Table of Contents
Research Articles
ಕನ್ನಡ ಸಾಹಿತ್ಯ ಲೋಕಕ್ಕೆ ಬನ್ನಂಜೆಯವರ ಕೊಡುಗೆ
01 to 04
ಪದ್ಮಶ್ರೀ ಬನ್ನಂಜೆ ಗೋವಿಂದಾಚಾರ್ಯರು ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ಅಗಾಧ ಪಾಂಡಿತ್ಯವನ್ನು ಹೊಂದಿದ್ದು, ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಸೃಜನಶೀಲ ಸಾಹಿತ್ಯ, ಅನುವಾದ, ನಾಟಕ, ಕವಿತೆ ಹಾಗೂ ವಿಮರ್ಶೆಯ ಮೂಲಕ ಅವರು ಕನ್ನಡದ ಘನತೆಯನ್ನು ಹೆಚ್ಚಿಸಿದ್ದಾರೆ. ಕಾಳಿದಾಸ, ಶೂದ್ರಕ, ಭವಭೂತಿ ಮುಂತಾದವರ ಸಂಸ್ಕೃತ ಕೃತಿಗಳನ್ನು ಕನ್ನಡಕ್ಕೆ ಅತ್ಯದ್ಭುತವಾಗಿ ರೂಪಾಂತರಿಸಿದ ಅವರ ಕೌಶಲ್ಯ ಅನನ್ಯವಾದುದು. ‘ಬನ್ನಂಜೆ ಬರೆಹಗಳು’ ಸಂಪುಟಗಳಲ್ಲಿ ಅವರ ವೈವಿಧ್ಯಮಯ ಚಿಂತನೆಗಳು, ಸಂಶೋಧನೆ ಮತ್ತು ವಿಶಿಷ್ಟ ದರ್ಶನಗಳು ಅಡಕವಾಗಿವೆ. ಸಾಹಿತ್ಯ ಕೃಷಿ ಮಾತ್ರವಲ್ಲದೆ, ಪತ್ರಿಕೋದ್ಯಮ ಹಾಗೂ ಚಲನಚಿತ್ರ ಕ್ಷೇತ್ರಕ್ಕೂ (ಕಥೆ, ಚಿತ್ರಕಥೆ, ಸಂಭಾಷಣೆ) ಅವರು ಗಮನಾರ್ಹ ಸೇವೆ ಸಲ್ಲಿಸಿದ್ದಾರೆ. ಯಾವುದೇ ಅನ್ಯ ಆಕರಗಳ ಹಂಗಿಲ್ಲದೆ, ಕೇವಲ ತಮ್ಮ ಅದ್ಭುತ ಸ್ಮರಣಶಕ್ತಿ ಮತ್ತು ವಿಷಯಜ್ಞಾನದಿಂದಲೇ ಆಳವಾದ ಒಳನೋಟಗಳನ್ನು ನೀಡಿದ ‘ವಿದ್ಯಾವಾಚಸ್ಪತಿ’ ಬನ್ನಂಜೆಯವರ ಬಹುಮುಖಿ ಸಾಧನೆ ಹಾಗೂ ಅವರ ಅಪೂರ್ವ ಸಾಹಿತ್ಯಿಕ ಮೌಲ್ಯಗಳನ್ನು ಇಲ್ಲಿ ಕಟ್ಟಿಕೊಡಲಾಗಿದೆ.
ಅನಾಥಾಶ್ರಮಗಳಲ್ಲಿನ ಮಕ್ಕಳ ಶೈಕ್ಷಣಿಕ ಸಮಸ್ಯೆಗಳನ್ನು ಕುರಿತು ಒಂದು ಸಮಾಜಶಾಸ್ತ್ರೀಯ ಅಧ್ಯಯನ: ಬೆಂಗಳೂರು ನಗರ ಜಿಲ್ಲೆಯನ್ನು ಅನುಲಕ್ಷಿಸಿ
05 to 10
ಪ್ರಸ್ತುತ ಅಧ್ಯಯನವು ಬೆಂಗಳೂರು ನಗರದಲ್ಲಿನ ಅನಾಥಾಶ್ರಮಗಳಲ್ಲಿನ ಮಕ್ಕಳ ಶೈಕ್ಷಣಿಕ ಸಮಸ್ಯೆಗಳನ್ನು ಗುರುತಿಸುವ ಉದ್ದೇಶದಿಂದ ಕೈಗೊಳ್ಳಲಾಗಿದೆ. ಬೆಳೆಯುತ್ತಿರುವ ಆಧುನಿಕತೆಯ ಸಾಮಾಜಿಕ ಪ್ರಕ್ರಿಯೆಯಲ್ಲಿ ಶಿಕ್ಷಣದ ಮಹತ್ವ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದು, ಇಂತಹ ಶಿಕ್ಷಣವು ಪ್ರತಿಯೊಬ್ಬರಿಗೂ ಕೂಡ ಸಲ್ಲಬೇಕಾಗಿದೆ. ಅಂತಹ ಪ್ರಶ್ನೆಯನ್ನು ಕಂಡುಕೊಂಡು ಅಧ್ಯಯನವನ್ನು ಮಾಡಲಾಗಿದೆ. ಅನಾಥಾಶ್ರಮಗಳಲ್ಲಿನ ಮಕ್ಕಳು ಶೈಕ್ಷಣಿಕವಾಗಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವುದು ಸಂಶೋಧನೆಯಿಂದ ಸ್ಪಷ್ಟವಾಗಿ ಕಂಡುಬಂದಿದೆ. ಬೆಂಗಳೂರಿನಲ್ಲಿ ಕಂಡುಬರುವ ಪ್ರತಿಯೊಂದು ಅನಾಥಾಶ್ರಮಗಳು ತನ್ನದೇ ಆದ ಸಮಸ್ಯೆಗಳಾದ ಆಹಾರದ ಸಮಸ್ಯೆ, ಉಡುಪಿನ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆಗಳು ಇತ್ಯಾದಿ ಸಮಸ್ಯೆಗಳಿಂದ ಬಳಲುತ್ತಿರುವುದು ಸಹಜವಾಗಿದೆ. ಆದರೆ ಬೆಂಗಳೂರಿನ ಅನಾಥಾಶ್ರಮಗಳಲ್ಲಿ ಜೀವಿಸುತ್ತಿರುವ ಮಕ್ಕಳು ಶೈಕ್ಷಣಿಕ ಸಮಸ್ಯೆಗಳನ್ನು ಎದುರಿಸುತ್ತಿರುವುದು ಒಂದು ರೀತಿಯ ವಿಪರ್ಯಾಸವಾಗಿದೆ ಎಂದರೆ ತಪ್ಪಾಗಲಾರದು. ಹಾಗಾಗಿ ಈ ಲೇಖನವು ಅನಾಥಾಶ್ರಮಗಳಲ್ಲಿ ಜೀವಿಸುತ್ತಿರುವ ಮಕ್ಕಳ ಶೈಕ್ಷಣಿಕ ಸಮಸ್ಯೆಗಳ ಕುರಿತಾದ ಶಿಫಾರಸುಗಳನ್ನು ಒಳಗೊಂಡಿದೆ.
‘ಮೈ-ಮನʼ: ಅಸ್ತಿತ್ವದ ಶೋಧ ಹಾಗೂ ಸಾಮಾಜಿಕ ಪ್ರತಿರೋಧ
11 to 20
ಪ್ರಸ್ತುತ ಸಂಶೋಧನಾ ಲೇಖನವು ಲಕ್ಷ್ಮಣ್ (ಮಾಳವಿಕಾ) ಕನಕುಂಟ್ಲಾ ಅವರ ‘ಮೈ-ಮನʼ ಕವನ ಸಂಕಲನವನ್ನು ಆಕರವಾಗಿರಿಸಿಕೊಂಡು, ತೃತೀಯ ಲಿಂಗಿ ಸಮುದಾಯದ ಅಸ್ಮಿತೆ, ಸಾಮಾಜಿಕ ಬಹಿಷ್ಕಾರ ಮತ್ತು ವ್ಯವಸ್ಥಿತ ಸಂಘರ್ಷಗಳನ್ನು ವಿಶ್ಲೇಷಿಸುತ್ತದೆ. ಪ್ರಸ್ತುತ ಕವನ ಸಂಕಲನವು ಹೇಗೆ ವೈಯಕ್ತಿಕ ನೋವನ್ನು ಸಾಮುದಾಯಿಕ ಪ್ರತಿರೋಧವನ್ನಾಗಿ ಪರಿವರ್ತಿಸುತ್ತದೆ ಮತ್ತು ಕನ್ನಡ ಸಾಹಿತ್ಯಿಕ ಸಂದರ್ಭದಲ್ಲಿ ಈ ಕೃತಿಯ ಮಹತ್ವವೇನು ಎಂಬುದನ್ನು ಈ ಲೇಖನದಲ್ಲಿ ವಿಶ್ಲೇಷಿಸಲು ಪ್ರಯತ್ನಿಸಲಾಗಿದೆ. ಇಲ್ಲಿನ ಕವಿತೆಗಳು ಲಿಂಗತ್ವದ ಸಂಕೋಲೆಗಳ ನಡುವೆ ಸಿಲುಕಿದ ಜೀವಗಳ ಅಂತರಾಳದ ತುಡಿತವನ್ನು ಅಭಿವ್ಯಕ್ತಿಸುತ್ತವೆ. ಜೊತೆಜೊತೆಗೇ ಅಂಚಿನ ಅಸ್ಮಿತೆಗಳಿಗೆ ಘನತೆಯ ಬದುಕು ಸಿಗಬೇಕಾದ ಅನಿವಾರ್ಯತೆಯನ್ನು ಸಾರಿ ಹೇಳುತ್ತದೆ. ಸಮಾಜವು ನಿರ್ಮಿಸಿರುವ ತಾರತಮ್ಯದ ಬೇಲಿಗಳನ್ನು ದಾಟಿ, ಮನುಷ್ಯತ್ವದ ನೆಲೆಯಲ್ಲಿ ಸಮಾನತೆಯನ್ನು ಹಂಬಲಿಸುವ ಕವಯಿತ್ರಿಯ ಪ್ರತಿರೋಧದ ದನಿಯನ್ನು ಈ ಲೇಖನವು ಸಂಶೋಧನಾತ್ಮಕವಾಗಿ ಚರ್ಚಿಸುತ್ತದೆ.
ಪಿ.ಬಿ. ದುತ್ತರಗಿ ಅವರ ತಾಯಿಯ ಕರುಳು ನಾಟಕದಲ್ಲಿ: ಸ್ತ್ರೀ ಸಂವೇದನೆ
21 to 25
ವೃತ್ತಿರಂಗಭೂಮಿಯ ದಿಗ್ಗಜ ಪಿ.ಬಿ. ದುತ್ತರಗಿ ಅವರ ‘ತಾಯಿಯ ಕರುಳು’ ನಾಟಕವು ಪಿತೃಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯರ ಮೇಲಿರುವ ಸಾಮಾಜಿಕ ದೃಷ್ಟಿಕೋನಗಳನ್ನು ಹಾಗೂ ಸ್ತ್ರೀ ಸಂವೇದನೆಯನ್ನು ಅತ್ಯಂತ ಸೂಕ್ಷ್ಮವಾಗಿ ಅನಾವರಣಗೊಳಿಸುತ್ತದೆ. ಸಮಾಜವು ಹೆಣ್ಣನ್ನು ಎಲ್ಲವನ್ನೂ ಮೌನವಾಗಿ ಸಹಿಸಿಕೊಳ್ಳುವ ತ್ಯಾಗಮಯಿ ‘ತಾಯಿ’ ಎಂದು ಆದರ್ಶೀಕರಿಸುತ್ತದೆ, ಇಲ್ಲವೇ ತನ್ನ ಹಕ್ಕುಗಳಿಗಾಗಿ, ಅಧಿಕಾರಕ್ಕಾಗಿ ಧ್ವನಿಯೆತ್ತುವಾಗ ಆಕೆಗೆ ‘ಗಯ್ಯಾಳಿ’ ಎಂದು ಹಣೆಪಟ್ಟಿ ಕಟ್ಟುತ್ತದೆ. ಈ ಎರಡೂ ಪರಸ್ಪರ ವಿರೋಧಿ ನೆಲೆಗಳ ಮೂಲಕ, ಪುರುಷಕೇಂದ್ರಿತ ಸಮಾಜವು ಮಹಿಳೆಯನ್ನು ಹೇಗೆ ತನ್ನ ಅನುಕೂಲಕ್ಕೆ ತಕ್ಕಂತೆ ನಿಯಂತ್ರಿಸುತ್ತದೆ ಎಂಬುದನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಅತ್ತೆ-ಸೊಸೆಯ ಸಂಘರ್ಷದ ಹಿನ್ನೆಲೆಯಲ್ಲಿ, ಮನೆಯೊಳಗಿನ ಅಧಿಕಾರ ಹಂಚಿಕೆಯ ಕೊರತೆ ಮತ್ತು ಸಾಮಾಜಿಕ ಒತ್ತಡಗಳನ್ನು ನಾಟಕಕಾರರು ಎತ್ತಿತೋರಿಸಿದ್ದಾರೆ. ಅಂತಿಮವಾಗಿ, ಮಹಿಳೆಯನ್ನು ಕೇವಲ ಸಹನಶೀಲೆ ಅಥವಾ ಗಯ್ಯಾಳಿ ಎಂಬ ಸೀಮಿತ ವರ್ಗೀಕರಣದ ಚೌಕಟ್ಟಿಗೆ ಒಳಪಡಿಸದೆ, ಆಕೆಗೂ ತನ್ನದೇ ಆದ ಸ್ವತಂತ್ರ ಅಸ್ತಿತ್ವ ಮತ್ತು ಮಾನವೀಯ ಭಾವನೆಗಳಿರುವುದನ್ನು ತೆರೆದಿಡುವ ಮಹತ್ವದ ಆಶಯವನ್ನು ಮಂಡಿಸಲಾಗಿದೆ.
ಗಂಗಾಮತಸ್ಥರ ಕುಲಕಸುಬುಗಳು
26 to 29
ಗಂಗಾಮತಸ್ಥ ಸಮುದಾಯದ ಪ್ರಮುಖ ಕುಲಕಸುಬುಗಳಾದ ಮೀನುಗಾರಿಕೆ, ಬಲೆ ನೇಯುವುದು, ಸುಣ್ಣ ಸುಡುವುದು ಹಾಗೂ ವೀಳ್ಯದೆಲೆ ಬೆಳೆಯುವ ಸಾಂಪ್ರದಾಯಿಕ ವಿಧಾನಗಳನ್ನು ಇಲ್ಲಿ ವಿವರಿಸಲಾಗಿದೆ. ಮೀನುಗಾರರು ಎದುರಿಸುತ್ತಿರುವ ಆರ್ಥಿಕ ಹಾಗೂ ಆಡಳಿತಾತ್ಮಕ ಸವಾಲುಗಳು, ಕೆರೆಗಳ ಗುತ್ತಿಗೆ ಸಮಸ್ಯೆ ಮತ್ತು ಸರ್ಕಾರಿ ಸೌಲಭ್ಯಗಳ ಕೊರತೆಯನ್ನು ಪ್ರಸ್ತಾಪಿಸಲಾಗಿದೆ. ಮೀನುಗಾರಿಕೆ ಮತ್ತು ಶಿಕಾರಿಗೆ ಬಳಸುವ ಸುತ್ತು ಬಲೆ, ಬೀಸು ಬಲೆ, ಮಾರಿ ಬಲೆ ಮುಂತಾದ ವಿವಿಧ ಬಲೆಗಳ ಪರಿಚಯವನ್ನು ನೀಡಲಾಗಿದೆ. ಜೊತೆಗೆ, ವೀಳ್ಯದೆಲೆ ತೋಟವನ್ನು ಸಾಕ್ಷಾತ್ ಲಕ್ಷ್ಮೀದೇವಿ ಎಂದು ಪವಿತ್ರವಾಗಿ ಭಾವಿಸಿ ಮಾಡುವ ಕೃಷಿ ವಿಧಾನ, ಎಲೆಗಳ ಎಣಿಕೆ ಮತ್ತು ಮಾರಾಟದ ಕ್ರಮವನ್ನು ವಿವರಿಸಲಾಗಿದೆ. ಆಧುನಿಕ ಕಾಲದಲ್ಲಿ ಶಿಕ್ಷಣದ ಪ್ರಭಾವದಿಂದಾಗಿ ಈ ಸಮುದಾಯದ ಯುವಜನತೆ ತಮ್ಮ ಸಾಂಪ್ರದಾಯಿಕ ಕಸುಬುಗಳನ್ನು ಬಿಟ್ಟು ಹೊಸ ವೃತ್ತಿಗಳತ್ತ ಮುಖ ಮಾಡುತ್ತಿರುವ ಸಾಮಾಜಿಕ ಬದಲಾವಣೆಯ ಚಿತ್ರಣವನ್ನು ಸಹ ಇಲ್ಲಿ ಕಟ್ಟಿಕೊಡಲಾಗಿದೆ.
ದು. ಸರಸ್ವತಿ ಅವರ ‘ಸಣ್ತಿಮ್ಮಿ ರಾಮಾಯ್ಣ’ ಎಂಬ ಜನಕಥನ
30 to 36
ದು. ಸರಸ್ವತಿ ಅವರ ‘ಸಣ್ತಿಮ್ಮಿ ರಾಮಾಯ್ಣ’ ಏಕಾಂಕ ಕಥನವು ಪೌರಾಣಿಕ ಮಹಾಕಾವ್ಯವನ್ನು ಸಮಕಾಲೀನ ಸಾಮಾಜಿಕ ಮತ್ತು ಸ್ತ್ರೀವಾದಿ ಸಂವೇದನೆಗಳೊಂದಿಗೆ ಮುಖಾಮುಖಿಯಾಗಿಸುವ ವಿಶಿಷ್ಟ ಜನಕಥನವಾಗಿದೆ. ಗ್ರಾಮೀಣ ಮಹಿಳೆ ಸಣ್ತಿಮ್ಮಿಯ ನಿರೂಪಣೆಯಲ್ಲಿ ಮೂಡಿಬರುವ ಕೃತಿಯು, ಸೀತೆ, ಊರ್ಮಿಳೆ ಮತ್ತು ಶೂರ್ಪನಖಿಯಂತಹ ಶೋಷಿತ ಸ್ತ್ರೀ ಪಾತ್ರಗಳನ್ನು ಹೊಸ ದೃಷ್ಟಿಕೋನದಿಂದ ಕಟ್ಟಿಕೊಡುತ್ತದೆ. ಪುರುಷಪ್ರಧಾನ ವ್ಯವಸ್ಥೆಯ ದೋಷಗಳನ್ನು, ಅಧಿಕಾರದ ಮದವನ್ನು ಮತ್ತು ಮದುವೆ-ಕುಟುಂಬದ ಹೆಸರಿನಲ್ಲಿ ಹೆಣ್ಣಿನ ಮೇಲಾಗುವ ಶೋಷಣೆಯನ್ನು ಇಲ್ಲಿ ಕಟುವಾಗಿ ವಿಮರ್ಶಿಸಲಾಗಿದೆ. ದುಡಿಮೆಯ ಮಹತ್ವ, ಶ್ರಮಿಕ ವರ್ಗದ ಪರವಾದ ಕಾಳಜಿ ಹಾಗೂ ಪ್ರಾದೇಶಿಕ ಐತಿಹ್ಯಗಳ ಸಮ್ಮಿಲನ ಈ ಕಥನದಲ್ಲಿ ಎದ್ದು ಕಾಣುತ್ತದೆ. ಸೀತೆಯ ಆಡಳಿತಾತ್ಮಕ ತಂತ್ರಗಾರಿಕೆ ಹಾಗೂ ಅಂತಿಮವಾಗಿ ಪುರುಷ ಪ್ರಧಾನ ಪ್ರಭುತ್ವವನ್ನು ಧಿಕ್ಕರಿಸಿ ಪ್ರಕೃತಿಯೊಡನೆ ಉಳಿಯುವ ನಿರ್ಧಾರವು, ಶೋಷಿತರ ಆತ್ಮವಿಶ್ವಾಸ ಮತ್ತು ಮಹಿಳೆಯರ ಸ್ವತಂತ್ರ ಅಸ್ತಿತ್ವವನ್ನು ಎತ್ತಿಹಿಡಿಯುತ್ತದೆ. ಪುರಾಣವನ್ನು ವರ್ತಮಾನದ ಸಾಂಸ್ಕೃತಿಕ ಹಾಗೂ ಸಾಮಾಜಿಕ ತಲ್ಲಣಗಳಿಗೆ ಹಿಡಿದ ಕೈಗನ್ನಡಿಯಾಗಿ ಮರುಸೃಷ್ಟಿಸಿದ ಪರಿಯು ಇಲ್ಲಿ ಅನಾವರಣಗೊಂಡಿದೆ.
ಹಲಸಂಗಿ ಗೆಳೆಯರ ಬಳಗದ ಮದುವಣಿಗ (ಧೂಲಾ)
37 to 45
ಹೊಸಗನ್ನಡ ಸಾಹಿತ್ಯದ ಮೊದಲ ಘಟ್ಟ ನವೋದಯ ಸಾಹಿತ್ಯ. ಈ ಸಾಹಿತ್ಯ ಘಟ್ಟದಲ್ಲಿ ಒಟ್ಟು ನಾಲ್ಕು ಗೆಳೆಯರ ಬಳಗಗಳನ್ನು ಕಾಣುತ್ತೇವೆ. ಬಿ. ಎಂ. ಶ್ರೀ ಗೆಳೆಯರ ಬಳಗ, ಬೇಂದ್ರೆ ಗೆಳೆಯರ ಬಳಗ, ಮಂಗಳೂರು ಗೆಳೆಯರ ಬಳಗ ಮತ್ತು ಹಲಸಂಗಿ ಗೆಳೆಯರ ಬಳಗ. ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಯ ಹಲಸಂಗಿ ಎಂಬ ಗ್ರಾಮದಲ್ಲಿ ಹುಟ್ಟಿದ ‘ಹಲಸಂಗಿ ಗೆಳೆಯರ ಬಳಗ’ದ ಮೇಲೆ ಗಾಢ ಪರಿಣಾಮ ಬೀರಿದ್ದು ಜನಪದ ಸಾಹಿತ್ಯ. 1922 ರಲ್ಲಿ ಸ್ಥಾಪಿತವಾದ ಗೆಳೆಯರ ಬಳಗ, 1943 ರ ವರೆಗೆ ಈ ಗೆಳೆಯರು ಸಾಹಿತ್ಯಿಕ ಚಟುವಟಿಕೆಯಲ್ಲಿ ತೊಡಗಿದ್ದರು. 1943ರ ನಂತರ ಈ ಗೆಳೆಯರ ಬಳಗ ‘ಶ್ರೀ ಅರವಿಂದ ಮಂಡಳ’ವಾಗಿ ಪರಿವರ್ತನೆಗೊಂಡಿತು. ಹಲಸಂಗಿ ಗೆಳೆಯರ ಗುಂಪಿನ ಪ್ರಮುಖ ಸದಸ್ಯರೆಂದರೆ- ಮಧುರಚೆನ್ನ(ಚೆನ್ನಮಲ್ಲಪ್ಪ), ಸಿಂಪಿ ಲಿಂಗಣ್ಣ, ಪಿ. ಧೂಲಾಸಾಹೇಬ(ಪಟೇಲ್ ಕಾಸೀಮಸಾಬ), ಕಾಪಸೆ ರೇವಪ್ಪ, ಓಲೇಕಾರ ಮಾದಣ್ಣ, ಚೆನ್ನಪ್ಪ ಸರಸಂಬಿ, ಆದಮ ಮಸಳಿ, ಶಿವಲಿಂಗಪ್ಪ ಸರಸಂಬಿ, ಗುರುಬಸಪ್ಪ ಗಲಗಲಿ ಮತ್ತು ರಾಘವೇಂದ್ರ ಸುರಪುರ(ರಾಘಣ್ಣ). ಈ ಗುಂಪಿನ ಎಲ್ಲ ಸದಸ್ಯರು ಕರ್ನಾಟಕದ ಬೇರೆ ಬೇರೆ ಭಾಗದಲ್ಲಿ ಇರತಕ್ಕಂತಹ ಸಾಹಿತಿಗಳೊಂದಿಗೆ ಉತ್ತಮ ಸ್ನೇಹ ಸಂಬಂಧವನ್ನು ಹೊಂದಿದ್ದರು. ವರಕವಿ ಬೇಂದ್ರೆ, ಡಾ. ಶಿವರಾಮ ಕಾರಂತ, ರಂ. ಶ್ರೀ ಮುಗಳಿ, ವಿ. ಕೃ. ಗೋಕಾಕ ಮತ್ತು ಸ. ಸ. ಮಾಳವಾಡ ಇವರೆಲ್ಲ ಹಲಸಂಗಿಗೆ ಬಂದು ಹಲಸಂಗಿ ಗೆಳೆಯರ ಬಳಗದೊಂದಿಗೆ ನವೀನ ಚಿಂತನೆಗಳನ್ನು ಹಂಚಿಕೊಳ್ಳುತ್ತಿದ್ದರು.
ನವೋದಯ ಸಾಹಿತಿಗಳ ಪತ್ರಗಳಲ್ಲಿನ ವೈಚಾರಿಕತೆ ಮತ್ತು ಸಾಹಿತ್ಯಿಕ ಮೌಲ್ಯ
46 to 50
ನವೋದಯ ಸಾಹಿತ್ಯವು ಕನ್ನಡದ ಚೇತನವನ್ನು ಜಾಗೃತಗೊಳಿಸಿದ ಕಾಲ. ಈ ಕಾಲದ ಸಾಹಿತಿಗಳು ಕೇವಲ ಕೃತಿಗಳ ಮೂಲಕವಷ್ಟೇ ಅಲ್ಲದೆ, ಪರಸ್ಪರ ಬರೆದುಕೊಂಡ ಪತ್ರಗಳ ಮೂಲಕವೂ ಒಂದು ದೊಡ್ಡ ಸಾಹಿತ್ಯಿಕ ಆಂದೋಲನವನ್ನೇ ನಡೆಸಿದರು. ಅಂದಿನ ಪತ್ರಗಳು ಕೇವಲ ಕ್ಷೇಮ ಸಮಾಚಾರಕ್ಕೆ ಸೀಮಿತವಾಗದೆ, ಸಿದ್ಧಾಂತಗಳ ಚರ್ಚೆ, ಕೃತಿ ವಿಮರ್ಶೆ ಮತ್ತು ಸಾಂಸ್ಕೃತಿಕ ಬಿಕ್ಕಟ್ಟುಗಳಿಗೆ ಪರಿಹಾರ ಹುಡುಕುವ ವೇದಿಕೆಗಳಾಗಿದ್ದವು.
ಪತ್ರಗಳಲ್ಲಿ ಕಂಡ ಕುವೆಂಪು
51 to 60
ರಾಷ್ಟ್ರಕವಿ ಕುವೆಂಪು ಅವರು ತಮ್ಮ ಮಗ ಪೂರ್ಣಚಂದ್ರ ತೇಜಸ್ವಿಗೆ ಬರೆದ ಪತ್ರಗಳ ಹಿನ್ನೆಲೆಯಲ್ಲಿ ಅವರ ಬಹುಮುಖಿ ವ್ಯಕ್ತಿತ್ವದ ಅಪರೂಪದ ಮುಖಗಳನ್ನು ಇಲ್ಲಿ ಅನಾವರಣಗೊಳಿಸಲಾಗಿದೆ. 1955ರಿಂದ 1980ರವರೆಗೆ ಬರೆದ ಈ ಪತ್ರಗಳು ಕುವೆಂಪು ಅವರನ್ನು ಕೇವಲ ದಾರ್ಶನಿಕ ಕವಿಯಾಗಿ ಮಾತ್ರವಲ್ಲದೆ, ಕಾಳಜಿಯುಕ್ತ ತಂದೆಯಾಗಿ, ಕೌಟುಂಬಿಕ ಜವಾಬ್ದಾರಿಯುಳ್ಳ ಸಂಸಾರಸ್ಥನಾಗಿ ಹಾಗೂ ಲೌಕಿಕ ವಾಸ್ತವಗಳ ಸ್ಪಷ್ಟ ಅರಿವಿದ್ದ ಮಾರ್ಗದರ್ಶಕನಾಗಿ ಪರಿಚಯಿಸುತ್ತವೆ. ಮಗನ ವಿದ್ಯಾಭ್ಯಾಸ, ಸಾಹಿತ್ಯ ಕೃಷಿ, ತೋಟದ ನಿರ್ವಹಣೆ, ಆರ್ಥಿಕ ಶಿಸ್ತು ಹಾಗೂ ಸಮಕಾಲೀನ ಸಾಮಾಜಿಕ-ರಾಜಕೀಯ ವಿದ್ಯಮಾನಗಳ ಬಗೆಗಿನ ಅವರ ನಿಲುವುಗಳು ಇಲ್ಲಿ ದಾಖಲಾಗಿವೆ. ಕವಿಯೊಬ್ಬ ಕೇವಲ ಕಲ್ಪನಾ ಲೋಕದಲ್ಲಿ ವಿಹರಿಸದೆ, ದೈನಂದಿನ ವಾಸ್ತವ ಬದುಕಿನ ಆಗುಹೋಗುಗಳೊಂದಿಗೆ ಹೇಗೆ ನಿಕಟ ಸಂಪರ್ಕ ಹೊಂದಿರುತ್ತಾನೆ ಎಂಬುದನ್ನು ಸಾಬೀತುಪಡಿಸುವ ಈ ಅಧ್ಯಯನವು, ಕುವೆಂಪು ಅವರ ಆಂತರಿಕ ಹಾಗೂ ಲೌಕಿಕ ಬದುಕಿನ ಸುಂದರ ಸಮನ್ವಯತೆಯನ್ನು ಅತ್ಯಂತ ಆಪ್ತವಾಗಿ ಕಟ್ಟಿಕೊಡುತ್ತದೆ.
ಚಂದ್ರಶೇಖರ ಕಂಬಾರರ ‘ಕರಿಮಾಯಿ’ ಕಾದಂಬರಿ
61 to 68
‘ಶಿವಪುರ’ ಕೇವಲ ಗತಕಾಲದ ನಂಟಿನೊಂದಿಗೆ ಉಳಿದುಹೋದ ಊರಲ್ಲ. ಕಾಲದಿಂದ ಕಾಲಕ್ಕೆ ಬದಲಾಗುವ ಚಲನಶೀಲತೆಯನ್ನು ಹೊಂದಿರುವ ಗ್ರಾಮ. ಶಿವಪುರದ ಬದುಕು ಸಂಘಟಿತವಾದದ್ದು. ಈ ಸಂಘಟನೆಗೆ ಮೂಲ ಕಾರಣ ಶಿವಪುರದ ದೈವ ಕರಿಮಾಯಿ. ಈ ಕರಿಮಾಯಿಯೇ ಆ ಊರಿನ ಶಕ್ತಿ ಹಾಗೂ ದೌರ್ಬಲ್ಯ. ಊರಿನ ಪರಗೌಡ, ದತ್ತಪ್ಪ, ಲಗುಮವ್ವ, ದೇವರೇಸಿ, ನಿಂಗೂ, ನಾಯೆಲ್ಯಾ ಮುಂತಾದವರಿಗೆ ಕರಿಮಾಯಿಯ ಬಗ್ಗೆ ಅವರದೇಯಾದ ಭಯ, ಭಕ್ತಿ ಇವೆ. ಇಡೀ ಊರಿನ ಶಕ್ತಿಯಾಗಿ, ಭಕ್ತಿಯಾಗಿ, ಪರಂಪರಾಗತವಾಗಿ ಸಾಗಿ ಬಂದಿರುವ ನಂಬಿಕೆಗಳ ಸಾಕ್ಷಿಪ್ರಜ್ಞೆಯಾಗಿ ಕರಿಮಾಯಿ ದೈವವಿದೆ.
ಚಂದ್ರಶೇಖರ ಕಂಬಾರರು ‘ಶಿವಪುರ’ದ ಪುರಾಣ, ಚರಿತ್ರೆ, ಜನಪದವನ್ನು ಕಟ್ಟುತ್ತಲೇ ಆಧುನಿಕ ಶಿಕ್ಷಣದಿಂದಾಗಿ ಆ ಊರಿನಲ್ಲಾದ ಬದಲಾವಣೆಗಳನ್ನು ಚಿತ್ರಿಸಿದ್ದಾರೆ. ಗುಡಸೀಕರ, ಬಸವರಾಜನಂತಹ ಶಿಕ್ಷಿತ ಪಾತ್ರಗಳಿಂದಲೇ ಸಮುದಾಯದ ಬದುಕು ಅನಾಹುತಗಳಿಗೊಳಗಾಗುವ ಬಗೆಯನ್ನು ನಿರೂಪಿಸಿದ್ದಾರೆ. ಕಂಬಾರರು ಗುಡಸೀಕರನ ಬದುಕಿನ ವಿಫಲತೆಯನ್ನು ಸಮಷ್ಟಿಯೊಳಗೆ ತಂದು ಅಲ್ಲಿ ಅವನ ವ್ಯಕ್ತಿತ್ವಕ್ಕೆ ಸೋಲಾಗುವುದನ್ನು ಕಟ್ಟಿಕೊಟ್ಟಿದ್ದಾರೆ.
ಮುಳಬಾಗಿಲು ತಾಲೂಕಿನ ಸ್ಥಳನಾಮಗಳು
69 to 77
ಸಮಾಜ ಜೀವಿಯಾದ ಮಾನವ ಪ್ರತಿನಿತ್ಯ ಅನೇಕ ವ್ಯಕ್ತಿ, ವಸ್ತು, ಸ್ಥಳಗಳ ಜೊತೆಗೆ ವ್ಯವಹರಿಸುವುದುಂಟು. ಅಂಥ ಸಂದರ್ಭದಲ್ಲಿ ವ್ಯಕ್ತಿ, ವಸ್ತು, ಸ್ಥಳಗಳನ್ನು ಗುರುತಿಸಲು, ಒಂದರಿಂದ ಮತ್ತೊಂದನ್ನು ಪ್ರತ್ಯೇಕಿಸಲು ‘ಹೆಸರು’ ಅತ್ಯಗತ್ಯ ಮತ್ತು ಅನಿವಾರ್ಯ. ಹಾಗಾಗಿ ಮನುಷ್ಯ ಭಾಷೆ ಕಲಿತ ಮೇಲೆ ಪ್ರತಿಯೊಂದು ವಸ್ತು, ಸ್ಥಳ, ವ್ಯಕ್ತಿಗೆ ಹೆಸರು ಇಡತೊಡಗಿದ.
ಹೆಸರುಗಳನ್ನು ವ್ಯಾಕರಣ ಪರಿಭಾಷೆಯಲ್ಲಿ ‘ನಾಮ’ವೆಂದು ಕರೆಯಲಾಗುತ್ತದೆ. ನಾಮಗಳ ವೈಜ್ಞಾನಿಕವಾದ ಅಧ್ಯಯನ ನಾಮ ವಿಜ್ಞಾನವಾಗಿದೆ. ಇಂಗ್ಲೀಷ್ನಲ್ಲಿ ಇದನ್ನು ‘Onomastics’ ಎಂದು ಕರೆಯುತ್ತಾರೆ. ಕೇಶಿರಾಜನು ಶಬ್ದಮಣಿದರ್ಪಣದಲ್ಲಿ ನಾಮಲಿಂಗವನ್ನು ಹೇಳುವಾಗ ರೂಢನಾಮ, ಅಂಕಿತನಾಮ, ಅನ್ವರ್ಥನಾಮವೆಂದು ಹೇಳಿದ್ದಾನೆ. ನಾಮಶಾಸ್ತ್ರದಲ್ಲಿ ‘ವ್ಯಕ್ತಿನಾಮ’ ಮತ್ತು ‘ಸ್ಥಳನಾಮ’ ಎಂದು ಎರಡು ವಿಧಗಳನ್ನು ಹೇಳಲಾಗಿದೆ. ವ್ಯಕ್ತಿನಾಮಗಳು ವೈಯಕ್ತಿಕವಾದವು. ಸ್ಥಳನಾಮಗಳು, ಸಾರ್ವಜನಿಕವಾದವು, ಸರ್ವಕಾಲಿಕವೂ ಹೌದು. ವ್ಯಕ್ತಿಗಳನಾಮಗಳಿಗೆ ಸಂಬಂಧಿಸಿದಂತೆ ನಡೆಯುವ ಅಧ್ಯಯನವು ವ್ಯಕ್ತಿನಾಮ ವಿಜ್ಞಾನವಾದರೆ, ಸ್ಥಳನಾಮಗಳಿಗೆ ಸಂಬಂಧಿಸಿದಂತೆ ನಡೆಯುವ ಅಧ್ಯಯನವು ಸ್ಥಳನಾಮ ವಿಜ್ಞಾನವಾಗಿದೆ.
ಸ್ಥಳಗಳಿಗೆ ಇಟ್ಟ ಹೆಸರುಗಳೇ ‘ಸ್ಥಳನಾಮಗಳು’ (Toponymy). ಅವುಗಳ ಅಧ್ಯಯನವೇ ಸ್ಥಳನಾಮ ವಿಜ್ಞಾನ (Toponomastics). ಸ್ಥಳನಾಮಗಳನ್ನು ವಸತಿಯ ಸ್ಥಳಗಳು, ನಿರ್ವಸತಿಯ ಸ್ಥಳಗಳು ಎಂದು ಗುರುತಿಸಲಾಗಿದೆ. ವಸತಿಯ ಸ್ಥಳಗಳೆಂದರೆ ಹಳ್ಳಿ, ಗ್ರಾಮ, ಪಟ್ಟಣಗಳಾಗಿವೆ. ನಿರ್ವಸತಿಯ ಸ್ಥಳಗಳೆಂದರೆ ಬೆಟ್ಟ, ಗುಡ್ಡ, ನದಿ, ಕೆರೆ, ಕಟ್ಟೆ, ನಾಲೆಗಳ ಹೆಸರು (Hydronymy) ಮತ್ತು ಕೆರೆ, ದಾರಿ, ರಸ್ತೆಗಳ ಹೆಸರುಗಳು (Mycrotoponymy) ಆಗಿವೆ.
“ಪ್ರಾಚೀನವಾದ ಸ್ಥಳನಾಮಗಳು ಅರ್ಥಗರ್ಭಿತವಾಗಿವೆ. ಒಂದು ಪ್ರದೇಶದಲ್ಲಿರುವ ನದಿ, ಬೆಟ್ಟ, ಕಲ್ಲು, ಮರ, ಮಣ್ಣು, ದೇವಾಲಯ, ಕೋಟೆ, ಮೊದಲಾದವುಗಳು ಆ ಸ್ಥಳದ ಚರಿತ್ರೆಯನ್ನು ತಿಳಿಸಲು ನೆರವಾಗುವಂತೆ ಸ್ಥಳನಾಮಗಳು ಕೂಡ ಆಯಾ ಸ್ಥಳಗಳ ಚರಿತ್ರೆಗೆ ಪೂರಕವಾಗುವ ಅನೇಕ ಮಾಹಿತಿಯನ್ನು ನೀಡುತ್ತವೆ. ಆದ್ದರಿಂದ ಸ್ಥಳನಾಮಗಳನ್ನು ಜೀವಂತ ಪಳೆಯುಳಿಕೆಗಳು ಎಂದು ಕರೆಯುತ್ತಾರೆ.”
ನೀರಿಗೆ ಅಭಾವವಿರುವ ಜಿಲ್ಲೆಯ ಒಟ್ಟು ಸ್ಥಳನಾಮಗಳ ಪೈಕಿ ಸುಮಾರು 400 ಗ್ರಾಮಗಳು 30ಕ್ಕೂ ಹೆಚ್ಚು ಜಲಸಂಬಂಧಿ ಹೆಸರುಗಳಿಂದ ಕೂಡಿವೆ. ಅಂಬುಧಿ, ಸಂದ್ರ (ಸಮುದ್ರ), ಸಾಗರ, ಏರಿ, ಸಿಟ್ಟು, ಕಡವು, ಕುಂಟೆ, ಕೊಳ, ಕೋಡಿ, ಚೆರುವು, ದೊಣೆ, ಮಡುವು ಮುಂತಾದವು. ಇವುಗಳಲ್ಲಿ ಸುಮಾರು 100 ಸ್ಥಳಗಳು ಸಂದ್ರ (ಸಮುದ್ರ)ದಿಂದ ಅಂತ್ಯಗೊಂಡಿರುವುದು ಕುತೂಹಲಕರವಾಗಿದೆ.
ಸಾಮಾಜಿಕ ಅಂಶಗಳಲ್ಲಿ ವ್ಯಕ್ತಿನಾಮ, ಜಾತಿ, ಬುಡಕಟ್ಟು, ಮತ, ವಾಸ್ತು, ಘಟನೆ, ಬಿರುದು, ದೇವತೆ, ವೃತ್ತಿ ಸಾದೃಶ್ಯಗಳನ್ನು ಸ್ಥಳನಾಮಗಳಲ್ಲಿ ಗುರುತಿಸಬಹುದು. ವರ್ಣನಾತ್ಮಕದಲ್ಲಿ ಸ್ಥಳ, ದಿಕ್ಕು, ಗ್ರಾಮನಾಮ, ವರ್ಣ.
ವಚನಕಾರರ ಕಣ್ಣಲ್ಲಿ ಹೆಣ್ಣು
78 to 86
ಕನ್ನಡ ಸಾಹಿತ್ಯದಲ್ಲಿ ವಚನಗಳಿಗೆ ವಿಶೇಷ ಸ್ಥಾನವಿದೆ. ವಿಶ್ವಸಾಹಿತ್ಯಕ್ಕೆ ಕನ್ನಡ ಸಾಹಿತ್ಯದ ವಿಶಿಷ್ಟ ಕೊಡುಗೆ ವಚನಸಾಹಿತ್ಯ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ. ಅದರ ಜೊತೆಗೆ ವಚನಕಾರರ ಹೆಣ್ಣನ್ನು ಕುರಿತ ಆಲೋಚನೆಗಳೂ ಕೂಡ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಒಳಗಾಗಬಹುದಾದ ವಿಷಯವೇ ಆಗಿದೆ. ಏಕೆಂದರೆ ವಚನಕಾರರ ಹೆಣ್ಣನ್ನು ಕುರಿತ ಆಲೋಚನೆಗಳು ಮೇಲ್ನೋಟಕ್ಕೆ ಸಾಂಪ್ರದಾಯಿಕ ನೋಟಕ್ರಮದಿಂದ ಕೂಡಿವೆ ಎಂದೆನಿಸಿದರೂ ಅವು ಆಂತರ್ಯದಲ್ಲಿ ಹೆಣ್ಣನ್ನು ಅವಳ ನಿಜದ ನೆಲೆಯಲ್ಲಿ ಗುರುತಿಸಿ, ಅವಳ ಶಕ್ತಿಯನ್ನು ಅನಾವರಣಗೊಳಿಸುತ್ತವೆ. ಈ ನಿಟ್ಟಿನಲ್ಲಿ ವಚನಕಾರರ ವಚನಗಳಲ್ಲಿ ಹೆಣ್ಣನ್ನು ಕುರಿತ ಆಲೋಚನೆಗಳು ಯಾವ ನೆಲೆಯಲ್ಲಿ ವ್ಯಕ್ತವಾಗಿವೆ ಎನ್ನುವುದು ಮತ್ತೆ ಮತ್ತೆ ಚರ್ಚೆಗೆ ಒಳಗಾಗುತ್ತಿರುವ ವಿಷಯವೇ ಆಗಿದೆ. ವಚನಗಳನ್ನು ಹೆಚ್ಚು ಹೆಚ್ಚು ಚರ್ಚೆಗೆ ಒಳಪಡಿಸಿದಂತೆಲ್ಲಾ ವಚನಕಾರರ ನಿಲುವುಗಳು ಮತ್ತಷ್ಟು ಸ್ಪಷ್ಟವಾಗುತ್ತಿವೆ. ಹಾಗಾಗಿ ವಚನಗಳನ್ನು ಸೂಕ್ಷ್ಮ ಓದಿಗೆ ಒಳಪಡಿಸಿ ಹೆಣ್ಣನ್ನು ಕುರಿತ ಅವರ ನಿಲುವುಗಳನ್ನು ತಿಳಿಯುವುದು ಈ ಲೇಖನದ ಉದ್ದೇಶವಾಗಿದೆ.
‘ಅಧಿನಾಯಕಿ’ ನಾಟಕದಲ್ಲಿ ಸ್ತ್ರೀ ಶೋಷಣೆಯ ವಿಭಿನ್ನ ನೆಲೆಗಳು
87 to 96
ಬೇಲೂರು ರಘುನಂದನ್ ರಚಿಸಿರುವ ‘ಅಧಿನಾಯಕಿ’ ನಾಟಕವು ಪಿತೃಪ್ರಧಾನ ವ್ಯವಸ್ಥೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಸ್ತ್ರೀ ಶೋಷಣೆಯ ವಿಭಿನ್ನ ನೆಲೆಗಳನ್ನು ಮಾರ್ಮಿಕವಾಗಿ ಅನಾವರಣಗೊಳಿಸುತ್ತದೆ. ಪುರಾಣ, ಇತಿಹಾಸ ಹಾಗೂ ಸಮಕಾಲೀನ ವಿದ್ಯಮಾನಗಳನ್ನು ಅತ್ಯಂತ ಸೃಜನಶೀಲವಾಗಿ ಬೆಸೆಯುವ ಮೂಲಕ, ಮಹಿಳೆಯ ಮೇಲಿನ ದೌರ್ಜನ್ಯ, ಅಸಮಾನತೆ ಮತ್ತು ಅಧಿಕಾರದ ದರ್ಪವನ್ನು ಈ ಬರಹದಲ್ಲಿ ಕಟುವಾಗಿ ಪ್ರಶ್ನಿಸಲಾಗಿದೆ. ಸೀತೆ, ದ್ರೌಪದಿ ಮತ್ತು ಅಕ್ಕಮಹಾದೇವಿಯಂತಹ ಪಾತ್ರಗಳ ಐತಿಹಾಸಿಕ ತುಮುಲಗಳನ್ನು ವರ್ತಮಾನದ ಮಹಿಳೆಯರ ಸಂಕಟಗಳಿಗೆ ಸಮೀಕರಿಸಲಾಗಿದೆ. ಸತಿಪದ್ಧತಿ, ಬಾಲ್ಯವಿವಾಹ, ಹಾಗೂ ಕೇವಲ ಭೋಗದ ವಸ್ತುವಾಗಿ ಹೆಣ್ಣನ್ನು ನೋಡುವ ವಿಕೃತ ಮನಸ್ಥಿತಿಗಳ ವಿರುದ್ಧ ‘ಅಧಿನಾಯಕಿ’ ಸಿಡಿದೇಳುತ್ತಾಳೆ. ಅಸಹಾಯಕತೆಯನ್ನು ಮೆಟ್ಟಿಬೆಳೆದು, ಪುರುಷರ ಸರ್ವಾಧಿಕಾರವನ್ನು ಧಿಕ್ಕರಿಸಿ, ಸಮಾನ ಹಕ್ಕು, ಸ್ವಾಭಿಮಾನ ಹಾಗೂ ನಿರ್ಧಾರ ತೆಗೆದುಕೊಳ್ಳುವ ಅಧಿಕಾರಕ್ಕಾಗಿ ಆಗ್ರಹಿಸುವ ಭರವಸೆಯ ಪ್ರತಿರೂಪವಾಗಿ ಸ್ತ್ರೀ ಸಂವೇದನೆಯನ್ನು ಇಲ್ಲಿ ಅತ್ಯಂತ ಪ್ರಬುದ್ಧವಾಗಿ ವಿಶ್ಲೇಷಿಸಲಾಗಿದೆ.
कालिदास के काव्य में प्रकृति चित्रण
97 to 103
संस्कृत साहित्य के इतिहास में महाकवि कालिदास का स्थान सर्वोपरि है। उन्हें ‘कविकुलगुरु’ और ‘भारत का शेक्सपियर’ कहा जाता है। कालिदास की लेखनी की सबसे बड़ी विशेषता उनका प्रकृति के प्रति अगाध प्रेम है। जहाँ अन्य कवियों के लिए प्रकृति केवल एक पृष्ठभूमि है, वहीं कालिदास के लिए वह एक सजीव, संवेदनशील और क्रियाशील सत्ता है। उन्होंने जड़ प्रकृति में चेतनता का संचार कर उसे मानव जीवन का अभिन्न अंग बना दिया है।
कालिदास ने अपने सभी काव्यों और नाटकों में प्रकृति का सुंदर वर्णन किया है, लेकिन उन्होंने विशेष रूप से ऋतुओं के चित्रण के लिए ‘ऋतुसंहार’ की रचना की। इस ग्रंथ में उन्होंने केवल बाहरी प्राकृतिक सौंदर्य का वर्णन ही नहीं किया, बल्कि यह भी बताया है कि विभिन्न ऋतुएँ मानव के मन और भावनाओं को किस प्रकार प्रभावित करती हैं। फिर भी, ऋतुओं का स्वतंत्र और विस्तारपूर्वक चित्रण उनके प्रकृति-प्रेम को स्पष्ट रूप से दर्शाता है।