ಕೊನೆಯಿರದ ಬಾನಲ್ಲಿ ಅಂತ್ಯವಿಲ್ಲದ ಹಾಡು

Main Article Content

ಎಂ.ಡಿ. ಚಿತ್ತರಗಿ

Abstract

‘ಒಂದು ಪಾತ್ರ ಹಲವು ಪಾತ್ರ-ಚಿತ್ರಣಗಳಿಗೆ ದೇಶ, ಭಾಷೆ, ಕಾಲದ ಗಡಿಯನ್ನು ಮೀರಿ ಜೀವ ತುಂಬುತ್ತಲೇ ಹೋಗುತ್ತದೆʼ ಎಂಬ ಮಾತನ್ನು ಮಹಾಭಾರತದ ಕರ್ಣ ಮತ್ತೆ ಮತ್ತೆ ಸಾಕ್ಷೀಕರಿಸುತ್ತಲೇ ಹೋಗುತ್ತಾನೆ. ಕೆಲವು ಕಪ್ಪು ಚುಕ್ಕೆಗಳ ಮಧ್ಯೆಯೂ ಕೆಸರಲ್ಲರಳಿದ ಕುಸುಮದಂತೆ ಘಮಘಮಿಸುತ್ತಲೇ ಇರುವ ಪಾತ್ರವದು. ಹಲವು ಭಾರತೀಯ ಭಾಷೆಗಳಲ್ಲಿ ವೈವಿಧ್ಯಮಯವಾಗಿ ಹರಿದ ಕರ್ಣನ ಪಾತ್ರವು ಕನ್ನಡದಲ್ಲೂ ಹುಲುಸಾದ ಬೆಳೆಯನ್ನೇ ತಂದಿದೆ. ಈ ಸಾಲಿಗೆ ಜಗದೀಶ ಹಾದಿಮನಿಯವರ ನಾಟಕ ಕೃತಿಯು ಹೊಸದೊಂದು ಸೇರ್ಪಡೆ.
ಮಹಾಭಾರತದ ಕರ್ಣ ವರ್ತಮಾನದ ಬದುಕಿಗೆ, ಅಸ್ತವ್ಯಸ್ತತೆಗೆ, ರಾಜಕಾರಣಕ್ಕೆ ಎದುರಾಗುತ್ತಲೇ ಹೋಗುತ್ತಾನೆ. ಶ್ರೇಷ್ಠ ಕುಲದಲ್ಲಿ ಹುಟ್ಟಿಯೂ ಅನಾಥನಂತೆ ಕೆಳವರ್ಗದ ಪ್ರತಿನಿಧಿಯಾಗಿ ಬೆಳೆವ ಪರಿ, ವಿದ್ಯೆ ಕಲಿತರೂ ಶಾಪಕ್ಕೊಳಗಾಗುವ ಅಸಹಾಯಕತೆ, ವೀರಾಧಿವೀರನಾದರೂ ಹೆಜ್ಜೆಹೆಜ್ಜೆಗೂ ಅನುಭವಿಸುವ ಅವಮಾನ, ಅನ್ನದ ಋಣಕ್ಕೆ, ಮಾತಿಗೆ, ತಲೆಬಾಗಿ ಕ್ಷಯಿಸಿಹೋಗುವ ರೀತಿ ಹಾಗೂ ಆತನ ಉದಾತ್ತ ಗುಣಗಳ ವ್ಯಕ್ತಿತ್ವವು ಮತ್ತೆ ಮತ್ತೆ ಮುನ್ನೆಲೆಗೆ ತರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ನೂರೆಂಟು ಮಜಲುಗಳ ನಡುವೆಯೂ ಹೊಸ ತಲೆಮಾರಿನ ಬರಹಗಾರರನ್ನು ಈತನ ಪಾತ್ರ ಸೆಳೆಯುತ್ತಿದೆ ಎಂಬುದಕ್ಕೆ ಪ್ರಸ್ತುತ ನಾಟಕ ಸಾಕ್ಷಿಯಾಗುತ್ತದೆ.
ಜಗದೀಶ ಹಾದಿಮನಿಯವರು ಕರ್ಣನನ್ನು ವಿಭಿನ್ನ ನೋಟದಲ್ಲಿ ಓದುಗರ ಎದೆಗಿಳಿಸುತ್ತಾರೆ. ಹಲವು ಬದಲಾವಣೆ ಹಾಗೂ ಕೆಲವು ಹೊಸತನಗಳೊಂದಿಗೆ ವಿವೇಕ ಮತ್ತು ವೈಚಾರಿಕತೆಯ ರಾಜಮಾರ್ಗದಲ್ಲಿ ಕರ್ಣನನ್ನು ಹೊಸ ನೋಟದಲ್ಲಿ ಪರಿಚಯಿಸಿದ್ದಾರೆ. ಕಥಾನಾಯಕನ ನೆಪದಲ್ಲಿ ವರ್ತಮಾನದ ಕತ್ತಲಿಗೆ ಬೆಳಕಿಡುವ ನಾಟಕಕಾರರ ಪ್ರಯತ್ನ ವಿಶೇಷವೆನಿಸುತ್ತದೆ. ಇಲ್ಲಿ ಕಥಾನಾಯಕನನ್ನು ಕೇವಲ ಒಂದು ಪಾತ್ರವಾಗಿ ನೋಡದೆ ಗುಣ-ಸ್ವಭಾವಗಳ ದೃಷ್ಟಿಕೋನದಲ್ಲಿ ಒಬ್ಬ ಮನುಷ್ಯನನ್ನಾಗಿ ನೋಡಿ, ತಾವು ಕಂಡ ಬಗೆಯನ್ನು ಓದುಗ ವಲಯಕ್ಕೂ ತೆರೆದಿಡುತ್ತಾರೆ. ಕರ್ಣನಾದಿಯಾಗಿ ಉಳಿದೆಲ್ಲ ಪಾತ್ರಗಳನ್ನು ವಿವೇಕದ ಕಣ್ಣಿಂದಲೇ ನೋಡುವ ಲೇಖಕರ ಎಚ್ಚರಿಕೆಯ ನಡೆಯು ಸದ್ಯದ ಲೇಖಕರಿಗೆಲ್ಲ ಮಾದರಿ. ಪ್ರತೀ ಸನ್ನಿವೇಶವನ್ನು ವಾಸ್ತವದ ಕನ್ನಡಿಗೆ ಸೂಕ್ಷ್ಮವಾಗಿ ಬಿಂಬಿಸುವ ಹಾಗೂ ಹಲ-ಕೆಲವು ಪ್ರಶ್ನೆಗಳೊಂದಿಗೆ ಚಾವಟಿ ಬೀಸುವ ಲೇಖಕರ ಜಾಣ್ಮೆ ಮೆಚ್ಚುವಂಥದ್ದು. ಹಾಗೆ ಮೂಲಕ್ಕೆ ಬಾಧೆ ಬಾರದಂತೆ, ಅತಿಮಾನುಷತೆಗಳು ಹೆಚ್ಚು ಇಣುಕದಂತೆ ತೀರಾ ಸಹಜವಾಗಿ ಹೆಣೆದ ಕಥಾನಕವಿದು. ಗದ್ಯಮಾದರಿಯಲ್ಲಿದ್ದರೂ ಪದ್ಯದ ಲಯವನ್ನೇ ಉಣಬಡಿಸುತ್ತಾ ಸಾಗುವ ಇಪ್ಪತ್ಮೂರು ದೃಶ್ಯಗಳು ಗೀತನಾಟಕದ ಮುದ ನೀಡುತ್ತವೆ. ಮುಖ್ಯವಾಗಿ ನಾಣ್ಣುಡಿ-ಜಾಣ್ಣುಡಿ, ಆಡುಭಾಷಾ ಸೊಗಸು, ರೂಪಕಗಳು ಹಾಗೂ ಪದಸಮೃದ್ಧಿಯ ಭಾಷಾಪ್ರೌಢಿಮೆಯೇ ಕೃತಿಯನ್ನು ಗೆಲ್ಲಿಸಿವೆ.

Article Details

Section

Research Articles

Author Biography

ಎಂ.ಡಿ. ಚಿತ್ತರಗಿ

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಮುದಗಲ್.

How to Cite

ಎಂ.ಡಿ. ಚಿತ್ತರಗಿ. (2025). ಕೊನೆಯಿರದ ಬಾನಲ್ಲಿ ಅಂತ್ಯವಿಲ್ಲದ ಹಾಡು. ಅಕ್ಷರಸೂರ್ಯ (AKSHARASURYA), 7(04), 55 to 65. https://aksharasurya.com/index.php/latest/article/view/1300

References

ಜಗದೀಶ ಬ ಹಾದಿಮನಿ, (2023), ಕೊನೆಯಿರದ ಬಾನು, ಚೆನ್ನನೀಲಕಂಠ ಪ್ರಕಾಶನ, ಹುನಗುಂದ.

ಅನಂತ್ ಪೈ, (2009), ಕರ್ಣ, ಐ.ಬಿ.ಎಚ್. ಪ್ರಕಾಶನ, ಬೆಂಗಳೂರು.

ಲಕ್ಷ್ಮೀ ನಾರಾಯಣಸ್ವಾಮಿ ಎಚ್., (2018), ತೊಗಲಚೀಲದ ಕರ್ಣ, ಲಡಾಯಿ ಪ್ರಕಾಶನ, ಗದಗ.