Table of Contents
Trodden Path
ಜನಪದ ಪದ್ಯಸಾಹಿತ್ಯ
01 to 29
ಜಾನಪದ ಸಾಹಿತ್ಯದ ಪ್ರಮುಖ ಅಂಗವಾದ ಜನಪದ ಪದ್ಯಸಾಹಿತ್ಯವು ಮೌಖಿಕ ಪರಂಪರೆಯ ಶ್ರೀಮಂತಿಕೆಯನ್ನು ಬಿಂಬಿಸುತ್ತದೆ. ಬಾಯಿಮಾತಿನ ಮೂಲಕ ಹರಿದುಬಂದಿರುವ ಲಾವಣಿಗಳು, ಖಂಡಕಾವ್ಯಗಳು ಮತ್ತು ಮಹಾಕಾವ್ಯಗಳ ಸ್ವರೂಪ, ಉದ್ದೇಶ ಹಾಗೂ ಅವುಗಳ ಸಾಹಿತ್ಯಕ ಮೌಲ್ಯವನ್ನು ಇಲ್ಲಿ ಆಳವಾಗಿ ವಿಶ್ಲೇಷಿಸಲಾಗಿದೆ. ಸಾಮಾನ್ಯ ಗಾಯಕರು ಮತ್ತು ವೃತ್ತಿಗಾಯಕರ ಹಾಡುಗಾರಿಕೆಯ ಶೈಲಿ, ಅವರು ಬಳಸುವ ವಾದ್ಯಗಳು (ಕಂಸಾಳೆ, ಚೌಡಿಕೆ, ತಂಬೂರಿ ಇತ್ಯಾದಿ), ಹಾಗೂ ಅವರ ವೇಷಭೂಷಣಗಳ ವೈವಿಧ್ಯತೆಯನ್ನು ಕಟ್ಟಿಕೊಡಲಾಗಿದೆ. ವಾಸ್ತವಿಕ ಘಟನೆಗಳನ್ನು ಆಧರಿಸಿದ ಗಂಭೀರ ಲಾವಣಿಗಳು ಮತ್ತು ಪೌರಾಣಿಕ ಹಿನ್ನೆಲೆಯ ಕಾವ್ಯಗಳು ಜನಮಾನಸದಲ್ಲಿ ಹೇಗೆ ಉಳಿದುಕೊಂಡಿವೆ ಎಂಬುದನ್ನು ವಿವರಿಸಲಾಗಿದೆ. ಆಧುನಿಕತೆಯ ಪ್ರಭಾವದಿಂದ ವೃತ್ತಿಗಾಯಕ ಪರಂಪರೆ ಅವನತಿಯತ್ತ ಸಾಗುತ್ತಿರುವ ಆತಂಕವನ್ನು ವ್ಯಕ್ತಪಡಿಸುತ್ತಾ, ಈ ಅಮೂಲ್ಯ ಕಲೆಗಳನ್ನು ಉಳಿಸಿಕೊಳ್ಳುವ ಅನಿವಾರ್ಯತೆಯನ್ನು ಒತ್ತಿಹೇಳಲಾಗಿದೆ.
Byway
ಎನ್‌ಸಿಎಫ್ ಮತ್ತು ಪೊಸಿಶನ್ ಪೇಪರ್ಸ್ : ಪಠ್ಯಗಳ ಬ್ರಾಹ್ಮಣೀಕರಣ
30 to 35
ರಾಷ್ಟ್ರೀಯ ಶಿಕ್ಷಣ ನೀತಿ (NEP 2020) ಮತ್ತು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ (NCF) ಅಡಿಯಲ್ಲಿ ರಚಿಸಲಾದ 'ಪೊಸಿಶನ್ ಪೇಪರ್ಸ್', ವಿಶೇಷವಾಗಿ 'ಭಾರತದ ಜ್ಞಾನ' ದಸ್ತಾವೇಜು, ಶಿಕ್ಷಣದ ಬ್ರಾಹ್ಮಣೀಕರಣಕ್ಕೆ ಹೇಗೆ ನಾಂದಿ ಹಾಡುತ್ತಿದೆ ಎಂಬುದನ್ನು ವಿಮರ್ಶಾತ್ಮಕವಾಗಿ ಚರ್ಚಿಸಲಾಗಿದೆ. ವಿಜ್ಞಾನ, ಜಾತ್ಯತೀತತೆ ಮತ್ತು ವೈಚಾರಿಕತೆಯನ್ನು ಬದಿಗೊತ್ತಿ, ಚಾತುರ್ವರ್ಣ ಸಿದ್ಧಾಂತ ಹಾಗೂ ಆರೆಸ್ಸೆಸ್ (RSS) ಕಾರ್ಯಸೂಚಿಗಳನ್ನು ಪಠ್ಯಕ್ರಮದಲ್ಲಿ ತುರುಕುವ ಹುನ್ನಾರಗಳನ್ನು ಬಯಲಿಗೆಳೆಯಲಾಗಿದೆ. ಪ್ರಾಚೀನ ಭಾರತದ ಜ್ಞಾನದ ಹೆಸರಿನಲ್ಲಿ ಸಂಸ್ಕೃತ ಭಾಷೆ, ಸಾತ್ವಿಕ ಆಹಾರ ಪದ್ಧತಿ ಮತ್ತು ಮನುಸ್ಮೃತಿಯ ಅಂಶಗಳನ್ನು ಹೇರುವ ಮೂಲಕ ಒಳಗೊಳ್ಳುವಿಕೆ ಹಾಗೂ ವೈವಿಧ್ಯತೆಯನ್ನು ನಿರಾಕರಿಸಲಾಗುತ್ತಿದೆ. ಶಿಕ್ಷಣ ವ್ಯವಸ್ಥೆಯನ್ನು ನವ ವಸಾಹತುಶಾಹಿ ಮತ್ತು ಬ್ರಾಹ್ಮಣಶಾಹಿ ಯಜಮಾನಿಕೆಗೆ ಒಳಪಡಿಸುವ ಈ ದಸ್ತಾವೇಜುಗಳ ಅಪಾಯಕಾರಿ ಆಯಾಮಗಳನ್ನು ಮತ್ತು ಅದರ ಹಿಂದಿರುವ ರಾಜಕೀಯ-ಸಾಂಸ್ಕೃತಿಕ ಉದ್ದೇಶಗಳನ್ನು ಸವಿವರವಾಗಿ ವಿಶ್ಲೇಷಿಸಲಾಗಿದೆ.
Research Articles
ಮೊದಲನೆಯ ನಾಗವರ್ಮನ 'ಕರ್ನಾಟಕ ಕಾದಂಬರಿ' ಕಥನಕ್ರಮ
36 to 47
ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಸಾಹಿತ್ಯ ರಚನೆ ಮಾಡಿದ ಕವಿಗಳಲ್ಲಿ ಪ್ರಮುಖರಾದವರು ಮೊದಲನೆಯ ನಾಗವರ್ಮ. ಸಾಹಿತ್ಯ ಚರಿತ್ರೆಯ ಯಾವ ಕಾಲಘಟ್ಟದಲ್ಲಿಯೂ ಪ್ರಣಯ ಪ್ರಸಂಗಳಿಗೆ ಯಾವುದೇ ಕೊರೆತೆಯಿಲ್ಲ. ಕರ್ನಾಟಕ ಕಾದಂಬರಿಯಲ್ಲಿ ಬರುವ ಕಾದಂಬರಿ, ಚಂದ್ರಪೀಡ, ಮಹಾಶ್ವೇತೆ, ವೈಶಂಪಾಯನ, ಕಪಿಂಜಲ, ಪುಂಡರೀಕ ಇಂತಹ ಪ್ರಮುಖ ಪಾತ್ರಗಳನ್ನೊಳಗೊಂಡಿರುವ ಕೃತಿ ಇದಾಗಿದೆ. ಇದರ ಕಥಾಸಂವಿಧಾನ ಅತ್ಯಂತ ಜಟಿಲವು ದಿಗ್ಧಾಂತವು ಆಗಿದ್ದು, ಕಥೆಯೊಳಗೆ ಕಥೆ ಸೇರಿಕೊಂಡು ಹಲವಾರು ಒಳಪದರುಗಳು ನಿರ್ಮಿತವಾಗಿರುವುದರ ಜೊತೆಗೆ ಶಾಪ, ಪ್ರತಿಶಾಪ, ಪುನರ್‌ಜನ್ಮಗಳ ಗೊಂದಲಗಳಿವೆ. ಮೂರು ಜನ್ಮಗಳ ಕಥೆಯನ್ನು ಕವಿ ಒಂದು ಸಂಕೀರ್ಣ ವಿನ್ಯಾಸದಲ್ಲಿ ನಿರೂಪಿಸಿದ್ದಾರೆ. ಇದರಲ್ಲಿ ಸಂಕೀರ್ಣವಾದ ತಂತ್ರಗಳನ್ನು ಬಳಸಿಕೊಳ್ಳುತ್ತಾ ಹೋಗುತ್ತಾನೆ. ಇದರಲ್ಲಿನ ಪಾತ್ರಗಳೆಲ್ಲವು ಕಥೆಗಳನ್ನು ಹೇಳುತ್ತಾ ಹೋಗುತ್ತವೆ. ಗಿಳಿಕಥೆ, ಜಾಬಾಲಿಋಷಿ, ಮತ್ತೊಂದು ಕಡೆ ಮಹಾಶ್ವೇತೆ, ಇನ್ನೊಂದು ಕಡೆ ಕಪಿಂಜಲ ಕಥೆಗಳನ್ನು ಹೇಳುತ್ತಿರುತ್ತಾರೆ. ಇದೊಂದು ಕಾವ್ಯ ತಂತ್ರವನ್ನು ರೂಪಿಸಿದ ಬಗೆಯಾಗಿದೆ. ಹಿಮ್ಮುಖ ಚಲನೆಯಲ್ಲಿ ಬಂದು ಅವುಗಳ ನಡುವಿನ ಸಂಬಂಧವನ್ನು ಜ್ಞಾಪಿಸಿಕೊಳ್ಳುವ ಬಗೆಯೇ ಈ ಕಾವ್ಯದ ವಿಷೇಶವಾಗಿದೆ. ಓದುಗರಿಗೆ ಹೊಸ ಆಲೋಚನೆ ಮತ್ತು ಆನಂದವನ್ನು ಈ ಕೃತಿ ಕೊಡುತ್ತದೆ ಎಂಬ ಭರವಸೆಯ ಹಿನ್ನಲೆಯಲ್ಲಿ ಅವಲೋಕಿಸಲಾಗಿದೆ.
ಶಾಂತಿನಾಥ ದೇಸಾಯಿ ಅವರ ಕಾದಂಬರಿಗಳ ವಸ್ತು ಮತ್ತು ತಂತ್ರ
48 to 55
ಶಾಂತಿನಾಥ ದೇಸಾಯಿಯವರು ಪ್ರಮುಖವಾಗಿ ಮನುಷ್ಯನ ಅಸ್ತಿತ್ವದ ಹುಡುಕಾಟ, ಮುಕ್ತಿಯ ಹಂಬಲ, ಆಧುನಿಕತೆಯ ಯಾಂತ್ರಿಕತೆಯಲ್ಲಿ ವಿಕ್ಷಿಪ್ತಗೊಳ್ಳುವ ಯುವಕರ ಮನಸ್ಸು, ಸಂಬಂಧಗಳ ಅಗತ್ಯತೆ, ಗಂಡು ಹೆಣ್ಣಿನ ಸಂಬಂಧದ ಸ್ವರೂಪ, ವೈಯಕ್ತಿಕ ಹುಡುಕಾಟದೊಂದಿಗೆ ಮನುಷ್ಯ ಸಾಮಾಜಿಕತೆಯೊಂದಿಗೆ ಬೆಸೆದುಕೊಳ್ಳುವ ರೀತಿ, ವ್ಯಕ್ತಿಯ ಅಂತರಾಳದ ಮೂಲಕ ವ್ಯಕ್ತಿತ್ವ ಹಾಗೂ ತತ್ವಗಳು ಮಂಥನಗೊಳ್ಳುವ ಬಗೆ-ಈ ವಸ್ತುಗಳನ್ನು ತಮ್ಮ ಕಾದಂಬರಿಗಳ ರಚನೆಯಲ್ಲಿ ಬಳಸಿಕೊಂಡಿದ್ದಾರೆ. ಇವರ ಕಾದಂಬರಿಯ ವಸ್ತುಗಳು ಸೂಕ್ಷ್ಮ ಸಂವೇದನೆಯ ಓದುಗರನ್ನು ಆಳವಾಗಿ ಪ್ರಭಾವಿಸಬಲ್ಲವು. ಆಧುನಿಕತೆಯ ಪರಿಧಿಯಲ್ಲಿ ಬದುಕುತ್ತಿರುವ ನಮಗೆ ಇಂದು ದೇಸಾಯಿಯವರ ಕಾದಂಬರಿಯ ವಸ್ತುಗಳು ನಾವು ಅಥವಾ ನಮ್ಮ ಸುತ್ತಲಿನ ವ್ಯಕ್ತಿಗಳು ಅನುಭವಿಸುತ್ತಿರುವ ಯಾತನೆ, ಬೇಸರ, ಗೊಂದಲ, ಭ್ರಮನಿರಸನ, ಅಸಹಾಯಕತೆ ಇವುಗಳಿಗೆ ಹಿಡಿದ 'ಕಲಾತ್ಮಕವಾದ ಕನ್ನಡಿ' ಎಂದು ಅನ್ನಿಸಿದರೆ ಅದಕ್ಕೆ ಆಶ್ಚರ್ಯ ಪಡಬೇಕಾಗಿಲ್ಲ. ದೇಸಾಯಿ ಅವರ ಕಾದಂಬರಿಗಳಲ್ಲಿ ಪ್ರಮುಖವಾಗಿ ಮೂರು ತಂತ್ರಗಳನ್ನು ಗುರುತಿಸಬಹುದು. ಪ್ರಜ್ಞಾಪ್ರವಾಹತಂತ್ರ, ದಿನಚರಿ ಬರೆಯುವ ತಂತ್ರ, ಪತ್ರಗಳ ಮೂಲಕ ಸಂಭಾಷಣೆ.
ಪಂಪ-ರನ್ನರ ಕಾವ್ಯಗಳಲ್ಲಿ ರಸ ಪ್ರಜ್ಞೆ
56 to 64
ವಿಶ್ವ ಸಾಹಿತ್ಯಕ್ಕೆ ಭಾರತೀಯ ಸಾಹಿತ್ಯದ ಪರಮ ಕೊಡುಗೆ ಎಂದರೆ ರಸ ಸಿದ್ಧಾಂತ. ಕಾವ್ಯಕ್ಕೆ ರಸವೇ ಚಕ್ರವರ್ತಿ. ಈ ರಸ ಸಿದ್ಧಾಂತವನ್ನು ಪ್ರತಿಪಾದಿಸಿದ ಪ್ರಥಮ ಅಲಂಕಾರಿಕ ಭರತ. ಹೀಗಾಗಿ ಭಾರತೀಯ ಕಾವ್ಯಮೀಮಾಂಸೆಯಲ್ಲಿ ರಸ ಸಿದ್ಧಾಂತವು ಅಡಿಗಲ್ಲಾಗಿ ಕಾಣಿಸುತ್ತದೆ. ರಸ ಸಿದ್ಧಾಂತದ ಬಗೆಗಿನ ಚರ್ಚೆಗಳು ಕನ್ನಡ ಸಾಹಿತ್ಯ ಲೋಕದಲ್ಲಿ ನಿರಂತರವಾಗಿ ನಡೆಯುತ್ತಲೇ ಇದೆ. ರಸ ಶಬ್ದದ ಪ್ರಯೋಗ ಅತ್ಯಂತ ಪ್ರಾಚೀನ ವೇದಗಳ ಕಾಲದಲ್ಲಿಯೇ ಬಳಕೆಯಾಗಿದೆ. ರಸನಿಷ್ಪತಿಯ ಬಗೆಗೆ ಹಲವು ವ್ಯಾಖ್ಯಾನಗಳಿವೆ. ಸಾಮಾನ್ಯವಾಗಿ ರಸ ಎಂದರೆ ನಾಟಕ, ಕಾವ್ಯಕಲೆಗಳನ್ನು ನೋಡುವುದರಿಂದ ನಮಗಾಗಬಹುದಾದ ಮಾನಸಿಕ ತೃಪ್ತಿ ಅಥವಾ ಆನಂದವನ್ನು ರಸ ಎಂದು ಕರೆಯಬಹುದು. ಆದಿಕವಿ ಪಂಪನು ತನ್ನ ಕಾವ್ಯಗಳಲ್ಲಿ ರಸ ಸಿದ್ದಾಂತದ ಮಟ್ಟುಗಳನ್ನು ಅತ್ಯಂತ ವಿವೇಚನೆಯಿಂದ ಪ್ರತಿಪಾದಿಸಿರುವುದನ್ನು ನಾವಿಲ್ಲಿ ಕಾಣಬಹುದು. ಕನ್ನಡ ಕಾವ್ಯಮೀಮಾಂಸೆಯು ಜನಪರ ಮೂಲದಿಂದ ಪ್ರಾರಂಭವಾದರೂ ಅದಕ್ಕೆ ಸೈದಾಂತಿಕ ನಿಲುವು ಮತ್ತು ರೂಪರೇಷೆಗಳನ್ನು ಕೊಟ್ಟವನು ಪಂಪ. ಪಂಪ ಭಾರತದಲ್ಲಿ ದುರ್ಯೋಧನ ಭೀಷ್ಮರಿಗೆ ಪಟ್ಟ ಕಟ್ಟಿದ ಸಂದರ್ಭವನ್ನು ನೆನಪು ಮಾಡಿಕೊಂಡರೆ, ಕರ್ಣನ ಯುದ್ಧ ಉತ್ಸಾಹದ ಮಾತುಗಳು ವೀರರಸವನ್ನ ಪ್ರತಿಪಾದಿಸಿದರೆ, ಭೀಷ್ಮರ ಬುದ್ಧಿ ಮಾತುಗಳು ಕರುಣರಸದಂತೆ ಕಾಣಿಸುತ್ತದೆ. ಕೌರವನಿಂದ ದೌಪದಿಗಾದ ಅವಮಾನವನ್ನು ಸಹಿಸದೆ ಭೀಮನು ಮಾಡಿ ಪ್ರತಿಜ್ಞೆಯೂ ಕೂಡ ವೀರರಸವನ್ನು ಸೂಚಿಸುತ್ತದೆ. ಹೀಗೆ ವೀರ, ಕರುಣ, ಹಾಸ್ಯ, ರೌದ್ರ, ಭಯಾನಕ ಮತ್ತು ಅದ್ಭುತ ಇತ್ಯಾದಿ ರಸಗಳು ಪ್ರತಿಪಾದನೆಯಾಗಿರುವುದನ್ನು ಗುರುತಿಸಬಹುದು. ಅಲ್ಲದೆ ಶಕ್ತಿ ಕವಿ ರನ್ನನು ಕೂಡ ತನ್ನ ಗದಾಯುದ್ಧದಲ್ಲಿ ರಸ ಸಿದ್ದಾಂತದ ಮಟ್ಟುಗಳನ್ನು ಪ್ರತಿಪಾದಿಸಿದ್ದಾನೆ. ರನ್ನನು ಪಂಪನ ಪಥವನ್ನು ಅನುಸರಿಸಿದವನಾಗಿರುವುದರಿಂದ ಪಂಪನ ಹಾಗೆ ತನ್ನ ಕಾವ್ಯದಲ್ಲಿ ರಸಗಳ ಕುರಿತು ನಿಲುವುಗಳನ್ನು ಪ್ರತಿಪಾದಿಸಿದಾನೆ.
ಟಿ.ವಿ. ಮಾಧ್ಯಮದಲ್ಲಿ ಕನ್ನಡ ಭಾಷೆಯ ಅಸ್ತಿತ್ವ
65 to 73
ಕನ್ನಡ ಭಾಷೆಗೆ ಅತ್ಯಂತ ಪ್ರಾಚೀನ ಇತಿಹಾಸವಿದೆ. ಅನೇಕ ಪ್ರಭಾವಗಳಿಗೆ ಒಳಗಾದರೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿರುವ ಭಾಷೆ ಕನ್ನಡ. ಭಾಷಾ ಬೆಳವಣಿಗೆಯಲ್ಲಿ ಸಾಹಿತ್ಯವು ಹೇಗೆ ಮಹತ್ವವೋ ಹಾಗೆಯೇ ಭಾಷಾ ಬೆಳವಣಿಗೆಯಲ್ಲಿ ಮಾಧ್ಯಮಗಳೂ ತಮ್ಮ ಮಹತ್ವ ಪೂರ್ಣವಾದ ಕೊಡುಗೆಯನ್ನು ನೀಡಿವೆ. ಪತ್ರಿಕೆಗಳು ಕನ್ನಡ ಭಾಷೆ ಉಳಿವು ಮತ್ತು ಬೆಳವಣಿಗೆಗಾಗಿ ಅಪಾರವಾಗಿ ಶ್ರಮಿಸಿವೆ. ಮಾಧ್ಯಮದ ಭಾಷೆಗೆ ಅದರದೇ ಆದ ಪ್ರಾಮುಖ್ಯತೆ ಇದ್ದು ಅದು ಯಾವಾಗಲೂ ತನ್ನ ಗಟ್ಟಿತನವನ್ನು ತೋರಿಸಿದೆ. ಆದರೆ ಇಂದಿನ ಪರಿಸ್ಥಿತಿ ಹಾಗಿಲ್ಲ. ಟಿ.ವಿ. ಮಾಧ್ಯಮಗಳು ಅದರಲ್ಲೂ ಪ್ರಮುಖವಾಗಿ ಸುದ್ದಿವಾಹಿನಿಗಳ ಭಾಷಾ ಬಳಕೆ ದಿನೇ ದಿನೇ ಕಳಪೆಯಾಗುತ್ತಿದೆ. ಭಾಷಾ ಜ್ಞಾನದ ಕೊರತೆ ಇಂದು ಎದ್ದು ಕಾಣುತ್ತಿದೆ. ಭಾಷೆಯ ಬಗ್ಗೆ ಅರಿವೇ ಇಲ್ಲದವರು ಇಂದು ಮಾಧ್ಯಮಗಳಲ್ಲಿ ನಿರೂಪಕರಾಗಿ, ವಾರ್ತಾವಾಚಕರಾಗಿ, ಸುದ್ದಿ ಬರಹಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಭಾಷಾ ಬಳಕೆ, ಅವರ ಉಚ್ಛಾರಣಾ ದೋಷ ಎಲ್ಲವೂ ಸಹಜವಾಗಿಯೇ, ಜನಸಾಮಾನ್ಯನಿಗೂ ಕಾಣುವಂತೆಯೇ ಇದೆ. ವಾಹಿನಿಗಳೂ ಸಹ ಭಾಷಾ ಬಳಕೆಯ ಬಗ್ಗೆ ಹೆಚ್ಚೇನು ಗಮನಹರಿಸದೇ ಇರುವುದನ್ನು ಕಾಣಬಹುದು. ಮಾಧ್ಯಮ ಅತ್ಯಂತ ವೇಗವಾಗಿ ಜನರನ್ನು ತಲುಪುತ್ತದೆ. ಮಾಧ್ಯಮಗಳು ಇಂದು ಬಳಸುತ್ತಿರು ಭಾಷೆಯಲ್ಲಿ ಸುಧಾರಣೆಯಾಗದಿದ್ದರೆ ಅವರು ಇಂದು ತೋರುತ್ತಿರುವ ಭಾಷೆಯೇ ನಿಜವಾದ ಕನ್ನಡ ಎಂದು ಯುವಜನರು ನಂಬುವ ಸಾಧ್ಯತೆಗಳು ಹೆಚ್ಚಾಗಿವೆ. ಹಾಗಾಗಿ ಮಾಧ್ಯಮಗಳು ಭಾಷಾ ಬಳಕೆಯ ಬಗ್ಗೆ ಹೆಚ್ಚಿನ ಗಮನಕೊಡಬೇಕಾಗಿದೆ. ಹೆಚ್ಚು ಹೆಚ್ಚು ಆಂಗ್ಲಭಾಷಾ ಪದಗಳನ್ನು ಬಳಸುವುದು, ಭಾಷಾ ಬಳಕೆಯಲ್ಲಿನ ದೋಷಗಳು ಎಲ್ಲವನ್ನೂ ಸರಿಪಡಿಸಿಕೊಳ್ಳುವ ಅಗತ್ಯವಿದೆ.
ಕುವೆಂಪು ಕಾವ್ಯದಲ್ಲಿ ಪರಿಸರ ಮೌಲ್ಯ
74 to 80
ಕುವೆಂಪು ಅವರ ಕವಿತೆಗಳಲ್ಲಿ ಪ್ರಕೃತಿ ಕವನಗಳು ಮನಸ್ಸು ಸೆರೆ ಹಿಡಿದು ವಿಚಾರದ ಕಡೆಗೆ ತೆರಳುತ್ತವೆ. ಪ್ರಕೃತಿ ಕೇವಲ ಜಡವಲ್ಲ, ಸೌಂದರ್ಯ ಸಾಕ್ಷಾತ್ಕಾರದ ಮೂಲಕ ಪರಮಾತ್ಮನ ಸಾಕ್ಷಾತ್ಕಾರಕ್ಕೆ ಕರೆದೊಯ್ಯುವ ಸಾಧನ. ಪ್ರಕೃತಿಯಾರಾಧನೆಯೆ ಪರಮನಾರಾಧನೆ, ಪ್ರಕೃತಿಯೊಳ್ಮೆಯೆ ಮುಕ್ತಿಯಾರಾಧನೆ. ನಗರ ಜೀವನದ ಬೇಸರ, ಯಾಂತ್ರಿಕತೆಯ ಜೀವನ, ಹಸುರಿನಿಂದ ವಂಚಿತವಾಗಿರುವ ಕವಿಯ ಮನೋಧರ್ಮವನ್ನು ಕಾಣಬಹುದು. ಪ್ರಕೃತಿಯಲ್ಲಿಯೇ ಪೂಜೆಯನ್ನು ಕಾಣುತ್ತಾರೆ. ಹೂಗಳನ್ನು ಕೀಳುವ ಪೂಜಾರಿಯ ಮೇಲೆ ಆಕ್ರೋಶ ಕಡುವಾಗಿಯೇ ಮೂಡಿಬಂದಿದೆ. ಹೂಗಳನ್ನು ಕಿತ್ತು ಕಗ್ಗಲ್ಲಿನ ಕಗ್ಗತ್ತಲೆಗೆ ಹೊಯ್ದು ಗುಡಿಯ ಶಿವನಿಗೆ ಇಟ್ಟರೆ ಪರಮಾತ್ಮನಿಗೆ ತೃಪ್ತಿ ಬರುವುದಿಲ್ಲ ಎಂಬುದು ಅವರ ಭಾವನೆ. ಪೂಜಾರಿಯನ್ನು ಹಕ್ಕಿಗಳ ಕೊರಳು ಮುರಿಯುವ ಬೇಟೆಗಾರನಿಗೆ ಹೋಲಿಸಿದ್ದಾರೆ. ಸೌಂದರ್ಯದಿಂದ ಕೂಡಿರುವ ಹೂಗಳನ್ನು ಕೀಳುವುದು ಕವಿಗೆ ಇಷ್ಟವಿಲ್ಲ. ಸಹಜವಾದ ಸೌಂದರ್ಯವೇ ಶಿವ. ಕುವೆಂಪುರವರದು ಸೌಂದರ್ಯ ಧರ್ಮ, ದೇವಾಲಯ, ದೇವರು, ಪೂಜೆ, ಧರ್ಮ ಇತ್ಯಾದಿಗಳ ಬಗ್ಗೆ ಇರುವ ಸಾಂಪ್ರದಾಯಿಕ ಕಲ್ಪನೆಗಳನ್ನು ನಿರಾಕರಿಸಿ ಅವುಗಳ ಸ್ಥಾನದಲ್ಲಿ ಪ್ರಕೃತಿ ಸೌಂದರ್ಯವನ್ನು ಸ್ಥಾಪಿಸಿದರು.
ಯಶೋಧರ ಚರಿತೆಯ ವಿಮರ್ಶೆಯ ವಿಮರ್ಶೆ
81 to 92
ಕನ್ನಡದ ಸಾಹಿತ್ಯ ಚರಿತ್ರೆಯಲ್ಲಿ ಜನ್ನನ ಯಶೋಧರ ಚರಿತೆ ಕನ್ನಡದ ಉತ್ತಮ ಕಾವ್ಯಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಆದರೂ ಇದೊಂದು ಧರ್ಮದ ಕುರಿತು ಚರ್ಚಿಸುವ ಕಾವ್ಯವೆಂದೂ ಭವಾವಳಿಯ ನೀರಸ ನಿರೂಪಣೆಯಿಂದಾಗಿ ಏರಬೇಕಾದ ಎತ್ತರಕ್ಕೆ ಏರಿಲ್ಲವೆಂದೂ ಕನ್ನಡದ ವಿಮರ್ಶಕರು ಒಮ್ಮತದಿಂದ ಅಭಿಪ್ರಾಯಕ್ಕೆ ಬಂದಿದ್ದಾರೆ. ಆದ್ದರಿಂದ ಈ ಯಶೋಧರ ಚರಿತೆ ಕಾವ್ಯದ ಯಶಸ್ವಿನ ಕಡೆ ಸಾಗಲು ಕಾರಣವೆಂದರೆ ಯಶೋಧರ ಅಮೃತಮತಿಯರ ಪ್ರಣಯ ಕಥೆಯಲ್ಲಿದೆ ಎಂಬ ಭಾವನೆ ಸಾರ್ವತ್ರಿಕವಾಗಿರುವಂತಿದೆ. ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ಅನೇಕ ಕಾವ್ಯಗಳಂತೆ 'ಯಶೋಧರ ಚರಿತೆ' ಕಾವ್ಯ ಕುರಿತು ಕನ್ನಡದಲ್ಲಿ ವಿಪುಲವಾದ ಚರ್ಚೆಗಳು ಅಭಿಪ್ರಾಯಗಳು ನಡೆದಿವೆ. ಹೀಗಾಗಿ 20ನೇ ಶತಮಾನದ ಕನ್ನಡದ ಪ್ರಮುಖ ವಿಮರ್ಶಕರೆಲ್ಲೂರು ಒಂದಿಲ್ಲೊಂದು ಬಗೆಯಲ್ಲಿ ಮುಖಾಮುಖಿಯಾಗಿಸಿದ್ದಾರೆ. ಈ ಕೃತಿಯನ್ನು ಅರ್ಥಮಾಡಿಕೊಳ್ಳಲು ಭಿನ್ನ ಭಿನ್ನ ತಾತ್ವಿಕ ನೆಲೆಯಲ್ಲಿ ಅನೇಕ ವಿಮರ್ಶಕರು ನಡೆಸಿದ ಯಶೋಧರ ಚರಿತೆಯ ಕಾವ್ಯ ಪ್ರಣಯ ಪ್ರಸಂಗಗಳ ಬೌದ್ಧಿಕ ವ್ಯಾಖ್ಯಾನಗಳು ಅಭಿಪ್ರಾಯಗಳು ಇಲ್ಲಿ ಚರ್ಚೆ ಮಾಡಲಾಗಿದೆ. ಮನುಷ್ಯನ ಜೀವನದಲ್ಲಿ ನಡೆಯುವಂತಹ ಯಾವುದೇ ಘಟನೆ ಅದರಲ್ಲೂ ವಿಶೇಷವಾಗಿ ಕಾಮ ಪ್ರೇಮಕ್ಕೆ ಸಂಬಂಧಿಸದಂತಹ ಘಟನೆ ಯಾವುದೇ ಸಾಹಿತ್ಯ ಕೃತಿಯಲ್ಲಿ ಹೆಚ್ಚು ಮೂಡಿಬಂದಾಗ ಅದು ಹೆಚ್ಚು ಓದುಗರ ಮತ್ತು ವಿಮರ್ಶೆಕರ ಮನಸ್ಸನ್ನು ಸಹಜವಾಗಿ ಸೆಳೆಯುತ್ತದೆ. ಜನ್ನನ ಯಶೋಧರ ಚರಿತೆ ಕಾವ್ಯ 'ಅಷ್ಟಾವಂಕ ಅಮೃತಮತಿಯರ ಅಧಾರ್ಮಿಕ ಸಂಬಂಧ, ಅಂದರೆ ಪರಸ್ತ್ರೀ ಪರಪುರುಷ ಪರಸ್ಪರ ಒಲಿಯುವಂತಹ ಸಂಬಂಧವಾಗಲಿ ವರ್ತಮಾನ ಕಾಲದ ಜೀವನದಲ್ಲಿಯೂ ವಿರಳವಾಗಿಯೂ ಕಂಡುಬರುವಂತದ್ದು. ಇದೊಂದು ಸಾಮಾಜಿಕ ಸಮಸ್ಯೆಯಾಗಿ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಈ ಯಶೋಧರ ಚರಿತೆ ಕಾವ್ಯವನ್ನು ಜೀವನದ ಮೂಲಭೂತ ಸಮಸ್ಯೆ ಎಂದು ವಿಮರ್ಶಕರು ಪರಿಗಣಿಸಿದ್ದಾರೆ ಎಂದು ಹೇಳಬಹುದು.
ಆಧುನಿಕ ಕನ್ನಡ ಸಾಹಿತ್ಯ: ಸಂಶೋಧನೆಯ ಸವಾಲುಗಳು
93 to 100
ಮನುಷ್ಯ ಸಂಘ ಜೀವಿ. ಮನುಷ್ಯ ಸಮಾಜದ ನಿಕಟ ಸಂಪರ್ಕವಿಲ್ಲದೆ ಬಾಳಿ ಬದುಕಲಾರ. ಮನುಷ್ಯ ತನ್ನ ಸುಖೀ ಜೀವನಕ್ಕಾಗಿ ಹಲವಾರು ಸಂಶೋಧನೆಗಳನ್ನು ಮಾಡಿದ್ದಾನೆ. ಮನುಷ್ಯ ತನ್ನ ಮಿತಿಮೀರಿದ ಸಂಶೋಧನೆಗಳಿಂದ ಅವನತಿಯ ಹಾದಿಯನ್ನು ತಲುಪಿದ್ದಾನೆ. ಮಿತಿ ಮೀರಿದ ಸಂಶೋಧನೆಗಳಿಂದ ಸಾಕಷ್ಟು ರೋಗ, ರುಜಿನಗಳು ಹುಟ್ಟಿಕೊಂಡಿವೆ. ಪ್ರಪಂಚದ ಸಾಕಷ್ಟು ಕೃಷಿ ಭೂಮಿ ಮರುಭೂಮಿಯಾಗಿ ಪರಿವರ್ತನೆಯಾಗಿದೆ. ಪ್ರಪಂಚದ ಹಲವಾರು ನದಿಗಳು ತಮ್ಮ ಹರಿಯುವಿಕೆಯನ್ನು ನಿಲ್ಲಿಸಿವೆ. ಭಾರತದಂತಹ ಅಭಿವೃದ್ಧಿಶೀಲ ದೇಶದಲ್ಲಿ ನಿಜವಾದ ಸಂಶೋಧನೆಗಳಿಗೆ ಪ್ರೋತ್ಸಾಹವಿಲ್ಲ. ಪಿಹೆಚ್.ಡಿ. ಸಂಶೋಧಕರಿಗೆ ಮೀಸಲಾತಿ, ಸ್ವಜನಪಕ್ಷಪಾತ, ಭ್ರಷ್ಟಾಚಾರ ಇತ್ಯಾದಿ ಕಾರಣಗಳಿಂದ ಮಾರ್ಗದರ್ಶಕರು ಲಭ್ಯವಾಗುವುದಿಲ್ಲ. ಪ್ರತಿಭಾವಂತ ಸಂಶೋಧಕರಿಗೆ ಅವಕಾಶ ಸಿಗಬೇಕು. ಅಂತಹ ಸಂಶೋಧಕರು ಕೈಗೊಳ್ಳುವ ಸಂಶೋಧನೆಗಳಿಂದ ರಾಷ್ಟ್ರ ಪ್ರಗತಿಯ ಪಥದತ್ತ ಸಾಗಲಿ ಎಂಬುದು ಪ್ರಸ್ತುತ ಲೇಖನದ ಆಶಯ.
ತುಂಗಭದ್ರಾ ಜಲಾಶಯ ನಿರ್ಮಾಣದ ನಂತರ ಜಲಾನಯನ ಪ್ರದೇಶದಲ್ಲಾದ ಸ್ಥಿತ್ಯಾಂತರಗಳ ವಿಶ್ಲೇಷಣೆ
101 to 114
ತುಂಗಭದ್ರಾ ಅಣೆಕಟ್ಟು ನಿರ್ಮಾಣದ ನಂತರ ಜಲಾನಯನ ಪ್ರದೇಶದಲ್ಲಾದ ಕೃಷಿ, ಮೀನುಗಾರಿಕೆ, ನಿರಾಶ್ರಿತರ ಬದುಕಿನಲ್ಲದ ಸ್ಥಿತ್ಯಾಂತರಗಳನ್ನು ವಿಶ್ಲೇಷಿಸುವುದು. ತುಂಗಭದ್ರಾ ಅಣೆಕಟ್ಟು ನಿರ್ಮಾಣ ಕಾರ್ಯಕ್ಕೆ ಬಂದ ಕಾರ್ಮಿಕರ ನೆಲಗಳು, ಕುಡಿಯುವ ನೀರಿನ ಯೋಜನೆಗಳು, ಜಲಾಶಯದಲ್ಲಿ ಹೂಳಿನ ಪ್ರಮಾಣ ಹೆಚ್ಚಳಕ್ಕೆ ಕಾರಣಗಳನ್ನು, ತುಂಗಭದ್ರಾ ಜಲಾಶಯದ ಹೂಳು ತೆಗೆಯಲು ಅಸಾದ್ಯ ಅದಕ್ಕೆ ಪೂರಕ ಸಮನಾಂತರ ಜಲಾಶಯದ ಕುರಿತು ಇರುವ ಚರ್ಚೆ ಕುರಿತು ವಿಶ್ಲೇಷಣೆ ಮಾಡುವ ಪ್ರಯತ್ನ ಈ ಲೇಖನದಲ್ಲಿ ಮಾಡಲಾಗಿದೆ.
ಶರಣ ಸಂಕುಲ: ಸಾಮಾಜಿಕ ನ್ಯಾಯದ ಪರಿಕಲ್ಪನೆ
115 to 120
ಸಾಮಾಜಿಕ ನ್ಯಾಯಕ್ಕಾಗಿ ನಾವು ಮಾನವ ಹಕ್ಕುಗಳ ಕಡೆಗೆ ಗಮನ ಹರಿಸಿದಾಗ ಮತ್ತೆ ಮತ್ತೆ ನಮಗೆ ಶರಣರು ಬಹಳ ವಿಶಿಷ್ಟವಾಗಿ ಕಾಣುತ್ತಾರೆ. ಶರಣ ಸಂಕುಲ ಅನ್ನೋದು ಬಸವಣ್ಣನವರ ನವಸಮಾಜ. ಅಸ್ಪೃಶ್ಯರು, ಮಹಿಳೆಯರು, ಬಡವರು ಮತ್ತು ಎಲ್ಲ ಕಾಯಕಜೀವಿಗಳು ಸರ್ವಸಮಾನತೆಯನ್ನು ಆ ಶರಣ ಸಂಕುಲದಲ್ಲಿ ಅನುಭವಿಸಿದರು. ಎಲ್ಲ ಜಾತಿಗಳ ಎಲ್ಲ ಜನರನ್ನು ತೆಗೆದುಕೊಂಡು ಹೊಸ ಮಾನವನನ್ನು ಶರಣರು ಸೃಷ್ಟಿಸಿದರು. ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುತ್ತ, ಸಮಾಜದ ಕಟ್ಟಕಡೆಯ ಮನುಷ್ಯರನ್ನು ಮೊಟ್ಟ ಮೊದಲು ಗುರುತಿಸುವುದು ಶರಣರ ಸಾಮಾಜಿಕ ನ್ಯಾಯದ ಪರಿಕಲ್ಪನೆಯಾಗಿದೆ. ಉಳ್ಳವರ ಮತ್ತು ಬಡವರ ಬಗ್ಗೆ ಅರಿವು ಮೂಡಿದಾಗ ಸಾಮಾಜಿಕ ವೈರುಧ್ಯಗಳು ಸ್ಪಷ್ಟವಾಗಿ ಗೋಚರಿಸುವವು. ಒಂದು ಸಮಾಜಕ್ಕೆ ನ್ಯಾಯ ಒದಗಿಸಬೇಕಾದರೆ ಈ ರೀತಿಯಾಗಿ ಸಮಾಜದಲ್ಲಿನ ವೈರುಧ್ಯಗಳನ್ನು ಗುರುತಿಸಬೇಕಾಗುತ್ತದೆ. ಸಕಲ ಜೀವಾತ್ಮರಿಗೆ ಒಳ್ಳೆಯದನ್ನು ಬಯಸುತ್ತಲೇ ನಮ್ಮ ಸಮಾಜದಲ್ಲಿ ಆಳವಾಗಿ ಬೇರೂರಿರುವ ವೈರುಧ್ಯಗಳನ್ನು ಗುರುತಿಸುವ ಕ್ರಿಯೆ ಬಹಳ ಗುರುತರವಾದುದು. ಇಂತಹ ಅದ್ವಿತೀಯವಾದ ಚಿಂತನಾ ಕಾಣಿಕೆಯನ್ನು ಶರಣರು 12ನೇ ಶತಮಾನದಲ್ಲಿಯೇ ನೀಡಿದ್ದು ಐತಿಹಾಸಿಕವಾಗಿದೆ. ಎಲ್ಲ ರೀತಿಯ ಅಸಮಾನತೆಯನ್ನು ಮೆಟ್ಟಿ ನಿಂತು ಮಾನವ ಹಕ್ಕುಗಳ ಧ್ವಜವನ್ನು ಹಾರಿಸಿದ ಸಮಾಜವನ್ನು ಮೊದಲ ಬಾರಿಗೆ ಈ ಭೂಮಿಗೆ ತಂದರು.
ಕನಕದಾಸರ ಕೀರ್ತನೆಗಳಲ್ಲಿ ಸಾಮಾಜಿಕ ಚಿಂತನೆ
121 to 131
ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ಪ್ರಧಾನವಾದ ಎರಡು ಪ್ರಮುಖ ಭಕ್ತಿಪಂಥಗಳೆಂದರೆ, ಶೈವ ಭಕ್ತಿಪಂಥ ಹಾಗೂ ಶ್ರೀವೈಷ್ಣವ ಭಕ್ತಿಪಂಥಗಳು. ಹನ್ನೆರಡನೇ ಶತಮಾನದ ವಚನಕಾರರು ಶಿವೋಪಾಸಕರಾಗಿದ್ದು, ಸಮಾಜದ ಅಂಕುಡೊಂಕುಗಳನ್ನು ಧಾರ್ಮಿಕ ತಳಹದಿಯ ಮೇಲೆ ತಿದ್ದಲು ಪ್ರಯತ್ನಿಸಿದರೆ, ಕೀರ್ತನಕಾರರು ಶ್ರೀವೈಷ್ಣವ ಭಕ್ತಿಪಂಥವನ್ನು ಮೂಲವಾಗಿರಿಸಿಕೊಂಡು ಸಾಮಾಜಿಕ ಚಿಂತನೆ ನಡೆಸಲು ಪ್ರಯತ್ನಿಸಿದರು. ಕನಕದಾಸರು ಕೀರ್ತನಕಾರರಷ್ಟೇ ಅಲ್ಲ ಉಗಾಭೋಗ ಸುಳಾದಿಗಳನ್ನೂ, ಮೋಹನ ತರಂಗಿಣಿ, ಹರಿಭಕ್ತಸಾರ, ರಾಮಧಾನ್ಯ ಚರಿತ್ರೆ, ನಳಚರಿತ್ರೆ, ನೃಸಿಂಹಸ್ತವ ಎಂಬ ಕೃತಿಗಳನ್ನು, ಬೆಡಗಿನ ವಚನಗಳಂತಹ ಮಂಡಿಗೆಗಳನ್ನು ರಚಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಷ್ಟೊಂದು ವಿಸ್ತಾರವಾದ ಅವರ ಸಾಹಿತ್ಯ ಕೃಷಿಯಲ್ಲಿ ಹೆಚ್ಚು ಕಡಿಮೆ ಧರ್ಮದ ತಳಹದಿಯ ಮೇಲೆ ಸಾಮಾಜಿಕ ಚಿಂತನೆ ಕೇಂದ್ರೀಕೃತಗೊಂಡಿರುವುದು ಗಮನಾರ್ಹ ಸಂಗತಿ. ಪ್ರಸ್ತುತ ಲೇಖನದಲ್ಲಿ ಕನಕದಾಸರ ಕೆಲವು ಪ್ರಮುಖ ಕೀರ್ತನೆಗಳನ್ನು ಕೇಂದ್ರೀಕರಿಸಿ, ಸಾಮಾಜಿಕ ಚಿಂತನೆಗೆ ಅವರು ನೀಡಿದ ಕೊಡುಗೆಯನ್ನು ಕುರಿತು ಅವಲೋಕಿಸುವ ಪ್ರಯತ್ನ ಮಾಡಲಾಗಿದೆ. "ಭಾಗವತ ಮನೋಧರ್ಮದ ಕನಕದಾಸರ ಸಾಮಾಜಿಕ ಚಿಂತನೆ, ಅಧ್ಯಾತ್ಮಿಕ ತಳಹದಿಯ ಮೇಲೆಯೇ ಅನಾವರಣಗೊಳ್ಳುವಂತಹದ್ದು, ದೈತ ಮತಭಾವದ ಹರಿನಾಮಸ್ಮರಣೆಯಿಂದ ಆರಂಭವಾದ ಅವರ ಸಾಧನೆ, ಭಕ್ತಿಯ ಆರ್ದತೆ, ಆತ್ಮಶೋಧನೆ, ಆತ್ಮ ಸಮರ್ಪಣೆ, ಸಾಮಾಜಿಕ ಅಗ್ನಿ ದಿವ್ಯಗಳ ಮೂಲಕ ಹಾಯ್ದು ಅದೈತ ಸಿದ್ದಿಯ ಪರಮಗುರಿಯನ್ನು ತಲುಪಿದೆ.”
ವೈದ್ಯಕೀಯ ಪದವಿಗಾಗಿ ಹೋರಾಡಿದ ಮೊದಲ ಮಹಿಳೆ ಕದಂಬಿನಿ ಗಂಗೂಲಿ
132 to 141
ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ಪುರುಷ ಪ್ರಧಾನ ಸಮಾಜವನ್ನು ಮೆಟ್ಟು ನಿಂತು ಪದವಿ ಪಡೆದ ಭಾರತದ ಮೊದಲ ಇಬ್ಬರು ಮಹಿಳಾ ಪದವೀಧರರಲ್ಲಿ ಒಬ್ಬರು ಕದಂಬಿನಿ ಗಂಗೂಲಿ. ದಕ್ಷಿಣ ಏಷ್ಯಾದ ಮೊದಲ ಮಹಿಳಾ ವೈದ್ಯೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕದಂಬಿನಿ ಗಂಗೂಲಿ ಇಂಗ್ಲಿಷ್ ಶಿಕ್ಷಣವನ್ನು ಪಡೆಿದರು. ಮೊದಲು ಢಾಕಾದ ಬ್ರಹ್ಮ ಈಡನ್ ಸ್ತ್ರೀ ಶಾಲೆಯಲ್ಲಿ ಮತ್ತು ನಂತರ ಕಲ್ಕತ್ತದ ಬ್ಯಾಲಿಗಂಜ್ ನ ಹಿಂದೂ ಮಹಿಳಾ ವಿಶ್ವವಿದ್ಯಾಲಯದಲ್ಲಿ, ಎರಡನೇ ಶಾಲೆಯನ್ನು 1870ರಲ್ಲಿ ಬಾಂಗಾ ಮಹಿಳಾ ವಿದ್ಯಾಲಯ ಎಂದು ಮರು ನಾಮಕರಣ ಮಾಡಲಾಯಿತು. ಎರಡು ವರ್ಷಗಳ ನಂತರ ಬೆಥನ್ ಶಾಲೆಯೊಂದಿಗೆ ವಿಲೀನಗೊಂಡಿತು. ತನ್ನ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ (CU) ಪ್ರವೇಶ ಪರೀಕ್ಷೆಗೆ ಹಾಜರಾಗಲು ಬಯಸಿದ್ದರು. ಆದರೆ ವಿಶ್ವವಿದ್ಯಾಲಯವು ಇನ್ನೂ ಮಹಿಳಾ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತಿರಲಿಲ್ಲ. ಕದಂಬಿನಿ ಅವರು ವೈದ್ಯೆಯಾಗಿ ತಮ್ಮ ಕೆಲಸವನ್ನು ಸಾಮಾಜಿಕ ಲೋಕೋಪಕಾರ ಮತ್ತು ರಾಜಕೀಯ ಚಟುವಟಿಕೆಗಳೊಂದಿಗೆ ಸಂಯೋಜಿಸಿದರು. ಸಂಪ್ರದಾಯವಾದಿ ಸಮಾಜದಲ್ಲಿ ಮಹಿಳೆಯರ ಹಕ್ಕುಗಳಿಗಾಗಿ ಸಕ್ರಿಯವಾಗಿ ಹೋರಾಟ ನಡೆಸಿದರು. ಮಹಿಳೆಯರ ಹಕ್ಕುಗಳಿಗಾಗಿ ಪ್ರಚಾರ ಮಾಡಿದರು. ಅವರು 1889 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಐದನೇ ಅಧಿವೇಶನದ ಆರು ಮಹಿಳಾ ಪ್ರತಿನಿಧಿಗಳಲ್ಲಿ ಒಬ್ಬರಾಗಿದ್ದರು. ಒಟ್ಟಾರೆ ಮಹಿಳೆಯರ ವಿಮೋಚನೆ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಅವರಿಗಿರುವ ನಿಬರ್ಂಧಗಳ ವಿರುದ್ಧ ಹೋರಾಟ ನಡೆಸಿದ ಮಹಾನ್ ಮಹಿಳಾ ಚಿಂತಕಿಯಾಗಿದ್ದಾರೆ.
The Literature on Pandemics Illuminates the Presence of Trauma and the Holocaust
142 to 150
The pain brought on by the virus makes German philosopher Theodor Adorno, who branded poetry as barbarous after the Holocaust, despondent. Disasters still occur, though, and literature is still debating how to handle them. We will not draw lessons from the past as the coronavirus epidemic has already killed over 500,000 lives. Cold facts that detail the number of lives lost, jobs destroyed, and economic collapse indicate how harsher reality is. The number of positive instances became a chilling term in 2020. The COVID-19 pandemic is compared to the 1918 Spanish flu, which killed millions globally, especially children and young adults. T.S. Eliot, a victim, experienced anxiety and unease during the outbreak. In The Waste Land, he used these personal concerns and fear of dying to portray the absurdity of the post-war era.
A Comparative Study of Employee Engagement in the Public and Private Sector Oil Companies in India
151 to 167
The oil boom in the country has reduced India's reliance on agriculture and redirected it to the oil and petroleum sector. The public sector is a key component of the Indian economy, but due to the country's growing population, the private sector must also expand. The current research study contrasts employee involvement in public and private Indian oil sector enterprises. It seeks to pinpoint the variations in how employee engagement is understood. Additionally, this study compares the cognitive, emotional, and behavioral levels of employee involvement in the aforementioned areas. A systematic questionnaire was used to gather primary data from 155 respondents, who provided information about themselves. Out of those, 85 respondents worked for public and 70 for private oil and gas enterprises. The data were gathered using the snowball sampling technique. Middle-level employees are the study's target response population. The findings showed that while there is no significant difference in employee involvement on a behavioral level between public and private enterprises in the oil and petroleum sector, there are some significant variations on a cognitive and emotional level.
Book Review
ಮಾನವೀಯತೆಯ ಮಾತು: ಕುರಿತೊಂದು ಮಂಥನ
168 to 174
“ಮಾನವೀಯತೆಯ ಮಾತು" ಶಿಕ್ಷಕ ಕವಿಯೊಬ್ಬರ ಕಲ್ಪನೆ, ಆಲೋಚನೆ, ಅನುಭವಗಳು ಮುಪ್ಪುರಿಗೊಂಡ ಕವನ ಸಂಕಲನವಾಗಿದೆ. ಕವಿ ಫಾಲಾಕ್ಷಪ್ಪ ಎಸ್. ಎನ್. ರವರ ಚೊಚ್ಚಲ ಸಂಕಲನವಾಗಿದ್ದರೂ ವಿಷಯ ವೈವಿಧ್ಯತೆಗಳನ್ನು ಮೈಗೂಡಿಸಿಕೊಂಡಿರುತ್ತದೆ. ಈ ಕವಿಗೆ ಸೃಷ್ಟಿಯ ಅದ್ಭುತಗಳಂತೆಯೇ ಮಾನವ ಸೃಷ್ಟಿಯ ಅಪಸವ್ಯಗಳೂ ಕಾಡಿವೆ. ಹಕ್ಕಿ, ಚುಕ್ಕಿ, ಪ್ರೀತಿ, ಮೋಡ, ಮಳೆ, ಗಿಡ, ಮರಗಳು ಕಾವ್ಯದಲ್ಲಿ ಜಾಗ ಪಡೆದಿವೆ. ಪ್ರಕೃತಿಯ ವ್ಯಾಪಾರಗಳನ್ನು ಹೇಳುತ್ತಲೇ ಅದರ ಸಂದೇಶಗಳನ್ನು ನಿಜ ಜೀವನಕ್ಕೆ ಸಂಬಂಧಕಲ್ಪಿಸುತ್ತಾ ಹೋಗಿದ್ದಾರೆ. ಮನುಷ್ಯ ಸಂಬಂಧಗಳ ಬಗ್ಗೆ ಅತೀವ ಆಸ್ಥೆ ಈ ಕವಿಗಿದೆ. ಅಮ್ಮ, ಅಪ್ಪ, ಮಡದಿ, ಮಗಳು, ಮಗ, ಸೋದರ ಹೀಗೆ ಯಾವ ಸಂಬಂಧವೂ ಇವರ ಲೇಖನಿಯಿಂದ ತಪ್ಪಿಸಿಕೊಂಡಿಲ್ಲ. ಇಲ್ಲೆಲ್ಲಾ ಕವಿಯ ಜೀವನಪ್ರೀತಿ ಎದ್ದು ಕಾಣುತ್ತದೆ. ಸಮಾಜದಲ್ಲಿನ ಮೂಢನಂಬಿಕೆಗಳು, ಜೀವ ವಿರೋಧಿ ಸಂಗತಿಗಳ ಬಗ್ಗೆಯೂ ಕವಿ ಧ್ವನಿ ಎತ್ತಿದ್ದಾರೆ. ವಸ್ತ್ರಗಳೆ ಅಸ್ತ್ರವಾಗಿರುವ ಕಾಲದ ವ್ಯಂಗವನ್ನೂ ಕವಿತೆಯಲ್ಲಿ ಹರಿಯಬಿಟ್ಟಿದ್ದಾರೆ. 'ಹೆಣ್ಣು' ಎಂಬ ಜೀವಶಕ್ತಿಯನ್ನು ಅಗ್ನಿಕುಂಡದಲ್ಲಿ ಬೀಳಿಸೇಳಿಸುವ ಜೀವ ವಿರೋಧಿ ಸಂಗತಿಗಳನ್ನು ವ್ಯಾಕುಲತೆಯಿಂದಲೆ ದಾಖಲಿಸಿದ್ದಾರೆ. ಆಷಾಢಭೂತಿತನ, ನಾಸ್ತಿಕರೆಂದು ಹೇಳುವವರ ನಾಟಕೀಯತೆಯೂ ಆಸ್ತಿಕರೆನ್ನುವವರ ಅತಿರೇಕವನ್ನೂ ವ್ಯಂಗ್ಯನೋಟದಲ್ಲಿ ಕಾಣಲಾಗಿದೆ. 'ಶ್ರಮಸಂಸ್ಕೃತಿ'ಯ ಬಗ್ಗೆ ಕವಿಗೆ ಆದರವಿದೆ. ಹಾಗಾಗಿಯೇ ಶ್ರಮವನ್ನು ಕಾವ್ಯದಲ್ಲಿ ಕಡೆಯುವಾಗ ಕವಿಯ ಕಟ್ಟುವಿಕೆ ಪ್ರತಿಮೆ, ಧ್ವನಿಗಳಿಂದ ಅನುರಣನಗೊಳ್ಳುತ್ತದೆ. ಈ ಕುರಿತು ಪ್ರಸ್ತುತ ಲೇಖನದಲ್ಲಿ ವಿವರವಾಗಿ ಚರ್ಚಿಸಲಾಗಿದೆ. ನಿತ್ಯ ಜೀವನದ ಹಸಿ ಹಸಿ ಉದಾಹರಣೆಗಳನ್ನೆ ಪ್ರತಿಮೆಯಾಗಿ, ಅಲಂಕಾರವಾಗಿ ಬಳಸಿರುವುದೂ ಕೂಡ ಈ ಕವಿಯ ಪ್ರತಿಭೆಯನ್ನು ಅನಾವರಣಗೊಳಿಸುತ್ತದೆ. ಇದು ಒಂದು ಪುಸ್ತಕವನ್ನು ಅವಲೋಕಿಸುವ ಲೇಖನವಾಗಿದ್ದು ವಿಮರ್ಶೆಯ ಆಳಕ್ಕಿಳಿದಿರುವುದಿಲ್ಲ. ಆದರೆ ಕಾವ್ಯದಲ್ಲಿ ವಾಚ್ಯತೆಯ ಹೇರಳತೆಯನ್ನು ದಾಖಲಿಸಲು ಮರೆಯುವುದಿಲ್ಲ.
ವಿವೇಕ ಶಾನುಭಾಗರ 'ಹುಲಿ ಸವಾರಿ' ಮತ್ತು ಜಾಗತೀಕರಣ
175 to 180
ಭಾರತದಲ್ಲಿ ಜಾಗತೀಕರಣವು ಜನರ ಜೀವನಮಟ್ಟದಲ್ಲಿ ಮಹತ್ತರವಾದ ಬದಲಾವಣೆಯನ್ನು ತಂದಿತು ಎಂಬುದರಲ್ಲಿ ಸಂದೇಹವಿಲ್ಲ. ಜಗತ್ತಿನಾದ್ಯಂತ ಜನರು ಜಾಗತೀಕರಣದಿಂದ ಅನೇಕ ದುಷ್ಪಪರಿಣಾಮಗಳನ್ನು ಎದುರಿಸಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ. ಗಡಿಬಿಡಿಯ ಬಾಳಿನಲ್ಲಿ ಕೈಗಾರಿಕರಣ, ಖಾಸಗೀಕರಣ, ಕಂಪ್ಯೂಟರೀಕರಣ ಮತ್ತು ಜಾಗತೀಕರಣಗಳು ಮನುಷ್ಯನನ್ನು ಬಿಗಿದಪ್ಪಿಕೊಂಡಿವೆ. ಮಾನವೀಯತೆಯ ಮೂಲಜಲವೇ ಬತ್ತಿಹೋಗುತ್ತಿರುವ ಅಪಾಯ ಎದುರಾಗುತ್ತಿದೆ. ಅಂತಃಕರಣವಿಲ್ಲದ ಬದುಕು ಮರುಭೂಮಿಯಗುತ್ತಿದೆ. ದೇಶಿ ಸಂಸ್ಕೃತಿಯನ್ನು ಜಾಗತಿಕರಣದ ಭೂತ ಮುಕ್ಕುತ್ತಿದೆ. ಭೂಮಿಯನ್ನೇ ನಂಬಿಕೊಂಡಿದ್ದ ರೈತರು ಖಾಸಗೀಕಣದ ಸಂಕೋಲೆಯಲ್ಲಿ ತೊಳಲುತ್ತಿದ್ದಾರೆ. ಭೂಮಿ ತಾಯಿಯ ಮಕ್ಕಳು ಅನಾಥರಾಗಿ ಬದುಕುತ್ತಿದ್ದಾರೆ. ಉಳ್ಳವರು ಮತ್ತು ಇಲ್ಲದವರ ನಡುವೆ ಅಂತರ ನಿರ್ಮಾಣವಾಗಿದೆ. ಅವಸರದ ನಡುವೆ ಬದುಕಿಗೆ ಬೇಕಾದ ಮೂಲ ದ್ರವ್ಯವನ್ನೇ ಕಳೆದುಕೊಂಡು ಬದುಕು ಕಟ್ಟಿಕೊಳ್ಳಲು ಹೊರಟಿರುವ ಚಿತ್ರಣವನ್ನು ಕೊಳ್ಳುಬಾಕ ಸಂಸ್ಕೃತಿಯ ಮೂಲಕ ತೆರೆದು ತೋರುವ ರೀತಿ ಭಿನ್ನವಾಗಿದೆ. ದೇಸಿಯ ಆಹಾರ ಪದ್ದತಿಗಳು ಮಾಯವಾಗಿ ಅನಾರೋಗ್ಯಕ್ಕೆ ಗುರಿ ಮಾಡುವ ರಾಸಾಯನಿಕ ಆಹಾರ ಪದಾರ್ಥಗಳು ದೇಹ ಸೇರುತ್ತಿವೆ. ವಿದೇಶಿ ಖಾದ್ಯ ತಿನಿಸುಗಳಿಗೆ ದಾಸರಾಗಿರುವ ಯುವ ಜನಾಂಗವು ಖಿನ್ನತೆ ಕೋಪ, ಭಯ, ತಲ್ಲಣ, ತಳಮಳ ಮತ್ತು ಆತ್ಮವಿಶ್ವಾಸವಿಲ್ಲದ ಪರಿಸ್ಥಿತಿಗೆ ಒಳಗಾಗುತ್ತಿದ್ದಾರೆ. ಜಾಗತೀಕರಣದ ಪ್ರಭಾವಕ್ಕೆ ಒಳಗಾಗಿ ಮಾನವಪರ ಹೋರಾಟಗಳು ನೆಲಗಚ್ಚುತ್ತಿವೆ. ಜಾಗತೀಕರಣ ಮನುಷ್ಯನ ಬದುಕುವ ಹಕ್ಕನ್ನು ಕಸಿದುಕೊಂಡಿದೆ. ರೈತಪರ ಹೋರಾಟಗಳು ಸ್ವಾರ್ಥಿಗಳ ಪಾಲಾಗಿ ರೈತರು ದಿಕ್ಕೆಟ್ಟಿದ್ದಾರೆ. ಬಂಡವಾಳಶಾಹಿಗಳು ರೈತರಿಗೆ ಆಸೆ ತೋರಿಸಿ ಭೂಮಿ ಕಸಿಯುತ್ತಿದ್ದಾರೆ. ರೈತರ ಭೂಮಿಗಳು ಕೈಗಾರಿಕೆಗಳಾಗಿ ಖಾಸಗಿ ಬಡಾವಣೆಗಳಾಗಿ ಪರಿವರ್ತನೆಗೊಂಡು ಅನ್ನದಾತನೆಂದು ಕರೆಸಿಕೊಂಡ ರೈತ ಅನ್ನ ಇಲ್ಲದವನಾಗುತ್ತಿರುವುದು ದುರಂತ.
ಚಂದ್ರಹಾಸನ ಕಥೆಯಲ್ಲಿನ ಭಕ್ತಿ ಮತ್ತು ಕರುಣಾಭಾವ
181 to 188
ಚಂದ್ರಹಾಸನ ಕಥೆ ಕರುಣೆ ಹಾಗೂ ಭಕ್ತಿ ಪ್ರಧಾನ ರಸವನ್ನೊಳಗೊಂಡಿದೆ. ಜೈಮಿನಿ ಭಾರತದಲ್ಲಿ ಲಕ್ಷ್ಮೀಶನು ತನ್ನ ಕೌಶಲ್ಯವನ್ನು ಅನುಸರಿಸಿ ಚಂದ್ರದತ್ತನ ರಾಜ್ಯದತ್ತ ಕುದುರೆಯನ್ನು ಹೊರಳಿಸುವ ಪೂರ್ವದಲ್ಲಿ ಮಾಡಿದ ಸೃಷ್ಟಿ ವರ್ಣನೆಯಲ್ಲಿ ಬರಲಿರುವ ಕಥೆಯನ್ನು, ಅದನ್ನು ದಾಟುವುದು ಸಾಧ್ಯ ಎಂಬ ಸೂಚನೆಯನ್ನು ಕೊಡುತ್ತಾನೆ. ಚಂದ್ರಹಾಸನ ಕಥೆಯ ವಿಶೇಷತೆಯೆಂದರೆ ಇದರ ಪೂರ್ವದ ಕಥೆಗಳಂತೆಯೆ ಈ ಕಥಾನಕದೊಳಗಿನ ದೇಶ, ಪಾತ್ರಗಳ ಹೆಸರುಗಳಿಂದ ಸೂಚಿತವಾಗಿರುವ ನೀತಿ. ಇದು ಭಾಗವತ ಸಂಪ್ರದಾಯದ ಎಲ್ಲಾ ಕಥೆಗಳಿಗೂ ಅನ್ವಯಿಸುವುದು. ಲಕ್ಷ್ಮೀಶನು ಜೈಮಿನಿ ಭಾರತವು ಚಂದ್ರವಂಶದ ರಾಜರನ್ನು ಕುರಿತು ಬರೆದುದಾಗಿದೆ. ಈ ಕಥೆ ಅಶ್ವಮೇಧಕ್ಕೆ ಸಂಬಂಧಿಸಿದ್ದಾಗಿದೆ ಮತ್ತು ಬಬ್ರುವಾಹನ ಕಥಾವ್ಯಾಜ್ಯದಿಂದಲೂ ರಾಮಚಂದ್ರನ ಕಥೆ ಸೇರಿಕೊಂಡಿದೆ. ದುಷ್ಟಬುದ್ದಿಯು ಚಂದ್ರಹಾಸನ ಮರಣಕ್ಕೆ ಪ್ರಯತ್ನಿಸುವುದು ಮತ್ತು ದೈವವಿಲಾಸವನ್ನು ಉತ್ತಮವಾಗಿ ಹೇಳುತ್ತದೆ.
ವಸುಧೇಂದ್ರ ಕಥೆಗಳು: ಸಾಮಾಜಿಕತೆ
189 to 203
ಈ ಶತಮಾನದಲ್ಲಿ ಸಾರಿಗೆ ಮತ್ತು ಸಂಪರ್ಕ ಸಾಧನಗಳು ಹೆಚ್ಚು ಅಭಿವೃದ್ಧಿ ಹೊಂದುತ್ತಿರುವುದನ್ನು ಕಾಣಬಹುದು. ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಯಿಂದಾಗಿ ವಿಶ್ವವು ಒಂದು ಚಿಕ್ಕ ಗ್ರಾಮವಾಗಿ ಗೋಚರಿಸುತ್ತಿದೆ. ಆಧುನಿಕ ತಂತ್ರಜ್ಞಾನವನ್ನು ಬಳಸಿ ಅನೇಕ ಸಾರಿಗೆ ವ್ಯವಸ್ಥೆಗಳು ಲಭ್ಯವಿದ್ದು ಬಹುದೂರದಲ್ಲಿರುವವರನ್ನು ಕಡಿಮೆ ಅವಧಿಯಲ್ಲಿಯೇ ತಲುಪುವ ಮಟ್ಟಕ್ಕೆ ಮಾನವ ಮುಂದುವರೆದಿದ್ದಾನೆ. ಇಷ್ಟೇ ಅಲ್ಲದೇ ಸಂಪರ್ಕ ಕ್ಷೇತ್ರದಲ್ಲಿ ಬೃಹತ್ ಕ್ರಾಂತಿಯನ್ನು ಮಾಡಿದ್ದು ಬಾನುಲಿ, ದೂರದರ್ಶನ, ಇ-ಮೇಲ್, ಅಂತರ್‌ಜಾಲ, ಮೊಬೈಲ್ ಇತ್ಯಾದಿಗಳ ಮೂಲಕ ಬಹುದೂರದ ಪ್ರದೇಶಗಳಿಗೆ ಕಡಿಮೆ ಅವಧಿಯಲ್ಲಿಯೇ ತಲುಪುವ ಮಟ್ಟಕ್ಕೆ ಮಾನವ ಬೆಳೆದಿದ್ದಾನೆ. ಸಾಮಾಜಿಕ ಬದಲಾವಣೆ ಒಂದು ನಿರಂತರ ಪ್ರಕ್ರಿಯೆ, ಯಾವುದೇ ವ್ಯಕ್ತಿ ಅಥವಾ ಸಮಾಜವಾದರೂ ಸಹ ನಿರಂತರ ಬದಲಾವಣೆಯನ್ನು ಬಯಸುವುದು. ಬದಲಾವಣೆ ಇಲ್ಲದೆ ಹೋದಲ್ಲಿ ಜಡತ್ವ ಉಂಟಾಗಿ ಕ್ರಿಯೆಗಳು ಸರಾಗವಾಗಿ ನಡೆಯದೆ ಹೋಗಬಹುದು. ಸಾಮಾಜಿಕ, ಆರ್ಥಿಕ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಇದ್ದ ಬದಲಾವಣೆಯು ಹಿಂದಿನದಕ್ಕೆ ಹೋಲಿಸಿದಾಗ ಪ್ರಸ್ತುತದಲ್ಲಿ ಅಗಾಧವಾದ ವ್ಯತ್ಯಾಸಗಳನ್ನು ಕಾಣಬಹುದು. ಸಾಮಾಜಿಕ ಬದಲಾವಣೆಯು ತತ್‌ಕ್ಷಣದಲ್ಲಿ ಸಂಭವಿಸದು. ಅದು ನಿರಂತರವಾಗಿ ಅಭಿವೃದ್ಧಿ ಹೊಂದುತ್ತಿರುತ್ತದೆ.
Essay
ಡಾ. ಅರಳುಮಲ್ಲಿಗೆ ಪಾರ್ಥಸಾರಥಿಯವರ ಕೀರ್ತನೆಗಳಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಕಳಕಳಿಯ ಒಂದು ಮರುಚಿಂತನೆ
204 to 213
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹತ್ತನೆ ಶತಮಾನದ ಚಂಪೂವಿನಿಂದ ಪ್ರಾರಂಭವಾಗಿ, ಹನ್ನೆರಡನೇ ಶತಮಾನದ ವಚನ ಚಳುವಳಿ, ಮುಂದುವರೆದು ಕಂದ, ಷಟ್ಟದಿ, ತ್ರಿಪದಿ, ಸಾಂಗತ್ಯ, ರಗಳೆಗಳಂತೆಯೇ ಕೀರ್ತನ ಸಾಹಿತ್ಯವೂ ಹುಲುಸಾಗಿ ಬೆಳೆದು ನಿಂತಿದೆ. ಇದು ಹದಿನೈದು-ಹದಿನಾರನೇ ಶತಮಾನಕ್ಕೆ ಸೀಮಿತಗೊಳ್ಳದೆ; ಇಂದಿಗೂ ರಚನೆಯ ರೂಪದಲ್ಲಿ ಪ್ರಚಲಿತದಲ್ಲಿರುವುದು ಸಂತಸದ ವಿಚಾರ. ಪ್ರಸ್ತುತ “ಡಾ.ಅರಳುಮಲ್ಲಿಗೆ ಪಾರ್ಥಸಾರಥಿಯವರ ಕೀರ್ತನೆಗಳಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಕಳಕಳಿಯ ಒಂದು ಮರುಚಿಂತನೆ" ಎಂಬ ಶೀರ್ಷಿಕೆಯಲ್ಲಿ ಅವರು ರಚಿಸಿರುವ ಕೀರ್ತನೆಗಳನ್ನು ದೃಷ್ಠಿಕೋನದಲ್ಲಿರಿಸಿಕೊಂಡು ಇಲ್ಲಿ ವ್ಯಕ್ತವಾಗಿರುವ ಧಾರ್ಮಿಕ ಹಾಗೂ ಸಾಮಾಜಿಕ ಕಳಕಳಿಯ ಅಂಶಗಳನ್ನು ಶೋಧಿಸಲಾಗಿದೆ. ಆಯ್ದ ಕೆಲವು ಮುಖ್ಯಾಂಶಗಳನ್ನು ಈ ಮುಂದಿನಂತೆ ಗುರುತಿಸಲಾಗಿದೆ. ದಾಸ ಸಾಹಿತ್ಯದ ಹಿನ್ನೆಲೆ, ಹರಿದಾಸರು ಭಾಗವತ ಮತ್ತು ಮಾಧ್ವ ಮತತತ್ವಗಳ ಪ್ರಚಾರ, ಧೈತ ಸಿದ್ಧಾಂತ, ನರಹರಿತೀರ್ಥ, ಶ್ರೀಪಾದರಾಜರಿಂದ ಮರುಹುಟ್ಟು, ವಾದಿರಾಜರು, ವ್ಯಾಸರಾಯರು, ಪುರಂದರದಾಸರು, ಕನಕದಾಸರು, ವಿಜಯದಾಸರು ಮತ್ತು ಜಗನ್ನಾಥದಾಸರವರೆಗೆ ಬೆಳೆದುಬಂದ ಕ್ರಮವನ್ನು ಪರಿಚಯಿಸುತ್ತಾ ಇಂದಿನ ವೆಂಕಣ್ಣದಾಸರು ಹಾಗೂ ವೇಣುಗೋಪಾಲದಾಸರನ್ನು ಸ್ಮರಿಸುತ್ತಾ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ಯವರ ಬಗ್ಗೆ ಪರಿಚಯಿಸಲಾಗಿದೆ. ಭಕ್ತಿ-ಭಾವ, ಭಾಗವತ ಹಿನ್ನೆಲೆ, ದಾಸಭಾವ, ಸಾರ್ವಕಾಲಿಕ ಸತ್ಯ, ಸಮರ್ಪಣಾ ಭಾವ, ಮಾನವ ಬದುಕಿನ ಉದಾರತೆ, ವಿಷ್ಣುವಿನ ಅವತಾರಗಳು ಮತ್ತು ರಾಕ್ಷಸರ ಸಂಹಾರದ ಕತೆಗಳು, ಪುರಾಣ ಮತ್ತು ಋಷಿ ಮುನಿಗಳ ಕತೆಗಳನ್ನು ತಮ್ಮ ಕೀರ್ತನೆಗಳಲ್ಲಿ ತಿಳಿಸುತ್ತಾ ಜೀವನದ ನಶ್ವರತೆಯನ್ನು ಹೃದ್ಯಂಗಮವಾಗಿ ತಿಳಿಸಿದ್ದಾರೆ. ಯುಗಗಳ ಪರಿಕಲ್ಪನೆ, ಗುರು-ಶಿಷ್ಯ ಸಂಬಂಧ, ಹಸಿವು, ಅರಿಷಡ್ವರ್ಗಗಳು, ವೇದ-ಉಪನಿಷತ್ತುಗಳು, ಪೂಜೆ-ನೇಮ, ಜಪ-ತಪ, ಸ್ವರ್ಗ-ನರಕ, ಇಹ-ಪರಗಳಬಗ್ಗೆ ತಮ್ಮ ಕೀರ್ತನೆಗಳಲ್ಲಿ ಅರ್ಥಪೂರ್ಣವಾಗಿ ತಿಳಿಸಿದ್ದಾರೆ.
ಕನ್ನಡ ಸಾಹಿತ್ಯದಲ್ಲಿ ರೈತ
214 to 220
ಭಾರತ ಕೃಷಿ ಕೇಂದ್ರಿತವಾದ ದೇಶ. ಕೃಷಿ ಅವಲಂಬಿತ ಜೀವನ ಕಲೆಯಾಗಿ, ಕಾದಂಬರಿಯಾಗಿ, ಕವನವಾಗಿ, ಲಾವಣಿಯಾಗಿ, ಇನ್ನೂ ಅನೇಕ ಸಾಹಿತ್ಯ ರೂಪಗಳನ್ನು ಪಡೆದುಕೊಂಡು ಬಂದಿದೆ. ರೈತ ಎಲ್ಲರ ಬದುಕಿನ ಭಾಗ. ಸಾಹಿತ್ಯದ ನಿರಂತರ ಸೆಲೆ ಇವನು. ರೈತನ ಅಸ್ತಿತ್ವವಿರದೇ ಭೂಮಿಗೆ ಅಸ್ತಿತ್ವವಿಲ್ಲ. ರೈತನಿಗೆ ಮಿಡಿಯದ, ಸ್ಪಂದಿಸದೇ ಹೋದರೆ ಸಾಹಿತ್ಯಕ್ಕೂ ಬೆಲೆ ನೆಲೆ ಇಲ್ಲ. ಭಾರತೀಯ ಸಾಹಿತ್ಯ, ಕನ್ನಡ ಸಾಹಿತ್ಯ ನಿರಂತರವಾಗಿ ನೇಗಿಲಯೋಗಿಯನ್ನು ಚಿತ್ರಿಸುತ್ತ ಬಂದಿದೆ. ಸಾಹಿತ್ಯದಲ್ಲಿ ರೈತನ ಭಾವ, ಕಷ್ಟ, ನೋವು, ಸಮಸ್ಯೆ ಪರಿಹಾರಗಳನ್ನು ಕಾಣುತ್ತೇವೆ. ಕುವೆಂಪು ಅವರು 'ನೇಗಿಲ ಕುಲದೊಳಗಡಗಿದೆ ಕರ್ಮ, ನೇಗಿಲ ಮೇಲೆಯೇ ನಿಂತಿದೆ ಧರ್ಮ' ಎನ್ನುವ ಮೂಲಕ ರೈತ ಧರ್ಮ ಸಾರುತ್ತಿದ್ದಾರೆ. 'ಉಳುವಾ ಯೋಗಿಯ ನೋಡಲ್ಲಿ' ಎಂದು ರಾಷ್ಟ್ರಕವಿ ಕುವೆಂಪು ತೋರಿಸಿದ ರೈತರನ್ನು ಅನೇಕ ಕವಿಗಳು ತಮ್ಮದೇ ಆದ ಅನುಭವದೊಂದಿಗೆ ರೈತರ ಬದುಕಿನ ಸತ್ಯದ ದರ್ಶನವನ್ನು ಮೂಡಿಸಿದ್ದಾರೆ.
ಡಿವಿಜಿ ಅವರ ಮಂಕುತಿಮ್ಮನ ಕಗ್ಗ-ಒಂದು ಅವಲೋಕನ
221 to 227
ಕನ್ನಡದ ಭಗವದ್ಗೀತೆ ಎಂದೇ ಪ್ರಸಿದ್ಧವಾಗಿರುವ ಡಿ.ವಿ.ಗುಂಡಪ್ಪನವರು ಸೃಜಿಸಿದ "ಮಂಕುತಿಮ್ಮನ ಕಗ್ಗ”ವು ಬದುಕಿನ ಸಾರವನ್ನು ವಿಶ್ಲೇಶಿಸುವ ಅತ್ಯದ್ಭುತವಾದ ಕೃತಿಯಾಗಿದೆ. ಭಗವದ್ಗೀತೆ ಉಪನಿಷತ್‌ಗಳ ಸಾರವೆನ್ನುತ್ತಾರೆ. ಗುಂಡಪ್ಪನವರ ಕಗ್ಗವನ್ನು ಸಮರ್ಪಕವಾಗಿ ಅರ್ಥೈಸಿಕೊಂಡಿದ್ದೇ ಆದಲ್ಲಿ ಇಡೀ ಉಪನಿಷತ್‌ಗಳ ಸಾರವನ್ನೇ ಅರ್ಥೈಸಿಕೊಂಡಂತೆ ಎನ್ನುವ ವಿದ್ವಾಂಸರ ಮಾತೊಂದಿದೆ. ಇದರಲ್ಲಿ ಜನಪದರ ನುಡಿಗಟ್ಟು, ವಚನಕಾರರ ಮಾತಿನ ಬೆಳಕು... ಈ ಮೊದಲಾದವುಗಳ ಸಾರ ಮಡುಗಟ್ಟಿದೆ. ಇದರಲ್ಲಿ ಏನಿಲ್ಲ ಎಂದು ಹೇಳುವಂತಿಲ್ಲ. ಡಿ.ವಿ.ಜಿ ರವರು ತಮ್ಮ ಜೀವನಾನುಭವದ ಸಾರವನ್ನು ಉದಾಹರಣೆ ಸಹಿತ ವಿಶ್ಲೇಷಿಸುತ್ತಾರೆ. ಒಟ್ಟಾರೆಯಾಗಿ ಗುಂಡಪ್ಪನವರ ಜ್ಞಾನದ ಸಾರವೇ ಈ "ಮಂಕುತಿಮ್ಮನ ಕಗ್ಗ” ವಾಗಿದೆ. 'ಮಂಕುತಿಮ್ಮ' ಎಂಬ ಅಂಕಿತನಾಮವನ್ನೊಂದಿದ ನಾಲ್ಕು ಸಾಲುಗಳ ವಿಶಿಷ್ಟ ಶೈಲಿಯಲ್ಲಿನ ಪದ್ಯ ರಚನೆ ಜೀವನದ ತಿರುಳನ್ನು ನೈತಿಕ ಮೌಲ್ಯಗಳನ್ನು ಪ್ರತಿಪಾದಿಸುವಂತಹ ಮಹತ್ವಪೂರ್ಣ ಕೃತಿಯಾಗಿದೆ. ಗುಂಡಪ್ಪನವರು ಬಹುಷಃ ತಾವು ಹಳೆಯ ವಸ್ತುವಿಷಯ ವಿಚಾರಗಳನ್ನು ಕುರಿತು ಮಾತನಾಡುತ್ತಿದ್ದುದರಿಂದಲೂ ಏನೋ ಹಳೆಯ ಶೈಲಿಯನ್ನೇ ಅಳವಡಿಸಿಕೊಂಡು ಕಗ್ಗವನ್ನು ರಚಿಸಿದ್ದಾರೆ. ಕಗ್ಗದ ಮತ್ತೊಂದು ವೈಶಿಷ್ಟ್ಯತೆಯೆಂದರೆ ಕೃತಿಯ ಆದಿ, ಮಧ್ಯ ಮತ್ತು ಅಂತ್ಯ ಭಾಗದ ಮಧ್ಯ ಮಧ್ಯ ಎಲ್ಲೇ ಯಾವ ಪದ್ಯವನ್ನೇ ಓದಿದರೂ, ಮುಖ್ಯವಿಚಾರ ಸ್ಪಷ್ಟವಾಗಿ ಗ್ರಹಿಕೆಗೆ ಸಿಗುವಂಥದ್ದು. ಜೀವನದ ಆತ್ಮಾನುಭವದ ಪರಿಪಾಕದಿಂದ ಹೊರಹೊಮ್ಮಿದ ಮಂತ್ರ ಸದೃಶವಾದ ಉಕ್ತಿ ಹಾಗೂ ಎಲ್ಲರ ಬಾಳ್ವೆಗೆ ಸಲ್ಲುವ ಕೃತಿಯಿದು.
ಸಮಗ್ರ ದಾಸಸಾಹಿತ್ಯ ಸಂಪುಟಗಳ ಒಳ-ಹೊರಗು
228 to 235
ದಾಸಸಾಹಿತ್ಯದ ಪ್ರಕಟಣೆಯ ಸುವರ್ಣಯುಗವೆಂದರೆ ಅದು ಪಾವಂಜೆ ಮತ್ತು ಗೊರೇಬಾಳರ ಕಾಲದಲ್ಲಾದ ಪ್ರಕಟಣೆಗಳು. ಆದರೆ ಈ ಕಾಲದಲ್ಲಿ ಕೇವಲ ದಾಸಸಾಹಿತ್ಯದ ಸಂಪಾದನೆಯನ್ನಷ್ಟೇ ಮುಖ್ಯವಾಗಿರಿಸಿಕೊಂಡು ಸಂಪಾದನೆಗಳು ನಡೆದವು. ಕಾಲಾ ನಂತರದ ದಾಸಸಾಹಿತ್ಯದ ಸಂಪಾದನೆ ಆಧುನಿಕ ಸಂಪಾದನಾ ವಿಧಾನದನ್ವಯ ಜರುಗಲಾರಂಭಿಸಿ ಅನೇಕ ಕೃತಿಗಳು ಸಂಪಾದನೆಯಾಗಿ ಪ್ರಕಟಣೆಗೊಂಡವು. ಇವುಗಳಲ್ಲಿ ಕೆಲವು ಕೃತಿಗಳನ್ನು ಹೊರತುಪಡಿಸಿ ಉಳಿದೆಲ್ಲ ಕೃತಿಗಳು ವೈಯಕ್ತಿಕ ಪ್ರಕಟಣೆಗಳಾಗಿದ್ದವು. ಹಾಗಾಗಿ ಸರ್ಕಾರಕ್ಕೆ ದಾಸಸಾಹಿತ್ಯದ ಸಂಪಾದನಾ ಕೃತಿಗಳನ್ನು ಪ್ರಕಟಿಸುವ ಒಂದು ಯೋಜನೆಯನ್ನು ರೂಪಿಸಬೇಕೆಂದು ಹಲವು ವರ್ಷಗಳಿಂದ ಕೇಳಿಬರುತ್ತಿದ್ದ ಕೂಗು. ಇಂತಹ ಕೋರಿಕೆಯ ಫಲವಾಗಿ 2003ರಲ್ಲಿ ಕರ್ನಾಟಕ ಸರ್ಕಾರವು ಸಮಗ್ರ ದಾಸಸಾಹಿತ್ಯವನ್ನು ಪ್ರಕಟಿಸುವ ಒಂದು ಯೋಜನೆಯನ್ನು ರೂಪಿಸಿತು. ಅದರ ಫಲವೇ ಈ 35 ಸಂಪುಟಗಳ 50 ಕೃತಿಗಳು. ಈ ಯೋಜನೆಯಲ್ಲಿ ಮೂಡಿಬಂದ ಕೃತಿಗಳ ಆಂತರಿಕ ಮತ್ತು ಬಾಹ್ಯವಾಗಿರುವ ಕೆಲವು ವಿಚಾರಗಳನ್ನು ಈ ಲೇಖನದಲ್ಲಿ ಚರ್ಚಿಸಲಾಗಿದೆ.
ಸಾಹಿತ್ಯ ಮತ್ತು ಸಮಾಜದ ಸಂಬಂಧ
236 to 244
ಸಾಹಿತ್ಯ ಮನುಷ್ಯನ ಆತ್ಮ ಶುದ್ಧಿಗೆ ಇರುವಂತಹ ಅಕ್ಷರ ರೂಪ. ಸಾಹಿತಿ ಸಮಾಜದ ಒಂದು ಭಾಗವಾಗಿರುವುದರಿಂದ, ಆತ ತನ್ನ ಅಂತಃಚಕ್ಷುವಿನಿಂದ ಜಗದ ಎಲ್ಲ ವಿದ್ಯಮಾನಗಳನ್ನು ಗಮನಿಸಿ, ತನ್ನ ವಿಚಾರಶಕ್ತಿಯಿಂದ ಒಳಿತು ಕೆಡುಕನ್ನು ಕುರಿತ ಸಮಾಜದ ಅಭ್ಯುದಯಕ್ಕೆ ಬೇಕಾದ ಏನೆಲ್ಲ ಸಲಹೆಗಳನ್ನು ಸಾಹಿತ್ಯದ ಮೂಲಕ ತಿಳಿಸುತ್ತಾನೆ. ಅದು ಕಲ್ಪನೆಯ ಕೂಸಲ್ಲ. ಕಾಲದಿಂದ ಕಾಲಕ್ಕೆ ಸಾಹಿತಿಗಳು ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಪ್ರಯತ್ನಪಟ್ಟಿದ್ದಾರೆ. ಅಕ್ಷರಗಳು ಆತ್ಮ ಶೋಧನೆಗೆ ಅವಕಾಶ ಮಾಡಿಕೊಡಬೇಕು, ಅವುಗಳ ಮೂಲಕ ಅರಿವು ವಿಸ್ತರಿಸಿ, ಆತ್ಮವಿಶ್ವಾಸ ಬೆಳೆಸಿ ಸಮಾಜದಲ್ಲಿ ಅಹಂಕಾರ ಕಡಿಮೆ ಮಾಡುತ್ತಾ ಸದೃಢ ಸಮಾಜದ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ. ಸಾಹಿತ್ಯ ಸಮಾಜಶಾಸ್ತ್ರ ಮತ್ತು ಇತಿಹಾಸಕ್ಕಿಂತ ಭಿನ್ನವಾದದ್ದು. ಸಮಾಜಶಾಸ್ತ್ರಜ್ಞ ಗಮನಕೊಡದ ಒಳಬಾಳಿಗೂ ಸಾಹಿತ್ಯ ಗಮನ ಕೊಡುತ್ತದೆ. ಇತಿಹಾಸ ಭೂತವನ್ನು ಹಿಡಿದಿಟ್ಟಿರುವ ಒಂದು ದಾಖಲೆಯೂ ಆಗಿರುತ್ತದೆ. ಆದ್ದರಿಂದ ಸಾಹಿತ್ಯ ಸಮಾಜ ವ್ಯಕ್ತಿಗಳ ಬದುಕಿನೊಂದಿಗೆ ಬೆರೆತ ಚೌಕಟ್ಟು. ಕತ್ತಲ ರೂಪದಲ್ಲಿ ಕೊಳೆಯುತ್ತಿರುವ ಕನಸುಗಳು ಇಲ್ಲದೆ ನರಳುತ್ತಿರುವ ಜನತೆಗೆ, ಸಮಾಜಕ್ಕೆ ಒಂದು ತಿರುವನ್ನು ಕೊಡುವುದು, ಅಲ್ಲಿನ ಬದಲಾವಣೆಗೆ ಪ್ರಯತ್ನಿಸುವುದು ಸಾಹಿತ್ಯದ ಆದ್ಯ ಕರ್ತವ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಜನಪದರು, ಪ್ರಾಚೀನ ಕವಿಗಳು, ವಚನಕಾರರು, ಕೀರ್ತನಕಾರರು, ಆಧುನಿಕ ಕನ್ನಡ ಕವಿಗಳು ಸಾಹಿತ್ಯ ಪ್ರಕಾರಗಳ ಮೂಲಕ 'ಏಕಾಂತತೆಗಿಂತ ಲೋಕಾಂತ ಅಗತ್ಯ' ಎಂಬ ಸಂದೇಶವನ್ನು ಸಾಹಿತ್ಯದ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡಿದ್ದಾರೆ. ಸಾಹಿತ್ಯದ ಮುಖ್ಯ ಉದ್ದೇಶ ಬದುಕು ಹಸನಾಗಬೇಕು, ಸಮಾಜ ನೆಮ್ಮದಿಯುತವಾಗಿರಬೇಕು, ಮೋಸ, ವಂಚನೆ, ಅಂಧಕಾರ, ಮೌಡ್ಯದಿಂದ ಹೊರಬಂದು, ವೈಚಾರಿಕತೆಯ ಮೂಲಕ, ಶಾಂತಿ, ಸೌಹಾರ್ದತೆಯಿಂದ ಬಾಳ ಬೇಕೆಂಬ ಸಂದೇಶವನ್ನು ಸಾಹಿತ್ಯದ ಮೂಲಕ ನೀಡುತ್ತಾ ಬಂದಿದ್ದಾರೆ.