Table of Contents
Trodden Path
ಕವಿರಾಜಮಾರ್ಗಕ್ಕೆ ಹಿಂದಿನ ಕನ್ನಡ ಸಾಹಿತ್ಯ
01 to 39
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕವಿರಾಜಮಾರ್ಗವು ಪ್ರಮುಖ ಘಟ್ಟವಾಗಿದ್ದು, ಅದಕ್ಕೂ ಹಿಂದಿನ ಸಾಹಿತ್ಯದ ಸ್ವರೂಪವನ್ನು ಶಾಸನಗಳು ಮತ್ತು ಭಾಷಿಕ ದಾಖಲೆಗಳ ಮೂಲಕ ವಿಶ್ಲೇಷಿಸಲಾಗಿದೆ. ತಮಿಳು ಮತ್ತು ಪ್ರಾಕೃತ ಭಾಷೆಗಳ ಪ್ರಾಚೀನತೆಯೊಂದಿಗೆ ಕನ್ನಡವನ್ನು ತುಲನೆ ಮಾಡಿ , ಹಲ್ಮಿಡಿ ಶಾಸನ, ತಾಳಗುಂದ ಶಾಸನ, ಶ್ರವಣಬೆಳಗೊಳದ ಶಾಸನಗಳ ಭಾಷಿಕ ಬೆಳವಣಿಗೆಯನ್ನು ಚರ್ಚಿಸಲಾಗಿದೆ. ಗದ್ಯ, ಪದ್ಯ, ಚತ್ತಾಣ, ಬೆದಂಡೆ ಹಾಗೂ ಪಗರಣದಂತಹ ಪ್ರಾಚೀನ ಸಾಹಿತ್ಯ ಪ್ರಕಾರಗಳು ಕವಿರಾಜಮಾರ್ಗಕಾರನಿಗಿಂತ ಮೊದಲೇ ಹೇಗೆ ಅಸ್ತಿತ್ವದಲ್ಲಿದ್ದವು ಎಂಬುದನ್ನು ಶಾಸನಗಳ ಬಿಡಿ ಪದ್ಯಗಳ ಮೂಲಕ ಸಮರ್ಥಿಸಲಾಗಿದೆ. ಕವಿರಾಜಮಾರ್ಗಕಾರ ಉಲ್ಲೇಖಿಸಿರುವ ವಿಮಳೋದಯ, ದುರ್ವಿನೀತ, ಶ್ರೀವಿಜಯ ಮುಂತಾದ ಕವಿಗಳ ಪೂರ್ವಾಪರಗಳ ಶೋಧನೆ ಇಲ್ಲಿದೆ.
Byway
ಭಾರತದ ‘ಪಾದ’ ತೋರಬಹುದಾದ ‘ದೀಪ’ ಬಾಬಾಸಾಹೇಬ್ ಅಂಬೇಡ್ಕರ್
40 to 47
ಡಾ. ಬಿ.ಆರ್. ಅಂಬೇಡ್ಕರ್ ಅವರು ಕೇವಲ ದಲಿತರ ವಿಮೋಚಕರು ಮಾತ್ರವಲ್ಲ, ಭಾರತೀಯ ಸಮಾಜಶಾಸ್ತ್ರದ ಪಿತಾಮಹ, ಅರ್ಥಶಾಸ್ತ್ರಜ್ಞ ಮತ್ತು ಸಂವಿಧಾನ ಶಿಲ್ಪಿ. ಅವರ ಚಿಂತನೆಗಳ ಪ್ರಸ್ತುತತೆ ಮತ್ತು ದಲಿತ ರಾಜಕಾರಣದ ಇಂದಿನ ನಡೆಯ ನಡುವಿನ ದ್ವಂದ್ವಗಳನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಲಾಗಿದೆ. ಅಂಬೇಡ್ಕರ್ ಅವರ ನೈಜ ಆಶಯಗಳನ್ನು ಮರೆತು, ಅವರನ್ನು ಕೇವಲ ಮೂರ್ತೀಕರಣ ಮತ್ತು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವ ಪ್ರಸ್ತುತ 'ಅಂಬೇಡ್ಕರ್‌ವಾದಿ'ಗಳ ಬೌದ್ಧಿಕ ದಾರಿದ್ರ್ಯವನ್ನು ಕಟುವಾಗಿ ಟೀಕಿಸಲಾಗಿದೆ. ಸ್ವಹಿತಾಸಕ್ತಿ ಹಾಗೂ ವಾರಸುದಾರಿಕೆಯ ಕಚ್ಚಾಟದಲ್ಲಿ ಅಂಬೇಡ್ಕರ್ ಚಿಂತನೆಗಳು ಹೇಗೆ ಹಾದಿ ತಪ್ಪುತ್ತಿವೆ ಎಂಬುದನ್ನು ವಿವರಿಸುತ್ತಾ , ಅವರ ನೈಜ ವಿಚಾರಧಾರೆಗಳನ್ನು ಪೂರ್ಣಪ್ರಜ್ಞೆಯೊಂದಿಗೆ ಅರ್ಥಮಾಡಿಕೊಂಡು ಮುನ್ನಡೆಯುವ ಅಗತ್ಯವನ್ನು ಪ್ರತಿಪಾದಿಸಲಾಗಿದೆ.
Research Articles
ಲಕ್ಷ್ಮೀಶನ ಜೈಮಿನಿಭಾರತದಲ್ಲಿ ಶೋಷಣೆಯ ನೆಲೆಗಳು
48 to 54
ಲಕ್ಷ್ಮೀಶನ ಜೈಮಿನಿ ಭಾರತ ಹಲವು ಕಥೆಗಳ ಒಂದು ಸಂಕಲನ. ವೈವಿಧ್ಯಮಯ ಉಪಕಥೆಗಳಿಂದ ವ್ಯಕ್ತಿ ಪ್ರಧಾನ ನೆಲೆಯಲ್ಲಿ ರಚಿತಗೊಂಡ ಸುಂದರ ಕಾವ್ಯ. ಸೀತೆ, ಬಬ್ರುವಾಹನ ಹಾಗೂ ಚಂದ್ರಹಾಸನ ಕಥೆಗಳು ಕರುಣಾ ರಸಗಳ ಸಂಗಮವಾಗಿವೆ. ಕಾವ್ಯದ ಪ್ರತಿ ಪಾತ್ರಗಳು ಮಾನವೀಯತೆಯ ನೆಲೆಯಲ್ಲಿ ಸಾಣೆಹಿಡಿದ ಸಮರ್ಥ ನಿರೂಪಣೆ ಎನಿಸಿದರೂ ಸೀತಾವನವಾಸ, ಬಬ್ರುವಾಹನನ ಕಾಳಗ ಹಾಗೂ ಚಂದ್ರಹಾಸನ ಬಾಲ್ಯದ ವಿವರಣೆಗಳು ಅಮಾನವೀಯತೆಯ ಸಂಕಟವನ್ನುಂಟುಮಾಡುತ್ತವೆ. ಕವಿ ತಾನು ಬದುಕಿದ್ದ ಸಾಮಾಜಿಕ ವಾತಾವರಣಕ್ಕೆ ಕಟ್ಟುಬಿದ್ದು ಈ ಪಾತ್ರಗಳನ್ನು ನಿರ್ವಹಿಸಿರುವುದು ದುರಂತವೇ ಸರಿ. ಎಲ್ಲಾ ಕಾಲದಲ್ಲೂ ಹೆಣ್ಣು ಶೋಷಣೆಗೆ ಒಳಪಡುವವಳು ಎಂಬುದನ್ನು ಸಾಬೀತುಮಾಡುವ ಸಾಮಾಜಿಕ ಶೋಷಣೆಯ ಪ್ರತೀಕದಂತೆ ಇಲ್ಲಿ ಸೀತೆ ಪಾತ್ರ ಚಿತ್ರಿಸಲ್ಪಟ್ಟಿದೆ. ವೈದಿಕಶಾಹಿ ವ್ಯವಸ್ಥೆ ಹಾಗೂ ಪ್ರಭುತ್ವ ಧೋರಣೆಗೆ ನಲುಗುವ ಪಾತ್ರಗಳಾಗಿ ಬಬ್ರುವಾಹನ ಹಾಗೂ ಚಂದ್ರಹಾಸರ ಪಾತ್ರಗಳು ಮೂಡಿಬಂದಿವೆ. ಹೀಗೆ ಲಕ್ಷ್ಮೀಶನ ಜೈಮಿನಿ ಭಾರತದಲ್ಲಿ ಈ ಮೂರು ಗತಿವಿಹೀನ ಪಾತ್ರಗಳ ಅಂತರಂಗಶೋಧನೆಯ ಕಿರು ಪ್ರಯತ್ನವೇ ಈ ಲೇಖನ.
ದ. ರಾ. ಬೇಂದ್ರೆಯವರ ಕಾವ್ಯದಲ್ಲಿ ಸ್ತ್ರೀ ಸಂವೇದನೆಯ ಭಿನ್ನ ನೆಲೆಗಳು
55 to 62
ಕನ್ನಡ ಸಂಸ್ಕೃತಿಯ ಒಂದು ಅವಿಭಾಜ್ಯ ಭಾಗವಾಗಿರುವ ದ.ರಾ. ಬೇಂದ್ರೆಯವರು ಕನ್ನಡವನ್ನು ಹಾಗೂ ಕನ್ನಡ ನಾಡನ್ನು ಅಖಂಡವಾಗಿ ಪ್ರೀತಿಸಿದ ಮಾಂತ್ರಿಕ ಕವಿ. ಬಡತನ, ಸಿರಿತನ ಕಡೆತನಕ ಉಳಿದಾವೇನ ಎಂಬುದು ಅವರ ದೃಷ್ಟಿಯಾಗಿತ್ತು. 'ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೇ ನೀಡುವೆನು ರಸಿಕ ನಿನಗೆ' ಎಂಬ ಸಂಕಲ್ಪವು ಅವರ ಕಾವ್ಯದ ಮೂಲ ದೃಷ್ಟಿಯಾಗಿತ್ತು. ದೈತ್ಯ ಪ್ರತಿಭೆಯಾದ ಬೇಂದ್ರೆಯವರಿಗೆ ಉತ್ತರ ಕನ್ನಡದ ದೇಸಿ ಕೇವಲ ಉಪಭಾಷೆಯಾಗದೆ, ಒಂದು ಸಾಂಸ್ಕೃತಿಕ ಪರಂಪರೆಯ ಬಳುವಳಿಯಾಗಿ ಬಂದಿದೆ. ದೇಸಿ, ಗೇಯ, ರೂಪಗಳು ಮರಾಠಿ ಗೇಯ ರೂಪಗಳೊಂದಿಗೆ ಮೇಲೈಸಿಕೊಂಡು ಬೇಂದ್ರೆಯವರ ಕಾವ್ಯಕ್ಕೆ ಗೇಯತೆಯ ಸೊಬಗನ್ನು ಮೂಡಿಸಿವೆ. ಕುಣಿಯೋಣ ಬಾರಾ, ಗಮಗಮಾ ಗಮಾಡಿಸ್ತಾವ, ನಾದಲೀಲೆ, ಕುರುಡು ಕಾಂಚಾಣ, ನೀಹಿಂಗ ನೋಡಬ್ಯಾಡ ನನ್ನ ಇನ್ನಿತರ ಕವಿತೆಗಳು ಕವಚ ಕುಂಡಲಧಾರಿಯಾಗಿಯೇ ಹುಟ್ಟಿದ ಕರ್ಣನಂತೆ ಗೇಯತೆಯೊಂದಿಗೆ ಮೂಡಿ ಬಂದಿದೆ. ಇವರ ಕಾವ್ಯದಲ್ಲಿ ಜಾನಪದಪರಂಪರೆ ಮುಂದುವರೆದ ಸೂಚನೆಯಂತೆ ಕನ್ನಡದ ಕಾವ್ಯಭಾಷೆಯ ಸಾತತ್ಯವನ್ನು ಉಳಿಸುವ ಸಿದ್ದಿಯು ನಡೆದಿದೆ. ಬದುಕೇ ಕಾವ್ಯವಾಗುತ್ತಾ ಹೋಗುವ ಪವಾಡ ಸದೃಶ್ಯ ಕ್ರಿಯೆ ಬೇಂದ್ರೆಯವರ ಕಾವ್ಯದ ವೈಶಿಷ್ಯವಾಗಿದೆ. ಭಾಷಣ ಮತ್ತು ಕಾವ್ಯವಾಚನದಲ್ಲಿ ಅಸದೃಶವಾದ ಸೃಜನಶೀಲ ಪ್ರತಿಭೆಯನ್ನು ಬೇಂದ್ರೆಯವರು ಹೊಂದಿದ್ದರು. ಕವಿತೆಯನ್ನು ಸಹೃದಯದ ಹೃದಯಕ್ಕೆ ಮುಟ್ಟಿಸಬೇಕೆಂದು ಅವರ ಆಗ್ರಹವಾಗಿತ್ತು. ಸೃಜನಾತ್ಮಕವಾದ ಕಾವ್ಯ ವಾಚನ ಕ್ರಿಯೆಯನ್ನು ಹೊಂದಿದ್ದ ಬೇಂದ್ರೆಯವರು ಸದಾ ಕಾವ್ಯರಚನೆ, ವಿಮರ್ಶೆ, ನಾಟಕ, ಭಾಷಣಗಳು, ಹೃದಯಸಂವಾದ ಹಾಗೂ ಸಂಭಾಷಣೆಗಳ ಮುಖೇನಾ ಸದಾ ಚೈತನ್ಯಮಯವಾಗಿ ಚುರುಕಾಗಿದ್ದರು. ತಾಯಿಯನ್ನು ವಿಶ್ವಮಾತೆಯಾಗಿ, ಭೂಮಾತೆಯಾಗಿ, ಭಾರತಮಾತೆಯಾಗಿ ಕಾಣುತ್ತಾ, ಗೌರವ ಆದರದಿಂದ ತಮ್ಮ ಕವನಗಳಲ್ಲಿ ಚಿತ್ರಿಸಿದ್ದಾರೆ ಹೆಣ್ಣು ಶಕ್ತಿಸ್ವರೂಪಣಿಯಾಗಿದ್ದು, ಬದುಕಿನಲ್ಲಿ ಬರುವ ಸಂಕಷ್ಟಗಳನ್ನು ಎದುರಿಸುತ್ತಾ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಮಗಳಾಗಿ, ತಾಯಿಯಾಗಿ, ಹೆಂಡತಿ ಮತ್ತು ಸಹೋದರಿಯಾಗಿ ಸ್ತ್ರೀಯರನ್ನು ಕಾವ್ಯದಲ್ಲಿ ಬೇಂದ್ರೆಯವರು ಕಟ್ಟಿಕೊಟ್ಟಿದ್ದಾರೆ. ಅವರ ಕಾವ್ಯದಲ್ಲಿ ಸ್ತ್ರೀ ಸಂವೇದನೆಯ ಬಹುಮುಖ ಚಿಂತನೆಗಳನ್ನು ಕಾಣಬಹುದಾಗಿದೆ.
ಬೋರೇಗೌಡ ಚಿಕ್ಕಮರಳಿ ಅವರ ಕಥನ ಸಾಹಿತ್ಯದಲ್ಲಿ ದಲಿತ ಸಂವೇದನೆಯ ನೆಲೆ
63 to 74
ಬೋರೇಗೌಡ ಚಿಕ್ಕಮರಳಿ ಕಥನಗಳಲ್ಲಿ ಸಮಾಜದ ಜಾತಿವ್ಯವಸ್ಥೆಯ ತಾರತಮ್ಯದಿಂದಾಗಿ ತಳಸಮುದಾಯದವರ ಮೇಲಿನ ಶೋಷಣೆಗಳು, ಇವರ ನೋವುಗಳು, ಅಸ್ಪೃಶ್ಯತೆಯ ವರ್ತನೆಗಳು ಹೇಗೆ ಸಮಾಜದಲ್ಲಿ ಅಸ್ತಿತ್ವದಲ್ಲಿವೆ ಎಂಬುದನ್ನು ಕಾಣಬಹುದು. ಹಾಗೆಯೇ ಇವುಗಳ ವಿರುದ್ಧ ದಲಿತರ ಪ್ರತಿಭಟನಾ ಧೋರಣೆಗಳನ್ನು ತಮ್ಮ ಕಥನದಲ್ಲಿ ಚಿತ್ರಿಸಿರುವುದನ್ನು ಕಾಣಬಹುದು. 'ನೆಲ್ಲೂರಿನಲ್ಲಿ ಒಂದು ದಿನ' ಕಾದಂಬರಿಯಲ್ಲಿ ಕಾದಂಬರಿಕಾರರು ಜಮೀನ್ದಾರರು ಬಡವರ ಭೂಮಿಯನ್ನು ಮೋಸದಿಂದ ಕಸಿದುಕೊಂಡು ಅವರ ಮೇಲೆ ಹೇಗೆ ದೌರ್ಜನ್ಯಗಳನ್ನು ಎಸಗುತ್ತಾರೆ ಎನ್ನುವುದನ್ನು ಚಿತ್ರಿಸುತ್ತಾರೆ. ಕಾದಂಬರಿಯಲ್ಲಿನ ಪಾತ್ರವಾದ ಮಾದನ ತಂದೆ ಮಾಡಿದ ಸಾಲಕ್ಕೆ ಕ್ಯಾತೆಗೌಡನಿಗೆ ತನ್ನ ಭೂಮಿಯನ್ನು ಭೋಗ್ಯಕ್ಕೆ ನೀಡಿರುತ್ತಾನೆ. ಜಮೀನಿನ ಭೋಗ್ಯದ ಅವಧಿ ಕಳೆದ ಕಾರುಬೆಳೆಗೆ ಮುಗಿದಿತ್ತು. ಮಾದನಿಗೆ ಈಗ ಹೊಸ ಸಮಸ್ಯೆಗಳು ಹುಟ್ಟಿಕೊಂಡಿತ್ತು. ಕ್ಯಾತೇಗೌಡನಿಗೆ ತನ್ನ ಜಮೀನನ್ನು ಭೋಗ್ಯ ಕೊಟ್ಟಿದ್ದುದಕ್ಕೆ ಮಾದನ ತಂದೆ ಕಾಗದ ಪತ್ರಗಳ ಸಾಕ್ಷಿಯನ್ನು ಇಟ್ಟುಕೊಂಡಿರಲಿಲ್ಲ. ಅದು ಕೇವಲ ಬಾಯಿಮಾತಿನ ಒಪ್ಪಂದವಾಗಿತ್ತು. ಅವನು ಕೊಟ್ಟಿದ್ದ ಎರಡು ಸಾವಿರ ರೂಪಾಯಿಗಳಿಗೆ ಹತ್ತು ವರ್ಷಗಳ ಭೋಗ್ಯ ಅನುಭವಿಸಿದ್ದನು. ಆದರೆ ಈಗ ಕ್ಯಾತೇಗೌಡ ಮಾತು ತಪ್ಪಿ ಹದಿನೈದು ವರ್ಷಗಳ ಭೋಗ್ಯವನ್ನು ಮಾತಾಡಿತ್ತೆಂದು ಮಾದ ಹೊನ್ನೇಗೌಡರ ಬಳಿ ದೂರನ್ನು ಹೇಳಿಕೊಂಡಿದ್ದನು. ಹೊನ್ನೇಗೌಡರು ಸಹ ಜಮೀನಿಗೆ ಎತ್ತು ಕಟ್ಟಲು ಸೂಚಿಸಿ ತಮ್ಮ ಎತ್ತುಗಳನ್ನೆ ಮಾದನಿಗೆ ನೀಡಿದ್ದರು. ಆದರೆ ಕ್ಯಾತೇಗೌಡನಿಗೆ ಹೊನ್ನೇಗೌಡರ ಎತ್ತುಗಳು ಮಾದನ ಜಮೀನಿನಲ್ಲಿ ದುಡಿಯುವುದು ಇಷ್ಟವಿರಲಿಲ್ಲ. ಅವನಿಗೆ ಮಾದನ ಜಾತಿ ಅಡ್ಡವಾಗಿತ್ತು. ಆದರೆ ಮಾರನೆಯ ದಿನ ತಾನು ಬರುವುದಕ್ಕೆ ಮೊದಲೇ ಕ್ಯಾತೇಗೌಡರ ಎತ್ತುಗಳು ಮಾದನ ಜಮೀನಿನಲ್ಲಿ ದುಡಿಯುತ್ತಿದ್ದದ್ದು ಮಾದನ ಕೋಪಕ್ಕೆ ಕಾರಣವಾಯಿತು. ಕೇಳಲು ಹೋದರೆ ಕ್ಯಾತೇಗೌಡ ಮತ್ತವನ ಮಗ ನಂಜುಂಡ ಇವನ ವಿರುದ್ಧ ಜಗಳಕ್ಕೆ ನಿಂತರು. ಹೀಗೆ ಒಟ್ಟಾರೆ ನೆಲ್ಲೂರಿನ ದಲಿತರ ಬದುಕು ಇತರೆಡೆಗಳಲ್ಲಿ ದಲಿತರ ಬದುಕಿನ ವಾಸ್ತವತೆಯನ್ನೆ ತೆರೆದಿಡುತ್ತದೆ. ದಲಿತರನ್ನು ಶೋಷಿಸುತ್ತಿರುವುದು ಬ್ರಾಹ್ಮಣವರ್ಗವೆಂದು ಚಿತ್ರಿಸುವ ಕನ್ನಡ ಸಾಹಿತ್ಯ ಈ ದಲಿತರ ಆರ್ಥಿಕ, ಸಾಮಾಜಿಕ ಶೋಷಣೆಗೆ ಮೂಲ ಕಾರಣ ಜಮೀನ್ದಾರರು ಎನ್ನುವ ಶ್ರಮಭಾಷೆಯ ಧೋರಣೆಗಳನ್ನು ವ್ಯಕ್ತಪಡಿಸುವುದು ಕಡಿಮೆ. ಹಾಗೊಂದು ವೇಳೆ ಶ್ರಮಸಂಸ್ಕೃತಿ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯವನ್ನು ಅವಲೋಕಿಸಿದರೆ ದಲಿತರ ಸಮಕಾಲೀನ ಪರಿಸ್ಥಿತಿಗೆ ಮೂಲ ಕಾರಣ ಜಮೀನ್ದಾರರ ಶೋಷಣೆಯೆನ್ನುವ ಸಾಮಾನ್ಯ ಅರಿವು ನಮಗುಂಟಾಗುತ್ತದೆ. ಪೌರೋಹಿತ್ಯ ವರ್ಗದ ವಿರುದ್ಧ ದಲಿತರನ್ನು ಎತ್ತಿಕಟ್ಟುವ ಬದಲು ಜಮೀನ್ದಾರರ ಶ್ರಮಭಂಜಕ ನಡವಳಿಕೆಯ ವಿರುದ್ಧ ಮಾತನಾಡಬೇಕಾದ ಪರಿಸ್ಥಿತಿ ಇಂದು ತಲೆದೋರಿದೆ. ಈ ಮಾತುಗಳಿಗೆ ಉದಾಹರಣೆಯಾಗಿ ನೆಲ್ಲೂರಿನ ಚಿತ್ರಣ ಕಂಡುಬರುತ್ತದೆ ಎನ್ನಬಹುದಾಗಿದೆ. ಸತ್ತವನ ಸುಳಿಯಲ್ಲಿ ಕತೆಯಲ್ಲಿ ಬರುವ ಹೊಲೆಯರ ರಾಚನ ಹಿನ್ನೆಲೆಯಲ್ಲಿ ಜಮೀನ್ದಾರರು ಹಾಗೂ ಹೊಲೆಯರ ಸಂಬಂಧ ಚಿಕ್ಕಂದಿನಿಂದ ದೊಡ್ಡವರತನಕ ಹೇಗೆ ಬೆಳೆದುಬರುತ್ತದೆ ಎನ್ನುವುದನ್ನು ತಿಳಿಸುತ್ತದೆ. ಹುಟ್ಟುತ್ತಾ ಅಣ್ಣತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಎನ್ನುವ ರೀತಿಯಲ್ಲಿ ಚಿಕ್ಕಂದಿನಲ್ಲಿ ಸ್ನೇಹಿತರು, ಬೆಳೆದ ಮೇಲೆ ಜಾತಿವಂತರು ಎನ್ನುವಂತಹ ಪರಿಸ್ಥಿತಿಯನ್ನು ದ್ಯಾವೇಗೌಡರ ಹಿನ್ನೆಲೆಯಲ್ಲಿ ರಾಚ ಈ ರೀತಿಯಲ್ಲಿ ವಿವರಿಸುತ್ತಾನೆ. ದೈಹಿಕ ಕೊಳಕಿಗಿಂತ ಮಾನಸಿಕ ಕೊಳಕು ದೊಡ್ಡದು. ಜಾತಿಯಿಂದ ಕೀಳಾಗಿದ್ದರೂ ರಾಚ ಗುಣದಲ್ಲಿ ದ್ಯಾವಪ್ಪನಿಗಿಂತಲೂ ಮೇಲು ಎನ್ನುವುದನ್ನು ಲೇಖಕರು ಇಲ್ಲಿ ಸ್ಪಷ್ಟವಾಗಿ ಚಿತ್ರಿಸುತ್ತಾರೆ. ಜಾತಿ ಮೇಲಾಗಿರುವುದಕ್ಕಿಂತಲೂ ಗುಣ ಮೇಲಾಗಿರಬೇಕು ಎನ್ನುವುದನ್ನು ಲೇಖಕರು ಮುಖ್ಯವಾಗಿ ಗುರುತಿಸುತ್ತಾರೆ.
ಕೆ. ಪಿ. ಪೂರ್ಣಚಂದ್ರ ತೇಜಸ್ವಿಯವರ ಕತೆಗಳಲ್ಲಿ ಸ್ತ್ರೀ ಸಂವೇದನೆ
75 to 82
ಪೂರ್ಣಚಂದ್ರ ತೇಜಸ್ವಿಯವರು ಕನ್ನಡಕ್ಕೆ ಬಹು ಅಪರೂಪದ ಸಾಹಿತಿ. ಅವರ ಕೃತಿಗಳೆಲ್ಲವು ಪ್ರಯೋಗಾತ್ಮಕವಾಗಿಯೇ ಕಾಣಿಸಿಕೋಳ್ಳುತ್ತವೆ. ಮೇಲ್ನೋಟಕ್ಕೆ ಇವರ ಕತೆಗಳ ದಾಟಿ ಸರಳ ಎನಿಸಿದರೂ ಮನುಷ್ಯನ ಅಸ್ತಿತ್ವ ಹಾಗೂ ಸಕಲ ಜೀವರಾಶಿಗಳ ದುರಂತ ಬದುಕುಗಳ ಮೇಲೆ ಬೆಳಕನ್ನು ಚೆಲ್ಲುತ್ತವೆ. ಮುಖ್ಯವಾಗಿ ಗ್ರಾಮೀಣ ಜನರ ಬದುಕಿನ ರೀತಿ-ನೀತಿ ಕಾಣಿಸುವಲ್ಲಿರುವ ಅನನ್ಯತೆ, ಕುತೂಹಲವೂ ಆದ ನಿರೂಪಣ ವಿಧಾನ, ಕಿರಿಯದರಲ್ಲೇ ಬದುಕಿನ ಮಹದರ್ಥಗಳನ್ನು ನಿರೂಪಿಸುವ ಕೌಶಲ್ಯ ಇವರ ಕತೆಗಳಲ್ಲಿ ಕಂಡುಬರುತ್ತದೆ. ತೇಜಸ್ವಿಯವರು ತಮ್ಮ ಸಮಕಾಲಿನ ಲೇಖಕರಿಗಿಂತ ಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ. ಇವರ ಸಾಹಿತ್ಯ ಕಡಲೊಳಗಿರುವ ವೈವಿದ್ಯಮಯ ಜೀವರಾಶಿಯಷ್ಟೇ ಅಮೂಲ್ಯ ಮತ್ತು ಅನನ್ಯ. ಅದರಲ್ಲು ನಿಸರ್ಗ ಮೈಚಾಚಿರುವ ರೀತಿ ಓದಿಯೇ ಸುಖಿಸುವಂಥದ್ದು. ಇನ್ನು ಮಹಿಳಾ ಪಾತ್ರಗಳ ವಿಚಾರಕ್ಕೆ ಬಂದರಂತೂ ಇವರ ತಾತ್ವಿಕತೆ ಮತ್ತು ವರ್ತಮಾನಕ್ಕೆ ಸ್ಪಂದಿಸುವ ಗುಣ ಈ ಮುಖೇನ ಕಟ್ಟಿಕೊಳ್ಳುವಂತದ್ದು. ಹುಲಿಯೂರಿನ ಸರಹದ್ದು, ಅಬಚೂರಿನ ಫೋಸ್ಟಾಫೀಸು, ಕಿರಗೂರಿನ ಗಯ್ಯಾಳಿಗಳು ಕಥಾ ಸಂಕಲನಗಳು ಮುಖ್ಯವಾಗಿ ಗ್ರಾಮೀಣ ಬದುಕಿನ ಜೀವನ ಶೈಲಿಯನ್ನು ಅನಾವರಣಗೊಳಿಸುತ್ತವೆ. ಕಿರಗೂರಿನ ಗಯ್ಯಾಳಿಗಳು ಕಥಾಸಂಕಲನವನ್ನು ಆತ್ಮಗೌರವಕ್ಕಾಗಿ ಅವಿರತ ಹೋರಾಡುತ್ತಿರುವ ಮಹಿಳೆಯರಿಗೆ ಅರ್ಪಿಸಿದ್ದಾರೆ. ಈ ಕಥೆಗಳೆಲ್ಲವು ನಿಸರ್ಗ ಮತ್ತು ಗ್ರಾಮೀಣ ಹಿನ್ನೆಲೆಯಲ್ಲಿ ಅರಳಿದವುಗಳಾದ್ದರಿಂದ ಗ್ರಾಮೀಣ ಭಾಗದ ಅಧಿಕಾರ ಕೇಂದ್ರವಾದ ಗೌಡಿಕೆಯ ಮತ್ತು ಜಾತಿ-ವೃತ್ತಿ ಆಧಾರಿತ ವ್ಯವಸ್ಥೆಗಳೇ ಇವರ ಕತೆಗಳ ಜೀವಾಳವಾಗಿದೆ. ಇಲ್ಲಿನ ಕತೆಗಳಲ್ಲಿ ಕಾಣುವ ಮಹಿಳಾ ಪಾತ್ರಗಳು ವಾಸ್ತವಕ್ಕೆ ಹತ್ತಿರವಾಗಿವೆ. ಸ್ತ್ರೀವಾದವನ್ನು ಹೊರಗಿನಿಂದ ತಂದು ತುರುಕುವ ಕೆಲಸವಾಗಿಲ್ಲ . ತೇಜಸ್ವಿಯವರು ನಾಡು ಬಿಟ್ಟು ಕಾಡಿನತ್ತ ಮುಖ ಮಾಟಿದ್ದರಿಂದ ತಾವು ಕಂಡುಂಡ ಗ್ರಾಮೀಣ ಭಾರತವನ್ನು ಅದರ ಶಕ್ತಿ - ದೌರ್ಬಲ್ಯಗಳೊಟ್ಟಿಗೆ ಚಿತ್ರಿಸುವ ಕೆಲಸ ಮಾಡಿದ್ದರೆ. ಪುರುಷ ಪಾತ್ರಗಳ ನೆರಳಾಗಿ ಬರುವ ಇವರು ಪರೋಕ್ಷವಾಗಿ ಪುರುಷರಿಂದ ಶೋಷಣೆಗೆ ಒಳಗಾದ ಸ್ತ್ರೀಪಾತ್ರಗಳೇ ಹೆಚ್ಚು. ಇವೆಲ್ಲವು ಕೂಡ ಸಂಸ್ಕೃತಿ ಮತ್ತು ಜೀವನ ವಿಧಾನದ ಹಂತಗಳಲ್ಲೇ ನಿರ್ಣಯಿತ ವಾದವುಗಳಾಗಿವೆ. ವಾಸ್ತವವಾಗಿ ಮಹಿಳಾ ಜಗತ್ತು ಎಂದಿಗೂ ಪುರುಷರ ಪಾಲಿಗೆ ವಿಸ್ಮಯ ಮತ್ತು ನಿಗೂಢ-ಪ್ರಕೃತಿಯಂತೆ! ಹಾಗಾಗಿ ತೇಜಸ್ವಿಯವರ ಕತೆಗಳಲ್ಲಿ ಕಾಣಸಿಗುವ ಮಹಿಳಾ ಸ್ವರಗಳು ತನ್ನ ಸಹಜ ಸತ್ಯಗಳಿಂದ ಕಂಗೊಳಿಸುತ್ತದೆ; ವರ್ತಮಾನವನ್ನು ಪ್ರತಿಪಲಿಸುತ್ತದೆ.
Behavioral Change Study of Catla-Catla During Exposure of Mercury & Zinc
83 to 90
The present study of small change in fish behavior in $0.03~mg/L$ mercury may be the avoidance behavior of the animal to metal. Fish exposed to concentrations of metal do not reach the stage of exhaustion, rather they accommodate and adapt to the stressor. Increase in swimming activity with increased breathing rate, lethargic condition and loss of equilibrium in Catla Catla exposed to mercury (0.06 and 0.12 $mg/L$ and zinc (3.0 and $7.0~mg/L)$ are attributed probably to the disturbances in the metabolic reactions resulting in the depletion of energy. It is possible that animals which have higher metabolic activity could require higher levels of oxygen and thus would have a higher respiration or breathing rate. The lowest treatment of mercury $(0.03~mg/L)$ caused little change in fish behavior, which may be the avoidance behavior of animals to pollutants in the receiving water. A significant response to 0.06 mg $Cu/l$ was noted: the swimming activity and breathing rate of the fish increased. In the highest treatment $(0.12~mg~cu/l)$ fish became lethargic and lost equilibrium. Zinc, at the lowest treatment $(0.5~mg/L)$, did not cause any visible change in fish behavior. However, in 3.0 mg an/l, the fish tended to swim faster and showed an increased breathing rate. In the highest treatment of zinc (7.0 mg $Zn/L$), the fish showed a lethargic response and lost equilibrium (Table 2). It is evident from the observed behavioral changes in Catla Catla that both heavy metals have the same pattern of effects.
Importance of the Women Empowerment in Karnataka (Kabbaliga Community)
91 to 97
Empowerment of women is essentially the process of up lieutenant of economic, social and political status of women, the traditionally underprivileged ones, in the society. It is the process of guarding them against all forms of violence. Women empowerment involves the building up of a society, a political environment, wherein women can breathe without the fear of oppression, exploitation, apprehension, discrimination and the general feeling of persecution which goes with being a woman in a traditionally male dominated structure. Women constitute almost 50% of the world's population but India has shown disproportionate sex ratio whereby female's population has been comparatively lower than males. As far as their social status is concerned, they are not treated as equal to men in all the places. In the Western societies, the women have got equal right and status with men in all walks of life. But gender disabilities and discriminations are found in India even today. Thus this paper will focus on the place of women in the society of Karnataka
The Theology of Henry David Thoreau
98 to 103
Henry David Thoreau (1817-1862), a representative of the American Transcendentalist, took to new paths in his exploration of individual and cosmic consciousness. It is quite interesting to see that 'Transcendentalism' was always linked with the 'Context'. This context is always understood by their rebellion against the contemporary situation. The act of insurgence makes them different from others. In attempting to define the transcendentalism, it can be said that transcendentalists belonged to a particular generation who did attempt to redefine a few terms like religion and spirituality in a new way; in a new light. The period of transcendentalism was also marked by experimentation and logical thinking. It emerged as a voice against the conservative institutions. Thoreau was also greatly influenced by the wisdom of Indian philosophy. This article will interpret Thoreau's works and bring to light its mystical and spiritual elements.
Book Review
ರಕ್ತತರ್ಪಣ ತೊಟ್ಟ ಸ್ವಾತಂತ್ರ್ಯ ಹೂರಣ
104 to 110
ಸಾಹಿತ್ಯವು ನಿಂತ ನೀರಲ್ಲ ಅದು ಯಾವಾಗಲೂ ಹರಿಯುವ ನದಿ ಇದ್ದಂತೆ, ಬದಲಾವಣೆ ಎನ್ನವುದು ಸಾಹಿತ್ಯದ ಒಂದು ವಿಶಿಷ್ಟ ಗುಣ ಲಕ್ಷಣವಾಗಿದೆ. ಸಾಹಿತ್ಯವು ಆರಂಭದಿಂದ ಇಂದಿನವರೆಗೆ ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಎಂದು ವಿಂಗಡಣೆಗೊಂಡು ಸಾಹಿತ್ಯವು ಆಯಾ ಕಾಲಘಟ್ಟದ ನಿಲುವುಗಳಿಗೆ ಹೊಂದಿಕೊಂಡು ಸಾಹಿತ್ಯವು ವಿಪುಲವಾಗಿಯೇ ರಚನೆಗೊಂಡಿದೆ. ಅದರಲ್ಲಿ ಪ್ರಮುಖವಾಗಿ 'ಪ್ರಗತಿಶೀಲ' ಪಂಥದ ಲೇಖಕರು ಸಮಾಜದಲ್ಲಿ ತುಂಬಿರುವ ಕೊಳೆಯನ್ನು ತೊಳೆದು ಸ್ವಚ್ಛಗೊಳಿಸಬೇಕೆಂಬ ಮಹಾದಾಶೆಯನ್ನು ಹೊಂದಿದ್ದರು. ನವೋದಯ ಸಾಹಿತ್ಯ ಘಟ್ಟದ ಪೂರ್ವಾರ್ಧ ಪರಂಪರೆಯು ಯಾವುದನ್ನು ಮುಟ್ಟದೆ ಮಡಿವಂತಿಕೆಯ ಸೋಗಿನಲ್ಲಿ ಗೌಪ್ಯವಾಗಿರಿಸಿತೋ ಅದನ್ನೆ ತಮ್ಮ ಕೃತಿಗೆ ವಸ್ತುವನ್ನಾಗಿಸಿಕೊಂಡು ಸಾಹಿತ್ಯ ರಚನೆ ಮಾಡಿದ ಕೀರ್ತಿ 'ಪ್ರಗತಿಶೀಲ' ಪಂಥದ ಲೇಖಕರಿಗೆ ಸಲ್ಲುತ್ತದೆ. ತಮ್ಮ ಮೊನಚಾದ ಬರಹದಿಂದ ಸಮಾಜದಲ್ಲಿ ನಡೆಯುತ್ತಿದ್ದ ಅಪರಾಧಗಳನ್ನು ಬೆತ್ತಲು ಮಾಡಿದರು. ಅಂತವರಲ್ಲಿ ನವೋದಯ ಕಾಲಘಟ್ಟದ ಕೆಲವು ಲೇಖಕರು ಹಾಗೂ ಪ್ರಗತಿಶೀಲ ಪರಂಪರೆಯ ಅ.ನ.ಕೃ, ನಿರಂಜನ, ಬಸವರಾಜ ಕಟ್ಟಿಮನಿ, ತ.ರಾ.ಸು ಮತ್ತು ಚದುರಂಗ ಮುಂತಾದವರು ಪ್ರಮುಖರಾದವರು. ಪ್ರಸ್ತುತ ಲೇಖನದಲ್ಲಿ ರಚನೆಗಾಗಿ ಆಯ್ದುಕೊಂಡಿರುವ ಪ್ರಗತಿಶೀಲ ಕಾಲದ ತ.ರಾ.ಸು ಪ್ರಮುಖರು. ಸ್ವಾತಂತ್ರ್ಯದ ವಸ್ತುವನ್ನು ತಮ್ಮ ಕಾದಂಬರಿಗೆ ಆಯ್ದುಕೊಂಡಿದ್ದಾರೆ. ಕಾದಂಬರಿಯಲ್ಲಿ ಒಂದು ಗ್ರಾಮದಲ್ಲಿ ಸ್ವಾತಂತ್ರ್ಯದ ಪರಿಕಲ್ಪನೆಯು ಕಾಣಿಸಿಕೊಳ್ಳುತ್ತದೆ. ಯುವಕನ ಮುಖಾಂತರ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಚಿತ್ರಣವು ಕಾದಂಬರಿಯಲ್ಲಿ ಕಂಡು ಬರುತ್ತದೆ. ತ.ರಾ.ಸು. ಚಿತ್ರಿಸಿರುವ ಹಳ್ಳಿ ಅಲ್ಲಿಯ ಸಮಾಜ ಇದು ಯಾವ ಕಲ್ಪನೆಯು ಅಲ್ಲ. ಆಗಸ್ಟ್ ಕ್ರಾಂತಿಯ ಕಾಲಕ್ಕೆ ವಾಸ್ತವವಾಗಿ ಕಂಡ ಒಂದು ಗ್ರಾಮದ ಚಿತ್ರಣ.
ಗೊರೂರರ ಬೂತಯ್ಯನ ಮಗ ಅಯ್ಯು: ಪ್ರಸ್ತುತತೆ
111 to 119
ಸಾಹಿತ್ಯ ಪ್ರಕಾರಗಳಲ್ಲಿ ಸಣ್ಣ ಕಥೆ ಜನಪ್ರಿಯ ಸಾಹಿತ್ಯ ಪ್ರಕಾರ. ಈ ಮಾತು ಕನ್ನಡ ಸಾಹಿತ್ಯಕ್ಕೆ ಮಾತ್ರ ಸೀಮಿತವಾಗದೇ ಪ್ರಪಂಚದ ಯಾವುದೇ ಭಾಷೆಯ ಸಾಹಿತ್ಯಕ್ಕೂ ಈ ಮಾತು ಅಕ್ಷರಶಃ ಅನ್ವಯಿಸುತ್ತದೆ. ಕನಿಷ್ಠ 130 ವರ್ಷಗಳ ಇತಿಹಾಸವಿರುವ ಹೊಸಗನ್ನಡ ಕಥಾ ಸಾಹಿತ್ಯದಲ್ಲಿ ಓದಲೇಬೇಕಾದ ಕಥೆಗಳ ಪೈಕಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ರವರ 'ಬೂತಯ್ಯನ ಮಗ ಅಯ್ಯು' ಕಥೆಯೂ ಒಂದು. ಸಾಹಿತ್ಯದ ವಿದ್ಯಾರ್ಥಿಗಳು ಕಡ್ಡಾಯವಾಗಿ ಓದಲೇಬೇಕಾದ ಕಥೆ ಇದು. ಪ್ರತಿಯೊಬ್ಬ ಕನ್ನಡಿಗನೂ ವರ್ಷಕ್ಕೆ ಒಂದು ಬಾರಿಯಾದರೂ ಓದಲೇಬೇಕಾದ ಕಥೆ ಇದು. ಈ ಕಥೆಯಲ್ಲಿ ನೂರು ವರ್ಷಗಳ ಹಿಂದಿನ ಗ್ರಾಮ ಭಾರತದ ಚಿತ್ರಣವನ್ನು ಕಾಣಬಹುದು. ಕನ್ನಡ ಕಥನ ಸಾಹಿತ್ಯವು ಭಾಗಶಃ ಗ್ರಾಮೀಣ ಬದುಕನ್ನು ಅನುಲಕ್ಷಿಸಿ. ರಚನೆಯಾಗಿದ್ದರೂ ಸಹ, ಗ್ರಾಮೀಣ ಬದುಕನ್ನು ಅನುಲಕ್ಷಿಸಿ ಕಥಾ ಸಾಹಿತ್ಯ ರಚನೆ ಮಾಡಿದವರಲ್ಲಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ರವರು, ಡಾ. ಬೆಸಗರಹಳ್ಳಿ ರಾಮಣ್ಣ, ಕುವೆಂಪು, ವಿಭಿನ್ನರಾಗಿ ನಿಲ್ಲುತ್ತಾರೆ. ಪ್ರಸ್ತುತ 'ಬೂತಯ್ಯನ ಮಗ ಅಯ್ಯು' ಕಥೆಯಲ್ಲಿ ಜೀತಗಾರನೊಬ್ಬ ಜಮೀನುದಾರರಿಗೆ ಎದುರಾಗಿ ನಿಲ್ಲುವ ಚಿತ್ರಣವನ್ನು ಕಾಣಬಹುದು. ಪ್ರಕೃತಿ ಹಾಗೂ ಮಾನವ ಜಗತ್ತಿನಲ್ಲಿ ಒಂದು ಬಗೆಯ ಕೋಲಾಹಲ ಉಂಟಾಗಿ ಕಡೆಗೆ ಶಾಂತಿಯುಂಟಾಗುವ ಅನುಭವವನ್ನು ಕಥೆ ತಂದುಕೊಡುತ್ತದೆ. ನವೋದಯದ ಇತರ ಕಥೆಗಳಿಗೆ ಹೋಲಿಸಿದರೆ ಗಾತ್ರ, ಪಾತ್ರ, ಸಂಘರ್ಷದ ನೆಲೆಯಲ್ಲಿ ಈ ಕಥೆ ವಿಶಿಷ್ಟವೆನಿಸುತ್ತದೆ. ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಜಮೀನ್ದಾರರನ್ನು ಕುರಿತು ಜನರಲ್ಲಿ ಋಣಾತ್ಮಕ ಭಾವನೆಗಳಿದ್ದವು. ಜಮೀನ್ದಾರರೆಲ್ಲ ಕೆಟ್ಟವರೆಲ್ಲ, ಅವರಲ್ಲೂ ಒಳ್ಳೆಯ ವ್ಯಕ್ತಿತ್ವದ ಜಮೀನ್ದಾರರುಗಳಿರುತ್ತಾರೆ ಎಂಬ ವಿಚಾರವನ್ನು ಅಯ್ಯುವಿನ ಪಾತ್ರದ ಮೂಲಕ ಚಿತ್ರಿಸಿದ್ದಾರೆ. ಕಥೆಯ ಉತ್ತರಾರ್ಧವು ಅಯ್ಯುವಿನ ವ್ಯಕ್ತಿತ್ವದ ವಿಶ್ಲೇಷಣೆಗೆ ಮೀಸಲಾಗಿದೆ. ಸಿನಿಮಾದಲ್ಲಿ ಅಯ್ಯುವಿನ ಪಾತ್ರ ನಿರ್ವಹಿಸಿರುವು ಲೋಕೇಶ್ ಅವರ ಅಭಿನಯ ಮನೋಜ್ಞವಾಗಿದೆ.
ಉಂಡು ಉಪವಾಸಿ, ಬಳಸಿ ಬ್ರಹ್ಮಚಾರಿ-ಭರತೇಶ ವೈಭವ
120 to 126
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ನಾಯಕರನ್ನು ಉನ್ನತೀಕರಿಸಿದ ಕೃತಿಗಳು, ಪ್ರತಿ ನಾಯಕರನ್ನು ಉದಾತ್ತೀಕರಿಸಿದ ಸಾಹಿತ್ಯ ಕೃತಿಗಳಿಗೇನೂ ಕಡಿಮೆಯಿಲ್ಲದಂತೆ ಕಾಣುತ್ತೇವೆ. ಆದರೆ ಪ್ರತಿ ನಾಯಕನನ್ನು ನಾಯಕನನ್ನಾಗಿ ಚಿತ್ರಿಸಿದ ಕೃತಿ ಸಿಗುವುದಾದರೆ, ಇದೊಂದೇ ಎನ್ನುವಷ್ಟರ ಎತ್ತರಕ್ಕೆ ಭರತನನ್ನು ಎತ್ತರಿಸಿ ಸಾಹಿತ್ಯ ಕೃತಿಯನ್ನು ರಚಿಸಿದವರಲ್ಲಿ ರತ್ನಾಕರನೇ ಮೊದಲಿಗನಾಗುತ್ತಾನೆ. ಹಾಗೆಯೇ ಧರ್ಮವನ್ನು, ಕಾಲವನ್ನು, ಚಿಂತನೆಯನ್ನು, ಸಾಹಿತ್ಯ ರೂಪವನ್ನು, ಶೈಲಿಯನ್ನು ಹೊಸಬಗೆಯಲ್ಲಿ ನೋಡಿದ ಕೃತಿ ನಮಗೆ ದೊರಕುವುದು ಇದೊಂದೇ, ಭರತೇಶವೈಭವ.
ತಾಯಿ ಎಂಬ ಹೆಣ್ಣು
127 to 132
ಜಗತ್ತಿನಲ್ಲಿ ಬೆಲೆ ಕಟ್ಟಲಾಗದ ಮೌಲ್ಯ ಎಂದರೆ ಅದು 'ತಾಯಿ' ಎನ್ನುವ ಪದ ಮಾತ್ರ. ಈ ಕಥಾ ಭಾಗವು ಹೆಣ್ಣಿನ ಬಗೆಗೆ ನಾನಾ ವಿಚಾರಗಳನ್ನು ತಿಳಿಸಿಕೊಟ್ಟರು ಸಹ ಪ್ರಮುಖವಾಗಿ ಕಂಡದ್ದು ತಾಯಿಯ ವಾತ್ಸಲ್ಯ ಮತ್ತು ಪ್ರೀತಿಯ ಗುಣಗಳು. ಹೆಣ್ಣು ಜನಿಸಿದಾಗಿನಿಂದ ಅನೇಕ ಪಾತ್ರಗಳನ್ನು ನಿರ್ವಹಿಸುತ್ತಾಳೆ. ಅದರಲ್ಲಿ ಪ್ರಮುಖವಾದುದು ತಾಯಿಯ ಪಾತ್ರ. ಜಗತ್ತಿನ ಯಾವುದೇ ಸೃಷ್ಟಿ ಹೆಣ್ಣಿನಿಂದಲೇ ಆಗಬೇಕು ಎಂಬುದು ಮನವರಿಕೆಯಾಗುತ್ತದೆ. ತನ್ನ ಮಕ್ಕಳನ್ನು ತಾಯಿಯಾದವಳು ಸಂಕಷ್ಟದ ಸಮಯದಲ್ಲಿ ಪಾರು ಮಾಡುವಳು ಅದಕ್ಕಾಗಿ ತಾನು ಯಾವ ತ್ಯಾಗಕ್ಕೂ ಸಿದ್ಧರಿವಳು ಎಂಬುದಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ. ಈ ಕಥಾ ಭಾಗದಲ್ಲಿ ದೌರ್ಜನ್ಯ, ಶೋಷಣೆ, ಪುರುಷ ಪ್ರಧಾನ ವ್ಯವಸ್ಥೆಯ ಕರಾಳ ಮುಖಗಳು ಕಂಡು ಬಂದರೂ ಸಹ ಇದರ ನಡುವೆ ಮಮತೆಯ, ಪ್ರೀತಿಯ ಗುಣಗಳನ್ನು ಜಗತ್ತಿಗೆ ಸಾರಿದ ತಾಯೆಂಬ ಹೆಣ್ಣಿನ ಪಾತ್ರವು ಮುಖ್ಯವಾಗಿ ಕಾಣಬರುತ್ತದೆ. ಗಂಡನಾದವನು ತನ್ನನ್ನು ದೂರ ತಳ್ಳಿದಾಗಲು ತನ್ನ ಮಕ್ಕಳಿಗಾಗಿ ತಾನು ಆದರ್ಶ ತಾಯಿಯಾಗಿ ನಿಲ್ಲಲು ಪ್ರಯತ್ನಿಸುವ ಪ್ರಸಂಗ ಕಣ್ಯಟ್ಟುತ್ತದೆ. ಸಮಾಜದಲ್ಲಿ ಗಂಡಿನ ಪರವಾಗಿ ಎಲ್ಲಾ ವಿಚಾರಗಳನ್ನು ಬರೆದುಕೊಂಡಿರುವಾಗ ತನ್ನ ಮತ್ತು ತನ್ನ ಮಕ್ಕಳ ಪರವಾಗಿ ನಿಲ್ಲುವ ಶಕ್ತಿ ತಾಯಿ ಮಾತ್ರ ಎಂಬುದನ್ನು ತಿಳಿಸಿಕೊಡುತ್ತದೆ. ಕಥೆ ಸಣ್ಣದಾದರೂ ಸಹ ಇಡೀ ಜಗತ್ತನ್ನು ಸೃಷ್ಟಿಸಿ, ನಿರ್ಮಿಸಿ ಅದನ್ನು ಪೋಷಿಸುತ್ತಿರುವ ತಾಯಿಯ ತ್ಯಾಗ, ಪ್ರೀತಿ, ವಾತ್ಸಲ್ಯ, ಮಮತೆಯ ಬಗೆಗೆ ಒಂದು ಹೊಸ ಸಂದೇಶವನ್ನು ಈ ಕಥಾ ಭಾಗ ನಿರೂಪಿಸುತ್ತದೆ.
Essay
ಭಾಷಾ ಕಲಿಕೆ ಮತ್ತು ಬೋಧನೆಯ ಮನೋವೈಜ್ಞಾನಿಕ ನಿಯಮಗಳು
133 to 142
ಭಾಷೆಯನ್ನು ಬೆಳಕು, ಜ್ಯೋತಿ ಎನ್ನುತ್ತಾರೆ. ಅಲ್ಲಮನು ತನ್ನ ವಚನವೊಂದರಲ್ಲಿ ಮಾತೆಂಬುದು ಜ್ಯೋತಿರ್‌ಲಿಂಗ" ಎಂದಿದ್ದಾರೆ. ಭಾಷೆ ಇಲ್ಲದಿದ್ದರೆ ನಮ್ಮ ಜೀವನ ಕತ್ತಲಲ್ಲಿ ತುಂಬಿರುತ್ತಿತ್ತು. ಆದ್ದರಿಂದಲೇ ದಂಡಿ ಎಂಬ ದಾರ್ಶನಿಕ ಭಾಷೆ ಇಲ್ಲದಿದ್ದರೆ ಜಗತ್ತೇ ಕತ್ತಲೆಯಿಂದ ತುಂಬಿರುತ್ತಿತ್ತೆಂದು ಹೇಳಿದ್ದಾನೆ. ಮನುಷ್ಯನ ವ್ಯವಹಾರ ಆಲೋಚನೆ, ಭಾವನೆಗಳ ಅಭಿವ್ಯಕ್ತಿ-ಇವೆಲ್ಲವೂ ಸಾಧ್ಯವಾಗಿರುವುದು ಭಾಷೆಯಲ್ಲಿ, ಭಾಷೆಯು ಅಭಿವ್ಯಕ್ತಿಯ ಒಂದು ಶಸಕ್ತವಾದ ಶಾಚ್ಛಿಕ ಮಾಧ್ಯಮ. ಮನುಷ್ಯರು ತಮ್ಮ ಬುದ್ಧಿಶಕ್ತಿಯಿಂದ ಭಾಷೆಯನ್ನು ರೂಢಿಸಿಕೊಂಡಿದ್ದಾರೆ. ಭಾಷೆ ಎಂಬುದು ನಿಸರ್ಗದತ್ತವಾದ, ಸಹಜವಾದ ಸ್ವಾಭಾವಿಕ ಕ್ರಿಯೆಯಲ್ಲ. ಒಂದು ನಿರ್ದಿಷ್ಟವಾದ ಪರಿಸರದಲ್ಲಿ ಬಾಲ್ಯದಿಂದ ಕಲಿಯುವುದರಿಂದ ಭಾಷೆ ಬರುತದೆಯೇ ಹೊರತು, ಹುಟ್ಟಿ ನೋಡನೆ ಬರುವುದಿಲ್ಲ. ಭಾಷೆಯು ವ್ಯಕ್ತಿ, ಕುಟುಂಬ, ಸಮುದಾಯ, ಸಮಾಜ ಅಥವಾ ನಿರ್ದಿಷ್ಟ ಪ್ರದೇಶಗಳಲ್ಲಿ, ನಿರ್ದಿಷ್ಟ ಪರಿಸರದಲ್ಲಿ ಪರಸ್ಪರ ಒಪ್ಪಿಗೆ ಮತ್ತು ರೂಢಿಯಿಂದ ಬಂದ ಒಂದು ವ್ಯವಸ್ಥೆಯಾಗಿದೆ.
ಕಳಚೂರಿ ಬಿಜ್ಜಳ
143 to 152
ಕನ್ನಡ ಸಾಹಿತ್ಯದ ಕಾಲಗತಿಯಲ್ಲಿ 12ನೇ ಶತಮಾನಕ್ಕೆ ಮಹತ್ವದ ಸ್ಥಾನವುಂಟು. ಈ ಕಾಲದ ಪೂರ್ವದ ಮಹತ್ವದ ಕವಿಗಳಾದ ಪಂಪ, ರನ್ನಾದಿಗಳು ಸಂಸ್ಕೃತಭೂಯಿಷ್ಠ ಮಾರ್ಗಗನ್ನಡದಲ್ಲಿ ತಮ್ಮ ಕಾವ್ಯಗಳನ್ನು ರಚಿಸಿದ್ದರು. ಅದು ಅಂದಿನ ಪರಿಸರದ ಪ್ರೇರಣೆ ಹಾಗೂ ಒತ್ತಡವೂ ಆಗಿರಬಹುದು. ಇದಾದ ಒಂದೆರಡು ಶತಮಾನಗಳಲ್ಲಿ ಕನ್ನಡದ ಮಾರ್ಗಕಾವ್ಯ, ದೇಸಿತನಕ್ಕೆ ತಿರುಗಿ, ಅಚ್ಚಗನ್ನಡದ ಸೊಗಸನ್ನು ಪಡೆದದ್ದು ಆಶ್ಚರ್ಯದ ಸಂಗತಿ. 'ವಚನಗಳು' ಎಂಬ ಪ್ರಕಾರವೊಂದು ಕನ್ನಡ ನೆಲದ ಮೂಲಕ ಹುಟ್ಟಿ ವಿಶ್ವಮಾನ್ಯವಾದುದು ಈಗ ಇತಿಹಾಸ. ಈ ವಚನಕ್ರಾಂತಿಯ ಕಾಲವು ಎರಡು ಕಾರಣಗಳಿಗೆ ಮಹತ್ವ ಪಡೆದುಕೊಂಡಿದೆ. 1. ವಚನ ವಾಹ್ಮಯ 2. ಸಾಮಾಜಿಕ ಆಂದೋಲನ ಮೊದಲನೆಯದು ಸಾಹಿತ್ಯಕ ದೃಷ್ಟಿಯಾದರೆ, ಎರಡನೆಯದು ಸಾಮಾಜಿಕ ದೃಷ್ಟಿ. 12ನೆಯ ಶತಮಾನದ ಈ ವಚನ ಕ್ರಾಂತಿಯ ಕಾಲವು ಸಾಮಾಜಿಕವಾಗಿ ಹಲವು ಸ್ಥಿತ್ಯಂತರಗಳಿಗೆ ಎಡೆ ಮಾಡಿಕೊಟ್ಟ ಕಾಲವಾಗಿದೆ. ಮುಖ್ಯವಾಗಿ ಬಸವಾದಿಗಳ ಹೊಸಕ್ರಾಂತ ದೃಷ್ಟಿಯ ವೀರಶೈವ ಧರ್ಮ ಆಗ ಮುನ್ನೆಲೆಗೆ ಬಂದು ಸಾಮಾಜಿಕ ಕ್ರಾಂತಿಗೆ ಕಾರಣವಾಯಿತು. ಈ ಅವಧಿಯಲ್ಲಿ ಈ ಬಸವಾದಿಗಳ ಕರ್ಮಕ್ಷೇತ್ರವಾಗಿದ್ದ ಕಲ್ಯಾಣವನ್ನು ಆಳುತ್ತಿದ್ದ ಅರಸು ಬಿಜ್ಜಳದೇವರಾಯ. ಇತಿಹಾಸ ಈತನ ಬಗ್ಗೆ ನೇತ್ಯಾತ್ಮಕ ದೃಷ್ಟಿಯಲ್ಲಿ ಹೆಚ್ಚಾಗಿ ಕಾಣಿಸಿದೆ. ಅಂದಿನ ವೀರಶೈವ ಕಾವ್ಯಗಳು ಕೂಡ ಈ ಬಗೆಗೆ ಸರಿಯಾದ ನ್ಯಾಯವನ್ನು ಒದಗಿಸಲಿಲ್ಲ. ಏಕಮುಖ ದೃಷ್ಟಿಯನ್ನು ಅವು ಬಿಂಬಿಸಿವೆ. ಇತಿಹಾಸ ಕೊರೆದಿಟ್ಟ ಗೆರೆಯಂತೆ ಎಂದೂ ಇರುವುದಿಲ್ಲ. ಅದನ್ನು ವಿಶದವಾಗಿ, ಸಾವಧಾನವಾಗಿ ಅಭ್ಯಸಿಸಿದರೆ ಮಾತ್ರ ಸತ್ಯ ದೊರೆತೀತು. ಈ ಸಂಶೋಧನಾ ಲೇಖನ ಕಳಚೂರಿ ಬಿಜ್ಜಳನ ಬಗೆಗೆ ನಿರಪೇಕ್ಷ ದೃಷ್ಟಿಯಿಂದ ನೋಡುವ ಪ್ರಯತ್ನವಾಗಿದೆ. ಸಾಹಿತ್ಯಪಠ್ಯಗಳು, ಐತಿಹಾಸಿಕ ಪರಿಕರಗಳು ಇದರ ಹಿನ್ನೆಲೆಗಿರುವುದು ಅಧ್ಯಯನಕ್ಕೆ ಸಮಗ್ರತೆ ಒದಗಿಸಿದೆ.
ಮಾದಿಗ ಜನಾಂಗದ ಮಾದಾರ ದೂಳಯ್ಯನ ಸಾಮಾಜಿಕ ಕಾಳಜಿ
153 to 157
12 ಶತಮಾನದಲ್ಲಿ ಮಾದಾರ ಚೆನ್ನಯ್ಯ ಚೋಳನ ಆಸ್ಥಾನದಲ್ಲಿ ಕುದುರೆಗಳಿಗೆ ಪ್ರತಿ ನಿತ್ಯ ಹುಲ್ಲನ್ನು ತರುವ ಕಾಯಕವನ್ನು ಮಾಡುತ್ತಿದ್ದನು. ಚೆನ್ನಯ್ಯನು ಶ್ರೇಷ್ಠವಾದ ಗುಪ್ತ ರೀತಿಯ ಶಿವಭಕ್ತಿ ಹೊಂದಿದ್ದು, ಇವನ ಭಕ್ತಿಯನ್ನು ಮೆಚ್ಚಿ, ಕೈಲಾಸದಲ್ಲಿನ ಶಿವನು ಚೆನ್ನಯ್ಯನ ಮನೆಗೆ ಬಂದು ಇಬ್ಬರು ಒಟ್ಟಿಗೆ ಕೂತುಕೊಂಡು ಶಿವ ಚೆನ್ನಯ್ಯನ ಮನೆಯ ಅಂಬಲಿ ರುಚಿಗೆ ಮಾರು ಹೋಗುತ್ತಾನೆ. ಇದಕ್ಕಿಂತ ಸವಿಯಾದ ರುಚಿ ಮತ್ತೆಲ್ಲೂ ಸೇವಿಸಿಲ್ಲವಲ್ಲ ಎಂದು ಕೊಳ್ಳುತ್ತಾನೆ. ಇಲ್ಲಿ ಶಿವನನ್ನೆ ಚೆನ್ನಯ್ಯನು ತನ್ನ ಮನೆ ಬಾಗಿಲಿಗೆ ಕರೆಸಿಕೊಂಡನು. 12ನೇ ಶತಮಾನದಲ್ಲಿ ಮಾದಾರ ದೂಳಯ್ಯನು ಒಬ್ಬ ಬ್ರಾಹ್ಮಣನಿಗೆ ಇದ್ದ ಕುಷ್ಠರೋಗವನ್ನ ಅವನ ಮನೆಯ ಬಚ್ಚಲು ನೀರು ಗುಣಪಡಿಸುತ್ತದೆ. ಅದೇ ರೀತಿ ಈ ವಿಷಯ ತಿಳಿದ ಇನ್ನಿತರೆ ಬ್ರಾಹ್ಮಣ ಕುಟುಂಬದವರು ಮಾದಾರ ದೂಳಯ್ಯನ ಬಚ್ಚಲು ನೀರನ್ನು ಮೈಮೇಲೆ ಹಾಕಿಸಿಕೊಂಡು ಅವರಿಗಿದ್ದ ಇತರೆ ಚರ್ಮಸಂಬಂಧ ರೋಗಗಳನ್ನು ದೂರ ಮಾಡಿಕೊಳ್ಳುತ್ತಾರೆ. ಆ ಮೂಲಕ ಮಾದಿಗ ಜನಾಂಗದ ಮಾದಾರ ದೂಳಯ್ಯನು ಅಂದಿನ ದಿನಗಳಲ್ಲಿ ಬರುತ್ತಿದ್ದ ರೋಗಗಳಿಗೆ ಮದ್ದು ನೀಡಿದ್ದಾನೆ. ಆ ಮೂಲಕ ಮುಂದಿನ ವಚನಕಾರರಿಗೆ ದಾರಿದೀಪವಾಗುತ್ತಾನೆ.
ಕನ್ನಡ ಸಾಹಿತ್ಯದಲ್ಲಿ ಭಾಷಾಂತರ
158 to 165
ಭಾಷಾಂತರ ಎಂಬುದು ಒಂದು ಭಾಷೆಯಲ್ಲಿನ ಮಾತು ಅಥವಾ ಬರವಣಿಗೆಯನ್ನು ಇನ್ನೊಂದು ಭಾಷೆಗೆ ಸಮಾನ ಅರ್ಥ ನೀಡುವಂತೆ ಪರಿವರ್ತಿಸುವ ಪ್ರಕ್ರಿಯೆ. ಒಟ್ಟಾರೆ ಭಾಷಾಂತರ ಮೂಲ ಸೃಷ್ಟಿಯ ಪುನರ್ ಸೃಷ್ಟಿ. ಅನುವಾದಕನ ಸೃಜನಶೀಲತೆಗೆ ಸವಾಲಾಗಿದೆ. ಹಳಗನ್ನಡ ಕವಿಗಳು ಸಂಸ್ಕೃತ ಮತ್ತು ಪ್ರಾಕೃತಗಳಿಂದ ವಸ್ತುವನ್ನು ಸ್ವೀಕರಿಸುತ್ತಿದ್ದರೆಂಬ ಕಾರಣದಿಂದ ಅವರ ಕೃತಿಗಳನ್ನು ಭಾಷಾಂತರ ಎನ್ನಬಹುದು. ಆದರೆ ನಿಜವಾದ ಅರ್ಥದಲ್ಲಿ ಪ್ರಾಚೀನ ಕನ್ನಡ ಕಾವ್ಯಗಳನ್ನು ಬರಿಯ ಭಾಷಾಂತರಗಳೆನ್ನದೆ ಸರಳಾನುವಾದದ ಸ್ವತಂತ್ರ ಕೃತಿಗಳೆಂದೇ ಪರಿಗಣಿಸಬಹುದಾಗಿದೆ. ಹೊಸಗನ್ನಡ ಕಾವ್ಯಗಳ ಭಾಷಾಂತರದಲ್ಲಿ ಪಾಶ್ಚಿಮಾತ್ಯರ ಕಾವ್ಯದ ಪ್ರಭಾವ ಹೆಚ್ಚಾಗಿದೆ. ಉಳಿದ ಸಾಹಿತ್ಯ ಪ್ರಕಾರಗಳೂ ಸಹ ಭಾರತೀಯ ಮತ್ತು ಪಾಶ್ಚಾತ್ಯ ಸಂಸ್ಕೃತಿಗಳ ಪರಸ್ಪರ ಪ್ರಭಾವ ಪಡೆದಿವೆ.
ಕಲ್ಯಾಣ ಕರ್ನಾಟಕ ಜನಪದ ಸಾಹಿತ್ಯದ ಭಗೀರಥ ಡಾ. ಮಲ್ಲಿಕಾರ್ಜುನ ಲಠ್ಠೆ
166 to 175
ಸಮಾಜದಲ್ಲಿ ಘಟಿಸಿದ ಸತ್ಕಾರಗಳ 'ದಾಖಲೆ' ಸಮಾಜವನ್ನುದ್ಧರಿಸಿದ ಪುಣ್ಯಪುರುಷರ ಚರಿತ್ರೆಗಳು ಮುಂದಿನ ಪೀಳಿಗೆಗೆ ದಾರಿ ದೀಪವೂ ಹೌದು; ತೋರು ಬೆರಳೂ ಹೌದು. ಕಾರಣ ಇತ್ತೀಚಿನ ದಿನಗಳಲ್ಲಿ ಸಮಾಜವನ್ನು ಕಟ್ಟಿ ಬೆಳೆಸಿದ, ಸಮಾಜಕ್ಕಾಗಿ ದುಡಿದ ಮಹಾತ್ಮರ ಚರಿತ್ರೆಗಳನ್ನು ತಿಳಿದುಕೊಳ್ಳುವುದು ಅತಿ ಅವಶ್ಯಕವೆನಿಸುತ್ತದೆ. ಅದರಂತೆ ಕಲ್ಯಾಣ ಕರ್ನಾಟಕದ ಜನಪದ ಸಾಹಿತ್ಯವನ್ನು ಹಳ್ಳಿಹಳ್ಳಿಗೆ ಹೋಗಿ ಸಂಗ್ರಹ ಮಾಡಿ ಪ್ರಕಟಿಸುವ ಮೂಲಕ ನಮ್ಮ ನಾಡಿನ ಜನಪದ ಸಾಹಿತ್ಯವನ್ನು ಉಳಿಸಿ ಬೆಳೆಸಿದವರಲ್ಲಿ ಡಾ. ಎಮ್.ಎಸ್.ಲಠ್ಠೆ ಒಬ್ಬರು. ಸರಳ, ಸಜ್ಜನಿಕೆ, ಕರ್ತವ್ಯ ನಿಷ್ಠತೆಗೆ ಇನ್ನೊಂದು ಹೆಸರೇ ಡಾ. ಎಂ. ಎಸ್. ಲಠ್ಠೆ. ಅವರು ವಿದ್ಯಾರ್ಥಿಪ್ರೇಮಿ ಶಿಕ್ಷಕರಾಗಿ, ನೂರಾರು ಜನ ಸ್ನೇಹಿತರನ್ನು ಸಂಪಾದಿಸಿಕೊಂಡು ಸ್ನೇಹಜೀವಿಯಾಗಿ ಬದುಕಿದವರು. ಶರಣ ಸಾಹಿತ್ಯ ಮತ್ತು ಜನಪದ ಸಾಹಿತ್ಯದಲ್ಲಿ ಅಪಾರವಾದ ಕೆಲಸ ಮಾಡಿದವರು. ಅವರು ಬರೆದ, ಸಂಪಾದಿಸಿದ ಒಟ್ಟು ಕೃತಿಗಳ ಸಂಖ್ಯೆ ಒಂದು ನೂರು ದಾಟುತ್ತದೆ. ಕಲ್ಯಾಣ ಕರ್ನಾಟಕ ಜನಪದ ಸಾಹಿತ್ಯದ ಭಗೀರಥ ಡಾ. ಮಲ್ಲಿಕಾರ್ಜುನ ಲಠ್ಠೆ ಅವರ ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ ಎಂದೇ ಹೇಳಬಹುದು. ಅವರ ಪರಿಚಯ ಕುರಿತ ಲೇಖನ ಇದಾಗಿದೆ.