Published: 2025-10-30

Table of Contents

Table of Contents

I to XV

ಕ್ರಿ ಶ.1924ರ ಐತಿಹಾಸಿಕ ಬೆಳಗಾವಿ ಕಾಂಗ್ರೇಸ್ ಅಧಿವೇಶನ ಮತ್ತು ಅದರ ಪ್ರಭಾವ

ಆಯಿಶ ಸಿದ್ದಿಖ ಕೆ.ಹೆಚ್.

01 to 08

ಈ ಲೇಖನವು ಕರ್ನಾಟಕದ ಬೆಳಗಾವಿಯಲ್ಲಿ ನಡೆದ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಅಧ್ಯಕ್ಷತೆಯನ್ನು ವಹಿಸಿದ್ದ ಏಕೈಕ ರಾಷ್ಟ್ರೀಯ ಕಾಂಗ್ರೆಸ್ ಸಮಾವೇಶವಾದ 1924ರ ಐತಿಹಾಸಿಕ ಬೆಳಗಾಂ ಕಾಂಗ್ರೆಸ್ ಅಧಿವೇಶನದ ಚಿತ್ರಣವನ್ನು ಒಳಗೊಂಡಿದೆ. ಬೆಳಗಾಂ ಕಾಂಗ್ರೆಸ್ ಅಧಿವೇಶನದ ರೂಪರೇಷೆಗಳು, ಮಹತ್ವ, ಪರಿಣಾಮಗಳು, ಕರ್ನಾಟಕದ ಸ್ವತಂತ್ರ ಚಳುವಳಿಯಲ್ಲಿ ಈ ಅಧಿವೇಶನದ ಪಾತ್ರವನ್ನು ತಿಳಿಯುವುದು. ಗಾಂಧೀಜಿಯವರ ಅಧ್ಯಕ್ಷತೆ ಹಾಗೂ ಗಾಂಧೀಜಿಯವರ ವಿಚಾರಧಾರೆಗಳು, ಮೂಲ ಮಂತ್ರಗಳು, ಚಳುವಳಿಗಳು ಜನಮಾನಸದ ಮೇಲೆ ಹೇಗೆ ಪ್ರಭಾವ ಬೀರಿದವು. ಈ ಸಮ್ಮೇಳನವು ದೊಡ್ಡಮಟ್ಟದ ಆಂದೋಲನವಾಗಿ ಜಾತಿ ಮತ ಲಿಂಗ ಭೇದವಿಲ್ಲದೆ ರಾಷ್ಟ್ರವ್ಯಾಪಿ ಸ್ವಾತಂತ್ರ್ಯ ಹೋರಾಟಕ್ಕೆ ಜನತೆಗೆ ಹೇಗೆ ಸ್ಪೂರ್ತಿ ನೀಡಿತು, ಎಂಬುದನ್ನು ಅರಿಯುವುದು. ಇದರ ವರ್ಚಸ್ಸು ಬ್ರಿಟಿಷರ ಗಮನವನ್ನು ಸೆಳೆಯಿತು. ಅದುವರೆಗೂ ಕೇವಲ ಬ್ರಾಹ್ಮಣರ ಸಂಘ ಎಂದು ಸೀಮಿತವಾಗಿದ್ದ ರಾಷ್ಟ್ರೀಯ ಕಾಂಗ್ರೆಸ್ ಈ ಅಧಿವೇಶನದಿಂದ ಹೇಗೆ ರಾಷ್ಟ್ರದ ಸಮಗ್ರ ಜನತೆಯನ್ನು ಪ್ರತಿನಿಧಿಸುವ ಸಂಸ್ಥೆಯಾಗಿ ಶಕ್ತಿಯಾಗಿ ಬೆಳೆಯಿತು ಎಂಬುದನ್ನು ಅರಿಯಬಹುದು. ಅಧಿವೇಶನದಲ್ಲಿ ಪಾಲ್ಗೊಂಡ ಅನೇಕ ರಾಷ್ಟ್ರ ನಾಯಕರ ಭಾಷಣಗಳು, ಸಿದ್ಧಾಂತಗಳು, ಹೋರಾಟದ ಹಾದಿ ಜನರನ್ನು ಹೇಗೆ ಹುರಿದುಂಬಿಸಿದವು ಹಾಗೂ ಈ ಅಧಿವೇಶನವೂ ಒಂದು ಐಕ್ಯತಾ ಸಮ್ಮೇಳನವಾಗಿದ್ದು ಇದರಲ್ಲಿ ಕಾಂಗ್ರೆಸ್ನ ಬಣಗಳು ಹಾಗೂ ಸ್ವರಾಜ್ಯ ಪಕ್ಷ ಎಲ್ಲವೂ ಕಾಂಗ್ರೆಸ್ಸಿನಲ್ಲಿ ಲೀನವಾದವು. ಅಲ್ಲದೆ ಇದು ಹಿಂದೂಮುಸ್ಲಿಮ್ ಐಕ್ಯತೆಯನ್ನು ಹಾಗೂ ಹಾಗೂ ಅಸ್ಪೃಶ್ಯತಾ ನಿವಾರಣೆಯನ್ನು ಪ್ರತಿಪಾದಿಸಿತು. ಈ ಲೇಖನವು, ಗಾಂಧೀಜಿಯವರ ಸಾಮೀಪ್ಯ ಕನ್ನಡಿಗರ ಮೇಲೆ ಬೀರಿದ ಪ್ರಭಾವ, ಮೈಸೂರು ಕಾಂಗ್ರೆಸ್ ಸ್ಥಾಪನೆಯ ಮೇಲೆ ಹಾಗೂ ಕರ್ನಾಟಕದ ಏಕೀಕರಣದ ಮೇಲೆ ಬೆಳಗಾಂ ಕಾಂಗ್ರೆಸ್ ಅಧಿವೇಶನದ ಪ್ರಭಾವವನ್ನು ಸಹ ವಿವರಿಸುತ್ತದೆ. ಒಟ್ಟಾರೆಯಾಗಿ ಈ ಸಂಶೋಧನಾ ಲೇಖನವು ಐತಿಹಾಸಿಕ ಬೆಳಗಾಂ ಕಾಂಗ್ರೆಸ್ ಅಧಿವೇಶನದ ಮಹತ್ವವನ್ನು ಎತ್ತಿ ತೋರಿಸುತ್ತದೆ.

Read More »

ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಬೆಳಗಾವಿಯ ಪಾತ್ರ

ಅರುಣ ಚಿ. ಕಲ್ಲೋಳಿಕರ

09 to 15

ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಬೆಳಗಾವಿ ಜಿಲ್ಲೆಯ ಮಹತ್ವದ ಪಾತ್ರವನ್ನು ಈ ಲೇಖನ ವಿವರಿಸುತ್ತದೆ. ಬೆಳಗಾವಿಯು ಬ್ರಿಟಿಷ್ ವಿರೋಧಿ ಹೋರಾಟದ ದಕ್ಷಿಣ ಭಾರತದ ಪ್ರಮುಖ ಕೇಂದ್ರವಾಗಿತ್ತು. ಭಾರತದ ಸ್ವಾತಂತ್ರ್ಯ ಚಳುವಳಿ ಪ್ರಾರಂಭವಾಗುವ ಮೊದಲೇ ಕಿತ್ತೂರು ರಾಣಿ ಚೆನ್ನಮ್ಮಳು ಬ್ರಿಟಿಷರ ವಿರುದ್ಧ ದಂಗೆ ಎದ್ದು ಈ ಭಾಗದ ಜನರಿಗೆ ಸ್ಪೂರ್ತಿ ನೀಡಿದಳು. ಇದರ ಅತ್ಯಂತ ಪ್ರಮುಖ ಅಂಶವೆಂದರೆ, 1924ರಲ್ಲಿ ಮಹಾತ್ಮ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಐತಿಹಾಸಿಕ ಕಾಂಗ್ರೆಸ್ ಅಧಿವೇಶನ. ಈ ಅಧಿವೇಶನವು ಅಸ್ಪೃಶ್ಯತೆ ನಿರ್ಮೂಲನೆ, ಖಾದಿ ಪ್ರಚಾರ, ಮತ್ತು ಸ್ವರಾಜ್ಯದಂತಹ ರಚನಾತ್ಮಕ ಕಾರ್ಯಕ್ರಮಗಳನ್ನು ದೇಶಾದ್ಯಂತ ಕೊಂಡೊಯ್ಯಲು ನಾಂದಿ ಹಾಡಿತು. ಜೊತೆಗೆ, ಬ್ರಾಹ್ಮಣೇತರ ಚಳುವಳಿ ಮತ್ತು ದಲಿತರ ಸಾಮಾಜಿಕ ಸುಧಾರಣಾ ಚಳುವಳಿಗಳಿಗೂ ಬೆಳಗಾವಿ ಕೇಂದ್ರವಾಗಿತ್ತು. ಬೆಳಗಾವಿಯು ಕಾನೂನುಭಂಗ ಮತ್ತು ‘ಭಾರತ ಬಿಟ್ಟು ತೊಲಗಿ’ ಚಳುವಳಿಗಳಲ್ಲೂ ಸಕ್ರಿಯವಾಗಿ ಭಾಗವಹಿಸಿ ಸ್ವಾತಂತ್ರ್ಯಕ್ಕೆ ನಿರ್ಣಾಯಕ ಕೊಡುಗೆ ನೀಡಿದೆ.

Read More »

ರಾಷ್ಟ್ರೀಯ ಚಳವಳಿಯಲ್ಲಿ ಡಾ. ಎಚ್. ನರಸಿಂಹಯ್ಯನವರ ಪಾತ್ರ

ರಾಘವೇಂದ್ರ ಜಿ.ಎನ್.

16 to 20

ಭಾರತದ ರಾಷ್ಟ್ರೀಯ ಹೋರಾಟದಲ್ಲಿ ಕನ್ನಡಿಗರ ಪಾತ್ರ ಅಮೂಲ್ಯವಾದದ್ದು ಮತ್ತು ಅನನ್ಯವಾದದ್ದು. ಈ ದಿಕ್ಕಿನಲ್ಲಿ ಗುರುತಿಸಬಹುದಾದ ಹಲವಾರು ಕನ್ನಡಿಗರು ಅಜರಾಮರರಾಗಿದ್ದಾರೆ. ಅಂತಹವರಲ್ಲಿ ಒಬ್ಬರು ಡಾ. ಹೊಸೂರು ನರಸಿಂಹಯ್ಯನವರು. ಸಮಾಜ ಸೇವಕರು, ಗಾಂಧಿವಾದಿ, ಸರಳಜೀವಿ, ಮಾನವತಾವಾದಿ, ವಿಚಾರವಾದಿ, ಅಧ್ಯಾಪಕರು, ಶಿಕ್ಷಣ ತಜ್ಞರು, ಕರ್ಮಯೋಗಿ, ವಿಜ್ಞಾನ ಕ್ಷೇತ್ರದಲ್ಲಿ ಗಣನೀಯ ಕೊಡುಗೆಯನ್ನು ನೀಡಿದವರು, ಇವೆಲ್ಲಕ್ಕೂ ಮಿಗಿಲಾಗಿ ತಮ್ಮ ಯೌವನದ ಸಂದರ್ಭದಲ್ಲಿ ಸ್ವಾತಂತ್ರ್ಯದ ದೀವಿಗೆ ಪ್ರಜ್ವಲಿಸಲು ತಮ್ಮ ಅಮೂಲ್ಯವಾದ ಜೀವನವನ್ನು ಮುಡುಪಾಗಿಟ್ಟವರು. ಕ್ವಿಟ್ ಇಂಡಿಯಾ ಚಳುವಳಿ ಹಾಗೂ ಮೈಸೂರು ಚಲೋ ಚಳುವಳಿಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ನಾಡಿನ ಬಿಡುಗಡೆಗಾಗಿ ದುಡಿದವರು. ನರಸಿಂಹಯ್ಯನವರು ಪ್ರಜಾಪ್ರಭುತ್ವದ ಮೌಲ್ಯಗಳು ಬೆಳೆಯಲು ತಮ್ಮ ಅಮೂಲ್ಯವಾದ ಜೀವನವನ್ನು ಸವಿಸಿದವರು. ಗಾಂಧೀವಾದಿಯಾಗಿ, ಸರಳ ಸಜ್ಜನಿಕೆಯ ಜೀವನವನ್ನು ಸಮಾಜಕ್ಕೆ ಸಂದೇಶವಾಗಿ ನೀಡಿದವರು. ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ದುಡಿದು, ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದವರು. ಗೌರಿಬಿದನೂರು, ಬಾಗೇಪಲ್ಲಿ, ಬೆಂಗಳೂರು ಮತ್ತು ತಮ್ಮ ಹುಟ್ಟೂರು ಹೊಸೂರಿನಲ್ಲಿ ಶಿಕ್ಷಣ ಸಂಸ್ಥೆಗಳು ಬೆಳೆಯಲು ಕಾರಣಕರ್ತರು. ಬಡ ಕುಟುಂಬದಲ್ಲಿ ಹುಟ್ಟಿ ಅನೇಕ ಕಷ್ಟಗಳನ್ನು ಎದುರಿಸಿ ಅಧ್ಯಯನಶೀಲತೆಯನ್ನು ಬೆಳೆಸಿಕೊಂಡು, ದೇಶಭಕ್ತರಾಗಿ ರಾಷ್ಟ್ರೀಯ ಹೋರಾಟದ ಹಾದಿಯಲ್ಲಿ ನಡೆದು, ಸ್ವಾತಂತ್ರ್ಯಾನಂತರ ಕುಲಪತಿಗಳಾಗಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಒಂದು ಹೊಸ ದೆಸೆಯನ್ನು ಕೊಟ್ಟವರು ಇವರೇ. ಕರ್ನಾಟಕ ವಿಧಾನ ಪರಿಷತ್‌ ಸದಸ್ಯರಾಗಿ ವೈಜ್ಞಾನಿಕ ವಿಚಾರಗಳನ್ನು ಶಾಸನಸಭೆಯಲ್ಲಿ ಚರ್ಚಿಸಿ, ಅವುಗಳ ಅನುಷ್ಠಾನಕ್ಕಾಗಿ ದುಡಿದರು.

Read More »

ದಾವಣಗೆರೆ ಜಿಲ್ಲೆಯಲ್ಲಿ ಸ್ವದೇಶಿ ಚಳುವಳಿಯ ಪ್ರಮುಖ ನೇತಾರರು

ಗಂಗಾಧರ ಪಿ.ಆರ್.

21 to 29

ಬಂಗಾಳ ವಿಭಜನೆಯಿಂದ ಪ್ರೇರಿತವಾದ ಸ್ವದೇಶಿ ಚಳುವಳಿಯು ಕರ್ನಾಟಕದಾದ್ಯಂತ ಹರಡಿ, ದಾವಣಗೆರೆ ಜಿಲ್ಲೆಯಲ್ಲಿ ತೀವ್ರ ಸ್ವರೂಪ ಪಡೆಯಿತು. ಈ ಲೇಖನವು ದಾವಣಗೆರೆ ಜಿಲ್ಲೆಯಲ್ಲಿ ಸ್ವದೇಶಿ ಚಳುವಳಿಯನ್ನು ಮುನ್ನಡೆಸಿದ ಪ್ರಮುಖ ನೇತಾರರ ಪಾತ್ರ ಮತ್ತು ಕೊಡುಗೆಗಳನ್ನು ಚರ್ಚಿಸುತ್ತದೆ. ಹರ್ಡೆಕರ ಮಂಜಪ್ಪನವರ “ಧನುರ್ಧಾರಿ” ಪತ್ರಿಕೆಯ ಪ್ರಭಾವ, ಖಾದಿ ಪ್ರಚಾರ ಮತ್ತು ವಿದೇಶಿ ವಸ್ತುಗಳ ಬಹಿಷ್ಕಾರ ಮುಖ್ಯ ಚಟುವಟಿಕೆಗಳಾಗಿದ್ದವು. ಕೊಟಿಗಿ ಸಿದ್ಧಲಿಂಗಪ್ಪ, ಬಳ್ಳಾರಿ ಸಿದ್ದಮ್ಮ, ಖಾದಿ ಸಿದ್ದಪ್ಪ, ಕಾಸಲ ಶ್ರೀನಿವಾಸ ಶೆಟ್ಟಿ, ಮಾಗಾನಹಳ್ಳಿ ಬಸವರಾಜಪ್ಪ ಮತ್ತು ಇಜಾರಿ ವಸುಪಾಲಪ್ಪ ಪ್ರಮುಖ ನಾಯಕರು. ಇವರು ಅರಣ್ಯ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳುವಳಿಗಳಲ್ಲೂ ಭಾಗವಹಿಸಿದರು. ಮುಖ್ಯವಾಗಿ ಬಳ್ಳಾರಿ ಸಿದ್ದಮ್ಮನವರ ನಾಯಕತ್ವದಲ್ಲಿ ಚಳುವಳಿ ತೀವ್ರಗೊಂಡು, ಜಿಲ್ಲೆಯಾದ್ಯಂತ ಸ್ವಾತಂತ್ರ್ಯದ ಉತ್ಸಾಹ ಮತ್ತು ಗಾಂಧೀಜಿಯವರ ತತ್ವಗಳ ಪ್ರಚಾರಕ್ಕೆ ನಾಂದಿಯಾಯಿತು.

Read More »

ಬ್ರಿಟೀಷರ ವಿರುದ್ಧ ಹಲಗಲಿ ಬೇಡ ಜನಾಂಗದ ಹೋರಾಟ

ಎಲ್.ಎಂ. ಕಲ್ಯಾಣಶೆಟ್ಟಿ

30 to 37

ಸ್ವಾತಂತ್ರ್ಯ ಹೋರಾಟದಲ್ಲಿ ಶ್ರೇಷ್ಠ–ಕನಿಷ್ಟ ಎನ್ನುವ ಭೇದಭಾವವನ್ನಳಿದು ಭಾಗವಹಿಸಿದವರೆಲ್ಲ ಮಹಾತ್ಮರಾಗದಿದ್ದರೂ ಹುತಾತ್ಮರಾಗಿದ್ದಾರೆ. ವೀರ ಪರಂಪರೆಯನ್ನು ವಿಶಿಷ್ಟವಾಗಿ ಬೆಳೆಸಿಕೊಟ್ಟ ನಾಡು ಈ ಭರತಭೂಮಿ. 1820 ರಿಂದ 1858ರ ಕಾಲಘಟ್ಟ ಭಾರತದ ಇತಿಹಾಸದಲ್ಲಿ ಅತೀ ಪ್ರಮುಖ ಘಟ್ಟ. ಇದೇ ಅವಧಿಯಲ್ಲಿ ಪ್ರಥಮ ಸಂಗ್ರಾಮದಂತಹ ಪ್ರಮುಖವಾದ ಘಟನೆಗಳು ಸಂಭವಿಸಿದವು. ಭಾರತ ದೇಶದ ಬೇರೆ ಬೇರೆ ಸ್ಥಳಗಳಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಹತ್ತಾರು ಪ್ರದೇಶದಲ್ಲಿ ಬ್ರಿಟೀಷರ ವಿರುದ್ಧ ಬಂಡಾಯ, ಚಳುವಳಿಗಳು, ಸಂಘರ್ಷಗಳು ನಡೆದುಹೋದವು. ಅವುಗಳಲ್ಲಿ ಕರ್ನಾಟಕದ ಬದಾಮಿ, ಕಿತ್ತೂರು, ಕೊಡಗು, ನರಗುಂದ, ಮುಂಡರಗಿ, ಸುರಪುರಗಳಲ್ಲಿ ಬ್ರಿಟೀಷರ ನೀತಿಗಳ ವಿರುದ್ಧ ದೊಡ್ಡ ಮಟ್ಟದ ಹೋರಾಟಗಳು ನಡೆದವು. ಕೆಲವು ಹೋರಾಟಗಳು ಕ್ರಾಂತಿಕಾರಿ ಸ್ವರೂಪದ್ದಾಗಿದ್ದವು. ಇವೆಲ್ಲವುಗಳಿಗಿಂತಲೂ ಹಲಗಲಿಯ ಬೇಡರ ಹೋರಾಟ ಚಿರಸ್ಮರಣೀಯ. ಏಕೆಂದರೆ ಬ್ರಿಟೀಷರ ಶಸ್ತ್ರಾಸ್ತ್ರ ಕಾಯಿದೆ ವಿರುದ್ಧ ಶೂರತನದಿಂದ ಹೋರಾಟ ನಡೆಸಿದರು. ಬ್ರಿಟೀಷರಿಗೆ ತಮ್ಮ ಶಸ್ತ್ರಗಳನ್ನ ಒಪ್ಪಿಸಲು ನಿರಾಕರಿಸಿ ತಮ್ಮ ಜೀವಗಳನ್ನೇ ಪಣಕ್ಕಿಟ್ಟು ಹೋರಾಡಿದ ಘಟನೆ ಇತಿಹಾಸದ ಪುಟದಲ್ಲಿ ಸ್ಮರಣೀಯವಾದುದು. ಯಾರ ನೆರವೂ ಇಲ್ಲದೆ ಹೋರಾಡಿ ನೂರಾರು ಜನ ಪ್ರಾಣ ತೆತ್ತರು. ಬೇಟೆಯಾಡಿಕೊಂಡು ತಮ್ಮ ಜೀವನ ನಡೆಸುತ್ತಿದ್ದ ಜನರ ಮೇಲೆ ಆಕ್ರಮಣ ನಡೆಸಿದ ಬ್ರಿಟೀಷರ ಕೃತ್ಯವನ್ನು ಯಾರೂ ಕ್ಷಮಿಸಲಾರರು.

Read More »

ಹಾವೇರಿ ಜಿಲ್ಲೆಯಲ್ಲಿ ಅರಣ್ಯ ಸತ್ಯಾಗ್ರಹ

ಶಿವರಾಜ ಹೂಗಾರ

38 to 42

ಹಾವೇರಿ ಜಿಲ್ಲೆಯ ಅರಣ್ಯ ಸತ್ಯಾಗ್ರಹವು ಭಾರತದ ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಬ್ರಿಟಿಷರ ಕಠಿಣ ಅರಣ್ಯ ಕಾನೂನು ಮತ್ತು ಗೋಮಾಳ ಮೇಲಿನ ತೆರಿಗೆಯ ವಿರುದ್ಧ ನಡೆದ ಒಂದು ಪ್ರಮುಖ ಅಹಿಂಸಾತ್ಮಕ ಚಳುವಳಿಯಾಗಿತ್ತು. ಶಿಗ್ಗಾವಿ, ಹಾನಗಲ್ಲ, ಬ್ಯಾಡಗಿ ಮತ್ತು ಹಿರೇಕೆರೂರು ತಾಲೂಕುಗಳಲ್ಲಿ ಇದು ವ್ಯಾಪಿಸಿತ್ತು. ಆಲದಕಟ್ಟಿ, ಕಣ್ಣೂರು, ಸಂಗೂರು ಮುಂತಾದ ಗ್ರಾಮಗಳಲ್ಲಿ ಜನರು ‘ಹುಲಬನ್ನಿ ಲೀಲಾವ’ (ಗೋಮಾಳ ತೆರಿಗೆ) ನಿರಾಕರಿಸಿದರು. ಬಂಕಾಪುರದಲ್ಲಿ ಸೇಂದಿ ಗಿಡ ಕಡಿಯುವ ಕಾರ್ಯಕ್ರಮ ಹಾಗೂ ನೀರಲಗಿ ಗ್ರಾಮದ ಬಳಿ ಮರಗಳ ಸಂಹಾರ ನಡೆಯಿತು. ಮುದವೀಡು ಕೃಷ್ಣರಾಯರು ಬಂಕಾಪುರ ಮೆರವಣಿಗೆಯ ನೇತೃತ್ವ ವಹಿಸಿದ್ದರು. ಹಿರೇಕೆರೂರು ತಾಲೂಕಿನ ನಾಗವಂದ ಗ್ರಾಮದ ಹಾರಿಕಟ್ಟಿ ಜಂಗಲ್‌ನಲ್ಲಿ ಕಾನೂನು ಭಂಗ ಮತ್ತು ಅರಣ್ಯ ನಾಶ ಮಾಡಲಾಯಿತು. ಈ ಸತ್ಯಾಗ್ರಹವು ಸ್ಥಳೀಯ ಜನರ ಹಕ್ಕು, ಸ್ವಾಭಿಮಾನ ಮತ್ತು ಪರಿಸರ ಪ್ರಜ್ಞೆಯನ್ನು ಎತ್ತಿ ಹಿಡಿಯಿತು.

Read More »

ಬೆಳಗಾವಿ ಪ್ರದೇಶದ ಕಾನೂನುಭಂಗ ಚಳುವಳಿ, ಸ್ವದೇಶಿ ಕರ ನಿರಾಕರಣ ಚಳುವಳಿ ಹಾಗೂ ಆರ್ಥಿಕ ಪರಿಣಾಮಗಳು

ಜಯಾನಂದ ವಿಠ್ಠಲ ಹಟ್ಟಿ, ಮಂಜುನಾಥ ತಲ್ಲೂರ

43 to 48

ಪ್ರಸ್ತುತ ಲೇಖನವು ಮುಂಬೈ-ಕರ್ನಾಟಕ ಪ್ರದೇಶದಲ್ಲಿ, ವಿಶೇಷವಾಗಿ ಬೆಳಗಾವಿ ವಿಭಾಗದಲ್ಲಿ ಸ್ವಾತಂತ್ರ್ಯ ಚಳುವಳಿಯ ಮಹತ್ವದ ಪಾತ್ರವನ್ನು ವಿಶ್ಲೇಷಿಸುತ್ತದೆ. 1924ರ ಗಾಂಧೀಜಿಯವರ ಅಧ್ಯಕ್ಷತೆಯ ಬೆಳಗಾವಿ ಕಾಂಗ್ರೆಸ್ ಅಧಿವೇಶನವು ಚಳುವಳಿಗೆ ಒಂದು ದಿಕ್ಸೂಚಿಯಾಯಿತು. ಇದರ ನಂತರ, ಈ ಪ್ರದೇಶದಲ್ಲಿ ಕಾನೂನುಭಂಗ ಚಳುವಳಿ (ಉಪ್ಪಿನ ಸತ್ಯಾಗ್ರಹ), ಕರ ನಿರಾಕರಣ ಚಳುವಳಿ, ಮತ್ತು ಸ್ವದೇಶಿ ಚಳುವಳಿಗಳು ತೀವ್ರಗೊಂಡವು. ಅಂಕೋಲಾ ಉಪ್ಪಿನ ಸತ್ಯಾಗ್ರಹ, ಅರಣ್ಯ ಸತ್ಯಾಗ್ರಹ ಮತ್ತು ವಿದೇಶಿ ವಸ್ತುಗಳ ಬಹಿಷ್ಕಾರಗಳು ಬ್ರಿಟಿಷರ ಆರ್ಥಿಕತೆಗೆ ದೊಡ್ಡ ಪೆಟ್ಟು ನೀಡಿದವು. ಸ್ವದೇಶಿ ಮತ್ತು ಖಾದಿ ಪ್ರಚಾರದಿಂದ ದೇಶೀಯ ಉದ್ಯಮಗಳು, ಗುಡಿ ಕೈಗಾರಿಕೆಗಳು ಬಲಗೊಂಡವು. ಈ ಎಲ್ಲಾ ಚಳುವಳಿಗಳು ಜನಸಾಮಾನ್ಯರನ್ನು ಸಂಘಟಿಸಿ, ಜಾಗೃತಿ ಮೂಡಿಸಿ, ದೇಶೀಯ ಆರ್ಥಿಕತೆಯನ್ನು ಬಲಪಡಿಸಿ, ಅಂತಿಮವಾಗಿ ಬ್ರಿಟಿಷರು ದೇಶ ಬಿಟ್ಟು ಹೋಗಲು ಪ್ರಮುಖ ಪ್ರೇರಣೆಯಾದವು.

Read More »

ಸ್ವಾತಂತ್ರ್ಯ ಹೋರಾಟಗಾರ ಲಕ್ಷ್ಮಣ ಡಾಂಗೆ

ವಿರೂಪಾಕ್ಷಿ ಎನ್.ಬಿ.

49 to 57

ಅಣ್ಣಪ್ಪ ಡಾಂಗೆ ಅವರು ಬೆಳಗಾವಿಯ ನೆಲದಮರೆಯ ನಿಧನದಂತೆ ಜೀವಿಸಿದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರು. ರಾಯಭಾಗ ತಾಲೂಕಿನ ಇಟನಾಳ ಗ್ರಾಮದಲ್ಲಿ ಜನಿಸಿದ ಅವರು ಸ್ವಾತಂತ್ರ್ಯ ಹೋರಾಟದ ಬರೆಹಗಳನ್ನು ಓದಿ ಪ್ರೇರಿತರಾಗಿ ಏಳನೆಯ ತರಗತಿಯಲ್ಲಿ ಓದುತ್ತಿರುವಾಗಲೇ ರಾಷ್ಟ್ರೀಯ ಚಳುವಳಿಗಳಲ್ಲಿ ಭಾಗವಹಿಸಿ, ರಾಷ್ಟ್ರೀಯ ಕಾಂಗ್ರೆಸ್ಸಿನ ಸಕ್ರಿಯ ಕಾರ್ಯಕರ್ತರಾದರು. ಮಹಾತ್ಮ ಗಾಂಧಿ, ಬಾಲಗಂಗಾಧರ ತಿಲಕ್, ಸುಭಾಸ್ ಚಂದ್ರಬೋಸ್ ಮುಂತಾದ ಮಹನೀಯರ ಆದರ್ಶ ಜೀವನವೇ ಡಾಂಗೆ ಅವರಿಗೆ ಮಾರ್ಗದರ್ಶಿಯಾಯಿತು. ಹಿಡಕಲ್ಲು ಗ್ರಾಮದಲ್ಲಿ ರಾಮಪ್ಪ ಕಂಕಣವಾಡಿ ಮತ್ತು ತರುಣ ಹೋರಾಟಗಾರರಿಂದ ಸಂಘಟಿತಗೊಂಡ ಚಳಿವಳಿಕಾರರ ಗುಂಪನ್ನು ಸೇರಿ ಆ ಹೋರಾಟಗಾರರು ರೂಪಿಸಿದ ಎಲ್ಲಾ ಸ್ವಾತಂತ್ರ್ಯ ಚಳುವಳಿಗಳಲ್ಲಿ ಭಾಗವಹಿಸಿದರು. ಹಳ್ಳಿಗಳನ್ನು ಸುತ್ತಿ ಜನರಲ್ಲಿ ಸ್ವಾತಂತ್ರ್ಯ ಹೋರಾಟದ ಜಾಗೃತಿ ಮೂಡಿಸುತ್ತಿದ್ದರು. ಚಳುವಳಿಗಾರರ ಗುಂಪಿನ ಜೊತೆಗೂಡಿ ಮಹಾಲಿಂಗಪೂರ ಪೋಸ್ಟ್ ಆಫೀಸನ್ನು ಸುಟ್ಟು ಹಾಕುವ, ಕುಡಚಿಜಮಖಂಡಿ ರಸ್ತೆಯ ಹಾರೂಗೇರಿ ಕ್ರಾಸ್ ಮತ್ತು ಯಬರಟ್ಟಿ ಮಧ್ಯದ ಟೆಲಿಗ್ರಾಫ್ ತಂತಿಯನ್ನು ಕತ್ತರಿಸುವ, ಯಲ್ಪಾರಟ್ಟಿ ಬಂಗಲೆ, ಸುಲದಾಳ ರೇಲ್ವೇ ಸ್ಟೇಷನ್ ಹಾಗೂ ರಾಯಬಾಗ ರೇಲ್ವೇ ಸ್ಟೇಷನ್ ಸುಡುವ ಕಾರ್ಯದಲ್ಲಿಯೂ ಭಾಗಿಗಳಾಗಿದ್ದರು. ಹಾಗಾಗಿ ಸಾಕಷ್ಟು ಬಾರಿ ಲಕ್ಷ್ಮಣ ಅಣ್ಣಪ್ಪ ಡಾಂಗೆ ಅವರು ಸೆರೆಮನೆ ವಾಸ ಅನುಭವಿಸಿದರು.

Read More »

ಮೌನದಿಂದ ಮುಂಚೂಣಿಗೆ ಸ್ವಾತಂತ್ರ್ಯ ಹೋರಾಟದ ಪಯಣದಲ್ಲಿ ಬೆಳಗಾವಿ ಜಿಲ್ಲೆಯ ಪಾತ್ರ

ನಾಗರಾಜ ಎಸ್. ಬೆಳಗಾಂವಕರ, ಗಣಪತಿ ಗೌಡ ಎಸ್.

58 to 68

ಭಾರತದ ಸ್ವಾತಂತ್ರ್ಯ ಚಳುವಳಿಯು ದೇಶದ ಪ್ರತಿಯೊಂದು ಭಾಗದಲ್ಲೂ ತನ್ನದೇ ಆದ ವಿಶಿಷ್ಟ ರೂಪದಲ್ಲಿ ಬೆಳವಣಿಗೆಯಾಯಿತು. ಕರ್ನಾಟಕವೂ ಈ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದು, ಅದರೊಳಗಿನ ಬೆಳಗಾವಿ ಜಿಲ್ಲೆಯು ರಾಷ್ಟ್ರ ಭಾವನೆ, ಕ್ರಾಂತಿಸ್ಪೂರ್ತಿ ಮತ್ತು ಜನಜಾಗೃತಿಯ ಕೇಂದ್ರವಾಗಿತ್ತು. ಮಹಿಳೆಯರಿಂದ ವಿದ್ಯಾರ್ಥಿಗಳವರೆಗೆ, ರೈತರಿಂದ ಕಾರ್ಮಿಕರವರೆಗೆ ಎಲ್ಲರೂ ಸ್ವಾತಂತ್ರ್ಯದ ಕನಸಿಗಾಗಿ ತ್ಯಾಗಮಯ ಹೋರಾಟ ನಡೆಸಿದರು. ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಕರ್ನಾಟಕದ ವಿಶೇಷವಾಗಿ ಬೆಳಗಾವಿ ಜಿಲ್ಲೆ ಅತ್ಯಂತ ಪ್ರಮುಖ ಪಾತ್ರವಹಿಸಿದೆ. 1757 ಮತ್ತು 1764ರ ಪ್ಲಾಸಿ ಮತ್ತು ಬಕ್ಸಾರ್ ಕದನಗಳ ಪರಿಣಾಮದಿಂದ ಬ್ರಿಟಿಷ್ ಸಾಮ್ರಾಜ್ಯ ಭಾರತದಲ್ಲಿ ಭದ್ರವಾಗಿ ನೆಲೆಯೂರಿತು. ನಂತರ ವಿವಿಧ ಕಾಯ್ದೆಗಳ ಮೂಲಕ ಭಾರತೀಯರನ್ನು ಗುಲಾಮರನ್ನಾಗಿಸಿದ್ದನ್ನು ಕಾಣುತ್ತೇವೆ. ಇಂತಹ ಪರಿಸ್ಥಿತಿಯಲ್ಲಿ 1857ರಲ್ಲಿ ಜರುಗಿದ ದಂಗೆಯು ಭಾರತೀಯರಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹೊತ್ತಿಸಿದ್ದನ್ನು ಕಾಣುತ್ತೇವೆ. ಈ 1857ರ ದಂಗೆಯು ವಿವಿಧ ಸ್ತರಗಳಲ್ಲಿ ಬದಲಾಗುತ್ತಾ ದೇಶಾದ್ಯಂತ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ದದ ಹೋರಾಟಕ್ಕೆ ಪ್ರೇರಣಾ ಶಕ್ತಿಯಾಗಿ ಮಾರ್ಪಟ್ಟಿತು. ಬ್ರಿಟಿಷರ ಶೋಷಣಾತ್ಮಕ ಆಡಳಿತದ ವಿರುದ್ಧ ಜನರಲ್ಲಿ ಹುಟ್ಟಿದ ಅಸಮಾಧಾನ, ಅಹಿಂಸಾ ಮತ್ತು ಸತ್ಯಾಗ್ರಹದ ತತ್ವಗಳಿಂದ ಪ್ರೇರಿತವಾಗಿ ಸಂಘಟಿತ ಚಳುವಳಿಯಾಗಿ ರೂಪಾಂತರಗೊಂಡಿತು. ಬೆಳಗಾವಿ ಜಿಲ್ಲೆಯು ರಾಜಕೀಯ ಹಾಗೂ ಸಾಮಾಜಿಕ ಜಾಗೃತಿಯ ಕೇಂದ್ರವಾಗಿದ್ದು, ಅಸಹಕಾರ ಚಳುವಳಿ, ಖಾದಿ ಚಳುವಳಿ, ಉಪ್ಪಿನ ಸತ್ಯಾಗ್ರಹ ಮತ್ತು ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿತು. ಬೆಳಗಾವಿ ಜಿಲ್ಲೆಯ ಮಹಿಳೆಯರು, ಸ್ವಾತಂತ್ರ್ಯ ಹೋರಾಟಗಾರರು ರಾಷ್ಟ್ರಸೇವೆಯಲ್ಲಿ ಪ್ರಮುಖ ಪಾತ್ರವಹಿಸಿ ಖಾದಿ ತಯಾರಿಕೆ, ಸಭೆ ಸಮಾವೇಶಗಳಲ್ಲಿ ಭಾಗವಹಿಸುವ ಮೂಲಕ ಸಮಾಜದ ಪರಿವರ್ತನೆಗೆ ಕಾರಣರಾದರು. ಈ ಲೇಖನವು ಬೆಳಗಾವಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ಪಯಣವನ್ನು ಪರಿಚಯಿಸಿ, ಅದರ ಯಶಸ್ಸಿಗೆ ಕಾರಣರಾದ ಹೋರಾಟಗಾರರನ್ನು ಪರಿಚಯಿಸಿ, ಇಂದಿನ ಅವರ ಪ್ರಸ್ತುತತೆಯನ್ನು ಸ್ಮರಿಸುವುದಾಗಿದೆ.

Read More »

ಹಿರೇಕೆರೂರ ಪ್ರದೇಶದಲ್ಲಿ ಕರ ನಿರಾಕರಣೆ ಆಂದೋಲನ

ನಾಗರಾಜ ತಳವಾರ

69 to 74

ಈ ಲೇಖನವು ಮುಂಬೈ-ಕರ್ನಾಟಕದ ಹಿರೇಕೆರೂರ ಪ್ರದೇಶದಲ್ಲಿ 1931 ರಲ್ಲಿ ನಡೆದ ಕರ ನಿರಾಕರಣೆ ಆಂದೋಲನದ (ಕರಬಂದಿ) ಮಹತ್ವವನ್ನು ವಿಶ್ಲೇಷಿಸುತ್ತದೆ. 1929-30ರ ತೀವ್ರ ಬರಗಾಲದಿಂದ ರೈತರು ಕಂಗೆಟ್ಟಿದ್ದ ಸಂದರ್ಭದಲ್ಲಿ, ಬಾರಡೋಲಿ ಮತ್ತು ಕಾನೂನುಭಂಗ ಚಳುವಳಿಯಿಂದ ಸ್ಫೂರ್ತಿಗೊಂಡು ಈ ಹೋರಾಟ ಪ್ರಾರಂಭವಾಯಿತು. ಕಚವಿಯ ವೀರನಗೌಡ ಪಾಟೀಲರು ಮತ್ತು ತಿ.ರು. ನೇಸ್ವಿ ಅವರ ನಾಯಕತ್ವದಲ್ಲಿ ಹಂಸಭಾವಿಯಲ್ಲಿ ರೈತ ಪರಿಷತ್ತು ಸೇರಿ ಕಂದಾಯ ಕಟ್ಟದಿರುವ ನಿರ್ಣಯ ಕೈಗೊಂಡಿತು. ಚಳುವಳಿಯು ಉಗ್ರ ಸ್ವರೂಪ ಪಡೆದು ದೇಶದ ಗಮನ ಸೆಳೆಯಿತು. ಸರಕಾರವು ದಬ್ಬಾಳಿಕೆ ನಡೆಸಿದರೂ, ರೈತರ ಅಹಿಂಸಾತ್ಮಕ ಪ್ರತಿರೋಧದಿಂದ ಸರ್ಕಾರವು ಒಪ್ಪಂದಕ್ಕೆ ಬರಲು ಒತ್ತಾಯಿಸಲ್ಪಟ್ಟಿತು. ಇದರ ಫಲವಾಗಿ, 46 ಸಾವಿರ ರೂಪಾಯಿಗಳ ನೀರ ಸಾರಿಗೆ ಸೂಟ್ ಸೇರಿದಂತೆ ಭಾರಿ ಮೊತ್ತದ ಕಂದಾಯವನ್ನು ರದ್ದುಗೊಳಿಸಲಾಯಿತು. ಈ ಯಶಸ್ವಿ ಹೋರಾಟಕ್ಕಾಗಿ ವೀರನಗೌಡರು ‘ಸರದಾರ’ ಎಂಬ ಬಿರುದನ್ನು ಪಡೆದರು. ಇದು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಿರೇಕೆರೂರನ ಪಾತ್ರವನ್ನು ದಾಖಲಿಸುತ್ತದೆ.

Read More »

ಕರ್ನಾಟಕ ಸ್ವಾತಂತ್ರ್ಯ ಚಳುವಳಿಯಲ್ಲಿ ರೈತ, ಸಾಮಾನ್ಯ ಜನರು ಮತ್ತು ಕಾರ್ಮಿಕ ವರ್ಗದ ಪಾತ್ರ

ಪದ್ಮಾವತಿ ವಿ.

75 to 83

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ರೈತರು, ಕಾರ್ಮಿಕರು ಮತ್ತು ಸಾಮಾನ್ಯ ಜನರು ಮಹತ್ವಪೂರ್ಣ ಪಾತ್ರ ವಹಿಸಿದ್ದರು. ರಾಷ್ಟ್ರಮಟ್ಟದ ಚಳುವಳಿಗಳಿಗಿಂತ ಭಿನ್ನವಾಗಿ, ಕರ್ನಾಟಕದಲ್ಲಿ ಈ ಹೋರಾಟಗಳು ಹೆಚ್ಚು ಸ್ಥಳೀಯ ಸಮಸ್ಯೆಗಳ ಮೇಲೆ ಕೇಂದ್ರೀಕೃತವಾಗಿದ್ದು, ವಸಾಹತುಶಾಹಿ ನೀತಿಗಳ ವಿರುದ್ಧ ಹಾಗೂ ಶೋಷಕ ಭೂಮಾಲೀಕರು ಮತ್ತು ಲೇವಾದೇವಿದಾರರ ವಿರುದ್ಧ ನಡೆದ ಹೋರಾಟಗಳಾಗಿದ್ದವು. ಹೆಚ್ಚಿದ ಭೂಕಂದಾಯ, ಅಸ್ಥಿರತೆ, ಅಕ್ರಮ ಹೊರಹಾಕುವಿಕೆ ಹಾಗೂ ಶೋಷಣೆಯ ಕಾರ್ಮಿಕ ಪರಿಸ್ಥಿತಿಗಳನ್ನು ಪ್ರಶ್ನಿಸುವ ಮೂಲಕ ಇವರು ಸ್ವಾತಂತ್ರ್ಯ ಚಳುವಳಿಗೆ ಮಹತ್ವದ ಶಕ್ತಿಯನ್ನು ಒದಗಿಸಿದರು.
ಗ್ರಾಮೀಣ ಕರ್ನಾಟಕದಲ್ಲಿ ರೈತರು ಈ ಹೋರಾಟದ ನಿಜವಾದ ಬೆನ್ನೆಲುಬಾಗಿದ್ದರು. ಅವರು ಶತಮಾನಗಳ ಕಾಲ ದಬ್ಬಾಳಿಕೆ ಮತ್ತು ಅನ್ಯಾಯದೊಳಗೆ ಜೀವನವನ್ನು ನಡೆಸಿಕೊಂಡು ಬಂದು, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆಡಳಿತಾತ್ಮಕವಾಗಿ ಹಿಮ್ಮೆಟ್ಟಿಸಲ್ಪಟ್ಟ ವರ್ಗದವರಾಗಿದ್ದರು. ದೇಶಕ್ಕೆ ಅನ್ನ ಕೊಡುವ ಈ ರೈತ ಸಮುದಾಯವನ್ನು ‘ಅನಪೇಕ್ಷಿತ’, ‘ಅವಿದ್ಯಾವಂತ’, ‘ನಿಷ್ಪ್ರಯೋಜಕ’ ಎಂಬ ತಪ್ಪು ಕಲ್ಪನೆಗಳ ಮೂಲಕ ಕಡೆಗಣಿಸಲಾಯಿತು. ಅಕ್ಷರಜ್ಞಾನದ ಕೊರತೆ ಮತ್ತು ಆಡಳಿತಾತ್ಮಕ ಪದವಿಗಳಿಂದ ದೂರವಿರುವ ಪರಿಸ್ಥಿತಿಯು ಅವರಿಗೆ ಅನ್ಯಾಯ ಹಾಗೂ ಅವಮಾನವನ್ನುಂಟುಮಾಡಿತು.
ಆದರೆ, ಈ ಶೋಷಣೆಯೇ ಅವರೊಳಗೆ ಹೊಸ ಜಾಗೃತಿಯನ್ನು ತರಲು ಕಾರಣವಾಯಿತು. ತಮ್ಮ ಹಕ್ಕುಗಳು ಮತ್ತು ಮಾನವೀಯತೆಗಾಗಿ ಹೋರಾಡಬೇಕೆಂಬ ಅರಿವು ಮೂಡಿತು. ಅನೇಕ ಪೀಳಿಗೆಗಳಿಂದ ತಲೆಬಾಗಿದ್ದ ರೈತನು ಮೊದಲ ಬಾರಿಗೆ ತಲೆಯೆತ್ತಿ ಮಾತನಾಡಲು, ಹೋರಾಡಲು ಪ್ರಾರಂಭಿಸಿದನು. ಈ ಕ್ರಿಯಾಶೀಲತೆ ಮಾತ್ರವಲ್ಲದೆ, ಶೋಷಿತ ವರ್ಗಗಳ ರಾಜಕೀಯೀಕರಣಕ್ಕೂ ಇದು ದಾರಿ ಮಾಡಿಕೊಟ್ಟಿತು. ಈ ಲೇಖನವು ಅನುಷಂಗಿಕ ಅಥವಾ ದ್ವಿತೀಯ ಮೂಲವನ್ನು ಆಧರಿಸಿದ್ದು, ಕರ್ನಾಟಕದ ರೈತರು, ಸಾಮಾನ್ಯ ವರ್ಗದ ಜನರು ಮತ್ತು ಶ್ರಮಜೀವಿಗಳ ಶೋಷಿತ ಸ್ಥಿತಿಯಿಂದ ಸಂಘಟಿತ ಹೋರಾಟದವರೆಗೆ ನಡೆದ ಪರಿವರ್ತನೆಗೆ ಹಾಗೂ ಅವರು ಭಾರತದ ಸ್ವಾತಂತ್ರ್ಯ ಚಳುವಳಿಗೆ ನೀಡಿದ ಪ್ರಮುಖ ಕೊಡುಗೆಗೆ ಬೆಳಕು ಚೆಲ್ಲುತ್ತದೆ.

Read More »

ಮೈಸೂರು ಕಾಂಗ್ರೆಸ್‌ನಲ್ಲಿ ಕಡಿದಾಳ್ ಮಂಜಪ್ಪನವರ ಪಾತ್ರ

ಪ್ರವೀಣ್ ಎಸ್.

84 to 90

ಕಡಿದಾಳ್ ಮಂಜಪ್ಪನವರು ‘ಮೈಸೂರಿನ ಗಾಂಧಿ’ ಎಂದು ಪ್ರಸಿದ್ಧರಾಗಿದ್ದು, ಸತ್ಯ, ಅಹಿಂಸೆ ಮತ್ತು ಸತ್ಯಾಗ್ರಹದ ಗಾಂಧಿ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಆರಂಭದಲ್ಲಿ ಬಡತನದಲ್ಲಿದ್ದರೂ ಉನ್ನತ ಶಿಕ್ಷಣ ಪಡೆದು ವಕೀಲ ವೃತ್ತಿ ಆರಂಭಿಸಿದರು. ಅವರು ಮೈಸೂರು ಕಾಂಗ್ರೆಸ್‌ನ ಸದಸ್ಯರಾಗಿ 1937ರಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ನ ಮೊದಲ ಕಾರ್ಯದರ್ಶಿಯಾದರು. ಪ್ರಜಾಪಕ್ಷಗಳನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸುವ ಮೂಲಕ ಸಂಸ್ಥೆಯನ್ನು ಬಲಪಡಿಸುವಲ್ಲಿ ಹಾಗೂ ಜವಾಬ್ದಾರಿಯುತ ಸರ್ಕಾರದ ಸ್ಥಾಪನೆಗಾಗಿ ನಡೆದ ಶಿವಪುರ ಸಮಾವೇಶ ಮತ್ತು ಅರಣ್ಯ ಸತ್ಯಾಗ್ರಹದಲ್ಲಿ ಪ್ರಮುಖ ಪಾತ್ರ ವಹಿಸಿದರು. ಶಾಸಕರಾಗಿ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದರು. ಗೇಣಿದಾರರ ಕುಟುಂಬದಿಂದ ಬಂದ ಇವರು ಗೇಣಿದಾರರ ಸಂಘ ಮತ್ತು ರೈತ ಸಂಘಗಳನ್ನು ಸ್ಥಾಪಿಸಿ, ಅಂತಿಮವಾಗಿ ಕರ್ನಾಟಕದಲ್ಲಿ ಭೂಸುಧಾರಣೆಗೆ ಅಡಿಪಾಯ ಹಾಕಿದರು. ರಾಜಕಾರಣಿಗಳು ಪ್ರಾಮಾಣಿಕರಾಗಿರಬೇಕು ಎಂದು ಪ್ರತಿಪಾದಿಸಿದ ಮಂಜಪ್ಪನವರು ಜನಸೇವೆಗಾಗಿಯೇ ತಮ್ಮ ಅಧಿಕಾರವನ್ನು ಬಳಸಿದರು.

Read More »

ಬೆಳಗಾವಿ ಪ್ರದೇಶದ ಕಾನೂನುಭಂಗ ಚಳುವಳಿ, ಸ್ವದೇಶಿ, ಕರ ನಿರಾಕರಣ ಚಳುವಳಿ ಹಾಗೂ ಪರಿಣಾಮಗಳು

ಶ್ರೀಮತಿ ಪ್ರಿಯಾಂಕಾ ಜೆ. ಕಲ್ಲೋಳಿಕರ

91 to 96

ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಬೆಳಗಾವಿ ಪ್ರದೇಶದ ಪ್ರಮುಖ ಪಾತ್ರವನ್ನು ಈ ಪ್ರಬಂಧವು ವಿಶ್ಲೇಷಿಸುತ್ತದೆ. 1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದು, ಅಲ್ಲಿ ಕರೆ ನೀಡಿದ ಕಾನೂನುಭಂಗ, ಸ್ವದೇಶಿ ಮತ್ತು ರಚನಾತ್ಮಕ ಕಾರ್ಯಕ್ರಮಗಳು ಈ ಭಾಗದಲ್ಲಿ ಚಳುವಳಿಯನ್ನು ತೀವ್ರಗೊಳಿಸಿದವು. ಬೆಳಗಾವಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಉಪ್ಪಿನ ಸತ್ಯಾಗ್ರಹ, ಕರ ನಿರಾಕರಣೆ, ಅರಣ್ಯ ಸತ್ಯಾಗ್ರಹ ಮತ್ತು ವಿದೇಶಿ ವಸ್ತುಗಳ ಬಹಿಷ್ಕಾರ ತೀವ್ರ ಸ್ವರೂಪ ಪಡೆದವು. ಖಾದಿ ಪ್ರಚಾರ ಮತ್ತು ಕೈಗಾರಿಕೆಗಳ ಸ್ಥಾಪನೆಯಿಂದ ಆರ್ಥಿಕ ಸಬಲೀಕರಣವಾಯಿತು. ಈ ಚಳುವಳಿಗಳ ಪರಿಣಾಮವಾಗಿ ಬ್ರಿಟಿಷರಿಗೆ ಆರ್ಥಿಕ ನಷ್ಟವುಂಟಾಗಿ, ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಪ್ರಮುಖ ಬಲ ದೊರೆಯಿತು.

Read More »

ಬೆಳಗಾವಿ ಜಿಲ್ಲೆಯಲ್ಲಿ 1942ರ ಕ್ವಿಟ್ ಇಂಡಿಯಾ ಚಳುವಳಿ

ತಿಪ್ಪಣ್ಣ ಧ. ಡಂಗಿ

97 to 104

1942 ರಲ್ಲಿ ದ್ವಿತೀಯ ವಿಶ್ವ ಮಹಾಯುದ್ಧವು ಒಳ್ಳೆ ಜೋರಾಗಿ ಇಂಗ್ಲೆಂಡ್ ಬಿಕ್ಕಟ್ಟಿನಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ಅದರಿಂದ ಭಾರತದ ಸ್ವಾತಂತ್ರ್ಯ ಪ್ರೇಮಿಗಳಿಗೆ ಇದೊಂದು ಒಳ್ಳೆಯ ಅವಕಾಶವಾಗಿತ್ತು. ಯುದ್ಧದ ಕಾರಣ ವಸ್ತುಗಳ ಬೆಲೆ ಬಹಳ ಹೆಚ್ಚಾಗಿದ್ದವು, ಅಲ್ಲದೆ ಅನೇಕ ವಸ್ತುಗಳು ಪೇಟೆಯಲ್ಲಿ ಸಿಗುತ್ತಿರಲಿಲ್ಲ. ಬ್ರಿಟಿಷರು ಸಿಂಗಾಪುರ, ಮಲಯಾ ಮೊದಲಾದ ದೇಶಗಳಿಂದ ಹಿಂದೆ ಸರಿಯುತ್ತಿದ್ದರು. ಈ ಸುದ್ದಿ ತಿಳಿದ ಭಾರತೀಯರು ಆ ವರ್ಷ ವಸಾಹತುಶಾಹಿಯಿಂದ ಬಂಧಮುಕ್ತವಾಗಲು ಅಂದರೆ ಭಾರತದಿಂದ ಬ್ರಿಟೀಷರನ್ನು ಓಡಿಸಲು ಪಣ ತೊಟ್ಟರು. ಕ್ರಿಪ್ಸನ ಸಲಹೆಗಳು ವಿಫಲವಾದವು. ಮುಸ್ಲಿಂ ಲೀಗ್ ಪ್ರತ್ಯೇಕ ರಾಷ್ಟ್ರಕ್ಕೆ ಅಂಟಿಕೊಂಡಿತ್ತು. ಭಾರತದ ಮೇಲೆ ಜಪಾನಿಯರು ನುಗ್ಗಿ ಬರುತ್ತಿದ್ದರು. ಈ ಹಿನ್ನಲೆಯಲ್ಲಿ ಕ್ವಿಟ್ ಇಂಡಿಯಾ ಠರಾವನ್ನು ಅಂಗೀಕರಿಸಲಾಯಿತು. 1942ರ ಜುಲೈ 14 ರಂದು ವಾರ್ದಾದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಗಾಂಧೀಜಿಯ ಸಲಹೆಯಂತೆ “ಭಾರತ ಬಿಟ್ಟು ತೊಲಗಿ” ಎಂಬ ನಿರ್ಣಯವನ್ನು ಅಂಗೀಕರಿಸಿ ಬ್ರಿಟಿಷರಿಗೆ ರಾಜಕೀಯ ಒಪ್ಪಂದಕ್ಕೆ ಬರಲು 24 ದಿನಗಳ ಅಂತಿಮ ಗಡುವು ನೀಡಿತು, ಇದಕ್ಕೆ ಬ್ರಿಟಿಷರು ಯಾವುದೇ ಪ್ರತಿಕ್ರಿಯೆ ಕೊಡಲಿಲ್ಲ. ಆದಕಾರಣ 1942ರ ಆಗಸ್ಟ್ 8ರಂದು ಮುಂಬೈನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಗಾಂಧೀಜಿಯವರ ನೇತೃತ್ವದಲ್ಲಿ “ಮಾಡು ಇಲ್ಲವೆ ಮಡಿ” ಎಂಬ ಧ್ಯೇಯದೊಂದಿಗೆ ಹೋರಾಟದ ಕಿಚ್ಚನ್ನು ಹಚ್ಚಲಾಯಿತು. ಈ ಒಂದು ಧ್ಯೇಯ ವಾಕ್ಯ ಇಡೀ ಭಾರತದಲ್ಲಿ ಹೊಸ ಸಂಚಲನವನ್ನು ಮೂಡಿಸಿತು. ಈ ಅಧಿವೇಶನಕ್ಕೆ ಬೆಳಗಾವಿಯಿಂದ ಗಂಗಾದರರಾವ್ ದೇಶಪಾಂಡೆ, ಪುಂಡಲೀಕಜಿ ಕಾತಗಾಡೆ, ರಾಮಚಂದ್ರ ವಡವಿ, ಚನ್ನಪ್ಪ ವಾಲಿ, ಅಪ್ಪಣ್ಣಗೌಡ ಪಾಟೀಲ್, ಅಣ್ಣೂ ಗುರೂಜಿ, ಶ್ರೀರಂಗ ಕಾಮತ, ಹೂಲಿ ವೆಂಕಟರೆಡ್ಡಿ ಮುಂತಾದ ನಾಯಕರು ಹೋದರು. ಮರುದಿನ ಅಂದರೆ ಆಗಸ್ಟ್ 9 ರಂದು ಗಾಂಧೀಜಿ, ನೆಹರು ಹಾಗೂ ಇತರ ಪ್ರಮುಖ ನಾಯಕರ ಬಂಧನವಾಯಿತು. ಈ ಸುದ್ದಿ ಇಡೀ ದೇಶದಲ್ಲೆಡೆ ಕಾಡ್ಗಿಚ್ಚಿನಂತೆ ಪಸರಿಸಿತು. ಕರ್ನಾಟಕವೂ ಇದರಿಂದ ಹೊರತಾಗಿರಲಿಲ್ಲ. ರಾಜ್ಯದ ನಾನಾ ಕಡೆ ಜಿಲ್ಲಾ, ತಾಲೂಕು ಹಾಗೂ ಗ್ರಾಮಗಳ ಮಟ್ಟದಲ್ಲಿ ಹೋರಾಟದ ರೂಪರೇಷೆಗಳು ಸಿದ್ಧಗೊಂಡವು.

Read More »

ಬೆಳಗಾವಿ ಅಧಿವೇಶನ (1924): ಗಾಂಧೀ ಚಿಂತನೆ, ರಾಜಕೀಯ ಪುನರುಜ್ಜೀವನ ಮತ್ತು ರಾಷ್ಟ್ರೀಯ ಏಕತೆ - ಒಂದು ವಿಶ್ಲೇಷಣೆ

ರಮೇಶ್ ಹೇಮರೆಡ್ಡಿ ಸಂಕರಡ್ಡಿ

105 to 109

1924ರ ಬೆಳಗಾವಿಯ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧಿವೇಶನವು ಕಾಂಗ್ರೆಸ್‌ನ ಇತಿಹಾಸದಲ್ಲಿ ಕೇವಲ ರಾಜಕೀಯ ಘಟನೆಯಾಗಿರದೇ ಅದು ಭಾರತೀಯ ಚೇತನದ ನೈತಿಕ ಪುನರುಜ್ಜೀವನದ ಸಂಕೇತವಾಗಿತ್ತು. ಅಸಹಕಾರ ಮತ್ತು ಖಿಲಾಫತ್ ಚಳವಳಿಗಳ ಸ್ಥಗಿತದಿಂದ ರಾಜಕೀಯ ನಿರಾಸೆ ಆವರಿಸಿದ್ದ ಸಂದರ್ಭದಲ್ಲಿ ಮಹಾತ್ಮಾ ಗಾಂಧೀಜಿಯವರು ಅಧ್ಯಕ್ಷತೆ ವಹಿಸಿದ ಈ ಅಧಿವೇಶನವು ಭಾರತೀಯ ರಾಜಕೀಯವನ್ನು ನೈತಿಕ ಶುದ್ಧತೆ, ಆಧ್ಯಾತ್ಮಿಕ ದೃಷ್ಟಿ ಮತ್ತು ಸಾಮಾಜಿಕ ಏಕತೆಯ ಮಾರ್ಗದತ್ತ ಕರೆದೊಯ್ದಿತು. ಈ ಸಂಶೋಧನಾ ಪತ್ರಿಕೆಯು ಬೆಳಗಾವಿಯ ಅಧಿವೇಶನದ ಐತಿಹಾಸಿಕ ಹಿನ್ನೆಲೆ, ಗಾಂಧೀ ಚಿಂತನೆಯ ತಾತ್ವಿಕ ಸಾರ, ಸಂಘಟನಾತ್ಮಕ ಬದಲಾವಣೆಗಳು, ಸಾಮಾಜಿಕ ಪ್ರಭಾವ ಮತ್ತು ಅದರ ದೀರ್ಘಕಾಲೀನ ರಾಜಕೀಯ ಪರಿಣಾಮಗಳನ್ನು ವಿಶ್ಲೇಷಿಸುತ್ತದೆ.

Read More »

ರಾಷ್ಟ್ರೀಯ ಚಳುವಳಿಯಲ್ಲಿ ಕರ್ನಾಟಕದ ಅಸಹಕಾರ ಚಳುವಳಿ ಹಾಗೂ ಕಾನೂನು ಭಂಗ ಚಳುವಳಿಗಳ ಪಾತ್ರ

ರವಿ ಪಾಟೀಲ್

110 to 123

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅಸಹಕಾರ ಚಳುವಳಿ ಮಹತ್ವದ ಹಂತವಾಗಿದೆ. ಮಹಾತ್ಮ ಗಾಂಧೀಜಿ, ಖಿಲಾಫತ್ ಚಳುವಳಿ ಹಾಗೂ ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡದ ಹಿನ್ನೆಲೆಯಲ್ಲಿಯೇ ಈ ಹೋರಾಟವನ್ನು ಪ್ರಾರಂಭಿಸಿದರು. ಕರ್ನಾಟಕದಲ್ಲಿ ಈ ಚಳುವಳಿ ರಾಷ್ಟ್ರೀಯ ಜಾಗೃತಿ ಮೂಡಿಸುವಲ್ಲಿ, ಜನರನ್ನು ಅಹಿಂಸಾ ಮಾರ್ಗದ ಹೋರಾಟಕ್ಕೆ ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರವಹಿಸಿತು. ಮೈಸೂರು ರಾಜ್ಯ ಹಾಗೂ ಹಳೆಯ ಬಾಂಬೆ ಪ್ರೆಸಿಡೆನ್ಸಿಗೆ ಸೇರಿದ್ದ ಬೆಳಗಾವಿ, ಧಾರವಾಡ, ಬಳ್ಳಾರಿ, ಗುಲ್ಬರ್ಗ ಮೊದಲಾದ ಪ್ರದೇಶಗಳಲ್ಲಿ ಅಸಹಕಾರ ಚಳುವಳಿಯ ಪ್ರತಿಧ್ವನಿ ಕೇಳಿಸಿತು. ಅನೇಕ ವಕೀಲರು ನ್ಯಾಯಾಲಯಗಳನ್ನು ಬಹಿಷ್ಕರಿಸಿದರು; ವಿದ್ಯಾರ್ಥಿಗಳು ಸರ್ಕಾರಿ ವಿದ್ಯಾಸಂಸ್ಥೆಗಳನ್ನು ತೊರೆದು ರಾಷ್ಟ್ರೀಯ ಶಾಲೆಗಳ ಸ್ಥಾಪನೆಗೆ ಕೈಜೋಡಿಸಿದರು. ರಾಷ್ಟ್ರೀಯ ಕಾನ್ಫರೆನ್ಸ್‌ಗಳು, ಸಭೆಗಳು, ಪ್ರತಿಭಟನೆಗಳು, ವಿದೇಶಿ ಬಟ್ಟೆಗಳ ಬಹಿಷ್ಕಾರ, ಮದ್ಯಪಾನ ತ್ಯಾಗ, ಖಾದಿ ಬಳಕೆ ಪ್ರಚಾರ ಇವು ಚಳುವಳಿಯ ಪ್ರಮುಖ ಮುಖವಾಗಿದ್ದವು. ಕರ್ನಾಟಕದಲ್ಲಿ ಚಳುವಳಿಯ ನೇತೃತ್ವ ವಹಿಸಿದವರಲ್ಲಿ ಆಲೂರ ವೆಂಕಟರಾವ್, ಎಸ್. ನಂಜುಂಡಯ್ಯ, ಬಿ.ಎಂ. ಶ್ರೀನಿವಾಸಯ್ಯ, ಎನ್. ಎಸ್. ಹರ್ಡೇಕರ್ ಮೊದಲಾದವರು ಉಲ್ಲೇಖನೀಯರಾಗಿದ್ದಾರೆ. ಮಹಿಳೆಯರು ಮತ್ತು ರೈತರೂ ಸಹ ಚಳುವಳಿಗೆ ತಮ್ಮದೇ ರೀತಿಯ ಕೊಡುಗೆ ನೀಡಿದ್ದಾರೆ. ಅಸಹಕಾರ ಚಳುವಳಿ ಭಾರತದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಚೇತನಕ್ಕೆ ಪ್ರೇರಣೆ ನೀಡಿದಂತೆಯೇ, ಕರ್ನಾಟಕದ ಜನರಲ್ಲೂ ಸ್ವಾತಂತ್ರ್ಯ ಸ್ಫೂರ್ತಿ, ರಾಷ್ಟ್ರೀಯತೆ ಮತ್ತು ಸ್ವಾವಲಂಬನೆ ಮೌಲ್ಯಗಳನ್ನು ಬೇರೂರಿಸಿತು. ಈ ಚಳುವಳಿ ಮುಂದಿನ ನಾಗರಿಕ ಕಾನೂನುಭಂಗ ಚಳುವಳಿಗಳಿಗೆ ನೆಲೆಯಾದಂತಾಯಿತು.
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ 1930–34ರ ಅವಧಿಯಲ್ಲಿ ನಡೆದ ನಾಗರಿಕ ಕಾನೂನುಭಂಗ ಚಳುವಳಿ ಮಹತ್ವದ ತಿರುವು ನೀಡಿತು. ಮಹಾತ್ಮ ಗಾಂಧೀಜಿ ನೇತೃತ್ವದ ಉಪ್ಪು ಸತ್ಯಾಗ್ರಹದಿಂದ ಪ್ರಾರಂಭವಾದ ಈ ಹೋರಾಟವು ಕರ್ನಾಟಕದಲ್ಲಿಯೂ ಜನರನ್ನು ಅಹಿಂಸಾತ್ಮಕ ಹೋರಾಟದತ್ತ ಒಗ್ಗೂಡಿಸಿತು. ಕರ್ನಾಟಕದಲ್ಲಿ ಈ ಚಳುವಳಿಯ ಪ್ರಮುಖ ಅಂಗವಾಗಿ ಉಪ್ಪು ಸತ್ಯಾಗ್ರಹ, ಅರಣ್ಯ ಸತ್ಯಾಗ್ರಹ, ಕರ ನಿರಾಕರಣೆ ಚಳುವಳಿ ನಡೆಯಿತು. ಮಂಗಳೂರು, ಉಡುಪಿ, ಕಾರವಾರ ಹಾಗೂ ಇತರ ಕರಾವಳಿ ಪ್ರದೇಶಗಳಲ್ಲಿ ಉಪ್ಪು ಕಾನೂನು ಉಲ್ಲಂಘನೆಯ ಕಾರ್ಯಕ್ರಮ ಜೋರಾಗಿ ನಡೆಯಿತು. ಧಾರವಾಡ, ಬೆಳಗಾವಿ, ಶಿವಮೊಗ್ಗ, ಬಳ್ಳಾರಿ ಮುಂತಾದ ಒಳನಾಡಿನ ಪ್ರದೇಶಗಳಲ್ಲಿ ವಿದೇಶಿ ಬಟ್ಟೆ ದಹನ, ಮದ್ಯದಂಗಡಿಗಳ ಬಹಿಷ್ಕಾರ, ತೆರಿಗೆ ಪಾವತಿಸದ ಹೋರಾಟಗಳು ನಡೆದವು. ಅನೇಕ ಸ್ವಾತಂತ್ರ್ಯ ಹೋರಾಟಗಾರರು ಬಂಧಿತರಾದರು.
ಕರ್ನಾಟಕದಲ್ಲಿ ಈ ಹೋರಾಟವನ್ನು ಮುನ್ನಡೆಸಿದವರಲ್ಲಿ ಎನ್‌. ಎಸ್. ಹರ್ಡಿಕರ್, ಆರ್.ಆರ್. ದಿವಾಕರ್, ಕರಮರ್ಕರ್ ಮೊದಲಾದ ಮುಖಂಡರು ಮತ್ತು 40,000 ಜನ ಸ್ವಯಂಸೇವಕರು ಮುಂತಾದವರು ಮಹತ್ವದ ಪಾತ್ರವಹಿಸಿದರು. ಮಹಿಳೆಯರು, ರೈತರು ಮತ್ತು ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆ ಈ ಚಳುವಳಿಯ ವಿಶಿಷ್ಟ ಲಕ್ಷಣವಾಗಿತ್ತು. ನಾಗರಿಕ ಕಾನೂನುಭಂಗ ಚಳುವಳಿ ಕರ್ನಾಟಕದಲ್ಲಿ ಸ್ವಾತಂತ್ರ್ಯದ ಅಭಿಲಾಷೆಯನ್ನು ಬಲಪಡಿಸಿತು. ಇದು ಕೇವಲ ರಾಜಕೀಯ ಹೋರಾಟವಲ್ಲದೆ, ಸಾಮಾಜಿಕ ಜಾಗೃತಿ, ಆರ್ಥಿಕ ಸ್ವಾವಲಂಬನೆ ಮತ್ತು ಸಾಂಸ್ಕೃತಿಕ ಪುನರುತ್ಥಾನದ ಪ್ರೇರಣೆಯಾಯಿತು. ಈ ಚಳುವಳಿ “ಭಾರತ ಬಿಟ್ಟು” ಚಳುವಳಿಗೆ ನೆಲೆಯಾಗಿದ್ದು, ಕರ್ನಾಟಕದ ಇತಿಹಾಸದಲ್ಲಿ ಸ್ವಾತಂತ್ರ್ಯ ಚಳುವಳಿಯ ಬಲವಾದ ಹಂತವಾಗಿ ಗುರುತಿಸಲ್ಪಟ್ಟಿದೆ.

Read More »

ಕರ್ನಾಟಕದಲ್ಲಿ ಮಹಾತ್ಮ ಗಾಂಧೀಜಿಯವರ ಸಾಮಾಜಿಕ ಜಾಗೃತಿ

ಸಂಗಮೇಶ ಕಚ್ಚು, ಎಂ.ಎನ್. ಬೆನ್ನೂರ

124 to 131

ಮಹಾತ್ಮ ಗಾಂಧೀಜಿಯವರು ಕರ್ನಾಟಕದಲ್ಲಿ ಸಾಮಾಜಿಕ ಜಾಗೃತಿಗೆ ಮಹತ್ತರ ಕೊಡುಗೆ ನೀಡಿದರು. ಅವರು ಸಮಾಜದಲ್ಲಿ ಅಸ್ಪೃಶ್ಯತೆ, ಜಾತಿ ಭೇದ, ಅಸಮಾನತೆಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಗಾಂಧೀಜಿ ತಮ್ಮ ಪ್ರವಾಸಗಳಲ್ಲಿ ಹಳ್ಳಿಗಳಿಗೆ ಭೇಟಿ ನೀಡಿ ಜನರೊಂದಿಗೆ ನೇರ ಸಂವಾದ ನಡೆಸಿದರು. ಸ್ವಚ್ಛತೆ, ಶ್ರಮದ ಮಹತ್ವ, ಸತ್ಯ ಮತ್ತು ಅಹಿಂಸೆಯ ಮೇಲಿನ ನಂಬಿಕೆಯಿಂದ ಜನರಲ್ಲಿ ಬದಲಾವಣೆ ತರಲು ಶ್ರಮಿಸಿದರು. ಹೆಣ್ಣುಮಕ್ಕಳ ಶಿಕ್ಷಣ, ಶ್ರಮಿಕರ ಹಕ್ಕುಗಳು, ಗ್ರಾಮೀಣ ಅಭಿವೃದ್ಧಿ ಇವರ ಗಮನದ ಕೇಂದ್ರವಾಗಿದ್ದವು. ಅವರ ಉಪದೇಶಗಳು ಮತ್ತು ನಡೆನುಡಿಗಳು ಕರ್ನಾಟಕದ ಸಾಮಾಜಿಕ ಚಿಂತನೆಗೆ ಪ್ರಭಾವ ಬೀರಿದವು.
ಈ ಮೂಲಕ ಅವರು ಹೃದಯದಿಂದ ಸಮಾಜ ಸುಧಾರಕನಾಗಿ ಬೆಳೆದರು. ಅಲ್ಲದೆ ಗಾಂಧೀಜಿ ಅವರು ಕರ್ನಾಟಕದೊಂದಿಗೆ ಹೊಂದಿರುವ ಸಂಪರ್ಕ ಹಾಗೂ ಅಸ್ಪೃಶ್ಯತೆ ನಿವಾರಣೆ, ಮಹಿಳೆಯರ ಸಬಲೀಕರಣ, ಅಸಹಕಾರ ಚಳುವಳಿ, ಖಾದಿ ಗ್ರಾಮೋದ್ಯೋಗ, ಸತ್ಯಾಗ್ರಹದ ಕುರಿತಾಗಿ ವಿದ್ಯಾರ್ಥಿಗಳಿಗೆ ನೀಡಿದ ಸಂದೇಶಗಳು, ಈ ವಿಚಾರಧಾರೆಗಳ ಕುರಿತಾಗಿ ತಿಳಿದುಕೊಳ್ಳಬಹುದು.

Read More »

ಸ್ವಾತಂತ್ರ್ಯ ಚಳುವಳಿಯ ಕಾಲಘಟ್ಟದ ದಲಿತೋದ್ಧಾರದ ಕಾರ್ಯಚಟುವಟಿಕೆಗಳು: ಕರ್ನಾಟಕವನ್ನು ಅನುಲಕ್ಷಿಸಿ

ಸಣ್ಣ ರಾಘವೇಂದ್ರ, ಎಸ್.ವಾಯ್. ಮುಗಳಿ

132 to 142

ಕರ್ನಾಟಕದ ಇತಿಹಾಸವು ಸಿ.ಜೆ. ಥಾಮ್ಸನ್‌ರು ವಿವರಿಸಿದ ಶಿಲಾಯುಗದ ಮೂರು ಯುಗಗಳನ್ನು ತನ್ನ ಮಡಿಲಲ್ಲಿರಿಸಿಕೊಂಡಿದೆ. ಮಧ್ಯಯುಗದ ಬಸವ ಚಳುವಳಿ ಮತ್ತು ದಾಸ ಪರಂಪರೆಯು ಜಾತೀಯತೆ, ಅಸ್ಪೃಶ್ಯತೆ, ಲಿಂಗ ತಾರತಮ್ಯ ಮುಂತಾದ ಸಾಮಾಜಿಕ ಪಿಡುಗುಗಳನ್ನು ವಿರೋಧಿಸಿತು. ಕರ್ನಾಟಕದಲ್ಲಿನ ದಲಿತರಾದ ಹೊಲೆಯರು, ಮಾದಿಗರು, ಜಾಡಮಾಲಿಗಳು, ಮಾಲರು, ಚೌಡಿಕೆ ಮಾದಿಗ, ಚಂಡಾಲರು ಮುಂತಾದ ಅಸ್ಪೃಶ್ಯ ಜಾತಿಗಳ ಸಮುದಾಯದವರು ಸಾಮಾಜಿಕ, ಧಾರ್ಮಿಕ ಮತ್ತು ಆರ್ಥಿಕವಾಗಿ ಶತಶತಮಾನಗಳಿಂದಲೂ ಬಹಿಷ್ಕೃತ ಜನಾಂಗವಾಗಿದ್ದಾರೆ.
ಆಧುನಿಕ ಕರ್ನಾಟಕವು, ಸ್ವಾತಂತ್ರ್ಯ ಚಳುವಳಿ ಮತ್ತು ಕರ್ನಾಟಕ ಏಕೀಕರಣ ಚಳುವಳಿಗಳನ್ನು ಸಮಾನಾಂತರವಾಗಿ ಕಂಡ ಐತಿಹಾಸಿಕ ಘಟನೆಗಳಾಗಿವೆ. ಇವುಗಳೆರಡರ ಮಧ್ಯ ಸ್ವಾತಂತ್ರ್ಯ ಹೋರಾಟದ ಭಾಗವಾಗಿಯೂ ಕೆಲವು ಸಾಮಾಜಿಕ ಕಾರ್ಯ ಚಟುವಟಿಕೆಗಳು ನಡೆದಿವೆ. ಈ ಲೇಖನವು ಮುಖ್ಯವಾಗಿ ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿನ ದಲಿತೋದ್ಧಾರದ ಕಾರ್ಯಚಟುವಟಿಕೆಗಳನ್ನು ಕುರಿತು ಚರ್ಚಿಸುತ್ತದೆ. ಇದರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಅದರ ನಾಯಕರು ಹೊಂದಿದ್ದ ದಲಿತೋದ್ಧಾರದ ನೀತಿ ಹಾಗೂ ಧೋರಣೆಗಳನ್ನು ವಿವರಿಸುವುದರ ಜೊತೆಗೆ ಕರ್ನಾಟಕದಲ್ಲಿನ ಸ್ವಾತಂತ್ರ್ಯ ಚಳುವಳಿಯ ಸ್ವರೂಪ ವಿಶೇಷವಾಗಿ ದಲಿತರ ಹಿತಾಸಕ್ತಿಗಾಗಿ ಮಾಡಿದ ಕೆಲಸಗಳನ್ನು ಉಲ್ಲೇಖಿಸುವುದು. ಅಂತಿಮವಾಗಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ ಪ್ರಮುಖ ದಲಿತರು ಮತ್ತು ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರ ದಲಿತೋದ್ಧಾರದ ಕಾರ್ಯಗಳನ್ನು ವಿವರಿಸುವುದು. ಈ ಲೇಖನಕ್ಕೆ ಸಂಬಂಧಪಟ್ಟಂತೆ ಸ್ವಾತಂತ್ರ್ಯ ಚಳುವಳಿಯಲ್ಲಿ ಕೈಗೊಂಡ ಪ್ರಮುಖ ದಲಿತೋದ್ಧಾರ ಕಾರ್ಯ ಚಟುವಟಿಕೆಗಳು ಮತ್ತು ನೀತಿಗಳನ್ನು ಒಳಗೊಂಡಂತೆ ಆಯ್ದ ವ್ಯಕ್ತಿಗಳಿಗೆ ಸೀಮಿತಗೊಳಿಸಲಾಗಿದೆ ಇನ್ನು ಲೇಖನದ ವ್ಯಾಪ್ತಿಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ದಲಿತೋದ್ಧಾರಕ್ಕಾಗಿ ನಡೆದ ಪ್ರಮುಖ ಸ್ಥಳಗಳಿಗೆ ಸೀಮಿತಗೊಳಿಸಲಾಗಿದೆ. ಇದನ್ನು ಐತಿಹಾಸಿಕ ವಿಧಾನವನ್ನು ಆಧರಿಸಿ ರಚಿಸಲಾಗಿದ್ದು ಕೆಲ ಭಾಗವು ವಿವರಣಾತ್ಮಕ ಮತ್ತು ವಿಶ್ಲೇಷಣಾತ್ಮಕ ವಿಧಾನಗಳಿಗೂ ಕೂಡಾ ಒತ್ತು ನೀಡಿ ರಚಿಸಲಾಗಿದೆ.

Read More »

ಸ್ವಾತಂತ್ರ್ಯ ಹೋರಾಟಕ್ಕೆ ಹೂವಿನಹಡಗಲಿ ತಾಲ್ಲೂಕಿನ ಕೊಡುಗೆ

ಶರಣಪ್ಪ ಬಸಪ್ಪ ಜಗ್ಗಲ, ಶಿವಯೋಗಿ ಕೋರಿಶೆಟ್ಟರ

143 to 147

ಈ ಲೇಖನವು ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆಯನ್ನು ವಿವರಿಸುತ್ತದೆ. ಹೂವಿನಹಡಗಲಿಯು ಐತಿಹಾಸಿಕವಾಗಿ ಹಲವು ರಾಜಮನೆತನಗಳ ಆಳ್ವಿಕೆಗೆ ಒಳಪಟ್ಟಿತ್ತು. ಬ್ರಿಟಿಷರ ದಬ್ಬಾಳಿಕೆ ವಿರುದ್ಧ ಭಾರತದಲ್ಲಿ ಹೊತ್ತಿದ ಕಿಡಿಯು ಈ ತಾಲ್ಲೂಕಿನ ಜನರಲ್ಲಿ ರಾಷ್ಟ್ರಾಭಿಮಾನ ಮೂಡಿಸಿತು. ದೊಂಡಿಯಾವಾಘನ ದಂಗೆ, ನಗರ ಬಂಡಾಯ ಮತ್ತು 1858ರ ದಂಗೆಗಳು ಇಲ್ಲಿನ ಹೋರಾಟಕ್ಕೆ ಸ್ಫೂರ್ತಿಯಾಗಿದ್ದವು. ಕಾಯ್ದೆಭಂಗ ಚಳುವಳಿಯ ಸಂದರ್ಭದಲ್ಲಿ ಮಾಗಳ ಗ್ರಾಮದಲ್ಲಿ ಈಚಲ ಮರ ಕಡಿದು, ಹೆಂಡದ ಚೀಲ ನಾಶಪಡಿಸಿ ಪ್ರತಿಭಟಿಸಲಾಯಿತು. ಬಿ. ಲಂಕೆಪ್ಪ ನೆಗಳೂರು, ಧರ್ಮಣ್ಣ ಮುಂತಾದವರು ಸಕ್ರಿಯವಾಗಿ ಭಾಗವಹಿಸಿದ್ದರು. ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲೂ ಹಡಗಲಿಯು ಭಾಗವಹಿಸಿತ್ತು. ಹರಿಜನ ಕೇರಿಯಲ್ಲಿ ಅಂಗಡಿ ತೆರೆಯುವುದು, ಪ್ರಾಣಿಬಲಿ ನಿಷೇಧದಂತಹ ಸಾಮಾಜಿಕ ಸುಧಾರಣಾ ಚಟುವಟಿಕೆಗಳ ಮೂಲಕವೂ ರಾಷ್ಟ್ರ ಜಾಗೃತಿ ಮೂಡಿಸಲಾಯಿತು. ಧಾರವಾಡ ಜಿಲ್ಲೆಯ ಹೋರಾಟಗಾರರ ಪ್ರಭಾವವೂ ಇಲ್ಲಿನ ಚಟುವಟಿಕೆಗಳ ಮೇಲೆ ಇತ್ತು. ಈ ಎಲ್ಲಾ ನಿಸ್ವಾರ್ಥ ಹೋರಾಟಗಳು ತಾಲ್ಲೂಕಿನ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರಮುಖ ಕೊಡುಗೆಗಳಾಗಿವೆ.

Read More »

ಸ್ವಾತಂತ್ರ್ಯ ಚಳುವಳಿಯಲ್ಲಿ ಮುಂಬೈ ಕರ್ನಾಟಕದ ಮಹಿಳೆಯರ ಪಾತ್ರ

ಶ್ರೀದೇವಿ

148 to 156

ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಮುಂಬೈ ಕರ್ನಾಟಕದ ಮಹಿಳೆಯರ ಪಾತ್ರ ಅನನ್ಯ ಮತ್ತು ಅಗಾಧ. ಈ ಪ್ರಬಂಧವು ಕಿತ್ತೂರು ರಾಣಿ ಚೆನ್ನಮ್ಮ ಮತ್ತು ರಾಣಿ ಅಬ್ಬಕ್ಕ ದೇವಿಯರ ಆರಂಭಿಕ ಪ್ರತಿರೋಧದಿಂದ ಮೊದಲುಗೊಂಡು, ಗಾಂಧೀಜಿಯವರ ನೇತೃತ್ವದ ಸತ್ಯಾಗ್ರಹಗಳಲ್ಲಿ ಭಾಗವಹಿಸಿದ ಉಮಾಬಾಯಿ ಕುಂದಾಪುರ, ಬಳ್ಳಾರಿ ಸಿದ್ದಮ್ಮ, ಕಮಲಾದೇವಿ ಚಟ್ಟೋಪಾಧ್ಯಾಯ, ಯಶೋಧರಮ್ಮ ದಾಸಪ್ಪ ಮತ್ತು ಬೀದರ್‌ನ ಸೈದಾಬಿಯಂತಹ ಧೀರ ಹೋರಾಟಗಾರ್ತಿಯರ ಕೊಡುಗೆಯನ್ನು ಪರಿಶೀಲಿಸುತ್ತದೆ. ಮಹಿಳೆಯರು ಅಹಿಂಸಾತ್ಮಕ ಚಳುವಳಿ, ಖಾದಿ ಪ್ರಚಾರ, ಮತ್ತು ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಈ ಹೋರಾಟದಲ್ಲಿ ಅವರು ಜೈಲುವಾಸ, ಸಾಮಾಜಿಕ ನಿಂದನೆ ಮತ್ತು ಕೌಟುಂಬಿಕ ಸಂಕಷ್ಟಗಳನ್ನು ಅನುಭವಿಸಿದರು. ಈ ಲೇಖನವು ಅವರ ತ್ಯಾಗ, ಧೈರ್ಯ ಮತ್ತು ನಿಸ್ವಾರ್ಥ ದೇಶಭಕ್ತಿಯನ್ನು ಇಂದಿನ ಪೀಳಿಗೆಗೆ ಸ್ಫೂರ್ತಿಯಾಗಿಸಲು ಪ್ರಯತ್ನಿಸುತ್ತದೆ, ಜೊತೆಗೆ ಸ್ವಾತಂತ್ರ್ಯಾನಂತರದ ಸಮಾಜ ಸುಧಾರಣೆ ಮತ್ತು ರಾಜಕೀಯ ಪಾತ್ರವನ್ನೂ ಪ್ರಸ್ತಾಪಿಸುತ್ತದೆ.

Read More »

ಕರ್ನಾಟಕದ ಸ್ವಾತಂತ್ರ್ಯ ಚಳುವಳಿಗೆ ವಿಜಾಪುರ ತಾಲೂಕಿನ ಸ್ವಾತಂತ್ರ್ಯ ಹೋರಾಟಗಾರರ ಪಾತ್ರ

ಶ್ರೀಧರ ಚಿ. ಕಾಂಬಳೆ

157 to 167

ಈ ಲೇಖನವು ಕರ್ನಾಟಕದ ಸ್ವಾತಂತ್ರ್ಯ ಚಳುವಳಿಯಲ್ಲಿ ವಿಜಾಪುರ (ಇಂದಿನ ವಿಜಯಪುರ) ತಾಲೂಕಿನ ಸ್ವಾತಂತ್ರ್ಯ ಹೋರಾಟಗಾರರ ಮಹತ್ವದ ಪಾತ್ರವನ್ನು ವಿಶ್ಲೇಷಿಸುತ್ತದೆ. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಆಡಳಿತದ ಆರಂಭದಿಂದಲೂ ಭಾರತೀಯರಲ್ಲಿ ಮೂಡಿದ ಅಸಮಾಧಾನವು 1857ರ ಸಂಗ್ರಾಮದ ಮೊದಲು 1824ರ ಸಿಂದಗಿಯ ಬಂಡಾಯ ಮತ್ತು 1857ರ ಹಲಗಲಿಯ ಬೇಡರ ದಂಗೆಗಳ ಮೂಲಕ ವಿಜಾಪುರದಲ್ಲಿ ಪ್ರಕಟಗೊಂಡಿತು.
ಶ್ರೀನಿವಾಸರಾವ್ ಕೌಜಲಗಿ (1873-1940), ಲೋಕಮಾನ್ಯ ತಿಲಕ್ ಮತ್ತು ಮಹಾತ್ಮ ಗಾಂಧಿಯವರ ನಿಕಟವರ್ತಿ, ವಕೀಲಿ ವೃತ್ತಿ ತ್ಯಜಿಸಿ ಸ್ವದೇಶಿ ಚಳುವಳಿ, ಅಸಹಕಾರ ಆಂದೋಲನ ಮತ್ತು ಹಿಂದುಸ್ತಾನಿ ಸೇವಾದಳದ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಮತ್ತೊಬ್ಬ ಪ್ರಮುಖ ನಾಯಕ ಚನ್ನಬಸಪ್ಪ ಜಗದೇವಪ್ಪ ಅಂಬಲಿ (1895-1962), ‘ಕರ್ನಾಟಕದ ಸರದಾರ ಪಟೇಲ್’ ಎಂದು ಗುರುತಿಸಲ್ಪಟ್ಟು, ಕಾಯ್ದೆ ಭಂಗ ಮತ್ತು ಚಲೇ ಜಾವ್ ಚಳುವಳಿಯಲ್ಲಿ ಕುಟುಂಬ ಸಮೇತ ಭಾಗವಹಿಸಿ ಬಂಧನಕ್ಕೊಳಗಾದರು. ಈ ಹೋರಾಟಗಾರರ ತ್ಯಾಗ ಮತ್ತು ಬಲಿದಾನಗಳಿಂದಾಗಿ ವಿಜಾಪುರ ತಾಲೂಕು ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ.

Read More »

ಕರ್ನಾಟಕದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರ ಪಾತ್ರ

ತಾರಾ ಬಿ.ಎನ್., ಸುವರ್ಣಾ ಹೂಗಾರ

168 to 172

ಕರ್ನಾಟಕದ ಸ್ವಾತಂತ್ರ್ಯ ಚಳುವಳಿಯ ಹೋರಾಟದಲ್ಲಿ ಕನ್ನಡ ನಾಡು ನುಡಿ ಕಟ್ಟುವಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ, ಇತಿಹಾಸದ ಪುಟಗಳಲ್ಲಿ ಮಹಿಳೆಯರು ಚಳುವಳಿಯ ಅಪರೂಪದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು ಎಷ್ಟೋ ಮಹಿಳಾ ಸಾಧಕಿಯರು ಇತಿಹಾಸದ ಪುಟಗಳಿಂದ ಕಣ್ಮರೆಯಾಗಿದ್ದಾರೆ, ದೇಶಕ್ಕಾಗಿ, ರಾಜ್ಯಕ್ಕಾಗಿ ತ್ಯಾಗ ಬಲಿದಾನಗಳನ್ನು ಮಾಡಿ ಅಜರಾಮರರಾಗಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಸಂಸ್ಥಾನಗಳು, ಮೊಘಲ್, ಬ್ರಿಟೀಷರ ವಿರುದ್ಧ ಹೋರಾಡಿ ಅವರನ್ನು ಹಿಮ್ಮೆಟ್ಟಿಸಿದ ಅನೇಕ ವೀರ ಮಹಿಳೆಯರ ಚರಿತ್ರೆಯನ್ನು ಇಲ್ಲಿ ಉಲ್ಲೇಖಿಸಲಾಗಿದೆ. ಪುರುಷರಷ್ಟೇ ಸಾಮರ್ಥ್ಯ ಹೊಂದಿದ ಮಹಿಳೆಯರು ಸ್ವಾತಂತ್ರ್ಯ ಚಳುವಳಿಯ ಹೋರಾಟದಲ್ಲಿ ಪೋಲೀಸರ ಲಾಠಿ ಏಟು ತಿಂದು ಸೆರೆಮನೆಯ ವಾಸವನ್ನೂ ಅನುಭವಿಸಿದ್ದು ಉಲ್ಲೇಖನಾರ್ಹ. ಅದರಲ್ಲಿ ರಾಣಿ ಅಬ್ಬಕ್ಕ, ರಾಣಿ ಚನ್ನಮ್ಮ, ಉಮಾಬಾಯಿ ಕುಂದಾಪುರ, ಕಮಲಾದೇವಿ ಚಟ್ಟೋಪಾಧ್ಯಾಯ, ಶ್ರೀಮತಿ ನಾಗಮ್ಮ ವೀರನಗೌಡ ಪಾಟೀಲ, ಈ ಮುಂತಾದ ಕೆಲ ಮಹಿಳೆಯರ ಹೋರಾಟವನ್ನು ಮಾತ್ರ ಇಲ್ಲಿ ಉಲ್ಲೇಖಿಸಲಾಗಿದೆ,

Read More »

ಮುಂಬಯಿ ಕರ್ನಾಟಕದ ಸ್ವಾತಂತ್ರ್ಯ ಚಳುವಳಿಯಲ್ಲಿ ತಿಲಕರ ಪ್ರಭಾವ

ಶ್ವೇತಾ

173 to 180

ಈ ಲೇಖನವು ಬಾಲಗಂಗಾಧರ ತಿಲಕರ (ಲೋಕಮಾನ್ಯ) ಪ್ರಭಾವವು ಮುಂಬಯಿ ಕರ್ನಾಟಕದ (ಇಂದಿನ ವಾಯುವ್ಯ ಕರ್ನಾಟಕ) ಸ್ವಾತಂತ್ರ್ಯ ಚಳುವಳಿಯ ಮೇಲೆ ಹೇಗೆ ಆಳವಾಗಿ ಬೇರೂರಿತು ಎಂಬುದನ್ನು ವಿಶ್ಲೇಷಿಸುತ್ತದೆ. ಧಾರವಾಡ, ಬೆಳಗಾಂ, ಬಿಜಾಪುರ ಜಿಲ್ಲೆಗಳು ಮತ್ತು ಸ್ಥಳೀಯ ಸಂಸ್ಥಾನಗಳನ್ನು ಒಳಗೊಂಡ ಈ ಪ್ರದೇಶದಲ್ಲಿ ತಿಲಕರು ತಮ್ಮ ‘ಸ್ವರಾಜ್ಯ, ಸ್ವದೇಶಿ, ವಿದೇಶಿ ಬಹಿಷ್ಕಾರ ಮತ್ತು ರಾಷ್ಟ್ರೀಯ ಶಿಕ್ಷಣ’ ಎಂಬ ‘ಚತುಃಸೂತ್ರ’ದ ಮೂಲಕ ನವಚೈತನ್ಯ ತುಂಬಿದರು. ಅವರ ಪತ್ರಿಕೆಗಳಾದ ‘ಕೇಸರಿ’ ಮತ್ತು ‘ಮರಾಠ’ ರಾಷ್ಟ್ರೀಯತೆಯ ಜಾಗೃತಿ ಮೂಡಿಸಿದವು. ಗಣೇಶೋತ್ಸವ ಮತ್ತು ಶಿವಾಜಿ ಉತ್ಸವಗಳನ್ನು ಸಾರ್ವಜನಿಕವಾಗಿ ಆಚರಿಸುವ ಪದ್ಧತಿ ಜಾರಿಗೆ ತಂದು ಜನರನ್ನು ಸಂಘಟಿಸಿದರು. ಗಂಗಾಧರರಾವ್ ದೇಶಪಾಂಡೆ ಅವರಂತಹ ನಾಯಕರು ತಿಲಕರ ಪ್ರೇರಣೆಯಿಂದ ಹೋಮ್‌ರೂಲ್ ಲೀಗ್ ಮತ್ತು ಸ್ವದೇಶಿ ಚಳುವಳಿಯನ್ನು ಮುನ್ನಡೆಸಿದರು. ಒಟ್ಟಿನಲ್ಲಿ, ತಿಲಕರ ನೇತೃತ್ವವು ಮುಂಬಯಿ ಕರ್ನಾಟಕದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಅಡಿಪಾಯ ಹಾಕಲು ಮತ್ತು ರಾಷ್ಟ್ರೀಯತೆಯನ್ನು ಜನಸಾಮಾನ್ಯರ ಬಳಿಗೆ ತರಲು ನಿರ್ಣಾಯಕವಾಯಿತು.

Read More »