Table of Contents
Research Articles
ಕನ್ನಡ ಸಾಹಿತ್ಯದಲ್ಲಿ ದ. ರಾ. ಬೇಂದ್ರೆಯವರ ನಾಟಕ ಸಾಹಿತ್ಯ ಮತ್ತು ರಂಗಪ್ರಯೋಗ
01 to 05
ಕನ್ನಡ ಸಾಹಿತ್ಯದಲ್ಲಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ಮುಖ್ಯವಾಗಿ ನವೋದಯ ಯುಗದ ಶ್ರೇಷ್ಠ ಕವಿಯಾಗಿ, ವಿಮರ್ಶಕರಾಗಿ, ಅನುವಾದಕರಾಗಿ ಪ್ರಸಿದ್ಧರಾಗಿದ್ದರೂ ಸಹ ನಾಟಕ ಸಾಹಿತ್ಯದಲ್ಲಿಯೂ ತಮ್ಮದೇ ಆದಂತಹ ವಿಶಿಷ್ಟ ಕೊಡುಗೆಯನ್ನು ನೀಡಿದ್ದಾರೆ. ಅವರ ನಾಟಕಗಳಲ್ಲಿ ಕಾವ್ಯಾತ್ಮಕ ಭಾಷೆ, ತಾತ್ವಿಕಚಿಂತನೆ, ಜನಪದ ಸಂಸ್ಕೃತಿ, ಮಾನವೀಯ ಮೌಲ್ಯಗಳು ಹಾಗೂ ಸಾಮಾಜಿಕ ಪ್ರಜ್ಞೆಗಳನ್ನು ಒಳಗೊಂಡಿವೆ. ಬೇಂದ್ರೆಯವರ ನಾಟಕಗಳು ಕೇವಲ ಮನರಂಜನೆಯ ಉದ್ದೇಶವನ್ನು ಹೊಂದಿಲ್ಲದೆ, ಅವು ಮಾನವನ ಅಂತರಂಗ, ಬದುಕಿನ ಅರ್ಥ, ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ರಂಗಭಾಷೆಯ ಮೂಲಕ ಅಭಿವ್ಯಕ್ತಿಸುತ್ತವೆ. ಅವರು ರಚಿಸಿದ ನಾಟಕಗಳು ವಿಶೇಷವಾಗಿ ಸಾಯೋ ಆಟ, ಗೋಲ್, ತಿರುಕರ ಪಿಡುಗು, ಜಾತ್ರೆ, ಉದ್ದಾರ, ನಗೆಯ ಹೊಗೆ ಮುಂತಾದ ಕೃತಿಗಳು ಸಂಪ್ರದಾಯಬದ್ಧವಾದ ಪೌರಾಣಿಕ - ಐತಿಹಾಸಿಕ ನಾಟಕಗಳಿಗಿಂತಲೂ ಭಿನ್ನವಾಗಿ, ಆಂತರಿಕ ಸಂವೇದನೆ, ವ್ಯಂಗ್ಯ, ಸಮಾಜದ ಸಂಕೀರ್ಣತೆ ಮತ್ತು ರಂಗಭಾಷೆಯ ಹೊಸ ಸಾಧ್ಯತೆಗಳನ್ನು ಅನ್ವೇಷಿಸುತ್ತವೆ. ರಂಗಪ್ರಯೋಗದ ದೃಷ್ಟಿಯಿಂದ ಬೇಂದ್ರೆಯವರು ಜನಪದ ಸಂಗೀತ, ಸಂಕೇತಾತ್ಮಕ ವೇದಿಕೆ, ಮನೋವೈಜ್ಞಾನಿಕ ಪಾತ್ರಚಿತ್ರಣ ಮತ್ತು ಕಾವ್ಯ - ನಾಟಕದ ಸಮನ್ವಯವನ್ನು ಯಶಸ್ವಿಯಾಗಿ ಬಳಸಿದ್ದಾರೆ. ಈ ಲೇಖನದಲ್ಲಿ ಬೇಂದ್ರೆಯವರ ನಾಟಕ ಸಾಹಿತ್ಯದ ಸ್ವರೂಪ, ಅದರ ವೈಶಿಷ್ಟ್ಯಗಳು ಹಾಗೂ ಕನ್ನಡ ರಂಗಭೂಮಿಗೆ ಅವರು ನೀಡಿದ ಕೊಡುಗೆಯನ್ನು ವಿಶ್ಲೇಷಿಸಲಾಗಿದೆ.
ರಂಗಭೂಮಿ ಮತ್ತು ಚಲನಚಿತ್ರ: ಒಂದು ತುಲನಾತ್ಮಕ ಅಧ್ಯಯನ
06 to 14
ರಂಗಭೂಮಿ ಮತ್ತು ಚಲನಚಿತ್ರ ಮಾನವನ ಜೀವನದ ಭಾವನೆಗಳು, ಸಾಮಾಜಿಕ ಮೌಲ್ಯಗಳು, ಸಂಸ್ಕೃತಿ ಹಾಗೂ ಕಲಾತ್ಮಕ ಅಭಿವ್ಯಕ್ತಿಯನ್ನು ಜನರಿಗೆ ತಲುಪಿಸುವ ಎರಡು ಪ್ರಮುಖ ದೃಶ್ಯ ಮಾಧ್ಯಮಗಳಾಗಿವೆ. ಇವೆರಡರ ಮೂಲ ಉದ್ದೇಶ ಮನೋರಂಜನೆಯ ಜೊತೆಗೆ ಶಿಕ್ಷಣ, ಸಾಮಾಜಿಕ ಜಾಗೃತಿ ಹಾಗೂ ಸಂಸ್ಕೃತಿಯ ಪರಂಪರೆಯನ್ನು ಉಳಿಸಿ ಬೆಳೆಸುವುದಾಗಿದೆ. ರಂಗಭೂಮಿಯು ಪ್ರೇಕ್ಷಕರೊಂದಿಗೆ ನೇರ ಸಂವಹನದ ಮೂಲಕ ಕಲಾವಿದನ ಪ್ರತಿಭೆಯನ್ನು ಜೀವಂತವಾಗಿ ಅಭಿವ್ಯಕ್ತಿಸಿದರೆ, ಚಲನಚಿತ್ರವು ತಂತ್ರಜ್ಞಾನ, ಛಾಯಾಗ್ರಹಣ, ಸಂಪಾದನೆ ಮತ್ತು ಧ್ವನಿ ಸಂಯೋಜನೆಯ ನೆರವಿನಿಂದ ಕಥೆಯನ್ನು ಪರಿಣಾಮಕಾರಿಯಾಗಿ ವಿಶ್ವದಾದ್ಯಂತ ತಲುಪಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಸಂಶೋಧನಾ ಲೇಖನದಲ್ಲಿ ರಂಗಭೂಮಿ ಮತ್ತು ಚಲನಚಿತ್ರದ ಉಗಮ, ಬೆಳವಣಿಗೆ, ಕಲಾತ್ಮಕ ವೈಶಿಷ್ಟ್ಯಗಳು, ಸಾಮಾಜಿಕ ಹಾಗೂ ಸಾಂಸ್ಕೃತಿಕ ಪ್ರಭಾವ, ಶೈಕ್ಷಣಿಕ ಮಹತ್ವ ಮತ್ತು ಸಮಕಾಲೀನ ಸಮಾಜದಲ್ಲಿ ಅವುಗಳ ಪಾತ್ರವನ್ನು ತುಲನಾತ್ಮಕವಾಗಿ ವಿಶ್ಲೇಷಿಸಲಾಗಿದೆ. ಅಧ್ಯಯನವು ಗುಣಾತ್ಮಕ ಸಂಶೋಧನಾ ವಿಧಾನವನ್ನು ಅನುಸರಿಸಿದ್ದು, ಪುಸ್ತಕಗಳು, ಸಂಶೋಧನಾ ಲೇಖನಗಳು, ವಿಮರ್ಶಾತ್ಮಕ ಕೃತಿಗಳು ಮತ್ತು ವಿಶ್ವಾಸಾರ್ಹ ಸಾಹಿತ್ಯಕ ಮೂಲಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ. ಕನ್ನಡ ರಂಗಭೂಮಿ ಮತ್ತು ಕನ್ನಡ ಚಲನಚಿತ್ರದ ಬೆಳವಣಿಗೆಯನ್ನು ಈ ಅಧ್ಯಯನದಲ್ಲಿ ಪರಿಗಣಿಸಲಾಗಿದೆ.
ಅಧ್ಯಯನದ ಫಲಿತಾಂಶಗಳು ರಂಗಭೂಮಿಯು ನೇರ ಕಲಾನುಭವವನ್ನು ನೀಡುವ ಮಾಧ್ಯಮವಾಗಿದ್ದರೆ, ಚಲನಚಿತ್ರವು ವ್ಯಾಪಕ ಜನಸಂಪರ್ಕ ಮತ್ತು ತಾಂತ್ರಿಕ ವೈಶಿಷ್ಟ್ಯಗಳಿಂದ ಸಮಾಜದ ಮೇಲೆ ಹೆಚ್ಚಿನ ಪ್ರಭಾವ ಬೀರುವ ಮಾಧ್ಯಮವಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಆದಾಗ್ಯೂ ಇವೆರಡೂ ಪರಸ್ಪರ ಪೂರಕವಾಗಿದ್ದು, ಭಾರತೀಯ ಹಾಗೂ ಕನ್ನಡ ಸಂಸ್ಕೃತಿಯ ಸಂರಕ್ಷಣೆ ಮತ್ತು ಬೆಳವಣಿಗೆಯಲ್ಲಿ ಸಮಾನವಾಗಿ ಮಹತ್ವದ ಪಾತ್ರವನ್ನು ವಹಿಸುತ್ತವೆ.
ಆಧುನಿಕ ರಂಗಭೂಮಿಯ ಸವಾಲು ಮತ್ತು ಸಾಧ್ಯತೆಗಳು
15 to 20
ರಂಗಭೂಮಿಯು ಮಾನವ ನಾಗರಿಕತೆಯ ಅತ್ಯಂತ ಪ್ರಾಚೀನ ಕಲಾ ಮಾಧ್ಯಮಗಳಲ್ಲಿ ಒಂದು. ಸಮಾಜದ ಜೀವನಶೈಲಿ, ಸಂಸ್ಕೃತಿ, ರಾಜಕೀಯ, ಧಾರ್ಮಿಕ ನಂಬಿಕೆಗಳು ಹಾಗೂ ಸಾಂಸ್ಕೃತಿಕ ಬೆಳವಣಿಗೆಗಳು ರಂಗಭೂಮಿಯ ಸ್ವರೂಪವನ್ನು ನಿರಂತರವಾಗಿ ರೂಪಿಸುತ್ತಾ ಬಂದಿವೆ. ಇಪ್ಪತ್ತೊಂದನೇ ಶತಮಾನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ರಂಗಭೂಮಿಯು ತನ್ನ ಸಾಂಪ್ರದಾಯಿಕ ಚೌಕಟ್ಟಿನಿಂದ ಹೊರಬಂದು ಹೊಸ ಆಯಾಮಗಳನ್ನು ಅಳವಡಿಸಿಕೊಂಡಿದೆ. ಬೆಳಕು, ಧ್ವನಿ, ಡಿಜಿಟಲ್ ಪ್ರೊಜೆಕ್ಷನ್, ಮಲ್ಟಿಮೀಡಿಯಾ, ಸಾಮಾಜಿಕ ಜಾಲತಾಣಗಳು, ಆನ್‌ಲೈನ್ ಪ್ರದರ್ಶನಗಳು ಆಧುನಿಕ ರಂಗಭೂಮಿಯ ಪ್ರಮುಖ ಲಕ್ಷಣಗಳಾಗಿವೆ. ಈ ಲೇಖನವು ರಂಗಭೂಮಿಯಲ್ಲಿನ ಆಧುನಿಕ ಬದಲಾವಣೆಗಳ ಬಗ್ಗೆ ಬೆಳಕು ಚೆಲ್ಲುತ್ತದೆ.
ಕನ್ನಡ ಪ್ರಮುಖ ನಾಟಕಕಾರರು ಮತ್ತು ಅವರ ಕೊಡುಗೆ
21 to 27
ಕನ್ನಡ ಸಾರಸ್ವತ ಲೋಕದಲ್ಲಿ ನಾಟಕ ಕಲೆಯು ಸಮಾಜದ ವಾಸ್ತವಿಕ ಬದುಕನ್ನು ಪ್ರತಿಬಿಂಬಿಸುವ ಜೀವಂತ ಮಾಧ್ಯಮವಾಗಿದೆ. ವಿಜಯನಗರ ಸಾಮ್ರಾಜ್ಯ, ಕೆಳದಿ ಹಾಗೂ ಮೈಸೂರು ಅರಸರ ಪೋಷಣೆಯಿಂದ ಬೆಳೆದುಬಂದ ಕನ್ನಡ ರಂಗಭೂಮಿಗೆ ತನ್ನದೇ ಆದ ಭವ್ಯ ಇತಿಹಾಸವಿದೆ. ಹತ್ತೊಂಬತ್ತನೇ ಶತಮಾನದ ಅಂತ್ಯದ ವೇಳೆಗೆ ವೃತ್ತಿಪರ ನಾಟಕ ಮಂಡಳಿಗಳು ಸ್ಥಾಪನೆಗೊಂಡು ರಂಗಭೂಮಿಗೆ ಹೊಸ ಆಯಾಮ ಒದಗಿಸಿದವು. ಈ ವಿಕಾಸದ ಹಾದಿಯಲ್ಲಿ ನಾಟ್ಯಾಚಾರ್ಯ ಗರುಡ ಸದಾಶಿವರಾಯರ ಸಾಧನೆ ಅತಿಮುಖ್ಯವಾದದ್ದು. ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡು ಅನೇಕ ಕಷ್ಟಗಳನ್ನು ಎದುರಿಸಿದರೂ, ಬಹುಭಾಷಾ ಪಾಂಡಿತ್ಯ ಹಾಗೂ ರಾಷ್ಟ್ರೀಯತೆಯ ಪ್ರೇರಣೆಯಿಂದ ಅವರು ಶ್ರೇಷ್ಠ ರಂಗಕರ್ಮಿಯಾಗಿ ರೂಪುಗೊಂಡರು. ಸ್ವಂತ ನಾಟಕ ಕಂಪನಿಯನ್ನು ಕಟ್ಟಿ, ಐವತ್ತಕ್ಕೂ ಹೆಚ್ಚು ನಾಟಕಗಳನ್ನು ರಚಿಸಿ, ನಿರ್ದೇಶಿಸಿ, ಮುಖ್ಯಭೂಮಿಕೆಯಲ್ಲಿ ಅಭಿನಯಿಸುವ ಮೂಲಕ ಕನ್ನಡ ವೃತ್ತಿ ರಂಗಭೂಮಿಯನ್ನು ಅತ್ಯಂತ ಶ್ರೀಮಂತಗೊಳಿಸಿದರು. ಕೇವಲ ಮನರಂಜನೆಯಾಗಿರದೆ, ಜನಶಿಕ್ಷಣ ಹಾಗೂ ಸಾಮಾಜಿಕ ಜಾಗೃತಿಯ ಸಾಧನವಾಗಿ ನಾಟಕವನ್ನು ಬೆಳೆಸಿದ ಗರುಡರ ಬದುಕು ಮತ್ತು ಕಲೆಯ ಸಮಗ್ರ ನೋಟವನ್ನು ಇಲ್ಲಿ ಕಟ್ಟಿಕೊಡಲಾಗಿದೆ.
ಶಿವರಾಮ ಕಾರಂತರ ರಂಗಪ್ರಯೋಗಗಳು
28 to 33
ಕನ್ನಡ ಸಾಹಿತ್ಯ ಮತ್ತು ರಂಗಭೂಮಿಯ ಕ್ಷೇತ್ರದಲ್ಲಿ ವಿಶಿಷ್ಟವಾದ ಛಾಪು ಮೂಡಿಸಿದ ಶಿವರಾಮ ಕಾರಂತರು ಬಹುಮುಖ ಪ್ರತಿಭೆಯ ಸೃಜನಶೀಲ ವ್ಯಕ್ತಿತ್ವದವರು. ಕಾದಂಬರಿ, ನಾಟಕ, ಯಕ್ಷಗಾನ, ಚಿತ್ರಕಲೆ, ಸಂಗೀತ, ನೃತ್ಯ ಹಾಗೂ ರಂಗಭೂಮಿ ಮೊದಲಾದ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಪ್ರಯೋಗಶೀಲತೆಯನ್ನು ಮೆರೆದವರು. ಕನ್ನಡ ರಂಗಭೂಮಿಯ ಆಧುನಿಕ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ ಇವರ ರಂಗಚಿಂತನೆ ಕೇವಲ ನಾಟಕ ರಚನೆಗೆ ಸೀಮಿತವಾಗಿರದೆ, ಗೀತನಾಟಕ, ನೃತ್ಯ ರೂಪಕ ಮತ್ತು ಯಕ್ಷಗಾನದ ಬಗ್ಗೆ ಒಲವು ತೋರಿದವರು. ಈ ಸಂಶೋಧನಾ ಪ್ರಬಂದವು ಶಿವರಾಮ ಕಾರಂತರ ರಂಗಭೂಮಿಯ ಕುರಿತ ಚಿಂತನೆ ಮತ್ತು ಅವರ ವಿವಿಧ ರಂಗಪ್ರಯೋಗಗಳನ್ನು ಕೇಂದ್ರವಾಗಿರಿಸಿಕೊಂಡಿದೆ. ಸಾಂಪ್ರದಾಯಿಕ ರಂಗಭೂಮಿಯ ಮಿತಿಗಳನ್ನು ಮೀರಿ ಹೊಸ ರಂಗಭಾಷೆಯನ್ನು ರೂಪಿಸುವಲ್ಲಿ ಕಾರಂತರು ಕೈಗೊಂಡ ಪ್ರಯತ್ನಗಳನ್ನು ಇಲ್ಲಿ ವಿಶ್ಲೇಷಿಸಲಾಗುವುದು. ರಂಗಭೂಮಿಯು ಜನಸಾಮಾನ್ಯರೊಂದಿಗೆ ನೇರ ಸಂವಹನ ನಡೆಸುವ ಜೀವಂತ ಕಲಾಮಾಧ್ಯಮವಾಗಬೇಕು ಎಂಬ ಕಾರಂತರ ನಿಲುವು ಅವರ ರಂಗಪ್ರಯೋಗಗಳ ಪ್ರಮುಖ ಆಶಯವಾಗಿದೆ.
ಕನ್ನಡ ರಂಗಭೂಮಿಯ ಪರಂಪರೆ ಮತ್ತು ಪ್ರಸ್ತುತ ಸ್ಥಿತಿ
34 to 41
ಪ್ರಾಚೀನ ಕಾಲದಿಂದಲೂ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ನಾಟಕ ಕಲೆ ಹಾಗೂ ಕನ್ನಡ ರಂಗಭೂಮಿಯ ಉಗಮ, ವಿಕಾಸ ಮತ್ತು ಇಂದಿನ ಸವಾಲುಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಜನಪದ, ವೃತ್ತಿ ಮತ್ತು ಹವ್ಯಾಸಿ ಎಂದು ಮೂರು ವಿಭಾಗಗಳಲ್ಲಿ ಬೆಳೆದುಬಂದ ರಂಗಭೂಮಿಯು ಕೇವಲ ಮನರಂಜನೆಯ ಮಾಧ್ಯಮವಾಗಿರದೆ ಸಾಮಾಜಿಕ ಜಾಗೃತಿ ಮೂಡಿಸುವ ವೇದಿಕೆಯಾಗಿದೆ. ಪ್ರಸ್ತುತ ಡಿಜಿಟಲ್ ಯುಗದ ಆಕರ್ಷಣೆಗಳಿಂದಾಗಿ ನಾಟಕ ಕ್ಷೇತ್ರವು ಪ್ರೇಕ್ಷಕರು ಮತ್ತು ಕಲಾವಿದರ ಕೊರತೆಯನ್ನು ಎದುರಿಸುತ್ತಿದೆ. ಈ ಬಿಕ್ಕಟ್ಟನ್ನು ನಿವಾರಿಸಲು ಶಾಲಾ-ಕಾಲೇಜು ಮಟ್ಟದಲ್ಲಿ ನಾಟಕ ಚಟುವಟಿಕೆಗಳಿಗೆ ಪ್ರೋತ್ಸಾಹ, ಗ್ರಾಮ ಮಟ್ಟದಲ್ಲಿ ರಂಗಮಂದಿರಗಳ ನಿರ್ಮಾಣ ಹಾಗೂ ಸರ್ಕಾರದ ಆರ್ಥಿಕ ಬೆಂಬಲ ಅತ್ಯಗತ್ಯ. ನಾಟಕವನ್ನು ಕೇವಲ ಕಲೆಯಾಗಿ ನೋಡದೆ, ಸ್ಕ್ರಿಪ್ಟ್ ರಚನೆ, ಬೆಳಕು ಸಂಯೋಜನೆ ಮತ್ತು ನಿರ್ದೇಶನದಂತಹ ವೃತ್ತಿಪರ ಕೌಶಲಾಧಾರಿತ ಉದ್ಯೋಗವಾಗಿ ಯುವಜನತೆ ಸ್ವೀಕರಿಸಿದರೆ ಕನ್ನಡ ರಂಗಭೂಮಿಯ ಭವಿಷ್ಯ ಮತ್ತಷ್ಟು ಉಜ್ವಲವಾಗಲಿದೆ ಎಂಬ ಆಶಯವನ್ನು ವ್ಯಕ್ತಪಡಿಸಲಾಗಿದೆ.
ಕನ್ನಡ ರಂಗಭೂಮಿ ಮತ್ತು ಭಕ್ತಿ ಪರಂಪರೆ
42 to 48
ಕನ್ನಡ ರಂಗಭೂಮಿಯನ್ನು ಪ್ರಭಾವಿಸಿದ ಪ್ರಮುಖ ವಿಚಾರಗಳಲ್ಲಿ ಭಕ್ತಿ ಚಳುವಳಿ ಅತ್ಯಂತ ಮಹತ್ವದ್ದು ಎಂದರೆ ತಪ್ಪಾಗಲಾರದು. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕೂಡ 12ನೇ ಶತಮಾನದ ನಂತರ ಮೂಡಿಬಂದ ಭಕ್ತಿ ಚಳುವಳಿ ಜನಸಾಮಾನ್ಯರನ್ನು ತನ್ನೊಳಗೆ ಸೇರಿಸಿಕೊಂಡು ಮುಂದುವರಿದ ಬಗೆ ಅತ್ಯದ್ಭುತವಾದುದು. 12ನೇ ಶತಮಾನದ ವಚನ ಚಳುವಳಿ ಮತ್ತು 15-16ನೇ ಶತಮಾನದ ಹರಿದಾಸ ಸಾಹಿತ್ಯವು ಕನ್ನಡ ಸಾಹಿತ್ಯವನ್ನು ಪಂಡಿತರ ಆಸ್ಥಾನದಿಂದ ಜನಸಾಮಾನ್ಯರ ಅಂಗಳಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದವು. ವಚನ ಚಳುವಳಿ ಮತ್ತು ದಾಸ ಸಾಹಿತ್ಯವು ಸಮಾಜದಲ್ಲಿ ಬಿತ್ತಿದ ಭಕ್ತಿ, ಸಮಾನತೆ ಮತ್ತು ಕಾಯಕ ತತ್ತ್ವಗಳು ಕನ್ನಡ ರಂಗಭೂಮಿಯ ಪ್ರಮುಖ ಕಥಾವಸ್ತುಗಳಾಗಿ ರೂಪುಗೊಂಡಿವೆ. ಪ್ರಾಚೀನ ಕಾಲದಿಂದಲೂ ಜನಸಾಮಾನ್ಯರಿಗೆ ಭಕ್ತಿಯ ಸಂದೇಶವನ್ನು ಮತ್ತು ನೈತಿಕ ಮೌಲ್ಯಗಳನ್ನು ತಲುಪಿಸಲು ರಂಗಕಲೆಗಳೇ ಅತ್ಯಂತ ಪ್ರಬಲ ಮಾಧ್ಯಮಗಳಾಗಿದ್ದವು.
ರಂಗಭೂಮಿಯ ಸಂಗೀತ ಮತ್ತು ಅಭಿನಯದ ಮೇಲೆ ಭಕ್ತಿ ಸಾಹಿತ್ಯದ ಪ್ರಭಾವ ದಟ್ಟವಾಗಿದೆ. ದಾಸರ ಕೀರ್ತನೆಗಳು ವೃತ್ತಿ ರಂಗಭೂಮಿಯ ರಂಗ ಗೀತೆಗಳಿಗೆ ಭದ್ರ ಬುನಾದಿಯನ್ನು ಒದಗಿಸಿದರೆ, ವಚನಗಳ ಸಂವಾದಾತ್ಮಕ ಶೈಲಿಯು ನಾಟಕದ ರಚನೆಗೆ ಸ್ಪೂರ್ತಿಯಾಯಿತು. ಕರ್ನಾಟಕದ ವಿಶಿಷ್ಟ ಜಾನಪದ ರಂಗಕಲೆಗಳಾದ ಯಕ್ಷಗಾನ, ಬಯಲಾಟ, ಸಣ್ಣಾಟ, ಮತ್ತು ದೊಡ್ಡಾಟಗಳು ಬಹುಪಾಲು ಪೌರಾಣಿಕ ಹಾಗೂ ಭಕ್ತಿ ಆಧಾರಿತ ಕಥೆಗಳನ್ನೇ ಅವಲಂಬಿಸಿವೆ. ಹರಿಕಥೆ ಮತ್ತು ತಾಳಮದ್ದಲೆಗಂತಹ ಕಲೆಗಳು ರಂಗಭೂಮಿಯ ಆರಂಭಿಕ ಸ್ವರೂಪಗಳಾಗಿದ್ದು ಭಕ್ತಿಪಂಥದ ಮೌಲ್ಯಗಳನ್ನು ಜನಮಾನಸದಲ್ಲಿ ಬಿತ್ತಿವೆ.
ವೃತ್ತಿ ರಂಗಭೂಮಿಯ ಯುಗದಲ್ಲಿ ಕೂಡ ಬಸವಣ್ಣ, ಅಕ್ಕಮಹಾದೇವಿ, ಭಕ್ತ ಪ್ರಹ್ಲಾದ, ಭಕ್ತ ಕುಂಬಾರ, ಮತ್ತು ದಾಸವರೇಣ್ಯರ ಜೀವನ ಚರಿತ್ರೆಗಳು ಯಶಸ್ವಿಯಾಗಿ ಪ್ರದರ್ಶನಗೊಂಡವು. ಆಧುನಿಕ ರಂಗಭೂಮಿಯು ಹೊಸ ದೃಷ್ಟಿಕೋನದಿಂದ ಭಕ್ತಿಪರಂಪರೆಯನ್ನು ಪುನರ್ ನಿರ್ಮಿಸಿವೆ. ಗಿರೀಶ್ ಕಾರ್ನಾಡರ ತಲೆದಂಡದಂತಹ ನಾಟಕಗಳು ಶರಣರ ಕಾಲದ ಸಾಮಾಜಿಕ ಕ್ರಾಂತಿಯನ್ನು ಸಮಕಾಲೀನ ದೃಷ್ಟಿಕೋನದಿಂದ ರಂಗದ ಮೇಲೆ ತಂದಿವೆ. ಯಕ್ಷಗಾನವು ಭಕ್ತಿ ಪರಂಪರೆಗೆ ನೀಡಿದ ಕೊಡುಗೆ ಅನನ್ಯವಾದುದು. ಮಹಾವಿಷ್ಣುವಿನ ದಶಾವತಾರಗಳು ಯಕ್ಷಗಾನದಲ್ಲಿ ಪ್ರದರ್ಶನಗೊಂಡು ಜನ ಮಾನಸದಲ್ಲಿ ನೆಲೆಸಿತು. ಆಧುನಿಕ ಕಾಲದಲ್ಲಿ ವಿವಿಧ ಕ್ಷೇತ್ರಗಳಿಂದ ನಡೆಸಲ್ಪಡುವ ವಿವಿಧ ಯಕ್ಷಗಾನ ಮೇಳಗಳು ರಾಮಾಯಣ, ಮಹಾಭಾರತದ ಕಥೆಗಳನ್ನಾಧರಿಸಿದ ಯಕ್ಷಗಾನಗಳನ್ನೇ ಪ್ರದರ್ಶಿಸುತ್ತವೆ. ಕರಾವಳಿ ಕರ್ನಾಟಕದ ಅತ್ಯಂತ ಪ್ರಸಿದ್ಧ ಜಾನಪದ ಕಲೆಯಾದ ‘ಭೂತಾರಾಧನೆ’ಯು ಜನಮಾನಸದಲ್ಲಿ ದೈವಭಕ್ತಿಯನ್ನು ನೆಲೆಗೊಳಿಸುವಲ್ಲಿ ಯಶಸ್ವಿಯಾಗಿದೆ.
ಒಟ್ಟಾರೆಯಾಗಿ ಭಕ್ತಿಪರಂಪರೆಯು ಕನ್ನಡ ರಂಗಭೂಮಿಗೆ ಕೇವಲ ಧಾರ್ಮಿಕ ಚೌಕಟ್ಟನ್ನು ಮಾತ್ರ ನೀಡದೆ, ಮಾನವೀಯತೆ, ಸಾಮಾಜಿಕ ಕಳಕಳಿ, ಮತ್ತು ಸಾಂಸ್ಕೃತಿಕ ಜಾಗೃತಿಯನ್ನು ಮೂಡಿಸುವ ಅದ್ಭುತ ಶಕ್ತಿಯನ್ನು ಒದಗಿಸಿದೆ ಎಂದರೆ ತಪ್ಪಾಗಲಾರದು.
ರವೀಂದ್ರನಾಥ ಠಾಕೂರರ ನಾಟಕಗಳಲ್ಲಿ ಅಸ್ಪೃಶ್ಯತೆಯನ್ನು ದಾಟುವ ದಾರಿ
49 to 56
ಠಾಕೂರರ ನಾಟಕಗಳಲ್ಲಿ ಜಾತಿಯ ಪೆಡಂಭೂತ ಮನುಷ್ಯನ ಬೆಳವಣಿಗೆಯನ್ನು ಕುಂಠಿಸುತ್ತದೆ ಎಂದು ಅವರು ಪ್ರತಿಪಾದಿಸುತ್ತಾರೆ. ಅಸ್ಪೃಶ್ಯತೆ ಮಾನವಸಮಾಜಕ್ಕೆ ಅಂಟಿದ ದೊಡ್ಡ ರೋಗವೆಂದು, ಅದನ್ನು ಹೋಗಲಾಡಿಸದೆ ವಿಶ್ವಮಾನವರಾಗಲು ಸಾಧ್ಯವಿಲ್ಲವೆಂದು ಅವರು ನಂಬಿದ್ದರು. ಅವರ ಸಾಹಿತ್ಯದಲ್ಲಿ ಅದರಲ್ಲೂ ನಾಟಕಗಳಲ್ಲಿ ಈ ಅಂಶ ಪ್ರಬಲವಾಗಿರುವುದನ್ನು ಗುರುತಿಸಬಹುದು. ಅಸ್ಪೃಶ್ಯತೆಗಿಂತ ಕ್ರೂರವಾದುದು ಬಣ್ಣದಿಂದ ವ್ಯಕ್ತಿಯನ್ನು ಅಳೆಯುವುದು. ವರ್ಣವ್ಯವಸ್ಥೆ ಮನುಷ್ಯ ನಿರ್ಮಾಣದಲ್ಲಿ ಪ್ರಕೃತಿ ದತ್ತವಾದುದು ಎಂಬುದನ್ನು ಅರಿಯದ ಕೆಲವು ವ್ಯಕ್ತಿಗಳು ಮನುಷ್ಯರನ್ನು ಪ್ರಾಣಿಗಿಂತ ಕೀಳಾಗಿ ನೋಡುತ್ತಿದ್ದರು. ಗಾಂಧೀಜಿಯವರನ್ನು ಮೊದಲು ಕಾಡಿದ್ದೇ ವರ್ಣವ್ಯವಸ್ಥೆಯ ಕ್ರೂರಪದ್ಧತಿಯ ಕರಾಳಮುಖ. ಈ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದ ದಾರ್ಶನಿಕ ವ್ಯಕ್ತಿತ್ವದ ಠಾಕೂರರು ಗಾಂಧೀಜಿಯವರಂತೆ ಇಂತಹ ವ್ಯವಸ್ಥೆಯನ್ನು ಖಂಡಿಸುವ ನಿಟ್ಟಿನಲ್ಲಿ ತಮ್ಮ ಬರವಣಿಗೆಯನ್ನು ಮುಂದುವರಿಸಿದರು. ಅದರ ಫಲವಾಗಿಯೇ ಕೆಲವು ನಾಟಕಗಳು ಬಂದವು.
ರಾಜಕೀಯ ಸಮಸ್ಯೆ ಭಾರತದ ನಿಜವಾದ ಸಮಸ್ಯೆಯಲ್ಲ ಎಂದು ಅರಿತ ಠಾಕೂರರು ಸಾಮಾಜಿಕವಾದ ಜಾತಿಯ ಸಮಸ್ಯೆಯು ಭಾರತದ ನಿಜವಾದ ಸಮಸ್ಯೆ ಎಂದು ತಿಳಿದು ನಾಟಕಗಳು ಜಾತಿ, ಅಸ್ಪೃಶ್ಯತೆಯಂತಹ ಸಮಸ್ಯೆಗಳನ್ನು ತಮ್ಮ ಬಹುತೇಕ ನಾಟಕದ ವಸ್ತುವನ್ನಾಗಿಸಿಕೊಂಡಿರುವುದನ್ನು ಕಾಣಬಹುದಾಗಿದೆ. ಅಸ್ಪೃಶ್ಯತೆ ಜಾತಿವ್ಯವಸ್ಥೆ ಸೃಷ್ಟಿಸಿದ ಮತ್ತೊಂದು ಸಾಮಾಜಿಕ ಸಮಸ್ಯೆ. ಠಾಕೂರರು ನಾಟಕಗಳಲ್ಲಿ ಈ ಸಮಸ್ಯೆಗೆ ಸ್ಪಂದಿಸುವ ರೀತಿ ಬೆರಗು ಮೂಡಿಸುತ್ತದೆ. ವೈದಿಕಧರ್ಮ ಉಚ್ಚ್ರಾಯ ಸ್ಥಿತಿಯಲ್ಲಿದ್ದ ಹೊತ್ತಿನಲ್ಲಿ ಠಾಕೂರರು ಅನೇಕ ಪಾತ್ರಗಳ ಮೂಲಕ ಅಸ್ಪೃಶ್ಯತೆ ಆಚರಣೆಯನ್ನು ಧೈರ್ಯವಾಗಿ ಪ್ರಶ್ನಿಸುತ್ತಾರೆ.
ಕನ್ನಡ ರಂಗಭೂಮಿ - ಪರಂಪರೆ ಮತ್ತು ಪ್ರಸ್ತುತ ಸ್ಥಿತಿ
57 to 65
ಜಗತ್ತಿನ ಅತ್ಯಂತ ಪ್ರಾಚೀನ ಕಲೆಗಳಲ್ಲಿ ರಂಗ ಪರಂಪರೆ ಪ್ರಮುಖವಾದುದು. ಎಲ್ಲಾ ದೇಶಗಳಲ್ಲಿ ನಾಟಕ ಹುಟ್ಟಿದ್ದು ದೇವತೆಗಳ ಆನಂದಕ್ಕಾಗಿ ಅಥವಾ ಭೂತ ಬೇತಾಳಗಳನ್ನು ತೃಪ್ತಿಪಡಿಸುವುದಕ್ಕಾಗಿ ನಡೆಯುವ ಆಚರಣೆಗಳಿಂದ ರಂಗಭೂಮಿ ಜನ್ಮ ತಾಳಿದೆ ಎನ್ನಬಹುದು. ಒಟ್ಟಿನಲ್ಲಿ ಯಾವುದೇ ದೇಶದ ರಂಗಭೂಮಿ ಅಲ್ಲಿನ ಧಾರ್ಮಿಕ ನಂಬಿಕೆಯ ಹಿನ್ನೆಲೆಯಲ್ಲಿ ಬೆಳೆದು ಬಂದಿದೆ ಎಂಬುವುದು ಸತ್ಯವಾದ ಮಾತು. ನೃತ್ಯ, ಸಂಗೀತ, ಶಿಲ್ಪ ಮುಂತಾದ ಸಾಂಸ್ಕೃತಿಕ ಕಲೆಗಳು ನಾಟಕದ ಪ್ರಮುಖವಾದ ಅಂಗಗಳಾಗಿವೆ. ಕನ್ನಡ ರಂಗಭೂಮಿಯು ಕರ್ನಾಟಕದ ಸಾಂಸ್ಕೃತಿಕ ಪರಂಪರೆಯ ಪ್ರಮುಖ ಅಂಗವಾಗಿದೆ. ಜಾನಪದ ರಂಗರೂಪಗಳಿಂದ ಆರಂಭಗೊಂಡು ಆಧುನಿಕ ಪ್ರಯೋಗಾತ್ಮಕ ನಾಟಕಗಳವರೆಗೆ ಕನ್ನಡ ರಂಗಭೂಮಿ ನಿರಂತರವಾಗಿ ಬೆಳವಣಿಗೆಯನ್ನು ಕಂಡಿದೆ. ಸಮಾಜದ ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಹಾಗೂ ನೈತಿಕ ಬದಲಾವಣೆಗಳನ್ನು ಪ್ರತಿಬಿಂಬಿಸುವ ಮಾಧ್ಯಮವಾಗಿ ಇದು ಕಾರ್ಯನಿರ್ವಹಿಸಿದೆ. ಈ ಲೇಖನದಲ್ಲಿ ಕನ್ನಡ ರಂಗಭೂಮಿಯ ಐತಿಹಾಸಿಕ ಹಿನ್ನೆಲೆ, ಬೆಳವಣಿಗೆ, ಪ್ರಮುಖ ನಾಟಕಕಾರರು, ಸಾಮಾಜಿಕ ಕೊಡುಗೆ, ಪ್ರಸ್ತುತ ಸ್ಥಿತಿ, ಎದುರಿಸುತ್ತಿರುವ ಸವಾಲುಗಳು ಹಾಗೂ ಭವಿಷ್ಯದ ಸಾಧ್ಯತೆಗಳನ್ನು ವಿಶ್ಲೇಷಿಸಲಾಗಿದೆ. ರಂಗಭೂಮಿಯು ಕೇವಲ ಮನರಂಜನೆಯ ಮಾಧ್ಯಮವಲ್ಲ; ಅದು ಸಮಾಜದ ಕನ್ನಡಿಯಾಗಿದೆ. ಜನರ ಭಾವನೆಗಳು, ಬದುಕಿನ ಮೌಲ್ಯಗಳು, ರಾಜಕೀಯ ಬೆಳವಣಿಗೆಗಳು ಹಾಗೂ ಸಾಮಾಜಿಕ ಸಮಸ್ಯೆಗಳನ್ನು ನಾಟಕದ ಮೂಲಕ ಜನರಿಗೆ ತಲುಪಿಸುವ ಶಕ್ತಿಯುತ ಕಲಾ ಪ್ರಕಾರವಾಗಿದೆ. ಕನ್ನಡ ರಂಗಭೂಮಿಯ ಇತಿಹಾಸವು ಸಾವಿರಾರು ವರ್ಷಗಳ ಸಾಂಸ್ಕೃತಿಕ ಪರಂಪರೆಯೊಂದಿಗೆ ಬೆಸೆದುಕೊಂಡಿದೆ. ಜಾನಪದ ಕಲೆಗಳಿಂದ ಆರಂಭಗೊಂಡ ಈ ಪಯಣವು ಇಂದಿನ ಆಧುನಿಕ ರಂಗಭೂಮಿಯವರೆಗೆ ವಿಸ್ತರಿಸಿದೆ. ಕರ್ನಾಟಕದಲ್ಲಿ ರಂಗಭೂಮಿಯ ಬೇರುಗಳು ಜಾನಪದ ಕಲಾ ಸಂಪ್ರದಾಯಗಳಲ್ಲಿ ಕಂಡುಬರುತ್ತವೆ. ಯಕ್ಷಗಾನ, ತಾಳಮದ್ದಲೆ, ಗೊಂಬೆಯಾಟ, ಡೊಳ್ಳು ಕುಣಿತ, ವೀರಗಾಸೆ ಮೊದಲಾದ ಕಲಾರೂಪಗಳು ಕನ್ನಡ ರಂಗಭೂಮಿಯ ಮೂಲಾಧಾರಗಳಾಗಿವೆ. ಕನ್ನಡ ನಾಡಿನಲ್ಲಿ ಹಿಂದಿನಿಂದಲೂ ವಿಶಿಷ್ಟವಾಗಿ ಪ್ರಚಾರದಲ್ಲಿರುವ ತಾಳಮದ್ದಲೆ, ಗೊಂದಲಿಗರ ಪ್ರಸಂಗಗಳು, ಕಂಸಾಳೆ ಅಂತಹ ಕಲಾ ರೂಪಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಪೌರಾಣಿಕ ಕಥಾ ಪ್ರಸಂಗಗಳನ್ನು ಹಬ್ಬ ಹರಿದಿನಗಳಲ್ಲಿ, ಜಾತ್ರೆ ಉತ್ಸವಗಳಲ್ಲಿ ಇಂದಿಗೂ ನಮ್ಮ ಜನಪದರು ಆರಾಧಿಸುವ ಸಂಭ್ರಮಾಚರಣೆಯಲ್ಲಿ ಭಾಗಿಯಾಗುವ ಪ್ರಸಂಗಗಳನ್ನು ನಾವು ಕಾಣಬಹುದಾಗಿದೆ. ಇವುಗಳು ಕೇವಲ ಕಥನ ಕಲೆಗಳಾಗಿರದೆ ಪ್ರದರ್ಶನ ಕಲೆಗಳಾದ ಈ ಬಗೆಯ ತಂತ್ರ ಕಲಾ ರೂಪಗಳಿಂದ ಪ್ರಾಚೀನ ಕನ್ನಡ ರಂಗಭೂಮಿ ಪ್ರೇರಣೆ, ಪುಷ್ಟಿಯನ್ನು ಹೊಂದಿದೆ. ರಂಗಭೂಮಿ ಹಲವು ಕಲೆಗಳ ಸಂಗಮ - ನೃತ್ಯ, ಸಂಗೀತ, ಸಾಹಿತ್ಯ, ಅಭಿನಯಗಳು ಮೇಳೈಸಿದ ದೃಶ್ಯ ಕಾವ್ಯ. ಕಾಳಿದಾಸನು ಹೇಳುವಂತೆ “ಕಾವ್ಯೇಷು ನಾಟಕಂ ರಮ್ಯಂ” ಎಂಬ ಮಾತು ಗಮನಿಸಬಹುದು. ಮನರಂಜನೆ, ಜ್ಞಾನ ನೀಡುವುದು ರಂಗಭೂಮಿಯ ಪ್ರಯೋಜನಗಳಾಗಿವೆ. ಜಗತ್ತಿನ ಅತ್ಯಂತ ಪ್ರಾಚೀನ ಕಲೆಗಳಲ್ಲಿ ನಾಟಕ ಒಂದಾಗಿದೆ. ಈ ನಾಟಕಕ್ಕೆ ತನ್ನದೇ ಆದ ಪರಂಪರೆಯಿದೆ, ಇದನ್ನೇ ವಿಶಾಲಾರ್ಥದಲ್ಲಿ ರಂಗ ಪ್ರಪಂಚ ಅಥವಾ ರಂಗಭೂಮಿ ಎಂದು ಕರೆಯಲಾಗುತ್ತದೆ.
ಯಕ್ಷಗಾನ ಮತ್ತು ಕನ್ನಡ ರಂಗಭೂಮಿಯ ಸಂಬಂಧ: ವರ್ತಮಾನದ ಬೆಳಕಿನಲ್ಲಿ ಮರುಚಿಂತನೆ
66 to 75
ಈ ಲೇಖನವು ಕನ್ನಡ ರಂಗಭೂಮಿ ಮತ್ತು ಯಕ್ಷಗಾನದ ಸಂಬಂಧ ಸ್ವರೂಪಗಳ ಬಗ್ಗೆ ಮತ್ತು ಈ ಎರಡು ರಂಗಪ್ರಕಾರಗಳಲ್ಲಿ ಇಂದು ಕಾಣಿಸುತ್ತಿರುವ ಪಲ್ಲಟವನ್ನು ವಿಶ್ಲೇಷಿಸುವ ಪ್ರಯತ್ನ ಮಾಡುತ್ತದೆ. ರಂಗಭೀಷ್ಮರೆಂದೆನಿಸಿದ ಬಿ.ವಿ.ಕಾರಂತರು ಮತ್ತು ಗಿರೀಶ್ ಕಾರ್ನಾಡರಂತಹ ರಂಗಚಿಂತಕರು ಯಕ್ಷಗಾನದ ತೆರೆ, ಆಂಗಿಕ ಚಲನೆ ಹಾಗೂ ಭಾಗವತರ ನಿರೂಪಣಾ ತಂತ್ರಗಳನ್ನು ನಾಟಕಗಳಿಗೆ ಅಳವಡಿಸಿಕೊಂಡರೆ, ಆಧುನಿಕ ರಂಗಭೂಮಿಯ ವೈಚಾರಿಕತೆಯು ಯಕ್ಷಗಾನವನ್ನು ಬರೀ ಧಾರ್ಮಿಕ ಚೌಕಟ್ಟಿನಿಂದ ಹೊರತಂದು ಮಾನವೀಯ-ರಾಜಕೀಯ ವಿಶ್ಲೇಷಣೆಯ ಮಟ್ಟಕ್ಕೇರಿಸಿತು ಎಂಬುದನ್ನು ಈ ಲೇಖನ ಪುರಾವೆ ಸಹಿತ ವಿಶದೀಕರಿಸುತ್ತದೆ.
ಯಕ್ಷಗಾನದ ಇತ್ತೀಚಿನ ಬೆಳವಣಿಗೆಗಳಲ್ಲಿ ಕಾಲಮಿತಿಯ ಪ್ರದರ್ಶನಗಳು, ಮಹಿಳಾ ಮೇಳಗಳ ಸಕ್ರಿಯತೆ, ಯುವಪೀಳಿಗೆಯ ಭಾರಿ ಭಾಗವಹಿಸುವಿಕೆ ಎದ್ದು ಕಾಣುವ ಅಂಶಗಳು. ಹಾಗೆಯೇ ಮ್ಯಾಕ್‌ಬೆತ್, ಗೃಹಭಂಗ, ನಿರುತ್ತರಾಯಣಗಳಂತಹ ವಿನೂತನ ಪ್ರಯೋಗಗಳು ಯಕ್ಷಗಾನಕ್ಕೆ ರಂಗಭೂಮಿಯ ತಾಂತ್ರಿಕತೆಯನ್ನು ಅಳವಡಿಸಿಕೊಂಡು ಹೇಗೆ ಆಕರ್ಷಗೊಳಿಸಬಹುದು ಎಂಬುದನ್ನು ತೋರಿಸಿಕೊಟ್ಟಿದೆ. ಜೊತೆಗೆ, ಅರ್ಥಧಾರಿಗಳು ಪೌರಾಣಿಕ ಸನ್ನಿವೇಶಗಳ ಮೂಲಕ ಸ್ತ್ರೀವಾದ, ಪರಿಸರ ನಾಶ ಹಾಗೂ ಪ್ರಚಲಿತ ರಾಜಕೀಯ-ಸಾಂವಿಧಾನಿಕ ಮೌಲ್ಯಗಳ ಕುರಿತು ಪ್ರಾಸಂಗಿಕ ಆಶು ಸಂಭಾಷಣೆ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಆಧುನಿಕ ರಂಗಭೂಮಿಯಲ್ಲಿ ಪರ್ವದಂತಹ ನಾಟಕಗಳ ಮೂಲಕ ಸಾಂಸ್ಕೃತಿಕ ಮರುಶೋಧದ ಪ್ರಯತ್ನಗಳು ನಡೆದಿವೆ. ಅಡ್ಡಂಡ ಕಾರ್ಯಪ್ಪನವರು ‘ಟಿಪ್ಪುವಿನ ನಿಜ ಕನಸುಗಳು’ ನಾಟಕದ ಮೂಲಕ ತೀವ್ರವಾದಿ ಬಲಪಂಥೀಯ ರಂಗಭೂಮಿಯನ್ನು ಕಟ್ಟುವ ಪ್ರಯತ್ನ ಮಾಡಿದ್ದಾರೆ. ಸಮುದಾಯ, ನೀನಾಸಂ, ಆಯನ, ನಿರ್ದಿಗಂತ, ಅಸ್ತಿತ್ವ, ಜರ್ನಿ ಮೊದಲಾದ ತಂಡಗಳು ಸಾಮಾಜಿಕ ಅಸಮಾನತೆ, ದಲಿತ ಪ್ರಜ್ಞೆ ಹಾಗೂ ಸ್ತ್ರೀವಾದ ಸಂವೇದನೆಗಳ ಪರವಾಗಿ ಪ್ರಗತಿಪರ ಚಳವಳಿಯನ್ನು ಕಾಯ್ದುಕೊಂಡಿವೆ. ಹೀಗೆ ಯಕ್ಷಗಾನದ ಸಾತ್ತ್ವಿಕ ಅಭಿನಯ ಹಾಗೂ ರಂಗಭೂಮಿಯ ವೈಚಾರಿಕತೆಗಳು ಪರಸ್ಪರ ಪೂರಕವಾಗಿ ಬೆಳೆಯುತ್ತಾ ಬದಲಾಗುತ್ತಿರುವ ಸಾಂಸ್ಕೃತಿಕ ಸವಾಲುಗಳಿಗೆ ತಾರ್ಕಿಕವಾಗಿ ಸ್ಪಂದಿಸುತ್ತಿವೆ ಎಂಬುದನ್ನು ಲೇಖನ ಸ್ಪಷ್ಟಪಡಿಸುತ್ತದೆ.
ಕನ್ನಡ ರಂಗಭೂಮಿಯ ಪರಂಪರೆ ಮತ್ತು ಪ್ರಸ್ತುತ ಸ್ಥಿತಿ
76 to 81
ಕನ್ನಡ ರಂಗಭೂಮಿಯ ಹಿನ್ನೆಲೆಯೊಂದಿಗೆ, ನಾಟಕ ಹಾಗೂ ರಂಗಭೂಮಿಯ ಪ್ರಕಾರಗಳನ್ನು ತಿಳಿಸುವುದರೊಂದಿಗೆ ನಾಟಕಕಾರರ ಸದುದ್ದೇಶವನ್ನು ವಿವರಿಸುವ ಉದ್ದೇಶವು ಈ ಪ್ರಬಂಧಕ್ಕಿದೆ. ಕರ್ನಾಟಕ ಪ್ರಸಿದ್ಧ ರಂಗಭೂಮಿ ಕಲೆಗಳಾದ ಯಕ್ಷಗಾನ, ಬಯಲಾಟ ಮತ್ತು ತೊಗಲು ಗೊಂಬೆಯಾಟದಂತಹ ಜನಪದ ಪ್ರಕಾರಗಳಿಂದ ಆರಂಭಗೊಂಡು ಆಧುನಿಕ ನಾಟಕಗಳ ಮೂಲಕ ಸದಾ ವಿಕಸನಗೊಳ್ಳುತ್ತಿರುವ ಒಂದು ಜೀವಂತ ಕಲೆಯಾದ ರಂಗಭೂಮಿಯ ವಿವಿಧ ಮುಖಗಳ ಪರಿಚಯ ಇಲ್ಲಿದೆ.
ಗುಬ್ಬಿ ವೀರಣ್ಣ, ಬಿ.ವಿ. ಕಾರಂತ, ಪಿ.ಬಿ. ಜಯಶ್ರೀ. ಉತ್ತರ ಕರ್ನಾಟಕ ಮತ್ತು ಕರಾವಳಿ ಭಾಗದಲ್ಲಿ ಜನಪ್ರಿಯವಾಗಿರುವ ಬಯಲಾಟ, ಯಕ್ಷಗಾನ ಮತ್ತು ಶ್ರೀಕೃಷ್ಣ ಪಾರಿಜಾತದ ಪ್ರಸಿದ್ಧ ಕಲಾವಿದರಾದ ಕಾಳಿಂಗ ನಾವಡ, ಶಿರಿಯಾರ ಮಂಜುನಾಯಕ, ಜವಳೇಕೆರೆ ನರಸಿಂಹ ಭಟ್ಟರ ಕಲಾ ವೈಶಿಷ್ಟ್ಯತೆಗಳನ್ನು ಇಲ್ಲಿ ವಿಶ್ಲೇಷಣೆ ಮಾಡಲಾಗಿದೆ.
ರಂಗಭೂಮಿ ಮತ್ತು ಚಲನಚಿತ್ರ: ಅಭಿವ್ಯಕ್ತಿ, ತಂತ್ರಜ್ಞಾನ ಹಾಗೂ ಸಾಂಸ್ಕೃತಿಕ ಪರಿವರ್ತನೆ ಒಂದು ತುಲನಾತ್ಮಕ ಅಧ್ಯಯನ
82 to 87
ರಂಗಭೂಮಿ ಮಾನವ ನಾಗರಿಕತೆಯ ಅತ್ಯಂತ ಪ್ರಾಚೀನ ಕಲಾ ಮಾಧ್ಯಮಗಳಲ್ಲಿ ಒಂದಾಗಿದ್ದು, ಭಾರತೀಯ ಸಂದರ್ಭದಲ್ಲಿ ಭರತನ ನಾಟ್ಯಶಾಸ್ತ್ರ ಅದರ ಸೈದ್ಧಾಂತಿಕ ಅಡಿಪಾಯವಾಗಿದೆ ಎಂಬುದು ವಿದ್ವಾಂಸರ ಅಭಿಪ್ರಾಯವಾಗಿದೆ. ಜಾನಪದ ದೃಷ್ಟಿಯಿಂದ ನೋಡಿದರೆ ಮಾನವ ತನ್ನ ದೈನಂದಿನ ದುಡಿಮೆ, ಏಕತಾನತೆ, ಆತಂಕ, ಬದುಕಿನ ಒತ್ತಡದಿಂದ ಹೊರಬರಲು ರೂಪಿಸಿಕೊಂಡ ಆನಂದದ ವಿಧಾನಗಳು ಕಾಲಕ್ರಮೇಣ ಬೇರೆ ಸನ್ನಿವೇಶಗಳ ಪರಿಷ್ಕರಣೆಯಿಂದ ಸಂಸ್ಕೃತಿ, ನಂಬಿಕೆ, ಕಲ್ಪನೆ, ಸಾಮಾಜಿಕ ಸಂಬಂಧಗಳ ಅಭಿವ್ಯಕ್ತಿಯ ರೂಪವಾಗಿ ಹುಟ್ಟಿಕೊಂಡ ಕಲಾ ಮಾಧ್ಯಮಗಳಲ್ಲಿ ಒಂದು ಎಂದೂ ಪರಿಗಣಿಸಬಹುದು. ಈ ಪ್ರಬಂಧವು ಸಾಮಾಜಿಕ, ಸಾಂಸ್ಕೃತಿಕ ಆಯಾಮಗಳಲ್ಲಿ ರಂಗಭೂಮಿ ಮತ್ತು ಚಲನಚಿತ್ರ ಮಾಧ್ಯಮಗಳ ನಡುವಿನ ಅಭಿವ್ಯಕ್ತಿ, ಕಲಾತ್ಮಕ ಸ್ವರೂಪ, ಪ್ರೇಕ್ಷಕ–ಕಲಾವಿದರ ಸಂಬಂಧ, ಕಥಾವಿನ್ಯಾಸ, ಪಾತ್ರ ಚಿತ್ರಣ, ಸಂಗೀತ, ಸಾಹಿತ್ಯ, ತಾಂತ್ರಿಕ ಬೆಳವಣಿಗೆ, ಆರ್ಥಿಕ ವಿನ್ಯಾಸ ಹಾಗೂ ಸಾಮಾಜಿಕ ಹೊಣೆಗಾರಿಕೆಗಳನ್ನು ತುಲನಾತ್ಮಕವಾಗಿ ವಿಶ್ಲೇಷಿಸುವ ಪ್ರಯತ್ನವಾಗಿದೆ. ಜಾನಪದ, ರಂಗರೂಪಗಳಿಂದ ಹಿಡಿದು ವೃತ್ತಿರಂಗಭೂಮಿಯ ವರೆಗಿನ ಸುದೀರ್ಘ ಚಲನಶೀಲ ಪರಂಪರೆಯಲ್ಲಿ ಸಾಗುತ್ತ 20ನೇ ಶತಮಾನದ ಆರಂಭದ ಹೊತ್ತಿಗೆ ಚಲನಚಿತ್ರ ಮಾಧ್ಯಮದ ಹುಟ್ಟಿನಿಂದ ಸಂಭವಿಸಿದ ಪರಿವರ್ತನೆಗಳು, ವಾಣಿಜ್ಯೀಕರಣ, ಪ್ರೇಕ್ಷಕರ ಮನೋಭಾವಗಳು ಹಾಗೆಯೇ ಇಂದಿನ ಡಿಜಿಟಲ್ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆಯ ಪ್ರಭಾವ ಇತ್ಯಾದಿಗಳನ್ನು ಪರಿಶೀಲಿಸುವ ಪ್ರಯತ್ನ ಇಲ್ಲಿದೆ. ರಂಗಭೂಮಿ ಮತ್ತು ಚಲನಚಿತ್ರಗಳನ್ನು ಕೇವಲ ವೇದಿಕೆ ಹಾಗೂ ತೆರೆ ಎಂಬ ಭೌತಿಕ ವ್ಯತ್ಯಾಸದ ದೃಷ್ಟಿಯಿಂದ ಮಾತ್ರ ಪರಿಶೀಲಿಸದೆ ರಂಗಭೂಮಿಯ ನಟನೆಯ ಜೀವಂತಿಕೆ ಮತ್ತು ಚಲನಚಿತ್ರದ ಮರುಸೃಷ್ಟಿ ಯಾವ ರೀತಿ ಸಾಕಾರಗೊಂಡಿದೆ ಎಂಬುದನ್ನು ಪರಿಶೀಲಿಸಿದೆ. ಈ ಪ್ರಬಂಧವು ರಂಗಭೂಮಿ ಮತ್ತು ಚಲನಚಿತ್ರಗಳ ನಡುವಿನ ಸಾಮ್ಯತೆ ಹಾಗೂ ಭಿನ್ನತೆಗಳನ್ನು ಮಾತ್ರ ಗುರುತಿಸದೇ ಬದಲಾಗುತ್ತಿರುವ ಸಂಬಂಧ ಸಮಕಾಲೀನ ಸವಾಲುಗಳು ಮತ್ತು ಭವಿಷ್ಯದ ಸಾಧ್ಯತೆಗಳ ಬಗ್ಗೆಯೂ ವಿಮರ್ಶಿಸುತ್ತದೆ. ಈ ಕಾರಣದಿಂದಾಗಿ ಪ್ರಸ್ತುತ ಅಧ್ಯಯನ ಕೇವಲ ಸಾಂಪ್ರದಾಯಿಕ ಹೋಲಿಕೆಗಳಿಗೆ ಸೀಮಿತವಾಗದೆ ಇಂದಿನ ಶತಮಾನದ ಸಾಮಾಜಿಕ, ಸಾಂಸ್ಕೃತಿಕ ಪರಿವರ್ತನೆಗಳನ್ನು ಪರಿಶೀಲಿಸುತ್ತದೆ. ಸಾಮ್ಯತೆ, ವೈರುಧ್ಯ ಮತ್ತು ಪರಸ್ಪರ ಪ್ರಭಾವಗಳ ನೆಲೆಯಲ್ಲಿ ವಿಶ್ಲೇಷಿಸಲಾಗಿದೆ. ಕೊನೆಯಲ್ಲಿ ಇವೆರಡೂ ಪರಸ್ಪರ ವಿರೋಧಿಗಳಲ್ಲ. ಒಂದರಿಂದ ಇನ್ನೊಂದು ಪ್ರಭಾವಿಸಲ್ಪಟ್ಟು ರೂಪುಗೊಂಡ ಹಾಗೆಯೇ ರೂಪಾಂತರಿಸುತ್ತಿರುವ ಕೊಡುಕೊಳ್ಳುಗೆಯ ಕಲಾ ಮಾಧ್ಯಮಗಳು ಎಂಬ ನಿರ್ಣಯಕ್ಕೆ ಈ ಪ್ರಬಂಧವು ಬರುತ್ತದೆ.
ರಂಗಭೂಮಿ ಮತ್ತು ಚಲನಚಿತ್ರ: ಒಂದು ತುಲನಾತ್ಮಕ ಅಧ್ಯಯನ
88 to 97
ರಂಗಭೂಮಿ ಮತ್ತು ಚಲನಚಿತ್ರವು ಮಾನವ ನಾಗರಿಕತೆಯ ಸಾಂಸ್ಕೃತಿಕ ಅಭಿವ್ಯಕ್ತಿಯ ಎರಡು ಪ್ರಮುಖ ದೃಶ್ಯಕಲಾ ಮಾಧ್ಯಮಗಳಾಗಿವೆ. ರಂಗಭೂಮಿ ಪ್ರಾಚೀನ ಕಾಲದಿಂದಲೂ ಜೀವಂತ ಪ್ರದರ್ಶನದ ಮೂಲಕ ಸಮಾಜದ ಬದುಕು, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಪ್ರತಿಬಿಂಬಿಸುತ್ತಾ ಬಂದಿದ್ದರೆ, ಚಲನಚಿತ್ರವು ಆಧುನಿಕ ತಂತ್ರಜ್ಞಾನದ ನೆರವಿನಿಂದ ಅದೇ ಕಲಾತ್ಮಕ ಅಭಿವ್ಯಕ್ತಿಯನ್ನು ವಿಶ್ವವ್ಯಾಪಿಯಾಗಿ ವಿಸ್ತರಿಸಿದೆ. ಎರಡೂ ಮಾಧ್ಯಮಗಳ ಮೂಲ ಉದ್ದೇಶ ಮಾನವ ಜೀವನದ ಅನುಭವಗಳನ್ನು ಕಲಾತ್ಮಕವಾಗಿ ನಿರೂಪಿಸುವುದಾಗಿದ್ದರೂ, ಅವುಗಳ ಅಭಿವ್ಯಕ್ತಿ ವಿಧಾನ, ತಾಂತ್ರಿಕ ವಿನ್ಯಾಸ, ಪ್ರೇಕ್ಷಕರೊಂದಿಗೆ ಹೊಂದುವ ಸಂಬಂಧ, ಕಥಾನಿರೂಪಣೆಯ ಶೈಲಿ ಮತ್ತು ಸಾಮಾಜಿಕ ಪ್ರಭಾವದಲ್ಲಿ ಗಮನಾರ್ಹ ವ್ಯತ್ಯಾಸಗಳಿವೆ. ಈ ಪ್ರಬಂಧದಲ್ಲಿ ರಂಗಭೂಮಿ ಮತ್ತು ಚಲನಚಿತ್ರಗಳ ಸ್ವರೂಪ, ಬೆಳವಣಿಗೆ ಹಾಗೂ ಪರಸ್ಪರ ಸಂಬಂಧವನ್ನು ತುಲನಾತ್ಮಕ ದೃಷ್ಟಿಯಿಂದ ವಿಶ್ಲೇಷಿಸಲಾಗಿದೆ. ವಿಶೇಷವಾಗಿ ಕನ್ನಡ ರಂಗಭೂಮಿಯು ಕನ್ನಡ ಚಲನಚಿತ್ರರಂಗದ ಬೆಳವಣಿಗೆಗೆ ನೀಡಿರುವ ಕೊಡುಗೆಯನ್ನು ಪರಿಶೀಲಿಸಲಾಗಿದೆ. ಅಭಿನಯ, ನಿರ್ದೇಶನ, ದೃಶ್ಯಭಾಷೆ, ಕಾಲ ಮತ್ತು ಸ್ಥಳದ ಬಳಕೆ, ತಂತ್ರಜ್ಞಾನದ ಪಾತ್ರ ಹಾಗೂ ಪ್ರೇಕ್ಷಕರೊಂದಿಗೆ ಹೊಂದುವ ಸಂಬಂಧದ ಆಧಾರದ ಮೇಲೆ ಈ ಎರಡೂ ಮಾಧ್ಯಮಗಳ ಸಾಮ್ಯತೆ ಮತ್ತು ವೈಶಿಷ್ಟ್ಯಗಳನ್ನು ವಿವರಿಸಲಾಗಿದೆ. ಜೊತೆಗೆ, ಸಮಕಾಲೀನ ಸಂದರ್ಭದಲ್ಲಿ ಡಿಜಿಟಲ್ ತಂತ್ರಜ್ಞಾನ, ಒಟಿಟಿ (OTT) ವೇದಿಕೆಗಳು ಹಾಗೂ ಹೊಸ ಮಾಧ್ಯಮಗಳ ಪ್ರಭಾವದಿಂದ ಉಂಟಾಗಿರುವ ಬದಲಾವಣೆಗಳನ್ನೂ ಸಂಕ್ಷಿಪ್ತವಾಗಿ ಚರ್ಚಿಸಲಾಗಿದೆ.
ಈ ಅಧ್ಯಯನವು ರಂಗಭೂಮಿ ಮತ್ತು ಚಲನಚಿತ್ರಗಳನ್ನು ಪರಸ್ಪರ ಸ್ಪರ್ಧಾತ್ಮಕ ಮಾಧ್ಯಮಗಳಾಗಿ ನೋಡುವುದಕ್ಕಿಂತ, ಒಂದಕ್ಕೊಂದು ಪೂರಕವಾದ ಸಾಂಸ್ಕೃತಿಕ ಅಭಿವ್ಯಕ್ತಿಗಳೆಂದು ಪರಿಗಣಿಸುವ ಅಗತ್ಯವನ್ನು ಒತ್ತಿಹೇಳುತ್ತದೆ.
ಶಿಕ್ಷಣದಲ್ಲಿ ರಂಗಭೂಮಿಯ ಮಹತ್ವ
98 to 104
“ನ ತಜ್ಞಾನಂ ನ ತಚ್ಛಿಲ್ಪಂ ನ ಸಾ ವಿದ್ಯಾ ನ ಸಾ ಕಲಾ ।
ನಾಸ್ತ್ಯಸೌ ಯೋಗೋ ನ ತತ್ ಕರ್ಮ ನಾಟ್ಯೇಸ್ಮಿನ್ ಯನ್ನ ದೃಶ್ಯತೇ॥”
ನಾಟಕದಲ್ಲಿ ಕಾಣದಂತಹ ಜ್ಞಾನವೂ ಇಲ್ಲ, ಕಲೆಯೂ ಇಲ್ಲ, ವಿದ್ಯೆಯೂ ಇಲ್ಲ, ಕೌಶಲ್ಯವೂ ಇಲ್ಲ. ಎಲ್ಲಾ ಜ್ಞಾನಶಾಖೆಗಳ ಸಮನ್ವಯವೇ ನಾಟಕವಾಗಿದೆ ಎಂಬ ಭರತ ಮುನಿಯ ಮಾತಿನಂತೆ, ಶಿಕ್ಷಣವು ಕೇವಲ ಪುಸ್ತಕ ಜ್ಞಾನವನ್ನು ನೀಡುವ ಪ್ರಕ್ರಿಯೆಯಲ್ಲ; ಅದು ವ್ಯಕ್ತಿಯ ಸಮಗ್ರ ವ್ಯಕ್ತಿತ್ವವನ್ನು ರೂಪಿಸುವ ಸಾಧನವಾಗಿದೆ. ವಿದ್ಯಾರ್ಥಿಗಳಲ್ಲಿ ಜ್ಞಾನ, ಕೌಶಲ್ಯ, ಸೃಜನಶೀಲತೆ, ಆತ್ಮವಿಶ್ವಾಸ ಹಾಗೂ ಸಾಮಾಜಿಕ ಮೌಲ್ಯಗಳನ್ನು ಬೆಳೆಸುವಲ್ಲಿ ರಂಗಭೂಮಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ರಂಗಭೂಮಿಯು ವಿದ್ಯಾರ್ಥಿಗಳ ಕಲಿಕೆಯನ್ನು ಜೀವಂತಗೊಳಿಸುವುದರ ಜೊತೆಗೆ ಅನುಭವಾಧಾರಿತ ಶಿಕ್ಷಣಕ್ಕೆ ಉತ್ತೇಜನ ನೀಡುತ್ತದೆ. ನಾಟಕ, ಪಾತ್ರಾಭಿನಯ, ಸಂಭಾಷಣೆ ಹಾಗೂ ವೇದಿಕೆ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳು ಭಾಷಾ ಕೌಶಲ್ಯ, ಸಂವಹನ ಸಾಮರ್ಥ್ಯ, ನಾಯಕತ್ವ, ತಂಡದ ಸಹಕಾರ ಮತ್ತು ಸಮಸ್ಯೆ ಪರಿಹರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುತ್ತಾರೆ.
ಇತ್ತೀಚಿನ ರಾಷ್ಟ್ರೀಯ ಶಿಕ್ಷಣ ನೀತಿ–2020 (NEP-2020) ಕೂಡ ಕಲೆಯನ್ನು ಶಿಕ್ಷಣದೊಂದಿಗೆ ಸಮನ್ವಯಗೊಳಿಸುವುದಕ್ಕೆ ವಿಶೇಷ ಆದ್ಯತೆ ನೀಡಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣದಲ್ಲಿ ರಂಗಭೂಮಿಯ ಬಳಕೆ ವಿದ್ಯಾರ್ಥಿಗಳನ್ನು ಕೇವಲ ಪರೀಕ್ಷೆಗೆ ಸೀಮಿತಗೊಳಿಸದೆ ಜೀವನಕ್ಕೆ ಸಿದ್ಧಗೊಳಿಸುವ ಪರಿಣಾಮಕಾರಿ ಶಿಕ್ಷಣ ವಿಧಾನವಾಗಿದೆ. ಶಿಕ್ಷಣದಲ್ಲಿ ರಂಗಭೂಮಿಯ ಮಹತ್ವ, ಅದರ ಶೈಕ್ಷಣಿಕ ಉಪಯೋಗಗಳು, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸದ ಮೇಲೆ ಬೀರುವ ಪರಿಣಾಮ ಹಾಗೂ ಶಿಕ್ಷಕರ ಪಾತ್ರವನ್ನು ಇಲ್ಲಿ ವಿಶ್ಲೇಷಿಸಲಾಗಿದೆ.
ಉದಯ ಸಾರಂಗರವರ ‘ದಲಿಯನ ಡೋಲು’ ರಂಗ ನಾಟಕ ಸಂಕಲನದಲ್ಲಿ ಪರಿಸರ ಮತ್ತು ಸಾಮಾಜಿಕ ಜಾಗೃತಿ
105 to 110
ಕರಾವಳಿಯ ಆಧುನಿಕ ದಲಿತ ಸೃಜನಶೀಲ ಸಾಹಿತ್ಯದ ಬರಹಗಾರರಲ್ಲಿ ಉದಯ ಸಾರಂಗರೂ ಒಬ್ಬರಾಗಿದ್ದಾರೆ. ಈ ಪ್ರಬಂಧದಲ್ಲಿ ಅವರ ‘ದಲಿಯನ ಡೋಲು’ ಹಾಗೂ ‘ಬೆಟ್ಟದ ಗಿಳಿ’ ರಂಗ ನಾಟಕಗಳ ವಿಶ್ಲೇಷಣೆಯನ್ನು ಮಾಡಲಾಗಿದೆ. ಕರಾವಳಿಯ ದಲಿತ ಸಾಹಿತಿಗಳು ದಲಿತ ಸಂವೇದನೆಯನ್ನು ತಮ್ಮ ಸಾಹಿತ್ಯದಲ್ಲಿ ಸಾದರಪಡಿಸುವುದು ಒಂದು ನೆಲೆಯಾದರೆ, ಜೊತೆಜೊತೆಗೆ ಪರಿಸರದ ಕಾಳಜಿ ಮತ್ತು ಜಾಗೃತಿ ಹಾಗೂ ಸಾಮಾಜಿಕ ಸ್ವಾಸ್ಥ್ಯವನ್ನು ನಿರ್ಮಾಣ ಮಾಡುವ ಮೂಲಕ ಜನಪರ ಹಿತವನ್ನು ಬಯಸುವುದು ಬಹು ಮುಖ್ಯ ಅಂಶ ಎನ್ನುವುದನ್ನು ಇಲ್ಲಿ ಮನಗಾಣಿಸಿದ್ದಾರೆ.
ಉದಯ ಸಾರಂಗರ ಈ ರಂಗನಾಟಕ ಕೃತಿಯು ರಂಗದಲ್ಲಿ ಪ್ರಯೋಗಗೊಂಡು ಅತೀ ಯಶಸ್ಸನ್ನು ಪಡೆದಿರುವಂತಹ ಹಿನ್ನೆಲೆಯಲ್ಲಿ ಅದರ ತಿರುಳನ್ನು ಇಲ್ಲಿ ನೀಡುವ ಪ್ರಯತ್ನವನ್ನು ಮಾಡಲಾಗಿದೆ. ‘ಕನ್ನಡ ಸಾಹಿತ್ಯ ಮತ್ತು ರಂಗಭೂಮಿ’ ಎಂದಾಗ ಮಕ್ಕಳಾದಿಯಿಂದ ಹಿಡಿದು ವಯೋವೃದ್ಧರವರೆಗೂ ರಂಗ ನಾಟಕಗಳು ಎಷ್ಟು ಪರಿಣಾಮಕಾರಿಯಾಗಿ ಸಾಮಾಜಿಕ ತಲ್ಲಣಗಳನ್ನು, ಪರಿಸರ ಜಾಗೃತಿಯನ್ನು, ದೇಶ ಪ್ರೇಮವನ್ನು ಸೆರೆ ಹಿಡಿಯಬಲ್ಲದು ಎಂಬ ವಿಚಾರವನ್ನು ಇಲ್ಲಿ ಗಮನಿಸಬಹುದಾಗಿದೆ. ‘ದಲಿಯನ ಡೋಲು’ ನಾಟಕದ ಮೂಲಕ ಆಧುನಿಕತೆ, ಪಾಶ್ಚಾತ್ಯ ವಸ್ತುಗಳ ಮೋಹ, ಜಾಗತೀಕರಣದ ನಂತರ ಎದುರಾದ ಸಾಮಾಜಿಕ ಸವಾಲುಗಳು, ದಿಕ್ಕೆಟ್ಟಿರುವ ಆಹಾರ ಸಂಸ್ಕೃತಿಯ ಹವ್ಯಾಸಗಳನ್ನು ನಾಟಕದ ಚೌಕಟ್ಟಿನಲ್ಲಿ, ರಂಗತಂತ್ರದ ಮೂಲಕ ಸೆರೆ ಹಿಡಿಯಲಾಗಿದೆ. ‘ಬೆಟ್ಟದ ಗಿಳಿ’ ನಾಟಕವು ಪ್ರಕೃತಿ ಇದ್ದರೆ ನಾವು, ಪ್ರಕೃತಿಯ ಧ್ವಂಸ ನಮ್ಮ ನಿರ್ನಾಮದ ಸೂಚನೆ ಎಂಬ ಅತೀ ಜರೂರಿನ ಪರಿಸರ ಪ್ರೇಮದ ಜಾಗೃತಿಯನ್ನು ಅತೀ ವಿನೂತನವಾಗಿ ನೀಡುತ್ತದೆ. ಜನಪದ ರಂಗಭೂಮಿಯ ಗೀತೆಗಳ ಲಯಬದ್ಧ ಸಾಹಿತ್ಯದ ಛಾಯೆ, ನಾಟಕೀಯ ಸಂಭಾಷಣೆ, ಅಭಿನಯಕ್ಕೆ ಪೂರಕವಾದ ಕಥಾಸಾರ, ಪ್ರಯೋಗಶೀಲ ರಂಗ ಸಾಹಿತ್ಯ ಸಲಕರಣೆಯಾಗಿ ಈ ವಿಶಿಷ್ಟ ಕೃತಿಯು ಕಂಡುಬರುತ್ತದೆ.
ಜನಪದ ರಂಗಭೂಮಿ ಮತ್ತು ಅದರ ಸಾಮಾಜಿಕ ಪ್ರಭಾವ
111 to 118
ಮಾನವನ ಸಹಜ ಭಾವನಾತ್ಮಕ ಅಭಿವ್ಯಕ್ತಿಗಳು, ನಂಬಿಕೆಗಳು ಹಾಗೂ ಗ್ರಾಮೀಣ ಆಚರಣೆಗಳ ಒಗ್ಗೂಡುವಿಕೆಯಿಂದ ಜಾನಪದ ರಂಗಭೂಮಿ ಜೀವತಳೆದಿದೆ. ಕೇವಲ ಮನರಂಜನೆಯ ವೇದಿಕೆಯಾಗಿರದೆ, ಇದು ಧಾರ್ಮಿಕ ಶ್ರದ್ಧೆ, ನೈತಿಕ ಮೌಲ್ಯಗಳ ಬೋಧನೆ ಮತ್ತು ಸಾಮಾಜಿಕ ಒಗ್ಗಟ್ಟಿನ ಪ್ರಬಲ ಸಂವಹನ ಸಾಧನವಾಗಿ ಬೇರೂರಿದೆ. ಯಕ್ಷಗಾನ, ಬಯಲಾಟ, ಸಣ್ಣಾಟ ಹಾಗೂ ವಿಭಿನ್ನ ಗೊಂಬೆಯಾಟಗಳಂತಹ ವಿಶಿಷ್ಟ ಕಲಾ ಪ್ರಕಾರಗಳು ಸಮುದಾಯದ ವಾಸ್ತವಿಕ ಬದುಕಿನ ತಲ್ಲಣಗಳನ್ನು, ಸಂಭ್ರಮವನ್ನು ಹಾಗೂ ಸಾಂಸ್ಕೃತಿಕ ಜೀವಂತಿಕೆಯನ್ನು ನೇರವಾಗಿ ಪ್ರತಿಬಿಂಬಿಸುತ್ತವೆ. ದೇವಾಲಯಗಳ ಜಾತ್ರೆ ಮತ್ತು ಉತ್ಸವಗಳ ಆವರಣದಲ್ಲಿ ಬೆಳೆದುಬಂದ ಈ ಕಲೆಯು ಮಾನವೀಯ ಸಂಬಂಧಗಳನ್ನು ಬೆಸೆಯುವ ಜೊತೆಗೆ ಸಮಾಜದ ತಪ್ಪು-ಒಪ್ಪುಗಳನ್ನು ತಿದ್ದುವ ಜಾಗೃತಿಯನ್ನೂ ಮೂಡಿಸುತ್ತದೆ. ಆಧುನಿಕತೆಯ ಭರಾಟೆ ಮತ್ತು ತಂತ್ರಜ್ಞಾನದ ಪ್ರಭಾವದಿಂದ ಕಲಾಪ್ರಕಾರಗಳು ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ, ನಮ್ಮ ಮಣ್ಣಿನ ಮೂಲ ಸಂಸ್ಕೃತಿಯನ್ನು ಹಾಗೂ ಅಸ್ಮಿತೆಯನ್ನು ಕಾಪಾಡಲು ಇಂತಹ ಗ್ರಾಮೀಣ ರಂಗಪರಂಪರೆಯ ರಕ್ಷಣೆ ಅತ್ಯಂತ ಅವಶ್ಯಕವಾಗಿದೆ.
ಗಿರೀಶ್ ಕಾರ್ನಾಡರ ʻಯಯಾತಿʼ ನಾಟಕದಲ್ಲಿ ʻಸ್ತ್ರೀʼ
119 to 124
ಗಿರೀಶ್ ಕಾರ್ನಾಡರ ‘ಯಯಾತಿʼ ನಾಟಕವು ಪೌರಾಣಿಕ ಕಥಾವಸ್ತುವನ್ನು ಆಧರಿಸಿಕೊಂಡಿದ್ದರೂ ಅದರ ಮೂಲಕ ಆಧುನಿಕ ಮಾನವ ಬದುಕಿನ ಸಂಕೀರ್ಣತೆ, ಸಂಬಂಧಗಳ ಸಂಘರ್ಷ, ಅಧಿಕಾರ, ಆಸೆ, ತ್ಯಾಗ ಮತ್ತು ಹೊಣೆಗಾರಿಕೆಯಂತಹ ಹಲವು ಆಯಾಮಗಳನ್ನು ಅನಾವರಣಗೊಳಿಸುತ್ತದೆ. ಈ ನಾಟಕದಲ್ಲಿ ಸ್ತ್ರೀ ಪಾತ್ರಗಳು ಕೇವಲ ಪುರುಷ ಪಾತ್ರಗಳ ಬದುಕಿಗೆ ಪೂರಕವಾಗಿರುವ ಪಾತ್ರಗಳಾಗಿ ಕಾಣಿಸಿಕೊಳ್ಳದೆ, ತಮ್ಮದೇ ಆದ ಭಾವನೆ, ಚಿಂತನೆ, ನಿರ್ಧಾರ ಮತ್ತು ಅಸ್ತಿತ್ವದೊಂದಿಗೆ ರೂಪುಗೊಂಡಿರುವುದು ಗಮನಾರ್ಹವಾಗಿದೆ. ದೇವಯಾನಿ, ಶರ್ಮಿಷ್ಠೆ ಹಾಗೂ ಚಿತ್ರಲೇಖೆಯಂತಹ ಸ್ತ್ರೀ ಪಾತ್ರಗಳ ಮೂಲಕ ಕಾರ್ನಾಡರು ಸ್ತ್ರೀ ಮನಸ್ಸಿನ ವಿವಿಧ ಮುಖಗಳನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ.
ಈ ಸಂಶೋಧನಾ ಲೇಖನದಲ್ಲಿ ‘ಯಯಾತಿʼ ನಾಟಕದಲ್ಲಿ ಬರುವ ಸ್ತ್ರೀ ಪಾತ್ರಗಳ ಸ್ವರೂಪ, ವ್ಯಕ್ತಿತ್ವ, ಮನೋಭಾವ, ಸಂಬಂಧಗಳಲ್ಲಿನ ಸಂಘರ್ಷ ಹಾಗೂ ಅವರ ನಿರ್ಧಾರಗಳ ಹಿಂದಿರುವ ಸಾಮಾಜಿಕ ಮತ್ತು ವೈಯಕ್ತಿಕ ನೆಲೆಗಳನ್ನು ವಿಶ್ಲೇಷಿಸಲಾಗಿದೆ. ದೇವಯಾನಿಯ ಸ್ವಾಭಿಮಾನ, ಶರ್ಮಿಷ್ಠೆಯ ತ್ಯಾಗ ಮತ್ತು ಅಂತರಂಗದ ನೋವು, ಸ್ವರ್ಣಲತೆಯ ಸಹನೆ, ಚಿತ್ರಲೇಖೆಯ ಪ್ರಶ್ನಿಸುವ ಮನೋಭಾವ ಮುಂತಾದ ವಿಚಾರಗಳನ್ನು ಪ್ರಮುಖವಾಗಿ ಪರಿಶೀಲಿಸಲಾಗಿದೆ. ‘ಯಯಾತಿʼ ನಾಟಕದ ಸ್ತ್ರೀ ಪಾತ್ರಗಳು ಕೇವಲ ಪೌರಾಣಿಕ ಕಥೆಯ ಅಂಗಗಳಾಗಿರದೆ, ಸ್ತ್ರೀ ಅಸ್ತಿತ್ವ, ಆತ್ಮಗೌರವ, ಆಯ್ಕೆ ಮತ್ತು ಸ್ವಾತಂತ್ರ್ಯದ ಪ್ರಶ್ನೆಗಳನ್ನು ಪ್ರತಿನಿಧಿಸುವ ಪ್ರಮುಖ ಪಾತ್ರಗಳಾಗಿವೆ ಎಂಬುದನ್ನು ಲೇಖನವು ಪ್ರತಿಪಾದಿಸುತ್ತದೆ.
ಕನ್ನಡ ಸಾಹಿತ್ಯದಲ್ಲಿ ನಾಟಕದ ಮಹತ್ವ
125 to 130
ಕನ್ನಡ ಸಾಹಿತ್ಯದಲ್ಲಿ ನಾಟಕವು ಪ್ರಮುಖ ಸಾಹಿತ್ಯ ಪ್ರಕಾರಗಳಲ್ಲಿ ಒಂದಾಗಿದೆ. ಇದು ಕೇವಲ ಮನರಂಜನೆಯ ಸಾಧನವಲ್ಲ, ಸಮಾಜದ ಜೀವನ, ಸಂಸ್ಕೃತಿ, ಮೌಲ್ಯಗಳು ಮತ್ತು ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವ ಒಂದು ಪ್ರಮುಖ ಸಂವಹನ ಮಾಧ್ಯಮವಾಗಿದೆ.
ನಾಟಕದ ಪ್ರಮುಖ ಮಹತ್ವಗಳು: ಸಾಮಾಜಿಕ ಜಾಗೃತಿಯನ್ನು ಮೂಡಿಸುವುದು, ಅಂದರೆ ಸಮಾಜದಲ್ಲಿರುವ ಅನ್ಯಾಯ, ಅಸಮಾನತೆ, ಮೂಢನಂಬಿಕೆ ಮತ್ತು ಇತರ ಸಮಸ್ಯೆಗಳ ಬಗ್ಗೆ ಜನರಲ್ಲಿ ಅರಿವು ಉಂಟುಮಾಡುವುದು. ಪ್ರೇಕ್ಷಕರಿಗೆ ಸಂತೋಷ, ಉಲ್ಲಾಸ ಮತ್ತು ಕಲಾತ್ಮಕ ಅನುಭವವನ್ನು ನೀಡುವುದರೊಂದಿಗೆ ಮನರಂಜನೆಗೊಳಿಸುವುದು. ಕನ್ನಡದ ಸಂಸ್ಕೃತಿ, ಪರಂಪರೆ, ಭಾಷೆ ಮತ್ತು ಆಚರಣೆಗಳನ್ನು ಉಳಿಸಿ ಬೆಳೆಸಲು ಸಹಕಾರಿಯಾಗಿ ಸಂಸ್ಕೃತಿಯ ಸಂರಕ್ಷಣೆ ಮಾಡುವುದು. ಸತ್ಯ, ಧರ್ಮ, ಪ್ರಾಮಾಣಿಕತೆ, ಮಾನವೀಯತೆ ಮುಂತಾದ ನೈತಿಕ ಮೌಲ್ಯಗಳನ್ನು ಬೋಧಿಸುವುದರೊಂದಿಗೆ ಬೆಳವಣಿಗೆಗೆ ಸಹಕಾರಿಯಾಗುವುದು. ಸುಂದರ ಸಂಭಾಷಣೆಗಳ ಮೂಲಕ ಕನ್ನಡ ಭಾಷೆಯ ಸೊಗಸು ಮತ್ತು ಅಭಿವ್ಯಕ್ತಿಯನ್ನು ವೃದ್ಧಿಸುವುದು. ಅಭಿನಯ, ಸಂವಹನ ಕೌಶಲ್ಯ, ಆತ್ಮವಿಶ್ವಾಸ ಮತ್ತು ಮಂದಿಯೊಂದಿಗೆ ಜೊತೆಗೂಡಿ ಕೆಲಸ ಮಾಡುವ ಗುಣಗಳನ್ನು ಬೆಳೆಸುತ್ತಾ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವುದು.
ಜಾನಪದ ರಂಗಭೂಮಿಯಲ್ಲಿ ಬಯಲಾಟ ಪ್ರದರ್ಶನ ಕಲೆಯ ಸವಾಲುಗಳು ಮತ್ತು ಸಾಧ್ಯತೆಗಳು
131 to 140
ಗ್ರಾಮೀಣ ಶ್ರಮ ಸಂಸ್ಕೃತಿಯ ಜೀವಂತ ಪ್ರತೀಕವಾದ ಮೂಡಲಪಾಯ ಬಯಲಾಟವು ಕೇವಲ ಮನರಂಜನೆಯಲ್ಲದೆ, ಸಮುದಾಯಗಳ ನಡುವಿನ ಸಾಮರಸ್ಯದ ಪ್ರಮುಖ ಕೊಂಡಿಯಾಗಿದೆ. ಬಳ್ಳಾರಿ ಜಿಲ್ಲೆಯಂತಹ ಬಯಲುಸೀಮೆಯಲ್ಲಿ ಪ್ರವರ್ಧಮಾನಕ್ಕೆ ಬಂದ ಈ ಕಲೆಯು, ಅನಕ್ಷರಸ್ಥ ಕಲಾವಿದರ ಅದ್ಭುತ ಸ್ಮರಣಶಕ್ತಿ ಮತ್ತು ಕಲಾಬದ್ಧತೆಯಿಂದ ತಲೆಮಾರುಗಳನ್ನು ದಾಟಿಬಂದಿದೆ. ಆದರೆ, ಪ್ರಸ್ತುತ ಆರ್ಥಿಕ ಮುಗ್ಗಟ್ಟು, ಸೂಕ್ತ ತರಬೇತುದಾರರ ಕೊರತೆ, ಜಾತಿ ವ್ಯವಸ್ಥೆಯ ಮಿತಿಗಳು, ಯುವಜನರ ನಿರಾಸಕ್ತಿ ಹಾಗೂ ಆಧುನಿಕ ದೃಶ್ಯ ಮಾಧ್ಯಮಗಳ ಅಬ್ಬರದಿಂದಾಗಿ ಈ ವಿಶಿಷ್ಟ ರಂಗಭೂಮಿ ಅಳಿವಿನಂಚಿನಲ್ಲಿದೆ. ಕರಾವಳಿಯ ಯಕ್ಷಗಾನ ಪಡೆದುಕೊಂಡ ಬೆಂಬಲದ ಮಾದರಿಯಲ್ಲಿಯೇ ಬಯಲಾಟಕ್ಕೂ ಕಾಯಕಲ್ಪದ ತುರ್ತು ಅವಶ್ಯಕತೆಯಿದೆ. ಸ್ತ್ರೀಯರಿಗೆ ಹೆಚ್ಚಿನ ರಂಗಾವಕಾಶ ನೀಡುವುದು, ಮೂರು ಗಂಟೆಗಳ ಕಾಲಮಿತಿಯೊಳಗೆ ಪ್ರದರ್ಶನವನ್ನು ಅಚ್ಚುಕಟ್ಟಾಗಿ ರೂಪಿಸುವುದು, ಸಮಕಾಲೀನ ಹೊಸ ಕಥಾವಸ್ತುಗಳನ್ನು ಪ್ರಯೋಗಿಸುವುದು ಮತ್ತು ಸರ್ಕಾರದ ಸಕ್ರಿಯ ಆರ್ಥಿಕ ಬೆಂಬಲದೊಂದಿಗೆ ಈ ದೇಶೀಯ ಕಲೆಯನ್ನು ಭವಿಷ್ಯದ ಪೀಳಿಗೆಗೆ ಸಮರ್ಥವಾಗಿ ದಾಟಿಸಬಹುದಾಗಿದೆ.
ರಂಗದರ್ಶನ: ವೃತ್ತಿ ರಂಗಭೂಮಿ ಅಧ್ಯಯನದ ತಾತ್ವಿಕ ನೆಲೆಗಳು
141 to 149
ಕನ್ನಡ ವೃತ್ತಿರಂಗಭೂಮಿಯ ಇತಿಹಾಸವನ್ನು ಗಮನಿಸಿದಾಗ, ಅದರ ಅಧ್ಯಯನವು ಕೇವಲ ಕಲಾತ್ಮಕತೆಯಷ್ಟೇ ಅಲ್ಲದೆ ಬಹುಮುಖಿ ದೃಷ್ಟಿಕೋನಗಳನ್ನು ಒಳಗೊಂಡಿರುವುದು ತಿಳಿಯುತ್ತದೆ. ಆರಂಭದಲ್ಲಿ ಮನರಂಜನೆಯಾಗಿದ್ದ ಇದು, ವಸಾಹತುಶಾಹಿ ಕಾಲದಲ್ಲಿ ಮರಾಠಿ ನಾಟಕಗಳ ಎದುರು ಕನ್ನಡದ ಅಸ್ತಿತ್ವ ಮತ್ತು ಭಾಷಾಭಿಮಾನವನ್ನು ರಕ್ಷಿಸಿದ ಸಾಂಸ್ಕೃತಿಕ ಪ್ರತಿರೋಧದ ಸಂಕೇತವಾಗಿ ಬೆಳೆಯಿತು. ಅಲ್ಲದೆ, ಇತಿಹಾಸ ಮತ್ತು ಪುರಾಣಗಳ ಮರುಸೃಷ್ಟಿಯ ಮೂಲಕ ರಾಷ್ಟ್ರೀಯ ಪ್ರಜ್ಞೆಯನ್ನು ಜಾಗೃತಗೊಳಿಸಿತು. ಸಾಮಾಜಿಕವಾಗಿ ವರ್ಣ-ವರ್ಗ ಸಂಘರ್ಷ, ಲಿಂಗ ತಾರತಮ್ಯ ಮತ್ತು ಅಸ್ಪೃಶ್ಯತೆಯಂತಹ ಸಮಸ್ಯೆಗಳನ್ನು ರಂಗದ ಮೇಲೆ ತಂದು ವೈಚಾರಿಕ ಚರ್ಚೆಗೆ ದಾರಿ ಮಾಡಿಕೊಟ್ಟಿತು. ಆರ್ಥಿಕ ಸವಾಲುಗಳ ನಡುವೆಯೂ ಸ್ವಾವಲಂಬನೆ ಕಾಯ್ದುಕೊಂಡು, ತಿರುಗು ರಂಗಸಜ್ಜಿಕೆ ಹಾಗೂ ವಿದ್ಯುತ್ ಬಳಕೆಯಂತಹ ತಾಂತ್ರಿಕ ಆವಿಷ್ಕಾರಗಳ ಮೂಲಕ ಆಧುನಿಕತೆಗೆ ಹೊಸ ಆಯಾಮ ನೀಡಿತು. ವಿಶೇಷವಾಗಿ, ಮಹಿಳಾ ಕಲಾವಿದರ ಕೊಡುಗೆಗಳು ಈ ವಿಶ್ಲೇಷಣೆಗೆ ಸ್ತ್ರೀವಾದಿ ಚೌಕಟ್ಟನ್ನು ಒದಗಿಸಿವೆ. ಒಟ್ಟಾರೆಯಾಗಿ, ಸಂಗೀತ, ಕಾವ್ಯ ಮತ್ತು ಆಡುಭಾಷೆಯ ಸಮ್ಮಿಲನದೊಂದಿಗೆ ಮೂಡಿಬಂದ ಈ ವೃತ್ತಿರಂಗಭೂಮಿಯು ಕಲೆಯ ಮೂಲಕ ಸಮಾಜವನ್ನು ಪರಿವರ್ತಿಸುವ ಮತ್ತು ಕನ್ನಡದ ಸಾಂಸ್ಕೃತಿಕ ಚರಿತ್ರೆಯನ್ನು ಮರುನಿರ್ಮಿಸುವ ಪ್ರಮುಖ ಸೈದ್ಧಾಂತಿಕ ಹಾದಿಯಾಗಿದೆ.
ಡಿಜಿಟಲ್ ಯುಗದಲ್ಲಿ ರಂಗಭೂಮಿಯ ಪ್ರಸ್ತುತತೆ
150 to 155
ಡಿಜಿಟಲ್ ತಂತ್ರಜ್ಞಾನವು ಮಾನವ ಜೀವನದ ಬಹುತೇಕ ಎಲ್ಲ ಕ್ಷೇತ್ರಗಳನ್ನು ಆವರಿಸಿಕೊಂಡಿರುವ ಇಂದಿನ ಕಾಲಘಟ್ಟದಲ್ಲಿ ರಂಗಭೂಮಿಯ ಪ್ರಸ್ತುತತೆಯ ಕುರಿತ ಚರ್ಚೆಯು ಅಗತ್ಯ ಮತ್ತು ಅವಶ್ಯಕವೆನಿಸಿಕೊಳ್ಳುತ್ತದೆ. ರಂಗಭೂಮಿಯ ವಿಶೇಷವೆಂದರೆ ವೇದಿಕೆಯ ಮೇಲೆ ನಡೆಯುವ ಅಭಿನಯ, ಸಂಭಾಷಣೆ, ಸಂಗೀತ ಮತ್ತು ಭಾವನೆಗಳು ಕಲಾವಿದ ಮತ್ತು ಪ್ರೇಕ್ಷಕರ ನಡುವೆ ನೇರ ಸಂಪರ್ಕವನ್ನು ಸಾಧಿಸುತ್ತದೆ. ಪ್ರತಿ ಪ್ರದರ್ಶನವೂ ಆ ಕ್ಷಣದಲ್ಲೇ ಜೀವ ತಳೆಯುವಂತಹದ್ದಾಗಿರುವುದರಿಂದ ರಂಗಭೂಮಿಯು ಭಾವನೆ ಮತ್ತು ಸಂಸ್ಕೃತಿಯನ್ನು ಜೀವಿಸುವ ವೇದಿಕೆಯಾಗಿದೆ. ಮತ್ತು ರಂಗಭೂಮಿಯು ತಂತ್ರಜ್ಞಾನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ (Digital Detox), ಮಾನಸಿಕ ಆರೋಗ್ಯದ ಕಡೆಗೆ ಗಮನ ಹರಿಸಲು ಸಹಾಯ ಮಾಡುತ್ತದೆ.
ಸಮಾಜದಲ್ಲಿ ನಡೆಯುವ ಹಲವು ಸಂಕೀರ್ಣ ವಿಚಾರಗಳನ್ನು ಜನಸಾಮಾನ್ಯರಿಗೆ ಸರಳವಾಗಿ ಅರ್ಥವಾಗುವಂತೆ, ವಿಚಾರವಂತಿಕೆ ಮೂಡಿಸುತ್ತಾ ಮಾನವೀಯ ಮೌಲ್ಯಗಳನ್ನು ಜನಸಾಮಾನ್ಯರಲ್ಲಿ ಬಿತ್ತುವಲ್ಲಿ, ಸಮಾಜವನ್ನು ಚಿಂತನೆಗೆ ಒಳಪಡಿಸುವಲ್ಲಿ ರಂಗಭೂಮಿಯ ಪಾತ್ರ ಬಹಳ ದೊಡ್ಡದು. ಹಾಗಾಗಿ ಶೈಕ್ಷಣಿಕ ಚಟುವಟಿಕೆಯಾಗಿ ರಂಗಭೂಮಿಯ ಶಿಕ್ಷಣಕ್ಕೆ ವಿಶ್ವವಿದ್ಯಾಲಯಗಳಲ್ಲಿ ಆದ್ಯತೆ ನೀಡುವುದು ಡಿಜಿಟಲ್ ಯುಗದಲ್ಲಿ ಅಗತ್ಯವಾಗಿದೆ.
ಭಾರತೀಯ ರಂಗಭೂಮಿಯ ಇತಿಹಾಸ ಮತ್ತು ಬೆಳವಣಿಗೆ
156 to 163
ನಾಟಕ ಎನ್ನುವ ಪರಿಕಲ್ಪನೆಯು ಕಲೆಯ ಅಭಿವ್ಯಕ್ತಿಗಳಲ್ಲಿ ಒಂದಾಗಿದೆ. ಸಾಹಿತ್ಯ, ಅಲಂಕಾರ, ಸಂಭಾಷಣೆ ಇವುಗಳ ಜೊತೆಗೆ ದೈಹಿಕ ಅಂಗಾಂಗಗಳು, ಧ್ವನಿ, ಅಭಿವ್ಯಕ್ತಿ, ಅಲಂಕಾರ ಮುಂತಾದ ಅಂಶಗಳನ್ನು ಬಳಸಿಕೊಳ್ಳುವ ಒಂದು ವಿಶಿಷ್ಟ ಪ್ರಕಾರ. ಮನರಂಜನೆಯ ಜೊತೆಗೆ, ಇದು ಜನತೆಯನ್ನು ಸೆಳೆಯುವ, ವಿವಿಧ ಉದ್ದೇಶಗಳನ್ನು ತಲುಪಿಸುವ ಸಮರ್ಪಕ ಮಾಧ್ಯಮವೂ ಆಗಿದೆ. ಇಂತಹ ರಂಗಭೂಮಿ/ನಾಟಕದ ಕಲ್ಪನೆಯು ಭಾರತದಲ್ಲಿ ಹೇಗೆ ಆರಂಭವಾಯಿತು, ಬೆಳವಣಿಗೆಯಾಯಿತು ಎಂಬುದನ್ನು ತಿಳಿಯುವ ಅಗತ್ಯವಿದೆ. ಈ ಲೇಖನದಲ್ಲಿ ಅಂತಹ ಚರಿತ್ರಾರ್ಹ ಅಂಶಗಳನ್ನು ಪರಿಚಯಿಸುವ ಪ್ರಯತ್ನವನ್ನು ಮಾಡಲಾಗಿದೆ.
ರಂಗಕಲಾವಿದೆಯರ ಬದುಕಿನಲ್ಲಿ ಕಾಡಿದ ಅಭದ್ರತೆ
164 to 174
ರಂಗಭೂಮಿಯ ನಟ-ನಟಿಯರಿಗೆ ಬದುಕಿನಲ್ಲಿ ಕಾಡಿದ ಅಭದ್ರತೆಗಳು ಹಲವು. ವೃತ್ತಿರಂಗಭೂಮಿ ಕಲಾವಿದೆಯರಿಗೆ ನಿಗದಿತ ನಿಶ್ಚಿತ ಆದಾಯವಿಲ್ಲದ್ದರಿಂದ ಸದಾ ಹೊಯ್ದಾಟದ ಬದುಕು ಅವರದ್ದಾಗಿತ್ತು. ವೃತ್ತಿರಂಗಭೂಮಿಯ ನಟಿಯರಿಗೆ ತಮ್ಮ ಕುಟುಂಬದ ಮಕ್ಕಳ ಶಿಕ್ಷಣದ್ದೇ ಒಂದು ದೊಡ್ಡ ಚಿಂತೆಯಾಗಿತ್ತು. ಪ್ರತಿಯೊಬ್ಬ ರಂಗಕಲಾವಿದೆಯೂ ತಾನು ಚೆನ್ನಾಗಿ ದುಡಿಯುವಾಗ ತಮ್ಮ ಮುಂದಿನ ವೃದ್ಧಾಪ್ಯದ ಬದುಕಿಗೆ ಏನನ್ನೂ ಕೂಡಿಟ್ಟುಕೊಂಡಿಲ್ಲ. ರಂಗಕಲಾವಿದರನ್ನು ದೇಹದಲ್ಲಿ ಶಕ್ತಿ, ಕಸುವು ಇರುವವರೆಗೂ, ಯೌವ್ವನ ಇರುವವರೆಗೂ, ಕಂಪನಿಗಳು ದುಡಿಸಿಕೊಳ್ಳುತ್ತವೆ. ಯಾವ ಕಂಪನಿಗಳಿಗಾಗಿ ಆ ಕಲಾವಿದರು ದುಡಿದಿದ್ದರೋ ವೃದ್ಧಾಪ್ಯದಲ್ಲಿ ಆ ಕಂಪನಿಗಳು ಅವರತ್ತ ತಿರುಗಿಯೂ ನೋಡಿಲ್ಲ. ಇವರಿಗೆ ಸರ್ಕಾರದಿಂದ ಪುನರ್ವಸತಿ ಕಲ್ಪಿಸಬೇಕಾದ ಅಗತ್ಯವಿದೆ.
ಕನ್ನಡ ಚಲನಚಿತ್ರಗಳ ಬೆಳವಣಿಗೆಯಲ್ಲಿ ರಂಗಭೂಮಿ ಪ್ರಭಾವ
175 to 182
ರಂಗಭೂಮಿ ಮತ್ತು ಚಲನಚಿತ್ರವು ಸಮಾಜದ ಸಾಂಸ್ಕೃತಿಕ ಹಾಗೂ ಕಲಾತ್ಮಕ ಅಭಿವ್ಯಕ್ತಿಯ ಪ್ರಮುಖ ಮಾಧ್ಯಮಗಳಾಗಿವೆ. ರಂಗಭೂಮಿಯು ನೇರವಾಗಿ ಪ್ರೇಕ್ಷಕರೊಂದಿಗೆ ಸಂವಹನ ನಡೆಸುವ ಮೂಲಕ ಅಭಿನಯ, ಸಂಭಾಷಣೆ, ಸಂಗೀತ, ಬೆಳಕು ಮತ್ತು ರಂಗಸಜ್ಜಿಕೆಯಂತಹ ಅಂಶಗಳನ್ನು ಒಳಗೊಂಡಿದ್ದು, ಚಲನಚಿತ್ರವು ರಂಗಭೂಮಿಯ ಅಭಿನಯ, ಕಥನ, ಸಂಭಾಷಣೆ, ಮತ್ತು ದೃಶ್ಯಾತ್ಮಕತೆಯ ಹಲವು ಅಂಶಗಳನ್ನು ಅಳವಡಿಸಿಕೊಂಡು ತಂತ್ರಜ್ಞಾನದ ನೆರವಿನಿಂದ ವಿಶಾಲ ಪ್ರೇಕ್ಷಕರನ್ನು ತಲುಪಿದೆ. ರಂಗಭೂಮಿಯು ಚಲನಚಿತ್ರದ ಕಥಾವಸ್ತು, ಅಭಿನಯ, ಶೈಲಿ, ನಿರ್ದೇಶನ, ಮತ್ತು ದೃಶ್ಯ ಮಾಧ್ಯಮಗಳು ರಂಗಭೂಮಿಯಲ್ಲಿಯೂ ಹೊಸ ಪ್ರಯೋಗಗಳಿಗೆ ಪ್ರೇರಣೆ ನೀಡಿವೆ. ಹೀಗಾಗಿ ರಂಗಭೂಮಿ ಮತ್ತು ಚಲನಚಿತ್ರ ಪರಸ್ಪರ ಪ್ರಭಾವ ಬೀರುತ್ತಾ ಕನ್ನಡ ಸೇರಿದಂತೆ ಭಾರತೀಯ ಕಲಾ ಸಂಸ್ಕೃತಿಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿವೆ.