Table of Contents
Research Articles
ಆಧುನಿಕೋತ್ತರ ಕಾಲದ ಮಹಿಳೆಯರ ಸಂವೇದನೆ
01 to 06
ಆಧುನಿಕೋತ್ತರ ಕಾಲಘಟ್ಟದಲ್ಲಿ ಮಹಿಳಾ ಸಂವೇದನೆಯು ಪಾರಂಪರಿಕ ಮೌನವನ್ನು ಮುರಿದು, ಪ್ರತಿರೋಧದ ಮತ್ತು ಅಸ್ತಿತ್ವದ ದೃಢವಾದ ದನಿಗೂಡಿಸಿದೆ. 1960ರ ದಶಕದ ನಂತರದ ಸಾಹಿತ್ಯಿಕ ಮತ್ತು ಬೌದ್ಧಿಕ ಬದಲಾವಣೆಗಳು ಸ್ತ್ರೀಯರ ಅನುಭವಗಳಿಗೆ ಹೊಸ ಆಯಾಮವನ್ನು ನೀಡಿವೆ. ಪಿತೃಪ್ರಧಾನ ವ್ಯವಸ್ಥೆ, ಕೌಟುಂಬಿಕ ದೌರ್ಜನ್ಯ ಮತ್ತು ಧಾರ್ಮಿಕ ಕಟ್ಟುಪಾಡುಗಳ ವಿರುದ್ಧದ ಸಂಘರ್ಷವು ಇಲ್ಲಿ ಪ್ರಧಾನವಾಗಿ ವ್ಯಕ್ತವಾಗಿದೆ. ಕೇವಲ ಸಹನಶೀಲರಾಗಿ ಉಳಿಯದೆ, ಸ್ತ್ರೀಯರು ತಮ್ಮ ಹಕ್ಕು, ಘನತೆ ಮತ್ತು ಸ್ವಾಯತ್ತತೆಗಾಗಿ ನಡೆಸುವ ಬೌದ್ಧಿಕ ಹೋರಾಟವನ್ನು ಕನ್ನಡದ ಪ್ರಮುಖ ಲೇಖಕಿಯರ ಕೃತಿಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸಲಾಗಿದೆ. ದೇಹ ರಾಜಕೀಯ ಮತ್ತು ಲೈಂಗಿಕತೆಯ ಕುರಿತಾದ ಮುಕ್ತ ಚರ್ಚೆಗಳು ಸ್ತ್ರೀವಾದಿ ಚಿಂತನೆಗೆ ಹೊಸ ಬುನಾದಿ ಹಾಕಿದ್ದು, ಸಾಹಿತ್ಯವು ಮಹಿಳಾ ಬದುಕಿನ ಸಂಕೀರ್ಣತೆಗಳನ್ನು ಮತ್ತು ಆತ್ಮವಿಶ್ವಾಸದ ಹೆಜ್ಜೆಗಳನ್ನು ಸಮರ್ಥವಾಗಿ ದಾಖಲಿಸಿದೆ.
ಕನ್ನಡ ಸಾಹಿತ್ಯದಲ್ಲಿ ಆಧುನಿಕೋತ್ತರ ಚಿಂತನೆಗಳು
07 to 15
ಆಧುನಿಕೋತ್ತರವಾದವು ವಿಶಾಲವಾಗಿ ಸಾಮಾಜಿಕ-ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸಿದ್ಧಾಂತವನ್ನು ಸೂಚಿಸುತ್ತದೆ, ಮತ್ತು ಸಾಮಾಜಿಕ ವಿಜ್ಞಾನಗಳು, ಕಲೆ, ವಾಸ್ತುಶಿಲ್ಪ, ಸಾಹಿತ್ಯ, ಫ್ಯಾಷನ್, ಸಂವಹನ ಮತ್ತು ತಂತ್ರಜ್ಞಾನ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಪ್ರಕಟವಾದ ದೃಷ್ಟಿಕೋನದಲ್ಲಿನ ಬದಲಾವಣೆಯನ್ನು ಸೂಚಿಸುತ್ತದೆ. ಗ್ರಹಿಕೆಯಲ್ಲಿ ಆಧುನಿಕೋತ್ತರ ಬದಲಾವಣೆಯು 1950 ರ ದಶಕದ ಉತ್ತರಾರ್ಧದಲ್ಲಿ ಪ್ರಾರಂಭವಾಯಿತು ಮತ್ತು ಬಹುಶಃ ಇನ್ನೂ ಮುಂದುವರೆದಿದೆ ಎಂದು ಸಾಮಾನ್ಯವಾಗಿ ಒಪ್ಪಿಕೊಳ್ಳಲಾಗಿದೆ. ಆಧುನಿಕೋತ್ತರವಾದವನ್ನು ಎರಡನೇ ಮಹಾಯುದ್ಧದ ನಂತರದ ಯುಗದ ಅಧಿಕಾರ ಬದಲಾವಣೆಗಳು ಮತ್ತು ಅಮಾನವೀಯತೆ ಮತ್ತು ಗ್ರಾಹಕ ಬಂಡವಾಳಶಾಹಿಯ ದಾಳಿಯೊಂದಿಗೆ ಸಂಬಂಧಿಸಬಹುದು. ಆಧುನಿಕೋತ್ತರವಾದ ಎಂಬ ಪದವು ಆಧುನಿಕತಾವಾದಕ್ಕೆ ಸಂಬಂಧಿಸಿದೆ ಎಂದು ಸೂಚಿಸುತ್ತದೆ. ಆಧುನಿಕತಾವಾದವು ಇಪ್ಪತ್ತನೇ ಶತಮಾನದ ಆರಂಭದ ದಶಕಗಳಲ್ಲಿ ಪ್ರಚಲಿತದಲ್ಲಿದ್ದ ಹಿಂದಿನ ಸೌಂದರ್ಯ ಚಳುವಳಿಯಾಗಿತ್ತು. ಆಧುನಿಕತಾವಾದದ ನಂತರದ ನಿಲುವು ಏಕಕಾಲದಲ್ಲಿ ಆಧುನಿಕತಾವಾದದ ಮುಂದುವರಿಕೆ ಮತ್ತು ಅದರಿಂದ ಬೇರ್ಪಡುವಿಕೆ ಎಂದು ಹೆಚ್ಚಾಗಿ ಹೇಳಲಾಗುತ್ತದೆ.
ಆಧುನಿಕೋತ್ತರವಾದದಲ್ಲಿ ಎಲ್ಲವೂ ಸಾಪೇಕ್ಷ ಮತ್ತು ವಿನಾಶಕಾರಿಯಾಗಿದೆ. “ಆಧುನಿಕೋತ್ತರವಾದ” ಎಂಬ ಪದದ ವಿಭಜನೆಯು ಎರಡು ಪ್ರಮುಖ ಭಾಗಗಳಾಗಿ ವಿಭಜನೆಯಾಗುತ್ತದೆ, ಪೋಸ್ಟ್ ಮತ್ತು ಮಾಡರ್ನಿಸಂ. ಪೋಸ್ಟ್ ಅನ್ನು ತಾತ್ವಿಕವಾಗಿ ಬಹುರಂಗಗಳು ಮತ್ತು ವಿವಿಧ ಮೂಲಗಳಿಂದ ಬಂದ ಆಲೋಚನೆಗಳ ಮೇಲೆ ನಿರ್ಮಿಸಲಾಗಿದೆ, ಅವರು ಡಿಕನ್ಸ್ಟ್ರಕ್ಷನ್ ಅನ್ನು ಒಂದು ವಿಧಾನವಾಗಿ ಬಳಸುತ್ತಾರೆ. ಆಧುನಿಕೋತ್ತರವಾದದ ಕಲ್ಪನೆಯೆಂದರೆ ನೀವು ಏನಲ್ಲ ಎಂದು ತಿಳಿಯುವುದು ಅಲ್ಲ, ಆದರೆ ನೀವು ನಿಜವಾಗಿಯೂ ಏನೆಂದು ತಿಳಿಯದಿರುವುದು. ಆಧುನಿಕೋತ್ತರವಾದವಲ್ಲದಿರುವುದು ಆಧುನಿಕತಾವಾದ. ಇದು ಆಧುನಿಕತಾವಾದದ ಯುಗದ ನಂತರದ ಪರಿಣಾಮವಾಗಿದೆ, ಇದು ಸಂಪೂರ್ಣತೆಗಳ ಮೇಲೆ ನಿರ್ಮಿಸಲಾದ ಪ್ರತ್ಯೇಕತೆಯನ್ನು ಮತ್ತು ವೈಜ್ಞಾನಿಕ ವಿಧಾನವನ್ನು ಅದರ ರಚನೆಯಾಗಿ ನಿರ್ಮಿಸಲಾಗಿದೆ. ಈ ಆಧುನಿಕ, ಆಧುನಿಕೋತ್ತರ, ವಸಾಹತು, ವಸಾಹತುಶಾಹಿ, ವಸಾಹತೋತ್ತರ, ಸ್ತ್ರೀವಾದ, ವಾಸ್ತವವಾದ, ಅಸ್ತಿತ್ವವಾದ, ರಾಚನಿಕವಾದ, ಸಂರಚನೋತ್ತರವಾದ, ಪ್ರಜ್ಞಾಪ್ರವಾಹ ತಂತ್ರ – ಇವೇ ಮೊದಲಾದ ಎಲ್ಲವೂ ಪಾಶ್ಚಿಮಾತ್ಯರ ಕೊಡುಗೆಯೇ. ಭಾರತವನ್ನಾಳಿದ ಬ್ರಿಟಿಷರ ಆಳ್ವಿಕೆಯ ಕಾಲ ವಸಾಹತು ಕಾಲ. ಅನಂತರದ್ದೆಲ್ಲಾ ವಸಾಹತೋತ್ತರವೇ. ಸರಳವಾಗಿ ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯಾನಂತರ ಎಂದು ಅರ್ಥೈಸಿಕೊಳ್ಳಬಹುದು. ಈ ಬಗೆಯ ವಾದಗಳು ವಸಾಹತುಶಾಹಿ ಅಥವಾ ಜಾಗತೀಕರಣದ ಪ್ರಭಾವದಿಂದ ವಿಶ್ವದ ಹಲವು ದೇಶಗಳಿಗೆ ಹರಡಿ ವಿಸ್ತರಿಸಿದವು, ಅಲ್ಲಿನ ಚಿಂತಕರನ್ನು ಪ್ರಭಾವಿಸಿ, ಆಯಾ ದೇಶಕಾಲಕ್ಕನುಗುಣವಾಗಿ ರೂಪಾಂತರಗೊಂಡು ತಮ್ಮದೇ ಆದ ರೀತಿಯಲ್ಲಿ ತಮ್ಮ ಅಸ್ತಿತ್ವವನ್ನು ಸ್ಥಾಪಿಸಿಕೊಳ್ಳುತ್ತವೆ. ಆಧುನಿಕೋತ್ತರ ಅಥವಾ ವಸಾಹತೋತ್ತರದ ಚಿಂತನೆಗಳು ನಮ್ಮ ಕನ್ನಡದ ಅನೇಕ ಚಿಂತಕರನ್ನು ಪ್ರಭಾವಿಸಿವೆ. ಅವು ನಮ್ಮ ಸಾಹಿತ್ಯದ ಮೇಲೆ ಪ್ರಭಾವ ಬೀರಿ ಕನ್ನಡ ಸಾಹಿತ್ಯದಲ್ಲಿ ಸಾಮಾಜಿಕ ಸಂಚಲನೆಗಳನ್ನುಂಟುಮಾಡಿದವು.
ಸ್ತ್ರೀವಾದಿ ಚಿಂತನೆ ಮತ್ತು ಕಮಲಾ ಹಂಪನಾ
16 to 23
ಪ್ರಸ್ತುತ ಕಾಲಘಟ್ಟದಲ್ಲಿ ಮಹಿಳೆಯು ಅಭಿವೃದ್ಧಿ ಪಥದತ್ತ ಹೆಜ್ಜೆ ಇಟ್ಟರೂ ಕೂಡಾ ಮಹಿಳೆಯ ಬಗೆಗಿನ ಚಿಂತನೆ ಅಥವಾ ಮಹಿಳಾ ಸಾಮಾಜಿಕ ಚಿಂತನೆಯು ಹಾಗೂ ಮಹಿಳಾ ಸ್ವಾತಂತ್ರ್ಯ, ಸ್ವಾವಲಂಬನೆಯು ತೃಪ್ತಿದಾಯಕವಾಗಿಲ್ಲ. ಸಮಕಾಲೀನ ಸಂದರ್ಭವು ಸೃಷ್ಟಿಸಿರುವ ಹಲವಾರು ಸಮಸ್ಯೆಗಳ ನಡುವೆ ಸ್ತ್ರೀಸಬಲೀಕರಣ, ಸ್ತ್ರೀಸ್ವಾತಂತ್ರ್ಯದ ಬಗೆಗಿನ ಚಿಂತನೆಗೆ ಮಹತ್ವ ಕಡಿಮೆಯಾಗಿದ್ದು ಇದು ಜರೂರಾಗಿ ಪರಿಹರಿಸಲೇಬೇಕಾಗಿರುವ ಅನಿವಾರ್ಯ ಪ್ರಕ್ರಿಯೆಯಾಗಿ ಉಳಿದಿಲ್ಲ. ಸ್ತ್ರೀ ಸಂವೇದನೆ ಕುರಿತಾದ ಸುಮಾರು 650 ಪುಟಗಳ ‘ಭರಣ’ ಎಂಬ ಸಂಪುಟವು ಪ್ರೊ. ಕಮಲಾ ಹಂಪನಾ ಅವರ ಸ್ತ್ರೀವಾದಿ ವಿಚಾರಗಳಿಗೆ ಹಿಡಿದ ಕೈಗನ್ನಡಿ. ‘ಭರಣ’ ಪ್ರಬಂಧಗಳ ಗುಚ್ಛ. ಧರಿಸುವುದು, ಪೋಷಿಸುವುದು, ತುಂಬುವುದು ಎಂಬ ಅರ್ಥಗಳು ಭರಣ ಪದಕ್ಕಿದೆ. ಈ ಮೂರು ಅರ್ಥಗಳೂ ಪೂರಕವಾಗಿ ಧರಿಸುವ, ತುಂಬುವ ಮತ್ತು ಪೋಷಿಸುವ ಗುಣಗಳ ಪ್ರತೀಕವೇ ಮಹಿಳೆ ಎಂದು ತಿಳಿಸುತ್ತಾರೆ. ಧರಿಸುವುದರಿಂದಲೇ ಆಕೆ ಧಾರಣಿ, ಶಾಂತಿ, ಸಹನೆ, ಧಾರಣೆಯ ಪ್ರತಿರೂಪವೇ ಸ್ತ್ರೀ. ಹೀಗೆ ಮಹಿಳೆ ಭರಣವೂ ಹೌದು ಆಭರಣವೂ ಹೌದು ಎಂದು ವಿವರಿಸುತ್ತಾರೆ. ಹಂಪನಾ ಅವರ ಚಿಂತನೆಯಲ್ಲಿ ‘ಸಂಸಾರ’ ಬಿಂದು ಪ್ರಮುಖ ಘಟಕ. ಅದು ಸರಿಯಾದ ಅಸ್ತಿಭಾರದ ಮೇಲೆ ನಿಂತಾಗ ಮಾತ್ರ ಸಮಾಜ, ನಾಡು, ದೇಶ, ಜಗತ್ತು ಸರಿಯಾಗಿ ನಿಲ್ಲಬಲ್ಲದು. ಇಂದು ಜಗತ್ತು ನಿಂತಿದೆ ಮುನ್ನಡೆಯುತ್ತಿದೆ ಎಂದರೆ ಅದರ ಶ್ರೇಯಸ್ಸು ಅದನ್ನು ಹೊತ್ತು ನಿಂತಿರುವ ಹೆಣ್ಣಿಗೆ ಸಲ್ಲುತ್ತದೆ ಎಂದು ಅವರು ಅಭಿಪ್ರಾಯ ಪಡುತ್ತಾರೆ. ‘ಆ ಮುಖ’ ಎಂಬ ಅವರ 19 ಜನ ಸಾಹಿತಿಗಳ ಪತ್ನಿಯರ ಸಂದರ್ಶನ, ವ್ಯಕ್ತಿ ಚಿತ್ರಣಗಳ ಕೃತಿಯಲ್ಲೂ ಕಮಲಾ ಹಂಪನಾ ಅವರು ಕೇಳುವ ಹಲವು ಪ್ರಶ್ನೆಗಳು ಈ ನಂಬಿಕೆಗೆ ಪೂರಕವಾಗಿಯೇ ಇದೆ. ಮಹಿಳೆಯರ ಬಗ್ಗೆ ವೈಚಾರಿಕ ಬರಹಗಳು, ರಾಷ್ಟ್ರಕೂಟ, ಗಂಗರ ಕಾಲದಿಂದ ಮಹಿಳೆಯರ ಬಗೆಗೆ ಸಂಶೋಧನಾ ಲೇಖನಗಳು, ಲೇಖಕಿಯರ ವ್ಯಕ್ತಿ ಚಿತ್ರಗಳು, ಲೇಖಕಿಯರ ಕೃತಿಗಳಿಗೆ ಬರೆದ ಮುನ್ನುಡಿಗಳು-ಹೀಗೆ ಕಮಲಾ ಹಂಪನಾ ಅವರ ಮಹಿಳಾ ಸಾಹಿತ್ಯ ವಿಸ್ತಾರವಾಗಿದೆ. ಸಂಘರ್ಷಕ್ಕಿಂತ ಸಾಮರಸ್ಯದ ಬಗೆಗೆ ಅವರ ಒಲವಿದೆ. ‘ಅಮೃತಮತಿ: ಸ್ತ್ರೀವಾದಿ ನೆಲೆಯಲ್ಲಿ’ ಎಂಬ ಬರಹ ಕಮಲಾ ಹಂಪನಾ ಅವರ ಮನೋಭೂಮಿಕೆಯನ್ನು ಅರಿಯಲು ಸೂಕ್ತ ಬರಹವಾಗಿದೆ. ಈ ಬರಹದಲ್ಲಿ ಅವರು ಇತರ ಹಲವರ ಪ್ರಮುಖ ಲೇಖನಗಳನ್ನೂ ಪರಿಗಣಿಸಿದ್ದಾರೆ. ನೀತಿ-ಅನೀತಿ, ಅಸ್ಮಿತೆ, ಸಂಘರ್ಷ ಹೀಗೆ ಸಾಗಿ ಬಂದ ಹಲವು ವಿಚಾರಗಳನ್ನು ಚರ್ಚಿಸುತ್ತಾ ಹಂಪನಾ ಅವರು ಅಮೃತಮತಿಯ ಒಳತುಳಿತನ್ನು ಕಾವ್ಯ ನ್ಯಾಯದಿಂದ ಅರಿಯಬೇಕು ಎನ್ನುತ್ತಾರೆ.
ಕನ್ನಡ ಸಾಹಿತ್ಯದಲ್ಲಿ ಆಧುನಿಕೋತ್ತರ ಕಾಲದ ಸಮಸ್ಯೆ ಮತ್ತು ಸವಾಲುಗಳು
24 to 32
ಕನ್ನಡ ಸಾಹಿತ್ಯದಲ್ಲಿ ಆಧುನಿಕೋತ್ತರ ಕಾಲದ ಸಮಸ್ಯೆಗಳು ಮತ್ತು ಸವಾಲುಗಳು ಮುಖ್ಯವಾಗಿ ವಸಾಹತೋತ್ತರ ಭಾರತದ ವಾಸ್ತವ, ಜಾಗತೀಕರಣದ ಪ್ರಭಾವ, ಸಾಮಾಜಿಕ ನ್ಯಾಯದ ಅನ್ವೇಷಣೆ, ಡಿಜಿಟಲೀಕರಣದ ಸವಾಲುಗಳು, ಮತ್ತು ಸಾಂಪ್ರದಾಯಿಕ ಹಾಗೂ ಆಧುನಿಕ ಮೌಲ್ಯಗಳ ನಡುವಿನ ಸಂಘರ್ಷವನ್ನು ಒಳಗೊಂಡಿವೆ ಎಂದರೆ ತಪ್ಪಾಗಲಾರದು. ಕನ್ನಡ ಸಾಹಿತ್ಯದ ಪ್ರಮುಖ ಸಮಸ್ಯೆಗಳಲ್ಲಿ ಮುಖ್ಯವಾಗಿ ಯುವಜನರಲ್ಲಿ ಕಡಿಮೆಯಾಗುತ್ತಿರುವ ಓದುವಿಕೆ, ಆಂಗ್ಲ ಭಾಷೆಯ ಪ್ರಭಾವ, ಗಣಕೀಕರಣದಲ್ಲಿನ ಸವಾಲುಗಳು, ಪ್ರಕಟಣೆ ಮತ್ತು ವಿತರಣೆ ಸಮಸ್ಯೆಗಳು, ಮತ್ತು ಕನ್ನಡವನ್ನು ಕೇವಲ ಶಿಕ್ಷಣ ಮಾಧ್ಯಮವಾಗಿ ನೋಡದೆ, ಬದುಕಿನ ಮುಖ್ಯವಾಹಿನಿಗೆ ತರುವಲ್ಲಿನ ಹಿನ್ನಡೆ, ಜಾಗತೀಕರಣ ಮತ್ತು ನಗರೀಕರಣದಿಂದಾಗಿ ಆಂಗ್ಲ ಭಾಷೆಯ ಬಳಕೆ ಹೆಚ್ಚಾಗುತ್ತಿರುವುದು, ಕನ್ನಡ ಪುಸ್ತಕಗಳ ಮಾರಾಟದಲ್ಲಿ ಕುಸಿತ ಕಂಡಿರುವುದು ಮತ್ತು ಡಿಜಿಟಲ್ ಯುಗದಲ್ಲಿ ಕನ್ನಡದ ಅಳವಡಿಕೆಗೆ ತಂತ್ರಜ್ಞಾನದ ಬೆಂಬಲದ ಕೊರತೆ, ಕನ್ನಡ ಸಾಹಿತ್ಯದಲ್ಲಿ ಓದುಗರ ಕೊರತೆ ಮತ್ತು ಮಾರುಕಟ್ಟೆ ಸಮಸ್ಯೆಗಳು ಗಂಭೀರವಾಗಿದ್ದು, ಮುಖ್ಯವಾಗಿ ಡಿಜಿಟಲ್ ಯುಗದಲ್ಲಿ ಓದುವ ಅಭ್ಯಾಸ ಕಡಿಮೆಯಾಗುತ್ತಿರುವುದು, ಕಿರಿಯ ಪೀಳಿಗೆಯ ಆಸಕ್ತಿ ಕಡಿಮೆಯಾಗಿರುವುದು, ವಿಜ್ಞಾನ-ತಂತ್ರಜ್ಞಾನ ಸಾಹಿತ್ಯಕ್ಕೆ ಬರಹಗಾರರ ಕೊರತೆ, ಮತ್ತು ಸಾಹಿತ್ಯವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿನ ಸವಾಲುಗಳು ಪ್ರಮುಖವಾಗಿವೆ. ಡಿಜಿಟಲ್ ಯುಗ: ಸ್ಮಾರ್ಟ್‌ಫೋನ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳ ಹೆಚ್ಚಳದಿಂದಾಗಿ ಓದುವ ಆಸಕ್ತಿ ಕಡಿಮೆಯಾಗಿದೆ. ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸುವ ಕಾರ್ಯಕ್ರಮಗಳ ಕೊರತೆ ಮತ್ತು ಸಾಹಿತ್ಯದ ಒಡನಾಟವಿಲ್ಲದ ಜನರನ್ನು ತಲುಪುವಲ್ಲಿನ ಸವಾಲುಗಳು.
ಆಧುನಿಕ ಕನ್ನಡ ಸಾಹಿತ್ಯವು ಡಿಜಿಟಲೀಕರಣ, ಜಾಗತೀಕರಣ, ಮತ್ತು ಮಾಹಿತಿ ತಂತ್ರಜ್ಞಾನದ ಪ್ರಭಾವದಿಂದಾಗಿ ಹೊಸ ಸವಾಲುಗಳನ್ನು ಎದುರಿಸುತ್ತಿದೆ, ಮುಖ್ಯವಾಗಿ ಕನ್ನಡದ ಬಳಕೆಯನ್ನು ಹೆಚ್ಚಿಸುವುದು, ಯುನಿಕೋಡ್‌ನಂತಹ ತಂತ್ರಜ್ಞಾನಗಳನ್ನು ಅಳವಡಿಸುವುದು, ಸಾಮಾಜಿಕ ಜಾಲತಾಣಗಳ ಸದುಪಯೋಗ, ಸಾಹಿತ್ಯ ಸಂಶೋಧನೆಯ ಕುಸಿತ, ಹೊಸ ಬಗೆಯ ಸಾಹಿತ್ಯ ಪ್ರಕಾರಗಳ ಸೃಷ್ಟಿ, ಮಹಿಳಾ ಸಾಹಿತ್ಯದ ವಿಶ್ಲೇಷಣೆ ಮತ್ತು ಪರಂಪರೆಯೊಂದಿಗೆ ಡಿಜಿಟಲ್ ಯುಗವನ್ನು ಬೆಸೆಯುವಂತಹ ಸಮಸ್ಯೆಗಳನ್ನು ಎದುರಿಸುತ್ತಿದೆ. ಡಿಜಿಟಲ್ ಮತ್ತು ತಂತ್ರಜ್ಞಾನದ ಸವಾಲುಗಳು: ಯುನಿಕೋಡ್ ಅಳವಡಿಕೆ: ಕಂಪ್ಯೂಟರ್ ಮತ್ತು ಮೊಬೈಲ್‌ಗಳಲ್ಲಿ ಯುನಿಕೋಡ್ ಕನ್ನಡದ ಬಳಕೆಯ ಪ್ರಮಾಣ ಹೆಚ್ಚಾಗಿದ್ದರೂ, ಒ.ಸಿ.ಆರ್ ತಂತ್ರಾಂಶದ ಅಭಿವೃದ್ಧಿ ಮತ್ತು ಹಸ್ತಪ್ರತಿಗಳ ಡಿಜಿಟಲೀಕರಣ ದೊಡ್ಡ ಸವಾಲಾಗಿದೆ. ಡಿಜಿಟಲೀಕರಣ ಮತ್ತು ಹೊಸ ತಂತ್ರಜ್ಞಾನದ ಸವಾಲು: ಸಾಹಿತ್ಯ ರಚನೆ, ಪ್ರಸಾರ ಮತ್ತು ವಿಮರ್ಶೆಯಲ್ಲಿ ಡಿಜಿಟಲ್ ಮಾಧ್ಯಮಗಳ ಪ್ರವೇಶ. ಹಳೆಯ ಸಾಹಿತ್ಯ ಪರಂಪರೆಯನ್ನು ಡಿಜಿಟಲ್ ಯುಗಕ್ಕೆ ಒಳತರುವ ಸವಾಲು. ಉಚಿತವಾಗಿ ಲಭ್ಯವಿರುವ ಮುಕ್ತ ತಂತ್ರಾಂಶಗಳನ್ನು ಕನ್ನಡಕ್ಕೆ ತರುವುದರಲ್ಲಿ, ಆಸಕ್ತ ಕನ್ನಡಿಗರ ಗುಂಪುಗಳು ಹಲವು ಮಹತ್ವದ ಸಾಧನೆಗಳನ್ನು ಮಾಡಿವೆ ಅವುಗಳ ಸಾಧನೆಯನ್ನು ಗುರುತಿಸಬೇಕಾಗಿದೆ. ಇಂದು ಈ ತೆರನಾದ ತಾಂತ್ರಿಕ ಕೆಲಸ ಮಾಡುವ ಇಂತಹ ಸಮುದಾಯಗಳೊಡನೆ ಕೈಜೋಡಿಸುವುದು, ಹೊಸ ಪ್ರಯತ್ನಗಳನ್ನು ಬೆಂಬಲಿಸುವುದು ನಾವೆಲ್ಲರೂ ಮಾಡಬೇಕಾದ ಕೆಲಸವಾಗಬೇಕಾಗಿದೆ.
ಮಾನವಿಕ ಜ್ಞಾನ ಶಿಸ್ತುಗಳ ನೆಲೆಯಲ್ಲಿ 90ರ ದಶಕದ ಮಹಿಳಾ ಸಾಹಿತ್ಯ
33 to 42
ಮಾನವಿಕ ಜ್ಞಾನ ಶಿಸ್ತುಗಳು ಮಾನವನ ಜೀವನ ಮತ್ತು ಸಮಾಜವನ್ನು ಅರಿಯುವ ಪ್ರಮುಖ ಅಧ್ಯಯನ ಕ್ಷೇತ್ರಗಳಾಗಿವೆ. ಸಾಹಿತ್ಯವು ಈ ಮಾನವಿಕ ಅಧ್ಯಯನದ ಅವಿಭಾಜ್ಯ ಅಂಗವಾಗಿದ್ದು, ಕಾಲಘಟ್ಟದ ಸಾಮಾಜಿಕ ಬದಲಾವಣೆಗಳನ್ನು ಪ್ರತಿಬಿಂಬಿಸುತ್ತದೆ. 1990ರ ದಶಕವು ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಬದಲಾವಣೆಗಳ ಕಾಲವಾಗಿದ್ದು, ಇದರ ಪ್ರಭಾವ ಮಹಿಳಾ ಸಾಹಿತ್ಯದಲ್ಲೂ ಸ್ಪಷ್ಟವಾಗಿ ಕಾಣುತ್ತದೆ. 90ರ ದಶಕದ ಮಹಿಳಾ ಸಾಹಿತ್ಯವು ಮಹಿಳೆಯ ಆತ್ಮಗುರುತು, ಅಸಹಾಯಕತೆ, ಪ್ರತಿರೋಧ ಮತ್ತು ಸ್ವತಂತ್ರ ಚಿಂತನೆಗಳನ್ನು ಕೇಂದ್ರವಾಗಿಟ್ಟುಕೊಂಡಿದೆ. ಮಾನವಿಕ ಜ್ಞಾನ ಶಿಸ್ತುಗಳ ನೆಲೆಯಲ್ಲಿ ಈ ಸಾಹಿತ್ಯವನ್ನು ಪರಿಶೀಲಿಸಿದಾಗ, ಮಹಿಳೆಯ ವೈಯಕ್ತಿಕ ಅನುಭವಗಳು ಸಾಮಾಜಿಕ ಅರ್ಥಗಳನ್ನು ಪಡೆಯುತ್ತವೆ. ಹೀಗಾಗಿ ಈ ದಶಕದ ಮಹಿಳಾ ಸಾಹಿತ್ಯವು ಮಾನವಿಕ ಮೌಲ್ಯಗಳನ್ನು ಪುನರ್‌ವ್ಯಾಖ್ಯಾನಿಸುವ ಮಹತ್ವದ ಅಧ್ಯಯನ ಕ್ಷೇತ್ರವಾಗುತ್ತದೆ.
ಮಾನವಿಕ ಅಧ್ಯಯನ ಮತ್ತು 1990ರ ದಶಕದ ಮಹಿಳಾ ಸಾಹಿತ್ಯ: ಒಂದು ಸಾಂಸ್ಕೃತಿಕ ಮತ್ತು ಸಾಮಾಜಿಕ ವಿಶ್ಲೇಷಣೆ
ಈ ಪ್ರಬಂಧವು 1990ರ ದಶಕದ ಮಹಿಳಾ ಸಾಹಿತ್ಯವನ್ನು ಮಾನವಿಕ ಜ್ಞಾನ ಶಿಸ್ತುಗಳ (Humanities) ಹಿನ್ನೆಲೆಯಲ್ಲಿ ವಿಶ್ಲೇಷಿಸುತ್ತದೆ. ಭಾರತದ ಆರ್ಥಿಕ ಉದಾರೀಕರಣ ಮತ್ತು ಜಾಗತೀಕರಣದ ಪ್ರಕ್ರಿಯೆಗಳು ಮಹಿಳೆಯರ ಸಾಮಾಜಿಕ, ಸಾಂಸ್ಕೃತಿಕ ಮತ್ತು ವೈಯಕ್ತಿಕ ಜೀವನದ ಮೇಲೆ ಬೀರಿದ ಪ್ರಭಾವಗಳನ್ನು ಈ ಕಾಲಘಟ್ಟದ ಸಾಹಿತ್ಯವು ಹೇಗೆ ಪ್ರತಿಬಿಂಬಿಸಿದೆ ಎಂಬುದನ್ನು ಇಲ್ಲಿ ಚರ್ಚಿಸಲಾಗಿದೆ. ಸಾಹಿತ್ಯವು ಕೇವಲ ಕಲಾತ್ಮಕ ಅಭಿವ್ಯಕ್ತಿಯಾಗದೆ, ಪಿತೃಸತ್ತಾತ್ಮಕ ವ್ಯವಸ್ಥೆಯನ್ನು ಪ್ರಶ್ನಿಸುವ ಮತ್ತು ಮಹಿಳೆಯ ಸ್ವತಂತ್ರ ಅಸ್ತಿತ್ವವನ್ನು ಮರುಸ್ಥಾಪಿಸುವ ಒಂದು ‘ಜೀವಂತ ದಾಖಲೆ’ಯಾಗಿ ಹೇಗೆ ಹೊರಹೊಮ್ಮಿತು ಎಂಬುದು ಈ ಅಧ್ಯಯನದ ಕೇಂದ್ರವಸ್ತುವಾಗಿದೆ.
ಇತಿಹಾಸ, ಸಮಾಜಶಾಸ್ತ್ರ ಮತ್ತು ತತ್ವಶಾಸ್ತ್ರದಂತಹ ಮಾನವಿಕ ಶಿಸ್ತುಗಳೊಂದಿಗೆ ಸಮನ್ವಯ ಸಾಧಿಸಿರುವ ಈ ಸಾಹಿತ್ಯವು, ಮಹಿಳೆಯರ ಮೌನಗೊಳಿಸಲ್ಪಟ್ಟ ಅನುಭವಗಳಿಗೆ ಧ್ವನಿ ನೀಡಿದೆ. ಕುಟುಂಬದ ರೂಪಾಂತರ, ಲೈಂಗಿಕತೆ, ಶಿಕ್ಷಣ ಮತ್ತು ಉದ್ಯೋಗದಂತಹ ಹಕ್ಕುಗಳ ಹೋರಾಟವನ್ನು ಈ ದಶಕದ ಲೇಖಕಿಯರು ಸ್ವಾನುಭವದ ಆಧಾರದ ಮೇಲೆ ಸೃಜಿಸಿದ್ದಾರೆ. ಅಂತಿಮವಾಗಿ, ಈ ಬರಹಗಳು ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಮಾನವೀಯ ಮೌಲ್ಯಗಳ ಪುನರ್ವ್ಯಾಖ್ಯಾನಕ್ಕೆ ಸಾಂಸ್ಕೃತಿಕ ನೆಲೆಯನ್ನು ಒದಗಿಸಿಕೊಟ್ಟಿವೆ ಎಂದು ಈ ಸಂಶೋಧನಾತ್ಮಕ ಬರಹವು ಪ್ರತಿಪಾದಿಸುತ್ತದೆ.
ಸಾಮಾಜಿಕ ಜಾಲತಾಣಗಳು ಮತ್ತು ವಸಾಹತೋತ್ತರ ಸಾಹಿತ್ಯದ ಅಂತರ್ ಸಂಬಂಧ
43 to 49
ಅನ್ವೇಷಣಾ ಬುದ್ಧಿಯನ್ನು ಹೊಂದಿದ ಮಾನವನ ದೃಷ್ಟಿಕೋನ ಅವನು ಕಲ್ಪಿಸಿಕೊಳ್ಳುವ ಸಂಗತಿಗಳನ್ನೆಲ್ಲ ಸಾಕಾರಗೊಳ್ಳುವಷ್ಟರ ಮಟ್ಟಿಗೆ ಇಂದು ತಾಂತ್ರಿಕವಾಗಿ ಬೆಳೆದಿದ್ದೇವೆ ಮತ್ತು ಮುಂದೆಯೂ ಬೆಳೆಯುತ್ತಿದ್ದೇವೆ. ಹೀಗಾಗಿ ಇಂದು ಸಾಮಾಜಿಕ ಜಾಲತಾಣಗಳು ಮಾನವ ಸಮುದಾಯವನ್ನು ಬಹುತೇಕ ಆಕ್ರಮಿಸಿಕೊಂಡಿದೆ. ಇದು ಮಾನವನ ಬದುಕಿನಲ್ಲಿ ಮಹತ್ತರವಾದ ಬದಲಾವಣೆಯನ್ನು ತಂದಿದೆ. ಇದಕ್ಕೆಲ್ಲ ಕಾರಣ ಪ್ರಪಂಚದ ಎಲ್ಲ ದೇಶ ದೇಶಗಳೊಡನೆ ಬೆಸೆದಿರುವ ಅಂತರಾಷ್ಟ್ರೀಯ ಸಂಬಂಧಗಳು ಮತ್ತು ವಿಜ್ಞಾನ-ತಂತ್ರಜ್ಞಾನದ ಬೆಳವಣಿಗೆಯೇ ಕಾರಣ. 1990ರ ನಂತರ ಜಾರಿಗೊಂಡ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣವು ಭಾರತದಲ್ಲಿ ನವ ಮನ್ವಂತರವನ್ನು ಸೃಷ್ಟಿಸಿದೆ. ಇದು ಪ್ರಪಂಚದ ಎಲ್ಲ ದೇಶಗಳೊಡನೆ ಕೊಳುಕೊಡೆ ಸಂಬಂಧವನ್ನು ಗಟ್ಟಿಗೊಳಿಸಿದೆ.
ಹದಿನೈದನೇ ಶತಮಾನದಲ್ಲಿ ಭಾರತಕ್ಕೆ ವ್ಯಾಪಾರಕ್ಕಾಗಿ ಬಂದ ಪೋರ್ಚುಗೀಸರಿಂದ ಹಿಡಿದು ಬ್ರಿಟಿಷರವರೆಗೆ ವಸಾಹತುಶಾಹಿ ಕಾಲವೆಂದು ಕರೆದರೆ, ಸ್ವಾತಂತ್ರ್ಯ ನಂತರದ ಕಾಲವನ್ನು ವಸಾಹತೋತ್ತರ ಕಾಲವೆಂದು ಕರೆಯಲಾಗುತ್ತದೆ. ಪಾಶ್ಚಾತ್ಯರು ನಮ್ಮ ದೇಶದಲ್ಲಿ ವ್ಯಾಪಾರದೊಂದಿಗೆ ಶಿಕ್ಷಣ, ಸಾಹಿತ್ಯ, ಆಡಳಿತ, ತಂತ್ರಜ್ಞಾನವನ್ನು ಪರಿಚಯಿಸಿದರು. ಹಾಗಂತ ನಮ್ಮಲ್ಲಿ ತಂತ್ರಜ್ಞಾನ ಬೆಳೆದಿರಲಿಲ್ಲ ಅಂತಲ್ಲ. ಇದು ಭಾರತದಂತಹ ಬಹುಭಾಷಿಕ, ಬಹುಧಾರ್ಮಿಕ ದೇಶದಲ್ಲಿ ಸಾಕಷ್ಟು ಬದಲಾವಣೆಯನ್ನು ತಂದಿತು. ಶಿಕ್ಷಣವು ಮಾನವನ ಬದುಕನ್ನೇ ಬದಲಿಸಿದರೆ, ತಂತ್ರಜ್ಞಾನವು ಅಭಿವೃದ್ಧಿಯ ಪಥವನ್ನು ರೂಪಿಸಿತು. ರೈಲು, ವಿದ್ಯುತ್, ಕೈಗಾರಿಕೆ, ಸಾರಿಗೆ, ದೂರವಾಣಿಯಂತಹ ತಾಂತ್ರಿಕತೆಗಳು ಹೊಸ ಕ್ರಾಂತಿಯನ್ನುಂಟುಮಾಡಿದವು. ಇದರ ಪರಿಣಾಮವಾಗಿ ಸಾಹಿತ್ಯದಲ್ಲಿ ಹೊಸ ರಚನೆಗಳು ಕಾಣಿಸಿಕೊಂಡವು. ಬಿ.ಎಂ.ಶ್ರೀಯವರ ಇಂಗ್ಲಿಷ್ ಗೀತಗಳಿಂದ ಇತ್ತೀಚಿನ ಬೂಕರ್ ಪ್ರಶಸ್ತಿ ಪಡೆದ ಬಾನು ಮುಷ್ತಾಕ್ ಅವರ ಎದೆಯ ಹಣತೆಯವರೆಗೆ ಕನ್ನಡ ಸಾಹಿತ್ಯವು ಸಮೃದ್ಧ ಫಸಲನ್ನು ಕಂಡಿದೆ.
ಇಂದು ತಂತ್ರಜ್ಞಾನವು ಮನುಷ್ಯನ ಆಲೋಚನೆಯನ್ನು ಕ್ಷಣ ಕ್ಷಣದಲ್ಲಿ ಸಮಾಜದಲ್ಲಿ ಬಿತ್ತರಿಸಲು ಸಾಧ್ಯಮಾಡಿದೆ. ಹೀಗಾಗಿ ಈ ಲೇಖನದಲ್ಲಿ ತಂತ್ರಜ್ಞಾನಾಧಾರಿತವಾದ ಸಾಮಾಜಿಕ ಜಾಲತಾಣಗಳು ಮತ್ತು ವಸಾಹತೋತ್ತರ ಕಾಲಘಟ್ಟದಲ್ಲಿ ರಚನೆಯಾದ ಸಾಹಿತ್ಯವು ಹೇಗೆ ಮಿಳಿತಗೊಂಡಿದೆ ಎನ್ನುವುದನ್ನು ಚರ್ಚಿಸಲಾಗಿದೆ. ಪ್ರಧಾನವಾಗಿ ಫೇಸ್‌ಬುಕ್, ವಾಟ್ಸಪ್ ಮತ್ತು ಬ್ಲಾಗ್‌ಗಳಲ್ಲಿ ಸೃಷ್ಟಿಯಾಗುತ್ತಿರುವ ಸಾಹಿತ್ಯವನ್ನು ಗಮನಿಸಲಾಗಿದೆ.
ಸಾಮಾಜಿಕ ವಾಸ್ತವತೆಗಳಲ್ಲಿ ಮಹಿಳಾ ವಿಮೋಚನೆಯ ಸವಾಲುಗಳು
50 to 56
ಮಹಿಳಾ ವಿಮೋಚನೆಯು ಮಹಿಳೆಯ ಅಸ್ಮಿತೆ, ಸಮಾನ ಹಕ್ಕು, ಆತ್ಮಗೌರವ ಮತ್ತು ಮಾನವೀಯ ಬದುಕಿಗಾಗಿ ನಡೆಯುವ ಸಮಗ್ರ ನೈತಿಕ ಹೋರಾಟವಾಗಿದೆ. ಇದು ಕೇವಲ ಪ್ರತಿಭಟನೆಯಲ್ಲ. ಮಹಿಳೆಯ ಬದುಕಿನ ಅಳಿವು–ಉಳಿವಿನ ಪ್ರಶ್ನೆಯನ್ನು ಸ್ಪರ್ಶಿಸುವ ಚಳುವಳಿಯಾಗಿದೆ. ಸ್ತ್ರೀವಾದಿ ಚಿಂತನೆಗಳು ಲಿಂಗ ಅಸಮಾನತೆ ನಿಯಮವಲ್ಲ, ಸಮಾಜ ನಿರ್ಮಿತ ಎಂಬುದನ್ನು ಸ್ಪಷ್ಟಪಡಿಸಿ, ಅಧಿಕಾರದ ಅಸಮಾನ ನೆಲೆಯನ್ನು ಪ್ರಶ್ನಿಸುವ ದಿಕ್ಕನ್ನು ಮಹಿಳಾ ಚಳುವಳಿಗೆ ನೀಡಿವೆ.
90ರ ದಶಕದ ಕಾಲಘಟ್ಟದಲ್ಲಿ ಖಾಸಗೀಕರಣ, ಜಾಗತೀಕರಣ, ಧಾರ್ಮಿಕ ಮೂಲಭೂತವಾದ, ಮಾಧ್ಯಮಗಳ ವ್ಯಾಪಾರೀಕರಣ, ಸಂಘಟನೆಗಳ ಒಳಬಿರುಕುಗಳು ಮಹಿಳಾ ವಿಮೋಚನಾ ಹೋರಾಟಕ್ಕೆ ಹೊಸ ಸವಾಲುಗಳಾಗಿವೆ. ಕಾನೂನುಗಳಿದ್ದರೂ ಜಾಗೃತಿಯ ಕೊರತೆಯಿಂದ ಮಹಿಳೆಯರಿಗೆ ಅದರ ಪ್ರಯೋಜನ ಸಿಗುತ್ತಿಲ್ಲ. ಶಿಕ್ಷಣದ ಕೊರತೆ, ಹೆಣ್ಣು ಭ್ರೂಣಹತ್ಯೆ, ಬಾಲ್ಯವಿವಾಹ, ವರದಕ್ಷಿಣೆ, ಲೈಂಗಿಕ ಕಿರುಕುಳ, ವೇತನ ತಾರತಮ್ಯ, ದೇವದಾಸಿ ಪದ್ಧತಿ ಮುಂತಾದ ಅನಿಷ್ಟಗಳು ಮಹಿಳೆಯ ಬದುಕನ್ನು ಸಂಕೀರ್ಣಗೊಳಿಸುತ್ತಿವೆ. ಇವುಗಳ ನಡುವೆಯೂ ಕನ್ನಡ ಮಹಿಳಾ ಸಾಹಿತ್ಯ ಹೊಸ ಪರಿಭಾಷೆಯೊಂದಿಗೆ ರೂಪುಗೊಳ್ಳುತ್ತಿರುವುದು ಆಧುನಿಕೋತ್ತರ ಚಿಂತನೆಯ ಫಲವಾಗಿದೆ. ಮಹಿಳಾ ವಿಮೋಚನೆಯು ಹೊರಲೋಕದ ವಿರುದ್ಧದ ಹೋರಾಟ ಮಾತ್ರವಲ್ಲ ಇದು ಮಹಿಳೆಯ ಅಂತಃಸತ್ವವನ್ನು ಕಟ್ಟಿಕೊಳ್ಳುವ ಪ್ರಕ್ರಿಯೆಯೂ ಆಗಿದೆ. ಆತ್ಮವಿಶ್ವಾಸ, ಜಾಗೃತಿ, ಶಿಕ್ಷಣ, ಸಂವಾದ ಮತ್ತು ಮಾನವೀಯತೆ ಮಹಿಳಾ ಸಬಲೀಕರಣದ ಮೂಲ ಅಂಶಗಳಾಗಿವೆ. ಆಧುನಿಕೋತ್ತರ ಕಾಲಘಟ್ಟದ ತೊಂಬತ್ತರ ದಶಕದಲ್ಲಿ ಜಾತಿ, ಧರ್ಮ, ವರ್ಗಗಳ ಮಿತಿಗಳನ್ನು ಮೀರಿ ಮಹಿಳೆಯರು ಒಗ್ಗೂಡಿ ವಿಚಾರವಂತಿಕೆಯಿಂದ ಚಳುವಳಿಯನ್ನು ಕಟ್ಟಬೇಕಾಗಿದೆ. ಕುಟುಂಬ ವ್ಯವಸ್ಥೆಯನ್ನು ನಿರಾಕರಿಸುವುದಕ್ಕಿಂತ ಪರಸ್ಪರ ಗೌರವ ಮತ್ತು ಸಮಾನತೆಯನ್ನು ಬೆಳೆಸುವುದು ಮುಖ್ಯ. ಎಲ್ಲಾ ಮಹಿಳಾ ಸಂಘಟನೆಗಳು ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಮಗ್ರತೆ ಸಾಧಿಸಿದಾಗ ಮಾತ್ರ ಮಹಿಳಾ ಚಳುವಳಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಆಯಾಮಗಳಲ್ಲಿ ಬಲವಾಗಿ ಬೆಳೆಯಬಹುದು.
ಕನ್ನಡ ಸಾಹಿತ್ಯದಲ್ಲಿ ಆಧುನಿಕೋತ್ತರ ಸಮಸ್ಯೆಗಳು ಮತ್ತು ಸವಾಲುಗಳು
57 to 60
ಕನ್ನಡ ಸಾಹಿತ್ಯವು ಸಹಸ್ರಾರು ವರ್ಷಗಳ ಇತಿಹಾಸ ಹೊಂದಿದ ಸಮೃದ್ಧ ಪರಂಪರೆಯಾಗಿದ್ದು, ಪ್ರಾಚೀನ ಜೈನ–ವೀರಶೈವ ಸಾಹಿತ್ಯದಿಂದ ಆರಂಭಿಸಿ ಭಕ್ತಿ, ನವೋದಯ, ಪ್ರಗತಿಶೀಲ, ನವ್ಯ ಹಾಗೂ ದಲಿತ ಸಾಹಿತ್ಯದವರೆಗೆ ಕಾಲಕಾಲಕ್ಕೆ ಸಮಾಜದ ಬದಲಾವಣೆಗಳನ್ನು ಪ್ರತಿಬಿಂಬಿಸುತ್ತ ಬಂದಿದೆ. ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ ಉದಯವಾದ ಆಧುನಿಕೋತ್ತರ (Post-modern) ಯುಗವು ಕನ್ನಡ ಸಾಹಿತ್ಯಕ್ಕೆ ಹೊಸ ದೃಷ್ಟಿಕೋನ, ಹೊಸ ಭಾಷಾ ವಿನ್ಯಾಸ ಮತ್ತು ಹೊಸ ಸವಾಲುಗಳನ್ನು ತಂದಿದೆ. ಸ್ಥಿರ ಮೌಲ್ಯಗಳ ನಿರಾಕರಣೆ, ಬಹುಸ್ವರತೆಯ ಕಥನ, ಅಸ್ಪಷ್ಟತೆ ಹಾಗೂ ವ್ಯಂಗ್ಯ ಇತ್ಯಾದಿಗಳು ಈ ಯುಗದ ಪ್ರಮುಖ ಲಕ್ಷಣಗಳಾಗಿವೆ. ಇದರ ಪರಿಣಾಮವಾಗಿ ಒಂದು ಕಡೆ ಸೃಜನಶೀಲ ಸ್ವಾತಂತ್ರ್ಯ ವಿಸ್ತಾರಗೊಂಡರೆ, ಇನ್ನೊಂದು ಕಡೆ ಓದುಗರ ಆಸಕ್ತಿ ಮತ್ತು ಸಂಖ್ಯೆ ಕುಸಿಯುತ್ತಿರುವುದು ಗಮನಾರ್ಹವಾಗಿದೆ. ಮಾಧ್ಯಮಗಳ ಪ್ರಾಬಲ್ಯ, ವಾಣಿಜ್ಯೀಕರಣ ಮತ್ತು ಓದುವ ಸಂಸ್ಕೃತಿಯ ಕುಗ್ಗುವಿಕೆ ಇಂದಿನ ಕನ್ನಡ ಸಾಹಿತ್ಯ ಎದುರಿಸುತ್ತಿರುವ ಪ್ರಮುಖ ಸವಾಲುಗಳಾಗಿವೆ ಎಂಬುದನ್ನು ಈ ಅಧ್ಯಯನ ವಿಶ್ಲೇಷಿಸುತ್ತದೆ.
ಕನ್ನಡ ಸಾಹಿತ್ಯದಲ್ಲಿ ಆಧುನಿಕೋತ್ತರ ಕಾಲದ ಸ್ತ್ರೀವಾದಿ ಸಂವೇದನೆ
61 to 66
ಸರ್ವರ ಸಮಾನತೆ ಕಾಪಾಡುವುದು ಇಂದಿನ ಜಗತ್ತಿನ ಬಹುದೊಡ್ಡ ಹೊಣೆಗಾರಿಕೆ. ನಾವೆಲ್ಲರೂ ಹೆಚ್ಚು ಹಣವಂತರಾಗಿ ಹೆಚ್ಚು ಹೆಚ್ಚು ಸುಖ ಸಂತೋಷಗಳನ್ನು ಅನುಭವಿಸಬೇಕೆಂಬ ಸಾರ್ವತ್ರಿಕ ಆಶಯ ಆಧುನಿಕ ಜಗತ್ತಿನ ಕೊಡುಗೆ. ‘ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು’ ಎಂಬ ಮಹಾನುಡಿ ಮನುಷ್ಯನ ಮನಸ್ಸಿನಲ್ಲಿ ಮೂಡಿ ಭಾಷೆಯಲ್ಲಿ ರೂಪಗೊಂಡಿದ್ದು ಶತಶತಮಾನಗಳ ಮಾನಸಿಕ ಮತ್ತು ಸಾಮಾಜಿಕ ವಿಕಾಸದ ಫಲ. ಆಧುನಿಕ ಜಗತ್ತಿನಲ್ಲಿ ಸಮಾನತೆಯ ಕೂಗು ಅತಿ ಹೆಚ್ಚಾಗಿ ಕೇಳಿಬರುತ್ತಿದ್ದರೂ, ಇಲ್ಲಿ ಭೇದಭಾವ ರಾರಾಜಿಸುತ್ತಿದೆ. ಈ ಸಮಾಜದಲ್ಲಿ ಎಷ್ಟೇ ಶಿಕ್ಷಣ, ತಾಂತ್ರಿಕ ಮೊದಲಾದ ಅಭಿವೃದ್ಧಿ ಕಾರ್ಯಗಳು ಘಟಿಸಿದರೂ ಇನ್ನೂ ಪುರುಷ ಮಹಿಳೆಯ ಸಮಾನತೆ ತನ್ನ ಗುರಿ ಮುಟ್ಟುವಲ್ಲಿ ಸಫಲವಾಗಿಲ್ಲವೆಂದೇ ಹೇಳಬಹುದು.
ಮಹಿಳಾ ಸಂವೇದನೆಯ ಕೂಗು ಇಂದು ನಿನ್ನೆಯದಲ್ಲ. ಶತಶತಮಾನಗಳ ಚರಿತ್ರೆಯುಳ್ಳ ಹೋರಾಟ ದಡ ಸೇರುವುದು ಇನ್ನೂ ಯಾವಾಗ? ಇದೊಂದು ಬಗೆಹರಿಯದ ಉತ್ತರ ಸಿಗದ ಪ್ರಶ್ನೆ. ತಾರತಮ್ಯದ ಕೂಪಮಂಡೂಕದಲ್ಲಿ ಸಿಲುಕಿ, ಒದ್ದಾಡುತ್ತಿರುವ ಮಹಿಳಾವರ್ಗ ಮಾನವೀಯ ನೆಲೆಗಟ್ಟಿಗೆ ಬಂದು ಸರ್ವಸಮಾನತೆಯ ಬಾಳ್ವೆ ನಡೆಸುವ ಜರೂರತ್ತು ಇಂದು ಅನಿವಾರ್ಯ. ಈ ನಿಟ್ಟಿನಲ್ಲಿ ಸಾಹಿತ್ಯದ ಸತತ ಪ್ರಯತ್ನದ ಫಲವಾಗಿ ಹುಟ್ಟಿದುದೇ ಈ ‘ಸ್ತ್ರೀ ಸಂವೇದನೆ’ ಎಂಬ ಸಾಹಿತ್ಯ ಸುಧಾರಣೆಯ ಮಂತ್ರ. ಸಾಹಿತ್ಯವೇನೋ ಈ ಮಹಿಳಾ ಸಂವೇದನೆಯ ನಿಟ್ಟಿನಲ್ಲಿ ಇಂದು ಕಾರ್ಯಪ್ರವೃತ್ತವಾಗಿದ್ದರೂ ಈ ಸಮಾನತೆ ಸಾಕಾರತೆ ಇನ್ನೂ ಗುರಿ ತಲುಪಿಲ್ಲ. ಈ ದಾರಿಯಲ್ಲಿ ಸಮಸ್ಯೆಗಳ ಸಾಕು ಬೇಕುಗಳೇ ಎದುರಾಗುತ್ತಿರುವುದು ವಿಷಾದನೀಯ ಸಂಗತಿ. ಏನೇ ಸಮಸ್ಯೆಗಳಿದ್ದರೂ ಎಲ್ಲವನ್ನೂ ಮೆಟ್ಟಿನಿಂತು ಪುರುಷ ಮಹಿಳಾ ಸಮಾನತೆಯನ್ನು ಸಾಧಿಸುವುದು ಮುಖ್ಯ. ಆಧುನಿಕೋತ್ತರ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆಯ ಪಕ್ಷಿನೋಟವೇ ಈ ಪುಟ್ಟ ಲೇಖನ.
ಗೀತಾ ನಾಗಭೂಷಣ ಅವರ ‘ಬದುಕು’ ಕಾದಂಬರಿಯಲ್ಲಿ ದೇವದಾಸಿಯರ ಪಾತ್ರ ಚಿತ್ರಣ
67 to 74
ಕನ್ನಡ ಕಾದಂಬರಿ ಸಾಹಿತ್ಯವು ಸಮಾಜದ ವಾಸ್ತವಿಕ ಬದುಕನ್ನು ಪ್ರತಿಬಿಂಬಿಸುವಲ್ಲಿ ಮಹತ್ವದ ಪಾತ್ರವಹಿಸಿದೆ. ಅದರಲ್ಲೂ ವಿಶೇಷವಾಗಿ ಮಹಿಳೆಯರ ಬದುಕು, ಅವಳ ಆಂತರಿಕ ಸಂವೇದನೆಗಳು, ಸಂಕಟಗಳು ಮತ್ತು ಅಸ್ತಿತ್ವದ ಹೋರಾಟಗಳು ಅನೇಕ ಕಾದಂಬರಿಗಳ ಪ್ರಮುಖ ವಿಷಯಗಳಾಗಿವೆ. ‘ಬದುಕು’ ಕಾದಂಬರಿಯು ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆಯೊಳಗೆ ಮಹಿಳೆ ಅನುಭವಿಸುವ ನೋವು, ತ್ಯಾಗ, ಮೌನ ಮತ್ತು ಭಾವನಾತ್ಮಕ ಸಂಘರ್ಷಗಳನ್ನು ಸೂಕ್ಷ್ಮವಾಗಿ ಚಿತ್ರಿಸುತ್ತದೆ. ಗೀತಾ ನಾಗಭೂಷಣ ಅವರ ‘ಬದುಕು’ ಕಾದಂಬರಿಯಲ್ಲಿ ದೇವದಾಸಿಯರ ಪಾತ್ರ ಚಿತ್ರಣವು ಮಹಿಳಾ ಜೀವನದ ನೋವು, ಶೋಷಣೆ ಮತ್ತು ಅಸಮಾನತೆಯನ್ನು ತೀವ್ರವಾಗಿ ಅನಾವರಣಗೊಳ್ಳುತ್ತದೆ. ಧರ್ಮದ ಹೆಸರಿನಲ್ಲಿ ಸಮಾಜವು ರೂಪಿಸಿದ ದೇವದಾಸಿ ಪದ್ಧತಿ ಹೇಗೆ ಮಹಿಳೆಯರ ದೇಹ, ಮನಸ್ಸು ಮತ್ತು ಜೀವನದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುತ್ತದೆ ಎಂಬುದನ್ನು ಕಾದಂಬರಿ ಸ್ಪಷ್ಟವಾಗಿ ಚಿತ್ರಿಸುತ್ತದೆ. ದೇವದಾಸಿಯರನ್ನು ಕೇವಲ ಧಾರ್ಮಿಕ ಸಂಪ್ರದಾಯದ ಭಾಗವೆಂದು ನೋಡದೆ, ಮಾನವೀಯತೆಯಿಂದ ವಂಚಿತಗೊಂಡ ಬದುಕುಗಳಾಗಿ ಲೇಖಕಿ ನಿರೂಪಿಸುತ್ತಾರೆ. ಪಿತೃಸತ್ತಾತ್ಮಕ ವ್ಯವಸ್ಥೆ, ಜಾತಿ ಮತ್ತು ಆರ್ಥಿಕ ಅಸಮಾನತೆಗಳು ದೇವದಾಸಿಯರ ಶೋಷಣೆಗೆ ಹೇಗೆ ಕಾರಣವಾಗುತ್ತವೆ ಎಂಬುದು ಕಾದಂಬರಿಯ ಪ್ರಮುಖ ಆಶಯವಾಗಿದೆ. ಅವರ ಒಳನೋವು, ಮೌನ ಪ್ರತಿಭಟನೆ ಮತ್ತು ಆತ್ಮಗೌರವದ ಹುಡುಕಾಟದ ಮೂಲಕ ಬದುಕು ಕಾದಂಬರಿ ಸಮಾಜದ ದ್ವಂದ್ವ ನೀತಿಯನ್ನು ಪ್ರಶ್ನಿಸಿ ಮಾನವೀಯ ಮೌಲ್ಯಗಳ ಅಗತ್ಯತೆಯನ್ನು ಒತ್ತಿ ಹೇಳುತ್ತದೆ.
ಬಾನು ಮುಷ್ತಾಕ್ ಅವರ ಕಥೆಗಳಲ್ಲಿ ಮಹಿಳಾ ಸಂವೇದನೆ
75 to 80
ಬಾನು ಮುಷ್ತಾಕ್ ಅವರ ಸಾಹಿತ್ಯವು ಮುಸ್ಲಿಂ ಮಹಿಳೆಯರ ಅಂತರಾಳದ ದನಿ ಮತ್ತು ಸಾಮಾಜಿಕ ಸಂಘರ್ಷಗಳ ಪ್ರಬಲ ಅಭಿವ್ಯಕ್ತಿಯಾಗಿದೆ. ಪಿತೃಪ್ರಧಾನ ವ್ಯವಸ್ಥೆ, ಧಾರ್ಮಿಕ ಕಟ್ಟುಪಾಡುಗಳು ಮತ್ತು ಬಹುಪತ್ನಿತ್ವದಂತಹ ಅನಿಷ್ಟ ಪದ್ಧತಿಗಳ ನಡುವೆ ನಲುಗುವ ಸ್ತ್ರೀ ಬದುಕನ್ನು ಇವರ ಕಥೆಗಳು ಮಾರ್ಮಿಕವಾಗಿ ಚಿತ್ರಿಸುತ್ತವೆ. ʻಒಮ್ಮೆ ಹೆಣ್ಣಾಗು ಪ್ರಭುವೆʼ, ʻಎದೆಯ ಹಣತೆʼ ಮತ್ತು ʻಬೆಂಕಿಮಳೆʼಯಂತಹ ಕಥೆಗಳ ಮೂಲಕ ಸ್ತ್ರೀಯರ ಅಸಹಾಯಕತೆ, ಬಡತನ ಮತ್ತು ಅಸ್ತಿತ್ವದ ಹೋರಾಟವನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಧರ್ಮ ಮತ್ತು ಪರಂಪರೆಯ ಹೆಸರಿನಲ್ಲಿ ನಡೆಯುವ ಶೋಷಣೆಯನ್ನು ಪ್ರಶ್ನಿಸುವ ಲೇಖಕಿಯ ದಿಟ್ಟ ನಿಲುವುಗಳು ಇಲ್ಲಿ ವ್ಯಕ್ತವಾಗಿವೆ. ಕೇವಲ ಕೌಟುಂಬಿಕ ಚಿತ್ರಣಕ್ಕೆ ಸೀಮಿತವಾಗದೆ, ಹೆಣ್ಣಿನ ಆತ್ಮಗೌರವ, ಪ್ರತಿರೋಧ ಮತ್ತು ಸಾಂವಿಧಾನಿಕ ಹಕ್ಕುಗಳ ಕುರಿತಾದ ಎಚ್ಚರವನ್ನು ಮೂಡಿಸುವಲ್ಲಿ ಬಾನು ಮುಷ್ತಾಕ್ ಅವರ ಕಥಾ ಸಾಹಿತ್ಯದ ಮಹತ್ವವನ್ನು ಗುರುತಿಸಲಾಗಿದೆ.
ಕರಾವಳಿಯ ಮಹಿಳಾ ಸಾಹಿತ್ಯದಲ್ಲಿ ಆಧುನಿಕೋತ್ತರ ಸ್ತ್ರೀ ಸಂವೇದನೆ
81 to 89
ಆಧುನಿಕೋತ್ತರ ಯುಗವು ಸಾಹಿತ್ಯದಲ್ಲಿ ಏಕಮುಖೀಯ ಸತ್ಯ ಮತ್ತು ಸ್ಥಿರ ಮೌಲ್ಯಗಳ ನಿರಾಕರಣೆಯೊಂದಿಗೆ ಬಹುಧ್ವನಿತ್ವ, ವಿಕೇಂದ್ರಿತ ಅರ್ಥ ಮತ್ತು ಪ್ರತಿರೋಧದ ಚಿಂತನೆಗಳನ್ನು ಮುಂದಿಟ್ಟುಕೊಂಡಿದೆ. ಈ ಪರಿವರ್ತನೆಯ ಪರಿಣಾಮವಾಗಿ ಸ್ತ್ರೀ ಸಂವೇದನೆಗಳ ನಿರೂಪಣೆಯಲ್ಲೂ ಮಹತ್ವದ ಬದಲಾವಣೆ ಕಂಡುಬರುತ್ತದೆ. ಕರಾವಳಿ ಕನ್ನಡ ಸಾಹಿತ್ಯದಲ್ಲಿ ಆಧುನಿಕೋತ್ತರ ಕಾಲದ ಸ್ತ್ರೀ ಸಂವೇದನೆ ಮಹಿಳೆಯನ್ನು ಕೇವಲ ಪಿತೃಸತ್ತಾತ್ಮಕ ದಮನದ ಒಳಪಡುವ ವ್ಯಕ್ತಿಯಾಗಿ ಮಾತ್ರವಲ್ಲದೆ, ತನ್ನದೇ ಆದ ಅಸ್ತಿತ್ವವನ್ನು ನಿರ್ಧರಿಸುವ ಚೇತನಶೀಲ ವ್ಯಕ್ತಿಯಾಗಿ ಚಿತ್ರಿಸುತ್ತದೆ. ಈ ಸಾಹಿತ್ಯದಲ್ಲಿ ಮಹಿಳೆಯ ದೇಹಾತ್ಮಕತೆ, ಮನೋವೈಜ್ಞಾನಿಕ ಸಂಕಟಗಳು, ಲೈಂಗಿಕ ರಾಜಕಾರಣ, ಕುಟುಂಬ ಮತ್ತು ಸಮಾಜದೊಳಗಿನ ಅಸಮಾನತೆಗಳು ಹಾಗೂ ಮಾತೃಮೂಲೀಯ ನೆಲೆಗಳ ಸ್ಥಿತ್ಯಂತರಗಳು ಗಂಭೀರವಾಗಿ ಚರ್ಚೆಗೆ ಒಳಗಾಗುತ್ತವೆ. ಕರಾವಳಿ ಪ್ರದೇಶದ ವಿಶಿಷ್ಟ ಸಾಮಾಜಿಕ–ಸಾಂಸ್ಕೃತಿಕ ಹಿನ್ನೆಲೆ, ಸಮುದಾಯ ವ್ಯವಸ್ಥೆ, ಪರಂಪರೆ ಮತ್ತು ಆಧುನಿಕತೆಯ ನಡುವಿನ ಸಂಘರ್ಷಗಳು ಸ್ತ್ರೀ ಅನುಭವಗಳಿಗೆ ವಿಭಿನ್ನ ಆಯಾಮಗಳನ್ನು ನೀಡುತ್ತವೆ. ಈ ಲೇಖನವು ಕರಾವಳಿ ಸಾಹಿತ್ಯದಲ್ಲಿ ಸ್ತ್ರೀ ಅನುಭವಗಳು ಹೇಗೆ ವೈಯಕ್ತಿಕದಿಂದ ಸಾಮಾಜಿಕ ಹಂತದವರೆಗೆ ವಿಸ್ತರಿಸಿ, ಆಧುನಿಕೋತ್ತರ ಚಿಂತನೆಯೊಂದಿಗೆ ಸಂವಾದಕ್ಕೆ ಒಳಗಾಗುತ್ತವೆ ಎಂಬುದನ್ನು ವಿಶ್ಲೇಷಿಸುತ್ತದೆ. ಜೊತೆಗೆ Contemporary ಕನ್ನಡ ಸಾಹಿತ್ಯದಲ್ಲಿ ಸ್ತ್ರೀ ಬರವಣಿಗೆಯ ಬೌದ್ಧಿಕ ಹಾಗೂ ಸಾಮಾಜಿಕ ಮಹತ್ವವನ್ನು ಸ್ಥಾಪಿಸುವ ಪ್ರಯತ್ನವನ್ನು ಮಾಡುತ್ತದೆ.
ಕನ್ನಡ ಸಾಹಿತ್ಯದಲ್ಲಿ ಆಧುನಿಕೋತ್ತರ ಕಾಲದ ಸ್ತ್ರೀವಾದಿ ಸಂವೇದನೆಗಳು
90 to 96
“ನಿನಗೆ ಬೇರೆ ಹೆಸರು ಬೇಕೆ ಸ್ತ್ರೀ ಅಂದರೆ ಅಷ್ಟೇ ಸಾಕೆ” ಎನ್ನುವ ಜಿ. ಎಸ್. ಶಿವರುದ್ರಪ್ಪನವರ ಪದ್ಯವನ್ನು ಗಮನಿಸಿದರೆ ಒಂದು ಕುಟುಂಬದಲ್ಲಿ ಸ್ತ್ರೀಯ ಅವಶ್ಯಕತೆ ಏನು? ಸಮಾಜದಲ್ಲಿ ಸ್ತ್ರೀಯ ಪಾತ್ರವೇನು? ಎನ್ನುವುದನ್ನು ತಿಳಿಯಬಹುದಾಗಿದೆ. ತುಂಬಾ ಹಿಂದೆ ಉತ್ತುಂಗದಲ್ಲಿದ್ದ ಸ್ತ್ರೀಯರ ಸ್ಥಾನಮಾನಗಳು ಬರು ಬರುತ್ತಾ ತುಂಬಾ ಶೋಚನೀಯ ಸ್ಥಿತಿಗೆ ತಲುಪಿದವು. ಬಾಲ್ಯ ವಿವಾಹ, ವರದಕ್ಷಣೆ, ಸತಿ ಪದ್ಧತಿ ಮುಂತಾದ ಸಮಸ್ಯೆಗಳಿಂದ ಸ್ತ್ರೀಯರು ಬಳಲಿ ನೊಂದಿದ್ದರು. ಹಲವಾರು ಸಮಾಜ ಸುಧಾರಕರ ಹೋರಾಟದಿಂದ ಸ್ತ್ರೀಯರು ಇಂದು ಸ್ವತಂತ್ರವಾಗಿ ಸಮಾನತೆಯಿಂದ ನೆಮ್ಮದಿ, ಗೌರವ, ಸಂತೋಷದಿಂದ ಬದುಕುತ್ತಿರುವುದನ್ನು ಕಾಣಬಹುದಾಗಿದೆ. ಸ್ತ್ರೀಯರು ಸಮಾಜದಲ್ಲಿ ಎಲ್ಲಾ ಕ್ಷೇತ್ರದಲ್ಲೂ ತಮ್ಮದೇ ಆದ ರೀತಿಯಲ್ಲಿ ಸಾಧನೆಗಳನ್ನು ಮಾಡಿದ್ದಾರೆ. ತಮ್ಮ ಛಾಪನ್ನು ಮೂಡಿಸಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಮಹಿಳೆಯರ ಪಾತ್ರವನ್ನು ಗಮನಿಸಿದರೆ ವೇದಗಳ ಕಾಲದಿಂದ ಹಿಡಿದು ಜನಪದ ಸಾಹಿತ್ಯ, ಹಳಗನ್ನಡ ಸಾಹಿತ್ಯ, ವಚನ ಸಾಹಿತ್ಯ, ಕೀರ್ತನ ಸಾಹಿತ್ಯ ಹೀಗೆ ಹಂತ ಹಂತವಾಗಿ ಬೆಳೆದು ಆಧುನಿಕ ಸಾಹಿತ್ಯದವರೆಗೂ ಸ್ತ್ರೀಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವುದನ್ನು ಕಾಣಬಹುದಾಗಿದೆ. ಕನ್ನಡ ಸಾಹಿತ್ಯದಲ್ಲಿ ಮಹಿಳೆಯರ ಭಾವನೆಗಳು, ಮಹಿಳೆಯರ ಬದುಕಿನ ಸಂಕಷ್ಟಗಳು, ನೋವು ನಲಿವು, ಸುಖ, ಸಂತೋಷ, ಸಮಸ್ಯೆ, ಸವಾಲು ಎಲ್ಲವನ್ನೂ ಅಭಿವ್ಯಕ್ತಪಡಿಸುವ ಸ್ತ್ರೀ ಸಂವೇದನೆಯನ್ನು ಕುರಿತು ಹಲವಾರು ಕೃತಿಗಳು ಹೊರಬಂದಿರುವುದನ್ನು ನಾವು ಗಮನಿಸಬಹುದು. ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆ ಎನ್ನುವುದು ವಿಶಾಲವಾದ ವ್ಯಾಪ್ತಿಯನ್ನು ಹೊಂದಿದ್ದು, ಕನ್ನಡ ಸಾಹಿತ್ಯದಲ್ಲಿ ಆಧುನಿಕೋತ್ತರ ಸ್ತ್ರೀ ಸಂವೇದನೆ ಹೇಗೆ ಅಭಿವ್ಯಕ್ತಗೊಂಡಿದೆ ಎಂದು ತಿಳಿಯುವ ಒಂದು ಪ್ರಯತ್ನದ ಫಲವಾಗಿ ಈ ಲೇಖನ ಬರೆಯಲಾಗಿದೆ. ಮಹಿಳೆಯರ ಬದುಕಿನ ಒಳನೋಟವನ್ನು ಅವರದ್ದೇ ದೃಷ್ಟಿಕೋನದಿಂದ ನೋಡುವ ಅವರ ಭಾವನೆಗಳನ್ನು ಸಮಾನ ಮನಸ್ಸಿನಿಂದ ಅರಿತು ವ್ಯಕ್ತಪಡಿಸುವ ಬರಹವೇ ಮಹಿಳಾ ಸಂವೇದನೆಯಾಗಿದೆ. ಈ ರೀತಿ ಸ್ತ್ರೀಯರ ಎಲ್ಲ ರೀತಿಯ ಸಮಸ್ಯೆ, ಶೋಷಣೆ, ನೋವು, ತೊಳಲಾಟಗಳನ್ನು ತಮ್ಮ ಬರಹಗಳಲ್ಲಿ ವ್ಯಕ್ತಪಡಿಸುವ ಮೂಲಕ ಸಮಾಜದಲ್ಲಿ ಮಹಿಳಾಪರ ಕ್ರಾಂತಿಯನ್ನು ಮೂಡಿಸಿದ ಅದೆಷ್ಟೋ ಮಹಿಳಾ ಲೇಖಕಿಯರ ಪ್ರಯತ್ನ ಅಭಿನಂದನಾರ್ಹವಾಗಿದೆ.
ಶಹಾಬುದ್ದೀನ್ ಕಾಲೇಖಾನ್ ಅವರ ‘ಅದೃಷ್ಟ ಕೈದಿ’
97 to 102
‘ಕಾಲವನ್ನು ಮರೆಸುವ, ಚಿತ್ತಭಿತ್ತಿಯಲ್ಲಿ ಅಚ್ಚಳಿಯದೆ, ಸದಾ ಉಳಿಯುವ, ನೋವ ಮರೆಸುವ ಮಾಂತ್ರಿಕತೆ’ಯು ಸಾಹಿತ್ಯಕ್ಕೆ ಇರುತ್ತದೆ. ಇದನ್ನರಿತ ಹಲವರು ಪೊಲೀಸ್ ಇಲಾಖೆಯಲ್ಲಿದ್ದರೂ ಸಾಹಿತ್ಯ ಸಂಗಾತಿಗಳಾಗಿದ್ದಾರೆ. ಪೊಲೀಸ್ ಇಲಾಖೆಯ ಪ್ರಖರ ಪ್ರಭಾವಳಿಯ ಮುಂದೆ ನೆರಳಿನಂತಿರುವ ಬಂಧೀಖಾನೆ ಇಲಾಖೆಯಲ್ಲಿ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಹಾಬುದ್ದೀನ್ ಕಾಲೇಖಾನ್ ಅವರು ‘ಕಾವ್ಯ ಸ್ಪೂರ್ತಿ’ ಹಾಗೂ ‘ಅದೃಷ್ಟ ಕೈದಿ’ ಎಂಬ ಎರಡು ಕವನ ಸಂಕಲನಗಳನ್ನು ರಚಿಸುವ ಮೂಲಕ ಒತ್ತಡದ ಕೆಲಸಕ್ಕೆ ಹೆಸರುವಾಸಿಯಾಗಿರುವ ಇಲಾಖೆಯಲ್ಲಿದ್ದೂ ಸಾಹಿತ್ಯಾಸಕ್ತಿಯನ್ನು, ಸಾಹಿತ್ಯ ರಚನೆಯ ವಿಶಿಷ್ಟ ಹವ್ಯಾಸವನ್ನು ರೂಢಿಸಿಕೊಂಡಿರುವ ವಿಶಿಷ್ಟ ಅಧಿಕಾರಿಯಾಗಿದ್ದಾರೆ.
ಜಾತಿ, ಧರ್ಮ, ಭಾಷೆ, ಪ್ರದೇಶ ಸೇರಿದಂತೆ ಕ್ಷುಲ್ಲಕ ಸಂಗತಿಗಳನ್ನು ಆಧರಿಸಿ ‘ಹತ್ತಿರವಿದ್ದೂ ದೂರ’ವಾಗುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ಕಾಲೇಖಾನ್ ಅವರ ಕವಿತೆಗಳು ಉಪಯುಕ್ತವೆನಿಸುತ್ತವೆ. ಈ ಸಂಕಲನದಲ್ಲಿ ಆಧುನಿಕೋತ್ತರ ಕಾಲದ ಅಗತ್ಯಗಳಾಗಿರುವ ಸಮಾನತೆ, ಭ್ರಾತೃತ್ವ, ಸಾಮರಸ್ಯ, ಸಹಬಾಳ್ವೆ, ಪ್ರಕೃತಿ ಪ್ರೇಮ, ಪ್ರೀತಿ-ಪ್ರೇಮ-ಪ್ರಣಯ-ವಿರಹ ಭಾವಾಭಿವ್ಯಕ್ತಿಯ ಕವಿತೆಗಳಿವೆ. ನಾಡು-ನುಡಿ-ದೇಶಾಭಿಮಾನವನ್ನು ಹುರಿದುಂಬಿಸುವ ಕವಿತೆಗಳಿವೆ. ಭಾಷೆಯು ಸರಳವಾಗಿದ್ದು, ಸುಲಭವಾಗಿ ಅರ್ಥವಾಗುವಂತಿದೆ.
ಇಂದಿನ ಮಹಿಳಾ ಕಾವ್ಯಗಳಲ್ಲಿ ಹೊಸತನದ ತುಡಿತಗಳು
103 to 112
ಇಂದಿನ ಮಹಿಳಾ ಕಾವ್ಯವು ಕೇವಲ ಭಾವನಾತ್ಮಕ ಅಭಿವ್ಯಕ್ತಿಯಾಗದೆ, ಹೆಣ್ಣಿನ ಅಸ್ತಿತ್ವ ಮತ್ತು ಸ್ವಂತಿಕೆಯ ಹುಡುಕಾಟದ ದನಿಯಾಗಿ ಮಾರ್ಪಟ್ಟಿದೆ. ಪುರುಷ ಪ್ರಧಾನ ಸಮಾಜದಲ್ಲಿನ ಶೋಷಣೆ, ಭೋಗದ ವಸ್ತುವಾಗಿ ಸ್ತ್ರೀಯನ್ನು ನೋಡುವ ದೃಷ್ಟಿಕೋನ ಮತ್ತು ಪಿತೃಪ್ರಧಾನ ಮೌಲ್ಯಗಳ ವಿರುದ್ಧ ಆಧುನಿಕ ಕವಯಿತ್ರಿಯರು ಹರಿತವಾದ ಪ್ರತಿಭಟನೆಯನ್ನು ದಾಖಲಿಸುತ್ತಿದ್ದಾರೆ. ಭ್ರೂಣಹತ್ಯೆ, ಕೌಟುಂಬಿಕ ದೌರ್ಜನ್ಯ ಮತ್ತು ಲಿಂಗ ತಾರತಮ್ಯದಂತಹ ಜ್ವಲಂತ ಸಮಸ್ಯೆಗಳನ್ನು ಈ ಲೇಖನವು ಸಮಕಾಲೀನ ಕವಿತೆಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸುತ್ತದೆ. ಸ್ತ್ರೀವಾದಿ ಚಿಂತನೆಗಳು ಇಲ್ಲಿ ಪುರುಷ ವಿರೋಧಿಯಾಗಿರದೆ, ಸಮಾನತೆ ಮತ್ತು ಸಹಗಮನದ ಆಶಯವನ್ನು ಹೊಂದಿವೆ. ಶಿಕ್ಷಣ ಮತ್ತು ಜಾಗತೀಕರಣದ ಪ್ರಭಾವದಿಂದಾಗಿ ಮಹಿಳೆಯು ತನ್ನ ಮೌನವನ್ನು ಮುರಿದು, ಅಕ್ಷರಗಳ ಮೂಲಕ ಅಂಧಕಾರದಿಂದ ಬೆಳಕಿನೆಡೆಗೆ ಸಾಗುವ ಹಾಗೂ ತನ್ನದೇ ಆದ ಹೊಸ ಪರಂಪರೆಯನ್ನು ಸೃಷ್ಟಿಸುವ ತುಡಿತಗಳನ್ನು ಈ ಪ್ರಸ್ತುತ ಲೇಖನವು ಚರ್ಚಿಸುತ್ತದೆ.
ಕನ್ನಡ ಸಾಹಿತ್ಯದಲ್ಲಿ ಆಧುನಿಕೋತ್ತರ ಕಾಲದ ಸಮಸ್ಯೆ ಮತ್ತು ಸವಾಲುಗಳು
113 to 122
ಕನ್ನಡ ಸಾಹಿತ್ಯ ಚರಿತ್ರೆಯು ಸಂಸ್ಕೃತ ಮತ್ತು ಇಂಗ್ಲೀಷ್ ವಸಾಹತುಶಾಹಿ ಪ್ರಭಾವಗಳಿಂದ ರೂಪುಗೊಂಡ ವೈವಿಧ್ಯಮಯ ಘಟ್ಟಗಳನ್ನು ಒಳಗೊಂಡಿದೆ. ಆಧುನಿಕತೆಯು ಪಶ್ಚಿಮದ ಅನುಕರಣೆಯಾಗಿ ಮಾರ್ಪಟ್ಟಾಗ, ಅದರ ನ್ಯೂನತೆಗಳನ್ನು ನೀಗಲು ‘ಆಧುನಿಕೋತ್ತರ’ ಚಿಂತನೆಗಳು ಮುನ್ನೆಲೆಗೆ ಬಂದವು. ಕವಿರಾಜಮಾರ್ಗದಿಂದ ಹಿಡಿದು ಸಮಕಾಲೀನ ದಲಿತ, ಬಂಡಾಯ ಹಾಗೂ ಸ್ತ್ರೀವಾದಿ ಸಾಹಿತ್ಯದವರೆಗೆ ಕನ್ನಡ ಸಾಹಿತ್ಯವು ಸದಾ ಬಹುತ್ವವನ್ನು ಉಳಿಸಿಕೊಂಡು ಬಂದಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಯಾವುದೇ ನಿರ್ದಿಷ್ಟ ಪಂಥ ಅಥವಾ ಕೇಂದ್ರವಿಲ್ಲದೆ, ಸಾಹಿತ್ಯವು ವಿಕೇಂದ್ರೀಕರಣಗೊಂಡು ಅನೇಕ ಕಾಲುದಾರಿಗಳಾಗಿ ಒಡೆದಿದೆ. ಈ ಬಹುತ್ವದ ನಡುವೆ ಸತ್ಯಗಳು ಛಿದ್ರಗೊಂಡು ಅರಾಜಕತೆ ಸೃಷ್ಟಿಯಾಗದಂತೆ, ಎಲ್ಲ ವಿಭಿನ್ನ ದನಿಗಳನ್ನು ಸಾಮರಸ್ಯದಿಂದ ಒಪ್ಪಿಕೊಳ್ಳುವುದು ಇಂದಿನ ಸಾಹಿತ್ಯದ ಮುಂದಿರುವ ಪ್ರಮುಖ ಸವಾಲಾಗಿದೆ.
ದಲಿತ ಸಾಹಿತ್ಯದ ದೃಷ್ಟಿಯಲ್ಲಿ ಬಡತನ ಮತ್ತು ಹಸಿವು: ಒಂದು ವೈಚಾರಿಕ ಅಧ್ಯಯನ
123 to 128
ಸಾಮಾಜಿಕ ವ್ಯವಸ್ಥೆಯೊಳಗೆ ಬಡತನ ಮತ್ತು ಹಸಿವು ಎಂಬ ಪರಿಕಲ್ಪನೆಯನ್ನು ಕೆಲವಾರು ವೈಚಾರಿಕ ವಿಮರ್ಶಕರು, ಲೇಖಕರು ಹಾಗೂ ತಜ್ಞರ ಹಿನ್ನೆಲೆಯೊಂದಿಗೆ ಚರ್ಚಿಸಲಾಗಿದೆ. ಸಮಾಜದ ಸಮುದಾಯಗಳ ಒಳ ಘರ್ಷಣೆಗೆ ಸಂಬಂಧಿಸಿದಂತೆ ತಾರತಮ್ಯ, ಅಸಮಾನತೆ ಹಾಗೂ ಆರ್ಥಿಕ ವ್ಯವಸ್ಥೆಯೊಂದಿಗೆ ಬಡತನ ಮತ್ತು ಹಸಿವಿನ ತೀವ್ರತೆಯನ್ನು ಈ ಲೇಖನದಲ್ಲಿ ಚರ್ಚಿಸಿದ್ದೇನೆ. ಸಮಾಜದ ಸಮುದಾಯಗಳ ನಡುವಿನ ಘರ್ಷಣೆ, ತಾರತಮ್ಯ, ಅಸಮಾನತೆ ಮತ್ತು ಆರ್ಥಿಕ ಸ್ಥಿತಿಗತಿಗಳ ಹಿನ್ನೆಲೆಯಲ್ಲಿ ಬಡತನ ಮತ್ತು ಹಸಿವನ್ನು ವಿಶ್ಲೇಷಿಸಲಾಗಿದೆ. ಸಮಾಜವು ಅಭದ್ರತೆಯಿಂದ ಕೂಡಿದಾಗ, ಯಜಮಾನರು ತಮ್ಮ ಅಸ್ತಿತ್ವವನ್ನು ಭದ್ರಪಡಿಸಿಕೊಳ್ಳಲು ಮತ್ತು ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಾರೆ.
ಕನ್ನಡ ಸಾಹಿತ್ಯದಲ್ಲಿ ಆಧುನಿಕೋತ್ತರ ಕಾಲದ ಸ್ತ್ರೀವಾದಿ ಸಂವೇದನೆ
129 to 136
ಕನ್ನಡ ಸಾಹಿತ್ಯದ ದೀರ್ಘ ಇತಿಹಾಸದಲ್ಲಿ ಮಹಿಳಾ ಬರವಣಿಗೆಯು ನಡೆದುಬಂದ ಹಾದಿ ಮತ್ತು ಆಧುನಿಕೋತ್ತರ ಕಾಲಘಟ್ಟದಲ್ಲಿ ಅದು ಕಂಡುಕೊಂಡ ಸ್ತ್ರೀವಾದಿ ಸಂವೇದನೆಯ ವಿಶಿಷ್ಟ ಸ್ವರೂಪವನ್ನು ಇಲ್ಲಿ ಚರ್ಚಿಸಲಾಗಿದೆ. ಅತ್ತಿಮಬ್ಬೆ, ಅಕ್ಕಮಹಾದೇವಿಯರ ಐತಿಹಾಸಿಕ ಹಿನ್ನೆಲೆಯಿಂದ ಪ್ರಸ್ತುತ ಸ್ತ್ರೀವಾದಿ ನೆಲೆಗಳವರೆಗಿನ ಪಯಣವನ್ನು ಗುರುತಿಸುತ್ತಾ, ಪಿತೃಪ್ರಧಾನ ವ್ಯವಸ್ಥೆಯ ವಿರುದ್ಧದ ಪ್ರತಿರೋಧ, ಪುರಾಣಗಳ ಮರುಕಟ್ಟುವಿಕೆ ಮತ್ತು ಅಸ್ಮಿತೆಯ ಹುಡುಕಾಟವನ್ನು ವಿಶ್ಲೇಷಿಸಲಾಗಿದೆ. ಸ್ತ್ರೀವಾದವು ಕೇವಲ ಆಕ್ರೋಶಕ್ಕೆ ಸೀಮಿತವಾಗದೆ, ದೈಹಿಕ ಮತ್ತು ಮಾನಸಿಕ ಸ್ವಾತಂತ್ರ್ಯದ ಪರಿಕಲ್ಪನೆಗಳನ್ನು ಒಳಗೊಂಡಿದೆ. ವೈದೇಹಿ, ಸಾರಾ ಅಬೂಬಕ್ಕರ್ ಮುಂತಾದವರ ಬರಹಗಳನ್ನು ಉಲ್ಲೇಖಿಸುತ್ತಾ, ಜಾತಿ, ವರ್ಗ ಮತ್ತು ಧಾರ್ಮಿಕ ನೆಲೆಗಳಲ್ಲಿ ಮಹಿಳೆಯರ ಅನುಭವಗಳು ಹೇಗೆ ಭಿನ್ನವಾಗುತ್ತವೆ ಎಂಬುದನ್ನು ಪರಿಶೀಲಿಸಲಾಗಿದೆ. ಸ್ತ್ರೀ ಸಂವೇದನೆಯು ಏಕಶಿಲಾ ರೂಪದ್ದಲ್ಲ, ಬದಲಿಗೆ ಅದು ಸಾಂಸ್ಕೃತಿಕ ಬಹುತ್ವದ ನೆಲೆಗಳನ್ನು ಹೊಂದಿದೆ ಎನ್ನುವುದನ್ನು ಈ ಅಧ್ಯಯನವು ಸ್ಪಷ್ಟಪಡಿಸುತ್ತದೆ.
ಕನ್ನಡ ಸಾಹಿತ್ಯದಲ್ಲಿ ಆಧುನಿಕೋತ್ತರ ಕಾಲದ ಸ್ತ್ರೀವಾದಿ ಸಂವೇದನೆ
137 to 148
ಕನ್ನಡ ಸಾಹಿತ್ಯದಲ್ಲಿ ಆಧುನಿಕೋತ್ತರ ಕಾಲವು ಭಿನ್ನತೆ, ವೈಯಕ್ತಿಕ ಅನುಭವ, ಅಂಚಿನ ಧ್ವನಿಗಳು ಮತ್ತು ಪ್ರಬಲ ಸಾಂಸ್ಕೃತಿಕ ಸಂವೇದನೆಗಳನ್ನು ಒತ್ತಿ ಹೇಳುವ ಘಟ್ಟವಾಗಿದೆ. ಈ ಸಂದರ್ಭದಲ್ಲಿ ಸ್ತ್ರೀವಾದಿ ಸಂವೇದನೆಯು ಒಂದು ಮುಖ್ಯ ಸಾಹಿತ್ಯ ದಾರಿಯಾಗಿ ರೂಪುಗೊಂಡಿದೆ. ಇದು ಕೇವಲ ಪುರುಷ ಪ್ರಧಾನ ವ್ಯವಸ್ಥೆಯ ವಿರುದ್ಧದ ಪ್ರತಿರೋಧವಲ್ಲ; ಬದಲಾಗಿ ಸ್ತ್ರೀಯರ ಬದುಕಿನ ಸೂಕ್ಷ್ಮ ಅನುಭವಗಳು, ದೇಹ, ಮನಸ್ಸಿನ ರಾಜಕೀಯ ಗುರುತುಗಳ ಹುಡುಕಾಟ ಮತ್ತು ಸಾಮಾಜಿಕ ಅನ್ಯಾಯಗಳ ವಿರುದ್ಧದ ಅಂತರಂಗದ ಸ್ವರಗಳ ಅಭಿವ್ಯಕ್ತಿಯಾಗಿದೆ. ಈ ಸ್ತ್ರೀವಾದಿ ಸಂವೇದನೆಯ ಸಾಹಿತ್ಯವು 1980ರ ದಶಕದ ನಂತರ ಮನುಷ್ಯನ ಸಂಬಂಧಗಳನ್ನು ಲಿಂಗತ್ವದ ಹಿನ್ನೆಲೆಯಲ್ಲಿ ಮರುಪರಿಶೀಲಿಸುವ ದೃಷ್ಟಿಕೋನವಾಗಿ ಬೆಳೆಯಿತು. ಈ ಆಧುನಿಕೋತ್ತರ ಸ್ತ್ರೀವಾದಿ ಸಾಹಿತ್ಯವು ‘ಒಬ್ಬ ಸ್ತ್ರೀ’ ಎಂಬ ಏಕಮುಖ ಕಲ್ಪನೆಯನ್ನು ಪ್ರಶ್ನಿಸಿ ವರ್ಗ, ಜಾತಿ, ಧರ್ಮ, ಭಾಷೆ, ಗ್ರಾಮೀಣ, ನಗರ ಹಿನ್ನೆಲೆಗಳ ವೈವಿಧ್ಯತೆಯನ್ನು ಒಪ್ಪಿಕೊಳ್ಳುತ್ತದೆ. ಇದರಿಂದ ದಲಿತ ಸ್ತ್ರೀ, ಅಲ್ಪಸಂಖ್ಯಾತ ಸ್ತ್ರೀ, ಕಾರ್ಮಿಕ ಸ್ತ್ರೀ, ಗೃಹಿಣಿ, ನಗರ ಬೌದ್ಧಿಕ ಸ್ತ್ರೀ ಇಂತಹ ವಿಭಿನ್ನ ಗುರುತುಗಳ ಧ್ವನಿಗಳು ಸಾಹಿತ್ಯದಲ್ಲಿ ಕೇಳಿ ಬರುತ್ತವೆ. ಈ ಬರಹಗಳು ಅನುಭವಧಾರಿತವಾಗಿದ್ದು ಆತ್ಮಕಥನ, ಸ್ಮರಣೆ, ಕಥೆ, ಕವನ, ನಾಟಕ ಮುಂತಾದ ವಿವಿಧ ರೂಪಗಳಲ್ಲಿ ವ್ಯಕ್ತವಾಗುತ್ತದೆ.
ಸ್ತ್ರೀ ದೇಹ ಮತ್ತು ಅದರ ಮೇಲೆ ಸಮಾಜ ಹೇರಿದ ನಿಯಂತ್ರಣಗಳಾದ ವಿವಾಹ, ಮಾತೃತ್ವ, ಲೈಂಗಿಕತೆ, ಕೆಲಸದ ಜಗತ್ತು, ಕುಟುಂಬದ ರಾಜಕೀಯ ಇವು ಪ್ರಮುಖ ವಿಷಯಗಳಾಗಿವೆ. ಆಧುನಿಕೋತ್ತರ ಸ್ತ್ರೀವಾದಿ ಬರಹಗಳಲ್ಲಿ ಭಾಷೆ ಸಹ ಬದಲಾಗುತ್ತದೆ. ಸೌಂದರ್ಯಪೂರ್ಣ ಕಾವ್ಯಭಾಷೆಯ ಬದಲು ನೇರ ಅನುಭವಪೂರ್ಣ, ಕೆಲವೊಮ್ಮೆ ಮುರಿದ ಸಂಭಾಷಣಾ ಶೈಲಿ ಕಾಣುತ್ತದೆ. ಇದು ಸ್ತ್ರೀಯರ ಮೌನವನ್ನು ಮುರಿಯುವ ಪ್ರಯತ್ನವಾಗಿದೆ. ಈ ಕಾಲಘಟ್ಟದ ಲೇಖಕಿಯರಲ್ಲಿ ವೈದೇಹಿ, ಪ್ರತಿಭಾ ನಂದಕುಮಾರ, ಸ. ಉಷಾ, ನೇಮಿಚಂದ್ರ, ವಿಜಯಾದಬ್ಬೆ, ಸಬಿತ ಬನ್ನಾಡಿ, ಬಿ.ಟಿ. ಲಲಿತಾನಾಯಕ, ದು. ಸರಸ್ವತಿ, ಸ.ರಾ. ಅಬೂಬಕ್ಕರ್, ಗೀತಾ ನಾಗಭೂಷಣ್, ಅನುಪಮ ನಿರಂಜನ, ಬಾನು ಮುಷ್ತಾಕ್ ಹೀಗೆ ಮುಂತಾದವರ ಕೃತಿಗಳು ಅತ್ಯಂತ ಸೂಕ್ಷ್ಮವಾಗಿ ಹಾಗೂ ಆಳವಾದ ನೆಲೆಗಳಲ್ಲಿ ಶೋಧಿಸಿವೆ. ಆಧುನಿಕೋತ್ತರ ಕನ್ನಡ ಸಾಹಿತ್ಯದ ಸ್ತ್ರೀವಾದಿ ಸಂವೇದನೆ ಮಹಿಳೆಯ ಬದುಕನ್ನು ಅವಳ ದೃಷ್ಟಿಯಿಂದಲೇ ನಮಗೆ ಕಲಿಸುತ್ತದೆ. ಇದು ಸಮಾಜದ ಅಸಮಾನತೆಯ ವಿರುದ್ಧದ ಸಾಹಿತಿಕ ಹೋರಾಟವಾಗಿದ್ದು ಮಹಿಳೆಯ ಸ್ವಾತಂತ್ರ್ಯ, ಗೌರವ ಮತ್ತು ಮಾನವೀಯ ಹಕ್ಕುಗಳನ್ನು ಸ್ಥಾಪಿಸುವ ದಿಕ್ಕಿನಲ್ಲಿ ಮಹತ್ವದ ಪಾತ್ರ ವಹಿಸಿದೆ.