Published: 2025-05-15

Table of Contents

Table of Contents

I to VI

ವಚನ ಸಾಹಿತ್ಯದಲ್ಲಿ ಸಾಮಾಜಿಕ ಚಿಂತನೆಗಳು

ಶ್ರೀನಿವಾಸ ಎಸ್.ಜಿ.

01 to 10

ʼಕಾಯಕವೇ ಕೈಲಾಸʼ ವೆಂದು ಸಾರಿ, ಜನರಲ್ಲಿ ದುಡಿದು ತಿಂದು ಬದುಕುವ ಮಹತ್ವವನ್ನು ತಿಳಿಸಿದ್ದು ವಚನ ಸಾಹಿತ್ಯ. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಗಳಲ್ಲಿ ಸ್ತ್ರೀಯರಿಗೆ ಭಾಗವಹಿಸುವ ಸಮಾನ ಅವಕಾಶ ನೀಡುವ ಮೂಲಕ ಮಹಿಳಾ ಸ್ವಾತಂತ್ರ್ಯಕ್ಕೊಂದು ಅರ್ಥವನ್ನು ಕಲ್ಪಿಸಿದರು. ಕಲುಷಿತಗೊಂಡಿದ್ದ ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆಯನ್ನು ದಿಕ್ಕರಿಸಿ, ಘನ ಬದಲಾವಣೆಯನ್ನು ಗುರಿಯಿಟ್ಟು ನಡೆದ ದಾರ್ಶನಿಕ ಚಳುವಳಿ ವಚನ ಸಾಹಿತ್ಯ. ಸಾಮಾಜಿಕ ಬದಲಾವಣೆಗೆ ಹೊಸ ಭಾಷ್ಯ ಬರೆಯುವ ಮೂಲಕ ಉತ್ತಮ ಸಮಾಜ ವ್ಯವಸ್ಥೆಗೆ ನಿಜವಾದ ಅರ್ಥ ಕಲ್ಪಿಸಿ ಕೊಟ್ಟವರು. ಸಮಾಜದ ಕೀಳುಮಟ್ಟದ ಶೋಷಣೆಯಿಂದಾಗಿಯೇ ಸಮಾಜದಲ್ಲಿ ದುಡಿಯುವ ಮತ್ತು ಕೂತು ಉಣ್ಣುವ ವರ್ಗಗಳು ನಿರ್ಮಾಣವಾಗುವುದಕ್ಕೆ ಕಾರಣವಾಗಿರಬೇಕು, ಸಮಾಜದಲ್ಲಿ ಮೇಲ್ವರ್ಗವೆಂದು ಕರೆಸಿಕೊಂಡ ಜನರು ಸಮಾಜದ ಇತರರನ್ನು ಕೀಳಾಗಿ ಕಾಣುತ್ತಿದ್ದ ಸಂದರ್ಭಗಳು ಶರಣರು ತಮ್ಮ ಚಿಕಿತ್ಸಕ ದೃಷ್ಟಿಯಿಂದ ನೋಡಿದಾಗ ಸಾಮಾಜಿಕ ಅಸಮಾನತೆಯೆಂಬ ಸಾಮಾಜಿಕ ರೋಗಗಳಿಗೆ ಮದ್ದು ಅರೆದದುರ ಪರಿಣಾಮದಿಂದಲೇ ಅವರ ಮನಸ್ಸಿನ ವಿಚಾರಗಳೆಲ್ಲ ವಚನಗಳಾಗಿ ಮಾರ್ಪಟ್ಟವಾಗಿರಬೇಕು. ಅಂದಿನಿಂದಲೇ ಬಸವಣ್ಣನವರ ನೇತೃತ್ವದಲ್ಲಿ ಶರಣರು ಸಾಮಾಜಿಕ ಬದಲಾವಣೆಗೆ ಕ್ರಾಂತಿಕಾರಿ ಹೆಜ್ಜೆ ಇಟ್ಟರೆಂದು ಕಾಣಿಸುತ್ತದೆ. ಅವರ ವಚನಗಳ ಮೂಲಕ ಸಾಮಾಜಿಕ ವ್ಯವಸ್ಥೆಯ ಅಂಕುಡೊಂಕುಗಳನ್ನು ತಿದ್ದಿ, ಸಮ ಸಮಾಜ ವ್ಯವಸ್ಥೆಯನ್ನು ಸರಿಪಡಿಸುವ ಕಾಯಕಕ್ಕೆ ಮುಂದಾದರು. ಒಂದಷ್ಟು ಸಮಾಜ ವ್ಯವಸ್ಥೆಯನ್ನು ಬದಲಿಸಲು ಪಟ್ಟ ಪ್ರಯತ್ನ ಇಂದಿಗೂ ಮುಂದಿಗೂ ಮಾದರಿಯಾಗುವಂತಿದೆ. ಸಮಾಜದ ಬಗೆಗೆ ಅವರಿಗಿದ್ದ ಕಾಳಜಿಯಿಂದಾಗಿಯೇ ಸಮಾಜ ಬದಲಾಣೆ ಕಾಣಲು ಸಾಧ್ಯವಾಯಿತು. 
ಕಾಯಕ ಜೀವಿಗಳ ಹೋರಾಟವಾಗಿ ರೂಪುಗೊಂಡ ವಚನ ಚಳವಳಿಯಲ್ಲಿ ಮಹಿಳಾ ಸಮಾನತೆಯ ಆಶಯಗಳು ಸಹಜವಾಗಿಯೇ ಅಡಕವಾಗಿದ್ದವು. ಸಾಮಾಜಿಕ ಸಮಾನತೆ ಆಶಯವೇ ಪ್ರಮುಖವಾದ ವಚನ ಚಳವಳಿ ಮಹಿಳಾ ಸಮಾನತೆಯನ್ನು ಪ್ರತ್ಯೇಕಿಸಿ ನೋಡಲಿಲ್ಲ. ಕ್ರಾಂತಿಯೊಳಗಿನ ಕ್ರಾಂತಿ ಎಂಬಂತೆ ನಡೆಯಿತು. ಪರ್ಯಾಯ ಚಿಂತನೆ, ಪರ್ಯಾಯ ಸಂಸ್ಕೃತಿ ಅಶಯವೂ ಸೇರ್ಪಡೆಗೊಂಡಿತ್ತು, ಶ್ರಮಸಂಸ್ಕೃತಿ ರೂಪುಗೊಳ್ಳುವುದು ಹೆಣ್ಣಿನ ಶ್ರಮದಿಂದ ಎಂದು 12ನೇ ಶತಮಾತನದ ವಚನಕಾರ್ತಿಯರು ಪ್ರತಿಪಾದಿಸಿದ್ದರು. ಹೀಗಾಗಿ ವಚನ ಚಳವಳಿಯಲ್ಲಿ ಮಹಿಳಾ ಸಮಾನತೆ ಅಂತರ್ಗತವಾಗಿತ್ತು. ಹೀಗಾಗಿಯೇ ವಚನಗಳಲ್ಲಿ ಮಹಿಳಾ ಸಮಾನತೆಯ ಆಶಯ ಚಳವಳಿಯ ಜತೆಜತೆಗೇ ಸಾಗಿತು. ಅಗ್ರಹಾರ ಶ್ರೇಷ್ಠ ಎನ್ನುವ ಸಂದರ್ಭದಲ್ಲೇ ಕಾಯಕ ಶ್ರೇಷ್ಠ ಎನ್ನುವ ಸಾಮಾಜಿಕ ಸಮಾನತೆಯ ಆಶಯವನ್ನು ವಚನ ಚಳವಳಿ ಪ್ರಕಟಿಸಿತು ಅರಮನೆ, ದೇವಾಲಯ ಸಂಸ್ಕೃತಿಗಳನ್ನು ವಚನ ಚಳವಳಿ ವಿರೋಧಿಸಿತು. ದೇವರು, ಅರಮನೆ, ಧರ್ಮದ ಸಂಕೋಲೆಯಿಂದ ಬಿಡಿಸಿ ಅಸಮಾನತೆಯನ್ನು ಹೋಗಲಾಡಿಸಲು ಪ್ರಯತ್ನ ಮಾಡಿದರು. 
ಭಾರತೀಯ ಸಾಹಿತ್ಯದಲ್ಲಷ್ಟೇ ಅಲ್ಲದೆ ಜಾಗತಿಕ ಸಾಹಿತ್ಯದಲ್ಲಿ ವಚನಕಾರರ ಧ್ವನಿ ವಿಶಿಷ್ಟ ವಿಸ್ತರವಾದುದು ತಾವು ತುಳಿದು ಬಂದ ತಾತ್ವಿಕ ಪರಂಪರೆಯನ್ನೇ ವಿಮರ್ಶಿಸಿ ವಿರೋಧಿಸಿ ಹೊಸ ತಾತ್ವಿಕ ಪರಂಪರೆಯನ್ನು ನಿರ್ಮಿಸಲು/ಕಟ್ಟಲು ಯತ್ನಿಸಿದರು ʼನಾ ಭೂತೋ ನಾ ಭವಿಷ್ಯತಿʼ ಎನ್ನುವಂತಹ ಕ್ರಾಂತಿಕಾರಿ ಚಿಂತನಧಾರೆ ಒಂದನ್ನು ನಿರ್ಮಿಸಿಕೊಟ್ಟರು ʼಮರ್ತ್ಯ ಲೋಕವೆಂಬುದು ಕರ್ತಾರನ ಕಮ್ಮಟವಯ್ಯʼ ಎಂಬುದನ್ನು ಮಹಾಮಂಟಪ ಅನುಭವಮಂಟಪ ವಾಗಿಸಿಕೊಂಡವರು ಹಿಂದಿನ ಪರಂಪರೆಗಳು ʼಎಲ್ಲೂ ಸಲ್ಲದʼವರನ್ನಾಗಿಸಿದವರನ್ನು, ಇಲ್ಲಿಯೂ ಎಲ್ಲೆಲ್ಲಿಯೂ ಸಲ್ಲುವಂತೆ ಮಾಡಿದರು. ಅವರು ವಿಶ್ವ ಶಿವಶರಣ ದೊಳಗೆ ʼವಿಶ್ವಮಾನವʼರನ್ನಾಗಿ ರೂಪಿಸಿದರು ಸಮಸ್ತ ಜೀವ ರಾಶಿಯಲ್ಲೂ ದೈವಿಪ್ರಭೆ ಹುಡುಕಲು ಯತ್ನಿಸಿದ ಉಪನಿಷತ್ತುಗಳಲ್ಲಿನ ಬೋಧನೆಗಳು ಕಟ್ಟಕಡೆಯ ಮಾನವರನ್ನು ತಲುಪದೆ ಅವರು ತಿರಸ್ಕೃತರಾದದುಕ್ಕೆ ಕಾರಣವಾದ ತಂತು ಯಾವುದು? ಸಂಕುಚಿತ ಆಚಾರಗಳು ಕ್ಷುದ್ರ ಚಿಂತನೆಗಳು, ಧರ್ಮದ ಹೆಸರಲ್ಲಿ ಹೇಗೆ ನುಸುಳಿದವು? ಅರಮನೆಗಳು ಗುರುಮನೆಗಳಾಗದೆ ಉಳಿಯಲು ಕಾರಣವೇನು? ಧರ್ಮ ದಯೆ ಇಲ್ಲದಂತೆ ಆಗಲು ಕಾರಣವಾದ ಅಧರ್ಮದ ತಿರುಳಾವುದು? ಮುಂತಾದ ಮುಖ್ಯ ಪ್ರಶ್ನೆಗಳನ್ನು ಚಿಕಿತ್ಸಕ ದೃಷ್ಟಿಯಿಂದ ಎತ್ತಿದ್ದಷ್ಟೇ ಅಲ್ಲದೆ ಸಾಮಾಜಿಕ ಚಿಕಿತ್ಸೆಗಳನ್ನೂ ಮಾಡಲತ್ನಿಸಿದವರು ವಚನಕಾರರು ಇವರ ಸಾಮಾಜಿಕ ಚಿಂತನ ಕ್ರಮಗಳು ಅಗ್ರಗಣ್ಯವೆನಿಸಿವೆ. 
ವಚನ ಸಾಹಿತ್ಯದಲ್ಲಿ ಸಾಮಾಜಿಕ ಚಿಂತನೆಗಳು ಎಂಬ ಈ ಲೇಖನವನ್ನು ಈ ಕೆಳಗಿನ ಪ್ರಮುಖ ಮುಖ್ಯಾಂಶಗಳಲ್ಲಿ ವಿಸ್ತರಿಸಲಾಗಿದೆ. 

Read More »

ವಚನ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆ

ಕುಸುಮಾಂಜಲಿ ಎಲ್. ಸಿ. ಜಗದೀಶ್

11 to 18

ಇದರಲ್ಲಿ ವಚನ ಸಾಹಿತ್ಯ ಮತ್ತು ಸ್ತ್ರೀ ಸಂವೇದನೆಯ ಸಂಬಂದವನ್ನು ಹೇಳಲಾಗಿದೆ. ಸ್ತ್ರೀ ಸಂವೇನೆ ಎಂದರರೇನು ಮತ್ತು ಸ್ತ್ರೀವಾದಕ್ಕಿರುವ ಮೌಲ್ಯವು ಯಾವುದು ಹಾಗೂ ಸಂವೇದನೆ ಎಂದರೆ ಏನು ಎಂದು ವಿವರಿಸಲಾಗಿದೆ. ಆದರೆ ಸ್ತ್ರೀವಾದವನ್ನು ಇಲ್ಲಿ ಆನ್ವಯಿಕವಾಗಿ ಮಾತ್ರವೇ ಬಳಸಲಾಗಿದೆ. ಎಲ್ಲಿಯೂ ವಚನ ಕಾರ್ತಿಯರನ್ನು ಮತ್ತು ವಚನಗಳನ್ನು ಹೆಚ್ಚು ಉಲ್ಲೇಖಿಸಲಿಕ್ಕೆ ಹೋಗಲಿಲ್ಲ. 

Read More »

ವಚನ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು

ಕುಮಾರ ಹೆಚ್.ಸಿ.

19 to 26

ವಚನ ಸಾಹಿತ್ಯವು ಕನ್ನಡ ಸಾಹಿತ್ಯದ ವಿಶಿಷ್ಟ ಮಾದರಿಯ ಸಾಹಿತ್ಯ ಪ್ರಕಾರವಾಗಿದ್ದು, ಕಾಯಕಕ್ಕೆ, ಮಾನವೀಯ ಸಂಬಂಧಗಳಿಗೆ ಹಾಗೂ ಸೃಜನಶೀಲತೆಗೆ ಪ್ರಮುಖ ಸ್ಥಾನವನ್ನು ನೀಡಿ ಗೌರವಿಸಿದೆ. ಶಿವಶರಣರು ತಮ್ಮ ದಿನನಿತ್ಯದ ನಡೆನುಡಿಗಳನ್ನೇ ವಚನಗಳೆಂಬ ಹಾಡುಗಬ್ಬವಾಗಿ ರಚಿಸಿದರು. ಬಸವಣ್ಣ, ಅಕ್ಕ, ಅಲ್ಲಮ ದಾಸಿಮಯ್ಯ, ಸಿದ್ದರಾಮರಂಥಹ ಅನೇಕ ವಚನಕಾರರರು ಕಾಯಕಕ್ಕೆ ಮಹತ್ವ ಕೊಟ್ಟು ಜನರಲ್ಲಿದ್ದ ಕೆಟ್ಟ ಆಲೋಚನೆಗಳನ್ನು ದೂರ ಮಾಡಿ ಹೊಸ ವಿಶ್ವಾಸದ ಹಾದಿಯನ್ನು ತೋರಿಸಿದರು.
ಲಿಂಗ ತಾರತಮ್ಯ, ವರ್ಗ ಸಂಘರ್ಷ, ಜಾತಿ ಪದ್ಧತಿ ಅಸಮಾನತೆ ಮುಂತಾದ ವ್ಯವಸ್ಥೆಗಳ ವಿರುದ್ಧ ಹೋರಾಡಿ ಸಭ್ಯ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿ, ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತಿ ಬೆಳೆದರು. ನಡೆ ನುಡಿ ಶುದ್ಧವಾಗಿರಬೇಕು. ಮನುಷ್ಯನಿಗೆ, ಗಾಳಿ, ನೀರು, ಊಟ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ತತ್ವಗಳು ಆದರ್ಶಗಳು, ಮೌಲ್ಯಗಳು ಎಂದು ತಿಳಿಸಿಕೊಟ್ಟರು. ಕೆಟ್ಟ ಸಮಾಜದ ನಾಶಕ್ಕಾಗಿ ಹಗಲಿರುಳು, ಪ್ರೀತಿಸುವ ಕಾಯಕ ಮಾಡುವ ಸಮಾಜವನ್ನು ನಿರೀಕ್ಷಿಸದೆ ವಚನಕಾರರು, ಅದನ್ನು ಜಾರಿಗೊಳಿಸುವಲ್ಲಿ ಸಫಲರಾದರು.
12ನೇ ಶತಮಾನದಲ್ಲಿ ಬಂದಂಥಹ ಈ ವಚನ ಸಾಹಿತ್ಯವು ಸಮಾಜದ ದಿಕ್ಕುದಿಸೆಯನ್ನೇ ಬದಲಾಯಿಸಿ ಒಂದು ಸಾಮಾಜಿಕ ಕ್ರಾಂತಿಯನ್ನೇ ಮಾಡಿ ಎಂದೂ ಅಳಿಯದ ಅಚ್ಚನ್ನು ಒತ್ತಿದೆ. ಈ ವಚನ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು, ಜೀವನ ಮೌಲ್ಯಗಳು ತುಂಬಾ ಇವೆ ಎಂದು ಹೇಳಬಹುದು.

Read More »

ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು

ಗೀತಾಲಕ್ಷ್ಮಿ ಎಸ್.ಎನ್.

27 to 41

ʼʼವಚನಕಾರರು ಮೌಲ್ಯಗಳಿಗಾಗಿಯೇ ಬದುಕಿದವರು”. ನೆಡೆ-ನುಡಿಯ ಸಮನ್ವಯದ ಅಗತ್ಯತೆಯನ್ನು ಸಾರಿದ್ದಾರೆ. ನಮ್ಮ ನುಡಿಯು ಸತ್ಯಶುದ್ಧವಾಗಿರಬೇಕು, ಪಾರದರ್ಶಕವಾಗಿರಬೇಕು, ಪ್ರಕಾಶಮಾನವಾಗಿರಬೇಕು. ಮನವನ್ನು ಮುಟ್ಟುವಂತಿರಬೇಕು. ಸಕಲಜೀವಿಗಳಲ್ಲಿ ಮನುಷ್ಯ ಮಾತ್ರ ಜೀವನ ಮೌಲ್ಯಗಳನ್ನಳವಡಿಸಿಕೊಳ್ಳಲು ಸಾಧ್ಯ. ಮೌಲ್ಯಗಳಿಂದಲೇ ಜೀವನ ಸಾರ್ಥಕವಾಗುತ್ತದೆ. ಈ ಹಿನ್ನಲೆಯಲ್ಲಿ ಮೌಲ್ಯಗಳು, ಬದುಕಿಗೆ ಅನಿವಾರ್ಯವಾಗಿವೆ. ಸತ್ಯ, ಅಹಿಂಸೆ, ನಿಸ್ವಾರ್ಥ, ಪ್ರೀತಿ, ತ್ಯಾಗ, ಸ್ನೇಹ, ಪ್ರಾಮಾಣಿಕತೆ ಇಂತಹ ಅನೇಕ ಜೀವನ ಮೌಲ್ಯಗಳನ್ನು ವಚನಕಾರರಲ್ಲಿ ಕಾಣಬಹುದಾಗಿದೆ. ಕಾಯಕ, ದಾಸೋಹ, ಸಾಮಾಜಿಕನ್ಯಾಯದಂತಹ ಮೌಲ್ಯಗಳನ್ನು ಶರಣರು ಹೊಸದಾಗಿ ಕಟ್ಟಿಕೊಟ್ಟಿದ್ದಾರೆ. ಜೀವ ಎಷ್ಟು ಮುಖ್ಯವೋ ಜೀವನವೂ ಅಷ್ಟೇ ಮುಖ್ಯ, ಜೀವನ ಎಷ್ಟು ಮುಖ್ಯವೋ ಜೀವನ ಮೌಲ್ಯಗಳೂ ಅಷ್ಟೇ ಮುಖ್ಯವಾಗಿವೆ. ಶರಣರು ಕಾಯಕವೇ ಕೈಲಾಸ ಎಂಬ ತತ್ವದಲ್ಲಿ ದುಡಿಮೆಯೇ ಪರಿಪೂರ್ಣತೆಯ ಮಾರ್ಗವೆಂದು ತಿಳಿಸಿ ದುಡಿಮೆಯ ಗೌರವವನ್ನು ಹೆಚ್ಚಿಸಿದರು. ಕಾಯಕದ ಶ್ರಮ ಸಂಸ್ಕೃತಿಯನ್ನು ದೈವತ್ವಕ್ಕೇರಿಸಿ ಅದನ್ನೊಂದು ಜೀವನ ಮೌಲ್ಯವನ್ನಾಗಿ ಮಾಡಿದರು. ಕಾಯಕವೇ ಪ್ರತಿಯೊಬ್ಬರ ಜೀವನದ ಕರ್ತವ್ಯವಾಗಬೇಕು. ಈ ಕಾಯಕದಲ್ಲಿ ಮೇಲು ಕೀಳುಗಳಿರುವುದಿಲ್ಲ. ಮಾನವನಲ್ಲಿ ಸುಪ್ತವಾಗಿರುವ ವಿವಿಧ ಕ್ರಿಯಾಶಕ್ತಿಯನ್ನು ಉತ್ತಮಗೊಳಿಸಿ, ಅದರಿಂದ ತನಗೂ ಉಳಿದವರಿಗೂ ಸೊಗಸುಂಟಾಗುವಂತೆ ಮಾಡುವ ಕಲೆಯೇ ಕಾಯಕ. ಸಮಾಜಮುಖಿ ಚಿಂತನೆಯು ಒಂದು ಪ್ರಮುಖ ಜೀವನ ಮೌಲ್ಯವನ್ನಾಗಿ ಮಾಡಿದರು. ಅಂತರಂಗದ ಸಂಸ್ಕಾರವಿಲ್ಲದೆ ಬಾಹ್ಯವಾಗಿ ಮಾಡುವ ಎಲ್ಲ ಉಪಚಾರಗಳೂ ವ್ಯರ್ಥವೇ. ಬಹಿರಂಗ ಆಚರಣೆಗಿಂತ ಅಂತರಂಗದ ಸಂಸ್ಕಾರ ಮುಖ್ಯ ಎಂದು ವಿವರಿಸುವ ಮೂಲಕ ಮಾನವನ ಜೀವನ ಈ ಎಲ್ಲಾ ರೀತಿಯ ಜೀವನಮೌಲ್ಯವನ್ನು ಅಗತ್ಯವಾಗಿ ಹೊಂದಿರಬೇಕು. 

Read More »

ಅಕ್ಕಮಹಾದೇವಿಯ ವಚನಗಳಲ್ಲಿ ಸ್ತ್ರೀ ಚಿಂತನೆಗಳು

ಗೀತಾ ಎ.ಸಿ.

42 to 48

ಹನ್ನೆರಡನೆಯ ಶತಮಾನವೆಂದರೆ; ಸಾಮಾಜಿಕ, ರಾಜಕೀಯ, ಆರ್ಥಿಕ ಹಾಗೂ ಸಾಹಿತ್ಯಿಕ ಕ್ಷೇತ್ರದಲ್ಲಿ ಬದಲಾವಣೆಗೊಂಡ ಕಾಲ. ಅದನ್ನು ಕ್ರಾಂತಿ ಎಂದೇ ಕರೆಯಬೇಕಾಗುತ್ತದೆ. ಹಿಂದೆ ಸಮಾಜದಲ್ಲ್ಲಿದ್ದ ಅಸಮಾನತೆ, ಶೋಷಣೆಗಳನ್ನು ಕಂಡು ಅನುಭವಿಸಿದ್ದ ಶರಣ, ಶರಣೆಯರು ಮೇಲು-ಕೀಳು ಸ್ತ್ರೀ-ಪುರುಷ ಇತ್ಯಾದಿ ಭೇದ ರಹಿತವಾದ ವರ್ಗರಹಿತವಾದ ಸಮಾಜವನ್ನು ಕಟ್ಟಲು ಪ್ರಯತ್ನಿಸಿದರು. 12ನೇ ಶತಮಾನದ ಪ್ರಸಿದ್ಧ ವಚನಕಾರ್ತಿ ಅಕ್ಕಮಹಾದೇವಿ. ಬಸವಣ್ಣನವರ ಸಮಕಾಲೀನಳಾಗಿ ಬದುಕಿದಳು. ಈಕೆ ಶಿವಶರಣೆಯಾಗಿ, ವಚನಕಾರ್ತಿಯಾಗಿ, ಚೆನ್ನಮಲ್ಲಿಕಾರ್ಜುನನ ಭಕ್ತೆಯಾಗಿ ಪ್ರಸಿದ್ಧಳಾದವಳು. ಈಕೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಉಡುತಡಿ ಎಂಬ ಗ್ರಾಮದಲ್ಲಿ ನಿರ್ಮಲ ಮತ್ತು ಸುಮತಿಯರ ಮಗಳಾಗಿ ಜನಿಸಿದಳು. ಬಾಲ್ಯದಲ್ಲೇ ಶಿವಭಕ್ತಿಯನ್ನು ಹೊಂದಿದ್ದ ಈಕೆಗೆ ಶಿವಪೂಜೆ ಶಿವಧ್ಯಾನಗಳೇ ಆಟಗಳಾಗಿದ್ದವು. ಪರಮಾತ್ಮನಾದ ಚೆನ್ನಮಲ್ಲಿಕಾರ್ಜುನನ ಮೇಲೆ ಅತೀವವಾದ ಪ್ರೀತಿ ಇಟ್ಟುಕೊಂಡಿದ್ದ ಈಕೆ ವೈವಾಹಿಕ ಬದುಕನ್ನು ತ್ಯಜಿಸಿ ದೇವರ ಸೇವೆಗೆ ತನ್ನನ್ನು ಅರ್ಪಿಸಿಕೊಂಡಳು. ಇದು ಮಹಿಳೆರ ಆಯ್ಕೆಯ ಸ್ವಾತಂತ್ರ್ಯವನ್ನು ತೋರಿಸುತ್ತದೆ. ಇವರ ವಚನಗಳು ಸಾಮಾಜಿಕ ಸುಧಾರಣೆಗೆ ಪ್ರೇರಣೆಯಾಗಿದ್ದು, ವಿಶೇಷವಾಗಿ ಸ್ತ್ರೀಯರ ಸ್ಥಿತಿ, ಸ್ವಾತಂತ್ರ್ಯ ಮತ್ತು ಅವರ ಮನೋಭಾವನೆಗಳಿಗೆ ಮಹತ್ವವನ್ನು ನೀಡಿವೆ. ಅಕ್ಕಮಹಾದೇವಿ ದೈಹಿಕ ಸೌಂದರ್ಯಕ್ಕೆ ಪ್ರಾಮುಖ್ಯತೆ ನೀಡದೆ, ಅದನ್ನು ಕ್ಷಣಿಕ ಮತ್ತು ವ್ಯರ್ಥವೆಂದು ಪ್ರತಿಪಾದಿಸುತ್ತಾರೆ. ಪುರುಷ ಪ್ರಧಾನ ಸಮಾಜದಲ್ಲಿ ಸಮಾಜ ಕಂಟಕರನ್ನು, ಸ್ತ್ರೀ ಶೋಷಕರನ್ನು ಹತ್ತಿಕ್ಕಿ ಇಲ್ಲ್ಲಿಯೇ ಇದ್ದು ಗೆಲ್ಲಬೇಕೆಂಬ ಆಶಯ ಅಕ್ಕಮಹಾದೇವಿಯದು. 

Read More »

ವಚನ ಸಾಹಿತ್ಯದಲ್ಲಿ ಸಾಮಾಜಿಕ ಚಿಂತನೆ

ಮನುಕುಮಾ‌ರ್ ಎಸ್.ವಿ.

49 to 55

ಸರಳವಾದ, ಸುಲಲಿತವಾದ, ಸುಮಾಧುರ್ಯತೆಯ ಕಂಪನ್ನು ಸೂಸಿದ ವೈಶಿಷ್ಟ್ಯಪೂರ್ಣವಾದ ಸಾಹಿತ್ಯವೇ “ವಚನ ಸಾಹಿತ್ಯ” 
ಶಿವಶರಣರ ಅಂತರ್ಗತ ಅನುಭವದ ನಿರ್ಭಯವಾದ ನೀತಿ, ಮತ, ತತ್ವಭೋಧನೆಯ ಸಾರವಾಗಿದೆ. 
ವಚನ ಸಾಹಿತ್ಯ ಒಂದು ಅನನ್ಯ ಮತ್ತು ಪ್ರಬಲ ಸಾಹಿತ್ಯ ಪ್ರಕಾರವಾಗಿದ್ದು ಈ ಸಾಹಿತ್ಯವು ಆಧ್ಯಾತ್ಮಿಕತೆ, ಸಮಾಜದ ಸುಧಾರಣೆ ಮತ್ತು ಅನುಭವ ಶ್ರದ್ಧೆಯ ಬಗೆಗಿನ ಆಳವಾದ ಚಿಂತನೆಗಳನ್ನು ಪ್ರತಿಬಿಂಬಿಸುತ್ತದೆ. 
ವಚನ ಸಾಹಿತ್ಯ ಮುಖ್ಯ ಉದ್ದೇಶ ಸಮಾಜ ಸುಧಾರಣೆ. ರಾಜಕೀಯವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ಆಂತರೀಕ ಪರಿಶುದ್ಧಿಗೆ ಮತ್ತು ದೈವೀಕ ಏಕತೆಗೆ ಮಹತ್ವ ನೀಡುವುದಾಗಿದೆ. ಸಮಾಜದಲ್ಲಿ ಜಾತಿ, ವರ್ಣ ಮತ್ತು ಲಿಂಗಭೇದಗಳನ್ನು ವಿರೋದಿಸಿ ಸಮಾನತೆಯ ಮತ್ತು ಜಾತಿ ರಹಿತ ಸಮಾಜದ ಸುಧಾರಣೇ ಮೂಡಿಸುವ ಉದ್ದೇಶವಾಗಿದೆ. ವಚನಕಾರರು ತಮ್ಮ ತಮ್ಮ ವಚನಗಳ ಮೂಲಕ ಒಂದು ಕ್ರಾಂತಿಮೂಡಿಸುವುದು 12ನೇ ಶತಮಾನ ವರವಾಗಿದೆ ಕಾಯಕ, ಭಕ್ತಿ ಕೆಲಸ ಮತ್ತು ಭಕ್ತಿಯ ಮೂಲಕ ವ್ಯಕ್ತಿಯ ಆತ್ಮವನ್ನು ಶದ್ಧಿಗೊಳಿಸುವ ಹಾಗು ಜೀವನದ ಉದ್ದೇಶವನ್ನು ತಿಳಿಸುವ ಸಂದೇಶವನ್ನು ನೀಡುತ್ತವೆ. 

Read More »

ವಚನಕಾರ್ತಿಯರಲ್ಲಿ ಬಂಡಾಯದ ನೆಲೆಗಳು

ಪ್ರಕಾಶ

56 to 63

೧೨ನೇ ಶತಮಾನದ ವಚನಚಳವಳಿಯೇ ಚಾರಿತ್ರಿಕವಾಗಿ ಬಹುದೊಡ್ಡ ಪ್ರಮಾಣದ ಬಂಡಾಯಕ್ಕೆ ನೂತನ ಅಯಾಸವನ್ನು ನೀಡಿತು. ಸುಮಾರು ಮೂವತ್ತೆರಡು ಜನ ಶರಣೆಯರು ವಚನಗಳನ್ನು ರಚಿಸಿ ಶ್ರೇಷ್ಠ ಚಿಂತಕಿಯರಾದರು ಅವರು ಸಮಾಜದ ಡಾಂಭಿಕತೆಯ ವಿರುದ್ಧ ಪ್ರತಿಭಿಟಿಸಿದ ರೀತಿ ಅಗಮ್ಯವಾದುದು. ಲಿಂಗಭೇದ ನಿರಾಕರಣೆ, ಮನೋಪ್ರವೃತ್ತಿಗಳ ವಿರುದ್ಧ ಪ್ರತಿಭಟನೆ ಮಾಡಿರುವುದು ಅವರ ಜ್ಞಾನ, ಆತ್ಮಸ್ಥೈರ್ಯ ಹಾಗೂ ಅವರ ಒಳಗಿನ ಬಂಡಾಯ ಗುಣಕ್ಕೆ ಸಾಕ್ಷಿಯಾಗಿದೆ.
ಪುರುಷ ಪ್ರಧಾನ ಸಮಾಜವು ತನ್ನ ಹಿತಾಶಕ್ತಿಯನ್ನು ಕಾಯ್ದುಕೊಂಡು ಮಹಿಳೆಯನ್ನು ಕತ್ತಲೆಯ ಕೂಪಕ್ಕೆ ತಳ್ಳಿತ್ತು ೧೨ನೇಯ ಶತಮಾನದ ಬಸವಾದಿ ಶರಣರು ಮಹಿಳೆಯರ ಬದುಕಿನಲ್ಲಿದ್ದ ಕತ್ತಲೆಯನ್ನು ಸರಿಸಿ ಬೆಳಕಿನ ಮಾರ್ಗವನ್ನು ದರ್ಶಿಸಿದರು ಮನುಷ್ಯನ ಸಣ್ಣತನವನ್ನು ಶಮನಗೊಳಿಸಿ ಸಮಾನತೆಯ ತಳಹದಿಯ ಮೇಲೆ ಮಾನವೀಯವಾದ ಸಮಸಂಸ್ಕೃತಿಯ ಸಮಾಜವನ್ನು ನಿರ್ಮಿಸಿಹೊರಟ ಶರಣರು ಸಮಾನತೆಯನ್ನೇ ಪ್ರಧಾನ ಆಶಯವನ್ನಾಗಿಸಿಕೊಂಡಿದ್ದರು. ಆಧ್ಯಾತ್ಮಿಕ ಸಾಧನೆಗಳಲ್ಲಿ ಹೆಣ್ಣಿಗೆ ಸ್ವಾತಂತ್ರ್ಯವನ್ನು ನೀಡಿ , ಹೆಣ್ಣು ಜೀವಕ್ಕೆ ಅಂಟಿದ್ದ ಎಲ್ಲ ಬಗೆಯ ಸೂತಕಗಳನ್ನು ಕಿತ್ತೊಗೆದರು, ಇದರಿಂದ ಮಹಿಳೆಯರಿಗೆ ಶಿಕ್ಷಣ, ಸಮಾಜಸೇವೆ, ಆಧ್ಯಾತ್ಮಿಕ ಸಾಧನೆ ಸಾಹಿತ್ಯಾಭಿವ್ಯಕ್ತಿಗಳು ಸಾಧ್ಯವಾದವು. ಮಹಿಳೆಯ ಅನುಭವ, ಚಿಂತನೆಗಳ ಗಡಿ ಜಗದಗಲ, ಮುಗಿದಗಲಕ್ಕೆ ವಿಸ್ತರಿಸಿದವು, ಮಾನುಧರ್ಮಶಾಸ್ತ್ರ ನಿರ್ಮಿಸಿದ ಕೌಟುಂಬಿಕ ಚೌಕಟ್ಟನ್ನು ಒಡೆದು ಹೆಣ್ಣಿಗೂ ಸ್ವತಂತ್ರವಾದ ಅಸ್ತಿತ್ವವಿದೆ ಎಂಬುದನ್ನು ಶಿವಶರಣೆಯರು ತಮ್ಮ ಜೀವನ ಸಾಧನೆಯ ಮೂಲಕ ಸಾಬೀತುಪಡಿಸಿದರು.

Read More »

ಬಸವಣ್ಣನ ಅವೈದಿಕ ಪ್ರಜ್ಞೆ: ಕನ್ನಡ ಬಸವ ಕಥನ & ವಚನಗಳಲ್ಲಿ

ಮಹಾಲಿಂಗಪ್ರಭು

64 to 71

ಕನ್ನಡ ಬಸವ ಕಥನಗಳು ವಚನಗಳೊಂದಿಗೆ ಹೊಂದಿರುವ ಅಂತರ್‌ ಸಂಬಂಧವನ್ನು ಜಪತಪ ತೀರ್ಥಕ್ಷೇತ್ರ, ಕರ್ಮ-ಪುನರ್ಜನ್ಯ, ಶಕುನಗಳು ಮೊದಲಾದ ತಾತ್ವಿಕ ಅಂಶಗಳ ಹಿನ್ನೆಲೆಯಲ್ಲಿ ವಿವಿಧ ನಿದರ್ಶನಗಳ ಆಧಾರದ ಮೇಲೆ ಪ್ರಸ್ತುತ ಲೇಖನದಲ್ಲಿ ಚರ್ಚಿಸಲಾಗಿದೆ. ಬಸವಣ್ಣ ಸಮಕಾಲೀನದಿಂದ ಟೀಕೆ-ವಿಮರ್ಶೆಗಳು ಎದುರಾದಾಗ ಬಸವಣ್ಣ ತನ್ನ ಲೋಪಗಳನ್ನು ಸರಿಪಡಿಸಿಕೊಂಡ ರೀತಿಯನ್ನೊಳಗೊಂಡ ಕನ್ನಡ ಬಸವ ಕಥನಗಳಲ್ಲಿ ಉಕ್ತವಾದ ಆತ್ಮಶೋಧನೆಯ ಪ್ರಸಂಗಗಳು-ವಚನಗಳು ಈ ರೀತಿಯಾಗಿ ಬಸವಣ್ಣನ ತಾತ್ವಿಕತೆ ಹಾಗೂ ವ್ಯಕ್ತಿಚಿತ್ರಣ ಎರಡೂ ವಿಷಯಗಳಿಗೆ ಸಂಬಂಧಿಸಿದ ಅಂಶಗಳನ್ನು ಈ ಲೇಖನದಲ್ಲು ವಿವಿಧ ಆಯಾಮಗಳಲ್ಲಿ ಪರಿಶೀಲಿಸಿವ ಕಾರ್ಯವನ್ನು ಮಾಡಲಾಗಿದೆ.

Read More »

ವಚನ ಸಾಹಿತ್ಯದಲ್ಲಿ ಸಾಮಾಜಿಕ ಚಿಂತನೆಗಳು

ಅನುಷ

72 to 77

ಪ್ರಸ್ತುತ ಲೇಖನದಲ್ಲಿ ಹನ್ನೆರಡನೇಯ ಶತಮಾನದಲ್ಲಿದ್ದ ವಚನ ಸಾಹಿತ್ಯದ ಸಾಮಾಜಿಕ ಚಿಂತನೆಗಳು ವ್ಯಕ್ತವಾಗಿವೆ. ಆ ಕಾಲದಲ್ಲಿದ್ದ ಸಾಮಾಜಿಕ ಮೌಲ್ಯ ಪರಿವರ್ತನೆ ವಚನಕಾರರು ಸಮಾನ ನಾಯಕತ್ವವನ್ನು ಅನುಸರಿಸಿದ್ದು, ಜಾತಿ - ಧರ್ಮ, ಲಿಂಗ ತಾರತಮ್ಯ, ಮೇಲು - ಕೀಳು, ವಿಗ್ರಹಾರಾಧನೆ ದೇವಸ್ಥಾನಗಳ ನಿರ್ಮಾಣವನ್ನು ಖಂಡಿಸಿದರು ಹಾಗೂ ಇದಕ್ಕೆಲ್ಲ ವಿರೋಧಿಯಾಗಿದ್ದರು. ವೀರಶೈವ ಧರ್ಮದ ಪಂಚ ಸೂತ್ರಗಳು ಕಾಯಕದ ಮಹತ್ವವನ್ನು ತಿಳಿಸಿರುವುದು ಎಲ್ಲರಲ್ಲಿಯೂ ಸಮಾನತೆಯ ಭಾವ ಅಂದಿನ ಕಾಲಕ್ಕೆ ಹೇಗಿತ್ತು. ವಚನಕಾರರಾದ ಬಸವಣ್ಣನವರು ಮತ್ತು ಅಕ್ಕಮಹಾದೇವಿಯವರ ವಚನಗಳ ಗ್ರಹಿಕೆ, ವಚನ ಸಾಹಿತ್ಯ ಇಂದಿನ ಸಮಾಜಕ್ಕೆ ಏಕೆ ಪ್ರಸ್ತುತ ಹಾಗೂ ಸಣ್ಣದೊಂದು ಪದ್ಯವನ್ನು ವಿಷಯದ ಕುರಿತು ಒಳಗೊಂಡಿದೆ. 

Read More »

ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು

ಸಂತೋಷ್‌ ಕುಮಾರ್‌ ಆರ್‌.ಎಂ.

78 to 89

ವಚನ ಸಾಹಿತ್ಯವು ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಅಮೂಲ್ಯ ಸಂಪತ್ತಾಗಿದೆ. ಇದು 12ನೇ ಶತಮಾನದಲ್ಲಿ ಜನಿಸಿದ ವಿಶಿಷ್ಟ ಸಾಹಿತ್ಯ ಪ್ರಕಾರವಾಗಿದ್ದು, ಬಸವಾದಿ ಶರಣರು ಇದನ್ನು ಜನಸಾಮಾನ್ಯರಿಗೆ ತಲುಪುವಂತೆ ಮಾಡಿದರು. ವಚನ ಸಾಹಿತ್ಯವು ಧಾರ್ಮಿಕ, ಸಾಮಾಜಿಕ ಮತ್ತು ದಾರ್ಶನಿಕ ಚಿಂತನೆಗಳನ್ನು ಒಳಗೊಂಡಿದೆ ಮತ್ತು ಭಕ್ತಿ ಚಳವಳಿಯ ಪ್ರಮುಖ ಭಾಗವಾಗವೂ ಆಗಿದೆ. 
ವಚನ ಸಾಹಿತ್ಯವು ʼಸಮಾನತೆʼ, ʼಶ್ರಮʼ-ʼಕಾಯಕʼ ಮತ್ತು ʼಭಕ್ತಿʼಯ ಮಹತ್ವ, ಪ್ರಾಮಾಣಿಕತೆ ಹಾಗೂ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಶರಣರು ಜಾತಿ, ಲಿಂಗ, ಆರ್ಥಿಕ ಸ್ಥಿತಿ ಮುಂತಾದ ಬೇಧಭಾವಗಳನ್ನು ತಿರಸ್ಕರಿಸಿದರು. ಅಲ್ಲದೆ ಇವರು ಜಾತಿ-ವರ್ಣಭೇದಗಳ ವಿರೋಧವಾಗಿಯೂ ಮತ್ತು ಸಮಾನತೆಗೆ ಹೆಚ್ಚಿನ ಮನ್ನಣೆಯನ್ನು ನೀಡಿದರು. 
ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು ಮೊದಲಾದ ಶರಣರು “ಕಾಯಕವೇ ಕೈಲಾಸ”, “ದಾಸೋಹದ ತತ್ತ್ವ”, “ಅನುಭವ ಮಂಟಪ”ದ ಪರಿಕಲ್ಪನೆಯ ಮೂಲಕ ಪ್ರಜಾಪ್ರಭುತ್ವದ ನ್ಯಾಯಯುತ ಸಮಾಜದ ನಿರ್ಮಾಣಕ್ಕೆ ಹೇಗೆ ಶ್ರಮಿಸಿದರು ಎಂಬುದನ್ನು ಭಿನ್ನ ವಚನಕಾರರ ಹಿನ್ನೆಲೆಯಲ್ಲಿ ವಿವರಿಸಿ, ವಿಶ್ಲೇಷಿಸುವುದಾಗಿದೆ. 
ವಚನಗಳಲ್ಲಿ ಪುರುಷ ಮತ್ತು ಮಹಿಳೆಯ ನಡುವಿನ ಭೇದವನ್ನು ಪ್ರಶ್ನಿಸಿ, ಶಿವಶರಣ ಭಕ್ತರ ಸಮುದಾಯದಲ್ಲಿ ಪ್ರತಿಯೊಬ್ಬರಲ್ಲೂ ಸಮಾನತೆಯನ್ನು ಕಾಣುತ್ತಾ ಪ್ರಾಮಾಣಿಕ ಶ್ರಮ ಮತ್ತು ಸಮಾಜ ಸೇವೆಯ ಪ್ರಾಮುಖ್ಯತೆಯನ್ನು ವಿಶ್ಲೇಷಿಸಲಾಗಿದೆ. 
ಈ ಸಾಹಿತ್ಯ ಪ್ರಕಾರವು ಅಂತರಂಗ ಮತ್ತು ಬಹಿರಂಗದ ಪ್ರಾಮುಖ್ಯತೆ, ಅವು ದೈನಂದಿನ ಜೀವನದಲ್ಲಿ ಹೇಗೆ ದೀರ್ಘಕಾಲಿಕವಾಗಿ ವ್ಯಕ್ತಿಯ ಆಂತರಿಕ ಹಾಗೂ ಬಾಹ್ಯ ಬೆಳವಣಿಗೆಯ ಮೇಲೆ ಪ್ರಭಾವ ಬೀರುವುದು ಎಂಬುದನ್ನು ಚರ್ಚಿಸಲಾಗುವುದು. 
ವಚನಗಳು ಸತ್ಯ ಮತ್ತು ಚಿತ್ತ ಶುದ್ಧ ಭಕ್ತಿಯ ತತ್ವಗಳ ಮೂಲಕ ಸಮಾಜದ ಪರಿವರ್ತನೆಗೆ ಶ್ರಮಿಸಿದ ಬಗೆ ಹೇಗೆ? ಮತ್ತು ಪ್ರಸ್ತುತ ಸಂದರ್ಭಕ್ಕೂ ವಚನ ಸಾಹಿತ್ಯದ ತತ್ತ್ವಗಳು ಸಾಮಾಜಿಕ ನ್ಯಾಯದ ಪರಿಪ್ರೇಕ್ಷ್ಯದಲ್ಲಿ ಅವುಗಳ ಪ್ರಾಧಾನ್ಯತೆಯನ್ನು ಪ್ರಸ್ತುತತೆಯನ್ನು ಕುರಿತು ತಿಳಿಸುವ ಪ್ರಯತ್ನವನ್ನು ಮಾಡಲಾಗಿದೆ. 
ಈ ಸಾಹಿತ್ಯವು ಶರಣ ಪರಂಪರೆಯ ಜೀವನ ಶೈಲಿಯನ್ನು ಪ್ರತಿಬಿಂಬಿಸುವುದರೊಂದಿಗೆ, ನೈತಿಕ ಜೀವನ ಮೌಲ್ಯಗಳನ್ನು ಬೋಧಿಸುವ ಪ್ರಭಾವಿ ಮಾಧ್ಯಮವಾಗಿದೆ. ವಚನ ಸಾಹಿತ್ಯವು ಕೇವಲ ಧಾರ್ಮಿಕ ಮತ್ತು ಸಾಹಿತ್ಯಿಕ ಪ್ರಕಾರವಲ್ಲದೆ, ಅದು ಸಾಮಾಜಿಕ ಕ್ರಾಂತಿಯ ಸಂಕೇತವಾಗಿ, ಮಾನವೀಯತೆಯ ಸಿದ್ಧಾಂತಗಳ ಸಾರಥಿಯಾಗಿ ಹೇಗೆ ನಿಲ್ಲಬಲ್ಲದು ಎಂಬುದನ್ನು ಇಲ್ಲಿ ವಿವರಿಸಲಾಗಿದೆ. 

Read More »

ವಚನ ಸಾಹಿತ್ಯ: ಮಾನವ ಮೌಲ್ಯಗಳ ಪ್ರತಿಬಿಂಬ

ಗೌಡ. ಎಂ.ಟಿ.

90 to 96

ವಚನವೆಂಬುದು ಕೇವಲ ಸಾಹಿತ್ಯ ಪ್ರಕಾರವಲ್ಲ ಅದು ಒಂದು ಚಳುವಳಿ ಕೂಡ ಆಗಿದೆ. ಅದನ್ನು ಸಮಾಜೋ ಧಾಶ್ರಮಿಕ ಚಳುವಳಿ, ಕಾಯಕ ಜೀವಿಗಳ, ಚಳುವಳಿ ಪರಿಪೂರ್ಣ ಚಳುವಳಿ ಎಂದು ಬಗೆಬಗೆಯಾಗಿ ಕನ್ನಡ ವಿದ್ವಾಂಸರು ಅದರ ಸ್ವರೂಪ ಮಹಿಮೆಯನ್ನು ಬಣ್ಣಿಸಿದ್ದಾರೆ. ವಚನ ಸಾಹಿತ್ಯ ಇಡೀ ಭಾರತೀಯ ಭಾಷೆಗಳಲ್ಲಿಯೇ ವಿಶಿಷ್ಟವಾದುದು. ಕನ್ನಡ ಸಾಹಿತ್ಯವು ವಿಶ್ವ ಸಾಹಿತ್ಯಕ್ಕೆ ನೀಡಿದ ಕೊಡುಗೆ ಆದಾಗಿದೆ ಎಂದರೂ ನಡೆಯುತ್ತದೆ. 
ಮಾನವ ಕುಲದ ಸರ್ವಾಂಗೀಣ ವಿಕಾಸಕ್ಕಾಗಿ ಶ್ರಮಿಸಿದ ಮಹಾತ್ಮರಾದ ಶಿವಶರಣರು ಅನನ್ಯ ಕೊಡುಗೆ ನೀಡಿರುವ ಜಗತ್ತಿನ ಅಪರೂಪದ ಸಾಹಿತ್ಯ ವಚನಗಳು. ವಚನಗಳು ಎಂದಾಕ್ಷಣ ನೆನಪಾಗುವುದೇ ಶಿವಶರಣರು. ಶರಣ ಪಂಥಕ್ಕೆ ಭಕ್ತಿಯ ಶಕ್ತಿಯೇ ಕೇಂದ್ರ ಬಿಂದು. ವಚನ ಸಾಹಿತ್ಯವು ಸವಿಸ್ತಾರವಾದ ಸಮುದ್ರದ ಆಳದಲ್ಲಿನ ಮುತ್ತು, ರತ್ನಗಳನ್ನು ಹೆಕ್ಕಿ ಅಳೆದು, ತೂಗಿ ಸಂಭ್ರಮಿಸಿ, ಅನುಭವಿಸಬೇಕು. 
ವಚನಗಳಿಂದ ನಾವು ಜೀವನದಲ್ಲಿ ನೈತಿಕವಾಗಿ ಬದುಕುವುದನ್ನು ಅರಿಯಬಹುದು. ವಚನ ಎನ್ನುವ ಪದದಲ್ಲೇ ಮೌಲ್ಯವಿದೆ. ವಚನ ಎಂದರೆ ಸಂಸ್ಕ್ರತದಲ್ಲಿ ಮಾತು, ಮಾತನಾಡುವುದು, ವ್ಯಕ್ತಪಡಿಸುವುದು ಇತ್ಯಾಧಿ ಅರ್ಥಗಳಿವೆ. ಮುಖ್ಯವಾಗಿ ವಚನ ಎಂದರೆ ಪ್ರಮಾಣ, ಆಣೆ ಎಂತಲೂ ಅರ್ಥವಿದೆ. ಬಸವಣ್ಣ ಮುಂತಾದ ವಚನಕಾರರಲ್ಲಿ ವಚನ ಎಂಬ ಮಾತು ಬಳಕೆಯಾಗಿದೆ. 
ಅನ್ಯರ ವಚನವ ಕೊಂಡಾಡಲು ಕರ್ಮ ಬಿಡದು/ಮೃದು ವಚನ ಸಕಲ ಜಪಂಗಳಯ್ಯ ಇತ್ಯಾಧಿ ಉಕ್ತಿಗಳಿವೆ. 
ಮಾನವ ಸಂಕಲ್ಪ ಸಿದ್ಧಿಗಾಗಿ ಕೈಗೊಂಡ ಕಾರ್ಯಗಳನ್ನು ಕೈಗೂಡಿಸುವಂತೆ ಮಾಡುವ ಮೌಲ್ಯಗಳು ವಚನಗಳಲ್ಲಿವೆ. ಜೀವನ ಮೌಲ್ಯಗಳ ಉದ್ದೇಶವೇ ಸಮಾಜದ ಹಿತವನ್ನು ಕಾಪಾಡುವುದು. ಇಂತಹ ವಚನಗಳಿಂದ ಜೀವನಕ್ಕಾಗಿ ಮೌಲ್ಯಗಳನ್ನೇ ವಚನಕಾರರೇ ಹೇಳಿದ್ದಾರೆ. ಜೀವನ ಮೌಲ್ಯ ಎಂದರೇ ತನ್ನ ಸ್ವಾರ್ಥವನ್ನು ಬಿಟ್ಟು ಸ್ವಲ್ಪ ಮಟ್ಟಿಗಾದರೂ ಇತರರ ಕಡೆಗೂ ಗಮನಿಸುವುದು ಮತ್ತು ಆ ನಿಟ್ಟಿನಲ್ಲಿ ಕರ್ತವ್ಯ ನಿಷ್ಠೆಯನ್ನು ಹೆಚ್ಚಿಸುವುದೇ ಆಗಿದೆ. 

Read More »

ಮಾನವೀಯ ಸಮಾಜ ರೂಪಿಸುವಲ್ಲಿ ವಚನಗಳ ಪಾತ್ರ

ಜ್ಯೋತಿ ಎನ್. ಭಟ್

97 to 106

ವಚನ ಸಾಹಿತ್ಯವು 12ನೇ ಶತಮಾನದ ಕನ್ನಡದ ವಿಶಿಷ್ಟ ಸಾಹಿತ್ಯಪ್ರಕಾರವಾಗಿದೆ. ಇದನ್ನು ಪಂಡಿತರಿಗೆ ಮೀಸಲಾಗಿದ್ದ ಸಾಹಿತ್ಯದ ಮೀರೆದು, ಸಾಮಾನ್ಯ ಜನರ ಬದುಕು, ಅನುಭವ, ತತ್ವಗಳನ್ನು ಸರಳವಾದ ಭಾಷೆಯಲ್ಲಿ ವ್ಯಾಖ್ಯಾನಿಸಿ ಸಮಾಜದಲ್ಲಿ ಜಾಗೃತಿ ತರಲು ಶರಣರು ಬಳಸಿದರು. ಮಾತನ್ನು ಮತಿಸಿದಾಗ ಮಾತ್ರ ವಚನವಾಗುವುದು ಎಂಬ ತತ್ವದೊಂದಿಗೆ, ವಚನಗಳು ಅನುಭವದ ಭಾವಗೀತೆಗಳಾಗಿವೆ. ಇದರಲ್ಲಿ ಧರ್ಮ, ನೀತಿ, ಜ್ಞಾನ, ಶ್ರಮ, ಸಮಾನತೆ, ಕಾಯಕ ಮತ್ತು ದಾಸೋಹದಂತಹ ಮಾನವ ಮೌಲ್ಯಗಳು ಸೊಗಸಾಗಿ ಪ್ರತಿಬಿಂಬಿಸುತ್ತವೆ. ಜಾತಿ, ಲಿಂಗ, ಧರ್ಮಗಳ ಭೇದವನ್ನು ತಿರಸ್ಕರಿಸಿ ಎಲ್ಲರಿಗೂ ಸಮಾನ ಸ್ಥಾನವಿರಬೇಕು ಎಂಬ ಸಂದೇಶ ನೀಡುತ್ತವೆ. ಬಸವಣ್ಣ, ಅಕ್ಕ ಮಹಾದೇವಿ, ಅಲ್ಲಮಪ್ರಭು, ಚನ್ನಬಸವಣ್ಣನಂತಹ ಶರಣರು ಸಮಾಜ ಸುಧಾರಣೆಗೆ ಮುಂಚೂಣಿಯಲ್ಲಿದ್ದರು. ಅವರು ಪುರಾಣಕಥೆಗಳನ್ನು ಬಳಸದೆ, ತಾವು ಅನುಭವಿಸಿದ ಸಾಮಾಜಿಕ ಅಸಮಾನತೆ ಮತ್ತು ಅನ್ಯಾಯಗಳನ್ನು ವಚನಗಳ ಮೂಲಕ ಪ್ರತಿಭಟಿಸಿದರು. ಕೃತಕ ಆಚರಣೆಗಳನ್ನು ತಿರಸ್ಕರಿಸಿ, ನೈತಿಕ ಶುದ್ಧತೆಯನ್ನು ಬಲಪಡಿಸಿದರು. ವಚನಗಳು ಕೇವಲ ಸಾಹಿತ್ಯವಲ್ಲದೆ, ಜೀವನ ದರ್ಶನವನ್ನೂ ನೀಡುತ್ತವೆ. ಇವುಗಳಲ್ಲಿ ಕಲಿತ ಮೌಲ್ಯಗಳು ಇಂದಿನ ಸವಾಲುಗಳಿಗೂ ಮಾರ್ಗದರ್ಶನ ನೀಡುತ್ತವೆ. ವಚನ ಸಾಹಿತ್ಯವು ಕನ್ನಡದಿಂದ ವಿಶ್ವಸಾಹಿತ್ಯಕ್ಕೆ ನೀಡಬಹುದಾದ ಅತ್ಯುನ್ನತ ಕೊಡುಗೆಯಾಗಿದೆ. 
ವಚನ ಸಾಹಿತ್ಯವು ಕೇವಲ ಧಾರ್ಮಿಕ ಭಾವನೆಗಳನ್ನು ಮಾತ್ರವಲ್ಲ, ಬದಲಾಗಿ ಸಮಾಜದ ಬದಲಾವಣೆಗಾಗಿ ಹೊಸ ಚಿಂತನೆಗಳನ್ನು ನೀಡುವ, ಸಮಾನತೆಯ ಪರಿಕಲ್ಪನೆಯನ್ನು ನಾಟಿದ, ಜಾಗೃತಿ ಮೂಡಿಸುವ ಜೀವಂತ ವಾಕ್ಯಮಾಲೆಯಾಗಿದೆ. ಇಂದಿಗೂ ಈ ಸಾಹಿತ್ಯವು ಸಮಕಾಲೀನ ಸಮಸ್ಯೆಗಳಿಗೆ ಸಮಯೋಚಿತ ಪರಿಹಾರವಾಗುತ್ತದೆ. 

Read More »