Published: 2024-05-05

Table of Contents

Table of Contents

I to V

ಜೈನ ದೃಷ್ಟಿಯಲ್ಲಿ ಸ್ತ್ರೀ

ಕಮಲಾ ಹಂಪನಾ

01 to 18

ಜೈನಧರ್ಮದಲ್ಲಿ ಮಹಿಳೆಯರಿಗೆ ನೀಡಲಾಗಿರುವ ಮಹತ್ವ, ಗೌರವ ಮತ್ತು ಸಮಾನತೆಯ ಸ್ಥಾನಮಾನಗಳನ್ನು ಆಳವಾಗಿ ವಿಶ್ಲೇಷಿಸಲಾಗಿದೆ. ಪುರುಷರಂತೆಯೇ ಸ್ತ್ರೀಯರಿಗೂ ಲೌಕಿಕ ಮತ್ತು ಪಾರಲೌಕಿಕ ವಿದ್ಯಾಭ್ಯಾಸದ ಹಕ್ಕಿದೆ ಎಂಬುದನ್ನು ಜೈನ ಪುರಾಣಗಳು ಹಾಗೂ ಶಾಸನಗಳ ಆಧಾರದ ಮೇಲೆ ಸ್ಪಷ್ಟಪಡಿಸಲಾಗಿದೆ. ಆದಿತೀರ್ಥಂಕರ ಋಷಭದೇವನು ಮೊದಲು ತನ್ನ ಹೆಣ್ಣುಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದ ಉಲ್ಲೇಖ, ಆರ್ಯಿಕೆಯರ (ಸನ್ಯಾಸಿನಿಯರ) ಬದುಕು, ಮೃಗವತಿಯ ರಾಜತಂತ್ರ, ಸಾವಿಯಬ್ಬೆಯ ವೀರತ್ವ ಹಾಗೂ ಅತ್ತಿಮಬ್ಬೆಯ ದಾನಗುಣ ಮುಂತಾದವುಗಳನ್ನು ಇಲ್ಲಿ ಕಟ್ಟಿಕೊಡಲಾಗಿದೆ. ದಿಗಂಬರ ಮತ್ತು ಶ್ವೇತಾಂಬರ ಪಂಥಗಳಲ್ಲಿ ಹೆಣ್ಣಿನ ಮುಕ್ತಿಯ ಬಗೆಗಿನ ತಾತ್ವಿಕ ನಿಲುವುಗಳನ್ನು ಚರ್ಚಿಸುತ್ತಾ, ಜೈನ ಮಹಿಳೆಯರು ಸಮಾಜ, ರಾಜಕೀಯ, ಸಾಹಿತ್ಯ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಬೀರಿದ ಅಗಾಧ ಪ್ರಭಾವವನ್ನು ಎತ್ತಿತೋರಿಸಲಾಗಿದೆ.

Read More »

ಶ್ರೀಸಾಮಾನ್ಯವೇ ಭಗವನ್ ಮಾನ್ಯಂ, ಶ್ರೀಸಾಮಾನ್ಯನೇ ಭಗವದ್ ಧನ್ಯಂ (ಕುವೆಂಪು ವಿರಚಿತ 'ಧನ್ವಂತರಿ ಚಿಕಿತ್ಸೆ' ರಂಗಪ್ರಯೋಗವನ್ನು ಕುರಿತು)

ಮಾನಸ ಜಿ.

19 to 32

ಸ್ವಾತಂತ್ರ್ಯ ಪೂರ್ವದಲ್ಲಿ ರಚಿತವಾದ ಕುವೆಂಪುರವರ ಧನ್ವಂತರಿ ಚಿಕಿತ್ಸೆ ಕಥೆ, ಸ್ವಾತಂತ್ರ್ಯ ದೊರೆತ ಏಳು ದಶಕಗಳ ನಂತರವೂ ಪ್ರಸ್ತುತ ಸ್ಥಿತಿಗತಿಗಳನ್ನು ವರ್ಣಿಸುತ್ತದೆ. ಸ್ವಾತಂತ್ರೋತ್ತರ ಭಾರತ ವರ್ಣ ಮತ ಜಾತಿ ಭೇದಗಳಿಲ್ಲದೆ ಸರ್ವರೂ ಸಮಾನರು ಎಂದು ಘೋಷಿಸಿ ಸರ್ವರ ಏಳಿಗೆಗೆ ಸಾಧನವಾಗುವ ಸರ್ವೋದಯ ತತ್ವಕ್ಕೆ ಒಂದು ಅಧಿಕಾರ ಮುದ್ರೆ ಬಿದ್ದಂತಾಯಿತು ಎಂದು ಕುವೆಂಪುರವರು ಭಾರತ ಸಂವಿಧಾನ ಜಾರಿಯಾದಾಗ ಸಂತಸ ವ್ಯಕ್ತಪಡಿಸುತ್ತಾರೆ. ಶ್ರೀಸಾಮಾನ್ಯರಿಗೆ ದೀಕ್ಷಾ ಗೀತೆ ಎಂಬ ಕವಿತೆಯಲ್ಲಿ ಕುವೆಂಪು ಕಣ್ಣಲ್ಲಿ ಕಂಡ ಭಾರತ ಸಂವಿಧಾನದ ಆಶಯವು ಧ್ವನಿ ಪೂರ್ಣವಾಗಿ ಪ್ರಸ್ತುತ ಧನ್ವಂತರಿ ಚಿಕಿತ್ಸೆ ರಂಗಪ್ರಯೋಗದಲ್ಲಿ ಮೂಡಿ ಬಂದಿದೆ. ದೈವೀಪುರುಷರಾದ ವಿಶ್ವಾಮಿತ್ರರು, ವಿಶ್ವವೈದ್ಯ ಧನ್ವಂತರಿಯು ಶ್ರೀಸಾಮಾನ್ಯರ ಅವತಾರವಾಗಿ ಕಾಣುತ್ತಾರೆ. ಮಹಾಗುರುಗಳಾಗಿ ಬಂದು ಶ್ರೀಸಾಮಾನ್ಯರಾದ ರೈತನ ಕಾಯಿಲೆಯನ್ನು ನಿವಾರಿಸಿದರು. ಆದ್ದರಿಂದ ಸರ್ವರೊಳಗೊಂದಾಗಿ ಎಲ್ಲರನ್ನು ಶ್ರೀಸಾಮಾನ್ಯರನ್ನಾಗಿ ಕಾಣುವುದನ್ನು ನಾರಾಯಣತ್ವ ಎಂದು ಕರೆಯಬಹುದಲ್ಲವೇ. ಎಲ್ಲರನ್ನು ಸಾಮಾನ್ಯರಂತೆ ಕಾಣುವ ಆಶಯವನ್ನು ಸಾರುವ ಸಂವಿಧಾನವು ಅಂತಹ ಸಮಾನತ ನಾರಾಯಣತ್ವಕ್ಕೆ ದಾರಿಯಾಗಿದೆ ಎಂದು ಭಾವಿಸಬಹುದಲ್ಲವೇ ಎಂಬಂತ ಭಾವೋದ್ದೀಪನಗೊಳಿಸಿದ ರಂಗರೂಪವು ಮನೋಜ್ಞವಾಗಿ ಮೂಡಿಬಂದಿದೆ.

Read More »

ಅತ್ತಿಮಬ್ಬೆಯ ಲಕ್ಕುಂಡಿ ಶಾಸನದ ವೈಶಿಷ್ಟ್ಯತೆ

ಗೋವಿಂದರಾಜು ಎನ್‌.

33 to 40

ಈ ಶಾಸನ ಮುಖ್ಯವಾಗಿ ಅತ್ತಿಮಬ್ಬೆ ಕಟ್ಟಿಸಿದ ಒಂದು ಬಸದಿಯ ವಿವರವನ್ನು ಮತ್ತು ಅದಕ್ಕೆ ದತ್ತಿ ಬಿಟ್ಟ ವಿವರವನ್ನು ತಿಳಿಸುತ್ತದೆ. ಇವುಗಳ ಜೊತೆಗೆ ಅವಳ ಮನೆತನದ ವೀರ ಪರಂಪರೆಯ ವಿವರ ತಿಳಿದುಬರುತ್ತದೆ. ಶಾಸನವು ಒಟ್ಟು ಎಂಬತ್ತೆಂಟು ಸಾಲುಗಳನ್ನು ಹೊಂದಿದೆ. ಸಂಸ್ಕೃತದ ಪ್ರಭಾವ ಶಾಸನದ ಮೇಲೆ ದಟ್ಟವಾಗಿದೆ. ಹಲವು ವೃತ್ತಗಳಲ್ಲಿ ರಚಿತವಾಗಿರುವ ಈ ಶಾಸನ ಸುಂದರ ಶೈಲಿಯಲ್ಲಿದ್ದು, ಇದರಲ್ಲಿ ಬಳಕೆಯಾಗಿರುವ ಹಲವಾರು ಬಿರುದು, ಉಪಮೆಗಳು, ರನ್ನನ ಕಾವ್ಯದಲ್ಲಿ ಇರುವುದರಿಂದ ತೀ.ನಂ.ಶ್ರೀಯವರು ರನ್ನನೇ ಈ ಶಾಸನವನ್ನು ಬರೆದಿರಬಹುದೆಂದು ಊಹಿಸುತ್ತಾರೆ. ಒಬ್ಬ ಮಹಿಳೆಯನ್ನು ಇಷ್ಟೊಂದು ಹೊಗಳುವ ಶಾಸನ ಕರ್ನಾಟಕದಲ್ಲಿ ಮತ್ತೊಂದಿಲ್ಲ. ಬೇರೆ ಪ್ರಕಾರಗಳಲ್ಲಿ ಇಷ್ಟೊಂದು ಹೊಗಳಿಸಿಕೊಂಡ ಮಹಿಳೆ ಮತ್ತೊಬ್ಬಳಿಲ್ಲ.

Read More »

ಸುಧಾಮೂರ್ತಿ ಕಾದಂಬರಿಗಳಲ್ಲಿ ಸ್ತ್ರೀವಾದಿ ಪರಿಕಲ್ಪನೆಗಳು

ಕೆ.ಜಿ. ಚವಾಣ

41 to 54

ಸುಧಾಮೂರ್ತಿಯವರು ಕನ್ನಡ ನಾಡಿನ ಪ್ರಮುಖ ಬರಹಗಾರರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಲೇಖಕಿ, ಸರಳ ಸಜ್ಜನಿಕೆಯ ವ್ಯಕ್ತಿ, ಉತ್ತಮ ವಾಗ್ನಿ, ಸದಾ ಕ್ರೀಯಾಶೀಲರು, ಸಮಾಜಕ್ಕೆ ಸ್ಫೂರ್ತಿ ನೀಡುವ ಶಕ್ತಿಯಾಗಿ, ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದ್ದಾರೆ. ಕನ್ನಡ ಮಾತ್ರವಲ್ಲದೆ ಇಂಗ್ಲೀಷ್ ಭಾಷೆಯಲ್ಲಿಯೂ ಹಲವು ಕೃತಿಗಳನ್ನು ಬರೆದು ಪ್ರಸ್ತುತದಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದು, ಬಿಲ್‌ಗೇಟ್ಸ್ ಪ್ರತಿಷ್ಠಾನದ ಸಾರ್ವಜನಿಕ ಆರೋಗ್ಯ ಉಪಕ್ರಮಗಳ ಸದಸ್ಯರೂ ಆಗಿದ್ದಾರೆ. ಮಹಿಳೆಯರ ಜ್ಞಾನ ಸಂಪಾದನೆ, ಸಂಸ್ಕೃತಿ ಸಂಪನ್ನತೆಯನ್ನು ಹೆಚ್ಚಿಸಲು ಗ್ರಾಮೀಣ ಪ್ರದೇಶದ ಮಹಿಳೆಯರ ಆರ್ಥಿಕ, ಸಾಮಾಜಿಕ ಉನ್ನತಿಗೂ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆಯೂ ಬಿಡುವು ಮಾಡಿಕೊಂಡು ಕಥೆ, ಕಾದಂಬರಿಗಳನ್ನು, ಮಕ್ಕಳ ಸಾಹಿತ್ಯವನ್ನು ಬರೆಯುತ್ತಿದ್ದಾರೆ. ದೇಶಪಾಂಡೆ ಪೌಂಡೇಷನ್ ಹಾಗೂ ಇನ್ಫೋಸಿಸ್ ಪೌಂಡೇಷನ್ ಸ್ಥಾಪನೆಗೆ ಕಾರಣೀಕರ್ತರಾಗಿದ್ದು 'ಡಾಲರ್ ಸೊಸೆ' ಹಾಗೂ ಮಹಾಶ್ವೇತೆ ಕಾದಂಬರಿಗಳು ಸುಧಾಮೂರ್ತಿಯವರ ಸಾಮಾಜಿಕ ಕಾದಂಬರಿಗಳಾಗಿದ್ದು ಬದುಕಿನ ಓರೆ ಕೋರೆಗಳನ್ನು ತಿದ್ದುವ, ಭಾವನೆಗಳನ್ನು ಅರ್ಥೈಸುವ, ಮನ ಮಿಡಿಯುವ ಸಂಸ್ಕೃತಿಯನ್ನು ಅನುಸರಿಸುವ ದೇಶ ದೇಶಗಳ ನಡುವಿನ ಸ್ತ್ರೀವಾದಿ ಸಾಮಾಜಿಕ ಪರಿಕಲ್ಪನೆಗಳು ರೂಪಾಯಿಯ ಮೇಲೆ ಡಾಲರಿನ ಪ್ರಭಾವವನ್ನು ಕಾದಂಬರಿಯ ಕಥಾನಾಯಕಿಯಾದ ಗೌರಮ್ಮ ತನ್ನ ಸೊಸೆಯರಾದ ಜಮುನಾ ಹಾಗೂ ವಿನುತಾರಿಗೆ ನೋಡುವ ದೃಷ್ಟಿಕೋನ ಬೇರೆ ಬೇರೆಯೇ ಇದೆ. 'ಜಮುನಾ ಡಾಲರ್ ಸೊಸೆಯಾದರೆ, ವಿನುತಾ ರೂಪಾಯಿ ಸೊಸೆ. ಗೌರಮ್ಮ ಹಾಗೂ ಶಾಮಣ್ಣನವರದು ಸುಖಿ ಕುಟುಂಬ. ಇವರಿಗೆ ಒಂದು ಹೆಣ್ಣು ಸುರಭಿ ಹಾಗೂ ಎರಡು ಗಂಡು ಮಕ್ಕಳು. ಚಂದ್ರು ಮತ್ತು ಆತನ ಹೆಂಡತಿ ಜಮುನಾ ಇವರಿಗೆ ಒಂದು ಮಗು ಮಾನಸಿ ಅಮೇರಿಕೆಯಲ್ಲಿರುತ್ತಾರೆ. ಹಾಗೂ ಗಿರೀಶ್ ಮತ್ತು ವಿನುತಾ ಭಾರತದಲ್ಲಿರುತ್ತಾರೆ. ಇವರಿಗೆ ಒಂದು ಮಗು ಹರ್ಷ. ಮಹಾಶ್ವೇತೆ ಕಾದಂಬರಿಯ ಅನುಪಮಾ ಬಿಳುಪಿನ (ತೊನ್ನು ರೋಗ) ರೋಗದವಳಾಗಿದ್ದು ಸಮಾಜದಲ್ಲಿರುವ ಜನ ಸಾಮಾನ್ಯರು ನಿಕೃಷ್ಣವಾಗಿ ನೋಡುವ, ತಾತ್ಸಾರ ಪಡುವುದನ್ನು ಬಿಟ್ಟು ಮಾನವೀಯತೆಯಿಂದ ನೋಡಬೇಕೆಂಬ ಸಂದೇಶವನ್ನು ನೀಡುತ್ತದೆ.

Read More »

ತಾಳಗುಂದ ಶಾಸನ ಮತ್ತು ಸಂಸ್ಕೃತಿ

ರುದ್ರಮುನಿ ಎಚ್.

55 to 61

ತಾಳಗುಂದ ಶಾಸನವು ಕದಂಬರ ಪ್ರಮುಖ ಐತಿಹಾಸಿಕ ಶಾಸನವಾಗಿದೆ. ಕನ್ನಡ ಸಾಹಿತ್ಯ, ಶಾಸನ, ಕಲೆ, ಸಂಸ್ಕೃತಿ ಹಾಗೂ ಆ ಕಾಲದ ಜನರ ಜೀವನ ಕ್ರಮಗಳು ಈ ಶಾಸನದಲ್ಲಿ ಕಂಡುಬಂದಿವೆ. ವಿದ್ಯೆ ಕಲಿಯಲು ಹೋದ ಕನ್ನಡಿಗನಿಗೆ ಆದ ಅಪಮಾನದಿಂದ ಸಿಡಿದೆದ್ದು ಕನ್ನಡದ ಮೊದಲ ಸಾಮ್ರಾಜ್ಯ ನಿರ್ಮಾಣಕ್ಕೆ ಕಾರಣವಾದ ವಿವರ ಈ ಶಾಸನದಲ್ಲಿದೆ. ಕರ್ನಾಟಕದ ಮೊದಲ ಕೆರೆ ಹಾಗೂ ದೇವಾಲಯಗಳ ಸ್ಥಾಪನೆ, ಕನ್ನಡದ ರಾಜಮನೆತನವೊಂದು ಆ ಕಾಲಕ್ಕಾಗಲೇ ಉತ್ತರ ಭಾರತ ಹಾಗೂ ದಕ್ಷಿಣ ಭಾರತಗಳ ನಡುವೆ ವೈವಾಹಿಕ ಸಂಬಂಧ ಬೆಳೆಸಿಕೊಂಡಿತ್ತು ಎಂಬ ವಿವರ ಈ ಶಾಸನದಲ್ಲಿದೆ. ಕನ್ನಡಿಗರ ಸ್ವಾಭಿಮಾನ ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ದೃಷ್ಟಿಯಿಂದ ತಾಳಗುಂದ ಶಾಸನ ಮಹತ್ವದ್ದಾಗಿದೆ. ಇತ್ತೀಚಿನ ಸಂಶೋಧನೆಗಳಿಂದ ಕರ್ನಾಟಕದ ಮೊದಲ ಪ್ರಾಚೀನ ಶಾಸನ ಎಂಬ ಹಿರಿಮೆಗೆ ಪಾತ್ರವಾಗಿದೆ.

Read More »

ಗಂಗರಸ: ಮೈಲಾರದ ಶಾಸನೋಕ್ತ ವಿಜಯನಗರ ಅಧಿಕಾರಿ

ಎನ್. ಎಸ್. ವೀರೇಶ ಉತ್ತಂಗಿ

62 to 67

ವಿಜಯನಗರ ಸಾಮ್ರಾಟರ ಆಡಳಿತವು ಅತ್ಯಂತ ವೈಭವದಿಂದ ನಡೆದಿರುವುದು ಅವರ ಕೈಕೆಳಗಿನ ಅಧಿಕಾರಿಗಳಿಂದ. ಅವರು ಆಡಳಿತಾಧಿಕಾರಿಗಳಾಗಿರಬಹುದು, ಅಥವಾ ಸೇನಾಧಿಕಾರಿಗಳಾಗಿರಬಹುದು ಅಥವಾ ಭಂಡಾರದ ಅಧಿಕಾರಿಗಳಾಗಿರಬಹುದು ಅಥವಾ ಸ್ಥಳೀಯ ಅಧಿಕಾರಿಗಳಾಗಿರಬಹುದು. ಇಂಥ ಅಧಿಕಾರಿಗಳು ತಮ್ಮ ಶ್ರದ್ದೆ, ನಿಷ್ಠೆ, ಪ್ರಾಮಾಣಿಕತನದಿಂದ ಸಾಮ್ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅಂಥ ಪ್ರಾಮಾಣಿಕ ಅಧಿಕಾರಿಗಳಲ್ಲಿ ಮೈಲಾರದ ಮೈಲಾರಲಿಂಗೇಶ್ವರ ದೇವಾಲಯದ ಭಂಡಾರದ ಅಧಿಕಾರಿ ಗಂಗರಸನೂ ಒಬ್ಬ. ಈತ ವಂಶಪಾರಂಪರ್ಯ ಭಂಡಾರಿಯಾಗಿದ್ದಾನೆ. ತನಗೆ ಬಂದ ಆದಾಯದಲ್ಲಿ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದಾನೆ. ಈತನು ವಿಜಯನಗರ ಸಂಗಮ ದೊರೆಗಳಾದ 1ನೇ ದೇವರಾಯ, ವಿಜಯರಾಯ ಮತ್ತು 2ನೇ ದೇವರಾಯನ ಆಳ್ವಿಕೆಯಲ್ಲಿ ಭಂಡಾರಿಯಾಗಿ ಕಾರ್ಯನಿರ್ವಹಿಸಿದ್ದಾನೆ.

Read More »

ಪ್ಯಾಸೆಂಜರ್ ಗಾಡಿ

ಮುನಿರಾಜ ಎ.

68 to 73

ಮನುಷ್ಯನ ಸ್ವಭಾವವು ಏಕಾಂತದಲ್ಲಿದ್ದಾಗಲೂ, ಸಭೆಯಲ್ಲಿದ್ದಾಗಲೂ ಬಹು ವ್ಯತ್ಯಾಸವಾಗಿಯೇ ವರ್ತಿಸುತ್ತದೆ. ಏಕೆಂದರೆ ಅದಕ್ಕೆ ಒಳಗೆ ಒಂದು ಭಯ ಕಾಡುತ್ತಿರುತ್ತದೆ. ಅದೆಂದರೆ ವ್ಯಕ್ತಿ ತಾನು ವಾಸಿಸುತ್ತಿರುವ ಪರಿಸರದ ಸಾಮಾಜಿಕ ಕಟ್ಟಳೆಗಳು, ತನಗೆ ಇಷ್ಟವಿರಲಿ ಇಲ್ಲದಿರಲಿ ಅವುಗಳನ್ನು ಪಾಲಿಸಲೇಬೇಕು. ಇದು ಬಹುವಾಗಿ ಇತರ ಜನರೆದುರು ಪಾಲಿಸಿದಂತೆ ನಟಿಸಿದರೂ ಏಕಾಂತದಲ್ಲಿ, ಅಂತರಂಗದಲ್ಲಿ ಅದಕ್ಕೆ ಹಲವು ಸಲ ನೆಲೆಯೇ ಇರುವುದಿಲ್ಲ. ಇಂತಹ ಅನೇಕ ಅಮೂರ್ತ ಕಲ್ಪನೆಗಳಲ್ಲಿ ಒಂದು ಜಾತಿ. ಇದು ಎಷ್ಟೋ ಸಮಾಜಗಳನ್ನು ತನ್ನ ಬಡಬಾನಲದ ಒಡಲಿಗೆ ಆಹಾರವಾಗಿಸಿದೆ; ಇಂದಿಗೂ ಆಗಿಸುತ್ತಿದೆ ಕೂಡ. ಅಂತೆಯೇ ಲಿಂಗಭೇದ. ಗಂಡು-ಹೆಣ್ಣಿನ ನಡುವಿನ ಶಾರೀರಿಕ ಕ್ಷಮತೆಯ ಗುಣಾವಗುಣಗಳನ್ನು ನಿಷ್ಕರ್ಷಿಸಿ ಒಡಂಬಡದ ಜನರು ಇವರಿಬ್ಬರ ಸಮಾನತೆಯ ದೀಪಕ್ಕೆ ಎಣ್ಣೆಯನ್ನೇ ಹಾಕರು. ಅದು ಎಂದೂ ಬೆಳಗದಂತೆ ಮುತುವರ್ಜಿ ವಹಿಸುವಲ್ಲಿ ಜಾಣರು. ಜಾತಿ ಮತ್ತು ಲಿಂಗ ಎಂಬುದು ಮನುಷ್ಯನ ಬದುಕನ್ನು ಕರಾಳವಾಗಿಸುವ ರೀತಿ ಅವರ್ಣನೀಯವಾದುದು. ಈ ಹಿನ್ನೆಲೆಯಲ್ಲಿ ತಮಿಳಿನ ಬಹುಪ್ರಸಿದ್ಧ ಕವಿಯಾದ 'ಜಯಕಾಂತನ್' ಅವರ 'ಪ್ಯಾಸೆಂಜರ್ ಗಾಡಿಯಲ್ಲಿ ಒಂದು ಹಗಲು' ಎಂಬ ಕಥೆಯನ್ನು ವಿಮರ್ಶಿಸುವ ಕಾಯಕವನ್ನಿಲ್ಲಿ ಮಾಡಲಾಗಿದೆ.

Read More »

ಸಂಕ್ರಾಂತಿ ನಾಟಕದ ವಿಭಿನ್ನ ನೆಲೆಗಳು

ರೇಷ್ಮಾ ಟಿ. ಎಸ್.

74 to 85

ಕಾವ್ಯ, ಕಥೆ, ಕಾದಂಬರಿಗಳಂತೆ ನಾಟಕ ಒಂದು ಸಾಹಿತ್ಯ ಪ್ರಕಾರ. ದೃಶ್ಯದ ಮೂಲಕ ರಂಗ ಮಾಧ್ಯಮದಲ್ಲೂ ಶ್ರವ್ಯದ ಮೂಲಕ ಸಾಹಿತ್ಯ ಮಾಧ್ಯಮದಲ್ಲೂ ಸಲ್ಲುವುದರಿಂದ ಒಂದು ವಿಶಿಷ್ಟ ಮಾಧ್ಯಮವೆನಿಸಿದೆ. ಜೀವನದ ಸಂಗತಿಗಳನ್ನು ಅರ್ಥವತ್ತಾಗಿ ಪರಿಣಾಮಕಾರಿಯಾಗಿ ನಟನೆಯ ಮೂಲಕ ತಿಳಿಯಪಡಿಸುವುದು ನಾಟಕದ ಉದ್ದೇಶ. ಪ್ರೇಕ್ಷಕರಿಗೆ ಆನಂದ ನೀಡುವುದು ಅದರ ಪರಿಣಾಮದ ಉದ್ದೇಶ. ಸಮಕಾಲೀನ ನಾಟಕಕಾರರಲ್ಲಿ ಲಂಕೇಶ್ ಅವರು ಮುಖ್ಯರು. ಪಾಶ್ಚತ್ಯ ಆಧುನಿಕ ನಾಟಕ ಚಳುವಳಿಯ ಪರಿಚಯ ಪ್ರಭಾವಗಳಿಂದ ಸ್ಫೂರ್ತಿಗೊಂಡು ವಿಭಿನ್ನ ಬಗೆಯ ನಾಟಕಗಳನ್ನು ರಚಿಸಿದ ಲಂಕೇಶರು ಕನ್ನಡದ ನವ್ಯ ನಾಟಕಗಾರರಲ್ಲಿ ಪ್ರಮುಖರಾಗಿದ್ದಾರೆ. ಪ್ರಸ್ತುತ ಪ್ರಬಂಧದಲ್ಲಿ ಲಂಕೇಶರ ಸಂಕ್ರಾಂತಿ ನಾಟಕದ ವಿಭಿನ್ನ ನೆಲೆಗಳನ್ನು ವಿವರಿಸಲಾಗಿದೆ. ಸಂಕ್ರಾಂತಿ ನಾಟಕದಲ್ಲಿ ಚರಿತ್ರೆಯ ವಸ್ತು ಮತ್ತು ವ್ಯಕ್ತಿಗಳನ್ನಾಧರಿಸಿ ಅದರ ಹಿನ್ನೆಲೆಯಲ್ಲಿ ಸಮಕಾಲೀನ ಸಮಾಜವನ್ನು ನೋಡಿದ್ದಾರೆ. ಪಿ. ಲಂಕೇಶ್‌ರವರ ಸಂಕ್ರಾಂತಿ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಮಹತ್ವಪೂರ್ಣ ನಾಟಕ. ಬಸವಣ್ಣನವರ ಚಳುವಳಿಯನ್ನು ವಸ್ತುವಾಗಿ ಇಟ್ಟುಕೊಂಡು ಅಂದಿನ ಚಳುವಳಿಯನ್ನು ನೇರವಾಗಿ ಸ್ಪಷ್ಟವಾಗಿ ಇಂದಿನ ಕಾಲದಲ್ಲಿಟ್ಟು ನೋಡುವಲ್ಲಿ ಯಶಸ್ವಿಯಾಗಿದೆ.

Read More »

ಎಲ್‌.ಎಸ್.ಶೇಷಗಿರಿ ರಾವ್‌ ರವರ 'ಕಾದಂಬರಿ ಮತ್ತು ಸಾಮಾನ್ಯ ಮನುಷ್ಯ' ವಿಮರ್ಶಾ ಕೃತಿಯ ಅವಲೋಕನ

ಅನ್ನಪೂರ್ಣ ಗುಡುದೂರು

86 to 96

ಎಲ್.ಎಸ್. ಶೇಷಗಿರಿರಾವ್ ಅವರು ಖ್ಯಾತ ವಿಮರ್ಶಕರೆಂದೇ ಗುರುತಿಸಿಕೊಂಡವರು. ವಿಮರ್ಶಕರಲ್ಲದೆ ಬಹುಮುಖ ಪ್ರತಿಭೆ ಉಳ್ಳವರು ಎಂಬುದು ಇವರ ವಿಭಿನ್ನ ಸಾಹಿತ್ಯ ಕೃತಿಗಳಿಂದ ಗೋಚರವಾಗುತ್ತದೆ. ವಿಮರ್ಶೆಯಲ್ಲಿಯೂ ನಾವು ಇವರನ್ನು ಯಾವುದೇ ಒಂದು ಕಾಲಘಟ್ಟಕ್ಕೆ ಅಥವಾ ಒಂದೇ ಸಾಹಿತ್ಯ ಪ್ರಕಾರದ ವಿಮರ್ಶೆಯೊಳಗೆ ಗುರುತಿಸಲಾಗದು. ಎಲ್ಲ ಕಾಲಘಟ್ಟದ ಸಾಹಿತ್ಯ ಕೃತಿಗಳನ್ನು ವಿಮರ್ಶಿಸಿ ಸಮನ್ವಯ ಸಾಧಿಸಿದ ವಿಮರ್ಶಕರು ಇವರು. ಇಂಗ್ಲಿಷ್ ಸಾಹಿತ್ಯದಲ್ಲಿಯೂ ಇವರ ವಿಮರ್ಶೆ ಹೀಗೆಯೇ ಸಾಗಿದೆ. ಸಾಹಿತ್ಯದ ವಿವಿಧ ಕಾಲಘಟ್ಟಗಳ ಧೈಯ ಧೋರಣೆಗಳನ್ನು ಬಲ್ಲವರಾಗಿದ್ದ ಇವರು ಒಂದು ಭಾಷೆಯ ಸಾಹಿತ್ಯದ ಸಮೀಕ್ಷೆಯನ್ನು, ಚರಿತ್ರೆಯನ್ನು ಬರೆದಿದ್ದಾರೆ. ಗ್ರೀಕ್ ರಂಗಭೂಮಿ ಮತ್ತು ನಾಟಕ, ಇಂಗ್ಲಿಷ್ ಸಾಹಿತ್ಯ ಚರಿತ್ರೆ, ಹೊಸಗನ್ನಡ ಸಾಹಿತ್ಯ ಚರಿತ್ರೆ ಬರೆದಿರುವ ಇವರ ಈ ಕೃತಿಗಳ ವಿಷಯಗಳ ಹಿಂದೆ ಅವರ ಆಸಕ್ತಿ, ಪರಿಶ್ರಮ, ತಮ್ಮ ತಾಯಿ ನಾಡಿನ ಓದುಗರಿಗೆ ಜಗತ್ತಿನ ಸಾಹಿತ್ಯವನ್ನು ಪರಿಚಯಿಸಬೇಕೆಂಬ ಹಂಬಲ ಎಲ್ಲವು ಕಾರಣಗಳಾಗಿವೆ. ಹಾಗಾಗಿ ಈ ಲೇಖನದ ಮೂಲಕ ಇವರ ವಿಮರ್ಶಾ ಕೃತಿಯನ್ನು ಪರಿಚಯಿಸುವ ಉದ್ದೇಶವನ್ನು ಪ್ರಸ್ತುತ ಲೇಖನವು ಹೊಂದಿದೆ.

Read More »

ಪಂಪನ ಕಥಾಸತ್ಯ ಮತ್ತು ಕಾವ್ಯ ನಿಷ್ಠೆ ಹಾಗೂ ಕಾಮವಾಸನೆ: ಆದಿ ಪುರಾಣವನ್ನು ಅನುಲಕ್ಷಿಸಿ.

ಆಯ್. ಬಿ. ಸಾತಿಹಾಳ

97 to 109

'ಜನ್ಮಾಂತರಗಳಲ್ಲಿ ನಂಬಿಕೆಯಿಟ್ಟು ಸ್ಮರತತ್ವವನ್ನು ಸಂಪೂರ್ಣವಾಗಿ ವಿರೋಧಿಸುತ್ತ, ದಕ್ಕಿದ ಭೋಗ-ವೈಭವಗಳನ್ನೆಲ್ಲ ಬದಿಗಿಟ್ಟು, ತಲೆಗೂದಲನ್ನು ಕಿತ್ತು ದೀಕ್ಷೆ ಕೈಕೊಂಡು, ಗತಪ್ರಾಣನಾಗುವುದರಿಂದ ಜೀವನಿಗೆ ಪುನತ್ವನ್ಮದಲ್ಲಿ ಅತ್ಯಾನಂತವಾದ ಪದವಿ-ಫಲಗಳು ಸಹಸ್ರಸಾಗರೋಪಮಾನ ಕಾಲದವರೆಗೆ ಸಿಕ್ಕುತ್ತವೆ' ಎನ್ನುವುದು ಜೈನ ಪುರಾಣಗಳ ಪ್ರಬಲವಾದ ನಿಲುವು. ಇದನ್ನು ತನ್ನ ಆದಿಪುರಾಣ ಕಾವ್ಯದಲ್ಲಿ ನಿರೂಪಿಸಲು ಹೊರಟಿರುವ ಪಂಪನಿಗೆ ಇದು ಸುಲಭವಾದ ಕೆಲಸವಾಗಿರಲಿಲ್ಲ. ಬಹುಪ್ರಾಚೀನ ಕಾಲದಿಂದಲೂ ಬೆಳೆದು ಬಂದಿರುವ ಧಾರ್ಮಿಕ ಕಲ್ಪನೆ ಕನ್ನಡ ನಾಡಿನಲ್ಲಿ ಪಂಪನ ಕಾಲಕ್ಕಾಗಲೇ ಪರ-ವಿರೋಧಗಳನ್ನು ಸ್ವೀಕರಿಸುತ್ತ, ಎದುರಿಸುತ್ತ, ಕುಂಟುತ್ತ ಸಾಗಿತ್ತು. ಅಂಥ ಸಂದರ್ಭದಲ್ಲಿ ಪಂಪನು ಧಾರ್ಮಿಕ ಕಲ್ಪನೆಯನ್ನು ಕಾವ್ಯಸತ್ಯವನ್ನಾಗಿಸುವುದರ ಮೂಲಕ ಜೈನಧರ್ಮಕ್ಕೆ ಈ ನಾಡಿನಲ್ಲಿ ವಿಶೇಷವಾದ ರಾಜ್ಯಮನ್ನಣೆಯನ್ನೊ ದಕ್ಕಿಸಿಕೊಟ್ಟು ಜೈನಧರ್ಮಕ್ಕೆ ನವ ಚೈತನ್ಯವನ್ನು ತುಂಬುತ್ತಾನೆ. ಜನಸಾಮಾನ್ಯರಲ್ಲಿ ಜನ್ಮಾಂತರಗಳ ವಿಷಯದಲ್ಲಿ ಇರುವ ನಂಭಿಕೆ-ನಿರ್ಲಕ್ಷ್ಯಗಳನ್ನು ಕಾವ್ಯದ ಸಂದರ್ಭದಲ್ಲಿ ಚರ್ಚಿಸುತ್ತಾನೆ. 'ಜೈನಧರ್ಮಮೆ ಧರ್ಮಮಮಂ' ಎಂದು ಪ್ರತಿಷ್ಠಾಪಿಸಲು ಸಾಕಷ್ಟು ಸ್ಪಷ್ಟಿಕರಣವನ್ನು ನೀಡುತ್ತಾನೆ; ಆ ಮೂಲಕ ತನ್ನ ಕಾವ್ಯ ಸತ್ಯದ ಸತ್ವವನ್ನು ಅನಾವರಣಗೊಳಿಸುತ್ತಾನೆ.

Read More »

'ಕರ್ವಾಲೊ'-ಕಾದಂಬರಿ ಒಂದು ತಾತ್ವಿಕತೆಯ ಓದು

ಪ್ರಕಾಶ ಬಿ.

110 to 116

ಕರ್ವಾಲೊ' ಕಾದಂಬರಿ ಬದುಕಿನ ಮೂಲ ದ್ರವ್ಯಕ್ಕೆ-ಅವುಗಳ ಪ್ರತ್ಯೇಕ ಸ್ಥಿತಿಯಲ್ಲಿ ಇದ್ದಿರಬಹುದಾದ ಅಥವಾ ಇದ್ದಂತೆ ಕಾಣಿಸುವ ಮೂರ್ತ ಅರ್ಥ ದೊಂದಿಗೆ ಕರಗಿಕೊಂಡು ಅಂತಿಮವಾಗಿ ಅಮೂರ್ತ ಅಥವಾ ನಿಗೂಢ ಅರ್ಥ ಪರಂಪರೆಗಳನ್ನು ಅನುರಣಿಸುವಂತೆ ಮಾಡುವ ಹೊಂಚು ತೇಜಸ್ವಿಯವರ ಈ ಕೃತಿಯಲ್ಲಿ ಇದೆ. ಕರಾರುವಾಕ್ಕಾದ ಶಾಸ್ತ್ರಜ್ಞಾನದ ಆನ್ವೇಷಣೆಗಾಗಿ ಅಲ್ಲ, ಸತ್ಯಾನುಭವದ ಅರಸುವಿಕೆಗಾಗಿ ಎಂಬುದು ಗಮನಾರ್ಹ. ನೀರಸ ವಸ್ತುವಿನಂತೆ ಜನ ಸಾಮಾನ್ಯರಿಂದ ದೂರ ಉಳಿದು ಬಿಡುವ ವೈಜ್ಞಾನಿಕ ಸತ್ಯಗಳು ಈ ಕಾದಂಬರಿಯಲ್ಲಿ ವಿಜ್ಞಾನದ ಅನೇಕ ವರ್ಷಗಳ ಸಾಧನೆಯನ್ನು ತಟಕ್ಕನೆ ಏರುಪೇರು ಮಾಡಬಲ್ಲ ಶಕ್ತಿಯನ್ನು, ರಹಸ್ಯಗಳನ್ನು ಸಂಗತಿಗಳನ್ನು ಪಡೆದುಕೊಂಡಿರುವ ಜೀವಚರ. ಇದು ನಮ್ಮ ಪ್ರಜ್ಞೆ: ನಮ್ಮ ಕುತೂಹಲ; ನಮ್ಮ ದಿಗ್ದಮೆಯೂ ಹೌದು; ನಮ್ಮ ತಿಳುವಳಿಕೆಯ ದಿಕ್‌ಸೂಚಿಯೂ ಹೌದು. ನಮ್ಮನ್ನು ಒಂದೇ ಜಿಗಿತಕ್ಕೆ ಕೋಟ್ಯಂತರ ವರುಷಗಳ ಹಿಂದಕ್ಕೆ ಒಯ್ಯುವ ಸಾಧನವೂ ಹೌದು. ಜೀವ ವಿಕಾಸದ ಹಾದಿಯಲ್ಲಿನ ಅನೇಕ ಸಂಗತಿಗಳನ್ನು ಬಿಚ್ಚುವ ಕಾಲಕೋಶವೂ ಹೌದು. ಅದು ನಮ್ಮ ವಿಜ್ಞಾನ; ನಮ್ಮ ಆಧ್ಯಾತ್ಮ ಕೂಡಾ. ಕುತೂಹಲವಾಗಿ ಕಾಣಿಸಿಕೊಂಡು ಬಿಡಿಸಲಾಗದ ನಿಗೂಢವಾಗಿ ಸಂಕೇತವಾಗುತ್ತ ಪ್ರತಿಮೆಯಾಗುತ್ತ ನಮ್ಮ ಪ್ರಜ್ಞೆಯೇ ಆಗುತ್ತ ನಮ್ಮ ವ್ಯಕ್ತಿತ್ವವನ್ನೇ ಆವರಿಸಿಬಿಡುವ, ನಿಯಂತ್ರಿಸಿ ಬಿಡುವ ಈ ಹಾರುವ ಓತಿ ಹೌದು.

 
Read More »

ಭಾರತ ಸಂವಿಧಾನ ಮತ್ತು ಬಸವಾದಿ ಶರಣರ ಚಿಂತನೆಗಳು

ಭೀ. ಜಿ. ನಂದನ

117 to 128

ಭಾರತದ ಸಂವಿಧಾನ ಮತ್ತು ಬಸವಾದಿಶರಣರ ಚಿಂತನೆಗಳು ಎಂಬ ಎರಡು ಮಹಾನ್ ಐತಿಹಾಸಿಕ ದಾಖಲೆಗಳು, ಭಾರತದ ಸಂವಿಧಾನವನ್ನು ಮತ್ತು ಶರಣರ ವಚನ ಸಾಹಿತ್ಯವನ್ನು ಆಳವಾಗಿ ಆಧ್ಯಯನಗೈದವರಿಗೆ ವಚನ ಸಾಹಿತ್ಯದ ಪ್ರತಿಧ್ವನಿಯೇ ಭಾರತ ಸಂವಿಧಾನವೆಂಬ ಒಂದು ಸತ್ಯವು ಗೋಚರಿಸುತ್ತದೆ. ವಚನ ಸಾಹಿತ್ಯದ ವ್ಯಾಪ್ತಿಯು ಆಕಾಶದಷ್ಟು ವಿಶಾಲವಾದದ್ದು ಮತ್ತು ಸಾಗರದಷ್ಟು ಆಳವಾದದ್ದು ಹಾಗು ಅದು ವಿಶ್ವಮಾನವ ಕುಲಕೊಟಿಗೆ ಕಾಲಾತೀತವಾಗಿ ಸಂಬಂಧಿಸಿದ್ದಾಗಿದೆ. ಆದರೆ ಭಾರತದ ಸಂವಿಧಾನವು ವಿಶ್ವದ ಎಲ್ಲ ಸಂವಿಧಾನಗಳ ಒಳ್ಳೆ ಅಂಶಗಳನ್ನು ಒಳಗೊಂಡಿದ್ದರೂ ಅದರ ವ್ಯಾಪ್ತಿಯು ಮಾತ್ರ ಭಾರತಕ್ಕಷ್ಟೇ ಸಿಮಿತವಾಗಿದೆ. ಭಾರತದ ಸಂವಿಧಾನವು ಸಂಸತ್ತಿಕ ಪ್ರಜಾಪ್ತಭುತ್ವ ಮತ್ತು ಸಮಾಜಿಕ ಕಲ್ಯಾಣ ರಾಜ್ಯದ ಹಾಗು ಸಾಮಾಜಿಕ ನ್ಯಾಯದ ಕುರಿತಷ್ಟೇ ಚಿಂತಿಸಿದರೆ ವಚನ ಸಾಹಿತ್ಯವು ಆಧ್ಯಾತ್ಮಿಕ ಪ್ರಜಾಪ್ರಭುತ್ವ ಮತ್ತು ಆಧ್ಯಾತ್ಮಿಕ ಕಲ್ಯಾಣ ರಾಜ್ಯದ ಕುರಿತು ಚಿಂತಿಸಿದೆ. ಒಂದುಲಕ್ಷದ ತೋಂಬತ್ತಾರು ಸಾವಿರ ಜಂಗಮರು, ಎಲ್ಲ ಜಾತಿಯ ಸ್ತ್ರೀಪುರುಷರನ್ನೊಳಗೊಂಡ ಏಳುನೂರದ ಎಪ್ಪತ್ತು ಗಣಾಧಿಶರು ಮತ್ತು ಮೂನ್ನೂರದ ಆರವತ್ನಾಲ್ಕು ವಚನಕಾರರು, ಹನ್ನೇರಡು ಸಾವಿರ ಇಷ್ಟಲಿಂಗ ಧಾರಣೆಗೊಂಡ ದೇವದಾಸಿಯರು, ಅಲ್ಲಮಹಾಪ್ರಭುಗಳ ಅಧ್ಯಕ್ಷತೆಯಲ್ಲಿ ಚೆನ್ನಬಸವಣ್ಣನವರ ಕಾರ್ಯಾಧ್ಯಕ್ಷತೆಯಲ್ಲಿ ಅನುಭವಮಂಟಪವೆಂಬ ಧರ್ಮಸಂಸತ್ತನ್ನು ಅನುಷ್ಠಾನಗೊಳಿಸಲಾಗಿತ್ತು. ಹೆಣ್ಣು ಗಂಡು, ಮೇಲು ಕೀಳು ಎಂಬ ಯಾವ ಭೇದ ಭಾವವಿಲ್ಲದೆ ಚರ್ಚೆಗಳು ನಡೆದು ಸರ್ವರ ಸಮ್ಮತಿ ಪಡೆದು ವಚನ ರೂಪದಲ್ಲಿ ಅನುಮೋದಿಸಲಾಗುತ್ತಿತ್ತು. ಕಲ್ಯಾಣ ಕ್ರಾಂತಿಯಲ್ಲಿ ಅಳಿದುಳಿದ ವಚನಗಳು ಸುಮಾರು 24 ಸಾವಿರದಷ್ಟು ಸದ್ಯದಲ್ಲಿ ಸಂಶೋಧನೆಗೊಂಡಿವೆ. ಅಂದಿನ ವಿಶ್ವಕ್ಕೆ ಪ್ರಜಾಪ್ರಭುತ್ವದ ಹೆಸರನ್ನು ಕೇಳರಿಯದ 12ನೆಯ ಶತಮಾನದ ಬಸವಾದಿಶರಣರ ಆಧುನಿಕ ಪ್ರಜಾಪ್ರಭುತ್ವವನ್ನು ನಾಚಿ ತೆಲೆತೆಗ್ಗಿಸುವಂತ್ತಿತು. ಭಾರತದ ಸಂವಿಧಾನವು 296 ಜನಪ್ರತಿನಿಧಿಗಳನ್ನೊಳಗೊಂಡ ಸಂವಿಧಾನಾತ್ಮಕ ಸಮಿತಿಯ ಸದಸ್ಯರುಗಳು 22 ಮುಖ್ಯ ಸಂವಿಧಾನಾತ್ಮಕ ಸಮಿತಿಯಲ್ಲಿ ಹಾಗೂ 5 ಉಪ ಸಮಿತಿಯಲ್ಲಿ ಹಂಚಿಹೋಗಿದ್ದರು. ಅದು 2 ವರ್ಷ 11 ತಿಂಗಳು 18 ದಿನಗಳಷ್ಟು ಸಮಯವನ್ನು ತೆಗೆದುಕೊಂಡು 395 ಸಂವಿಧಾನಾತ್ಮಕ ವಿಧಿಗಳನ್ನು, 8 ಶೆಡ್ಯೂಲ್ಲುಗಳನ್ನು, 22 ಭಾಗಗಳನ್ನು ಒಳಗೊಂಡಿತ್ತು. ಪ್ರಸ್ತುತದಲ್ಲಿ 460ಕ್ಕಿಂತಲು ಹೆಚ್ಚು ಸಂವಿಧಾನಾತ್ಮಕ ವಿಧಿಗಳನ್ನು, 25 ಭಾಗಗಳನ್ನು, 12 ಶೆಡ್ಯೂಲ್ಲುಗಳನ್ನು ಒಳಗೊಂಡಿದೆ. ಇವೆರಡು ವಿಷಯಗಳ ಹೋಲಿಕೆಯ ಅಧ್ಯಯನವು ತುಂಬಾ ಪ್ರಸ್ತುತವಾಗಿದೆ ಮತ್ತು ಕುತೂಹಲಕಾರಿಯಾಗಿದೆ.

 
Read More »

ಕ್ರೀಡಾ ಮಹಿಳೆ : ಸಮಸ್ಯೆ ಮತ್ತು ಸವಾಲುಗಳು

ಸೀತಾ ಹೆಚ್. ಎನ್.

129 to 136

'ಆಗದಾಗದು ಏನು ನನ್ನಿಂದ' ಎನ್ನುವ ಬದಲು ಏನಾದಿತೋ ನೋಡೋಣ ಸಾಧ್ಯವಾದಷ್ಟು ಪ್ರಯತ್ನಿಸೋಣ ಎನ್ನುವ ನಿರ್ಧಾರ ಬದುಕಿನ ಹೊಲದಲ್ಲಿ ಬಂಗಾರದ ಬೀಜ ನೆಡುತ್ತದೆ. ಸಾಧಕನ ಹಾದಿಯಲ್ಲಿ ಇದೊಂದು ಮಹತ್ತರ ಹೆಜ್ಜೆ. ಯಾರೇ ಆಗಲಿ ಒಂದು ಹೆಜ್ಜೆ ಮುಂದಿಡದಿದ್ದರೆ ಪಯಣವಾದರೂ ಸಾಗುವುದೆಂತು? ಪಯಣ ಪ್ರಾರಂಭವಾಗುವುದೇ ಮುಂದೆ ಹೋಗಬೇಕೆಂಬ ಮನೋಬಲದ ಕ್ರಿಯೆಯಿಂದ, ಆಚರಣೆಯಿಂದ. ಹೀಗಿಲ್ಲದ ಮನುಜರ ಅದೆಷ್ಟೋ ಚಿಂತನೆಗಳು ಎಂದು ರೆಕ್ಕೆ ಹೊತ್ತಿ ಹಾರುವುದೇ ಇಲ್ಲ. ಮುಂದೆ ಕಾರಣವೆಂದರೆ ನನಸಾಗುವ ಸಾಮರ್ಥ್ಯ ಸಿದ್ಧಿಸಬೇಕಾದರೆ ಅನುಷ್ಠಾನದಲ್ಲಿ ಅಚಲ ನಂಬಿಕೆ ಇರಬೇಕು. ಸಾಧಿಸುವ ಅದಮ್ಯ ಉತ್ಸಾಹ ಪುಟಿಯುತ್ತಿರಬೇಕು. ಇಂಥ ಅದಮ್ಯ ಉತ್ಸಾಹವನ್ನಿರಿಸಿಕೊಂಡು ಕ್ರೀಡಾರಂಗದಲ್ಲಿ ಸಾಧನೆ ಮಾಡುತ್ತಿರುವ ಶರ್ಮಿಳಾನಿಕೋಲೇಟ್ ದೀಪಿಕಾಪಲ್ಲಿಕಲ್ ಸೈನಾನೆಹ್ವಾಲ್, ಸಾನಿಯಾಮಿರ್ಜಾ, ಅಕ್ಷಾಂಕ್ಷಸಿಂಗ್ ಸೋನಿಕಾ ಕಲಿರಾಮನ್, ಜವಾಗಿಟ್ಟಾ, ಸುನೀತರಾವ್, ಪಿ. ಟಿ. ಉಷಾ- ಮೊದಲಾದ ಕ್ರೀಡಾ ಮಹಿಳೆಯರು ಇಂದು ದೇಶದ ಆಸ್ತಿಯಾಗಿದ್ದಾರೆ. ಇಂತ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆ ಮತ್ತು ಸವಾಲುಗಳನ್ನು ಹೇಳುವುದೇ ಈ ಲೇಖನದ ಉದ್ದೇಶವಾಗಿದೆ.

 
Read More »

ಶಿವಶರಣರ ದೃಷ್ಟಿಯಲ್ಲಿ ಆರ್ಥಿಕ ಸಿದ್ಧಾಂತ

ಶಂಭುಲಿಂಗ ಹುಬ್ಬಳ್ಳಿ

137 to 142

12ನೇ ಶತಮಾನದಲ್ಲಿ ಬಸವಾದಿ ಶಿವಶರಣರು ಅಂದಿನ ಸಮಾಜದ ಸಾಮಾಜಿಕ, ಆರ್ಥಿಕ, ರಾಜಕೀಯ, ಧಾರ್ಮಿಕ ಮುಂತಾದ ಕ್ಷೇತ್ರಗಳಿಗೆ ಸಂಬಂಧಿಸಿದಂತಹ ಸುಧಾರಣೆಯನ್ನು ತರಲು ಬಯಸಿದರು. ಪ್ರತಿಯೊಬ್ಬ ವ್ಯಕ್ತಿಯೂ ಕಾಯಕದಲ್ಲಿ ತೊಡಗಬೇಕು. ಆ ಕಾಯಕದಿಂದ ಬಂದ ಹಣದಿಂದ ತನ್ನ ಅಗತ್ಯತೆಗಳನ್ನು ಪೂರೈಸಿಕೊಂಡು ಉಳಿದ ಹಣವನ್ನು ಸಾಮಾಜಿಕ ಕಾರ್ಯಗಳಿಗೆ ಸದ್ವಿನಿಯೋಗ ಮಾಡಬೇಕು ಎಂಬುದು ಶರಣರ ಆಲೋಚನೆಯಾಗಿತ್ತು. ಜೊತೆಗೆ ಸಮಾಜದಲ್ಲಿನ ಸಂಪತ್ತು ಎಲ್ಲ ಜನರಿಗೆ ಸಮಾನವಾಗಿ ಹಂಚಿಕೆ ಆಗಬೇಕು ಎಂಬ ಪರಿಕಲ್ಪನೆಯನ್ನು ಹೊಂದಿದ್ದರು. ಅಂತೆಯೆ 'ಶಿವಶರಣರ ದೃಷ್ಟಿಕೋನದಲ್ಲಿ ಆರ್ಥಿಕ ಸಿದ್ದಾಂತ' ಎಂಬ ಈ ಲೇಖನದಲ್ಲಿ ಅರ್ಥಶಾಸ್ತ್ರದ ಪರಿಕಲ್ಪನೆಗಳಾದ ಕೃಷಿ, ಉದ್ಯೋಗ, ಉತ್ಪಾದನೆ, ವಿತರಣೆ, ಆದಾಯ, ಅನುಭೋಗ, ಉಳಿತಾಯ ಮುಂತಾದ ಅಂಶಗಳ ಬಗ್ಗೆ ಬೆಳಕನ್ನು ಚೆಲ್ಲಲಾಗಿದೆ. ಉತ್ಪಾದನಾ ಸಿದ್ದಾಂತದಲ್ಲಿ ಕಾಯಕವು ಮಹತ್ವದ ಪಾತ್ರವನ್ನು ವಹಿಸುತ್ತದೆ. 'ಕಾಯಕವೇ ಕೈಲಾಸ' ಎಂಬ ಶರಣರ ಸಿದ್ಧಾಂತವನ್ನು ಅರ್ಥಶಾಸ್ತ್ರ ದೃಷ್ಟಿಕೋನದಿಂದ ನೋಡಲು ಪ್ರಯತ್ನಿಸಲಾಗಿದೆ. ಅಂದರೆ ಸಮಾಜದಲ್ಲಿ ಆರ್ಥಿಕ ಸಮಾನತೆಯು ಸಮಾಜದ ಏಳಿಗೆಗೆ ಭದ್ರ ಬುನಾದಿ ನೀಡುತ್ತದೆ ಎಂಬ ವಿಷಯದ ಬಗ್ಗೆ ವಿವರಿಸಲಾಗಿದೆ. ಪ್ರಸ್ತುತ ಆಧುನಿಕ ಅರ್ಥವ್ಯವಸ್ಥೆ ಮತ್ತು ಶರಣರ ಆರ್ಥಿಕ ಚಿಂತನೆಗಳಲ್ಲಿ ಹಣ ಬದುಕಿನ ಅವಿಭಾಜ್ಯ ಅಂಗ ಎಂಬುದನ್ನು ಅಲ್ಲಗಳೆದು ಸಂಪತ್ತಿನ ಸಂಗ್ರಹವನ್ನು ಸಮಾಜದ ಅಭಿವೃದ್ಧಿಗೆ ತೊಡಗಿಸಿದಲ್ಲಿ ದೇಶದ ಕಲ್ಯಾಣ ಸಾಧ್ಯವೆಂಬ ಅರ್ಥ ಶಾಸ್ತ್ರದ ತತ್ವ ಸಿದ್ಧಾಂತವನ್ನು ಸ್ಪಷ್ಟವಾಗಿ ವಿಶ್ಲೇಷಿಸಲಾಗಿದೆ.

 
Read More »

ಗಣ್ಯರು ಕಂಡಂತೆ ತಲ್ಲೂರು ರಾಯನಗೌಡರು

ಯಲ್ಲಪ್ಪ ಬಸಪ್ಪ ಕಡಕೋಳ

143 to 152

"ತಲ್ಲೂರು ರಾಯನಗೌಡರು ಸಮಗ್ರ ಅಧ್ಯಯನ” ಬಹುಮುಖಿಯಾಗಿ ನಡೆಯುವಂತದ್ದು. ರಾಯನಗೌಡರು ಬಹುಮುಖ ವ್ಯಕ್ತಿತ್ವ ಹೊಂದಿದವರಾಗಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟ, ಸ್ವಾತಂತ್ರ್ಯಾ ನಂತರ ಕರ್ನಾಟಕ ಏಕೀಕರಣ ಜೊತೆಗೆ ಸಾಹಿತ್ಯ ಸಂಶೋಧನೆಯಲ್ಲಿ ಅವರ ವ್ಯಕ್ತಿತ್ವವನ್ನು ದಾಖಲೆಗಳ ಮೂಲಕ ಕಾಣಬಹುದಾಗಿದೆ. ಈ ಹಿನ್ನಲೆಯಲ್ಲಿ ಅವರ ನಿಧನ 30-9-1982 ರ ನಂತರ ಅವರ ಅಳಿಯ ಅಂದರೆ ರಾಯನಗೌಡರ ಮಗಳಾದ ದೇವಿಕಾರಾಣಿಯವರ (ಸದ್ಯ ಬೆಂಗಳೂರಿನಲ್ಲಿ ಇದ್ದಾರೆ) ಅವರ ಪತಿ ದಿವಂಗತ ಪ್ರೊ. ಬಸನಗೌಡ. ಆರ್. ಪಾಟೀಲರು ತಮ್ಮ ಮಾವನವರ ವ್ಯಕ್ತಿತ್ವ ಕುರಿತು ಅಗ್ರಗಣ್ಯ ಸ್ವಾತಂತ್ರ್ಯ ಯೋಧ ತಲ್ಲೂರು ರಾಮನಗೌಡರು ಜೀವನ ದರ್ಶನ ಗ್ರಂಥ ಪ್ರಕಟಣೆಯ ಯೋಜನೆ ಹಾಕಿಕೊಂಡ ಸಂದರ್ಭದಲ್ಲಿ, ಅವರು ರಾಯನಗೌಡರ ಅತ್ಯಂತ ನಿಕಟವರ್ತಿಗಳನ್ನು ಭೇಟಿಯಾದರು. ಅವರಲ್ಲಿ ಬಹುತೇಕರು ಇಂದು ಜೀವಂತವಿಲ್ಲ. ಅಂತವರ ಅನುಭವ ಧಾರೆಗಳು ಬರಹ ರೂಪದಲ್ಲಿ ರಾಯನಗೌಡರ ವ್ಯಕ್ತಿತ್ವವನ್ನು ತೆರೆದಿಟ್ಟವು. ಈ ಕೃತಿಯಲ್ಲಿ ಅವುಗಳನ್ನು ನಾವು ಕಾಣಬಹುದು. ಹಾಗೆಯೇ ಎಂ. ಎಂ. ಕಲಬುರ್ಗಿಯವರು ಕೂಡ ಕಿತ್ತೂರು ಸಂಸ್ಥಾನ ಭಾಗ 1, 2, 3, ಕೃತಿಗಳಲ್ಲಿ ರಾಯನಗೌಡರ ವ್ಯಕ್ತಿತ್ವವನ್ನು ತೆರೆದಿಟ್ಟಿರುವರು. ಜೊತೆಗೆ ಎಂ. ಎಂ. ಕಲಬುರ್ಗಿಯವರ ಭಾರತ ಸ್ವಾತಂತ್ರ್ಯ ಮತ್ತು ಕರ್ನಾಟಕ ಏಕೀಕರಣ ಲಿಂಗಾಯತರ ಪಾತ್ರ ಎಂಬ ಕೃತಿಯಲ್ಲಿಯೂ ಕೂಡ ರಾಯನಗೌಡರ ಹೋರಾಟದ ಹಾದಿಯನ್ನು ದಾಖಲಿಸಿರುವರು. ಈ ದಿಸೆಯಲ್ಲಿ ಈ ಎಲ್ಲ ಕೃತಿಗಳ ಅವಲೋಕನದ ಜೊತೆಗೆ ರಾಯನಗೌಡರ ಸಮಗ್ರ ವ್ಯಕ್ತಿತ್ವವನ್ನು ಹಿಡಿದಿಡುವ ಪ್ರಯತ್ನ ಈ ಅಧ್ಯಾಯದಲ್ಲಿ ಸಾಗಿದೆ.

Read More »