲಾಖೆಯು ಗುರುತಿಸಿರುವ 2015-2025 ವರೆಗಿನ ಪಟ್ಟಿಯಲ್ಲಿ ಬಾಗಲಕೋಟೆ ಜಿಲ್ಲೆಯ 14 ತಾಣಗಳು ಮಾತ್ರ ಇದ್ದವು. ಸದ್ಯ ಹೊಸದಾಗಿ 13 ತಾಣಗಳನ್ನು ಗುರುತಿಸಿದ್ದು ಅವುಗಳಲ್ಲಿ ಸ್ಥಾನ ಪಡೆದ ಒಂದು ಸ್ಥಳವೆಂದರೆ ಅದು ಬೆಳಗಲಿಯ ಅಮೃತೇಶ್ವರ ದೇವಾಲಯವಾಗಿದೆ. ಇದು ಮಾತ್ರವಲ್ಲದೆ ಇಲ್ಲಿ ಶ್ರೀ ಮಹಾಲಿಂಗೇಶ್ವರ ದೇವಾಲಯ, ಪರಮಾನಂದ ದೇವಾಲಯ, ರಾಮಲಿಂಗೇಶ್ವರ ದೇವಾಲಯ, ರೂಪಿಣಿ ದೇವಾಲಯಗಳು ಇರುವುದಲ್ಲದೆ ಸಾಕಷ್ಟು ಸಂಖ್ಯೆಯ ಶಾಸನಗಳು ಕಂಡುಬಂದಿರುವುದರಿಂದ ಇದೊಂದು ಪ್ರಮುಖ ಐತಿಹಾಸಿಕ ಸ್ಥಳವೆಂದು ಹೇಳಬಹುದಾಗಿದೆ. ಅನೇಕ ಪೌರಾಣಿಕ ಸಾಹಿತ್ಯ ಮತ್ತು ಪರಂಪರೆಗಳ ತಾಣವಾಗಿದೆ. ಗ್ರಾಮದಲ್ಲಿ ಒಟ್ಟು 60 ಶಿವಲಿಂಗಗಳಿದ್ದು ಹೀಗಾಗಿ ಇಲ್ಲಿ ಶೈವರ ಆಳ್ವಿಕೆ ಇತ್ತು ಎನ್ನಬಹುದಾಗಿದೆ. ಇಲ್ಲಿ ಈ ಊರಿನ ಗತವೈಭವವನ್ನು ಸಾರುವ ಅವಶೇಷಗಳು ಇನ್ನೂ ಕೂಡ ಲಭ್ಯವಾಗುತ್ತಿವೆ.

Read More »

ಕುಂದಾನಗರಿ ಬೆಳಗಾವಿ ಪ್ರದೇಶದ ಪಾರಂಪರಿಕ ತಾಣಗಳ ಸಂರಕ್ಷಣೆ

ರವಿ ಪಾಟೀಲ್

148 to 154

ಬೆಳಗಾವಿ ಜಿಲ್ಲೆ ಐತಿಹಾಸಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಸಮೃದ್ಧ ಪ್ರದೇಶವಾಗಿದೆ. ಕುಂದಾನಗರಿ ಬೆಳಗಾವಿ ಪ್ರದೇಶವು ಕರ್ನಾಟಕದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪಟಲದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಈ ಪ್ರದೇಶವು ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು, ಬಹಮನಿಗಳು, ಆದಿಲ್ ಶಾಹಿಗಳು, ಮರಾಠರು ಮತ್ತು ಬ್ರಿಟಿಷರು ಮುಂತಾದ ಅನೇಕ ರಾಜವಂಶಗಳ ಪ್ರಭಾವಕ್ಕೆ ಸಾಕ್ಷಿಯಾಗಿದೆ. “ಕುಂದಾನಗರಿ” ಎಂದು ಪ್ರಸಿದ್ಧಿಯಾದ ಈ ಪ್ರದೇಶವು ಹಳೆಯ ಕೋಟೆ, ದೇವಸ್ಥಾನಗಳು, ಜೈನ ಬಸದಿಗಳು, ಮಸೀದಿಗಳು, ಸಮಾಧಿಗಳು, ಶಾಸನಗಳು ಹಾಗೂ ವಿವಿಧ ಪಾರಂಪರಿಕ ಕಟ್ಟಡಗಳ ಮೂಲಕ ತನ್ನ ವೈಶಿಷ್ಟ್ಯವನ್ನು ಉಳಿಸಿಕೊಂಡಿದೆ. ಇವು ಕೇವಲ ಕಲ್ಲು-ಮಣ್ಣಿನ ಸ್ಮಾರಕಗಳಲ್ಲ, ಬದಲಿಗೆ ಭೂತಕಾಲದ ವೈಭವ, ಸಮಾಜದ ಧಾರ್ಮಿಕ–ಸಾಂಸ್ಕೃತಿಕ ಸಹಬಾಳ್ವೆ ಹಾಗೂ ಜನಜೀವನದ ಸಾಕ್ಷಿಗಳಾಗಿವೆ. ಆದರೆ ಆಧುನಿಕೀಕರಣ, ನಿರ್ಲಕ್ಷ್ಯ, ಅರಣ್ಯವಿಸ್ತರಣೆ, ಅಕ್ರಮ ನಿರ್ಮಾಣ ಹಾಗೂ ಪ್ರಕೃತಿ ವಿಕೋಪಗಳ ಪರಿಣಾಮವಾಗಿ ಅನೇಕ ಪಾರಂಪರಿಕ ತಾಣಗಳು ನಾಶದ ಅಂಚಿನಲ್ಲಿವೆ.

Read More »

ಹುಣಸೂರು ಪರಿಸರದ ಜೈನ ಬಸದಿಗಳ ಚಾರಿತ್ರಿಕ ಹಿನ್ನಲೆ

ಸುಧಾ

155 to 160

ಕರ್ನಾಟಕದಲ್ಲಿ ತೇಗದ ನಾಡೆಂದೇ ಹೆಸರಾಗಿರುವ ಹುಣಸೂರು ಪ್ರದೇಶವು ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯ ವ್ಯಾಪ್ತಿಗೆ ಸೇರಿದ್ದು, ಜಿಲ್ಲೆಯ ಏಳು ತಾಲ್ಲೂಕುಗಳಲ್ಲಿ ಇದು ಒಂದಾಗಿದೆ. ಲಕ್ಷ್ಮಣ ತೀರ್ಥ ನದಿಯ ಎರಡು ಇಕ್ಕೆಲುಗಳಲ್ಲಿ ಬೆಳೆದು ನಿಂತಿರುವ ಈ ಪ್ರದೇಶ ಮೈಸೂರಿನಿಂದ ಮಂಗಳೂರಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ಮಧ್ಯದಲ್ಲಿ, ಅಂದರೆ ಜಿಲ್ಲಾ ಕೇಂದ್ರದಿಂದ 47 ಕಿ.ಮಿ. ದೂರದಲ್ಲಿದ್ದು, ಇದು ಜಿಲ್ಲೆಯ ಪಶ್ಚಿಮ ಭಾಗದಲ್ಲಿ ಮಲೆನಾಡಿನ ಸೆರಗಿನಲ್ಲಿ ಕೊಡಗು ಜಿಲ್ಲೆಗೆ ಹೊಂದಿಕೊಂಡಂತಿದೆ. ಅಲ್ಲದೆ ಇದು ಗಿರಿ ಪ್ರದೇಶಗಳಿಂದ ಕೂಡಿರುವ ವೈಶಿಷ್ಟ್ಯಪೂರ್ಣ ಅರೆಮಲೆನಾಡಾಗಿದ್ದು, ಸುತ್ತಲ ಜಿಲ್ಲೆ ಮತ್ತು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಆಯಕಟ್ಟಿನ ಸ್ಥಳದಲ್ಲಿದ್ದು, ಪ್ರಗತಿ ಪಥದಲ್ಲಿ ಇದು ಮುನ್ನಡೆಯುತ್ತಿದೆ. ಈ ಪ್ರದೇಶವನ್ನು ಟಿಪ್ಪು ಸುಲ್ತಾನನು ತನ್ನ ಸೈನಿಕ ನೆಲೆಯಾಗಿ ಉಪಯೋಗಿಸುತ್ತಿದ್ದನು ಮತ್ತು 1882ರಲ್ಲಿ ಇದು ತಾಲ್ಲೂಕು ಆಗಿ ಏಳಿಗೆಗೆ ಬಂದಿತು. ಈ ಪ್ರದೇಶದಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹರಿಕಾರರೂ, ಕರ್ನಾಟಕ ರಾಜ್ಯದ ಮಾನ್ಯ ಮುಖ್ಯ ಮಂತ್ರಿಗಳೂ ಆದ ದಿವಂಗತ ಡಿ. ದೇವರಾಜ ಅರಸು ಹಾಗೂ ಕನ್ನಡ ಸಿನಿಮಾ ರಂಗಕ್ಕೆ ಅಪಾರ ಕೊಡುಗೆ ನೀಡಿ ಕನ್ನಡ ಚಲನಚಿತ್ರ ಕ್ಷೇತ್ರದಲ್ಲಿ ಹುಣಸೂರು ಎಂದೇ ಪ್ರಸಿದ್ಧಿಗಳಿಸಿ, ನಾಯಕ ನಟರಾಗಿ, ನಿರ್ದೇಶಕ, ನಿರ್ಮಾಪಕ, ಸಂಭಾಷಣಾಕಾರ, ಗೀತರಚನಾಕಾರರಾಗಿ ಬಹುಮುಖ ಪ್ರತಿಭೆ ತೋರಿದ ಹುಣಸೂರು ಕೃಷ್ಣಮೂರ್ತಿ ಇಂತಹ ಮಹನೀಯರಿಗೆ ಜನ್ಮ ನೀಡಿದ ಸ್ಥಳವೇ ಹುಣಸೂರು.

Read More »

ಹುನಗುಂದ ಪ್ರದೇಶದ ನಿರ್ಲಕ್ಷಿತ ಐತಿಹಾಸಿಕ ಸ್ಮಾರಕಗಳು

ಶಿವಾನಂದ ಆರ್. ನಾಗಣ್ಣವರ

161 to 169

ಹುನಗುಂದ ತಾಲೂಕು ಬಾಗಲಕೋಟೆ ಜಿಲ್ಲೆಯ ಒಂದು ಪ್ರಸಿದ್ಧ ಐತಿಹಾಸಿಕ ಕೇಂದ್ರ. ಬಸವೇಶ್ವರ ನಡೆದಾಡಿದ ಪುಣ್ಯಭೂಮಿ, ಕಲೆ ವಾಸ್ತುಶಿಲ್ಪದ ತೊಟ್ಟಿಲೆಂದು ಹೆಸರಾದ ಐಹೊಳೆಯ ತಾಯ್ನೆಲ. ತಾಲೂಕಿನಲ್ಲಿ ಹಳೆಯ ಶಿಲಾಯುಗದ ಕಾಲದಿಂದ ವಿಜಯನಗರ ಸಾಮ್ರಾಜ್ಯದವರೆಗಿನ ರಾಜಕೀಯ ಚರಿತ್ರೆಯನ್ನು ಹೊಂದಿದ ಪ್ರದೇಶವಾಗಿದೆ. ಈ ತಾಲೂಕಿನ ಪರಿಸರದ ಐಹೊಳೆ, ಸಿದ್ಧನಕೊಳ್ಳ ಪ್ರಮುಖ ಶಿಲಾಯುಗದ ನೆಲೆಗಳಾಗಿದ್ದರೆ, ಹುನಗುಂದ, ಅರಸಿಬೀದಿ, ಐಹೊಳೆ, ಸಿದ್ಧನಕೊಳ್ಳ, ಕರಡಿ, ಕಂದಗಲ್, ನಂದವಾಡಗಿ, ಕೂಡಲಸಂಗಮ, ಬಾದಾಮಿ ಚಾಲುಕ್ಯರ, ಯಾದವರ, ರಾಷ್ಟ್ರಕೂಟರ, ಕಲ್ಯಾಣದ ಚಾಲುಕ್ಯರ ಕಲೆಯ ಕೇಂದ್ರಗಳಾಗಿದ್ದು, ಆಕರ್ಷನೀಯ ದೇವಾಲಯಗಳನ್ನು, ಕೋಟೆಗಳನ್ನು ನಿರ್ಮಿಸಿದ್ದು ಅವುಗಳಲ್ಲಿ ಕೆಲವನ್ನು ಹೊರತುಪಡಿಸಿದರೆ ಬಹುಪಾಲು ಮಂದಿರಗಳು ನಿಧಿಗಳ್ಳರ ವಿದ್ವಂಸಕ ಕೃತ್ಯಕ್ಕೆ ಬಲಿಯಾಗಿ ನಾಶವಾಗುತ್ತ ಸಾಗಿವೆ. ಅವುಗಳನ್ನು ರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂಬುದನ್ನು ಪರಿಚಯಿಸುವುದೇ ಈ ಲೇಖನದ ಮುಖ್ಯ ಉದ್ದೇಶ.

Read More »

ಕಪ್ಪತ್ತಗುಡ್ಡ ಪರಿಸರದ ಸ್ಮಾರಕಶಿಲ್ಪಗಳು

ಸರೋಜಿನಿ ನೀ. ಹೊಸಕೇರಿ

170 to 180

ಸ್ಮಾರಕಶಿಲ್ಪಗಳೆಂದರೆ ಹೆಸರೇ ಹೇಳುವಂತೆ ಯುದ್ಧದಲ್ಲಿ ಹೋರಾಡಿ ಮಡಿದವರ ಹಾಗೂ ಗತಿಸಿದವರ ಸ್ಮರಣೆಗಾಗಿ ನಿಲ್ಲಿಸಿರುವ ಶಿಲ್ಪಗಳಾಗಿವೆ. ಈ ಶಿಲ್ಪಗಳನ್ನು ಹಲವಾರು ಇತಿಹಾಸಕಾರರು ಗುರುತಿಸಿದ್ದಾರೆ. ಈ ಸ್ಮಾರಕಶಿಲ್ಪಗಳು ಹಲವಾರು ವಿಷಯ ವಸ್ತುಗಳ ಬಗ್ಗೆ, ಅಂದಿನ ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳ ಬಗೆಗೆ ತಿಳಿಸುತ್ತವೆ. ಒಬ್ಬ ವ್ಯಕ್ತಿ ಮರಣ ಹೊಂದಿದ ಮೇಲೆ ಸ್ವರ್ಗಕ್ಕೆ ಹೋಗುತ್ತಾನೆ ಎಂಬ ನಂಬಿಕೆ ಇರುವುದನ್ನು ಕಾಣಬಹುದು. ಸ್ಮಾರಕಶಿಲ್ಪಗಳು ಒಂದು ರೀತಿಯಲ್ಲಿ ಸ್ವರ್ಗ ಮತ್ತು ನರಕದ ಪರಿಕಲ್ಪನೆಗಳನ್ನು ಗಟ್ಟಿಗೊಳಿಸಿವೆ. ಹೀಗಾಗಿ ಮರಣ ಹೊಂದಿದ ವ್ಯಕ್ತಿಯು ಅವನ ಧರ್ಮಕ್ಕೆ ಸಂಬಂಧಿಸಿದ ದೇವರಿರುವಲ್ಲಿಗೆ ಹೋಗುತ್ತಾನೆ ಎಂಬ ಪರಿಕಲ್ಪನೆ ಇರುತ್ತಿತ್ತು. ಇದರಿಂದ ಸ್ವರ್ಗದ ಪರಿಕಲ್ಪನೆ ಅಂದಿನ ಜನರಲ್ಲಿ ಇತ್ತೆಂದು ನಮಗೆ ತಿಳಿದುಬರುತ್ತದೆ.
ಸ್ಮಾರಕ ಎಂಬ ಪದವು ಕಲೆ ಮತ್ತು ವಾಸ್ತುಶಿಲ್ಪ ಶಾಸ್ತ್ರದಲ್ಲಿ ಬಹು ಅರ್ಥಪೂರ್ಣವಾದ ಹಾಗೂ ಅಷ್ಟೇ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಸ್ಮಾರಕ ಎಂಬ ಪದವು ಸ್ಮೃ+ಸ್ಮರಿಸು ಎಂಬ ಧಾತು ರೂಪವು, ಅಂದರೆ ಯಾವುದು ಸ್ಮರಣೆಗೆ ಬರುವಂತೆ ಮಾಡುತ್ತದೆಯೋ ಅದೇ ಸ್ಮಾರಕ ಎಂಬ ಪರಿಕಲ್ಪನೆ ಬರುತ್ತದೆ. ಶಿಲ್ಪ ಎನ್ನುವುದು ವಾಸ್ತುಶಿಲ್ಪದ ಒಂದು ವಿಭಾಗವಾಗಿದ್ದು, ಅದರ ಉಪವಿಭಾಗವೇ ಈ ಸ್ಮಾರಕಶಿಲ್ಪಗಳಾಗಿವೆ. ಸ್ಮಾರಕಶಿಲ್ಪ ಎಂಬ ಪದವು Memorial Stone ಎಂಬ ಆಂಗ್ಲ ಭಾಷಾರೂಪವಾಗಿದ್ದು, Memorial ಎಂದರೆ ಸ್ಮರಣೆ, Stone ಎಂದರೆ ಶಿಲೆ ಎಂಬ ಅರ್ಥವನ್ನು ನೀಡುವುದು. ಅಂದರೆ ಯಾವುದೇ ವ್ಯಕ್ತಿಯ ಸ್ಮರಣೆಗಾಗಿ ನಿಲ್ಲಿಸಿದ ಶಿಲೆಗಳನ್ನು ಸ್ಮಾರಕಶಿಲ್ಪಗಳು ಎಂದು ಕರೆಯುವರು. ಅವುಗಳು ಕಟ್ಟಡ, ಸ್ತಂಭಗಳು, ಶಾಸನ, ಯಾವುದೇ ರೂಪದಲ್ಲಿಯೂ ಇರಬಹುದು. ಒಟ್ಟಾರೆಯಾಗಿ ಹೇಳುವುದಾದರೆ ಯಾವುದೇ ಒಂದು ಸನ್ನಿವೇಶದಲ್ಲಿ ಅಥವಾ ಘಟನೆಯಲ್ಲಿ ಮಡಿದ ಹಾಗೂ ಗತಿಸಿದವರ ನೆನಪಿಗಾಗಿ ಹಾಕಿಸುವ ಶಿಲ್ಪಗಳನ್ನು ಸ್ಮಾರಕಶಿಲ್ಪಗಳೆಂದು ಹೇಳಬಹುದು. ಯುದ್ಧದಲ್ಲಿ ಮರಣಿಸಿದ ವ್ಯಕ್ತಿಯನ್ನು ದೈವತ್ವ ಕ್ಕೇರಿಸಿ ಅವರನ್ನು ಗೌರವಿಸುವ ರೂಪದಲ್ಲಿ ಈ ಸ್ಮಾರಕಗಳನ್ನು ಇಡುವ ಕಲೆ ಬೆಳೆಯಿತು. ಇವುಗಳೇ ಮುಂದೆ ಸ್ಮಾರಕಶಿಲ್ಪಗಳಾಗಿ ರೂಪುಗೊಂಡವು.

Read More »

ಬೆಳಗಾವಿ ಪ್ರದೇಶದ ಬ್ರಾಹ್ಮಣೇತರ ಚಳುವಳಿ

ಎಂ.ಎಸ್. ಮಠಪತಿ

181 to 184

1873ರಲ್ಲಿ ಮಹಾತ್ಮಾ ಪುಲೆಯವರಿಂದ ಆರಂಭಗೊಂಡ ಸತ್ಯಶೋಧಕ ಸಮಾಜ ಚಳುವಳಿಯು ಆಧುನಿಕ ಭಾರತದ ಬ್ರಾಹ್ಮಣೇತರ ಚಳುವಳಿಯಾಗಿದೆ. ಅವರ ಬೆಂಬಲಿಗರು ಹಾಗೂ ಅನುಯಾಯಿಗಳಿಂದ ಅದು ಇಡೀ ಮಹಾರಾಷ್ಟ್ರ, ಉತ್ತರ ಕರ್ನಾಟಕ, ಮೈಸೂರು ಹಾಗೂ ಮದ್ರಾಸ್ ಪ್ರದೇಶಗಳಿಗೂ ಹರಡಿತು. ಈ ಚಳುವಳಿಯು ಧಾರವಾಡ, ಬಿಜಾಪುರ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ತನ್ನ ಶಾಖೆಗಳನ್ನು ಹೊಂದಿತ್ತು. ಈ ಚಳುವಳಿಯ ಇನ್ನೊಂದು ಸ್ವರೂಪ ಎಂದರೆ ಕೇವಲ ಬ್ರಾಹ್ಮಣ ವಿರೋಧಿ ಚಳುವಳಿ ಆಗಿರದೆ ಅದು ಶೇಡಜಿಗಳ ಅಂದರೆ ‘ಬನಿಯಾ’ ಅಥವಾ ‘ಲೇವಾದೇವಿದಾರ’ರ ವಿರೋಧಿ ಚಳುವಳಿಯಾಗಿತ್ತು. ಬೆಳಗಾವಿ ಪ್ರದೇಶದಲ್ಲಿ ಬ್ರಾಹ್ಮಣೇತರ ಚಳುವಳಿಯು ಆರಂಭಗೊಂಡ ಹಿನ್ನಲೆಯಲ್ಲಿ ಹಲವಾರು ರೀತಿಯಲ್ಲಿ ಚಳುವಳಿಗಳು ಆರಂಭಗೊಂಡವು, ಇವುಗಳಿಂದ ಹಲವಾರು ವ್ಯಕ್ತಿಗಳು ಚಳವಳಿಯ ಪ್ರಮುಖ ಉದ್ದೇಶಗಳನ್ನು ತಿಳಿದುಕೊಂಡು, ಚಳುವಳಿಯಲ್ಲಿ ಪಾಲ್ಗೊಂಡರು. ಇದರಿಂದ ಹಲವಾರು ರೀತಿಯ ಸಂಘ ಸಂಸ್ಥೆಗಳು ಸ್ಥಾಪನೆಗೊಂಡವು. ಈ ಕಾರಣಗಳಿಂದ ಬ್ರಾಹ್ಮಣೇತರ ವರ್ಗಗಳಿಗೆ ಅನುಕೂಲವಾಯಿತು.

Read More »

ಸಾಮಾಜಿಕ ಪರಿವರ್ತನೆಗೆ ಶ್ರೀ ಬಸವೇಶ್ವರ ಮತ್ತು ಮಹಾತ್ಮ ಜ್ಯೋತಿಬಾಪುಲೆರವರ ಕೊಡುಗೆಗಳು

ಶ್ರೀಧರ ಸಿ. ಕಾಂಬಳೆ

185 to 193

ಭಾರತದ ಸಮಾಜೋ-ಧಾರ್ಮಿಕ ಇತಿಹಾಸದಲ್ಲಿ ಬಸವೇಶ್ವರ, ಜ್ಯೋತಿಬಾ ಫುಲೆ, ಅಂಬೇಡ್ಕರ್ ಅವರ ಚಿಂತನೆಗಳಿಗೆ, ಅವರದೇ ಆದ ಮಹತ್ವವಿರುವುದು ನಾವೆಲ್ಲ ಬಲ್ಲೆವು. ಸನಾತನರ ಬುಡಕ್ಕೆ ನಡುಕ ಹುಟ್ಟಿಸಿದ ಬುದ್ಧ-ಬಸವಾದಿ ಶರಣರ ಈ ಎರಡು ಚಿಂತನ ಧಾರೆಗಳು ನಾಡಿನಗಲಕ್ಕೂ ಶೋಷಿತರ ಬಾಳಿಗೆ ಬೆಳಕು ನೀಡುವಲ್ಲಿ ಇಂದಿಗೂ ಹೆಣಗಾಡುತ್ತಲೇ ಇವೆ.
ಧಾರ್ಮಿಕ-ಸಾಮಾಜಿಕ ನೆಲೆಯ ಮಹಾನ್ ಸಾಧಕರ ಚಿಂತನೆಗಳನ್ನು ಮಡಿವಂತರು ಕಾಲ ಸಂದರ್ಭದಲ್ಲಿ ಅಡಗಿಸುತ್ತಾ ಬಂದಿರುವ ಅನೇಕ ಉದಾಹಣೆಗಳನ್ನು ನಾವು ಪಟ್ಟಿ ಮಾಡುತ್ತಾ ಹೋದರೆ ಚರಿತ್ರೆ ನಮಗೆ ದಾಖಲೆಯನ್ನು ಒದಗಿಸುತ್ತದೆ. ಹೊಲಗೇರಿಯನ್ನು ಶಿವಾಲಯ ಎಂದು ಕರೆದ ಬಸವಣ್ಣ ಅಸ್ಪೃಶ್ಯರಲ್ಲಿದ್ದ ಕೀಳು ಭಾವನೆಯನ್ನು ದೂರ ಮಾಡಿದ. “ಇವನಾರವ ಇವನಾರವ ಎಂದೆನಿಸದಿರಯ್ಯ ಇವ ನಮ್ಮವ ಎಂದೆನಿಸಯ್ಯ” ಎಂದು ಹೇಳುತ್ತಲೇ ಜಾತಿಯನ್ನು ಮೈಮನದಲ್ಲಿ ತುಂಬಿಕೊಂಡವರಿಗೆ ತನ್ನ ಅಂತಃಕರಣದಿಂದಲೇ ಸಮಾನತೆಯ ಔನ್ನತ್ಯವನ್ನು ಪ್ರತಿಪಾದಿಸಿದ ಬುದ್ಧ, ಬಸವ, ಫುಲೆ, ಅಂಬೇಡ್ಕರ್ ಇವರನ್ನು ನೆನೆಯುವುದೇ ಒಂದು ಭಾಗ್ಯ. ಅದರಲ್ಲೂ ಅವರು ಮಾಡಿದ ಸಾಧನೆಗಳನ್ನು ಮನನ ಮಾಡಿಕೊಳ್ಳುವುದೆಂದರೆ ಅದೊಂದು ಪರಮಾನಂದದ ಕೆಲಸ. ಅಂತಹ ಆದರ್ಶ ಜೀವಿಗಳು ಜನತೆಗೆ, ನಾಡಿಗೆ, ದೇಶಕ್ಕೆ ದೊಡ್ಡ ಮಾದರಿಯಾಗಿದ್ದಾರೆ.

Read More »

ವಸಾಹತುಶಾಹಿ ಕಾಲದ ಸಾಮಾಜಿಕ ಚಳುವಳಿಗೆ ಸತ್ಯಶೋಧಕ ಸಮಾಜದ ಕೊಡುಗೆ

ಎಸ್. ಕೆ. ಹೂಗಾರ

194 to 199

ವಸಾಹತುಶಾಹಿ ಭಾರತದ ಸಾಮಾಜಿಕ ಪೈಪೋಟಿ ಕಾಲದಲ್ಲಿ, ಸತ್ಯಶೋಧಕ ಸಮಾಜವು ಅಸ್ಪೃಶ್ಯತೆ, ಜಾತಿವ್ಯವಸ್ಥೆ, ಮಹಿಳಾ ಹಕ್ಕುಗಳು ಮತ್ತು ಶೋಷಿತ ವರ್ಗದ ಸಬಲೀಕರಣಕ್ಕೆ ಮಹತ್ವಪೂರ್ಣ ಪಾತ್ರ ವಹಿಸಿತು. ಮಹಾತ್ಮ ಜ್ಯೋತಿಬಾ ಫುಲೆ ಸ್ಥಾಪಿಸಿದ ಈ ಸಮಾಜವು, ಸಾಮಾಜಿಕ ಅನ್ಯಾಯಗಳ ವಿರುದ್ಧ ಜಾಗೃತಿ ಮೂಡಿಸುವಲ್ಲಿ ಮುಂಚೂಣಿಯಲ್ಲಿದ್ದು, ಶಿಕ್ಷಣ, ಸಮಾನತೆ ಮತ್ತು ಧಾರ್ಮಿಕ ಸುಧಾರಣೆಯನ್ನು ಪ್ರಚಾರ ಮಾಡಿತು. ಸತ್ಯಶೋಧಕ ಸಮಾಜದ ಚಳುವಳಿ ಕೇವಲ ರಾಜಕೀಯ ಹೋರಾಟವಲ್ಲದೆ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಪರಂಪರೆಯಲ್ಲಿ ಸಹ ಹಂತ ಹಂತವಾಗಿ ಬದಲಾವಣೆಯನ್ನು ತರಲು ಕಾರ್ಯನಿರ್ವಹಿಸಿತು. ಇದರ ಮೂಲಕ ಶೋಷಿತ ಸಮುದಾಯಗಳಿಗೆ ಸ್ವಾಭಿಮಾನ, ಸ್ವಾಯತ್ತತೆ ಮತ್ತು ಸಾಮಾಜಿಕ ಗೌರವ ನೀಡುವ ಅವಕಾಶ ಉಂಟಾಯಿತು.

Read More »