ಕನ್ನಡ ಸಾಹಿತ್ಯದಲ್ಲಿ ಆಧುನಿಕೋತ್ತರ ಕಾಲದ ಸ್ತ್ರೀವಾದಿ ಸಂವೇದನೆ

Main Article Content

ಮಹಾಂತೇಶ ದುರಗಣ್ಣವರ

Abstract

ಕನ್ನಡ ಸಾಹಿತ್ಯದಲ್ಲಿ ಆಧುನಿಕೋತ್ತರ ಕಾಲವು ಭಿನ್ನತೆ, ವೈಯಕ್ತಿಕ ಅನುಭವ, ಅಂಚಿನ ಧ್ವನಿಗಳು ಮತ್ತು ಪ್ರಬಲ ಸಾಂಸ್ಕೃತಿಕ ಸಂವೇದನೆಗಳನ್ನು ಒತ್ತಿ ಹೇಳುವ ಘಟ್ಟವಾಗಿದೆ. ಈ ಸಂದರ್ಭದಲ್ಲಿ ಸ್ತ್ರೀವಾದಿ ಸಂವೇದನೆಯು ಒಂದು ಮುಖ್ಯ ಸಾಹಿತ್ಯ ದಾರಿಯಾಗಿ ರೂಪುಗೊಂಡಿದೆ. ಇದು ಕೇವಲ ಪುರುಷ ಪ್ರಧಾನ ವ್ಯವಸ್ಥೆಯ ವಿರುದ್ಧದ ಪ್ರತಿರೋಧವಲ್ಲ; ಬದಲಾಗಿ ಸ್ತ್ರೀಯರ ಬದುಕಿನ ಸೂಕ್ಷ್ಮ ಅನುಭವಗಳು, ದೇಹ, ಮನಸ್ಸಿನ ರಾಜಕೀಯ ಗುರುತುಗಳ ಹುಡುಕಾಟ ಮತ್ತು ಸಾಮಾಜಿಕ ಅನ್ಯಾಯಗಳ ವಿರುದ್ಧದ ಅಂತರಂಗದ ಸ್ವರಗಳ ಅಭಿವ್ಯಕ್ತಿಯಾಗಿದೆ. ಈ ಸ್ತ್ರೀವಾದಿ ಸಂವೇದನೆಯ ಸಾಹಿತ್ಯವು 1980ರ ದಶಕದ ನಂತರ ಮನುಷ್ಯನ ಸಂಬಂಧಗಳನ್ನು ಲಿಂಗತ್ವದ ಹಿನ್ನೆಲೆಯಲ್ಲಿ ಮರುಪರಿಶೀಲಿಸುವ ದೃಷ್ಟಿಕೋನವಾಗಿ ಬೆಳೆಯಿತು. ಈ ಆಧುನಿಕೋತ್ತರ ಸ್ತ್ರೀವಾದಿ ಸಾಹಿತ್ಯವು ‘ಒಬ್ಬ ಸ್ತ್ರೀ’ ಎಂಬ ಏಕಮುಖ ಕಲ್ಪನೆಯನ್ನು ಪ್ರಶ್ನಿಸಿ ವರ್ಗ, ಜಾತಿ, ಧರ್ಮ, ಭಾಷೆ, ಗ್ರಾಮೀಣ, ನಗರ ಹಿನ್ನೆಲೆಗಳ ವೈವಿಧ್ಯತೆಯನ್ನು ಒಪ್ಪಿಕೊಳ್ಳುತ್ತದೆ. ಇದರಿಂದ ದಲಿತ ಸ್ತ್ರೀ, ಅಲ್ಪಸಂಖ್ಯಾತ ಸ್ತ್ರೀ, ಕಾರ್ಮಿಕ ಸ್ತ್ರೀ, ಗೃಹಿಣಿ, ನಗರ ಬೌದ್ಧಿಕ ಸ್ತ್ರೀ ಇಂತಹ ವಿಭಿನ್ನ ಗುರುತುಗಳ ಧ್ವನಿಗಳು ಸಾಹಿತ್ಯದಲ್ಲಿ ಕೇಳಿ ಬರುತ್ತವೆ. ಈ ಬರಹಗಳು ಅನುಭವಧಾರಿತವಾಗಿದ್ದು ಆತ್ಮಕಥನ, ಸ್ಮರಣೆ, ಕಥೆ, ಕವನ, ನಾಟಕ ಮುಂತಾದ ವಿವಿಧ ರೂಪಗಳಲ್ಲಿ ವ್ಯಕ್ತವಾಗುತ್ತದೆ.
ಸ್ತ್ರೀ ದೇಹ ಮತ್ತು ಅದರ ಮೇಲೆ ಸಮಾಜ ಹೇರಿದ ನಿಯಂತ್ರಣಗಳಾದ ವಿವಾಹ, ಮಾತೃತ್ವ, ಲೈಂಗಿಕತೆ, ಕೆಲಸದ ಜಗತ್ತು, ಕುಟುಂಬದ ರಾಜಕೀಯ ಇವು ಪ್ರಮುಖ ವಿಷಯಗಳಾಗಿವೆ. ಆಧುನಿಕೋತ್ತರ ಸ್ತ್ರೀವಾದಿ ಬರಹಗಳಲ್ಲಿ ಭಾಷೆ ಸಹ ಬದಲಾಗುತ್ತದೆ. ಸೌಂದರ್ಯಪೂರ್ಣ ಕಾವ್ಯಭಾಷೆಯ ಬದಲು ನೇರ ಅನುಭವಪೂರ್ಣ, ಕೆಲವೊಮ್ಮೆ ಮುರಿದ ಸಂಭಾಷಣಾ ಶೈಲಿ ಕಾಣುತ್ತದೆ. ಇದು ಸ್ತ್ರೀಯರ ಮೌನವನ್ನು ಮುರಿಯುವ ಪ್ರಯತ್ನವಾಗಿದೆ. ಈ ಕಾಲಘಟ್ಟದ ಲೇಖಕಿಯರಲ್ಲಿ ವೈದೇಹಿ, ಪ್ರತಿಭಾ ನಂದಕುಮಾರ, ಸ. ಉಷಾ, ನೇಮಿಚಂದ್ರ, ವಿಜಯಾದಬ್ಬೆ, ಸಬಿತ ಬನ್ನಾಡಿ, ಬಿ.ಟಿ. ಲಲಿತಾನಾಯಕ, ದು. ಸರಸ್ವತಿ, ಸ.ರಾ. ಅಬೂಬಕ್ಕರ್, ಗೀತಾ ನಾಗಭೂಷಣ್, ಅನುಪಮ ನಿರಂಜನ, ಬಾನು ಮುಷ್ತಾಕ್ ಹೀಗೆ ಮುಂತಾದವರ ಕೃತಿಗಳು ಅತ್ಯಂತ ಸೂಕ್ಷ್ಮವಾಗಿ ಹಾಗೂ ಆಳವಾದ ನೆಲೆಗಳಲ್ಲಿ ಶೋಧಿಸಿವೆ. ಆಧುನಿಕೋತ್ತರ ಕನ್ನಡ ಸಾಹಿತ್ಯದ ಸ್ತ್ರೀವಾದಿ ಸಂವೇದನೆ ಮಹಿಳೆಯ ಬದುಕನ್ನು ಅವಳ ದೃಷ್ಟಿಯಿಂದಲೇ ನಮಗೆ ಕಲಿಸುತ್ತದೆ. ಇದು ಸಮಾಜದ ಅಸಮಾನತೆಯ ವಿರುದ್ಧದ ಸಾಹಿತಿಕ ಹೋರಾಟವಾಗಿದ್ದು ಮಹಿಳೆಯ ಸ್ವಾತಂತ್ರ್ಯ, ಗೌರವ ಮತ್ತು ಮಾನವೀಯ ಹಕ್ಕುಗಳನ್ನು ಸ್ಥಾಪಿಸುವ ದಿಕ್ಕಿನಲ್ಲಿ ಮಹತ್ವದ ಪಾತ್ರ ವಹಿಸಿದೆ.

Article Details

Section

Research Articles

Author Biography

ಮಹಾಂತೇಶ ದುರಗಣ್ಣವರ

ಕನ್ನಡ ಅತಿಥಿ ಉಪನ್ಯಾಸಕರು, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ, ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯ, ಬೆಳಗಾವಿ.

 

How to Cite

ಮಹಾಂತೇಶ ದುರಗಣ್ಣವರ. (2026). ಕನ್ನಡ ಸಾಹಿತ್ಯದಲ್ಲಿ ಆಧುನಿಕೋತ್ತರ ಕಾಲದ ಸ್ತ್ರೀವಾದಿ ಸಂವೇದನೆ. ಅಕ್ಷರಸೂರ್ಯ (AKSHARASURYA), 13(06), 137 to 148. https://aksharasurya.com/index.php/latest/article/view/636

References

ಪ್ರತಿಭಾ ನಂದಕುಮಾರ, (1983), ನಾವು ಹುಡುಗಿಯರೇ ಹೀಗೆ, ಬೆಂಗಳೂರು: ಕನ್ನಡ ಸಂಘ, ಕ್ರೈಸ್ಟ್ ಕಾಲೇಜ್.

ಜಿ. ವೆಂಕಟಸುಬ್ಬಯ್ಯ (ಸಂ) ಮತ್ತು ರಾಜಶ್ರೀ ಸತೀಶ್ (ಸ.ಸಂ), (2004), ಕನ್ನಡ ಕ್ಲಿಷ್ಟ ಪದಕೋಶ, ಬೆಂಗಳೂರು: ಪ್ರಿಸಂ ಬುಕ್ಸ್ ಪ್ರೈವೇಟ್ ಲಿಮಿಟೆಡ್.

ವಿಜಯಾ ದಬ್ಬೆ, (1981), ಇತಿಹಾಸ ಪುಟಗಳಿಂದ, ಮೈಸೂರು: ಸಂವಹನ ಪ್ರಕಾಶನ.

ವೈದೇಹಿ, (1990), ಬಿಂದು ಬಿಂದಿಗೆ, ಸಾಗರ: ಅಕ್ಷರ ಪ್ರಕಾಶನ.

ಉಷಾ ಸ., (1976), ಈ ನೆಲದ ಹಾಡು, ಸಾಗರ: ಅಕ್ಷರ ಪ್ರಕಾಶನ.

ಸಬಿತಾ ಬನ್ನಾಡಿ, (2004), ಮಣ್ಣಿನ ಹಾದಿ, ಮೈಸೂರು: ಸಂವಹನ ಪ್ರಕಾಶನ.

ಶಿವರಾಮ ಕಾರಂತ, (1990), ಸಿರಿಗನ್ನಡ ಅರ್ಥಕೋಶ, ಬೆಂಗಳೂರು: ಎಸ್.ಬಿ.ಎಸ್. ಪ್ರಕಾಶನ.

Most read articles by the same author(s)