ರಾಷ್ಟ್ರೀಯ ಚಳುವಳಿಯಲ್ಲಿ ಕರ್ನಾಟಕದ ಅಸಹಕಾರ ಚಳುವಳಿ ಹಾಗೂ ಕಾನೂನು ಭಂಗ ಚಳುವಳಿಗಳ ಪಾತ್ರ
Main Article Content
Abstract
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅಸಹಕಾರ ಚಳುವಳಿ ಮಹತ್ವದ ಹಂತವಾಗಿದೆ. ಮಹಾತ್ಮ ಗಾಂಧೀಜಿ, ಖಿಲಾಫತ್ ಚಳುವಳಿ ಹಾಗೂ ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡದ ಹಿನ್ನೆಲೆಯಲ್ಲಿಯೇ ಈ ಹೋರಾಟವನ್ನು ಪ್ರಾರಂಭಿಸಿದರು. ಕರ್ನಾಟಕದಲ್ಲಿ ಈ ಚಳುವಳಿ ರಾಷ್ಟ್ರೀಯ ಜಾಗೃತಿ ಮೂಡಿಸುವಲ್ಲಿ, ಜನರನ್ನು ಅಹಿಂಸಾ ಮಾರ್ಗದ ಹೋರಾಟಕ್ಕೆ ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರವಹಿಸಿತು. ಮೈಸೂರು ರಾಜ್ಯ ಹಾಗೂ ಹಳೆಯ ಬಾಂಬೆ ಪ್ರೆಸಿಡೆನ್ಸಿಗೆ ಸೇರಿದ್ದ ಬೆಳಗಾವಿ, ಧಾರವಾಡ, ಬಳ್ಳಾರಿ, ಗುಲ್ಬರ್ಗ ಮೊದಲಾದ ಪ್ರದೇಶಗಳಲ್ಲಿ ಅಸಹಕಾರ ಚಳುವಳಿಯ ಪ್ರತಿಧ್ವನಿ ಕೇಳಿಸಿತು. ಅನೇಕ ವಕೀಲರು ನ್ಯಾಯಾಲಯಗಳನ್ನು ಬಹಿಷ್ಕರಿಸಿದರು; ವಿದ್ಯಾರ್ಥಿಗಳು ಸರ್ಕಾರಿ ವಿದ್ಯಾಸಂಸ್ಥೆಗಳನ್ನು ತೊರೆದು ರಾಷ್ಟ್ರೀಯ ಶಾಲೆಗಳ ಸ್ಥಾಪನೆಗೆ ಕೈಜೋಡಿಸಿದರು. ರಾಷ್ಟ್ರೀಯ ಕಾನ್ಫರೆನ್ಸ್‌ಗಳು, ಸಭೆಗಳು, ಪ್ರತಿಭಟನೆಗಳು, ವಿದೇಶಿ ಬಟ್ಟೆಗಳ ಬಹಿಷ್ಕಾರ, ಮದ್ಯಪಾನ ತ್ಯಾಗ, ಖಾದಿ ಬಳಕೆ ಪ್ರಚಾರ ಇವು ಚಳುವಳಿಯ ಪ್ರಮುಖ ಮುಖವಾಗಿದ್ದವು. ಕರ್ನಾಟಕದಲ್ಲಿ ಚಳುವಳಿಯ ನೇತೃತ್ವ ವಹಿಸಿದವರಲ್ಲಿ ಆಲೂರ ವೆಂಕಟರಾವ್, ಎಸ್. ನಂಜುಂಡಯ್ಯ, ಬಿ.ಎಂ. ಶ್ರೀನಿವಾಸಯ್ಯ, ಎನ್. ಎಸ್. ಹರ್ಡೇಕರ್ ಮೊದಲಾದವರು ಉಲ್ಲೇಖನೀಯರಾಗಿದ್ದಾರೆ. ಮಹಿಳೆಯರು ಮತ್ತು ರೈತರೂ ಸಹ ಚಳುವಳಿಗೆ ತಮ್ಮದೇ ರೀತಿಯ ಕೊಡುಗೆ ನೀಡಿದ್ದಾರೆ. ಅಸಹಕಾರ ಚಳುವಳಿ ಭಾರತದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಚೇತನಕ್ಕೆ ಪ್ರೇರಣೆ ನೀಡಿದಂತೆಯೇ, ಕರ್ನಾಟಕದ ಜನರಲ್ಲೂ ಸ್ವಾತಂತ್ರ್ಯ ಸ್ಫೂರ್ತಿ, ರಾಷ್ಟ್ರೀಯತೆ ಮತ್ತು ಸ್ವಾವಲಂಬನೆ ಮೌಲ್ಯಗಳನ್ನು ಬೇರೂರಿಸಿತು. ಈ ಚಳುವಳಿ ಮುಂದಿನ ನಾಗರಿಕ ಕಾನೂನುಭಂಗ ಚಳುವಳಿಗಳಿಗೆ ನೆಲೆಯಾದಂತಾಯಿತು.
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ 1930–34ರ ಅವಧಿಯಲ್ಲಿ ನಡೆದ ನಾಗರಿಕ ಕಾನೂನುಭಂಗ ಚಳುವಳಿ ಮಹತ್ವದ ತಿರುವು ನೀಡಿತು. ಮಹಾತ್ಮ ಗಾಂಧೀಜಿ ನೇತೃತ್ವದ ಉಪ್ಪು ಸತ್ಯಾಗ್ರಹದಿಂದ ಪ್ರಾರಂಭವಾದ ಈ ಹೋರಾಟವು ಕರ್ನಾಟಕದಲ್ಲಿಯೂ ಜನರನ್ನು ಅಹಿಂಸಾತ್ಮಕ ಹೋರಾಟದತ್ತ ಒಗ್ಗೂಡಿಸಿತು. ಕರ್ನಾಟಕದಲ್ಲಿ ಈ ಚಳುವಳಿಯ ಪ್ರಮುಖ ಅಂಗವಾಗಿ ಉಪ್ಪು ಸತ್ಯಾಗ್ರಹ, ಅರಣ್ಯ ಸತ್ಯಾಗ್ರಹ, ಕರ ನಿರಾಕರಣೆ ಚಳುವಳಿ ನಡೆಯಿತು. ಮಂಗಳೂರು, ಉಡುಪಿ, ಕಾರವಾರ ಹಾಗೂ ಇತರ ಕರಾವಳಿ ಪ್ರದೇಶಗಳಲ್ಲಿ ಉಪ್ಪು ಕಾನೂನು ಉಲ್ಲಂಘನೆಯ ಕಾರ್ಯಕ್ರಮ ಜೋರಾಗಿ ನಡೆಯಿತು. ಧಾರವಾಡ, ಬೆಳಗಾವಿ, ಶಿವಮೊಗ್ಗ, ಬಳ್ಳಾರಿ ಮುಂತಾದ ಒಳನಾಡಿನ ಪ್ರದೇಶಗಳಲ್ಲಿ ವಿದೇಶಿ ಬಟ್ಟೆ ದಹನ, ಮದ್ಯದಂಗಡಿಗಳ ಬಹಿಷ್ಕಾರ, ತೆರಿಗೆ ಪಾವತಿಸದ ಹೋರಾಟಗಳು ನಡೆದವು. ಅನೇಕ ಸ್ವಾತಂತ್ರ್ಯ ಹೋರಾಟಗಾರರು ಬಂಧಿತರಾದರು.
ಕರ್ನಾಟಕದಲ್ಲಿ ಈ ಹೋರಾಟವನ್ನು ಮುನ್ನಡೆಸಿದವರಲ್ಲಿ ಎನ್. ಎಸ್. ಹರ್ಡಿಕರ್, ಆರ್.ಆರ್. ದಿವಾಕರ್, ಕರಮರ್ಕರ್ ಮೊದಲಾದ ಮುಖಂಡರು ಮತ್ತು 40,000 ಜನ ಸ್ವಯಂಸೇವಕರು ಮುಂತಾದವರು ಮಹತ್ವದ ಪಾತ್ರವಹಿಸಿದರು. ಮಹಿಳೆಯರು, ರೈತರು ಮತ್ತು ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆ ಈ ಚಳುವಳಿಯ ವಿಶಿಷ್ಟ ಲಕ್ಷಣವಾಗಿತ್ತು. ನಾಗರಿಕ ಕಾನೂನುಭಂಗ ಚಳುವಳಿ ಕರ್ನಾಟಕದಲ್ಲಿ ಸ್ವಾತಂತ್ರ್ಯದ ಅಭಿಲಾಷೆಯನ್ನು ಬಲಪಡಿಸಿತು. ಇದು ಕೇವಲ ರಾಜಕೀಯ ಹೋರಾಟವಲ್ಲದೆ, ಸಾಮಾಜಿಕ ಜಾಗೃತಿ, ಆರ್ಥಿಕ ಸ್ವಾವಲಂಬನೆ ಮತ್ತು ಸಾಂಸ್ಕೃತಿಕ ಪುನರುತ್ಥಾನದ ಪ್ರೇರಣೆಯಾಯಿತು. ಈ ಚಳುವಳಿ “ಭಾರತ ಬಿಟ್ಟು” ಚಳುವಳಿಗೆ ನೆಲೆಯಾಗಿದ್ದು, ಕರ್ನಾಟಕದ ಇತಿಹಾಸದಲ್ಲಿ ಸ್ವಾತಂತ್ರ್ಯ ಚಳುವಳಿಯ ಬಲವಾದ ಹಂತವಾಗಿ ಗುರುತಿಸಲ್ಪಟ್ಟಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಎನ್. ಶಂಕರನಾರಾಯಣ, 2001, ಕರ್ನಾಟಕದ ಸ್ವಾತಂತ್ರ್ಯ ಚಳುವಳಿ ಇತಿಹಾಸ, ಪ್ರಜಾ ಪ್ರಕಾಶನ, ಮೈಸೂರು.
ಎಂ. ಚಿದಾನಂದ ಮೂರ್ತಿ, 1995 ಕರ್ನಾಟಕದ ರಾಷ್ಟ್ರೀಯ ಚಳುವಳಿ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
ಪಿ.ಸಿ. ಜೋಶಿ, 1983, Freedom Movement in Karnataka, People’s Publishing House, New Delhi.
Thomson Edward, 1989, Indian National Movement, Akashdeep Publication, Delhi.
Karnataka Rajya Gazetteer, 1995, Dharwad District, Government of Karnataka Publication, Bangalore.
Jayashree S.Prabha, 2018, Intensity of Civil Disobedience Movement in North Karnataka, Gulbarga University, Gulbarga.
Chandrashekhar.K, 1997, Karanataka Charitre; Kannada Vishwavidyalaya Hampi.
Halappa G. S., 1964, History of Freedom Movement in Karnataka; Vol. – II, Government of Mysore Publication.