ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ ಪಾಶುಪತ-ಕಾಳಾಮುಖ ಸಾಧನ ಪಂಥ

Authors

  • SHOBHARANI N.

Keywords:

ಕರ್ನಾಟಕದ ಆಧ್ಯಾತ್ಮಿಕ ಪರಂಪರೆ, ಲಾಕುಳಶೈವ, ಕಾಪಾಲಿಕ, ಪಾಶುಪತ ಮಾಹೇಶ್ವರರು, ಕಾಳಾಮುಖರ ಕೊಡುಗೆ, ವಚನ ಚಳುವಳಿ

Abstract

ಭಾರತೀಯ ಮತ್ತು ವಿಶೇಷವಾಗಿ ಕರ್ನಾಟಕದ ಆಧ್ಯಾತ್ಮಿಕ ಆರಾಧನಾ ಪಂಥಗಳಲ್ಲಿ ಪಾಶುಪತ-ಕಾಳಾಮುಖ ಪಂಥವು ಬಹು ಮುಖ್ಯವಾದುದು. ಆಧ್ಯಾತ್ಮಿಕ ಪರಂಪರೆಯ ಹಿನ್ನೆಲೆಯಲ್ಲಿ ಮಾತ್ರವಲ್ಲದೇ, ದೇವಾಲಯ ಮತ್ತು ವಾಸ್ತುಶಿಲ್ಪ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕೂಡ ಈ ಸಾಧನಾ ಪಂಥದ ಸಾಧಕರು ನೀಡಿರುವ ಕೊಡುಗೆ ಅಪಾರವಾದುದು. ಕರ್ನಾಟಕದ ಬಹುತೇಕ ದೇವಾಲಯಗಳು ಪಾಶುಪತ-ಕಾಳಾಮುಖರಿಂದ ನಿರ್ಮಾಣಗೊಂಡಿವೆ. ಒಂದು ಕಾಲದಲ್ಲಿ ಅಂದರೆ ಕ್ರಿ.ಶ. 12ನೇ ಶತಮಾನಕ್ಕಿಂತ ಸಾಕಷ್ಟು ಪೂರ್ವದಲ್ಲೆ ಈ ಮಾರ್ಗವು ಕರ್ನಾಟಕದಲ್ಲಿ ಪ್ರಮುಖ ಆಧ್ಯಾತ್ಮಿಕ ಮಾರ್ಗವಾಗಿ ಪ್ರಭಾವಶಾಲಿಯಾಗಿತ್ತು. ಹಲವು ರಾಜರುಗಳು ಈ ಮಾರ್ಗಕ್ಕೆ ಪ್ರೋತ್ಸಾಹ ಮತ್ತು ಆಶ್ರಯವನ್ನು ನೀಡಿದ್ದಲ್ಲದೆ, ಸ್ವತಃ ಇದರ ಅನುಯಾಯಿಗಳೂ ಆಗಿದ್ದ ಉದಾಹರಣೆಗಳಿವೆ. ಲಾಕುಳೀಶ, ಕಾಳಾಮುಖ, ಪಾಶುಪತ, ಕಾಪಾಲಿಕ ಮೊದಲಾದ ದಕ್ಷಿಣಾಚಾರದ ಪಂಥಗಳೆಲ್ಲ ಒಂದೆಯೇ ಅಥವಾ ಬೇರೆ ಬೇರೆಯೇ, ಒಂದೇ ಪಂಥದ ವಿಭಿನ್ನ ಶಾಖೆಗಳೇ ಎಂಬುದರ ಬಗೆಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. ಡಾ. ಭಂಡಾರ್ಕರ್, ಕಪಟರಾಳ ಕೃಷ್ಣರಾವ್ ಮೊದಲಾದ ದೇಶೀ ವಿದ್ವಾಂಸರೂ, ಡಾ. ಲಾರೆನ್ ಝೆನ್ ರಂತಹ ವಿದೇಶೀ ವಿದ್ವಾಂಸರು, ಮತ್ತು ಈಚೆಗೆ ಡಾ. ವಸುಂಧರ ಫಿಯೋಜಾರಂತಹ ಆಧುನಿಕ ವಿದ್ವಾಂಸರೂ ಶೈವ ಸಾಧನಾ ಪಂಥಗಳನ್ನು ಕುರಿತು ಸಂಶೋಧನೆ ನಡೆಸಿದ್ದಾರಾದರೂ ಸಾಕಷ್ಟು ಅಗತ್ಯ ದಾಖಲೆಗಳ ಅಭಾವದಿಂದ ಈ ಶೈವಪಂಥಗಳನ್ನು ಕುರಿತು ಹೆಚ್ಚಿನ ಸಂಶೋಧನೆಗಳು ನಡೆದಿಲ್ಲ. ಲಾಕುಳೀಶರು ಕರ್ನಾಟಕದಲ್ಲಿ ನೆಲೆನಿಂತದ್ದು ಸರಿಸುಮಾರು ಬಾದಾಮಿ ಚಾಲುಕ್ಯರ ಕಾಲದಲ್ಲಾದರೂ ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿ ಈ ಪಂಥದ ಮಹತ್ವ ಉತ್ಕರ್ಷಕ್ಕೇರಿದ್ದು ಕ್ರಿ.ಶ.12ನೇ ಶತಮಾನದಲ್ಲಿ, ಕಲ್ಯಾಣಿ ಚಾಲುಕ್ಯರ ಆಡಳಿತದ ಅವಧಿಯಲ್ಲಿ. ಈ ಕಾಲದಲ್ಲಿ ಕಾಳಾಮುಖರು ಕರ್ನಾಟಕದ ರಾಜಕೀಯದಲ್ಲೂ ಪ್ರಭಾವಿಗಳಾಗಿದ್ದುದಾಗಿ ಅರಸೀಕೆರೆಯ ಸೋಮೇಶ್ವರನ ಶಾಸನ ಮೊದಲಾದವುಗಳಿಂದ ತಿಳಿದುಬರುತ್ತದೆ. ಈ ಮಾರ್ಗದ ಪ್ರಭಾವ ಕರ್ನಾಟಕದ ವಚನ ಚಳುವಳಿಯ ಮೇಲೂ ಸಾಕಷ್ಟು ಆಗಿದ್ದು, ಬಹಳಷ್ಟು ವಚನಕಾರರ ಸಾಧನೆ ಮತ್ತು ವೈಚಾರಿಕತೆಯನ್ನು ಈ ಪಂಥ ಪ್ರಭಾವಿಸಿದೆ. ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಇಷ್ಟು ಮಹತ್ವದ್ದಾಗಿದ್ದ ಆಧ್ಯಾತ್ಮಿಕ ಪಂಥವು ಇಂದು ಮುಖ್ಯವಾಹಿನಿಯಿಂದ ದೂರವಾಗಿದೆ. ಇದನ್ನು ಮತ್ತೆ ಶೋಧಿಸಿಕೊಳ್ಳಬೇಕಾದ ಅಗತ್ಯವನ್ನು ವಿವರಿಸಿಕೊಳ್ಳುವುದು ಮತ್ತು ಕಂಡುಕೊಳ್ಳುವುದು ಪ್ರಸ್ತುತ ಲೇಖನದ ಉದ್ದೇಶವಾಗಿದೆ.

Downloads

Published

05.04.2024

How to Cite

SHOBHARANI N. (2024). ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ ಪಾಶುಪತ-ಕಾಳಾಮುಖ ಸಾಧನ ಪಂಥ. AKSHARASURYA, 3(05), 61 to 67. Retrieved from https://aksharasurya.com/index.php/latest/article/view/376

Issue

Section

ಸಂಶೋಧನಾ ಲೇಖನಗಳು. | RESEARCH ARTICLE.