Published: 2023-08-05

Table of Contents

Table of Contents

I to VI

ಆಂಧ್ರಪ್ರದೇಶದಲ್ಲಿ ಬೌದ್ಧಧರ್ಮದ ಉಗಮ ಮತ್ತು ವಿಕಾಸ

ಬಿ. ಎಸ್. ಎಲ್. ಹನುಮಂತರಾವ್, ಎಂ. ಭೈರಪ್ಪ

01 to 12

Original Telugu work: Andhradeshamlo Jaina, Bouddh Mataalu (Kannada Translation- Andhra Pradeshadalli Jaina Bouddha Dharmagalu) (In English: Jaina and Bouddha Religions in Andhra Pradesh); Original Author: Dr. B.S.L.Hanumantha Rao. He did valuable contributions to Telugu literature, especially in the field of Buddhism and Archaeology. The present work has its own importance in his important literary series. The reason why the translation of the present work is relevant is to raise awareness and validate the influence of Jainism and Buddhism, the major philosophical roots of India, in the southern states like Andhra and Karnataka; To understand the importance of philosophical movement across linguistic boundaries and cross-linguistic ties in ancient India to the phenomenon of linguistic territorialisation of modern India; To review the unique contributions made by a regional base in shaping the theological and philosophical contours of all Indian Jain-Buddhism; The current Telugu version of the work contains many novelties. Hence the translation of this work is very important and relevant to cultural research between Kannada and Telugu.

Read More »

ಪಶ್ಚಿಮ ಮತ್ತು ಪೂರ್ವಗಳಲ್ಲಿ ಭಾಷಾಂತರ ಅಧ್ಯಯನದ ಪ್ರಾಥಮಿಕ ಚರ್ಚೆಗಳು

ವಿಜಯೇಂದ್ರ ಕುಮಾರ್ ಜಿ. ಎಲ್.

13 to 22

ಪಶ್ಚಿಮದ ಭಾಷಾಂತರ ಸಿದ್ದಾಂತಗಳ ಪ್ರಕಾರ ಭಾಷಾಂತರ ಪ್ರಕ್ರಿಯೆಯು ಆರಂಭವಾದದ್ದು ಲಿಖಿತ ರೂಪದ ಸಾಹಿತ್ಯ ರಚನೆಯಾದ ಮೇಲೆಯೇ. ಜನಪದ ಸಾಹಿತ್ಯಕ್ಕೆ ಪಶ್ಚಿಮವು ಅಷ್ಟೊಂದು ಪ್ರಾಮುಖ್ಯತೆ ನೀಡಲಿಲ್ಲವಾದ್ದರಿಂದ ಮತ್ತು ಅವರಲ್ಲಿ ಲಿಖಿತ ರೂಪದ ಸಾಹಿತ್ಯವನ್ನಷ್ಟೆ ಭಾಷಾಂತರ ಅಧ್ಯಯನದ ಶಿಸ್ತಿಗೆ ಒಳಪಡಿಸಿ ನೋಡುವ ಪರಿಪಾಠವಿದ್ದುದರಿಂದ ಅಲ್ಲಿ ಇಂತಹ ನಂಬಿಕೆ ಇದೆ. Oral Translation ಬಗೆಗೆ ಅವರು ಚರ್ಚೆ ನಡೆಸಿದ್ದಾರಾದರೂ, ಸಾಹಿತ್ಯವನ್ನು ಈ ಪರಿಧಿಯಲ್ಲಿ ಇಟ್ಟು ನೋಡಿಲ್ಲ. ಆದರೆ ನಮ್ಮ ಭಾರತೀಯ ಸಂದರ್ಭಕ್ಕೆ ಸಂಬಂಧಿಸಿದಂತೆ ಚರ್ಚಿಸುವಾಗ ಹೀಗೆ ಹೇಳಲಾಗುವುದಿಲ್ಲ. ಪುರಾಣಗಳು, ಪ್ರಾಚೀನ ಕಾವ್ಯ ಕೃತಿಗಳು ಮತ್ತು ಜನಪದ ಕೃತಿ ಸಮುಚ್ಚಯಗಳು ಲಿಖಿತ ರೂಪಕ್ಕೆ ಬರುವುದಕ್ಕಿಂತ ಮೊದಲೇ ಅನ್ಯ ಭಾಷೆಗಳಿಗೆ ಅನುವಾದಗೊಂಡಿವೆ. ಪೂರ್ಣ ಪ್ರಮಾಣದಲ್ಲಿ ಕೆಲವು ಕೃತಿಗಳು ಅನುವಾದಗೊಂಡಿದ್ದರೆ, ಇನ್ನು ಕೆಲವು ಭಾಗಶಃ ಅನುವಾದಗೊಂಡಿವೆ. ಒಂದೇ ಜನಪದ ಕಥೆಯು ಭಾರತದ ಹಲವು ಭಾಷೆಗಳಲ್ಲಿ ಬೇರೆ ಬೇರೆ ಆವೃತ್ತಿಗಳಲ್ಲಿ ಪ್ರಚಲಿತದಲ್ಲಿರುವುದನ್ನು ನೋಡಿದರೆ ಈ ಅಂಶ ಸ್ಪಷ್ಟವಾಗುತ್ತದೆ. (ಗಮನಿಸಿ: ಫೋಕ್ ಟೇಲ್ಸ್ ಫ್ರಂ ಇಂಡಿಯಾ, ಎ.ಕೆ. ರಾಮಾನುಜನ್, 1992) ಈ ಹಿನ್ನೆಲೆಯಲ್ಲಿ ಪಶ್ಚಿಮ ಮತ್ತು ಪೂರ್ವಗಳಲ್ಲಿ ನಡೆದ ಭಾಷಾಂತರ ಪ್ರಕ್ರಿಯೆಗಳನ್ನು ತೌಲನಿಕ ಚರ್ಚೆಗೆ ಒಳಪಡಿಸಿ ಭಾಷಾಂತರ ಮೀಮಾಂಸೆಯು ಬೆಳೆದು ಬಂದ ಬಗೆಯನ್ನು ಅರಿಯಬೇಕಿದೆ. ಇಲ್ಲಿ ಅಂತಹ ಕಿರುಪ್ರಯತ್ನವನ್ನು ಮಾಡಲಾಗಿದೆ.

Read More »

ಸಾಹಿತ್ಯ ಮತ್ತು ಚಿತ್ರಕಲೆಗಳ ಐತಿಹಾಸಿಕ ಬೆಳವಣಿಗೆ

ಕೃಷ್ಣಪ್ಪ ಕೆ. ಎನ್.

23 to 31

ಚಿತ್ರಕಲೆ ಮತ್ತು ಸಾಹಿತ್ಯಗಳು ಮೂಲದಲ್ಲಿ ಶುದ್ಧ ಜನಪದೀಯವಾಗಿದ್ದವು. ಯಾವುದೇ ಶಿಸ್ತಿಗೆ ಒಳಪಡದ ಹಾಗೆ ಜನಸಾಮಾನ್ಯರ ವಲಯದಲ್ಲಿ ರಚನೆಯಾಗುತ್ತಿದ್ದವು. ಕೇವಲ ಚಿತ್ರಕಲೆ ಮತ್ತು ಸಾಹಿತ್ಯವಷ್ಟೇ ಅಲ್ಲ. ಎಲ್ಲ ಬಗೆಯ ಕಲಾಪ್ರಕಾರಗಳಿಗೂ ಈ ಮಾತು ಅನ್ವಯಿಸುತ್ತದೆ. ರಂಗಭೂಮಿಯು ಹೇಗೆ ಹುಟ್ಟಿಕೊಂಡಿತು ಎಂಬುದರ ಬಗ್ಗೆ ಕೆ.ವಿ.ಅಕ್ಷರ ಅವರು ಹೀಗೆ ಹೇಳಿದ್ದಾರೆ: “ನಾಟಕ ಸಾಹಿತ್ಯ, ಅಭಿನಯ, ರಂಗತಂತ್ರಗಳು ಮುಂತಾದ ಎಲ್ಲಾ ಅಂಗೋಪಾಂಗಗಳನ್ನು ಬೆಳೆಸಿಕೊಂಡ ಸಂಘಟಿತ ಮಾಧ್ಯಮಗಳನ್ನು ಮಾತ್ರ ನಾವು 'ರಂಗಭೂಮಿ' ಎಂದು ಕರೆಯುವುದಾದರೆ, ಅಂತಹ ರಂಗಭೂಮಿ ಹುಟ್ಟಿದ್ದು ತುಂಬ ತಡವಾಗಿ. ಅಂದರೆ, ಮೊದಲು ವಿಕಾಸಗೊಂಡ ಮನುಷ್ಯಜೀವಿಗಳಿಗಿಂತ ಎಷ್ಟೋ ಸಾವಿರ ವರ್ಷಗಳಷ್ಟು ತಡವಾಗಿ. ಕಾಲಾಂತರದಲ್ಲಿ ಸಾಹಿತ್ಯ ಮತ್ತು ಚಿತ್ರಕಲೆಗಳು ವ್ಯವಸ್ಥಿತವಾಗಿ ರಚನೆಯಾಗಿ ಲಲಿತಕಲೆಗಳಲ್ಲಿ ಸ್ಥಾನಗಳಿಸಿದವು. ಆದರೆ ಈಗಾಗಲೇ ಚಿತ್ರಕಲೆ ಮತ್ತು ಸಾಹಿತ್ಯಗಳು ಪ್ರತ್ಯೇಕ ಕಲಾಶಿಸ್ತುಗಳಾಗಿ ಬೆಳವಣಿಗೆಯನ್ನು ಪಡೆದಿದ್ದವು. ಈ ಹಿನ್ನೆಲೆಯಲ್ಲಿ ಇಲ್ಲಿ ಚಿತ್ರಕಲೆ ಮತ್ತು ಸಾಹಿತ್ಯಗಳ ಬೆಳವಣಿಗೆಯ ಹಂತವನ್ನು ಗಮನಿಸುವ ಪ್ರಯತ್ನವನ್ನು ಮಾಡಲಾಗಿದೆ.

Read More »

ಸಿದ್ಧಲಿಂಗಯ್ಯನವರ ನಾಟಕಗಳು: ಶೋಷಿತ ಸಮುದಾಯಗಳ ಆತ್ಮವಿಮರ್ಶೆ ಮತ್ತು ಆತ್ಮಾಭಿಮಾನದ ಸಂಕಥನ

ಶಿವಲಿಂಗೇಗೌಡ ಡಿ.

32 to 40

ಕನ್ನಡ ಸಾಂಸ್ಕೃತಿಕ ಲೋಕದ ಮಹತ್ವದ ಚಿಂತಕರೂ, ಕವಿಗಳೂ ಆದ ಸಿದ್ಧಲಿಂಗಯ್ಯನವರು ತಮ್ಮ ಸಾಹಿತ್ಯ, ಚಿಂತನೆ, ಹೋರಾಟಗಳ ಮೂಲಕ ಸಮಾನತೆಯನ್ನು ನನಸಾಗಿಸಲು ನಿರಂತರ ಹೋರಾಡಿದವರು. ಅಸಮಾನತೆಯ ಮೂಲಬೇರುಗಳನ್ನು ಶೋಧಿಸುವ ಮೂಲಕ ಶೋಷಕ ವರ್ಗದ ಹುನ್ನಾರಗಳನ್ನು ನಿಷ್ಠುರವಾಗಿ ವ್ಯಂಗ್ಯಕ್ಕೆ ಒಳಪಡಿಸಿದವರು. ತಮ್ಮ ಸಾಹಿತ್ಯದ ಮೂಲಕ ಶೋಷಿತ ಸಮೂದಾಯಗಳ ಆತ್ಮಘನತೆಯನ್ನು ಎತ್ತಿ ಹಿಡಿಯುವುದರೊಂದಿಗೆ ಮಾನವೀಯ ಸಮಸಮಾಜವನ್ನು ಕಟ್ಟುವ ಕನಸು ಕಂಡವರು. ಸಿದ್ಧಲಿಂಗಯ್ಯನವರ ಏಕಲವ್ಯ, ಪಂಚಮ ಮತ್ತು ನೆಲಸಮ ಈ ಮೂರೂ ನಾಟಕಗಳು ನಮ್ಮ ಸಾಮಾಜಿಕ ವ್ಯವಸ್ಥೆಯ ತರತಮಗಳ ಮೂಲ ಬೇರುಗಳನ್ನು ತಡಕಾಡುವುದರ ಜೊತೆಗೆ ಶೋಷಿತ ಸಮುದಾಯಗಳ ಆತ್ಮವಿಮರ್ಶೆ ಮತ್ತು ಆತ್ಮಾಭಿಮಾನದ ಸಂಕಥನಗಳನ್ನು ಕಟ್ಟಿಕೊಡುತ್ತವೆ.

Read More »

ಗಂಗಾವತಿ ತಾಲೂಕಿನ ಜಲವೀರರ ವೀರಗಲ್ಲುಗಳು

ಸಿದ್ದೇಶ ಬಿ. ಪಿ.

41 to 48

ವೀರಪೂಜೆಯ ಪರಂಪರೆ ಪ್ರಾಚೀನ ಕಾಲದಿಂದಲೂ ಮುಂದುವರಿದುಕೊಂಡು ಬಂದಿದೆ. ಯುದ್ಧ, ತುರುಗಾಳಗ, ಬೇಟೆ, ದರೋಡೆಕೋರರಿಂದ ಗ್ರಾಮಗಳ ರಕ್ಷಣೆ, ಕಳ್ಳರೊಡನೆ ಹೋರಾಡಿ ಮಡಿದವರ, ನೀರಿನಲ್ಲಿ ಬಿದ್ದವರ ರಕ್ಷಣೆ ಮುಂತಾದ ಸಂದರ್ಭದಲ್ಲಿ ಮಡಿದ ವೀರರ ನೆನಪಿಗಾಗಿ ವೀರಗಲ್ಲುಗಳನ್ನು ಹಾಕಿಸುವ ಪರಂಪರೆ ಪ್ರಾಚೀನಕಾಲದಿಂದಲೂ ಬೆಳೆದು ಬಂದಿದೆ. ಅದರಲ್ಲಿ ಕೆರೆ, ಹೊಂಡ, ನದಿ, ಸಮುದ್ರದ ನೀರಿನಲ್ಲಿ ರಕ್ಷಣೆ ಮಾಡುವ ಸಂದರ್ಭದಲ್ಲಿ ಮಡಿದವರ ಜಲವೀರರ ವೀರಗಲ್ಲುಗಳು ದೊರಕುವುದು ಬಹಳ ವಿರಳ. ಅಂತದರಲ್ಲಿ ತುಂಗಭದ್ರಾ ನದಿ ಎಡದಂಡೆಯ ಮೇಲಿರುವ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಮೂರು ಜಲವೀರರ(ಅಂಬಿಗರ) ವೀರಗಲ್ಲುಗಳು ಕಂಡುಬರುತ್ತವೆ. ಅವುಗಳನ್ನು ವಿಶ್ಲೇಷಿಸುವ ಪ್ರಯತ್ನ ಈ ಲೇಖನದಲ್ಲಿ ಮಾಡಲಾಗಿದೆ.

Read More »

ಏಜಾಕ್ಸ್ ಮತ್ತು ಅಶ್ವತ್ಥಾಮನ್ ನಾಟಕಗಳ ತೌಲನಿಕ ಓದು

ಧನಲಕ್ಷ್ಮಿ ಸಿ.

49 to 56

ಭಾರತದಲ್ಲಿ ಪುರಾಣ ಪ್ರಸಿದ್ಧವಾದ ಅನೇಕ ಕಥೆಗಳಿರುವಂತೆಯೇ ಗ್ರೀಸ್ ದೇಶದಲ್ಲೂ ಪುರಾಣ ಪ್ರಸಿದ್ಧ ಕಥೆಗಳಿವೆ. ಹಲವಾರು ಗ್ರೀಕ್ ನಾಟಕಗಳ ಕಥಾವಸ್ತು ಪುರಾಣ ಪುರುಷರನ್ನು ಕುರಿತದ್ದೆ ಆಗಿದೆ. ಅಂತಹ ನಾಟಕಗಳಲ್ಲಿ ಸಾಫೋಕ್ಲಿಸ್ ಮಹಾಕವಿಯ ಏಜಾಕ್ಸ್ ನಾಟಕವೂ ಒಂದು. ಇದೊಂದು ದುರಂತ ನಾಟಕ. ಈ ನಾಟಕವನ್ನು ಓದಿ ಪ್ರಭಾವಗೊಂಡ ಬಿ.ಎಂ.ಶ್ರೀ ಅವರು ಮಹಾಭಾರತದ ಗದಾಸೌಪ್ತಿಕ ಪರ್ವದಲ್ಲಿ ಬರುವ ಅಶ್ವತ್ಥಾಮನ ಪ್ರಸಂಗವನ್ನು ಆಧರಿಸಿ ಅಶ್ವತ್ಥಾಮನ್ ನಾಟಕವನ್ನು ರಚಿಸಿದ್ದಾರೆ. ಬಿ.ಎಂ.ಶ್ರೀ ಅವರು ಪಾಶ್ಚಾತ್ಯ ನಾಟಕ ಒಂದನ್ನು ಯಥಾವತ್ತಾಗಿ ಕನ್ನಡಕ್ಕೆ ತರದೆ ಅದರ ಪ್ರಭಾವದಿಂದ ಸ್ವತಂತ್ರ ಭಾರತೀಯ ನಾಟಕವನ್ನು ರಚಿಸಿದ್ದಾರೆ. ಈ ಮೂಲಕ ಕನ್ನಡ ಸಾಹಿತ್ಯಕ್ಕೆ ಅವರು ದುರಂತ ನಾಟಕವನ್ನು ಪರಿಚಯಿಸಿದರು.

Read More »

ದಲಿತ ಚಳುವಳಿಯ ಭಾಷೆ ಮತ್ತು ಸಾಹಿತ್ಯ

ಕಾಂತರಾಜ ಯಾದವ್ ಸಿ.

57 to 69

ದಲಿತ ಸಾಹಿತ್ಯದಲ್ಲಿನ ಬಡತನ, ಶೋಷಣೆ, ಹಸಿವು, ಆಕ್ರೋಶ, ಸಿಟ್ಟು, ಸಂಸ್ಕೃತಿ ಇತ್ಯಾದಿ ವಿಷಯಗಳನ್ನು ಕುರಿತು ಹಲವಾರು ಸಾಹಿತಿಗಳು, ವಿಮರ್ಶಕರು ವಿಶ್ಲೇಷಿಸಿದ್ದಾರೆ. ಈ ವಿಷಯಗಳನ್ನು ಮುಖಾಮುಖಿಯಾಗಲು ದಲಿತ ಸಾಹಿತಿಗಳು ಬಳಸಿದ ವಿಭಿನ್ನ ರೀತಿಯ ಭಾಷೆಯನ್ನು ಕುರಿತು ಕೆಲವೇ ಜನರು ಮಾತ್ರ ತಮ್ಮ ಗಮನಹರಿಸಿದ್ದು ವಿಶೇಷ. ಅದರಲ್ಲೂ ಸಿದ್ದಲಿಂಗಯ್ಯನವರ ಹೊಲೆ-ಮಾದಿಗರ ಹಾಡು, ದೇವನೂರರ ಕುಸುಮಬಾಲೆ ಇತ್ಯಾದಿ ಕೆಲವೇ ಕೃತಿಗಳ ಭಾಷೆಯ ಕುರಿತು ಮಾತನಾಡುತ್ತಾರೆ ಹೊರತು ಅದರಿಂದಾಚೆಗೆ ಒಟ್ಟು ದಲಿತ ಸಾಹಿತ್ಯದ ಭಾಷೆಯ ಭಿನ್ನತೆ, ನಿರೂಪಣೆ ಕುರಿತು ಮಾತನಾಡುವುದು ಕಡಿಮೆ ಎಂದೇ ಹೇಳಬಹುದು. ಸಾಹಿತ್ಯವಾಗಲಿ, ವಿಮರ್ಶೆಯಾಗಲಿ ಭಾಷೆಯ ಅಭಿವ್ಯಕ್ತಿ ಮುಖ್ಯವಾದದ್ದು. ಆ ನಿಟ್ಟಿನಲ್ಲಿ ದಲಿತ ಸಾಹಿತ್ಯದ ಭಾಷೆಯು ಕಟ್ಟಿಕೊಡುವ ವಿಭಿನ್ನ ನೋಟ ವಿಶಿಷ್ಟವಾದದ್ದು. ಈ ರೀತಿಯ ಭಾಷೆಯ ಬಳಕೆಗೆ ತಮ್ಮ ಬದುಕನ್ನು ಮತ್ತು ಸಂಸ್ಕೃತಿಯನ್ನು ಏಕಕಾಲದಲ್ಲಿ ಜನರೆದುರು ತೆರೆದಿಡುವ ಅಗತ್ಯತೆಯನ್ನು ದಲಿತ ಸಾಹಿತಿಗಳು ಕಂಡುಕೊಂಡದ್ದು ಮುಖ್ಯವಾದದ್ದು.

Read More »

ಡಾ. ರಾಜಶೇಖರ ನೀರಮಾನ್ವಿ ಕಥೆಗಳಲ್ಲಿ ಕಲ್ಯಾಣ ಕರ್ನಾಟಕದ ಗ್ರಾಮೀಣ ಜನ-ಜೀವನ

ಹನಮಂತಪ್ಪ

70 to 80

ಡಾ. ರಾಜಶೇಖರ ನೀರಮಾನ್ವಿ ಪ್ರಕಟಿಸಿದ್ದು ಎರಡೇ ಕವನ ಸಂಕಲನ. ಆದರೆ ಅವರ ಕಥೆಗಳು ಕನ್ನಡ ಕಥಾ ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಹೆಜ್ಜೆಗುರುತನ್ನು ಉಳಿಸಿವೆ. ನೀರಮಾನ್ವಿ ಕಥೆಗಳ ಕುರಿತಾದ ಈ ಲೇಖನವು ಸಾಮಾಜಿಕ, ಸಾಹಿತ್ಯಕ, ಪ್ರಾದೇಶಿಕ ಅಧ್ಯನವಾಗಿದ್ದು ವಸ್ತು ವಿಶ್ಲೇಷಣಾತ್ಮಕವಾಗಿದೆ. ಮಾತ್ರವಲ್ಲ ನೀರಮಾನ್ವಿಯವರ ಕಥೆಗಳಲ್ಲಿ ಬರುವ ಕಲ್ಯಾಣ ಕರ್ನಾಟಕದ ಪ್ರಾದೇಶಿಕ ಭಾಷೆಯ ಸೊಗಡನ್ನು ಗುರುತಿಸುವುದು. ಕಥೆಯಲ್ಲಿ ಬರುವ ತಾತ್ವಿಕತೆ ಮತ್ತು ಸಾತ್ವಿಕ ಸ್ವಭಾವವನ್ನು ಗುರುತಿಸುವುದು. ಕಥೆಯ ನಿರ್ವಹಣಾ ತಂತ್ರವನ್ನು ಗುರುತಿಸುವುದು. ಕಲ್ಯಾಣ ಕರ್ನಾಟಕದ ಪ್ರಾದೇಶಿಕ ನುಡಿಗಟ್ಟನ್ನು ಗುರುತಿಸಿ. ಆ ಮೂಲಕ ಇಲ್ಲಿಯ ಜನಜೀವನವನ್ನು ಲೇಖಕರು ತಮ್ಮ ಕಥೆಯಲ್ಲಿ ಹೇಗೆ ಕಟ್ಟಿಕೊಟ್ಟಿದ್ದಾರೆ ಎಂಬುದನ್ನು ಕುರಿತ ಅಧ್ಯಯನವಾಗಿದೆ.

Read More »

ಕಿಟೆಲರ ಧಾರ್ಮಿಕ ಸಾಹಿತ್ಯ

ಮಲ್ಲಪ್ಪ ಚನ್ನಭತ್ತಿ

81 to 88

ಕಿಟೆಲರ ಧಾರ್ಮಿಕ ಸಾಹಿತ್ಯ ವಿಸ್ತಾರವಾದದ್ದು. ಗದ್ಯ-ಪದ್ಯಗಳಲ್ಲಿ ಕ್ರೈಸ್ತ ಮತದ ತತ್ವಗಳನ್ನು ಪ್ರತಿಪಾದಿಸಿದ್ದು ಮಾತ್ರವಲ್ಲದೆ ಅವರು ಹಿಂದೂ ದೇವತಾರಾಧನೆಯ ಕುರಿತು ಕೃತಿಗಳನ್ನು ರಚಿಸಿದ್ದಾರೆ. ವಿಶೇಷವಾಗಿ ಮಿಶನರಿಯಾಗಿ ಆಗಮಿಸಿದ ಕಿಟೆಲರು ಕನ್ನಡ ನಾಡಿನ ಬೇರೆ ಬೇರೆ ಪ್ರದೇಶಗಳಿಗೆ ಹೋಗಿ ಕ್ರೈಸ್ತ ಮತ ಪ್ರಚಾರ ಮಾಡಬೇಕಾಗಿತ್ತು. ಸುವಾರ್ತೆ ಸಾರುತ್ತಿರುವ ಸಂದರ್ಭದಲ್ಲಿ ಅವರು ಅನುಸರಿಸುತ್ತಿರುವ ಜರ್ಮನ್ ಪದ್ಧತಿ ಸರಿಯಲ್ಲವೆಂದು ಅವರ ಗಮನಕ್ಕೆ ಬಂತು. ಜರ್ಮನ್ ಭಾಷೆಯಿಂದ ಅನುವಾದಗೊಂಡ ಪ್ರಾರ್ಥನಾ ಪಠ್ಯಗಳು ದೇಶೀಯ ಲಯಕ್ಕೆ ಹೊಂದುತ್ತಿರಲಿಲ್ಲ. ಆದ್ದರಿಂದ ದೇಶೀಯ ಪದ್ಧತಿಯಲ್ಲಿ ಪದ್ಯ ರಚಿಸಿ ಸುವಾರ್ತೆ ಸಾರುವುದು ಹೆಚ್ಚು ಅನುಕೂಲಕರವೆಂದು ಅವರು ಮನಗಂಡಿದ್ದರು. ಅದಕ್ಕಾಗಿ ತಾವೇ ಸ್ವತಃ ಧಾರ್ಮಿಕ ಸಾಹಿತ್ಯ ರಚನೆಗೆ ತೊಡಗಿದರೆನ್ನಲಾಗಿದೆ.

Read More »

ಊರುಕೇರಿಯ ಹೋರಾಟದ ನೆಲೆಗಳು

ಲಕ್ಷ್ಮಿನರಸಮ್ಮ

89 to 97

ಡಾ. ಸಿದ್ದಲಿಂಗಯ್ಯನವರು ಬರೆದಿರುವ 'ಊರುಕೇರಿ' ಎಂಬ ಆತ್ಮಚರಿತ್ರೆಯಲ್ಲಿ ಹೋರಾಟಗಳು ಮುಖ್ಯವಾಗಿದ್ದು, ದಲಿತರ ಹಾಗೂ ಬಡ ಜೀವಿಗಳ ಪರ ನಿಂತು ಎಲ್ಲ ರೀತಿಯ ಸೌಲಭ್ಯಗಳನ್ನು ಕೊಡಿಸುವಲ್ಲಿ ಲೇಖಕರು ಮುಂದಾಗಿದ್ದಾರೆ. ಲೇಖಕರು ಬಡವರ ಶಕ್ತಿ ಯಾವುದೆಂದರೆ ಹೋರಾಟವೆಂದು ತಿಳಿಸಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ನಡೆದ ಸಮಾವೇಶದಲ್ಲಿ ದಲಿತರು ಘೋಷಣೆಗಳನ್ನು ಕೂಗುತ್ತಾ ಮುನ್ನಡೆಯುತ್ತಾರೆ. ಈ ಹೋರಾಟದಲ್ಲಿ ಸಿದ್ಧಲಿಂಗಯ್ಯನವರು ಸಾಮಾನ್ಯ ವ್ಯಕ್ತಿಯಂತೆ ನಡೆದುಕೊಳ್ಳುತ್ತಾರೆ. ಲೇಖಕರು ಬಿ. ಬಸವಲಿಂಗಪ್ಪನವರ ಭೂಸಾ ಚಳುವಳಿಯಲ್ಲಿ ಭಾಗವಹಿಸಿ ಕನ್ನಡ ಸಾಹಿತ್ಯದಲ್ಲಿ ಬಹಳಷ್ಟು ಭೂಸ ಇದೆ, ಅದರಲ್ಲಿ ಯಾವ ಹುರುಳಿಲ್ಲ ಎಂದು ಹೇಳುವ ಮೂಲಕ ಬಸವಲಿಂಗಪ್ಪನವರ ಪರವಾಗಿ ವಾದಿಸುತ್ತಾರೆ. ಹೋರಾಟ ಮಾಡುವುದೆಂದರೆ ಕೇವಲ ಘೋಷಣೆ ಕೂಗುವುದು ಮಾತ್ರವಲ್ಲ ಆತಸ್ಥೆರ್ಯವನ್ನು ಹೊಂದಬೇಕು ಎಂಬುದಾಗಿ ಲೇಖಕರು ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಹೋರಾಟದಲ್ಲಿ ಪ್ರಾಣವನ್ನು ಬೇಕಾದರೂ ಕೊಡುತ್ತೇವೆ ಎಂಬ ಘೋಷಣೆಯನ್ನು ಊರುಕೇರಿಯಲ್ಲಿ ವ್ಯಕ್ತಪಡಿಸಿದ್ದಾರೆ. ಲೇಖಕರು ದಲಿತರು ಮತ್ತು ದಲಿತೇತರಾರು ನಡುವೆ ವೈಷ್ಯಮ್ಯ ಉಂಟಾದಾಗ ಯಾವುದೇ ರೀತಿಯ ಘರ್ಷಣೆಗಳು ಆಗದಂತೆ ಅವರಿಬ್ಬರಿಗೂ ಸಮಾಧಾನ ಮಾತುಗಳನ್ನು ಹಾಡಿ ಶಾಂತಿಯನ್ನು ಮೂಡಿಸುತ್ತಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ದಲಿತನ ಮೇಲೆ ಆದಂತಹ ದೌರ್ಜನ್ಯವನ್ನು ಕಂಡು ಸಮಾಧಾನ ನೀಡುತ್ತಾರೆ. ಸಿದ್ದಲಿಂಗಯ್ಯನವರ 'ಊರಿಕೇರಿ' ಆತ್ಮಚರಿತ್ರೆಯಲ್ಲಿ ಹೋರಾಟದ ಸಂದರ್ಭಗಳು ಹೇರಳವಾಗಿವೆ. ಬದುಕಿನಲ್ಲಿ ಬಡವರೆಲ್ಲರೂ ಒಂದುಗೂಡಿ ಹೋರಾಟ ಮಾಡಲೇಬೇಕೆಂದು ತಿಳಿಸಿದ್ದಾರೆ.

Read More »

ವೈ. ಎನ್. ಹೊಸಕೋಟೆ (ಯಲ್ಲಪ್ಪ ನಾಯಕನ ಹೊಸಕೋಟೆ) ಪಾಳೆಯಗಾರರು: ಚಾರಿತ್ರಿಕ ವಿಶ್ಲೇಷಣೆ

ಮುತ್ತಯ್ಯ ಬಿ.

98 to 105

ವೈ.ಎನ್. ಹೊಸಕೋಟೆ ಗ್ರಾಮದ ಚಾರಿತ್ರಿಕ ಹಿನ್ನೆಲೆ ಹಾಗೂ ಈ ಗ್ರಾಮದಲ್ಲಿ ಚಿಕ್ಕ ಪಾಳೆಯಪಟ್ಟನ್ನು ನಿರ್ಮಿಸಿಕೊಂಡು ಆಳ್ವಿಕೆ ಮಾಡಿದ ಪಾಳೆಯಗಾರ ಯಲ್ಲಪ್ಪನಾಯಕನು ಅಧಿಕಾರಕ್ಕೆ ಬರುವಾಗ ತನ್ನ ಜೀವನದಲ್ಲಿ ನಡೆದ ಕೆಲವು ಪ್ರಸಂಗಗಳು ಹಾಗೂ ಅಧಿಕಾರಕ್ಕೆ ಬಂದಾಗ ತನ್ನ ಪಾಳೆಯಪಟ್ಟನ್ನು ವಿಸ್ತರಿಸಿಕೊಳ್ಳಲು ಶತ್ರು ಪಾಳೆಯಗಾರನಾದ ಕುಂದುರ್ಪಿಯ ಪೆದ್ದಕೊನೇಟಿ ನಾಯಕನ ಅಧೀನದಲ್ಲಿದ್ದ ಕೆಲವು ಪ್ರಾಂತ್ಯಗಳನ್ನು ವಶಪಡಿಸಿಕೊಳ್ಳಲು ಮಾಡಿದ ಪ್ರಯತ್ನಗಳು ಮತ್ತು ಇವರ ಅಧಿಕಾರದ ಅವಧಿಯಲ್ಲಿ ನಿರ್ಮಿಸಿರುವ ಕೆಲವು ಸ್ಮಾರಕಗಳ ಕುರಿತು ಪರಿಚಯಿಸಲಾಗಿದೆ. ಹಾಗೆಯೇ ಇವರ ನಂತರ ತನ್ನ ಪುತ್ರನಾದ ಬಡ ತಿಮ್ಮನಾಯಕನ ಆಳ್ವಿಕೆ ಮತ್ತು ಹೈದರಾಲಿಯು ವಶಪಡಿಸಿಕೊಂಡಿರುವ ಕುರಿತು ಸಂಕ್ಷಿಪ್ತವಾಗಿ ವಿಶ್ಲೇಷಿಸುವ ಪ್ರಯತ್ನ ಮಾಡಲಾಗಿದೆ.

Read More »

ತಲ್ಲೂರ ರಾಯನಗೌಡರು

ಯಲ್ಲಪ್ಪ ಬಸಪ್ಪ ಕಡಕೋಳ, ಮಹೇಶ ಗಾಜಪ್ಪನವರ

106 to 116

ಬೆಳಗಾವಿ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅನೇಕ ಮಹನೀಯರು ತಮ್ಮನ್ನು ತೊಡಗಿಸಿಕೊಂಡು ತಮ್ಮದೇ ಆದ ವೈಶಿಷ್ಟ್ಯತೆಯ ಬದುಕಿನೊಂದಿಗೆ ಹೋರಾಡುವ ಮೂಲಕ ಹೆಸರುವಾಸಿಯಾಗಿರುವರು. ಅಂಥವರ ಬದುಕು ಬರಹಗಳು ಇಂದಿನ ಪೀಳಿಗೆಗೆ ದೊರೆಯಬೇಕು. ಬೆಳಗಾವಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರಲ್ಲಿ ತಲ್ಲೂರ ರಾಯನಗೌಡರ ಹೆಸರು ಕೂಡ ಪ್ರಮುಖವಾಗಿದೆ. ಅವರು ಗಾಂಧೀಜಿಯವರ ಭಾಷಣದಿಂದ ಪ್ರಭಾವಿತರಾಗಿ ತಮ್ಮ ಎಲ್.ಎಲ್.ಬಿ. ಶಿಕ್ಷಣವನ್ನು ಮೊಟಕುಗೊಳಿಸಿ ಸ್ವಂತ ಊರಾದ ತಲ್ಲೂರಲ್ಲಿ ನೆಲೆಸಿ ಹತ್ತಿರದ ಮುರಗೋಡ ಗುಡ್ಡದಲ್ಲಿ ಭೂಗತರಾಗಿದ್ದುಕೊಂಡು ತಮ್ಮ ಸಹಚರರೊಂದಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಳ್ಳುವ ಮೂಲಕ ಜೈಲುವಾಸ ಅನುಭವಿಸಿದವರು. ಸ್ವಾತಂತ್ರ್ಯ ನಂತರ ಕರ್ನಾಟಕ ಏಕೀಕರಣ ಮತ್ತು ಕಿತ್ತೂರು ಕುರಿತು ಸಂಶೋಧನೆಯಲ್ಲಿ ತೊಡಗಿಕೊಂಡು ತಮ್ಮದೇ ಆದ ಬರವಣಿಗೆ, ರಾಜಕೀಯ ಮತ್ತು ಸಾಮಾಜಿಕ ಬದುಕನ್ನು ಬದುಕಿ ಬಾಳಿದರು. ಅವರ ಕುರಿತು ಇದುವರೆಗೂ ಯಾವುದೇ ವಿಶ್ವವಿದ್ಯಾಲಯದಲ್ಲಿ ಸಂಶೋಧನೆಗಳು ಜರುಗಿರುವುದಿಲ್ಲ. ತಲ್ಲೂರ ಗ್ರಾಮದಲ್ಲಿ ರಾಯನಗೌಡರ ಕುಟುಂಬದವರು ಮತ್ತು ಅವರನ್ನು ಹತ್ತಿರದಿಂದ ಕಂಡವರನ್ನು ಈ ಕುರಿತು ವಿಚಾರಿಸಿದಾಗ ಮಹತ್ವದ ಸಂಗತಿಗಳು ದೊರಕಿದವು. ಈ ಕುರಿತು ಅವರ ವ್ಯಕ್ತಿತ್ವದ ಮೇಲೆ ಈ ಬರಹ ಬೆಳಕು ಚಲ್ಲುತ್ತದೆ.

Read More »

ವಿವೇಕ ಶಾನಭಾಗರ 'ಜಾಮೀನು ಸಾಹೇಬ' ಕಥೆಯಲ್ಲಿನ ಸಮಕಾಲೀನ ತಲ್ಲಣಗಳು

ಮಹೇಶ್ ಬಿ. ಡಿ.

117 to 123

ವಿವೇಕ ಶಾನಭಾಗರ ಜಾಮೀನು ಸಾಹೇಬ ಕಥೆಯು ಅವರ ಹುಲಿ ಸವಾರಿ ಕಥಾಸಂಕಲನದ ಪ್ರಮುಖ ಕಥೆಯಾಗಿದೆ. ನಿರುದ್ಯೋಗ ಸಮಸ್ಯೆಯ ತೀವ್ರತೆಯನ್ನು ಹೃದಯಕ್ಕೆ ತಾಗುವಾಗೆ ಬರಹದ ರೂಪಕ್ಕೆ ಇಳಿಸಿದ ಕಥೆ. ಬಡವರು, ಮಧ್ಯಮ ವರ್ಗದವರು, ಉನ್ನತ ಶಿಕ್ಷಣ ಪಡೆದರೂ ಓದಿದ ವಿದ್ಯಾರ್ಹತೆಗೆ ಸಮನಾದ ಕೆಲಸ ಪಡೆದುಕೊಳ್ಳಲಾಗದೆ, ತಾನು ಓದಿದ ಓದಿಗೂ ತಾನು ಮಾಡುತ್ತಿರುವ ಕೆಲಸಕ್ಕೂ ಸಂಬಂಧವೇ ಇಲ್ಲದೆ ಉದ್ಯೋಗದ ಬೆನ್ನುಹತ್ತಿ ಕಂಗಾಲಾಗಿ ಪರಿತಪಿಸುತ್ತಾ ಜೀವನ ನಿರ್ವಹಿಸಲು ಯಾವುದೋ ಉದ್ಯೋಗದ ಬೆಂಬತ್ತಿ ಸಾಗುತ್ತಿರುವ ಸಮಕಾಲೀನ ವಿದ್ಯಾವಂತರ ಬದುಕಿನ ತಲ್ಲಣಗಳನ್ನು ಪ್ರತಿಬಿಂಬಿಸುತ್ತದೆ. ನಾಗತಿಹಳ್ಳಿಯವರ 'ಅಮೇರಿಕಾ ಅಮೇರಿಕಾ' ಕಾದಂಬರಿಯಲ್ಲಿ ಚಂದ್ರು ಇಂಜಿನಿಯರಿಂಗ್ ಮಾಡಿ ಉದ್ಯೋಗ ದೊರೆಯದೆ ಅಮೇರಿಕಕ್ಕೆ ತೆರೆಳುವುದು ಪ್ರತಿಭಾ ಪಲಾಯನವನ್ನು ಚಿತ್ರಿಸುತ್ತದೆ. ಸುಧಾಕರ ಅವರ ಉಸುಕು ಕಥೆಯ ರಾಮೇಗೌಡನ ವ್ಯಾಸಂಗದ ಚಿತ್ರಣವನ್ನು ಸುಧಾಕರ ಅವರು ಕಟ್ಟಿಕೊಡುವ ರೀತಿ ಮನಮಿಡಿಯುವಂತಿದೆ. ಹಳ್ಳಿಯ ಕಂದಾಚಾರದ, ಮೌಡ್ಯತೆಗಳ ವಿರುದ್ಧ ಹೋರಾಡಿ ಸಾಮಾಜಿಕ ನ್ಯಾಯದ ಪರ ಹಳ್ಳಿಯ ಜನರಲ್ಲಿ ಎಚ್ಚರಿಕೆ ಮೂಡಿಸಿದ ರಾಮೇಗೌಡನ ಸಾವಿಗೆ ಅದೇ ಹಳ್ಳಿಯ ಜನರೇ ಕಾರಣವಾಗುವ ಸ್ಥಿತಿ ವಿದ್ಯಾವಂತರಾಗಿ ಹಳ್ಳಿಯ ಜನರ ಬದುಕನ್ನು ಪರಿವರ್ತಿಸಲು ಹೊರಟ ಇಂದಿನ ಯುವ ಪೀಳಿಗೆಗೆ ಆತಂಕವನ್ನು ಹುಟ್ಟಿಸುತ್ತದೆ. ಬೆಸಗರಹಳ್ಳಿ ರಾಮಣ್ಣ ಅವರ 'ಪ್ರಜಾಪ್ರಭುತ್ವ ಮತ್ತು ಮೂರು ಮಂಗಗಳು' ಕಥೆಯ ಮಂಚನ ಪಾತ್ರಕ್ಕೂ ಜಾಮೀನು ಸಾಹೇಬ ಕಥೆಯ ಕಥಾನಾಯಕನಾದ ದಯಾನಂದನ ಪಾತ್ರಕ್ಕೂ ತುಂಬಾ ಸಾಮ್ಯತೆಗಳಿವೆ. ಜಾಮೀನು ದಂಧೆ ನಡೆಸುವುದರಲ್ಲಿ ಆಸಕ್ತಿ, ಧೈರ್ಯ ಇಲ್ಲದಿದ್ದರೂ ಅನಿವಾರ್ಯವಾಗಿ ಜಾಮೀನು ದಂಧೆಯೊಳಗೆ ದಯಾನಂದ ಸಿಕ್ಕಿಕೊಳ್ಳುತ್ತಾನೆ. ಮಂಚ ಓದಿಗೆ ತಕ್ಕನಾದ ಸರಿಯಾದ ನೌಕರಿ ದೊರೆಯದೆ ಕೋತಿ ಆಡಿಸುವ ಕಸುಬನ್ನು ಮಾಡುವುದು, ಅದನ್ನು ಹಿಂಸೆಯೆಂಬ ನೆಪವೊಡ್ಡಿ ಪೋಲೀಸಿನವರು ಬಂಧಿಸುವ ರೀತಿ ಓದಿದ ವಿದ್ಯಾವಂತರ ಹೀನಾಯ ಬದುಕಿನ ಸ್ಥಿತಿಗತಿಯ ಮೇಲೆ ಬೆಳಕು ಚೆಲ್ಲುತ್ತದೆ. ಒಟ್ಟಾರೆಯಾಗಿ ಜಾಮೀನು ಸಾಹೇಬ ಕಥೆಯು ವಿದ್ಯಾವಂತರ ನಿರುದ್ಯೋಗ ಸಮಸ್ಯೆಯ ಬಗ್ಗೆ ಮಾತನಾಡುವ ಮನಮಿಡಿಯುವ ಕಥೆಯಾಗಿದೆ.

Read More »

ಚದುರಂಗ ಅವರ 'ನಾಲ್ಕು ಮೊಳ ಭೂಮಿ' ಕಥೆಯಲ್ಲಿನ ಸಮಕಾಲೀನ ತಲ್ಲಣಗಳು

ಶಿವರಾಜು ಎನ್.

124 to 130

ಕನ್ನಡ ಕಥನ ಸಾಹಿತ್ಯದಲ್ಲಿ ಭೂ ಸಂವೇದನೆಯನ್ನು ಕುರಿತ ಕೆಲವು ಕಥೆಗಳಲ್ಲಿ 'ನಾಲ್ಕು ಮೊಳ ಭೂಮಿ' ಕಥೆ ವಿಭಿನ್ನವಾಗಿ ನಿಲ್ಲುತ್ತದೆ. ಭೂಸಂವೇದನೆಯನ್ನು ಕುರಿತು ಪ್ರಕಟವಾಗಿರುವ ಬಹುತೇಕ ಕಥೆಗಳು ಸರ್ಕಾರಿ ಜಮೀನಿನ ಮಂಜೂರಾತಿ, ಅಕ್ರಮ ಖಾತಾ ವರ್ಗಾವಣೆ, ಸರ್ಕಾರಿ ಯೋಜನೆಗಳಿಗಾಗಿ ಭೂಸ್ವಾಧೀನ ಪ್ರಕ್ರಿಯೆ. ವಿಭಾಗ ಪತ್ರಗಳಲ್ಲಿನ ನ್ಯೂನತೆಗಳು ಇತ್ಯಾದಿ ವಿಷಯಗಳಿಗೆ ಸಂಬಂಧಪಟ್ಟವು. ಆದರೆ ನಾಲ್ಕು ಮೊಳ ಭೂಮಿ ಅಕ್ರಮ ಭೂ ಒತ್ತುವರಿಯನ್ನು ಕುರಿತು ಮಾತಾಡುತ್ತದೆ. ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಛೇರಿಗೆ ಅಳತೆಗೆಂದು ಸಲ್ಲಿಕೆಯಾಗುವ ಹೆಚ್ಚಿನ ಅರ್ಜಿಗಳು ಹದ್ದುಬಸ್ತಿಗೆ ಸಂಬಂಧಪಟ್ಟವು. ಸಾರ್ವಜನಿಕರ ಅಸಹಕಾರ, ಅರ್ಜಿದಾರರ, ಬಾಜುದಾರರ ಅನಕ್ಷರತೆ, ದೌರ್ಬಲ್ಯ, ರಾಜಕೀಯ ಹಸ್ತಕ್ಷೇಪ, ಇತ್ಯಾದಿ ಕಾರಣಗಳಿಂದ ಎಲ್ಲಾ ಅರ್ಜಿಗಳಿಗೂ ನ್ಯಾಯದೊರಕಿಸಿಕೊಡಲು ಸಾಧ್ಯವಾಗುತ್ತಿಲ್ಲ. ಹಿಡುವಳಿ ಭೂಮಿಯ ಒತ್ತುವರಿಯನ್ನು ತೆರವುಗೊಳಿಸುವ ಅಧಿಕಾರ ತಹಸೀಲ್ದಾರ್‌ರವರಿಗೆ ಇಲ್ಲದ ಕಾರಣದಿಂದ ಅಕ್ರಮ ಹಿಡುವಳಿ ಜಮೀನುಗಳ ಭೂ ಒತ್ತುವರಿಯನ್ನು ತೆರವುಗೊಳಿಸುವುದು ಕಷ್ಟ ಸಾಧ್ಯವಾಗಿದೆ. ಅಕ್ಷರಸ್ಥ ರೈತರು ಅಕ್ಕಪಕ್ಕದ ಜಮೀನಿನ ರೈತರ ಜೊತೆ ವಿಶ್ವಾಸ ಹಾಳಾಗಬಾರದೆಂಬ ಕಾರಣಕ್ಕೆ ಜಮೀನುಗಳನ್ನು ಅಳತೆ ಮಾಡಿಸುವ ಗೋಜಿಗೆ ಹೋಗುವುದಿಲ್ಲ. ಕಂದಾಯ ಇಲಾಖೆ ಯಾವುದೇ ಹೊಸನಿಯಮಗಳನ್ನು ಜಾರಿಗೆ ತಂದರೂ ಮೈಸೂರು, ತುಮಕೂರು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರುವುದರಿಂದ ಮೈಸೂರು ಹಾಗೂ ತುಮಕೂರು ಜಿಲ್ಲೆಗಳಲ್ಲಿ ಕಂದಾಯ ಇಲಾಖೆಯ ಕೆಲಸ ಕಾರ್ಯಗಳು ಅಷ್ಟು ಸುಲಭವಾಗಿ ಯಶಸ್ವಿಯಾಗುವುದಿಲ್ಲ. ಜಮೀನಿನ ಪೌತಿ ಖಾತೆಯ ವರ್ಗಾವಣೆಯ ಸಂದರ್ಭದಲ್ಲಿ ಕಡ್ಡಾಯವಾಗಿ ಮೃತ ವ್ಯಕ್ತಿಯ ಮರಣ ಪ್ರಮಾಣ ಪತ್ರವನ್ನು ಆ‌ರ್.ಡಿ.ಎಸ್. ವಂಶವೃಕ್ಷವನ್ನು ಕಡ್ಡಾಯವಾಗಿ ಹಾಜರುಪಡಿಸಬೇಕಾಗುತ್ತದೆ. ವಂಶವೃಕ್ಷದಲ್ಲಿ ಕಡ್ಡಾಯವಾಗಿ ಮೃತವ್ಯಕ್ತಿಯ ಎಲ್ಲಾ ಹೆಣ್ಣುಮಕ್ಕಳ ಹೆಸರನ್ನು ಸೇರಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಕುಟುಂಬ ಕಲಹಗಳು ಹೆಚ್ಚಾಗುತ್ತವೆ.

Read More »

ಇತಿಹಾಸ ಪುಟಗಳಲ್ಲಿ ರುಖಾಬಾಯಿ ಎಂಬ ಹೋರಾಟಗಾರ್ತಿ

ಮಾರುತಿ ಹೆಚ್.

131 to 141

ವಸಾಹತುಶಾಹಿ ಭಾರತದ ಮಹಿಳಾ ಹಕ್ಕುಗಳ ಕಾರಣಕ್ಕಾಗಿ ಹೋರಾಟ ನಡೆಸಿದ ಹಲವು ಸಮಾಜ ಸುಧಾರಕರಲ್ಲಿ ರುಖಾಬಾಯಿ ಕೂಡ ಒಬ್ಬರು. 1880 ರ ಸಾಂಪ್ರದಾಯವಾದಿ ಭಾರತೀಯ ಸಮಾಜದಲ್ಲಿ ಮಹಿಳೆಯರ ಮೇಲೆ ತಾರತಮ್ಯ ಮಾಡುವ ಸಾಮಾಜಿಕ ಸಾಂಪ್ರದಾಯಗಳನ್ನು ಅವರು ಪ್ರತಿಭಟಿಸಿ, 1891ರಲ್ಲಿ ವಯಸ್ಸಿನ ಕನ್ಸೆಂಟ್ ಆಕ್ಟ್ ಅಂಗೀಕಾರಕ್ಕೆ ಕಾರಣರಾದರು. ಅಂದಿನ ಕಾಲಕ್ಕೆ ಸಮಾಜದಲ್ಲಿ ದೊಡ್ಡ ಪಿಡುಗು ಎನ್ನಿಸಿದ ಬಾಲ್ಯವಿವಾಹ ಪದ್ಧತಿ ನಿರ್ನಾಮಕ್ಕೆ ರುಖಾಬಾಯಿ ಸಾಕಷ್ಟು ಶ್ರಮಿಸಿದ್ದರು. ತಾವು ಅನುಭವಿಸಿದ ಕಷ್ಟಗಳನ್ನು ಬೇರೆ ಯಾವ ಹೆಣ್ಣು ಮಕ್ಕಳು ಅನುಭವಿಸಬಾರದು ಎಂದು ಬಾಲ್ಯ ವಿವಾಹದ ವಿರುದ್ಧ ಬಹಳ ಹಿಂದೆಯೇ ನ್ಯಾಯಾಲಯ ಮೆಟ್ಟಿಲು ಏರಿದರು. ಬಾಲ್ಯವಿವಾಹ ಪದ್ಧತಿ ನಿರ್ನಾಮಗೊಳಿಸದೆ ಹಾಗೂ ಸ್ತ್ರೀ ಶಿಕ್ಷಣ ಹೆಚ್ಚು ಹೆಚ್ಚು ಪಸರಿಸದೆ ನಮ್ಮ ಪರಿಸ್ಥಿತಿ ಸುಧಾರಿಸದು ಎಂದು ಸಮಾಜಕ್ಕೆ ಕೂಗಿ ಹೇಳಿದರು. ಅಮೂಲಕ ಮದುವೆಗೆ ಸಮ್ಮತಿ ಅಗತ್ಯ ಎಂದು ಕರೆ ನೀಡಿದ್ದರು. ಬಾಲ್ಯವಿವಾಹ ಪದ್ಧತಿ ಕುರಿತು ಭಿನ್ನ ಅಭಿಪ್ರಾಯಗಳನ್ನು ಮೂಡಿಸುವಲ್ಲಿ ರುಖಾಬಾಯಿ ಯಶಸ್ವಿಯಾದ್ದರು.

Read More »

ಭಾಷೆ, ಸಮಾಜ ಮತ್ತು ಸಂಸ್ಕೃತಿ

ನಾಗರಾಜ ವೀ. ಬಳಿಗೇರ

142 to 150

ಭಾಷೆಯನ್ನು ಕುರಿತು ಭಾಷಾ ವಿಜ್ಞಾನಿಗಳು, ಸಮಾಜವನ್ನು ಕುರಿತು ಸಮಾಜ ವಿಜ್ಞಾನಿಗಳು, ಸಂಸ್ಕೃತಿಯನ್ನು ಕುರಿತು ಮಾನವಶಾಸ್ತ್ರಜ್ಞರು ಶಾಸ್ತ್ರೀಯವಾಗಿ ಅಧ್ಯಯನ ನೆಡೆಸಿ ವಿಶ್ಲೇಷಣೆ ಮಾಡಿದ್ದರೂ, ಈ ಶಿಸ್ತುಗಳ ಅಧ್ಯಯನ ವಿಷಯ ಈ ವಿಶ್ಲೇಷಕರ ಅಧ್ಯಯನದ ಗಡಿಗಳನ್ನು ದಾಟಿ ಚಾಚಿಕೊಂಡಿರುವುದು, ಏಕಕಾಲಕ್ಕೆ ಅಧ್ಯಯನಗಳ ಮಿತಿಯನ್ನು, ವಿಷಯದ ಘನತೆಯನ್ನು ಎತ್ತಿ ತೋರಿಸುತ್ತಿದೆ. ಹಲವಷ್ಟು ಸಮಸ್ಯೆಗಳಿಗೆ ತಮ್ಮ ತಮ್ಮ ನೆಲೆಯಲ್ಲಿ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲರಾದ ಈ ತಜ್ಞರು ತಮ್ಮ ನೆರವಿಗಾಗಿ ಇತರ ಶಿಸ್ತುಗಳತ್ತ ಕೈಚಾಚಿ ನಿಂತದ್ದು ಗಮನಾರ್ಹ ಸಂಗತಿ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಅಂತಃಶಿಸ್ತೀಯ ಅಧ್ಯಯನಗಳಿಗೆ ಹೆಚ್ಚಿನ ಮನ್ನಣೆ ಪ್ರಾಪ್ತವಾಗುತ್ತದೆ. ಕೆಲವು ವಿದ್ವಾಂಸರು ಏಕಕಾಲದಲ್ಲಿ ಅನೇಕ ವಿಷಯಗಳ ಪರಿಣಿತಿ ಸಂಪಾದಿಸಿ ಭಾಷೆ, ಸಂಸ್ಕೃತಿ, ಸಮಾಜದ ಅನೇಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತಿದ್ದಾರೆ. ಭಾಷೆ, ಸಮಾಜ, ಸಂಸ್ಕೃತಿಗಳು ಒಂದಕ್ಕೊಂದು ಆಂತರಿಕ ಸಂಬಂಧಗಳನ್ನು ಹೊಂದಿರುವಂತವು, ಭಾಷೆ ಸಮಾಜದ ಕೂಸು ಸಂಸ್ಕೃತಿಯು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವಂತದ್ದು. Society is a web of social relationship it is knitted through language ಸಮಾಜ ಮಾನವ ಸಂಬಂಧಗಳ ಹೆಣಿಕೆಯಾದ ಆದರೆ ಅದನ್ನು ಹೆಣೆದ ಮಾಂತ್ರಿಕ ಶಕ್ತಿ ಭಾಷೆ ಎನ್ನುತ್ತಾರೆ. ಸಮಾಜಶಾಸ್ತ್ರಜ್ಞರು What people do and think is their culture language is the replica of culture ಸಂಸ್ಕೃತಿಯನ್ನು ಕುರಿತ ಸರಳ ವಿವರಣೆಯಲ್ಲಿ ಜನರ ದೈಹಿಕ ಹಾಗೂ ಮಾನಸಿಕ ಚಟುವಟಿಕೆಗಳೇ ಅವರ ಸಂಸ್ಕೃತಿ ಅದು ಭಾಷೆಯಲ್ಲಿ ಪ್ರತೀಕಗೊಳ್ಳುತ್ತದೆ. ಮೂರೂ ಒಂದರೊಡನೊಂದು ಅವಿನಾಸಂಬಂಧವನ್ನು ಹೆಣೆದುಕೊಂಡಿವೆ. ಒಂದನ್ನುಳಿದು ಇನ್ನೊಂದಕ್ಕೆ ಅಸ್ತಿತ್ವ ಪ್ರಾಪ್ತವಾಗುವುದಿಲ್ಲ. ಒಂದನ್ನು ಬಿಟ್ಟು ಇನ್ನೊಂದನ್ನು ಪರಿಗಣಿಸಲು ಬರುವುದಿಲ್ಲ. ಆದುದರಿಂದ ಭಾಷೆ ಪ್ರತ್ಯೇಕವಾಗಿ ಅಧ್ಯಯನ ಮಾಡಲಾಗುವುದಿಲ್ಲ. ಹಾಗೇ ಸಮಾಜ ಮತ್ತು ಸಂಸ್ಕೃತಿ.

Read More »

ಮಹಿಳೆ ಮತ್ತು ಜಾಹಿರಾತು

ರೇಖಾ ಪ. ನೀರಲಗಿ

151 to 158

ನಮ್ಮ ಪೂರ್ವಿಕರು ಈ ಜಗತ್ತಿನ ಬಹುತೇಕ ಕೊಡುಗೆಗಳನ್ನು ಹೆಣ್ಣಿಗೆ ಹೋಲಿಸಿ ಪೂಜ್ಯ ಸ್ಥಾನವನ್ನು ನೀಡಿ ಗೌರವಿಸಿದ್ದರು. ಆರ್ಯರು ಭಾರತಕ್ಕೆ ಬಂದ ನಂತರ ಅವಳ ಜೀವನ ಕ್ರಮದಲ್ಲಿ ಬದಲಾವಣೆಗಳು ಕಂಡು ಬಂದುವು. ಇಂದು ಅಂದರೆ ಆಧುನಿಕ ಯುಗದಲ್ಲಿಯೂ ಅವಳು ಎಲ್ಲಾ ಕ್ಷೇತ್ರದಲ್ಲಿ ವೈಜ್ಞಾನಿಕವಾಗಿ ಬೆಳೆದರು ಶೋಷಣೆಯಿಂದ ಹೊರತಾಗಿಲ್ಲ. ಪ್ರತಿ ಭಾಷಣದಲ್ಲೂ ಲೇಖನದಲ್ಲೂ Behind every great man there is an Women ಎನ್ನುವ ನಾವೆಲ್ಲಾ ಮೂಲಭೂತ ಹಕ್ಕು ಅವಕಾಶಗಳ ಕಡೆಗೆ ಗಮನ ಹರಿಸಿದಾಗ ಇದು ಬರೀ ವಾಕ್ಯವಾಗಿಯೇ ಉಳಿಯುತ್ತದೆ. ಇದಕ್ಕೆ ಅಪವಾದವಾಗಿ ಶರಣ ಸಂಸ್ಕೃತಿ ಹೆಣ್ಣನ್ನು ಗೌರವದಿಂದ ಕಂಡಿದ್ದು ಹೆಮ್ಮೆಯ ವಿಷಯವಾಗಿದೆ. ಮುದ್ರಣ ಮಾಧ್ಯಮದಲ್ಲಿನ ವರ್ಗೀಕೃತ ಜಾಹಿರಾತುಗಳೂ ಸಹ ಅದರಲ್ಲೂ ಮಹಿಳೆಯನ್ನು ನೋಡುವ ಕ್ರಮವನ್ನು ಈ ರೀತಿ ನೋಡಬಹುದು. 'ಕೆಲಸಕ್ಕೆ ಮಹಿಳೆಯೊಬ್ಬಳು ಬೇಕಾಗಿದ್ದಾಳೆ, ವಯಸ್ಸು 25 ಮೀರಿರಬಾರದು. ಮನೆಗೆಲಸದಲ್ಲಿ ಪರಿಣತಿ ಇರಬೇಕು. ಬೇಕಾಗಿದ್ದಾಳೆ; ನೋಡಲು ಸುಂದರವಾಗಿರಬೇಕು. ವಯಸ್ಸು 30 ಮೀರಿರಬಾರದು ಎನ್ನುವಲ್ಲಿ ಹಾಗೂ ವಿದ್ಯುನ್ಮಾನ ಮಾಧ್ಯಮದಲ್ಲಿನ ವಾರ್ತಾವಾಚಕಿಯರ ಮತ್ತು ನಿರೂಪಕಿಯರ ಅರ್ಹತೆಗಳೆಂದರೆ ಅದರಲ್ಲೂ ಮೊದಲ ಆದ್ಯತೆ ನೋಡಲು ಆಕರ್ಷಕವಾಗಿರಬೇಕು. ವಯಸ್ಸು 25 ಮೀರಿರಬಾರದು. ಆ ಮೇಲೆ ಉಳಿದ ಅರ್ಹತೆಗಳು. ಜೊತೆಗೆ ಪುರುಷರು ಬಳಸುವ ಕ್ಷೌರ ಸಾಧನ, ಕಾಂಡೊಮ್, ಕಾಮ ಉದ್ರೇಕಿತ ಔಷಧಿಗಳು, ಸೋಪಿನಿಂದ ಹಿಡಿದು ಕಾರಿನ ಜಾಹಿರಾತಿಗೂ ಮಹಿಳೆಯ ದೇಹವನ್ನು ಸಂಯೋಜಿಸುವ ಮನೋಭಾವವನ್ನು ನೋಡಿದರೆ ಇವುಗಳ ಹಿಂದೆ ಇರುವ ಧೋರಣೆಗಳೇನು ಎಂಬುದು ತಿಳಿಯುತ್ತದೆ. ಮುಖ್ಯವಾಗಿ ಮಹಿಳಾ ಅಧ್ಯಯನ ವಿಶ್ಲೇಷಣೆ ಮಾಡುವುದು ಇದನ್ನೆ. ಜಾಹಿರಾತು ಮಾಧ್ಯಮಗಳು ಸಮಕಾಲೀನ ಸಂದರ್ಭದಲ್ಲಿ ಕೇವಲ ಆರ್ಥಿಕ ಕ್ಷೇತ್ರಕ್ಕೆ ಸೀಮಿತವಾಗದೆ ಜನಸಾಮಾನ್ಯರ ಸಾಂಸ್ಕೃತಿಕ ಬದುಕನ್ನು ನಿಯಂತ್ರಿಸುವಷ್ಟೆ ಪರಿಣಾಮಕಾರಿಯಾಗಿ ಬೆಳವಣಿಗೆ ಹೊಂದುತ್ತವೆ.

Read More »