Table of Contents
Research Articles
ಡಾ. ಸಿದ್ಧಲಿಂಗಯ್ಯನವರ ನಾಟಕಗಳಲ್ಲಿ ಪರ್ಯಾಯ ಸಾಂಸ್ಕೃತಿಕ ಚಿಂತನೆ
01 to 12
ದಲಿತ ಕವಿ ಡಾ. ಸಿದ್ಧಲಿಂಗಯ್ಯನವರ ‘ಏಕಲವ್ಯ’, ‘ಪಂಚಮ’ ಹಾಗೂ ‘ನೆಲಸಮ’ ನಾಟಕಗಳು ಶೋಷಿತ ಸಮುದಾಯಗಳ ಪರ್ಯಾಯ ಸಾಂಸ್ಕೃತಿಕ ಹಾಗೂ ತಾತ್ವಿಕ ನಿರೂಪಣೆಯಾಗಿ ಮೂಡಿಬಂದಿವೆ. ಪುರಾಣದ ಕಥೆಯನ್ನು ಮರುಸೃಷ್ಟಿಸಿ ಶೂದ್ರ ಪ್ರಜ್ಞೆಯನ್ನು ಜಾಗೃತಗೊಳಿಸುವ ‘ಏಕಲವ್ಯ’, ಸ್ವಾತಂತ್ರ್ಯೋತ್ತರ ಭಾರತದಲ್ಲಿ ವಿದ್ಯಾವಂತ ದಲಿತರು ಎದುರಿಸುತ್ತಿರುವ ನೌಕರಶಾಹಿಯ ಜಾತಿ ತಾರತಮ್ಯವನ್ನು ವಿಡಂಬಿಸುವ ‘ಪಂಚಮ’ ಮತ್ತು ನಗರೀಕರಣದ ಸೌಂದರ್ಯೀಕರಣದ ಹೆಸರಿನಲ್ಲಿ ನಿರ್ಗತಿಕರನ್ನು ಒಕ್ಕಲೆಬ್ಬಿಸುವ ಪ್ರಭುತ್ವದ ಕ್ರೌರ್ಯವನ್ನು ಪ್ರಶ್ನಿಸುವ ‘ನೆಲಸಮ’ ನಾಟಕಗಳು ಶೋಷಣೆಯ ಮೂಲವನ್ನು ಶೋಧಿಸುತ್ತವೆ. ಧಾರ್ಮಿಕ ಮೌಢ್ಯ, ಹುಸಿ ಮೌಲ್ಯಗಳು ಹಾಗೂ ಸಾಮಾಜಿಕ ಅಸಮಾನತೆಗಳ ವಿರುದ್ಧ ಬಂಡಾಯವೆದ್ದು, ಸಮಸಮಾಜದ ನಿರ್ಮಾಣಕ್ಕಾಗಿ ನಿರಂತರ ಹೋರಾಟವೇ ಅನಿವಾರ್ಯ ಎಂಬ ದಲಿತ ಸ್ವಾಭಿಮಾನದ ಎಚ್ಚರವನ್ನು ಈ ಕೃತಿಗಳು ಹೇಗೆ ಕಟ್ಟಿಕೊಟ್ಟಿವೆ ಎಂಬುದನ್ನು ಇಲ್ಲಿ ವಸ್ತುನಿಷ್ಠವಾಗಿ ವಿಶ್ಲೇಷಿಸಲಾಗಿದೆ.
ಸೇತುರಾಮ್ ಅವರ ‘ಕಾತ್ಯಾಯಿನಿ’ ಕಥೆಯಲ್ಲಿ ಸ್ತ್ರೀ ಅಸ್ಮಿತೆ ಮತ್ತು ಪಿತೃಪ್ರಭುತ್ವ ದಬ್ಬಾಳಿಕೆ: ಒಂದು ಸ್ತ್ರೀವಾದಿ ಸಾಹಿತ್ಯ ವಿಶ್ಲೇಷಣೆ
13 to 20
ಈ ಲೇಖನವು ಕನ್ನಡದ ಪ್ರಖ್ಯಾತ ಸಾಹಿತಿ, ನಿರ್ದೇಶಕ, ಮತ್ತು ರಂಗಕರ್ಮಿ ಸೇತುರಾಮ್ ಅವರ ‘ನಾವಲ್ಲ’ ಕಥಾ ಸಂಕಲನದ ಪ್ರಮುಖ ನೀಳ್ಗತೆ ‘ಕಾತ್ಯಾಯಿನಿ’ಯ ಸ್ತ್ರೀವಾದಿ ಸಾಹಿತ್ಯ ವಿಶ್ಲೇಷಣೆಯನ್ನು ಒಳಗೊಂಡಿದೆ. ಮಾಸ್ತಿ ಕಥಾ ಪುರಸ್ಕಾರ ವಿಜೇತ ಈ ಕಥಾ ಸಂಕಲನದ ಕೇಂದ್ರ ಕಥೆ ‘ಕಾತ್ಯಾಯಿನಿ’ ಒಂದು ಬಡ ಬ್ರಾಹ್ಮಣ ಕುಟುಂಬದ ಹೆಣ್ಣು ಮಗಳ ಬದುಕಿನ ಕಥೆಯಾಗಿದ್ದು, ಬಡತನ, ನಿರ್ಲಕ್ಷ್ಯ, ಪಿತೃಪ್ರಭುತ್ವ ಮತ್ತು ಮೌನ ಸ್ಥಿತಿಸ್ಥಾಪಕತ್ವಗಳ ಸಂಕೀರ್ಣ ಚಿತ್ರಣವನ್ನು ಒದಗಿಸುತ್ತದೆ. ಈ ಅಧ್ಯಯನವು ಸ್ತ್ರೀ ಸಾಹಿತ್ಯ ವಿಮರ್ಶೆ (Gynocriticism), ಸ್ತ್ರೀವಾದಿ ನಿರೂಪಣಾ ಸಿದ್ದಾಂತ ಮತ್ತು ಉತ್ತರ ವಸಾಹತುಶಾಹಿ ಸ್ತ್ರೀವಾದ ಎಂಬ ಮೂರು ಸಿದ್ಧಾಂತಿಕ ಚೌಕಟ್ಟುಗಳನ್ನು ಬಳಸಿ ಕಾತ್ಯಾಯಿನಿ ಪಾತ್ರದ ಅಸ್ಮಿತೆ, ಏಜೆನ್ಸಿ ಮತ್ತು ನೈತಿಕ ದೃಢತೆಯನ್ನು ವಿಶ್ಲೇಷಿಸುತ್ತದೆ. ಕಾತ್ಯಾಯಿನಿಯ ಮೌನವು ದೌರ್ಬಲ್ಯವಲ್ಲ ಬದಲಿಗೆ ಒಂದು ವಿಧದ ಪ್ರತಿರೋಧ ಎಂದು ಈ ಲೇಖನ ವಾದಿಸುತ್ತದೆ. ಕನ್ನಡ ಸ್ತ್ರೀವಾದಿ ಸಾಹಿತ್ಯ ಪರಂಪರೆಯಲ್ಲಿ ಈ ಕಥೆಯ ಮಹತ್ವವನ್ನು ಗುರುತಿಸುವ ಉದ್ದೇಶ ಈ ಅಧ್ಯಯನದ್ದು.
ಭಾರತದ ಅಸಂಘಟಿತ ವಲಯದ ಮಹಿಳಾ ಕಾರ್ಮಿಕರ ಸ್ಥಿತಿಗತಿ, ಸವಾಲುಗಳು ಮತ್ತು ಕಾಯಕಲ್ಪ
21 to 28
ಭಾರತದ ಆರ್ಥಿಕ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದ್ದರೂ, ಅಸಂಘಟಿತ ವಲಯದಲ್ಲಿ ದುಡಿಯುವ ಮಹಿಳಾ ಕಾರ್ಮಿಕರ ಸ್ಥಿತಿಗತಿಗಳು ಇಂದಿಗೂ ಶೋಚನೀಯವಾಗಿವೆ. ವೇತನರಹಿತ ಗೃಹಕೃತ್ಯಗಳ ಜೊತೆಗೆ, ಕಡಿಮೆ ವೇತನ, ಅಸುರಕ್ಷಿತ ಹಾಗೂ ಅನಾರೋಗ್ಯಕರ ಕೆಲಸದ ವಾತಾವರಣ, ಸಾಮಾಜಿಕ ಭದ್ರತೆಯ ಕೊರತೆ ಮತ್ತು ಅಧಿಕ ಕೆಲಸದ ಅವಧಿಯಂತಹ ಅನೇಕ ಗಂಭೀರ ಸವಾಲುಗಳನ್ನು ಇವರು ಪ್ರತಿದಿನ ಎದುರಿಸುತ್ತಿದ್ದಾರೆ. ಸೂಕ್ತ ಕೌಶಲ್ಯ ತರಬೇತಿಯ ಕೊರತೆ ಹಾಗೂ ವಿಪರೀತ ಮಾನಸಿಕ ಒತ್ತಡಗಳು ಇವರ ಆರ್ಥಿಕ ಸಬಲೀಕರಣಕ್ಕೆ ಪ್ರಮುಖ ತೊಡಕಾಗಿವೆ. ಈ ಸಮಸ್ಯೆಗಳ ನಿವಾರಣೆಗಾಗಿ ಸರ್ಕಾರ ಮತ್ತು ಉದ್ಯಮದ ಮಾಲೀಕರು ಮಹಿಳಾ ಕಾರ್ಮಿಕರಿಗೆ ಕಡ್ಡಾಯ ಸಾಮಾಜಿಕ ಭದ್ರತೆ, ವಿಮಾ ಸೌಲಭ್ಯ, ಮಾತೃತ್ವ ರಜೆ ಮತ್ತು ಭದ್ರತಾ ವಾತಾವರಣವನ್ನು ನಿರ್ಮಿಸಿಕೊಡುವ ಅಗತ್ಯವಿದೆ. ಕಾರ್ಮಿಕ ಕಾನೂನುಗಳ ಕಟ್ಟುನಿಟ್ಟಾದ ಹಾಗೂ ಪರಿಣಾಮಕಾರಿ ಜಾರಿಯಿಂದ ಮಾತ್ರ ಈ ವಲಯದ ಮಹಿಳೆಯರ ನೈಜ ಕಾಯಕಲ್ಪ ಸಾಧ್ಯ.
ಸಮ ಸಮಾಜದ ನೇತಾರ ಭಕ್ತಿ ಸಾಹಿತ್ಯದ ಅನನ್ಯ ಚೈತನ್ಯ: ದ್ವಿಭಾಷಿ ತತ್ವಪದಕಾರ ಕೈವಾರ ತಾತಯ್ಯ
29 to 34
ನಿರ್ಗುಣ ಭಕ್ತಿ ಮತ್ತು ತತ್ವಪದ ಪರಂಪರೆಯ ಮಹತ್ವದ ಕೊಂಡಿಯಾಗಿರುವ ಕೈವಾರ ತಾತಯ್ಯನವರ (ಯೋಗಿ ನಾರೇಯಣಪ್ಪ) ಜೀವನ ಮತ್ತು ಸಾಹಿತ್ಯಿಕ ಕೊಡುಗೆಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ತತ್ವಪದಗಳನ್ನು ರಚಿಸಿದ ಇವರು, ಕೇವಲ ಭಕ್ತರಾಗಿರದೇ ಸಮಾಜ ಸುಧಾರಕರಾಗಿ, ಕಾಲಜ್ಞಾನಿಯಾಗಿ ಮತ್ತು ಜಾತಿ ವಿರೋಧಿಯಾಗಿ ಮೂಡಿಬಂದಿದ್ದಾರೆ. ತಮ್ಮ ‘ಕಾಲಜ್ಞಾನ’, ‘ನಾದ ಬ್ರಹ್ಮಾನಂದ ನಾರೇಯಣಕವಿ ಶತಕ’ ಮುಂತಾದ ಕೃತಿಗಳ ಮೂಲಕ ಮಾನವ ಕುಲ ಒಂದೇ ಎಂಬ ವಿಶ್ವಬಂಧುತ್ವದ ಸಂದೇಶವನ್ನು ಸಾರಿದ್ದಾರೆ. ಹುಟ್ಟಿನಿಂದ ಮೇಲು-ಕೀಳು ಎಂಬ ಮೌಢ್ಯವನ್ನು ಖಂಡಿಸಿ, ಜಾತಿ ಪದ್ಧತಿಯನ್ನು ಕಟುವಾಗಿ ಟೀಕಿಸಿದ್ದಾರೆ. ಮನುಷ್ಯನು ಲೌಕಿಕ ಭೋಗಗಳನ್ನು ತ್ಯಜಿಸಿ, ಪರೋಪಕಾರಿಯಾಗಿ ಬಾಳುವ ಮೂಲಕ ತನ್ನಲ್ಲಿ ಅಡಗಿರುವ ತತ್ವಜ್ಞಾನವೆಂಬ ‘ಕೋಟಿ ಧನ’ವನ್ನು ಅರಿಯಬೇಕು ಎಂಬ ಅವರ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಆಶಯಗಳನ್ನು ಈ ಬರಹವು ಎತ್ತಿ ತೋರಿಸುತ್ತದೆ.
ಯುರೋಪ್ ಪ್ರವಾಸ ಕಥನಗಳು ನಡೆದು ಬಂದ ದಾರಿ
35 to 40
ಆಲ್ಬರ್ಟ್ ಕಾಮು ಪ್ರವಾಸವನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಅರ್ಥೈಸಿರುವುದು ಪ್ರವಾಸದ ಮಹತ್ವವನ್ನು, ಸಾಹಿತ್ಯದಲ್ಲಿ ಅದರ ಸ್ಥಾನವನ್ನು ಸೂಚಿಸುತ್ತದೆ. ‘ಪ್ರವಾಸ’ ಪದಕ್ಕೆ ಆಂಗ್ಲಭಾಷೆಯಲ್ಲಿ ‘ಟ್ರಾವೆಲ್’ ಎಂಬ ಪದ ಸಂವಾದಿಯಾಗಿದೆ. ಟ್ರಾವೆಲ್ ಎಂಬ ಪದಕ್ಕೆ ‘ಆಕ್ಸ್‌ಫರ್ಡ್ ಲರ್ನರ್’ ಒಂದು ಸ್ಥಳದಿಂದ ಮತ್ತೊಂದು ದೂರದ ಸ್ಥಳಕ್ಕೆ ಅಥವಾ ವಿದೇಶಕ್ಕೆ ಪ್ರಯಾಣ ಮಾಡುವುದೇ ಪ್ರವಾಸ’ ಎಂಬ ವಿವರಣೆ ನೀಡಲಾಗಿದೆ. ‘ಟ್ರಾವೆಲ್’ ಪದದ ನಿಷ್ಪತ್ತಿಯನ್ನು ಗಮನಿಸಿದಾಗ ಅದು ಫ್ರೆಂಚ್ ಮೂಲದ್ದು ಎಂದು ತಿಳಿದುಬರುತ್ತದೆ. ಯುರೋಪ್ ಖಂಡದಿಂದಲೇ ಪ್ರವಾಸದ ಪರಿಕಲ್ಪನೆ ಸ್ಪಷ್ಟ ರೂಪವನ್ನು ತಾಳಿದೆ ಎನ್ನಬಹುದು.
ಪ್ರವಾಸವು ಭೌತಿಕ ಸ್ವರೂಪವನ್ನು ಹೊಂದಿದ್ದರೂ ಅದೊಂದು ಮಾನಸಿಕ ಪ್ರಕ್ರಿಯೆ. ಪ್ರವಾಸದಲ್ಲಿ ದೊರಕಿದ ನೈಜ ಅನುಭವಗಳು ಮನಸ್ಸಿನ ಮೇಲೆ ಪರಿಣಾಮ ಬೀರಿ ಹೊಸ ತಿಳುವಳಿಕೆಯನ್ನು ಕೊಡುತ್ತದೆ. ಶಿಕ್ಷಣದ ಒಂದು ಭಾಗವಾಗಿ ಹಲವು ಲಾಭಗಳು ದೊರೆಯುತ್ತವೆ. ಆಂಗ್ಲಕವಿ ವಿಲಿಯಂ ಷೇಕ್ಸ್‌ಪಿಯರ್ ಹೇಳುವಂತೆ “Home-keeping youths have ever homely wits”(ವಿ.ಕೃ. ಗೋಕಾಕ್.. ಸಮುದ್ರದಾಚೆಯಿಂದ., ಪು-30) ಎಂಬ ಮಾತು ಮಗುವಿನ ಬೌದ್ಧಿಕ ಮಟ್ಟದ ವೈಶಾಲತೆಗೆ ಪ್ರವಾಸ ಹೇಗೆ ಪ್ರೇರಕ ಮತ್ತು ಪೋಷಕ ಎಂಬುದನ್ನು ತಿಳಿಸುತ್ತದೆ. ದ.ರಾ. ಬೇಂದ್ರೆಯವರು “ವಿಭೂತಿಯಿರದ ಸ್ಥಳವು ಯಾತ್ರೆಗೆ ಯೋಗ್ಯವಲ್ಲ. ದೋಷ ತಗ್ಗಿಸಿ, ಗುಣ ಹಿಗ್ಗಿಸದ ಯಾತ್ರೆ ಯಾತ್ರೆಯಲ್ಲ”(ಪ್ರವಾಸ ಸಾಹಿತ್ಯ., ಸಾ. ಶಿ ಮರುಳಯ್ಯ, ಕನ್ನಡನುಡಿ ಬೆಳ್ಳಿ ಸಂಚಿಕೆ., ಕ. ಸಾ. ಪ., 1963., ಪು-75)ಎಂದಿದ್ದಾರೆ. ಬೇಂದ್ರೆ ಅವರು ಹೇಳುವಂತೆ ಪ್ರವಾಸವು ದೋಷವನ್ನು ತಗ್ಗಿಸಿ ಗುಣವನ್ನು ಹಿಗ್ಗಿಸುವ ಕಾರ್ಯವನ್ನು ಮಾಡುತ್ತದೆ.
ಕಲಾತ್ಮಕ ಅಭಿವ್ಯಕ್ತಿಗೆ ಬೇಕು ಭಾರತೀಯ ಸಂಗೀತ ಮತ್ತು ನೃತ್ಯ
41 to 47
ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಕಲೆಗಳು ಕೇವಲ ಮನರಂಜನೆಯ ಸಾಧನಗಳಾಗಿರದೆ, ಮಾನವನ ಬೌದ್ಧಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ವಿಕಾಸಕ್ಕೆ ಕಾರಣವಾದ ಅತ್ಯಂತ ಪ್ರಾಚೀನ ಸಾಂಸ್ಕೃತಿಕ ಪರಂಪರೆಯಾಗಿವೆ. ವೇದಕಾಲದಿಂದ ಆರಂಭಗೊಂಡು, ರಾಮಾಯಣ, ಮಹಾಭಾರತ ಹಾಗೂ ಮೊಘಲರ ಕಾಲಘಟ್ಟಗಳಲ್ಲಿ ವಿಕಸನಗೊಂಡ ಈ ಕಲೆಗಳು, ಗಾಯನ, ವಾದನ ಮತ್ತು ನರ್ತನಗಳೆಂಬ ತ್ರಿವೇಣಿ ಸಂಗಮವನ್ನು ಪ್ರತಿನಿಧಿಸುತ್ತವೆ. ಭರತಮುನಿಯ ‘ನಾಟ್ಯಶಾಸ್ತ್ರ’ದಂತಹ ಮೌಲಿಕ ಕೃತಿಗಳ ತಳಹದಿಯ ಮೇಲೆ ನಿಂತಿರುವ ಇವು ದೈವೀ ಸಾಕ್ಷಾತ್ಕಾರದ ಮಾರ್ಗಗಳೆಂದೇ ಪೂಜಿಸಲ್ಪಡುತ್ತವೆ. ಕಾಲಾನಂತರದಲ್ಲಿ ಅನೇಕ ಬದಲಾವಣೆಗಳಿಗೆ ತೆರೆದುಕೊಂಡರೂ, ಇವು ತಮ್ಮ ಮೂಲ ಸಂಪ್ರದಾಯವನ್ನು ಉಳಿಸಿಕೊಂಡಿವೆ. ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಸಾಂಸ್ಥಿಕ ಬೆಂಬಲದೊಂದಿಗೆ ಜಾಗತಿಕ ಮಟ್ಟದಲ್ಲಿ ಅಪಾರ ಮನ್ನಣೆ ಪಡೆದಿರುವ ಈ ಕಲಾಪ್ರಕಾರಗಳು, ತಮ್ಮ ಜೀವಾಳಕ್ಕೆ ಚ್ಯುತಿ ಬಾರದಂತೆ ಸಮಕಾಲೀನ ಪ್ರಯೋಗಗಳಿಗೂ ಒಗ್ಗಿಕೊಂಡಿವೆ. ಭವಿಷ್ಯದ ಪೀಳಿಗೆಗೆ ಸ್ಫೂರ್ತಿಯಾಗಿರುವ ಸಂಗೀತ ಮತ್ತು ನೃತ್ಯಗಳು ಕಲಾತ್ಮಕ ಅಭಿವ್ಯಕ್ತಿಯ ಪ್ರಬಲ ಶಕ್ತಿಯಾಗಿ ಭಾರತದ ಭವ್ಯ ಪರಂಪರೆಯನ್ನು ಇಂದಿಗೂ ಜಗತ್ತಿಗೆ ಸಾರುತ್ತಿವೆ.
ಕನ್ನಡ ಶಾಸನಗಳಲ್ಲಿ ಸಾಹಿತ್ಯಾಂಶ
48 to 58
ಶಾಸನಗಳು ರಾಜರು, ರಾಣಿಯರಲ್ಲದೆ ಇತರೆ ಅಧಿಕಾರಿಗಳು ತಮ್ಮ ಆಜ್ಞೆಗಳು, ದಾನಗಳನ್ನು ಪ್ರಜೆಗಳ ಗಮನಕ್ಕೆ ತರಲು ತಾಳೆಗರಿ, ಮರ, ಕಾಗದ, ಲೋಹಗಳು ಮತ್ತು ಶಿಲೆಗಳ ಮೇಲೆ ಲಿಖಿತ ರೂಪದಲ್ಲಿ ಬರೆಯಿಸಿ ಬಹುಕಾಲ ಉಳಿಯುವಂತೆ ಪ್ರಕಟಿಸಲಾಗುತ್ತಿದ್ದ ದಾಖಲೆ. ಕರ್ನಾಟಕದಲ್ಲಿ ಕಲ್ಲಿನ ಮೇಲೆ, ಸ್ತಂಭಗಳ ಮೇಲೆ ದೇವಾಲಯಗಳ ಗೋಡೆಗಳ ಮೇಲೆ, ವಿಗ್ರಹದ ಪೀಠಗಳ ಮೇಲೆ, ತಾಮ್ರಪಟಗಳ ಮೇಲೆ, ಪಾತ್ರೆಗಳಮೇಲೆ ಮಡಿಕೆಗಳ ಮೇಲೆ ಶಾಸನಗಳು ದೊರಕಿವೆ, ಇವುಗಳು ಇಂದು ರಾಜಮನೆತನಗಳ ಚರಿತ್ರೆಯ ವಿವರಗಳನ್ನು ನೀಡುವುದಲ್ಲದೆ ವಿವಿಧ ಭಾಷೆಗಳ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ನೀಡುತ್ತವೆ. ಕನ್ನಡ ಶಾಸನಗಳಲ್ಲಿ ಹುದುಗಿರುವ ಸಾಹಿತ್ಯ, ಸಂಸ್ಕೃತಿ, ಸಾಮಾಜಿಕ, ಆರ್ಥಿಕ, ರಾಜಕೀಯ ಅಂಶಗಳನ್ನು ಅಧ್ಯಯನ ಮಾಡುತ್ತಿರುವುದು ವಿವಿಧ ಅಧ್ಯಯನ ಶಿಸ್ತುಗಳಲ್ಲಿ ಹೆಚ್ಚು ಆಸಕ್ತಿಯ ವಿಷಯವಾಗಿದೆ. ಆ ನಿಟ್ಟಿನಲ್ಲಿ ಈ ಸಂಶೋಧನಾ ಪ್ರಬಂಧವು ಶಾಸನದ ಅರ್ಥ, ಅವುಗಳನ್ನು ನೆಡುವ ಉದ್ದೇಶ, ವಿವಿಧ ಪ್ರಾಚೀನ ಗ್ರಂಥಗಳಲ್ಲಿ ಅದರ ವ್ಯಾಖ್ಯಾನ, ಶಾಸನಗಳ ಆರಂಭ ಮತ್ತು ಅವಶ್ಯಕತೆ, ಶಾಸನಗಳಲ್ಲಿ ಕವಿಗಳು ಮತ್ತು ವಿದ್ವಾಂಸರು ನಿರೂಪಿಸಿರುವ ಲಿಪಿ, ಭಾಷೆ, ವಾಕ್ಯ ರಚನೆ, ವರ್ಣನೆ, ಪಂಪ, ರನ್ನ, ಜನ್ನ, ಮೊದಲಾದ ಉದ್ದಾಮ ಕವಿಗಳಲ್ಲಿ ಕಂಡುಬರುವ ಪ್ರೌಢವಾದ ಶೈಲಿ ಉಪಮೇ, ರೂಪಕ, ಉತ್ಪ್ರೇಕ್ಷೆ, ಶ್ಲೇಷ ಮುಂತಾದ ಅಲಂಕಾರಗಳಿಂದ ಕೂಡಿದೆ. ಸುಂದರವಾದ ವರ್ಣನೆ ಭವ್ಯವಾದ ಕಲ್ಪನಾ ವಿನ್ಯಾಸ ಹೃದಯವಾದ ಭಾವಸೌಂದರ್ಯ ಮುಂತಾದವುಗಳಿಂದ ತುಂಬಿವೆ. ಸಾಮಾನ್ಯವಾಗಿ ಪ್ರತಿಯೊಂದು ಶಾಸನದಲ್ಲಿ ವೀರರ ಪ್ರತಾಪ, ಸ್ಥಾವಾಚಾರ್ಯರ ಪ್ರಭಾವ, ದೇವಾಲಯಗಳ ಘನತೆ, ದತ್ತಿಗಳ ವಿವರ, ರಾಜರ ವಂಶಗಳ ವಿವರ ಇತ್ಯಾದಿ ವಿಷಯ ವರ್ಣನೆಗಳಿಂದ ಕೂಡಿದ್ದರೂ ಒಂದೊಂದರಲ್ಲಿಯೂ ಒಂದಿಲ್ಲೊಂದು ದೃಷ್ಟಿಯಿಂದ ಸಾಹಿತ್ಯಾಂಶವಿರುವುದನ್ನು ಈ ಪ್ರಬಂಧವು ಓದುಗರ ಗಮನ ಸೆಳೆಯುತ್ತದೆ.
ನುಡಿಗಳ ಅಳಿವು-ಕೆಲವು ತಾತ್ತ್ವಿಕ ವಿಚಾರಗಳು
59 to 69
ಕಳೆದೆರಡು ವರ್ಷಗಳ ಹಿಂದಿನಿಂದಲೂ ಭಾಷೆಯ ಕುರಿತಾಗಿ ಕೆಲ ವಿಚಾರಗಳು ಪ್ರಶ್ನೆಯ ರೂಪದಲ್ಲಿ ಕಂಡುಬಂದದ್ದರಿಂದಲೂ ಮತ್ತು ಇದಕ್ಕೆ ಉತ್ತರವನ್ನು ಕಂಡುಕೊಳ್ಳುವ ನೆಪದಲ್ಲಿ ನಡೆಸಿದ ಚಿಂತನೆಯಾಗಿಯೂ ಇಲ್ಲಿನ ಕೆಲವು ಟಿಪ್ಪಣಿ ರೂಪದ ಬರೆವಣಿಗೆಯು ಬಂದಿದೆ. ಇದು ಈಗಾಗಲೆ ಪ್ರಸ್ತುತ ಲೇಖಕನಿಗೆ ಅಭಿಜಾತ ಸಾಹಿತ್ಯ ಪರಂಪರೆಯನ್ನು ಒಳಗೊಂಡ ಕನ್ನಡದಂತಹ ಪುಟ್ಟ ಭಾಷೆಯೊಂದರಲ್ಲಿನ ಪಾಠ-ಪಠ್ಯಗಳ ಓದುಗಳಲ್ಲಿ ಅರಿವಿಗೆ ಬಂದ ಸಂಗತಿ. ಹಾಗಾಗಿ ದಿನನಿತ್ಯದ ಸಂವಹನ-ಸಂಪರ್ಕದಲ್ಲಿ ಈ ಭಾಷೆಯೊಂದಿಗೆ ವ್ಯವಹರಿಸುವಲ್ಲಿ ಮತ್ತು ಅದರ ಪರಿಣಾಮವಾಗಿ ಭಾಷೆಯ ಬಗೆಗಿನ ಚಿಂತನೆಯು ಇಲ್ಲಿ ಕಂಡುಬಂದಿರುವುದು. ಹಾಗೆ ಮಂಡಿಸಿರುವ ಇಲ್ಲಿಯ ಚಿಂತನೆಯ ಒಳಹಂದರವನ್ನು ಪ್ರಸ್ತುತ ಬರಹವು ಸಾದರಪಡಿಸುತ್ತದೆಂಬ ಬಲವಾದ ನಂಬಿಕೆಯು ಇಲ್ಲಿಯದು. ಹಾಗಾಗಿ ಇಲ್ಲಿನ ಚರ್ಚೆಯ ಹಿಂಬದಿಯಲ್ಲಿ ಇವು ಕಾಣಿಸಿಕೊಂಡಿವೆ. ಜೊತೆಗೆ ಭಾಷೆಯನ್ನು ಕುರಿತಂತೆ ಇಲ್ಲಿನ ತಾತ್ತ್ವಿಕತೆಯು ಅದಕ್ಕೆ ಅನ್ವಯವಾಗುವುದು ಮಾತ್ರವಲ್ಲದೆ ಹಾಗೆ ಮಾನವ ಜಗತ್ತಿನಲ್ಲಿರುವ ಇನ್ನಿತರ ಹಲವು ಪುಟ್ಟ ಭಾಷೆಗಳನ್ನೂ ಗಮನದಲ್ಲಿರಿಸಿಕೊಂಡು ಇಲ್ಲಿನ ತಾತ್ತ್ವಿಕತೆಯನ್ನು ರೂಪಣೆಗೊಳಿಸಲಾಗಿದೆ. ಅದರಂತೆ ಭಾಷೆಗಳ ಅಳಿವಿನ ಬಗೆಗೆ ಇರುವ ತಿಳಿವಳಿಕೆಯನ್ನು ಕುರಿತ ಚಿಂತನೆಯು ಇಲ್ಲಿರುವುದು. ಹೀಗಾಗಿ ನುಡಿಗಳ ಅಳಿವಿನ ಬಗೆಗೆ ಇರುವ ಸಾಮಾನ್ಯ ತಿಳಿವಿನೊಂದಿಗೆ ಮಂಡಿಸಲಾಗಿರುವ ಇಲ್ಲಿನ ಕೆಲ ತಾತ್ತ್ವಿಕ ವಿಚಾರಗಳನ್ನು ಈ ಮುಂದಿನ ಚರ್ಚೆಯಲ್ಲಿ ನೋಡಬಹುದು.
ಸಿದ್ದಯ್ಯ ಪುರಾಣಿಕರ ಕಾವ್ಯಗಳಲ್ಲಿ ನಾಡು ನುಡಿಯ ಚಿಂತನೆ
70 to 79
ಆಧುನಿಕ ಕನ್ನಡ ಕಾವ್ಯ ಪರಂಪರೆಯಲ್ಲಿ ಸಿದ್ದಯ್ಯ ಪುರಾಣಿಕರು ನಾಡು-ನುಡಿಯ ಬಗ್ಗೆ ಅಪಾರ ಪ್ರೇಮವನ್ನು ಅಭಿವ್ಯಕ್ತಿಸಿದ ಪ್ರಮುಖ ಕವಿ. ಕನ್ನಡಿಗರಲ್ಲಿ ಬೇರೂರಿರುವ ಪರಭಾಷಾ ವ್ಯಾಮೋಹದಿಂದ ಕಣ್ಮರೆಯಾಗುತ್ತಿರುವ ತಾಯ್ನುಡಿಯ ರಕ್ಷಣೆಯ ಬಗ್ಗೆ ಇವರ ಕಾವ್ಯಗಳು ತೀವ್ರ ಕಳವಳವನ್ನು ವ್ಯಕ್ತಪಡಿಸುತ್ತವೆ. ‘ಹೊತ್ತಿತೋ ಹೊತ್ತಿತು ಕನ್ನಡದ ದೀಪ’, ‘ಕರುನಾಡು ನಿನ್ನದು’ ಮುಂತಾದ ಕವಿತೆಗಳ ಮೂಲಕ ಪುರಾಣಿಕರು ಕನ್ನಡ ನಾಡಿನ ಪ್ರಾಕೃತಿಕ ಸೌಂದರ್ಯ, ಬಸವಣ್ಣ, ವಿದ್ಯಾರಣ್ಯರಂತಹ ಮಹನೀಯರ ಆದರ್ಶಗಳು ಹಾಗೂ ಸಾಂಸ್ಕೃತಿಕ ಹಿರಿಮೆಯನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ. ಕನ್ನಡಿಗರ ಆಲಸ್ಯ, ಅಂತಃಕಲಹಗಳನ್ನು ಬಿಟ್ಟು, ಭಾಷೆಯನ್ನು ಉದ್ಯೋಗದ ಭಾಷೆಯನ್ನಾಗಿ ಬೆಳೆಸಬೇಕೆಂಬುದು ಅವರ ಆಶಯವಾಗಿದೆ. ಒಟ್ಟಾರೆಯಾಗಿ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ ಮತ್ತು ರಾಷ್ಟ್ರೀಯ ಪ್ರಜ್ಞೆಯನ್ನು ಮೈಗೂಡಿಸಿಕೊಂಡಿರುವ ಪುರಾಣಿಕರ ಕಾವ್ಯಗಳು, ಕನ್ನಡಿಗರಲ್ಲಿ ಒಗ್ಗಟ್ಟು ಹಾಗೂ ಸ್ವಾಭಿಮಾನವನ್ನು ಜಾಗೃತಗೊಳಿಸುವ ವಿಶಿಷ್ಟ ಬಗೆಯನ್ನು ಇಲ್ಲಿ ವಿವರವಾಗಿ ವಿಶ್ಲೇಷಿಸಲಾಗಿದೆ.
ಅವಿಭಜಿತ ಕೋಲಾರ ಜಿಲ್ಲೆಯ ಮೌಖಿಕ ಸಾಹಿತ್ಯ ಪರಂಪರೆಯಲ್ಲಿ ಬೇಸಾಯ ಮತ್ತು ದ್ಯಾವರ ಸಂಸ್ಕೃತಿ
80 to 89
ಈ ಲೇಖನವು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಮೌಖಿಕ ಸಾಹಿತ್ಯ ಪರಂಪರೆಯಲ್ಲಿ ಬೇಸಾಯ ಮತ್ತು ದ್ಯಾವರಗಳ ಸ್ಥಾನವನ್ನು ವಿಶ್ಲೇಷಿಸುತ್ತದೆ. ಈ ಭಾಗದ ಜನಪದ ಜೀವನ ಕೃಷಿ ಆಧಾರಿತವಾಗಿದ್ದು, ಕೃಷಿ ಚಟುವಟಿಕೆಗಳು, ಎತ್ತುಗಳ ಆರಾಧನೆ, ಬಿತ್ತನೆ, ಕೊಯ್ಲು, ಸಂಕ್ರಾಂತಿ, ಜಾತ್ರೆಗಳು ಹಾಗೂ ವಿವಿಧ ದ್ಯಾವರ ಆಚರಣೆಗಳು ಜನಪದ ಸಾಹಿತ್ಯದೊಂದಿಗೆ ಅವಿನಾಭಾವ ಸಂಬಂಧ ಹೊಂದಿವೆ. ಈ ಆಚರಣೆಗಳ ಸಂದರ್ಭದಲ್ಲಿ ಹಾಡಲಾಗುವ ಜನಪದ ಗೀತೆಗಳು, ಗಾದೆಗಳು, ಕಥೆಗಳು ಹಾಗೂ ಐತಿಹ್ಯಗಳು ಸ್ಥಳೀಯ ಸಮುದಾಯದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಬದುಕನ್ನು ಪ್ರತಿಬಿಂಬಿಸುತ್ತವೆ. ಕನ್ನಡ, ತೆಲುಗು, ತಮಿಳು ಹಾಗೂ ಉರ್ದು ಭಾಷಾ ಸಂಸ್ಕೃತಿಗಳ ಪರಸ್ಪರ ಪ್ರಭಾವವೂ ಈ ಪ್ರದೇಶದ ಮೌಖಿಕ ಸಾಹಿತ್ಯವನ್ನು ಶ್ರೀಮಂತಗೊಳಿಸಿದೆ. ಕೃಷಿ, ಪ್ರಕೃತಿ, ದೈವಾರಾಧನೆ ಮತ್ತು ಸಮುದಾಯ ಜೀವನವನ್ನು ಆಧರಿಸಿದ ಈ ಮೌಖಿಕ ಪರಂಪರೆ ಸ್ಥಳೀಯರ ಜೀವನ ಮೌಲ್ಯಗಳು, ಪರಿಸರ ಜ್ಞಾನ ಮತ್ತು ಸಾಂಸ್ಕೃತಿಕ ಗುರುತನ್ನು ತಲೆಮಾರುಗಳಿಂದ ಸಂರಕ್ಷಿಸುತ್ತಾ ಬಂದಿದೆ. ಆಧುನಿಕತೆಯ ಪ್ರಭಾವದಿಂದ ಕೆಲವು ಆಚರಣೆಗಳು ಕ್ಷೀಣಿಸುತ್ತಿದ್ದರೂ, ಅವುಗಳ ದಾಖಲೀಕರಣ ಮತ್ತು ಸಂರಕ್ಷಣೆ ಅಗತ್ಯವೆಂಬುದನ್ನು ಲೇಖನ ಒತ್ತಿ ಹೇಳುತ್ತದೆ.
ರಾಜಕೀಯದಲ್ಲಿ ಮಹಿಳೆಯರು: ಪ್ರಜಾಪ್ರಭುತ್ವ ಮತ್ತು ಪ್ರಾತಿನಿಧ್ಯ
90 to 97
ಪ್ರಜಾಪ್ರಭುತ್ವದ ಯಶಸ್ಸು ಮತ್ತು ಸುಸ್ಥಿರ ಅಭಿವೃದ್ಧಿಗೆ ರಾಜಕೀಯದಲ್ಲಿ ಮಹಿಳೆಯರ ಸಕ್ರಿಯ ಪ್ರಾತಿನಿಧ್ಯ ಅತ್ಯಗತ್ಯವಾಗಿದೆ. ಮಹಿಳೆಯರ ಪಾಲ್ಗೊಳ್ಳುವಿಕೆ ಕೇವಲ ಮತದಾನಕ್ಕೆ ಸೀಮಿತವಾಗದೆ, ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆ ಮತ್ತು ನಾಯಕತ್ವದಲ್ಲಿರಬೇಕು. ಪ್ರಸ್ತುತ ಲೋಕಸಭೆ ಮತ್ತು ಶಾಸನಸಭೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ತೀರಾ ಕಡಿಮೆಯಿದ್ದು, ಅದರಲ್ಲೂ ಶೋಷಿತ ವರ್ಗದ ಮಹಿಳೆಯರಿಗೆ ಅವಕಾಶಗಳು ಮರೀಚಿಕೆಯಾಗಿವೆ. ಪಿತೃಪ್ರಧಾನ ವ್ಯವಸ್ಥೆ, ಅಭದ್ರತೆ ಮತ್ತು ಆರ್ಥಿಕ ಸವಾಲುಗಳು ಮಹಿಳಾ ನಾಯಕತ್ವಕ್ಕೆ ಪ್ರಮುಖ ಅಡೆತಡೆಗಳಾಗಿವೆ. 73 ಮತ್ತು 74ನೇ ಸಂವಿಧಾನ ತಿದ್ದುಪಡಿಗಳ ಮೂಲಕ ಸ್ಥಳೀಯ ಸಂಸ್ಥೆಗಳಲ್ಲಿ ಶೇ.33ರಷ್ಟು ಮೀಸಲಾತಿ ನೀಡಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಎನ್‌ಜಿಒಗಳ ಬೆಂಬಲ ಮತ್ತು ಡಿಜಿಟಲ್ ತಂತ್ರಜ್ಞಾನದ ಬಳಕೆಯು ಮಹಿಳಾ ಸಬಲೀಕರಣಕ್ಕೆ ಹೊಸ ಮಾರ್ಗಗಳನ್ನು ತೆರೆದಿವೆ. ಶಿಕ್ಷಣ, ಆರೋಗ್ಯ ಮತ್ತು ಕಲ್ಯಾಣ ನೀತಿಗಳ ಮೂಲಕ ಸಮಾನ ಸಮಾಜ ನಿರ್ಮಾಣ ಮಾಡಲು ರಾಜಕೀಯದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಅನಿವಾರ್ಯ ಎಂಬುದನ್ನು ಇಲ್ಲಿ ವಿಶ್ಲೇಷಿಸಲಾಗಿದೆ.
ಅಕ್ಕಮ್ಮನವರ ವಚನಗಳಲ್ಲಿ ತಾತ್ವಿಕ ಮತ್ತು ವೈಜ್ಞಾನಿಕ ಪ್ರಜ್ಞೆ: ಒಂದು ವಿಮರ್ಶಾತ್ಮಕ ನೋಟ
98 to 104
12ನೇ ಶತಮಾನದ ಬಸವಯುಗದ ಪ್ರಮುಖ ವಚನಕಾರ್ತಿ ಅಕ್ಕಮ್ಮನವರ ವಚನಗಳು ಕೇವಲ ಭಕ್ತಿಯ ಅಭಿವ್ಯಕ್ತಿಯಾಗಿರದೆ, ಅಪರೂಪದ ತಾತ್ವಿಕ ಹಾಗೂ ವೈಜ್ಞಾನಿಕ ಪ್ರಜ್ಞೆಯನ್ನು ಮೈಗೂಡಿಸಿಕೊಂಡಿವೆ. ವ್ರತ, ನೇಮ, ಶೀಲ ಮತ್ತು ಕಾಯಕ ತತ್ವಗಳ ಮೂಲಕ ಆಚಾರ-ವಿಚಾರಗಳ ಸಮನ್ವಯವನ್ನು ಈ ವಚನಗಳು ಎತ್ತಿಹಿಡಿಯುತ್ತವೆ. ಅಂತರಂಗ ಮತ್ತು ಬಹಿರಂಗದ ಶುದ್ಧಿಗೆ ಒತ್ತು ನೀಡುತ್ತಾ, ಇಂದ್ರಿಯ ನಿಗ್ರಹದ ಮೂಲಕ ಅತ್ಯುನ್ನತ ನೈತಿಕ ಮೌಲ್ಯಗಳನ್ನು ಅವರು ಬೋಧಿಸಿದ್ದಾರೆ. ಮಾದಕ ವಸ್ತುಗಳು ಮತ್ತು ತಾಮಸ ಆಹಾರಗಳು (ಬೆಳ್ಳುಳ್ಳಿ, ಈರುಳ್ಳಿ) ಮಾನವನ ನರಮಂಡಲದ ಮೇಲುಂಟುಮಾಡುವ ದುಷ್ಪರಿಣಾಮಗಳ ವಿಶ್ಲೇಷಣೆ ಹಾಗೂ ಹತ್ತಿರದ ರಕ್ತಸಂಬಂಧಿಗಳ ನಡುವಿನ ವಿವಾಹದಿಂದ ಎದುರಾಗುವ ಅನುವಂಶಿಕ ದೋಷಗಳ ಬಗೆಗಿನ ಎಚ್ಚರಿಕೆಗಳು ಅವರ ವೈಜ್ಞಾನಿಕ ದೂರದೃಷ್ಟಿಗೆ ಸಾಕ್ಷಿಯಾಗಿವೆ. ಮೂಢನಂಬಿಕೆಗಳನ್ನು ಧಿಕ್ಕರಿಸಿ, ಅರಿವು ಮತ್ತು ಸತ್ಯಶೋಧನೆಯತ್ತ ಸಾಗುವ ಅವರ ಒಳನೋಟಗಳು ಮಾನವನ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಇಂದಿಗೂ ಪ್ರಸ್ತುತವಾಗಿವೆ.
ರಾಂಪುರದ ಬಕ್ಕಪ್ಪನವರ ತತ್ವಪದಗಳ ಆಶಯ
105 to 110
ಕನ್ನಡ ನಾಡಿನಲ್ಲಿ ಇಂದಿಗೂ ಜೀವಂತ ಪರಂಪರೆಯಾಗಿರುವ ತತ್ವಪದಗಳು ಒಂದು ಭಿನ್ನ ಜೀವನ ಕ್ರಮವೂ ಹೌದು. ಕನ್ನಡದ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಬಹುತ್ವವನ್ನು ಪ್ರತಿಫಲಿಸುವ ರೀತಿಯಲ್ಲಿ ತತ್ವಪದಕಾರರು ಎಲ್ಲಾ ಸ್ತರದಿಂದ ಬಂದವರಾಗಿದ್ದಾರೆ. ನಾಡಿನ ಉದ್ದಗಲಕ್ಕೂ ಇರುವ ಪರಂಪರೆಯ ವಿಸ್ತಾರವಾದ ಅಧ್ಯಯನ ಅನೇಕ ಸಾಂಸ್ಕೃತಿಕ ಹೊಳಹುಗಳನ್ನು ನೀಡಬಲ್ಲದು. ಕನ್ನಡ ಸಾಹಿತ್ಯ ದಾಖಲೆಗೊಂಡ ಇತಿಹಾಸದಲ್ಲಿ ಅತ್ಯಂತ ವಿಸ್ತಾರವಾದ ಭಾಗವೆಂದರೆ ತತ್ವಪದಗಳೇ ಆಗಿವೆ. ಈ ಪ್ರಮಾಣದಲ್ಲಿ ಕನ್ನಡ ಸಾಹಿತ್ಯದ ಯಾವ ಪ್ರಕಾರದಲ್ಲಿಯೂ ಸಾಹಿತ್ಯ ಸೃಷ್ಟಿಯಾಗಿಲ್ಲ. ಆದರೆ ಸಾಹಿತ್ಯದ ಚರಿತ್ರೆಯಲ್ಲಿ ತತ್ವಪದಗಳ ಏಕತಾರಿಯನ್ನು ಇಂದಿಗೂ ಹೊರಗೆ ಇಟ್ಟಿದ್ದಾರೆ. ಕನ್ನಡದ ನೆಲದಲ್ಲಿ ಜಾತ್ಯಾತೀತ ಅನುಭಾವೀ ಸಾಧಕ ಪರಂಪರೆಯೊಂದು ಇನ್ನು ಜೀವಂತವಾಗಿದೆ. ತತ್ವಪದಕಾರರು, ಮುಟ್ಟು – ಮೈಲಿಗೆ ಎಂಬ ಅನೈಸರ್ಗಿಕ ನಿಲುವನ್ನಾಧರಿಸಿದ ತಾರತಮ್ಯವನ್ನು ನಿರಾಕರಿಸಿದರು. ಆ ಮೂಲಕ ಹೆಣ್ಣನ್ನು ಅವಮಾನಿಸುವ ಆಚರಣೆಗಳನ್ನು ತ್ಯಜಿಸಿದರು. ತತ್ವಪದಕಾರರ ಗದ್ದುಗೆಗಳಲ್ಲಿ ಜಾತಿ, ಧರ್ಮ, ದರ್ಶನಗಳ ಯಾವ ತಡೆಗೋಡೆಗಳೂ ಇಲ್ಲ. ಅಲ್ಲಿ ಎಲ್ಲರೂ ಸಮಾನರು ಮತ್ತು ವಿಶ್ವಮಾನವರು ಇವುಗಳ ಆಚರಣೆ ವಿಧಿ ನಿಷೇಧಗಳು ಮತ್ತು ಯಥೇಚ್ಛವಾಗಿ ದೊರಕುವ ಸಾಹಿತ್ಯವು ಈ ಪಂಥದ ತಾತ್ವಿಕತೆ ಮತ್ತು ಆಶಯವನ್ನು ಅರಿತುಕೊಳ್ಳಲು ಸಹಾಯಕವಾಗಿದೆ.
ಎಸ್.ಜಿ. ಸಿದ್ದರಾಮಯ್ಯನವರ ಕಾವ್ಯದಲ್ಲಿ ಸಂಪ್ರದಾಯ, ನಂಬಿಕೆ ಮತ್ತು ಆಚರಣೆಗಳು
111 to 118
ಸಂಪ್ರದಾಯ, ನಂಬಿಕೆ ಮತ್ತು ಆಚರಣೆಗಳು ಮಾನವ ಸಮಾಜದ ಸಾಂಸ್ಕೃತಿಕ ಬೇರುಗಳಾಗಿದ್ದು, ಇವುಗಳ ದಟ್ಟವಾದ ಚಿತ್ರಣ ಎಸ್.ಜಿ. ಸಿದ್ದರಾಮಯ್ಯನವರ ಕಾವ್ಯದಲ್ಲಿ ಅನಾವರಣಗೊಂಡಿದೆ. ಕವಿಯು ಗ್ರಾಮೀಣ ಬದುಕಿನ ಜಾತ್ರೆ ಹಾಗೂ ಹಬ್ಬಗಳಂತಹ ಸಕಾರಾತ್ಮಕ ಆಚರಣೆಗಳನ್ನು ನೆಲಮೂಲ ಸಂಸ್ಕೃತಿಯ ಜೀವಂತ ಪ್ರತೀಕಗಳಾಗಿ ಗೌರವಿಸುತ್ತಾರೆ. ಆದರೆ, ಸಾಮಾಜಿಕ ಅಸಮಾನತೆ ಮತ್ತು ಶೋಷಣೆಯನ್ನು ಬಿಂಬಿಸುವ ‘ಮಡೆಸ್ನಾನ’ದಂತಹ ಅಮಾನವೀಯ ಮೂಢನಂಬಿಕೆಗಳನ್ನು, ಜ್ಯೋತಿಷ್ಯದ ಅವೈಜ್ಞಾನಿಕ ನಂಬಿಕೆಗಳನ್ನು ಹಾಗೂ ಶಕುನ-ಅಪಶಕುನಗಳನ್ನು ತಾರ್ಕಿಕ ಮತ್ತು ವೈಚಾರಿಕ ನೆಲೆಗಟ್ಟಿನಲ್ಲಿ ಕಟುವಾಗಿ ವಿರೋಧಿಸುತ್ತಾರೆ. ಕನಸುಗಳನ್ನು ಕೇವಲ ಸುಪ್ತಪ್ರಜ್ಞೆಯ ನೆನಪುಗಳೆಂದು ವಿಶ್ಲೇಷಿಸುವ ಇವರು, ಸಮಾಜದ ಏಳಿಗೆಗಾಗಿ ಮೌಲ್ಯಯುತವಾದ ಸಂಪ್ರದಾಯಗಳನ್ನು ಉಳಿಸಿಕೊಂಡು, ಹಾನಿಕಾರಕ ಮೌಢ್ಯಗಳನ್ನು ತ್ಯಜಿಸುವ ಮೂಲಕ ಆರೋಗ್ಯಕರ ಮತ್ತು ಪ್ರಗತಿಪರ ಸಮಾಜವನ್ನು ನಿರ್ಮಿಸುವ ಆಶಯವನ್ನು ತಮ್ಮ ಕಾವ್ಯದ ಮೂಲಕ ಅಭಿವ್ಯಕ್ತಪಡಿಸಿದ್ದಾರೆ.
ಅ.ನ.ಕೃ: ಚಿಂತನ ಸಾಹಿತ್ಯದ ಪ್ರಸ್ತುತತೆ
119 to 126
ಸಾಹಿತ್ಯ ಚಳವಳಿಗಳು ಆಯಾ ಕಾಲದ ವಿಭಿನ್ನ ಮನಸ್ಥಿತಿಗಳು, ಆಲೋಚನೆಗಳು ಮತ್ತು ವಿಭಿನ್ನ ಉದ್ದೇಶಗಳ ಹಿನ್ನೆಲೆಯಲ್ಲಿ ಸಾಹಿತ್ಯಿಕ ಅಭಿವ್ಯಕ್ತಿಯ ಬಾಹ್ಯರೇಖೆಗಳನ್ನು ರೂಪಿಸುತ್ತವೆ. ಹೀಗಾಗಿ ಶ್ರೀಮಂತ ಕನ್ನಡ ಸಾಹಿತ್ಯವನ್ನು ಪರಿಶೀಲಿಸುವುದು ಮತ್ತು ಸಮಕಾಲೀನ ಸಂದರ್ಭದಲ್ಲಿ ಅದರ ಸಾಂಸ್ಕೃತಿಕ ಇತಿಹಾಸವನ್ನು ನಿರ್ಮಿಸುವುದು ಕಡ್ಡಾಯವಾಗಿದೆ. ಸಾಹಿತ್ಯ ಚಳವಳಿಯ ನೇತೃತ್ವ ವಹಿಸಿದ್ದವರಲ್ಲಿ ಅ.ನ.ಕೃಷ್ಣರಾವ್ ಅಗ್ರಗಣ್ಯರು. ತಮ್ಮ ಬರವಣಿಗೆಯ ಮೂಲಕ ನಾಡು-ನುಡಿ, ಕನ್ನಡ ಭಾಷೆಯ ಸಮಸ್ಯೆ, ಸಾಹಿತ್ಯ, ಸಂಗೀತ, ಗಡಿ ಸಮಸ್ಯೆ, ಸ್ವಾತಂತ್ರ್ಯ ಹೋರಾಟ, ಸಾಮಾಜಿಕ ಸಮಸ್ಯೆಗಳು, ಕನ್ನಡ ಚಲನಚಿತ್ರಗಳ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಸಾಹಿತ್ಯ ಜಗತ್ತಿನಲ್ಲಿ ಹೊಸ ಚಳವಳಿಯನ್ನು ಸೃಷ್ಟಿಸಿದರು. ಕನ್ನಡ ಭಾಷೆಯ ಉಳಿವಿಗಾಗಿ ಹೋರಾಡುವ ಮೂಲಕ ಕನ್ನಡ ನಾಡಿನ ಏಕೀಕರಣ ಮತ್ತು ಉನ್ನತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರು ಅ.ನ.ಕೃ.
ಅ.ನ.ಕೃಷ್ಣರಾವ್ ಅವರು ದೇಶಾದ್ಯಂತ ಸಂಚರಿಸಿದರು ಮತ್ತು ಕನ್ನಡ ಸಾಹಿತ್ಯದ ಹಿರಿಮೆಯ ಪ್ರವಚನ ಮಾಡಿದರು. ಲೇಖಕರ ಜೀವನ, ವ್ಯಕ್ತಿತ್ವ ಮತ್ತು ಸಾಹಿತ್ಯದ ಕುರಿತು ಈಗಾಗಲೇ ಅನೇಕ ಲೇಖನಗಳು, ಪುಸ್ತಕಗಳು ಮತ್ತು ಸಂಶೋಧನಾ ಪ್ರಬಂಧಗಳು ಪ್ರಕಟವಾಗಿವೆ. ಈ ಎಲ್ಲಾ ಅಧ್ಯಯನಗಳು ಒಂದೇ ರೀತಿಯಲ್ಲಿ ಪ್ರಕಟಗೊಂಡಿವೆ. ಈ ಹಿನ್ನೆಲೆಯಲ್ಲಿ ಅ.ನ.ಕೃಷ್ಣರಾವ್ ಅವರ ಚಿಂತನಾ ಸಾಹಿತ್ಯವನ್ನು ಮತ್ತೊಮ್ಮೆ ನೋಡಬೇಕಾಗಿದೆ. ವಿಮರ್ಶಕರು ಅವರನ್ನು ಕೇವಲ ಕಾದಂಬರಿಕಾರರಾಗಿ ನೋಡಿದ್ದಾರೆ. ಪ್ರಸ್ತುತ ಲೇಖನದಲ್ಲಿ ಅವರ ಚಿಂತನ ಸಾಹಿತ್ಯವನ್ನು ಸಮಗ್ರವಾಗಿ ವಿಶ್ಲೇಷಿಸುವ ಮೂಲಕ ಅವರ ಸೃಜನೇತರ ಚಿಂತನೆಗಳನ್ನು ಓದುಗ ವಲಯಕ್ಕೆ ತಿಳಿಸಬೇಕಾದ ಅನಿವಾರ್ಯತೆ ಇದೆ.
ಸ್ವಾತಂತ್ರ್ಯ ಪೂರ್ವ ಮೈಸೂರು ಪರಿಸರದ ಕನ್ನಡ ಪ್ರಕಟಣಾ ಸಂಸ್ಥೆಗಳು
127 to 136
ಸ್ವಾತಂತ್ರ್ಯ ಪೂರ್ವದ ಮೈಸೂರು ಪ್ರಾಂತ್ಯದಲ್ಲಿ ಕನ್ನಡ ಸಾಹಿತ್ಯದ ಪುನರುಜ್ಜೀವನ ಮತ್ತು ಬೆಳವಣಿಗೆಯಲ್ಲಿ ಮುದ್ರಣಾಲಯಗಳು ಹಾಗೂ ಪ್ರಕಟಣಾ ಸಂಸ್ಥೆಗಳು ವಹಿಸಿದ ಐತಿಹಾಸಿಕ ಪಾತ್ರವನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಒಡೆಯರ ಆಡಳಿತ, ಬ್ರಿಟಿಷ್ ಆಡಳಿತ ಹಾಗೂ ಕ್ರೈಸ್ತ ಮಿಷನರಿಗಳ ಆಗಮನದ ಹಿನ್ನೆಲೆಯಲ್ಲಿ ಕನ್ನಡ ಮುದ್ರಣ ಕಾರ್ಯವು ಆರಂಭವಾಯಿತು. ಧರ್ಮ ಪ್ರಚಾರ ಹಾಗೂ ಶೈಕ್ಷಣಿಕ ಉದ್ದೇಶಗಳಿಗಾಗಿ ಮಿಷನರಿಗಳು ಮುದ್ರಣಯಂತ್ರಗಳನ್ನು ಸ್ಥಾಪಿಸಿದರೆ, ನಂತರದ ದಿನಗಳಲ್ಲಿ ಅಂಬವಿಲಾಸ ಅರಮನೆಯ ಶಿಲಾಯಂತ್ರ, ವೆಸ್ಲಿಯನ್ ಪ್ರೆಸ್, ಸದ್ವಿದ್ಯಾ ಮಂದಿರ ಮುದ್ರಾಶಾಲೆ, ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಹಲವು ದೇಶೀಯ ಸಂಸ್ಥೆಗಳು ಈ ಕಾರ್ಯವನ್ನು ಮುಂದುವರೆಸಿದವು. ಓಲೆಗರಿಗಳು ಹಾಗೂ ಹಸ್ತಪ್ರತಿಗಳಲ್ಲಿದ್ದ ಪ್ರಾಚೀನ ಕಾವ್ಯಗಳು, ಶಾಸನಗಳು ಮತ್ತು ಧಾರ್ಮಿಕ ಗ್ರಂಥಗಳನ್ನು ಹುಡುಕಿ, ಪರಿಷ್ಕರಿಸಿ, ಮುದ್ರಿಸುವ ಮೂಲಕ ಈ ಸಂಸ್ಥೆಗಳು ಕಣ್ಮರೆಯಾಗುತ್ತಿದ್ದ ಅಸಂಖ್ಯಾತ ಕೃತಿಗಳನ್ನು ಸಂರಕ್ಷಿಸಿ, ನಾಡಿನ ಸಾಂಸ್ಕೃತಿಕ ಹಾಗೂ ಸಾಹಿತ್ಯಕ ಪರಂಪರೆಯನ್ನು ಶ್ರೀಮಂತಗೊಳಿಸಿದ ಬಗೆಯನ್ನು ಇಲ್ಲಿ ಕಟ್ಟಿಕೊಡಲಾಗಿದೆ.
ಹಾಸನ ಜಿಲ್ಲೆಯ ಶೈವ ಮತ್ತು ಶರಣ ಧರ್ಮ: ಒಂದು ಚಾರಿತ್ರಿಕ ಅವಲೋಕನ
137 to 145
ಹಾಸನ ಜಿಲ್ಲೆಯು ಕರ್ನಾಟಕದ ಸಾಂಸ್ಕೃತಿಕ ಮತ್ತು ಧಾರ್ಮಿಕ ಇತಿಹಾಸದಲ್ಲಿ ಅತ್ಯಂತ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಕದಂಬ, ಗಂಗ, ಕಲ್ಯಾಣ ಚಾಲುಕ್ಯ ಹಾಗೂ ವಿಶೇಷವಾಗಿ ಹೊಯ್ಸಳರ ಆಡಳಿತದ ಅವಧಿಯಲ್ಲಿ ಈ ಭಾಗದಲ್ಲಿ ಶೈವ ಧರ್ಮವು ತನ್ನ ಸುವರ್ಣಯುಗವನ್ನು ಕಂಡಿತು. ಕಾಳಾಮುಖ, ಪಾಶುಪತ, ಶಾಕ್ತದಂತಹ ವಿವಿಧ ಶೈವ ಪಂಥಗಳು ಇಲ್ಲಿ ವ್ಯಾಪಕವಾಗಿ ಬೆಳೆದವು. ದೇವಾಲಯಗಳು ಕೇವಲ ಪೂಜಾ ತಾಣಗಳಾಗದೆ ವಿದ್ಯಾದಾನ, ಅನ್ನದಾನ ಮತ್ತು ಸಮಾಜಮುಖಿ ಕೇಂದ್ರಗಳಾಗಿದ್ದವು. ಧಾರ್ಮಿಕ ಮತ್ತು ಆಡಳಿತ ಕ್ಷೇತ್ರಗಳಲ್ಲಿ ಮಹಿಳೆಯರ ಸಕ್ರಿಯ ಪಾತ್ರವು ಇಲ್ಲಿನ ಶಾಸನಗಳಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಕಾಲಾಂತರದಲ್ಲಿ, ಶೈವ ದೇವಾಲಯಗಳಲ್ಲಿ ಹೆಚ್ಚಾದ ಮಡಿವಂತಿಕೆ ಹಾಗೂ ಡಾಂಭಿಕತೆಯನ್ನು ವಿರೋಧಿಸಿ, ಸ್ಥಾವರವಾದ ‘ನೆಲೆ ದೇಗುಲ’ಗಳಿಗಿಂತ ಜಂಗಮ ರೂಪದ ‘ನಡೆ ದೇಗುಲ’ವೇ ಶ್ರೇಷ್ಠವೆಂಬ ವೈಚಾರಿಕ ಕ್ರಾಂತಿಯನ್ನು ಶರಣ ಧರ್ಮವು ಹೇಗೆ ತಂದಿತು ಎಂಬುದನ್ನು ಶಾಸನಗಳು ಹಾಗೂ ಪುರಾತತ್ತ್ವ ಆಧಾರಗಳ ಹಿನ್ನೆಲೆಯಲ್ಲಿ ಐತಿಹಾಸಿಕವಾಗಿ ವಿಶ್ಲೇಷಿಸಲಾಗಿದೆ.
ಎಸ್. ಎಲ್. ಭೈರಪ್ಪ ಅವರ ‘ನಿರಾಕರಣ’ - ಒಂದು ವಿಶ್ಲೇಷಣೆ
146 to 151
ಖ್ಯಾತ ಲೇಖಕ ಎಸ್. ಎಲ್. ಭೈರಪ್ಪ ಅವರ ‘ನಿರಾಕರಣ’ ಕಾದಂಬರಿಯ ಕೇಂದ್ರಬಿಂದುವಾದ ನರಹರಿಯ ಮಾನಸಿಕ ದ್ವಂದ್ವ, ಪಲಾಯನವಾದ ಮತ್ತು ಬದುಕಿನ ವಾಸ್ತವಗಳ ನಡುವಿನ ಸಂಘರ್ಷವನ್ನು ಇಲ್ಲಿ ಸೂಕ್ಷ್ಮವಾಗಿ ವಿಶ್ಲೇಷಿಸಲಾಗಿದೆ. ವೇದಾಂತದ ಪ್ರಭಾವದಿಂದಾಗಿ ಸಂಸಾರಕ್ಕೆ ಅಂಟಿಯೂ ಅಂಟದಂತೆ ಇರಬಯಸುವ ನಾಯಕ, ತನ್ನ ಪತ್ನಿಯರ ಸಾವಿನ ನಂತರ ಐದು ಮಕ್ಕಳನ್ನು ದತ್ತು ನೀಡಿ ಸನ್ಯಾಸಿಯಾಗಲು ಹಿಮಾಲಯದತ್ತ ಸಾಗುತ್ತಾನೆ. ಆದರೆ, ಆಧ್ಯಾತ್ಮಿಕತೆಯ ಹೆಸರಿನಲ್ಲಿ ಕರ್ತವ್ಯದಿಂದ ನುಣುಚಿಕೊಳ್ಳುವ ಆತನಿಗೆ ಒಂಟಿತನದಲ್ಲಿಯೂ ನೆಮ್ಮದಿ ದೊರೆಯುವುದಿಲ್ಲ. ಅಂತಿಮವಾಗಿ ತನ್ನವರ ಸೆಳೆತಕ್ಕೆ ಸಿಲುಕಿ, ಅನಿವಾರ್ಯವಾಗಿ ತನ್ನದೇ ಮಕ್ಕಳ ಭವಿಷ್ಯವನ್ನು ರೂಪಿಸುವ ಜವಾಬ್ದಾರಿಗೆ ಮರಳುವ ವಾಸ್ತವವನ್ನು ಈ ಬರಹವು ಕಟ್ಟಿಕೊಡುತ್ತದೆ. ದತ್ತು ಪ್ರಕ್ರಿಯೆಯ ಹಿಂದಿನ ಬಿಕ್ಕಟ್ಟುಗಳು ಹಾಗೂ ಮನುಷ್ಯನ ಸಹಜ ಭಾವನೆಗಳ ಅನಿವಾರ್ಯತೆಯನ್ನು ವಿಮರ್ಶಿಸುವ ಮೂಲಕ, ಕರ್ತವ್ಯವಿಮುಖ ಸನ್ಯಾಸತ್ವದ ವಿಫಲತೆಯನ್ನು ಎತ್ತಿತೋರಿಸಲಾಗಿದೆ.
ಚೆನ್ನವೀರ ಕಣವಿ ಅವರ ಕವಿತೆಗಳಲ್ಲಿ ಪ್ರತಿಫಲಿತವಾದ ಕವಿಕೇಂದ್ರಿತ ಚಿಂತನೆಗಳು
152 to 159
ಚೆನ್ನವೀರ ಕಣವಿ ಅವರ ಕವನಗಳಲ್ಲಿನ ಕಾವ್ಯಮೀಮಾಂಸೆಯನ್ನು ಕುರಿತ ತಾತ್ವಿಕ ಚಿಂತನೆಗಳನ್ನು ವಿಶ್ಲೇಷಿಸುವ ಮುಖೇನ ಒಂದು ಕಾಲಮಾನದ ಸಾಹಿತ್ಯ ಹಾಗೂ ಅದರ ಹಿಂದಿರುವ ಚಿಂತನೆಯನ್ನು ಅರಿತು ಈ ಕಾಲಮಾನದ ಸಾಹಿತ್ಯಕ್ಕೆ ನಮ್ಮ ಪರಂಪರೆಯ ಪ್ರೇರಣೆ ಹಾಗೂ ಪ್ರಭಾವವನ್ನು ಗುರುತಿಸುವ ಪ್ರಯತ್ನಮಾಡಬಹುದು. ಇದರಿಂದ ನಮ್ಮ ವರ್ತಮಾನದ ಸಮಾಜ ಮತ್ತು ಅದನ್ನು ಪರಿಭಾವಿಸುವ ಸಾಹಿತ್ಯ ಹೇಗೆ ಸಾಗುತ್ತಿದೆ ಎಂಬುದರ ಅರಿವು ನಮಗಾಗುತ್ತದೆ. ಬದಲಾದ ಕಾಲಮಾನದಲ್ಲಿ ಸಾಹಿತ್ಯವು ರಂಜನೆಯ ವಿಷಯವಾಗಿರದೆ ಬದುಕಿನ ತಲ್ಲಣಗಳೊಂದಿಗಿನ ಸ್ಪಂದನವೂ ಆಗಿದೆ.
ಅಂಬೇಡ್ಕರ್ ಎಂಬ ಅಮರ ವ್ಯಕ್ತಿತ್ವ
160 to 168
ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಕೇವಲ ಸಂವಿಧಾನ ಶಿಲ್ಪಿ ಅಥವಾ ಸೀಮಿತ ಚೌಕಟ್ಟಿನ ದಲಿತ ನಾಯಕರನ್ನಾಗಿ ಬಿಂಬಿಸುವ ಪ್ರವೃತ್ತಿಯನ್ನು ಮೀರಿ, ಅವರೊಬ್ಬ ಕ್ರಾಂತಿಕಾರಿ, ಆರ್ಥಿಕ ತಜ್ಞ ಹಾಗೂ ಬಹುಮುಖಿ ವಿದ್ವಾಂಸ ಎಂಬುದನ್ನು ಇಲ್ಲಿ ಎತ್ತಿತೋರಿಸಲಾಗಿದೆ. ಅಸ್ಪೃಶ್ಯತೆಯ ನಿವಾರಣೆ, ಸಾಮಾಜಿಕ ಸಮಾನತೆ ಮತ್ತು ಶೋಷಿತರ ಸ್ವಾಭಿಮಾನದ ಜಾಗೃತಿಗಾಗಿ ಅವರು ತಮ್ಮ ಇಡೀ ಬದುಕನ್ನೇ ಮುಡಿಪಾಗಿಟ್ಟರು. ಕಬೀರ್, ಬುದ್ಧ ಮತ್ತು ಫುಲೆ ಅವರ ಚಿಂತನೆಗಳಿಂದ ಪ್ರಭಾವಿತರಾಗಿದ್ದ ಅವರು, ಮನುಷ್ಯನ ಘನತೆಯನ್ನು ಎತ್ತಿಹಿಡಿಯುವ ನೈತಿಕ ಧರ್ಮವನ್ನು ಪ್ರತಿಪಾದಿಸಿದರು. ಕೇವಲ ಸವರ್ಣೀಯರ ಅನುಕಂಪವನ್ನು ನಿರಾಕರಿಸಿ, ‘ಶಿಕ್ಷಣ, ಸಂಘಟನೆ ಮತ್ತು ಹೋರಾಟ’ಗಳ ಮೂಲಕ ಸಾಂವಿಧಾನಿಕ ಹಕ್ಕುಗಳನ್ನು ಪಡೆದುಕೊಳ್ಳುವ ದಿಟ್ಟ ಮಾರ್ಗವನ್ನು ತೋರಿದರು. ಇಂದಿನ ಭಾರತದ ಸಾಮಾಜಿಕ ಹಾಗೂ ರಾಜಕೀಯ ಬಿಕ್ಕಟ್ಟುಗಳನ್ನು ಪರಿಹರಿಸಲು ಅಂಬೇಡ್ಕರರ ವಿಚಾರಧಾರೆಗಳನ್ನು ಸಮಗ್ರವಾಗಿ ಗ್ರಹಿಸಿ, ದೇಶದ ಪುನರ್‌ನಿರ್ಮಾಣದ ತಾತ್ವಿಕ ತಳಹದಿಯಾಗಿ ಅಳವಡಿಸಿಕೊಳ್ಳಬೇಕಾದ ತುರ್ತು ಅಗತ್ಯವನ್ನು ಇಲ್ಲಿ ವಿಶ್ಲೇಷಿಸಲಾಗಿದೆ.
ದಲಿತ ಕಥಾ ಸಾಹಿತ್ಯ ಕ್ಷೇತ್ರಕ್ಕೆ ಡಾ. ಎಚ್. ಟಿ. ಪೋತೆ ಅವರ ಕೊಡುಗೆ
169 to 174
ಕನ್ನಡ ದಲಿತ ಕಥಾ ಸಾಹಿತ್ಯ ಕ್ಷೇತ್ರಕ್ಕೆ ಡಾ. ಎಚ್. ಟಿ. ಪೋತೆ ಅವರ ಕೊಡುಗೆ ಅಪಾರವಾಗಿದೆ. ಶೋಷಣೆ, ಅಸ್ಪೃಶ್ಯತೆ, ಬಡತನ ಹಾಗೂ ಜಾತೀಯತೆಯಂತಹ ಸುಡುವ ವಾಸ್ತವಗಳನ್ನು ತಮ್ಮ ಕಥೆಗಳ ಮೂಲಕ ಅವರು ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ. ‘ಚಮ್ಮಾವುಗೆ’, ‘ಬೆತ್ತಲಾದ ಚಂದ್ರ’, ಮತ್ತು ‘ಕರುಳರಿಯುವ ಹೊತ್ತು’ ಮುಂತಾದ ಕೃತಿಗಳಲ್ಲಿ ಅವರ ಸ್ವಂತ ಜೀವನಾನುಭವಗಳು ತಳಸಮುದಾಯದ ನೋವು-ನಲಿವುಗಳಾಗಿ ಅನಾವರಣಗೊಂಡಿವೆ. ಮೇಲ್ವರ್ಗದ ದೌರ್ಜನ್ಯದ ವಿರುದ್ಧ ಸಿಡಿದೆದ್ದೇಳಲು ಹಾಗೂ ಶಿಕ್ಷಣದ ಮೂಲಕ ಜಾಗೃತರಾಗಿ ಜಾತಿ ವ್ಯವಸ್ಥೆಯಿಂದ ಬಿಡುಗಡೆ ಹೊಂದಲು ಈ ಕಥೆಗಳು ಪ್ರೇರೇಪಿಸುತ್ತವೆ. ತಂದೆ-ತಾಯಿಯರ ತ್ಯಾಗ, ಜೀತಪದ್ಧತಿಯ ಕ್ರೌರ್ಯ ಮತ್ತು ಬಾಡಿಗೆ ಮನೆ ಹುಡುಕುವಾಗಿನ ಜಾತಿ ನಿಂದನೆಯಂತಹ ಸಾಮಾಜಿಕ ಸತ್ಯಾಂಶಗಳನ್ನು ಅವರ ಬರಹಗಳು ಸೂಕ್ಷ್ಮವಾಗಿ ವಿಶ್ಲೇಷಿಸುತ್ತವೆ. ದಲಿತರ ಬದುಕು ಪರಿವರ್ತನೆಯಾಗಬೇಕು ಮತ್ತು ಶೈಕ್ಷಣಿಕ ಜಾಗೃತಿ ಮೂಡಬೇಕು ಎಂಬ ಆಶಯವನ್ನು ಅವರ ಸಾಹಿತ್ಯವು ಬಲವಾಗಿ ಪ್ರತಿಪಾದಿಸುತ್ತದೆ.
ಪಿ. ಸತ್ಯವತಿಯವರ ಕತೆಗಳಲ್ಲಿ ಸ್ತ್ರೀ ಸ್ವಾಯತ್ತತೆಯ ಅಂಶಗಳು
175 to 182
ಮಹಿಳಾ ಕಥನ ಸಾಹಿತ್ಯಕ್ಕೊಂದು ಹೊಸ ಆಯಾಮವನ್ನು ತಂದುಕೊಟ್ಟಿರುವ ‘ದಮಯಂತಿಯ ಮಗಳು’ ಕಥಾ ಸಂಕಲನ ಆಧುನಿಕ, ಸುಶಿಕ್ಷಿತ, ಉದ್ಯೋಗಸ್ಥ ಹೆಣ್ಣು ಎದುರಿಸುತ್ತಿರುವ ಬಹುಮುಖೀ ಸವಾಲುಗಳನ್ನು, ಅದನ್ನು ಎದುರಿಸಲು ಬೇಕಿರುವ ಹೊರದಾರಿಗಳನ್ನು ಯಶಸ್ವಿಯಾಗಿ ಹಿಡಿದಿಡುತ್ತದೆ. ಸ್ತ್ರೀ ವಾದಿ ಸೈದ್ಧಾಂತಿಕತೆ ಕಟ್ಟಿಕೊಡುತ್ತಿರುವ ಆಧುನಿಕತೆಯ ಹಿಂಸಾ ರೂಪಗಳನ್ನು ಈ ಕಥೆಗಳು ಎಳೆ ಎಳೆಯಾಗಿ ತೆರೆದಿಡುತ್ತವೆ. ಆಧುನಿಕತೆ ಹೆಣ್ಣಿಗೆ ವರವೋ ಶಾಪವೋ ಎನ್ನುವುದು ನಿರಂತರ ಚರ್ಚೆಯ ವಿಷಯವಾಗಿರುವ ಸಂದರ್ಭದಲ್ಲಿ ಪಿ ಸತ್ಯವತಿಯವರು ಆಧುನಿಕತೆ ಹೆಣ್ಣಿನ ಬದುಕನ್ನು ಆವರಿಸಿರುವ ಬಗೆಯನ್ನೂ, ಹೆಣ್ಣು ಅದನ್ನು ಎದುರುಗೊಳ್ಳಬಹುದಾದ ವಿಧಾನಗಳನ್ನು ಈ ಕಥೆಗಳಲ್ಲಿ ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ.
ಲಂಬಾಣಿ ರಾಮಾಯಣ: ಸಾಂಸ್ಕೃತಿಕ ಅವಲೋಕನ
183 to 194
ಭಾರತದಲ್ಲಿ ಅಸಂಖ್ಯಾತ ಬುಡಕಟ್ಟು ರಾಮಾಯಣಗಳಿವೆ. ಜಾತಿ, ಧರ್ಮ, ಸಮಾಜ ಹೀಗೆ ಹಲವು ನೆಲೆಗಳಲ್ಲಿ ಕಾಣಿಸಿಕೊಂಡಿರುವ ರಾಮಾಯಣಗಳು; ವಸ್ತುವಿನ ವಿಚಾರದಲ್ಲಿ ಒಂದೇ ಆಗಿದ್ದರೂ, ಅದನ್ನು ಅಭಿವ್ಯಕ್ತಪಡಿಸುವ ಮಾಧ್ಯಮ ವಿಭಿನ್ನವಾಗಿವೆ. ಲಿಖಿತ ರಾಮಾಯಣ ಅಥವಾ ಶಿಷ್ಟ ರಾಮಾಯಣದ ಕಥಾವಸ್ತುವಿನಲ್ಲಿ ಅಲ್ಪಸ್ವಲ್ಪ ಮಾರ್ಪಾಡುಗಳೊಂದಿಗೆ ರಚನೆಯಾಗಿರುವ ಮೌಖಿಕ ನೆಲೆಯ ರಾಮಾಯಣಗಳು ವಿಶಿಷ್ಟವಾಗಿ ಕಾಣಿಸಿಕೊಳ್ಳುತ್ತವೆ. ಲಿಖಿತ ಕಾವ್ಯಕ್ಕೂ; ಜನಪದ ಕಾವ್ಯಕ್ಕೂ ಇರುವ ವ್ಯತ್ಯಾಸವೆಂದರೆ ಕಥಾವಸ್ತುವಿನ ನಿರೂಪಣೆ. ಮೂಲ ಕಾವ್ಯಕ್ಕೆ ಧಕ್ಕೆಯಾಗದಂತೆ; ಕಾವ್ಯದ ಆಶಯವನ್ನು ಬಿಗಿಯಾಗಿಸುತ್ತಲೇ ಜನಪದರು ತಮ್ಮದೇ ಶೈಲಿಯಲ್ಲಿ ಕಟ್ಟಿಕೊಡುವ ರಾಮಾಯಣದ ಕಥೆಯು ಆಲಿಸಲು, ವಾಚಿಸಲು ಯೋಗ್ಯವಾಗಿರುತ್ತವೆ. ಬುಡಕಟ್ಟು ಜನರ ಕಥಾ ನಿರೂಪಣಾ ಶೈಲಿಯು ತಮ್ಮ ಬದುಕಿನೊಡನೆ ಹೆಣೆದುಕೊಂಡಿರುತ್ತವೆ. ಪಂಡಿತಮಾನ್ಯರಿಗೆ ರಾಮ, ಸೀತೆ ಸಾಮಾನ್ಯರಂತೆ ಕಂಡರೆ, ಜನಪದರಿಗೆ ದೈವಪುರುಷರಂತೆ ಕಾಣುವರು. ಹಾಗಾಗಿ ಇಂಥ ಪಾತ್ರಗಳು ಜನಪದರ ಮೇಲೆ ನೇರವಾಗಿ ಪ್ರಭಾವಬೀರುವುದಲ್ಲದೇ ತಮ್ಮ ಬದುಕು ಕಟ್ಟಿಕೊಳ್ಳಲು ರಾಮಾಯಣದ ಮೌಲ್ಯಗಳು ಆದರ್ಶವಾಗುತ್ತವೆ. ಇಂಥ ಆದರ್ಶ ಮೌಲ್ಯಗಳನ್ನು ಒಳಗೊಂಡಿರುವ ರಾಮಾಯಣ ಕೃತಿಯು ಬುಡಕಟ್ಟು ಲಂಬಾಣಿಗರ ಸಂಸ್ಕೃತಿಯಲ್ಲಿ ಹೇಗೆ ಮಿಳಿತಗೊಂಡಿವೆ ಎಂಬುದನ್ನು ಈ ಲೇಖನವು ಪ್ರಸ್ತುತ ಪಡಿಸುತ್ತದೆ.
The Relevance of Eco-Criticism in Indian Regional Literature: An Eco-Critical Reading of K. P. Poornachandra Tejaswi’s Selected Works
195 to 206
This research article examines the significant relevance of eco-criticism in Indian regional literature through a focused textual analysis of the works of the influential Kannada writer K. P. Poornachandra Tejaswi. Situated within the geographical and cultural context of the Western Ghats (Malenadu), Tejaswi’s literature departs from traditional anthropocentric narratives to construct an integrated worldview in which non-human subjectivities, including animals, insects, plants, and ecosystems, possess active agency. By analyzing his major novels, Carvallo and Chidambara Rahasya, as well as his descriptive accounts of the natural world, such as Parisarada Kathegalu, this article demonstrates that Indian regional literature provides a nuanced alternative to Western deep ecology. Whereas Western eco-criticism frequently idealizes nature as a pristine wilderness distinct from human civilization, Tejaswi depicts a complex socio-ecological network, where agrarian vulnerability, scientific inquiry, marginal livelihoods, and biological ecosystems converge. This study employs key concepts from eco-criticism, such as the critique of the Anthropocene, material eco-criticism, and environmental justice, to argue that regional literatures serve as essential sites for diagnosing environmental crises and envisioning local, sustainable models of coexistence.
A Political Interpretation of Trevor Griffiths’s Adaptation of The Cherry Orchard
207 to 215
This article examines Trevor Griffiths’s 1977 adaptation of Anton Chekhov’s The Cherry Orchard as a politically charged reinterpretation of the original play. While Chekhov’s drama has often been viewed as a nostalgic representation of a declining aristocratic order, Griffiths foregrounds its latent political and ideological dimensions. By emphasizing class conflict, social transformation, and the historical consequences of the abolition of serfdom, Griffiths reshapes the play into a more explicit critique of socio-economic inequality and political transition. The study focuses on the reconfiguration of key characters such as Lopakhin and Trofimov, whose roles are amplified to highlight the tensions between the fading aristocracy, the emerging bourgeoisie, and revolutionary intellectual forces. Through this adaptation, Griffiths challenges traditional British interpretations of Chekhov and presents The Cherry Orchard as a work deeply engaged with questions of power, class, and historical change.
Politics of Defection in India (1952-1985)
216 to 221
Politics of defection has been a sad reality of Indian political system. After 4th General Election (1967) Indian political system came to experience a spate of political defections. Politics of defection has its history in pre-independence India. But defections took place on a very limited scale. Between 1967 to 1970, 23 governments came and collapsed. In seven states, defections had a field day. As many as eight defectors became Chief Ministers and many others were successful in getting ministerial berths. Minority governments formed by defectors and supported by some parties from outside came into existence in Haryana, Punjab, West Bengal and Bihar. 32 governments of 10 states fell down because of defection politics. The practice continued radically up to 1985 in many states of India. This paper highlights the history of political defections in India from 1952 to 1985.
Challenges In ECCE Teacher Education and Vision of NEP 2020
222 to 228
Early Childhood Care and Education (ECCE) plays a pivotal role in laying the foundation for lifelong learning during a child’s most crucial developmental years. Despite its significance, ECCE teacher education in India faces severe challenges, including unregulated training institutions, widely varying program durations, and an inadequate curricular focus on developmentally appropriate practices. The National Education Policy (NEP) 2020 aims to resolve these systemic gaps by envisioning a standardized, high-quality foundational curriculum coupled with stage-specific professional training and continuous development for educators. Robust regulatory mechanisms remain essential to ensure early childhood teachers are effectively equipped to nurture young learners.