ವಿಚಾರ ಸಾಹಿತ್ಯ: ಮತ, ಧರ್ಮದ ಪರಿಧಿಯಲ್ಲಿ ಸ್ತ್ರೀ
Main Article Content
Abstract
ಕನ್ನಡ ಸಾಹಿತ್ಯ ಪರಂಪರೆಯು ಆದಿಕಾಲದಿಂದಲೂ ವೈಚಾರಿಕತೆಯನ್ನು ತನ್ನೊಳಗೆ ಮಿಳಿತಗೊಳಿಸಿಕೊಂಡೇ ಬಂದಿದೆ. ವಿಚಾರ ಸಾಹಿತ್ಯ ಒಂದು ಪ್ರಕಾರವಾಗಿ ಪ್ರತ್ಯೇಕತೆಯನ್ನು ಪಡೆದುಕೊಂಡಿರುವುದು ಸುಮಾರು 20ನೆಯ ಶತಮಾನದಲ್ಲಿ. ಅಲ್ಲಿಯವರೆಗೂ ಸೃಜನಶೀಲ ಸಾಹಿತ್ಯದ ಮೂಲಕವೇ ವೈಚಾರಿಕ ಸಾಹಿತ್ಯವನ್ನು ಕಾಣಬಹುದು. ವಿಚಾರ ಸಾಹಿತ್ಯವು ಸಮಾಜದಲ್ಲಿ ನಡೆದ ಮತ್ತು ನಡೆಯುತ್ತಿರುವಂತಹ ವಿಷಯಗಳನ್ನೊಳಗೊಂಡು ಅದಕ್ಕೆ ಪ್ರತಿಕ್ರಿಯೆಯನ್ನು ನೀಡುತ್ತಲೇ ಸಾಗಿದೆ.
ಎಪ್ಪತ್ತರ ದಶಕದ ಕಾಲಘಟ್ಟದ ಸಂದರ್ಭದಲ್ಲಿ ನಡೆದ ಹಲವಾರು ಹೋರಾಟಗಳು, ಚಳುವಳಿಯ ಮೂಲಕ ಅನೇಕ ಚಿಂತಕರು ಸಮಾಜದಲ್ಲಿನ ಅಸಮಾನತೆ, ಶೋಷಣೆಗಳ ವಿರುದ್ಧ ಪ್ರತಿಭಟಿಸಿರುವುದನ್ನು ಕಾಣುತ್ತೇವೆ. ಅದೇ ಕಾಲಕ್ಕೆ ಮಹಿಳಾ ಚಳುವಳಿಯು ತನ್ನ ಅಸ್ತಿತ್ವವನ್ನು ಆರಂಭ ಮಾಡಿದ್ದನ್ನೂ ಸಹ ಕಾಣಬಹುದು. ಸ್ತ್ರೀವಾದಿ ಚಿಂತಕಿಯರು ಎಪ್ಪತ್ತರ ದಶಕದಲ್ಲಿ ಮಹಿಳಾ ವಿಮೋಚನೆಗಾಗಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡರು. ಸ್ತ್ರೀವಾದಿ ಸಾಹಿತ್ಯವು ಪುರುಷ ಪ್ರಧಾನ ಸಮಾಜವು ಮಹಿಳೆಯರ ಮೇಲೆ ನಡೆಸುತ್ತಿದ್ದ ಶೋಷಣೆ, ಲೈಂಗಿಕ ದೌರ್ಜನ್ಯ, ಲಿಂಗ ತಾರತಮ್ಯ ಇವುಗಳನ್ನು ಪ್ರತಿಭಟಿಸುವ ಸಲುವಾಗಿಯೇ ರಚನೆಯಾದವು. ಇದೇ ಸಂದರ್ಭದಲ್ಲಿ ಸೃಜನಶೀಲ ಸಾಹಿತ್ಯವಾದ ಕಥೆ, ಕಾದಂಬರಿ, ನಾಟಕ ಇವುಗಳ ಮೂಲಕ ಯಜಮಾನ್ಯ ಸಂಸ್ಕೃತಿಯ ವಿರುದ್ಧ ಪ್ರತಿರೋಧವನ್ನು ಅಭಿವ್ಯಕ್ತಿಸಿರುವುದು ಕಾಣಬಹುದು. ಬಹುಮುಖ್ಯವಾಗಿ ಮಹಿಳೆಯರ ಸಮಸ್ಯೆಗಳನ್ನು ಮತ್ತು ಅವುಗಳನ್ನು ಮಹಿಳೆ ಹೇಗೆ ಧಿಕ್ಕರಿಸಿ ಪುರುಷ ಪ್ರಧಾನ ಸಮಾಜದ ಸಾರ್ವತ್ರಿಕ ಕಟ್ಟಳೆಗಳಾದ ದೇವರು, ಧರ್ಮ, ಸಂಪ್ರದಾಯ ಆಚರಣೆಗಳನ್ನು ಮುರಿಯುವ ಪ್ರಯತ್ನವನ್ನು ಅಲ್ಲಿಯ ಮುಖ್ಯ ಪಾತ್ರಗಳ ಮೂಲಕ ಚಿತ್ರಿಸಲಾಗಿದೆ. ಮಾತೃಪ್ರಧಾನ ಕುಟುಂಬ ವ್ಯವಸ್ಥೆಯಿಂದ ಪುರುಷ ಪ್ರಧಾನ ಕುಟುಂಬ ವ್ಯವಸ್ಥೆಗೆ ಬದಲಾದಾಗಿನಿಂದ ಮಹಿಳೆಯನ್ನು ಭೋಗದ ವಸ್ತು, ಪುರುಷನ ಸೇವೆಗೆ ಮಾತ್ರ ಸೀಮಿತವಾದವಳು ಎನ್ನುವಂತಹ ಅಧೀನ ನೆಲೆಯಲ್ಲಿಯೇ ಮಹಿಳೆಯನ್ನು ನೋಡಲಾಗಿದೆ. ಮನುಧರ್ಮಶಾಸ್ತ್ರವು ಹೇಳಿರುವಂತೆ ಸ್ತ್ರೀ ಸ್ವಾತಂತ್ರ್ಯಕ್ಕೆ ಅರ್ಹಳಲ್ಲ ಎಂಬುದನ್ನು ಚಾಚೂ ತಪ್ಪದೆ ಈ ಸಮಾಜವು ಪಾಲಿಸಿಕೊಂಡೇ ಬಂದಿದೆ. ಹೀಗಾಗಿ ಹಿಂದಿನಿಂದಲೂ ಮಹಿಳೆಯನ್ನು ಶಿಕ್ಷಣದಿಂದ ವಂಚಿತಳನ್ನಾಗಿ ಮಾಡಲಾಯಿತು. ಎಲ್ಲದರ ವಿರುದ್ಧ ಮಹಿಳಾ ವಿಚಾರ ಸಾಹಿತ್ಯವು ಪ್ರತಿಭಟಿಸುತ್ತಾ ಪರ್ಯಾಯ ಮಾರ್ಗವನ್ನು ಹುಡುಕಿಕೊಳ್ಳುವ ಮತ್ತು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರಣೆ ನೀಡಿದೆ.
ಸಮಕಾಲೀನ ಸಂದರ್ಭದಲ್ಲಿ ಕೋಮುವಾದ ಮತ್ತು ಮೂಲಭೂತವಾದವು ಉತ್ತುಂಗದ ಸ್ಥಿತಿಯನ್ನು ತಲುಪುತ್ತಿದೆ. ಇದರ ಭಾಗವಾಗಿ ಮಂದಿರ, ಮಸೀದಿ, ಚರ್ಚುಗಳ ಮೇಲೆ ಧ್ವಂಸ ಕೃತ್ಯಗಳನ್ನು ನಡೆಸುವ ಮಾದರಿಗಳು ನಮ್ಮ ಮುಂದಿವೆ. ಧರ್ಮ ಮತ್ತು ಧಾರ್ಮಿಕತೆಯ ನೆಪವೊಡ್ಡಿ ದಲಿತರು, ಮಹಿಳೆಯರು ಮತ್ತು ದಮನಿತರ ಬದುಕಿನ ಮೇಲೆ ಆಕ್ರಮಣಗಳು ನಡೆಯುತ್ತಿವೆ. ಈ ಎಲ್ಲಾ ಕುತಂತ್ರಗಳ ಹಿಂದೆ ವೈದಿಕಶಾಹಿಯ ಪ್ರಭಾವವಿರುವುದು ಸ್ಪಷ್ಟವಾಗುತ್ತದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ಸುಮಿತ್ರಾಬಾಯಿ ಬಿ.ಎನ್., (2018), ಸ್ತ್ರೀವಾದ: ಒಂದು ಅವಲೋಕನ, ಶಿವಮೊಗ್ಗ: ಅಹರ್ನಿಶಿ ಪ್ರಕಾಶನ.
ಪಾರ್ವತಿ ಎಚ್.ಎಸ್., (1992), ಸಾಹಿತ್ಯ-ಮಹಿಳಾದೃಷ್ಟಿ, ಬೆಂಗಳೂರು: ಮಾನಸೋಲ್ಲಾಸ ಪ್ರಕಾಶನ.
ವಿಜಯಾ ದಬ್ಬೆ, (1997), ನಾರಿ: ದಾರಿ-ದಿಗಂತ, ಮೈಸೂರು: ರಚನಾ ಪ್ರಕಾಶನ.
ಶ್ರೀಮತಿ ಎಚ್.ಎಸ್., (2022), ಅಧಿಕಾರ ಮತ್ತು ಅಧೀನತೆ, ಹೆಗ್ಗೋಡು (ಸಾಗರ): ಆಕಾರ ಪ್ರಕಾಶನ.
ಆಶಾದೇವಿ ಎಂ.ಎಸ್., (2016), ಬೆಳಕಿಗಿಂತ ಬೆಳ್ಳಗೆ (ವಚನಕಾರ್ತಿಯರು ಹಾಗೂ ಮಧ್ಯಯುಗೀನ ಮಹಿಳಾ ಅನುಭಾವಿಗಳು), ಬೆಂಗಳೂರು: ಕೇಂದ್ರ ಸಾಹಿತ್ಯ ಅಕಾಡೆಮಿ.
ನಾಗಭೂಷಣ ಸ್ವಾಮಿ ಓ.ಎಲ್., (2014), ವಿಮರ್ಶೆಯ ಪರಿಭಾಷೆ, ಬೆಂಗಳೂರು: ಅಂಕಿತ ಪುಸ್ತಕ.
ಅಮೂರ ಜಿ.ಎಸ್., (1982), ಆಧುನಿಕ ಕನ್ನಡ ವಿಮರ್ಶೆ (ಪ್ರಕಾರ, ಪ್ರೇರಣೆ ಮತ್ತು ಪ್ರಯೋಗ), ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ.