ಕನ್ನಡ ರಂಗಭೂಮಿ ಮತ್ತು ಭಕ್ತಿ ಪರಂಪರೆ

Main Article Content

ಡಾ. ಜ್ಯೋತಿ ರೈ.

Abstract

ಕನ್ನಡ ರಂಗಭೂಮಿಯನ್ನು ಪ್ರಭಾವಿಸಿದ ಪ್ರಮುಖ ವಿಚಾರಗಳಲ್ಲಿ ಭಕ್ತಿ ಚಳುವಳಿ ಅತ್ಯಂತ ಮಹತ್ವದ್ದು ಎಂದರೆ ತಪ್ಪಾಗಲಾರದು. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕೂಡ 12ನೇ ಶತಮಾನದ ನಂತರ ಮೂಡಿಬಂದ ಭಕ್ತಿ ಚಳುವಳಿ ಜನಸಾಮಾನ್ಯರನ್ನು ತನ್ನೊಳಗೆ ಸೇರಿಸಿಕೊಂಡು ಮುಂದುವರಿದ ಬಗೆ ಅತ್ಯದ್ಭುತವಾದುದು. 12ನೇ ಶತಮಾನದ ವಚನ ಚಳುವಳಿ ಮತ್ತು 15-16ನೇ ಶತಮಾನದ ಹರಿದಾಸ ಸಾಹಿತ್ಯವು ಕನ್ನಡ ಸಾಹಿತ್ಯವನ್ನು ಪಂಡಿತರ ಆಸ್ಥಾನದಿಂದ ಜನಸಾಮಾನ್ಯರ ಅಂಗಳಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದವು. ವಚನ ಚಳುವಳಿ ಮತ್ತು ದಾಸ ಸಾಹಿತ್ಯವು ಸಮಾಜದಲ್ಲಿ ಬಿತ್ತಿದ ಭಕ್ತಿ, ಸಮಾನತೆ ಮತ್ತು ಕಾಯಕ ತತ್ತ್ವಗಳು ಕನ್ನಡ ರಂಗಭೂಮಿಯ ಪ್ರಮುಖ ಕಥಾವಸ್ತುಗಳಾಗಿ ರೂಪುಗೊಂಡಿವೆ. ಪ್ರಾಚೀನ ಕಾಲದಿಂದಲೂ ಜನಸಾಮಾನ್ಯರಿಗೆ ಭಕ್ತಿಯ ಸಂದೇಶವನ್ನು ಮತ್ತು ನೈತಿಕ ಮೌಲ್ಯಗಳನ್ನು ತಲುಪಿಸಲು ರಂಗಕಲೆಗಳೇ ಅತ್ಯಂತ ಪ್ರಬಲ ಮಾಧ್ಯಮಗಳಾಗಿದ್ದವು. 
ರಂಗಭೂಮಿಯ ಸಂಗೀತ ಮತ್ತು ಅಭಿನಯದ ಮೇಲೆ ಭಕ್ತಿ ಸಾಹಿತ್ಯದ ಪ್ರಭಾವ ದಟ್ಟವಾಗಿದೆ. ದಾಸರ ಕೀರ್ತನೆಗಳು ವೃತ್ತಿ ರಂಗಭೂಮಿಯ ರಂಗ ಗೀತೆಗಳಿಗೆ ಭದ್ರ ಬುನಾದಿಯನ್ನು ಒದಗಿಸಿದರೆ, ವಚನಗಳ ಸಂವಾದಾತ್ಮಕ ಶೈಲಿಯು ನಾಟಕದ ರಚನೆಗೆ ಸ್ಪೂರ್ತಿಯಾಯಿತು. ಕರ್ನಾಟಕದ ವಿಶಿಷ್ಟ ಜಾನಪದ ರಂಗಕಲೆಗಳಾದ ಯಕ್ಷಗಾನ, ಬಯಲಾಟ, ಸಣ್ಣಾಟ, ಮತ್ತು ದೊಡ್ಡಾಟಗಳು ಬಹುಪಾಲು ಪೌರಾಣಿಕ ಹಾಗೂ ಭಕ್ತಿ ಆಧಾರಿತ ಕಥೆಗಳನ್ನೇ ಅವಲಂಬಿಸಿವೆ. ಹರಿಕಥೆ ಮತ್ತು ತಾಳಮದ್ದಲೆಗಂತಹ ಕಲೆಗಳು ರಂಗಭೂಮಿಯ ಆರಂಭಿಕ ಸ್ವರೂಪಗಳಾಗಿದ್ದು ಭಕ್ತಿಪಂಥದ ಮೌಲ್ಯಗಳನ್ನು ಜನಮಾನಸದಲ್ಲಿ ಬಿತ್ತಿವೆ. 
ವೃತ್ತಿ ರಂಗಭೂಮಿಯ ಯುಗದಲ್ಲಿ ಕೂಡ ಬಸವಣ್ಣ, ಅಕ್ಕಮಹಾದೇವಿ, ಭಕ್ತ ಪ್ರಹ್ಲಾದ, ಭಕ್ತ ಕುಂಬಾರ, ಮತ್ತು ದಾಸವರೇಣ್ಯರ ಜೀವನ ಚರಿತ್ರೆಗಳು ಯಶಸ್ವಿಯಾಗಿ ಪ್ರದರ್ಶನಗೊಂಡವು. ಆಧುನಿಕ ರಂಗಭೂಮಿಯು ಹೊಸ ದೃಷ್ಟಿಕೋನದಿಂದ ಭಕ್ತಿಪರಂಪರೆಯನ್ನು ಪುನರ್ ನಿರ್ಮಿಸಿವೆ. ಗಿರೀಶ್ ಕಾರ್ನಾಡರ ತಲೆದಂಡದಂತಹ ನಾಟಕಗಳು ಶರಣರ ಕಾಲದ ಸಾಮಾಜಿಕ ಕ್ರಾಂತಿಯನ್ನು ಸಮಕಾಲೀನ ದೃಷ್ಟಿಕೋನದಿಂದ ರಂಗದ ಮೇಲೆ ತಂದಿವೆ. ಯಕ್ಷಗಾನವು ಭಕ್ತಿ ಪರಂಪರೆಗೆ ನೀಡಿದ ಕೊಡುಗೆ ಅನನ್ಯವಾದುದು. ಮಹಾವಿಷ್ಣುವಿನ ದಶಾವತಾರಗಳು ಯಕ್ಷಗಾನದಲ್ಲಿ ಪ್ರದರ್ಶನಗೊಂಡು ಜನ ಮಾನಸದಲ್ಲಿ ನೆಲೆಸಿತು. ಆಧುನಿಕ ಕಾಲದಲ್ಲಿ ವಿವಿಧ ಕ್ಷೇತ್ರಗಳಿಂದ ನಡೆಸಲ್ಪಡುವ ವಿವಿಧ ಯಕ್ಷಗಾನ ಮೇಳಗಳು ರಾಮಾಯಣ, ಮಹಾಭಾರತದ ಕಥೆಗಳನ್ನಾಧರಿಸಿದ ಯಕ್ಷಗಾನಗಳನ್ನೇ ಪ್ರದರ್ಶಿಸುತ್ತವೆ. ಕರಾವಳಿ ಕರ್ನಾಟಕದ ಅತ್ಯಂತ ಪ್ರಸಿದ್ಧ ಜಾನಪದ ಕಲೆಯಾದ ‘ಭೂತಾರಾಧನೆ’ಯು ಜನಮಾನಸದಲ್ಲಿ ದೈವಭಕ್ತಿಯನ್ನು ನೆಲೆಗೊಳಿಸುವಲ್ಲಿ ಯಶಸ್ವಿಯಾಗಿದೆ. 
ಒಟ್ಟಾರೆಯಾಗಿ ಭಕ್ತಿಪರಂಪರೆಯು ಕನ್ನಡ ರಂಗಭೂಮಿಗೆ ಕೇವಲ ಧಾರ್ಮಿಕ ಚೌಕಟ್ಟನ್ನು ಮಾತ್ರ ನೀಡದೆ, ಮಾನವೀಯತೆ, ಸಾಮಾಜಿಕ ಕಳಕಳಿ, ಮತ್ತು ಸಾಂಸ್ಕೃತಿಕ ಜಾಗೃತಿಯನ್ನು ಮೂಡಿಸುವ ಅದ್ಭುತ ಶಕ್ತಿಯನ್ನು ಒದಗಿಸಿದೆ ಎಂದರೆ ತಪ್ಪಾಗಲಾರದು. 

Article Details

Section

Research Articles

Author Biography

ಡಾ. ಜ್ಯೋತಿ ರೈ.

ಸಹ ಪ್ರಾಧ್ಯಾಪಕರು, ಆಳ್ವಾಸ್ ಕಾಲೇಜು (ಸ್ವಾಯತ್ತ), ಮೂಡುಬಿದಿರೆ.

How to Cite

ಜ್ಯೋತಿ ರೈ. (2026). ಕನ್ನಡ ರಂಗಭೂಮಿ ಮತ್ತು ಭಕ್ತಿ ಪರಂಪರೆ. ಅಕ್ಷರಸೂರ್ಯ (AKSHARASURYA), 17(06), 42 to 48. https://aksharasurya.com/index.php/latest/article/view/2395

References

ಅಕ್ಷರ ಕೆ.ವಿ., (2000), ರಂಗಪ್ರಪಂಚ, ಹೊಸದೆಹಲಿ: ನ್ಯಾಷನಲ್ ಬುಕ್ ಟ್ರಸ್ಟ್, ಇಂಡಿಯಾ.

ವೆಂಕಟರಾಮ್ ಎನ್.ಎಸ್., (2001), ನವಕರ್ನಾಟಕ ಕೈಪಿಡಿ ರಂಗಭೂಮಿ, ಬೆಂಗಳೂರು: ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೇಟ್ ಲಿಮಿಟೆಡ್.

ವೈಕುಂಠರಾಜು ಬಿ.ವಿ., (1997), ಕನ್ನಡ ರಂಗಭೂಮಿ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.