Published: 2025-08-05

Table of Contents

Table of Contents

I to V

ಬಂಡಾಯ ಧೋರಣೆಯ ವಿಶಿಷ್ಟ ಧ್ವನಿ ಬಸವರಾಜ ಸಬರದ

ಆಂಜನೇಯ, ಮಹಾದೇವಿ ಆರ್ ಹಿರೇಮಠ

01 to 12

ಪ್ರಸ್ತುತ ಲೇಖನದಲ್ಲಿ ಬಂಡಾಯ ಕವಿ ಬಸವರಾಜ ಸಬರದರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಅವಲೋಕಿಸಲಾಗಿದೆ. ಅವರ ಸಾಹಿತ್ಯದ ಮೇಲೆ ಅಂಬೇಡ್ಕರ್, ಲೋಹಿಯಾ, ಕಾರ್ಲ್ ಮಾರ್ಕ್ಸ್ ರ ಚಿಂತನೆಗಳ ಪ್ರಭಾವವನ್ನು ಗಮನಿಸಲಾಗಿದೆ. ಅವರ ಸೃಜನ ಮತ್ತು ಸೃಜನೇತರ ಸಾಹಿತ್ಯದ ಕೃತಿಗಳ ಪಟ್ಟಿಯೊಂದಿಗೆ ಸಾಹಿತ್ಯದ ಧೋರಣೆಯನ್ನು ಸಂಕ್ಷಿಪ್ತವಾಗಿ ಚರ್ಚಿಸಲಾಗಿದೆ. ಸಬರದರ ಕಾವ್ಯ, ನಾಟಕ, ವಿಚಾರ ಸಾಹಿತ್ಯ, ಸಂಶೋಧನೆ, ವಿಮರ್ಶೆ, ಸಂಪಾದನಾ ಕ್ಷೇತ್ರದಲ್ಲಿನ ಕೃತಿಗಳನ್ನು ಪ್ರತ್ಯೇಕಿಸಿ ವಿವರಿಸಲಾಗಿದೆ. ಮಹಿಳಾ ಮತ್ತು ಜನಪದ ಸಾಹಿತ್ಯ ವಿಮರ್ಶೆಗೆ ನೀಡಿದ ವಿಶೇಷ ಸೇವೆಯನ್ನು ಸ್ಮರಿಸಲಾಗಿದೆ. ಸಬರದ ಸಾಹಿತ್ಯದ ಕುರಿತು ಅವರ ಒಡನಾಡಿಗಳಾದ ಚೆನ್ನಣ್ಣ ವಾಲೀಕರ್, ಬರಗೂರು ರಾಮಚಂದ್ರಪ್ಪನವರ ಅಭಿಪ್ರಾಯಗಳನ್ನು ದಾಖಲಿಸಲಾಗಿದೆ.

Read More »

ಕೊರಗ ಜನಾಂಗ: ಪರಂಪರೆ ಮತ್ತು ಕೆಲವು ಐತಿಹ್ಯಗಳು

ಆಶಾ, ಮಾಧವ ಎಂ.ಕೆ.

13 to 21

ವೇದಕಾಲದಲ್ಲಿ ಮಾನವರೆಲ್ಲರೂ ಸಮಾನರಾಗಿದ್ದು ಅವರನ್ನು ಜಾತಿವ್ಯವಸ್ಥೆಯಿಂದ ಗುರುತಿಸುವ ಕ್ರಮ ಇರಲಿಲ್ಲ. ಮೇಲು ಕೀಳು, ಉಚ್ಚನೀಚವೆನ್ನುವ ಭೇದ-ಭಾವಗಳ ಕಲ್ಪನೆ ಆ ಕಾಲದಲ್ಲಿ ಇಲ್ಲವಾಗಿತ್ತು. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರೆಂಬ ನಾಲ್ಕು ವರ್ಣ ವ್ಯವಸ್ಥೆ ವ್ಯಕ್ತಿವ್ಯವಸ್ಥೆಯಾಗಿತ್ತೇ ವಿನಾಃ ಅದು ಜಾತಿ ವ್ಯವಸ್ಥೆಯಾಗಿರಲಿಲ್ಲ ಎಂಬ ವಿಚಾರ ಗೀತೆಯ ವ್ಯಾಖ್ಯೆಯಿಂದ ತಿಳಿದು ಬರುತ್ತದೆ.
ಕ್ರಮೇಣ ಮುಂದೆ ಅದು ಒಂದೊಂದು ವೃತ್ತಿ ಪ್ರವೃತ್ತಿಯ ಗುಂಪುಗಳಾಗಿ ಒಬ್ಬರಿಂದ ಮತ್ತೊಬ್ಬರಿಗೆ ಪ್ರಬಲವಾದ ಪ್ರತಿಸ್ಪರ್ಧಿಯಾದಾಗ ಅದು ನಂತರದಲ್ಲಿ ಸಮುದಾಯ ವ್ಯವಸ್ಥೆಯಾಗಿ ರೂಪುಗೊಂಡು ಬಲಿಷ್ಠವಾಯಿತು ಎಂದು ನಂಬಲಾಗಿದೆ. ಆಗ ಆ ಪಂಗಡಗಳೊಳಗೆ ಪೈಪೋಟಿ ಏರ್ಪಟ್ಟು ಘರ್ಷಣೆ ನಡೆದು, ವಿಜಯಿ ಆದವರು ಸೋತವರನ್ನು ತಮ್ಮಿಂದ ಕೀಳು ಮಟ್ಟದವರಾಗಿ ಕಂಡು ಅವರ ಕಾಯಕವ್ಯವಸ್ಥೆಯೇ ಮುಂದೆ ಒಂದು ಸಮುದಾಯ ಎಂದು ಗುರುತಿಸಿಕೊಂಡು ಜಾತಿಯ ವ್ಯವಸ್ಥೆಯಾಗಿ ರೂಪು ಪಡೆಯಿತು ಎಂದು ಭಾವಿಸಲಾಗಿದೆ.
ಆರಂಭದಲ್ಲಿ ಆದಿಮ ಜನಾಂಗ ಅಲೆಮಾರಿಯಾಗಿ ಬೇಟೆಯಾಡುತ್ತಾ ಕಾಡುತ್ಪನ್ನಗಳನ್ನು ಆಹಾರ ಕ್ರಮವಾಗಿಸಿ ನಂತರದಲ್ಲಿ ವ್ಯವಸಾಯ ಪದ್ಧತಿಯೊಂದಿಗೆ ಒಂದುಕಡೆ ನೆಲೆಯೂರಿ ಬದುಕುಕಟ್ಟಿಕೊಂಡಿತು ಎಂಬುದು ವಾಸ್ತವ ಸಂಗತಿ. ನಂತರದಲ್ಲಿ ಅದು ಮುಂದುವರಿದು ‘ಕೊಡುಕೊಳ್ಳುವಿಕೆʼಯಿಂದ ವ್ಯಾಪಾರ ಪ್ರವೃತ್ತಿಯೂ ಬೆಳೆದುಬಂತು. ಹೀಗೆ ನೆಲೆನಿಂತ ಅನೇಕ ಪಂಗಡಗಳಲ್ಲಿ ಕೆಲವು ಪಂಗಡಗಳು ಕಾಡಿನಲ್ಲಿಯೇ ಉಳಿದು ಬಾಳು ನಿರ್ವಹಿಸಿದ ಕಾರಣವಾಗಿ ಸಮಾಜದ ಮುಖ್ಯವಾಹಿನಿಯಿಂದ ಹಿಂದುಳಿಯುವಂತಾಯಿತು.
ಹೀಗೆ ಉಳಿದ ಅಲಕ್ಷಿತ ಸಮುದಾಯಗಳಲ್ಲಿ ‘ಕೊರಗʼ ಸಮುದಾಯವು ಒಂದು. ಗಿರಿಜನ ವರ್ಗದಲ್ಲಿ ಗುರುತಿಸಿಕೊಳ್ಳುವ ಈ ಜನಾಂಗ ತಮ್ಮದೇ ಕಟ್ಟುಪಾಡುಗಳಲ್ಲಿ ಜೀವನ ನಡೆಸಿ ಬಾಳುವುದನ್ನು ಕಾಣಬಹುದು.
ಈ ಲೇಖನದಲ್ಲಿ ‘ಕೊರಗʼ ಪದನಿಷ್ಪತ್ತಿ, ಸಮುದಾಯದ ಮೂಲ, ಐತಿಹ್ಯ ಮತ್ತು ಅದಕ್ಕೆ ಸಂಬಂಧಿಸಿದ ಚಾರಿತ್ರಿಕ ವಿಚಾರಗಳನ್ನು ಚರ್ಚಿಸಲಾಗಿದೆ.

Read More »

ಶಹಾಪೂರ ತಾಲೂಕಿನ ಶಾಸನಗಳ ಸಾಂಸ್ಕೃತಿಕ ಅಧ್ಯಯನ

ಬಾಬುರಾಯ ದೊರೆ

22 to 28

ಪ್ರಸ್ತುತ ಈ ಲೇಖನದಲ್ಲಿ ಶಾಸನಗಳ ಹಿನ್ನಲೆಯಲ್ಲಿ ಒಂದು ಪ್ರದೇಶದ ಸಾಂಸ್ಕೃತಿಕ ಇತಿಹಾಸವನ್ನು ಅರಿಯುವ ಪ್ರಯತ್ನ ಮಾಡಲಾಗಿದೆ. ಶಹಾಪುರ ತಾಲೂಕು ಸಾಂಸ್ಕೃತಿಕವಾಗಿ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಈ ಪ್ರದೇಶವನ್ನು ಮೌರ್ಯರು, ಶಾತವಾಹನರು, ಬಾದಾಮಿ ಚಾಲುಕ್ಯರು, ಕಲ್ಯಾಣಿ ಚಾಲುಕ್ಯರು, ಕಲಚೂರಿಗಳು, ಸೇವುಣರು, ಬಹಮನಿಯರು, ಆದಿಲ್‌ ಶಾಹಿಗಳು, ಸುರಪುರದ ಅರಸರು ಮತ್ತು ಹೈದರಾಬಾದ್ ನಿಜಾಮ ಮುಂತಾದವರು ಆಳಿದ್ದಾರೆ.
ಈ ಪ್ರದೇಶದಲ್ಲಿ ನೂರಾರು ಶಾಸನಗಳು ದೊರಕಿವೆ. ಮುಖ್ಯವಾಗಿ ಅಣಬಿ, ಇಂಗಳಗಿ, ದೋರನಹಳ್ಳಿ, ನಡಾಲ್‌, ಮದ್ದರಕಿ, ಮರಮಕಲ್‌, ಮೂಡಬೂಳ, ಸಗರ, ಶಿರವಾಳ, ಸಂಗಮ, ಹೋತಪೇಟೆ ಮತ್ತು ಭೀಮರಾಯನ ಗುಡಿಗಳಲ್ಲಿ ದೊರಕಿರುವ ಶಾಸನಗಳು ತುಂಬಾ ಮಹತ್ವದವುಗಳಾಗಿವೆ. ಎಲ್ಲ ಶಾಸನಗಳು ತಾಲೂಕಿನ ಸಾಂಸ್ಕೃತಿಕ ಇತಿಹಾಸಕ್ಕೆ ಮಹತ್ವದ ಆಕರಗಳಾಗಿ ಮಾಹಿತಿಯನ್ನು ಒದಗಿಸುತ್ತವೆ. ಈ ಮಾಹಿತಿಯ ಹಿನ್ನಲೆಯಲ್ಲಿ ಪ್ರಾಗೈತಿಹಾಸಿಕ ಕುರುಹುಗಳು, ರಾಜಕೀಯ ಇತಿಹಾಸ, ಧಾರ್ಮಿಕ ಇತಿಹಾಸ, ಅಗ್ರಹಾರಗಳು, ಅಳತೆ ಮತ್ತು ನಾಣ್ಯ ಮುಂತಾದ ವಿಷಯಗಳನ್ನು ಅರಿಯುವ ಪ್ರಯತ್ನ ಮಾಡಲಾಗಿದೆ.

Read More »

ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆ

ಭಾರತಿ ಎಸ್. ಗದ್ದಿ

29 to 36

ಪರಿಸರದ ಕುರಿತಾದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ಪರಿಸರದ ಬಗೆಗಿನ ಕುತೂಹಲ, ವಿಸ್ಮಯ, ತಮ್ಮ ಅನುಭವಗಳನ್ನು ಕಥೆ, ಕಾದಂಬರಿಗಳಲ್ಲಿ ನಿರೂಪಿಸಿದ್ದಾರೆ. ತಮ್ಮ ಬಾಲ್ಯದಿಂದ ಕೃಷಿ ಆರಂಭಿಸಿದ ದಿನಗಳವರೆಗೆ ಪರಿಸರದೊಂದಿಗಿನ ತಮ್ಮ ಸಂಬಂಧವನ್ನು ಹಂಚಿಕೊಂಡಿದ್ದಾರೆ. ಅವರ ಪರಿಸರ ಕಥೆ, ಕಾದಂಬರಿಗಳಲ್ಲಿ ಪಾತ್ರಗಳು ಓದುಗರಿಗೆ ಹತ್ತಿರವಾಗುತ್ತವೆ. ಈ ಕೃತಿಯು ‘ಪ್ರಕೃತಿಯು ನಮ್ಮ ಬದುಕಿನ ಭಾಗ ಮಾತ್ರವಲ್ಲ, ನಾವು ಪ್ರಕೃತಿಯ ಒಂದು ಭಾಗʼ ಎಂಬುದು ಒತ್ತಿ ಹೇಳಿದೆ.
ಮಲೆನಾಡಿನ ಐಸಿರಿಯನ್ನು ವರ್ಣಿಸಿದ ಕನ್ನಡದ ಪ್ರಮುಖ ಸಾಹಿತಿಗಳಲ್ಲಿ ಒಬ್ಬರಾದ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ಮಹತ್ವದ ಕೊಡುಗೆ ನೀಡಿದ ಕತೆಗಾರ, ಕಾದಂಬರಿಕಾರ, ಅಂಕಣಕಾರ, ಕೃಷಿಕರು ಮತ್ತು ವಿಶಿಷ್ಟ ಚಿಂತಕರು. ತಮ್ಮ ಬದುಕು-ಬರಹಗಳಿಂದ ಜನಮನ ಗೆದ್ದವರು. ಪರಿಸರ ಇವರ ಉಸಿರು. ನಿಸರ್ಗ ಇವರು ಆರಾಧಿಸುವ ದೇವರು. “ಮಾನವನಿಗೆ ಪ್ರಕೃತಿಯ ಅಗತ್ಯವಿದೆ ಹೊರತು ಪ್ರಕೃತಿಗೆ ಮಾನವನ ಅಗತ್ಯವಿಲ್ಲ” ಎಂಬ ಮಹೋನ್ನತ ಸಂದೇಶವನ್ನು ಸಾರಿದ ಕನ್ನಡದ ಪರಿಸರ ಪ್ರೇಮಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಕನ್ನಡದ ಅಪರೂಪದ ಬರಹಗಾರರು.

Read More »

ಮಧುರಚೆನ್ನರ ‘ನನ್ನ ನಲ್ಲʼ

ಬಸೀರಾಬಾನು ನಿಡಗುಂದಿ

37 to 47

ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಯ ಹಲಸಂಗಿ ಎಂಬ ಗ್ರಾಮದಲ್ಲಿ ಹುಟ್ಟಿದ ʻಹಲಸಂಗಿ ಗೆಳೆಯರ ಬಳಗʼದ ಮೇಲೆ ಗಾಢ ಪರಿಣಾಮ ಬೀರಿದ್ದು ಜನಪದ ಸಾಹಿತ್ಯ. ೧೯೨೨ ರಲ್ಲಿ ಸ್ಥಾಪಿತವಾದ ಗೆಳೆಯರ ಬಳಗ, ೧೯೪೩ ರ ವರೆಗೆ ಈ ಗೆಳೆಯರು ಸಾಹಿತ್ಯಿಕ ಚಟುವಟಿಕೆಯಲ್ಲಿ ತೊಡಗಿದ್ದರು. ೧೯೪೩ರ ನಂತರ ʻಹಲಸಂಗಿ ಗೆಳೆಯರ ಬಳಗʼ, ʻಶ್ರೀ ಅರವಿಂದ ಮಂಡಳʼವಾಗಿ ಪರಿವರ್ತನೆಗೊಂಡಿತು. ಹಲಸಂಗಿ ಗೆಳೆಯರ ಗುಂಪಿನ ಪ್ರಮುಖ ಸದಸ್ಯರೆಂದರೆ- ಮಧುರಚೆನ್ನ(ಚೆನ್ನಮಲ್ಲಪ್ಪ), ಸಿಂಪಿ ಲಿಂಗಣ್ಣ, ಪಿ. ಧೂಲಾಸಾಹೇಬ(ಪಟೇಲ್‌ ಕಾಸೀಮಸಾಬ), ಕಾಪಸೆ ರೇವಪ್ಪ, ಓಲೇಕಾರ ಮಾದಣ್ಣ, ಚೆನ್ನಪ್ಪ ಸರಸಂಬಿ, ಆದಮ ಮಸಳಿ, ಶಿವಲಿಂಗಪ್ಪ ಸರಸಂಬಿ, ಗುರುಬಸಪ್ಪ ಗಲಗಲಿ ಮತ್ತು ರಾಘವೇಂದ್ರ ಸುರಪುರ(ರಾಘಣ್ಣ). ಈ ಗುಂಪಿನ ಎಲ್ಲ ಸದಸ್ಯರು ಕರ್ನಾಟಕದ ಬೇರೆ ಬೇರೆ ಭಾಗದಲ್ಲಿ ಇರತಕ್ಕಂತಹ ಸಾಹಿತಿಗಳೊಂದಿಗೆ ಉತ್ತಮ ಸ್ನೇಹ ಸಂಬಂಧವನ್ನು ಹೊಂದಿದ್ದರು. ವರಕವಿ ಬೇಂದ್ರೆ, ಡಾ. ಶಿವರಾಮ ಕಾರಂತ, ರಂ. ಶ್ರೀ ಮುಗಳಿ, ವಿ. ಕೃ. ಗೋಕಾಕ ಮತ್ತು ಸ. ಸ. ಮಾಳವಾಡ ಇವರೆಲ್ಲ ಹಲಸಂಗಿಗೆ ಬಂದು ಹಲಸಂಗಿ ಗೆಳೆಯರ ಬಳಗದೊಂದಿಗೆ ನವೀನ ಚಿಂತನೆಗಳನ್ನು ಹಂಚಿಕೊಳ್ಳುತ್ತಿದ್ದರು.

Read More »

ನಾಟಕ ಸಾಹಿತ್ಯಕ್ಕೆ ಕುವೆಂಪು ಅವರ ಕೊಡುಗೆ

ಹೊನ್ನಪ್ಪ ಹೆಚ್. ಕಡೇನಾಯ್ಕನಹಳ್ಳಿ

48 to 54

ಕನ್ನಡ ಸಾಹಿತ್ಯದಲ್ಲಿ ಮೂರು ಘಟ್ಟಗಳನ್ನು ನೋಡಬಹುದು. ಅವುಗಳೆಂದರೆ ಹಳೆಗನ್ನಡ, ನಡುಗನ್ನಡ, ಹೊಸಗನ್ನಡ. ಈ ಹೊಸಗನ್ನಡ ಸಾಹಿತ್ಯದಲ್ಲಿ ಮತ್ತೆ ನಾಲ್ಕು ಘಟ್ಟಗಳನ್ನು ನಾವು ನೋಡಬಹುದು. ಅದರಲ್ಲಿ ನವೋದಯ ಸಾಹಿತ್ಯ, ಪ್ರಗತಿಶೀಲ ಸಾಹಿತ್ಯ, ನವ್ಯ ಸಾಹಿತ್ಯ ಮತ್ತು ದಲಿತ ಬಂಡಾಯ ಸಾಹಿತ್ಯ. ಈ ಎಲ್ಲ ಕಾಲಘಟ್ಟಗಳಲ್ಲಿ ಅನೇಕ ಮಹಾಕವಿಗಳು ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೃತಿಗಳನ್ನು ಕೊಟ್ಟು ಹೋಗಿದ್ದಾರೆ. ಅದರಲ್ಲಿ ನಾಟಕ ಸಾಹಿತ್ಯ ಪ್ರಕಾರವು ದೊಡ್ಡ ಮಟ್ಟದಲ್ಲಿ ಬೆಳವಣಿಗೆಯನ್ನು ಪಡೆದು ಕನ್ನಡ ಸಾಹಿತ್ಯಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ನಾಟಕ ಸಾಹಿತ್ಯ ಗದ್ಯ ಪ್ರಕಾರಕ್ಕೆ ಸೇರಿದ್ದು. ಹಾಗಾಗಿ ಇದು ಓದುಗರ ಮನಸ್ಸನ್ನು ಸೆಳೆಯುತ್ತದೆ. ದೊಡ್ಡ ದೊಡ್ಡ ಮಹಾನ್ ಕವಿಗಳು ಅನೇಕ ನಾಟಕಗಳನ್ನು ರಚಿಸಿದ್ದಾರೆ. ನವೋದಯ ಸಾಹಿತ್ಯದಲ್ಲಿ ನಾಟಕ ಸಾಹಿತ್ಯ ತನ್ನದೇ ಆದ ಮಹತ್ವವನ್ನು ಪಡೆದುಕೊಂಡು ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತು. ನವೋದಯ ಸಾಹಿತ್ಯಕ್ಕೆ ಬಿಎಂಶ್ರೀ ಅವರು ನಾಂದಿ ಹಾಡಿದರು. ಮುಂದೆ ಕನ್ನಡದ ಶ್ರೇಷ್ಠ ಕವಿಗಳಾದ, ಪ್ರಥಮ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕುವೆಂಪು ಅವರು ಎಲ್ಲ ಪ್ರಕಾರದಲ್ಲಿ ಸಾಹಿತ್ಯವನ್ನು ರಚಿಸಿ ನಾಟಕ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಕುವೆಂಪು ಅವರ ನಾಟಕಗಳು ಕನ್ನಡ ಸಾಹಿತ್ಯಕ್ಕೆ ಹೊಸ ದಿಕ್ಸೂಚಿಯನ್ನೇ ನೀಡಿತು. ಕುವೆಂಪು ಅವರು ನಾಟಕ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರವಾದದ್ದು. ಅವರು ರಚಿಸಿದ ನಾಟಕಗಳ ಕುರಿತು ನಾವಿಲ್ಲಿ ನೋಡಬಹುದು.

Read More »

ಕೊನೆಯಿರದ ಬಾನಲ್ಲಿ ಅಂತ್ಯವಿಲ್ಲದ ಹಾಡು

ಎಂ.ಡಿ. ಚಿತ್ತರಗಿ

55 to 65

‘ಒಂದು ಪಾತ್ರ ಹಲವು ಪಾತ್ರ-ಚಿತ್ರಣಗಳಿಗೆ ದೇಶ, ಭಾಷೆ, ಕಾಲದ ಗಡಿಯನ್ನು ಮೀರಿ ಜೀವ ತುಂಬುತ್ತಲೇ ಹೋಗುತ್ತದೆʼ ಎಂಬ ಮಾತನ್ನು ಮಹಾಭಾರತದ ಕರ್ಣ ಮತ್ತೆ ಮತ್ತೆ ಸಾಕ್ಷೀಕರಿಸುತ್ತಲೇ ಹೋಗುತ್ತಾನೆ. ಕೆಲವು ಕಪ್ಪು ಚುಕ್ಕೆಗಳ ಮಧ್ಯೆಯೂ ಕೆಸರಲ್ಲರಳಿದ ಕುಸುಮದಂತೆ ಘಮಘಮಿಸುತ್ತಲೇ ಇರುವ ಪಾತ್ರವದು. ಹಲವು ಭಾರತೀಯ ಭಾಷೆಗಳಲ್ಲಿ ವೈವಿಧ್ಯಮಯವಾಗಿ ಹರಿದ ಕರ್ಣನ ಪಾತ್ರವು ಕನ್ನಡದಲ್ಲೂ ಹುಲುಸಾದ ಬೆಳೆಯನ್ನೇ ತಂದಿದೆ. ಈ ಸಾಲಿಗೆ ಜಗದೀಶ ಹಾದಿಮನಿಯವರ ನಾಟಕ ಕೃತಿಯು ಹೊಸದೊಂದು ಸೇರ್ಪಡೆ.
ಮಹಾಭಾರತದ ಕರ್ಣ ವರ್ತಮಾನದ ಬದುಕಿಗೆ, ಅಸ್ತವ್ಯಸ್ತತೆಗೆ, ರಾಜಕಾರಣಕ್ಕೆ ಎದುರಾಗುತ್ತಲೇ ಹೋಗುತ್ತಾನೆ. ಶ್ರೇಷ್ಠ ಕುಲದಲ್ಲಿ ಹುಟ್ಟಿಯೂ ಅನಾಥನಂತೆ ಕೆಳವರ್ಗದ ಪ್ರತಿನಿಧಿಯಾಗಿ ಬೆಳೆವ ಪರಿ, ವಿದ್ಯೆ ಕಲಿತರೂ ಶಾಪಕ್ಕೊಳಗಾಗುವ ಅಸಹಾಯಕತೆ, ವೀರಾಧಿವೀರನಾದರೂ ಹೆಜ್ಜೆಹೆಜ್ಜೆಗೂ ಅನುಭವಿಸುವ ಅವಮಾನ, ಅನ್ನದ ಋಣಕ್ಕೆ, ಮಾತಿಗೆ, ತಲೆಬಾಗಿ ಕ್ಷಯಿಸಿಹೋಗುವ ರೀತಿ ಹಾಗೂ ಆತನ ಉದಾತ್ತ ಗುಣಗಳ ವ್ಯಕ್ತಿತ್ವವು ಮತ್ತೆ ಮತ್ತೆ ಮುನ್ನೆಲೆಗೆ ತರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ನೂರೆಂಟು ಮಜಲುಗಳ ನಡುವೆಯೂ ಹೊಸ ತಲೆಮಾರಿನ ಬರಹಗಾರರನ್ನು ಈತನ ಪಾತ್ರ ಸೆಳೆಯುತ್ತಿದೆ ಎಂಬುದಕ್ಕೆ ಪ್ರಸ್ತುತ ನಾಟಕ ಸಾಕ್ಷಿಯಾಗುತ್ತದೆ.
ಜಗದೀಶ ಹಾದಿಮನಿಯವರು ಕರ್ಣನನ್ನು ವಿಭಿನ್ನ ನೋಟದಲ್ಲಿ ಓದುಗರ ಎದೆಗಿಳಿಸುತ್ತಾರೆ. ಹಲವು ಬದಲಾವಣೆ ಹಾಗೂ ಕೆಲವು ಹೊಸತನಗಳೊಂದಿಗೆ ವಿವೇಕ ಮತ್ತು ವೈಚಾರಿಕತೆಯ ರಾಜಮಾರ್ಗದಲ್ಲಿ ಕರ್ಣನನ್ನು ಹೊಸ ನೋಟದಲ್ಲಿ ಪರಿಚಯಿಸಿದ್ದಾರೆ. ಕಥಾನಾಯಕನ ನೆಪದಲ್ಲಿ ವರ್ತಮಾನದ ಕತ್ತಲಿಗೆ ಬೆಳಕಿಡುವ ನಾಟಕಕಾರರ ಪ್ರಯತ್ನ ವಿಶೇಷವೆನಿಸುತ್ತದೆ. ಇಲ್ಲಿ ಕಥಾನಾಯಕನನ್ನು ಕೇವಲ ಒಂದು ಪಾತ್ರವಾಗಿ ನೋಡದೆ ಗುಣ-ಸ್ವಭಾವಗಳ ದೃಷ್ಟಿಕೋನದಲ್ಲಿ ಒಬ್ಬ ಮನುಷ್ಯನನ್ನಾಗಿ ನೋಡಿ, ತಾವು ಕಂಡ ಬಗೆಯನ್ನು ಓದುಗ ವಲಯಕ್ಕೂ ತೆರೆದಿಡುತ್ತಾರೆ. ಕರ್ಣನಾದಿಯಾಗಿ ಉಳಿದೆಲ್ಲ ಪಾತ್ರಗಳನ್ನು ವಿವೇಕದ ಕಣ್ಣಿಂದಲೇ ನೋಡುವ ಲೇಖಕರ ಎಚ್ಚರಿಕೆಯ ನಡೆಯು ಸದ್ಯದ ಲೇಖಕರಿಗೆಲ್ಲ ಮಾದರಿ. ಪ್ರತೀ ಸನ್ನಿವೇಶವನ್ನು ವಾಸ್ತವದ ಕನ್ನಡಿಗೆ ಸೂಕ್ಷ್ಮವಾಗಿ ಬಿಂಬಿಸುವ ಹಾಗೂ ಹಲ-ಕೆಲವು ಪ್ರಶ್ನೆಗಳೊಂದಿಗೆ ಚಾವಟಿ ಬೀಸುವ ಲೇಖಕರ ಜಾಣ್ಮೆ ಮೆಚ್ಚುವಂಥದ್ದು. ಹಾಗೆ ಮೂಲಕ್ಕೆ ಬಾಧೆ ಬಾರದಂತೆ, ಅತಿಮಾನುಷತೆಗಳು ಹೆಚ್ಚು ಇಣುಕದಂತೆ ತೀರಾ ಸಹಜವಾಗಿ ಹೆಣೆದ ಕಥಾನಕವಿದು. ಗದ್ಯಮಾದರಿಯಲ್ಲಿದ್ದರೂ ಪದ್ಯದ ಲಯವನ್ನೇ ಉಣಬಡಿಸುತ್ತಾ ಸಾಗುವ ಇಪ್ಪತ್ಮೂರು ದೃಶ್ಯಗಳು ಗೀತನಾಟಕದ ಮುದ ನೀಡುತ್ತವೆ. ಮುಖ್ಯವಾಗಿ ನಾಣ್ಣುಡಿ-ಜಾಣ್ಣುಡಿ, ಆಡುಭಾಷಾ ಸೊಗಸು, ರೂಪಕಗಳು ಹಾಗೂ ಪದಸಮೃದ್ಧಿಯ ಭಾಷಾಪ್ರೌಢಿಮೆಯೇ ಕೃತಿಯನ್ನು ಗೆಲ್ಲಿಸಿವೆ.

Read More »

ಹಂಪಿ ಮತ್ತು ಜೈನ ಧರ್ಮ

ಎನ್.ಎಸ್. ವೀರೇಶ್ ಉತ್ತಂಗಿ

66 to 74

ಹಂಪಿ ಧರ್ಮದ ನೆಲೆಬೀಡು, ಹತ್ತು ಹಲವು ಧರ್ಮ ಪಂಥಗಳ ಸಂಗಮ ಕ್ಷೇತ್ರ. ಸಹಸ್ರಾರು ವರ್ಷಗಳಿಂದಲೂ ಪಂಪಾಂಬಿಕೆಯ ಶಕ್ತಿ ಕೇಂದ್ರವಾಗಿದ್ದ ಹಂಪಿಗೆ ಮೊದಲು ಶೈವ ಧರ್ಮ ಪ್ರವೇಶಿಸಿತು. ನಂತರ ಬೌದ್ಧ, ಜೈನ, ವೀರಶೈವ, ಇಸ್ಲಾಂ, ವೈಷ್ಣವ, ಶಾಕ್ತ ಮೊದಲಾದ ಧರ್ಮ ಪಂಥಗಳು ಹಂಪಿ ಪ್ರವೇಶಿಸಿ ತಮ್ಮದೇ ಆದ ನೆಲೆ ಕಂಡುಕೊಂಡದ್ದನ್ನು ನಾವು ಕಾಣಬಹುದು. ಈ ಧರ್ಮ ಪಂಥಗಳು ಹಂಪಿಯನ್ನು ಯಾವಾಗ ಪ್ರವೇಶಿಸಿದವು ಎಂಬುದನ್ನು ನಿರ್ದಿಷ್ಟವಾಗಿ ಹೇಳಲು ಕಷ್ಟಸಾಧ್ಯ. ಕ್ರಿಸ್ತಪೂರ್ವದಿಂದಲೂ ಇಲ್ಲಿ ಧರ್ಮದ ಚಹರೆಗಳು ಕಂಡುಬರುತ್ತವೆ. ಮೌರ್ಯ ಸಾಮ್ರಾಟ ಅಶೋಕನಿಂದ ಬೌದ್ಧ ಧರ್ಮ ದಕ್ಷಿಣ ಭಾರತ ಪ್ರವೇಶಿಸಿದಂತೆ, ಭದ್ರಬಾಹು ಮುನಿಯಿಂದ ಜೈನ ಧರ್ಮ ಕರ್ನಾಟಕ ಪ್ರವೇಶಿಸಿತು. ಹಂಪಿಯನ್ನು ಜೈನ ಧರ್ಮ ಯಾವಾಗ ಪ್ರವೇಶಿಸಿತು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ದೊರೆಯುವುದಿಲ್ಲ. ಮಹಾನವಮಿ ದಿಬ್ಬದ ಮುಂದೆ ದೊರೆತ ಶಿಲ್ಪಪೆಟ್ಟಿಕೆಯಲ್ಲಿರುವ ಪ್ರಾಕೃತ ಶಾಸನ ಆಧಾರದಿಂದ ಜೈನ ಧರ್ಮವು ಬಹುಶಃ ಕ್ರಿಸ್ತಶಕ 12ನೇ ಶತಮಾನದಲ್ಲಿ ಹಂಪಿಯನ್ನು ಪ್ರವೇಶಿಸಿತೆಂದು ಹೇಳಬಹುದಾಗಿದೆ.

Read More »

ಕನ್ನಡದ ಪಂಡಿತರು ಗಂಗಾಧರ ಮಡಿವಾಳೇಶ್ವರ ತುರಮರಿಯವರು

ನಾಗಪ್ಪ ಸುರಳಿಕೇರಿ

75 to 85

ವಿಶ್ವದಲ್ಲಿಯೇ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಕನ್ನಡವೂ ಒಂದು. ಕನ್ನಡ ಭಾಷೆ ಅತ್ಯಂತ ಶ್ರೀಮಂತ ಸಾಹಿತ್ಯವನ್ನು ಹೊಂದಿರುವ ಭಾಷೆಯಾಗಿದೆ. ಸುಮಾರು ಎರಡೂವರೆ ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆಯಲ್ಲಿ ಅನೇಕ ಕವಿಗಳನ್ನು, ಮಹನೀಯರನ್ನು, ಪಂಡಿತರನ್ನು ಕುರಿತು ಕೇಳಿದ್ದೇವೆ. ಇವರೆಲ್ಲರ ಜೊತೆಗೆ ಕನ್ನಡ ಭಾಷೆ, ಸಾಹಿತ್ಯಕ್ಕೆ ಹಾಗೂ ನಾಡಿಗೆ ರಕ್ಷಣೆ ಕೊಡುವ ಅರಸು ಮನೆತನಗಳನ್ನು, ರಾಜ ಮಹಾರಾಜರನ್ನು, ಅಧಿಕಾರಿಗಳನ್ನು ಕುರಿತು ಕೇಳಿದ್ದೇವೆ. ಹಾಗೆಯೇ 19ನೇ ಶತಮಾನದಲ್ಲಿ ಕನ್ನಡ ಭಾಷೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಮರಾಠಿ ಪ್ರಭಾವದಿಂದ ಬಹಳ ಸಂಕಷ್ಟಗಳು ಎದುರಾಗಿದ್ದವು. ಅಂತಹ ಸನ್ನಿವೇಶದಲ್ಲಿಯೂ ಹಲವು ಕನ್ನಡ ಪಂಡಿತರು ಕನ್ನಡ ಬೆಳವಣಿಗೆಗೆ ಕಂಕಣಬದ್ಧರಾಗಿ ಶ್ರಮಿಸಿದ್ದಾರೆ. ಕನ್ನಡ ಭಾಷೆಯ ಪ್ರಚಾರವನ್ನು ಮುಖ್ಯ ಉದ್ದೇಶವನ್ನಾಗಿಟ್ಟುಕೊಂಡು ಅನೇಕ ಸಾಧಕರು ಕನ್ನಡ ಶಾಲೆಗಳನ್ನು ತೆರೆಯುವುದರ ಮೂಲಕ ಹಾಗೂ ಸಾಹಿತ್ಯದ ಹಳಗನ್ನಡದ ಗ್ರಂಥಗಳಿಗೆ ವ್ಯಾಖ್ಯಾನಗಳನ್ನು ಕೊಡುವುದರ ಮೂಲಕ ಹಾಗೂ ಶಬ್ದಕೋಶಗಳನ್ನು ರಚನೆ ಮಾಡುವುದರ ಮೂಲಕ ಕನ್ನಡ ಭಾಷೆಗೆ ತಮ್ಮದೇ ಆದ ಕೊಡುಗೆಯನ್ನು ನೀಡಿ ಹೋಗಿದ್ದಾರೆ. ಅಂತವರಲ್ಲಿ 19ನೇ ಶತಮಾನಕ್ಕೆ ಒಬ್ಬ ಕನ್ನಡ ಸೇನಾನಿಯಾಗಿ ಬಂದವರು, ಕನ್ನಡದ ಪಂಡಿತರು, ಗಂಗಾಧರ ಮಡಿವಾಳೇಶ್ವರ ತುರಮರಿಯವರು ಒಬ್ಬರು. ಇವರು ನಾಡು-ನುಡಿಗೆ ನೀಡಿದ ಅಪಾರ ಸೇವೆಯನ್ನು ನಾವು ನೆನೆಯಲೇಬೇಕು.

Read More »

ಬಾನು ಮುಸ್ತಾಕ್ ಅವರ ಕಥೆಗಳಲ್ಲಿ ಹೆಣ್ಣಿನ ಸಂವೇದನೆಗಳು

ಪ್ರಕಾಶ ಬಿ.

86 to 93

ಕನ್ನಡದ ಹೆಸರಾಂತ ಲೇಖಕಿ, ಅಲ್ಪಸಂಖ್ಯಾತ ಸಮುದಾಯದ ಹುಟ್ಟು ಹೋರಾಟಗಾರ್ತಿ, ಪ್ರಖರ ಚಿಂತಕಿ, ಬಾನು ಮುಸ್ತಾಕ್ ಅವರ ಬಹುದಿನಗಳ ಕಥೆಗಳ ‘ಎದೆಯ ಹಣತೆʼ ಸಂಕಲನದ ಆಂಗ್ಲ ಅನುವಾದ ‘ಹಾರ್ಟ್ ಲ್ಯಾಂಪ್ʼ ಕೃತಿಗೆ ಜಾಗತಿಕ ಮಟ್ಟದ ಬೂಕರ್ ಪ್ರಶಸ್ತಿ ದೊರೆತದ್ದು, ಕನ್ನಡಿಗರ ಅಭಿಮಾನಕ್ಕೆ ಭಾಜನವಾಗಿದೆ. ಮೊಟ್ಟಮೊದಲ ಬಾರಿಗೆ ಕನ್ನಡದ ಕೃತಿಗೆ ಈ ಪ್ರತಿಷ್ಠಿತ ಪ್ರಶಸ್ತಿ ದೊರೆಯುವ ಮೂಲಕ ಎರಡು ಸಾವಿರ ವರ್ಷಗಳ ಸುದೀರ್ಘ ಇತಿಹಾಸ ಹೊಂದಿದ ಕನ್ನಡ ಭಾಷೆಯ ಘನತೆ ಗೌರವವು ನೂರ್ಮಡಿಯಾದಂತಾಗಿದೆ. ಅನುವಾದಿತ ಕಾದಂಬರಿ ವಿಭಾಗದ ಅಡಿಯಲ್ಲಿ ಈ ಮಹೋನ್ನತ ಗೌರವಕ್ಕೆ ಭಾಜನರಾಗಿದ್ದು, “ಹಾರ್ಟ್ ಲ್ಯಾಂಪ್” ಕೃತಿಯು ಈ ಉನ್ನತ ಪ್ರಶಸ್ತಿಯನ್ನು ಪಡೆದ ಜಗತ್ತಿನ ಮೊದಲ ಸಣ್ಣ ಕಥಾ ಸಂಕಲನ ಇದಾಗಿದ್ದು, ಇದು ಒಂದು ವಿಶಿಷ್ಟ ಹಾಗೂ ಗಮನಾರ್ಹವಾಗಿದೆ. ತೃತೀಯ ಜಗತ್ತಿಗೆ ಮಹಿಳೆಯರ ಭಾವಾಭಿವ್ಯಕ್ತಿಯನ್ನು ತೆರೆದಿಡುವ ಬಾನು ಮುಸ್ತಾಕ್ ಅವರ ಸಾಹಿತ್ಯ ಕನ್ನಡದ ಓದುಗರ ಪಾಲಿಗೆ ಮಾನವತೆಯ ಕಡೆ ಹೋಗುವುದನ್ನು ಕಲಿಸುವ ಸಾಹಿತ್ಯವಾಗಿದೆ. ವಿಚ್ಛಿದ್ರಕಾರಿ ಶಕ್ತಿಗಳು, ಮತಾಂಧತೆ ಹಾಗೂ ಮೂಲಭೂತವಾದ ಒಟ್ಟಾಗಿ ಬೆಸೆದುಕೊಂಡು ಜಗತ್ತನ್ನು ನಾಶ ಮಾಡುತ್ತಿರುವ ಹೊತ್ತಲ್ಲಿ, ಬಾನು ಮುಸ್ತಾಕ್ ಅವರ ಮಾನವೀಯತೆಯ ಬೆಸುಗೆ ಎಲ್ಲ ಮೂಲಭೂತವಾದಿ ಶಕ್ತಿಗಳಿಗೆ ಕೊಟ್ಟಿರುವ ಕಪಾಳಮೋಕ್ಷ ಎಂದು ನಾನು ಭಾವಿಸುತ್ತೇನೆ. ಇದು ಎಲ್ಲಾ ರೀತಿಯ ಧಾರ್ಮಿಕ ದರ್ಪಗಳಿಗೆ ಕೊಟ್ಟಿರುವ ಏಟು ಮತ್ತು ಮಾನವೀಯ ಧರ್ಮಕ್ಕೆ, ಎಲ್ಲಾ ಧರ್ಮದಲ್ಲಿರುವ ಮಾನವೀಯ ವ್ಯಕ್ತಿತ್ವಗಳಿಗೆ ಸಿಕ್ಕಿರುವ ಮನ್ನಣೆ ಕೂಡ ಆಗಿದೆ. 12ನೇ ಶತಮಾನದ ಅಕ್ಕನ ಅನುಭಾವದ ಧೈರ್ಯ 21ನೇ ಶತಮಾನದ ಬಾನು ಮುಸ್ತಾಕ್ ಅವರ ಅಭಿವ್ಯಕ್ತಿ ಧೈರ್ಯ ಮೆಚ್ಚಬೇಕು. ಸಮಾಜದ ವೈರುಧ್ಯತೆಗಳಿಗೆ ಇವರ ಕಥಾ ಸಾಹಿತ್ಯ ಲಿಂಗತ್ವದ ಆಚೆಯ ಅನೇಕ ವರ್ತಮಾನದ ಸವಾಲುಗಳನ್ನು ನಾವು ಎಷ್ಟರ ಮಟ್ಟಿಗೆ ಎದುರಿಸುತ್ತಿದ್ದೇವೆ ಎಂಬುದನ್ನು ಸಾರೀಕರಿಸುತ್ತವೆ. ನಮ್ಮೊಳಗಿನ ಬೇಗುದಿಗಳಿಗೆ ಉತ್ತರವನ್ನು ಕಾಣಿಸುತ್ತವೆ. ಒಟ್ಟಾರೆ ಈ ಕಥೆಗಳು ಮಾಯಲಾರದ ಗಾಯದ ಕಥೆಗಳಾಗಿವೆ. ಮಾಗಿದ ಮನಸ್ಸುಗಳ ಹೆಣ್ಣಿನ ಒಡಲ ಉರಿಯ ಕಥನಗಳಿವು. ಬಾನು ಅವರ ಆತ್ಮಕಥೆಯಂತೆ ಬರೆಯಲ್ಪಟ್ಟ ಹೆಣ್ತನದ ಅಭಿವ್ಯಕ್ತಿಯ ಬಗೆಯ ಕಥೆಗಳಿವು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಒತ್ತಡಗಳಿಗೆ ಒಳಗಾಗುತ್ತಿರುವ ಲೋಕದ ಎಲ್ಲ ಹೆಣ್ಣುಮಕ್ಕಳು ಅನುಭವಿಸುತ್ತಿರುವ ಸ್ತ್ರೀ ಶೋಷಣೆಯ ಹಲವು ಮುಖಗಳ ಅನಾವರಣ ಮಾಡುತ್ತಾರೆ. ಬಾನು ಮುಸ್ತಾಕ್ ಅವರ ವೃತ್ತಿ ಪ್ರವೃತ್ತಿ ಜೀವನದಲ್ಲಿ ಕಂಡ ಅನುಭವ ಲೋಕಕ್ಕೆ ದಕ್ಕಿದ ಘಟನೆಗಳನ್ನು ಜೀವಂತ ಕತೆಯಾಗಿಸಿದ್ದು ಈ ಹೆಣ್ಣಿನ ಕತೆಗಳ ಯಶಸ್ಸಿನ ಹಿಂದಿನ ಶಕ್ತಿಯಾಗಿದೆ. ಕನ್ನಡ ಸೀಮೆಯನ್ನು ಮೀರಿ ಜಗತ್ತಿನಾದ್ಯಂತ ಸಾಹಿತ್ಯಾಸಕ್ತರಿಗೆ ಪರಿಚಿತ ಕಥೆಗಳಾಗಿ ಹೆಣ್ಣಿನ ಸಂವೇದನೆಗೆ ನೀಡಿದ ಮಹತ್ವದ ಕೊಡುಗೆಗಳಾಗಿವೆ.

Read More »

ಯಶವಂತ ಚಿತ್ತಾಲರ ‘ಶಿಕಾರಿʼ ಒಂದು ಅವಲೋಕನ

ಪುಟ್ಟಸ್ವಾಮಿ

94 to 101

ಯಶವಂತ ಚಿತ್ತಾಲರ ‘ಶಿಕಾರಿʼಯ ಕೇಂದ್ರ ಪ್ರತಿಮೆ ಬೇಟೆ... ಇಂದಿನ ಔದ್ಯೋಗೀಕೃತ ನಾಗರಿಕತೆಯಲ್ಲಿ ಎಲ್ಲಿಯೂ ನೋಡಸಿಗುವ ಮನುಷ್ಯನಿಂದ ಮನುಷ್ಯನ ಬೇಟೆ ‘ಶಿಕಾರಿʼಯ ಕೇಂದ್ರ ವ್ಯಕ್ತಿ ನಾಗಪ್ಪ. ಇಲ್ಲಿ ಬೇಟೆಯ ಗುರಿ ಸ್ವಾರ್ಥ, ಸ್ವಹಿತ ರಕ್ಷಣೆಗಳ ಉದ್ದೇಶಗಳಿಂದ ಒಂದಾದ ಬೇಟೆಗಾರರ ತಂಡವೇ ಅದನ್ನು ಬೆನ್ನು ಹತ್ತುತ್ತದೆ. ಅವನ ಅಸ್ತಿತ್ವದ ಬೇರುಗಳನ್ನೇ ಅಲುಗಾಡಿಸಿ ಅವನ ನಾಶಕ್ಕಾಗಿ ಹೊಂಚುಹಾಕುತ್ತದೆ. ಇಂತಹ ಒಂದು ಸನ್ನಿವೇಶದಲ್ಲಿ ಮನುಷ್ಯನ ಬಾಳಿಗೆ ಅರ್ಥವಿದೆಯೇ? ಇದರಿಂದ ಪಾರಾಗಿ ಬದುಕುವ ಸಾಧ್ಯತೆಗಳಿವೆಯೇ, ಇಂತಹ ಸನ್ನಿವೇಶ ಹುಟ್ಟಿತಾದರೂ ಹೇಗೆ? ಅದಕ್ಕೆ ಹೊಣೆಗಾರರು ಯಾರು? ಎನ್ನುವ ಮೂಲಭೂತ ಪ್ರಶ್ನೆಗಳನ್ನು ಎತ್ತುವುದರ ಮೂಲಕ ‘ಶಿಕಾರಿʼ ನಮಗೆ ಅತ್ಯಂತ ಪ್ರಸ್ತುತವಾದ ಕೃತಿಯಾಗಿದೆ. ಕನ್ನಡದ ಮಟ್ಟಿಗೆ ತೀರಾ ಹೊಸ ವಸ್ತುವನ್ನು ಆಯ್ದುಕೊಂಡ ಚಿತ್ತಾಲರು ಅದನ್ನು ಬಹುಸಮರ್ಥವಾಗಿ ನಿರ್ವಹಿಸಿದ್ದಾರೆ. (ಡಾ. ಜಿ.ಎಸ್. ಅಮೂರ) ಅವರು ಕೃತಿಯ ಹಿನ್ನುಡಿಯಲ್ಲಿ ಆಡಿದ ಮಾತು ಕೃತಿಯ ಕುರಿತಾಗಿ ಅತ್ಯಂತ ಯೋಗ್ಯವಾದ ಮಾತಾಗಿದೆ. ಯಶವಂತ ಚಿತ್ತಾಲರ ಕೃತಿಗಳ ಮುಖ್ಯ ಭೂಮಿಕೆ ಅವರ ಹುಟ್ಟೂರು ಹನೇಹಳ್ಳಿ ಹಾಗೂ ಮುಂದೆ ಉದ್ಯೋಗಶೀಲರಾಗಿ ಬಾಳಿದ ಅವರ ಕರ್ಮಭೂಮಿ ಮುಂಬಯಿ. `ಶಿಕಾರಿʼಯಲ್ಲಿನ ಅವರ ಪಾತ್ರಗಳಾದ ನಾಗಪ್ಪನೂ ಹನೇಹಳ್ಳಿಯಲ್ಲಿ ಹುಟ್ಟಿ ಮುಂಬಯಿಯನ್ನು ಕರ್ಮಭೂಮಿಯನ್ನಾಗಿ ಮಾಡಿಕೊಂಡವನು.

Read More »

ಶರಣರ ವಚನಗಳಲ್ಲಿ ಪರಿಸರ ಪ್ರಜ್ಞೆ

ಶ್ರೀ ಶಂಭನಗೌಡ ನೀರಲಗಿ

102 to 109

ವಚನಕಾರರು ಪರಿಸರವನ್ನು ದೇವರ ಸಮಾನವಾಗಿ ಕಂಡು ಅದನ್ನು ಪೂಜಿಸುವುದು ಮತ್ತು ಸಂರಕ್ಷಿಸುವುದನ್ನು ಪ್ರತಿಪಾದಿಸಿದ್ದಾರೆ. ಪರಿಸರವನ್ನು ಭೌತಿಕ ವಸ್ತುವಾಗಿ ನೋಡದೆ, ಅದು ದೈವತ್ವದ ಅಭಿವ್ಯಕ್ತಿ ಮತ್ತು ಮನುಷ್ಯ-ಪ್ರಕೃತಿ ಒಂದೇ ಎಂದು ನಂಬಿದವರು ಅವರು. ಪಶು, ಪ್ರಾಣಿ, ಕೀಟ, ಸಸ್ಯ, ಸಂಕುಲ ಸಮತೋಲನದಲ್ಲಿದ್ದರೆ ಜಗತ್ತು ಚೆನ್ನಾಗಿರುತ್ತದೆ, ಪರಿಸರ ಉತ್ತಮವಾಗಿದ್ದರೆ ಮಾತ್ರ ಎಲ್ಲರೂ ಸುಖವಾಗಿ ಬಾಳಲು ಸಾಧ್ಯವಾಗುತ್ತದೆ. ಪರಿಸರದ ಮೇಲೆ ಮಾನವನ ದೌರ್ಜನ್ಯ ನಿಲ್ಲಬೇಕು. ಪಂಚಭೂತಗಳು ದೇವರ ಭಿಕ್ಷೆ, ಅವುಗಳನ್ನು ಕಲುಷಿತಗೊಳಿಸುವುದು ಮನುಷ್ಯನಿಗೆ ಸಲ್ಲದು. ಬಸವಣ್ಣನವರು ಒಂದು ಜೀವಿಗೂ ತೊಂದರೆ ಕೊಡದಂತೆ ಬದುಕಬೇಕೆಂದು “ಕೊಲ್ಲೆನ್ನಯ್ಯ, ಮೆಲ್ಲೆನ್ನಯ್ಯ” ಎಂದು ಜೀವನದ ಪವಿತ್ರತೆಯನ್ನು ಸಾರಿದ್ದಾರೆ. “ದಯವೇ ಧರ್ಮದ ಮೂಲ. ಭಯದ ಧರ್ಮ ಬೇಡ” ಎಂದು ಶರಣರು ಬೋಧಿಸಿದ್ದಾರೆ. ಶರಣರ ಚಿಂತನಾ ಕ್ರಮದಲ್ಲಿ ಪ್ರಜ್ಞೆ ಎನ್ನುವುದು ಮನುಷ್ಯನಲ್ಲಿ ಆಂತರಿಕವಾಗಿ ನಡೆಯುವ ಕ್ರಿಯೆ. ಪ್ರಜ್ಞೆ ಇಲ್ಲಿ ಅಂತರಂಗದ ದನಿ. ಪರಿಸರ- ಮನುಷ್ಯನ ಸುತ್ತಮುತ್ತಲಿನ ಹೊರಲೋಕ. ಜೀವಜಾಲವನ್ನು ತನ್ನ ಒಡಲಲ್ಲಿ ಇಟ್ಟುಕೊಂಡ ಬಾಹ್ಯ ಲೋಕ. ಒಂದು ಅಂತರಂಗದ ಅರಿವಾದರೆ, ಇನ್ನೊಂದು ಜೀವಲೋಕವನ್ನು ಹೊರಗಿನಿಂದ ಪೊರೆಯುವಂತಹುದು ಮತ್ತು ಜಾಗತಿಕ ತಾಪಮಾನ ನಿಯಂತ್ರಿಸಲು ಮೂಡಿಸುವ ಅರಿವು ಪರಿಸರ ಪ್ರಜ್ಞೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ಪ್ರಕೃತಿ ಸಂರಕ್ಷಣೆಯೇ ಮನುಷ್ಯನಿಗಿರಬೇಕಾದ ಪರಿಸರ ಪ್ರಜ್ಞೆ. ನಿರುಪಾದಿಕವಾಗಿರುವ ಭೂಮಿ, ಆಕಾಶ, ಅಗ್ನಿ, ವಾಯು, ಜಲ ಎಲ್ಲವೂ ಕೂಡಿದ ಒಟ್ಟು ಅಂಶವೇ ಪ್ರಕೃತಿಯಲ್ಲವೇ? ವಚನ ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆಯನ್ನು ಪ್ರಕೃತಿ ಶಬ್ದದ ಹಿನ್ನೆಲೆಯಲ್ಲಿ ಗ್ರಹಿಸುವ ಚಿಕ್ಕ ಪ್ರಯತ್ನ ಈ ಬರಹ.

Read More »

ಸ್ಥಳೀಯ ಸ್ವಯಂ-ಸರ್ಕಾರದಲ್ಲಿ ಚುನಾಯಿತ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳು

ಶ್ರೀನಿವಾಸ ಬಿ.ಎಸ್.

110 to 120

ಭಾರತ ಸಂವಿಧಾನದ ೭೩ನೇ ತಿದ್ದುಪಡಿಯು ಸ್ಥಳೀಯ ಸ್ವಯಂ-ಸರ್ಕಾರಗಳಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ಕಲ್ಪಿಸಿಕೊಟ್ಟಿದೆ. ಇದು ಮಹಿಳೆಯರಿಗೆ ರಾಜಕೀಯವಾಗಿ ಭಾಗವಹಿಸಲು ಮತ್ತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶವನ್ನು ಒದಗಿಸಿದೆ. ಹಾಗೂ ಇದು ಮಹಿಳಾ ಸಬಲೀಕರಣಕ್ಕೂ ಕಾರಣವಾಗಿದೆ. ಪಂಚಾಯಿತಿಗಳಿಗೆ ಆಯ್ಕೆಯಾದ ಮಹಿಳೆಯರೆಲ್ಲರೂ ಒಂದೇ ರೀತಿಯಲ್ಲಿ ಆಡಳಿತ ಮಾಡಲು ಸಾಧ್ಯವಾಗಿರುವುದಿಲ್ಲ. ಏಕೆಂದರೆ ಈ ಮಹಿಳೆಯರು ಎಲ್ಲಾ ವರ್ಗ, ಜಾತಿ, ಮತ, ಧರ್ಮವನ್ನು ಪ್ರತಿನಿಧಿಸುತ್ತಿದ್ದಾರೆ. ಇವರ ಆಲೋಚನಾ ಕ್ರಮ, ನಿರ್ಧಾರ ತೆಗೆದುಕೊಳ್ಳುವಲ್ಲಿ ಸಾಕಷ್ಟು ವ್ಯತ್ಯಾಸಗಳನ್ನು ಕಾಣುತ್ತೇವೆ. ಅಕ್ಷರಸ್ಥ ವಿದ್ಯಾವಂತ ಮಹಿಳೆಯರ ಆಲೋಚನಾ ಕ್ರಮ ಒಂದು ರೀತಿ ಇದ್ದರೆ ಅನಕ್ಷರಸ್ಥ ಅವಿದ್ಯಾವಂತ ಮಹಿಳೆಯರ ಆಲೋಚನಾ ಕ್ರಮ ಇನ್ನೊಂದು ರೀತಿ ಇರುತ್ತದೆ. ಇಬ್ಬರೂ ಮಹಿಳೆಯರೇ ಆಗಿರುತ್ತಾರೆ. ಆದರೆ ಅವರ ಚಿಂತನೆ-ನಡುವಳಿಕೆ, ಆಡಳಿತದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಸಾಕಷ್ಟು ಸಮಸ್ಯೆ ಮತ್ತು ಸವಾಲುಗಳನ್ನ ಕಾಣುತ್ತೇವೆ. ಈ ಸಮಸ್ಯೆ ಮತ್ತು ಸವಾಲುಗಳು ಎರಡು ವರ್ಗದ ಮಹಿಳೆಯರನ್ನು ಕೇಂದ್ರೀಕರಿಸಿ ಬರುತ್ತವೆ. ಹಾಗಾಗಿ ಪಂಚಾಯಿತಿಯ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಮತ್ತು ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಒಂದಲ್ಲಾ ಒಂದು ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

Read More »

ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ಮಹಿಳೆ: ಸೈದ್ಧಾಂತಿಕ ಆಯಾಮಗಳು

ಸುಮಾ ವಸಂತ ಸಾವಂತ

121 to 128

ಭಾರತದ ಸ್ವಾತಂತ್ರ್ಯ ಹೋರಾಟವು ಬ್ರಿಟಿಷ್ ಆಡಳಿತದಿಂದ ದೇಶವನ್ನು ಮುಕ್ತಗೊಳಿಸಲು ನಡೆದ ಒಂದು ಐತಿಹಾಸಿಕ ಚಳುವಳಿಯಾಗಿದೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರು ಪ್ರಮುಖ ಪಾತ್ರವಹಿಸಿದರು ಮತ್ತು ಅವರ ಅಸ್ಮಿತೆಯನ್ನು ಬಲಪಡಿಸಿದರು. ಅವರು ಕೇವಲ ಹೋರಾಟಗಾರರಾಗದೆ ಸಮಾಜ ಸುಧಾರಕರು, ಶಿಕ್ಷಣ ತಜ್ಞರು ಮತ್ತು ಸಮಾಜ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದರು. ಅವರ ತ್ಯಾಗ ಬಲಿದಾನಗಳು ಭಾರತದ ಸ್ವಾತಂತ್ರ್ಯ ಚಳುವಳಿಗೆ ಹೊಸ ದಿಕ್ಕನ್ನು ನೀಡಿತು. ವಾಸ್ತವವಾಗಿ ಅಂದಿನ ರಾಷ್ಟ್ರೀಯ ಹೋರಾಟವು ‘ಸ್ವಾತಂತ್ರ್ಯಕ್ಕಾಗಿನ ಹೋರಾಟʼವಾಗಿದ್ದಿತು, ಸ್ವಾತಂತ್ರ್ಯವು ಜನತೆಗೆ ದೊರಕಬೇಕಿರುವುದು ‘ಸ್ವಾತಂತ್ರ್ಯಕ್ಕಾಗಿನ ಹೋರಾಟʼದ (೧೯೪೭ರ) ನಂತರವೇ ಎನ್ನಬಹುದು. ನಿಜಾರ್ಥದಲ್ಲಿ ಸ್ವಾತಂತ್ರ್ಯ ಹೋರಾಟದ ಅವಧಿಯಲ್ಲಿ ಭಾವಿಸಿದ್ದ ಉದಾತ್ತ ಮೌಲ್ಯಗಳು ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಿಂದ ನಿರಾಕರಣೆಗೊಳಗಾಗಿದ್ದವು. ಈ ಮೌಲ್ಯಗಳು ಸಾಕಾರಗೊಂಡು ಆಚರಣೆಗೆ ಬರಬೇಕಿದ್ದುದು ಸ್ವಾತಂತ್ರ್ಯ ನಂತರದ ಕಾಲಘಟ್ಟದಲ್ಲೇ. ಇದಕ್ಕೆ ದಿಕ್ಸೂಚಿಯನ್ನು ಒದಗಿಸಿದ್ದು “ಭಾರತದ ಸಂವಿಧಾನ”. ಸಂವಿಧಾನದ ಆಶಯಗಳು ಸ್ವಾತಂತ್ರ್ಯ ಹೋರಾಟದ ಆಶಯಗಳ ಮೊತ್ತವಾಗಿ ಅದರಲ್ಲಿ ಪ್ರತಿಫಲನಗೊಂಡಿವೆ. ಈ ನೆಲೆಯಲ್ಲಿ ದೇಶದ ‘ಹಲವು ಸ್ವಾತಂತ್ರ್ಯʼಗಳಲ್ಲಿ ‘ಮಹಿಳಾ ಸ್ವಾತಂತ್ರ್ಯʼವು ಎಷ್ಟರಮಟ್ಟಿಗೆ ದಕ್ಕಿದೆ ಎಂದು ಕೇಳುವ ಜರೂರು ಇಂದಿನದು. ಅಂದರೆ ಭಾರತವು ಸ್ವಾತಂತ್ರ್ಯಗೊಂಡ ನಂತರದ ಈ ಏಳು ದಶಕಗಳಲ್ಲಿ ಸಮಾನತೆ, ನ್ಯಾಯಪರತೆ, ಸ್ವಾತಂತ್ರ್ಯ ಮತ್ತು ಘನತೆಗಳು ಈ ದೇಶದ ಮಹಿಳೆಗೆ ಎಷ್ಟು ತಲುಪಿದೆ ಎಂಬುದರ ಮೌಲ್ಯಮಾಪನದ ಅಗತ್ಯತೆ ಇದೆ.

Read More »

ಕನ್ನಡ ಶಾಸ್ತ್ರಸಾಹಿತ್ಯ ಪಠ್ಯ ಮತ್ತು ಸಂಪಾದನೆ

ಸುನೀಲ್ ಐ.ಎಸ್.

129 to 137

ಸಾಹಿತ್ಯ ಜೀವನದ ಪ್ರತಿಬಿಂಬ. ಸಾಹಿತ್ಯದ ಹೂರಣ ಬಗೆಬಗೆಯಲ್ಲಿ ಮಾನವನನ್ನು ನೈತಿಕ ವ್ಯಕ್ತಿಯನ್ನಾಗಿಸುತ್ತದೆ. ಈ ನೆಲೆಯಲ್ಲಿ ಶಾಸ್ತ್ರ ಸಾಹಿತ್ಯವು ಸಾಹಿತ್ಯದ ಜೊತೆಯಲ್ಲಿಯೇ ಕನ್ನಡ ಸಾಹಿತ್ಯಾದ್ಯಂತ ಸಂಸ್ಕೃತಿಯನ್ನು ಪ್ರಸರಿಸಿದೆ. ಶಾಸ್ತ್ರಸಾಹಿತ್ಯವು ಮಾನವನ ಆಧ್ಯಾತ್ಮಿಕ ಮತ್ತು ಲೌಕಿಕ ಬದುಕಿಗೆ ನೇರವಾಗಿ ಮಾರ್ಗದರ್ಶನ ಮಾಡುವುದರ ಮೂಲಕ ಆತನನ್ನು ಸರಿದಾರಿಯಲ್ಲಿ ಮುನ್ನಡೆಸಲು ಸಹಕರಿಸುತ್ತದೆ. ಆಹಾರದ ಕುರಿತಾದ ಸೂಪಶಾಸ್ತ್ರ, ಆರೋಗ್ಯದ ಕುರಿತಾದ ವೈದ್ಯಶಾಸ್ತ್ರ, ಯುದ್ಧ ಸಂಬಂಧಿ ಕಲೆಗಳಿಗೆ ಅಶ್ವ, ಗಜಶಾಸ್ತ್ರ; ಆಂತರಿಕ ಬದುಕಿಗೆ ಮಾರ್ಗದರ್ಶಕವಾಗಿ ಆಗಮಿಕ ಶಾಸ್ತ್ರ, ಕಾಮಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ - ಹೀಗೆ ಶಾಸ್ತ್ರದ ಹರವು ತುಂಬಾ ವಿಸ್ತಾರವಾದದ್ದು. ಅಂಥ ಶಾಸ್ತ್ರದ ಸ್ವರೂಪ ಮತ್ತು ಪ್ರಕಾರಗಳನ್ನು, ಅದರ ಸಂಪಾದನೆಯಲ್ಲಿ ಆಗಿರುವ ಪಠ್ಯೀಕರಣದ ಭಿನ್ನ ನೆಲೆಗಳನ್ನು ಸೂಕ್ಷ್ಮವಾಗಿ ಗಮನಿಸುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ.

Read More »

ನೂರ್ ಜಹಾನ್ ಅವರ ಸಣ್ಣ ಕಥೆಗಳಲ್ಲಿನ ವಸ್ತು ವೈಶಿಷ್ಟ್ಯತೆ

ವಿಜಯಲಕ್ಷ್ಮಿ ಎನ್.

138 to 145

ಕಥೆ, ಕವನ, ಕಾದಂಬರಿ ಹೀಗೆ ಭಿನ್ನ ಆಯಾಮಗಳ ಸಾಹಿತ್ಯ ಪ್ರಕಾರಗಳಲ್ಲಿ ರೂಪುಗೊಂಡಿರುವ ನೂರ್ ಜಹಾನ್ ಅವರ 6ನೆಯ ಪುಸ್ತಕವಾದ “ಪರಿವರ್ತನೆ” ಕಥಾ ಸಂಕಲನವು ತನ್ನ ಒಡಲಲ್ಲಿ ಹತ್ತು ಕಥೆಗಳನ್ನು ಇರಿಸಿಕೊಂಡಿದ್ದು, ಪ್ರತಿಯೊಂದು ಕಥೆಯು ವಿಭಿನ್ನ ವಸ್ತು ವಿಷಯಗಳನ್ನು ಒಳಗೊಂಡಿರುವ ವೈವಿಧ್ಯಮಯ ಕಥಾ ಗುಚ್ಛವನ್ನು ಕಾಣಬಹುದು. ಈ ಎಲ್ಲಾ ಕಥೆಗಳು ಮನುಷ್ಯನ ಬದುಕಿಗೆ ಪ್ರಾಮುಖ್ಯತೆ ನೀಡುವ ಮತ್ತು ಬದುಕಿನ ಸವಾಲುಗಳಿಗೆ ಎದೆಗುಂದದೆ ಮುನ್ನಡೆಯುವ, ಜೀವನುತ್ಸಾಹದ ಬದುಕೇ ಅರ್ಥಪೂರ್ಣವಾದ ಅರಿವು ಎಂಬುದನ್ನು ಮನದಟ್ಟು ಮಾಡುವ ಕಡೆಗೆ ರಚಿತವಾಗಿವೆ.
ಕುಟುಂಬದೊಳಗಿನ ಸಂಬಂಧ, ಸ್ನೇಹಪರತೆ, ಗಂಡ-ಹೆಂಡತಿಯ ನಡುವೆ ಇರಬೇಕಾದ ಅನ್ಯೋನ್ಯತೆ, ಆಸ್ತಿ ವಿಚಾರದಲ್ಲಿನ ಒಡಕು, ಪರಿಸ್ಥಿತಿಗಳ ಒಡೆತಕ್ಕೆ ಸಿಲುಕಿ ನಲುಗಿದ ಮನಸ್ಸುಗಳು, ಇತರರ ಸಂತೋಷದಲ್ಲಿ ನೋವನ್ನು ಮರೆಯುವ ಸಾರ್ಥಕತೆ, ಮತ್ತೊಬ್ಬರ ಕಷ್ಟಕ್ಕೆ ಸ್ಪಂದಿಸುವ ಮಾನವೀಯತೆ ಹೀಗೆ ಹಲವು ವಿಷಯಗಳ ಮೂಲಕ ಮೈತಳೆದಿರುವ ಈ ಕಥಾ ಸಂಕಲನ ಓದುಗರನ್ನು ಮತ್ತಷ್ಟು ಆಳಕ್ಕಿಳಿಸಿ ಓದಿಸಿಕೊಳ್ಳುವ ಕೃತಿಯಾಗಿದೆ.

Read More »

Barriers to Electoral Participation in Karnataka: An Empirical Analysis of Structural and Socio-Economic Impediments to Democratic Engagement

Mahendra A. C.

146 to 160

This study examines the multifaceted barriers that impede voter participation in Karnataka, Indiaʼs one of the largest states by population. Through a mixed-methods approach combining quantitative survey data (n=580) and qualitative interviews with electoral officials and community leaders, this research identifies and analyzes the structural, socio-economic, and administrative obstacles that prevent eligible citizens from exercising their democratic rights. The findings reveal that geographical issues (β = 0.34, p < 0.001), socio-economic status (β = 0.28, p < 0.01), and administrative inefficiencies (β = 0.23, p < 0.05) constitute the primary determinants of electoral exclusion. The study contributes to the broader discourse on democratic participation by providing empirical evidence of systemic barriers that undermine electoral inclusivity in one of Indiaʼs most politically significant states. Policy recommendations include enhanced mobile polling units, streamlined voter registration processes, and targeted outreach programs for marginalized communities.

Read More »

Co-operatives in India: Empowering Women, Driving Progress

Manjunath Harijan, Sujatha Susanna Kumari D.

161 to 169

Women constitute roughly half the worldʼs population and a substantial portion of the labour force. Womenʼs integration and inclusion into development are viewed as commencing with womenʼs empowerment. Cooperatives play a crucial role in womenʼs empowerment by organising them into groups and granting them financial independence by improving their standard of living. Cooperatives are unique business models based on their membersʼ social and economic needs, particularly women who cannot access resources and assets. Empowerment is multifaceted, and gender inequality and underdevelopment are inseparable. The research investigates the role cooperative societies play in socially, economically, and politically empowering women by changing the traditional power structure of the economies in which they operate. The paper concludes that by placing women to work in the footsteps of the Cooperative Movement, the economy can be strengthened, and societal and economic goals can be achieved.

Read More »

The Cosmic Earth in Prithvi Sukta: An Eco-Spiritual Perspective on Environmental Stewardship

Samridhdi Kandpal

170 to 177

As an emerging academic discipline, Religion and Ecology addresses the unifying ways in which religions across the world propound the sacredness of Mother Earth and the responsibility of humans towards it. This study is concerned with one of the most eco-centric excerpts in Hindu ethos, i.e., the Prithvi Sukta of Atharva Veda. It aims to consider this text as a stimulus for ecological revitalization. The analysis focuses on prioritising the intrinsic, rather than the instrumental lens for understanding Earth. Emphasis is placed on instances that place Earth as mother-figure, a manifestation of divine, sustainer, and a space for transformation, proving that revisiting ancient textsʼ eco-philosophy can significantly contribute towards recognition and interpretation of the predicaments. The study is foregrounded on the eco-prophetic and eco-spiritual approach of the entire text. The examination seeks to emphasize the significance of apologetic approach for ecological revitalization, as propounded in John Haughtʼs study, also highlighting how ideal comprehension of spiritual and sacramental approach can instigate responsibility towards nature, besides focusing on the prominent emotions eco-spirituality tends to possess. Overall, the work will put forth the anthropocosmic perspective to understand the reciprocal relationship between humankind and the cosmos, which Prithvi Sukta places before its readers.

Read More »

Ecofeminism and Indigenous Wisdom: Culture, Care, and the Commons

Kanchana Goudar

187 to 188

The paper explores the relationship between ecofeminism and indigenous wisdom in Indiaʼs cultural and ecological landscape. It highlights the importance of indigenous communitiesʼ spiritual and practical connection with nature, viewing the environment as a shared commons requiring collective stewardship. Ecofeminism in India emphasizes the oppression of women and nature, advocating for a holistic approach that recognizes women, particularly rural and indigenous women, as key custodians of ecological knowledge and sustainable practices. The study examines how indigenous practices, such as reverence for Mother Earth and agricultural biodiversity, contribute to ecological resilience and social equity. The paper argues for a culturally grounded framework of environmental care that challenges extractive paradigms and supports community-led conservation efforts.

Read More »