ಸ್ತ್ರೀವಾದಿ ಚಿಂತನೆ ಮತ್ತು ಕಮಲಾ ಹಂಪನಾ

Main Article Content

ಸಿ.ಎಂ. ತಳವಾರ

Abstract

ಪ್ರಸ್ತುತ ಕಾಲಘಟ್ಟದಲ್ಲಿ ಮಹಿಳೆಯು ಅಭಿವೃದ್ಧಿ ಪಥದತ್ತ ಹೆಜ್ಜೆ ಇಟ್ಟರೂ ಕೂಡಾ ಮಹಿಳೆಯ ಬಗೆಗಿನ ಚಿಂತನೆ ಅಥವಾ ಮಹಿಳಾ ಸಾಮಾಜಿಕ ಚಿಂತನೆಯು ಹಾಗೂ ಮಹಿಳಾ ಸ್ವಾತಂತ್ರ್ಯ, ಸ್ವಾವಲಂಬನೆಯು ತೃಪ್ತಿದಾಯಕವಾಗಿಲ್ಲ. ಸಮಕಾಲೀನ ಸಂದರ್ಭವು ಸೃಷ್ಟಿಸಿರುವ ಹಲವಾರು ಸಮಸ್ಯೆಗಳ ನಡುವೆ ಸ್ತ್ರೀಸಬಲೀಕರಣ, ಸ್ತ್ರೀಸ್ವಾತಂತ್ರ್ಯದ ಬಗೆಗಿನ ಚಿಂತನೆಗೆ ಮಹತ್ವ ಕಡಿಮೆಯಾಗಿದ್ದು ಇದು ಜರೂರಾಗಿ ಪರಿಹರಿಸಲೇಬೇಕಾಗಿರುವ ಅನಿವಾರ್ಯ ಪ್ರಕ್ರಿಯೆಯಾಗಿ ಉಳಿದಿಲ್ಲ. ಸ್ತ್ರೀ ಸಂವೇದನೆ ಕುರಿತಾದ ಸುಮಾರು 650 ಪುಟಗಳ ‘ಭರಣ’ ಎಂಬ ಸಂಪುಟವು ಪ್ರೊ. ಕಮಲಾ ಹಂಪನಾ ಅವರ ಸ್ತ್ರೀವಾದಿ ವಿಚಾರಗಳಿಗೆ ಹಿಡಿದ ಕೈಗನ್ನಡಿ. ‘ಭರಣ’ ಪ್ರಬಂಧಗಳ ಗುಚ್ಛ. ಧರಿಸುವುದು, ಪೋಷಿಸುವುದು, ತುಂಬುವುದು ಎಂಬ ಅರ್ಥಗಳು ಭರಣ ಪದಕ್ಕಿದೆ. ಈ ಮೂರು ಅರ್ಥಗಳೂ ಪೂರಕವಾಗಿ ಧರಿಸುವ, ತುಂಬುವ ಮತ್ತು ಪೋಷಿಸುವ ಗುಣಗಳ ಪ್ರತೀಕವೇ ಮಹಿಳೆ ಎಂದು ತಿಳಿಸುತ್ತಾರೆ. ಧರಿಸುವುದರಿಂದಲೇ ಆಕೆ ಧಾರಣಿ, ಶಾಂತಿ, ಸಹನೆ, ಧಾರಣೆಯ ಪ್ರತಿರೂಪವೇ ಸ್ತ್ರೀ. ಹೀಗೆ ಮಹಿಳೆ ಭರಣವೂ ಹೌದು ಆಭರಣವೂ ಹೌದು ಎಂದು ವಿವರಿಸುತ್ತಾರೆ. ಹಂಪನಾ ಅವರ ಚಿಂತನೆಯಲ್ಲಿ ‘ಸಂಸಾರ’ ಬಿಂದು ಪ್ರಮುಖ ಘಟಕ. ಅದು ಸರಿಯಾದ ಅಸ್ತಿಭಾರದ ಮೇಲೆ ನಿಂತಾಗ ಮಾತ್ರ ಸಮಾಜ, ನಾಡು, ದೇಶ, ಜಗತ್ತು ಸರಿಯಾಗಿ ನಿಲ್ಲಬಲ್ಲದು. ಇಂದು ಜಗತ್ತು ನಿಂತಿದೆ ಮುನ್ನಡೆಯುತ್ತಿದೆ ಎಂದರೆ ಅದರ ಶ್ರೇಯಸ್ಸು ಅದನ್ನು ಹೊತ್ತು ನಿಂತಿರುವ ಹೆಣ್ಣಿಗೆ ಸಲ್ಲುತ್ತದೆ ಎಂದು ಅವರು ಅಭಿಪ್ರಾಯ ಪಡುತ್ತಾರೆ. ‘ಆ ಮುಖ’ ಎಂಬ ಅವರ 19 ಜನ ಸಾಹಿತಿಗಳ ಪತ್ನಿಯರ ಸಂದರ್ಶನ, ವ್ಯಕ್ತಿ ಚಿತ್ರಣಗಳ ಕೃತಿಯಲ್ಲೂ ಕಮಲಾ ಹಂಪನಾ ಅವರು ಕೇಳುವ ಹಲವು ಪ್ರಶ್ನೆಗಳು ಈ ನಂಬಿಕೆಗೆ ಪೂರಕವಾಗಿಯೇ ಇದೆ. ಮಹಿಳೆಯರ ಬಗ್ಗೆ ವೈಚಾರಿಕ ಬರಹಗಳು, ರಾಷ್ಟ್ರಕೂಟ, ಗಂಗರ ಕಾಲದಿಂದ ಮಹಿಳೆಯರ ಬಗೆಗೆ ಸಂಶೋಧನಾ ಲೇಖನಗಳು, ಲೇಖಕಿಯರ ವ್ಯಕ್ತಿ ಚಿತ್ರಗಳು, ಲೇಖಕಿಯರ ಕೃತಿಗಳಿಗೆ ಬರೆದ ಮುನ್ನುಡಿಗಳು-ಹೀಗೆ ಕಮಲಾ ಹಂಪನಾ ಅವರ ಮಹಿಳಾ ಸಾಹಿತ್ಯ ವಿಸ್ತಾರವಾಗಿದೆ. ಸಂಘರ್ಷಕ್ಕಿಂತ ಸಾಮರಸ್ಯದ ಬಗೆಗೆ ಅವರ ಒಲವಿದೆ. ‘ಅಮೃತಮತಿ: ಸ್ತ್ರೀವಾದಿ ನೆಲೆಯಲ್ಲಿ’ ಎಂಬ ಬರಹ ಕಮಲಾ ಹಂಪನಾ ಅವರ ಮನೋಭೂಮಿಕೆಯನ್ನು ಅರಿಯಲು ಸೂಕ್ತ ಬರಹವಾಗಿದೆ. ಈ ಬರಹದಲ್ಲಿ ಅವರು ಇತರ ಹಲವರ ಪ್ರಮುಖ ಲೇಖನಗಳನ್ನೂ ಪರಿಗಣಿಸಿದ್ದಾರೆ. ನೀತಿ-ಅನೀತಿ, ಅಸ್ಮಿತೆ, ಸಂಘರ್ಷ ಹೀಗೆ ಸಾಗಿ ಬಂದ ಹಲವು ವಿಚಾರಗಳನ್ನು ಚರ್ಚಿಸುತ್ತಾ ಹಂಪನಾ ಅವರು ಅಮೃತಮತಿಯ ಒಳತುಳಿತನ್ನು ಕಾವ್ಯ ನ್ಯಾಯದಿಂದ ಅರಿಯಬೇಕು ಎನ್ನುತ್ತಾರೆ.

Article Details

Section

Research Articles

Author Biography

ಸಿ.ಎಂ. ತಳವಾರ

ಕನ್ನಡ ಸಹ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪಾಶ್ಚಾಪುರ, ಬೆಳಗಾವಿ.

References

ಕರ್ನಾಟಕ ಸಾಹಿತ್ಯ ಅಕಾಡೆಮಿ, (2006), ಕನ್ನಡ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆಯ ಸ್ವರೂಪ, ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ.

ಪ್ರೇಮಾ ಸಿರ್ಸೆ, (2006), ಮಹಿಳೆ, ಸಮಾಜ ಮತ್ತು ಸವಾಲುಗಳು, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್.

ಶಾಂತಾದೇವಿ ಮಾಳವಾಡ, (1990), ಸಾರ್ವಜನಿಕ ರಂಗದಲ್ಲಿ ಮಹಿಳೆ, ಧಾರವಾಡ: ಸಹ್ಯಾದ್ರಿ ಪ್ರಕಾಶನ.

ಪ್ರೀತಿ ಶುಭಚಂದ್ರ, (2002), ಮಹಿಳಾ ಅಧ್ಯಯನದ ತಾತ್ವಿಕ ನೆಲೆಗಳು ಮತ್ತು ಮಹಿಳಾ ಚಳುವಳಿಗಳು, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.

ಅನುಪಮಾ ಎಚ್. ಎಸ್, (2012), ಮಹಿಳಾ ಜಾಗೃತಿ ಮತ್ತು ರಾಜಕೀಯ ಪ್ರಜ್ಞೆ, ಗದಗ: ಲಡಾಯಿ ಪ್ರಕಾಶನ.

ಕಮಲಾ ಹಂಪನಾ, (2022), ಬೆಳಕು ಬಿತ್ತಿದವರು, ಬೆಂಗಳೂರು: ಸ್ವಪ್ನಾ ಬುಕ್ ಹೌಸ್.

ಕಮಲಾ ಹಂಪನಾ, (2023), ಬೆಡಗಿನ ಬೆರಗು, ಬೆಂಗಳೂರು: ಸ್ವಪ್ನಾ ಬುಕ್ ಹೌಸ್.