ಕಂನಾಡು-ಕಂನುಡಿ ಆಕೃತಿ ಪಡೆದ ಬಗೆ.

Authors

  • SHAM. BA. JOSHI
  • BYRAPPA M.

Keywords:

ಕನ್ನಡ, ಶಂಕರ ಬಾಳದೀಕ್ಷಿತ ಜೋಶಿ, ಕಂನಾಡು-ಕರ್ನಾಟ, ಕಂನಡ-ಕಂನುಡಿ, ಕರ್ನಾಟ ಸಂಸ್ಕೃತಿ

Abstract

ಆಶಯ:

ಕನ್ನಡ ನಾಡು-ನುಡಿ-ನಾಡವರ ಸಂಸ್ಕೃತಿಯ ಸಂಶೋಧನಾ ಚರಿತ್ರೆಯಲ್ಲಿ ತಮ್ಮದೇ ಆದ ನವಮಾರ್ಗ ನಿರ್ಮಿಸಿಕೊಂಡು ಮಹೋನ್ನತವಾದ ಕಾಣ್ಕೆ ನೀಡಿದ ವಿದ್ವಾಂಸರಲ್ಲಿ ಡಾ. ಶಂಕರ ಬಾಳದೀಕ್ಷಿತ ಜೋಶಿ ಅವರು ಅಗ್ರಗಣ್ಯರು. ಇವರು ಮೂಲತಃ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಗುರ್ಲಹೊಸೂರು ಎಂಬಲ್ಲಿ ೧೮೯೬ ಜನವರಿ ೪ ರಂದು ಜನಿಸಿದವರು. ಜೀವನಪರ್ಯಂತ ಬಹು ದುರ್ಗಮವಾದ ಮಾರ್ಗದಲ್ಲಿಯೇ ಸಾಗುತ್ತಾ ಬದುಕಿನ ಜೊತೆಜೊತೆಗೆ ಕನ್ನಡ ಸಂಶೋಧನಾ ಮಾರ್ಗವನ್ನೂ ಬೆಳಗಿದವರು. ಬಹುಶ್ರುತ ವಿದ್ವಾಂಸರಾದ ಶಂ.ಬಾ. ಅವರ ಸುಮಾರು ೪೦೦೦ ಪುಟಗಳ ಬರೆಹಗಳನ್ನು ಕನ್ನಡ ಪುಸ್ತಕ ಪ್ರಾಧಿಕಾರವು ೬ ಬೃಹತ್ ಸಂಪುಟಗಳಲ್ಲಿ ಪ್ರಕಟಿಸಿದೆ. ಸಂಪುಟ-೧: ಕಂನಾಡು-ಕರ್ನಾಟ, ಸಂಪುಟ-೨: ಕಂನಡ-ಕಂನುಡಿ, ಸಂಪುಟ-೩: ಕರ್ನಾಟ ಸಂಸ್ಕೃತಿ, ಸಂಪುಟ-೪: ಭಾರತೀಯ ಸಂಸ್ಕೃತಿ, ಸಂಪುಟ-೫: ಮಾನವ ಸಂಸ್ಕೃತಿ, ಸಂಪುಟ-೬: ಸಂಸ್ಕೃತಿ-ಸಾಹಿತ್ಯ. ಹಿರಿಯ ವಿದ್ವಾಂಸರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಈ ಸಂಪುಟಗಳ ಸಂಪಾದಕರು. ಕನ್ನಡ ಸಂಸ್ಕೃತಿಯ ಮೂಲ ಶೋಧನೆಯಿಂದ ಹಿಡಿದು ವರ್ತಮಾನದಲ್ಲಿ ಕನ್ನಡ ಸಾಂಸ್ಕೃತಿಕ ಪ್ರಜ್ಞೆ ಜಾಗೃತಗೊಳ್ಳಬೇಕಾದ ಅಗತ್ಯತೆಯ ಅರಿವಿನ ವರೆಗೂ ಹರಹುಳ್ಳ ವಿದ್ವತ್ಪೂರ್ಣ ಬೃಹತ್ ಹಾಗೂ ಮಹತ್ ಆಕರಗಳಿವು. ವಿದ್ವಾಂಸರಾದ ಡಾ. ಎಚ್. ಜೆ. ಲಕ್ಕಪ್ಪಗೌಡರು ಹೇಳುವಂತೆ, ಶಂ.ಬಾ. ಅವರ ಆಸಕ್ತಿ, ಅಧ್ಯಯನ, ಸಂಶೋಧನೆ ಮತ್ತು ಚಿಂತನೆಗಳ ಬೀಸು ತುಂಬಾ ವ್ಯಾಪಕವಾದುದು. ಈ ಕಾರಣ ಅವರು ಇತಿಹಾಸದ ಭಾಷಾ ವಿಶ್ಲೇಷಣಾ ಪದ್ಧತಿಯನ್ನು ಕರುನಾಡಿನ ಎಡೆಗಳ, ಹೆಸರುಗಳ, ದೇವತಾ ಪ್ರತಿರೂಪಗಳ, ಸಾಂಕೇತಿಕ ನೆಲೆಗಳ, ಮನೋವೈಜ್ಞಾನಿಕ ಶೋಧನೆಗಳ, ಧಾರ್ಮಿಕ, ಚಿಂತನೆಗಳ ಸಂಕೀರ್ಣ ಪಥವನ್ನು ಹಿಡಿದು ನಡೆದರು. ತಿರುವು ಮುರುವು ಆಗಿರುವ ಸಮಕಾಲೀನ ಮೌಲ್ಯಗಳ ಜೊತೆಗೆ ಪ್ರಾಚೀನ ಸಂಸ್ಕೃತಿಯ ಸಾಧಾರವಿವರಗಳನ್ನು ಇಟ್ಟು ತೌಲನಿಕವಾಗಿ ನೋಡಿದ್ದು ಮತ್ತು ವಿಶ್ಲೇಷಿಸಿದ್ದು ಜಾಗತಿಕ ಸಾಂಸ್ಕೃತಿಕ ಅಧ್ಯಯನದ ಅಖಂಡ ಇತಿಹಾಸದಲ್ಲೇ ಹೊಸಬಗೆಯದು. ಹೀಗಾಗಿ ಆಧುನಿಕ ಸಮಾಜದ ಬಹುಮುಖ ನೆಲೆಗಳನ್ನು ಅರಿಯಲು ಮತ್ತು ಅರ್ಥೈಸಲು ಪ್ರಾಚೀನ ಆಕರಗಳನ್ನು ಯಥೇಚ್ಛವಾಗಿ ಬಳಸಿಕೊಂಡು ಮುನ್ನಡೆದ ಶಂ.ಬಾ. ಅವರು ಹೊಸ ಅರ್ಥಗ್ರಹಣ ಪದ್ಧತಿಯನ್ನೇ ತಮ್ಮ ಬರಹಗಳ ಮೂಲಕ ನಮಗೆ ನೀಡಿದ್ದಾರೆ.

ಶಂ.ಬಾ. ಎಂದರೆ ವ್ಯಕ್ತಿ ಮಾತ್ರವಲ್ಲ; ಕನ್ನಡ ಪ್ರಜ್ಞಾಪ್ರಪಂಚದ ಹೆಗ್ಗುರುತು. ಕನ್ನಡ ಸಂಶೋಧನಾ ಪರಿಧಿಯನ್ನು ವಿಸ್ತರಿಸುವ ಹಾಗೂ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಹೊಸ ರೀಸರ್ಚ್ ಮೆಥೆಡಾಲಜಿಯನ್ನು ಕಟ್ಟಿಕೊಟ್ಟ ಶಂ.ಬಾ. ಅವರು ಜನಪರಂಪರೆ ಹಾಗೂ ವಿದ್ವತ್ಪರಂಪರೆಗಳ ನಡುವೆ ಅರ್ಥಪೂರ್ಣ ಸಂವಾದವನ್ನು ಏರ್ಪಡಿಸಿದರು. ಬಹುಶಾಸ್ತ್ರೀಯ ಆಕರಗಳ ಆಳಕ್ಕಿಳಿದು ಪದರಪದರಗಳನ್ನು ಸಮೀಕ್ಷಿಸಿ ಈ ನೆಲದ ಸಾಂಸ್ಕೃತಿಕ ಬಹುತ್ವವನ್ನು ಬಯಲಾಗಿಸಿದರು. ಅವರು ಬಹುಶಿಸ್ತೀಯ ಜ್ಞಾನಮಾರ್ಗಗಳನ್ನು ತಮ್ಮ ಶೋಧನೆ ಹಾಗೂ ಸತ್ಯಪ್ರತಿಪಾದನೆಯ ಆಕರಗಳನ್ನಾಗಿ ದುಡಿಸಿಕೊಂಡದ್ದು ಸಾಂಸ್ಕೃತಿಕ ಅನ್ವೇಷಣೆಯ ಬೌದ್ಧಿಕ ವ್ಯಾಪಾರವಲ್ಲ; ವರ್ತಮಾನದ ವಿಸಂಗತಿಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅವುಗಳನ್ನು ದಾಟಿ ಸರ್ವಮಾನ್ಯವೆನಿಸಬಹುದಾದ ವೈಜ್ಞಾನಿಕ ಚಿಂತನೆಯ ಒಂದು ವಿಶಿಷ್ಟ ಉಪಕ್ರಮವಾಗಿ ಅದನ್ನು ಸ್ವೀಕರಣೆ ಮಾಡುವ ಸಲುವಾಗಿ. ಕನ್ನಡ ನಾಡಿನಲ್ಲಿ ಮಾತ್ರವಲ್ಲದೇ ಮಹಾರಾಷ್ಟ್ರ, ಮಧ್ಯಪ್ರದೇಶ, ಬಂಗಾಳ, ಬಿಹಾರ ಮತ್ತು ಇನ್ನು ಹಲವು ಹತ್ತುಕಡೆಗಳಿಂದ ತಮ್ಮ ಸಂಶೋಧನೆಗೆ ಪೂರಕವಾದ ಅಸಂಖ್ಯ ಸಾಕ್ಷಿ ಮತ್ತು ಸಾಮಗ್ರಿಗಳನ್ನು ಹೆಕ್ಕಿ ತೆಗೆದು; ಆ ಮೂಲಕ ವಿವಿಧ ವಾದ ಮತ್ತು ಅಭಿಪ್ರಾಯಗಳ ನಡುವೆ ಗೊಂದಲಮಯವಾಗಿದ್ದ ಕನ್ನಡನಾಡಿನ ಭೌಗೋಳಿಕ ಜಾನಾಂಗಿಕ ಮತ್ತು ಸಾಂಸ್ಕೃತಿಕ ಎಲ್ಲೆಗಳನ್ನು ಪುನರ್ರಚನೆ ಮಾಡಿದ ಶಂ.ಬಾ. ಅವರ ಸಂಶೋಧನಯಾನವು ಅನನ್ಯವಾದುದು. ಕನ್ನಡ ಸಂಸ್ಕೃತಿಯನ್ನಾಗಲೀ ಭಾರತ ಸಂಸ್ಕೃತಿಯನ್ನಾಗಲೀ ಅಥವಾ ಮಾನವಸಂಸ್ಕೃತಿಯನ್ನಾಗಲೀ ಶಿಥಿಲಗೊಳಿಸುವ ಯಾವ ಸಂಗತಿಯನ್ನು ವಿಮರ್ಶೆಗೆ ಒಳಗು ಮಾಡುವ ಮತ್ತು ಸತ್ವಶಾಲಿಯಾದ ಯಾವುದೇ ಸಂಗತಿಯನ್ನು ಬೆಳಗು ಮಾಡುವ ಪ್ರಾಂಜಲ ಮನಸ್ಸಿನ ಸತ್ಯಾನ್ವೇಷಕರು ಶಂ.ಬಾ.

ವಿದ್ವಾಂಸರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅವರು ದಾಖಲಿಸಿದಂತೆ, “ಶಂ.ಬಾ. ಅವರು ವಿಚಾರವೇ ಜೀವನದ ಬೆಳಕು ಎಂಬ ಪ್ರಜ್ಞೆಯನ್ನು ಹೊತ್ತುಕೊಂಡು ಹೊರಟವರು. ಕನ್ನಡ ನಾಡಿನಲ್ಲೆ ಸಮರ್ಪಕವಾದ ಜಿಜ್ಞಾಸೆಗೆ ಹೆಜ್ಜೆ ಹಾಕಿದವರು. ಶಂ.ಬಾ. ಅವರು ತಾವು ಕೈಹಾಕಿದ ಪ್ರತಿಯೊಂದರಲ್ಲೂ ತಮ್ಮ ಸ್ವಂತಿಕೆಯನ್ನು ಉಳಿಸಿಕೊಂಡು ಬಂದಿದ್ದಾರೆ; ಕಂಡುಕೊಂಡಿದ್ದಾರೆ. ಲಿಖಿತ ಶಾಸನಾದಿಗಳು, ಕಾವ್ಯಗಳಿಂದ ಸಂಸ್ಕೃತಿಯ ಅಧ್ಯಯನ ನಡೆಯುತ್ತಿದ್ದ ಕಾಲದಲ್ಲಿ ಆಚಾರ, ಸಂಪ್ರದಾಯ, ಜಾನಪದ ನಂಬಿಕೆಗಳನ್ನು ಲೆಕ್ಕಿಸದೆ ಸಂಸ್ಕೃತಿ ಅಧ್ಯಯನ ಮಾಡಿದರೆ ಅದರಲ್ಲಿ ಅರ್ಥವಿಲ್ಲವೆಂದು ಹೇಳಿದ್ದುದಲ್ಲದೆ ಅದನ್ನು ಮಾಡಿ ತೋರಿಸಿದರು. ಸಂಸ್ಕೃತಿಯ ಅಧ್ಯಯನಕ್ಕೆ ಭಾಷಾಶಾಸ್ತ್ರ, ಮನಃಶಾಸ್ತ್ರ, ಜೀವಶಾಸ್ತ್ರ, ಪುರಾತತ್ತ್ವಶಾಸ್ತ್ರ, ಇತಿಹಾಸ ಶಾಸ್ತ್ರ, ದೈವತಾಶಾಸ್ತ್ರ ಹೀಗೆ ನಾನಾ `ಶಾಸ್ತ್ರ’ಶಾಖೆಗಳ ನೆರವಿನಿಂದ ಅಧ್ಯಯನ ಮಾಡಿದರು. ಇವೆಲ್ಲವೂ ಅವರ ಪ್ರಧಾನವಾದ ಮುಖ್ಯಾಂಶಗಳಿಗೆ ತಾಳೆ ಹೊಂದಿದವು. ಇದಕ್ಕೆ ಸಾಕ್ಷಿಯಾಗಿ ಶಂ.ಬಾ. ಅವರ ಸಂಶೋಧನ ವಾರಿಧಿಯಿಂದ ಆಯ್ಕೆಮಾಡಿ, ಮುಂದೆ ನೀಡಲಾಗಿರುವ “ಕಂನಾಡು, ಕಂನುಡಿ ಆಕೃತಿ ಪಡೆದ ಬಗೆ” ಲೇಖನವೂ ಮಹತ್ವಪೂರ್ಣವಾದುದು. ಇಲ್ಲಿ, ಶಂ.ಬಾ. ಅವರು ಭಾರತೀಯ ನೆಲಮೂಲದ ಜಾನಾಂಗಿಕ, ಭಾಷಿಕ ಹಾಗೂ ಸಾಂಸ್ಕೃತಿಕ ಸಂಗತಿಗಳನ್ನು ಕನ್ನಡದ ಕಣ್ಣೋಟದಲ್ಲಿ ಬಹುಶಿಸ್ತೀಯ ಆಕರಗಳ ಹಿನ್ನೆಲೆಯಲ್ಲಿ ಮೌಲ್ಯೀಕರಿಸಿದ್ದಾರೆ. ಪ್ರಾಗೈತಿಹಾಸಿಕ ನೆಲೆಗಳು, ವೇದೋಪನಿಷತ್ತುಗಳು, ಭಾಷಿಕ ಸಂರಚನೆಗಳು, ಧಾರ್ಮಿಕ ಶಾಸ್ತ್ರಗಳು, ಸಾಹಿತ್ಯಕ ಸೃಜನೆಗಳು, ವಿರಕ್ತ ಪಂಥಗಳು, ವಿವಿಧ ಜನಾಂಗಗಳು, ತಾತ್ವಿಕ-ಪಾಂಥಿಕ ವಾಗ್ವಾದಗಳು ಅಖಿಲ ಭಾರತ ಮತ್ತು ಅಖಿಲ ಕರ್ನಾಟಕ ನೆಲೆಯಲ್ಲಿ ಮುಖಾಮುಖಿಯಾಗಿರುವ ಸಾಧ್ಯಾಸಾಧ್ಯತೆಗಳನ್ನು ಪ್ರಖರವಾಗಿಯೂ ನಿಖರವಾಗಿಯೂ ಮಂಡಿಸಿದ್ದಾರೆ. ಹೀಗೆ, ಕನ್ನಡ ಸಂಸ್ಕೃತಿಯಾನ ಹಾಗೂ ಸಂಶೋಧನಯಾನದ ನಿರಂತರತೆಗೆ ದ್ಯೋತಕವೂ ತತ್ವಶಾಸ್ತ್ರಿಯವೂ ಆದ ಶಂ.ಬಾ. ಮಾರ್ಗವು ಆದರ್ಶಪ್ರಾಯವಾದುದು.

Downloads

Published

05.10.2023

How to Cite

SHAM. BA. JOSHI, & BYRAPPA M. (2023). ಕಂನಾಡು-ಕಂನುಡಿ ಆಕೃತಿ ಪಡೆದ ಬಗೆ. AKSHARASURYA, 2(11), 01–27. Retrieved from https://aksharasurya.com/index.php/latest/article/view/246

Issue

Section

ಹಿಂದಣ ಹೆಜ್ಜೆ. | TRODDEN PATH

Most read articles by the same author(s)