Published: 2026-02-10

Table of Contents

Table of Contents

I to IV

ಕನ್ನಡ ಶಾಸ್ತ್ರೀಯ ಸ್ಥಾನಮಾನದ ಅಧಿಕೃತ ಆಕರಗಳಾಗಿ ಪಂಪಪೂರ್ವಯುಗದ ಭಾಷಿಕ-ಸಾಹಿತ್ಯಕ ಮೌಲ್ಯವುಳ್ಳ ಶಾಸನಗಳು

ಸಿ. ನಾಗಭೂಷಣ

1 to 18

ಪ್ರಸ್ತುತ ಲೇಖನವು ಕನ್ನಡ ಭಾಷೆಯ ಶಾಸ್ತ್ರೀಯ ಸ್ಥಾನಮಾನವನ್ನು ದೃಢೀಕರಿಸುವಲ್ಲಿ ಪಂಪಪೂರ್ವ ಯುಗದ ಶಾಸನಗಳ ಸಾಹಿತ್ಯಕ ಮತ್ತು ಭಾಷಿಕ ಮೌಲ್ಯಗಳನ್ನು ವಿಶ್ಲೇಷಿಸುತ್ತದೆ. ಕ್ರಿ.ಶ. 450ರ ಹಲ್ಮಿಡಿ ಶಾಸನದಿಂದ ಆರಂಭಿಸಿ, ತಮಟಕಲ್ಲು, ಬಾದಾಮಿಯ ಕಪ್ಪೆ ಅರಭಟ್ಟ ಹಾಗೂ ಶ್ರವಣಬೆಳಗೊಳದ ನಿಷಧಿ ಶಾಸನಗಳು ಕನ್ನಡದ ಪ್ರಾಚೀನತೆ ಮತ್ತು ಪ್ರೌಢಿಮೆಗೆ ಅಧಿಕೃತ ಆಧಾರಗಳಾಗಿವೆ. ಕವಿರಾಜಮಾರ್ಗಕ್ಕಿಂತ ಹಿಂದೆಯೇ ಕನ್ನಡದಲ್ಲಿ ಗದ್ಯ-ಪದ್ಯಗಳ ಸೃಜನಶೀಲ ಬಳಕೆ ಇತ್ತೆಂಬುದನ್ನು ಈ ಶಾಸನಗಳು ಸಾಬೀತುಪಡಿಸುತ್ತವೆ. ಕೇಂದ್ರ ಸರ್ಕಾರ ನಿಗದಿಪಡಿಸಿದ 1500-2000 ವರ್ಷಗಳ ಇತಿಹಾಸದ ಮಾನದಂಡಕ್ಕೆ ಪೂರಕವಾಗಿರುವ ಈ ಶಾಸನಗಳು, ಕನ್ನಡದ ಸ್ವೋಪಜ್ಞತೆ ಮತ್ತು ನಿರಂತರತೆಯನ್ನು ಎತ್ತಿಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂಬುದನ್ನು ಲೇಖನವು ಸವಿಸ್ತಾರವಾಗಿ ಚರ್ಚಿಸುತ್ತದೆ.

Read More »

ಭಾರತ ಸಂವಿಧಾನ: ಕುವೆಂಪು ಅನುಸಂಧಾನ

ಕುಪ್ಪನಹಳ್ಳಿ ಎಂ. ಬೈರಪ್ಪ

19 to 32

ಪ್ರಸ್ತುತ ಲೇಖನವು ಭಾರತದ ಸಂವಿಧಾನ ಮತ್ತು ರಾಷ್ಟ್ರಕವಿ ಕುವೆಂಪು ಅವರ ವೈಚಾರಿಕ ನಿಲುವುಗಳ ನಡುವಿನ ಅವಿನಾಭಾವ ಸಂಬಂಧವನ್ನು ವಿಶ್ಲೇಷಿಸುತ್ತದೆ. 1950ರ ಜನವರಿ 26ರಂದು ಸಂವಿಧಾನ ಜಾರಿಯಾದ ಐತಿಹಾಸಿಕ ಸಂದರ್ಭದಲ್ಲಿ ಕುವೆಂಪು ರಚಿಸಿದ ‘ಶ್ರೀಸಾಮಾನ್ಯರ ದೀಕ್ಷಾ ಗೀತೆ’ ಕವಿತೆಯನ್ನು ಆಧರಿಸಿ, ಸಂವಿಧಾನದ ಆಶಯಗಳು ಕಾವ್ಯಾತ್ಮಕವಾಗಿ ಹೇಗೆ ಅಭಿವ್ಯಕ್ತಿಗೊಂಡಿವೆ ಎಂಬುದನ್ನು ಇಲ್ಲಿ ಚರ್ಚಿಸಲಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ದರ್ಶನ ಮತ್ತು ಕುವೆಂಪು ಅವರ ‘ವಿಶ್ವಮಾನವ’ ಸಂದೇಶಗಳು ಸಮಾನತೆಯ ನೆಲೆಯಲ್ಲಿ ಹೇಗೆ ಸಂಧಿಸುತ್ತವೆ ಎಂಬುದನ್ನು ಲೇಖಕರು ಸ್ಫುಟಗೊಳಿಸಿದ್ದಾರೆ. ಸಂವಿಧಾನವು ಕೇವಲ ಕಾನೂನು ಗ್ರಂಥವಲ್ಲ, ಅದು ‘ಶ್ರೀಸಾಮಾನ್ಯ’ನ ಬದುಕನ್ನು ಬೆಳಗುವ ಪರಂಜ್ಯೋತಿ ಎಂಬುದನ್ನು ಲೇಖನವು ಸಮರ್ಥವಾಗಿ ಪ್ರತಿಪಾದಿಸುತ್ತದೆ.

Read More »

ಅನಾಥ ಆಶ್ರಮಗಳನ್ನು ಕುರಿತು ಒಂದು ಸಮಾಜಶಾಸ್ತ್ರೀಯ ಅಧ್ಯಯನ: ಬೆಂಗಳೂರು ನಗರ ಜಿಲ್ಲೆಯನ್ನು ಅನುಲಕ್ಷಿಸಿ

ಅಮರೇಶ್ ಎಸ್.

33 to 37

ಪ್ರಸ್ತುತ ಅಧ್ಯಯನವು ಬೆಂಗಳೂರು ನಗರದಲ್ಲಿನ ಅನಾಥಾಶ್ರಮಗಳ ಸ್ಥಿತಿ, ಅವರ ನಿರ್ವಹಣಾ ಕ್ರಮ, ಮಕ್ಕಳು ಎದುರಿಸುತ್ತಿರುವ ಸಾಮಾಜಿಕ-ಆರ್ಥಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಗುರುತಿಸುವ ಉದ್ದೇಶದಿಂದ ನಡೆಸಲಾಗಿದೆ. ಆಧುನಿಕ ನಗರೀಕರಣ ಮತ್ತು ಸಾಮಾಜಿಕ ವಿಭಜನೆಯ ನಡುವಿನ ಅನಾಥಾಶ್ರಮಗಳ ಪಾತ್ರ ಮಹತ್ತರವಾಗಿದೆ. ಅಧ್ಯಯನವು ಅನಾಥ ಮಕ್ಕಳ ಜೀವನದ ಗುಣಮಟ್ಟವನ್ನು ತಿಳಿಯಲು ಹಾಗೂ ಅನಾಥಾಶ್ರಮಗಳಲ್ಲಿ ಇರುವ ಶೈಕ್ಷಣಿಕ, ಆರೋಗ್ಯ, ಮನೋವೈಜ್ಞಾನಿಕ ಹಾಗೂ ಸಾಮಾಜಿಕ ಬೆಂಬಲದ ಅಂಶಗಳನ್ನು ವಿಶ್ಲೇಷಿಸುತ್ತದೆ. ಸಂಶೋಧನೆಯಿಂದ ಕಂಡುಬಂದಂತೆ, ಅನೇಕ ಆಶ್ರಮಗಳು ಮೂಲಭೂತ ಸೌಲಭ್ಯಗಳ ಕೊರತೆ, ತರಬೇತಿ ಪಡೆದ ಸಿಬ್ಬಂದಿಗಳ ಕೊರತೆ, ಆರ್ಥಿಕ ಸಂಪನ್ಮೂಲಗಳ ಅಭಾವ, ಮತ್ತು ಮಕ್ಕಳಿಗೆ ಉಂಟಾಗುವ ಮಾನಸಿಕ ಒತ್ತಡಗಳಿಂದ ಬಳಲುತ್ತಿವೆ. ಈ ಲೇಖನವು ಅನಾಥಾಶ್ರಮಗಳ ಸುಧಾರಣೆಗೆ ಶಿಫಾರಸುಗಳನ್ನೂ ಒಳಗೊಂಡಿದೆ.

Read More »

ಬಂಜಾರ ಭಾಷೆಯ ಪದ ರಚನೆ

ಕಾಳಮ್ಮ

38 to 43

ಪ್ರಸ್ತುತ ಲೇಖನವು ಲಿಪಿರಹಿತ ಮತ್ತು ಸಮೃದ್ಧ ಜಾನಪದ ಹಿನ್ನೆಲೆಯುಳ್ಳ ಬಂಜಾರ (ಲಂಬಾಣಿ/ಗೋರ್‌ಬೋಲಿ) ಭಾಷೆಯ ಪದರಚನಾ ವೈಶಿಷ್ಟ್ಯಗಳನ್ನು ಕುರಿತು ವಿಶ್ಲೇಷಿಸುತ್ತದೆ. ಪ್ರಮುಖವಾಗಿ, ಚೈನೀಸ್ ಮತ್ತು ವಿಯೆಟ್ನಾಮಿ ಭಾಷೆಗಳಲ್ಲಿ ಕಂಡುಬರುವಂತೆ ಬಂಜಾರ ಭಾಷೆಯಲ್ಲೂ ‘ಏಕಾಕ್ಷರ ಪದರಚನೆ’ (Monosyllabic word formation) ಇರುವುದನ್ನು ಲೇಖಕರು ಇಲ್ಲಿ ಸಾಕ್ಷ್ಯಾಧಾರಗಳೊಂದಿಗೆ ನಿರೂಪಿಸಿದ್ದಾರೆ. ನಾಮಪದ, ಕ್ರಿಯಾಪದ ಹಾಗೂ ಸರ್ವನಾಮಗಳ ಮಟ್ಟದಲ್ಲಿ ಒಂದು ಸ್ವರ ಅಥವಾ ವ್ಯಂಜನವು ಹೇಗೆ ಸ್ವತಂತ್ರ ಅರ್ಥಬದ್ಧ ಪದವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಲೇಖನವು ವಿವರಿಸುತ್ತದೆ. ಭಾಷಾ ವೈವಿಧ್ಯತೆಯ ಸಂರಕ್ಷಣೆ ಮತ್ತು ಬಂಜಾರ ಭಾಷೆಯ ವ್ಯಾಕರಣದ ಸಂಕ್ಷಿಪ್ತತೆಯನ್ನು ಅರ್ಥೈಸಿಕೊಳ್ಳುವ ನಿಟ್ಟಿನಲ್ಲಿ ಈ ಅಧ್ಯಯನವು ಮಹತ್ವದ ದಿಕ್ಸೂಚಿಯಾಗಿದೆ.

Read More »

ಹೊಸತಲೆಮಾರಿನ ಕನ್ನಡ ಸಣ್ಣಕತೆಗಳು: ಕುಟುಂಬದ ಪರಿಕಲ್ಪನೆ

ಕಿರಣಕುಮಾರ್ ಹೆಚ್.ಜಿ.

44 to 54

ಕನ್ನಡ ಸಾಹಿತ್ಯದ ಸಣ್ಣಕತೆಗಳು ಬದಲಾಗುತ್ತಿರುವ ಸಾಮಾಜಿಕ ಮತ್ತು ಕೌಟುಂಬಿಕ ಮೌಲ್ಯಗಳನ್ನು ಸಮರ್ಥವಾಗಿ ಚಿತ್ರಿಸಿವೆ. ಜಾಗತೀಕರಣ ಹಾಗೂ ಆಧುನಿಕ ಜೀವನಶೈಲಿಯ ಪ್ರಭಾವದಿಂದಾಗಿ, ಭಾರತೀಯ ಪರಂಪರೆಯ ಅವಿಭಕ್ತ ಕುಟುಂಬ ವ್ಯವಸ್ಥೆಯು ಕುಸಿಯುತ್ತಿದ್ದು, ವಿಭಕ್ತ ಕುಟುಂಬಗಳೂ ಛಿದ್ರಗೊಂಡು ವ್ಯಕ್ತಿಗತ ಬದುಕಿನತ್ತ ಸಾಗುತ್ತಿವೆ. ಶಿಕ್ಷಣ, ಉದ್ಯೋಗ, ಆಸ್ತಿ ವ್ಯಾಮೋಹ ಹಾಗೂ ಮೂಢನಂಬಿಕೆಗಳು ರಕ್ತಸಂಬಂಧಗಳ ನಡುವಿನ ಭಾವನಾತ್ಮಕ ಬೆಸುಗೆಯನ್ನು ಹೇಗೆ ಸಡಿಲಗೊಳಿಸುತ್ತಿವೆ ಎಂಬುದನ್ನು ಅಮರೇಶ ನುಗಡೋಣಿ, ವಸುಧೇಂದ್ರ, ಟಿ.ಎಸ್. ಗೊರವರ ಮತ್ತು ಎಂ.ಎಸ್. ವೇದಾ ಅವರ ಕತೆಗಳ ಹಿನ್ನೆಲೆಯಲ್ಲಿ ಇಲ್ಲಿ ವಿಶ್ಲೇಷಿಸಲಾಗಿದೆ. ಕೌಟುಂಬಿಕ ಸಾಮರಸ್ಯವು ಮರೆಯಾಗಿ, ಸ್ವಾರ್ಥ ಮತ್ತು ಆರ್ಥಿಕ ಲಾಭಕ್ಕಾಗಿ ಮಾನವೀಯ ಸಂಬಂಧಗಳು ಹೇಗೆ ನಶಿಸುತ್ತಿವೆ ಹಾಗೂ ಪೋಷಕರು ಮತ್ತು ಮಕ್ಕಳ ನಡುವಿನ ಅಂತರ ಹೇಗೆ ಹೆಚ್ಚುತ್ತಿದೆ ಎನ್ನುವ ವರ್ತಮಾನದ ಕಟು ವಾಸ್ತವವನ್ನು ಸಣ್ಣಕತೆಗಳು ದಾಖಲಿಸಿರುವ ಬಗೆಯನ್ನು ಇಲ್ಲಿ ಚರ್ಚಿಸಲಾಗಿದೆ.ಕನ್ನಡ ಸಾಹಿತ್ಯದ ಸಣ್ಣಕತೆಗಳು ಬದಲಾಗುತ್ತಿರುವ ಸಾಮಾಜಿಕ ಮತ್ತು ಕೌಟುಂಬಿಕ ಮೌಲ್ಯಗಳನ್ನು ಸಮರ್ಥವಾಗಿ ಚಿತ್ರಿಸಿವೆ. ಜಾಗತೀಕರಣ ಹಾಗೂ ಆಧುನಿಕ ಜೀವನಶೈಲಿಯ ಪ್ರಭಾವದಿಂದಾಗಿ, ಭಾರತೀಯ ಪರಂಪರೆಯ ಅವಿಭಕ್ತ ಕುಟುಂಬ ವ್ಯವಸ್ಥೆಯು ಕುಸಿಯುತ್ತಿದ್ದು, ವಿಭಕ್ತ ಕುಟುಂಬಗಳೂ ಛಿದ್ರಗೊಂಡು ವ್ಯಕ್ತಿಗತ ಬದುಕಿನತ್ತ ಸಾಗುತ್ತಿವೆ. ಶಿಕ್ಷಣ, ಉದ್ಯೋಗ, ಆಸ್ತಿ ವ್ಯಾಮೋಹ ಹಾಗೂ ಮೂಢನಂಬಿಕೆಗಳು ರಕ್ತಸಂಬಂಧಗಳ ನಡುವಿನ ಭಾವನಾತ್ಮಕ ಬೆಸುಗೆಯನ್ನು ಹೇಗೆ ಸಡಿಲಗೊಳಿಸುತ್ತಿವೆ ಎಂಬುದನ್ನು ಅಮರೇಶ ನುಗಡೋಣಿ, ವಸುಧೇಂದ್ರ, ಟಿ.ಎಸ್. ಗೊರವರ ಮತ್ತು ಎಂ.ಎಸ್. ವೇದಾ ಅವರ ಕತೆಗಳ ಹಿನ್ನೆಲೆಯಲ್ಲಿ ಇಲ್ಲಿ ವಿಶ್ಲೇಷಿಸಲಾಗಿದೆ. ಕೌಟುಂಬಿಕ ಸಾಮರಸ್ಯವು ಮರೆಯಾಗಿ, ಸ್ವಾರ್ಥ ಮತ್ತು ಆರ್ಥಿಕ ಲಾಭಕ್ಕಾಗಿ ಮಾನವೀಯ ಸಂಬಂಧಗಳು ಹೇಗೆ ನಶಿಸುತ್ತಿವೆ ಹಾಗೂ ಪೋಷಕರು ಮತ್ತು ಮಕ್ಕಳ ನಡುವಿನ ಅಂತರ ಹೇಗೆ ಹೆಚ್ಚುತ್ತಿದೆ ಎನ್ನುವ ವರ್ತಮಾನದ ಕಟು ವಾಸ್ತವವನ್ನು ಸಣ್ಣಕತೆಗಳು ದಾಖಲಿಸಿರುವ ಬಗೆಯನ್ನು ಇಲ್ಲಿ ಚರ್ಚಿಸಲಾಗಿದೆ.

Read More »

ಕನ್ನಡ ಸಾಹಿತ್ಯ ಮತ್ತು ವಿಜ್ಞಾನದ ಸಾತತ್ಯ

ಕುಸುಮ ಬಿ.ಎಂ.

55 to 59

ವಿಜ್ಞಾನದ ಜಟಿಲ ಸಿದ್ಧಾಂತಗಳು ಮತ್ತು ಸಂಶೋಧನೆಗಳನ್ನು ಸಾಮಾನ್ಯ ಜನರಿಗೆ ತಲುಪಿಸುವಲ್ಲಿ ಕನ್ನಡ ಸಾಹಿತ್ಯವು ನಿರ್ವಹಿಸುತ್ತಿರುವ ಮಹತ್ವದ ಪಾತ್ರವನ್ನು ಈ ಬರಹವು ವಿಶ್ಲೇಷಿಸುತ್ತದೆ. ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಕಥೆಗಳಲ್ಲಿ ಕಂಡುಬರುವ ಜೀವವಿಕಾಸ, ಪರಿಸರ ವಿಜ್ಞಾನ ಮತ್ತು ವಿಸ್ಮಯಗಳ ಲೋಕವು ಸಾಮಾನ್ಯ ಓದುಗನಲ್ಲಿ ವೈಜ್ಞಾನಿಕ ಪ್ರಜ್ಞೆಯನ್ನು ಹೇಗೆ ಜಾಗೃತಗೊಳಿಸುತ್ತದೆ ಎಂಬುದನ್ನು ಇಲ್ಲಿ ಚರ್ಚಿಸಲಾಗಿದೆ. ಹಾಗೆಯೇ, ಬಿ.ಜಿ.ಎಲ್. ಸ್ವಾಮಿಯವರ ‘ಹಸುರು ಹೊನ್ನು’ ಕೃತಿಯ ಮೂಲಕ ಸಸ್ಯಶಾಸ್ತ್ರವು ಸಾಹಿತ್ಯಿಕ ಚೌಕಟ್ಟಿನಲ್ಲಿ ಹಾಸ್ಯ ಮತ್ತು ಕುತೂಹಲದೊಂದಿಗೆ ಮೈದಾಳಿರುವುದನ್ನು ಲೇಖನವು ಗುರುತಿಸುತ್ತದೆ. ಒಟ್ಟಾರೆಯಾಗಿ, ಸಾಹಿತ್ಯವು ವಿಜ್ಞಾನವನ್ನು ಕೇವಲ ಮಾಹಿತಿಯನ್ನಾಗಿಸದೆ, ಮಾನವನ ಅನುಭವದ ಭಾಗವಾಗಿಸಿ ಮೂಢನಂಬಿಕೆಗಳನ್ನು ದೂರಮಾಡುವ ಸಾಧನವಾಗಿರುವ ಬಗೆಯನ್ನು ಈ ಲೇಖನವು ಸ್ಫುಟಗೊಳಿಸುತ್ತದೆ.

Read More »

ಡಾ. ಬಿ. ಕೆ. ಹಿರೇಮಠರ ಜೀವನ, ಸಾಧನೆ: ಒಂದು ಸ್ಥೂಲ ಅವಲೋಕನ

ಜಿ. ವೀರಭದ್ರಗೌಡ

60 to 75

ಡಾ|| ಬಿ.ಕೆ.ಹಿರೇಮಠ ಅವರು ಅಪರೂಪದ ಕನ್ನಡ ಪ್ರಾಧ್ಯಾಪಕರು ಮತ್ತು ಚಿತ್ರಕಲಾವಿದರು. ಕನ್ನಡ ಸಂಶೋಧನೆ ಮತ್ತು ಕರ್ನಾಟಕ ಚಿತ್ರಕಲೆಯಲ್ಲಿ ಅವರದೇ ಆದ ಅಪರೂಪದ ಕೊಡುಗೆಯನ್ನು ನೀಡಿದ ಪ್ರತಿಭಾಸಂಪನ್ನರು. ತಮ್ಮ ಲೇಖನಿ ಮತ್ತು ಕುಂಚಗಳನ್ನು ಜವಾಬ್ದಾರಿಯೆಂದು ಭಾವಿಸಿ ದುಡಿಸಿದವರು. ಸಂಶೋಧನೆ, ಸಂಪಾದನೆ, ಕಲಾಸಾಹಿತ್ಯ, ಅನುವಾದ ಪ್ರಕಾರಗಳಲ್ಲಿ ಕೃಷಿಗೈದಿದ್ದಾರೆ. ಹಸ್ತಪ್ರತಿಶಾಸ್ತ್ರ, ಗ್ರಂಥಸಂಪಾದನೆ, ಹಳೆಗನ್ನಡ ಮತ್ತು ನಡುಗನ್ನಡ ಸಾಹಿತ್ಯ ಹಾಗೂ ಶರಣ ಪರಂಪರೆ ಕುರಿತ ಸಾಹಿತ್ಯ ಪ್ರಕಾರ ಮತ್ತು ಕ್ಷೇತ್ರಗಳ ಅಧ್ಯಯನಗಳು ಇವರ ಸಂಶೋಧನಾ ವಲಯಗಳಾಗಿವೆ. ಸಾಹಿತ್ಯದ ಶ್ರೀಮಂತ ಓದು ಅಧ್ಯಯನಗಳ ಅನುಭವದಿಂದ ಇವರ ಕುಂಚ ಫಲಗಳು ಒಂದು ಪ್ರತ್ಯೇಕ ದೃಷ್ಟಿಯಿಂದ ಅವಲೋಕಿಸಲು ಪ್ರೇರೇಪಿಸುತ್ತವೆ. ಅವರ ಕಲಾಕೃತಿಗಳು ಹೊಂದಿರುವ ಸಂಕೇತಗಳು ಹಾಗೂ ಅವು ವಿಸ್ತರಿಸುವ ಚಿತ್ರಭಾಷೆ ವಿಶಿಷ್ಟವಾದವು. ಇಂತಹ ಅಪರೂಪದ ವಿದ್ವಾಂಸರ ಜೀವನ ಸಾಧನೆಯನ್ನು ಪ್ರಸ್ತುತ ಬರಹದಲ್ಲಿ; ಕುಟುಂಬದ ಹಿನ್ನೆಲೆ ಮತ್ತು ಬದುಕು, ವೃತ್ತಿ ಜೀವನ, ಸಾಹಿತ್ಯಿಕ ಕೊಡುಗೆ ಹಾಗೂ ಕಲಾ ಸಾಧನೆ ಎಂಬ ನಾಲ್ಕು ಪ್ರಮುಖ ಭಾಗಗಳಲ್ಲಿ ಸ್ಥೂಲವಾಗಿ ಅವಲೋಕಿಸಲಾಗಿದೆ.

Read More »

ಸಮಕಾಲೀನ ಕನ್ನಡ ಸಾಹಿತ್ಯದಲ್ಲಿ ಸಾಮಾಜಿಕ ಚಿಂತನೆ: ಸಮಗ್ರ ವಿಮರ್ಶಾತ್ಮಕ ಅಧ್ಯಯನ

ಟಿ. ಲತಾದೇವಿ

76 to 80

ಸಮಕಾಲೀನ ಕನ್ನಡ ಸಾಹಿತ್ಯವು ಇಂದಿನ ಸಮಾಜದ ಜೀವಂತ ದಾಖಲೆಯಾಗಿದೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸಂಭವಿಸಿದ ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಬದಲಾವಣೆಗಳು ಕನ್ನಡ ಸಾಹಿತ್ಯದ ರೂಪ ಮತ್ತು ಆಶಯಗಳನ್ನು ಆಳವಾಗಿ ಪ್ರಭಾವಿಸಿವೆ. ಜಾತಿ ವ್ಯವಸ್ಥೆ, ವರ್ಗ ಸಂಘರ್ಷ, ಲಿಂಗ ಅಸಮಾನತೆ, ದಲಿತ–ಬಂಡಾಯ ಚಳವಳಿಗಳು, ಸ್ತ್ರೀವಾದ, ಜಾಗತೀಕರಣ, ಪರಿಸರ ಸಂಕಷ್ಟ ಮತ್ತು ಮಾಧ್ಯಮ ಪ್ರಭಾವಗಳು ಸಮಕಾಲೀನ ಸಾಹಿತ್ಯದ ಕೇಂದ್ರ ವಿಷಯಗಳಾಗಿವೆ.
ಈ ಸಂಶೋಧನಾ ಲೇಖನವು ಸಮಕಾಲೀನ ಕನ್ನಡ ಸಾಹಿತ್ಯದಲ್ಲಿ ವ್ಯಕ್ತವಾಗುವ ಸಾಮಾಜಿಕ ಚಿಂತನೆಯ ಸ್ವರೂಪ, ಅದರ ಬೆಳವಣಿಗೆ, ಪ್ರಮುಖ ಧೋರಣೆಗಳು ಮತ್ತು ಸಮಾಜದ ಮೇಲೆ ಅದರ ಪರಿಣಾಮವನ್ನು ಸಮಗ್ರವಾಗಿ ವಿಶ್ಲೇಷಿಸುತ್ತದೆ. ಕಾವ್ಯ, ಕಥೆ, ಕಾದಂಬರಿ, ನಾಟಕ ಮತ್ತು ವಿಮರ್ಶಾ ಸಾಹಿತ್ಯವನ್ನು ಆಧಾರವಾಗಿಟ್ಟುಕೊಂಡು ಈ ಅಧ್ಯಯನ ನಡೆಸಲಾಗಿದೆ. ಸಾಮಾಜಿಕ ಅನ್ಯಾಯಗಳ ವಿರುದ್ಧ ಧ್ವನಿಯಾಗಿರುವ ಸಮಕಾಲೀನ ಕನ್ನಡ ಸಾಹಿತ್ಯವು ಮಾನವೀಯ ಮೌಲ್ಯಗಳು, ಸಮಾನತೆ ಮತ್ತು ನ್ಯಾಯದ ಪರಿಕಲ್ಪನೆಗಳನ್ನು ಪ್ರತಿಪಾದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂಬುದನ್ನು ಈ ಲೇಖನ ಸ್ಪಷ್ಟಪಡಿಸುತ್ತದೆ.

Read More »

ಗೋವಿಂದ ಪೈ ಅವರ ಖಂಡಕಾವ್ಯಗಳು: ಮಹಾತ್ಮರ ಕಡೆಯ ದಿನ

ನಮಿತಾ ಎ., ಧನಂಜಯ

81 to 88

ಹೊಸಗನ್ನಡ ಸಾಹಿತ್ಯ ಪ್ರಕಾರಗಳಲ್ಲಿ ಖಂಡಕಾವ್ಯಕ್ಕೆ ವಿಶಿಷ್ಟವಾದ ಸ್ಥಾನವಿದೆ. ಪಾಶ್ಚಿಮಾತ್ಯರಿಂದ ಪರಿಚಯವಾದ ಈ ಸಾಹಿತ್ಯ ಪ್ರಕಾರವನ್ನು ಕನ್ನಡಕ್ಕೆ ರಾಷ್ಟ್ರಕವಿ ಗೋವಿಂದ ಪೈಯವರು ಪರಿಚಯಿಸಿದರು. ಮಹಾಕಾವ್ಯಕ್ಕಿಂತ ತುಸು ಭಿನ್ನವಾದ ಆಯಾಮದಲ್ಲಿ ಕಂಡುಬರುವ ಈ ಪ್ರಕಾರವು ಅನಂತರ ಬಂದ ಕವಿಗಳಿಂದ ವಿಸ್ತಾರವಾಗಿ ಬೆಳೆಯಿತು. ಮನುಷ್ಯ ಬದುಕಿನ ಅರ್ಥವಂತಿಕೆ, ಸಹಜತೆ, ಸಾಮಾಜಿಕ ಬದ್ಧತೆಗಳ ಜೊತೆಗೆ ಹಿಂದಿನ ವೈದಿಕ ಪರಂಪರೆಯ ಮಹಾಕಾವ್ಯಗಳಿಗಿಂತ ಭಿನ್ನವಾಗಿ ಗೋವಿಂದ ಪೈಯವರು ಖಂಡಕಾವ್ಯಗಳನ್ನು ರಚಿಸಿದ್ದಾರೆ. ಬುದ್ಧ, ಯೇಸು, ಕೃಷ್ಣ ಹಾಗೂ ಗಾಂಧೀಜಿಯವರಂತಹ ಮಹಾನ್ ದಾರ್ಶನಿಕರ ಅಂತ್ಯದ ದಿನಗಳನ್ನು ಅರ್ಥಪೂರ್ಣವಾಗಿ, ತಲಸ್ಪರ್ಶಿಯಾಗಿ ಚಿತ್ರಿಸುವ ಈ ಖಂಡಕಾವ್ಯಗಳು ಮನುಷ್ಯ ಬದುಕಿನ ಸಹಜತೆಯನ್ನು ಅನಾವರಣಗೊಳಿಸುತ್ತವೆ. ಪ್ರಸ್ತುತ ಜಾತಿ, ಮತ, ಕುಲ, ಧರ್ಮ, ವರ್ಣಗಳಿಂದ ಸಂಚಯಶಕ್ತಿಗಳು ಇಡೀ ವ್ಯವಸ್ಥೆಯನ್ನು ಬಾಧಿಸುತ್ತಿರುವ ಕಾಲಘಟ್ಟದಲ್ಲಿ ಮನುಷ್ಯನ ನ್ಯಾಯ ಸಮ್ಮತವಾದ ಬದುಕಿಗಾಗಿ ಸ್ಪಂದಿಸುವ ನಿಟ್ಟಿನಲ್ಲಿ ನಾವು ಇವರ ಸಾಹಿತ್ಯವನ್ನು ಅರ್ಥೈಸಬಹುದು.

Read More »

ರಾಬಿಯಾ ಅಲ್‌-ಅದವಿಯ: ಜಗತ್ತಿನ ಮೊದಲ ಸೂಫಿ ಮಹಿಳೆ

ಬಸೀರಾಬಾನು ನಿಡಗುಂದಿ

89 to 103

ಪರಮಾತ್ಮನೊಡನೆ ಸ್ನೇಹಾತ್ಮಕ ಸಂಬಂಧ ಬೆಳೆಸಿ, ಉಪಾಸನೆ ಮಾಡುವ ಮುಸ್ಲಿಂ ಅನುಭಾವಿ ಸಂತರನ್ನು ʻಸೂಫಿʼ ಎಂದು ಕರೆಯುವರು. ಈ ಪಂಥಕ್ಕೆ ಸುಮಾರು ಮೂರು ಸಾವಿರ ವರ್ಷಗಳ ಇತಿಹಾಸವಿದೆ. ಇದು ಮೂಲತಃ ಇಂದಿನ ಟರ್ಕಿ, ಇರಾನ್‌ ಮತ್ತು ಇರಾಕ್‌ ಪ್ರದೇಶಗಳಲ್ಲಿ ಅಸ್ತಿತ್ವದಲ್ಲಿತ್ತು. ಈ ಪಂಥದ ಮೂಲತತ್ವ “ಪ್ರೇಮ”. ದೇವರು ಒಬ್ಬನೇ, ಪ್ರೇಮದ ಮುಖಾಂತರ ಆತನೊಡನೆ ವಿಲೀನವಾಗುವುದೇ ಏಕಮಾತ್ರ ಗುರಿಯಾಗಿತ್ತು. ಆದರೆ ʻಸೂಫಿʼ ಎಂಬ ಶಬ್ದ ಇಸ್ಲಾಂ ಧರ್ಮಗ್ರಂಥ ʻಖುರಾನ್‌ʼನಲ್ಲಿ ಕಾಣಸಿಗುವುದಿಲ್ಲ. ಆದರೆ ʻಖುರಾನ್ʼನಲ್ಲಿ ಬರುವ ʻವಲಿʼ ಎಂಬ ಪದ ʻಸೂಫಿʼಯನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ. ʻಸೂಫಿʼ ಎಂಬ ಪದದ ವ್ಯೂತ್ಪತ್ತಿಯ ಬಗೆಗೆ ವಿದ್ವಾಂಸರಲ್ಲಿ ಬೇರೆ-ಬೇರೆ ಅಭಿಪ್ರಾಯಗಳಿವೆ. ಜಗತ್ತಿನಾದ್ಯಂತ ಸೂಫಿ ತತ್ವವನ್ನು ಸಾರುತ್ತಾ ನಡೆದ ಸೂಫಿ ಪರಂಪರೆ ಕೇವಲ ಪುರುಷ ಸೂಫಿಗಳಿಗೆ ಮಾತ್ರ ತನ್ನ ಮಡಿಲಲ್ಲಿಡದೇ, ಮಹಿಳಾ ಸೂಫಿ ಸಂತರಿಗೂ ಅವಕಾಶ ಮಾಡಿಕೊಟ್ಟಿತು. ಆದರೆ ಈ ಅವಕಾಶ ಸುಲಭವಾಗಿ ದೊರೆಯುವಂಥದ್ದಾಗಿರಲಿಲ್ಲ; ಹೋರಾಟದ ಮೂಲಕವೇ ಪಡೆಯಲಾಗುತ್ತಿತ್ತು ಎನ್ನಬಹುದು. ಇಸ್ಲಾಂ ಧರ್ಮದಲ್ಲಿ ಮಹಿಳೆಯರ ಸ್ಥಾನಮಾನಗಳ ಕುರಿತು ಚರ್ಚೆಗಳು ಇಂದಿಗೂ ನಡೆಯುತ್ತವೆ.

Read More »

ಸಿಡಿಯಾಚರಣೆ

ಮಹಾದೇವಪ್ಪ

104 to 110

ಮಾನವ ಸಂಸ್ಕೃತಿಯ ಅವಿಭಾಜ್ಯ ಅಂಗವಾದ ನಂಬಿಕೆ ಮತ್ತು ಆಚರಣೆಗಳು ಸಮುದಾಯದ ಸ್ವಾಸ್ಥ್ಯ ಹಾಗೂ ದೈವೀ ಅನ್ವೇಷಣೆಯ ಪ್ರತಿಫಲಗಳಾಗಿವೆ. ಜನಪದರ ಬದುಕಿನಲ್ಲಿ ರೋಗ ನಿವಾರಣೆ ಮತ್ತು ಇಷ್ಟಾರ್ಥ ಸಿದ್ಧಿಗಾಗಿ ಆಚರಿಸಲ್ಪಡುವ ‘ಸಿಡಿ’ ಆಚರಣೆಯು ಐತಿಹಾಸಿಕವಾಗಿ ನರಬಲಿಯ ಸಾಂಕೇತಿಕ ರೂಪಾಂತರವಾಗಿದೆ. ಬಳ್ಳಾರಿಯ ಕನಕದುರ್ಗಮ್ಮನ ದೇವಸ್ಥಾನದ ಉದಾಹರಣೆಯೊಂದಿಗೆ, ಈ ಲೇಖನವು ಸಿಡಿ ಬಂಡಿಯ ಸಿದ್ಧತೆ, ಅಲಂಕಾರ ಹಾಗೂ ಬೊಂಬೆಯ ಸಿಡಿಯ ವಿಧಿವಿಧಾನಗಳನ್ನು ವಿಶ್ಲೇಷಿಸುತ್ತದೆ. ವಚನಕಾರರು ಮತ್ತು ದಾಸರ ಸಾಹಿತ್ಯದಲ್ಲಿನ ಉಲ್ಲೇಖಗಳ ಮೂಲಕ ಈ ಪದ್ಧತಿಯ ಕ್ರೂರತೆಯ ಮೇಲಿನ ಟೀಕೆ ಹಾಗೂ ವಿಜಯನಗರದ ಕಾಲದ ಐತಿಹಾಸಿಕ ಹಿನ್ನೆಲೆಯನ್ನು ಇಲ್ಲಿ ಚರ್ಚಿಸಲಾಗಿದೆ. ಒಟ್ಟಾರೆಯಾಗಿ, ಸಿಡಿಯು ಧಾರ್ಮಿಕ ಭಯ ಮತ್ತು ಅಚಲ ಭಕ್ತಿಯ ಸಮ್ಮಿಲನವಾಗಿ ಇಂದಿಗೂ ಜನಮಾನಸದಲ್ಲಿ ಉಳಿದುಬಂದಿರುವುದನ್ನು ಇದು ಸ್ಫುಟಗೊಳಿಸುತ್ತದೆ.

Read More »

ಶಾಸನಗಳಲ್ಲಿ ದಾಖಲೆಗೊಂಡಂತೆ ಮೈಸೂರು ಸಂಸ್ಥಾನದ ಬೆಳವಣಿಗೆ

ರಾಜೇಶ್ ಜೆ.

111 to 121

ಮೈಸೂರು ಸಂಸ್ಥಾನವು ಒಂದು ಪುಟ್ಟ ಪಾಳೆಪಟ್ಟಿನಿಂದ ಬಲಿಷ್ಠ ಸಾಮ್ರಾಜ್ಯವಾಗಿ ಬೆಳೆದು ಬಂದ ಐತಿಹಾಸಿಕ ಪಥವನ್ನು ಈ ಬರಹವು ಶಾಸನೋಕ್ತ ಆಧಾರಗಳೊಂದಿಗೆ ವಿಶ್ಲೇಷಿಸುತ್ತದೆ. ವಿಜಯನಗರದ ಪತನಾನಂತರ ಯದುವಂಶದ ಅರಸರು ಸ್ವತಂತ್ರಗೊಂಡು ರಾಜ್ಯ ವಿಸ್ತರಿಸಿದ ಕ್ರಮ, ರಾಜ ಒಡೆಯರ್ ಮತ್ತು ಕಂಠೀರವ ನರಸರಾಜ ಒಡೆಯರ್ ಕಾಲದ ಧಾರ್ಮಿಕ ದತ್ತಿಗಳು ಹಾಗೂ ಹೈದರಾಲಿ-ಟಿಪ್ಪು ಸುಲ್ತಾನರ ಕಾಲದ ಯುದ್ಧತಂತ್ರಗಳನ್ನು ಇಲ್ಲಿ ಚರ್ಚಿಸಲಾಗಿದೆ. ವಿಶೇಷವಾಗಿ ಪಾಂಡವಪುರದ ‘ಫ್ರೆಂಚ್ ರಾಕ್ಸ್’ ಇತಿಹಾಸ, ಫ್ರೆಂಚ್ ಸೈನ್ಯದ ಒಡನಾಟ ಮತ್ತು ಮೈಸೂರು ಅರಸರ ಸಾಮಾಜಿಕ ಕಾಳಜಿಗಳನ್ನು ಶಾಸನಗಳ ಬೆಳಕಿನಲ್ಲಿ ದಾಖಲಿಸಲಾಗಿದೆ. ಮೈಸೂರು ಸಂಸ್ಥಾನದ ಸರ್ವತೋಮುಖ ಬೆಳವಣಿಗೆಯಲ್ಲಿ ಶಾಸನಗಳು ಕೇವಲ ದಾಖಲೆಗಳಲ್ಲದೆ, ಸಾಂಸ್ಕೃತಿಕ ವಿಕಸನದ ಜೀವಂತ ಸಾಕ್ಷಿಗಳಾಗಿರುವುದನ್ನು ಲೇಖನವು ನಿರೂಪಿಸುತ್ತದೆ.

Read More »

ಚಂದ್ರಶೇಖರ ಕಂಬಾರರ ಜೋಕುಮಾರಸ್ವಾಮಿ, ನಾಯೀಕತೆ, ಜೈಸಿದ ನಾಯಕ ನಾಟಕಗಳಲ್ಲಿ ಸ್ತ್ರೀ ಸಂವೇದನೆ

ರುದ್ರಮುನಿ ಹೆಚ್.

122 to 127

ಆಧುನಿಕ ಕಾಲಘಟ್ಟದ ಪ್ರಮುಖ ನಾಟಕಕಾರರಲ್ಲಿ ಡಾ. ಚಂದ್ರಶೇಖರ ಕಂಬಾರರು ಒಬ್ಬರು. ಪುರಾಣ ಮತ್ತು ಜಾನಪದ ವಸ್ತುಗಳನ್ನು ಹಿನ್ನೆಲೆಯಾಗಿಸಿಕೊಂಡು, ವಾಸ್ತವತೆಗೆ ಮುಖಾಮುಖಿಯಾಗುವಂತಹ ಅಪರೂಪದ ಬರಹಗಾರರಿವರು. ನವ್ಯ ಕಾಲಘಟ್ಟದ ಸಂದರ್ಭದಲ್ಲಿ ನಾಟಕ ಪರಂಪರೆಗೆ ಬಹುಮುಖ್ಯ ಕೊಡುಗೆ ನೀಡಿದ ಕೀರ್ತಿ ಕಂಬಾರರಿಗೂ ಸಲ್ಲುತ್ತದೆ. ಇವರ ನಾಟಕಗಳು ರಂಗಭೂಮಿಗೂ ಕಾಲಿಟ್ಟು, ಜನಪ್ರಿಯತೆಯನ್ನು ಪಡೆದಿದ್ದವು. ಇದಕ್ಕೆ ಪ್ರಮುಖ ಸಾಕ್ಷಿ ಜೋಕುಮಾರಸ್ವಾಮಿ ನಾಟಕ. ಎಂಬತ್ತರ ದಶಕದಲ್ಲಿ ಬಿ.ವಿ. ಕಾರಂತರ ನಿರ್ದೇಶನದಲ್ಲಿ ರಂಗದ ಮೇಲೆ ಈ ನಾಟಕವು ಬೆಳಕು ಚೆಲ್ಲಿ ಜನಪ್ರಿಯಗೊಂಡಿತ್ತು. ನಾಟಕವು ಏಕಕಾಲದಲ್ಲಿ ದೃಶ್ಯಮಾಧ್ಯಮವೂ ಹೌದು ಮತ್ತು ಶ್ರವ್ಯಮಾಧ್ಯಮವೂ ಹೌದು. ಆದ್ದರಿಂದಲೇ ನಾಟಕವು ಹೆಚ್ಚು ಹೆಚ್ಚು ಜನರನ್ನು ಆಕರ್ಷಿಸಿ ತನ್ನೆಡೆಗೆ ಸೆಳೆದುಕೊಳ್ಳುತ್ತದೆ. ಕಂಬಾರರ ನಾಟಕಗಳಲ್ಲಿ ನಮಗೆ ವಿಶೇಷವಾಗಿ ಕಾಣಸಿಗುವುದು ಜನಪದದ ನೆಲೆಗಳು, ದೇಸೀತನದ ಹುಡುಕಾಟ, ಊಳಿಗಮಾನ್ಯ ವ್ಯವಸ್ಥೆಯಂತಹ ಸಮಾಜ ವಿರೋಧಿ ವ್ಯವಸ್ಥೆಗಳ ಕರಾಳ ರೂಪ ಮತ್ತು ಇವುಗಳ ಜೊತೆಗೆ ಬಹಳ ಮುಖ್ಯವಾದುದು ಸ್ತ್ರೀ ಸಂವೇದನೆಗಳು. ನಮ್ಮ ಈ ಲೇಖನವು ಕಂಬಾರರ ನಾಟಕಗಳಾದ ಜೋಕುಮಾರಸ್ವಾಮಿ, ನಾಯೀಕತೆ ಮತ್ತು ಜೈಸಿದ ನಾಯಕ ನಾಟಕಗಳಲ್ಲಿನ ಸ್ತ್ರೀ ಸಂವೇದನೆಗಳ ಕುರಿತು ಅಧ್ಯಯನ ಮಾಡುವುದಾಗಿದೆ. ನಮ್ಮ ಸಮಾಜದಲ್ಲಿರುವ ಕೆಟ್ಟ ರಾಜಕಾರಣಗಳಲ್ಲಿ ಲಿಂಗ ರಾಜಕಾರಣವೂ ಒಂದು. ತಲತಲಾಂತರಗಳಿಂದ ಅನೇಕ ಕಾರಣಗಳಿಂದಾಗಿ ಪುರುಷನು ಸ್ತ್ರೀಯನ್ನು ಶೋಷಿಸುತ್ತಲೇ ಬಂದಿರುವುದು ವಿಷಾದನೀಯ ಸಂಗತಿಯಾಗಿದೆ. ತನ್ನ ಅಧಿಕಾರ ಮತ್ತು ಬಲದಿಂದ ಹೆಣ್ಣಿನ ಮೇಲೆ ತನ್ನ ಹಿಡಿತವನ್ನು ಸಾಧಿಸುವ ವಿಫಲ ಪ್ರಯತ್ನಗಳನ್ನು ಮಾಡುತ್ತಲೇ ಬಂದಿದ್ದಾನೆ. ಆದರೆ ದೌರ್ಜನ್ಯದ ಬೇಗೆಯಲ್ಲಿ ಬೆಂದವಳು ಮಾತ್ರ ಹೆಣ್ಣು.

Read More »

ಜನಪದ ಗೀತೆಗಳಲ್ಲಿ ಕಾವ್ಯ ಸೌಂದರ್ಯ

ವೇದಾವತಿ ಎಸ್.

128 to 136

ಕಾವ್ಯ ಮೀಮಾಂಸೆಯ ಪ್ರಮುಖ ಅಂಶಗಳಾದ ‘ಧ್ವನಿ’ ಮತ್ತು ‘ರಸ’ಗಳು ಜನಪದ ಗೀತೆಗಳಲ್ಲಿ ಸಹಜವಾಗಿ ಮೈಗೂಡಿವೆ. ಗ್ರಾಮೀಣರು ಕವಿಯಾಗುವ ಉದ್ದೇಶದಿಂದ ಬರೆಯದಿದ್ದರೂ, ಅವರ ಜೀವನಾನುಭವ ಮತ್ತು ಭಾವನೆಗಳು ಉನ್ನತ ಮಟ್ಟದ ಕಾವ್ಯವಾಗಿ ಹೊರಹೊಮ್ಮಿವೆ. ಸ್ತುತಿಗೀತೆಗಳು, ತಾಯ್ತನದ ವಾತ್ಸಲ್ಯ, ಬಂಜೆಯ ನೋವು ಹಾಗೂ ನೀತಿಗೀತೆಗಳ ಮೂಲಕ ಜನಪದರು ಬದುಕಿನ ಮೌಲ್ಯಗಳನ್ನು ಮತ್ತು ಸೌಂದರ್ಯವನ್ನು ಹೇಗೆ ಕಟ್ಟಿಕೊಟ್ಟಿದ್ದಾರೆ ಎಂಬುದನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ತ್ರಿಪದಿಗಳಲ್ಲಿನ ಉಪಮೆ, ರೂಪಕ ಮತ್ತು ಆಡುಮಾತಿನ ಸೊಗಸು ಶಿಷ್ಟ ಕಾವ್ಯಕ್ಕೂ ಮಾದರಿಯಾಗಿದೆ. ಒಟ್ಟಾರೆಯಾಗಿ, ಜನಪದ ಸಾಹಿತ್ಯವು ಭಾರತೀಯ ಸಂಸ್ಕೃತಿಯ ಮತ್ತು ಬದುಕಿನ ನೈಜ ಕನ್ನಡಿಯಾಗಿದ್ದು, ಕಾವ್ಯದ ಮೂಲಸತ್ವವನ್ನು ಸಾಕ್ಷಾತ್ಕರಿಸಿಕೊಂಡಿದೆ ಎಂಬುದನ್ನು ಸಾಬೀತುಪಡಿಸಲಾಗಿದೆ.

Read More »

ವಸಾಹತುಶಾಹಿ ಆಡಳಿತಕ್ಕೆ ಸವಾಲು: ಉತ್ತರ ಕರ್ನಾಟಕದಲ್ಲಿ ದಲಿತರು ಮತ್ತು ಮುಸ್ಲಿಂ ಲೀಗ್ ನಡೆಸಿದ ಹೋರಾಟಗಳು

ಪೀರಜಾದೆ ಮೊಹಮ್ಮದ್ ಅಸ್ಲಂ, ವಿರೂಪಾಕ್ಷಿ ಪೂಜಾರಹಳ್ಳಿ

137 to 148

ಬ್ರಿಟಿಷ್ ವಸಾಹತುಶಾಹಿ ಆಡಳಿತದ ವಿರುದ್ಧ ಭಾರತದಲ್ಲಿ ನಡೆದ ಹೋರಾಟಗಳು ಕೇವಲ ರಾಜಕೀಯ ಸ್ವರೂಪದವಷ್ಟೇ ಅಲ್ಲದೆ, ಸಾಮಾಜಿಕ ನ್ಯಾಯ, ಮಾನವ ಘನತೆ ಮತ್ತು ಸಮಾನತೆಯ ಆಶಯಗಳನ್ನು ಒಳಗೊಂಡಿದ್ದವು. 1885 ರಿಂದ 1947 ರವರೆಗೆ ಭಾರತದಲ್ಲಿ ಸ್ವಾತಂತ್ರ್ಯ ಚಳವಳಿಗಳು ನಡೆಯುವ ಅವಧಿಯಲ್ಲಿ, ಉತ್ತರ ಕರ್ನಾಟಕದ ಪ್ರಾದೇಶಿಕ ಹಿನ್ನೆಲೆ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿತ್ತು. ಈ ಹೋರಾಟಗಳಲ್ಲಿ ದಲಿತರು ತಮ್ಮ ಹಕ್ಕುಗಳಿಗಾಗಿ, ಸಾಮಾಜಿಕ ಅಸಮಾನತೆ, ಅಸ್ಪೃಶ್ಯತೆ ಮತ್ತು ಆರ್ಥಿಕ ಶೋಷಣೆಯ ವಿರುದ್ಧ ಹೋರಾಟ ನಡೆಸಿದರು. ಪ್ರಮುಖ ನಾಯಕರು ಮತ್ತು ಚಿಂತಕರು: ಡಾ. ಬಿ.ಆರ್. ಅಂಬೇಡ್ಕರ್ (1891–1956), ಡಿ.ಆರ್. ನಾಗರಾಜ್, ಮತ್ತು ಕೆ. ಸಿದ್ದಲಿಂಗಯ್ಯ ದಲಿತ ಚಳವಳಿಗಳ ತಾತ್ವಿಕ ಹಾಗೂ ಸಂಘಟಿತ ಮುಖಗಳನ್ನು ರೂಪಿಸಿದರು. ಇದಲ್ಲದೆ, ಮುಸ್ಲಿಂ ಲೀಗ್ (All India Muslim League, 1906 ಸ್ಥಾಪನೆ) ನ ನಾಯಕರು ಮುಹಮ್ಮದ್ ಅಲಿ ಜಿನ್ನಾ (1876–1948), ಬಶೀರ ಅಲಿ ಖಾನ್ ಮುಂತಾದವರು ಮುಸ್ಲಿಂ ಸಮುದಾಯದ ರಾಜಕೀಯ ಪ್ರತಿನಿಧಿತ್ವ ಮತ್ತು ಹಕ್ಕುಗಳ ರಕ್ಷಣೆಯ ನೆಲೆಯಲ್ಲಿ ವಸಾಹತುಶಾಹಿಗೆ ಸವಾಲು ಹಾಕಿದರು. ಈ ಕಾರಣದಿಂದ, ಉತ್ತರ ಕರ್ನಾಟಕದ ಹೋರಾಟಗಳು ದೇಶೀಯ ಮತ್ತು ರಾಷ್ಟ್ರೀಯ ರಾಜಕೀಯ ಚಟುವಟಿಕೆಗಳೊಂದಿಗೆ ಸಮನ್ವಯಗೊಂಡವು. ಈ ಸಂಶೋಧನಾ ಲೇಖನವು 1885–1947 ರ ಅವಧಿಯ ವಸಾಹತುಶಾಹಿ ವಿರೋಧಿ ಚಳವಳಿಗಳಲ್ಲಿ ದಲಿತರು ಮತ್ತು ಮುಸ್ಲಿಂ ಲೀಗ್ ನಡೆಸಿದ ಹೋರಾಟಗಳ ಐತಿಹಾಸಿಕ ಮತ್ತು ಸಾಮಾಜಿಕ–ರಾಜಕೀಯ ಆಯಾಮಗಳನ್ನು ವಿಶ್ಲೇಷಿಸುತ್ತದೆ. ಪ್ರಾಥಮಿಕ ದಾಖಲೆಗಳು, ಇತಿಹಾಸ ಗ್ರಂಥಗಳು ಮತ್ತು ಶೋಧಪತ್ರಿಕೆಗಳ ಆಧಾರದಿಂದ, ಈ ಅಧ್ಯಯನವು ಪ್ರಾದೇಶಿಕ ಹೋರಾಟಗಳಲ್ಲಿನ ಪ್ರಮುಖ ನಾಯಕರು ಮತ್ತು ಸಂಘಟನೆಗಳ ಪಾತ್ರವನ್ನು ಗುರುತಿಸುತ್ತದೆ.

Read More »

Investigating the Linguistic and Pedagogical Barriers to English Language Learning among Kannada Learners at Govinda Pai Memorial Government College

AL Muneera J., Sujish S.

149 to 162

The multicultural and multilingual landscape of Kasaragod district in Kerala offers a unique context for English language learning among Kannada-speaking students. This study examines the intersection of linguistic identity, cultural plurality, and student engagement in English classrooms at Govinda Pai Memorial Government College, Kasaragod. It explores how the multicultural identity of Kannada-background learners shapes their learning experiences, influences pedagogical strategies, and contributes to a broader understanding of inclusive education in linguistically diverse settings. Drawing from classroom observations, institutional experiences, and a review of relevant literature, the paper highlights the significance of culturally responsive pedagogy and learner-centered practices in promoting engagement and proficiency in English. The findings underscore that English language teaching in multilingual environments must move beyond linguistic competence to embrace cultural sensitivity, identity affirmation, and reflective pedagogy.

Read More »

The Evolution of Art Education in India: Historical Roots and Contemporary Developments

Sushma Yadav

163 to 175

Art education in India has experienced significant progress, particularly with the implementation of new educational policies. Initially overlooked, early reforms like the Radhakrishnan and Kothari Commissions focused on broader educational challenges. The National Curriculum Framework (NCF) 2005 marked a turning point, emphasizing art’s role in creating joyful and meaningful learning. The National Education Policy (NEP) 2020 built on this, making visual and performing arts compulsory up to Class X to foster holistic learning. The NCF 2023 further promotes art-integrated education, encouraging creativity, cultural awareness, and teamwork through a flexible, multidisciplinary approach. These developments highlight how art education enriches learning by connecting students with their culture, environment, and broader life skills.

Read More »

ಕರ್ನಾಟಕದಲ್ಲಿ ಸೈಬರ್ ಸ್ತ್ರೀವಾದ: ಡಿಜಿಟಲ್ ಯುಗದಲ್ಲಿ ಮಹಿಳಾ ಸಬಲೀಕರಣ, ಸವಾಲುಗಳು ಮತ್ತು ಕಾನೂನು ಚೌಕಟ್ಟು

ಸಿ. ಪುಟ್ಟೇಶ

176 to 182

ಮಾಹಿತಿ ತಂತ್ರಜ್ಞಾನದ ರಾಜಧಾನಿ ಕರ್ನಾಟಕದಲ್ಲಿ ‘ಸೈಬರ್ ಸ್ತ್ರೀವಾದ’ವು ಕೇವಲ ಸೈದ್ಧಾಂತಿಕ ಪರಿಕಲ್ಪನೆಯಾಗಿರದೆ, ಮಹಿಳೆಯರ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣದ ಪ್ರಬಲ ಅಸ್ತ್ರವಾಗಿ ರೂಪುಗೊಂಡಿದೆ. ಡೊನ್ನಾ ಹರಾವೇ ಅವರ ಸೈಬರ್ಗ್ ಸಿದ್ಧಾಂತದ ಹಿನ್ನೆಲೆಯಲ್ಲಿ, ಕರ್ನಾಟಕದ ನಗರ ಹಾಗೂ ಗ್ರಾಮೀಣ ಮಹಿಳೆಯರು ಇಂಟರ್ನೆಟ್, ಸಾಮಾಜಿಕ ಜಾಲತಾಣಗಳು ಮತ್ತು ಡಿಜಿಟಲ್ ವೇದಿಕೆಗಳ ಮೂಲಕ ಪಿತೃಪ್ರಭುತ್ವದ ಮಿತಿಗಳನ್ನು ಹೇಗೆ ಮೀರುತ್ತಿದ್ದಾರೆಂಬುದನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಐಟಿ ವಲಯದ ಉದ್ಯೋಗಗಳು, ಇ-ಕಾಮರ್ಸ್, ಆರ್ಥಿಕ ಸ್ವಾವಲಂಬನೆ ಹಾಗೂ ಡಿಜಿಟಲ್ ಚಳವಳಿಗಳು ಮಹಿಳೆಯರಿಗೆ ಹೊಸ ಸ್ವಾಯತ್ತತೆಯನ್ನು ಒದಗಿಸಿವೆ. ಆದಾಗ್ಯೂ, ಆನ್‌ಲೈನ್ ನಿಂದನೆ, ಟ್ರೋಲಿಂಗ್ ಮತ್ತು ಸೈಬರ್ ಸುರಕ್ಷತೆಯ ಕೊರತೆಯಂತಹ ಸವಾಲುಗಳು ತೀವ್ರವಾಗಿವೆ. ಕೇವಲ ತಾಂತ್ರಿಕ ಪ್ರಗತಿಯಿಂದ ಲಿಂಗ ಸಮಾನತೆ ಸಾಧ್ಯವಿಲ್ಲ; ಬದಲಾಗಿ ಕಟ್ಟುನಿಟ್ಟಾದ ಸೈಬರ್ ಕಾನೂನುಗಳ ಜಾರಿ ಮತ್ತು ಗ್ರಾಮೀಣ ಮಟ್ಟದವರೆಗೆ ಡಿಜಿಟಲ್ ಸಾಕ್ಷರತೆಯ ವಿಸ್ತರಣೆಯ ಅಗತ್ಯವನ್ನು ಇಲ್ಲಿ ಪ್ರತಿಪಾದಿಸಲಾಗಿದೆ.

Read More »

ಹಾವೇರಿ ಪ್ರದೇಶದ ಕೆರೆಗಳ ನಿರ್ಮಾಣದ ಕ್ರಮಗಳು

ನಾಗರಾಜ ತಳವಾರ, ವೈ. ಮದ್ದಾನಸ್ವಾಮಿ

183 to 192

ದಕ್ಷಿಣ ಭಾರತವನ್ನು ಒಳಗೊಂಡ ಕರ್ನಾಟಕದ ಭಾಗದ ಭೂ ಪ್ರದೇಶವನ್ನು ಆಳ್ವಿಕೆ ಮಾಡಿರುವಂತೆ ಹಾವೇರಿ ಪ್ರದೇಶದ ವ್ಯಾಪ್ತಿಗೆ ಒಳಪಟ್ಟು ಆಳ್ವಿಕೆ ಮಾಡಿದ ರಾಜಮನೆತನಗಳಾದ ಕದಂಬರು, ಬಾದಾಮಿ ಚಾಲುಕ್ಯರು, ಗಂಗರು, ರಾಷ್ಟ್ರಕೂಟರು, ಕಲ್ಯಾಣಿ ಚಾಲುಕ್ಯರು, ವಿಜಯನಗರ ಅರಸರು ಹಾಗೂ ಅನೇಕ ಸ್ಥಳೀಯ ಮಾಂಡಲಿಕರು ತಮ್ಮದೇ ಆದ ಆಡಳಿತದ ಮಾರ್ಪಾಡುಗಳನ್ನು ಮಾಡಿಕೊಂಡು ಆಡಳಿತ ಮಾಡಿದ್ದಾರೆ. ಇವುಗಳು ಇತಿಹಾಸ ಪುಟದಿಂದ ಹಿಂದೆ ಸರಿದಿವೆ. ಆದರೆ ಆ ಕಾಲದಲ್ಲಿ ರಾಜ ಮಹಾರಾಜರು, ರಾಣಿಯರು, ಮಂತ್ರಿಗಳು, ದಂಡನಾಯಕರು, ಶ್ರೀಮಂತ ವರ್ಗದವರು ಹಾಗೂ ಜನಸಾಮಾನ್ಯರು ಸಮಾಜದ ಹಿತಕ್ಕಾಗಿ ಮಾಡಿದಂತಹ ಕೆಲಸ ಕಾರ್ಯಗಳ ಕುರುಹುಗಳಾಗಿ ಇಂದಿಗೂ ನಮ್ಮ ನಾಡಿನಲ್ಲಿ ಅಳಿದುಳಿದಿರುವಂತಹ ಕುರುಹುಗಳಾಗಿ ಲಭ್ಯವಾಗುತ್ತವೆ. ಇವುಗಳೆಂದರೆ ಶಾಸನಗಳು, ನಾಣ್ಯಗಳು, ದೇವಾಲಯಗಳು ಮತ್ತು ಸಾರ್ವಜನಿಕ ಕಟ್ಟಡಗಳು ರಕ್ಷಣೆಗಾಗಿ ನಿರ್ಮಾಣ ಮಾಡಿದಂತಹ ಕೋಟೆ ಕೊತ್ತಲಗಳು ಅದರಲ್ಲಿಯೂ ಪ್ರಮುಖವಾಗಿ ಕೆರೆ ಕಟ್ಟೆಗಳನ್ನು ನಿರ್ಮಾಣ ಮಾಡಿರುವುದನ್ನು ಈಗಲೂ ಸಹ ನಾವು ಇತಿಹಾಸದ ಆಧಾರಗಳಿಂದ ನೋಡಬಹುದಾಗಿದೆ. ಹಾವೇರಿ ಪ್ರದೇಶದಲ್ಲಿ ಹಾನಗಲ್ ತಾಲೂಕು-ಹಾನಗಲ್, ತಿಳುಳ್ಳಿ, ಅಕ್ಕಿಆಲೂರು, ಆಡೂರು, ಚಿಕ್ಕಬಾಸೂರು, ಹಿರೇಕೆರೂರು ತಾಲೂಕು - ಮದಗ್ ಮಾಸೂರು, ಹಿರೇಕೆರೂರು, ಹಂಸಭಾವಿ, ಮಡ್ಲೂರು, ಸಾತನಳ್ಳಿ, ಚಿಕ್ಕೇರೂರು, ಗುಡ್ಡದಮಾದಾಪುರ, & ಹಳ್ಳೂರು, ರಾಣೇಬೆನ್ನೂರು ತಾಲೂಕು- ಅಸುಂಡಿ, ಮೇಡ್ಲೇರಿ, ಗುಡ್ಡಗುಡೂರು, ಹೊನ್ನತ್ತಿ, ರಾಣೇಬೆನ್ನೂರು, ಬ್ಯಾಡಗಿ ತಾಲೂಕು- ಕಾಗಿನೆಲೆ, ಕದರಮಂಡಲಗಿ, ಸವಣೂರು ತಾಲೂಕು-ಮಾದಾಪುರ, ಮೊತಿತಲಾಬ್‌ಕೆರೆ, ಮಾದಾಪುರ, ಇವುಗಳಲ್ಲಿ ಹತ್ತಿಮತ್ತೂರು ಹಿರೇಕೆರೂರ, ಹಾನಗಲ್ಲು, ಚಿಕ್ಕೇರೂರು, & ಮದಗ್ ಮಾಸೂರು ಕೆರೆಗಳು ಈ ಪ್ರದೇಶದಲ್ಲಿ ಇರುವ ಪ್ರಸಿದ್ಧ ಕೆರೆಗಳಾಗಿವೆ. ಕೆರೆಯು ಹಲವಾರು ಆಕಾರಗಳಲ್ಲಿ ರಚಿತವಾಗುತ್ತಿತ್ತು. ಬಹುತೇಕ ಸ್ಥಳೀಯ ಭೌಗೋಳಿಕ ಲಕ್ಷಣಗಳನ್ನು ಅನುಸರಿಸಿ ಕೆರೆಗಳು ತಮ್ಮ ಆಕಾರವನ್ನು ಪಡೆದುಕೊಳ್ಳುತ್ತಿದ್ದವು. ಹಾವೇರಿ ಪ್ರದೇಶದಲ್ಲಿ ಕೆರೆಗಳ ನಿರ್ಮಾಣದಲ್ಲಿ ಪ್ರಕೃತಿಯ ನೀರಿನ ಅನುಗುಣವಾಗಿ ಕಲ್ಲಿನ & ಮಣ್ಣಿನಿಂದ ವ್ಯವಸ್ಥಿತವಾಗಿ ಹಲವಾರು ಶೈಲಿಗಳಲ್ಲಿ ನಿರ್ಮಿಸಲಾಗಿದೆ ಎಂದು ಅಧ್ಯಯನದಿಂದ ತಿಳಿದುಬರುತ್ತದೆ.

Read More »

Review of Corporate Social Responsibilities in India

Anuprasad K.R.

193 to 205

Corporate Social Responsibility (CSR) refers to the responsibility of companies to contribute to the economic, social and environmental well-being of society. In India, CSR has evolved from voluntary philanthropic activities into a structured corporate responsibility framework. The introduction of Section 135 of the Companies Act, 2013 made India one of the first countries to provide a statutory framework for CSR spending by qualifying companies. Critics argue that Corporate Social Responsibility (CSR) is a North-led agenda with a narrow focus. We had applied a development-oriented framework to contextualize CSR to structural adjustments-related macro socio-economic issues relevant to the developing countries, with a focus on CSR in India. They review contemporary CSR trends in India concluding that although its transition from philanthropic mindsets to CSR has been lagging behind its impressive financial growth, CSR has become an important part of corporate governance and sustainable development. Indian companies are expected to contribute to social welfare through activities relating to education, healthcare, environmental protection, rural development, skill development and other areas. India is one of the first countries to make CSR expenditure a statutory corporate requirement. The provisions relating to CSR were introduced through the Companies Act, 2013.

Read More »