Published: 2026-03-01

Table of Contents

Table of Contents

I to XVII

ಕನ್ನಡ ಸಾಹಿತ್ಯದಲ್ಲಿ ಆಧುನಿಕೋತ್ತರ ಕಾಲದ ಸಾಮಾಜಿಕ ಸಮಸ್ಯೆಗಳು

ಮಂಜುಳಾಕ್ಷಿ ಎಲ್.

01 to 12

ಈ ಆಧುನಿಕ, ಆಧುನಿಕೋತ್ತರ, ವಸಾಹತು, ವಸಾಹತುಶಾಹಿ, ವಸಾಹತೋತ್ತರ, ಸ್ತ್ರೀವಾದ, ವಾಸ್ತವವಾದ, ಅಸ್ತಿತ್ವವಾದ, ರಾಚನಿಕವಾದ, ಸಂರಚನೋತ್ತರವಾದ, ಪ್ರಜ್ಞಾಪ್ರವಾಹತಂತ್ರ - ಇವೇ ಮೊದಲಾದ ವಾದವನ್ನು ಗುರುತಿಸುತ್ತೇವೆ, ಎಲ್ಲವೂ ಪಾಶ್ಚಿಮಾತ್ಯರ ಕೊಡುಗೆಯೇ. ಭಾರತವನ್ನಾಳಿದ ಬ್ರಿಟಿಷರ ಆಳ್ವಿಕೆಯ ಕಾಲ ವಸಾಹತು ಕಾಲ. ಅನಂತರದ್ದೆಲ್ಲಾ ವಸಾಹತೋತ್ತರವೇ. ಸರಳವಾಗಿ ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರ ಎಂದಿಟ್ಟುಕೊಳ್ಳಬಹುದು. ಬದಲಾವಣೆ ಜಗದ ನಿಯಮ. ಇಡೀ ಜಗತ್ತಿನ ಸಾಮಾಜಿಕ, ರಾಜಕೀಯ, ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಚಲನೆಯಲ್ಲಿ ಯಾವುದೇ ಸ್ಥಿತ್ಯಂತರಗಳಾದರೂ ಆಯಾ ಕಾಲದ ಸಾಮಾಜಿಕ ಚಿಂತಕರು, ಕವಿಗಳು, ಬರಹಗಾರರು, ವಿಜ್ಞಾನಿಗಳು, ಆ ಕಾಲಘಟ್ಟದ ಸೂಕ್ಷ್ಮಗಳನ್ನು, ಬದುಕಿನ ಏರಿಳಿತಗಳನ್ನು, ಹೊಸ ಆಲೋಚನೆಗಳನ್ನು, ಮುನ್ನೋಟಗಳನ್ನು, ಹುಡುಕಾಟಗಳನ್ನು, ಆವಿಷ್ಕಾರಗಳನ್ನು, ಹಲವಾರು ಕಾಣಿಕೆಗಳನ್ನು ಕಟ್ಟಿಕೊಡುತ್ತಿರುತ್ತಾರೆ. ಈ ಮೊದಲು ಹೇಳಿದ ವಾದಗಳೆಲ್ಲ ಹಾಗೆ ಹುಟ್ಟಿದವುಗಳೇ. ಇಂಥ ವಾದಗಳು ವಸಾಹತುಶಾಹಿ ಅಥವಾ ಜಾಗತೀಕರಣದ ಪ್ರಭಾವದಿಂದ ಹಲವು ದೇಶಗಳಿಗೆ ತಲುಪಿ, ಅಲ್ಲಿನ ಚಿಂತಕರನ್ನು ಪ್ರಭಾವಿಸಿ, ಆಯಾ ದೇಶಕಾಲಕ್ಕನುಗುಣವಾಗಿ ರೂಪಾಂತರಗೊಂಡು ಅವುಗಳದ್ದೇ ಆದ ರೀತಿಯಲ್ಲಿ ತಮ್ಮ ಅಸ್ತಿತ್ವವನ್ನು ಸ್ಥಾಪಿಸಿಕೊಳ್ಳುತ್ತವೆ. ಪ್ರಸ್ತುತ ವಿಷಯದ ಆಧುನಿಕೋತ್ತರ ಅಥವಾ ವಸಾಹತೋತ್ತರದ ಚಿಂತನೆಗಳು ನಮ್ಮ ಕನ್ನಡದ ಚಿಂತಕರನ್ನು ಪ್ರಭಾವಿಸಿದ್ದು ಹೇಗೆ? ಅವು ನಮ್ಮ ಸಾಹಿತ್ಯದ ಮೇಲೆ ಬೀರಿದ ಪ್ರಭಾವ ಯಾವ ರೀತಿಯದ್ದು? ಇವು ಕನ್ನಡ ಸಾಹಿತ್ಯದಲ್ಲಿ ಉಂಟುಮಾಡಿದ ಸಾಮಾಜಿಕ ಬದಲಾವಣೆಗಳೇನು? ಎನ್ನುವುದರ ಒಂದು ಪುಟ್ಟ ಪ್ರಯತ್ನ ಈ ಲೇಖನದ ಉದ್ದೇಶ.

Read More »

ಕನ್ನಡ ಸಾಹಿತ್ಯದಲ್ಲಿ ಆಧುನಿಕೋತ್ತರ ಕಾಲದ ಸ್ತ್ರೀವಾದಿ ಸಂವೇದನೆ

ದೀಪಾ. ಮ. ಅಂಗಡಿ

13 to 21

ಕನ್ನಡ ಸಾಹಿತ್ಯದಲ್ಲಿ ಆಧುನಿಕೋತ್ತರ ಕಾಲದ ಸ್ತ್ರೀವಾದಿ ಸಂವೇದನೆ ಪ್ರಮುಖ ಅಂಶವಾಗಿ ಹೊರಹೊಮ್ಮಿದೆ. ಪುರಾತನ ಕಾಲದಿಂದ ಮಹಿಳೆಯನ್ನು ಸಮಾಜವು ಚಾರಿತ್ರಿಕ ದಾಖಲೆಗಳಿಂದ ದೂರವಿಟ್ಟು ಮೌನಗೊಳಿಸಿದ್ದರೆ, ಆಧುನಿಕ ಕಾಲದಲ್ಲಿ ಆಕೆ ತನ್ನ ಸ್ವರವನ್ನು ಪುರುಷಪ್ರಧಾನ ವ್ಯವಸ್ಥೆಯ ವಿರುದ್ಧ ಎತ್ತಿಕೊಂಡಿದ್ದಾಳೆ. ತನ್ನ ಬದುಕಿನ ನೋವು, ಸಂಕಟ, ಅನ್ಯಾಯ, ಶೋಷಣೆ ಮತ್ತು ಪ್ರತಿರೋಧವನ್ನು ಕಾವ್ಯದ ಮೂಲಕ ವ್ಯಕ್ತಪಡಿಸುತ್ತಾಳೆ. ಮಹಿಳಾ ಕಾವ್ಯವು ಕೇವಲ ಪುರುಷ ವಿರೋಧಿ ಧೋರಣೆಯಲ್ಲ, ಬದಲಿಗೆ ತನ್ನ ಅಸ್ತಿತ್ವವನ್ನು ದೃಢಪಡಿಸುವ, ಬದುಕನ್ನು ತನ್ನ ದೃಷ್ಟಿಕೋನದಿಂದ ನೋಡುವ ಸಾಹಿತ್ಯದ ಹಾದಿಯಾಗಿದೆ. ಆಧುನಿಕ ಮಹಿಳಾ ಕವಿಗಳು ತಮ್ಮ ಕಾವ್ಯದಲ್ಲಿ ಮಹಿಳೆಯರ ಶೋಷಣೆ, ಲೈಂಗಿಕ ದೌರ್ಜನ್ಯ, ಭಯ, ಸಾಮಾಜಿಕ ಅನ್ಯಾಯ, ಪುರುಷರ ದಬ್ಬಾಳಿಕೆ ಮುಂತಾದವುಗಳ ಬಗ್ಗೆ ಕಳವಳವನ್ನು ಬಿಂಬಿಸುತ್ತಾರೆ. ಈ ಸಾಹಿತ್ಯ ಮಹಿಳೆಯ ಆತ್ಮವಿಶ್ವಾಸಕ್ಕೆ, ಸಾಮಾಜಿಕ ಹೋರಾಟಕ್ಕೆ ಮತ್ತು ಸಾಹಿತ್ಯದ ಪ್ರಾಧಾನ್ಯತೆಗೂ ದಾರಿ ತೋರಿಸುತ್ತದೆ.

Read More »

ಜಾಗತೀಕರಣ ಮತ್ತು ಕನ್ನಡ ಸಾಹಿತ್ಯದ ಬದಲಾವಣೆಗಳು

ಬಸವರಾಜ ಎಂ. ಜನಗೌಡ

22 to 32

ಜಾಗತೀಕರಣವು ಸಮಕಾಲೀನ ಸಮಾಜದ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ರಚನೆಗಳಲ್ಲಿ ಮಹತ್ತರ ಪರಿವರ್ತನೆಗಳನ್ನು ತಂದಿದೆ. ಇದರ ಪರಿಣಾಮ ಕನ್ನಡ ಸಾಹಿತ್ಯದಲ್ಲಿಯೂ ಸ್ಪಷ್ಟವಾಗಿ ಕಾಣಿಸಿಕೊಂಡಿದೆ. ಆಧುನಿಕೋತ್ತರ ಕಾಲಘಟ್ಟದಲ್ಲಿ ಕನ್ನಡ ಸಾಹಿತ್ಯವು ಸ್ಥಳೀಯ ಅನುಭವಗಳ ಜೊತೆಗೆ ಜಾಗತಿಕ ಚಿಂತನೆಗಳನ್ನು ಒಳಗೊಳ್ಳುತ್ತಾ ವಿಷಯವಸ್ತು ಮತ್ತು ಅಭಿವ್ಯಕ್ತಿ ರೂಪಗಳಲ್ಲಿ ಹೊಸ ಆಯಾಮಗಳನ್ನು ಪಡೆದುಕೊಂಡಿದೆ. ವಲಸೆ, ನಗರೀಕರಣ, ಉಪಭೋಗ ಸಂಸ್ಕೃತಿ, ತಂತ್ರಜ್ಞಾನ ಮತ್ತು ಬಹುಭಾಷಾ ಪ್ರಭಾವಗಳು ಸಾಹಿತ್ಯದ ಕೇಂದ್ರ ವಿಷಯಗಳಾಗಿ ಮೂಡಿಬಂದಿವೆ. ಇಂಗ್ಲಿಷ್ ಭಾಷೆಯ ಪ್ರಭಾವ ಮತ್ತು ಡಿಜಿಟಲ್ ಮಾಧ್ಯಮಗಳ ವಿಸ್ತಾರವು ಸಾಹಿತ್ಯ ಸೃಜನ ಮತ್ತು ಪ್ರಸರಣದ ವಿಧಾನಗಳಲ್ಲಿ ಮಹತ್ವದ ಬದಲಾವಣೆಗಳನ್ನು ಉಂಟುಮಾಡಿವೆ. ಈ ಬದಲಾವಣೆಗಳು ಭಾಷಾ ಶುದ್ಧತೆ, ಸಾಂಸ್ಕೃತಿಕ ಗುರುತು ಮತ್ತು ಸಾಹಿತ್ಯದ ಮೌಲ್ಯಗಳ ಸಂರಕ್ಷಣೆಯ ಕುರಿತಾಗಿ ಸವಾಲುಗಳನ್ನೂ ಒಡ್ಡಿವೆ. ಈ ಅಧ್ಯಯನವು ಜಾಗತೀಕರಣದಿಂದ ಉಂಟಾದ ಈ ಬದಲಾವಣೆಗಳು ಕನ್ನಡ ಸಾಹಿತ್ಯದ ಸ್ವರೂಪ ಮತ್ತು ದಿಕ್ಕಿನ ಮೇಲೆ ಬೀರಿರುವ ಪರಿಣಾಮಗಳನ್ನು ವಿಶ್ಲೇಷಿಸುವ ಪ್ರಯತ್ನ ಮಾಡುತ್ತದೆ.

Read More »

ಕನ್ನಡ ಸಾಹಿತ್ಯದಲ್ಲಿ ಆಧುನಿಕೋತ್ತರ ಕಾಲದ ಸಮಸ್ಯೆ ಮತ್ತು ಸವಾಲುಗಳು

ಯಮುನಾ ನಾಯ್ಕ ಎಂ.

33 to 39

ಈ ಸಂಶೋಧನಾ ಲೇಖನವು ಕನ್ನಡ ಸಾಹಿತ್ಯದಲ್ಲಿ ಆಧುನಿಕೋತ್ತರ ಕಾಲದ ಸಮಸ್ಯೆ ಮತ್ತು ಸವಾಲುಗಳನ್ನು ಪ್ರಾಚೀನದಿಂದ ಅರ್ವಾಚೀನದ ಕನ್ನಡ ಸಾಹಿತ್ಯದ ಪ್ರಮುಖ ಆಶಯಗಳು ಮತ್ತು ತಾತ್ವಿಕತೆಯೊಂದಿಗೆ ಸಮೀಕರಿಸಿ ಅವಲೋಕಿಸಲಾಗಿದೆ. ಇಂದಿನ ಕಾಲದ ಸಂಘರ್ಷಗಳು ವಚನ ಚಳುವಳಿಯ ಕಾಲದಲ್ಲೂ ಇದ್ದವು. ಸಮ ಸಮಾಜದ ಆಶಯಗಳನ್ನು, ಸರ್ಕಾರದ ಕಾರ್ಯ ವೈಖರಿಯನ್ನು ವಿರೋಧಿಸಿದವರನ್ನು ಎಡಪಂಥೀಯ ಹಣೆಪಟ್ಟಿ ಅಂಟಿಸುವುದು, ಅಧಿಕಾರ, ಪ್ರಭುತ್ವದ ಪರವಾಗಿದ್ದರೆ ಬಲಪಂಥೀಯರೆಂದು ಗುರುತಿಸುವುದು ಇಂದಿನ ಸಮಸ್ಯೆಯಾಗಿದೆ. ಇದರಿಂದ ಬಿಡುಗಡೆ ಕಾಣುವುದು ಸಾಹಿತ್ಯಕ್ಕಿರುವ ಸವಾಲಾಗಿದೆ. ನವೋದಯ, ಪ್ರಗತಿಶೀಲ, ನವ್ಯ, ದಲಿತ-ಬಂಡಾಯ ಮೊದಲಾದ ಸಾಹಿತ್ಯ ಪರಂಪರೆಗಳು ಪ್ರಾಚೀನ ಕನ್ನಡ ಸಾಹಿತ್ಯಕ್ಕೆ ಋಣಿಯಾಗಿರುವಂತೆ ಆಧುನಿಕೋತ್ತರ ಕಾಲಘಟ್ಟದ ಸಾಹಿತ್ಯವೂ ಪೂರ್ವ ಸೂರಿಗಳ ಆದರ್ಶಗಳನ್ನು ಪಾಲಿಸಬೇಕಾಗುತ್ತದೆ. ಆದರೆ ಹೊಸ ಯುಗದ ನವ ಸಾಹಿತ್ಯವು ಜನಪರವಾಗುವಿಕೆಯಲ್ಲಿ ಸೋಲುತ್ತಿರುವುದಕ್ಕೆ ಕಾರ್ಯ-ಕಾರಣ ಸಂಬಂಧ ಶೋಧಿಸುವುದು ಈ ಲೇಖನದ ಉದ್ದೇಶದಲ್ಲಿ ಒಂದಾಗಿದೆ. ಇಂದು ಸಾಹಿತ್ಯವನ್ನು ಓದುವ ಸಂಸ್ಕೃತಿ ಕಡಿಮೆಯಾಗುತ್ತಿರುವುದು ಒಂದೆಡೆಯಾದರೆ ಶೋಷಿತ ಸಮುದಾಯದವರ ನೋವು ಯಾತನೆಗಳನ್ನು ಅಭಿವ್ಯಕ್ತಿಸುವ ಕೃತಿಗಳನ್ನು, ದೈವಗಳ ಹೆಸರಿನಲ್ಲಿ ಬಲಿಯಾದವರಿಗಿಂತ ದೈವಗಳ ವೈಭವೀಕರಣದತ್ತ ಒಲವು ತೋರಿಸುವ ಕೃತಿಗಳು ಮುನ್ನೆಲೆಗೆ ಬರುತ್ತಿರುವುದು ಆಧುನಿಕೋತ್ತರ ಕಾಲದಲ್ಲಿ ಸಮಸ್ಯೆಯ ರೂಪದಲ್ಲಿ ಉಳಿದಿವೆ. ಪುರಾಣದ ಅಧ್ಯಾತ್ಮವು ಆಧುನಿಕತೆಯ ಧರ್ಮವಾಗಿ, ಆಧುನಿಕೋತ್ತರ ಕಾಲದಲ್ಲಿ ಧರ್ಮದ ಕೂಸು ಜಾತಿಯ ರೂಪದಲ್ಲಿ ಎಲ್ಲೆಡೆಯೂ ನರ್ತಿಸುತ್ತಿರುವುದು ಈ ಯುಗದ ಸಾಹಿತಿಗಳ ಮುಂದಿನ ಸವಾಲಾಗಿದೆ. ಇದು ಸಾಹಿತ್ಯದಲ್ಲಿ ನಿರೂಪಿತವಾಗಿದ್ದರೂ ಅಂತಹ ಹೊತ್ತಿಗೆಗಳು ಒಂದು ವರ್ಗಕ್ಕೆ ಸಂಬಂಧಿಸಿದ್ದು ಎಂದು ಉದಾಸೀನತೆ ತೋರುತ್ತಿರುವುದು ಒಂದು ಸಮಸ್ಯೆಯಾಗಿದೆ ಎಂಬ ಅಂಶಗಳನ್ನು ಇಲ್ಲಿ ಚರ್ಚಿಸಲಾಗಿದೆ. ಎಲ್ಲಾ ಕಾಲದಲ್ಲಿಯೂ ಸಮಸ್ಯೆಗಳು ಇದ್ದೇ ಇರುತ್ತವೆ. ಆದರೆ ಸ್ವರೂಪದಲ್ಲಿ ಮಾತ್ರ ಬದಲಾಗಿರುತ್ತವೆ.

Read More »

ಕನ್ನಡ ಸಾಹಿತ್ಯದಲ್ಲಿ ಆಧುನಿಕೋತ್ತರ ಸ್ತ್ರೀವಾದಿ ಸಂವೇದನೆ

ಶೋಭಾ ಎಂ. ದೊಡ್ಡನಾಗಳ್ಳಿ

40 to 46

ಕನ್ನಡ ಸಾಹಿತ್ಯದಲ್ಲಿ ಆಧುನಿಕೋತ್ತರ ಸ್ತ್ರೀವಾದಿ ಸಂವೇದನೆಯು ಕಾಲ ಕಾಲಕ್ಕೆ ಸಮಾಜದ ಚಲನೆ, ಮೌಲ್ಯಗಳ ಬದಲಾವಣೆ ಹಾಗೂ ಮಾನವ ಸಂವೇದನೆಗಳ ಪ್ರತಿಬಿಂಬವಾಗಿ ಬಂದಿದೆ. ನವ್ಯ, ನವೋದಯ, ದಲಿತ ಬಂಡಾಯ, ಪ್ರಗತಿಶೀಲ ಈ ಸಾಹಿತ್ಯ ಪ್ರಕಾರಗಳ ಮೂಲಕ ಆಧುನಿಕ ಚಳುವಳಿಗಳ ನಂತರ ಕನ್ನಡ ಸಾಹಿತ್ಯವು ಪ್ರವೇಶಿಸಿದ ಹೊಸ ಹಂತವೇ ಆಧುನಿಕೋತ್ತರ ಸಾಹಿತ್ಯ. ಈ ಹಂತದಲ್ಲಿ ಕಂಡು ಬರುವ ಪ್ರಮುಖ ಲಕ್ಷಣಗಳಲ್ಲಿ ಒಂದೇ ಸ್ತ್ರೀವಾದಿ ಸಂವೇದನೆ. ಆಧುನಿಕತೆಯುಕ್ತವಾದ ಪ್ರಗತಿ ಮತ್ತು ವೈಜ್ಞಾನಿಕ ದೃಷ್ಟಿಕೋನವನ್ನು ಕೇಂದ್ರವಾಗಿಟ್ಟುಕೊಂಡಿದ್ದಾರೆ. ಆಧುನಿಕೋತ್ತರತೆ ಆ ಮೌಲ್ಯಗಳ ಮೇಲೆಯೇ ಪ್ರಶ್ನೆಗಳನ್ನು ಎತ್ತುತ್ತದೆ. ಸತ್ಯ ಒಂದೇ ಅಲ್ಲ ಅನೇಕ ಸತ್ಯಗಳಿವೆ ಎಂಬ ಭಾವನೆ, ಕೇಂದ್ರವಿಲ್ಲದ ಬದುಕು, ಚೂರಾದ ಅನುಭವಗಳು ಇವು ಆಧುನಿಕೋತ್ತರ ಚಿಂತನೆಯ ಲಕ್ಷಣಗಳು. ಸ್ತ್ರೀವಾದಿ ಸಂವೇದನೆ ಎಂದರೆ ಸಂಪತ್ತು, ಉಪಭೋಗ, ಸೌಕರ್ಯ, ಬ್ರಾಂಡ್, ಅಧಿಕಾರ ಮತ್ತು ವೈಯಕ್ತಿಕ ಲಾಭಗಳನ್ನು ಜೀವನದ ಕೇಂದ್ರವಾಗಿಸಿಕೊಂಡ ಮನೋಭಾವ. ಮಾನವ ಸಂಬಂಧಗಳಿಗಿಂತ ಮೌಲ್ಯಗಳಿಗಿಂತ ವಸ್ತುಗಳಿಗೆ ಮಾರುಕಟ್ಟೆಗೆ ಹೆಚ್ಚಿನ ಮಹತ್ವ ನೀಡುವುದು ಇದರ ಮೂಲ ಲಕ್ಷಣ.
ಆಧುನಿಕೋತ್ತರ ಕನ್ನಡ ಸಾಹಿತ್ಯದಲ್ಲಿ ನಗರೀಕರಣ, ಜಾಗತೀಕರಣ, ಖಾಸಗೀಕರಣದ ಪರಿಣಾಮವಾಗಿ ಸ್ತ್ರೀವಾದಿ ಸಂವೇದನೆ ಸ್ಪಷ್ಟವಾಗಿ ಕಾಣಿಸುತ್ತದೆ. ಕಥೆ, ಕಾದಂಬರಿ, ಕವನ ಇತ್ಯಾದಿ ಸಾಹಿತ್ಯ ಪ್ರಕಾರಗಳಲ್ಲಿ ನಗರ ಮಧ್ಯಮ ವರ್ಗದ ಅಸ್ಥಿರ ಜೀವನ, ಉದ್ಯೋಗ, ಹಣ, ಹುದ್ದೆಗಳಿಗಾಗಿ ನಡೆಯುವ ಸ್ಪರ್ಧೆ, ಮಾನವ ಸಂಬಂಧಗಳ ವ್ಯಾಪಾರೀಕರಣ, ಕುಟುಂಬಗಳ ಬಾಂಧವ್ಯಗಳಲ್ಲಿ ಮಾರ್ಪಡುವ ಸ್ಥಿತಿ ಇವೆಲ್ಲವೂ ಸಾಹಿತ್ಯದ ವಿಷಯವಾಗಿವೆ. ಸಾಹಿತ್ಯ ಪ್ರಕಾರಗಳಲ್ಲಿ ವಿಶ್ಲೇಷಿಸುವ ಪಾತ್ರಗಳು ಮತ್ತು ಮನೋವೈಜ್ಞಾನಿಕ ಸಂಘರ್ಷ, ಆಧುನಿಕೋತ್ತರ ಕೃತಿಗಳ ಪಾತ್ರಗಳು ಆದರ್ಶವಾದಿಗಳಲ್ಲ, ಅವು ಗೊಂದಲಭರಿತ ಸ್ವಾರ್ಥಪರ ಅಸ್ಥಿರ ವ್ಯಕ್ತಿತ್ವಗಳಾಗಿರುತ್ತವೆ. ಸ್ತ್ರೀವಾದಿ ಸಂಸ್ಕೃತಿಯಲ್ಲಿ ಸಿಲುಕಿದ ವ್ಯಕ್ತಿ ಅನುಭವಿಸುವ ಒಂಟಿತನ, ಅರ್ಥಶೂನ್ಯತೆ ಸಾಹಿತ್ಯದಲ್ಲಿ ಸೂಕ್ಷ್ಮವಾಗಿ ಚಿತ್ರಿಸುತ್ತಾರೆ.

Read More »

ಕನ್ನಡ ಸಂಸ್ಕೃತಿ ಮತ್ತು ಆಧುನಿಕೋತ್ತರತೆ

ಮಹಾನಂದಾ ಮಡಕಿ

47 to 52

ಪಾಶ್ಚಾತ್ಯ ನೆಲೆಯ ಆಧುನಿಕೋತ್ತರ ಸಿದ್ಧಾಂತವು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಮೇಲೆ ಬೀರಿದ ಪ್ರಭಾವ ಹಾಗೂ ಅದರ ಅನ್ವಯದ ಮಿತಿಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಆಧುನಿಕತೆಯ ವೈಚಾರಿಕತೆ ಮತ್ತು ಮಹಾಕಥನಗಳನ್ನು ಪ್ರಶ್ನಿಸುವ ಈ ತತ್ವವು ಕುವೆಂಪು, ಯು.ಆರ್. ಅನಂತಮೂರ್ತಿ ಹಾಗೂ ದಲಿತ-ಬಂಡಾಯ ಸಾಹಿತ್ಯದ ಮೂಲಕ ಕನ್ನಡದಲ್ಲಿ ಹೇಗೆ ಅಭಿವ್ಯಕ್ತಗೊಂಡಿದೆ ಎಂಬುದನ್ನು ಗುರುತಿಸಲಾಗಿದೆ. ಪಾಶ್ಚಾತ್ಯದ ವ್ಯಕ್ತಿವಾದ ಮತ್ತು ಕನ್ನಡದ ಸಮೂಹ ಪ್ರಜ್ಞೆಯ ನಡುವಿನ ತಾತ್ವಿಕ ಸಂಘರ್ಷವನ್ನು ಚರ್ಚಿಸುತ್ತಲೇ, ವಿದೇಶಿ ಸಿದ್ಧಾಂತಗಳನ್ನು ಅಂಧಾನುಕರಣೆ ಮಾಡದೆ, ಸ್ಥಳೀಯ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ವಿಮರ್ಶಾತ್ಮಕವಾಗಿ ಸ್ವೀಕರಿಸುವ ಅಗತ್ಯವನ್ನು ಪ್ರತಿಪಾದಿಸಲಾಗಿದೆ. ಆಧುನಿಕೋತ್ತರ ಚಿಂತನೆಯು ಕನ್ನಡ ಸಂಸ್ಕೃತಿಯ ಆತ್ಮವಿಮರ್ಶೆಗೆ ಮತ್ತು ಬಹುತ್ವದ ಅರಿವಿಗೆ ಪೂರಕವಾಗಬಲ್ಲದು ಎಂಬ ಆಶಯದೊಂದಿಗೆ, ಸಾಂಸ್ಕೃತಿಕ ಸ್ವಾಯತ್ತತೆಯನ್ನು ಕಾಯ್ದುಕೊಳ್ಳುವ ಮಹತ್ವವನ್ನು ಸಾರಲಾಗಿದೆ.

Read More »

ಸಾಮಾಜಿಕ ಮಾಧ್ಯಮ: ರಾಜಕೀಯ ಮತ್ತು ಸಾಹಿತ್ಯಿಕ ಚಳುವಳಿಗಳು

ಶ್ರೀನಿವಾಸ ಎಸ್. ಜಿ.

53 to 62

ಸಾಮಾಜಿಕ ಮಾಧ್ಯಮಗಳು ಜಾಗತಿಕವಾಗಿ ರಾಜಕೀಯ ಮತ್ತು ಸಾಹಿತ್ಯಿಕ ಚಳುವಳಿಗಳ ಸ್ವರೂಪವನ್ನು ಆಮೂಲಾಗ್ರವಾಗಿ ಬದಲಿಸಿವೆ. ಅರಬ್ ಸ್ಪ್ರಿಂಗ್, ಮೀಟೂವಿನಂತಹ ಹೋರಾಟಗಳ ಮೂಲಕ ಅಂಚಿನ ಸಮುದಾಯಗಳಿಗೆ ಧ್ವನಿ ಒದಗಿಸುವಲ್ಲಿ ಡಿಜಿಟಲ್ ವೇದಿಕೆಗಳ ಪಾತ್ರವನ್ನು ಇಲ್ಲಿ ಚರ್ಚಿಸಲಾಗಿದೆ. ವಸಾಹತೋತ್ತರ ಸಾಹಿತ್ಯದ ತಾತ್ವಿಕ ನೆಲೆಗಟ್ಟಿನಲ್ಲಿ, ಅಧಿಕಾರ ಕೇಂದ್ರಗಳನ್ನು ಪ್ರಶ್ನಿಸುವ ಮತ್ತು ದೇಶಿ ಅಸ್ಮಿತೆಯನ್ನು ಮರುಸ್ಥಾಪಿಸುವ ಸಾಧನವಾಗಿ ಸಾಮಾಜಿಕ ಜಾಲತಾಣಗಳ ಕಾರ್ಯವೈಖರಿಯನ್ನು ವಿಶ್ಲೇಷಿಸಲಾಗಿದೆ. ಕನ್ನಡ ಸಾಹಿತ್ಯ ಸಂದರ್ಭದೊಂದಿಗೆ, ಎಡ್ವರ್ಡ್ ಸೈದ್ ಮತ್ತು ಗಾಯತ್ರಿ ಸ್ಪಿವಾಕ್ ಅವರ ಚಿಂತನೆಗಳನ್ನು ಅನ್ವಯಿಸಿ, ಡಿಜಿಟಲ್ ವಸಾಹತುಶಾಹಿ ಮತ್ತು ಅಲ್ಗಾರಿದಮ್ ನಿಯಂತ್ರಣದ ಅಪಾಯಗಳನ್ನೂ ಗುರುತಿಸಲಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಜಾಪ್ರಭುತ್ವೀಕರಣ ಮತ್ತು ತಾಂತ್ರಿಕ ಜಾಗೃತಿಯ ಅಗತ್ಯವನ್ನು ಈ ಅಧ್ಯಯನ ಒತ್ತಿಹೇಳುತ್ತದೆ.

Read More »

ಕನ್ನಡ ಸಾಹಿತ್ಯದಲ್ಲಿ ಆಧುನಿಕೋತ್ತರ ಕಾಲದ ಸ್ತ್ರೀವಾದಿ ಸಂವೇದನೆಯ ನೆಲೆಗಳು

ಸಾಗರ ಎಸ್. ಪಾಟೀಲ

63 to 69

ಕನ್ನಡ ಸಾಹಿತ್ಯವು ತನ್ನ ಬಹುಶತಮಾನಗಳ ಇತಿಹಾಸದಲ್ಲಿ ಅನೇಕ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಪರಿವರ್ತನೆಗಳಿಗೆ ಸ್ಪಂದಿಸಿದೆ. ಈ ಪರಿವರ್ತನೆಗಳಲ್ಲಿ ಸ್ತ್ರೀಪರ ಚಿಂತನೆಗಳು ಮತ್ತು ಮಹಿಳಾ ಅನುಭವಗಳ ಪ್ರತಿಬಿಂಬನೆ ಅತ್ಯಂತ ಮಹತ್ವವನ್ನು ಪಡೆದಿವೆ. ವಿಶೇಷವಾಗಿ, ಇಪ್ಪತ್ತನೇ ಶತಮಾನದ ಕೊನೆಯ ಭಾಗದಿಂದ ಆರಂಭವಾದ ಆಧುನಿಕೋತ್ತರ (ಪೋಸ್ಟ್‌ ಮಾಡರ್ನ್) ಸ್ತ್ರೀವಾದಿ ಸಂವೇದನೆಗಳು ಕನ್ನಡ ಸಾಹಿತ್ಯದಲ್ಲಿ ಹೊಸ ಆಯಾಮಗಳನ್ನು ತಂದಿವೆ. ಈ ಸಂವೇದನೆಗಳು ಕೇವಲ ಮಹಿಳೆಯರ ಶೋಷಣೆ ಮತ್ತು ಅನ್ಯಾಯಗಳ ವಿರುದ್ಧವಾದ ಧ್ವನಿಯಾಗಿರದೆ, ಮಹಿಳೆಯರ ವೈಯಕ್ತಿಕ, ಸಾಮಾಜಿಕ, ದೈಹಿಕ, ಲೈಂಗಿಕ ಮತ್ತು ಆರ್ಥಿಕ ಅನುಭವಗಳ ಸೂಕ್ಷ್ಮ ಚಿತ್ರಣವನ್ನು ನೀಡುತ್ತಿವೆ. ಇವು ಪಾಶ್ಚಾತ್ಯ ಸಿದ್ಧಾಂತಗಳ ಪ್ರಭಾವವನ್ನು ಸ್ಥಳೀಯ ಪರಂಪರೆಗಳೊಂದಿಗೆ ಸಂಯೋಜಿಸಿ, ಕನ್ನಡದ ಸಾಂಸ್ಕೃತಿಕ ನೆಲೆಯಲ್ಲಿ ವಿಶಿಷ್ಟವಾದ ಸ್ತ್ರೀಪರ ಧ್ವನಿಯನ್ನು ರೂಪಿಸುತ್ತಿವೆ.

Read More »

ಆಧುನಿಕೋತ್ತರ ಕನ್ನಡ ಸಾಹಿತ್ಯದಲ್ಲಿ ಮಹಿಳಾ ಸಮಸ್ಯೆ ಮತ್ತು ಸವಾಲುಗಳು

ಸೋಮಶೇಖರಪ್ಪ ಹೆಚ್.

70 to 75

ನಮ್ಮ ದೇಶದಲ್ಲಿ ಕೌಟುಂಬಿಕ ಪದ್ಧತಿ, ಸಂಸ್ಕೃತಿ, ಸಂಸ್ಕಾರಗಳು, ಕುಟುಂಬ ನಿರ್ವಹಣೆ, ಆರೈಕೆ ಮಾಡುವ ಜವಾಬ್ದಾರಿ ಅನಾದಿ ಕಾಲದಿಂದಲೂ ಬಂದಿರುವುದರಿಂದ ಸಣ್ಣ ವಯಸ್ಸಿನಿಂದಲೇ ಆಕೆಗೆ ಹಲವಾರು ನೀತಿ ನಿಯಮಗಳು, ಕಟ್ಟುಪಾಡುಗಳನ್ನು ಹಾಕಲಾಗುತ್ತದೆ. ಕನ್ನಡ ಸಾಹಿತ್ಯದ ಆಧುನಿಕೋತ್ತರ ಕಾಲಘಟ್ಟದಲ್ಲಿ ಸ್ತ್ರೀವಾದಿ ಸಾಹಿತ್ಯವು ಚಿಂತನಾ ಮತ್ತು ಚಳವಳಿಯಾಗಿ ರೂಪುಗೊಂಡಿದೆ. ಸಾಮಾಜಿಕ–ಸಾಂಸ್ಕೃತಿಕ ವ್ಯವಸ್ಥೆಯನ್ನು ಪ್ರಶ್ನಿಸುವ ಉದ್ದೇಶದಿಂದ ಸ್ತ್ರೀವಾದಿ ಬರವಣಿಗೆ ಉದ್ಭವಿಸಿದೆ. ಈ ಸಾಹಿತ್ಯವು ಮಹಿಳೆಯ ಅನುಭವ, ಅಸ್ತಿತ್ವ, ಸ್ವಾತಂತ್ರ್ಯ, ಲೈಂಗಿಕತೆ, ಶೋಷಣೆ ಹಾಗೂ ಗುರುತುಗಳ ಕುರಿತು ನೇರ ಮತ್ತು ಪ್ರಶ್ನಾತ್ಮಕ ಭಾಷೆಯಲ್ಲಿ ಚರ್ಚಿಸುತ್ತದೆ. ಆಧುನಿಕ ಮಹಿಳಾ ಸಾಹಿತ್ಯವನ್ನು ಸಂಪೂರ್ಣ ಮಹಿಳಾ ವಿರಚಿತ ಸಾಹಿತ್ಯದ ಹಿನ್ನೆಲೆಯನ್ನು ವಿಶಿಷ್ಟವಾಗಿ ಗುರುತಿಸಬಹುದು. ಸ್ವಾತಂತ್ರ್ಯಪೂರ್ವದ ಮಹಿಳಾ ಸಂವೇದನೆಗಳಲ್ಲಿ ತಮ್ಮ ವ್ಯಕ್ತಿತ್ವ ಮತ್ತು ಸ್ತ್ರೀ ಅನುಭವಿಸುವ ಸಂಕಟಗಳ ಬಗ್ಗೆ ವಿಷಾದವಿದ್ದರೂ, ಪಿತೃಪ್ರಧಾನ ವ್ಯವಸ್ಥೆಯನ್ನು ಧಿಕ್ಕರಿಸದೇ ಕೌಟುಂಬಿಕ ನೆಲೆಯಲ್ಲಿ ಅದನ್ನು ಪೋಷಿಸುವ ಜವಾಬ್ದಾರಿಯನ್ನು ಹೆಣ್ಣೇ ಹೊರಬೇಕೆನ್ನುವ ಅಧೀನ ಭಾವ ಗೋಚರಿಸುತ್ತದೆ. ಅಲ್ಲದೇ ಕೊಡಗಿನ ಗೌರಮ್ಮ, ತಿರುಮಲಾಂಬ, ಸರಸ್ವತಿಬಾಯಿ ರಾಜವಾಡೆ, ತಿರುಮಲೆ ರಾಜಮ್ಮ ಮುಂತಾದವರ ಕೃತಿಗಳಲ್ಲಿ ದಾರ್ಶನಿಕತೆಯನ್ನು ಕಾಣುತ್ತೇವೆ. ಮಹಿಳಾ ಶೋಷಣೆಗಳು, ದೌರ್ಜನ್ಯಗಳು ಕೇವಲ ಒಂದೇ ಕ್ಷೇತ್ರಕ್ಕೆ ಸೀಮಿತವಾಗಿಲ್ಲ; ಕುಟುಂಬದಿಂದ ಹಿಡಿದು, ಹೊಲ-ಗದ್ದೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ಸರ್ಕಾರಿ ಮತ್ತು ಸರ್ಕಾರೇತರ ಕಚೇರಿಗಳಲ್ಲಿ ಕಂಡು ಬರುತ್ತವೆ. ಕುಟುಂಬದಲ್ಲಿ ಗಂಡ, ಮಾವ, ಮೈದುನ, ಅತ್ತೆ ಮತ್ತು ನಾದಿನಿಯರಿಂದ ಸೊಸೆಯ ಮೇಲೆ ದೌರ್ಜನ್ಯ, ಜಮೀನ್ದಾರಿ ಗಂಡಸರಿಂದ ಕೆಲಸದ ಮಹಿಳಾ ಕೂಲಿ ಕಾರ್ಮಿಕರ ಮೇಲೆ ದೌರ್ಜನ್ಯ, ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಸಂತೆಗಳಲ್ಲಿ ಅಪರಿಚಿತರಿಂದ ಲೈಂಗಿಕ ಕಿರುಕುಳ, ಕಚೇರಿಗಳಲ್ಲಿ ಮ್ಯಾನೇಜರ್ ಮತ್ತು ಸಹ ಕೆಲಸಗಾರರಿಂದ ಲೈಂಗಿಕ ಶೋಷಣೆಗಳು ನಡೆಯುತ್ತವೆ. ಇವುಗಳ ವಿರುದ್ಧ ನಿಲ್ಲುವ ಸಾಮರ್ಥ್ಯದ ಅನಿವಾರ್ಯತೆ ಇದೆ.

Read More »

ಆಧುನಿಕೋತ್ತರ ಸಮಾಜ ಮತ್ತು ಕನ್ನಡ ಸಾಹಿತ್ಯದ ಪ್ರತಿಸ್ಪಂದನೆ

ಅರುಂಧತಿ ಎಫ್. ಬದಾಮಿ

76 to 84

ಆಧುನಿಕತೆ ‘ಹೊಸತು’ ಎಂಬ ಅರ್ಥವನ್ನು ನೀಡಿದರೆ ಆಧುನಿಕೋತ್ತರವು ಈ ಹೊಸತಿನ ನಂತರದ ‘ಪುನರ್ ಹೊಸತಿ’ನ ಕುರಿತಾದ ಚರ್ಚೆ. ಈ ಆಧುನಿಕತೆಯು ವಸಾಹತುಶಾಹಿಯ ಒಂದು ದೊಡ್ಡ ಕೊಡುಗೆ. ಈ ಆಧುನಿಕತೆಯು ಸರಿಯೋ ತಪ್ಪೋ ಎಂಬ ಜಿಜ್ಞಾಸೆಯಲ್ಲಿರುವ, ಅದನ್ನು ಸ್ವೀಕರಿಸಬೇಕೋ ಬೇಡವೋ ಎಂಬ ದ್ವಂದ್ವ, ಒತ್ತಡದಲ್ಲಿರುವಾಗಲೇ ನಾವುಗಳು ಈಗ ಆಧುನಿಕೋತ್ತರ ಕಾಲಘಟ್ಟವನ್ನು ಪ್ರವೇಶಿಸಿದ್ದೇವೆ. ಈ ಸಂದರ್ಭದಲ್ಲಿ ಉಂಟಾಗುತ್ತಿರುವ ಅನೇಕ ಬದಲಾವಣೆಗಳನ್ನು ಯಾವ ಚರ್ಚೆಗೆ ಒಳಪಡಿಸದೆ, ಒಳಪಡಿಸಿದರೂ ಕೇವಲ ಅದು ಚರ್ಚೆಗೆ ಮಾತ್ರ ಸೀಮಿತವಾಗುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಪರಂಪರೆ-ಆಧುನಿಕತೆ-ಆಧುನಿಕೋತ್ತರತೆಗಳು ಅನೇಕ ಸಂಘರ್ಷಗಳನ್ನು ಹುಟ್ಟುಹಾಕಿವೆ. ಕೌಟುಂಬಿಕ, ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ, ವೈಜ್ಞಾನಿಕ, ನೈತಿಕ, ಸಾಂಸ್ಕೃತಿಕ, ಗಂಡು-ಹೆಣ್ಣಿನ ಸಂಬಂಧದಲ್ಲಿ ಅನೇಕ ಸ್ಥಿತ್ಯಂತರಗಳು, ಬದಲಾವಣೆಗಳು ಉಂಟಾಗಿವೆ. ಈ ಪ್ರಕ್ರಿಯೆಯಲ್ಲಿ ಆಧುನಿಕೋತ್ತರ-ಆಧುನಿಕತೆ-ಪರಂಪರೆಗಳ ನಡುವಿನ ಕುತೂಹಲ, ತಿಕ್ಕಾಟ, ಎಚ್ಚರಿಕೆಯ ಸಂದೇಶ, ಸಂಘರ್ಷ, ಆತಂಕ ಇವು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಒಂದರ ಮೇಲೆ ಮತ್ತೊಂದು ಪ್ರಭಾವ ಬೀರುತ್ತ ಕಲಿಯುತ್ತಲೇ ಇರುತ್ತವೆ.

Read More »

ಸವಿತಾ ನಾಗಭೂಷಣ ಅವರ ಕವನಗಳಲ್ಲಿ ಆಧುನಿಕೋತ್ತರ ಸಂವೇದನೆಗಳು

ಮೋಹನ ಬೆಣಚಮರ್ಡಿ

85 to 88

ಸ್ತ್ರೀಯರು ತಮ್ಮ ಅನುಭವ, ಕನಸು ಮತ್ತು ಹೋರಾಟಗಳನ್ನು ಸಾಹಿತ್ಯ, ಕಲೆ ಹಾಗೂ ಕಾವ್ಯಗಳ ಮೂಲಕ ನಿರ್ಭೀತವಾಗಿ ಹೇಳಿಕೊಳ್ಳುವಂತಾಗಬೇಕು. ಶಿಕ್ಷಣ, ಉದ್ಯೋಗ, ಆರ್ಥಿಕ ಸ್ವಾತಂತ್ರ್ಯ ಮತ್ತು ನಿರ್ಧಾರ ಕೈಗೊಳ್ಳುವ ಅಧಿಕಾರದಲ್ಲಿ ಪುರುಷರೊಂದಿಗೆ ಸಮಾನ ಅವಕಾಶಗಳನ್ನು ಕಲ್ಪಿಸಿಕೊಳ್ಳಬೇಕಾದ ವ್ಯವಸ್ಥೆ ನಿರ್ಮಾಣವಾಗಬೇಕಾಗಿದೆ ಹಾಗೂ ಸ್ವಂತಿಕೆಯನ್ನು ಉಳಿಸಿಕೊಂಡು ಸ್ವಾವಲಂಬಿಯಾಗಿ ಬದುಕುವ ಶಕ್ತಿಯನ್ನು ಹೊಂದಬೇಕಾಗಿದೆ. ಸ್ತ್ರೀ ಸಂವೇದನೆಯು ಲಿಂಗ ಸಮಾನತೆಯತ್ತ ಸಾಗುವ ಒಂದು ಪ್ರಮುಖ ಸಾಮಾಜಿಕ ಹಾಗೂ ಸಾಂಸ್ಕೃತಿಕ ಹೆಜ್ಜೆಯಾಗುವ ಆಶಯವನ್ನು ಸವಿತಾ ನಾಗಭೂಷಣ ಅವರ ಕವನಗಳಲ್ಲಿ ಕಾಣುತ್ತೇವೆ. ಪ್ರಾಪಂಚಿಕವಾಗಿ ತನ್ನ ಹಕ್ಕು ಮತ್ತು ವ್ಯಕ್ತಿತ್ವವನ್ನು ಸದೃಢವಾಗಿ ಶಾಶ್ವತವಾಗಿ ನೆಲೆ ನಿಲ್ಲುವ ಗಟ್ಟಿತನ ಸ್ತ್ರೀಯರದ್ದಾಗಬೇಕು ಎಂಬುದು ಸವಿತಾ ನಾಗಭೂಷಣ ಅವರ ಕವನಗಳಲ್ಲಿ ಕಾಣುತ್ತೇವೆ.

Read More »

ಆಧುನಿಕೋತ್ತರ ಚಿಂತನೆಗಳು: ಎದೆಯ ಹಣತೆ

ಸವಿತಾ ಗು ಕೊಟಬಾಗಿ

89 to 96

ಬಾನು ಮುಸ್ತಾಕ್ ಅವರ ‘ಎದೆ ಹಣತೆ’ ಕಥಾ ಸಂಕಲನವು ಆಧುನಿಕೋತ್ತರ ಸಮಸ್ಯೆಗಳ ಕುರಿತು ಅನಾವರಣ ಮಾಡುತ್ತದೆ. ಜೊತೆಗೆ ಪರ್ಯಾಯ ವ್ಯವಸ್ಥೆ ರೂಪಿಸಬೇಕೆಂಬ ಸೂಕ್ಷ್ಮತೆಯ ಸುಳಿವುಗಳನ್ನು ನೀಡುತ್ತದೆ. ಈ ದೃಷ್ಟಿಕೋನದಲ್ಲಿ ವ್ಯಕ್ತಿಯ ಅಂತರಂಗ, ಸಾಮಾಜಿಕ ಭಿನ್ನತೆ, ಗುರುತರ ನೋವು, ದುಃಖ-ದುಮ್ಮಾನಗಳು ವಿಭಿನ್ನ ರೀತಿಯಾಗಿ ವಿಶ್ಲೇಷಣೆಗೆ ಬಾನು ಅವರು ಒಳಪಡಿಸಿದ್ದಾರೆ. ಈ ಕಥಾ ಸಂಕಲನದ ಕೆಲ ಮುಗ್ಧ ಸ್ತ್ರೀ ಪಾತ್ರಗಳು ಸಾಂಪ್ರದಾಯಿಕ ಮೌಲ್ಯಗಳಿಂದಾಗಿ, ಲೋಕ ಜ್ಞಾನದ ಕೊರತೆಯಿಂದಾಗಿ ಜೀವನ ಕಳೆದುಕೊಂಡಿದ್ದರೆ, ಇನ್ನೂ ಕೆಲ ವಿದ್ಯಾವಂತ ಸ್ತ್ರೀ ಪಾತ್ರಗಳು ಅಂಧ ಸಾಂಪ್ರದಾಯಿಕ ಮೌಲ್ಯಗಳನ್ನು, ಮೂಲಭೂತಿವಾದಿಗಳನ್ನು ಪ್ರಶ್ನಿಸುತ್ತಾರೆ.
ಈ ಕಥಾ ಸಂಕಲನವು ಕ್ರಮಬದ್ಧವಲ್ಲದ ತುಂಡು ತುಂಡಾದ ರಚನೆಗಳು, ಸರಳ ಭಾಷಾ ಸಂವಹನ ಅಭಿವ್ಯಕ್ತಿಯಲ್ಲಿ ಸಂಕೀರ್ಣತೆಗಳು ಮತ್ತು ಅಂತರಶಿಸ್ತೀಯ ವಿಷಯಗಳನ್ನು ಒಳಗೊಂಡಿದೆ. ಇದರಿಂದ ವ್ಯಕ್ತಿಯ ಮಾನಸಿಕ ಸಂಘರ್ಷ ಮತ್ತು ಸಮಾಜ ಅಸ್ಥಿರತೆಯನ್ನು ಸೂಚಿಸುತ್ತದೆ. ಕಥೆಗಳ ರಚನೆಯಲ್ಲಿ ಹಲವು ವಿನೂತನ ತಂತ್ರ ಶೈಲಿಗಳನ್ನೊಳಗೊಂಡಿದ್ದರಿಂದ ಸಹೃದಯರನ್ನು ಓದಿಸಿಕೊಂಡು ಹೋಗುತ್ತವೆ. ಕಲ್ಪನಾ ಹಂದರದಲ್ಲಿ ಪಾತ್ರಗಳು ರಚನೆಯಾದರೂ ಅವುಗಳು ವಾಸ್ತವಕ್ಕೆ ಮುಖಾಮುಖಿಯಾಗಿವೆ. ಪ್ರಸ್ತುತ ಕಥೆಗಳಲ್ಲಿ ಹೆಚ್ಚು ಕಥೆಗಳು ಮುಸ್ಲಿಂ ಸಮುದಾಯದ ಬಡತನ, ಅಲ್ಲಿಯ ಲಿಂಗ ತಾರತಮ್ಯಗಳಂತಹ ವಿಶಿಷ್ಟ ಅನುಭವಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಜೊತೆಗೆ ತೀರಾ ಕೆಳ ಅಂಚಿನ ಜನರ ದುರ್ಗಮ ನೋವು-ನಿರಾಶೆ-ಸಂಕಟಗಳನ್ನೂ ದಾಖಲಿಸುತ್ತದೆ. ಇಂತಹ ವಿಶಿಷ್ಟ ಅನುಭವ ಲೋಕ ಹಾಗೂ ಕಥಾ ರಚನೆಯ ಶೈಲಿಯ ಆಧುನಿಕೋತ್ತರ ಕಥೆಗಳ ಪ್ರಮುಖ ಲಕ್ಷಣವಾಗಿವೆ.
ಪ್ರಸ್ತುತ ಕಥಾ ಸಂಕಲನದ ಕಥೆಗಳಲ್ಲಿ ಒಂದೇ ಸತ್ಯದ ಹಲವು ಅನುಭವಗಳು (ಸತ್ಯ ಅನಿಶ್ಚಿತತೆ), ಸ್ತ್ರೀ ಅಸ್ಮಿತೆ ಮತ್ತು ಅಸ್ತಿತ್ವಕ್ಕಾಗಿ ನೋವುಗಳು, ಕೆಳಸ್ತರ ವ್ಯಕ್ತಿಗಳ ಆರ್ತಧ್ವನಿ ಇತ್ಯಾದಿ ವಿಷಯಗಳ ಕುರಿತು ಶೋಧಿಸಲಾಗಿದೆ. ಈ ಕೃತಿ ಸಮಕಾಲೀನ ಮಾನವನ ವಿವಿಧ ಅನುಭವ ಸ್ತರಗಳ ಸ್ವರೂಪಗಳನ್ನು ಅಭಿವ್ಯಕ್ತಿಸುತ್ತದೆ. ಒಟ್ಟಿಗೆ ಪರ್ಯಾಯ ವ್ಯವಸ್ಥೆ ರೂಪಿಸಬೇಕೆಂಬ ಹಕ್ಕೊತ್ತಾಯದ ಸೂಕ್ಷ್ಮತೆಯನ್ನು ಕಥೆಗಳಲ್ಲಿ ಲೇಖಕಿ ಪ್ರತಿಪಾದಿಸಿರುವುದನ್ನು ಗುರುತಿಸಲಾಗಿದೆ.

Read More »

ಭಾರತದಲ್ಲಿ ಕೃಷಿಯಲ್ಲಾಗುತ್ತಿರುವ ಬದಲಾವಣೆ ಮತ್ತು ಹಸಿರು ಕ್ರಾಂತಿಯ ನಂತರದಲ್ಲಿ ರೈತರು ಎದುರಿಸುತ್ತಿರುವ ಸವಾಲುಗಳು

ಸುಜಾತ

97 to 101

ಹೆಚ್ಚಿನ ಇಳುವರಿ ನೀಡುವಂತಹ ಮುಂದುವರೆದ ವೈವಿಧ್ಯಮಯ ಕೃಷಿ ಉಪಕರಣಗಳು, ಬಿತ್ತನೆ ಬೀಜಗಳು, ಅಜೈವಿಕ ರಸಗೊಬ್ಬರಗಳ ಹೆಚ್ಚಿದ ಬಳಕೆ ಮತ್ತು ವಿಸ್ತೃತ ನೀರಾವರಿ ಯೋಜನೆಗಳ ಪರಿವರ್ತಕ ಬದಲಾವಣೆ ಕೃಷಿ ಪದ್ಧತಿಗಳನ್ನು ಪರಿಚಯಿಸಿದ ಹಸಿರು ಕ್ರಾಂತಿಯು ಭಾರತದಲ್ಲಿ ಬೆಳೆಯ ಉತ್ಪಾದಕತೆಯನ್ನು ಗಮನಾರ್ಹವಾಗಿ ಹೆಚ್ಚಿಸಿತು. ಆದಾಗ್ಯೂ, ಈ ಪ್ರಗತಿಗಳು ಹೆಚ್ಚಿದ ಆಹಾರ ಭದ್ರತೆಗೆ ಕೊಡುಗೆ ನೀಡಿದ್ದರೂ, ಅವು ಹಸಿರು ಕ್ರಾಂತಿಯ ನಂತರದ ಯುಗದಲ್ಲಿ ಕೃಷಿಕರ ಮೇಲೆ ಪ್ರತಿಕೂಲವಾದಂತಹ ಪರಿಣಾಮ ಬೀರಿದ ಕಾರಣ, ಸಾಮಾಜಿಕ, ಆರ್ಥಿಕ ಮತ್ತು ಪರಿಸರದಂತಹ ಸವಾಲುಗಳಿಗೆ ಕಾರಣವಾದವು ಎಂದೇ ಹೇಳಲಾಗುತ್ತದೆ. ಈ ಸವಾಲುಗಳಲ್ಲಿ ಆಳವಾದ ಆರ್ಥಿಕ ಅಸಮಾನತೆಗಳು, ನೀರಿನ ಕೊರತೆ, ರೈತರ ಆಂತರಿಕ ಮೊತ್ತಗಳು, ಮಣ್ಣಿನ ಸಂರಕ್ಷಣೆ ಮತ್ತು ಆರೋಗ್ಯ ಹೀಗೆ ಇತ್ಯಾದಿಗಳನ್ನು ನೋಡಬಹುದು. ಒಟ್ಟಾರೆಯಾಗಿ ಭಾರತದಲ್ಲಿ ಕೃಷಿಯಲ್ಲಾಗುವ ಬದಲಾವಣೆ ಮತ್ತು ಹಸಿರು ಕ್ರಾಂತಿಯ ನಂತರದ ಅವಧಿಯಲ್ಲಿ ಕೃಷಿಕರು ಎದುರಿಸುತ್ತಿರುವಂತಹ ಸವಾಲುಗಳನ್ನು ವಿಶ್ಲೇಷಿಸಲು ಈ ಲೇಖನ ಪ್ರಯತ್ನಿಸುತ್ತದೆ. ಪ್ರಸ್ತುತ ಲೇಖನವು, ದ್ವಿತೀಯ ದತ್ತಾಂಶಗಳು, ವೃತ್ತ ಪತ್ರಿಕೆಗಳು, ಜರ್ನಲ್‌ಗಳು, ಗ್ರಂಥಾಲಯ, ಸಂಶೋಧನಾ ಶೈಕ್ಷಣಿಕ ಲೇಖನಗಳನ್ನು ಪರಿಶೀಲಿಸುವ ಮೂಲಕ, ಕೃಷಿ ಸಂಕಷ್ಟಗಳ ಮೂಲ ಕಾರಣಗಳನ್ನು ಹಾಗೂ ರೈತರು ಪ್ರಸ್ತುತವಾಗಿ ಎದುರಿಸುತ್ತಿರುವ ಸಮಸ್ಯೆಗಳನ್ನು, ಸಂಭಾವ್ಯ ಪರಿಹಾರಗಳನ್ನು ಪ್ರಸ್ತಾಪಿಸಲು ಈ ಲೇಖನ ಪ್ರಯತ್ನಿಸುತ್ತಿದೆ. ಅಂತೆಯೇ ಈ ಸಂಶೋಧನಾ ಲೇಖನದ ಮೂಲಕ ಸುಸ್ಥಿರ ಕೃಷಿ ಪದ್ಧತಿಗಳು, ಆಹಾರ ಭದ್ರತೆ, ಗ್ರಾಮೀಣ ಜನರ ಯೋಗಕ್ಷೇಮ ಮತ್ತು ಕೃಷಿ ಸುಧಾರಣೆಯ ಮಾರ್ಗಗಳನ್ನು ಸೂಚಿಸಲು ಈ ಲೇಖನವು ಪ್ರಯತ್ನಿಸುತ್ತದೆ.

Read More »

ಡಿಜಿಟಲ್ ಯುಗದಲ್ಲಿ ಪ್ರಜಾಪ್ರಭುತ್ವ ಮತ್ತು ನಾಗರಿಕರ ಭಾಗವಹಿಸುವಿಕೆ

ಶ್ರೀಪಾದ ಆರ್. ಮಾಳಗಿ

102 to 114

ಈ ಲೇಖನವು “ಡಿಜಿಟಲ್ ಯುಗದಲ್ಲಿ ಪ್ರಜಾಪ್ರಭುತ್ವ ಮತ್ತು ನಾಗರಿಕರ ಭಾಗವಹಿಸುವಿಕೆ” ಕುರಿತು ವಿಶ್ಲೇಷಿಸುತ್ತದೆ. ಡಿಜಿಟಲ್ ತಂತ್ರಜ್ಞಾನಗಳ ಬೆಳವಣಿಗೆ ಮತ್ತು ವ್ಯಾಪಕ ಇಂಟರ್‌ನೆಟ್ ಪ್ರವೇಶದಿಂದಾಗಿ ಭಾರತದಲ್ಲಿ ಪ್ರಜಾಪ್ರಭುತ್ವವು ಗಮನಾರ್ಹವಾಗಿ ಮರುರೂಪಿಸಲ್ಪಟ್ಟಿದೆ. ಡಿಜಿಟಲ್ ಯುಗವು ಚುನಾವಣೆಗಳು ಮತ್ತು ಸಾರ್ವಜನಿಕ ಸಭೆಗಳಂತಹ ಸಾಂಪ್ರದಾಯಿಕ ವಿಧಾನಗಳಿಗಿಂತ ನಾಗರಿಕರ ಭಾಗವಹಿಸುವಿಕೆಯ ವ್ಯಾಪ್ತಿಯನ್ನು ವಿಸ್ತರಿಸಿದೆ, ಇದರಲ್ಲಿ ಸಾಮಾಜಿಕ ಮಾಧ್ಯಮ, ಇ-ಆಡಳಿತ ವೇದಿಕೆಗಳು ಮತ್ತು ಡಿಜಿಟಲ್ ಕ್ರಿಯಾಶೀಲತೆಯ ಮೂಲಕ ಆನ್‌ಲೈನ್ ತೊಡಗಿಸಿಕೊಳ್ಳುವಿಕೆ ಸೇರಿದೆ. ಡಿಜಿಟಲ್ ಇಂಡಿಯಾ, ಆನ್‌ಲೈನ್ ಕುಂದುಕೊರತೆ ಪರಿಹಾರ ವ್ಯವಸ್ಥೆಗಳು ಮತ್ತು ಡಿಜಿಟಲ್ ಸೇವಾ ವಿತರಣೆಯಂತಹ ಸರ್ಕಾರಿ ಉಪಕ್ರಮಗಳು ನಾಗರಿಕರು ರಾಜ್ಯದೊಂದಿಗೆ ಹೆಚ್ಚು ನೇರವಾಗಿ ಸಂವಹನ ನಡೆಸಲು, ಮಾಹಿತಿಯನ್ನು ಸುಲಭವಾಗಿ ಪ್ರವೇಶಿಸಲು ಮತ್ತು ನೀತಿ ಚರ್ಚೆಗಳಿಗೆ ಕೊಡುಗೆ ನೀಡಲು ಅನುವು ಮಾಡಿಕೊಟ್ಟಿವೆ, ಇದರಿಂದಾಗಿ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಬಲಪಡಿಸುತ್ತದೆ.
ಅದೇ ಸಮಯದಲ್ಲಿ, ಭಾರತದಲ್ಲಿ ಪ್ರಜಾಪ್ರಭುತ್ವದ ಡಿಜಿಟಲ್ ರೂಪಾಂತರವು ನಿರ್ಣಾಯಕ ಸವಾಲುಗಳನ್ನು ಒಡ್ಡುತ್ತದೆ. ಡಿಜಿಟಲ್ ವಿಭಜನೆಯು ಗ್ರಾಮೀಣ ಜನಸಂಖ್ಯೆ, ಆರ್ಥಿಕವಾಗಿ ದುರ್ಬಲ ವರ್ಗಗಳು ಮತ್ತು ಡಿಜಿಟಲ್ ಅನಕ್ಷರಸ್ಥ ನಾಗರಿಕರಿಗೆ ಸಮಾನ ಭಾಗವಹಿಸುವಿಕೆಯನ್ನು ಮಿತಿಗೊಳಿಸುತ್ತಲೇ ಇದೆ. ತಪ್ಪು ಮಾಹಿತಿ, ನಕಲಿ ಸುದ್ದಿ ಮತ್ತು ಆನ್‌ಲೈನ್ ದ್ವೇಷ ಭಾಷಣದ ತ್ವರಿತ ಹರಡುವಿಕೆಯು ಮಾಹಿತಿಯುಕ್ತ ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಅಪಾಯವನ್ನುಂಟುಮಾಡುತ್ತದೆ. ಹೆಚ್ಚುವರಿಯಾಗಿ, ಡೇಟಾ ಗೌಪ್ಯತೆ, ಕಣ್ಗಾವಲು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಕಳವಳಗಳು ಡಿಜಿಟಲ್ ಕ್ಷೇತ್ರದಲ್ಲಿ ಪ್ರಜಾಪ್ರಭುತ್ವ ಹಕ್ಕುಗಳ ರಕ್ಷಣೆಯ ಬಗ್ಗೆ ಪ್ರಮುಖ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ.
ಒಟ್ಟಾರೆಯಾಗಿ, ಡಿಜಿಟಲ್ ಯುಗವು ಭಾರತದಲ್ಲಿ ಪ್ರಜಾಪ್ರಭುತ್ವ ಭಾಗವಹಿಸುವಿಕೆಗೆ ಅವಕಾಶಗಳು ಮತ್ತು ಅಪಾಯಗಳನ್ನು ನೀಡುತ್ತದೆ. ಡಿಜಿಟಲ್ ವೇದಿಕೆಗಳು ಆಡಳಿತವನ್ನು ಹೆಚ್ಚು ಒಳಗೊಳ್ಳುವ, ಭಾಗವಹಿಸುವ ಮತ್ತು ಸ್ಪಂದಿಸುವ ಮೂಲಕ ಪ್ರಜಾಪ್ರಭುತ್ವವನ್ನು ಆಳಗೊಳಿಸುವ ಸಾಮರ್ಥ್ಯವನ್ನು ಹೊಂದಿದ್ದರೂ, ಅವುಗಳ ಪರಿಣಾಮಕಾರಿತ್ವವು ಜವಾಬ್ದಾರಿಯುತ ಆಡಳಿತ, ಬಲವಾದ ನಿಯಂತ್ರಕ ಚೌಕಟ್ಟುಗಳು, ಡಿಜಿಟಲ್ ಸಾಕ್ಷರತೆ ಮತ್ತು ಸಕ್ರಿಯ, ಮಾಹಿತಿಯುಕ್ತ ನಾಗರಿಕರ ತೊಡಗಿಸಿಕೊಳ್ಳುವಿಕೆಯನ್ನು ಅವಲಂಬಿಸಿರುತ್ತದೆ. ನೈತಿಕವಾಗಿ ಮತ್ತು ಒಳಗೊಳ್ಳುವಂತೆ ಬಳಸಿದಾಗ, ಡಿಜಿಟಲ್ ತಂತ್ರಜ್ಞಾನಗಳು ಭಾರತೀಯ ಪ್ರಜಾಪ್ರಭುತ್ವ ಮತ್ತು ನಾಗರಿಕರ ಭಾಗವಹಿಸುವಿಕೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

Read More »

1990 ರ ದಶಕದ ಮಹಿಳಾ ಸಾಹಿತ್ಯ: ಸ್ತ್ರೀಸಂವೇದನೆ ಒಂದು ವಿವೇಚನೆ

ನೇತ್ರಾವತಿ ಗಬ್ಬೂರ

115 to 119

1990ರ ದಶಕವು ಕನ್ನಡ ಮಹಿಳಾ ಸಾಹಿತ್ಯದ ಇತಿಹಾಸದಲ್ಲಿ ಮಹತ್ವದ ತಿರುವಿನ ಘಟ್ಟವಾಗಿದೆ. 1991ರ ಆರ್ಥಿಕ ಉದಾರೀಕರಣ, ಜಾಗತೀಕರಣ, ನಗರೀಕರಣ ಮತ್ತು ಮಹಿಳಾ ಚಳುವಳಿಗಳ ಬಲವರ್ಧನೆ ಮಹಿಳೆಯರ ಜೀವನಾನುಭವಗಳಲ್ಲಿ ಆಳವಾದ ಬದಲಾವಣೆಗಳನ್ನು ಉಂಟುಮಾಡಿದವು. ಈ ಬದಲಾವಣೆಗಳು ಸಾಹಿತ್ಯದಲ್ಲೂ ಪ್ರತಿಫಲಿಸಿ, ಮಹಿಳೆಯ ಅಸ್ತಿತ್ವ, ಆತ್ಮಪರಿಚಯ, ಲಿಂಗಸಮಾನತೆ, ದೇಹರಾಜಕೀಯ, ದಲಿತ ಮಹಿಳಾ ಅನುಭವಗಳು ಮತ್ತು ಧಾರ್ಮಿಕ ಸಾಂಸ್ಕೃತಿಕ ನಿರ್ಬಂಧಗಳ ವಿರುದ್ಧದ ಪ್ರಶ್ನೆಗಳು ಪ್ರಮುಖ ವಿಷಯಗಳಾಗಿ ಹೊರಹೊಮ್ಮಿದವು.
ಈ ಸಂಶೋಧನಾ ಲೇಖನವು ಗುಣಾತ್ಮಕ ವಿಧಾನವನ್ನು ಆಧರಿಸಿಕೊಂಡಿದ್ದು, 1990ರ ದಶಕದ ಪ್ರಮುಖ ಮಹಿಳಾ ಲೇಖಕಿಯರ ಕೃತಿಗಳ ವಿಶ್ಲೇಷಣೆಯ ಮೂಲಕ ಮಹಿಳಾ ಚೇತನದ ಬೆಳವಣಿಗೆಯನ್ನು ಅಧ್ಯಯನ ಮಾಡುತ್ತದೆ. ಈ ಅಧ್ಯಯನದಿಂದ ತಿಳಿಯುವುದೇನೆಂದರೆ, 1990ರ ದಶಕದ ಮಹಿಳಾ ಸಾಹಿತ್ಯವು ಗೃಹಪರಿಧಿಯನ್ನು ಮೀರಿ ಸಾಮಾಜಿಕ ವಿಮರ್ಶಾತ್ಮಕ ಧ್ವನಿಯಾಗಿ ಬೆಳೆಯಿತು ಮತ್ತು ಕನ್ನಡ ಸಾಹಿತ್ಯದಲ್ಲಿ ಸ್ತ್ರೀವಾದ ಚಿಂತನೆಗೆ ದೃಢನೆಲೆಗಟ್ಟನ್ನು ಒದಗಿಸಿತು.

Read More »

ಕನ್ನಡ ಸಾಹಿತ್ಯದಲ್ಲಿ ಆಧುನಿಕೋತ್ತರ ಕಾಲದ ಸ್ತ್ರೀವಾದಿ ಚಿಂತನೆ

ಪಿ. ನಾಗರಾಜ

120 to 124

ಆಧುನಿಕೋತ್ತರ ಕಾಲಘಟ್ಟದಲ್ಲಿ ಸ್ತ್ರೀವಾದಿ ಚಿಂತನೆಯು ಕೇವಲ ಲಿಂಗ ತಾರತಮ್ಯವನ್ನು ಪ್ರಶ್ನಿಸುವುದಕ್ಕೆ ಸೀಮಿತವಾಗದೆ, ಜನಾಂಗ, ವರ್ಗ ಮತ್ತು ಸಾಮಾಜಿಕ ನೆಲೆಗಳಲ್ಲಿ ಮಹಿಳೆಯ ಅಸ್ಮಿತೆಯನ್ನು ಮರುಶೋಧಿಸುತ್ತಿದೆ. 1960ರ ನಂತರದ ಸಾಹಿತ್ಯಿಕ ಚಳವಳಿಗಳ ಹಿನ್ನೆಲೆಯಲ್ಲಿ, ಕನ್ನಡ ಸಾಹಿತ್ಯವು ಪಾಶ್ಚಾತ್ಯ ಸಿದ್ಧಾಂತಗಳ ಪ್ರೇರಣೆಯೊಂದಿಗೆ ದೇಶೀಯ ಸಂವೇದನೆಗಳನ್ನು ಮೈಗೂಡಿಸಿಕೊಂಡು ಬೆಳೆದ ಬಗೆಯನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಸಾಂಪ್ರದಾಯಿಕ ಕಟ್ಟುಪಾಡುಗಳನ್ನು ಮುರಿದು, ಮಹಿಳೆಯರ ಅನುಭವಗಳು, ಸಂಕಟಗಳು ಮತ್ತು ಬೌದ್ಧಿಕ ಸಾಮರ್ಥ್ಯಗಳನ್ನು ಅನಾವರಣಗೊಳಿಸುವಲ್ಲಿ ಲೇಖಕಿಯರು ವಹಿಸಿದ ಪಾತ್ರ ಪ್ರಮುಖವಾದುದು. ನಂಜನಗೂಡು ತಿರುಮಲಾಂಬರಿಂದ ಹಿಡಿದು ಸಮಕಾಲೀನ ಬರಹಗಾರ್ತಿಯರವರೆಗೆ ಸ್ತ್ರೀವಾದಿ ಧೋರಣೆಗಳು ಬದಲಾದ ಕ್ರಮ, ಅನುವಾದ ಸಾಹಿತ್ಯದ ಪ್ರಭಾವ ಹಾಗೂ ಬಹುಮುಖಿ ನೆಲೆಗಳ ಶೋಧನೆಯು ಸ್ತ್ರೀಸಂವೇದನೆಯನ್ನು ಗಟ್ಟಿಗೊಳಿಸಿದೆ. ಪುರುಷಪ್ರಧಾನ ವ್ಯವಸ್ಥೆಯ ವಿರುದ್ಧದ ಪ್ರತಿರೋಧ ಮತ್ತು ಸಮಾನತೆಯ ಆಶಯಗಳು ಆಧುನಿಕೋತ್ತರ ಸ್ತ್ರೀವಾದದ ಜೀವಾಳವಾಗಿವೆ.

Read More »

ವಚನ ಸಾಹಿತ್ಯದಲ್ಲಿ ಉಲ್ಲೇಖಿತ ಕುಶಲಕರ್ಮಿಗಳ ಪಾರಂಪರಿಕ ವೃತ್ತಿಗಳ ಅವಲೋಕನ

ಪಾಟೀಲ ರವಿ ಬಾಬು, ರಾಮು ಹಸನಪ್ಪ ಸಜ್ಜನ

125 to 135

12ನೇ ಶತಮಾನದ ಕನ್ನಡ ವಚನ ಸಾಹಿತ್ಯವು ಭಕ್ತಿ ಚಳವಳಿಯ ಪ್ರಮುಖ ಸಾಹಿತ್ಯ ಶಾಖೆಯಾಗಿದೆ. ಈ ಸಾಹಿತ್ಯವು ಧಾರ್ಮಿಕ–ಆಧ್ಯಾತ್ಮಿಕ ಸಂದೇಶಗಳೊಂದಿಗೆ ಸಮಾಜದ ಆರ್ಥಿಕ, ಸಾಮಾಜಿಕ ಮತ್ತು ವೃತ್ತಿಪರ ವ್ಯವಸ್ಥೆಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ. ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಮತ್ತು ಇತರ ಶರಣರು ತಮ್ಮ ವಚನಗಳಲ್ಲಿ ಸಾಮಾನ್ಯ ಜೀವಿತದೊಂದಿಗೆ ಶ್ರಮ ಮತ್ತು ಕಾಯಕ ತತ್ತ್ವವನ್ನು ಅಳವಡಿಸಿದ್ದಾರೆ.
ಈ ಅಧ್ಯಯನವು ವಚನ ಸಾಹಿತ್ಯದಲ್ಲಿ ಉಲ್ಲೇಖಿತ ಕುಶಲಕರ್ಮಿಗಳು ಪಾರಂಪರಿಕ ವೃತ್ತಿಗಳನ್ನು ಗುರುತಿಸಿ, ಅವುಗಳ ಸಾಮಾಜಿಕ, ಧಾರ್ಮಿಕ ಮತ್ತು ಆರ್ಥಿಕ ಅರ್ಥವನ್ನು ವಿಶ್ಲೇಷಿಸುತ್ತದೆ. ಮುಖ್ಯವಾಗಿ ಮಡಿವಾಳ (ಬಟ್ಟೆ ತೊಳೆಯುವರು), ಚರ್ಮಕಾರ, ಕಮ್ಮಾರ (ಲೋಹಗಾರರು), ಕುಂಬಾರ (ಮಣ್ಣಿನ ಶಿಲ್ಪಗಾರರು), ಮತ್ತು ನೇಕಾರ (ಬಟ್ಟೆ ನೆಯುವವರು) ಮುಂತಾದ ವೃತ್ತಿಗಳನ್ನು ವಚನಗಳಲ್ಲಿ ವಿವರಿಸಲಾಗಿದೆ. ಈ ವೃತ್ತಿಗಳು ಕೇವಲ ಜೀವನೋಪಾಯ ಸಾಧನೆಯಲ್ಲ, ಶ್ರಮದ ಮೂಲಕ ವ್ಯಕ್ತಿಯ ಆತ್ಮಶುದ್ಧಿ, ನೈತಿಕತೆ ಮತ್ತು ಧಾರ್ಮಿಕ ಪಾವಿತ್ರ್ಯವನ್ನು ಪ್ರತಿಬಿಂಬಿಸುತ್ತವೆ.
ವಚನಗಳಲ್ಲಿ ಪ್ರತಿಪಾದಿತ ಕಾಯಕ ತತ್ತ್ವ ಪ್ರಕಾರ, ಯಾವುದೇ ವೃತ್ತಿಯ ಶ್ರಮವು ಕಡಿಮೆ ಅಲ್ಲ; ಶ್ರಮಾಧಾರಿತ ಕೆಲಸವೇ ಕೈಲಾಸವಾಗಿದೆ. ಈ ತತ್ತ್ವವು ಜಾತಿ–ವರ್ಗ ಆಧಾರಿತ ಸಾಮಾಜಿಕ ಅಸಮಾನತೆಯನ್ನು ಪ್ರಶ್ನಿಸುತ್ತಿದ್ದು, ಶ್ರಮ ಮತ್ತು ಉದ್ಯೋಗಕ್ಕೆ ಸಾಮಾಜಿಕ ಗೌರವ ನೀಡುತ್ತದೆ. ವಚನ ಸಾಹಿತ್ಯವು ಶ್ರಮ ಮತ್ತು ಶಿಲ್ಪಕೌಶಲ್ಯವನ್ನು ಆಧ್ಯಾತ್ಮಿಕ ಸಂದೇಶದೊಂದಿಗೆ ಬೆರೆಸಿ, ಕುಶಲಕರ್ಮಿಗಳನ್ನು ಸಮಾಜದ ಶ್ರೇಷ್ಠ ಸದಸ್ಯರಾಗಿ ಚಿತ್ರಿಸುತ್ತದೆ.
ವಚನ ಸಾಹಿತ್ಯದಲ್ಲಿ ಉಲ್ಲೇಖಿತ ಪಾರಂಪರಿಕ ವೃತ್ತಿಗಳ ಅಧ್ಯಯನವು ಮಧ್ಯಯುಗೀನ ಕರ್ನಾಟಕದ ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕ ಸ್ಥಿತಿಗತಿಗಳನ್ನು ಅರಿಯಲು ಮಹತ್ವದ ಮೂಲಾಧಾರವಾಗಿದೆ. ಇದು ಶ್ರಮ, ಧರ್ಮ, ಸಮಾನತೆ ಮತ್ತು ತಾತ್ವಿಕ ಸಂದೇಶಗಳ ನಡುವಿನ ಆಳವಾದ ಸಂಬಂಧವನ್ನು ಗ್ರಹಿಸಲು ಸಹಾಯಕವಾಗಿದೆ.

Read More »

ಕನ್ನಡ ಸಾಹಿತ್ಯದಲ್ಲಿ ಆಧುನಿಕೋತ್ತರ ಕಾಲದ ಸ್ತ್ರೀವಾದಿ ಸಂವೇದನೆ

ಸುಧಾ ಪಾಟೀಲ

136 to 141

ಆಧುನಿಕೋತ್ತರ ಕಾಲಘಟ್ಟದಲ್ಲಿ ಮಹಿಳೆಯರು ತಮ್ಮ ಅಸ್ತಿತ್ವ ಮತ್ತು ಹಕ್ಕುಗಳಿಗಾಗಿ ನಡೆಸುತ್ತಿರುವ ಹೋರಾಟವು ಸಾಹಿತ್ಯದಲ್ಲಿ ಪ್ರಬಲವಾಗಿ ಅಭಿವ್ಯಕ್ತಗೊಂಡಿದೆ. ಪರಂಪರಾಗತವಾಗಿ ಧಾರ್ಮಿಕ ಮತ್ತು ಸಾಮಾಜಿಕ ನೆಲೆಗಳಲ್ಲಿ ಶೋಷಣೆಗೆ ಒಳಗಾದ ಮಹಿಳೆ, ಇಂದು ಶಿಕ್ಷಣ ಮತ್ತು ಸ್ವಾವಲಂಬನೆಯ ಮೂಲಕ ತನ್ನ ಸಂವೇದನೆಗಳನ್ನು ದೃಢವಾಗಿ ಮಂಡಿಸುತ್ತಿದ್ದಾಳೆ. ವಚನ ಸಾಹಿತ್ಯದಿಂದ ಹಿಡಿದು ಸಮಕಾಲೀನ ಬರಹಗಾರ್ತಿಯರಾದ ವೈದೇಹಿ, ಸಾರಾ ಅಬೂಕ್ಕರ್, ಮಾಲತಿ ಪಟ್ಟಣಶೆಟ್ಟಿ ಮುಂತಾದವರ ಕೃತಿಗಳಲ್ಲಿನ ಸ್ತ್ರೀಪರ ದನಿಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಭ್ರೂಣ ಹತ್ಯೆ, ಕೌಟುಂಬಿಕ ದೌರ್ಜನ್ಯ ಮತ್ತು ಅಸಮಾನತೆಯ ವಿರುದ್ಧದ ಆಕ್ರೋಶವು ಸಾಹಿತ್ಯದ ಮೂಲಕ ಹೇಗೆ ಪ್ರತಿಫಲಿಸಿದೆ ಎಂಬುದನ್ನು ಗುರುತಿಸಲಾಗಿದೆ. ಜಾನಪದ ಹಾಗೂ ಶಿಷ್ಟ ಸಾಹಿತ್ಯದ ಹಿನ್ನೆಲೆಯಲ್ಲಿ, ಮಹಿಳೆ ತಾನು ಅಬಲೆಯಲ್ಲ ಸಬಲೆ ಎಂದು ನಿರೂಪಿಸುವ ಬಗೆ ಮತ್ತು ಪುರುಷಪ್ರಧಾನ ವ್ಯವಸ್ಥೆಯ ವಿರುದ್ಧದ ಪ್ರತಿರೋಧದ ನೆಲೆಗಳನ್ನು ಈ ಬರಹವು ಶೋಧಿಸುತ್ತದೆ.

Read More »

ಆಧುನಿಕ ಯುಗದ ಮಹಿಳಾ ವೃತ್ತಿಜೀವನ - ಮಾನಸಿಕ ಆರೋಗ್ಯದ ನೆಲೆ

ಸವಿತಾ ಆರ್. ಸ್ವಾಮಿ

142 to 148

ಭಾರತದ ಪರಂಪರೆಯಲ್ಲಿ ಮಹಿಳೆಗೆ ವಿಶೇಷವಾದ ಮಹತ್ವದ ಸ್ಥಾನವಿದೆ. 21ನೇ ಶತಮಾನದಲ್ಲಿ ಜಾಗತಿಕ ಹಿನ್ನೆಲೆಯಲ್ಲಿ ಮಹಿಳೆಯು ಕೇವಲ ಕುಟುಂಬ ನಿರ್ವಹಣೆಗೆ ಮಾತ್ರ ಸೀಮಿತವಾಗಿಲ್ಲ. ವೃತ್ತಿ ಬದುಕಿನಲ್ಲಿ ಯಶಸ್ಸಿನತ್ತ ತನ್ನ ಹೊಣೆಗಾರಿಕೆಯನ್ನು ಸವಾಲೊಂದಿಗೆ ಎದುರಿಸುತ್ತಿದ್ದಾಳೆ. ಕುಟುಂಬದ ಆರ್ಥಿಕ ಸ್ಥಿತಿಗತಿಗಳನ್ನು ಸುಧಾರಿಸಲು ಆಕೆಯ ಕೊಡುಗೆ ಮಹತ್ವ ಪಡೆದಿದೆ. ಮಹಿಳೆಯು ಕುಟುಂಬದ ಆದಾಯದ ಮುಖ್ಯಸ್ಥಳಾಗಿದ್ದಾಳೆ. ಜಾಗತೀಕರಣದ ನೆಲಗಟ್ಟಿನಲ್ಲಿ ಮಹಿಳೆಯು ಪುರುಷನೊಟ್ಟಿಗೆ ಸಮಾನವಾಗಿ ದುಡಿದು ಆರ್ಥಿಕವಾಗಿ ಸಬಲಳಾಗುತ್ತಿದ್ದಾಳೆ. ಕುಟುಂಬ ಹಾಗೂ ವೃತ್ತಿ ಬದುಕು ಎರಡನ್ನೂ ಸಮಾನವಾಗಿ ನಿರ್ವಹಿಸುವುದು ಆಧುನಿಕ ಮಹಿಳೆಗೆ ಹಲವಾರು ಸವಾಲುಗಳಿಗೆ ಹಾಗೂ ಮಾನಸಿಕ ಆರೋಗ್ಯದ ಏರುಪೇರಿಗೆ ಕಾರಣವಾಗಬಹುದು.
ಒತ್ತಡ ಮತ್ತು ಒತ್ತಡ ನಿರ್ವಹಣೆ
ಆತ್ಮವಿಶ್ವಾಸ ಮತ್ತು ಸ್ವಮೌಲ್ಯ
ಸಂಬಂಧಗಳ ನಿರ್ವಹಣೆ
ವೃತ್ತಿಪರ ಗುರಿಗಳು ಮತ್ತು ಸಾಧನೆ
ಮಾನಸಿಕ ಆರೋಗ್ಯ
ಇಂದಿನ ಡಿಜಿಟಲ್ ಯುಗದಲ್ಲಿ, ವೃತ್ತಿ ಬದುಕಿನ ಸವಾಲುಗಳು ಮತ್ತು ತನ್ನ ಆರೋಗ್ಯದ ಸವಾಲುಗಳಿಂದಾಗಿ, ಡಿಜಿಟಲ್ ಜಗತ್ತಿನಲ್ಲಿ ಕೆಲಸ ಮಾಡುವ ಮಹಿಳೆ ಬಹಳ ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಳೆ. ಇದಕ್ಕೆ ಮನಃಶಾಸ್ತ್ರವು ಸಹಾಯವಾಗುತ್ತಿದೆ. ಡಿಜಿಟಲ್ ಜಗತ್ತಿನಲ್ಲಿ ಆಧುನಿಕ ಮಹಿಳೆಯ ವೃತ್ತಿ ನಿರ್ವಹಣೆಗೆ ಮನಃಶಾಸ್ತ್ರದ ಸಹಾಯ ಅಗತ್ಯವಿದೆ. ಮನಃಶಾಸ್ತ್ರೀಯ ಸಲಹೆ ಮಹಿಳೆಯರು ತಮ್ಮ ವೃತ್ತಿ ಜೀವನದಲ್ಲಿ ಸಾರ್ಥಕತೆ, ಸಮತೋಲನ ಮತ್ತು ಸಂತೋಷವನ್ನು ಸಾಧಿಸಲು ಸಹಾಯ ಮಾಡುತ್ತದೆ. ಮನಃಶಾಸ್ತ್ರೀಯ ತರಬೇತಿ ಮತ್ತು ಮಾರ್ಗದರ್ಶನವು ಮಹಿಳೆಯರಿಗೆ ತಮ್ಮ ಗುರಿಗಳನ್ನು ಸಾಧಿಸಲು ಮತ್ತು ತಮ್ಮ ವೃತ್ತಿ ಜೀವನದಲ್ಲಿ ಉನ್ನತಿಯನ್ನು ಸಾಧಿಸಲು ನೆರವಾಗುತ್ತದೆ. ಸಮಾನಾಂತರವಾಗಿ ಕಾರ್ಯನಿರ್ವಹಿಸಲು, ಸಂಘರ್ಷಗಳನ್ನು ಕಡಿಮೆ ಮಾಡಲು ಮತ್ತು ಪರಿಣಾಮಕಾರಿ ಸಂವಹನವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ತಂಡದ ಸದಸ್ಯರಲ್ಲಿ ಸುಲಭ ಸಂಪರ್ಕವನ್ನು ಒದಗಿಸುತ್ತದೆ. ಕೆಲಸದ ದಾಖಲಾತಿಗಳನ್ನು ಹಂಚಿಕೊಳ್ಳಲು ಮತ್ತು ಸಹಕಾರ ನೀಡಲು ಅನುಕೂಲವಾಗುತ್ತದೆ. ವಿಚಾರ ವಿನಿಮಯಕ್ಕೆ ಮತ್ತು ತ್ವರಿತ ಪ್ರತಿಕ್ರಿಯೆಗಳಿಗೆ ವೇದಿಕೆ ಒದಗಿಸುತ್ತದೆ.

Read More »