ಕವಿರಾಜಮಾರ್ಗಕ್ಕೆ ಹಿಂದಿನ ಕನ್ನಡ ಸಾಹಿತ್ಯ

Authors

  • M. CHIDANANDA MURTHY
  • BYRAPPA M.

Keywords:

ಕವಿರಾಜಮಾರ್ಗ, ಕನ್ನಡ, ಸಾಹಿತ್ಯ, ಶಾಸನ, ಹನ್ಮಿಡಿ, ಅಸಗ, ಗುಣನಂದಿ, ಶ್ರೀವಿಜಯ

Abstract

ಕನ್ನಡ ಸಂಶೋಧನಾ ಕ್ಷೇತ್ರದ ಮೇರು ವಿದ್ವಾಂಸರಾದ ಡಾ.ಎಂ.ಚಿದಾನಂದಮೂರ್ತಿ ಅವರು ಸದಾಸ್ಮರಣೀಯರು. ಯುಗಪ್ರವರ್ತನೆಯ ಸಂಶೋಧಕ, ಸಂಶೋಧನೆಯ ಸಂಶೋಧಕ, ಸಂಸ್ಕೃತಿ ಸಂಶೋಧಕ, ತೀ.ನಂ.ಶ್ರೀ. ಉತ್ತರಾಧಿಕಾರಿ ಎಂಬೆಲ್ಲ ಹೊಗಳಿಕೆಗೆ ಪಾತ್ರರಾದವರು. ಜನಪ್ರಿಯ ಪ್ರಾಧ್ಯಾಪಕರಾಗಿ ಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯಗಳ ಬಗೆಗಿನ ತಮ್ಮ ಅಸಾಧಾರಣವಾದ ಅಪರೂಪದ ಪಾಂಡಿತ್ಯ ಮತ್ತು ಆಲೋಚನೆಗಳಿಂದ, ಸರಳವಾದ ಮತ್ತು ವಿಷಯ ಪರಿಷ್ಕೃತವಾದ ಬೋಧನಾ ವಿಧಾನದಿಂದ ಸಹಸ್ರಾರು ವಿದ್ಯಾರ್ಥಿಗಳಲ್ಲಿ ಪ್ರಾಮಾಣಿಕ ಅಧ್ಯಯನ ಮತ್ತು ಶಿಸ್ತುಬದ್ಧವಾದ ಸಂಶೋಧನೆಯ ಜೀವದ್ರವ್ಯವನ್ನು ತುಂಬಿದವರು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಷಾವಿಜ್ಞಾನ ಭೂಮಿಕೆಯಲ್ಲಿ ಶೋಧನೆಗಳನ್ನು ನಡೆಸಿ ಪ್ರಕೀರ್ತಿತರಾದವರು. ಭಾಷೆ, ವ್ಯಾಕರಣ, ಸ್ಥಳನಾಮ, ಛಂದಸ್ಸು, ಗ್ರಂಥ ಸಂಪಾದನೆ, ಸಾಹಿತ್ಯ ಚರಿತ್ರೆ, ಜಾನಪದ, ಶಾಸನ, ಕರ್ಣಾಟಕ ಇತಿಹಾಸ, ಸಂಸ್ಕೃತಿ ಹೀಗೆ ಬಹುಕ್ಷೇತ್ರಗಳಲ್ಲಿ ಸಂಶೋಧನೆ ಕೈಗೊಂಡು ಮಹತ್ವದ ಗ್ರಂಥಗಳನ್ನು ಕನ್ನಡ ಸಾರಸ್ವತಲೋಕಕ್ಕೆ ಅರ್ಪಿಸಿದವರು.

ಚಿ.ಮೂ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ (ಇಂದು ದಾವಣೆಗೆರೆ ಜಿಲ್ಲೆಗೆ ಸೇರಿದೆ) ಹಿರೇಕೋಗಲೂರಿನವರು, ೧೯೩೧ರ ಮೇ ೧೦ರಂದು ಜನಿಸಿದವರು. ನಾಡಿಗೇರ ಗೋವಿಂದರಾಯ, ವಿ.ಎ.ತ್ಯಾಗರಾಜನ್, ಎಲ್.ಬಸವರಾಜು, ಜಿ.ಎಸ್.ಶಿವರುದ್ರಪ್ಪ ಅವರಂಥ ಆ ಕಾಲದ ಶ್ರೇಷ್ಠ ಅಧ್ಯಾಪಕ ವೃಂದದ ಬೋಧನೆಯ ಬೆಳಕಲ್ಲಿ ಅರಳಿದ ಚೇತನ ಚಿ.ಮೂ ಅವರು. ಕುವೆಂಪು, ಡಿ.ಎಲ್.ನರಸಿಂಹಚಾರ್, ಕ.ವೆಂ.ರಾಘವಾಚಾರ್, ಎಸ್.ಶ್ರೀಕಂಠಶಾಸ್ತ್ರಿಗಳಂಥ ಮಹಾ ಅಧ್ಯಾಪಕರ ಮಾರ್ಗದರ್ಶನದಲ್ಲಿ ಬೆಳೆಯುತ್ತಾ ಕನ್ನಡದ ಪ್ರಸಿದ್ಧ ವಿದ್ವಾಂಸರಾದರು. ಎಂ.ಎ. ಓದುವಾಗಲೇ ಡಿ.ಎಲ್. ನರಸಿಂಹಾಚಾರ್ಯರ ಸೂಚನೆಯ ಮೇರೆಗೆ ಪಂಪನಿಗೆ ಹಿನ್ನೆಲೆಯಾಗಿದ್ದ ಸಾಮಾಜಿಕ ಬದುಕನ್ನು ಶಾಸನಗಳನ್ನು ಆಧರಿಸಿ ಪುನಾರಚಿಸುವ ಪ್ರಯತ್ನಕ್ಕೆ ತೊಡಗಿದರು. ಅದರ ಫಲವಾಗಿ ಬಂದ ಲೇಖನ ‘ಪಂಪಕವಿ ಮತ್ತು ಮೌಲ್ಯಪ್ರಸಾರ’. ಈ ಮೂಲಕ ಶಾಸನಕ್ಷೇತ್ರದೆಡೆಗೆ ಹೊರಳಿದ ಚಿ.ಮೂ ಅವರು ಮುಂದೆ, ‘ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ’ ಎಂಬ ಮಹಾಪ್ರಬಂಧ ಸಿದ್ಧಪಡಿಸಿ ತೀ.ನಂ.ಶ್ರೀಕಂಠಯ್ಯ ಅವರ ಮಾರ್ಗದರ್ಶನದಲ್ಲಿ ಪಿಎಚ್.ಡಿ ಪದವಿ(೧೯೬೪) ಪಡೆದರು. ಈ ಮಹಾಪ್ರಬಂಧವು ಕನ್ನಡ ಸಂಶೋಧನ ಕ್ಷೇತ್ರದ ಬಹುಮಹತ್ವದ ಆಕರಗ್ರಂಥವಾಗಿ ಪ್ರಸಿದ್ಧಿ ಪಡೆದಿದೆ.

“ನನ್ನ ಆತ್ಮತ್ಯಾಗ ಎಲ್ಲರ ಹೃದಯಗಳಲ್ಲಿ ವಿದ್ಯುತ್ ಸಂಚಾರವುಂಟುಮಾಡಲಿ, ಹೆಚ್ಚಿನ ತ್ಯಾಗಕ್ಕೆ ಅವರನ್ನು ಸಿದ್ಧಗೊಳಿಸಲಿ” ಎಂದು ಕನ್ನಡಿಗರಲ್ಲಿ ಸ್ವಾಭಿಮಾನ ಮತ್ತು ಜಾಗೃತಿಯನ್ನು ಮೂಡಿಸುವ ಸಲುವಾಗ ತಮ್ಮ ಪ್ರಾಣತ್ಯಾಗಕ್ಕೂ ಸಿದ್ಧರಾಗಿ “ಕನ್ನಡ ಗರುಡ”ರೆನಿಸಿಕೊಂಡ ಧೀರ ವ್ಯಕ್ತಿತ್ವದವರು ಚಿ.ಮೂ. ವಿದ್ವಾಂಸರಾದ ಎನ್.ಎಸ್.ತಾರಾನಾಥರು ಹೇಳುವಂತೆ, “ಕನ್ನಡ-ಕನ್ನಡಿಗ-ಕರ್ನಾಟಕತ್ವಗಳಿಗೋಸ್ಕರ ಯಾವುದೇ ಹಿಂಜರಿಕೆ-ಭಯಗಳಿಲ್ಲದೆ, ಅಳುಕು-ಥಳುಕುಗಳಿಲ್ಲದೆ ಹೀಗೆ ಪ್ರಾಣತ್ಯಾಗದ ಧೀರ ನಿರ್ಧಾರ ಕೈಗೊಂಡ ಅಪೂರ್ವ ಕನ್ನಡಮೂರ್ತಿ ಚಿದಾನಂದಮೂರ್ತಿ”ಯವರು. ಕನ್ನಡಪರ ಎಚ್ಚರ ಮೂಡಿಸುವ, ಕನ್ನಡಕ್ಕಾಗಿ ತಮ್ಮ ಆಯಸ್ಸುಗಳನ್ನು ಮೀಸಲಿಡುವ, ಕನ್ನಡಕ್ಕಾಗಿ ಅಹರ್ನಿಶಿ ದುಡಿಯುವ ದೃಢ ಸಂಕಲ್ಪ ಕೈಗೊಂಡು ಜೀವನ ಪರ್ಯಂತ ಕನ್ನಡಧ್ಯಾನದಲ್ಲೇ ತಲ್ಲೀನನಾಗಿದ್ದ ಶ್ರೇಷ್ಠ ಪ್ರಾಧ್ಯಾಪಕರು. ಇದಕ್ಕೆಂದೇ ಚಿ.ಮೂ. ಅವರು ಹಂಪಿಯ ಕನ್ನಡ ಭುವನೇಶ್ವರಿಯ ಮುಂದೆ ಪ್ರತಿಜ್ಞೆ ಕೈಗೊಂಡರು. ಈ ನಿಟ್ಟಿನಲ್ಲಿ ಸಾಹಿತಿಗಳ ಬಳಗ ಕೂಡಿಸಿದರು; ಕನ್ನಡ ಶಕ್ತಿ ಕೇಂದ್ರ ಕಟ್ಟಿದರು. ಕನ್ನಡ ಮಾಧ್ಯಮ, ಕನ್ನಡ ಶಾಲೆ, ಕನ್ನಡಿಗರಿಗೆ ಉದ್ಯೋಗ, ಕರ್ನಾಟಕದ ನೆಲಜಲಗಳ ರಕ್ಷಣೆ, ಹಂಪಿ ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆ, ಕನ್ನಡಕ್ಕೆ ಶಾಸ್ತ್ರೀಯ ಕನ್ನಡ ಸ್ಥಾನಮಾನ ಮೊದಲಾದ ಕನ್ನಡಮುಖಿ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ೧೯೮೫ರಲ್ಲಿ ಕಾಲ್ನಡಿಗೆಯ ಮೂಲಕ ಬೆಂಗಳೂರಿನಿಂದ ಹಂಪಿಗೆ ಪ್ರಯಾಣ ಮಾಡುವ ಸಂದರ್ಭದಲ್ಲಿ ಚಿ.ಮೂ ಅವರಿಗೆ ತಂಜಾವೂರಿನಲ್ಲಿ ತಮಿಳು ವಿಶ್ವವಿದ್ಯಾನಿಲಯ ಸ್ಥಾಪನೆಯಾಗಿರುವಂತೆ, ಕನ್ನಡಕ್ಕೆ ಏಕೆ ಒಂದು ಪ್ರತ್ಯೇಕ ವಿಶ್ವವಿದ್ಯಾನಿಲಯ ಅಸ್ತಿತ್ವಕ್ಕೆ ಬರಬಾರದು ಎನಿಸಿತು. ಕರ್ನಾಟಕದ ಭಾಷೆ, ಸಾಹಿತ್ಯ, ಇತಿಹಾಸ, ಭೂಶೋಧ, ಲಲಿತಕಲೆ, ಸಮಾಜಶಾಸ್ತ್ರ, ಜಾನಪದ, ಅರ್ಥಶಾಸ್ತ್ರ, ವಿಜ್ಞಾನ, ಸಮೂಹ ಮಾಧ್ಯಮ ಮುಂತಾದವುಗಳ ಅಧ್ಯಯನ ನಡೆಯಲು ಪೂರ್ಣಪ್ರಮಾಣದ ಉನ್ನತ ವಿಶ್ವವಿದ್ಯಾನಿಲಯವನ್ನು ಅಸ್ತಿತ್ವಕ್ಕೆ ವರುವ ನಿಟ್ಟಿನಲ್ಲಿ ಕ್ರಿಯಾಶೀಲರಾಗಿ, ಸಾಹಿತಿಗಳ ಕಲಾವಿದರ ಬಳಗದ ಮೂಲಕ ಆಗಿನ ಮುಖ್ಯಮಂತ್ರಿ, ಸಚಿವ ಸಂಪುಟ, ಶಾಸಕರ, ಮೇಲೆ ಒತ್ತಾಯ ತಂದು ಅದರ ಸ್ಥಾಪನೆಗೆ ಓಡಾಡಿ ಮುಂದಿನ ಒಂದೆರಡು ವರ್ಷಗಳಲ್ಲಿ ಅದರ ಕಾರ್ಯಾರಂಭಕ್ಕೆ ಕಾರಣರಾದರು. ಹೀಗೆ, ಕನ್ನಡದ ಕಾರಣಕ್ಕಾಗಿ ಹಾಗೂ ಸಂಶೋಧನೆಗಾಗಿ ಭಾರತ, ಕರ್ನಾಟಕದ ಬೇರೆ ಬೇರೆ ಪ್ರಾಂತ್ಯಗಳಲ್ಲಿ ಅವರು ವ್ಯಾಪಕವಾದ ಪರ್ಯಟನೆ ಮಾಡಿದರು. ಜೊತೆಗೆ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಇಟಲಿ, ಗ್ರೀಸ್, ಈಜಿಪ್ಟ್, ಥೈಲ್ಯಾಂಡ್, ಜಪಾನ್, ಹವಾಯ್, ಸ್ವಿಟ್ಜರ್ಲೆಂಡ್ ಮುಂತಾದ ದೇಶಗಳನ್ನು ಅವರು ಸುತ್ತಿದರು. ಬರ್ಕ್ಲಿಯಲ್ಲಿ ನಡೆದ ಅಮೆರಿಕನ್ ಓರಿಯಂಟಲ್ ಸೊಸೈಟಿಯ ವಾರ್ಷಿಕಾಧಿವೇಶನ, ಫಿಲಿಡೆಲ್ಫಿಯಾದಲ್ಲಿ ನಡೆದ ಏಷಿಯನ್ ಸೆಮಿನಾರ್, ಸ್ಟಾನ್ಫೋರ್ಡ್ ವಿಶ್ವವಿದ್ಯಾನಿಲಯದ ಐತಿಹಾಸಿಕ ಭಾಷಾವಿಜ್ಞಾನ ಸಮ್ಮೇಳನಗಳಲ್ಲಿ ಅವರು ಪ್ರಬಂಧ ಮಂಡಿಸಿದ್ದಾರೆ. ಈ ಎಲ್ಲವೂ ಅವರ ನಿರಂತರ ಅಧ್ಯಯನಶೀಲತೆ ಮತ್ತು ಕನ್ನಡಪರತೆಗೆ ಹಿಡಿದ ಕನ್ನಡಿಯಾಗಿವೆ.

ಚಿ.ಮೂ ಅವರನ್ನು ನೆನಯುವಾಗಲೆಲ್ಲ ನೆನಪಾಗುವ ಅವರ ಸಂಶೋಧನೆಯ ಮೇರುಗ್ರಂಥ ‘ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ’ ಎಂಬ ಮಹಾಪ್ರಬಂಧ. ಇಲ್ಲಿ, ಚಿ.ಮೂ ಅವರು ಶಾಸನಗಳಿಂದ ಮೊತ್ತಮೊದಲ ಬಾರಿಗೆ ಇಲ್ಲಿ ನೂರಾರು ವಿಷಯಗಳ ಮೇಲೆ ಅವರು ಬೆಳಕು ಚೆಲ್ಲಿದ್ದಾರೆ. ವೇಳೆವಾಳಿ, ಲೆಂಕವಾಳಿ, ಸಹಗಮನ, ಸಮಾಧಿಮರಣ, ಅಗ್ರಹಾರ, ಬ್ರಹ್ಮಪುರಿ, ಘಟಕಾಸ್ಥಾನ, ತುರುಗೊಳ್, ಪೆಣ್ಬುಯ್ಯಲ್, ಊರಳಿವು, ಕಾಪಾಲಿಕ, ಕಾಳಾಮುಖ, ಕಾಳ, ಲಾಕುಳಶೈವ, ಗುರುವ ಮುಂತಾದ ನೂರಾರು ವಿಷಯಗಳ ಬಗ್ಗೆ ಅವರು ಚರ್ಚಿಸಿದ್ದಾರೆ. ಜೈನ, ಬೌದ್ಧ, ಶೈವ, ವೈಷ್ಣವ ಧರ್ಮಗಳ ಬಗ್ಗೆ ಕರ್ಣಾಟಕದಲ್ಲಿ ಅವುಗಳ ಆಗಮನ, ಹಿನ್ನೆಲೆ, ಉಚ್ಛ್ರಾಯ ಕಾಲಗಳ ಬಗ್ಗೆ ಅವರ ಶೋಧಗಳು ಇಂದಿಗೂ ಅಮೂಲ್ಯ ಹಾಗೂ ಸ್ವೀಕಾರಾರ್ಹವೆನಿಸಿವೆ. “ಇದೊಂದು ಸಂಸ್ಕೃತಿಯ ವಿಶ್ವಕೋಶ….ಈ ಕೃತಿ ಚಿದಾನಂದಮೂರ್ತಿಯವರ ನಿರ್ದುಷ್ಟವಾದ ಪಾಂಡಿತ್ಯಕ್ಕೂ ಸತ್ಯನಿಷ್ಠೆಗೂ ಪ್ರಖರ ಪ್ರತಿಭೆಗೂ ತಲಸ್ಪರ್ಶಿಯಾದ ವೈಚಾರಿಕ ಸಾಮರ್ಥ್ಯಕ್ಕೂ ನಿದರ್ಶನವಾಗಿದೆ” ಎಂಬ ದೇ.ಜವರೇಗೌಡರ ಅಭಿಪ್ರಾಯ ಸಮುಚಿತವಾದುದಾಗಿದೆ.

ಕನ್ನಡ ನಾಡು-ನುಡಿ ಸಂಸ್ಕೃತಿಯಲ್ಲಿ ಮಹೋನ್ನತವಾದ ಸ್ಥಾನ ಪಡೆದಿರುವ ವಚನಯುಗ, ವಚನೋತ್ತರ ಯುಗದ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಸಂಗತಿಗಳನ್ನು ಸಾದ್ಯಂತವಾಗಿ ಶೋಧನೆಗೆ ಒಳಗುಮಾಡಿರುವ ಚಿ.ಮೂ ಅವರ ಸಂಶೋಧನಾ ಕಾರ್ಯವು ಇಂದಿಗೂ ಆಕರಸಾಮಗ್ರಿಯಾಗಿ ರೂಪುಗೊಂಡಿದೆ. ವಚನ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಚಿದಾನಂದಮೂರ್ತಿಗಳು ಪ್ರಕಟಿಸಿದ ಮೊದಲನೆಯ ಪುಸ್ತಕ ‘ಶೂನ್ಯಸಂಪಾದನೆ’ಯನ್ನು ಕುರಿತಾದುದು. ಶೂನ್ಯಸಂಪಾದನೆಗಳಿಗೆ ಸಂಬಂಧಪಟ್ಟಂತೆ ಇಂದಿಗೂ ಅದೊಂದು ಮೌಲಿಕ ಆಕರ ಗ್ರಂಥ. ನಾಲ್ಕು ಶೂನ್ಯ ಸಂಪಾದನೆಗಳು, ಅವುಗಳ ಪರಿಷ್ಕರಣ ಕಾರಣ, ಸಿದ್ಧರಾಮನ ಲಿಂಗದೀಕ್ಷೆಯ ಪ್ರಸಂಗ, ಅಲ್ಲಮನ ಜನನ ವೃತ್ತಾಂತ ಮೊದಲಾದ ಸಂಗತಿಗಳನ್ನು ಚಿ.ಮೂ ಅವರು ಇಲ್ಲಿ ವಿದ್ವತ್ಪೂರ್ಣವಾಗಿ ನಿರೂಪಿಸಿದ್ದಾರೆ. ಅಕ್ಕಮಹಾದೇವಿಯ ವೃತ್ತಾಂತವನ್ನು ತುಲನಾತ್ಮಕವಾಗಿ ಪರಿಶೀಲಿಸಿದ್ದಾರೆ. ಈ ಗ್ರಂಥದ ಬಹುಪಾಲು ಬರವಣಿಗೆಯನ್ನು ಹಸ್ತಪ್ರತಿಗಳನ್ನು ಅವಲಂಬಿಸಿ ಮಾಡಿದ್ದು ಒಂದು ವಿಶೇಷತೆ. ಈ ಪುಟ್ಟಕೃತಿಯು ಅನಂತರದ ಕಾಲದಲ್ಲಿ ಶೂನ್ಯಸಂಪಾದನೆಗಳ ಬಗ್ಗೆ ಹೆಚ್ಚಿನ ಸಂಶೋಧನೆಗೆ, ವ್ಯಾಪಕ ಅಧ್ಯಯನಕ್ಕೆ ಕಾರಣವಾಯಿತೆಂಬುದು ಚಾರಿತ್ರಿಕ ಸಂಗತಿಯಾಗಿದೆ. ಬೆಂಗಳೂರು ವಿಶ್ವವಿದ್ಯಾನಿಲಯದ ಸಾಮಾನ್ಯರಿಗೆ ಸಾಹಿತ್ಯ ಚರಿತ್ರೆ ಶ್ರೇಣಿಗೆ ಬರೆದ ‘ವಚನ ಸಾಹಿತ್ಯ’ ಕೃತಿಯೂ ಈವರೆಗೆ ಕನ್ನಡದಲ್ಲಿ ಆ ಪ್ರಕರಣದ ಬಗ್ಗೆ ಬಂದಿರುವ ಮುಖ್ಯಕೃತಿಗಳಲ್ಲಿ ಒಂದೆನಿಸಿದೆ.

ವಚನಗಳನ್ನೇ ಆಧಾರವಾಗಿಟ್ಟುಕೊಂಡು ಅಲ್ಲಮನ ಸಾಧಕ ಜೀವನ, ಸಿದ್ಧರಾಮನ ಅಂತರಂಗದ ಚಲನವಲನಗಳು, ಬಸವಣ್ಣನವರ ಮಾನವತಾವಾದ, ಅಲ್ಲಮನ ವಚನಗಳ ಅಂಕಿತ ಗೊಗ್ಗೇಶ್ವರ, ಬಳ್ಳಿಗಾವೆಯಲ್ಲಿ ಇರುವ ಅವಶೇಷಗಳೇ ಅವನ ಸಂಬಂಧದ ಗೊಗೋಶ್ವರಾಲಯ, ಅನಿಮಿಷನ ಗುಹೆ, ಅಕ್ಕನ ಗಂಡ ಕೌಶಿಕ ಇತಿಹಾಸದ ಕಸಪಯ್ಯನಾಯಕ ಎಂಬುದನ್ನು ಚಿ.ಮೂ ಅವರು ಪ್ರತಿಪಾದಿಸಿದ್ದಾರೆ. ಹಂಪೆಯಲ್ಲಿ ಹರಿಹರನ ವಾಸಸ್ಥಾನ, ಹರಿಹರನ ಹೂದೋಟ, ಚಾಮರಸನ ಆಶ್ರಯ, ಬೇಲೂರಿನಲ್ಲಿ ರಾಘವಾಂಕನ ಸಮಾಧಿ, ಪಾಲ್ಕುರಿಕೆ ಸೋಮನಾಥನ ಸಮಾಧಿಗಳನ್ನು ಕ್ಷೇತ್ರಶೋಧ ಮಾಡಿ ಗುರುತಿಸಿದ್ದಾರೆ. ‘ಲಿಂಗಾಯತ ಅಧ್ಯಯನಗಳು’, ‘ಹೊಸತು ಹೊಸತು’ ಈ ಸಂಬಂಧವಾದ ಅವರ ಬಹುಪಾಲು ಲೇಖನಗಳನ್ನು ಸಂಕಲಿಸಿಕೊಂಡಿವೆ. ‘ವಚನಶೋಧ ೧ ಮತ್ತು ೨’ ಸಂಪುಟಗಳಲ್ಲಿ ಮಹತ್ವಪೂರ್ಣ ಲೇಖನಗಳಿದ್ದು, ದಲಿತವರ್ಗದ ಮೇರು ವಿದ್ವಾಂಸನಾದ ಉರಿಲಿಂಗಪೆದ್ದಿಯ ಜ್ಞಾನ ವ್ಯಾಸಂಗ ಕುರಿತು, ಬಸವಣ್ಣನವರ ಮನೆಯಲ್ಲಿ ಸೇವಕಿಯಾಗಿದ್ದ ಗೌರವ್ವ, ಅಜಗಣ್ಣನ ವಚನಗಳ ಅಂಕಿತ ಮಹಾಘನ ಸೋಮೇಶ್ವರ ಎಂಬುದನ್ನು ಮೊದಲಬಾರಿಗೆ ಶೋಧಿಸಿದ್ದಾರೆ. ರೇಚವ್ವ, ರೇಕಮ್ಮ, ಲದ್ರಿಯ ಸೋಮರಂಥ ಅಲಕ್ಷಿತ ವಚನಕಾರರ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ಈ ಎಲ್ಲ ಲೇಖನಗಳು-ಚಿಕ್ಕವಿರಲಿ, ದೊಡ್ಡವಿರಲಿ-ಚಿದಾನಂದಮೂರ್ತಿಗಳ ಇತರ ಲೇಖನಗಳಂತೆ ಹೊಸತನದಿಂದ ಬೆಳಗುತ್ತವೆ ಎಂಬುದು ವಿದ್ವಾಂಸರ ಅಭಿಮತವಾಗಿದೆ.

ಚಿ.ಮೂ. ಅವರ ಸಂಶೋಧನಯಾನದ ಮೈಲುಗಲ್ಲುಗಳಲ್ಲಿ “ಮಧ್ಯಕಾಲೀನ ಕನ್ನಡ ಸಾಹಿತ್ಯ ಮತ್ತು ಅಸ್ಪೃಶ್ಯತೆ” ಪ್ರಮುಖವಾದುದು. ಅಸ್ಪಶ್ಯತಾ ನಿರ್ಮೂಲನತ್ವ ದಲಿತವರ್ಗದ ಏಳಿಗೆಗೆ, ಸಾಮಾಜಿಕ ಅನ್ಯಾಯಗಳ ಬಗ್ಗೆ ಮಧ್ಯಕಾಲೀನ ಕರ್ಣಾಟಕದಲ್ಲಿ ನಡೆದ ಆಂದೋಲವನ್ನು ಕುರಿತಾಗಿ ಚಿ.ಮೂ ಅವರು ನೀಡಿದ ಮೂರು ಉಪನ್ಯಾಸಗಳನ್ನು ಒಳಗೊಂಡ ಗ್ರಂಥವಿದು. ಸಾಹಿತ್ಯ ಚರಿತ್ರೆಯನ್ನು ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಇಲ್ಲಿ ವಿವೇಚಿಸಿದೆ. ವರ್ಣ ಜಾತಿ, ಅಸ್ಪೃಶ್ಯ ಜಾತಿಗಳು, ಹದಿನೆಂಟು ಜಾತಿಗಳು, ಕರ್ಣಾಟಕದಲ್ಲಿ ಅವುಗಳ ಸ್ಥಾನಮಾನಗಳನ್ನು ಹಿನ್ನೆಲೆಯಾಗಿ ರೂಪಿಸಿದೆ. ಶಾಸನ, ಚಂಪೂ ಮತ್ತು ವಚನ ಸಾಹಿತ್ಯಗಳಲ್ಲಿ ಬರುವ ವರ್ಣ, ಜಾತಿ ಅಸ್ಪೃಶ್ಯತೆಗಳನ್ನು; ಅವರ ವಸತಿ, ವೇಷಭೂಷಣ, ಆಹಾರ ಪಾನೀಯಗಳನ್ನು, ಜಾತಿ ಸಮಾನತೆ, ಮತಾಂತರ, ಅಂತರಜಾತೀಯ ವಿವಾಹ ಪ್ರೇರಣೆಗಳನ್ನು, ಅಸ್ಪೃಶ್ಯ ವಚನಕಾರರ ದನಿ, ಧೋರಣೆ, ಆಶೋತ್ತರಗಳನ್ನು ವಿವರಿಸಿದೆ. ಮಧ್ಯಯುಗೀನ ಸಾಹಿತ್ಯದಲ್ಲಿನ ಪ್ರಮುಖ ಕಥಾನಕಗಳನ್ನು ‘ದಲಿತಪ್ರಜ್ಞೆಯ ಹಿನ್ನೆಲೆಯಲ್ಲಿ ವಿವೇಚಿಸಿದೆ. ಇದು ಅಮೂಲ್ಯವಾದ ಸಾಂಸ್ಕೃತಿಕ ಅಧ್ಯಯನ. ಒಂದು ಕಾಲದಲ್ಲಿ ತುಂಬ ಪ್ರಗತಿಪರವಾದ ಧ್ಯೇಯಗಳನ್ನಿಟ್ಟುಕೊಂಡು ನಡೆದ ಚಳವಳಿಯ ಸ್ವರೂಪವನ್ನು ಆಧಾರಗಳಿಂದ, ಒಳನೋಟಗಳಿಂದ ಇಲ್ಲಿ ಕಟ್ಟಿಕೊಟ್ಟಿರುವುದು ಮಾದರಿ ಸಂಶೋಧನೆಗೆ ಸಾಕ್ಷಿಯಾಗಿದೆ.

ತೀ.ನಂ. ಶ್ರೀಕಂಠಯ್ಯ ಅವರು ಚಿದಾನಂದಮೂರ್ತಿಯವರನ್ನು “ಕನ್ನಡ ಭಾಷಾ ಸಾಹಿತ್ಯಗಳ ನೈಷ್ಠಿಕ ವಿದ್ಯಾರ್ಥಿ” ಎಂದು ಮೆಚ್ಚಿದ್ದಾರೆ. ಅದರ ಸಮರ್ಥನೆ ಎಂಬಂತೆ ಚಿ.ಮೂ ಅವರು ಕನ್ನಡ ಸಾಹಿತ್ಯ ಚರಿತ್ರೆಯ ಕ್ಷೇತ್ರದಲ್ಲಿ ವಿಪುಲವಾಗಿ ಕೆಲಸ ಮಾಡಿದ್ದಾರೆ. ಕವಿರಾಜಮಾರ್ಗ ಕಾಲದ ಕನ್ನಡ ಸಾಹಿತ್ಯದಿಂದ ಹಿಡಿದು ಈಚಿನ ಮುದ್ದಣ್ಣನವರೆಗೆ ಅವರ ಸಂಶೋಧನಾತ್ಮಕ ಬರವಣಿಗೆ ವ್ಯಾಪಿಸಿದೆ. ಚಿ.ಮೂ ಅವರ ಸಂಶೋಧನಾ ಕಾಯಕದಲ್ಲಿ ಪರಿಣತ ಅಂತರಶಾಸ್ತ್ರೀಯ ಅಧ್ಯಯನ, ಸಾಹಿತ್ಯ, ಧರ್ಮ, ಪುರಾಣ, ಇತಿಹಾಸ, ವಿಜ್ಞಾನ, ಖಗೋಳ ವಿಜ್ಞಾನ, ಜಾನಪದ, ಸಮಾಜಶಾಸ್ತ್ರ ಹೀಗೆ ಬಹುಶಿಸ್ತುಗಳು ಸಂಗಮಿಸಿವೆ. ಅಂತರಶಾಸ್ತ್ರೀಯ ವ್ಯಾಸಂಗ, ಅಳವಡಿಕೆಗಳಿಂದ ಏನನ್ನು ಸಾಧಿಸಬಹುದು. ಶೋಧಿಸಬಹುದು ಎಂಬುದಕ್ಕೆ ಅವರ ಹಲವಾರು ಗ್ರಂಥಗಳು ಸಾಕ್ಷಿಯಾಗಿವೆ. “ವಾಗರ್ಥ”, “ಹೊಸತು ಹೊಸತು”, “ಕರ್ನಾಟಕ-ನೇಪಾಳ: ಸಾಂಸ್ಕೃತಿಕ ಸಂಬಂಧ”, “ಪೂರ್ಣ ಸೂರ್ಯಗ್ರಹಣ’ದ ಸಮಾಜೋ ಸಾಂಸ್ಕೃತಿಕ ಅಧ್ಯಯನ”, “ಬೃಹತ್ ಕರ್ನಾಟಕ: ಭಾಷಿಕ ಮತ್ತು ಸಾಂಸ್ಕೃತಿಕ (ನೀಲಗಿರಿಯಿಂದ ನಾಸಿಕ್ ವರೆಗೆ)”, “ಕನ್ನಡ-ಕನ್ನಡಿಗ-ಕರ್ನಾಟಕ”, “ಕರ್ನಾಟಕದ ಅಂದಿನ ಶ್ರೇಷ್ಠರ ಇಂದಿನ ವಂಶಸ್ಥರು ಮತ್ತು ಕುರುಹುಗಳು”, “ಭಾಷಾವಿಜ್ಞಾನದ ಮೂಲತತ್ವಗಳು”, “ರೇವಣಸಿದ್ಧ: ಹಿನ್ನೆಲೆ-ಮುನ್ನೆಲೆ”, “ಶೋಧನ ದೀಪ್ತಿ” ಮೊದಲಾದ ಕೃತಿಗಳಲ್ಲಿ ಚಿ.ಮೂ ಅವರ ವಿಸ್ತಾರವಾದ ವ್ಯಾಸಂಗ, ಆಳವಾದ ಅಧ್ಯಯನ, ಅಪಾರವಾದ ಪರಿಶ್ರಮ, ಮಿಂಚಿನ ಪ್ರತಿಭೆ ಸಮ್ಮಿಲನಗೊಂಡಿವೆ. ಕನ್ನಡ ಸಂಶೋಧನಾ ಲೋಕದ ಪೂರ್ವಸೂರಿಗಳ ಮಾರ್ಗದಲ್ಲಿ ಮುನ್ನಡೆದು ಚಿ.ಮೂ ಅವರು ನಡೆಸಿದ ಹೊಸಶೋಧನೆಯ ಹೊಸಸಂಗತಿಗಳು ಹೊಸತು ಹೊಸತಾಗಿ ಹೊಳೆಯುತ್ತವೆ.

ಪ್ರಸ್ತುತ “ಕವಿರಾಜಮಾರ್ಗಕ್ಕೆ ಹಿಂದಿನ ಕನ್ನಡ ಸಾಹಿತ್ಯ” ಎಂಬ ಸಂಶೋಧನ ಪ್ರಬಂಧವು ತುಂಬಾ ಮೌಲ್ಯೀಕೃತವಾದುದು. ಕವಿರಾಜಮಾರ್ಗದ ಹಿಂದಿನ ಕನ್ನಡ ಸಾಹಿತ್ಯವನ್ನು ಕುರಿತು ಟಿ.ಎಸ್.ವೆಂಕಣ್ಣಯ್ಯ, ತೀ.ನಂ.ಶ್ರೀಕಂಠಯ್ಯ ಮೊದಲಾದ ಮೇರು ವಿದ್ವಾಂಸರು ಈಗಾಗಲೇ ಸಾಕಷ್ಟು ಸಂಶೋಧನೆ ನಡೆಸಿ, ಅವರು ಮಾಡಿದ ಊಹೆಗಳು, ಎತ್ತಿದ ಪ್ರಶ್ನೆಗಳು ಹಾಗೂ ಮಂಡಿಸಿದ ನಿರ್ಣಯಗಳು ಮುಂದಿನ ಸಂಶೋಧನೆಗೆ ಪ್ರೇರಣೆಯಾಗಿದ್ದವು. ಈ ದಿಸೆಯಲ್ಲಿ ಕವಿರಾಜಮಾರ್ಗ ಕೃತಿಯ ಆಂತರ್ಯದಲ್ಲೇ ಹುದುಗಿರುವ ಪ್ರಮಾಣಗಳ ಜಾಡುಹಿಡಿದು ನಡೆದಿರುವ ಚಿ.ಮೂ ಅವರು ತಮ್ಮ ವಿಸ್ತಾರವಾದ ಅಧ್ಯಯನದ ಮೂಲಕ ಕನ್ನಡ ಸಾಹಿತ್ಯ ಪರಂಪರೆಯತ್ತ ಹೊಸಬೆಳಕು ಬೀರುವ ಪ್ರಯತ್ನವನ್ನು ಇಲ್ಲಿ ಮಾಡಿದ್ದಾರೆ. ಶಾಸನಗಳಲ್ಲಿ ಲಭ್ಯವಾಗುವ ಅಪೂರ್ವ ಮಾಹಿತಿಗಳ ಮೂಲಕ ಕವಿರಾಜಮಾರ್ಗಕಾರ ಉಲ್ಲೇಖಿಸಿರುವ ವಿಮಳೋದಯ, ದುರ್ವಿನೀತ ಮೊದಲಾದ ಗದ್ಯ ಪದ್ಯ ಕವಿಗಳ ಪೂರ್ವಾಪರಗಳನ್ನು ಅನುಸಂಧಾನ ಮಾಡಿದ್ದಾರೆ. ಪೂರ್ವದ ಈ ಕೃತಿಕಾರರಲ್ಲಿ ಕೆಲವರಾದರೂ ಶ್ರೀವಿಜಯನಂತೆ ನೃಪತುಂಗನ ಆಸ್ಥಾನ ಕವಿಗಳಾಗಿದ್ದಿರಲು ಸಾಧ್ಯವೆಂದೂ, ಅವನ ಆಸ್ಥಾನದ ಸಭಾಸದರು ವಿದ್ವಾಂಸರನ್ನು ಮಾತ್ರ ಮನ್ನಿಸುತ್ತಿದ್ದರೆಂದೂ ನಿಜವಾದ ಯೋಗ್ಯತೆಯಿಲ್ಲದವನಿಗೆ ಅವನ ನಗರವನ್ನು ಹೊಗುವ ಧೈರ್ಯವೂ ಇರುತ್ತಿರಲಿಲ್ಲವೆಂದೂ ಕವಿರಾಜಮಾರ್ಗಕಾರ ಉದ್ಧಾರವೆತ್ತಿರುವುದನ್ನು ಮೌಲ್ಯೀಕರಿಸುತ್ತಾರೆ. ಪಗರಣ, ಚತ್ತಾಣ, ಬೆದಂಡೆಗಳ ಅಸ್ತಿತ್ವದ ಸ್ವರೂಪವನ್ನು ಜಾನಪದೀಯ ಹಾಗೂ ಶಾಸ್ತ್ರೀಯ ಕೃತಿ ರಚನೆಗಳಲ್ಲಿ ಶೋಧಿಸುತ್ತಾ ಅವು ಚರಿತ್ರೆಯಲ್ಲಿ ಹಿನ್ನೆಲೆಗೆ ಸರಿದ ಸಂಕಥನವನ್ನು ಕಟ್ಟಿಕೊಡುವ ಬಗೆಯಲ್ಲಿ ಹೊಸಬೆಳಗು ಎದ್ದು ಕಾಣುತ್ತದೆ. ಪೂರ್ವದ ಕನ್ನಡ ಸಾಹಿತ್ಯಯಾನವನ್ನು ಚರಿತ್ರೆ, ಧರ್ಮ, ರಾಜಕಾರಣ, ಶಾಸನ, ಜಾನಪದ ಮೊದಲಾದ ಅಂತರ್ ಶಿಸ್ತೀಯ ನೆಲೆಯಲ್ಲಿ ಶೋಧಿಸಿ, ಹೊಸವಿಚಾರಗಳನ್ನು ಮಂಡಿಸಿರುವ ಚಿ.ಮೂ ಅವರ ಈ ಪ್ರಬಂಧವು ಮುಂದಣ ಸಂಶೋಧನಾಯಾನಕ್ಕೆ ಮಾರ್ಗದರ್ಶಿಯಾಗಿದೆ.

Downloads

Published

05.12.2023

How to Cite

M. CHIDANANDA MURTHY, & BYRAPPA M. (2023). ಕವಿರಾಜಮಾರ್ಗಕ್ಕೆ ಹಿಂದಿನ ಕನ್ನಡ ಸಾಹಿತ್ಯ. AKSHARASURYA, 2(13), 01–39. Retrieved from https://aksharasurya.com/index.php/latest/article/view/274

Issue

Section

ಹಿಂದಣ ಹೆಜ್ಜೆ. | TRODDEN PATH

Most read articles by the same author(s)