ಕನ್ನಡ ರಂಗಭೂಮಿ - ಪರಂಪರೆ ಮತ್ತು ಪ್ರಸ್ತುತ ಸ್ಥಿತಿ

Main Article Content

ಡಾ. ಶಿವಾನಂದ ಎಂ. ಹಂಚಿನಾಳ

Abstract

ಜಗತ್ತಿನ ಅತ್ಯಂತ ಪ್ರಾಚೀನ ಕಲೆಗಳಲ್ಲಿ ರಂಗ ಪರಂಪರೆ ಪ್ರಮುಖವಾದುದು. ಎಲ್ಲಾ ದೇಶಗಳಲ್ಲಿ ನಾಟಕ ಹುಟ್ಟಿದ್ದು ದೇವತೆಗಳ ಆನಂದಕ್ಕಾಗಿ ಅಥವಾ ಭೂತ ಬೇತಾಳಗಳನ್ನು ತೃಪ್ತಿಪಡಿಸುವುದಕ್ಕಾಗಿ ನಡೆಯುವ ಆಚರಣೆಗಳಿಂದ ರಂಗಭೂಮಿ ಜನ್ಮ ತಾಳಿದೆ ಎನ್ನಬಹುದು. ಒಟ್ಟಿನಲ್ಲಿ ಯಾವುದೇ ದೇಶದ ರಂಗಭೂಮಿ ಅಲ್ಲಿನ ಧಾರ್ಮಿಕ ನಂಬಿಕೆಯ ಹಿನ್ನೆಲೆಯಲ್ಲಿ ಬೆಳೆದು ಬಂದಿದೆ ಎಂಬುವುದು ಸತ್ಯವಾದ ಮಾತು. ನೃತ್ಯ, ಸಂಗೀತ, ಶಿಲ್ಪ ಮುಂತಾದ ಸಾಂಸ್ಕೃತಿಕ ಕಲೆಗಳು ನಾಟಕದ ಪ್ರಮುಖವಾದ ಅಂಗಗಳಾಗಿವೆ. ಕನ್ನಡ ರಂಗಭೂಮಿಯು ಕರ್ನಾಟಕದ ಸಾಂಸ್ಕೃತಿಕ ಪರಂಪರೆಯ ಪ್ರಮುಖ ಅಂಗವಾಗಿದೆ. ಜಾನಪದ ರಂಗರೂಪಗಳಿಂದ ಆರಂಭಗೊಂಡು ಆಧುನಿಕ ಪ್ರಯೋಗಾತ್ಮಕ ನಾಟಕಗಳವರೆಗೆ ಕನ್ನಡ ರಂಗಭೂಮಿ ನಿರಂತರವಾಗಿ ಬೆಳವಣಿಗೆಯನ್ನು ಕಂಡಿದೆ. ಸಮಾಜದ ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಹಾಗೂ ನೈತಿಕ ಬದಲಾವಣೆಗಳನ್ನು ಪ್ರತಿಬಿಂಬಿಸುವ ಮಾಧ್ಯಮವಾಗಿ ಇದು ಕಾರ್ಯನಿರ್ವಹಿಸಿದೆ. ಈ ಲೇಖನದಲ್ಲಿ ಕನ್ನಡ ರಂಗಭೂಮಿಯ ಐತಿಹಾಸಿಕ ಹಿನ್ನೆಲೆ, ಬೆಳವಣಿಗೆ, ಪ್ರಮುಖ ನಾಟಕಕಾರರು, ಸಾಮಾಜಿಕ ಕೊಡುಗೆ, ಪ್ರಸ್ತುತ ಸ್ಥಿತಿ, ಎದುರಿಸುತ್ತಿರುವ ಸವಾಲುಗಳು ಹಾಗೂ ಭವಿಷ್ಯದ ಸಾಧ್ಯತೆಗಳನ್ನು ವಿಶ್ಲೇಷಿಸಲಾಗಿದೆ. ರಂಗಭೂಮಿಯು ಕೇವಲ ಮನರಂಜನೆಯ ಮಾಧ್ಯಮವಲ್ಲ; ಅದು ಸಮಾಜದ ಕನ್ನಡಿಯಾಗಿದೆ. ಜನರ ಭಾವನೆಗಳು, ಬದುಕಿನ ಮೌಲ್ಯಗಳು, ರಾಜಕೀಯ ಬೆಳವಣಿಗೆಗಳು ಹಾಗೂ ಸಾಮಾಜಿಕ ಸಮಸ್ಯೆಗಳನ್ನು ನಾಟಕದ ಮೂಲಕ ಜನರಿಗೆ ತಲುಪಿಸುವ ಶಕ್ತಿಯುತ ಕಲಾ ಪ್ರಕಾರವಾಗಿದೆ. ಕನ್ನಡ ರಂಗಭೂಮಿಯ ಇತಿಹಾಸವು ಸಾವಿರಾರು ವರ್ಷಗಳ ಸಾಂಸ್ಕೃತಿಕ ಪರಂಪರೆಯೊಂದಿಗೆ ಬೆಸೆದುಕೊಂಡಿದೆ. ಜಾನಪದ ಕಲೆಗಳಿಂದ ಆರಂಭಗೊಂಡ ಈ ಪಯಣವು ಇಂದಿನ ಆಧುನಿಕ ರಂಗಭೂಮಿಯವರೆಗೆ ವಿಸ್ತರಿಸಿದೆ. ಕರ್ನಾಟಕದಲ್ಲಿ ರಂಗಭೂಮಿಯ ಬೇರುಗಳು ಜಾನಪದ ಕಲಾ ಸಂಪ್ರದಾಯಗಳಲ್ಲಿ ಕಂಡುಬರುತ್ತವೆ. ಯಕ್ಷಗಾನ, ತಾಳಮದ್ದಲೆ, ಗೊಂಬೆಯಾಟ, ಡೊಳ್ಳು ಕುಣಿತ, ವೀರಗಾಸೆ ಮೊದಲಾದ ಕಲಾರೂಪಗಳು ಕನ್ನಡ ರಂಗಭೂಮಿಯ ಮೂಲಾಧಾರಗಳಾಗಿವೆ. ಕನ್ನಡ ನಾಡಿನಲ್ಲಿ ಹಿಂದಿನಿಂದಲೂ ವಿಶಿಷ್ಟವಾಗಿ ಪ್ರಚಾರದಲ್ಲಿರುವ ತಾಳಮದ್ದಲೆ, ಗೊಂದಲಿಗರ ಪ್ರಸಂಗಗಳು, ಕಂಸಾಳೆ ಅಂತಹ ಕಲಾ ರೂಪಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಪೌರಾಣಿಕ ಕಥಾ ಪ್ರಸಂಗಗಳನ್ನು ಹಬ್ಬ ಹರಿದಿನಗಳಲ್ಲಿ, ಜಾತ್ರೆ ಉತ್ಸವಗಳಲ್ಲಿ ಇಂದಿಗೂ ನಮ್ಮ ಜನಪದರು ಆರಾಧಿಸುವ ಸಂಭ್ರಮಾಚರಣೆಯಲ್ಲಿ ಭಾಗಿಯಾಗುವ ಪ್ರಸಂಗಗಳನ್ನು ನಾವು ಕಾಣಬಹುದಾಗಿದೆ. ಇವುಗಳು ಕೇವಲ ಕಥನ ಕಲೆಗಳಾಗಿರದೆ ಪ್ರದರ್ಶನ ಕಲೆಗಳಾದ ಈ ಬಗೆಯ ತಂತ್ರ ಕಲಾ ರೂಪಗಳಿಂದ ಪ್ರಾಚೀನ ಕನ್ನಡ ರಂಗಭೂಮಿ ಪ್ರೇರಣೆ, ಪುಷ್ಟಿಯನ್ನು ಹೊಂದಿದೆ. ರಂಗಭೂಮಿ ಹಲವು ಕಲೆಗಳ ಸಂಗಮ - ನೃತ್ಯ, ಸಂಗೀತ, ಸಾಹಿತ್ಯ, ಅಭಿನಯಗಳು ಮೇಳೈಸಿದ ದೃಶ್ಯ ಕಾವ್ಯ. ಕಾಳಿದಾಸನು ಹೇಳುವಂತೆ “ಕಾವ್ಯೇಷು ನಾಟಕಂ ರಮ್ಯಂ” ಎಂಬ ಮಾತು ಗಮನಿಸಬಹುದು. ಮನರಂಜನೆ, ಜ್ಞಾನ ನೀಡುವುದು ರಂಗಭೂಮಿಯ ಪ್ರಯೋಜನಗಳಾಗಿವೆ. ಜಗತ್ತಿನ ಅತ್ಯಂತ ಪ್ರಾಚೀನ ಕಲೆಗಳಲ್ಲಿ ನಾಟಕ ಒಂದಾಗಿದೆ. ಈ ನಾಟಕಕ್ಕೆ ತನ್ನದೇ ಆದ ಪರಂಪರೆಯಿದೆ, ಇದನ್ನೇ ವಿಶಾಲಾರ್ಥದಲ್ಲಿ ರಂಗ ಪ್ರಪಂಚ ಅಥವಾ ರಂಗಭೂಮಿ ಎಂದು ಕರೆಯಲಾಗುತ್ತದೆ.

Article Details

Section

Research Articles

Author Biography

ಡಾ. ಶಿವಾನಂದ ಎಂ. ಹಂಚಿನಾಳ

ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು, ಕನ್ನಡ ವಿಭಾಗ, ನ್ಯೂ ಹಾರಿಜನ್ ಕಾಲೇಜು, ಕಸ್ತೂರಿ ನಗರ, ಬೆಂಗಳೂರು.

How to Cite

ಶಿವಾನಂದ ಎಂ. ಹಂಚಿನಾಳ. (2026). ಕನ್ನಡ ರಂಗಭೂಮಿ - ಪರಂಪರೆ ಮತ್ತು ಪ್ರಸ್ತುತ ಸ್ಥಿತಿ. ಅಕ್ಷರಸೂರ್ಯ (AKSHARASURYA), 17(06), 57 to 65. https://aksharasurya.com/index.php/latest/article/view/2397

References

ಪುಟ್ಟಸ್ವಾಮಯ್ಯ ಬಿ., (1983), ಕನ್ನಡ ರಂಗಭೂಮಿ ನಡೆದು ಬಂದ ದಾರಿ, ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ.

ವೆಂಕಟರಾಮ್ ಎನ್. ಎಸ್., (2012), ನವಕರ್ನಾಟಕ ಕೈಪಿಡಿ ರಂಗಭೂಮಿ, ಬೆಂಗಳೂರು: ನವ ಕರ್ನಾಟಕ ಪ್ರಕಾಶನ.

ರಂಗನಾಥ್ ಎಚ್. ಕೆ., (1970), ಕರ್ನಾಟಕ ರಂಗಭೂಮಿ, ಮೈಸೂರು: ಸುರುಚಿ ಪ್ರಕಾಶನ.

ಕೃಷ್ಣ ಶಾಸ್ತ್ರಿ ಎ. ಆರ್., (1988), ಸಂಸ್ಕೃತ ನಾಟಕ ಚರಿತ್ರೆ, ಮೈಸೂರು: ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ.

ಚಕ್ಕೆರೆ ಶಿವಶಂಕರ್, (2008), ಕರ್ನಾಟಕ ಜನಪದ ರಂಗಭೂಮಿ, ಬೆಂಗಳೂರು: ಕರ್ನಾಟಕ ಜಾನಪದ ಪರಿಷತ್ತು.