ಜನಪದ ಪದ್ಯಸಾಹಿತ್ಯ.

Authors

  • G. SHAM. PARAMASHIVAYYA
  • BYRAPPA M.

Keywords:

ಜಾನಪದ, ಪದ್ಯಸಾಹಿತ್ಯ, ಜೀ.ಶಂ.ಪರಮಶಿವಯ್ಯ, ಪ್ರೊ,ಕಾಳೇಗೌಡ ನಾಗವಾರ, ಕರ್ನಾಟಕ ಜಾನಪದ

Abstract

ಆಶಯ:

ಜಾನಪದ ಯಾವುದೇ ಸೀಮೆಗಳಿಲ್ಲದ ವಿಶ್ವಪದ. ಇದು ಜಾತ್ಯಾತೀತ, ಧರ್ಮಾತೀತ ಹಾಗೂ ಕಾಲಾತೀತ. ಸೀಮಾತೀತವಾದ ಜಾನಪದ ವಿಶ್ವವಿವೇಕವನ್ನು ಸಂಗ್ರಹಿಸಬೇಕಾದರೆ ಸಂಗ್ರಹಿಸುವ ವಿದ್ವಾಂಸರೂ ಸಹ ವಿಶ್ವವಿವೇಕವನ್ನು ತಮ್ಮ ಹೃದಯದೊಳಗೆ ಅಂತಸ್ಥ ಮಾಡಿಕೊಂಡವರಾಗಿರಬೇಕಾದುದು ಅವಶ್ಯಕ. ವಿಶ್ವಮಟ್ಟದಲ್ಲಿ ಜಾನಪದ ಸಂಪತ್ತಿನ ಬಗ್ಗೆ ವಿಶಿಷ್ಟವಾದ ಆಸ್ಥೆ ಮೂಡಿ, ಅದು ದೇಶಭಾಷೆಗಳಿಗೂ ವಿಸ್ತರಣೆಯಾಯಿತು. ಆಧುನಿಕ ಕನ್ನಡ ಸಂದರ್ಭದಲ್ಲಿ ಮಾಸ್ತಿ, ಬಿ.ಎಂ.ಶ್ರೀ, ಹಾ.ಮಾ.ನಾಯಕರಂಥವರು ಜಾನಪದವನ್ನು ಕುರಿತು ತಾತ್ವಿಕ, ಆನುಭಾವಿಕ ಮತ್ತು ಪ್ರಾಯೋಗಿಕ ನೆಲೆಗಳನ್ನು ಗುರುತಿಸುತ್ತಿರುವ ಹೊತ್ತಿಗೆ ಸರಿಯಾಗಿ ಕನ್ನಡದಲ್ಲಿ ಕೆಲವು ವಿದ್ವಾಂಸರು ಜಾನಪದ ಸಂಪತ್ತನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರು. ಇವರಲ್ಲಿ ಜೀ.ಶಂ.ಪರಮಶಿವಯ್ಯ ಅವರು ಪ್ರಮುಖರಾಗಿದ್ದಾರೆ. ಅದಾಗಲೇ ಜೀಶಂಪ ಅವರು ತಾವು ಹೋದ ಕಡೆಯಲ್ಲೆಲ್ಲ ಜಾನಪದವಾಗಿ ಅಭಿವ್ಯಕ್ತಗೊಳ್ಳುತ್ತಿದ್ದ ಕಾವ್ಯ, ಕಥೆ ಮೊದಲಾದವುಗಳನ್ನು ಸಂಗ್ರಹಿಸುವ ಕೆಲಸದಲ್ಲಿ ತಮ್ಮನ್ನು ತಾವು ಶ್ರದ್ಧೆಯಿಂದ ಸೀಮಾತೀತರಾಗಿ ತೊಡಗಿಸಿಕೊಂಡಿದ್ದರು. ಹೋದ ಕಡೆಯಲ್ಲೆಲ್ಲ ಜಾನಪದ ಕಲಾವಿದರನ್ನು ಸಂದರ್ಶಿಸಿ ಅವರು ಹೇಳಿದ ವಿವರಗಳನ್ನು ಟಿಪ್ಪಣಿ ಮಾಡಿಕೊಳ್ಳುತ್ತಾ, ರೆಕಾರ್ಡ್ ಮುಖಾಂತರ ದಾಖಲೀಕರಣ ಮಾಡಿಕೊಳ್ಳುತ್ತಾ, ಅದನ್ನು ಪ್ರಕಟಿಸುವ ನಿಟ್ಟಿನಲ್ಲಿ ತಮ್ಮದೇ ಆದ ಕಾಯಕಶ್ರದ್ಧೆಯನ್ನು ತೋರಿದವರು. ಈ ನಿಟ್ಟಿನಲ್ಲಿಯೇ ಅವರು ತದನಂತರದಲ್ಲಿ ಜಾನಪದ ಮಹಾಕಾವ್ಯಗಳ ಸಂಗ್ರಹಕ್ಕಾಗಿ ದುಡಿಯುತ್ತಾ ‘ಜಾನಪದ ಸಂಪತ್ತಿನ ಸಂಗ್ರಾಹಕ ಸೈನಿಕ’ನಂತೆ ಮುನ್ನಡೆದಿದ್ದರು. ವಿದ್ವಾಂಸರಾದ ಪ್ರೊ,ಕಾಳೇಗೌಡ ನಾಗವಾರ ಅವರು ಗುರ್ತಿಸುವಂತೆ, “ಕರ್ನಾಟಕ ಜಾನಪದ ಅಧ್ಯಯನ ಕ್ಷೇತ್ರದ ಅಪ್ಪಟ ದೇಶೀ ಪ್ರತಿಭೆಯಾಗಿದ್ದ ಡಾ.ಜೀ.ಶಂ. ಪರಮಶಿವಯ್ಯ ಅವರು ಭರತಖಂಡದ ಪ್ರಪ್ರಥಮ ಜಾನಪದ ಪ್ರಾಧ್ಯಾಪಕರೆಂಬ ಕೀರ್ತಿಗೆ ಪಾತ್ರರಾಗಿದ್ದರು. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕು ಅಂಬಲ ಜೀರಹಳ್ಳಿಯ ಸಾಮಾನ್ಯ ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದ ಇವರು, ಹಳ್ಳಿಗಾಡಿನ ಎಲ್ಲ ಬಗೆಯ ಕಷ್ಟ ಕೋಟಲೆಗಳು ಮತ್ತು ಸಾಂಸ್ಕೃತಿಕ ವೈವಿಧ್ಯಗಳನ್ನು ಅತ್ಯಂತ ಸೂಕ್ಷ್ಮವಾಗಿ ಬಲ್ಲವರಾಗಿದ್ದರು. ಸ್ವತಃ ಸೃಜನಶೀಲ ಲೇಖಕರೂ ವಿನಯ – ವಿದ್ವತ್ತು – ಸಜ್ಜನಿಕೆಗಳ ಸಾಕಾರ ಮೂರ್ತಿಯೂ ಆಗಿದ್ದ ಜೀಶಂಪ ಅವರು ಕನ್ನಡ ಜಾನಪದ ಅಧ್ಯಯನಕ್ಕೆ ಒಂದು ನಿರ್ದಿಷ್ಟ ದಿಕ್ಕು ತೋರಿದ ಮಹಾನ್ ಪ್ರತಿಭೆ. ಕೇವಲ ಗ್ರಂಥಾಲಯದ ಕೋಣೆಗಳಲ್ಲಿ ಮಾತ್ರ ಹೂತು ಹೋಗದೆ ಕರ್ನಾಟಕದ ಸಹಸ್ರಾರು ಹಳ್ಳಿಗಳನ್ನು ಕಾಲ್ನಡಿಗೆಯಲ್ಲಿ ಸುತ್ತಿ, ನೂರಾರು ಜನಪದ ಕಲಾವಿದರಿಗೆ ಆತ್ಮಸ್ಥೆರ್ಯ ತುಂಬಿ ಅಪಾರ ಜ್ಞಾನಸಂಪತ್ತನ್ನು ಸಂಗ್ರಹಿಸಿದ ಸಾಹಸಿ’ ಇವರು. ಕನ್ನಡ ಜಾನಪದ ಕ್ಷೇತ್ರಕ್ಕೆ ಹಲವಾರು ಮಹತ್ವದ ಕೃತಿಗಳನ್ನು ನೀಡಿರುವ ಡಾ. ಜೀಶಂಪ ಅವರು ತಮ್ಮ ಅಮೂಲ್ಯ ಉಪನ್ಯಾಸ ಮತ್ತು ಲೇಖನಗಳ ಮೂಲಕ, ಕರ್ನಾಟಕ ಜಾನಪದದ ಸತ್ವ ಮತ್ತು ಸೊಗಡನ್ನು ದೇಶ-ವಿದೇಶಗಳಲ್ಲಿ ಸಮರ್ಥವಾಗಿ ಜಾಗತಿಕ ಮಟ್ಟದಲ್ಲಿ ಪರಿಚಯಿಸಿದ ವಿದ್ವಾಂಸರಾಗಿದ್ದರು.” ಹೀಗೆ, ಅಕ್ಷರಲೋಕಕ್ಕೆ ಮಿಗಿಲಾದ ಮೌಖಿಕ ಪರಂಪರೆಯಲ್ಲಿರುವ ಹಾಗೂ ಅಗಾಧವಾದ ನೆಲದರಿವಿನ ಜತೆಗೆ ಮೂಡಿಬಂದಿರುವ ‘ಮಂಟೇಸ್ವಾಮಿ ಕಾವ್ಯ’ದಂಥ ಅನೇಕ ಜಾನಪದ ಕಾವ್ಯಗಳನ್ನು ಸಂಗ್ರಹಿಸುವ ಮಹೋನ್ನತ ಕಾರ್ಯಕ್ಕೆ ಜೀಶಂಪ ಅವರು ಮುಂದಡಿಯಿಟ್ಟಿದ್ದು ನಿಜಕ್ಕೂ ಐತಿಹಾಸಿಕವಾದುದು.

ಜೀ.ಶಂ.ಪ ಅವರು ತಮ್ಮ ಅನುಭವಾತ್ಮಕ ಸಂಶೋಧನಾಯಾನದಲ್ಲಿ ಕರ್ನಾಟಕದ ಉದ್ದಗಲಕ್ಕೂ ಸಂಚರಿಸಿ ಮಾಹಿತಿಯನ್ನು ದೊರಕಿಸಿಕೊಂಡು ಅದರ ಅಧ್ಯಯನವನ್ನು ಆಳವಾಗಿ ಕೈಗೊಂಡು ಹಲವಾರು ಮಹತ್ವಪೂರ್ಣ ಕೃತಿಗಳನ್ನು ರಚಿಸಿದ್ದಾರೆ. ಒಳ್ಳೆಯ ಕ್ಷೇತ್ರಕಾರ್ಯಕರ್ತರಾಗಿ, ಅಧ್ಯಯನಕಾರರಾಗಿ, ಸಂಶೋಧಕರಾಗಿ ಅವರು ನಡೆಸಿರುವ ಅಧ್ಯಯನಗಳು ಜಾನಪದ ಕ್ಷೇತ್ರಕ್ಕೆ ಪ್ರಮಾಣಗ್ರಂಥಗಳಾಗಿ ಪರಿಣಮಿಸಿವೆ. ಕರ್ನಾಟಕ ವೃತ್ತಿಗಾಯಕರ ಬಗೆಗೆ ಅವರು ನಡೆಸಿರುವ ಕ್ಷೇತ್ರಕಾರ್ಯ – ಅಧ್ಯಯನ ಅವರ ಜಾನಪದ ಆಸಕ್ತಿ ಹಾಗೂ ಶ್ರದ್ಧೆಗೆ ಉತ್ತಮ ನಿದರ್ಶನವಾಗಿದೆ. “ಜನಪದ ಪದ್ಯಸಾಹಿತ್ಯ”ವೆಂಬ ಈ ಸಂಶೋಧನ ಲೇಖನವು ವಿದ್ವತ್‌ಪೂರ್ಣವಾದುದು. ಜಾನಪದೀಯ ವೈಶ್ವಿಕ ಸಂಗತಿಗಳನ್ನೂ ಪ್ರಾದೇಶಿಕ ಅಸ್ಮಿತೆಯನ್ನೂ ಸೂಕ್ಷ್ಮವಾಗಿ ಅವಲೋಕಿಸುತ್ತಾ ಪದ್ಯಸಾಹಿತ್ಯದ ಪ್ರಾಯೋಗಿಕ ನಿರೂಪಣೆಗಳನ್ನು ಮೌಲ್ಯೀಕರಿಸಿದ್ದಾರೆ. ಜಾನಪದ ಪದ್ಯಸಾಹಿತ್ಯ ಕುರಿತಾದ ತಾತ್ವಿಕ ಪ್ರವೇಶವನ್ನು ಜಗತ್ತಿನ ಜಾನಪದ ಸಂಶೋಧಕರ ಕಣ್ಣೋಟದಲ್ಲಿ ಕಟ್ಟಿಕೊಡುತ್ತಾ, ಕನ್ನಡ ನೆಲದ ಕಣ್ಣೋಟದಲ್ಲಿ ಅನುಸಂಧಾನಗೊಳಿಸುತ್ತಾ ಕಲಾಪೂರ್ಣವೂ ಮನೋಜ್ಞವೂ ಆದ ವೈವಿಧ್ಯಮಯ ಜಾನಪದ ಪದ್ಯಸಾಹಿತ್ಯವನ್ನು ಶೋಧನೆಗೆ ಒಳಪಡಿಸಿದ್ದಾರೆ. ಇದು ಅಂದಿನ ಜಾನಪದ ಸಂಶೋಧನೆಗೆ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಲ್ಲದೇ, ಇಂದಿನ ದೇಸಿಸಂಶೋಧನೆಗೂ ಮಹಾಮಾರ್ಗವಾಗಿದೆ.

Downloads

Published

05.09.2023

How to Cite

G. SHAM. PARAMASHIVAYYA, & BYRAPPA M. (2023). ಜನಪದ ಪದ್ಯಸಾಹಿತ್ಯ. AKSHARASURYA, 2(10), 01 to 29. Retrieved from https://aksharasurya.com/index.php/latest/article/view/222

Issue

Section

ಹಿಂದಣ ಹೆಜ್ಜೆ. | TRODDEN PATH

Most read articles by the same author(s)