ಯಕ್ಷಗಾನ ಮತ್ತು ಕನ್ನಡ ರಂಗಭೂಮಿಯ ಸಂಬಂಧ: ವರ್ತಮಾನದ ಬೆಳಕಿನಲ್ಲಿ ಮರುಚಿಂತನೆ

Main Article Content

ಡಾ. ದಿನೇಶ್ ನಾಯಕ್

Abstract

ಈ ಲೇಖನವು ಕನ್ನಡ ರಂಗಭೂಮಿ ಮತ್ತು ಯಕ್ಷಗಾನದ ಸಂಬಂಧ ಸ್ವರೂಪಗಳ ಬಗ್ಗೆ ಮತ್ತು ಈ ಎರಡು ರಂಗಪ್ರಕಾರಗಳಲ್ಲಿ ಇಂದು ಕಾಣಿಸುತ್ತಿರುವ ಪಲ್ಲಟವನ್ನು ವಿಶ್ಲೇಷಿಸುವ ಪ್ರಯತ್ನ ಮಾಡುತ್ತದೆ. ರಂಗಭೀಷ್ಮರೆಂದೆನಿಸಿದ ಬಿ.ವಿ.ಕಾರಂತರು ಮತ್ತು ಗಿರೀಶ್ ಕಾರ್ನಾಡರಂತಹ ರಂಗಚಿಂತಕರು ಯಕ್ಷಗಾನದ ತೆರೆ, ಆಂಗಿಕ ಚಲನೆ ಹಾಗೂ ಭಾಗವತರ ನಿರೂಪಣಾ ತಂತ್ರಗಳನ್ನು ನಾಟಕಗಳಿಗೆ ಅಳವಡಿಸಿಕೊಂಡರೆ, ಆಧುನಿಕ ರಂಗಭೂಮಿಯ ವೈಚಾರಿಕತೆಯು ಯಕ್ಷಗಾನವನ್ನು ಬರೀ ಧಾರ್ಮಿಕ ಚೌಕಟ್ಟಿನಿಂದ ಹೊರತಂದು ಮಾನವೀಯ-ರಾಜಕೀಯ ವಿಶ್ಲೇಷಣೆಯ ಮಟ್ಟಕ್ಕೇರಿಸಿತು ಎಂಬುದನ್ನು ಈ ಲೇಖನ ಪುರಾವೆ ಸಹಿತ ವಿಶದೀಕರಿಸುತ್ತದೆ.
ಯಕ್ಷಗಾನದ ಇತ್ತೀಚಿನ ಬೆಳವಣಿಗೆಗಳಲ್ಲಿ ಕಾಲಮಿತಿಯ ಪ್ರದರ್ಶನಗಳು, ಮಹಿಳಾ ಮೇಳಗಳ ಸಕ್ರಿಯತೆ, ಯುವಪೀಳಿಗೆಯ ಭಾರಿ ಭಾಗವಹಿಸುವಿಕೆ ಎದ್ದು ಕಾಣುವ ಅಂಶಗಳು. ಹಾಗೆಯೇ ಮ್ಯಾಕ್‌ಬೆತ್, ಗೃಹಭಂಗ, ನಿರುತ್ತರಾಯಣಗಳಂತಹ ವಿನೂತನ ಪ್ರಯೋಗಗಳು ಯಕ್ಷಗಾನಕ್ಕೆ ರಂಗಭೂಮಿಯ ತಾಂತ್ರಿಕತೆಯನ್ನು ಅಳವಡಿಸಿಕೊಂಡು ಹೇಗೆ ಆಕರ್ಷಗೊಳಿಸಬಹುದು ಎಂಬುದನ್ನು ತೋರಿಸಿಕೊಟ್ಟಿದೆ. ಜೊತೆಗೆ, ಅರ್ಥಧಾರಿಗಳು ಪೌರಾಣಿಕ ಸನ್ನಿವೇಶಗಳ ಮೂಲಕ ಸ್ತ್ರೀವಾದ, ಪರಿಸರ ನಾಶ ಹಾಗೂ ಪ್ರಚಲಿತ ರಾಜಕೀಯ-ಸಾಂವಿಧಾನಿಕ ಮೌಲ್ಯಗಳ ಕುರಿತು ಪ್ರಾಸಂಗಿಕ ಆಶು ಸಂಭಾಷಣೆ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಆಧುನಿಕ ರಂಗಭೂಮಿಯಲ್ಲಿ ಪರ್ವದಂತಹ ನಾಟಕಗಳ ಮೂಲಕ ಸಾಂಸ್ಕೃತಿಕ ಮರುಶೋಧದ ಪ್ರಯತ್ನಗಳು ನಡೆದಿವೆ. ಅಡ್ಡಂಡ ಕಾರ್ಯಪ್ಪನವರು ‘ಟಿಪ್ಪುವಿನ ನಿಜ ಕನಸುಗಳು’ ನಾಟಕದ ಮೂಲಕ ತೀವ್ರವಾದಿ ಬಲಪಂಥೀಯ ರಂಗಭೂಮಿಯನ್ನು ಕಟ್ಟುವ ಪ್ರಯತ್ನ ಮಾಡಿದ್ದಾರೆ. ಸಮುದಾಯ, ನೀನಾಸಂ, ಆಯನ, ನಿರ್ದಿಗಂತ, ಅಸ್ತಿತ್ವ, ಜರ್ನಿ ಮೊದಲಾದ ತಂಡಗಳು ಸಾಮಾಜಿಕ ಅಸಮಾನತೆ, ದಲಿತ ಪ್ರಜ್ಞೆ ಹಾಗೂ ಸ್ತ್ರೀವಾದ ಸಂವೇದನೆಗಳ ಪರವಾಗಿ ಪ್ರಗತಿಪರ ಚಳವಳಿಯನ್ನು ಕಾಯ್ದುಕೊಂಡಿವೆ. ಹೀಗೆ ಯಕ್ಷಗಾನದ ಸಾತ್ತ್ವಿಕ ಅಭಿನಯ ಹಾಗೂ ರಂಗಭೂಮಿಯ ವೈಚಾರಿಕತೆಗಳು ಪರಸ್ಪರ ಪೂರಕವಾಗಿ ಬೆಳೆಯುತ್ತಾ ಬದಲಾಗುತ್ತಿರುವ ಸಾಂಸ್ಕೃತಿಕ ಸವಾಲುಗಳಿಗೆ ತಾರ್ಕಿಕವಾಗಿ ಸ್ಪಂದಿಸುತ್ತಿವೆ ಎಂಬುದನ್ನು ಲೇಖನ ಸ್ಪಷ್ಟಪಡಿಸುತ್ತದೆ.

Article Details

Section

Research Articles

Author Biography

ಡಾ. ದಿನೇಶ್ ನಾಯಕ್

ಮುಖ್ಯಸ್ಥರು, ಕನ್ನಡ ವಿಭಾಗ, ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯ, ಮಂಗಳೂರು.

How to Cite

ದಿನೇಶ್ ನಾಯಕ್. (2026). ಯಕ್ಷಗಾನ ಮತ್ತು ಕನ್ನಡ ರಂಗಭೂಮಿಯ ಸಂಬಂಧ: ವರ್ತಮಾನದ ಬೆಳಕಿನಲ್ಲಿ ಮರುಚಿಂತನೆ. ಅಕ್ಷರಸೂರ್ಯ (AKSHARASURYA), 17(06), 66 to 75. https://aksharasurya.com/index.php/latest/article/view/2398

References

ಅಕ್ಷರ ಕೆ. ವಿ., (2022), ರಂಗ ಅನ್ವೇಷಣೆ, ಹೆಗ್ಗೋಡು: ಅಕ್ಷರ ಪ್ರಕಾಶನ.

ಹೆಗಡೆ ಎಂ. ಎ. (ಅನು.), (2014), ನಂದಿಕೇಶ್ವರನ ಅಭಿನಯ ದರ್ಪಣ, ಹೆಗ್ಗೋಡು: ಅಕ್ಷರ ಪ್ರಕಾಶನ.

ಸುಬ್ಬಣ್ಣ ಕೆ. ವಿ. (ಅನು.), (1982), ರಂಗದಲ್ಲಿ ಅಂತರಂಗ, ಹೆಗ್ಗೋಡು: ಅಕ್ಷರ ಪ್ರಕಾಶನ.

ನಿತ್ಯಾನಂದ ಬಿ. ಶೆಟ್ಟಿ, (2026), ಅಳವು ಅರಿಯದ ಭಾಷೆ, ಕಾರ್ಕಳ: ಕನ್ನಡ ಸಂಘ ಕಾಂತಾವರ (ರಿ.).

ವೆಂಕಟರಮಣ ಐತಾಳ ಬಿ. ಆರ್. (ಅನು.), (2022), ಕನ್ಹಯ್ಯಲಾಲ್ ರಂಗಭೂಮಿ, ಹೆಗ್ಗೋಡು: ಅಕ್ಷರ ಪ್ರಕಾಶನ.

ಭಟ್ ಸೂರಿಕುಮೇರ್ ಕೆ. ಗೋವಿಂದ, (2021), ಎಪ್ಪತ್ತು ತಿರುಗಾಟಗಳು, ಮಂಗಳೂರು: ಸಂತ ಅಲೋಶಿಯಸ್ ಪ್ರಕಾಶನ.

ಭಟ್ಟ ಮುಳಿಯ ಮಹಾಬಲ (ಸಂ.), (1980), ಯಕ್ಷಗಾನ ಮಕರಂದ, ಮಂಗಳೂರು: ಪೊಳಲಿ ಶಾಸ್ತ್ರಿ ಅಭಿನಂದನ ಸಮಿತಿ.

ಶ್ರೀಪಾದ ಭಟ್ ಬಿ. (ಅನು., ಮೂಲ: ಬ್ರಹ್ಮಪ್ರಕಾಶ್), (ವರ್ಷ ಲಭ್ಯವಿಲ್ಲ), ಭಾರತದಲ್ಲಿ ತೀವ್ರವಾದಿ ಬಲಪಂಥೀಯ ರಂಗಭೂಮಿಯ ಉದಯ (ಲೇಖನ), ಮಂಗಳೂರು: ವಾರ್ತಾಭಾರತಿ ಪತ್ರಿಕೆ (ಜುಲೈ 15, ಪು. ಸಂ. 7)