ಬಾನು ಮುಸ್ತಾಕ್ ಅವರ ಕಥೆಗಳಲ್ಲಿ ಹೆಣ್ಣಿನ ಸಂವೇದನೆಗಳು

Main Article Content

ಪ್ರಕಾಶ ಬಿ.

Abstract

ಕನ್ನಡದ ಹೆಸರಾಂತ ಲೇಖಕಿ, ಅಲ್ಪಸಂಖ್ಯಾತ ಸಮುದಾಯದ ಹುಟ್ಟು ಹೋರಾಟಗಾರ್ತಿ, ಪ್ರಖರ ಚಿಂತಕಿ, ಬಾನು ಮುಸ್ತಾಕ್ ಅವರ ಬಹುದಿನಗಳ ಕಥೆಗಳ ‘ಎದೆಯ ಹಣತೆʼ ಸಂಕಲನದ ಆಂಗ್ಲ ಅನುವಾದ ‘ಹಾರ್ಟ್ ಲ್ಯಾಂಪ್ʼ ಕೃತಿಗೆ ಜಾಗತಿಕ ಮಟ್ಟದ ಬೂಕರ್ ಪ್ರಶಸ್ತಿ ದೊರೆತದ್ದು, ಕನ್ನಡಿಗರ ಅಭಿಮಾನಕ್ಕೆ ಭಾಜನವಾಗಿದೆ. ಮೊಟ್ಟಮೊದಲ ಬಾರಿಗೆ ಕನ್ನಡದ ಕೃತಿಗೆ ಈ ಪ್ರತಿಷ್ಠಿತ ಪ್ರಶಸ್ತಿ ದೊರೆಯುವ ಮೂಲಕ ಎರಡು ಸಾವಿರ ವರ್ಷಗಳ ಸುದೀರ್ಘ ಇತಿಹಾಸ ಹೊಂದಿದ ಕನ್ನಡ ಭಾಷೆಯ ಘನತೆ ಗೌರವವು ನೂರ್ಮಡಿಯಾದಂತಾಗಿದೆ. ಅನುವಾದಿತ ಕಾದಂಬರಿ ವಿಭಾಗದ ಅಡಿಯಲ್ಲಿ ಈ ಮಹೋನ್ನತ ಗೌರವಕ್ಕೆ ಭಾಜನರಾಗಿದ್ದು, “ಹಾರ್ಟ್ ಲ್ಯಾಂಪ್” ಕೃತಿಯು ಈ ಉನ್ನತ ಪ್ರಶಸ್ತಿಯನ್ನು ಪಡೆದ ಜಗತ್ತಿನ ಮೊದಲ ಸಣ್ಣ ಕಥಾ ಸಂಕಲನ ಇದಾಗಿದ್ದು, ಇದು ಒಂದು ವಿಶಿಷ್ಟ ಹಾಗೂ ಗಮನಾರ್ಹವಾಗಿದೆ. ತೃತೀಯ ಜಗತ್ತಿಗೆ ಮಹಿಳೆಯರ ಭಾವಾಭಿವ್ಯಕ್ತಿಯನ್ನು ತೆರೆದಿಡುವ ಬಾನು ಮುಸ್ತಾಕ್ ಅವರ ಸಾಹಿತ್ಯ ಕನ್ನಡದ ಓದುಗರ ಪಾಲಿಗೆ ಮಾನವತೆಯ ಕಡೆ ಹೋಗುವುದನ್ನು ಕಲಿಸುವ ಸಾಹಿತ್ಯವಾಗಿದೆ. ವಿಚ್ಛಿದ್ರಕಾರಿ ಶಕ್ತಿಗಳು, ಮತಾಂಧತೆ ಹಾಗೂ ಮೂಲಭೂತವಾದ ಒಟ್ಟಾಗಿ ಬೆಸೆದುಕೊಂಡು ಜಗತ್ತನ್ನು ನಾಶ ಮಾಡುತ್ತಿರುವ ಹೊತ್ತಲ್ಲಿ, ಬಾನು ಮುಸ್ತಾಕ್ ಅವರ ಮಾನವೀಯತೆಯ ಬೆಸುಗೆ ಎಲ್ಲ ಮೂಲಭೂತವಾದಿ ಶಕ್ತಿಗಳಿಗೆ ಕೊಟ್ಟಿರುವ ಕಪಾಳಮೋಕ್ಷ ಎಂದು ನಾನು ಭಾವಿಸುತ್ತೇನೆ. ಇದು ಎಲ್ಲಾ ರೀತಿಯ ಧಾರ್ಮಿಕ ದರ್ಪಗಳಿಗೆ ಕೊಟ್ಟಿರುವ ಏಟು ಮತ್ತು ಮಾನವೀಯ ಧರ್ಮಕ್ಕೆ, ಎಲ್ಲಾ ಧರ್ಮದಲ್ಲಿರುವ ಮಾನವೀಯ ವ್ಯಕ್ತಿತ್ವಗಳಿಗೆ ಸಿಕ್ಕಿರುವ ಮನ್ನಣೆ ಕೂಡ ಆಗಿದೆ. 12ನೇ ಶತಮಾನದ ಅಕ್ಕನ ಅನುಭಾವದ ಧೈರ್ಯ 21ನೇ ಶತಮಾನದ ಬಾನು ಮುಸ್ತಾಕ್ ಅವರ ಅಭಿವ್ಯಕ್ತಿ ಧೈರ್ಯ ಮೆಚ್ಚಬೇಕು. ಸಮಾಜದ ವೈರುಧ್ಯತೆಗಳಿಗೆ ಇವರ ಕಥಾ ಸಾಹಿತ್ಯ ಲಿಂಗತ್ವದ ಆಚೆಯ ಅನೇಕ ವರ್ತಮಾನದ ಸವಾಲುಗಳನ್ನು ನಾವು ಎಷ್ಟರ ಮಟ್ಟಿಗೆ ಎದುರಿಸುತ್ತಿದ್ದೇವೆ ಎಂಬುದನ್ನು ಸಾರೀಕರಿಸುತ್ತವೆ. ನಮ್ಮೊಳಗಿನ ಬೇಗುದಿಗಳಿಗೆ ಉತ್ತರವನ್ನು ಕಾಣಿಸುತ್ತವೆ. ಒಟ್ಟಾರೆ ಈ ಕಥೆಗಳು ಮಾಯಲಾರದ ಗಾಯದ ಕಥೆಗಳಾಗಿವೆ. ಮಾಗಿದ ಮನಸ್ಸುಗಳ ಹೆಣ್ಣಿನ ಒಡಲ ಉರಿಯ ಕಥನಗಳಿವು. ಬಾನು ಅವರ ಆತ್ಮಕಥೆಯಂತೆ ಬರೆಯಲ್ಪಟ್ಟ ಹೆಣ್ತನದ ಅಭಿವ್ಯಕ್ತಿಯ ಬಗೆಯ ಕಥೆಗಳಿವು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಒತ್ತಡಗಳಿಗೆ ಒಳಗಾಗುತ್ತಿರುವ ಲೋಕದ ಎಲ್ಲ ಹೆಣ್ಣುಮಕ್ಕಳು ಅನುಭವಿಸುತ್ತಿರುವ ಸ್ತ್ರೀ ಶೋಷಣೆಯ ಹಲವು ಮುಖಗಳ ಅನಾವರಣ ಮಾಡುತ್ತಾರೆ. ಬಾನು ಮುಸ್ತಾಕ್ ಅವರ ವೃತ್ತಿ ಪ್ರವೃತ್ತಿ ಜೀವನದಲ್ಲಿ ಕಂಡ ಅನುಭವ ಲೋಕಕ್ಕೆ ದಕ್ಕಿದ ಘಟನೆಗಳನ್ನು ಜೀವಂತ ಕತೆಯಾಗಿಸಿದ್ದು ಈ ಹೆಣ್ಣಿನ ಕತೆಗಳ ಯಶಸ್ಸಿನ ಹಿಂದಿನ ಶಕ್ತಿಯಾಗಿದೆ. ಕನ್ನಡ ಸೀಮೆಯನ್ನು ಮೀರಿ ಜಗತ್ತಿನಾದ್ಯಂತ ಸಾಹಿತ್ಯಾಸಕ್ತರಿಗೆ ಪರಿಚಿತ ಕಥೆಗಳಾಗಿ ಹೆಣ್ಣಿನ ಸಂವೇದನೆಗೆ ನೀಡಿದ ಮಹತ್ವದ ಕೊಡುಗೆಗಳಾಗಿವೆ.

Article Details

Section

Research Articles

Author Biography

ಪ್ರಕಾಶ ಬಿ.

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶಿರಸಿ.

References

ಬಾನು ಮುಸ್ತಾಕ್, (2025), ಹಸೀನಾ ಮತ್ತು ಇತರ ಕಥೆಗಳು, ಅಭಿರುಚಿ ಪ್ರಕಾಶನ, ಮೈಸೂರು.

ಅನುಪಮಾ ಹೆಚ್.ಎಸ್., (2023), ಗಡಿದಾಟಿದ ಹೆಣ್ಣುಗಳ ಕಥನ, ಲಡಾಯ ಪ್ರಕಾಶನ, ಗದಗ.

ಬೆಲ್ ಹುಕ್ಸ್ (ಮೂಲ), ಶ್ರೀಮತಿ ಹೆಚ್.ಎಸ್. (ಅನು), (2020), ಸ್ತ್ರೀವಾದ, ಸಂಗಾತ ಪುಸ್ತಕ, ಗದಗ.

ಸಿಮೋನ್ ದ ಬೋವಾ (ಮೂಲ), ಶ್ರೀಮತಿ ಹೆಚ್.ಎಸ್. (ಅನು), ದ ಸೆಕೆಂಡ್ ಸೆಕ್ಸ್: ಸಂಪುಟ-1 ರಿಂದ 4, ಸಂಕಥನ, ಮಂಡ್ಯ.