ವಿಜಯಪುರ ಜಿಲ್ಲೆಯ ಸ್ಮಾರಕಗಳ ಸಂರಕ್ಷಣೆ ಮತ್ತು ಸೌಲಭ್ಯ
Main Article Content
Abstract
ದಕ್ಷಿಣ ಭಾರತದ ರಾಣಿ, ಗುಂಬಜ್‌ಗಳ ನಗರ ಎಂದೇ ಪ್ರಸಿದ್ಧಿ ಪಡೆದ ವಿಜಯಪುರವು ಕರ್ನಾಟಕ ಚರಿತ್ರೆಯಲ್ಲಿ ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕವಾಗಿ ಬಹು ಮುಖ್ಯ ಪಾತ್ರವನ್ನು ವಹಿಸಿದೆ. ಜಿಲ್ಲೆಯಲ್ಲಿ ಪ್ರಾಚೀನ ಕಾಲದಿಂದಲೂ ಕೃಷ್ಣ, ಮಲಪ್ರಭಾ, ಘಟಪ್ರಭಾ, ಭೀಮಾ, ಡೋಣಿ ಎಂಬ ಐದು ನದಿಗಳು ಹರಿಯುವುದರಿಂದ ಪಂಚ ನದಿಗಳ ನಾಡು ಎಂದೇ ಪ್ರಸಿದ್ಧವಾಗಿತ್ತು. ಹಾಗಾಗಿ ಈ ಜಿಲ್ಲೆಯಲ್ಲಿ ಕರ್ನಾಟಕದ ಎರಡು ಪ್ರಸಿದ್ಧ ರಾಜಮನೆತನಗಳಾದ ಬಾದಾಮಿ ಚಾಲುಕ್ಯರು ಮತ್ತು ಆದಿಲ್ ಶಾಹಿಗಳು ತಮ್ಮ ರಾಜಧಾನಿ ಕೇಂದ್ರಗಳನ್ನು ಹೊಂದಿ ತಮ್ಮ ಆಡಳಿತ ಅವಧಿಯಲ್ಲಿ ಸಾಕಷ್ಟು ಸ್ಮಾರಕಗಳನ್ನು ಜಿಲ್ಲೆಯಾದ್ಯಂತ ನಿರ್ಮಾಣ ಮಾಡಿದರು. ವಿಜಯಪುರವನ್ನು ರಾಜಧಾನಿ ಕೇಂದ್ರವನ್ನಾಗಿ ಹೊಂದಿದ್ದ ಆದಿಲ್‌ಶಾಹಿಗಳು ಭಾರತೀಯ ವಾಸ್ತುಶಿಲ್ಪ ವೈಭವಕ್ಕೆ ಅಮೂಲ್ಯ ಕಾಣಿಕೆ ನೀಡಿದ್ದಾರೆ. ಕರ್ನಾಟಕದ ಕಲಾ ಪರಂಪರೆಯಲ್ಲಿ ಆದಿಲ್ ಶಾಹಿಗಳ ರಚನೆಗೆ ಗಣ್ಯ ಸ್ಥಾನವಿದೆ. ದಕ್ಷಿಣ ಭಾರತದಲ್ಲಿ ಇಸ್ಲಾಮಿಕ್ ವಾಸ್ತುಶಿಲ್ಪ ಇವರ ಕಾಲದಲ್ಲಿ ಪರಮೋತ್ಕೃಷ್ಟತೆ ಮುಟ್ಟಿತು. ಇವರು ಕಲಾತ್ಮಕ ದೃಷ್ಟಿಯಿಂದ ವಿಜಯಪುರವನ್ನು ಸುಂದರ ಕಟ್ಟಡಗಳಿಂದ ಅಲಂಕರಿಸಿದರು. ಅವರು ತಮ್ಮ ಕಾಲದ ಸಂಪತ್ತನ್ನೆಲ್ಲ ಭವ್ಯ ಕಟ್ಟಡಗಳಿಗೆ ವಿನಿಯೋಗಿಸಿದರು. ಅವರ ಬದುಕು ಕಲೆಗೆ ಮೀಸಲಾಗಿತ್ತು, ಅವರ ಕೀರ್ತಿ ನಿಂತಿರುವುದು ಈ ಭವ್ಯ ಕಟ್ಟಡಗಳ ಮೇಲೆ. ವಿಜಯಪುರಕ್ಕಿಂತ ಹೆಚ್ಚು ಭವ್ಯ ಕಟ್ಟಡಗಳನ್ನು, ಕಲಾ ವೈಭವವನ್ನು ಪಡೆದಿರುವ ನಗರಗಳು ಭಾರತದಲ್ಲಿ ವಿರಳವೆಂದೇ ಹೇಳಬಹುದು. ಆದ್ದರಿಂದಲೇ ವಿಜಯಪುರವನ್ನು ದಕ್ಷಿಣ ಭಾರತದ ರಾಣಿ ಎಂದು ಕರೆಯಲಾಗಿದೆ. ಇಲ್ಲಿನ ಕಟ್ಟಡಗಳು ಮೊಗಲ್ ಕಟ್ಟಡಗಳ ಜೊತೆ ಸ್ಪರ್ಧಿಸಲು ಯೋಗ್ಯವಾಗಿವೆ. ಬಿಜಾಪುರ ಶೈಲಿಯು ಬೀದರ್‌ನ ಬರಿದ್ ಶಾಹಿ ಶೈಲಿಯ ವಿಕಸಿತ ರೂಪವಾಗಿದ್ದು, ದೆಹಲಿ ಸುಲ್ತಾನ ಶೈಲಿಗಿಂತ ಭಿನ್ನವಾಗಿದ್ದು ತನ್ನದೇ ಸ್ವಂತಿಕೆಯನ್ನು ಹೊಂದಿದೆ. ಇಲ್ಲಿನ ಕಟ್ಟಡಗಳು ಹಿಂದೂ - ಮುಸ್ಲಿಂ ಶೈಲಿಯಾದ ಇಂಡೋ- ಸೆರಾಸಾನಿಕ್ ಶೈಲಿಯಲ್ಲಿವೆ. ಡಾ. ಎಂ. ಹೆಚ್. ಕೃಷ್ಣ ಅವರು ಹೇಳಿರುವಂತೆ ದೆಹಲಿ ಮತ್ತು ಆಗ್ರಾ ನಗರಗಳನ್ನು ಬಿಟ್ಟರೆ ಭಾರತೀಯ ಮುಸ್ಲಿಂ ವಾಸ್ತುಶಿಲ್ಪಕ್ಕೆ ಬಿಜಾಪುರವೇ ತವರಾಗಿದೆ. ಬೃಹತ್ ಪ್ರಮಾಣದಲ್ಲಿ ಗುಂಬಜ್‌ಗಳನ್ನು ಕಟ್ಟಿದವರಲ್ಲಿ ಆದಿಲ್ ಶಾಹಿಗಳೇ ಮೊದಲಿಗರು. ಬಿಜಾಪುರದ ಗುಮ್ಮಟಗಳು ಜಗತ್ತಿನಲ್ಲಿಯೇ ಅತ್ಯುತ್ತಮವಾದವುಗಳೆಂದು ಕಲಾ ವಿಮರ್ಶಕರು ಹೊಗಳಿದ್ದಾರೆ.
ಬಿಜಾಪುರ ವಾಸ್ತುಶಿಲ್ಪ ಶೈಲಿಯ ಲಕ್ಷಣಗಳೆಂದರೆ ಕಮಲದಳದ ಮೇಲೇರುವ ಅರ್ಧ ಗೋಳಾಕಾರದ ಗುಮ್ಮಟಗಳು, ಕಟ್ಟಡದ ಮೇಲ್ಭಾಗದಲ್ಲಿ ಮಿನಾರ್‌ಗಳಿಂದ ಅಲಂಕೃತವಾಗಿರುತ್ತದೆ. ಚತುಷ್ಕೇಂದ್ರ ಮಾದರಿಯ ಕಮಾನುಗಳನ್ನು ಒಳಗೊಂಡಿರುತ್ತವೆ. ಈ ಕಟ್ಟಡಗಳ ವಿಶೇಷತೆ ಎಂದರೆ ಕಂಬಗಳು ಇಲ್ಲದಿರುವುದು. ಅದರ ಬದಲಾಗಿ ದಪ್ಪ ಗೋಡೆಗಳೇ ಕಂಬಗಳಂತಿರುತ್ತವೆ. ಗೋಡೆಯ ಮೇಲೆ ಚಾಚು ಅಲಂಕಾರದಿಂದ ಕೂಡಿರುವುದು ಈ ಶೈಲಿಯ ವಿಶೇಷವಾಗಿದೆ.
ವಿಜಯಪುರದ ಆದಿಲ್ ಶಾಹಿಗಳ ಸ್ಮಾರಕಗಳನ್ನು ಅರಮನೆಗಳು, ಮಸೀದಿಗಳು ಮತ್ತು ಗೋರಿಗಳು ಎಂದು ಮೂರು ಭಾಗಗಳಾಗಿ ನೋಡಬಹುದಾಗಿದೆ.
ಅರಮನೆಗಳು - ವಿಜಯಪುರದಲ್ಲಿ 20ಕ್ಕೂ ಹೆಚ್ಚು ಅರಮನೆಗಳಿದ್ದು ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಗಗನ ಮಹಲ್, ಮೆಹತರ್ ಮಹಲ್, ಅಸಾರ್ ಮಹಲ್, ಸಂಗೀತ ಮಹಲ್, ಮೋತಿ ಮಹಲ್, ಆನಂದ ಮಹಲ್, ಸಾತ್ ಮಹಲ್, ಚೀನಿ ಮಹಲ್, ಚಂದ ಚಾವಡಿ, ಜಲ ಮಂದಿರಗಳು ಪ್ರಮುಖವಾದವು.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ನಾಗೇಗೌಡ ‘ಹೆಚ್.’, (2006) ‘ಪ್ರವಾಸಿ ಕಂಡ ಇಂಡಿಯಾ’, ಐಬಿಎಚ್ ಪ್ರಕಾಶನ, ಬೆಂಗಳೂರು.
ನಾಗಪತಿ ಕೆ. ಎಸ್., (2012) ‘ಪ್ರವಾಸೋದ್ಯಮ ಅಭಿವೃದ್ಧಿ ಒಂದು ಹೊಸ ಆಯಾಮ’, ಅನನ್ಯ ಪ್ರಕಾಶನ, ಚಾಮರಾಜಪುರ, ಮೈಸೂರು.
ಕೊಲ್ಹಾರ ಕುಲಕರ್ಣಿ ಕೃಷ್ಣ., (2002) ‘ಬಿಜಾಪುರ ಆದಿಲ್ ಷಾಹಿ’, ಸಿಕ್ಯಾಬ್ ಆದಿಲ್ ಷಾಹಿ ಅಧ್ಯಯನ ಸಂಸ್ಥೆ, ವಿಜಾಪುರ.
ಕಡಕೋಳ ಹೆಚ್. ಎಂ., (2010) ‘ಬಿಜಾಪುರ ಜಿಲ್ಲಾ ಸಾಂಸ್ಕೃತಿಕ ಪರಂಪರೆ’, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ವಿಜಾಪುರ.
ಚವ್ಹಾಣ ಎನ್., (2004), ‘ಆದಿಲ್‌ಷಾಹಿಗಳ ಕಾಲದ ಪ್ರಮುಖ ಸ್ಮಾರಕಗಳು’, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ಆರ್. ಮುನಿಸ್ವಾಮಿ., (2019) ‘ವಿಜಾಪುರ ಜಿಲ್ಲಾ ಗ್ಯಾಸೆಟಿಯರ್’, ಕರ್ನಾಟಕ ರಾಜ್ಯ ಗ್ಯಾಸೆಟಿಯರ್ ಇಲಾಖೆ, ಬೆಂಗಳೂರು.
ಅಶ್ವತಪ್ಪ ಕೆ.ಎನ್., ‘ಭಾರತದಲ್ಲಿ ಪ್ರವಾಸೋದ್ಯಮ ಇತಿಹಾಸ’ :, ಎಸ್. ಬಿ. ಎಸ್. ಪಬ್ಲಿಕೇಶನ್, ಬೆಂಗಳೂರು.