ಬೌದ್ಧರು ನಿರ್ಮಿಸಿದ ಪ್ರಾಕೃತ ಜಗದ್ವಲಯ

Authors

  • SHA SHETTAR
  • BYRAPPA M.

Keywords:

ಬೌದ್ಧ, ಪ್ರಾಕೃತ, ಭಾಷೆ, ಗೌತಮ ಬುದ್ಧ, ವರ್ಧಮಾನ ಮಹಾವೀರ, ಸಂಸ್ಕೃತ, ದಖ್ಖಣ, ಜೈನ

Abstract

ಕನ್ನಡ ಸಾಹಿತ್ಯ, ಸಂಸ್ಕೃತಿ, ಶಾಸನ, ಚರಿತ್ರೆ, ಭಾಷೆಯ ಕುರಿತು ಆಳವಾದ ಸಂಶೋಧನೆ ನಡೆಸಿ ಹೊಸ ತಿಳಿವು ನೀಡುವ ಮೂಲಕ ಕನ್ನಡದ ಮನಸುಗಳನ್ನು ಬೆಳಗಿದ ಸಂಶೋಧಕರಲ್ಲಿ ಪ್ರೊ.ಷ.ಶೆಟ್ಟರ್ ಅವರು ಅಗ್ರಗಣ್ಯರಾಗಿದ್ದಾರೆ. ಪ್ರೊ. ಷಡಕ್ಷರಪ್ಪ ಶೆಟ್ಟರ್ ಅವರು ಜನಿಸಿದ್ದು 11 ಡಿಸೆಂಬರ್ 1935ರಂದು ಬಳ್ಳಾರಿ ಜಿಲ್ಲೆ ಹಡಗಲಿ ತಾಲ್ಲೂಕಿನ ಹಂಪಸಾಗರದಲ್ಲಿ. ಮೈಸೂರು, ಧಾರವಾಡ ಮತ್ತು ಕೇಂಬ್ರಿಜ್‌ನಲ್ಲಿ ಉನ್ನತ ವ್ಯಾಸಂಗ ಮಾಡಿದ ಇವರು ಸಾಹಿತ್ಯ, ಚರಿತ್ರೆ, ಪ್ರಾಕ್ತನಶಾಸ್ತ್ರ, ಶಾಸನಶಾಸ್ತ್ರ, ಮಾನವಶಾಸ್ತ್ರ, ಕಲಾ ಇತಿಹಾಸ, ದರ್ಶನಶಾಸ್ತ್ರ ಮತ್ತು ಹಳಗನ್ನಡ ಕಾವ್ಯ ಕುರಿತು ಸುಮಾರು 30ಕ್ಕೂ ಸಂಶೋಧನಾ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕುವಲ್ಲಿ ಇವರ ಸಂಶೋಧನೆಗಳ ಕೊಡುಗೆ ಬಹಳ ಇತ್ತು. ಕೇಂಬ್ರಿಜ್, ಹಾರ್ವರ್ಡ್, ಹೈಡಲ್ ಬರ್ಗ್, ಅಥೆನ್ಸ್, ಲೈಡನ್, ಮಾಸ್ಕೋ ವಿಶ್ವವಿದ್ಯಾನಿಲಯಗಳಲ್ಲಿ ಕೆಲಕಾಲ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು. ಇವರು ಭಾರತೀಯ ಇತಿಹಾಸ ಅನುಸಂಧಾನ ಪರಿಷತ್, ದಕ್ಷಿಣ ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ ಹಾಗು ಕರ್ನಾಟಕ ಇತಿಹಾಸ ಅನುಸಂಧಾನ ಪರಿಷತ್‌ಗಳ ಸರ್ವಾಧ್ಯಕ್ಷ ಸ್ಥಾನಗಳನ್ನು ಅಲಂಕರಿಸಿದ್ದರು. ಅಲ್ಲದೇ ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿ ನಡೆದ ವಿಶ್ವಸಂಸ್ಕೃತ ಸಮ್ಮೇಳನದ ವಿಭಾಗೀಯ ಅಧ್ಯಕ್ಷ ಸ್ಥಾನದ ಗೌರವವನ್ನೂ ಇವರು ಪಡೆದಿದ್ದರು. ಶ್ರವಣಬೆಳಗೊಳದಲ್ಲಿ ನಡೆದ ಅಖಿಲ ಭಾರತ ಹಳಗನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಿದ್ದರು. ವಿವಿಧ ವಿಶ್ವವಿದ್ಯಾಲಯದಲ್ಲಿ ಬೋಧನೆ ಮಾಡುತ್ತಾ, ಭಾರತೀಯ ಕಲಾ ಇತಿಹಾಸ ಸಂಸ್ಥೆಯ ನಿರ್ದೇಶಕರಾಗಿ, ನವದೆಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್ ಅಧ್ಯಕ್ಷರಾಗಿ, ಬೆಂಗಳೂರಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್ ನಲ್ಲಿ(ನಿಯಾಸ್) ಡಾ.ಎಸ್.ರಾಧಾಕೃಷ್ಣನ್ ಪ್ರಾಧ್ಯಾಪಕತ್ವ ಸ್ಥಾನ ಅಲಂಕರಿಸಿ ಹಾಗೂ ಇದೇ ಸಂಸ್ಥೆಯಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿ, ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ದಕ್ಷಿಣ ಭಾರತ ಶಾಖೆಯ ನಿರ್ದೇಶಕರಾಗಿ ಪ್ರೊ.ಶೆಟ್ಟರ್ ಅವರು ಮಾಡಿದ ಕಾಯಕ ಹಾಗೂ ಸಾಧನೆ ಸಾಹಿತ್ಯ ಮತ್ತು ಕಲಾಚರಿತ್ರೆಯಲ್ಲಿ ಮಹತ್ವಪೂರ್ಣವಾದುದು.

ಆರಂಭದಲ್ಲಿ ಇಂಗ್ಲಿಷ್‌ನಲ್ಲಿ ಹೆಚ್ಚು ಬರೆಯುತ್ತಿದ್ದ ಶೆಟ್ಟರ್ ಅವರಿಗೆ ಕನ್ನಡದಲ್ಲಿ ಬರವಣಿಗೆ ಮಾಡಲು ಪ್ರೇರಣೆ ನೀಡಿದವರು ಶ್ರೇಷ್ಠ ಚಿಂತಕರಾದ ಶಂಕರ್ ಮೊಕಾಶಿ ಪುಣೇಕರ್ ಅವರು. ಶೆಟ್ಟರ್ ಅವರ ನುಡಿಕಾಯಕದಲ್ಲಿ ಮೂಡಿಬಂದಿರುವ ಕೃತಿತಾರೆಗಳು ಮೂಡಿಸಿರುವ ಪ್ರಭಾವಲಯ ಮಹೋನ್ನತವಾದುದು. ಶಂಗಂ ತಮಿಳಗಂ ಮತ್ತು ಕನ್ನಡ ನಾಡು-ನುಡಿ (ಆರಂಭ ಕಾಲದ ದ್ರಾವಿಡ ಭಾಷಾ ಚಿಂತನೆ), ಸೋಮನಾಥಪುರ, ಬಾದಾಮಿ ಚಾಲುಕ್ಯರ ಶಾಸನ ಸಾಹಿತ್ಯ, ಸಾವನ್ನರಸಿ, ಸಾವನ್ನು ಸ್ವಾಗತಿಸಿ, ‘ಹಳಗನ್ನಡ-ಲಿಪಿ, ಲಿಪಿಕಾರ, ಲಿಪಿ ವ್ಯವಸಾಯ’, ‘ಹಳಗನ್ನಡ-ಭಾಷೆ, ಭಾಷಾ ಬೆಳವಣಿಗೆ ಮತ್ತು ಭಾಷಾ ಬಾಂಧವ್ಯ’, ಪ್ರಾಕೃತ ಜಗದ್ವಲಯ (ಪ್ರಾಕೃತ, ಕನ್ನಡ ಮತ್ತು ಸಂಸ್ಖೃತ ಭಾಷೆಗಳ ಅನುಸಂಧಾನ), ರೂವಾರಿ (ಕನ್ನಡ ನಾಡಿನ ವಾಸ್ತು ಮತ್ತು ಶಿಲ್ಪಿಗಳ ಚರಿತ್ರೆ), ಸ್ಥಪತಿ(ಭಾರತದ ಕಲೆಗಾರರು/ಶಿಲ್ಪಿಗಳು, ಶಿಲ್ಪಕಲಾ ಇತಿಹಾಸ), Hoysala Sculpture in the National Museum, Sravanabelagola-An illustrated study, Inviting Death: Historical Experiment on Sepulchar Hill, Inviting Death:I Idian Attitude Towards the Ritual Death, Pursuing Death: Philosophy and Practice of Voluntary Termination of Life, Hampi-A Medieval Metropolis, Hoysala temples, Vol I-II, Footprints of Artisans in History, Akssarameru’s Kaliyuga Vipartan, Early Buddhist Artisanes and their Architectural Vocabulary, Archaeological Survey of Mysore: Annual Reports, Vol II-IV, Memorial Stones: A Study of the origin, significance and variety, Indian Archaeology in Retrospect, Construction of Indian Railways, Vol I-III, Jalianwala Bagh massacre, Pangs of Partition, Vol I-II – ಈ ಮೊದಲಾದ ಕೃತಿಗಳು ಈ ನೆಲದ ಸಾಂಸ್ಕೃತಿಕ ಗತವನ್ನೂ ಚಾರಿತ್ರಿಕ ಗತಿಯನ್ನೂ ಸಮರ್ಥವಾಗಿ ಸೂರೆಗೊಂಡು ಮುಂದಣ ಶೋಧನ-ಬೋಧನಗಳಿಗೆ ತೋರುದೀಪಗಳಾಗಿವೆ.

ಷ.ಶೆಟ್ಟರ್ ಅವರ ಸಂಶೋಧನ ಕೈಂಕರ್ಯಕ್ಕೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಂದ ಪ್ರಶಸ್ತಿಗಳು ಹಲವು. ಕರ್ನಾಟಕ ಲಲಿತ ಕಲಾ ಅಕಾಡೆಮಿ ವಾರ್ಷಿಕ ಪ್ರಶಸ್ತಿ, ಕರ್ನಾಟಕ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ, ಇಂಡಿಯನ್ ಹಿಸ್ಟರಿ ಕಾಂಗ್ರೆಸ್‌ನ ದೈವಾರ್ಷಿಕ ರಾಷ್ಟ್ರೀಯ ಪ್ರಶಸ್ತಿ, ಕೇಂದ್ರ ಲಲಿತ ಕಲಾ ಅಕಾಡೆಮಿಯ ಸನ್ಮಾನಪತ್ರ, ಬಾಹುಬಲಿ ವಿದ್ಯಾಪೀಠ ಪ್ರಶಸ್ತಿ, ಪ್ರಾಕೃತ ವಿದ್ಯಾಪೀಠ ಸಮಾಧಿಜ್ಞಾನವಿಶಾರದ ಪ್ರಶಸ್ತಿ ಶಿಲಾಶಾಸನತಜ್ಞ ಪ್ರಶಸ್ತಿ, ಪ್ರೊ.ಎಂ.ಚಿದಾನಂದಮೂರ್ತಿ ಪ್ರಶಸ್ತಿ, ಆಚಾರ್ಯ ಕುಂದಕುಂದ ರಾಷ್ಟ್ರೀಯ ಪ್ರಶಸ್ತಿ, ಮಣಿಪಾಲ್ ಫೌಂಡೇಷನ್ ಪ್ರೊ.ಅಚ್ಯುತರಾವ್ ಫೆಲೊಶಿಪ್ ಪುರಸ್ಕಾರ, ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾ ಸಮ್ಮಾನ್, ಪಂಡಿತ್ ಶಂಭಾ ಜೋಶಿ ಪ್ರಶಸ್ತಿ, ವೀಚಿ ಸಾಹಿತ್ಯ ಪ್ರಶಸ್ತಿ, ಬಿಎಂಶ್ರೀ ಪ್ರತಿಷ್ಠಾನದ ಅನಂತರಂಗ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ವರ್ಧಮಾನ ಪ್ರಶಸ್ತಿ, ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಚಾವುಂಡರಾಯ ಪ್ರಶಸ್ತಿ, ಡಾ. ಪಾದೂರು ಗುರುರಾಜಭಟ್ ಸ್ಮಾರಕ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ ಶ್ರೀ ವನಮಾಲಿ ಸೇವಾ ಪ್ರಶಸ್ತಿ, ಶ್ರೀ ಕ್ಷೇತ್ರ ಶ್ರವಣಬೆಳಗೊಳ ಚಿಕ್ಕಬೆಟ್ಟದ ಶಿಲಾಶಾಸನ ಸಾಹಿತ್ಯ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಕವಿ ರನ್ನ ಪ್ರಶಸ್ತಿ, ದೂರದರ್ಶನ ಚಂದನ ಪ್ರಶಸ್ತಿ, ವಿ.ಕೃ. ಗೋಕಾಕ ಶಿಕ್ಷಣ ಪ್ರಶಸ್ತಿ, ಡಾ.ಎಂ.ಎಂ.ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ, ಹಲಸಂಗಿ ಗೆಳೆಯರ ಬಳಗ ಸಂಶೋಧನ ಪ್ರಶಸ್ತಿ, ರಾಷ್ಟ್ರಪತಿಗಳ ಪುರಸ್ಕಾರ (ಶಾಸ್ತ್ರೀಯ ಕನ್ನಡ ವಿದ್ವತ್ ಸೇವೆಗಾಗಿ) ಪಂಪ ಪ್ರಶಸ್ತಿ ಮೊದಲಾದ ಗೌರವಕ್ಕೆ ಭಾಜನರಾಗಿದ್ದಾರೆ.

ಶೆಟ್ಟರ್ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ತಂದುಕೊಟ್ಟ ‘ಶಂಗಂ ತಮಿಳಗಂ ಮತ್ತು ಕನ್ನಡ ನಾಡು-ನುಡಿ’ (ಆರಂಭ ಕಾಲದ ದ್ರಾವಿಡ ಭಾಷಾ ಚಿಂತನೆ) ಕೃತಿ ಆರಂಭ ಕಾಲದ ದ್ರಾವಿಡ ಸಂಬಂಧಗಳ ಚಿಂತನೆಯನ್ನು ಪರಿಚಯಿಸುತ್ತದೆ. ಒಂದು ಚರಿತ್ರೆಯನ್ನು ಪುನರ್ ಕಟ್ಟುವ ಮಹತ್ವದ ಪ್ರಕ್ರಿಯಯು ಈ ಸಂಶೋಧನೆಯ ಫಲವಾಗಿ ನಮಗೆ ದಕ್ಕಿರುತ್ತದೆ. ಈ ಸಂಶೋಧನೆಯು ಯಾವುದೆ ನಿರ್ಣಾಯಕ ನಿಲುವುಗಳನ್ನು ಪ್ರಕಟಿಸುವ ಇರಾದೆಯನ್ನು ಅಂತಿಮವಾಗಿ ಇಟ್ಟುಕೊಳ್ಳದೇ ಬದಲಾಗಿ ಚಾರಿತ್ರಿಕ ಸತ್ಯದ ಸಾಧ್ಯತೆಗಳ ಸುಳುವುಗಳನ್ನು ಒದಗಿಸಿಕೊಡುವದರ ಬಗ್ಗೆ ಹೆಚ್ಚು ಒಲವನ್ನು ತೋರಿಸಿರುವುದು. ಸಧ್ಯದ ಪರಸ್ಥಿತಿಯಲ್ಲಿ ಕನ್ನಡದ ಪ್ರಾಚಿನತೆ/ಪರಂಪರೆಯ ನೆಲೆಗಳನ್ನು ಮತ್ತು ಅದರ ಚಹರೆಗಳನ್ನು ಗುರುತಿಸುವ ಹಂಬಲ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಈ ಸಂಶೋಧನೆಯು ಬಂದಿರುವುದು ಗಮನಾರ್ಹ. ಇಂದು ತಮಿಳ್ನಾಡು ಎಂದು ಕರೆಯಲಾಗುವ ಪ್ರಾಚೀನ ‘ತಮಿಳಗಂ’ನ ಪ್ರಾಗೈತಿಹಾಸಿಕ ಹಿನ್ನೆಲೆ ನೀಡುತ್ತಾ, ಇದರ ಒಡಲಾಳದಿಂದಲೇ ಕನ್ನಡ ಭಾಷೆ ಮತ್ತು ಸಂಸ್ಕೃತಿಗಳು ತಮ್ಮನ್ನು ಕಟ್ಟಿಕೊಂಡ ಪರಿಯ ಬಗ್ಗೆ ಹಲವು ಹೊಸ ಒಳನೋಟಗಳನ್ನು ನೀಡುತ್ತದೆ. ಆ ಮೂಲಕ ಈವರೆಗೆ ಬೆಳಕೇ ಕಾಣದ ಕನ್ನಡ – ತಮಿಳು ಸಂಬಂಧಗಳ ಹಲವು ನೆಲೆಗಳನ್ನು, ತಮಿಳಿನ ‘ಶಂಗಂ’ ಸಾಹಿತ್ಯವನ್ನು ನಿರ್ಮಿಸಿದ ಶಕ್ತಿಗಳ ಹಿನ್ನೆಲೆಯಲ್ಲಿ ಪರಿಚಯಿಸುತ್ತದೆ. ಮುಖ್ಯವಾಗಿ, ಕನ್ನಡ ನುಡಿ ಮತು ಸಂಸ್ಕೃತಿಗಳ ವಿಕಾಸವನ್ನು ಸಂಸ್ಕೃತದ ಪ್ರಭಾವಲಯದಲ್ಲಿ ಅರ್ಥಮಾಡಿಕೊಂಡಿದ್ದವರಿಗೆ ಇದರಿಂದ ನಾವು ದಕ್ಕಿಸಿಕೊಂಡಿದ್ದೆಷ್ಟು, ಕಳೆದುಕೊಂಡಿದ್ದೆಷ್ಟು ಎಂಬುದರ ಕಡೆ ಶೆಟ್ಟರ್ ಗಮನ ಸೆಳೆಯುತ್ತಾರೆ. ಕವಿರಾಜಮಾರ್ಗ ದೇಸಿಗಿಂತ ಮಾರ್ಗಕ್ಕೆ ಹೆಚ್ಚು ಒಲಿಯುತ್ತದೆ. ಅದೇ ತಮಿಳಿನ ಮೊದಲ ಕೃತಿಯಾದ ತೋಳ್ಕಾಪ್ಪಿಯಮ್ ದೇಸಿಗೆ ಹೆಚ್ಚಿನ ಮಣೆ ಹಾಕುತ್ತದೆ. ಈ ಎರಡು ಕೃತಿಗಳು ಕನ್ನಡ ಸಂಸ್ಕೃತಿಯ ಹಾದಿ ಮತ್ತು ದಿಕ್ಕುಗಳನ್ನು ನಿರ್ದೇಶಿಸಿದ್ದನ್ನು ಶೆಟ್ಟರ್ ಅವರು ಸಾಧಾರವಾಗಿ ಮಂಡಿಸುತ್ತಾರೆ. ವಿದ್ವಾಂಸರ ಅಭಿಮತದಂತೆ, ಈ ಸಂಶೋಧನೆಯು ಕನ್ನಡದ ಪ್ರಾಚೀನತೆ ಮತ್ತು ಅದರ ಚಲನಶೀಲತೆಯನ್ನು ವಿವರಿಸಲು ಹೊಸ ಚೌಕಟ್ಟನ್ನು ನಿರ್ಮಿಸಿಕೊಡುತ್ತದೆ. ಈ ಒಂದು ಚೌಕಟ್ಟು ದ್ರಾವಿಡರ ಆಲೋಚನಕ್ರಮವೂ ಆಗುವ ಸಾಧ್ಯತೆಗಳ ನೆಲೆಗಳನ್ನು ಗುರುತಿಸುವ ಸಂದರ್ಭದ ಕ್ರಮವಾಗಿರಬಹುದು. ಒಂದು ಸಂಸ್ಕೃತಿ, ಭಾಷೆ ಹಾಗೂ ಅವುಗಳು ಗುರುತಿಸಿಕೊಂಡ ಅಧಿಕಾರದ ಸಂಬಂಧ ಮತ್ತು ಪ್ರತಿನಿಧಿಸುವ ಆಲೋಚನ ಕ್ರಮಗಳು ರೂಪಗೊಂಡ ಬಗೆಯನ್ನು ಹಾಗೂ ಅವುಗಳು ವಿಸ್ತಾರಗೊಂಡ ವಿಧಾನವನ್ನು ಪುನರ್ಶೋಧಿಸುವ ಪರಿಕರಗಳು ಇಂತಹ ಅಧ್ಯಯನಗಳಿಂದ ದೊರಕಲು ಸಾಧ್ಯ.

ಲಿಪಿಲೋಕವನ್ನು ಕುರಿತು ಶೆಟ್ಟರ್ ಅವರು ‘ಹಳಗನ್ನಡ-ಲಿಪಿ, ಲಿಪಿಕಾರ, ಲಿಪಿ ವ್ಯವಸಾಯ’ ಕೃತಿ ಮೂಲಕ ಕೈಗೊಂಡ ವಿನೂತನ ಸಂಶೋಧನಕಾರ್ಯವನ್ನು ಕುರಿತು ಕನ್ನಡ ಸಂಶೋಧನ ಮಾರ್ಗದ ಮೇರು ವಿದ್ವಾಂಸರಲ್ಲೊಬ್ಬರಾದ ಡಾ.ಎಂ.ಎಂ.ಕಲಬುರ್ಗಿ ಅವರು ಗುರ್ತಿಸಿದಂತೆ, ನಾವು ಶಿಲ್ಪಗಳನ್ನು ಅಭ್ಯಸಿಸಿದ್ದೇವೆ, ಶಿಲ್ಪಿಗಳನ್ನು ಮರೆತಿದ್ದೇವೆ; ಲಿಪಿಯನ್ನು ಅಭ್ಯಸಿಸಿದ್ದೇವೆ, ಲಿಪಿಕಾರರನ್ನು ಮರೆತಿದ್ದೇವೆ ಎಂದು ಎಚ್ಚರಿಸುವ ಶೆಟ್ಟರ್ ನಮ್ಮ ಶಾಸನ ಲಿಪಿಕಾರರನ್ನು ಕುರಿತು ಇನ್ನೊಬ್ಬರು ಕೈಯಿಡದಂತೆ ಪೂರ್ಣ ಅಭ್ಯಾಸವನ್ನು ಪೂರೈಸಿದ್ದಾರೆ. ಅಶೋಕನ ಕಾಲದ (ಕ್ರಿ.ಪೂ. ಮೂರನೆಯ ಶತಮಾನ) ಬ್ರಾಹೀಲಿಪಿ ಮತ್ತು ಪ್ರಾಕೃತಭಾಷಾ ಶಾಸನಗಳಿಂದ ಪ್ರಾರಂಭವಾಗುವ ಈ ಅಧ್ಯಯನ ನಮ್ಮ ದೇಶದ ಪ್ರಪ್ರಥಮ ಲಿಪಿಯನ್ನು ಮತ್ತು ಲಿಪಿಕಾರನಾಗಿರುವ ‘ಚಪಡ’ನನ್ನು ಕರ್ನಾಟಕದಲ್ಲಿ ಗುರುತಿಸಿ ಮುಂದುವರಿದಿದೆ. ಚಿತ್ರದುರ್ಗ ಜಿಲ್ಲೆಯ ಮೂರು ಸ್ಥಳಗಳಲ್ಲಿ ಅಶೋಕನ ಶಾಸನ ಬರೆದ ಇವನು ಗಾಂಧಾರ (ಇಂದಿನ ಅಫಘಾನಿಸ್ತಾನ) ದೇಶದವನು. ‘ಭರತಖಂಡದ ಲಿಪಿಕಾರರ ಇತಿಹಾಸ ಆರಂಭವಾಗುವುದೇ ಇಲ್ಲಿಂದ, ಇಂದಿನಿಂದ, ಇವನಿಂದ’ ಎಂದು ಆರಂಭದ ಪುಟಗಳಲ್ಲಿ ಹೇಳುವ ಮೂಲಕ ಮೂಡಿಸಿದ ಸಂಚಲನವನ್ನು ಗ್ರಂಥದುದ್ದಕ್ಕೂ ಪ್ರೊ. ಶೆಟ್ಟರ್ ಕಾಯ್ದುಕೊಂಡಿದ್ದಾರೆ. ಕಳೆದ ನೂರು ವರ್ಷಗಳಿಂದ ಕನ್ನಡನಾಡಿನ ಶಾಸನಗಳನ್ನು ಬಳಸಿಕೊಂಡು ಮರುವ್ಯಾಖ್ಯಾನಗಳನ್ನು ಮಾಡಿ ಹೊಸ ಸಂಶೋಧನೆಯನ್ನು ಮುಂದಿಟ್ಟಿದ್ದಾರೆ. ವಾಸ್ತುಶಿಲ್ಪಿಗಳನ್ನು ಬಿಟ್ಟರೆ ನಮಗೆ ಲಿಪಿಶಿಲ್ಪಿಗಳ ಬಗ್ಗೆ ಒಂದು ಸ್ಥೂಲ ಕಲ್ಪನೆ ಇದೆ. ಇವರನ್ನುದ್ದೇಶಿಸಿ ಬಳಸುತ್ತಿದ್ದ ಓಜ, ಆಚಾರ್ಯ, ತ್ವಷ್ಟ, ವಿಶ್ವಕರ್ಮ ಪದಗಳ ಅರಿವಿದೆ. ಆದರೆ ಈ ಲಿಪಿಶಿಲ್ಪಿಗಳ ಸಮಾಜದ ಸ್ಪಷ್ಟ ಕಲ್ಪನೆ ಇಲ್ಲ. ಆರಂಭ ಕಾಲದಲ್ಲಿ ಶಾಸನಕ್ಕೆ ಪಠ್ಯರಚಿಸುವವನೂ ಅದನ್ನು ಕಂಡರಿಸುವವನೂ ಒಬ್ಬನೇ ಆಗಿರುತ್ತಿದ್ದನು. ಎಂಟನೆಯ ಶತಮಾನದ ನಂತರ ಈ ಕೆಲಸವನ್ನು ಹಂಚಿಕೊಳ್ಳುವ ರೂಢಿ ಆರಂಭವಾಯಿತು. ಸಂಸ್ಕೃತ ಭಾಷೆಯ ಮೇಲಿನ ಪ್ರಭುತ್ವ ಬ್ರಾಹ್ಮಣರಿಗಿದ್ದರೂ ಶಾಸನಗಳನ್ನು ಸಂಯೋಜಿಸಿ ಕಂಡರಿಸುವಲ್ಲಿ ಅವರ ಪಾತ್ರ ವಾಸ್ತವವಾಗಿ ಅತ್ಯಲ್ಪವಾಗಿತ್ತು. ಈ ಕ್ಷೇತ್ರದಿಂದ ಬ್ರಾಹ್ಮಣರನ್ನು ದೂರವಿಟ್ಟು ವೃತ್ತಿನಿರತ ಬ್ರಾಹ್ಮಣೇತರ ಲಿಪಿಕಾರರಾದ ತ್ವಷ್ಟರು, ವಿಶ್ವಕರ್ಮಿಗಳು ತಮ್ಮ ಏಕಸ್ವಾಮ್ಯವನ್ನು ಸ್ಥಾಪಿಸಿಕೊಂಡಿದ್ದ ಕತೆಯು ಕುತೂಹಲಕರವಾಗಿದೆ. ಹೀಗೆ ಕರ್ನಾಟಕದ ಶಾಸನ ಲಿಪಿವ್ಯವಸಾಯವನ್ನು ಕೇಂದ್ರವಾಗಿಟ್ಟುಕೊಂಡಿದ್ದರೂ ಲಿಪಿಗೆ ಸಂಬಂಧಿಸಿದ ಭಾಷೆ, ಭಾಷೆಗೆ ಸಂಬಂಧಿಸಿದ ಪಠ್ಯ, ಪಠ್ಯವನ್ನು ನಿಯಂತ್ರಿಸಿದ ಧರ್ಮ ಮತ್ತು ರಾಜಧರ್ಮ, ಇವೆಲ್ಲವುಗಳಿಗೆ ನೆಲೆಯಾದ ಸಮಾಜ ಇತ್ಯಾದಿಗಳನ್ನು ತನ್ನ ತೆಕ್ಕೆಗೆ ತಬ್ಬಿಕೊಳ್ಳುವ ಮೂಲಕ ಈ ಗ್ರಂಥ ಬಹುಶಿಸ್ತುಗಳ ಸಂಗಮವಾಗಿ ಬೆಳೆದಿರುವುದು ಕನ್ನಡ ಸಂಶೋಧನ ಕ್ಷೇತ್ರದ ಮಹತ್ವದ ಮೈಲುಗಲ್ಲು.

‘ಪ್ರಾಕೃತ ಜಗದ್ವಲಯ’ ಕೃತಿಯು ವಿಶ್ವಾತ್ಮಕ ದೇಶಭಾಷಾ ವಿಸ್ತಾರತೆಯನ್ನು ಪಡೆದಿದ್ದ ‘ಪ್ರಾಕೃತ’ ಭಾಷಾವಲಯವನ್ನು ಸಮೃದ್ಧ ವಿವರಗಳಿಂದ ನಿರೂಪಿಸುತ್ತದೆ. ಹಾಗೆಯೇ ದಕ್ಷಿಣ ಭಾರತದ ಭಾಷಾಸ್ವರೂಪವನ್ನು ವಿವರಿಸುತ್ತದೆ. ಪ್ರಾಕೃತ ಭಾಷಾವಲಯಕ್ಕೆ ಅಶೋಕನ ಕೊಡುಗೆ ಅಪಾರವಾದುದು. ಅಶೋಕ, ಬೌದ್ಧಧರ್ಮವನ್ನು ಸ್ವೀಕರಿಸಿ ಅದನ್ನು ತನ್ನ ಪ್ರಜಾಸಮೂಹದಲ್ಲಿ ಪ್ರಚಾರ ಮಾಡುವಾಗ ಅವನು ಸ್ಥಾಪಿಸಿದ ಸ್ತೂಪಗಳು, ಬರೆಸಿದ ಶಾಸನಗಳು ಎಲ್ಲವೂ ಪ್ರಾಕೃತಭಾಷೆಯಲ್ಲೇ ಇವೆ. ಪ್ರಾಕೃತ ಭಾಷೆಯ ಪದಗಳನ್ನು ನಾವು ಕನ್ನಡದಲ್ಲಿಯೂ ಕಾಣುತ್ತೇವೆ. ಈ ಪ್ರಾಕೃತ ಶಬ್ದಗಳು ಕನ್ನಡದಲ್ಲಿ ಹೇಗೆ ಬಳಕೆಗೆ ಬಂದವು ಎಂದು ಇಲ್ಲಿ ವಿವರಿಸಲಾಗಿದೆ. ಸಮಾಜ, ಧರ್ಮ, ಈ ಕೃತಿಯು ರಾಜಕೀಯ ಹಾಗೂ ಭಾಷೆ ಇವುಗಳಿಗಿರುವ ಸಂಬಂಧವನ್ನೂ ವಿಶ್ಲೇಷಿಸುತ್ತದೆ. ಭಾಷಾವಿಜ್ಞಾನಿಯಾದ ಮೇಟಿ ಮಲ್ಲಿಕಾರ್ಜುನ ಅವರು ಹೇಳುವಂತೆ, ಪುರಾತನ ಎನ್ನುವ ಕಾರಣಕ್ಕೆ ನುಡಿಯೊಂದನ್ನು ಸಮೃದ್ಧವಾದದ್ದೆಂದು ತೀರ್ಮಾನಿಸಲು ಸಾಧ್ಯವಿಲ್ಲ. ಯಾವುದೇ ನುಡಿಯ ಪ್ರಾಚೀನತೆ ಎಂಬುದು ಚಾರಿತ್ರಿಕ-ಸಾಂಸ್ಕೃತಿಕ ವಿದ್ಯಮಾನಗಳ ಜೊತೆಗೆ ಹೇಗೆ ಅನುಸಂಧಾನ ಮಾಡಿದೆ ಎಂಬುದನ್ನು ಆಧರಿಸಿರುತ್ತದೆ. ನುಡಿಗೆ ಲಿಪಿ, ಬರವಣಿಗೆ, ಸೃಜನಶೀಲತೆಯ ಆಯಾಮಗಳು ದೊರಕಿದರೆ, ಆ ನುಡಿಗೆ ಸಾಮಾಜಿಕ-ಸಾಂಸ್ಕೃತಿಕ ಅಸ್ತಿತ್ವ, ಅಸ್ಮಿತೆ ಹಾಗೂ ರಾಜಕೀಯ ಮಾನ್ಯತೆ ಕೂಡ ಲಭ್ಯವಾಗುತ್ತದೆ. ಕನ್ನಡವನ್ನು ಇವತ್ತು ಪ್ರಾಚೀನ ನುಡಿಯೆಂದು ಗುರುತಿಸುವ ಪ್ರಕ್ರಿಯೆಯಲ್ಲಿಯೂ ಈ ಸಾಮಾಜಿಕ-ಸಾಂಸ್ಕೃತಿಕ ಆಯಾಮಗಳು ಮುಖ್ಯವಾಗಿವೆ. ಸಂಸ್ಕೃತ ಲಿಪಿ ವ್ಯವಸ್ಥೆಯನ್ನು ಪಡೆದುಕೊಂಡ ಮೇಲೆಯೇ ವಿಶ್ವಾತ್ಮಕ ಮಾನ್ಯತೆಯನ್ನು ಪಡೆಯಿತು. ಬುದ್ಧ ಮತ್ತು ಮಹಾವೀರ ಅವರುಗಳು ತಮ್ಮ ಅನುಯಾಯಿಗಳಿಗೆ ಪ್ರಾಕೃತ ನುಡಿಗಳಲ್ಲಿ ಬೋಧನೆ ಮಾಡಿದ್ದರಿಂದ ಅವುಗಳಿಗೆ ಪ್ರಾಧಾನ್ಯತೆ ಸಿಕ್ಕಿರುತ್ತದೆ. ಕ್ರಿ.ಪೂ 6ನೇ ಶತಮಾನದಿಂದ ಕ್ರಿ.ಶ 3ನೇ ಶತಮಾನದವರೆಗೆ ಪ್ರಾಕೃತ ನುಡಿ(ಗಳು) ಜನಸಾಮಾನ್ಯರ ನುಡಿಯಾಗಿದ್ದವು. ಈ ನುಡಿಗಳು ಬಹಳ ವರುಷಗಳ ಕಾಲ ಮೌಖಿಕ ಪರಂಪರೆಯಲ್ಲಿಯೇ ಇದ್ದವು. ಅಶೋಕ ಚಕ್ರವರ್ತಿ ಬ್ರಾಹ್ಮೀ ಲಿಪಿಯ ನಂಟನ್ನು ಪ್ರಾಕೃತ ನುಡಿಗಳೊಂದಿಗೆ ಬೆಸೆದಿರುವುದು ಚಾರಿತ್ರಿಕ. ಕನ್ನಡ ನುಡಿಯ ಇಡೀ ಬೆಳವಣಿಗೆಯನ್ನು ಗುರುತಿಸುವ ಇಂತಹ ಪ್ರಯತ್ನಗಳು ಈ ಕೃತಿಯ ಮಹತ್ವದ ಚರ್ಚೆಗಳಾಗಿವೆ.

ಶೆಟ್ಟರ್ ಅವರು ಹಲವು ಅಧ್ಯಯನ ಶಿಸ್ತುಗಳಲ್ಲಿ ತಮ್ಮ ಚಿಂತನೆಗಳನ್ನು ಬೆಳೆಸಿರುವುದನ್ನು ಅವರೆಲ್ಲ ಅಧ್ಯಯನಗಳ ಮೂಲಕ ನಾವು ಮನಗಾಣಬಹುದು. ಪ್ರಸ್ತುತ ಬರಹದಲ್ಲಿ ಶೆಟ್ಟರ್ ಅವರು ತಮ್ಮ ಚಿಂತನೆಗಳ ಮೂಲಕ ಕರ್ನಾಟಕ ಸಂಸ್ಕೃತಿ ಓದಿನ ಕಾಲುದಾರಿಗಳನ್ನು ಹೇಗೆ ರೂಪಿಸಿದ್ದಾರೆ, ಅವುಗಳ ಮುಖೇನ ಕರ್ನಾಟಕದ ನುಡಿ, ನುಡಿ ಪರಂಪರೆ, ಬರಹ ವ್ಯವಸಾಯ, ಲಿಪಿ ವಿಕಾಸ ಹಾಗೂ ಲಿಪಿಕಾರರನ್ನು ಕುರಿತ ಓದಿನ ಸಾಧ್ಯತೆಯ ಜಾಡುಗಳನ್ನು ಹೇಗೆ ನಿಚ್ಚಳಗೊಳಿಸಿದ್ದಾರೆ? ಸಾಮಾಜಿಕ ಚರಿತ್ರೆಯ ಹಲವು ಮಾದರಿಗಳನ್ನು ಹೊಸದಾಗಿ ಕಂಡರಿಯಲು ಇಲ್ಲಿ ಯಾವೆಲ್ಲ ಅವಕಾಶಗಳು ಏರ್ಪಟ್ಟಿವೆ? ಎಂದು ನೋಡಿದಾಗ ಮುಖ್ಯವಾಗಿ ಕನ್ನಡ-ತಮಿಳು, ಕನ್ನಡ-ಸಂಸ್ಕೃತ, ಕನ್ನಡ-ಪ್ರಾಕೃತ ನುಡಿಗಳ ನಡುವಣ ಅನುಸಂಧಾನದ ವಿನ್ಯಾಸಗಳು ಮತ್ತು ವೈಚಿತ್ರ್ಯಗಳನ್ನು ಏಕಕಾಲಕ್ಕೆ ಗುರುತಿಸುವ ಪ್ರಯತ್ನವನ್ನು ಶೆಟ್ಟರ್ ಅವರ ಬಹುತೇಕ ಬರಹಗಳಲ್ಲಿ ಕಾಣುತ್ತೇವೆ. ವಾಸ್ತುಶಿಲ್ಪ ಮತ್ತು ಶಾಸನಗಳ ನಡುವಣ ಐತಿಹಾಸಿಕ ಸಂಬಂಧಗಳು, ಇವುಗಳ ಪರಿಣಾಮದಿಂದ ಭಾಷೆಯೊಳಗೆ ಉಂಟಾಗಿರುವ ಸಾಂಸ್ಕೃತಿಕ ಪಲ್ಲಟಗಳನ್ನು ಹೇಗೆ ನೋಡಬೇಕು ಎನ್ನುವುದು ಅತ್ಯಂತ ಮಹತ್ವದ ಪ್ರಶ್ನೆಯಾಗಿದೆ. ಸಂಶೋಧನೆಯ ಪ್ರಕ್ರಿಯೆಯೊಳಗೆಯೇ ಏರ್ಪಡುವ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಪರಿಣಾಮ ಹಾಗೂ ಪ್ರಭಾವಗಳನ್ನು ಮರು ಪರಿಶೀಲಿಸುವ ವಿಧಾನಗಳು ಶೆಟ್ಟರ್ ಒಟ್ಟು ಅಧ್ಯಯನಗಳಲ್ಲಿ ಪ್ರಕಟಗೊಂಡಿವೆ.

ಜ್ಞಾನ ಮತ್ತು ಅಧಿಕಾರ ಸಂಕಥನಗಳನ್ನು ಕುರಿತ ನಿಲುವುಗಳು ಶೆಟ್ಟರ್ ಅವರ ವಿಶ್ಲೇಷಣೆಗಳಲ್ಲಿ ಹೇಗೆ ಪ್ರಕಟಗೊಳ್ಳುತ್ತವೆ ಎನ್ನುವುದನ್ನು ಅರಿಯಲು, ಜ್ಞಾನಶಾಸ್ತ್ರಗಳು ಹೇಗೆ ಕಾರ್ಯನಿರ್ವಹಿಸಬೇಕು ಎಂಬುದನ್ನು ಖಚಿತಪಡಿಸುವ ಸಾಕ್ಷಿಗಳು ಇಲ್ಲಿ ಲಭ್ಯವಾಗುತ್ತವೆ. ಈ ಜ್ಞಾನ ಮತ್ತು ಅಧಿಕಾರ ಸಂಕಥನಗಳನ್ನು ಚರಿತ್ರೆಯಲ್ಲಿ ನಿಭಾಯಿಸಿದ, ನಿರ್ವಹಿಸಿದ ಸ್ವರೂಪ ಮತ್ತು ವಿಧಾನವನ್ನು ಕುರಿತ ಶೆಟ್ಟರ್ ಅವರ ಮರು ವ್ಯಾಖ್ಯಾನಗಳನ್ನು, ಜ್ಞಾನಶಾಸ್ತ್ರದ ಕೊಡುಗೆಗಳೆಂದು ಅಧಿಕೃತಗೊಳಿಸುವುದು ಅವಶ್ಯ. ವಿಶೇಷವಾಗಿ ಜ್ಞಾನಶಾಸ್ತ್ರವೊಂದು ಜ್ಞಾನವನ್ನು ನಿಭಾಯಿಸುವಲ್ಲಿ ಹೇಗೆ ಕಾರ್ಯಪ್ರವೃತ್ತಗೊಳ್ಳಬೇಕು ಎಂಬುದನ್ನು ಇಲ್ಲಿ ಒತ್ತಿ ಹೇಳಬೇಕಾಗಿದೆ. ಸಂಸ್ಕೃತಿ ಓದಿನಲ್ಲಿ ಜ್ಞಾನಶಾಸ್ತ್ರೀಯ ವೈಶಿಷ್ಟ್ಯ ಮತ್ತು ವಿನ್ಯಾಸಗಳನ್ನು ಮೌಲ್ಯಮಾಪನ ಮಾಡುವುದು ಅಗತ್ಯ. ಆದರೆ ಈ ಅಗತ್ಯತೆಯನ್ನು ಪ್ರತಿಪಾಧಿಸುವ ತಾತ್ವಿಕತೆಯ ಜರೂರಿದೆ ಎಂಬುದು ಗಮನಾರ್ಹ. ಶೆಟ್ಟರ್ ಅವರ ಚಿಂತನೆಗಳ ಪರಿಣಾಮದಿಂದ, ಜ್ಞಾನಮೀಮಾಂಸೆ ಮತ್ತು ಮೀಮಾಂಸಕರ ಹೊಣೆಗಾರಿಕೆಯನ್ನು ಅರಿಯಬಹುದಾಗಿದೆ. ಪೂರ್ವನಿರ್ಧಾರಿತ ಗ್ರಹೀತಗಳಿಗೆ ತಕ್ಕಂತೆ ಆಧಾರಗಳನ್ನು ಜೋಡಿಸಿಕೊಳ್ಳುವ, ತೀರ್ಮಾನಗಳನ್ನು ಹೇಳುವ, ಆ ತೀರ್ಮಾನಗಳಿಗೆ ವಿರುದ್ಧವಾದ ಸಾಕ್ಷ್ಯಗಳಿದ್ದರೂ ಅದನ್ನು ಉಪೇಕ್ಷೆ ಮಾಡುವ ಚರಿತ್ರೆಕಾರರಿಗಿಂತ ಶೆಟ್ಟರ್ ಅವರು ಭಿನ್ನವಾಗಿಯೂ ಎತ್ತರವಾಗಿಯೂ ನಿಲ್ಲುತ್ತಾರೆ. ಈ ನಿಟ್ಟಿನಲ್ಲಿ ಅವರೊಬ್ಬ ದೊಡ್ಡ ಸತ್ಯಾರ್ಥಿ. ವಿದ್ವಾಂಸರು ಗುರ್ತಿಸಿರುವಂತೆ ವಸ್ತುನಿಷ್ಠತೆ, ತರ್ಕಬದ್ಧತೆ, ಸ್ವಾನುಮಾನ, ಅಪೂರ್ಣತೆಯ ಅರಿವು ಅವರ ಸಂಶೋಧನಾ ಬರಹಗಳ ಪ್ರಾಣವಾಗಿತ್ತು. ಈ ಕಾರಣಕ್ಕೆ ಕಳೆದ ಕಾಲು ಶತಮಾನದ ಅವಧಿಯಲ್ಲಿ ಕರ್ನಾಟಕ ಸಾಹಿತ್ಯ ಮತ್ತು ಚರಿತ್ರೆ ಕುರಿತ ಅವರ ಸಂಶೋಧನಾ ಕಾಣ್ಕೆಗಳು ಬಹುಮಹತ್ವದ್ದಾಗಿವೆ.

ಪ್ರಸ್ತುತ ‘ಬೌದ್ಧರು ನಿರ್ಮಿಸಿದ ಪ್ರಾಕೃತ ಜಗದ್ವಲಯ’ ಲೇಖನವನ್ನು ಶೆಟ್ಟರ್ ಅವರ ‘ಹಳಗನ್ನಡ ಭಾಷೆ, ಭಾಷಾ ವಿಕಾಸ, ಭಾಷಾ ಬಾಂಧವ್ಯ’ ಗ್ರಂಥದಿಂದ (ಪುಟ 68-86) ಆಯ್ದುಕೊಳ್ಳಲಾಗಿದೆ. ಕರ್ನಾಟ-ಭಾರತದ ಪ್ರಾದೇಶಿಕ ಭಾಷೆಯ ಪ್ರಸ್ತುತತೆಯನ್ನು ವಿವರಿಸುತ್ತಾ ಶೆಟ್ಟರ್ ಅವರು, ಕ್ರಿ.ಪೂ. ಸುಮಾರು ಆರನೆಯ ಶತಮಾನದ ಅವೈದಿಕ ಮತಪ್ರವರ್ತಕರು ತಮ್ಮ ತತ್ವಗಳನ್ನು ಹಂಚಿಕೊಳ್ಳಲು ಪ್ರಾಕೃತ ನುಡಿಗಟ್ಟುಗಳನ್ನು ಆಯ್ಕೆ ಮಾಡಿಕೊಳ್ಳಲು ಇವುಗಳ ಜನಪ್ರಿಯತೆ ಒಂದು ಕಾರಣವಾಗಿದ್ದರೆ ಸಂಸ್ಕೃತ ಭಾಷೆಯನ್ನು ಸೀಮಿತ ಜನಾಂಗಕ್ಕೆ ನಿರ್ಬಂಧಿಸಿದ್ದು ಇನ್ನೊಂದು ಕಾರಣವಾಗಿತ್ತು ಎಂದು ತಿಳಿಸುತ್ತಾರೆ. ತುಂಬಾ ಸರಳವೂ ಮುಕ್ತವೂ ಆದ ಪ್ರಾದೇಶಿಕ ಭಾಷೆಗಿಂತ ಛಂದಃ ಭಾಷೆಯು ಕಠಿಣವೆನಿಸಿದ್ದರಿಂದ, ಮತ್ತು ಅದನ್ನು ಕಲಿಯುವ ಕಲಿಸುವ ಅವಕಾಶಗಳನ್ನು ಮೀಮಾಂಸಕಾರರ ಕಟ್ಟಳೆಗಳು ತುಂಬಾ ಮಿತಿಗೊಳಿಸಿದ್ದುದರಿಂದ, ಬುದ್ಧ-ಮಹಾವೀರರು ಜನಮಾನ್ಯ ಭಾಷೆಯನ್ನೇ ಆಯ್ದುಕೊಂಡರು. ಬುದ್ಧನ ಇಬ್ಬರು ಅನುಯಾಯಿಗಳು ಒಂದು ಹಂತದಲ್ಲಿ ಶಾಕ್ಯಮುನಿಯನ್ನು ಸಂಪರ್ಕಿಸಿ, ಆತನ ಬೋಧನೆಗಳನ್ನು ಸಂಸ್ಕೃತದಲ್ಲಿ ತಂದುಕೊಳ್ಳಲು ಅನುಮತಿ ಕೋರಿದಾಗ, ಅಂತಹ ಅವಿವೇಕತನದ ಅವಶ್ಯಕತೆ ಇದೆಯಾ? ಎಂಬ ಉತ್ತರವು ಮರುಪ್ರಶ್ನೆಯಾಗಿ ಬಂತೆನ್ನಲಾಗಿದೆ. ನೆಲದ ನುಡಿಗಟ್ಟುಗಳೆಡೆ ಬುದ್ಧನಿಗಿದ್ದ ಒಲವನ್ನು ಸರಿಯಾಗಿ ಅರ್ಥಮಾಡಿಕೊಂಡೇ ಅಶೋಕಮೌರ್ಯನು ತನ್ನ ಶಾಸನಗಳನ್ನು ಬರೆಸಿದ್ದು. ಈ ಪ್ರಕ್ರಿಯೆಯು ಉತ್ತರದಿಂದ ದಕ್ಷಿಣದ ವರೆಗೂ ವಿಸ್ತಾರಗೊಂಡು ಬೌದ್ಧರಿಂದ ನಿರ್ಮಾಣಗೊಂಡ ಪ್ರಾಕೃತ ಜಗದ್ವಲಯವನ್ನು ಸೋದಾಹರಣವಾಗಿ ವಿಶ್ಲೇಷಣೆ ಮಾಡುತ್ತಾ, ಬೌದ್ಧ ಪ್ರಾಕೃತವು ಕಾಲಾನಂತರ ಬೌದ್ಧ ಸಂಸ್ಕೃತವಾಗಿ, ಪ್ರಾಕೃತ-ಸಂಸ್ಕೃತ ಮಿಶ್ರಬೌದ್ಧವಾಗಿ, ಜನನುಡಿಯಲ್ಲಿ ಅಂತರ್ಗತವಾದ ನುಡಿಯಾನವನ್ನು ದಾಖಲಿಸಿದ್ದಾರೆ. ಬಹುಜ್ಞಾನ ಶಿಸ್ತುಗಳ ಮೂಲಕ ನುಡಿಪರಂಪರೆಯನ್ನು ಬೆಳಗಬೇಕಾದ ಸಿದ್ಧತೆ ಹಾಗೂ ಬದ್ಧತೆಗೆ ಈ ಸಂಶೋಧನ ಲೇಖನವು ಅತ್ಯುತ್ತಮ ಮಾದರಿಯಾಗಿದೆ.

Downloads

Published

05.03.2024

How to Cite

SHA SHETTAR, & BYRAPPA M. (2024). ಬೌದ್ಧರು ನಿರ್ಮಿಸಿದ ಪ್ರಾಕೃತ ಜಗದ್ವಲಯ. AKSHARASURYA, 3(03), 01 to 25. Retrieved from https://aksharasurya.com/index.php/latest/article/view/323

Issue

Section

ಹಿಂದಣ ಹೆಜ್ಜೆ. | TRODDEN PATH

Most read articles by the same author(s)