ನನ್ನಿಯೊಳಿನತನಯಂ

Authors

  • M. M. KALBURGI
  • BYRAPPA M.

Keywords:

ಎಂ.ಎಂ.ಕಲಬುರ್ಗಿ, ಪಂಪ, ಕರ್ಣ, ಮಹಾಭಾರತ, ವಿಕ್ರಮಾರ್ಜುನ ವಿಜಯ, ನನ್ನಿ

Abstract

ಆಶಯ:

ಸಮಗ್ರ ಸಂಶೋಧಕ-ಸತ್ಯಶೋಧಕರು ಡಾ.ಎಂ.ಎಂ.ಕಲಬುರ್ಗಿ

“ಸಂಶೋಧನೆಯೆನ್ನುವುದು ಅಲ್ಪ ವಿರಾಮ, ಅರ್ಧವಿರಾಮಗಳ ಮೂಲಕ ಪೂರ್ಣವಿರಾಮಕ್ಕೆ ಸಾಗುವ ಕ್ರಿಯೆಯಾಗಿದೆ… ಸಂಶೋಧನೆ ಎನ್ನುವುದು ಸುಳ್ಳು ಇತಿಹಾಸದ ಮೂಲಕ ವರ್ತಮಾನದಲ್ಲಿ ಹುಟ್ಟುಹಾಕುತ್ತಲಿರುವ ಶೋಷಣೆಯನ್ನು ಹತ್ತಿಕ್ಕಲು, ನಿಜ ಇತಿಹಾಸವನ್ನು ಶೋಧಿಸಿಕೊಡುವುದು ಸಂಶೋಧಕನ ಕರ್ತವ್ಯವಾಗಿದೆ. ಅಂದರೆ ಸಂಶೋಧನೆಯೆಂಬುದು ಕೇವಲ ಇತಿಹಾಸದ ಶೋಧವಲ್ಲ. ಸುಳ್ಳು ಇತಿಹಾಸವನ್ನು ಮುಂದುಮಾಡಿಕೊಂಡು ವರ್ತಮಾನವನ್ನು ದುರುಪಯೋಗ ಮಾಡಿಕೊಳ್ಳುವವರೊಂದಿಗೆ ನಡೆಸುವ ಹೋರಾಟವೂ ಆಗಿದೆ. ಸತ್ಯವೆಂಬ ಭೂತಕಾಲದ ಬಲದಿಂದ ಅಸತ್ಯವೆಂಬ ವರ್ತಮಾನ ಕಾಲವನ್ನು ಸರಿಪಡಿಸುವುದಾಗಿದೆ…” ಎನ್ನುವ ಮೂಲಕ ಸತ್ಯಶೋಧಕರೂ ಸಮಗ್ರ ಸಂಶೋಧಕರೂ ಎಂದು ಪ್ರಸಿದ್ಧರಾದ ಡಾ.ಎಂ.ಎಂ.ಕಲಬುರ್ಗಿ ಅವರು ಈ ನಾಡು ಕಂಡ ಶ್ರೇಷ್ಠ ಚಿಂತಕರು. ಅವರ ಅಧ್ಯಯನ ಮತ್ತು ಕೊಡುಗೆಗಳು ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಮುಂತಾದ ಬಹುಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಇವೆಲ್ಲದರ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಅಧ್ಯಯನದ ವಿಶಾಲವಾದ ಪರಿಪ್ರೇಕ್ಷ್ಯವುಳ್ಳ ಕಲಬುರ್ಗಿ ಅವರದು ಬಹುಮುಖ ವ್ಯಕ್ತಿತ್ವ; ಬಹುಮುಖ ಪ್ರತಿಭೆ; ಬಹುಮುಖ ಕಾರ್ಯಯೋಜನೆ. ಕನ್ನಡದ ಶ್ರೇಷ್ಠ ಪ್ರಾಧ್ಯಾಪಕರಾಗಿ, ಉನ್ನತಶ್ರೇಣಿಯ ಸಂಶೋಧಕರಾಗಿ, ಸಮರ್ಥ ಸಂಶೋಧನ ಮಾರ್ಗದರ್ಶಕರಾಗಿ, ವಿಭಾಗದ ದಕ್ಷ ಅಧ್ಯಕ್ಷರಾಗಿ, ಕನ್ನಡ ವಿಶ್ವವಿದ್ಯಾಲಯದ ಮಾದರಿ ಕುಲಪತಿಗಳಾಗಿ, ಅನೇಕ ವಿನೂತನ ಯೋಜನೆಗಳ ಯೋಜಕರಾಗಿ, ಹಲವಾರು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಸಂಘ-ಸಂಸ್ಥೆಗಳ ನಿರ್ದೇಶಕರಾಗಿ ಅವರು ಮಾಡಿದ ಕಾರ್ಯಚಟುವಟಿಕೆಗಳು ವಿಶೇಷ ಅಸ್ಮಿತೆಯುಳ್ಳ ಚಾರಿತ್ರಿಕ ಮಹತ್ವಕ್ಕೆ ಸಾಕ್ಷಿಯಾಗಿವೆ.

ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರು 1938ರ ನವಂಬರ 28ರಂದು ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯರಗಲ್ಲ ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಗುರಮ್ಮ; ತಂದೆ ಮಡಿವಾಳಪ್ಪ. ಕಲಬುರ್ಗಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ 1960ರಲ್ಲಿ ಬಿ.ಎ. ಮತ್ತು 1962ರಲ್ಲಿ ಎಂ.ಎ. ಪದವಿಗಳನ್ನು ಪ್ರಥಮ ಸ್ಥಾನದೊಂದಿಗೆ ಪಡೆದರು. 1968ರಲ್ಲಿ ಆವರು ಡಾ.ಆರ್.ಸಿ.ಹಿರೇಮಠ ಅವರ ಮಾರ್ಗದರ್ಶನದಲ್ಲಿ ಸಲ್ಲಿಸಿದ, ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’ ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಸಂದಿತು. 1962ರಲ್ಲಿ ಕರ್ನಾಟಕ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಕಲಬುರ್ಗಿಯವರು, 1966ರ ವರ್ಷದಲ್ಲಿ ವಿಶ್ವವಿದ್ಯಾಲಯದ ‘ಕನ್ನಡ ಅಧ್ಯಯನ ಪೀಠ’ದಲ್ಲಿ ಅಧ್ಯಾಪಕರಾಗಿ ನೇಮಕಗೊಂಡರು. ಅಲ್ಲಿ ಅನೇಕ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಹುದ್ದೆಗಳನ್ನು ನಿರ್ವಹಿಸಿ ಸುಮಾರು ಹತ್ತೊಂಬತ್ತು ವರ್ಷಗಳ ಕಾಲ ಪ್ರಾಧ್ಯಾಪಕರಾಗಿದ್ದ ಕಲಬುರ್ಗಿಯವರು, ಒಟ್ಟಿನಲ್ಲಿ ಮೂವತ್ತೊಂಬತ್ತು ವರ್ಷಗಳು ಶಿಕ್ಷಕ ವೃತ್ತಿಯಲ್ಲಿ ತೊಡಗಿಕೊಂಡಿದ್ದರು. ಅವರು ಆ ಅವಧಿಯಲ್ಲಿ ಅನೇಕ ಸಂಶೋಧನ ಯೋಜನೆಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. 1998-2001ರ ಕಾಲಾವಧಿಯಲ್ಲಿ ಕಲಬುರ್ಗಿಯವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದರು. ಅಲ್ಲಿಯೂ ಅನೇಕ ಮಹತ್ವದ ಯೋಜನೆಗಳನ್ನು ಆಗುಮಾಡಿದ ಕಲಬುರ್ಗಿಯವರು ನಿವೃತ್ತಿಯ ನಂತರವೂ ಸಂಶೋಧನಾ ಚಟುವಟಿಕೆಗಳಲ್ಲಿಯೇ ಮಗ್ನರಾದರು. ಕರ್ನಾಟಕ ಸರ್ಕಾರವು ಪ್ರಕಟಿಸಿದ ಹದಿನೈದು ಸಂಪುಟಗಳ ‘ವಚನಸಾಹಿತ್ಯ ಸಂಪುಟ’ ಮಾಲೆಗೆ ಅವರು ಪ್ರಧಾನ ಸಂಪಾದಕರಾಗಿದ್ದರು. ಹಾಗೆಯೇ ‘ಸಮಗ್ರ ಕೀರ್ತನ ಸಂಪುಟ’ಗಳ ಸಂಪಾದಕ ಮಂಡಳಿಯ ಸದಸ್ಯರೂ ಆಗಿದ್ದರು. “ದುಡಿಯುವವನ ಮನಸ್ಸು ಸ್ವಚ್ಛವಿರುತ್ತದೆ” ಎಂಬ ಡಾ.ಫ.ಗು.ಹಳಕಟ್ಟಿಯವರ ವಾಕ್ಯ ಇವರ ಎಳೆಯ ಮನಸ್ಸನ್ನು ಪ್ರಭಾವಿಸಿದ್ದಿತು “ಜನಮೆಚ್ಚಿ ನಡೆಕೊಂಡರೇನುಂಟು ಲೋಕದಿ ಮನಮೆಚ್ಚಿ ನಡೆಕೊಂಬುದೇ ಚೆಂದವು” ಎಂದು ಮುನ್ನಡೆದು ಮಹಾಮಾರ್ಗ ಕ್ರಮಿಸಿದ ಕ್ರಿಯಾಶೀಲ ವಿದ್ವಾಂಸರು ಡಾ. ಕಲಬುರ್ಗಿಯವರು.

ಹಿರಿಯ ವಿದ್ವಾಂಸರಾದ ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ ಅವರು ಹೇಳುವಂತೆ, “ಕನ್ನಡದ ಹೊಲದಲ್ಲಿ ಕೃಷ್ಣಶಾಸ್ತ್ರಿಗಳು ಕೃಷಿ ಮಾಡಿ ತೆಗೆದ ಬೆಳೆಯಲ್ಲಿ ತಮಗಾಗಿ ತೆಗೆದದ್ದು ಒಂದು ಪಾಲಾದರೆ, ಇತರರಿಗಾಗಿ ತೆಗೆದದ್ದು ಮೂರು ಪಾಲು.”-ಇದು ಪ್ರೊ. ಎ.ಆರ್. ಕೃಷ್ಣಶಾಸ್ತ್ರಿಗಳನ್ನು ಕುರಿತದ್ದು, ಈ ಮಾತು ಪ್ರೊ.ಕಲಬುರ್ಗಿಯವರಿಗೆ ಸಹ ಚೆನ್ನಾಗಿ ಅನ್ವಯಿಸುತ್ತದೆ. ಕಲಬುರ್ಗಿ ತರಗತಿಯ ಸ್ಫೂರ್ತಿಯುತ ಪ್ರವಚನಗಳಿಂದ ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆ, ಸಾಹಿತ್ಯ, ಜನಜೀವನ, ಇತಿಹಾಸಗಳ ಬಗ್ಗೆ ಪ್ರೀತಿ, ಅಭಿಮಾನ ಹುಟ್ಟುವಂತೆ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಪಿಎಚ್.ಡಿ. ಪದವಿ ನಿಮಿತ್ತವಾಗಿ ಕನ್ನಡದಲ್ಲಿ ಸಂಶೋಧನೆ ನಡೆಸಲು ವಿಷಯವನ್ನು ಸೂಚಿಸಿ, ಮಾರ್ಗದರ್ಶನವನ್ನೂ ಶ್ರಮವಹಿಸಿ ಮಾಡಿ, ಪ್ರಕಟನೆಗೆ ಏರ್ಪಾಡುಗಳನ್ನೂ ತಾವೇ ಮಾಡಿಕೊಟ್ಟಿದ್ದಾರೆ… ಇವರು ಹೆಚ್ಚಿನ ಉತ್ಸಾಹದಿಂದ, ಹರಕೆ ಹೊತ್ತವರ ಹಾಗೆ ತಮ್ಮ ಮೇಲೆ ಜವಾಬ್ದಾರಿ ಹಾಕಿಕೊಂಡು ವಿದ್ಯಾರ್ಥಿಗಳನ್ನು ಬೆಳೆಸಿದ್ದಾರೆ, ಕನ್ನಡದ ಕೆಲಸಕ್ಕೆ ತೊಡಗಿಸಿದ್ದಾರೆ… ಇದರಲ್ಲಿ ಬಹುಶಃ ಇತರರಿಗಿಂತ ಅವರ ಸಾಧನೆ ದೊಡ್ಡದು. ಈ ಭಾಗದ ವಿದ್ಯಾರ್ಥಿಗಳಿಗೆ ಕಲಬುರ್ಗಿ ಒಂದು ರೀತಿಯಲ್ಲಿ “ವಿದ್ಯಾರ್ಥಿ ಕಲ್ಪತರು”, ಅವರ ಪ್ರಭಾವಲಯಕ್ಕೆ ಒಳಗಾಗದವರೇ ಇಲ್ಲ. ಅವರಿಂದ ಸಲಹೆ ಸೂಚನೆಗಳನ್ನು ಪಡೆಯದ ವಿದ್ಯಾರ್ಥಿಗಳೇ ಇಲ್ಲವೆಂದರೂ ನಡೆಯುತ್ತದೆ… ಅವರಿಗೆ ಹಿರಿಯರಲ್ಲಿ ಗೌರವ, ಕಿರಿಯರಲ್ಲಿ ವಿಶ್ವಾಸ. ಇಬ್ಬರ ರಚನೆಗಳನ್ನೂ, ಕಾರ್ಯಗಳನ್ನೂ ಅವರು ಪ್ರೋತ್ಸಾಹಿಸಿದ್ದಾರೆ. ಇದಕ್ಕಾಗಿ ಕನ್ನಡ ನಾಡಿನ ಮಠ ಮಾನ್ಯಗಳ, ಸಂಘ ಸಂಸ್ಥೆಗಳ ಹಿರಿಯರನ್ನೂ ಗೆಳೆಯರನ್ನೂ ಸಂಪರ್ಕಿಸಿ, ಬರಹಗಳ ಪ್ರಕಟನೆಗೆ ಏರ್ಪಾಡುಗಳು ಬೇಕೋ, ಅವನ್ನು ತಮ್ಮ ಶಕ್ತಿ ಬಳಸಿ ಮಾಡಿದ್ದಾರೆ… ಇದು ಶ್ರೀಯವರು, ಕೃಷ್ಣಶಾಸ್ತ್ರಿಗಳು ಮೊದಲಾದ ಮಹನೀಯರು ಮಾಡಿದಂಥ ಆ ಮಹಾಮಾರ್ಗದಲ್ಲಿಯೇ ಕಲಬುರ್ಗಿಯವರೂ ಮಾಡಿದ್ದಾರೆ.”

ಸಂಶೋಧನ ಕ್ಷೇತ್ರದಲ್ಲಿ, ಹೊಸದಾಗಿ ತಾವು ಶೋಧಿಸಿದ ಶೋಧ ಮತ್ತು ಬೇರೆಯವರು ಶೋಧಿಸಿದ ಆಕರಗಳನ್ನು ಬಳಸಿ ಮಾಡುವ ಶೋಧ ಎಂದು ಎರಡು ರೀತಿಯಲ್ಲಿ ಸಂಶೋಧನೆಯನ್ನು ಗುರುತಿಸಲಾಗುತ್ತದೆ. ಸಾಮಾನ್ಯವಾಗಿ ಇನ್ನೊಬ್ಬರು ಶೋಧಿಸಿದ ಆಕರಗಳನ್ನು ಬಳಸಿ ಸಂಶೋಧನೆ ಮಾಡುವವರು ವಿಪುಲ. ಡಾ. ಕಲಬುರ್ಗಿಯವರು ಮಾತ್ರ ಹೊಸ ಆಕರಗಳನ್ನು ಶೋಧಿಸಿ, ಇನ್ನೊಬ್ಬರು ಶೋಧಿಸಿದ ಆಕರಗಳನ್ನು ಬಳಸಿ ಸಂಶೋಧನೆ ಮಾಡಿದ್ದಾರೆ. ಕನ್ನಡ ಸಂಶೋಧನೆಯ ಇತಿಹಾಸದಲ್ಲಿ ಆಕರನಿಷ್ಠಶೋಧ, ವ್ಯಾಖ್ಯಾನನಿಷ್ಠಶೋಧ-ಹೀಗೆ ಎರಡು ಮಜಲುಗಳು ಕಂಡುಬರುತ್ತವೆ. ಈ ಎರಡು ಮಜಲುಗಳಲ್ಲಿಯೂ ಇವರು ದುಡಿದಿದ್ದಾರೆ. ಸಂಶೋಧನೆ ಏಕಶಿಸ್ತೀಯ ಅಧ್ಯಯನಕ್ಷೇತ್ರವಲ್ಲ, ಬಹುಶಿಸ್ತೀಯ ಅಧ್ಯಯನಕ್ಷೇತ್ರ. ಈ ಮಾತಿಗೆ ಅರ್ಥ ತುಂಬುವಂತೆ ಸಂಸ್ಕೃತಿ, ಇತಿಹಾಸ, ಶಾಸನ, ಜಾನಪದ, ವ್ಯಾಕರಣ, ಛಂದಸ್ಸು, ಹಸ್ತಪ್ರತಿಶಾಸ್ತ್ರ, ಗ್ರಂಥಸಂಪಾದನಾಶಾಸ್ತ್ರ, ನಾಮಶಾಸ್ತ್ರ ಇತ್ಯಾದಿ ಕ್ಷೇತ್ರಗಳಲ್ಲಿ ಇವರು ಕೆಲಸ ಮಾಡಿದ್ದಾರೆ. ಇವುಗಳನ್ನು ಬಳಸಿಕೊಂಡು ಅಂತರ್ಶಿಸ್ತೀಯ ಸಂಶೋಧನೆಯನ್ನು ಪೂರೈಸಿದ್ದಾರೆ. ಹೀಗೆ ಸಂಶೋಧನೆಯ ಎಲ್ಲ ಹಂತ, ಎಲ್ಲ ಆಯಾಮ, ಎಲ್ಲ ವಿಷಯಗಳನ್ನು ತೆಕ್ಕೆಗೆ ಅಳವಡಿಸಿಕೊಂಡು ದುಡಿಯುವವ ಸಮಗ್ರ ಸಂಶೋಧಕನೆನಿಸುತ್ತಾನೆ. ಈ ದೃಷ್ಟಿಯಿಂದ ಡಾ.ಕಲಬುರ್ಗಿಯವರು ‘ಸಮಗ್ರ ಸಂಶೋಧಕ’ ರೆನಿಸಿದ್ದಾರೆ. ಕಲಬುರ್ಗಿ ಅವರ ಪ್ರಮುಖ ಸಂಶೋಧನ ಗ್ರಂಥಗಳೆಂದರೆ, ‘ಕವಿರಾಜಮಾರ್ಗ ಪರಿಸರದ ಕನ್ನಡಸಾಹಿತ್ಯ’, ‘ಸಾಹಿತ್ಯ ಸಂಪಾದನೆ, ‘ವಚನಸಾಹಿತ್ಯದ ಪ್ರಾಚೀನ ಆಕರಕೋಶ’, ‘ಕನ್ನಡ ಅಧ್ಯಯನಪೀಠದ ಹಸ್ತಪ್ರತಿಸೂಚಿ ಸಂಪುಟ: 1, 6, 7, 8, 9, 10’, ‘ಶುದ್ಧಶೈವ ಮತ್ತು ಗೋಳಕಿಮಠ ಸಂಪ್ರದಾಯ, ‘ವೀರಶೈವ ಇತಿಹಾಸ ಮತ್ತು ಭೂಗೋಲ’ ಮೊದಲಾದವು.

ಮಾರ್ಗ ಶಬ್ದಕ್ಕೆ ಅನ್ವೇಷಣೆ, ದಾರಿ, ಪದ್ಧತಿಯೆಂದು ಮೂರು ಅರ್ಥಗಳಿವೆ. ಸಾಹಿತ್ಯ ಕ್ಷೇತ್ರದಲ್ಲಿ ಈ ಮೂರು ಬಗೆಯ ಕಾರ್ಯಮಾಡಿರುವ ಕಲಬುರ್ಗಿಯವರು, ತಮ್ಮ ಎಲ್ಲ ಸಂಶೋಧನ ಪ್ರಬಂಧಗಳ ಸಂಕಲನಗಳಾಗಿರುವ ಎಂಟೂ ಸಂಪುಟಗಳಿಗೆ (ಮಾರ್ಗ-1, ಮಾರ್ಗ-2, ಮಾರ್ಗ-3, ಮಾರ್ಗ-4, ಮಾರ್ಗ-5, ಮಾರ್ಗ-6, ಮಾರ್ಗ-7, ಮಾರ್ಗ-8) ಇಟ್ಟಿರುವ ಹೆಸರು ‘ಮಾರ್ಗ’. ಇವರ ಪಿಎಚ್.ಡಿ. ಪ್ರಬಂಧದ ಹೆಸರೂ ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’. ಇವರಿಗೆ ಅರ್ಪಿಸಿರುವ ಅಭಿನಂದನ ಗ್ರಥದ ಹೆಸರೂ ‘ಮಹಾಮಾರ್ಗ’. ಈ “ಮಾರ್ಗಪ್ರಜ್ಞೆ” ಇವರನ್ನು ‘ಮಹಾಮಾರ್ಗದ ಪಥಿಕರನ್ನಾಗಿ’ ರೂಪಿಸಿತು. ಕನ್ನಡ ಸೃಜನಸಾಹಿತ್ಯವು ನವೋದಯ, ನವ್ಯ ನವ್ಯೋತ್ತರವೆಂಬ ಘಟ್ಟಗಳನ್ನು ರೂಪಿಸುತ್ತ ಬಂದ ಹಾಗೆ, ಕನ್ನಡ ಸಂಶೋಧನ ಸಾಹಿತ್ಯವೂ ರೂಪಿಸಿಕೊಳ್ಳುತ್ತ ಬಂದ ಸಾಮಗ್ರಿ ಶೋಧನಿಷ್ಠ, ವಿಶ್ಲೇಷಣನಿಷ್ಠ, ವ್ಯಾಖ್ಯಾನನಿಷ್ಠ ಘಟ್ಟಗಳಲ್ಲಿ ಇವರು ದುಡಿಯುತ್ತ ಬಂದರು. ಎರಡನೆಯದಾಗಿ ಕನ್ನಡ ಸಂಶೋಧನೆ ಆಗಾಗ ಅಳವಡಿಸಿಕೊಳ್ಳುತ್ತ ಬಂದ ಸಂಸ್ಕೃತಿ, ಶಾಸನ, ಜಾನಪದ, ನಾಮವಿಜ್ಞಾನ ಇತ್ಯಾದಿ ಹೊಸಹೊಸ ಕ್ಷೇತ್ರಗಳಲ್ಲಿಯೂ ಇವರು ತಮ್ಮ ಅಸ್ಮಿತೆ ಪ್ರಕಟಿಸಿದರು. ಹೀಗಾಗಿ ಈ ಎರಡೂ ಆಯಾಮಗಳನ್ನೊಳಗೊಂಡ ಇಲ್ಲಿಯ 700 ಪ್ರಬಂಧಗಳು ಕನ್ನಡ ಸಂಶೋಧನೆಯ ಎಲ್ಲ ಮಾದರಿಗಳನ್ನು ಒಳಗೊಂಡಿದ್ದು ಕನ್ನಡ ಸಾರಸ್ವತಲೋಕದ ಮಹತ್ತರ ಆಕರಗ್ರಂಥಗಳೂ ಅತ್ಯಮೂಲ್ಯ ಕಾಣ್ಕೆಗಳೂ ಆಗಿವೆ.

ಕಲಬುರ್ಗಿಯವರ ಸಾರಸ್ವತ ಸೇವೆ ಹಾಗೂ ಸಂಶೊಧನ ಸಾಧನೆಗಾಗಿ ಅನೇಕ ಪ್ರಶಸ್ತಿಗಳು ಮತ್ತು ಗೌರವಗಳನ್ನು ನೀಡಿ ಗೌರವಿಸಲಾಗಿದೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವಪ್ರಶಸ್ತಿ, ಪಂಪ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ಚಿದಾನಂದ ಪ್ರಶಸ್ತಿ ಮತ್ತು ವಿಶ್ವಮಾನವ ಪ್ರಶಸ್ತಿಗಳು ಮೊದಲಾದವು. ಅವರ ‘ಮಾರ್ಗ-4’ ಎಂಬ ಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಗಳಿಸಿದೆ. ಅವರು ಬರೆದಿರುವ ಹಲವಾರು ಗ್ರಂಥಗಳು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನಗಳನ್ನು ಪಡೆದಿವೆ. ಕಲಬುರ್ಗಿ-60, ಮಹಾಮಾರ್ಗ, ಸಮಗ್ರ ಸಂಶೊಧಕ ಮೊದಲಾದ ಗ್ರಂಥಗಳು ಕಲಬುರ್ಗಿ ಅವರಿಗೆ ಸಲ್ಲಿಸಲಾಗಿರುವ ಅಭಿನಂದನ ಗ್ರಂಥಗಳಲ್ಲಿ ಮುಖ್ಯವಾದವು.

Downloads

Published

05.04.2024

How to Cite

M. M. KALBURGI, & BYRAPPA M. (2024). ನನ್ನಿಯೊಳಿನತನಯಂ. AKSHARASURYA, 3(05), 01 to 13. Retrieved from https://aksharasurya.com/index.php/latest/article/view/369

Issue

Section

ಹಿಂದಣ ಹೆಜ್ಜೆ. | TRODDEN PATH

Most read articles by the same author(s)