ಯುಗದ ಸಾಂಸ್ಕೃತಿಕ ಚಿಂತನೆಯಲ್ಲಿ ವಿಶ್ವಮಾನವ ಮತ್ತು ವಿಶ್ವಧರ್ಮ

Main Article Content

ಪ್ರಕಾಶ ಬಿ.

Abstract

ಯುಗಗಳ ಸಾಂಸ್ಕೃತಿಕ ಸಂರಚನೆಯಲ್ಲಿ ಮತ್ತು ಪರಿವರ್ತನೆಯಲ್ಲಿ ಮಾನವತ್ವದಿಂದ ಮೃಗೀಯತ್ವದೆಡೆಗೆ, ಮೃಗೀಯತ್ವದಿಂದ ಮಾನವತ್ವದ ಅನೇಕ ಸಂಘರ್ಷಗಳು ನಡೆಯುತ್ತಲೇ ಬಂದಿವೆ. ಭಾಷೆ, ಧರ್ಮ, ಜಾತಿ, ಪ್ರಭುತ್ವ, ರಾಜಕಾರಣಗಳು ಇದರ ಅಸ್ತ್ರಗಳಾಗಿ ಕಂಡಿವೆ. ಇದರಲ್ಲಿ ಧರ್ಮದ ಶ್ರೇಷ್ಠತೆಯು ಮಾನವತೆಯನ್ನು ಬಿಟ್ಟು ಧರ್ಮದ ರಾಜಕಾರಣಕ್ಕೆ ಅಡಿಪಾಯವಾಗಿ ಮತಬ್ಯಾಂಕ್ ಆಗಿ ರೂಪಾಂತರ ಪಡೆದುಕೊಂಡಿದೆ. ಯುದ್ಧದ ಉನ್ಮಾದಗಳು ಧರ್ಮದ ಮುಖೇನ ಹೊಸ ಅರ್ಥವನ್ನು ವ್ಯಾಖ್ಯಾನಿಸಿಕೊಂಡಿವೆ. ಕುವೆಂಪು ಪ್ರಣೀತ ವಿಶ್ವಮಾನವ ಸಂದೇಶದ ಪಂಚ ಮಂತ್ರಗಳು: ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ. ವಿಶ್ವಮಾನವ ಎಂದರೇನು ಎಂಬುದಕ್ಕೆ ಅತ್ಯಂತ ಸ್ಪಷ್ಟ ಉತ್ತರ ನೀಡುತ್ತದೆ. ಆದರೆ ಇದು ದೇಶ, ಕಾಲ, ಶಿಕ್ಷಣಕ್ಕೆ ಪೂರಕವಾಗಿ ಸಾರ್ವತ್ರಿಕವಾಗಿ ಎಲ್ಲಾ ದೇಶಗಳನ್ನು, ಜನರನ್ನು ಮುಟ್ಟುತ್ತಿಲ್ಲ.
ಪ್ರತಿಯೊಂದು ಮಗುವೂ ಹುಟ್ಟುತ್ತಲೆ ವಿಶ್ವಮಾನವ. ಬೆಳೆಯುತ್ತಾ ನಾವು ಅದನ್ನು ಅಲ್ಪಮಾನವನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ವಿಶ್ವಮಾನವನನ್ನಾಗಿ ಮಾಡುವುದೇ ವಿದ್ಯೆಯ ಕರ್ತವ್ಯವಾಗಬೇಕು. ಹುಟ್ಟುವಾಗ ವಿಶ್ವಮಾನವನಾಗಿಯೆ ಹುಟ್ಟಿದ ಮಗುವನ್ನು ನಾವು ದೇಶ, ಭಾಷೆ, ಮತ, ಜಾತಿ, ಜನಾಂಗ, ವರ್ಣ ಇತ್ಯಾದಿ ಉಪಾಧಿಗಳಿಂದ ಬದ್ಧನನ್ನಾಗಿ ಮಾಡುತ್ತೇವೆ. ಅವೆಲ್ಲವುಗಳಿಂದ ಪಾರಾಗಿ ಅವನನ್ನು ಬುದ್ಧನನ್ನಾಗಿ ಪರಿವರ್ತಿಸುವುದೆ ನಮ್ಮ ವಿದ್ಯೆ, ಸಂಸ್ಕೃತಿ, ನಾಗರಿಕತೆ ಎಲ್ಲದರ ಆದ್ಯ ಕರ್ತವ್ಯವಾಗಬೇಕು. ಪ್ರಪಂಚದ ಮಕ್ಕಳೆಲ್ಲ ಅನಿಕೇತನರಾಗಬೇಕು. ಲೋಕ ಉಳಿದು ಬಾಳಿ ಬದುಕಬೇಕಾದರೆ ಯಾವ ಭಾವನೆಗಳು ಜಗತ್ತಿನಲ್ಲಿ ಎಲ್ಲ ಮಾನವರಿಗೂ ಅನ್ವಯವಾಗಬಹುದೋ ಅಂತಹ ಭಾವನೆ, ಅಂತಹ ದೃಷ್ಟಿ ಬರಿಯ ಯಾವುದೋ ಒಂದು ಜಾತಿಗೆ, ಒಂದು ಮತಕ್ಕೆ, ಗುಂಪಿಗೆ, ಒಂದು ದೇಶಕ್ಕೆ ಮಾತ್ರ ಅನ್ವಯವಾಗುವುದಿಲ್ಲ. ಸರ್ವಕಾಲಕ್ಕೂ ಅನ್ವಯವಾಗುವ ಇವು ಮೂಲ ಮೌಲ್ಯಗಳು. ಇದನ್ನು ವಿಶ್ವಧರ್ಮ ಎನ್ನುತ್ತೇವೆ, ಇವರನ್ನು ವಿಶ್ವಮಾನವರು ಎಂದು ಗುರುತಿಸುತ್ತೇವೆ. ಈ ಮೌಲ್ಯಗಳು ಮಾನವರನ್ನು ಕೂಡಿಸಿ ಬಾಳಿಸುವತ್ತ ನಡೆದಾವು. ಗುಂಪುಗಾರಿಕೆಗೆಂದೂ ಇವು ತೊಡಗುವುದಿಲ್ಲ. ಅದೇನಿದ್ದರೂ ರಾಜಕೀಯದ ಕರ್ಮ. ವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿಯೂ ಸಮಷ್ಟಿಯ ಉದ್ಧಾರದ ದೃಷ್ಟಿ ಇದರದು. ಈ ದೃಷ್ಟಿಗೆ ವ್ಯಕ್ತಿಗಳೆಷ್ಟೋ ಅಷ್ಟೂ ವ್ಯಕ್ತಿಗಳು ಸಮಷ್ಟಿಯ ವಿಕಾಸಕ್ಕೆ ಸಾಧಕವಾಗುವುದೂ ಸಾಧ್ಯ. ಈ ದರ್ಶನವನ್ನೇ ವಿಶ್ವಮಾನವ ಗೀತೆ ಸಾರುತ್ತದೆ.

Article Details

Section

Research Articles

Author Biography

ಪ್ರಕಾಶ ಬಿ.

ಕನ್ನಡ ಸಹಾಯಕ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶಿರಸಿ.

References

ದೇವನೂರ ಮಹಾದೇವ, (2012), ಎದೆಗೆ ಬಿದ್ದ ಅಕ್ಷರ, ಬೆಂಗಳೂರು: ಅಭಿನವ ಪ್ರಕಾಶನ.

ಮೂಡ್ನಾಕೂಡು ಚಿನ್ನಸ್ವಾಮಿ, (2018), ಬಹುತ್ವದ ಭಾರತ ಮತ್ತು ಬೌದ್ಧತಾತ್ವಿಕತೆ, ಗದಗ: ಲಡಾಯಿ ಪ್ರಕಾಶನ.

ರಂಜಾನ್ ದರ್ಗಾ, (2024), ಧಾರ್ಮಿಕ ಸಾಮರಸ್ಯ, ಧಾರವಾಡ:ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ.

ನಟರಾಜ ಬೂದಾಳ್, (2021), ಕನ್ನಡ ಕಾವ್ಯ ಮೀಮಾಂಸೆ, ಧಾರವಾಡ:ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ.