ಪಂಪ-ರನ್ನರ ಕಾವ್ಯಗಳಲ್ಲಿ ರಸ ಪ್ರಜ್ಞೆ.

Authors

  • DODDA NAIK H.

Keywords:

ರನ್ನ, ಗದಾಯುದ್ಧ, ಪಂಪ, ಪ್ರಾಚೀನ ಸಾಹಿತ್ಯ, ವಿಕ್ರಮಾರ್ಜುನ ವಿಜಯ

Abstract

ವಿಶ್ವ ಸಾಹಿತ್ಯಕ್ಕೆ ಭಾರತೀಯ ಸಾಹಿತ್ಯದ ಪರಮ ಕೊಡುಗೆ ಎಂದರೆ ರಸ ಸಿದ್ದಾಂತ. ಕಾವ್ಯಕ್ಕೆ ರಸವೇ ಚಕ್ರವರ್ತಿ. ಈ ರಸ ಸಿದ್ಧಾಂತವನ್ನು ಪ್ರತಿಪಾದಿಸಿದ ಪ್ರಥಮ ಅಲಂಕಾರಿಕ ಭರತ. ಹೀಗಾಗಿ ಭಾರತೀಯ ಕಾವ್ಯಮೀಮಾಂಸೆಯಲ್ಲಿ ರಸ ಸಿದ್ಧಾಂತವು ಅಡಿಗಲ್ಲಾಗಿ ಕಾಣಿಸುತ್ತದೆ. ರಸ ಸಿದ್ಧಾಂತದ ಬಗೆಗಿನ ಚರ್ಚೆಗಳು ಕನ್ನಡ ಸಾಹಿತ್ಯ ಲೋಕದಲ್ಲಿ ನಿರಂತರವಾಗಿ ನಡೆಯುತ್ತಲೇ ಇದೆ. ರಸ ಶಬ್ದದ ಪ್ರಯೋಗ ಅತ್ಯಂತ ಪ್ರಾಚೀನ ವೇದಗಳ ಕಾಲದಲ್ಲಿಯೇ ಬಳಕೆಯಾಗಿದೆ. ರಸನಿಷ್ಪತಿಯ ಬಗೆಗೆ ಹಲವು ವ್ಯಾಖ್ಯಾನಗಳಿವೆ. ಸಾಮಾನ್ಯವಾಗಿ ರಸ ಎಂದರೆ ನಾಟಕ, ಕಾವ್ಯಕಲೆಗಳನ್ನು ನೋಡುವುದರಿಂದ ನಮಗಾಗಬಹುದಾದ ಮಾನಸಿಕ ತೃಪ್ತಿ ಅಥವಾ ಆನಂದವನ್ನು ರಸ ಎಂದು ಕರೆಯಬಹುದು. ಆದಿಕವಿ ಪಂಪನು ತನ್ನ ಕಾವ್ಯಗಳಲ್ಲಿ ರಸ ಸಿದ್ಧಾಂತದ ಮಟ್ಟುಗಳನ್ನು ಅತ್ಯಂತ ವಿವೇಚನೆಯಿಂದ ಪ್ರತಿಪಾದಿಸಿರುವುದನ್ನು ನಾವಿಲ್ಲಿ ಕಾಣಬಹುದು. ಕನ್ನಡ ಕಾವ್ಯಮೀಮಾಂಸೆಯು ಜನಪರ ಮೂಲದಿಂದ ಪ್ರಾರಂಭವಾದರೂ ಅದಕ್ಕೆ ಸೈದಾಂತಿಕ ನಿಲುವು ಮತ್ತು ರೂಪರೇಷೆಗಳನ್ನು ಕೊಟ್ಟವನು ಪಂಪ. ಪಂಪ ಭಾರತದಲ್ಲಿ ದುರ್ಯೋಧನ ಭೀಷ್ಮರಿಗೆ ಪಟ್ಟ ಕಟ್ಟಿದ ಸಂದರ್ಭವನ್ನು ನೆನಪು ಮಾಡಿಕೊಂಡರೆ, ಕರ್ಣನ ಯುದ್ಧ ಉತ್ಸಾಹದ ಮಾತುಗಳು ವೀರರಸವನ್ನ ಪ್ರತಿಪಾದಿಸಿದರೆ, ಭೀಷ್ಮರ ಬುದ್ಧಿ ಮಾತುಗಳು ಕರುಣರಸದಂತೆ ಕಾಣಿಸುತ್ತದೆ. ಕೌರವನಿಂದ ದ್ರೌಪದಿಗಾದ ಅವಮಾನವನ್ನು ಸಹಿಸದೆ ಭೀಮನು ಮಾಡಿ ಪ್ರತಿಜ್ಞೆಯೂ ಕೂಡ ವೀರರಸವನ್ನು ಸೂಚಿಸುತ್ತದೆ. ಹೀಗೆ ವೀರ,ಕರುಣ, ಹಾಸ್ಯ, ರೌದ್ರ, ಭಯಾನಕ ಮತ್ತು ಅದ್ಭುತ ಇತ್ಯಾದಿ ರಸಗಳು ಪ್ರತಿಪಾದನೆಯಾಗಿರುವುದನ್ನು ಗುರುತಿಸಬಹುದು. ಅಲ್ಲದೆ ಶಕ್ತಿ ಕವಿ ರನ್ನನು ಕೂಡ ತನ್ನ ಗದಾಯುದ್ಧದಲ್ಲಿ ರಸ ಸಿದ್ಧಾಂತದ ಮಟ್ಟುಗಳನ್ನು ಪ್ರತಿಪಾದಿಸಿದ್ದಾನೆ. ರನ್ನನು ಪಂಪನ ಪಥವನ್ನು ಅನುಸರಿಸಿದವನಾಗಿರುವುದರಿಂದ ಪಂಪನ ಹಾಗೆ ತನ್ನ ಕಾವ್ಯದಲ್ಲಿ ರಸಗಳ ಕುರಿತು ನಿಲುವುಗಳನ್ನು ಪ್ರತಿಪಾದಿಸಿದಾನೆ. ‘ಆರವಂ ನಿರ್ಜಿತ ಕಂಠೀರವಮಂ ನೀರಸ್ತ ಘನರವಮಂ…’ ವೈಶಂಪಾಯನ ಸರೋವರದಲ್ಲಿ ಅಡಗಿದ ದುರ್ಯೋಧನನನ್ನು ಭೀಮನು ಮೊದಲಿಸುವ ಧ್ವನಿಯು ರೌದ್ರ ರಸಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ. ದುರ್ಯೋಧನನ ನೆಲೆಯಲ್ಲಿ ಇದು ಕರಣರಸವಾಗಿ ಕಂಡರೆ, ಭೀಮನ ನೆಲೆಯಲ್ಲಿ ಇದು ವೀರ ರಸವಾಗಿ ಕಾಣುತ್ತದೆ. ಅಕ್ಷೋಹಿಣಿ ಸೈನ್ಯದ ಒಡೆಯನಾದ ದುರ್ಯೋಧನನು ತನ್ನ ಮಗ, ತಮ್ಮ, ಸ್ನೇಹಿತ ಕರ್ಣ, ದ್ರೋಣ ಮೊದಲಾದವರನ್ನು ಯುದ್ಧಭೂಮಿಯಲ್ಲಿ ಕಳೆದುಕೊಂಡು ಹೆಣಗಳನ್ನು ಅರಸುತ್ತ ಬರುವ ದೃಶ್ಯ ಕರುಣರಸಕ್ಕೆ ಸಾಕ್ಷಿಯಾಗುತ್ತದೆ. ಹೀಗೆ ರನ್ನನ ಕಾವ್ಯಗಳಲ್ಲಿ ನವರಸಗಳ ಪ್ರತಿಪಾದನೆಯ ಆಗಿರುವುದನ್ನು ಗುರುತಿಸಬಹುದು. ಹೀಗೆ ಪಂಪ ಮತ್ತು ರನ್ನರ ಕಾವ್ಯಗಳಲ್ಲಿ ಭರತನು ಹೇಳಿದ ಎಂಟು ರಸಗಳು ಮತ್ತು ಉದ್ಭಟ ಕವಿ ಹೇಳಿದ ಶಾಂತರಸವನ್ನು ಸೇರಿ ನವರಸಗಳ ಪ್ರತಿಪಾದನೆಯು ಆಗಿರುವುದನ್ನು ಗುರುತಿಸಬಹುದು. ಅಲ್ಲದೆ ಭಟ್ಟಲೊಲ್ಲಟ, ಭಟ್ಟನಾಯಕ, ಶ್ರೀಶಂಕುಕ ಮೊದಲಾದವರು ರಸ ಸಿದ್ಧಾಂತದ ಬಗೆಗೆ ವಾದ ವಿವಾದಗಳ ವೇದಿಕೆಯನ್ನೇ ಸೃಷ್ಟಿ ಮಾಡಿದ್ದಾರೆ. ಈ ಎಲ್ಲಾ ವಾದ ವಿವಾದಗಳಿಗೆ ಹಾಗೂ ರಸ ಸಿದ್ಧಾಂತದ ವ್ಯಾಖ್ಯಾನಗಳಿಗೆ ಸಂಬಂಧಿಸಿದ ರಸಪ್ರಜ್ಞೆಯ ಹೊಳೆಯು ಪಂಪ ರನ್ನರ ಕಾವ್ಯಗಳಲ್ಲಿ ಹರಿದಿರುವುದನ್ನು ಗುರುತಿಸಬಹುದು. ಪಂಪ ರನ್ನರ ಕಾವ್ಯಗಳಲ್ಲಿ ರಸಪ್ರಜ್ಞೆಯು ಹೊಳೆಯಂತೆ ಹರಿದಿರುವುದು. ಕನ್ನಡಕ್ಕೆ ಕನ್ನಡದೆಯಾದ ಕಾವ್ಯ ಮೀಮಾಂಸೆಯನ್ನು ಕಟ್ಟಲಿಕ್ಕೆ ಬೇಕಾದ ಪರಿಕರಗಳು ಪಂಪ ರನ್ನರ ಕಾವ್ಯಗಳಲ್ಲಿ ಹೇರಳವಾಗಿವೆ. ಸಹೃದಯನ ಓದಿನ ಆಸಕ್ತಿಯು ಕೃತಿಯ ರಸಪ್ರಜ್ಞೆಯನ್ನ ಅವಲಂಬಿಸಿರುತ್ತದೆ. ಈ ವಿಷಯವನ್ನೇ ಈ ನನ್ನ ಲೇಖನದಲ್ಲಿ ಚರ್ಚೆಯನ್ನು ಮಾಡಲಾಗಿದೆ.

Downloads

Published

05.09.2023

How to Cite

DODDA NAIK H. (2023). ಪಂಪ-ರನ್ನರ ಕಾವ್ಯಗಳಲ್ಲಿ ರಸ ಪ್ರಜ್ಞೆ. AKSHARASURYA, 2(10), 56 to 64. Retrieved from https://aksharasurya.com/index.php/latest/article/view/226

Issue

Section

ಸಂಶೋಧನಾ ಲೇಖನಗಳು. | RESEARCH ARTICLE.