ಶೂನ್ಯ ಸಂಪಾದನೆಯ ಮೂಲ ಮತ್ತು ಸ್ವರೂಪ.

Authors

  • L. BASAVARAJU
  • BYRAPPA M.

Keywords:

ಶೂನ್ಯ ಸಂಪಾದನೆ, ಎಲ್. ಬಸವರಾಜು, ಕನ್ನಡ ಗ್ರಂಥಸಂಪಾದನೆ, ಬಸವಾದಿ ಶಿವಶರಣ, ಶಿವಗಣಪ್ರಸಾದಿ ಮಹಾದೇವಯ್ಯ, ಪ್ರಭುದೇವರ ಶೂನ್ಯಸಂಪಾದನೆ

Abstract

ಆಶಯ :

ಡಾ. ಎಲ್. ಬಸವರಾಜು ಅವರು ಕನ್ನಡ ವಿದ್ವತ್ಲೋಕದಲ್ಲಿ “ಆದಿಕವಿ ಪಂಪನ ಮರಿದುಂಬಿ” (ಚಿಂತಕ ವಿ. ಚಂದ್ರಶೇಖರ ನಂಗಲಿಯವರ ನುಡಿ) ಎಂಬ ಪ್ರಶಂಸೆಗೆ ಪಾತ್ರರಾದವರು. ಇದು ಅವರ ಸಂಶೋಧನ ಕಾಯಕದೊಳಗೆ ಅಡಗಿರುವ ಸಹಜವಾದ ಕವಿ ಹೃದಯವನ್ನು ಧ್ವನಿಸುತ್ತದೆ. ಇಂತಹ ಸ್ವೋಪಜ್ಞ ವಿದ್ವಾಂಸರು ಜನಿಸಿದ್ದು ಕೋಲಾರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಇಡಗೂರಿನಲ್ಲಿ 1919ರ ಅಕ್ಟೋಬರ್ 5ರಂದು. ಬಡತನ ಹಾಗೂ ಪರಿವ್ರಾಜಕ ಜೀವನಾನುಭವದಲ್ಲಿ ಸಾಗಿ, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಹಾಗೂ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆದರು. ಆ ಕಾಲದ ಶ್ರೇಷ್ಠ ಪ್ರಾಧ್ಯಾಪಕರು, ಸಂಶೋಧನ ಕ್ಷೇತ್ರದ ದಿಗ್ಗಜರು, ಆದರ್ಶ ಬದುಕಿನ ಮಾದರಿಗಳೂ ಆಗಿದ್ದ ಕುವೆಂಪು, ಡಿ. ಎಲ್. ನರಸಿಂಹಾಚಾರ್, ತೀ. ನಂ. ಶ್ರೀಕಂಠಯ್ಯ ಮೊದಲಾದವರ ಮಾರ್ಗದರ್ಶನದಲ್ಲಿ. ಎಲ್.ಬಿ. ಅವರು ತಮ್ಮ ಶೈಕ್ಷಣಿಕ ಜೀವನ ಮತ್ತು ಮುಂದಿನ ಸಾಹಿತ್ಯ, ಸಂಶೋಧನ ಕೃಷಿಗೆ ಬೇಕಾದ ಭೂಮಿಕೆಯನ್ನು ಸಿದ್ಧಪಡಿಸಿಕೊಂಡರು. ಎಲ್.ಬಿ. ಅವರ ‘ಅಲ್ಲಮನ ವಚನ ಚಂದ್ರಿಕೆ’, ‘ಶಿವದಾಸ ಗೀತಾಂಜಲಿ’, ‘ಶಿವಗಣಪ್ರಸಾದಿ ಮಹಾದೇವಯ್ಯನ ಶೂನ್ಯಸಂಪಾದನೆ’ ಮೊದಲಾದ ಕೃತಿರತ್ನಗಳು ಕನ್ನಡ ಸಾರಸ್ವತಲೋಕಕ್ಕೆ ಸಂದ ಅಮೂಲ್ಯ ಕೊಡುಗೆಗಳಾಗಿವೆ.

ಕನ್ನಡ ಗ್ರಂಥಸಂಪಾದನೆ ಮತ್ತು ಸಂಶೋಧನೆಯ ಎರಡನೆ ಪ್ರಮುಖ ಕಾಲಘಟ್ಟದಲ್ಲಿ ಪ್ರೊ. ಎಲ್. ಬಸವರಾಜು ಅವರು ಸಾಹಿತ್ಯ ಕ್ಷೇತ್ರವನ್ನು ಪ್ರವೇಶ ಮಾಡಿದರು. ಆ ವೇಳೆಗಾಗಲೇ ಮೊದಲ ಕಾಲಘಟ್ಟದಲ್ಲಿ ಫ. ಗು.ಹಳಕಟ್ಟಿ, ಶಿ. ಶಿ. ಬಸವನಾಳ, ನಂದೀಮಠ, ಎಂ.ಆರ್.ಶ್ರೀ., ಕೆ. ಜಿ. ಕುಂದಣಗಾರ, ಗೋವಿಂದ ಪೈ ಮೊದಲಾದವರು ಸಂಶೋಧನೆಯಲ್ಲಿ ಒಂದು ಸುತ್ತು ಯಾತ್ರೆಯನ್ನು ಮುಗಿಸಿದ್ದರು; ಮಾತ್ರವಲ್ಲ ಸಂಶೋಧನೆಯ ಕ್ಷೇತ್ರದಲ್ಲಿ ಒಂದು ಮಿಂಚಿನ ರೇಖನ್ನು ಬರೆದಿದ್ದರು. ಈ ಹಾದಿಯಲ್ಲಿ ಬಹುದೂರ ನಡೆದ ಪ್ರೊ. ಎಲ್. ಬಸವರಾಜು ಅವರು ತಮ್ಮ ಕ್ಷೇತ್ರಕಾರ್ಯದುದ್ದಕ್ಕೂ ಕನ್ನಡದ ವಿವೇಕವನ್ನು ಮೂಲಭೂತವಾದ ಮತ್ತು ಕುಟಿಲ ರಾಜಕೀಯ ನೀತಿಯಿಂದ ಮುಕ್ತಗೊಳಿಸುವ ಮೂಲಕ ಜನಮುಖಿಯಾದದ್ದು ಈಗ ಇತಿಹಾಸ.

ಕನ್ನಡ ಗ್ರಂಥಸಂಪಾದನೆಗೆ ಡೆಮಾಕ್ರೆಟಿಕ್ ಆದ ಆಯಾಮವನ್ನು ನೀಡಿದವರಲ್ಲಿ ಪ್ರೊ. ಎಲ್.ಬಸವರಾಜು ಅವರು ಪ್ರಮುಖರು. ಯಾಕೆಂದರೆ ಗ್ರಂಥಸಂಪಾದನೆಯ ಜೊತೆಜೊತೆಗೆ ಅಂಟಿಕೊಂಡಿದ್ದ ವ್ಯಕ್ತಿ, ಜಾತಿ, ಧರ್ಮ, ಭಾಷೆ, ಪ್ರದೇಶ, ಮಠ, ರಾಜಕಾರಣ ಮೊದಲಾದ ಸೀಮೆಗಳನ್ನು ಮೀರುವ ಅವಕಾಶವನ್ನು ‘ಸೀಮೆಯೊಳಗಿದ್ದು ಸೀಮಾತೀತ’ಗೊಳಿಸಿಕೊಳ್ಳುವ ನಡೆಯಾಗಿಸಿಕೊಂಡ ಅಪರೂಪದ ವಿದ್ವಾಂಸರಲ್ಲಿ ಎಲ್.ಬಿ. ಅವರದು ಗುರುತರವಾದ ಯಾನ. ಪ್ರೊ. ನಂಗಲಿಯವರು ನುಡಿದಂತೆ, “‘ಕವಿರಾಜಮಾರ್ಗ’ವನ್ನು ಸಹೃದಯ ಸಮುದಾಯದ ಕನ್ನಡಿಯೆಂದೂ ಕೈದೀವಿಗೆಯೆಂದೂ ಪರಿಗಣಿಸಲಾಗಿದೆ ಇದಾದ ಮೇಲೆ ಒಂದು ಸಾವಿರ ವರ್ಷಗಳ ಅನಂತರ ಡಾ. ಎಲ್. ಬಸವರಾಜು ಅವರು ಒಬ್ಬಂಟಿಯಾಗಿ ನಿಃಶಬ್ದವಾಗಿ ನಡೆದ ಮೇಕೆ ಹಾದಿಯೇ ಇದೀಗ ತೇರೆಳೆವ ಹೆದ್ದಾರಿಯಾಗಿ ಪರಿಣಮಿಸಿದೆ. ಸಾಹಿತ್ಯ ಕ್ಷೇತ್ರದಲ್ಲಿ ಸಂಶೋಧಕರೆನಿಕೊಂಡವರು ತಂತಮ್ಮ ಜಾತಿಯ ಜಗದ್ಗುರುಗಳಂತೆ ಆಯಾ ಮತಗಳ ಮತಾಚಾರ್ಯರಂತೆ ಸಲ್ಲುತ್ತಾ, ಸುಳ್ಳು ಸೃಷ್ಟಿಗಳಿಂದ ಕೂಡಿದ ಬೂಸಲು ತತ್ತ್ವಗಳನ್ನು ಪ್ರಸಾರಮಾಡುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ. ಆದ್ದರಿಂದಲೇ, ನಮ್ಮ ಜಾತಿಪದ್ಧತಿಯ ಸಮಾಜದ ತದ್ರೂಪಿನಂತೆ ಸಂಶೋಧಕರು ಚಲಾವಣೆಯಾಗುತ್ತಾ ಜಾತೀಯ ಮತ್ತು ಮತೀಯ ಪೀಠಾಧೀಪತಿಗಳ ಪ್ರಭಾವಳಿಯಾಗಿ ಮೆರೆಯುತ್ತಿದ್ದಾರೆ. ಆದರೆ ಡಾ. ಎಲ್. ಬಸವರಾಜು ಅವರು ಈ ಜಾತಿ ಪದ್ಧತಿಯ ಸಮಾಜಕ್ಕೆ ಸಿಂಹಸ್ವಪ್ನವಾಗಿದ್ದುಕೊಂಡು ಜೈನ ಸಾಹಿತ್ಯ, ಶೈವ ಸಾಹಿತ್ಯ, ವೀರಶೈವ ಸಾಹಿತ್ಯ, ವೈದಿಕ ಸಾಹಿತ್ಯ, ಬೌದ್ಧ ಸಾಹಿತ್ಯವೆಂಬ ಸಂಕುಚಿತ ಸ್ಥಾವರಗಳಿಗೆ ಸಿಲುಕಿಕೊಳ್ಳದೆ, ಆ ಸ್ಥಾವರಗಳನ್ನು ತಮ್ಮ ಸತ್ಯಶುದ್ಧ ಕಾಯಕದಿಂದ ಜಂಗಮಗೊಳಿಸಿದ್ದಾರೆ. ‘ಅಂದು ಕವಿರಾಜಮಾರ್ಗ ಇಂದು ಬಸವರಾಜಮಾರ್ಗ’…”

ವಚನೋತ್ತರ ಯುಗಮಾನದಲ್ಲಿ ಬಸವಾದಿ ಶಿವಶರಣ ಗಣದ ಪ್ರಸಾದವನ್ನೇ ಸೇವಿಸುವ ನಿಷ್ಠೆಯಿಂದ ಅನುಭವಿಯಾಗಿ ಹದಿನಾಲ್ಕನೆಯ ಶತಮಾನದಲ್ಲಿ ಜೀವಿಸಿದ್ದ ಶಿವಗಣಪ್ರಸಾದಿ ಮಹಾದೇವಯ್ಯನು ಹನ್ನೆರಡನೆಯ ಶತಮಾನದ ಬಸವಾದಿ ಶರಣರು ನಡೆಯಿಸಿದ ಅನುಭಾವ ಗೋಷ್ಠಿಯಲ್ಲಿನ ಚಿಂತನ- ಮಂಥನ ಸಂಪತ್ತಿಗೊಂದು `ಸಂಪಾದನ ಕೃತಿಶಿಲ್ಪ’ವನ್ನು ನಿರ್ಮಿಸಿಕೊಟ್ಟು ‘ಶೂನ್ಯಸಂಪಾದನಾ ಪರಂಪರೆ’ಗೆ ನಾಂದಿ ಹಾಡಿದ್ದಾನೆ. ಬುದ್ಧನ ಕಾಲವಾದ ನಾಲ್ಕು ನೂರು ವರ್ಷಗಳ ನಂತರದಲ್ಲಿ ಅವನ ನಾಲ್ಕು ನೂರು ಜನ ಶಿಷ್ಯರು ಬೌದ್ಧ ತತ್ತ್ವಸಂಹಿತೆಯ ವಿಚಾರಗಳನ್ನು ಸಂಗ್ರಹಿಸಿಕೊಟ್ಟಂತೆ, ಮೌಖಿಕ ಪರಂಪರೆಯಲ್ಲಿದ್ದ ವೇದಗಳು ಕಾಲಾಂತರದಲ್ಲಿ ಸಂಗ್ರಹಿತಗೊಂಡು ಬರಹಕ್ಕೆ ಒಳಪಟ್ಟಂತೆ, ಬಸವಾದಿ ಶಿವಶರಣರ ಕಾಲದ ಎರಡು ನೂರು ವರ್ಷಗಳ ನಂತರದಲ್ಲಿ ಬಂದ ಮಹಾದೇವಯ್ಯ, ಅವರ ಅನುಭವ ಮಂಟಪದ ಆಧ್ಯಾತ್ಮಿಕ-ವೈಚಾರಿಕ-ತಾತ್ವಿಕ-ತಾರ್ಕಿಕ ವಿಚಾರಧಾರೆಗಳನ್ನು ಸಂಭಾಷಣೆಯ ರೂಪದಲ್ಲಿ ಸಂಗ್ರಹಿಸಿಕೊಟ್ಟದ್ದು ಭಾರತೀಯ ರಾಷ್ಟ್ರೀಯ ಲೋಕಕ್ಕೆ ವಿನೂತನ ಕಾಣಿಕೆ ಎಂಬುದು ವಿದ್ವಾಂಸರ ಅಭಿಮತವಾಗಿದೆ. ಹೀಗೆ, ಪ್ರಥಮ ಶೂನ್ಯಸಂಪಾದನಕಾರನಾದ ಶಿವಗಣಪ್ರಸಾದಿ ಮಹಾದೇವಯ್ಯನ ಮಾರ್ಗದಲ್ಲಿ ಶರಣರ ಅಭಿವ್ಯಕ್ತಿಗಳಿಗೆ ಡೆಮಾಕ್ರಟಿಕ್ ಆದ ವಿಶ್ವಮಾನವತೆಯ ಆಯಾಮವನ್ನು 19-20ನೇ ಶತಮಾನಗಳ ಅಂತ್ಯಾದಿಗಳಲ್ಲಿ ನೀಡಿದ ಮಹತ್ವಪೂರ್ಣ ವಿದ್ವಾಂಸರು ಪ್ರೊ. ಎಲ್. ಬಸವರಾಜು ಅವರು. ಹೀಗಾಗಿ ವಚನ ಸಂಪಾದನೆಯ ಚರಿತ್ರೆಯಲ್ಲಿ ಮಹಾದೇವಯ್ಯನ ಮಾರ್ಗವೆಂತೋ ಬಸವರಾಜಮಾರ್ಗವೂ ಮಹತ್ತರವಾದುದಾಗಿದೆ.

ಗ್ರಂಥಸಂಪಾದನಾ ಶಾಸ್ತ್ರಕ್ಕೆ ಹೀಗೆ ವಿಶ್ವಾತ್ಮಕವೂ ವೈಜ್ಞಾನಿಕ ಆದ ಅರ್ಥವಂತಿಕೆಯನ್ನು ದೊರಕಿಸಿಕೊಟ್ಟಿರುವ ವಿರಳ ವಿದ್ವಾಂಸರಲ್ಲಿ ಎಲ್.ಬಿ. ಅವರು ಅಗ್ರಮಾನ್ಯರು. ಅವರು ಸಾಧಿಸಿಕೊಂಡಿರುವ ಬಹುಶ್ರುತ ವ್ಯಕ್ತಿತ್ವವು ಗ್ರಂಥಸಂಪಾದನ ಕ್ರಿಯೆಯನ್ನು ಪ್ರಾಮಾಣಿಕ ಸಂಶೋಧನೆಯನ್ನಾಗಿ, ವಸ್ತುನಿಷ್ಠ ವಿರ‍್ಶಯನ್ನಾಗಿ, ಮೂಲಕೃತಿಕಾರನ ಸತ್ಯಪ್ರತಿಯನ್ನಾಗಿ ಬೆಳೆಯಿಸುತ್ತದೆ ಎಂಬುದಕ್ಕೆ ಶಿವಗಣಪ್ರಸಾದಿ ಮಹಾದೇವಯ್ಯನ ‘ಪ್ರಭುದೇವರ ಶೂನ್ಯಸಂಪಾದನೆ’ ಕೃತಿಯು ಜೀವಂತ ನಿದರ್ಶನವಾಗಿದೆ. ಎಲ್.ಬಿ. ಅವರು ಗರ‍್ತಿಸುವಂತೆ, 1969ಕ್ಕೆ ಹಿಂದೆ ‘ಶಿವಗಣಪ್ರಸಾದಿಯ ಪ್ರಭುದೇವರ ಶೂನ್ಯಸಂಪಾದನೆ’ಯನ್ನು ಕೇವಲ ಬೆರಳೆಣಿಕೆಯಷ್ಟು ವಿದ್ವಾಂಸರು ಓಲೆಯ ಅಥವಾ ಕಾಗದದ ಹಸ್ತಪ್ರತಿಗಳಲ್ಲಿದ್ದುದನ್ನು ಕೇಳಿದ್ದರು ಅಥವಾ ಕಂಡಿದ್ದರು ಮಾತ್ರ. ಪ್ರಚಲಿತವಿರುವ ಮಿಕ್ಕ ಎಲ್ಲಾ ಶೂನ್ಯಸಂಪಾದನೆಗಳಿಗೂ ಶಿವಗಣಪ್ರಸಾದಿಯ ಈ ಪ್ರಥಮ ಶೂನ್ಯಸಂಪಾದನೆಯೇ ಮೂಲ ಮತ್ತು ಮಾದರಿ. ಮತ್ತು ಲಿಂಗಧಾರಣೆಯಿಲ್ಲದೆಯೂ ಒಬ್ಬನು (ವೀರಶೈವ) ಶರಣನೆಂದು ಮಾನ್ಯನಾಗಬಲ್ಲನನ್ನು ವಂಥ ಒಂದು ಜಾತ್ಯತೀತ ಧೋರಣೆಯಿಂದ ಮಹಾದೇವಯ್ಯನ ಈ ಮೂಲ ಶೂನ್ಯಸಂಪಾದನೆ ವಿಶಿಷ್ಟವಾಗಿದೆ. ಧರ್ಮ ಸಮನ್ವಯದ ಜೀವನ ಮಾಡು ಇಲ್ಲವೇ ಮಡಿ ಎನ್ನುವಂಥ ಈ ವೈಚಾರಿಕ ಕಾಲಕ್ಕೆ ಓದಲು ತಕ್ಕ ಧರ್ಮಿಕ ಪಠ್ಯಗಳಲ್ಲಿ ಈ ಶೂನ್ಯಸಂಪಾದನೆ ಅಗ್ರಗಣ್ಯವಾಗಿದೆ ಎಂದರೆ ವಾಸ್ತವವೇ ಹೊರತು ಅತಿಶಯೋಕ್ತಿಯೇನೂ ಆಗದು.

ಕನ್ನಡದಲ್ಲಿ ಇದುವರೆಗೂ ದೊರೆತಿರುವ ನಾಲ್ಕು ಶೂನ್ಯ ಸಂಪಾದನೆಗಳಲ್ಲಿ ಪ್ರಥಮ ಶೂನ್ಯಸಂಪಾದನೆ ಶಿವಗಣಪ್ರಸಾದಿ ಮಹಾದೇವಯ್ಯನವರ ‘ಪ್ರಭುದೇವರ ಶೂನ್ಯಸಂಪಾದನೆ’. ಆದರೆ ಆಧುನಿಕ ಸಂದರ್ಭದಲ್ಲಿ ಶೂನ್ಯಸಂಪಾದನೆಗಳ ಪ್ರಕಟನೆಯ ಮೊದಲ ಪ್ರಯತ್ನ ಕೈಗೊಂಡವರು ಡಾ. ಫ. ಗು. ಹಳಕಟ್ಟಿ. ಶ್ರೀಯುತರು 1930ರಲ್ಲಿ ಗೂಳೂರು ಸಿದ್ಧವೀರನ ಶೂನ್ಯ ಸಂಪಾದನೆಯನ್ನು ಸಂಪಾದಿಸಿ ಪ್ರಕಟಿಸುವ ಮೂಲಕ ಈ ಅಪರ‍್ವ ಗ್ರಂಥಗಳ ಪ್ರಕಟಣೆಗೆ ನಾಂದಿ ಹಾಡಿದರು. ಅನಂತರ 1958ರಲ್ಲಿ ಪ್ರೊ. ಸಂ. ಶಿ. ಭೂಸನೂರಮಠ ಅವರು ಗೂಳೂರು ಸಿದ್ಧವೀರನ ಶೂನ್ಯ ಸಂಪಾದನೆಯನ್ನೇ ಆಧುನಿಕ ಗ್ರಂಥ ಸಂಪಾದನೆಯ ಹಿನ್ನೆಲೆಯಲ್ಲಿ ಪರಿಷ್ಕರಿಸಿ ಪ್ರಕಟಿಸಿದರಾದರೂ, ಪ್ರಥಮ ಶೂನ್ಯಸಂಪಾದನಾಕಾರನಾದ ಶಿವಗಣಪ್ರಸಾದಿ ಮಹಾದೇವಯ್ಯನ ಪ್ರಭುದೇವ ಶೂನ್ಯಸಂಪಾದನೆಯ ಬೆಳಕು ಕಂಡಿರಲಿಲ್ಲ. ಐತಿಹಾಸಿಕ ಮಹತ್ವದ ಈ ಕೃತಿ ವಚನಸಾಹಿತ್ಯದ ಗಂಭೀರ ಅಧ್ಯಯನ ಮತ್ತು ಸಂಶೋಧನೆಯಲ್ಲಿ ನಿರತರಾಗಿದ್ದ ಪ್ರೊ. ಎಲ್. ಬಸವರಾಜು ಅವರ ವಿದ್ವತ್ಪ್ರಭೆಗೆ ಗೋಚರಿಸಿತು. ತತ್ಫಲವಾಗಿ 1969ರಲ್ಲಿ ಈ ಕೃತಿರತ್ನ ಬೆಳಕು ಕಾಣುವ ಯೋಗ ಒದಗಿ ಬಂದಿತು.

ವಚನವಾಙ್ಮಯದ ಸಂವೇದನೆಯ ಸೂಕ್ಷ್ಮಗಳನ್ನು ಅರಗಿಸಿಕೊಂಡ ಡಾ. ಎಲ್. ಬಸವರಾಜು ಅವರು ಮಹಾದೇವಯ್ಯನ (ಮೊದಲ) ಶೂನ್ಯಸಂಪಾದನೆಯನ್ನು ಶಾಸ್ತ್ರೀಯವಾಗಿ ಪರಿಷ್ಕರಿಸಿ ಅನುಬಂಧ-1ರಲ್ಲಿ ಹಲಗೆಯಾರ್ಯನ ಶೂನ್ಯಸಂಪಾದನೆಯ ‘ನುಲಿಯ ಚಂದಯ್ಯಗಳ ಸಂಪಾದನೆ, ಅನುಬಂಧ-2 ಮತ್ತು 3ರಲ್ಲಿ ಕ್ರಮವಾಗಿ ಗುಮ್ಮಳಾಪುರದ ಸಿದ್ಧಲಿಂಗನ ಶೂನ್ಯಸಂಪಾದನೆಯಲ್ಲಿಯ ಆಯ್ದಕ್ಕಿ ಮಾರಯ್ಯಗಳ ಸಂಪಾದನೆ ಹಾಗೂ ‘ಗೋರಕ್ಷ ಸಂಪಾದನೆ’, ಅನುಬಂಧ-4 ಮತ್ತು 5ರಲ್ಲಿ ಕ್ರಮವಾಗಿ ಗೂಳೂರು ಸಿದ್ಧವೀರನ ಶೂನ್ಯಸಂಪಾದನೆಯಲ್ಲಿಯ ‘ಮೋಳಿಗೆ ಮಾರಯ್ಯಗಳ ಸಂಪಾದನೆ’ ಹಾಗೂ ‘ಘಟ್ಟಿದಾಳ ಮುದ್ದಣ್ಣಗಳ ಸಂಪಾದನೆ’ಗಳನ್ನು ಕೊಟ್ಟಿದ್ದಾರೆ. ಅನುಬಂಧ 6ರಲ್ಲಿ ವಚನಗಳ ಅಕಾರಾದಿಯನ್ನು, ಅನುಬಂಧ-7ರಲ್ಲಿ ಅರ್ಥಕೋಶ ಮತ್ತು ಗಮನಾರ್ಹ ಪದಗಳನ್ನು ಕೊಟ್ಟಿದ್ದಾರೆ.

ಶಿವಶರಣರ ವಚನಗಳ ಅನುಭಾವ ಮತ್ತು ಅಭಿವ್ಯಕ್ತಿ ಎರಡೂ ಅನನ್ಯ! ಶೂನ್ಯ ಸಂಪಾದನೆಯ ‘ಸೂತ್ರ’ದಲ್ಲಿ ವಚನಗಳನ್ನು ಸಂಯೋಜಿಸಿದ ಪರಿಯೂ ವಿಸ್ಮಯಕಾರಿಯೇ! ಮೊಟ್ಟಮೊದಲಿಗೆ ಶೂನ್ಯಸಂಪಾದನೆಯನ್ನು ರೂಪಿಸಿದವನು ಶಿವಗಣಪ್ರಸಾದಿ ಮಹಾದೇವಯ್ಯ. ಈ ಕೃತಿಯನ್ನು ಮತೀಯವಾಗಿ ತಮತಮಗೆ ತೋಚಿದಂತೆ ಹಲಗೆಯಾರ್ಯ-ಗುಮ್ಮಳಾಪುರದ ಸಿದ್ಧಲಿಂಗ-ಗೂಳೂರು ಸಿದ್ಧವೀರರು ಕಾಲಕಾಲಕ್ಕೆ ತಿದ್ದಿ ತಿದ್ದಿ, ಮೂರಾಗಿ ಮಾಡಿ, ತಮ್ಮದೆನಿಸಿಕೊಂಡರು. ವಿದ್ವಾಂಸರು ಗುರ್ತಿಸುವಂತೆ, ‘ಧರ್ಮದ ಮಿಥ್ಯಾದೃಷ್ಟಿಗಳೇ ಸಾಹಿತ್ಯದ ಓದಿಗೆ ಅವಜ್ಞಕಾರಿಯಾಗಿವೆ’ ಎಂದು ನಂಬಿರುವ ಎಲ್. ಬಸವರಾಜು ಅವರು ಮತಾಚಾರ್ಯರ ಪ್ರಭಾವಳಿಯಲ್ಲಿ ಮುಚ್ಚಿಹೋಗಿದ್ದ ಶೂನ್ಯಸಂಪಾದನೆಯ ಪ್ರಥಮ ಆವೃತ್ತಿಯನ್ನು ಬಯಲಿಗಿಡುವುದರ ಮೂಲಕ ಕೆಂಡವನ್ನು ಗೆದ್ದಲು ತಿನ್ನುವುದಿಲ್ಲವೆಂಬುದನ್ನು ಮನಗಾಣಿಸಿದ್ದಾರೆ’.

ಪ್ರಸ್ತುತ ಗ್ರಂಥದ ಪರಿಷೃತ ಆವೃತ್ತಿಯಲ್ಲಿ ಹೆಚ್ಚುವರಿಯಾಗಿ ಅನುಬಂಧ-7ರಲ್ಲಿ ನಾಲ್ಕು ಶೂನ್ಯ ಸಂಪಾದನೆಗಳ ವಚನಗಳ ಕ್ರಮಾಂಕವನ್ನು ಸಂಖ್ಯಾಶಾಸ್ತ್ರದ ಸ್ವರೂಪದಲ್ಲಿ ವಿನ್ಯಾಸಗೊಳಿಸಿಕೊಟ್ಟಿದ್ದಾರೆ. ಪ್ರೊ. ಎಲ್. ಬಸವರಾಜು ಅವರೇ ಹೇಳುವಂತೆ, ‘ಈ ವಿನ್ಯಾಸದಿಂದ ಮೊದಲನೇ ಶೂನ್ಯ ಸಂಪಾದನಾಕಾರನಾದ ಶಿವಗಣ ಪ್ರಸಾದಿಯನ್ನು ಹಲಗೆಯದೇವ ಮುಂತಾದವರು ಎಷ್ಟು ಅನುಸರಿಸಿರುವರು, ಎಲ್ಲಿ ಅವನನ್ನು ಬಿಟ್ಟು ಬೇರೆಯಾಗಿ ಮತ್ತೆ ಕೂಡಿಕೊಳ್ಳುವರು, ಯಾವ ಸನ್ನಿವೇಶಗಳ ಸ್ಥಳಾಂತರ ಮಾಡುವರು, ಯಾವ ವಚನಗಳನ್ನು ಬಿಡುವರು ಮತ್ತು ಎಷ್ಟು ವಚನಗಳನ್ನು ಹೆಚ್ಚಾಗಿ ಸೇರಿಸುವರು ಮುಂತಾದ ಅಂಶಗಳನ್ನು ಒಂದೇ ನೋಟಕ್ಕೆ ತಿಳಿಯಲು ಸಾಧ್ಯವಾಗುವುದು’. ನಾಲ್ಕು ಕೃತಿಗಳಲ್ಲಿ ಬರುವ ಪ್ರತೀ ವಚನಗಳನ್ನು ಇಂಥದೊಂದು ವಿಸ್ತೃತವಾದ ಅಂಕಿ-ಅಂಶಗಳ ವಿನ್ಯಾಸಕ್ಕೆ ಒಳಪಡಿಸಿರುವುದು. ಈ ನಾಲ್ಕು ಕೃತಿಗಳ ಬಗೆಗಿನ ಅವರ ಸೂಕ್ಷ್ಮ ಮತ್ತು ಸಮಗ್ರ ದೃಷ್ಟಿಯನ್ನು ಸ್ಪಷ್ಟಪಡಿಸುತ್ತದೆ. ಆಳವೂ ಶ್ರದ್ಧಾಪೂರಕ ಮತ್ತು ಅನ್ವೇಷಣಾತ್ಮಕವಾದ ಅಧ್ಯಯನ-ಮನನ-ಚಿಂತನಗಳಿಂದ ಮಾತ್ರ ಇಂಥ ಪ್ರಯೋಗಶೀಲತೆ ಸಾಧ್ಯವಾಗುತ್ತದೆ. ಅಲ್ಲದೆ ಕನ್ನಡ ಸಂಶೋಧನೆಯಲ್ಲಿ ಸಂಖ್ಯಾಶಾಸ್ತ್ರವನ್ನೂ ಅನ್ವಯಿಸಿಕೊಳ್ಳುವ ಹೊಸ ಸಂಶೋಧನಾ ವಿಧಾನಕ್ಕೂ ಮಾರ್ಗದರ್ಶಿಯಾಗಿದೆ. ಈ ದಿಸೆಯಲ್ಲಿ ಪ್ರೊ. ಎಲ್.ಬಸವರಾಜು ಅವರ ಪರಿಶ್ರಮ, ಅಧ್ಯಯನಶೀಲತೆ, ವೈಧಾನಿಕತೆಗಳ ಸ್ವರೂಪ, ಗ್ರಂಥಸಂಪಾದನಾ ಪ್ರತಿಭೆ, ವಿದ್ವತ್ತು ಪ್ರಯೋಜನ ದೃಷ್ಟಿ ಮತ್ತು ಪ್ರಯೋಗಶೀಲತೆಗಳ ಅನನ್ಯತೆಯಿಂದಾಗಿ ಬಹುಮೌಲಿಕವಾದುದಾಗಿದೆ.

Downloads

Published

05.11.2023

How to Cite

L. BASAVARAJU, & BYRAPPA M. (2023). ಶೂನ್ಯ ಸಂಪಾದನೆಯ ಮೂಲ ಮತ್ತು ಸ್ವರೂಪ. AKSHARASURYA, 2(12), 01 to 31. Retrieved from https://aksharasurya.com/index.php/latest/article/view/259

Issue

Section

ಹಿಂದಣ ಹೆಜ್ಜೆ. | TRODDEN PATH

Most read articles by the same author(s)