ಬುಡಕಟ್ಟು ಮಹಿಳೆ: ಸ್ಥಾಪಿತ ಗ್ರಹಿಕೆಗಳಿಗೆ ಭಿನ್ನಮತ

Authors

  • Byrappa M.
  • ಶೈಲಜ ಹಿರೇಮಠ

Keywords:

ಬುಡಕಟ್ಟು ಮಹಿಳೆ, ಮಹಿಳಾ ಚಿಂತನೆ, ಲೈಂಗಿಕತೆ, ತಾಯ್ತನ, ಬಂಜೆತನ, ಸಾಂಸ್ಕೃತಿಕ ಸಬಲೀಕರಣ

Abstract

ಪ್ರಸ್ತುತ ಸಂದರ್ಭದಲ್ಲಿ ವಿಶಾಲಾರ್ಥ ದೃಷ್ಟಿಕೋನದ ಬರಹಗಾರರಾಗುವುದೆಂದರೆ, ಸಮಾಜದಲ್ಲಿನ ಜಾತಿ, ಪ್ರದೇಶ, ಬುಡಕಟ್ಟು, ಆದಿವಾಸಿ ಮತ್ತು ಜಂಡರ್ ಆಧಾರಿತ ಶ್ರೇಣೀಕರಣವನ್ನು ಮೀರುವುದೇ ಆಗಿದೆ; ಹಾಗಿದ್ದರೂ ಅಸಮಾನತೆಗೆ ಬುನಾದಿಯೊದಗಿಸುವ ಶ್ರೇಣೀಕರಣವನ್ನು ಅಸ್ಮಿತೆಯಾಗಿ, ಅನನ್ಯತೆಯಾಗಿ ಚಿಂತಕರು ನಿರೂಪಿಸಿದ್ದರ ಪರಿಣಾಮದಿಂದಾಗಿ, ಅಸಮಾನತೆಯನ್ನು ಸಮರ್ಥಿಸುವ ನಿರೂಪಣೆಗಳು ಸಾಹಿತ್ಯ ಲೋಕದಲ್ಲೂ ನಿರಾತಂಕವಾಗಿ ಮುಂದುವರೆದಿವೆ. ಬರಹಲೋಕದೊಳಗಿನ ಇಂತಹ ನಿರೂಪಣೆಯ ರಾಜಕಾರಣವೇ ಸತ್ಯವನ್ನು ಸೃಷ್ಟಿಸುತ್ತ, ಅದನ್ನು ಒಪ್ಪುವಂತೆ ಜ್ಞಾನದ ಅಧಿಕಾರದ ನೆಲೆಯಲ್ಲಿ ಒತ್ತಾಯಿಸುತ್ತದೆ; ಅಧ್ಯಯನದೊಳಗಿನ ಬರಹಗಾರರ ಉದ್ದೇಶದ ಭಾಗವಾಗಿ ನಿರೂಪಣೆಗೊಂಡ ನಿಲುವುಗಳನ್ನು ಸಮಸ್ಯೀಕರಿಸಿಕೊಂಡು ಮರುವಿಶ್ಲೇಷಣೆಗೆ ಒಳಪಡಿಸಬೇಕಿದೆ. ಈ ಉದ್ದೇಶದ ಹಿನ್ನೆಲೆಯಲ್ಲಿಯೇ ಮಹಿಳೆಯನ್ನು ಕೇಂದ್ರವಾಗಿಟ್ಟುಕೊಂಡು ನಡೆದ ಜನಪದ ಸಾಹಿತ್ಯದೊಳಗಿರುವ ರಾಜಕಾರಣವನ್ನು ಅಕ್ಯಾಡೆಮಿಕ್ ವಲಯದಿಂದ ಬಿಡಿಸಿಕೊಂಡು ಜನ ಸಮುದಾಯದ ವಲಯದಲ್ಲಿಟ್ಟು ಶೋಧಿಸುತ್ತಾ, ವಿನೂತನ ವೈಧಾನಿಕತೆಯಲ್ಲಿ `ವಾಸ್ತವ’ವನ್ನು ಕಟ್ಟುವ ಪ್ರಯತ್ನವನ್ನು ಮಾಡಿದ ಸಂಶೋಧಕಿಯರಲ್ಲಿ ಶೈಲಜ ಎಂ. ಹಿರೇಮಠ ಅವರು ಪ್ರಮುಖರಾಗಿದ್ದಾರೆ.

ಡಾ.ಶೈಲಜ ಎಂ. ಹಿರೇಮಠ ಅವರು 1969ರ ಜನೆವರಿ 5ರಂದು ಜನಿಸಿದರು. ಎಂ.ಎ, ಎಂ.ಫಿಲ್, ಪಿಎಚ್.ಡಿ ಪದವೀಧರರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದ ಪ್ರಾಧ್ಯಾಪಕರು ಹಾಗೂ ಪ್ರಸಾರಾಂಗದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಹಿಳಾ ಜಾನಪದ ಬಗ್ಗೆ ವಿಶೇಷ ಪರಿಣಿತಿ ಹೊಂದಿರುವ ಇವರು ಮಹಿಳಾ ಅಧ್ಯಯನ, ಮಹಿಳಾ ಜಾನಪದ, ಬುಡಕಟ್ಟು ಮಹಿಳಾ ಅಧ್ಯಯನ, ದಲಿತ ಮಹಿಳಾ ಅಧ್ಯಯನ ಇತ್ಯಾದಿ ಆಸಕ್ತಿ ಕ್ಷೇತ್ರಗಳಲ್ಲಿ ಗುರುತರವಾದ ಅಧ್ಯಯನಗಳನ್ನು ನಡೆಸಿದ್ದಾರೆ. ಪಾತರದವರು, ಮಾತೃಪ್ರಧಾನ ಪರಿಕಲ್ಪನೆ, ಮಹಿಳಾ ಜನಪದ ಸಾಹಿತ್ಯ: ಸಂಗ್ರಹ ಮತ್ತು ಅಧ್ಯಯನಗಳ ಚರಿತ್ರೆ, ಹರದೇಶಿ-ನಾಗೇಶಿ: ಕಲೆ ಮತ್ತು ಕಲಾವಿದರು(ಲಿಂಗ ಸಂಬಂಧಿ ಅಧ್ಯಯನ), ಸ್ತ್ರೀ ಕಥನ; ಮಹಿಳಾ ಕಾರ್ಮಿಕರು (ಹಾಡಿಕೆ ಮಹಿಳೆಯರನ್ನು ಅನುಲಕ್ಷಸಿ), ನಿರೂಪಣೆಯಾಚೆ(ಜನಪದ ಸಾಹಿತ್ಯ ಮತ್ತು ಮಹಿಳೆ) ಮೊದಲಾದ ಗ್ರಂಥಗಳನ್ನು ಹೊರತಂದಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪ್ರಕಟಗೊಳ್ಳುವ ‘ಮಹಿಳಾ ಅಧ್ಯಯನ ಅರ್ಧವಾರ್ಷಿಕ ಪತ್ರಿಕೆ’ಯನ್ನು ಹಲವು ವರ್ಷಗಳ ಕಾಲ ಅರ್ಥಪೂರ್ಣವಾಗಿ ರೂಪಿಸಿದ ಕೀರ್ತಿ ಇವರದು.

ಶೈಲಜ ಹಿರೇಮಠ ಅವರ ‘ಪಾತರದವರು’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿಗಳು ದೊರಕಿವೆ. ‘ಸ್ತ್ರೀ ಕಥನ’ ಕೃತಿಯು ಕನ್ನಡ ಸಾಹಿತ್ಯ ಪರಿಷತ್ತಿನ ನೀಲಗಂಗಾ ದತ್ತಿ ಪ್ರಶಸ್ತಿ, ಗುಲಬರ್ಗಾ ವಿವಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಬಿ.ಎಂ.ಶ್ರೀ ಪ್ರತಿಷ್ಠಾನದ ಸಾವಿತ್ರಮ್ಮ ದತ್ತಿನಿಧಿ ಸಾಹಿತ್ಯ ಪ್ರಶಸ್ತಿಗೆ ಭಾಜನವಾಗಿದೆ. ‘ಹರದೇಶಿ-ನಾಗೇಶಿ: ಕಲೆ ಮತ್ತು ಕಲಾವಿದರು(ಲಿಂಗ ಸಂಬಂಧಿ ಅಧ್ಯಯನ)’ ಎಂಬ ಮಹತ್ವದ ಸಂಶೋಧನ ಕೃತಿಗೆ ಕರ್ನಾಟಕ ಲೇಖಕಿಯರ ಸಂಘದ ದತ್ತಿ ಪ್ರಶಸ್ತಿ, ಕರ್ನಾಟಕ ಸಂಘದ ಎಂ.ಕೆ. ಇಂದಿರಾ ಪುಸ್ತಕ ಪ್ರಶಸ್ತಿ, ಕರ್ನಾಟಕ ವಿದ್ಯಾವರ್ಧಕ ಸಂಘದ ರತ್ಮಮ್ಮ ಹೆಗ್ಗಡೆ ದತ್ತಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿ ಸಂದಿವೆ.

‘ಹರದೇಶಿ-ನಾಗೇಶಿ: ಕಲೆ ಮತ್ತು ಕಲಾವಿದರು: ಲಿಂಗಸಂಬಂಧಿ ಅಧ್ಯಯನ’ ಎಂಬುದು ಶೈಲಜ ಹಿರೇಮಠ ಅವರು ವ್ಯಾಪಕವಾದ ಕ್ಷೇತ್ರಕಾರ್ಯ ಮಾಡಿ ಹೊರತಂದಿರುವ ಮಹತ್ವದ ಸಂಶೋಧನ ಗ್ರಂಥವಾಗಿದೆ. ಇದರ ಕ್ಷೇತ್ರಕಾರ್ಯದಲ್ಲಿ ಎದುರಾದ ಅನೇಕ ಸಮಸ್ಯೆಗಳಲ್ಲಿ ಇವರಿಗೆ ಅಪಮಾನವಾಗುವ ಮತ್ತು ನೋವಾಗುವ ಪ್ರಸಂಗಗಳೂ ನಡೆದರೂ ಕ್ಷೇತ್ರಕಾರ್ಯವನ್ನು ಮುಂದುವರಿಸಿದ್ದು ಅವರ ಸಂಶೋಧನ ಬದ್ಧತೆಯನ್ನು ತೋರಿಸುತ್ತದೆ. ಶೈಲಜ ಅವರು ‘ಹರದೇಶಿ-ನಾಗೇಶಿ’ಯನ್ನು ಕಲಾವಿದರ ಸಮಗ್ರ ಬದುಕಿನ ಭಿತ್ತಿಯಲ್ಲಿಟ್ಟು ಚರ್ಚಿಸಿದ್ದಾರೆ. ವಿದ್ವಾಂಸರ ಅಭಿಮತದಂತೆ, ‘ಹರದೇಶಿ-ನಾಗೇಶಿ’ಯ ಅಧ್ಯಯನವೆಂದರೆ ಅದು ಊಳಿಗಮಾನ್ಯಶಾಹಿ ಕ್ರೌರ್ಯಗಳ, ವಿಕೃತಿಗಳ ಅಧ್ಯಯನವೇ ಆಗುತ್ತದೆ. ಹಾಗಾಗಿಯೇ ಪ್ರಸ್ತುತ ಬರವಣಿಗೆ ಆ ಜಗತ್ತಿನ ನಾನಾ ಸ್ತರಗಳ ಅದೆಷ್ಟೊ ಕತ್ತಲ ಜಗತ್ತಿನ ಸಂಕೀರ್ಣಗಳನ್ನು ತೆರೆದು ತೋರಿಸಿದೆ. ಕಲೆಯ ಮೇಲಿನ ಅಭಿಮಾನವು ಹಿಂದಕ್ಕೆ ಸರಿದು ಕಲೆಯ ಹಿಂದಿನ ದುಡಿಮೆಯ ಕ್ರೌರ್ಯಕ್ಕೆ ಹೆಚ್ಚು ಒತ್ತು ಬಿದ್ದಿದೆ. ಕಲಾವಿದರಿಗೆ ‘ಹರದೇಶಿ-ನಾಗೇಶಿ’ಯು ಹೊಟ್ಟೆಪಾಡಿನ ಅನಿವಾರ್ಯತೆಯಾಗಿದ್ದರೆ; ಮೇಲ್ವರ್ಗದ ಪುರುಷ ಪ್ರೇಕ್ಷಕ ವರ್ಗಕ್ಕೆ ಇದನ್ನು ಹಾಡುವವರು ‘ದೇವದಾಸಿ’ಯರೆಂಬುದು ಮುಖ್ಯವಾಗಿದೆ. ಪರಿಣಾಮವಾಗಿ ಕೆಳಜಾತಿಗಳ ಮಹಿಳಾ ಕಲಾವಿದರು ಅನುಭವಿಸುವ ಅಪಮಾನ, ಯಾತನೆ ಮತ್ತು ವೇದನೆಗಳ ಒಳಸೂಕ್ಷ್ಮಗಳು ಅನಾವರಣವಾಗಿವೆ.

ಇದುವರೆಗಿನ ಮಹಿಳಾ ಅಧ್ಯಯನಗಳಿಗಿಂತ ಭಿನ್ನವಾಗಿ ಶೈಲಜ ಅವರ ಸಂಶೋಧನೆಯು ಮಹಿಳಾ ಅಧ್ಯಯನಕ್ಕೆ ಹೊಸ ವಿಧಾನವೊಂದನ್ನು ನಿರ್ಮಾಣ ಮಾಡಿದೆ ಎನ್ನಬಹುದು. ‘ಹರದೇಶಿ-ನಾಗೇಶಿ’ ಕುರಿತಾದ ಕ್ಷೇತ್ರಕಾರ್ಯದಲ್ಲಿ ಸಂಗ್ರಹಿಸಿದ ವಿವರಗಳನ್ನು ಅವರದೇ ಭಾಷೆಯಲ್ಲಿ ನಿರೂಪಿಸಲಾಗಿದೆ. ಕಲಾವಿದರು ತಮ್ಮೆಲ್ಲ ಸಂಕೀರ್ಣ ವಸ್ತುಸ್ಥಿತಿಯೊಂದಿಗೆ ನೇರವಾಗಿ ಮತ್ತು ಭಾವನಾತ್ಮಕವಾಗಿ ಓದುಗರನ್ನು ಎದುರಾಗುತ್ತಾರೆ. ಆ ನಿರೂಪಣೆಗೆ ಸೂಕ್ಷ್ಮ ಒಳನೋಟದ ಚರ್ಚೆಗಳನ್ನೂ ಮಾಡಲಾಗಿದೆ. ಸಂಶೋಧನ ಕೃತಿಯೊಂದು ಅನಾಯಾಸವಾಗಿ ಸಮುದಾಯದ ಸಂಕೀರ್ಣ ರೂಪದ ಅಖಂಡ ಸೃಜನಶೀಲ ಆತ್ಮಕಥನವಾಗಿ ರೂಪುಪಡೆದಿದೆ. ಸಂಶೋಧನೆಯನ್ನು ಇಂತಹ ನಿರೂಪಣೆಯ ಮೂಲಕವೂ ಮಾಡಬಹುದೆಂಬುದಕ್ಕೆ ಇದೊಂದು ಮಾದರಿಯಾಗಿದೆ.

ಕನ್ನಡ ಸಾಂಸ್ಕೃತಿಕ ಹಾಗೂ ಸಾರಸ್ವತ ಲೋಕದಲ್ಲಿ ಇದುವರೆಗೂ ನಡೆದಿರುವ ಜಾನಪದ ಸಾಹಿತ್ಯ ಮತ್ತು ಮಹಿಳೆ ಕುರಿತಾದ ಜಿಜ್ಞಾಸೆಯನ್ನು ಪುನರ್‌ಮೌಲ್ಯೀಕರಣಕ್ಕೆ ಒಳಗು ಮಾಡಿರುವ ಶೈಲಜ ಅವರ ಸಂಶೋಧನ ಕೃತಿ ‘ನಿರೂಪಣೆಯಾಚೆಗೆ’. ಇಲ್ಲಿ 1900ರಿಂದ 2004ರ ವರೆಗಿನ ಮಹಿಳಾ ಜನಪದ ಸಾಹಿತ್ಯ ಸಂಗ್ರಹ ಮತ್ತು ಅಧ್ಯಯನಗಳೆರಡನ್ನು ಗಮನಿಸಲಾಗಿದೆ. ಜನಪದ ಸಾಹಿತ್ಯದ ಕುರಿತಿರುವ ಎಲ್ಲ ನಿರ್ವಚನಗಳನ್ನು ವಿಶ್ಲೇಷಣೆಗೆ ಒಡ್ಡಲಾಗಿದೆ. ಲಿಖಿತ ಚರಿತ್ರೆಗಳನ್ನು, ಕನ್ನಡ ಸಾಹಿತ್ಯ ಚರಿತ್ರೆಯನ್ನು ಹಾಗೂ ಮಹಿಳಾ ಕನ್ನಡ ಸಾಹಿತ್ಯ ಚರಿತ್ರೆಯನ್ನು ಮೇಲ್ಜಾತಿ, ಮೇಲ್ವರ್ಗ ಪುರುಷ ಸಮುದಾಯಗಳೊಂದಿಗೆ ಹಾಗೂ ಮೇಲ್ಜಾತಿ, ಮೇಲ್ವರ್ಗದ ಮಹಿಳಾ ಸಮುದಾಯಗಳೊಂದಿಗೆ ನೋಡಲಾಗುತ್ತಿದೆ. ಹಾಗೆಯೇ ಮಹಿಳಾ ಜನಪದ ಸಾಹಿತ್ಯವನ್ನು ಕೆಳ ಜಾತಿ, ಕೆಳವರ್ಗದ ಮಹಿಳೆಯರೊಂದಿಗೆ ಇಟ್ಟು ನೋಡಲಾಗುತ್ತಿದೆ. ಆದರೆ ಈ ಬಗೆಯ ಪೂರ್ವಾಗ್ರಹಗಳೊಂದಿಗೆ ಜನಪದ ಸಾಹಿತ್ಯ ಸ್ವರೂಪವನ್ನು ಚರ್ಚಿಸುವುದು ಸೂಕ್ತವಲ್ಲ ಎನ್ನುವ ಸಂಶೋಧಕಿಯು ಅಕ್ಷರ ಸಾಕ್ಷರತೆಗೆ ಒಳಗಾಗದವರಲ್ಲಿ ಮಾತ್ರ ಜನಪದ ಕಥನಗಳು ಇರುತ್ತವೆ ಎಂದು ಹೇಳಲಾಗುವುದಿಲ್ಲವೆಂದು ತಮ್ಮ ಒಟ್ಟು ಅಧ್ಯಯನದಲ್ಲಿ ಜನಪದ ಸಾಹಿತ್ಯವನ್ನು ಕೆಳಜಾತಿ, ಕೆಳವರ್ಗ ಮತ್ತು ಮೇಲ್ಜಾತಿ, ಮೇಲ್‌ವರ್ಗದ ಮಹಿಳೆಯರೊಂದಿಗೆ ಸಮೀಕರಿಸಿಯೇ ನೋಡಿದ್ದಾರೆ. ಜನಪದ ಸಾಹಿತ್ಯದ ಅಧ್ಯಯನದ ಉದ್ದಕ್ಕೂ ಅಧ್ಯಯನಕಾರರು ಮಾಡಿಕೊಂಡ ‘ಮಹಿಳಾ ಜನಪದ ಸಾಹಿತ್ಯ’, ‘ಪುರುಷ ಜನಪದ ಸಾಹಿತ್ಯ’ ಎನ್ನುವ ವಿಂಗಡಣೆಗಳ ಹಿಂದಿರುವ ರಾಜಕಾರಣವನ್ನು ಗುರುತಿಸಿ, ಅದನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಅದರ ಜೊತೆಯಲ್ಲಿಯೇ ಮಹಿಳಾ ಜನಪದ ಸಾಹಿತ್ಯ ಅಧ್ಯಯನದಲ್ಲಿ, ಮಹಿಳಾ ಸೃಜನಶೀಲತೆಯ ಕುರಿತು ನಡೆದುಕೊಂಡು ಬಂದ ಚರ್ಚೆಯನ್ನು ವಿವರವಾಗಿ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಜನಪದ ಸಾಹಿತ್ಯ ಸಂಗ್ರಹಗಳು ಮತ್ತು ಅಧ್ಯಯನಗಳು ಎಂದು ಪ್ರಾರಂಭವಾದವು, ಯಾಕೆ ಪ್ರಾರಂಭವಾದವು, ಇವುಗಳು ಮಹಿಳಾ ಜನಪದ ಸಾಹಿತ್ಯದ ಕುರಿತು ಯಾವ ಯಾವ ಚರ್ಚೆಗಳನ್ನು ಬೆಳೆಸಿದವು. ಈ ಬಗೆಯ ಚರ್ಚೆಗಳ ಹಿಂದೆ ಯಾವ ಯಾವ ರಾಜಕಾರಣಗಳಿವೆ. ಮಹಿಳಾ ಜನಪದ ಸಂಗ್ರಹಗಳು ಅಧ್ಯಯನಗಳು ಯಾವ ಯಾವ ಕಾಲಘಟ್ಟದಲ್ಲಿ ಎಂತಹ ತಿರುವುಗಳನ್ನು ಪಡೆದುಕೊಂಡವು ಎನ್ನುವುದನ್ನು ಚರ್ಚಿಸಲಾಗಿದೆ. ಜೊತೆಗೆ ವಸಾಹತುಶಾಹಿ ಕಾಲಘಟ್ಟದಿಂದ ಮಹಿಳೀಕರಣಗೊಂಡ ಇವತ್ತಿನ ಮಹಿಳಾ ಜಾನಪದ ಅಧ್ಯಯನಗಳು ಸಾಂಸ್ಕೃತಿಕ ಸಂಸ್ಥೆಗಳನ್ನು ಹಾಗೂ ಅಧಿಕಾರದ ಸಂಬಂಧವನ್ನು ಹೇಗೆ ಪರಿಭಾವಿಸಿದೆ, ಇಲ್ಲೆಲ್ಲ ವರ್ಗ, ಲಿಂಗ, ಜಾತಿ ಆಧಾರಿತ ಕೌಟುಂಬಿಕ ಹಾಗೂ ಸಾಮಾಜಿಕ ಅಸಮಾನತೆಗಳನ್ನು ಗುರುತಿಸಲಾಗಿದೆಯೇ ಅಥವಾ ಮುಚ್ಚಿಹಾಕಲಾಗಿದೆಯೇ ಎನ್ನುವುದನ್ನು ವಿವರವಾಗಿ ನಿಕಷಕ್ಕೆ ಒಡ್ಡಲಾಗಿದೆ. ಒಟ್ಟಾರೆಯಾಗಿ, ಮಹಿಳಾ ಜನಪದ ಸಾಹಿತ್ಯವನ್ನು ಇಟ್ಟುಕೊಂಡು ಭೂತಕಾಲವನ್ನು, ಅವುಗಳು ಇಂದಿಗೂ ನಿರೂಪಣೆಗೊಳ್ಳುತ್ತಿರುವ ವರ್ತಮಾನದ ಸಾಮಾಜಿಕ ಸಂರಚನೆಯನ್ನು ತಿಳಿದುಕೊಳ್ಳುವುದು ಕೇವಲ ತಿಳುವಳಿಕೆಗಾಗಿಯೇ ಅಥವಾ ಭೂತ ಮತ್ತು ವರ್ತಮಾನಗಳೆರಡರ ಮೂಲಕ ಕಟ್ಟಿಕೊಂಡ ತಿಳುವಳಿಕೆ ಮಹಿಳಾ ಬದುಕು ಮತ್ತು ಭಾವನೆಗಳ ಮೇಲೆ ಪ್ರಭಾವ ಬೀರಬೇಕೆ ಎನ್ನುವ ಪ್ರಶ್ನೆಗಳನ್ನು ಇಟ್ಟುಕೊಂಡು ನಡೆಸಿರುವ ಪ್ರಸ್ತುತ ಸಂಶೋಧನೆಯು ತನ್ನ ಸಂಶೋಧನಾತ್ಮಕ ವೈಧಾನಿಕತೆಯಿಂದಲೂ ಸಕಾಲಿಕ ವೈಚಾರಿಕತೆಯಿಂದಲೂ ಮಹತ್ವಪೂರ್ಣವಾದುದು.

ಪ್ರಸ್ತುತ ಆಯ್ದಕೊಂಡಿರುವ “ಬುಡಕಟ್ಟು ಮಹಿಳೆ: ಸ್ಥಾಪಿತ ಗ್ರಹಿಕೆಗಳಿಗೆ ಭಿನ್ನಮತ” ಎಂಬ ಸಂಶೋಧನ ಲೇಖನವು ಹಂಪಿ ವಿವಿಯಿಂದ ಪ್ರಕಟಗೊಂಡ ‘ಮಹಿಳಾ ಅಧ್ಯಯನ’ ಎಂಬ ಅರ್ಧವಾರ್ಷಿಕ ಪತ್ರಿಕೆಯ ಜನವರಿ-ಜೂನ್-2006ರ ಸಂಪುಟ-8, ಸಂಚಿಕೆ-1ರ ಪುಟ 29-59ರಲ್ಲಿ ಪ್ರಕಟಗೊಂಡಿದೆ. ಸಂಶೋಧಕಿಯಾದ ಶೈಲಜ ಹಿರೇಮಠ ಅವರೇ ಹೇಳುವಂತೆ, “ಕನ್ನಡ ಮಹಿಳಾ ಚಿಂತನೆಗಳ ಮುಖ್ಯ ನೆಲೆಗಳನ್ನು ವಿಸ್ತೃತವಾಗಿಯೇ ಗುರುತಿಸುವ ಅಗತ್ಯವಿದೆ” ಎಂಬ ಆಶಯದಲ್ಲಿ ಮೂಡಿಬಂದಿರುವ ಮಹತ್ವಪೂರ್ಣ ಲೇಖನವಾಗಿದೆ. ಪ್ರಸ್ತುತ ಲೇಖನಕ್ಕಿರುವ ಉದ್ದೇಶ ಹಾಗೂ ಮಿತಿಯ ಹಿನ್ನೆಲೆಯಲ್ಲಿ ಇದುವರೆಗಿನ ಮಹಿಳಾ ಅಧ್ಯಯನಕಾರರ (ಪುರುಷ ಚಿಂತಕರು ಹಾಗೂ ಮಹಿಳಾ ಚಿಂತಕರು) ದೃಷ್ಟಿಕೋನಗಳನ್ನು ವಿಸ್ತೃತವಾಗಿ ವಿಶ್ಲೇಷಿಸಲಾಗುವುದಿಲ್ಲ. ಪ್ರಾತಿನಿಧಿಕವಾಗಿ ಕೆಲವು ಚಿಂತಕ-ಚಿಂತಕಿಯರ ಹೇಳಿಕೆಗಳನ್ನು ಆಧಾರವಾಗಿಟ್ಟುಕೊಂಡು ಸ್ಥೂಲವಾಗಿ ಕನ್ನಡ ಮಹಿಳಾ ಚಿಂತನೆಯ ಮುಖ್ಯ ನೆಲೆಗಳನ್ನು ಗ್ರಹಿಸಲು ಪ್ರಯತ್ನಿಸಲಾಗಿದೆ. ಅಸ್ಪೃಶ್ಯ, ಆದಿವಾಸಿ ಹಾಗೂ ಬುಡಕಟ್ಟು ಮಹಿಳೆಯರ ಬದುಕು ಮತ್ತು ಸಾಹಿತ್ಯವನ್ನು ನೋಡುವುದಕ್ಕೆ ವಿನೂತನವೂ ವಿಭಿನ್ನವೂ ಆದ ದೃಷ್ಟಿಕೋನ ಹಾಗೂ ವಿಧಾನಗಳನ್ನು ಅಳವಡಿಸಿಕೊಳ್ಳುವ ಮುನ್ನೋಟವಿದೆ.

References

ಕರಾಕೃ (ಸಂ). (೧೯೬೩). ಮೈಲಾರಲಿಂಗ ಈರಬಡಪ್ಪ. ಜನಪದ ಸಾಹಿತ್ಯ ಅಕಾಡೆಮಿ. ಮೈಸೂರು.

ಕಾಪಸೆ ರೇವಪ್ಪ (ಸಂ). (೨೦೦೦). ಹಲಸಂಗಿ ಹಾಡುಗಳು. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ. ಹಂಪಿ.

ಕೇಶವನ್ ಪ್ರಸಾದ್ (ಸಂ). (೧೯೯೯). ಮಲೆಮಾದೇಶ್ವರ. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ. ಹಂಪಿ.

ಕೇಶವ ಶರ್ಮ. (೧೯೯೮). ಶಬ್ದರೇಖೆ. ಅಭಿನವ ಪ್ರಕಾಶನ. ಬೆಂಗಳೂರು.

ಕೃಷ್ಣಮೂರ್ತಿ ಹನೂರು. (೧೯೯೮). ಜನಪದ ಮತ್ತು ಬುಡಕಟ್ಟು ಗೀತೆಗಳು. ಸಾಹಿತ್ಯ ಅಕಾಡೆಮಿ. ನವದೆಹಲಿ.

ಗಾಯಿತ್ರಿ ನಾವಡ. (೧೯೯೭). ವಿರಚನೆ. ಎನ್.ಆರ್.ಎ.ಎಂ.ಎಚ್. ಪ್ರಕಾಶನ. ಕೋಟೇಶ್ವರ.

ಚಲುವರಾಜು (ಸಂ). (೧೯೯೭). ಜುಂಜಪ್ಪ. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ. ಹಂಪಿ.

ನಾಗರಾಜ್ ಡಿ. ಆರ್., ಮನು ಚಕ್ರವರ್ತಿ ಎನ್. (ಸಂ). (೧೯೯೩). ಸ್ತ್ರೀವಾದಿ ಸಾಹಿತ್ಯ ಮೀಮಾಂಸೆಯ ಸ್ವರೂಪ: ಸಮಸ್ಯೆಗಳು, ಸಾಧ್ಯತೆಗಳು. ಭಾರತೀಯ ಸ್ತ್ರೀವಾದ. ಅಕ್ಷರ ಚಿಂತನ. ಹೆಗ್ಗೋಡು.

ನಾಯಕ ಎನ್. ಆರ್. (೧೯೯೩). ಹಾಲಕ್ಕಿ ಒಕ್ಕಲಿಗರ ಸಂಸ್ಕೃತಿ. ಕರ್ನಾಟಕ ಸಾಹಿತ್ಯ ಅಕಾಡೆಮಿ. ಬೆಂಗಳೂರು.

ಬೋರಲಿಂಗಯ್ಯ ಹಿ. ಚಿ. (೨೦೦೨). ಹಾಲಕ್ಕಿ ಒಕ್ಕಲಿಗರ ಜ್ಞಾನ ಪರಂಪರೆ. ಸಿ.ವಿ.ಜಿ. ಪಬ್ಲಿಕೇಷನ್ಸ್. ಬೆಂಗಳೂರು.

ಬೋರಲಿಂಗಯ್ಯ ಹಿ. ಚಿ. (೧೯೯೫). ಕಾಡು, ಕಾಂಕ್ರೀಟು ಮತ್ತು ಜಾನಪದ. ಅಕ್ಷರ ಪ್ರಕಾಶನ. ಹೆಗ್ಗೋಡು.

ಭಟ್ ಎಲ್. ಜಿ. (೧೯೮೮). ಹಾಲಕ್ಕಿ ಒಕ್ಕಲಿಗರು. ಐಬಿಎಚ್ ಪ್ರಕಾಶನ. ಬೆಂಗಳೂರು.

ರಾಜಶೇಖರ ಪಿ. ಕೆ. (ಸಂ). (೧೯೭೨). ಬೆಟ್ಟದ ಚಾಮುಂಡಿ. ತ.ವೆಂ. ಸ್ಮಾರಕ ಗ್ರಂಥ ಮಾಲೆ. ಮೈಸೂರು.

ವಿಜಯಾದಬ್ಬೆ. ತೇಜಸ್ವಿ ನಿರಂಜನ & ಸೀಮಂತಿನಿ ನಿರಂಜನ (ಸಂ). (೧೯೯೪). ವಚನಕಾರ್ತಿಯವರು: ಒಂದು ವಿಮುಕ್ತಿಪರ ಚಿಂತನ. ಸ್ತ್ರೀವಾದಿ ಸಾಹಿತ್ಯ ವಿಮರ್ಶೆ. ಕನ್ನಡ ಸಂಘ. ಬೆಂಗಳೂರು.

ಸುಂಕಾಪುರ ಎಂ. ಎಸ್. (೧೯೭೭). ಜೋಗತಿ ಹಾಡುಗಳು. ಕರ್ನಾಟಕ ವಿಶ್ವವಿದ್ಯಾಲಯ. ಧಾರವಾಡ.

ಶ್ರೀಮತಿ ಎಚ್. ಎಸ್. (೧೯೯೪). ಚಹರೆ. ಇಳಾ ಪ್ರಕಾಶನ. ಬೆಂಗಳೂರು.

Downloads

Published

05.11.2024

How to Cite

Byrappa M., & ಶೈಲಜ ಹಿರೇಮಠ. (2024). ಬುಡಕಟ್ಟು ಮಹಿಳೆ: ಸ್ಥಾಪಿತ ಗ್ರಹಿಕೆಗಳಿಗೆ ಭಿನ್ನಮತ. AKSHARASURYA, 5(02), 01 to 34. Retrieved from https://aksharasurya.com/index.php/latest/article/view/534

Issue

Section

ಹಿಂದಣ ಹೆಜ್ಜೆ. | TRODDEN PATH

Most read articles by the same author(s)