ಎರಡು ಶಬ್ದಗಳ ನಿಷ್ಪತ್ತಿ ಮತ್ತು ಅರ್ಥವಿಚಾರ

Authors

  • ಜಿ. ವೆಂಕಟಸುಬ್ಬಯ್ಯ
  • ಕುಪ್ಪನಹಳ್ಳಿ ಎಂ. ಭೈರಪ್ಪ ಕನ್ನಡ ಸಹಾಯಕ ಪ್ರಾಧ್ಯಾಪಕರು, ಸಮಾಜ ವಿಜ್ಞಾನ ಮತ್ತು ಭಾಷೆಗಳ ವಿಭಾಗ, ಕ್ರಿಸ್ತು ಜಯಂತಿ ಕಾಲೇಜು (ಸ್ವಾಯತ್ತ), ಕೆ.ನಾರಾಯಣಪುರ, ಕೊತ್ತನೂರು ಅಂಚೆ, ಬೆಂಗಳೂರು.

Keywords:

ಅಕ್ಕಪಕ್ಕ, ಹರಿಮೇಖಲೆ, ಕನ್ನಡ ಭಾಷಿಕ ನೋಟ, ಶಬ್ದಮಣಿದರ್ಪಣ, ಕನ್ನಡ ನಿಘಂಟು

Abstract

ಜಗಮೆಚ್ಚಿದ ನುಡಿಗಾರುಡಿಗ ಪ್ರೊ.ಜಿ.ವೆಂಕಟಸುಬ್ಬಯ್ಯನವರು
ಕರುನಾಡು ಕಂಡ ಕನ್ನಡದ ಮೇರು ನಿಘಂಟು ತಜ್ಞ, ನುಡಿ ಗಾರುಡಿಗ, ನುಡಿಬ್ರಹ್ಮ, ಶಬ್ದಬ್ರಹ್ಮ, ಅಕ್ಷರಬ್ರಹ್ಮ, ನಡೆದಾಡುವ ನಿಘಂಟು, ಅಪ್ರತಿಮ ಸಂಶೋಧಕ, ಜಗಮೆಚ್ಚಿದ ಕನ್ನಡ ಪ್ರಾಧ್ಯಾಪಕ ಎಂದೇ ಜನಪ್ರಿಯರಾದವರು ನಾಡೋಜ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು. ನುಡಿಸಾಗರದ ಆಳಕ್ಕೂ ಉದ್ದಗಲಕ್ಕೂ ಮುಳುಗೆದ್ದು ಈಜಾಡಿ ‘ಕನ್ನಡ ನಿಘಂಟು’ಗಳೆಂಬ ಮುತ್ತುರತ್ನಗಳನ್ನು ಹೊರತಂದುಕೊಟ್ಟ ಶೋಧನವೀರ ನುಡಿಕಾರರು ಜಿವಿ. ಆಂಗ್ಲಮುಖಿ ಹಾಗೂ ಕಲಾರಾಹಿತ್ಯ ಶಿಕ್ಷಣಯಾನದಲ್ಲಿ ಕನ್ನಡಪ್ರಜ್ಞೆಯನ್ನು ಬೆಳಗುವ ಮೂಲಕ ಅಸಂಖ್ಯ ಕನ್ನಡ ಕಟ್ಟಾಳುಗಳನ್ನು ರೂಪುಗೊಳಿಸುವ ಮೂಲಕ ಈ ನೆಲಕ್ಕೆ ಅಪೂರ್ವ ಕಾಣಿಕೆಯಿತ್ತ ಜಿವಿ ಅವರು ಶ್ರೇಷ್ಠ ಪ್ರಾಧ್ಯಾಪಕರಾಗಿದ್ದಾರೆ. ಸಂಶೋಧಕರಾಗಿ ಹಾಗೂ ಪ್ರಾಧ್ಯಾಪಕರಾಗಿ ಮಾತ್ರವಲ್ಲದೇ ಡೈನಮಿಕ್ ಅಧಿಕಾರಿಯಾಗಿಯೂ ಕನ್ನಡ ನಾಡು-ನುಡಿಗೆ ನೀಡಿದ ಮಹತ್ತರವಾದ ಕೊಡುಗೆಗಳು ಪ್ರಾತಃಸ್ಮರಣೀಯವಾಗಿವೆ.
ಮೂಲತಃ ಗಂಜಮ್ ವೆಂಕಟಸುಬ್ಬಯ್ಯ ಅವರು ಪ್ರೊ.ಜಿ.ವೆಂಕಟಸುಬ್ಬಯ್ಯ (ಜಿವಿ) ಎಂದೇ ಜನಪ್ರಿಯ. ಇವರು ಹುಟ್ಟಿದ್ದು 1913ರ ಆಗಸ್ಟ್ 23ರಂದು, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಗಂಜಮ್ ಗ್ರಾಮದಲ್ಲಿ. ಅವರ ತಂದೆ ಗಂಜಮ್ ತಿಮ್ಮಯ್ಯ; ಆ ಕಾಲದಲ್ಲಿ ಅವರು ಪ್ರಸಿದ್ಧ ವಿದ್ವಾಂಸರು; ಕನ್ನಡ ಮತ್ತು ಸಂಸ್ಕೃತಗಳಲ್ಲಿ ಅವರದ್ದು ಅಗಾಧ ಪಾಂಡಿತ್ಯ; ಅರಮನೆಯ ವಿದ್ವಾಂಸರಾಗಿದ್ದರು. ‘ಪುರಾಣ ಕಥಾವಳಿ’ ಎಂಬ ಮಾಸಪತ್ರಿಕೆಯನ್ನು ಆರಂಭಿಸಿ ಅದರಲ್ಲಿ ಶಿವಪುರಾಣ, ವಿಷ್ಣುಪುರಾಣ ಮತ್ತಿತರವುಗಳಿಂದ ಕತೆಗಳನ್ನು ಪ್ರಕಟಿಸುತ್ತಿದ್ದರು. ಇವುಗಳ ಸರಳ ಶೈಲಿಯ ಬಗ್ಗೆ ರಾ.ನರಸಿಂಹಾಚಾರ್ಯರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ‘ರಘುವೀರಚರಿತೆ’ ಎಂಬ ನಾಟಕ ಹಾಗೂ ‘ಮಾಲತೀಮಾಧವ’ದ ಅನುವಾದಗಳು ಅವರವೇ. ತಂದೆಯ ಪ್ರೇರಣೆ ಮತ್ತು ಮಾರ್ಗದರ್ಶನಗಳಿಂದ ಜಿವಿ ಅವರು ವಿದ್ವತ್ತನ್ನು ಮೈಗೂಡಿಸಿಕೊಂಡರು. ಇದರಿಂದಾಗಿಯೇ ಬಾಲಕನಾಗಿದ್ದಾಗಲೇ ವೆಂಕಟಸುಬ್ಬಯ್ಯನವರಿಗೆ ಸಾಹಿತ್ಯದಲ್ಲಿ ಒಲವು ಬೆಳೆಯಿತು.
ಜಿವಿ ಅವರ ತಂದೆ ಸರ್ಕಾರಿ ಉದ್ಯೋಗದಲ್ಲಿದ್ದ ಕಾರಣ ಒಂದು ಕಡೆಯಿಂದ ಇನ್ನೊಂದು ಕಡೆಗೆ ವರ್ಗಾವಣೆಯಾಗುತ್ತಿದ್ದರು. ಹೀಗಾಗಿ ವೆಂಕಟಸುಬ್ಬಯ್ಯನವರು ಪ್ರಾಥಮಿಕ ಶಿಕ್ಷಣವನ್ನು ಬನ್ನೂರು ಮತ್ತು ಮಧುಗಿರಿಯಲ್ಲಿ ಪೂರೈಸಿದರು. 1930ರ ದಶಕದ ಆರಂಭದ ವೇಳೆಗೆ, ಜಿವಿ ಅವರ ಕುಟುಂಬವು ಮೈಸೂರು ನಗರಕ್ಕೆ ಸ್ಥಳಾಂತರಗೊಂಡ ಕಾರಣದಿಂದ ವೆಂಕಟಸುಬ್ಬಯ್ಯನವರು ಮೈಸೂರಿನ ಯುವರಾಜ ಕಾಲೇಜಿಗೆ ಸೇರುವಂತಾಯಿತು. ಇಲ್ಲಿ ಕುವೆಂಪು ಅವರ ಪ್ರಭಾವಕ್ಕೆ ಒಳಗಾದರು. ನಂತರ ತಮ್ಮ ಕಲಾ ಪದವಿ ಪಡೆಯಲು ಮೈಸೂರಿನ ಮಹಾರಾಜ ಕಾಲೇಜಿಗೆ ಸೇರಿದರು. ಅಲ್ಲಿ ಅವರು ಆಯ್ಕೆಮಾಡಿದ್ದ ವಿಷಯ ಪ್ರಾಚೀನ ಇತಿಹಾಸ, ಸಂಸ್ಕೃತ ಮತ್ತು ಹಳಗನ್ನಡವಾಗಿದ್ದು, ಇಲ್ಲಿ ಪಂಪಭರತವನ್ನು ಟಿ.ಎಸ್.ವೆಂಕಣ್ಣಯ್ಯ, ಗ್ರಂಥಸಂಪಾದನಾ ವಿಜ್ಞಾನವನ್ನು ಡಿ.ಎಲ್.ನರಸಿಂಹಾಚಾರ್, ಕಾವ್ಯಮೀಮಾಂಸೆಯನ್ನು ತೀ.ನಂ.ಶ್ರೀಕಂಠಯ್ಯ ಮತ್ತು ಕರ್ನಾಟಕ ಇತಿಹಾಸವನ್ನು ಎಸ್.ಶ್ರೀಕಂಠಶಾಸ್ತ್ರಿ ಅವರಂತಹ ಮೇರುವಿದ್ವಾಂಸರಿಂದ ಕಲಿಯುವ ಸುಸಂದರ್ಭ ಜಿವಿ ಅವರದಾಗಿತ್ತು.
“A Great Teacher Inspires” ಎಂಬ ಮಾತು ಪ್ರಾಧ್ಯಾಪಕರಾಗಿದ್ದ ಜಿವಿ ಅವರ ಜೀವನಯಾನದಲ್ಲಿ ಅಕ್ಷರಶಃ ಸತ್ಯವಾಗಿತ್ತು. ಜಿವಿ ಅವರು ಉಪಾಧ್ಯಾಯರಾಗಿ ಶಾಲೆ ಸೇರಿದ ಮೊದಲು ಪಾಠಮಾಡಬೇಕಾಗಿ ಬಂದದ್ದು ಕನ್ನಡವನ್ನಲ್ಲ, ಇಂಗ್ಲಿಷನ್ನು; ಅದೂ ಇಂಗ್ಲಿಷ್ ವ್ಯಾಕರಣವನ್ನು, ಜಿವಿ ಅವರ ಸಹಜವಾದ ಅಧ್ಯಾಪನ ಸಾಮರ್ಥ್ಯದ ಜೊತೆ ಕಲಿತಿದ್ದ ಬೋಧನವಿಧಾನ ಸೇರಿ ಅವರನ್ನು ಮತ್ತಷ್ಟು ಪರಿಣಾಮಕಾರೀ ಅಧ್ಯಾಪಕರನ್ನಾಗಿ ರೂಪಿಸಿತ್ತು. ಆದ್ದರಿಂದ ಅವರು ಮಾಡಿದ ಇಂಗ್ಲಿಷ್ ವ್ಯಾಕರಣ ಪಾಠಗಳು ವಿದ್ಯಾರ್ಥಿಸಮೂಹಕ್ಕೆ ಮೆಚ್ಚಿಗೆಯಾದವು. ಇಂಗ್ಲಿಷ್ ವ್ಯಾಕರಣ ತರಗತಿಗಳನ್ನು ಬೇರೆ ಅಧ್ಯಾಪಕರಿಗೆ ಕೊಟ್ಟಾಗ ವಿದ್ಯಾರ್ಥಿಗಳು ಮುಷ್ಕರ ಹೂಡಿ ಮತ್ತೆ ಜಿವಿ ಅವರೇ ಪಾಠ ಮಾಡುವ ಹಾಗಾಯಿತು. ಇದು ಜಿವಿ ಅವರ ಬೋಧನೆ ಮಾಡಿದ್ದ ಪ್ರಭಾವಳಿ. ಮುಂದೆ ಬಿಎಚ್‌ಎಸ್ ಪ್ರೌಢಶಾಲೆಯು ಇಂಟರ್‌ಮೀಡಿಯಟ್ ಕಾಲೇಜಾಗಿ, ಆ ಮುಂದೆ ವಿಜಯ ಕಾಲೇಜು ಎಂಬ ಹೆಸರಲ್ಲಿ ಪದವಿ ಕಾಲೇಜು ಆದ ಮೇಲೆಯೂ ಜಿವಿ ಅವರು ಅಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಮುಂದುವರಿದರು. ಬೆಂಗಳೂರು ವಿಶ್ವವಿದ್ಯಾಲಯವು ಆರಂಭಗೊಂಡ ನಂತರ ಆನರ್ಸ್ ತರಗತಿಗಳು ಜನ್ಮ ತಳೆದಾಗ ಜಿವಿ ಅವರ ಪ್ರಯತ್ನದಿಂದ ವಿಜಯ ಕಾಲೇಜಿನಲ್ಲಿ ಭೌತಶಾಸ್ತ್ರದ ಜೊತೆಗೆ ಕನ್ನಡ ಆನರ್ಸ್ ತರಗತಿಯೂ ಶುರುವಾಯಿತು. ಜಿವಿ ಅವರ ತರಗತಿಯ ಪಾಠ ಸಾವಿರಾರು ವಿದ್ಯಾರ್ಥಿಗಳಲ್ಲಿ ವಿಷಯದ ಬಗ್ಗೆ ತಿಳಿವಳಿಕೆ ಕೊಡುವುದರಲ್ಲಿ ಹೇಗೆಯೋ ಕನ್ನಡದ ಬಗ್ಗೆ ಶ್ರದ್ಧೆ ಬೆಳೆಯಲೂ ಹಾಗೆಯೇ ಕಾರಣವಾಗಿದೆ. ಪಾಠ ಮಾಡುವುದೊಂದಷ್ಟೇ ಅಲ್ಲ, ಕಿರಿಯರ ಜೊತೆ ಅವರು ಆತ್ಮೀಯತೆಯಿಂದ ನಡೆದುಕೊಳ್ಳುತ್ತಿದ್ದ ರೀತಿ ಅವರ ಯಶಸ್ಸಿನ ಒಂದು ಗುಟ್ಟಾಗಿತ್ತು ಎಂಬುದನ್ನು ಅವರ ಅಸಂಖ್ಯ ವಿದ್ಯಾರ್ಥಿಗಳ ಅನುಭವದ ಹಾಗೂ ಅಭಿಮಾನದ ನುಡಿಯಾಗಿದೆ.
ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು ಮೊದಲೆಲ್ಲ ಸೂಟ್ ತೊಡುತ್ತಿದ್ದರು. “ಕನ್ನಡಕ್ಕೆ ಸೂಟ್ ತೊಡಿಸಿದವರು” ಎಂದು ಅವರ ಬಗ್ಗೆ ‘ಪ್ರಜಾವಾಣಿ’ಯ ಸಂಪಾದಕರಾಗಿದ್ದ ಟಿಎಸ್‌ಆರ್ ಹೇಳಿದ್ದರು. ವಿದ್ವಾಂಸರಾದ ಪಿ.ವಿ.ನಾರಾಯಣ ಅವರು ಹೇಳುವಂತೆ, “ಅದೊಂದು ರೂಪಕ; ಕನ್ನಡ ಮೇಷ್ಟರೆಂದರೆ ಒಂದು ಸಿದ್ಧ ಚಿತ್ರ ಜನರ ಮನಸ್ಸಿನಲ್ಲಿತ್ತು. ಅದನ್ನು ಹೋಗಲಾಡಿಸಿ, ಕನ್ನಡ ಅಧ್ಯಾಪಕರು ಆಧುನಿಕ ಮನೋಭಾವವನ್ನು ಮೈಗೂಡಿಸಿಕೊಂಡದ್ದರ ಪ್ರತಿಮೆ ಅದು. ಅದಕ್ಕೆ ಮೊದಲಿಟ್ಟವರು ಜಿವಿ ಎಂಬುದು ಅದರರ್ಥ.” ಆದರೆ ಸೂಟ್ ತೊಟ್ಟವರೆಲ್ಲ ಹೀಗೇ ಇರುವರೆಂದು ಹೇಳಲಾಗುವುದಿಲ್ಲ. ಕನ್ನಡ ನಾಡಿನಾದ್ಯಂತ ಅವರ ಅನೇಕ ವಿದ್ಯಾರ್ಥಿಗಳು ಪ್ರಭಾವೀ ಸ್ಥಾನಗಳಲ್ಲಿದ್ದವರು ಕೇವಲ ಸಾಹಿತ್ಯದ ವಿದ್ಯಾರ್ಥಿಗಳಲ್ಲ. ಸಾಹಿತ್ಯೇತರ ಉಳಿದ ವಿದ್ಯಾರ್ಥಿಗಳಲ್ಲೂ ಜಿವಿ ಎಂತಹ ಪ್ರಭಾವ ಬೀರಿ ಹೆಸರು ಪಡೆದಿದ್ದಾರೆ ಎಂಬುದನ್ನು ತಿಳಿದರೆ ಅವರ ಅಧ್ಯಾಪನ ಬಹುಸಾಮರ್ಥ್ಯದ ಬಗ್ಗೆ ಅಚ್ಚರಿಯೂ ಹೆಮ್ಮೆಯೂ ಉಂಟಾಗುತ್ತದೆ.
ವಿದ್ವತ್ ಕ್ಷೇತ್ರದಲ್ಲಿ ಮಾತ್ರವಲ್ಲದೆ ವ್ಯಾವಹಾರಿಕ ಮಟ್ಟದಲ್ಲಿಯೂ ಕನ್ನಡಕ್ಕೆ ಸಿಕ್ಕಬೇಕಾದ ಸ್ಥಾನಮಾನಗಳನ್ನು ಒದಗಿಸಲು ಜಿವಿ ಅವಿರತವಾಗಿ ಪ್ರಯತ್ನಿಸಿದ್ದಾರೆ. 1964ರಿಂದ 1969 ರವರೆಗೆ ಜಿವಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕರಾಗಿದ್ದರು. ಅವರು ಆ ಅಧಿಕಾರ ವಹಿಸಿಕೊಂಡಾಗ ಪರಿಷತ್ತಿನ ಆರ್ಥಿಕ ಸ್ಥಿತಿ ಶೋಚನೀಯವಾಗಿತ್ತು, ಅದನ್ನಿವರು ಉತ್ತಮಪಡಿಸಿದರು. ಅಲ್ಲದೆ, ಆಗ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯಲ್ಲಿ ಕೆಲವೇ ಸದಸ್ಯರಿದ್ದರು; ಕರ್ನಾಟಕದ ಎಲ್ಲ ಜಿಲ್ಲೆಗಳಿಂದಲೂ ಪ್ರಾತಿನಿಧ್ಯ ಒದಗಿಸಿ ಅದಕ್ಕೆ ನಿಜವಾದ ರಾಜ್ಯವ್ಯಾಪ್ತಿಯನ್ನು ಒದಗಿಸಿದರು. ಕನ್ನಡನಾಡನ್ನೆಲ್ಲ ಸಂಚರಿಸಿ ತಮ್ಮ ಉಪನ್ಯಾಸಗಳ ಮೂಲಕ ಜನರಲ್ಲಿ ತಾಯಿನುಡಿಯ ಬಗ್ಗೆ ಅಭಿಮಾನ ಮೂಡಿಸಿದ್ದಾರೆ. 1956ರ ನವೆಂಬರ್ 1ರಂದು ಕರ್ನಾಟಕದ ಏಕೀಕರಣವಾದರೂ ಬೀದರಿನ ಬಸವಕಲ್ಯಾಣವು ಕರ್ನಾಟಕಕ್ಕೆ ಸೇರಿರಲಿಲ್ಲ. ಈ ಸಮಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯನ್ನು ಬೀದರ್ ನಗರದಲ್ಲಿ ಸಭೆ ಸೇರಿಸಿ ಈ ವಿಷಯವನ್ನು ಪರಿಶೀಲಿಸಬೇಕೆಂಬ ಜಿವಿ ಅವರ ಮನವಿಯನ್ನು ಅಧಿಕಾರಿಗಳು ಒಪ್ಪಿಕೊಂಡರು. ಬೀದರ್ ನಗರಕ್ಕೆ ಪರಿಷತ್ತಿನ ಕಾರ್ಯ ಸಮಿತಿಯು ಹೋದಾಗ ಆಶ್ಚರ್ಯ ಕಾದಿತ್ತು. ಬೀದರ್ ನಗರದಲ್ಲಿ ಅಂಗಡಿ ಬೀದಿಯಲ್ಲಿ ಒಂದು ಕನ್ನಡದ ಬೋರ್ಡ್ ಇರಲಿಲ್ಲ, ಅಲ್ಲಿ ಕನ್ನಡದ ಶಾಲೆಗಳಿರಲಿಲ್ಲ. ಅಲ್ಲಿಯ ಜನಕ್ಕೆ ಕನ್ನಡಕ್ಕೆ ಒಂದು ವರ್ಣಮಾಲೆ ಇದೆ ಎಂಬುದು ಗೊತ್ತಿರಲಿಲ್ಲ. ಎಲ್ಲಾ ಮರಾಠೀಮಯ. ಮನೆಯಲ್ಲಿ ಎಲ್ಲರೂ ಕನ್ನಡ ಮಾತನಾಡುತ್ತಿದ್ದರು. ಹೊರಗೆ ಮರಾಠಿ. ಇಷ್ಟೊಂದು ಹಿಂದೆ ಬಿದ್ದಿರುವ ಕನ್ನಡ ಪ್ರದೇಶವನ್ನು ಕನ್ನಡ ಭಾಷೆಯ ಅಕ್ಷರಗಳಿಂದ ಪ್ರಾರಂಭಿಸಿ ಕನ್ನಡಮಯವನ್ನಾಗಿ ಮಾಡಬೇಕಾಗಿತ್ತು. ಆಗ ಸಮಿತಿಯ ಎಲ್ಲ ಸದಸ್ಯರೂ ಅನೇಕ ಕಡೆಗಳಲ್ಲಿ ಪ್ರಯಾಣ ಮಾಡಿ, ಕನ್ನಡದಲ್ಲಿ ಉಪನ್ಯಾಸ ಮಾಡಿ ಜನರ ಮನಸ್ಸಿನಲ್ಲಿ ಕನ್ನಡದ ಹಿರಿಮೆಯನ್ನು ಮೂಡಿಸಬೇಕಾಯಿತು. ಜೀವಿ ಮತ್ತವರ ಅಧಿಕಾರಿ ಬಳಗದ ಕನ್ನಡ ಬದ್ಧತೆ ಹಾಗೂ ಕ್ರಿಯಾಶೀಲ ಆಂದೋಲನದ ಫಲವಾಗಿ ಬಸವಕಲ್ಯಾಣವು ಕನ್ನಡಮಯವಾಯಿತು.
ಪ್ರೊ.ಜಿ.ವಿ ಅವರ ಮತ್ತೊಂದು ಮಹತ್ವದ ಸಾಧನೆಯೆಂದರೆ ‘ರಾಮಕೃಷ್ಣ ಸ್ಟೂಡೆಂಟ್ ಹೋಂ’ ಅನ್ನು ಕಟ್ಟಿ ಬೆಳೆಸಿದುದು. ಬೆಂಗಳೂರಿನ ಶ್ರೀ ರಾಮಕೃಷ್ಣ ಸೂಡೆಂಟ್ಸ್ ಹೋಂನ ಅಧ್ಯಕ್ಷರಾಗಿ ಅದರ ಏಳಿಗೆಗಾಗಿ ನಿರ್ಮಲವಾಗಿ ದುಡಿದವರು. ಅದಕ್ಕೆ ಮೊದಲು ಜಿವಿ ಅವರನ್ನು ಸದಸ್ಯರಾಗಿಸಿದವರು ಎಂ.ಬಿ.ಗೋಪಾಲಸ್ವಾಮಿ ಅವರು. ಗೋಪಾಲಸ್ವಾಮಿ ಅವರು, ನೀವು ಮಕ್ಕಳಿಗೆ ಪ್ರೀತಿಯಿಂದ ಪಾಠ ಹೇಳುವುದರಲ್ಲಿ ಎತ್ತಿದ್ದ ಕೈಯಿ. ಹಾಗಾಗಿ ನೀವು ಈ ಕೆಲಸ ಮಾಡಬೇಕು ಎಂದಾಗ ಜಿವಿ ಅವರು ಪ್ರತಿನಿತ್ಯ ಬಿಡುವಿನ ಹೊತ್ತಿನಲ್ಲಿ ಹೋಗಿ ಅಲ್ಲಿನ ಬಡ ಮಕ್ಕಳಿಗೆ ಪಾಠ ಹೇಳುತ್ತಿದ್ದರು. ಅಲ್ಲಿ ಅವರು ವಿದ್ಯಾರ್ಥಿಗಳಿಂದ ಅದೆಷ್ಟು ಪ್ರೀತಿ ಸಂಪಾದಿಸಿದ್ದರು ಅಂದರೆ ಅವರನ್ನೇ ವಾರ್ಡನ್ ಮಾಡಲಾಯಿತು. ಈ ವಿದ್ಯಾರ್ಥಿನಿಲಯವು ಸುಸಜ್ಜಿತವಾದ ಸ್ವಂತ ಕಟ್ಟಡ ಹಾಗೂ ಅಚ್ಚುಕಟ್ಟಾದ ಏರ್ಪಾಟುಗನ್ನು ಹೊಂದಿರುವುದಕ್ಕೆ ಜಿವಿ ಅವರ ಶ್ರಮ ಹಾಗೂ ದೂರದರ್ಶಿತ್ವಗಳೂ ಕಾರಣವಾಗಿವೆ. ಈ ತನಕ ಸಾವಿರಾರು ವಿದ್ಯಾರ್ಥಿಗಳು ಆ ವಿದ್ಯಾರ್ಥಿನಿಲಯದ ಲಾಭ ಪಡೆದಿದ್ದಾರೆ; ಅನೇಕ ಕ್ಷೇತ್ರಗಳಲ್ಲಿ ಉನ್ನತ ಸ್ಥಾನ ಪಡೆದು ತಮಗೂ ನಿಲಯಕ್ಕೂ ಗೌರವ ತಂದುಕೊಂಡಿದ್ದಾರೆ. ಜಿವಿ ಅವರು ತಮ್ಮ ಬಾಲ್ಯದಲ್ಲಿ ಅನುಭವಿಸಿದ ಬಡತನದ ಬೇಗೆಯನ್ನು ಮರೆಯದೆ ಬಡ ವಿದ್ಯಾರ್ಥಿಗಳ ಹಿತಕ್ಕಾಗಿ ಶ್ರಮಿಸಿದ ಮಾನವೀಯ ಜೀವನಯಾನವು ಅವಿಸ್ಮರಣೀಯ.
ಪ್ರೊ.ಜಿ.ವಿ. ಅವರು ಸಂಶೋಧನೆ, ಸಂಪಾದನೆ, ಅನುವಾದ, ನಿಘಂಟು ರಚನೆ, ಸಾಹಿತ್ಯ ವಿಮರ್ಶೆ, ಸಾಹಿತ್ಯ ಚರಿತ್ರೆ ಮೊದಲಾದ ಕ್ಷೇತ್ರಗಳಲ್ಲಿ ಗ್ರಂಥ ರಚನೆ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅಪಾರವಾದುದು. ಅನುಕಲ್ಪನೆ, ನಯಸೇನ, ಕಬೀರ್, ಸರ್ವಜ್ಞ, ಕವಿಜನ್ನ, ಕನ್ನಡ ಸಾಹಿತ್ಯ ಬೆಳೆದು ಬಂದ ದಾರಿ, ಕನ್ನಡವನ್ನು ಉಳಿಸಿ ಬೆಳಸಿದವರು, ಕನ್ನಡ ನಿಘಂಟು, ಎರವಲು ಶಬ್ದಕೋಶ, ಇಂಗ್ಲಿಷ್-ಕನ್ನಡ ನಿಘಂಟು, ಕ್ಲಿಷ್ಟಪದಕೋಶ, ಇಗೋ ಕನ್ನಡ ಮೊದಲಾದ ಕೃತಿಜ್ಯೋತಿಗಳ ಮೂಲಕ ಕನ್ನಡ ನಾಡು-ನುಡಿಯನ್ನು ಬೆಳಗಿದ ಜಿವಿ ಅವರು ದಣಿವರಿಯದ ದುಡಿಮೆಗಾರರು ಹಾಗೂ ಸುದೀರ್ಘ ಆಯುಷ್ಯದ ಹಿರಿಮೆಯುಳ್ಳ ಚೇತನವಾಗಿದ್ದವರು.
ವಿಮರ್ಶಕರ ಅಭಿಮತದಂತೆ, ಜಿವಿ ಅವರ ಸಾಹಿತ್ಯಾನುಸಂಧಾನ ಬಹು ಸೂಕ್ಷ್ಮವಾದುದು. ಅವರು ಬರೆದ ‘ಅನುಕಲ್ಪನೆ’ ಅವರ ಮೊದಲ ಗಂಭೀರ ವಿಮರ್ಶಾ ಲೇಖನಗಳ ಸಂಕಲನ. “ಕವಿಯ ಪ್ರತಿಭೆಯನ್ನನುಸರಿಸಿದ ಅವನ ಕಲ್ಪನೆಗೆ ಸರಿಯಾದ ಪುನಃಕಲ್ಪನೆಯನ್ನು ಅನುಕಲ್ಪನೆ ಎಂದು ಕರೆಯಬಹುದೆ” ಎಂದು ಅದರಲ್ಲಿ ವಿವರಣೆಯಿದೆ. ಇದು ಸಹೃದಯ ಎಂಬ ಭಾರತೀಯ ಕಾವ್ಯಮೀಮಾಂಸೆಯ ಪರಿಕಲ್ಪನೆಗೆ ಅನುಗುಣವಾದ ವಿವರಣೆ. ಅದಕ್ಕನುಗುಣವಾದ ಕೃತಿ ಪರಿಶೀಲನೆಯ ಪ್ರಯತ್ನವನ್ನಿಲ್ಲಿ ಕಾಣಬಹುದು. ಹಳಗನ್ನಡದ ಕೆಲವು ಕಾವ್ಯಗಳು ಹಾಗೂ ಹೊಸಗನ್ನಡದ ವಿವಿಧ ಸಾಹಿತ್ಯ ಪ್ರಕಾರಗಳ ಕೆಲವು ಕೃತಿಗಳ ಸಹೃದಯ ವಿಮರ್ಶೆ ಇದರಲ್ಲಿದೆ. ತಮ್ಮ ಪರಿಶೀಲನೆಗೆ ಅವರು ಆಯ್ದುಕೊಂಡಿರುವ ಕೃತಿವೈವಿಧ್ಯವೇ ಅವರ ವಿಶಾಲವಾದ ಅಧ್ಯಯನ, ವಿಸ್ತಾರವಾದ ಆಸಕ್ತಿ ಮತ್ತು ಅಭಿರುಚಿಗಳಿಗೆ ಸಾಕ್ಷಿಯಾಗಿದೆ. ಹರಿಹರನ ‘ಗಿರಿಜಾ ಕಲ್ಯಾಣ’ದಿಂದ ಹಿಡಿದು ‘ಗದಾಯುದ್ಧ ನಾಟಕಂ’, ವಿಸೀ ಅವರ ‘ದ್ರಾಕ್ಷಿ-ದಾಳಿಂಬೆ’ ಸಂಕಲನ, ಮಾಸ್ತಿಯವರ ‘ಯಶೋಧರಾ’ ನಾಟಕ, ಕಾರಂತರ ‘ಕುಡಿಯರ ಕೂಸು’ ಕಾದಂಬರಿ, ಭಾರತೀಪ್ರಿಯರ ‘ರುದ್ರವೀಣೆ’ ಕಥಾ ಸಂಕಲನ, ಗೋಕಾಕ್, ಚೆನ್ನವೀರ ಕಣವಿ, ರಾಮಚಂದ್ರಶರ್ಮರ ಕವನಗಳ ಪರಿಶೀಲನೆಯನ್ನೊಳಗೊಂಡ ಲೇಖನಗಳ ಸಂಕಲನ ಇದಾಗಿದ್ದು, ಪುಸ್ತಕದ ಹೆಸರಿಗೆ ಅನುಗುಣವಾಗಿ ಕವಿಯ ಕಾಲ ಹಾಗೂ ಅವನ ಮನೋಭಾವಗಳ ಹಿನ್ನೆಲೆಯಲ್ಲಿ ಕೃತಿ ಪರಿಶೀಲನೆ ನಡೆಸಿರುವುದು ಇಲ್ಲಿನ ಲೇಖನಗಳ ವೈಶಿಷ್ಟ್ಯವಾಗಿದೆ.
‘ಕನ್ನಡ ಸಾಹಿತ್ಯ ನಡೆದು ಬಂದ ದಾರಿ’ ಕೃತಿಯಲ್ಲಿ ಸಂಕ್ಷಿಪ್ತವಾಗಿ ಕನ್ನಡ ಸಾಹಿತ್ಯವನ್ನು ನಿರೂಪಿಸುವ ಪ್ರಯತ್ನ ಕಂಡುಬರುತ್ತದೆ. ಅದಕ್ಕೆ ಪೂರಕವಾಗಿ ‘ಕರ್ನಾಟಕ ವೈಭವ ಮತ್ತು ಇತರ ಶಬ್ದಚಿತ್ರಗಳು’ ಎಂಬ ಪುಸ್ತಕವಿದೆ. ಇವುಗಳೊಡನೆ ಹೊಸಗನ್ನಡವನ್ನು ಕಟ್ಟಿದ ಅನೇಕರ ಜೀವನಸಾಧನೆಗಳನ್ನು ಪರಿಚಯಿಸುವ ಹತ್ತಾರು ಬರಹಗಳನ್ನು ಜಿವಿ ಮಾಡಿದ್ದಾರೆ. ‘ಪ್ರೊ.ಟಿ.ಎಸ್.ವೆಂಕಣ್ಣಯ್ಯನವರು’ ಮತ್ತು ‘ಡಿ.ವಿ.ಗುಂಡಪ್ಪ’ ವ್ಯಕ್ತಿಚಿತ್ರ ಸಂಕಲನಗಳು. ಇವುಗಳಲ್ಲಿ ಕನ್ನಡ ನುಡಿಸೇವಕರ ಆತ್ಮೀಯ ಚಿತ್ರಣಗಳಿವೆ. ರೆವೆರೆಂಡ್ ಜಾನ್ ಹ್ಯಾಂಡ್ಸ್, ಕಿಟೆಲ್, ರಾ.ನರಸಿಂಹಾಚಾರ್, ಬಿ.ಎಂ.ಶ್ರೀ., ಗೋವಿಂದ ಪೈ, ಎಆರ್‌ಕೆ, ಮಾಸ್ತಿ, ಸಂಸ, ಪಂಡಿತ ತಾರಾನಾಥ, ನಾ.ಕಸ್ತೂರಿ, ಕಾರಂತ, ಸೇಡಿಯಾಪು, ಡಿಎಲ್‌ಎನ್, ಕುವೆಂಪು, ತೀನಂಶ್ರೀ ಮುಂತಾದವರ ಹತ್ತಿರದ ನೆನಪುಗಳ ಜೊತೆಗೆ ಅವರ ಸಾಧನೆಗಳ ಪರಿಚಯವೂ ಸೇರಿ ಒಟ್ಟಾಗಿ ಕನ್ನಡ ನವೋದಯದ ಚರಿತ್ರೆಯೇ ಇವುಗಳ ಮೂಲಕ ನಿರೂಪಿತವಾಗಿದೆ. ಇಪ್ಪತ್ತನೆಯ ಶತಮಾನದ ಮೊದಲ ದಶಕದಲ್ಲಿ ಹುಟ್ಟಿದ ಅನೇಕರು ಆಧುನಿಕ ಕನ್ನಡಕ್ಕೆ ಹೊಸ ದಿಗಂತಗಳನ್ನು ತೆರೆದವರು. ಜಿವಿ ಎರಡನೇ ದಶಕದಲ್ಲಿ ಹುಟ್ಟಿದವರು; ಹಿರಿಯರ ಸಾಧನೆಗಳನ್ನು ಖುದ್ದಾಗಿ ಕಾಣುತ್ತಾ ಅವರ ಮಾರ್ಗದಲ್ಲಿಯೇ ನಡೆದವರು. ಪ್ರಾಯಶಃ ಈ ಮಹನೀಯರ ಬಗ್ಗೆ ಜಿವಿ ಅವರಷ್ಟು ಅಧಿಕಾರಯುತವಾಗಿ, ವೈಯಕ್ತಿಕ ಪರಿಚಯದ ಹಿನ್ನೆಲೆಯಲ್ಲಿ ಬರೆಯುವವರು ಈಗ ಯಾರೂ ಇಲ್ಲ. ಆದ್ದರಿಂದಲೇ ಈ ವ್ಯಕ್ತಿಚಿತ್ರಗಳಿಗೆ ವಿಶೇಷ ಮಹತ್ವ ಪ್ರಾಪ್ತವಾಗಿದೆ ಎನ್ನಬಹುದು.
ಜಿವಿ ಅವರಿಗೆ ಕನ್ನಡದ ಜೊತೆಗೆ ಸಂಸ್ಕೃತ ಸಂಪರ್ಕ ಮೊದಲಿನಿಂದಲೇ ಬಂದದ್ದು; ಚಿಕ್ಕವಯಸ್ಸಿನಿಂದ ಇಂಗ್ಲಿಷ್ ಜ್ಞಾನವನ್ನು ಚೆನ್ನಾಗಿ ರೂಢಿಸಿಕೊಂಡವರು. ಜಿವಿ ಅವರಿಗೆ ಕೊಟ್ಟ ಪರಿಚಯಪತ್ರದಲ್ಲಿ ಇವರನ್ನು ಬಿಎಂಶ್ರೀ “ಇಂಗ್ಲಿಷ್ ಚೆನ್ನಾಗಿ ಬಲ್ಲ ಕನ್ನಡ ವಿದ್ವಾಂಸ” ಎಂದು ವರ್ಣಿಸಿದ್ದರಂತೆ. ಅದಕ್ಕನುಗುಣವಾಗಿ ಅವರು ಅನುವಾದ ಕ್ಷೇತ್ರಕ್ಕೂ ಸಾಕಷ್ಟು ಕೊಡುಗೆಯನ್ನು ಕೊಡುವಂತಾಯಿತು. ಪದವಿ ತರಗತಿಗಳ ಕನ್ನಡ ಪಠ್ಯಕ್ರಮದಲ್ಲಿ ಹಿಂದೆ ಭಾಷಾಂತರವೂ ಇರುತ್ತಿತ್ತು. ಜಿವಿ ಪಾಠಮಾಡಿದ್ದಲ್ಲದೆ, ‘ಭಾಷಾಂತರ ಪಾಠಗಳು’ ಎಂದು ಮೂರು ಭಾಗಗಳಲ್ಲಿ ಹಾಗೂ ‘ಕಾಲೇಜ್ ಭಾಷಾಂತರ’ ಎಂಬ ಅನುವಾದದ ಬಗೆಗಿನ ಪುಸ್ತಕಗಳನ್ನು ಪ್ರಕಟಿಸಿದರು. ನ್ಯಾಷನಲ್ ಬುಕ್ ಟ್ರಸ್ಟ್, ಸಾಹಿತ್ಯ ಅಕಾಡೆಮಿ ಮುಂತಾದ ಸಂಸ್ಥೆಗಳಿಗೆ ಅವರು ಸಿದ್ಧಪಡಿಸಿರುವ ಅನುವಾದಗಳನ್ನು ನೋಡಿದರೆ ಅವು ಇತರ ಭಾಷೆಗಳಿಂದ ಕನ್ನಡಕ್ಕೆ ಬಂದವೆಂದೇ ಅನ್ನಿಸುವುದಿಲ್ಲ. ಅವರು ಹಿಂದೆಯೇ ಮಾಡಿಟ್ಟುಕೊಂಡಿದ್ದ ಜಿಡ್ಡು ಕೃಷ್ಣಮೂರ್ತಿಯವರ ಕೃತಿಯ ಅನುವಾದ ‘ತಿಳಿದುದೆಲ್ಲವ ಬಿಟ್ಟು’ ಕೃತಿಯಲ್ಲಿ ಜೆಕೆ ಅವರ ಸೂಕ್ಷ ಒಳನೋಟಗಳ ಈ ಬರಹವನ್ನು ಜಿವಿ ಸರಳವಾಗಿಯೂ ಸಹಜವಾಗಿಯೂ ಕನ್ನಡಕ್ಕೆ ತಂದಿರುವುದು ಅವರ ಅನುವಾದ ಕೌಶಲಕ್ಕೆ ಹಿಡಿದ ಕನ್ನಡಿಯಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆಸಿದ ಅನೇಕ ಅನುವಾದ ಕಮ್ಮಟಗಳಲ್ಲಿ ಜಿವಿ ಭಾಗಿಯಾಗಿ ಕಿರಿಯರಿಗೆ ಮಾರ್ಗದರ್ಶನ ಮಾಡಿದುದು ಹಾಗೂ ಆ ಇಲಾಖೆಯ ಅನುವಾದ ಯೋಜನೆಯ ಮಾರ್ಗದರ್ಶನ ಮಾಡಿ ಅನೇಕ ಅನುವಾದಗಳ ಪ್ರಕಟಣೆಗೆ ನೆರವಾದುದು ಸಮಂಜಸವೇ ಆಗಿದೆ. ಬಿ.ಎಂ.ಶ್ರೀ ಅವರು ತಮ್ಮ ‘ಇಂಗ್ಲಿಷ್ ಗೀತಗಳು’ ಮೂಲಕ ಹೇಗೆ ಅನುವಾದದ ದಾರಿ ಹಾಕಿಕೊಟ್ಟರು ಎಂಬುದನ್ನು ವಿವರಿಸುವ ಅವರ ಲೇಖನ ಅನುವಾದದ ಬಗೆಗಿನ ಜಿವಿ ಅವರ ಕಲ್ಪನೆಗಳನ್ನು ಬಿಂಬಿಸುತ್ತದೆ.
‘ನಿಘಂಟು’ ಕ್ಷೇತ್ರದಲ್ಲಿ ಜಿವಿ ಅವರು ಮಾಡಿರುವ ಕೆಲಸವಂತೂ ತುಂಬ ಪ್ರೌಢಿಮೆಯದು; ಅವರ ವಿಶೇಷ ಕಾರ್ಯಕ್ಷೇತ್ರವೆಂದು ಜನತೆ ಮಾನ್ಯಮಾಡಿರುವುದೂ ಇದನ್ನೇ. ಅವರು ಪ್ರಧಾನ ಸಂಪಾದಕತ್ವನ್ನು ವಹಿಸಿಕೊಂಡು ಕನ್ನಡ ಸಾಹಿತ್ಯ ಪರಿಷತ್ತಿನ ‘ಕನ್ನಡ-ಕನ್ನಡ ನಿಘಂಟು ಸಂಪುಟ’ಗಳಲ್ಲಿ ಆರರ ಪ್ರಕಟಣೆಗೆ ನೆರವಾಗಿದ್ದಾರೆ. ಆ ಕಾರ್ಯಕ್ಕಾಗಿ ಅವರು ಮಾಡಿದ ವ್ಯಾಪಕ ಓದು ಮತ್ತು ಸಿದ್ಧತೆಗಳು ಅವರಿಂದ ಸ್ವತಂತ್ರವಾದ ನಿಘಂಟುಗಳ ರಚನೆಗೆ ದೃಢವಾದ ಭೂಮಿಕೆಯನ್ನೊದಗಿದವು. ಇತರರ ಜೊತೆ ಸೇರಿ ಮೊದಲು ಐಬಿಎಚ್ ಹೊರತಂದ ‘ಕನ್ನಡ-ಕನ್ನಡ-ಇಂಗ್ಲಿಷ್ ನಿಘಂಟು’ ಮತ್ತು ‘ಕನ್ನಡ-ಕನ್ನಡ ಸಂಕ್ಷಿಪ್ತ ನಿಘಂಟು’ಗಳನ್ನು ಜಿವಿ ಸಿದ್ಧಪಡಿಸಿಕೊಟ್ಟರು. ಮುದ್ದಣನ ಕಾವ್ಯಗಳ ಸಂಪಾದನೆಯನ್ನು ಯಶಸ್ವಿಯಾಗಿ ನೆರೆವೇರಿಸಿದ ಅವರು ಕವಿಯ ಅಧ್ಯಯನಕ್ಕೆ ಪೂರಕವಾಗಿ ‘ಮುದ್ದಣ ಪದಪ್ರಯೋಗ ಕೋಶ’ವನ್ನು ತಯಾರಿಸಿದರು. ಮುದ್ದಣನ ಶಬ್ದಪ್ರಪಂಚ ಬಹು ವಿಸ್ತಾರವಾದುದು; ಅಲ್ಲದೆ, ಆಂಡಯ್ಯನಾದ ಮೇಲೆ ಅವನಂತೆ ದೇಶಿ ಪದಗಳನ್ನು ಬಳಸಿದವರು ಮತ್ತು ಹೊಸ ಶಬ್ದಸೃಷ್ಟಿಯಲ್ಲಿ ಪ್ರಯೋಗಗಳನ್ನು ಮಾಡಿದವರು ಬಹುಮಂದಿ ಇಲ್ಲ. ಇದನ್ನೆಲ್ಲ ಲಕ್ಷಿಸಿ ಮುದ್ದಣ ತನ್ನ ಕಾವ್ಯಗಳಲ್ಲಿ ಪ್ರಯೋಗಿಸಿರುವ ನಾಲ್ಕು ಸಾವಿರಕ್ಕೂ ಹೆಚ್ಚಿನ ವಿಶಿಷ್ಟ ಶಬ್ದಗಳನ್ನು ಅರ್ಥಸಹಿತ ಇದರಲ್ಲಿ ಜೋಡಿಸಿಕೊಟ್ಟಿದ್ದಾರೆ. ಹೀಗಾಗಿ, ನಿಘಂಟುತಜ್ಞರಾದ ಜಿವಿ ಅವರಿಗೆ ಮುದ್ದಣ ತುಂಬ ವಿಶಿಷ್ಟಕವಿಯಾಗಿ ಕಾಣಿಸಿದ್ದಾನೆ ಎನ್ನುತ್ತಾರೆ ವಿದ್ವಾಂಸರಾದ ಪಿವಿಎನ್ ಅವರು. ಅದಕ್ಕೇ ಈ ಕೋಶದ ಪ್ರಾರಂಭದಲ್ಲಿ ಬರೆದಿರುವ ‘ಮುದ್ದಣನ ಶಬ್ದಕಲ್ಪ’ ಮತ್ತು ಎರಡು ಪ್ರಸ್ತಾವನೆಗಳು ಆ ಕವಿಯ ಶಬ್ದಕೌಶಲದ ಮೂಲಚೂಲಗಳನ್ನು ಕೆದಕಿ ಹೊಸ ಸಂಶೋಧನೆಯನ್ನು ನಮ್ಮ ಮುಂದಿರಿಸುತ್ತಾರೆ. ಮುದ್ದಣ ಹೊಸ ಶಬ್ದಗಳನ್ನು ಸೃಷ್ಟಿಸಿಕೊಳ್ಳುವ ಬಗ್ಗೆ, ಅವನು ತಪ್ಪಿರಬಹುದಾದ ಸಂಭಾವ್ಯಗಳು, ಅವನ ಮೇಲೆ ಪ್ರಭಾವ ಬೀರಿರುವ ಇತರ ಕನ್ನಡ ಕವಿಗಳು, ಅವನು ಕಿಟೆಲ್ ನಿಘಂಟನ್ನು ಪರಿಶೀಲಿಸಿರಬಹುದಾದ ಸಂಭಾವ್ಯತೆ ಇವುಗಳನ್ನೆಲ್ಲ ಅಲ್ಲಿ ವಿವರಿಸುತ್ತಾರೆ; ಮುಂದಿನ ಅಧ್ಯಯನಕ್ಕೆ ಮಾರ್ಗ ತೋರುತ್ತಾರೆ. ಹಾಗೆಯೇ ಈ ಕೋಶದ ಕೊನೆಯಲ್ಲಿ ಸೇರಿಸಿರುವ ಅನುಬಂಧ; ‘ಶ್ರೀರಾಮಾಶ್ವಮೇಧ’ದಲ್ಲಿನ ಮುದ್ದಣ ಮನೋರಮೆಯರ ಎಲ್ಲ ಸಂಭಾಷಣೆಗಳನ್ನು ಹೊಸಗನ್ನಡದಲ್ಲಿ ಅನುವಾದಿಸಿ ಅವು ಬರುವ ಸಂದರ್ಭಗಳ ಹಿನ್ನೆಲೆಯಲ್ಲಿ ಕಾಣುವ ‘ಕಾವ್ಯವಿಮರ್ಶನ ಸಿದ್ಧಾಂತ’ವನ್ನು ಗುರುತಿಸಿರುವುದು. ಇದರಿಂದ ಮುದ್ದಣನ ವಿಶಿಷ್ಟ ಕೃತಿಯಾದ ‘ಶ್ರೀರಾಮಾಶ್ವಮೇಧ’ವನ್ನು ಪರಿಶೀಲಿಸಬೇಕಾದ ದೃಷ್ಟಿಕೋನವನ್ನು ನಿಗದಿಪಡಿಸಿಕೊಳ್ಳುವುದಕ್ಕೆ ಅನುಕೂಲವಾಗುತ್ತದೆ ಎಂಬುದನ್ನು ಮರೆಯುವಂತಿಲ್ಲ.
ಕರ್ನಾಟಕದ ಹೆಮ್ಮೆಯ ‘ಪ್ರಜಾವಾಣಿ’ ದಿನಪತ್ರಿಕೆಯ ಭಾನುವಾರದ ಪುರವಣಿಯಲ್ಲಿ ಅನೇಕ ವರ್ಷಗಳ ಕಾಲ ನಿರಂತರವಾಗಿ ವಾರವಾರವೂ ಪ್ರಕಟಗೊಳ್ಳುತ್ತಿದ್ದ ‘ಇಗೋ ಕನ್ನಡ’ ಹೆಸರಿನ ಅವರ ಅಂಕಣವಂತೂ ಸಮಸ್ತ ಕನ್ನಡಿಗರಲ್ಲಿ ಮನೆಮಾತಾಗಿತ್ತು. ಆ ಅಂಕಣವು ಪತ್ರಿಕೆಯ ಅವಿಭಾಜ್ಯ ಅಂಗವಾಗಿಹೋಗಿತ್ತು. ನಿಘಂಟಿನ ಹೊಸ ಬಗೆಯೇ ಅಲ್ಲಿ ರೂಪು ತಳೆಯಿತು. ಪ್ರಾಜ್ಞರೂ ಪಂಡಿತರೂ ಪಾಮರರೂ ಗುರ್ತಿಸುವಂತೆ ಇದೊಂದು ಅಪರೂಪವೂ ಆಪ್ತವೂ ಆದ ನುಡಿ ನಿರ್ವಚನದ ಅಪೂರ್ವ ಅಂಕಣವಾಗಿತ್ತು. ಯಾವ ಮಿತಿಗೂ ಒಳಗಾಗದ, ಸರ್ವರ ಆಸಕ್ತಿಯನ್ನೂ ಕೆರಳಿಸಬಲ್ಲ ಸಾಮರ್ಥ್ಯ ಇದರದ್ದು. ಶಬ್ದಗಳ ಹಿಂದೆ ನಡೆದಿರುವ ಸಾಮಾಜಿಕ ಪಲ್ಲಟಗಳ ಹಾಗೂ ಜನಮನಸ್ಪಂದನದ ಇತಿಹಾಸವೆಲ್ಲ ಅಲ್ಲಿ ಹರಳುಗಟ್ಟಿ ಅಪರೂಪದ ಶಬ್ದಲೋಕವನ್ನೇ ಅದು ಸೃಷ್ಟಿಸುವಂತಿತ್ತು. ಜಿವಿ ಅವರು ಇದನ್ನು ‘ಸಾಮಾಜಿಕ ನಿಘಂಟು’ ಎಂದೇ ಕರೆಯುತ್ತಾರೆ. ಜೊತೆಗೆ ಇದೊಂದು ಸಾಂಸ್ಕೃತಿಕ ಪರ್ಯಟನೆ ಎಂಬುದನ್ನೂ ಗಮನಿಸಬಹುದು. ಮೊದಲ ಸಂಪುಟದ ಆರಂಭದಲ್ಲಿ ನೀಡಿರುವ ‘ಈ ನಿಘಂಟಿಗೆ ಒಂದು ಪ್ರವೇಶ ಸಿದ್ಧತೆ’ ಎಂಬ ಪ್ರಸ್ತಾವನೆಯ ಭಾಗದಲ್ಲಿ ಭಾಷಾ ಪರಿವೀಕ್ಷಣ, ಭಾಷೆಯನ್ನು ಆಧುನಿಕಗೊಳಿಸುವುದು, ಕನ್ನಡದ ಬೆಳವಣಿಗೆ, ತಮ್ಮ ಬಳಿ ಆಸಕ್ತರು ತೋಡಿಕೊಳ್ಳುವ ಸಂದೇಹಗಳ ಸ್ವರೂಪ, ಅಧ್ಯಾಪಕರಿಗೆ ತಲೆದೋರುವ ಸಂಶಯಗಳು ಮುಂತಾದ ಅನೇಕ ವಿಷಯಗಳ ಬಗ್ಗೆ ವಿವರಣೆ ನೀಡಿ ನಿಘಂಟಿನ ಸ್ವರೂಪವನ್ನು ವಿವರಿಸಿರುವುದು ತುಂಬ ಉಪಯುಕ್ತವಾಗಿದೆ. ಶಬ್ದ-ಅರ್ಥ ಪರಿಕಲ್ಪನೆಯಲ್ಲಿ ಹೊಸ ದಿಗಂತವನ್ನು ತೆರೆದ ಈ ಅಂಕಣ ಅಷ್ಟು ಜನಪ್ರಿಯವಾಗಿರುವುದರಲ್ಲಿ ಅಚ್ಚರಿಯೇನೂ ಇಲ್ಲ. ಬರವಣಿಗೆಯ ರುಚಿ ಅಲ್ಲಿ ಎದ್ದು ಕಾಣುತ್ತದೆ. ನಾನಾ ಭಾಷೆಗಳ ಆಳವಾದ ತಿಳಿವಳಿಕೆ ಮಾತ್ರವಲ್ಲ, ಲೇಖಕರ ಸಾಹಿತ್ಯಾಭಿರುಚಿಯನ್ನೂ ಅಲ್ಲಿ ಮನಗಾಣಬಹುದು. ಅವರು ನೀಡಿರುವ ಸಾಹಿತ್ಯೋದಾಹರಣೆಗಳು, ತೀನಂಶ್ರೀ ಅವರು ತಮ್ಮ ‘ಭಾರತೀಯ ಕಾವ್ಯಮೀಮಾಂಸೆ’ಯಲ್ಲಿ ಅಲಂಕಾರಶಾಸ್ತ್ರದ ಪರಿಕಲ್ಪನೆಗಳಿಗೆ ಉದಾಹರಣೆಗಳನ್ನು ನೀಡುವ ಬಗೆಯನ್ನು ಹೋಲುತ್ತದೆ ಎನ್ನುತ್ತಾರೆ ವಿಮರ್ಶಕರು. ಸಂಸ್ಕೃತ-ಕನ್ನಡ-ಇಂಗ್ಲಿಷ್ ಭಾಷೆಗಳ ಪ್ರಾಚೀನ ಹಾಗೂ ಆಧುನಿಕ ಸಾಹಿತ್ಯ ಕೃತಿಗಳಿಂದ ಜಿವಿ ನಿದರ್ಶನ ನೀಡಲು ಆಯ್ದುಕೊಳ್ಳುವ ಉಲ್ಲೇಖ ಭಾಗಗಳು ಅವರ ವ್ಯಾಪಕ ಓದಿನ ಜೊತೆಗೆ ಅವರ ಸದಭಿರುಚಿಯ ಕಾವ್ಯಾನುಸಂಧಾನ ಸೂಕ್ಷ್ಮತೆಯ ಪ್ರತೀಕವೂ ಹೌದು. ಅವುಗಳನ್ನು ಓದುವುದು ಕಲ್ಪನಾಲೋಕದ ಸಂಚಾರದಷ್ಟೇ ರೋಚಕ ಅನುಭವವನ್ನು ನೀಡುವಂಥದು. ಈ ಅಂಕಣ ಬರಹಗಳು ಈಗಾಗಲೇ ಮೂರು ಸಂಪುಟಗಳಲ್ಲಿ ಸಂಕಲಿತವಾಗಿ ಹೊರಬಂದಿರುವುದು; ಮೊದಲನೆಯ ಸಂಪುಟವು ಮೂರು ಮುದ್ರಣಗಳನ್ನು ಕಂಡಿರುವುದು ಈ ಅಂಕಣದ ಉಪಯುಕ್ತತೆ ಮತ್ತು ಜನಪ್ರಿಯತೆಗಳ ದ್ಯೋತಕವಾಗಿದೆ. ವಿದ್ವಾಂಸರಾದ ಪಿವಿಎನ್ ಅವರು ಗುರ್ತಿಸಿದಂತೆ, “ಈ ಅಂಕಣ ಶಬ್ದಲೋಕದ ಮಟ್ಟಿಗೆ ಒಂದು ಮುಕ್ತ ವಿಶ್ವವಿದ್ಯಾಲಯವಾಗಿದೆ. ಬೇಕಾದವರು ಬೇಕಾದ ಶಬ್ದದ ಬಗೆಗೆ ಅರಿತುಕೊಳ್ಳಲು ಇದನ್ನು ಬಳಸಿಕೊಳ್ಳುವ ಅವಕಾಶ ಅಪರೂಪವಾದದ್ದು... ಹೀಗೆ ನಾಡವರ ಸಂದೇಹ ಪರಿಹಾರ ಮಾಡುವ ವಿದ್ವಾಂಸನು ನಾಡೋಜನಾಗದೆ ಬೇರಾವನು ಆದಾನು? ದೊಡ್ಡ ಸಾಹಿತಿಗಳೆಲ್ಲರೂ ನಾಡೋಜರೇ” ಆಗಿದ್ದಾರೆ.
ನಾಡೋಜ ಜೀವಿ ಅವರ ಬಹುಮುಖಿ ಸಾಧನೆಗೆ ತಕ್ಕ ಮನ್ನಣೆ ಅವರಿಗೆ ಸಿಕ್ಕಿಲ್ಲದಿದ್ದರೂ, ಕೆಲವು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ, ಹಾಗೂ ಗೌರವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಪತ್ರಿಕಾ ಅಕಾಡೆಮಿಯ ವಿಶೇಷ ಪುರಸ್ಕಾರ, ಶಂಬಾ, ಕಾರಂತ, ಸೇಡಿಯಾಪು, ಮಾಸ್ತಿ, ಮುದ್ದಣ ಅವರ ಹೆಸರಿನಲ್ಲಿ ಸ್ಥಾಪಿತವಾಗಿರುವ ಪ್ರಶಸ್ತಿಗಳು ಇವುಗಳಲ್ಲಿ ಮುಖ್ಯವಾದವು. ಕೆಲವು ಜಿಲ್ಲೆಗಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸುವ ಗೌರವವನ್ನೂ ಅವರು ಪಡೆದಿದ್ದರು. 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಹಂಪಿಯ ಕನ್ನಡ ವಿಶ್ವವಿದ್ಯಾಲಯ ಅವರಿಗೆ ‘ನಾಡೋಜ’ ಎಂಬ ಹೆಸರಿನ ಗೌರವ ಡಾಕ್ಟರೇಟ್ ಅನ್ನು ನೀಡಿ ಗೌರವಿಸಿದೆ. ಸುವರ್ಣ ಕರ್ನಾಟಕ ಆಚರಣೆಯ ಸಂದರ್ಭದಲ್ಲಿ ಕರ್ನಾಟಕ ಸರ್ಕಾರವು ಅವರಿಗೆ ಸುವರ್ಣ ಮಹೋತ್ಸವ ಪ್ರಶಸ್ತಿಯನ್ನಿತ್ತು ಪುರಸ್ಕರಿಸಿದೆ. ಅವರ ಅಭಿಮಾನಿಗಳು ‘ಸಾಹಿತ್ಯಜೀವಿ’ ಎಂಬ ಗೌರವಗ್ರಂಥವನ್ನು ಹೊರತಂದಿದ್ದರು. ಜಿವಿ ಅವರ ಸಾಧನೆಗಳನ್ನು ಬಿಂಬಿಸುವ ಹಿರಿಯರ-ಅಭಿಮಾನಿಗಳ ಲೇಖನಗಳನ್ನೊಳಗೊಂಡ ‘ಶಬ್ದಸಾಗರ’ ಎಂಬ ಬೃಹತ್ ಗ್ರಂಥವನ್ನು ಹೊರತರಲಾಗಿದೆ. ಅಂತೆಯೇ ಅವರ ಬಗ್ಗೆ ‘ಪ್ರೊ.ಜಿ.ವಿ.: ಜೀವ-ಭಾವ’ ಎಂಬ ಪರಿಚಯಗ್ರಂಥವೊಂದೂ ಹೊರಬಂದಿದೆ. ಪಿ.ವಿ.ನಾರಾಯಣ ಅವರ ಸಂಪಾದಕತ್ವದಲ್ಲಿ ಶತಮಾನೋತ್ಸವ ವರ್ಷದ ಸ್ವಾಗತ ಸಮಿತಿಯು “ಶತನಾಮ” ಎಂಬ ಶೀರ್ಷಿಕೆಯ ಶತಮಾನೋತ್ಸವದ ಅಭಿನಂದನಾ ಸಂಪುಟವನ್ನು ಪ್ರಕಟಿಸಲಾಗಿದೆ. ತಮ್ಮ ಶತಾಯುಷಿ ವಯಸ್ಸಿನಲ್ಲಿಯೂ ಅತ್ಯಂತ ಕ್ರಿಯಾಶೀಲವಾಗಿರುವಂತೆ ಅವರಿಗೆ ಆರೋಗ್ಯವನ್ನು ನೀಡಿದ್ದ ಪ್ರಕೃತಿಯ ಪುರಸ್ಕಾರವಂತೂ ಎಲ್ಲಕ್ಕಿಂತ ಮಿಗಿಲಾದ ಅಪರೂಪದ ಪ್ರಶಸ್ತಿಯಾಗಿದೆ. ಅವರ ಚಟುವಟಿಕೆಯು ಯುವಕರಲ್ಲಿ ಸ್ಫೂರ್ತಿ ತುಂಬುವಂತಹುದು; ಇಂತಹವರ ಮಾರ್ಗದರ್ಶನ ಸದಾ ಕಾಲವೂ ನಾಡುನುಡಿಯನ್ನು ಬೆಳಗುವಂಥದ್ದಾಗಿದೆ.
ಪ್ರಸ್ತುತ ಲೇಖನವು ಕನ್ನಡ ಸಾಂಸ್ಕೃತಿಕ-ಸಾರಸ್ವತಲೋಕದೊಳಗಣ ಅಪರೂಪದ ‘ಅಕ್ಕಪಕ್ಕ’ ಮತ್ತು ‘ಹರಿಮೇಖಲೆ’ ಎಂಬ ಎರಡು ಪದಗಳ ನಿಷ್ಪತ್ತಿಯನ್ನು ಕುರಿತಾದುದು. ಸುಪರಿಚಿತವಾದ ‘ಅಕ್ಕಪಕ್ಕ’ ಪದ ಹಾಗೂ ಅಪರೂಪದ ‘ಹರಿಮೇಖಲೆ’ ಪದವನ್ನು ಕನ್ನಡ ಭಾಷಿಕ ನೋಟದಿಂದ ಮಾತ್ರವಲ್ಲದೆ ಭಾರತದ ಬಹುಭಾಷಿಕ ನೋಟದಿಂದ ನಿರ್ವಚಿಸುವ ಜಿವಿ ಅವರ ವಿದ್ವತ್‌ಪೂರ್ಣ ಸಂಶೋಧನಾ ಶಿಸ್ತು ಮತ್ತು ಶ್ರಮವು ಇಲ್ಲಿ ಕಂಡುಬರುತ್ತದೆ. ಕನ್ನಡ ಭಾಷೆಯಲ್ಲಿ ಹೊಸದಾಗಿ ರೂಪಿತವಾದ ಪದಪುಂಜಗಳನ್ನು ವಿಶೇಷ ಹಿನ್ನೆಲೆಯಲ್ಲಿ ವಿವರಿಸಿರುವುದು ಜಿವಿ ಅವರ ಭಾಷಾಧೋರಣೆ ಮತ್ತು ಆಧುನಿಕತೆಗಳ ಪ್ರತೀಕವಾಗಿದೆ. ಇಲ್ಲಿ ಅವರ ಶಾಸ್ತ್ರಜ್ಞಾನ ಮತ್ತು ಪ್ರಾಯೋಗಿಕ ಅನುಭವಗಳು ಘನೀಭೂತಗೊಂಡಿವೆ. ಜಿವಿ ಅವರು ಶಾಸ್ತ್ರಜಡರೂ ಅಲ್ಲ, ಸತ್ಯವಿಮುಖರೂ ಅಲ್ಲ. ಹಾಗಾಗಿ ಅವರ ನಿರೂಪಣೆಯು ಆಕರ್ಷಕವಾಗಿಯೂ ಇದೆ, ಕರಾರುವಾಕ್ಕಾಗಿಯೂ ಇದೆ; ನುಡಿಶೋಧನೆಗೆ ಅನನ್ಯವಾದ ಮಾರ್ಗದರ್ಶಿಯಾಗಿದೆ.

References

ಪಾಇಅಸದ್ದಮಹಣ್ಣವೋ (ಪ್ರಾಕೃತ ಶಬ್ದ ಮಹಾರ್ಣವಃ) - ಕರ್ತೃ ಪಂಡಿತ ಹರಗೋವಿಂದದಾಸ ತ್ರಿಕಮಚಂದ ಸೇಠ (1928). ಪುನರ್ಮುದ್ರಣ - ಮೋತೀಲಾಲ್ ಬನಾರಸೀದಾಸ್, ದಿಲ್ಲಿ 1986.

Pali-English Dictionary- Rhys Davids and William Stede (1921-25). Indian edition published by Motilal Banarasidass. Delhi, 1993.

An Encyclopedic Dictionary of Sanskrit on Historical Principles, Vol-I Deccan College post graduate and Research Institute, Poona-6.

Apte’s The Practical Sanskrit- English Dictionary, Revised and enlarged edition; Prasad Prakashan, Poona, 1957.

ಶ್ರೀಮಜ್ಜೈಮಿನಿಪ್ರಣೀತಂ ಮೀಮಾಂಸಾದರ್ಶನಂ ತಂತ್ರವಾರ್ತಿಕಸಹಿತ ಶಾಬರ ಭಾಷ್ಯೋ ಪೇತಂ-ಸಂಪುಟ 7, ಆನಂದಾಶ್ರಮ ಮುದ್ರಣಾಲಯ, ಪುಣೆ; ತೃತೀಯ ಸಂಸ್ಕರಣ, 1981.

ತದ್ಯಥಾ / ಪಥಿಜಾತೇsರ್ಕೇ / ಮಧೂತ್ಸೃಜ್ಯ ತೇನೈವ ಪಥಾ ಮಧ್ವರ್ಥಿನಃ ಪರ್ವತಂ ನಗಚ್ಛೇಯುಸ್ತಾದೃಶಂ ಹಿ ತತ್ | ಅಪಿಚಾಹುಃ ಅರ್ಕೇಚೇನ್ಮಧು ವಿಂದೇತ ಕಿಮರ್ಥಂ ಪರ್ವತಂ ವ್ರಜೇತ್ | ಇಷ್ಟಸ್ಯಾರ್ಥಸ್ಯ ಸಂಸಿದ್ಧೌ ಕೋ ವಿದ್ವಾನ್ ಯತ್ನಮಾಚರೇತ್ || ಪುಟ 8, (ಅನ್ಯಾನರ್ಥಕ್ಯಾತ್ (1-2-4) ಸೂತ್ರದ ವ್ಯಾಖ್ಯಾನದಲ್ಲಿ) ಶಬರಸ್ವಾಮಿಯ ಕಾಲ ಕ್ರಿ.ಪೂ. 1ನೆಯ ಶತಮಾನ ಮತ್ತು ಕ್ರಿ.ಶ. ಮೂರನೆಯ ಶತಮಾನಗಳ ಮಧ್ಯೆ.

ಯದಿ ಸ್ವಲ್ಪಾನ್ಮಹತಶ್ಚ ಕರ್ಮಣಃ ಸಮಂ ಫಲಂ ಜಾಯೇತ

ತತಃ ಅರ್ಕೇ ಚೇನ್ಮಧು ವಿಂದೇತ ಇತ್ಯನೇನೈವ ನ್ಯಾಯೇನ

ಅಲ್ಪೇನ ಸಿದ್ಧೇ ಮಹತಿ ನ ಕಶ್ಚಿತ್ಪ್ರವರ್ತೇತ|

(ಸೂತ್ರ 1-2-17ರ ವ್ಯಾಖ್ಯಾನದಲ್ಲಿ) ಮೇಲಿನ ಗ್ರಂಥ ಪುಟ 31-2

ಕೇವಲಾಚ್ಚೇತ್ ಜ್ಞಾನಾತ್ಪುರುಷಾರ್ಥಸಿದ್ಧಿಃಸ್ಯಾತ್ ಕಿಮರ್ಥಮನೇ ಕಾಯಾಸಸಮನ್ವಿತಾನಿ ಕರ್ಮಾಣಿ ತೇ ಕುರ್ಯುಃ | ‘ಅರ್ಕೇಚೇನ್ಮಧು ವಿಂದೇತ ಕಿಮರ್ಥಂ ಪರ್ವತಂ ವ್ರಜೇತ್ ಇತಿ ನ್ಯಾಯಾತ್|

(ಆಚಾರದರ್ಶನಾತ್ [3-4-1-3] ಸೂತ್ರದ ವ್ಯಾಖ್ಯಾನದಲ್ಲಿ)

ಬ್ರಹಸೂತ್ರ ಶಾಂಕರಭಾಷ್ಯಂ (ಗೋವಿಂದಾನಂದನ ಭಾಷ್ಯರತ್ನಪ್ರಭಾ, ವಾಚಸ್ಪತಿಮಿಶ್ರನ ಭಾಮತೀ ಮತ್ತು ಆನಂದಗಿರಿಯ ನ್ಯಾಯ ನಿರ್ಣಯ ವ್ಯಾಖ್ಯಾನಗಳ ಸಹಿತ) Motilal Banarasi Dass, Delhi, 1980 (ನಿರ್ಣಯಸಾಗರ್ ಪ್ರೆಸ್ಸಿನ ಆವೃತ್ತಿಯ ಪುನರ್ಮುದ್ರಣ)

A note on Akka- A Ghost word in Sanskrit; by Dr. Nilmadhav Sen.

Sanskrit and Indological Studies, Dr. V. Raghavan Felicitation volume; Motilal Banarasi Dass, Delhi 1975. Pages 341-9

ಡಾ. ಸೇನರ ಲೇಖನದಲ್ಲಿ ಕೊಟ್ಟಿರುವ ಅನೇಕ ವಿವರಗಳಿಗಾಗಿ ನಾನು ಅವರಿಗೆ ಋಣಿಯಾಗಿದ್ದೇನೆ. ಅವರಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ.

ಲೌಕಿಕನ್ಯಾಯಮಾಹ-ಅರ್ಕೇಚೇದಿತಿ | ಸಮೀಪವಚನೋಽರ್ಕ ಶಬ್ದಃ | (ಈ ಗ್ರಂಥದ ಕೊನೆಯಲ್ಲಿ ಕರ್ತೃವಿನ ಹೆಸರು ಆನಂದಜ್ಞಾನ ಎಂದಿದೆ; ಆನಂದಗಿರಿ ಎಂದಲ್ಲ)

ಅಕ್ಕ ಇತಿ | ಸಮೀಪ ಇತ್ಯರ್ಥಃ | ಅರ್ಕ ಇತಿ ಪಾಠೇSಪ್ಯಯಮೇವಾರ್ಥಃ |

(I) Like Sankara, Vachaspatimisra too did not himself comment on the proverb; so, we are not sure about his own reading; but from the evidences that we have from his two works, it seems likely that he had, in contradiction to Sankara, the reading akke before him. (ಹಿಂದೆ ಹೇಳಿರುವ ಗ್ರಂಥ, ಪುಟ 345)

(II) Already in the ninth Cen. A.D., if not still earlier, arke was partially replaced by akke which was, a little later on, glossed as samipe, grha kone by the commentators without any lexical authority or any further usage of this vocable in literature. (ಪುಟ 347).

(III) But it must have existed amongst such people not in its pure Skt. Form, but rather in a Prakritised version, something like akke Cen ma(d)hu Vindeta Kimartham Pavvatam V(r)aje(t). But either because the real meaning (Calotropis Gigantea) of the vocable arka in this proverb was lost sight of as it is not a vocable of daily use or, more probably, just because of a popular explanation of this proverb, apparently contextual meanings like ‘vicinity, corner of a home’ etc. soon became associated with it. Our medieval commentators and authors must have been acquainted with this form of the proverb and the particular ‘popular’ meaning assigned to the vocable arka which they readily accepted even for the Skt. Version of the proverb. (ಪುಟ 348).

ಶ್ರೀಮದಮರಸಿಂಹವಿರಚಿತಂ ನಾಮಲಿಂಗಾನುಶಾಸನಮ್, ಭಟ್ಟ- ಕ್ಷೀರಸ್ವಾಮಿ ಪ್ರಣೀತೇನ ಅಮರಕೋಶೋದ್ಘಾಟನೇನ ಸಹಿತಂ. Oriental Book Agency, Poona -1941.

(I) ಪುಟ 106 (II) ಪುಟ 530.

Catalogus Catalogorum by Theodor Aufrecht, Part I. ಪುಟಗಳು 62 ಮತ್ತು 755.

ಈ ವಿವರವನ್ನೂ ಮತ್ತು ಹಿಂದೆ ಹೇಳಿರುವ ಪ್ರಾಚ್ಯ ವಿದ್ಯಾಸಂಶೋಧನಾಲಯದಲ್ಲಿರುವ ‘ಹರಮೇಖಲಾ’ ವೈದ್ಯ ಗ್ರಂಥದ ಮಾಹಿತಿಯನ್ನೂ ಶ್ರಮವಹಿಸಿ ಹುಡುಕಿಕೊಟ್ಟ ನನ್ನ ಮಿತ್ರರು ನಿವೃತ್ತ ಸಂಸ್ಕೃತ ಪ್ರಾಧ್ಯಾಪಕ ಕೌಲಗಿ ಶೇಷಾಚಾರ್ಯರಿಗೆ ಕೃತಜ್ಞನಾಗಿದ್ದೇನೆ.

(I) ಮುಂಬಯಿಯ Shree Venkateswar steam press ನವರಿಂದ 1905 ರಲ್ಲಿ ಪ್ರಕಟಿತವಾದ ಸಿದ್ಧಾಂತಶಿರೋಮಣಿಯ ಭಾಗವಾದ ಗೋಲಾಧ್ಯಾಯ ಮಾತ್ರವಿರುವ ಆವೃತ್ತಿ

(II) ವಾರಾಣಸಿಯ ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯದಿಂದ 1981ರಲ್ಲಿ ಪ್ರಕಟಿತವಾದ ಸಿದ್ಧಾಂತಶಿರೋಮಣಿ-ಗ್ರಹಗಣಿತಾಧ್ಯಾಯ ಮತ್ತು ಗೋಳಾಧ್ಯಾಯ.

ವಿಷ್ಣುವು ತನ್ನನ್ನು ನೋಡಲು ಬರುತ್ತಿರುವನೆಂದು ಕೇಳಿ, ದಿಗಂಬರನಾದ ಶಂಭುವು ಕೂಡಲೆ ತನ್ನ ಹಾವುಗಳಲ್ಲೊಂದನ್ನು ಉಡಿದಾರವಾಗಿ ಬಿಗಿದು, ಗಜಚರ್ಮವನ್ನೇ ಕೌಪೀನವಾಗಿ ಧರಿಸಿ, ವಿಷ್ಣುವನ್ನು ಎದುರುಗೊಳ್ಳಲು ವೇಗದಿಂದ ಓಡಿದಾಗ, ವಿಷ್ಣುವಿನ ವಾಹನವಾಗಿದ್ದ ಗರುಡನನ್ನು ಕಂಡೊಡನೆ ಎದೆನಡುಗಿದ ಹಾವು ಬಿದ್ದು ಹೋದುದರಿಂದ, ಮತ್ತೆ ದಿಗಂಬರನಾದ. ಹರನು ನಾಚಿ ತಲೆತಗ್ಗಿಸಿದನೆಂದು ಹೇಳುವ ಸಂಸ್ಕೃತದ ಚಾಟು ಶ್ಲೋಕವೊಂದಿದೆ.

ವಿಷ್ಟೋರಾಗಮನಂ ನಿಶಾಮ್ಯ ಸಹಸಾ ಕೃತ್ವಾ ಫಣೀಂದ್ರಂ ಗುಣಂ

ಕೌಪೀನಂ ಪರಿಧಾಯ ಚರ್ಮ ಕರಿಣಃ ಶಂಭೌ ಪುರಾಧಾವತಿ ||

ದೃಷ್ಟ್ವಾ ವಿಷ್ಣು ರಥಂ ಸಕಂಪಹೃದಯಃ ಸರ್ಪೋSಪತದ್ಭೂತಲೇ

ಕೃತ್ತಿರ್ವಿಸ್ಖಲಿತಾ ಹ್ರಿಯಾನತಮುಖೋ ನಗ್ನೋ ಹರಃ ಪಾತುವಃ ||

ತದಸ್ಯಾಸ್ತ್ಯಸ್ಮಿನ್ನಿತಿ/ಮತುಪ್ (5-2-94), ಅತ ಇನಿ ಠನೌ (5-2-115) ಮತ್ತು ವ್ರೀಹ್ಯಾದಿಭ್ಯಶ್ಚ (5-2-116) ಎಂಬ ಪಾಣಿನಿ ಸೂತ್ರಗಳಂತೆ ‘ಹರಮೇಖಲಾ’ ಶಬ್ದಕ್ಕೆ [ಮತುಪ್ ಪ್ರತ್ಯಯದ ಅರ್ಥಗಳಲ್ಲೊಂದಾದ ಸಂಸರ್ಗ (accompaniment)ದ ಅರ್ಥದಲ್ಲಿ] ‘ಇನ್’ ಪ್ರತ್ಯಯ ಸೇರಿ ‘ಹರಮೇಖಲಿನ್’ ಶಬ್ದ ಸಿದ್ಧಿಸುತ್ತದೆ.

‘ಹರಿಮೇಖಲಾ’ ಶಬ್ದಕ್ಕೆ ಸಂಸ್ಕೃತದಲ್ಲಿ ಪ್ರಯೋಗವಿದೆಯೇ । ಇದ್ದರೆ, ಯಾವ ಅರ್ಥದಲ್ಲಿ? ಎಂದು ಹಿಂದೊಮ್ಮೆ ಪ್ರೊ. ಅ. ರಾ. ಮಿತ್ರ ಅವರು ಕೇಳಿದ್ದರು. ಅವರು ಕೆರಳಿಸಿದ ಕುತೂಹಲದ ಪರಿಣಾಮವೇ ಈ ಲೇಖನ ಆದುದರಿಂದ ಅವರಿಗೆ ಆಭಾರಿಯಾಗಿದ್ದೇನೆ.

Downloads

Published

08.06.2024

How to Cite

ಜಿ. ವೆಂಕಟಸುಬ್ಬಯ್ಯ, & ಕುಪ್ಪನಹಳ್ಳಿ ಎಂ. ಭೈರಪ್ಪ. (2024). ಎರಡು ಶಬ್ದಗಳ ನಿಷ್ಪತ್ತಿ ಮತ್ತು ಅರ್ಥವಿಚಾರ. AKSHARASURYA, 4(02), 01 to 17. Retrieved from https://aksharasurya.com/index.php/latest/article/view/425

Issue

Section

ಹಿಂದಣ ಹೆಜ್ಜೆ. | TRODDEN PATH

Most read articles by the same author(s)