Table of Contents
Research Articles
ಬಹುಭಾಷಿಕತೆ ಮತ್ತು ಕನ್ನಡ
01 to 08
ಬಹುಭಾಷಿಕ ಪರಿಸರವು ವೈವಿಧ್ಯಮಯ ಸಾಂಸ್ಕೃತಿಕ ಚಹರೆಗಳ ಸಂಕೇತವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಇಂಗ್ಲಿಷ್‌ನಂತಹ ಪ್ರಬಲ ಭಾಷೆಗಳು ಯಜಮಾನಿಕೆ ಸಾಧಿಸುತ್ತಿದ್ದು, ಕನ್ನಡವೂ ಸೇರಿದಂತೆ ಅನೇಕ ಸ್ಥಳೀಯ ಭಾಷೆಗಳು ಅಸ್ತಿತ್ವದ ಬಿಕ್ಕಟ್ಟನ್ನು ಎದುರಿಸುತ್ತಿವೆ. ಐತಿಹಾಸಿಕವಾಗಿ ಸಂಸ್ಕೃತವು ಶಿಕ್ಷಣದಲ್ಲಿ ಅಧಿಪತ್ಯ ಸಾಧಿಸಿದ್ದಂತೆ, ಪ್ರಸ್ತುತ ಇಂಗ್ಲಿಷ್ ಮಾಧ್ಯಮದ ವ್ಯಾಮೋಹವು ತಳಮಟ್ಟದ ಜನರನ್ನು ಭಾಷಿಕ ಹಾಗೂ ಆರ್ಥಿಕ ಗೊಂದಲಕ್ಕೆ ದೂಡುತ್ತಿದೆ. ಮಾತೃಭಾಷಾ ಶಿಕ್ಷಣದ ನಿರ್ಲಕ್ಷ್ಯದಿಂದಾಗಿ ಮುಂದಿನ ತಲೆಮಾರಿನ ಸಾಂಸ್ಕೃತಿಕ ಬೇರುಗಳು ಸಡಿಲಗೊಳ್ಳುತ್ತಿವೆ. ಪ್ರಾದೇಶಿಕ ಭಾಷೆಗಳ ಸಬಲೀಕರಣಕ್ಕಾಗಿ ಸಮಾಜ, ಶಿಕ್ಷಣ ವ್ಯವಸ್ಥೆ ಮತ್ತು ಸರ್ಕಾರಗಳು ಜಂಟಿಯಾಗಿ ಪೂರಕ ನೀತಿಗಳನ್ನು ರೂಪಿಸಬೇಕಾದ ತುರ್ತು ಅಗತ್ಯವಿದೆ. ಇಲ್ಲವಾದಲ್ಲಿ, ಪ್ರಬಲ ಅನ್ಯಭಾಷೆಯ ಏಕಸ್ವಾಮ್ಯದಿಂದಾಗಿ ಬಹುಭಾಷಿಕತೆಯ ಸಹಜ ಸೌಂದರ್ಯ ಮತ್ತು ದೇಶೀಯ ಸಂಸ್ಕೃತಿಗಳು ನಶಿಸಿಹೋಗುವ ಅಪಾಯವಿದೆ ಎಂಬ ಎಚ್ಚರಿಕೆಯನ್ನು ಇಲ್ಲಿ ನೀಡಲಾಗಿದೆ.
ಜಾತೀಯತೆ ಎಂಬ ಜಾಡ್ಯ: ಒಂದು ಚಿಂತನೆ
09 to 15
‘ಜಾತೀಯತೆ’ ಎಂಬುದು ಸಮಾಜದ ಒಟ್ಟು ವ್ಯವಸ್ಥೆಯೊಳಗೆ ಜಡ್ಡುಗಟ್ಟಿ ನಿಂತಿರುವ ಅತ್ಯಂತ ದೊಡ್ಡ ಕಳಂಕ. ಬುದ್ಧ, ಬಸವ, ಅಂಬೇಡ್ಕರ್ ಮುಂತಾದ ಮಹನೀಯರು ಈ ಜಾತೀಯತೆಯನ್ನು ನಿರ್ಮೂಲನೆಗೊಳಿಸಿ ಮಾನವೀಯತೆಯನ್ನು ನೆಲೆಗೊಳಿಸುವ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸುತ್ತಾ ಬಂದಿದ್ದಾರೆ. ಆದರೂ, ಜಾತಿಪದ್ಧತಿಯ ಮಹಾಭೂತ ನಮ್ಮ ಸಾಮಾಜಿಕ ಪರಿಸರದಿಂದ ಇನ್ನೂ ಸಂಪೂರ್ಣವಾಗಿ ಉಚ್ಛಾಟನೆಗೊಳ್ಳದಿರುವುದು ಶೋಚನೀಯ.
ಈ ಹಿನ್ನೆಲೆಯಲ್ಲಿ ಜಾತೀಯತೆ ಎಂಬ ಅನಿಷ್ಟ ಆಚಾರವನ್ನು ಕುರಿತಂತೆ ವೇದಗಳಲ್ಲಿ ಉಕ್ತವಾಗಿರುವ ಕೆಲವಾರು ಮಹತ್ವದ ಸಂಗತಿಗಳನ್ನು ಆಧಾರವಾಗಿರಿಸಿಕೊಂಡು, ಪ್ರಮುಖವಾಗಿ ಬಸವಣ್ಣನವರ ಚಿಂತನೆಯ ನೆಲೆಯನ್ನು ಪ್ರಧಾನವಾಗಿ ಪರಿಗಣಿಸಿ, ವಸ್ತುನಿಷ್ಠವಾಗಿ ಚರ್ಚಿಸುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ.
ಕೃಷ್ಣಪ್ರಜ್ಞೆಯ ರೂಪಕವಾಗಿ ʼಭಾಂಡೀರ ದರ್ಶನʼ
16 to 22
ಕನ್ನಡದಲ್ಲಿ ಮಹಾಕಾವ್ಯಗಳ ಬಹು ದೊಡ್ಡ ಪರಂಪರೆಯೇ ಇದೆ. ಇದು ಪ್ರಧಾನವಾಗಿ ಶಿಷ್ಟ ಮತ್ತು ಜನಪದ ಎರಡೂ ಧಾರೆಗಳಲ್ಲಿ ಹರಿದು ಬಂದಿದೆ. ಶಿಷ್ಟ ಪರಂಪರೆಯಲ್ಲಿ ಲಿಖಿತವಾಗಿ ಮತ್ತು ಜನಪದ ಪರಂಪರೆಯಲ್ಲಿ ಮೌಖಿಕವಾಗಿ ಅಂದಿನಿಂದ ಇಂದಿನವರೆಗೂ ಅವಿಚ್ಛಿನ್ನವಾಗಿ ಸಾಗಿ ಬರುತ್ತಿದೆ. ಪಂಪನಿಂದ ಷಡಕ್ಷರಿಯವರೆಗೆ, ಮುಂದುವರಿದು ಮುದ್ದಣ್ಣನವರೆಗೆ, ಮತ್ತೂ ಮುಂದುವರಿದು ಕುವೆಂಪು - ಗೋಕಾಕ್ - ಪುತಿನ ಮೊದಲಾದವರವರೆಗೂ ಮಹಾಕಾವ್ಯಗಳ ಹರಹಿದೆ. ಕವಿಯ ಮನೋಧರ್ಮ ಮತ್ತು ಪ್ರತಿಭೆಗಳು ಅವಿನಾಭಾವದಿಂದ ಸೇರಿದರೆ ಕಾಲ-ದೇಶಗಳ ನಿಯತ ನಿಯಮಗಳಾಚೆಗೂ ಮಹಾಕಾವ್ಯಗಳನ್ನು ಸೃಜಿಸಬಲ್ಲವು ಎಂಬುದಕ್ಕೆ ನಮ್ಮ ಆಧುನಿಕ ಕನ್ನಡ ಮಹಾಕಾವ್ಯಗಳು ಅತ್ಯುತ್ತಮ ನಿದರ್ಶನಗಳಾಗಿವೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಲೇಖನ ಪುತಿನರವರ “ಶ್ರೀಹರಿಚರಿತೆ” ಮಹಾಕಾವ್ಯದ ʼಭಾಂಡೀರ ದರ್ಶನʼ ಉಲ್ಲಾಸವನ್ನು ಅಭ್ಯಸಿಸುವ ಪ್ರಯತ್ನ ಮಾಡುತ್ತದೆ.
ಜಿ. ಎಸ್. ಶಿವರುದ್ರಪ್ಪ ಅವರ ಕಾವ್ಯಗಳಲ್ಲಿ ನಾಡು–ನುಡಿಯ ಚಿಂತನೆ
23 to 36
ಆಧುನಿಕ ಕನ್ನಡ ಕಾವ್ಯಪರಂಪರೆಯಲ್ಲಿ ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪ ಅವರು ನವೋದಯದ ಸಾಂಸ್ಕೃತಿಕ ಪ್ರಜ್ಞೆಯನ್ನು ಮುಂದುವರಿಸುತ್ತಲೇ ಸಮಕಾಲೀನ ಬದುಕಿನ ವೈರುಧ್ಯಗಳಿಗೆ ಸ್ಪಂದಿಸಿದ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಕಾವ್ಯದಲ್ಲಿ ನಾಡು ಮತ್ತು ನುಡಿ ಕೇವಲ ಭೌಗೋಳಿಕ ಗಡಿ ಹಾಗೂ ಸಂವಹನದ ಭಾಷೆಯಾಗಿ ಕಾಣಿಸಿಕೊಳ್ಳದೆ, ಕನ್ನಡಿಗರ ಚಾರಿತ್ರಿಕ ಸ್ಮೃತಿ, ಸಾಂಸ್ಕೃತಿಕ ಅಸ್ಮಿತೆ, ಸಾಮಾಜಿಕ ಹೊಣೆಗಾರಿಕೆ ಮತ್ತು ಆತ್ಮಪ್ರತ್ಯಯಗಳ ಸಂಕೇತಗಳಾಗಿ ರೂಪುಗೊಳ್ಳುತ್ತವೆ. ಕನ್ನಡ ನಾಡಿನ ನಿಸರ್ಗ, ನದಿ–ಪರ್ವತಗಳು, ಕಲೆ–ಸಾಹಿತ್ಯ, ಶಿಲ್ಪ–ಸಂಗೀತ, ಗುಡಿ–ಗೋಪುರಗಳ ಮೂಲಕ ನಾಡಿನ ಸಾಂಸ್ಕೃತಿಕ ಭೂಗೋಳವನ್ನು ಕಟ್ಟಿಕೊಡುವ ಜಿ.ಎಸ್.ಎಸ್., ಮತ್ತೊಂದೆಡೆ ಕನ್ನಡಿಗರೊಳಗಿನ ಅನೈಕ್ಯ, ಭಾಷೆಯ ಕುರಿತ ನಿರ್ಲಕ್ಷ್ಯ, ಸ್ವಾಭಿಮಾನದ ಕೊರತೆ ಹಾಗೂ ಪರಭಾಷೆಗಳೆಡೆಗಿನ ಅತಿಯಾದ ಉದಾರತೆಯನ್ನು ವಿಡಂಬನಾತ್ಮಕವಾಗಿ ಪ್ರಶ್ನಿಸುತ್ತಾರೆ.
‘ಶುಭೋದಯ’, ‘ಕನ್ನಡ ರಾಜ್ಯೋದಯ’, ‘ಕನ್ನಡ ಕುಲಬಾಂಧವರ ಸ್ವಾಗತ ಗೀತೆ’, ‘ತೇರನೆಳೆವರು ನಾವು’ ಮೊದಲಾದ ಕವಿತೆಗಳಲ್ಲಿ ಪ್ರಕಟವಾಗಿರುವ ನಾಡು–ನುಡಿಯ ಚಿಂತನೆಗಳನ್ನು ಕೇಂದ್ರವಾಗಿಟ್ಟುಕೊಂಡು ಜಿ.ಎಸ್.ಎಸ್. ಅವರ ಕನ್ನಡಪ್ರಜ್ಞೆಯನ್ನು ವಿಶ್ಲೇಷಿಸುವುದು ಈ ಲೇಖನದ ಮುಖ್ಯ ಉದ್ದೇಶವಾಗಿದೆ. ರಾಜಕೀಯವಾಗಿ ಕರ್ನಾಟಕ ರಾಜ್ಯ ಉದಯವಾದರೂ ಕನ್ನಡಿಗನ ಅಂತರಂಗದಲ್ಲಿ ಕನ್ನಡತನದ ಅರಿವು ಮತ್ತು ಸಾಮೂಹಿಕ ಹೊಣೆಗಾರಿಕೆ ಮೂಡದಿದ್ದರೆ ರಾಜ್ಯೋದಯ ಪೂರ್ಣಗೊಳ್ಳುವುದಿಲ್ಲ ಎಂಬ ಅವರ ನಿಲುವು ವಿಶಿಷ್ಟವಾದುದು. ಈ ಹಿನ್ನೆಲೆಯಲ್ಲಿ ಜಿ.ಎಸ್.ಎಸ್. ಅವರ ನಾಡು–ನುಡಿಯ ಚಿಂತನೆಯು ಭಾವನಾತ್ಮಕ ಕನ್ನಡಾಭಿಮಾನಕ್ಕೆ ಸೀಮಿತವಾಗದೆ, ವಿಮರ್ಶಾತ್ಮಕವಾದ ಸಾಂಸ್ಕೃತಿಕ ಮತ್ತು ಸಾಮಾಜಿಕ ಪ್ರಜ್ಞೆಯಾಗಿ ರೂಪುಗೊಂಡಿರುವುದನ್ನು ಈ ಲೇಖನ ಪರಿಶೀಲಿಸುತ್ತದೆ.
ಭಾಷಾ ವಿಜ್ಞಾನಕ್ಕೆ ಬುನಾದಿ
37 to 45
ಭಾಷೆ ಎಂಬುದು ಮಾನವನ ಮೂಲಭೂತ ಅವಶ್ಯಕತೆಗಳಲ್ಲಿ ಒಂದು. ಅಂತಹ ಭಾಷೆಯ ಬಗೆಗೆ ಮೂಲಭೂತವಾಗಿ ಅಧ್ಯಯನ ಮಾಡುವ ವಿಧಾನಗಳನ್ನು ಕುರಿತು ಎಂ. ಚಿದಾನಂದಮೂರ್ತಿಯವರ ‘ಭಾಷಾ ವಿಜ್ಞಾನದ ಮೂಲತತ್ವಗಳು’ ಸವಿವರವಾಗಿ ವಿವರಿಸುವ ಪ್ರಯತ್ನ ಇಲ್ಲಿ ಗಮನಾರ್ಹ. ಇದು ಕನ್ನಡ ಭಾಷಾ ಚರಿತ್ರೆಯಲ್ಲಿ ಮೊದಲ ಪ್ರಯತ್ನವಾಗಿದೆ. ಭಾಷೆ ಮತ್ತು ಬರಹದ ಕುರಿತ ವಿವರಗಳು ಅಡಕವಾಗಿವೆ. ಧ್ವನಿವ್ಯತ್ಯಾಸ, ಅರ್ಥವ್ಯತ್ಯಾಸ, ಭಾಷಾವರ್ಗೀಕರಣದ ಕುರಿತ ಹಲವಾರು ಸ್ಪಷ್ಟತೆಗಳನ್ನು ಉದಾಹರಣೆಯ ಸಹಿತ ವಿವರಿಸಲಾಗಿದೆ. ‘ಭಾಷಾ ವಿಜ್ಞಾನದ ಮೂಲತತ್ವಗಳು’ ಹೊತ್ತಿಗೆಯೂ ಕನ್ನಡ ಭಾಷಾ ವಿಜ್ಞಾನ ಕ್ಷೇತ್ರದ ಮಹತ್ವವನ್ನು ಸಂಶೋಧನಾ ದೃಷ್ಟಿಯಿಂದ ಅಧ್ಯಯನ ಮಾಡುತ್ತದೆ.
ಕಾತ್ಯಾಯಿನಿ ಕುಂಜಿಬೆಟ್ಟು ಅವರ ‘ನಿದ್ರಾನಗರಿ’ ನಾಟಕದಲ್ಲಿ ಜಾನಪದೀಯ ಮರುರೂಪೀಕರಣ ಮತ್ತು ಸಮಕಾಲೀನ ಪ್ರಸ್ತುತತೆ
46 to 51
ಮಕ್ಕಳ ರಂಗಭೂಮಿಯು ಕಲ್ಪನಾಲೋಕದ ರಂಜನೆಯ ಜೊತೆಗೆ ಮಗುವಿನ ಅರಿವನ್ನು ವಿಸ್ತರಿಸುವ ಹಾಗೂ ಸಾಮಾಜಿಕ ಪ್ರಜ್ಞೆಯನ್ನು ರೂಪಿಸುವ ಪ್ರಭಾವಶಾಲಿ ಮಾಧ್ಯಮವಾಗಿದೆ. ಕನ್ನಡದ ಪ್ರಮುಖ ಲೇಖಕಿ ಮತ್ತು ಶಿಕ್ಷಣ ತಜ್ಞೆ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರ ‘ನಿದ್ರಾನಗರಿ’ ಮಕ್ಕಳ ನಾಟಕವು ಜಾಗತಿಕವಾಗಿ ಪ್ರಸಿದ್ಧವಾದ ‘ಸ್ಲೀಪಿಂಗ್ ಬ್ಯೂಟಿ’ (Sleeping Beauty) ಕಥಾವಸ್ತುವನ್ನು ಆಧರಿಸಿದ್ದರೂ, ಅದನ್ನು ಸ್ಥಳೀಯ ಜಾನಪದ ಪರಿಸರ ಮತ್ತು ಸಮಕಾಲೀನ ಸಂದರ್ಭಕ್ಕೆ ತಕ್ಕಂತೆ ಪುನರ್ ನಿರ್ಮಿಸಿದ ಬಗೆಯನ್ನು ಈ ಲೇಖನವು ವಿಶ್ಲೇಷಿಸುತ್ತದೆ. ‘ನಾಟಕದೊಳಗೆ ನಾಟಕ’ ರಂಗತಂತ್ರದ ಮೂಲಕ ನೈಜ ಮಕ್ಕಳ ಆಟ ತುಂಟಾಟಗಳಿಂದ ಆರಂಭವಾಗುವ ಈ ಕೃತಿಯು, ಕರಾವಳಿ ಕರ್ನಾಟಕದ ಭಾಷಿಕ ಸೊಗಡು, ಕಿನ್ನರಿಯರ ಪರಿಕಲ್ಪನೆ ಮತ್ತು ಯಕ್ಷಗಾನದ ರಂಗತಂತ್ರಗಳನ್ನು ಮೇಳೈಸಿಕೊಂಡಿರುವ ಬಗೆಯನ್ನು ಇಲ್ಲಿ ಚರ್ಚಿಸಲಾಗಿದೆ. ಜೊತೆಗೆ, ಅರಸೊತ್ತಿಗೆಯ ಅವೈಜ್ಞಾನಿಕ ಆಡಳಿತ, ನೇಕಾರರ ಬವಣೆ, ಅಧಿಕಾರಶಾಹಿಯ ಜಡತ್ವ ಹಾಗೂ ಇಂದಿನ ರಾಜಕೀಯ ಪಕ್ಷಾಂತರಗಳಂತಹ ಗಂಭೀರ ಸಾಮಾಜಿಕ ಮತ್ತು ರಾಜಕೀಯ ವಿದ್ಯಮಾನಗಳನ್ನು ಹಾಸ್ಯ ವಿಡಂಬನೆಗಳ ಮೂಲಕ ಕಟ್ಟಿಕೊಟ್ಟಿರುವ ಪರಿ ಗಮನಾರ್ಹ. ಅಂತಿಮವಾಗಿ, ಈ ನಾಟಕವು ಕೇವಲ ಒಂದು ಕಾಲ್ಪನಿಕ ಕಥೆಯಾಗಿ ಉಳಿಯದೆ, ಸಮಾಜದ ಜಡತೆಯನ್ನು ಸೂಚಿಸುವ ‘ನಿದ್ರೆ’ಯಿಂದ ಸಾಮಾಜಿಕ-ತಾತ್ವಿಕ ಅರಿವಿನ ‘ಎಚ್ಚರ’ದೆಡೆಗೆ ಕೊಂಡೊಯ್ಯುವ ಮಹತ್ವದ ರೂಪಕವಾಗಿ ನಿಲ್ಲುತ್ತದೆ ಎಂಬುದನ್ನು ಈ ಲೇಖನವು ಸ್ಥಾಪಿಸುತ್ತದೆ.
ಅಸಮಾನತೆಯ ಕತ್ತಲಲ್ಲಿ ಕ್ರಾಂತಿಯ ಬೆಳಕು: ರೋಸಾ ಬದುಕಿನ ಕನ್ನಡ ರೂಪದ ಪ್ರಸ್ತುತತೆ
52 to 60
ಭಾಷಾಂತರವು ಕನ್ನಡ ಸಾಹಿತ್ಯಕ್ಕೆ ಗಮನಾರ್ಹ ಕೊಡುಗೆಯನ್ನು ನೀಡುತ್ತಾ ಬಂದಿದೆ. ಭಾಷಾಂತರವು ಕೇವಲ ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಪಠ್ಯಗಳನ್ನು ಮಾತ್ರ ಕೊಂಡೊಯ್ಯುವುದಿಲ್ಲ. ಬದಲಾಗಿ, ಒಂದು ಕೃತಿಯ ಭಾವ ಜಗತ್ತನ್ನು ಮತ್ತೊಂದು ಭಾಷೆಗೆ ದಾಟಿಸುತ್ತದೆ. ಈ ಹಿನ್ನೆಲೆಯಲ್ಲಿ, ಎಮ್.ಆರ್. ಕಮಲಾರವರ “ನನ್ನ ಕಥೆ ರೋಸಾ ಪಾರ್ಕ್ಸ್” ಕೃತಿಯ ಅನುವಾದದ ಪ್ರಸ್ತುತತೆಯನ್ನು ಸ್ತ್ರೀ ಪ್ರತಿನಿಧೀಕರಣದ ದೃಷ್ಟಿಕೋನದಲ್ಲಿ ಗಮನಿಸುವುದು ಈ ಲೇಖನದ ಪ್ರಮುಖ ಉದ್ದೇಶವಾಗಿದೆ. ಜೊತೆಗೆ, ಆಫ್ರಿಕನ್ ಅಮೇರಿಕನ್ನರ ಮಹಿಳಾ ಸಂವೇದನೆಯನ್ನು ಪರಿಚಯ ಮಾಡಿಕೊಳ್ಳುವ ಉದ್ದೇಶವನ್ನೂ ಕೂಡ ಈ ಲೇಖನ ಹೊಂದಿದೆ.
ಗಿರೀಶ್ ಕಾರ್ನಾಡರ ನಾಗಮಂಡಲ ನಾಟಕದಲ್ಲಿ ಸ್ತ್ರೀ ಸಂವೇದನೆ
61 to 65
ಕನ್ನಡದ ಪ್ರಮುಖ ನಾಟಕಕಾರರಾದ ಗಿರೀಶ್ ಕಾರ್ನಾಡರು ಭಾರತೀಯ ಪುರಾಣ, ಜನಪದ ಕಥೆ, ಐತಿಹ್ಯ ಮತ್ತು ಸಮಕಾಲೀನ ಸಾಮಾಜಿಕ ವಾಸ್ತವಗಳನ್ನು ತಮ್ಮ ನಾಟಕಗಳಲ್ಲಿ ಸೃಜನಾತ್ಮಕವಾಗಿ ಬಳಸಿಕೊಂಡಿದ್ದಾರೆ. ಅವರ ಪ್ರಮುಖ ನಾಟಕಗಳಲ್ಲಿ ‘ನಾಗಮಂಡಲ’ವೂ ಒಂದು. ಜನಪದ ಕಥೆಯನ್ನು ಆಧಾರವಾಗಿಸಿಕೊಂಡಿರುವ ಈ ನಾಟಕವನ್ನು ದಾಂಪತ್ಯ, ಹೆಣ್ಣಿನ ಅಸ್ತಿತ್ವ, ಪುರುಷ ಪ್ರಧಾನ ಸಮಾಜ, ಪ್ರೀತಿ, ಕಾಮ, ನಂಬಿಕೆ ಮತ್ತು ಸಾಮಾಜಿಕ ನೀತಿನಿಯಮಗಳ ಕುರಿತು ಸಂಶೋಧನಾ ದೃಷ್ಟಿಯಿಂದ ಈ ಲೇಖನ ಅಧ್ಯಯನ ಮಾಡುತ್ತದೆ.
ಚಾರುವಸಂತ: ಕಾವ್ಯದಿಂದ ರಂಗಭೂಮಿಯತ್ತ ಒಂದು ಸಾಂಸ್ಕೃತಿಕ ಪಯಣ
66 to 75
ರಂಗಭೂಮಿಯು ಕೇವಲ ಮನೋರಂಜನೆಯ ಮಾಧ್ಯಮವಾಗಿರದೆ, ಮಾನವನ ಬದುಕು, ಸಂಸ್ಕೃತಿ ಹಾಗೂ ಸಾಮಾಜಿಕ ಮೌಲ್ಯಗಳನ್ನು ಸಮಾಜಕ್ಕೆ ಪ್ರತಿಬಿಂಬಿಸುವ ಜೀವಂತ ನಿಲುವುಗನ್ನಡಿಯಾಗಿದೆ. ಸಾಹಿತ್ಯ, ಅಭಿನಯ, ಸಂಗೀತ, ನೃತ್ಯ ಹಾಗೂ ತಾಂತ್ರಿಕ ಕಲೆಗಳ ಸಮ್ಮಿಲನದಿಂದ ಮೂಡಿಬರುವ ರಂಗಪ್ರಯೋಗಗಳು ಜನಮನದಲ್ಲಿ ಆಳವಾದ ಪ್ರಭಾವವನ್ನು ಬೀರುತ್ತವೆ. ಲಿಖಿತ ಸಾಹಿತ್ಯ ಕೃತಿಯೊಂದು ರಂಗಪಠ್ಯವಾಗಿ ಬದಲಾಗಿ, ನಿರ್ದೇಶಕ ಹಾಗೂ ಕಲಾವಿದರ ಶ್ರಮದಿಂದ ವೇದಿಕೆಯ ಮೇಲೆ ಜೀವ ತಳೆಯುವುದು ಒಂದು ಅದ್ಭುತ ಕಲಾತ್ಮಕ ಪಯಣ. ಈ ಹಿನ್ನೆಲೆಯಲ್ಲಿ, ನಾಡೋಜ ಡಾ. ಹಂಪಾ ನಾಗರಾಜಯ್ಯನವರು ರಚಿಸಿದ ‘ಚಾರುವಸಂತ’ ಎಂಬ ದೇಸಿ ಮಹಾಕಾವ್ಯವನ್ನು ಡಾ. ನಾ. ದಾಮೋದರ ಶೆಟ್ಟಿಯವರ ರಂಗರೂಪಾಂತರದಲ್ಲಿ ಮತ್ತು ಡಾ. ಜೀವನ್ ರಾಂ ಸುಳ್ಯ ಅವರ ನಿರ್ದೇಶನದಲ್ಲಿ ರಂಗದ ಮೇಲೆ ತಂದಿರುವುದರ ಸಾಂಸ್ಕೃತಿಕ ಮೌಲ್ಯಗಳ ಮಹತ್ವವನ್ನು ಈ ಲೇಖನ ಸಂಶೋಧನಾ ದೃಷ್ಟಿಯಿಂದ ಅಧ್ಯಯನಕ್ಕೆ ಒಳಪಡಿಸಿದೆ.
ವೈದ್ಯ ಸಂಗಣ್ಣನವರ ವಚನಗಳಲ್ಲಿ ದೇಹ ಮತ್ತು ಆತ್ಮ ಮೀಮಾಂಸೆಯ ಒಳನೋಟಗಳು
76 to 87
ವೈದ್ಯಸಂಗಣ್ಣನವರ ವಚನಗಳಲ್ಲಿ ವ್ಯಕ್ತವಾಗಿರುವ ದೇಹ ಮತ್ತು ಆತ್ಮದ ಪರಿಕಲ್ಪನೆಗಳನ್ನು ವೈದ್ಯಕೀಯ ಹಾಗೂ ತಾತ್ತ್ವಿಕ ನೆಲೆಗಳಲ್ಲಿ ವಿಶ್ಲೇಷಿಸುವುದು ಈ ಲೇಖನದ ಮುಖ್ಯ ಉದ್ದೇಶವಾಗಿದೆ. ಲಭ್ಯವಿರುವ ವೈದ್ಯಸಂಗಣ್ಣನವರ ವಚನಗಳನ್ನು ಆಧಾರವಾಗಿಸಿಕೊಂಡು, ಅವುಗಳಲ್ಲಿ ಬಳಕೆಯಾಗಿರುವ ವೈದ್ಯಕೀಯ ಪರಿಭಾಷೆ, ದೇಹದ ಸ್ವರೂಪ, ಆತ್ಮದ ಪರಿಕಲ್ಪನೆ ಹಾಗೂ ಇವೆರಡರ ಸಂಬಂಧವನ್ನು ಪಠ್ಯವಿಶ್ಲೇಷಣೆಯ ಮೂಲಕ ಪರಿಶೀಲಿಸಲಾಗಿದೆ. ಪಂಚತತ್ತ್ವ, ತ್ರಿದೋಷ, ನಾಡಿ, ಪ್ರಾಣ, ಇಂದ್ರಿಯ, ವ್ಯಾಧಿ ಮತ್ತು ಚಿಕಿತ್ಸೆಗೆ ಸಂಬಂಧಿಸಿದ ವೈದ್ಯಕೀಯ ಪರಿಕಲ್ಪನೆಗಳು ಅವರ ದೇಹಚಿಂತನೆಯ ಪ್ರಮುಖ ಅಂಶಗಳಾಗಿವೆ. ದೇಹವು ಪಂಚತತ್ತ್ವಗಳಿಂದ ನಿರ್ಮಿತವಾದ ನಶ್ವರ ಅಸ್ತಿತ್ವವಾದರೂ, ಆತ್ಮಸಾಧನೆಗೆ ಅಗತ್ಯವಾದ ಸಾಧನವೆಂಬ ದೃಷ್ಟಿ ಅವರ ವಚನಗಳಲ್ಲಿ ವ್ಯಕ್ತವಾಗುತ್ತದೆ. ದೇಹದ ವ್ಯಾಧಿಯ ಜೊತೆಗೆ ಅಜ್ಞಾನ, ಮಾಯೆ ಮತ್ತು ಕರ್ಮಬಂಧನಗಳನ್ನು ಆತ್ಮದ ‘ರೋಗ’ ಎಂಬ ರೂಪಕದ ಮೂಲಕ ಅವರು ನಿರೂಪಿಸುತ್ತಾರೆ. ವೈದ್ಯಕೀಯ ಚಿಕಿತ್ಸೆಯ ಪರಿಭಾಷೆಯನ್ನು ಅಂತರಂಗದ ಶುದ್ಧೀಕರಣ ಮತ್ತು ಆತ್ಮಜ್ಞಾನದ ಸಾಧನೆಗೆ ರೂಪಕವಾಗಿ ಬಳಸಿರುವುದು ಅವರ ವಚನಗಳ ವಿಶಿಷ್ಟ ಲಕ್ಷಣವಾಗಿದೆ. ಭಕ್ತಿ, ವಿಶ್ವಾಸ, ಜ್ಞಾನ ಹಾಗೂ ಗುರು–ಲಿಂಗ–ಜಂಗಮ ತತ್ತ್ವಗಳು ಆತ್ಮಸಾಧನೆಯ ಪ್ರಮುಖ ಮಾರ್ಗಗಳಾಗಿ ಪ್ರತಿಪಾದಿತವಾಗಿವೆ. ಈ ಮೂಲಕ ದೇಹ, ಮನಸ್ಸು ಮತ್ತು ಆತ್ಮಗಳನ್ನು ಪರಸ್ಪರ ಸಂಬಂಧಿತ ಅಸ್ತಿತ್ವಗಳಾಗಿ ನೋಡುವ ಸಮಗ್ರ ಮಾನವದರ್ಶನ ಅವರ ವಚನಗಳಲ್ಲಿ ರೂಪುಗೊಂಡಿರುವುದು ಕಂಡುಬರುತ್ತದೆ. ವೈದ್ಯಕೀಯ ಜ್ಞಾನವನ್ನು ತಾತ್ತ್ವಿಕ ಚಿಂತನೆಯ ಅಭಿವ್ಯಕ್ತಿಯನ್ನಾಗಿ ಪರಿವರ್ತಿಸಿರುವ ವೈದ್ಯಸಂಗಣ್ಣನವರ ವೈಶಿಷ್ಟ್ಯವನ್ನು ಈ ಅಧ್ಯಯನ ಗುರುತಿಸುತ್ತದೆ. ಹೀಗಾಗಿ ಅವರ ವಚನಗಳು ಮಧ್ಯಕಾಲೀನ ಕರ್ನಾಟಕದ ವೈದ್ಯಕೀಯ ಜ್ಞಾನಪರಂಪರೆ ಮತ್ತು ಶರಣರ ಆತ್ಮಾನುಭವ ಪರಂಪರೆಗಳ ನಡುವಿನ ವಿಶಿಷ್ಟ ಸಂಬಂಧವನ್ನು ಪರಿಚಯಿಸುವ ಮಹತ್ವದ ಆಕರಗಳಾಗಿವೆ.
ರಾಮನಗರ ಜಿಲ್ಲೆಯ ಕಥೆಗಾರರ ಕಥೆಗಳಲ್ಲಿ ಪ್ರಾದೇಶಿಕತೆಯ ಸ್ಪರ್ಶ
88 to 95
ಕನ್ನಡ ಸಾಹಿತ್ಯದಲ್ಲಿ ಅತಿ ಹೆಚ್ಚು ಜನಮನ್ನಣೆಯನ್ನು ಪಡೆದ ಸಾಹಿತ್ಯ ಪ್ರಕಾರವೆಂದರೆ ಗದ್ಯಸಾಹಿತ್ಯ. ಸರಳವಾದ ಭಾಷೆ, ಸಹಜವಾದ ನಿರೂಪಣಾ ಶೈಲಿ ಹಾಗೂ ಬದುಕಿನ ನೈಜ ಅನುಭವಗಳನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಿಸುವ ಸಾಮರ್ಥ್ಯದಿಂದಾಗಿ ಗದ್ಯಸಾಹಿತ್ಯ ಓದುಗರನ್ನು ಹೆಚ್ಚು ಆಕರ್ಷಿಸಿದೆ. ವಿಶೇಷವಾಗಿ ಕಥೆ, ಕಾದಂಬರಿ, ಪ್ರಬಂಧ, ಆತ್ಮಕಥೆ, ಮೊದಲಾದ ಗದ್ಯ ಪ್ರಕಾರಗಳು ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಿವೆ. ಈ ರೀತಿಯಾಗಿ ಓದುಗರನ್ನು ಆಕರ್ಷಿಸಿದ ಗದ್ಯ ಸಾಹಿತ್ಯದ ಪ್ರಮುಖ ಪ್ರಕಾರಗಳಲ್ಲಿ ಸಣ್ಣ ಕಥೆಯೂ ಒಂದಾಗಿದೆ. ಪಾಶ್ಚಾತ್ಯ ಸಾಹಿತ್ಯದ ಪ್ರಭಾವ ಮತ್ತು ಪ್ರೇರಣೆಯಿಂದ ಕನ್ನಡದಲ್ಲಿ ರೂಪುಗೊಂಡ ಸಣ್ಣ ಕಥೆ ತನ್ನ ಮೂಲ ದೇಶೀಯತೆಯನ್ನು ಉಳಿಸಿಕೊಂಡು, ಕಾಲಘಟ್ಟದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಜೀವನಾನುಭವಗಳಿಗೆ ಸ್ಪಂದಿಸುತ್ತಾ ಬೆಳವಣಿಗೆಯನ್ನು ಕಂಡಿದೆ.
ಕೆ.ಎಸ್. ನಿಸಾರ್ ಅಹಮದ್ ಅವರ ಕಾವ್ಯದಲ್ಲಿ ಪರಕೀಯ ಪ್ರಜ್ಞೆ
96 to 100
ಹೊಸಗನ್ನಡ ಸಾಹಿತ್ಯ ಸಂದರ್ಭದಲ್ಲಿ ಪಾಶ್ಚಾತ್ಯ ಸಾಹಿತ್ಯದ ಪ್ರಭಾವದಿಂದ ಕಾವ್ಯ, ಸಣ್ಣಕಥೆ, ಕಾದಂಬರಿ, ಪ್ರಬಂಧ, ವಿಮರ್ಶೆ, ಮಕ್ಕಳ ಸಾಹಿತ್ಯ, ಅನುವಾದ ಮುಂತಾದ ಪ್ರಕಾರಗಳ ಮೂಲಕ ಕನ್ನಡ ಸಾಹಿತ್ಯ ಭರದಿಂದ ಹೊರಹೊಮ್ಮಲು ಆರಂಭವಾಯಿತು. ಈ ಹೊಸಗನ್ನಡ ಸಾಹಿತ್ಯದ ಸಂದರ್ಭದಲ್ಲಿ ಕಾವ್ಯ ಪ್ರಕಾರವು ಸಹೃದಯರನ್ನು ತನ್ನತ್ತ ಸೆಳೆಯಿತು. ನಾಡು-ನುಡಿ, ದೇಶಪ್ರೇಮ, ಸ್ವಾತಂತ್ರ್ಯ, ಸಮಾನತೆ, ನಿಸರ್ಗವರ್ಣನೆ, ಪ್ರೀತಿ-ಪ್ರೇಮ, ವಾಸ್ತವತೆ, ಸೌಹಾರ್ದತೆ ಹೀಗೆ ಅನೇಕ ಧೋರಣೆಯಿಂದ ತನ್ನ ಛಾಪನ್ನು ಮೂಡಿಸಿತು. ಸಮಕಾಲೀನ ಸಂವೇದನೆಗಳೊಂದಿಗೆ ಲೇಖಕರು ತನ್ನ ಪ್ರಖರವಾದ ಬರವಣಿಗೆಯ ಶಕ್ತಿಯೊಂದಿಗೆ ಸ್ಪಂದಿಸುವ ಮೂಲಕ ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಶಿಖರಕ್ಕೇರಿಸಿದರು. ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವಲ್ಲಿ ಕವಿಗಳ ಸೇವೆ ಅವಿಸ್ಮರಣೀಯ. ಅಂತಹ ಕನ್ನಡಾಂಬೆಯ ಮಕ್ಕಳಾದ ಕನ್ನಡದ ಕಣ್ವ ಬಿ.ಎಂ. ಶ್ರೀ, ವರಕವಿ ಬೇಂದ್ರೆ, ನವ್ಯಕವಿ ಗೋಪಾಲಕೃಷ್ಣ ಅಡಿಗ, ಕೆ.ಎಸ್. ನರಸಿಂಹಸ್ವಾಮಿ ಮುಂತಾದ ಪ್ರಮುಖರಲ್ಲಿ ಕೆ.ಎಸ್. ನಿಸಾರ್ ಅಹಮದ್ ಅವರು ಸಹ ಒಬ್ಬರಾಗಿದ್ದಾರೆ. ಇವರ ಕಾವ್ಯಗಳಲ್ಲಿ ಪ್ರಕೃತಿ ವರ್ಣನೆ, ಭಾವಗೀತೆಯ ಸ್ವರೂಪ, ಸಾಮಾಜಿಕ ಮತ್ತು ರಾಜಕೀಯ ವಿಡಂಬನೆ, ಕೋಮುವಾದ, ಸೌಹಾರ್ದ, ಸಾಂಸ್ಕೃತಿಕ ಸಂಕಷ್ಟಗಳು, ಪರಕೀಯಪ್ರಜ್ಞೆ ಹೀಗೆ ವಿಭಿನ್ನ ಬಗೆಯ ಚಿಂತನೆಗಳನ್ನು ಇವರ ಕಾವ್ಯಗಳಲ್ಲಿ ಕಾಣಬಹುದು.
ಸಮಾಜದ ಸಂವೇದನೆಯ ಧ್ವನಿಯಾಗಿ ಪೋಸ್ಟ್ ಬಾಕ್ಸ್ ನಂ-9 ನಾಟಕ
101 to 107
ನಮ್ಮ ನಡುವಿರುವ ಸೂಕ್ಷ್ಮ ಸಂವೇದನಾಶೀಲ ಬರಹಗಾರರಲ್ಲಿ ‘ಲಕ್ಷ್ಮಿಪತಿ ಕೋಲಾರ’ ಅವರೂ ಸಹ ಒಬ್ಬರಾಗಿದ್ದಾರೆ. ಅವರು ಬರೆದ ಈ ಪೋಸ್ಟ್ ಬಾಕ್ಸ್ ನಂಬರ್-9 ನಾಟಕವು, ತಮ್ಮ ನೆಲದಲ್ಲಿದ್ದು ಅನ್ಯರಂತೆ ಪರಕೀಯ ಪ್ರಜ್ಞೆಯಿಂದ ಜೀವಿಸುತ್ತಿರುವ ಒಂದು ಜನಾಂಗದ ಚಿತ್ರಣವನ್ನು ಅನಾವರಣಗೊಳಿಸುತ್ತದೆ. ಜಗತ್ತಿನ ಪ್ರಮುಖ ಧರ್ಮಗಳ ಉಗಮಕ್ಕೆ ಕಾರಣವಾದ ಮಧ್ಯಪ್ರಾಚ್ಯವು ಶಾಂತಿ, ಸೌಹಾರ್ದತೆಯ ನೆಲೆಯಾಗಿರದೆ, ಸದಾ ಸಂಘರ್ಷದ ಜೀವಂತ ಗೂಡಾಗಿದೆ. ಈ ನಾಟಕದಲ್ಲಿ ಅತಿಯಾದ ಜನಾಂಗೀಯ ಧೋರಣೆಯಿಂದ ನಡೆಯುತ್ತಿರುವ ದಬ್ಬಾಳಿಕೆ, ದೌರ್ಜನ್ಯ ಹಾಗೂ ಅಲ್ಲಿನ ಜನರ ನೋವುಗಳನ್ನು ಲೇಖಕರು ರೂಪಕಗಳನ್ನು ಬಳಸಿಕೊಂಡು ವಿಭಿನ್ನ ನಿರೂಪಣಾ ಶೈಲಿಯ ಮೂಲಕ ಕಟ್ಟಿಕೊಟ್ಟಿದ್ದಾರೆ. ಈ ನಾಟಕದಲ್ಲಿ ಬರುವ ‘ಕೈಫಾ ಆಫೀಫೀ’ ಎಂಬ ಹೆಣ್ಣು ಮಗಳು ದೌರ್ಜನ್ಯಕ್ಕೊಳಗಾದ ಅವರ ಇಡೀ ಜನಾಂಗದ ಪ್ರತಿನಿಧಿಯಂತೆ ಇಲ್ಲಿ ನಮಗೆ ಕಾಣುತ್ತಾಳೆ.
‘ಶೇಕ್‌ಸ್ಪಿಯರ್ ಮನೆಗೆ ಬಂದ’ ನಾಟಕ ವಿಹಾರ
108 to 115
ಕನ್ನಡ ರಂಗಭೂಮಿ ಹೊಸ ಪ್ರಯೋಗಗಳಿಗೆ ಬೆನ್ನೆಲುಬಾದ ಕ್ಷೇತ್ರ. ಹಲವು ಬರಹಗಾರರು ವಿವಿಧ ರೀತಿಯಲ್ಲಿ ತಮ್ಮ ಜ್ಞಾನದ ಪರಿಕರಗಳನ್ನು ರಂಗ ಪ್ರವೇಶಕ್ಕೆ ಎದುರು ಮಾಡಿ ಯಶಸ್ವಿಯಾಗಿದ್ದಾರೆ. ನಟರಾಜ್ ಹುಳಿಯಾರ್ ಅದೇ ಮಾರ್ಗ ಹಿಡಿದ ಮತ್ತೊಬ್ಬ ಪ್ರಯೋಗಿ. ತಮ್ಮ ‘ಶೇಕ್‌ಸ್ಪಿಯರ್ ಮನೆಗೆ ಬಂದ’ ನಾಟಕವು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಒಂದು ಹೊಸ ಚಿಂತನೆ ಎಂಬುದು ವಿದ್ವಾಂಸರ ಅಭಿಪ್ರಾಯ. ಪಠ್ಯಕೇಂದ್ರಿತ ವಿಮರ್ಶೆಯಿಂದ ಗುರುತಿಸಿಕೊಂಡಿರುವ ಲೇಖಕರು ಶೇಕ್‌ಸ್ಪಿಯರ್‌ನ ಸಮಗ್ರ ಬದುಕಿನ ಚಿತ್ರಣವನ್ನು ನಿಗದಿತ ಅವಧಿಯೊಳಗೆ ಮುಗಿಸಬಹುದಾದ ನಾಟಕದ ಮೂಲಕ ಪರೀಕ್ಷೆಗೆ ಒಳಪಡಿಸಿರುವುದು ಸಾಹಸವೆಂದು ಪರಿಗಣಿಸಬಹುದು.