ಜೈನ ದೃಷ್ಟಿಯಲ್ಲಿ ಸ್ತ್ರೀ

Authors

  • ಕಮಲಾ ಹಂಪನಾ
  • ಕುಪ್ಪನಹಳ್ಳಿ ಎಂ. ಭೈರಪ್ಪ ಕನ್ನಡ ಸಹಾಯಕ ಪ್ರಾಧ್ಯಾಪಕರು, ಸಮಾಜ ವಿಜ್ಞಾನ ಮತ್ತು ಭಾಷೆಗಳ ವಿಭಾಗ, ಕ್ರಿಸ್ತು ಜಯಂತಿ ಕಾಲೇಜು (ಸ್ವಾಯತ್ತ), ಕೆ.ನಾರಾಯಣಪುರ, ಕೊತ್ತನೂರು ಅಂಚೆ, ಬೆಂಗಳೂರು.

Keywords:

ಜೈನ ಮಹಿಳೆಯರು, ಜೈನ ಧರ್ಮ, ದಿಗಂಬರ ಸಂಪ್ರದಾಯ, ಋಷಭನಾಥ, ತೀರ್ಥಂಕರ, ಮಲ್ಲಿ, ಕಂತಿ, ಅಜ್ಜಿಕೆ, ಅತ್ತಿಮಬ್ಬೆ

Abstract

ಕನ್ನಡ ಮಹಿಳಾ ಸಾಹಿತ್ಯ ಜಗತ್ತಿನಲ್ಲಿ ಅಚ್ಚಳಿಯದ ಹೆಜ್ಜೆ ಗುರುತುಗಳನ್ನು ಮೂಡಿಸಿದವರಲ್ಲಿ ಡಾ.ಕಮಲಾ ಹಂಪನಾ ಅವರು ಪ್ರಮುಖರಾಗಿದ್ದಾರೆ. ಕಥೆ, ಕಾವ್ಯ, ನಾಟಕ, ಕಾದಂಬರಿ ಕ್ಷೇತ್ರಗಳಲ್ಲಿ ಗಣನೀಯ ಕೃಷಿ ಮಾಡಿರುವ ಹಲವಾರು ಲೇಖಕಿಯರು ನಮಗೆ ಸಿಗುತ್ತಾರೆ. ಆದರೆ ಸಂಶೋಧನೆ, ಸಂಪಾದನೆಯಂಥ ವಿದ್ವತ್ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಮಹತ್ತರವಾದ ಕಾಣ್ಕೆಯನ್ನು ನೀಡಿದ ಲೇಖಕಿಯರು ಅಪರೂಪ. ಅಂತಹ ಅಪರೂಪದ ಸಂಶೋಧಕಿಯರಲ್ಲಿ ಕಮಲಾ ಹಂಪನಾ ಅವರು ಅಗ್ರಗಣ್ಯರಾಗಿ ಕಾಣುತ್ತಾರೆ. ಸಾಮಾಜಿಕ ತಾರತಮ್ಮ ಹಾಗೂ ಲಿಂಗ ತಾರತಮ್ಯಗಳ ನಡುವೆ ಹಲವಾರು ಸವಾಲುಗಳನ್ನು ದಾಟಿಕೊಂಡು ಅಧ್ಯಯನ ನಡೆಸಿ, ಬೋಧನೆ-ಸಂಶೋಧನೆಯ ಬೇಸಾಯದಲ್ಲಿ ಗುರುತರವಾದ ಸಾಧನೆಗೈದು ಮಾದರಿ ಮಹಿಳೆ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಡಾ.ಕಮಲಾ ಹಂಪನಾ ಅವರು ಬೆಂಗಳೂರು ಜಿಲ್ಲೆ ದೇವನಹಳ್ಳಿಯಲ್ಲಿ ೧೯೩೫ರ ಅಕ್ಟೋಬರ್ ೨೮ ರಂದು ಜನಿಸಿದರು. ತಂದೆ ಸಿ.ರಂಗಧಾಮನಾಯಕ್, ತಾಯಿ ಲಕ್ಷಮ್ಮ. ತಂದೆ-ತಾಯಿಯರದ್ದು ಅಂತರ್ಜಾತಿ ವಿವಾಹ. ಚಳ್ಳಕೆರೆಯಲ್ಲಿ ಪ್ರಾರಂಭವಾದ ಪ್ರಾಥಮಿಕ ವಿದ್ಯಾಭ್ಯಾಸ ಬೇರೆ ಬೇರೆ ಊರುಗಳಲ್ಲಿ ಮುಂದುವರಿಯಿತು. ತುಮಕೂರಿನಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸವಾಗಿ, ಕಾಲೇಜು ವಿದ್ಯಾಭ್ಯಾಸ ಮೈಸೂರಿನಲ್ಲಿ ಮುಂದುವರೆದು ಬಿ.ಎ. ಆನರ್ಸ್ (೧೯೫೮) ಮಾಡಿದರು. ಕನ್ನಡ ಅಧ್ಯಾಪಕಿಯಾಗಿ (೧೯೫೯) ಶಿಕ್ಷಣ ವೃತ್ತಿಗೆ ಪ್ರವೇಶಿಸಿ, ಬೆಂಗಳೂರು ಮತ್ತು ಮೈಸೂರು ಮಹಾರಾಣಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ, ಬೆಂಗಳೂರಿನ ವಿಜಯನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದರು. ಸರ್ಕಾರಿ ಸೇವೆಯಿಂದ ನಿವೃತ್ತರಾದ ಮೇಲೆ ಮೈಸೂರು ವಿಶ್ವವಿದ್ಯಾಲಯದ ಜೈನಶಾಸ್ತ್ರ, ಪ್ರಾಕೃತ ಅಧ್ಯಯನದ ಪ್ರಾಧ್ಯಾಪಕರೂ, ಅಧ್ಯಕ್ಷರೂ ಅಗಿದ್ದಲ್ಲದೆ, ಹಂಪಿ ವಿಶ್ವವಿದ್ಯಾನಿಲಯದ ಸಂದರ್ಶಕ ಪ್ರಾಧ್ಯಾಪಕರೂ ಆಗಿದ್ದರು. ಬೆಂಗಳೂರು ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಮತ್ತು ಸೆನೆಟ್ ಸದಸ್ಯರಾಗಿಯೂ ಕೆಲಸ ಮಾಡಿದ ಸಾಧಕಿ ಇವರು.

೧೮ನೇ ಶತಮಾನದ ಪರಮದೇವ ಕವಿಯ ‘ತುರಂಗ ಭಾರತ-ಒಂದು ಅಧ್ಯಯನ’ ಎಂಬ ವಿಷಯದ ಮೇಲೆ ಮಹಾಪ್ರಬಂಧವನ್ನು ರಚಿಸಿ ಡಾಕ್ಟರೇಟ್ ಪಡೆದರು. ಹಲವಾರು ಕಡೆ ದೇಶ ವಿದೇಶಗಳಲ್ಲಿ ನಡೆದ ಸಮ್ಮೇಳನ ವಿಚಾರ ಸಂಕೀರಣಗಳಲ್ಲಿ ಲೇಖನಗಳನ್ನು ಬರೆದು ಪ್ರಸ್ತುತಪಡಿಸಿದರು. ಅಂತರರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ ಲೇಖಕಿಯರಲ್ಲಿ ಕಮಲಾ ಅವರೆ ಮೊದಲಿಗರು. ಟೊರೆಂಟೋ, ಕೆನಡಾ, ಬುಡಾಫೆಸ್ಟ್ ಮುಂತಾದ ಕಡೆಗಳಲ್ಲಿ ಶೈಕ್ಷಣಿಕ ಪ್ರವಾಸ ಮಾಡಿ ಉಪನ್ಯಾಸಗಳನ್ನು ನೀಡಿದರು. ಮುಂಬಯಿ, ಮದ್ರಾಸ್ ವಿಶ್ವವಿದ್ಯಾಲಯಗಳಲ್ಲೂ ವಿಶೇಷ ಆಹ್ವಾನಿತರಾಗಿ ಹೋಗಿ ಉಪನ್ಯಾಸ ನೀಡಿದ್ದಾರೆ.

ಪದವಿ ಹಾಗೂ ಸ್ನಾತಕೋತ್ತರ ಪದವಿಯ ಅಧ್ಯಯನದ ಸಂದರ್ಭದಲ್ಲಿ ಅವರಿಗೆ ಗುರುಗಳಾಗಿದ್ದ ತೀ.ನಂ.ಶ್ರೀ., ಡಿ.ಎಲ್.ನರಸಿಂಹಾಚಾರ್, ತ.ಸು.ಶಾಮರಾಯರು, ಕೆ.ವೆಂಕಟರಾಮಪ್ಪ, ಎಸ್.ವಿ.ಪರಮೇಶ್ವರ ಭಟ್ಟರು, ಎಸ್.ಶ್ರೀಕಂಠಶಾಸ್ತ್ರಿ ಮುಂತಾದ ಮಹಾನ್ ವಿದ್ವಾಂಸರು, ಇವರ ಮೇಲೆ ದಟ್ಟವಾದ ಪ್ರಭಾವ ಬೀರಿದರು. ಸಾಹಿತ್ಯಲೋಕದಲ್ಲಿ ಪ್ರಸಿದ್ಧರಾದ ಎಂ.ಎಚ್.ಕೃಷ್ಣಯ್ಯ, ಎನ್.ಎಸ್.ಲಕ್ಷ್ಮಿನಾರಾಯಣ ಭಟ್ಟ, ಎಚ್.ಜಿ. ಸಣ್ಣಗುಡ್ಡಯ್ಯ ಮೊದಲಾದವರು ಕಮಲಾ ಹಂಪನಾ ಅವರ ಸಹಪಾಠಿಗಳಾಗಿದ್ದರು. ಕಾಲೇಜು ದಿನಗಳಿಂದಲೇ ಸಹಪಾಠಿಗಳಾಗಿ ಪರಸ್ಪರ ಪರಿಚಯದೊಂದಿಗೆ, ಅರಿವಿಲ್ಲದಂತೆ ಮೂಡಿದ ಪ್ರೀತಿಯು ಗಟ್ಟಿಗೊಂಡ ಕಾರಣದಿಂದಾಗಿ ಡಾ.ಕಮಲಾ ಅವರು ಡಾ.ಎಚ್.ಪಿ.ನಾಗರಾಜಯ್ಯ(ಪ್ರೊ.ಹಂ.ಪ.ನಾ) ಅವರು ಬಾಳಸಂಗಾತಿಗಳಾದರು. ಅಂತರ್ಜಾತೀಯ ವಿವಾಹವು ಇದಾಗಿದ್ದರಿಂದ ಎದುರಾದ ಅಡ್ಡಿಆತಂಕಗಳು ಅಷ್ಟಿಷ್ಟಲ್ಲ. ಆದರೆ ಪ್ರೇಮಿಗಳಿಬ್ಬರು ಸಮಾನಾಸಕ್ತಿ, ಅಭಿರುಚಿಯುಳ್ಳವರು, ಸಾಹಿತ್ಯಾಸಕ್ತರು, ಸಾಹಿತ್ಯಬೋಧಕರು, ಕನ್ನಡ ಅಧ್ಯಾಪಕರು; ಇಬ್ಬರಲ್ಲಿಯೂ ನಿರಂತರವಾದ ಓದಿನ ಪ್ರೀತಿ-ಜೀವನ ಪ್ರೀತಿಗಳು ಒಂದಾಗಿದ್ದರಿಂದ ಆದರ್ಶ ದಂಪತಿಗಳಾದರು.

ವಿದ್ಯಾರ್ಥಿದೆಸೆಯಲ್ಲಿಯೇ ವಿದ್ವತ್ ಬಗೆಗೆ ಮೂಡಿಸಿಕೊಂಡ ಒಲವು ಮುಂದೆ ಅವರನ್ನು ಆ ದಿಕ್ಕಿನಲ್ಲಿ ಬಹು ಎತ್ತರಕ್ಕೆ ಕರೆದೊಯ್ಯಿತು. ಸೃಜನಶೀಲ ಸೃಜನೇತರ ಬರವಣಿಗೆಗಳೆರಡರಲ್ಲೂ ತಮ್ಮನ್ನು ತೊಡಗಿಸಿಕೊಂಡರೂ ಅವರ ಹೆಚ್ಚಿನ ಸಾಧನೆ ವಿದ್ವತ್ ಪ್ರಪಂಚಕ್ಕೆ ಸಂಬಂಧಿಸಿದ ಸಂಪಾದನೆ, ಸಂಶೋಧನೆ, ವಿಮರ್ಶೆಯಂತಹ ಶಿಸ್ತುಗಳಲ್ಲಿ ಡಿ.ಎಲ್.ಎನ್., ತೀ.ನಂ.ಶ್ರೀ., ಆ.ನೇ.ಉಪಾಧ್ಯೆ ಮುಂತಾದವರು ಅವರಿಗೆ ಆದರ್ಶವಾಗಿದ್ದುದರಿಂದ ಮತ್ತು ಅವರ ಪ್ರೋತ್ಸಾಹದಿಂದ ಈ ದಿಕ್ಕಿಗೆ ಹೊರಳಿದರು. ನಿರಂತರ ಅಧ್ಯಯನ ವ್ಯುತ್ಪತಿ, ಜ್ಞಾನ, ಸಹನೆ, ಸಂಯಮ, ಕೃತಿಯ ಒಳಹೊಕ್ಕು ನೋಡುವ ಅಂತರ್‌ದೃಷ್ಟಿ, ಔಚಿತ್ಯಪ್ರಜ್ಞೆ ನಿಷ್ಟುರ ಶಿಸ್ತು-ಇವೆಲ್ಲವೂ ಕಮಲಾ ಹಂಪನಾ ಅವರ ಸಾಹಿತ್ಯಕೃಷಿಯಲ್ಲಿ ಪ್ರಖರವಾಗಿ ಕಂಡುಬರುತ್ತವೆ. ಜೈನಧರ್ಮ, ಹಳಗನ್ನಡ, ಗ್ರಂಥ ಸಂಪಾದನೆ, ಜೀವನ ಚರಿತ್ರೆ, ಕಥೆ, ಕವನ, ವ್ಯಕ್ತಿಚಿತ್ರ ಮುಂತಾದ ಬಹು ವಿಷಯಗಳಿಗೆ ಸಂಬಂಧಿಸಿದಂತೆ ಇವರು ಕೃತಿರಚನೆ ಮಾಡಿದ್ದಾರೆ. ಅವರು ಬರೆದ ಐವತ್ತಕ್ಕೂ ಮೀರಿದ ಕೃತಿಗಳಲ್ಲಿ ‘ಸುಕುಮಾರ ಚರಿತ್ರೆಯ ಸಂಗ್ರಹ’, ‘ಭರತೇಶ ವೈಭವ’, ‘ಶ್ರೀ ಪಚ್ಚೆ’, ‘ಕೆ.ಎಸ್.ಧರಣೇಂದ್ರಯ್ಯನವರ ಸ್ಮೃತಿ ಗ್ರಂಥ’, ‘ಸಹಸ್ರಾಭಿಷೇಕ’, ‘ಚಾವುಂಡರಾಯ ಪುರಾಣ’, ‘ಡಿ.ಎಲ್.ಎನ್. ಅವರ ಆಯ್ದಲೇಖನಗಳು’, ‘ಹಳೆಯ ಗದ್ಯ ಸಾಹಿತ್ಯ’, ‘ದಾನಚಿಂತಾಮಣಿ ಸ್ಮರಣ ಸಂಚಿಕೆ’. ಇವೆಲ್ಲವೂ ಮಹತ್ವದ ಸಂಪಾದಿತ ಕೃತಿಗಳಾಗಿವೆ.

೧೯೬೫ರಲ್ಲೇ ಪ್ರಕಟವಾದ ‘ಸುಕುಮಾರ ಚರಿತ್ರೆಯ ಸಂಗ್ರಹ’ದಲ್ಲಿ ಸಂಪಾದನೆಯ ಕಾರ್ಯದಲ್ಲಿ ಎದುರಾಗುವ ಸಮಸ್ಯೆಯನ್ನು ತಾವು ಪರಿಹರಿಸಿಕೊಂಡ ರೀತಿಯನ್ನು ಸ್ಪಷ್ಟವಾಗಿ ವಿವರಿಸಿದ್ದಾರೆ. ಜನಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಕಥಾಸಾರವನ್ನು ನೀಡಿದ್ದಾರೆ. ಅನಗತ್ಯವಾದ ಪದ್ಯಗಳನ್ನು ಕೈಬಿಟ್ಟು ಸುಸಂಬದ್ಧವಾಗಿ ಪದ್ಯಗಳನ್ನು ಆಯ್ಕೆಮಾಡಿದ್ದಾರೆ. ಜಿ.ಬ್ರಹ್ಮಪ್ಪನವರೊಡನೆ ಸಂಪಾದಿಸಿದ ಭರತೇಶ ವೈಭವಕ್ಕೆ ೧೨೦ ಪುಟಗಳ ಸವಿಸ್ತಾರವಾದ ಕವಿ, ಕಾವ್ಯ ಪರಿಚಯ ನೀಡಿದ್ದಾರೆ.ಎಂ.ಎಚ್. ಕೃಷ್ಣಯ್ಯನವರೊಂದಿಗೆ ಸಂಪಾದಿಸಿದ ಹಳೆಯ ಗದ್ಯಸಾಹಿತ್ಯ ಹಲವು ಮುದ್ರಣಗಳನ್ನು ಕಂಡು ಬೆಂಗಳೂರು ವಿಶ್ವವಿದ್ಯಾಲಯದ ತೃತೀಯ ಪದವಿ ಐಚ್ಛಿಕ ವಿದ್ಯಾರ್ಥಿಗಳಿಗೆ ಪಠ್ಯವಾಗಿದ್ದು ಚರಿತ್ರಾರ್ಹವಾದುದು. ಕೆ.ಎಸ್.ಧರಣೇಂದ್ರಯ್ಯನವರ ಸ್ಮೃತಿ ಗ್ರಂಥದಲ್ಲಿ, ಕೆ.ಎಸ್.ಧರಣೇಂದ್ರಯ್ಯನವರ ಬಗ್ಗೆ ಅಭಿಮಾನಿಗಳು ಸ್ನೇಹಿತರು ಬರೆದ ಲೇಖನಗಳಿವೆ. ಧರಣೇಂದ್ರಯ್ಯನವರ ವ್ಯಕ್ತಿತ್ವದ ಹಲವು ಮುಖಗಳನ್ನು ಪರಿಚಯಿಸುವಂತಹ ಲೇಖನಗಳು ಅವರ ಹೃದಯ ವೈಶಾಲ್ಯ, ಸರ್ವಧರ್ಮ ಸಮನ್ವಯ ದೃಷ್ಟಿ, ಉದಾರತ್ವಗಳು ಬಿಂಬಿತವಾಗಿವೆ. ಈ ಸ್ಮರಣ ಸಂಚಿಕೆಯಲ್ಲಿ ಧರಣೇಂದ್ರಯ್ಯನವರೇ ಬರೆದ ‘Ranna, the great Kannada Poet’ ಎಂಬ ಲೇಖನವೂ ಸೇರಿರುವುದು ಇಲ್ಲಿನ ವಿಶೇಷ. ‘ಸಹಸ್ರಾಭಿಷೇಕ’ ಬೆಳ್ಕೊಳದ ಬಾಹುಬಲಿಯ ಸ್ಥಾಪನೆಯ ಸಾವಿರ ವರ್ಷದ ಸಂದರ್ಭಕ್ಕೆ ನಡೆದ ಮಹಾ ಮಸ್ತಕಾಭಿಷೇಕದ ಸಂಸ್ಮರಣೆಗಾಗಿ ಪ್ರಕಟವಾದ ಅಪೂರ್ವ ಸಂಚಿಕೆಯಾಗಿದೆ.

‘ಅನೇಕಾಂತವಾದ’ವೂ ಜೈನಧರ್ಮಕ್ಕೆ ಸಂಬಂಧಿಸಿದ ಲೇಖನಗಳ ಸಂಗ್ರಹವಾಗಿದೆ. ಜೈನಧರ್ಮ, ತತ್ವ ವಿಚಾರ ಚಿಂತನೆಗಳೇ ಇಲ್ಲಿ ಪ್ರಮುಖವಾಗಿವೆ. ಜೈನಧರ್ಮ ಸಂಬಂಧಿ ವ್ಯಕ್ತಿಗಳು, ವಿಚಾರಗಳು, ನೋಂಪಿಗಳು ಮುಂತಾದವುಗಳ ಬಗ್ಗೆ ಸಂಗ್ರಹಿಸಿದ ವಿವರಗಳನ್ನು ಅತ್ತಿಮಬ್ಬೆ, ಚಾವುಂಡರಾಯನ ಗುರುಗಳು, ಜೈನಧರ್ಮದಲ್ಲಿ ಕರ್ಮಸಿದ್ಧಾಂತ ಕಂತಿಯರು-ಹೀಗೆ ಹಲವಾರು ಲೇಖನಗಳ ಮೂಲಕ ನೀಡಿದ್ದಾರೆ. ಅತ್ಯಂತ ಕ್ಲಿಷ್ಟವಾದ ಶುಷ್ಕವಾದ ತಾತ್ವಿಕ ವಿಚಾರಗಳನ್ನು ಸಾಮಾನ್ಯರ ಅರಿವಿಗೂ ಸುಲಭವಾಗುವಂತಹ ಶೈಲಿಯಲ್ಲಿ ನೀಡುವ ಪ್ರಯತ್ನ ಮಾಡಿದ್ದಾರೆ.

‘ತುರಂಗ ಭಾರತ’ ಅವರ ಪಿಎಚ್.ಡಿ. ಪ್ರಬಂಧವಾಗಿದೆ. ೧೮ನೇ ಶತಮಾನದಲ್ಲಿದ್ದ ಪರಮದೇವನ ಬೃಹತ್ ಕಾವ್ಯ ‘ತುರಂಗ ಭಾರತ’. ೯೬ ಸಂಧಿಗಳಲ್ಲಿರುವ ೪೮೨೪ ಪದ್ಯಗಳ ಈ ದೊಡ್ಡಕಾವ್ಯದ ಕರ್ತೃ ವಿಶಿಷ್ಟ ಕವಿ. ಜನಪ್ರಿಯ ಕವಿ ಎನಿಸಿಕೊಂಡಿದ್ದ ಈತನ ಕಾವ್ಯವೊಂದೇ ಮಹಾಭಾರತದ ೧೮ ಪರ್ವಗಳನ್ನು ಒಳಗೊಂಡಿರುವಂತಹುದು. ಆದರೂ ಕನ್ನಡದ ಇಲ್ಲಿವರೆಗಿನ ಸಾಹಿತ್ಯ ಚರಿತ್ರೆಗಳಲ್ಲಿ ಎಲ್ಲಿಯೂ ಉಲ್ಲೇಖಗೊಳ್ಳದ ಕವಿಯ ಬಗ್ಗೆ ಮೂಡಿದ ಕುತೂಹಲವೇ ಈ ಪ್ರಬಂಧ ರಚನೆಗೆ ದಾರಿಯಾಯಿತು. ಐದು ಅಧ್ಯಾಯಗಳಲ್ಲಿ ಈ ಕಾವ್ಯದ ಸಮಗ್ರ ಅಧ್ಯಯನವಿದೆ. ಪಂಪಭಾರತ, ಕುಮಾರವ್ಯಾಸಭಾರತ, ಸದಾನಂದ ಭಾರತ ಮೊದಲಾದ ಇನ್ನೂ ಅನೇಕ ಭಾರತ ಕಾವ್ಯಗಳ ನಡುವಿನ ಪರಸ್ಪರ ಪ್ರಭಾವ ವ್ಯತ್ಯಾಸಗಳನ್ನು ಕಾಲ್ಪನಿಕ ದೃಷ್ಟಿಯಿಂದ ಗುರುತಿಸಿದ್ದಾರೆ. ಕಾವ್ಯವಸ್ತು, ಶೈಲಿ, ಛಂದಸ್ಸು,ವರ್ಣನಾ ಸಾಮರ್ಥ್ಯ-ಕವಿಯ ಸ್ಪೋಪಜ್ಞತೆ ಮುಂತಾದವುಗಳನ್ನು ವಿವರಿಸುವಾಗಲೂ ತೌಲನಿಕ ದೃಷ್ಟಿಯೊಂದಿಗೇ ಸಾಗಿ ಕಮಲಾ ಹಂಪನಾ ಅವರು ಕೈಗೊಂಡ ಸಂಶೋಧನಯಾನವು ಮಹತ್ತರವಾದುದಾಗಿದೆ.

‘ಮುಡಿಮಲ್ಲಿಗೆ’ ಮತ್ತು ‘ಆ ಮುಖ’ ಎಂಬುವು ಕಮಲಾ ಹಂಪನಾ ಅವರು ಬರೆದಿರುವ ವ್ಯಕ್ತಿಚಿತ್ರಗಳಾಗಿವೆ. ಪ್ರಮುಖರೆನಿಸಿದ ವ್ಯಕ್ತಿಗಳ ಜೀವನ ವಿವರ, ಸಾಧನೆಗಳನ್ನು ಪರಿಚಯಿಸುವ ಉದ್ದೇಶದ ಹಿನ್ನೆಲೆಯಲ್ಲಿ ರಚಿತವಾಗಿವೆ. ೧೯೬೬-೮೧ರವರೆಗಿನ ಲೇಖನಗಳು ಮುಡಿ ಮಲ್ಲಿಗೆಯಲ್ಲಿ ಸಂಕಲಿತವಾಗಿವೆ. ಇಲ್ಲಿನ ಹತ್ತು ಲೇಖನಗಳು ಮಹತ್ವದ ವ್ಯಕ್ತಿಗಳ ಜೀವನ ವಿವರ ಅವರ ಸಾಧನಗಳನ್ನು ಮುಕ್ತವಾಗಿ ವಿವರಿಸುತ್ತಾರೆ. ಗುರುಗಳಾದ ಡಿ.ಎಲ್.ಎನ್, ಕನ್ನಡ ಕಟ್ಟಿದ ಗಳಗನಾಥರು, ಪು.ತಿ.ನ., ತೆಂಕನಾಡ ಕೋಗಿಲೆ ಎನಿಸಿದ ರಾಧಮ್ಮ, ಮಾತೃಶ್ರೀ ರತ್ನಮ್ಮ, ಕಸ್ತೂರಿ ಬಾ ಮುಂತಾದವರನ್ನು ಸರಳವಾದ ಶೈಲಿಯಲ್ಲಿ ಪರಿಚಯಿಸಿದ್ದಾರೆ. ‘ಆ ಮುಖ’ ವ್ಯಕ್ತಿಚಿತ್ರಗಳ ಮಾದರಿಯಲ್ಲಿ ಆಧುನಿಕ ಕನ್ನಡದ ಖ್ಯಾತ ಸಾಹಿತಿಗಳ ಪತ್ನಿಯರ ವ್ಯಕ್ತಿಚಿತ್ರಣಗಳಿವೆ. ಗಂಡಂದಿರ ಸಾಹಿತ್ಯ ಸಾಧನೆಯ ಹಾದಿಯಲ್ಲಿ ಹೆಂಡತಿಯರ ಪಾತ್ರ, ಪ್ರಭಾವಗಳನ್ನು ತಿಳಿಯುವ ಉದ್ದೇಶದ ಹಿನ್ನಲೆಯಲ್ಲಿ ರಚಿತವಾದ ಇಲ್ಲಿನ ಲೇಖನಗಳು ಸಂದರ್ಶನದ ಮೂಲಕವಾಗಿ ಸಂಗ್ರಹಿಸಿದ ಮಾಹಿತಿಗಳನ್ನು ಒದಗಿಸುತ್ತವೆ. ಸಾಹಿತಿಗಳ ಕೌಟುಂಬಿಕ ವಿವರಗಳ ಜೊತೆಗೆ ಗಂಡ ಹೆಂಡತಿಯರ ಸಂಬಂಧ ಸ್ವರೂಪವೂ ಇವುಗಳ ಮೂಲಕ ಅನಾವರಣಗೊಳ್ಳುವಂಥವಾಗಿವೆ.

ಬೀಜಾಕ್ಷರ ಮಾಲೆ, ಜಾತಿ ನಿರ್ಮೂಲನೆ, ಭಾರತದಲ್ಲಿ ಜಾತಿಗಳು ಎಂಬುವು ಕಮಲಾ ಹಂಪನಾ ಅವರ ಅನುವಾದ ಕೃತಿಗಳಾಗಿವೆ. ಸರಸ್ವತಿಬಾಯಿ ಗಿರಿ ಅವರ ತೆಲುಗು ಕೃತಿಯಾದ ‘ಬೀಜಾಕ್ಷರ ಮಾಲೆ’ಯನ್ನು ಅನುವಾದಿಸುವಲ್ಲಿ ಕಮಲಾ ಅವರು ಕನ್ನಡ ಭಾಷಾ ಜಾಯಮಾನಕ್ಕೆ ಹೊಂದುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ನೇರ ಅನುವಾದವಾಗದೆ ಭಾವಾನುವಾದದ ಪ್ರಯತ್ನವೇ ಎದ್ದು ತೋರುವುದರಿಂದ, ಸ್ವತಂತ್ರ ಕೃತಿ ಎಂಬಂತೆ ಕಾಣುತ್ತದೆ. ಇನ್ನುಳಿದೆರಡು ಕೃತಿಗಳು ಜಾತಿ ನಿರ್ಮೂಲನೆಗಾಗಿ ಹೋರಾಡಿ, ಶ್ರಮಿಸಿದ, ಭಾರತದ ಸಂವಿಧಾನ ಶಿಲ್ಪಿ ಎನಿಸಿಕೊಂಡ ಡಾ.ಬಿ.ಆರ್.ಅಂಬೇಡ್ಕರರ ಪುಸ್ತಕಗಳ ಭಾಷಾಂತರವಾಗಿದೆ.

ಸಮೂಹ ಮಾಧ್ಯಮಗಳಲ್ಲಿ ಒಂದಾದ ಆಕಾಶವಾಣಿಗಾಗಿಯೂ ಬರಹಗಳನ್ನು ಸಿದ್ಧಪಡಿಸಿ ಪ್ರಸ್ತುತಪಡಿಸಿದ ಕಮಲಾ ಅವರು ಮೂರು ಪ್ರಕಾರಗಳಲ್ಲಿ ಕೆಲಸ ಮಾಡಿದ್ದಾರೆ. ಅಲ್ಲಿ ಪ್ರಸಾರಗೊಂಡ ಚಿಂತನ ಭಾಷಣಗಳು, ರೂಪಕಗಳು, ನಾಟಕಗಳು, ‘ಬೆಳ್ಳಕ್ಕಿ’, ‘ಬಾನಾಡಿ’, ‘ಬಕುಳ’ ಎಂಬ ಸಂಕಲನಗಳಾಗಿ ಹೊರಬಂದಿವೆ. ಆಕಾಶವಾಣಿ ಮಾಧ್ಯಮಕ್ಕೆ ಬೇರೆಯೇ ಆದ ಶಿಸ್ತು ಬೇಕಾಗುತ್ತದೆ. ‘ಶ್ರವಣ’ವೇ ಮುಖ್ಯಭಾಗವಾದ್ದರಿಂದ ಎಲ್ಲ ವಿಚಾರಗಳೂ ಧ್ವನಿ ಮಾಧ್ಯಮದ ಮೂಲಕವೇ ಸಂವಹನಗೊಳ್ಳಬೇಕು. ಆದ್ದರಿಂದ ಇಲ್ಲಿನ ಬರವಣಿಗೆಗೆ ವಿಶೇಷಗಮನದ ಅಗತ್ಯವಿರುತ್ತದೆ. ಬೇರೆ ಬೇರೆ ಕಾಲಗಳಲ್ಲಿ, ಬೇರೆ ಬೇರೆ ಸಂದರ್ಭಗಳಿಗಾಗಿ ಬರೆದ ನಾಟಕಗಳಾಗಿವೆ. ‘ಬಕುಳದಲ್ಲಿನ ನಾಲ್ಕು ನಾಟಕಗಳು ‘ಜಗವೆಲ್ಲ ಮಲಗಿರಲು, ‘ಕನಸು ನನಸಾಯಿತು, ‘ಕುಲದ ನೆಲೆಯ ಬಲ್ಲಿರಾ’, ‘ಕಂತಿ-ಹಂಪ ನಾಟಕಗಳಾದರೆ ‘ಬಾನಾಡಿ’ಯಲ್ಲಿ ಐದು ನಾಟಕಗಳಿವೆ. ‘ಪ್ರಿಯದರ್ಶಿನಿ’ (ಇಂದಿರಾಗಾಂಧಿಯನ್ನು ಕುರಿತದ್ದು) ‘ಪಂಜೆಯವರು, ‘ಜನ್ಮಾಭಿಷೇಕೋತ್ಸವ’ (ಮಹಾವೀರ ಜಯಂತಿ ಸಂದರ್ಭಕ್ಕೆ) ರಜತ ರಾಜ್ಯೋತ್ಸವ’, ‘ಸಂಚಿಹೊನ್ನಮ್ಮ’ ಚಿಂತನ ಭಾಷಣಗಳು. ಕೇವಲ ನಾಲ್ಕು ನಿಮಿಷಗಳ ಅವಧಿಗೆ ಅಳವಡುವಂತೆ ಸಿದ್ಧಪಡಿಸುವ ವಿಚಾರಗಳಾಗಿರುತ್ತವೆ. ವಿವಿಧ ವಿಷಯಗಳಾದ ಧರ್ಮ, ನೀತಿ, ಸ್ವಾತಂತ್ರ್ಯ, ಉಪಕಾರ, ಮಾನವತ್ವ, ಸಮಾನತೆ ಇತ್ಯಾದಿ ಹಲವಾರು ವಿಷಯಗಳನ್ನು ಕುರಿತ ಆಲೋಚನೆಗಳ ಚಿಂತನಗಳ ಸಂಗ್ರಹವಾಗಿದೆ. ‘ಬೆಳ್ಳಕ್ಕಿ’ ಮೂರು ತೆನೆಗಳಲ್ಲಿ ಹಂಚಿಕೊಂಡ ಈ ಕೃತಿ ಕ್ರಮವಾಗಿ ಚಿಂತನಗಳನ್ನು ವಿಮರ್ಶೆಗಳನ್ನು, ಭಾಷಣಗಳನ್ನು ಒಳಗೊಂಡಿದೆ.

ಕಮಲಾ ಹಂಪನಾ ಅವರ ಸಾಹಿತ್ಯರಾಶಿಗೆ ಸೇರುವ ಪ್ರಮುಖ ಕೃತಿಗಳಾದ ಬಾಸಿಂಗ, ಬಾಂದಳ, ಬಡಬಾಗ್ನಿ, ಬಿತ್ತರಗಳು ಅವರ ಪ್ರಬುದ್ಧ ಚಿಂತನೆ, ಆಲೋಚನೆಗಳನ್ನು ಬಿಂಬಿಸುವ ವೈಚಾರಿಕ, ವಿಮರ್ಶಾತ್ಮಕ ಲೇಖನಗಳ ಸಂಗ್ರಹಗಳಾಗಿವೆ. ವಿವಿಧ ಸಂದರ್ಭಗಳಿಗಾಗಿ ಸಿದ್ಧಪಡಿಸಿದ ಲೇಖನಗಳು, ಭಾಷಣಗಳು ಕೃತಿಗಳಾಗಿ ಹೊರಬಂದಿದೆ. ಅಲ್ಲದೆ ಸಾಹಿತ್ಯ ವಿದ್ಯಾರ್ಥಿಯಾಗಿ ನಿರಂತರವಾಗಿ ಕನ್ನಡ ಸಾಹಿತ್ಯಾಧ್ಯಯನದಲ್ಲಿ, ಸಾಹಿತ್ಯಾನುಸಂಧಾನದಲ್ಲಿ ತೊಡಗಿಸಿಕೊಂಡು ಕನ್ನಡ ಸಾಹಿತ್ಯದಲ್ಲಿ ಆಗುತ್ತಿರುವ ಸ್ಥಿತ್ಯಂತರಗಳನ್ನು, ಧೋರಣೆಗಳನ್ನು ಗಮನಿಸುತ್ತಾ ಆಯಾಕಾಲಕ್ಕೆ ಸಂದರ್ಭಗಳಿಗೆ ಅನುಗುಣವಾಗಿ ಸ್ಪಂದಿಸುತ್ತಾ ತಮ್ಮದೇ ಆದ ದೃಷ್ಟಿಕೋನವನ್ನು ಆಲೋಚನೆ, ಅಭಿಪ್ರಾಯಗಳನ್ನು ರೂಪಿಸಿಕೊಂಡು ಸಾಹಿತ್ಯದ ವಿವಿಧ ಮಗ್ಗಲುಗಳನ್ನು ಕುರಿತಾದ ತಮ್ಮ ನಿಲುವುಗಳನ್ನು ವಿಮರ್ಶಾ ಲೇಖನಗಳಲ್ಲಿ, ವೈಚಾರಿಕ ಲೇಖನಗಳಲ್ಲಿ ಮಂಡಿಸಿದ್ದಾರೆ. ಸಮಕಾಲೀನ ಸಾಹಿತ್ಯ, ಸಮಾಜ, ರಾಜಕೀಯ ಇತ್ಯಾದಿ ಸಮಸ್ಯೆಗಳ ಬಗೆಗಿನ ಪ್ರತಿಕ್ರಿಯೆ ಸ್ಪಂದನಗಳೇ ಅವರ ವೈಚಾರಿಕ, ವಿಮರ್ಶಾತ್ಮಕ ಲೇಖನಗಳಾಗಿ ಸಂಕಲಿತವಾಗಿವೆ.

ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಜನಪ್ರಿಯ ಪುಸ್ತಕಮಾಲೆಯಲ್ಲಿ ಪ್ರಕಟವಾದ ‘ಬಿತ್ತರ’ ಎಂಬುದು ಕಮಲಾ ಹಂಪನಾ ಅವರ ವಿದ್ವತ್ ದರ್ಶನಕ್ಕೆ ಸಾಕ್ಷೀಭೂತವಾಗಿದೆ. ಪ್ರಾಚೀನ ಕಾಲದಿಂದ ಇಂದಿನವರೆಗಿನ ಕನ್ನಡ ಕಾವ್ಯ ಕವಿಗಳ ಒಂದು ಸ್ಕೂಲ ಪರಿಚಯವನ್ನು ನೀಡಿದ್ದಾರೆ. ಐದು ವಿಭಾಗಗಳ ಅಡಿಯಲ್ಲಿ ಕುಮಾರವ್ಯಾಸ ಭಾರತ, ಜೈನಸಾಹಿತ್ಯ, ಜೈನಪುರಾಣ, ಕನಕದಾಸರ ಕೃತಿಗಳು, ಷಡಕ್ಷರದೇವ, ತೀ.ನಂ.ಶ್ರೀ. ಮತ್ತು ವ್ಯಾಕರಣ, ಹಾ.ಮಾ.ನಾಯಕ, ಎ.ಆರ್.ಕೃ, ಬೆಂಗಳೂರು ಸಾಹಿತಿಗಳು ಇತ್ಯಾದಿಯಾಗಿ ಕೃತಿ, ಕೃತಿಕಾರರ ಸಮಿಕ್ಷೆ ನಡೆಸಿದ್ದಾರೆ. ದಲಿತರ ಮಹಿಳೆಯರ ಸ್ಥಿತಿಗತಿಗಳ ಬಗ್ಗೆ ಹೇಳುವಾಗ ಚಾರಿತ್ರಿಕವಾಗಿ, ಹಂತಹಂತವಾಗಿ ಗುರುತಿಸುತ್ತಾರೆ. ದೇಶ, ಸಮಾಜ, ಸಂವಿಧಾನ, ಕಾನೂನುಗಳ ಬಗ್ಗೆಯಾಗಿ ಅರಿವನ್ನು ಮೂಡಿಸಿಕೊಂಡಿರುವುದರಿಂದಲೇ ವಿಷಯ ಪ್ರತಿಪಾದನೆ, ನಿರೂಪಣೆಗಳಿಗೆ ಒಂದು ಬಗೆಯ ಅಧಿಕೃತತೆ ಸಂದಿದೆ. ಬರವಣಿಗೆಯನ್ನು ನಿಯಂತ್ರಿಸಿಕೊಂಡು, ಕಾವು ಕೊಟ್ಟು ಬರೆದಲ್ಲಿ ಒಳನೋಟಗಳ ಪ್ರಬುದ್ಧ ಬರವಣಿಗೆ ಸಾಧ್ಯವಾಗುವುದು ಎಂಬುದಕ್ಕೆ ಈ ಗ್ರಂಥ ಮಹತ್ವದ ಉದಾಹರಣೆಯಾಗಿದೆ.

ಕಮಲಾ ಹಂಪನಾ ಅವರು ಅಧ್ಯಾಪನ, ಸಂಶೋಧನ, ಲೇಖನ, ಭಾಷಣಗಳ ಮೂಲಕ ಮಾಡಿರುವ ಸಾಹಿತ್ಯ ಸೇವೆಯನ್ನು ಗುರುತಿಸಿ ನಾಡಿನ ನಾನಾ ಸಂಘ ಸಂಸ್ಥೆಗಳಿಂದ ಅನೇಕ ಗೌರವ ಪ್ರಶಸ್ತಿಗಳು ದೊರೆತಿವೆ. ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ಣಾಟಕ ರಾಜ್ಯೋತ್ಸವ ಪ್ರಶಸ್ತಿ, ಬಾಬಾ ಆಮ್ಟೆ ರಾಷ್ಟ್ರೀಯ ಪ್ರಶಸ್ತಿ, ಸಾವಿತ್ರಮ್ಮ ದೇಜಗೌ ಪ್ರಶಸ್ತಿ, ದೇವೇಂದ್ರ ಕೀರ್ತಿ ಪ್ರಶಸ್ತಿ, ರನ್ನಕವಿ ಪ್ರಶಸ್ತಿ, ಶ್ರೀಮತಿ ರತ್ನಮ್ಮ ಹೆಗ್ಗಡೆ ಬಹುಮಾನ, ‘ಸಾಹಿತ್ಯ ವಿಶಾರದೆ’ ಪ್ರಶಸ್ತಿ, ಐಐಟಿ ಮದರಾಸು ಕನ್ನಡ ಸಂಘದ ರಜತೋತ್ಸವ ಪುರಸ್ಕಾರ, ಶ್ರವಣಬೆಳಗೊಳದ ಮಹಾ ಮಸ್ತಕಾಭಿಷೇಕದ ರಾಷ್ಟ್ರೀಯ ಪುರಸ್ಕಾರ, ಶ್ರೀ ಗೋಮಟೇಶ್ವರ ವಿದ್ಯಾಪೀಠ ಪ್ರಶಸ್ತಿ, ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಇತ್ಯಾದಿ ಪ್ರಶಸ್ತಿಗಳು ದೊರೆತಿವೆ. ಮೂಡಬಿದರೆಯಲ್ಲಿ ನಡೆದ ೭೧ನೇ ಕನ್ನಡ ಸಾಹಿತ್ಯ ಸಮ್ಮೇಳನ (೨೦೦೩) ಅಧ್ಯಕ್ಷತೆ ವಹಿಸಿದ್ದರು. ಹೀಗೆ, ಕಮಲಾ ಹಂಪನಾ ಅವರು ಬದುಕಿನ ಎಲ್ಲ ರಂಗಗಳಲ್ಲಿ ಕೆಲಸ ಮಾಡಿದ ಇವರ ಸಾಧನೆ, ಗಳಿಸಿಕೊಂಡ ಪ್ರಶಸ್ತಿ ಪುರಸ್ಕಾರಗಳು ಅಸಂಖ್ಯ.

ರನ್ನ ಕವಿಗೆ ಆಶ್ರಯಕೊಟ್ಟು ಪೋಷಿಸಿದ ಅತ್ತಿಮಬ್ಬೆಯ ಬಗ್ಗೆ ಬೆಳೆಸಿಕೊಂಡ ಅಗಾಧ ಪ್ರೀತಿ, ಗೌರವ, ಭಕ್ತಿ, ಶ್ರದ್ಧೆಗಳು ಅತ್ತಿಮಬ್ಬೆಯ ಹೆಸರು ಎಲ್ಲೆಲ್ಲೂ ಕೇಳಿ ಬರುವಂತೆ ಶ್ರಮಿಸಿದ್ದಾರೆ. ಮೊಟ್ಟಮೊದಲಿಗೆ ಅತ್ತಮಬ್ಬೆಯ ಬಗ್ಗೆ ದನಿ ಎತ್ತಿ ಆಕೆಯ ಸಾಧನೆ, ಸಾಹಿತ್ಯ ಪ್ರೇಮಗಳನ್ನು ಗುರುತಿಸಿ ಆಕೆಯ ಹೆಸರಿನಲ್ಲಿ ಮಹಿಳೆಯರಿಗೆ ಸರ್ಕಾರದ ವತಿಯಿಂದ ಬಹುದೊಡ್ಡ ಮೊತ್ತದ ಪ್ರಶಸ್ತಿ ಗೌರವಗಳು ಸಲ್ಲುವಂತೆ ಮಾಡಿ ಆಕೆಯ ಹೆಸರನ್ನು ಚಿರಸ್ಥಾಯಿಗೊಳಿಸಿದ್ದಾರೆ. ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಮಾನತೆಯ ವಿರುದ್ಧವಾದ ಸಮಸ್ಯೆಗಳ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಾ ಬಂದಿರುವ ಕಮಲಾ ಹಂಪನಾ ಅವರು ಚಳುವಳಿಗಳಿಗೆ ಸಕ್ರಿಯವಾಗಿ ಸ್ಪಂದಿಸುವ ಸಹೃದಯಿಯಾಗಿದ್ದಾರೆ.

ಕಮಲಾ ಅವರ ಒಲವು ಹೆಚ್ಚಾಗಿ ಸಂಶೋಧನೆಯ ಕಡೆಗೇ ವಿಚಾರ ಸಂಕಿರಣ ಪ್ರಚಾರೋಪನ್ಯಾಸಗಳನ್ನು ನೀಡಬೇಕಾದ ಸಂದರ್ಭಗಳಿಂದ ಮತ್ತು ಸ್ವಪ್ರೇರಣೆಯಿಂದ ಕನ್ನಡ ಕವಿ-ಕಾವ್ಯ ಪರಂಪರೆಯ ಬಗೆಗೆ ಆಸಕ್ತಿ ಜಿಜ್ಞಾಸೆಗಳನ್ನು ಮೂಡಿಸಿಕೊಂಡು ಆಳವಾದ ಅಧ್ಯಯನದ ಪರಿಣಾಮವಾಗಿ ಮೈತಳೆದ ಸಂಶೋಧನೆ ಗ್ರಂಥಗಳಲ್ಲಿ, ‘ಆದರ್ಶ ಜೈನ ಮಹಿಳೆಯರು’ ಬಹುಮುಖ್ಯವಾದುದು. ಈ ಗ್ರಂಥವು ಸಮಗ್ರವಾಗಿ ರೂಪುಗೊಳ್ಳುವುದರ ಪೂರ್ವದಲ್ಲಿ ಬರೆದಿರುವ ಮಹತ್ವದ ಲೇಖನಗಳಲ್ಲಿ ಪ್ರಸ್ತುತ ಇಲ್ಲಿ ಆಯ್ದಕೊಂಡಿರುವ ‘ಜೈನ ದೃಷ್ಟಿಯಲ್ಲಿ ಸ್ತ್ರೀ’ ಎಂಬುದು ರಚನೆಗೊಂಡಿದೆ. ಕನ್ನಡ ಜೈನ ಸಾಂಸ್ಕೃತಿಕ ಹಾಗೂ ಸಾರಸ್ವತ ಲೋಕದಲ್ಲಿ ಯಾರ ಗಮನಕ್ಕೂ ಬರದೆ ಅಜ್ಞಾತರಾಗಿ ಉಳಿದು ತಮ್ಮ ಶೌರ್ಯ, ಸಾಹಸ ತ್ಯಾಗ, ಬಲಿದಾನ, ಪ್ರತಿಭೆ, ದಾನಗುಣ ಇತ್ಯಾದಿಗಳಿಂದ ಆದರ್ಶಪ್ರಾಯರೆನಿಸಿಕೊಂಡ ಜೈನಮಹಿಳೆಯರಾದ ಕಾಳಲದೇವಿ, ಚಂಪಾದೇವಿ, ಅತ್ತಿಮಬ್ಬೆ ಮುಂತಾದವರನ್ನು ಪ್ರಾಕೃತ, ಸಂಸ್ಕೃತ, ಹಳಗನ್ನಡ ಕಾವ್ಯ, ಶಾಸನಗಳಿಂದ ಹೆಕ್ಕಿ ತೆಗೆದು ಅವರ ಉದಾತ್ತ ಚಿತ್ರಗಳನ್ನು ಕಮಲಾ ಹಂಪನಾ ಅವರು ಹೃದಯಸ್ಪರ್ಶಿಯಾಗಿ ಕಟ್ಟಿಕೊಟ್ಟಿದ್ದಾರೆ. ಜೈನಧರ್ಮದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನವನ್ನು ಮಹತ್ವವನ್ನು ಕುರಿತು ಜೈನಪುರಾಣ, ಕಾವ್ಯ ಸಂದರ್ಭಗಳಿಂದ ವಿವರಿಸಿದ್ದಾರೆ. ಜೈನ ದಿಗಂಬರ ಸಂಪ್ರದಾಯದಲ್ಲಿ ಮಾನ್ಯವಾದ ‘ಮಹಾಪುರಾಣ’ದಲ್ಲಿ ಸ್ತ್ರೀಯರ ವಿದ್ಯಾಭ್ಯಾಸಕ್ಕೆ ಒತ್ತುಕೊಟ್ಟಿರುವುದನ್ನು ಉದಾಹರಿಸುತ್ತಾರೆ. ಆದಿತೀರ್ಥಂಕರನಾದ ವೃಷಭದೇವನು ಗೃಹಸ್ಥನಾಗಿದ್ದಾಗ, ಗಂಡು ಮಕ್ಕಳಿಗೂ ಮೊದಲು ಹೆಣ್ಣು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುತ್ತಾ ನಿಮ್ಮ ಈ ಶರೀರವೂ ಈ ವಯಸ್ಸೂ ಅಸಮಾನವಾದ ಈ ಶೀಲವು ವಿದ್ಯೆಯಿಂದ ಅಲಂಕೃತವಾದರೆ ನಿಮ್ಮ ಈ ಜನ್ಮ ಸಫಲವಾಗುತ್ತದೆ. ವಿದ್ಯಾವತಿಯಾದ ಸ್ತ್ರೀಯೂ ಸ್ತ್ರೀ ಸೃಷ್ಟಿಯಲ್ಲಿ ಮೊದಲನೆ ಸ್ಥಾನವನ್ನು ಪಡೆಯುತ್ತಾಳೆ’ ಎಂದು ಹೇಳಿದ ಮಾತುಗಳನ್ನು ಉದ್ಧರಿಸುತ್ತಾರೆ. ತಮ್ಮ ವಿಚಾರಗಳ ಸಮರ್ಥನೆಗೆ ಕಾವ್ಯ ಸಂದರ್ಭಗಳನ್ನು ಸೋದಾಹರಣವಾಗಿ ವಿವರಿಸುತ್ತಾರೆ. ಹೀಗೆ, ಜೈನಮಹಿಳೆಯರು ದಾನಿಗಳಾಗಿ, ಅನನ್ಯ ಪತಿಭಕ್ತೆಯರಾಗಿ, ಕಂತಿಯರಾಗಿ, ತ್ಯಾಗಿಗಳಾಗಿ ಆದರ್ಶ ಮಾತೆಯರಾಗಿ, ಮತೋದ್ಧಾರಕರಾಗಿ, ಮಹೋನ್ನತ ಗುಣಸಂಪನ್ನರಾಗಿ ಬಾಳಿ, ಲೋಕ ಬೆಳಗಿದ ಅಪೂರ್ವ ಸಂಗತಿಗಳನ್ನು ಸಂಶೋಧನಾತ್ಮಕವಾಗಿ ಪ್ರಸ್ತುತಪಡಿಸಿದ್ದಾರೆ.

References

ವಿದ್ಯಾಭೂಷಣ ಶ್ರೀ ಕೆ. ಭುಜಬಲಿ ಶಾಸ್ತ್ರೀಗಳು. ಆದರ್ಶ ಜೈನ ಮಹಿಳೆಯರು.

ಕಮಲಾ ಹಂಪನಾ. (1968). ಆದರ್ಶ ಜೈನ ಮಹಿಳೆಯರು. ಶ್ರೀ ಮಹಾವೀರರ ಮಿಷನ್. ಬೆಂಗಳೂರು.

ರಾಜರತ್ನಂ ಜಿ. ಪಿ. ಜೈನಪುರಾಣಗಳಲ್ಲಿ ಭವಾವಳಿ.

ಚಿದಾನಂದ ಮೂರ್ತಿ ಎಂ. (2015). ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ. ಸಪ್ನ ಬುಕ್ ಹೌಸ್. ಬೆಂಗಳೂರು.

ಕಮಲಾ ಹಂಪನಾ. ಕಂತಿಯರು (ಲೇಖನ). ಆರತಿ.

ಕಮಲಾ ಹಂಪನಾ. ನುಡಿತೋರಣ (ಲೇಖನ). ದಾನ ಚಿಂತಾಮಣಿ.

ನರಸಿಂಹಾಚಾರ್ ಆರ್. (1975). ಶಾಸನ ಪದ್ಯಮಂಜರಿ. ಬೆಂಗಳೂರು ವಿಶ್ವವಿದ್ಯಾಲಯ. ಬೆಂಗಳೂರು.

Downloads

Published

07.05.2024

How to Cite

ಕಮಲಾ ಹಂಪನಾ, & ಕುಪ್ಪನಹಳ್ಳಿ ಎಂ. ಭೈರಪ್ಪ. (2024). ಜೈನ ದೃಷ್ಟಿಯಲ್ಲಿ ಸ್ತ್ರೀ. AKSHARASURYA, 3(06), 01 to 18. Retrieved from https://aksharasurya.com/index.php/latest/article/view/385

Issue

Section

ಹಿಂದಣ ಹೆಜ್ಜೆ. | TRODDEN PATH

Most read articles by the same author(s)