Published: 2026-11-03

Table of Contents

Table of Contents

I to IV

ಭ್ರಾತೃತ್ವ ಕದಡುವ ಕೋಮುವಾದ: ತುಮಕೂರಿನ ಮರಳೂರು ದಿಣ್ಣೆಯ ಕೋಮು ಗಲಭೆಯ ಅಧ್ಯಯನ

ಡಾ. ಎಂ.ಎನ್. ದಿನೇಶ್

01 to 08

ತುಮಕೂರು ನಗರದ ಮರಳೂರು ದಿಣ್ಣೆಯಲ್ಲಿ 2019ರಲ್ಲಿ ನಡೆದ ಕೋಮು ಗಲಭೆಯ ಹಿನ್ನೆಲೆ, ಕಾರಣ ಹಾಗೂ ಪರಿಣಾಮಗಳನ್ನು ಇಲ್ಲಿ ವಸ್ತುನಿಷ್ಠವಾಗಿ ವಿಶ್ಲೇಷಿಸಲಾಗಿದೆ. ಜಾತ್ಯತೀತ ಭಾರತದಲ್ಲಿ ಧಾರ್ಮಿಕ ಆಚರಣೆಗಳು ಹೇಗೆ ರಾಜಕೀಯ ಹಿತಾಸಕ್ತಿಗಳ ಸಾಧನವಾಗಿ ಬಳಕೆಯಾಗುತ್ತಿವೆ ಎಂಬುದನ್ನು ಅಧ್ಯಯನವು ಕಟ್ಟಿಕೊಡುತ್ತದೆ. ದಶಕಗಳ ಕಾಲ ಸೌಹಾರ್ದತೆಯಿಂದ ಬದುಕುತ್ತಿದ್ದ ಹಿಂದೂ-ಮುಸ್ಲಿಂ ಸಮುದಾಯಗಳ ನಡುವೆ, ಕರಗ ಮೆರವಣಿಗೆಯ ಸಂದರ್ಭದಲ್ಲಿ ಮಸೀದಿಯೆದುರು ವಾದ್ಯ ಮೊಳಗಿಸಿದ ಸಣ್ಣ ಘಟನೆ ಸಂಘರ್ಷಕ್ಕೆ ತಿರುಗಿದ ಬಗೆಯನ್ನು ವಿವರಿಸಲಾಗಿದೆ. ಯುವಜನತೆಯ ಮನಸ್ಸಿನಲ್ಲಿ ಬಿತ್ತಲಾಗುತ್ತಿರುವ ಧಾರ್ಮಿಕ ಅಸಹಿಷ್ಣುತೆ, ರಾಜಕೀಯ ಪಕ್ಷಗಳ ಪಿತೂರಿ, ನವ ಧಾರ್ಮಿಕ ಸಂಘಟನೆಗಳ ಪ್ರಚೋದನೆ ಮತ್ತು ಸಾಮಾಜಿಕ ಮಾಧ್ಯಮಗಳ ಸುಳ್ಳು ಸುದ್ದಿಗಳು ಈ ಗಲಭೆಗೆ ಪ್ರಮುಖ ಕಾರಣಗಳಾಗಿವೆ. ಘಟನೆಯಿಂದ ಪ್ರಾಣಹಾನಿ ಸಂಭವಿಸದಿದ್ದರೂ, ಎರಡು ಸಮುದಾಯಗಳ ನಡುವಿನ ಪರಸ್ಪರ ನಂಬಿಕೆ, ಆರ್ಥಿಕ ವಹಿವಾಟು ಹಾಗೂ ಸಾಮಾಜಿಕ ಭ್ರಾತೃತ್ವಕ್ಕೆ ಉಂಟಾದ ಆಘಾತವನ್ನು ಮಾರ್ಮಿಕವಾಗಿ ತೆರೆದಿಡಲಾಗಿದೆ. ದೇಶದ ಅಭಿವೃದ್ಧಿಗಾಗಿ ಯುವಕರು ಕೋಮುವಾದದ ಬಲೆಗೆ ಬೀಳದೆ ಸದಾ ಭ್ರಾತೃತ್ವ ಮತ್ತು ಸಹಿಷ್ಣುತೆಯನ್ನು ಮೆರೆಯಬೇಕಾದ ತುರ್ತು ಅಗತ್ಯವನ್ನು ಇಲ್ಲಿ ಪ್ರತಿಪಾದಿಸಲಾಗಿದೆ.

Read More »

ಬಿ. ಎ. ಸನದಿ ಅವರ ಸಾಹಿತ್ಯ

ಎಸ್. ಪಿ. ಅರುಣ

09 to 15

ಕನ್ನಡ ಮಕ್ಕಳ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಪ್ರಮುಖರಲ್ಲಿ ‘ಮಾನವ್ಯ ಕವಿ’ ಎಂದೇ ಖ್ಯಾತರಾದ ಡಾ. ಬಿ. ಎ. ಸನದಿ ಅವರ ಕೊಡುಗೆ ಅಪಾರವಾಗಿದೆ. ಬೆಳಗಾವಿಯ ಬಡ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಇವರು, ತಮ್ಮ ಬಾಲ್ಯದ ಪರಿಸರದಿಂದಲೇ ಸರ್ವಧರ್ಮ ಸಮನ್ವಯ ಹಾಗೂ ಜಾನಪದ ಸಂಸ್ಕಾರವನ್ನು ಮೈಗೂಡಿಸಿಕೊಂಡರು. ಮನೆಮಾತು ಉರ್ದು ಆದರೂ ಕನ್ನಡವನ್ನು ಉಸಿರಾಗಿಸಿಕೊಂಡು ಕವನ, ಕಥೆ, ವಿಮರ್ಶೆ, ಅನುವಾದ ಸೇರಿದಂತೆ 50ಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಸನದಿಯವರ ಸಾಹಿತ್ಯದಲ್ಲಿ ಪ್ರಾದೇಶಿಕ ಭಾಷೆಯ ಸೊಗಸು, ನಿಸರ್ಗದ ರಮ್ಯತೆ, ಶಬ್ದಮಾಧುರ್ಯ ಮತ್ತು ಮನುಷ್ಯ ಪ್ರೀತಿ ಹಾಸುಹೊಕ್ಕಾಗಿದೆ. ಕೃತಕತೆಯಿಲ್ಲದ, ಮಕ್ಕಳ ಮನೋವಿಕಾಸಕ್ಕೆ ಪೂರಕವಾದ ಸುಲಲಿತ ಕಾವ್ಯ ಹಾಗೂ ಕಥೆಗಳನ್ನು ರಚಿಸಿರುವ ಅವರು ಸಾಹಿತ್ಯ ಲೋಕದಲ್ಲಿ ಅಜರಾಮರರಾಗಿದ್ದಾರೆ. ಅವರ ಸರಳ ಸಜ್ಜನಿಕೆಯ ಬದುಕು, ಶ್ರೇಷ್ಠ ಮಾನವೀಯ ಮೌಲ್ಯಗಳು ಹಾಗೂ ಮಕ್ಕಳ ಸಾಹಿತ್ಯಕ್ಕೆ ಅವರು ನೀಡಿದ ಅನನ್ಯ ಕೊಡುಗೆಯನ್ನು ಇಲ್ಲಿ ಸಮಗ್ರವಾಗಿ ವಿಶ್ಲೇಷಿಸಲಾಗಿದೆ.

Read More »

ಡಾ. ಸಿದ್ದಯ್ಯ ಪುರಾಣಿಕರ ವಚನ ಸಾಹಿತ್ಯ ಚಿಂತನೆ ಮತ್ತು ಸಾಮಾಜಿಕ ಪ್ರಸ್ತುತತೆ

ಕಲ್ಪನ ಪಿ.

16 to 21

ಕನ್ನಡದ ಪ್ರಸಿದ್ಧ ಸಾಹಿತಿ ಹಾಗೂ ದಕ್ಷ ಆಡಳಿತಗಾರರಾಗಿದ್ದ ಡಾ. ಸಿದ್ದಯ್ಯ ಪುರಾಣಿಕರ ವಚನ ಸಾಹಿತ್ಯ ಚಿಂತನೆ ಹಾಗೂ ಅದರ ಸಮಕಾಲೀನ ಸಾಮಾಜಿಕ ಪ್ರಸ್ತುತತೆಯನ್ನು ವಿಶ್ಲೇಷಿಸುತ್ತದೆ. 12ನೇ ಶತಮಾನದ ಶರಣರ ಕ್ರಾಂತಿಕಾರಕವಾದ ವಚನ ಸಾಹಿತ್ಯ ಪ್ರಕಾರಕ್ಕೆ 20ನೇ ಶತಮಾನದಲ್ಲಿ ‘ಸ್ವತಂತ್ರಧೀರ ಸಿದ್ಧೇಶ್ವರ’ ಎಂಬ ಅಂಕಿತನಾಮದೊಂದಿಗೆ ವಚನೋದ್ಯಾನದ ಮೂಲಕ ಮರುಜೀವ ನೀಡಿದ ಪುರಾಣಿಕರ ವಿಶಿಷ್ಟ ಕೊಡುಗೆಯನ್ನು ಇಲ್ಲಿ ಮುನ್ನೆಲೆಗೆ ತರಲಾಗಿದೆ. ಪ್ರಾಚೀನ ಪರಂಪರೆ ಮತ್ತು ಆಧುನಿಕ ವೈಜ್ಞಾನಿಕ ಪ್ರಜ್ಞೆಯನ್ನು ಸಮನ್ವಯಗೊಳಿಸಿದ ಇವರು ತಮ್ಮ ವಚನಗಳ ಮೂಲಕ ಜಾತಿ ಮತಗಳನ್ನು ಮೀರಿದ ಮಾನವೀಯತೆ, ವಿನಮ್ರತೆ, ಪರಿಸರ ಕಾಳಜಿ, ಕಾಯಕನಿಷ್ಠೆ ಮತ್ತು ಆಧುನಿಕ ದಾಸೋಹ ಪರಿಕಲ್ಪನೆಗಳನ್ನು ಪ್ರತಿಪಾದಿಸಿದ್ದಾರೆ. ಸ್ವಾತಂತ್ರ್ಯ ಭಾರತದ ಭ್ರಷ್ಟಾಚಾರ, ಮೌಲ್ಯಚ್ಯುತಿ, ಅಹಂಕಾರ ಮತ್ತು ಕಪಟ ರಾಜಕಾರಣವನ್ನು ಖಂಡಿಸಿ ಸಮಾಜಕ್ಕೆ ನೈತಿಕ ಹಾಗೂ ಬೌದ್ಧಿಕ ಮಾರ್ಗದರ್ಶನ ನೀಡುವಲ್ಲಿ ಇವರ ವಚನಗಳು ಇಂದಿಗೂ ಹೇಗೆ ದಾರಿದೀಪವಾಗಿವೆ ಎಂಬುದನ್ನು ಈ ಅಧ್ಯಯನವು ಚರ್ಚಿಸುತ್ತದೆ.

Read More »

ನವೋದಯ ಕವಿಗಳಿಗೆ ಸ್ಪೂರ್ತಿಯಾದ ಗಾಂಧಿ

ನವ್ಯಶ್ರೀ ಎಸ್.

22 to 31

ಗಾಂಧಿ ಕೇವಲ ವ್ಯಕ್ತಿಯಾಗಿ ಮಾತ್ರವಲ್ಲ, ಸಮಷ್ಟಿ ನೆಲೆಯಲ್ಲಿ ಒಂದು ಪ್ರಜ್ಞೆಯಾಗಿ ಸಾಹಿತ್ಯ, ಸಂಸ್ಕೃತಿ, ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ವಲಯಗಳಲ್ಲೂ ತನ್ನದೇ ಆದ ಪ್ರಭಾವಗಳನ್ನು ಬೀರಿರುವುದನ್ನು ಗಮನಿಸಬಹುದಾಗಿದೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದ ಚಾರಿತ್ರಿಕ ಸನ್ನಿವೇಶವಾಗಲಿ ಆನಂತರ ಗಾಂಧಿ ಎಂಬ ವ್ಯಕ್ತಿತ್ವ ಅನಾವರಣಗೊಂಡ ಬಗೆಯಾಗಲಿ ನಮ್ಮ ಮುಂದೆ ದಾಖಲಾದ ನೆಲೆಯಂತೂ ವಿಶಿಷ್ಟವಾದದ್ದು. ‘ಗಾಂಧಿ’ ಎನ್ನುವ ಪ್ರಜ್ಞೆ ಕನ್ನಡ ಸಾಹಿತ್ಯವನ್ನು ಬಹಳಷ್ಟು ಪ್ರಭಾವಿಸಿದೆ ಎಂದರೆ ತಪ್ಪಾಗಲಾರದು. ಸ್ವಾತಂತ್ರ್ಯ ಪೂರ್ವ ಮತ್ತು ಸ್ವತಂತ್ರ ಭಾರತದ ಕುರಿತ ಸಾಹಿತ್ಯ ಬರವಣಿಗೆಯಲ್ಲಿ ಪ್ರಮುಖವಾಗಿ ಕಾಣಸಿಗುವ ಪಾತ್ರ ಅಥವಾ ಪ್ರಮುಖ ಪಾತ್ರಕ್ಕೆ ಪ್ರೇರಣೆಯಾಗಿ ನಿಂತಿರುವ ಶಕ್ತಿ ಅದು ಗಾಂಧಿ. ಹಾಗಾಗಿ ಗಾಂಧಿ ಕೇವಲ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಚಾರಿತ್ರಿಕ ಪ್ರಜ್ಞೆಯಾಗಿ ಮಾತ್ರ ಉಳಿಯದೆ, ಸಾಹಿತ್ಯ ಲೋಕದಲ್ಲೂ ತಮ್ಮ ಛಾಪನ್ನು ಮೂಡಿಸಿರುವುದು ಗಮನಾರ್ಹವಾದ ಸಂಗತಿ. ನವೋದಯ ಪೂರ್ವದಿಂದ ಆದಿಯಾಗಿ ಆಧುನಿಕ ಸ್ತ್ರೀವಾದ ಸಾಹಿತ್ಯದವರೆಗೂ ಗಾಂಧಿಯ ಕುರಿತಾಗಿ ಬಂದಿರುವ ಕತೆ, ಕವನ, ಕಾದಂಬರಿ, ನಾಟಕ ಇನ್ನಿತರ ಸೃಜನಶೀಲ ಹಾಗೂ ಸೃಜನೇತರ ಸಾಹಿತ್ಯ ಪ್ರಕಾರಗಳೇ ಇದಕ್ಕೆ ಸಾಕ್ಷಿ. ಕನ್ನಡದ ಬಹುತೇಕ ಸಾಹಿತಿಗಳು ತಮ್ಮ ಕಾವ್ಯ ವಸ್ತುವಾಗಿಯೋ, ಕಥನ ವಸ್ತುವಾಗಿಯೋ, ನಾಟಕ ರಚನೆಯ ಭಾಗೀದಾರನಾಗಿಯೋ, ಕಾದಂಬರಿಗಳ ಪಾತ್ರವಾಗಿಯೋ ಕಾಣಿಸಿರುವುದು ಸೃಜನಶೀಲತೆಗೆ ಹಿಡಿದ ದೊಡ್ಡ ಕೈಗನ್ನಡಿಯೇ ಸರಿ. ಈ ಸೃಜನಶೀಲತೆಯ ವ್ಯಾಪ್ತಿಯನ್ನು ವಿಸ್ತಾರವಾಗಿ ಅಧ್ಯಯನ ಮಾಡುವ, ಅದಕ್ಕೊಂದು ಹೊಸ ತಾತ್ವಿಕ ಪರಿಪ್ರೇಕ್ಷ್ಯವನ್ನು ಒದಗಿಸುವ ಮೂಲಕ ಕನ್ನಡ ಜಾಯಮಾನ ಗಾಂಧಿ ಎಂಬ ವಿಶ್ವಾತ್ಮಕನನ್ನು ಕನ್ನಡಿಗೀಕರಿಸಿದ, ಪ್ರಾದೇಶಿಕಗೊಳಿಸಿದ, ಸಮಕಾಲೀನಗೊಳಿಸಿದ ಕ್ರಿಯೆಯನ್ನು ಒಟ್ಟುಗೂಡಿಸುವ ಕಾರ್ಯಕ್ಕೆ ಈ ಅಧ್ಯಯನವು ಮುನ್ನುಡಿಯನ್ನಿಟ್ಟಿದೆ. 

Read More »

ಪ್ರಾಚೀನ ಪರಂಪರೆಯಲ್ಲಿ ಕನ್ನಡ ನಾಡು

ನಾಗೇಂದ್ರ ಎಚ್. ಗಂಗಾಧರಯ್ಯ, ಅಶ್ವತ್ಥ ಎಸ್., ಸುಮ ವೈ.ಎನ್.

32 to 35

ಪ್ರಾಚೀನ ಪರಂಪರೆಯಲ್ಲಿ ಕನ್ನಡ ನಾಡು ತನ್ನದೇ ಆದ ವಿಶಿಷ್ಟ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಮಹತ್ವವನ್ನು ಹೊಂದಿದೆ. ದ್ರಾವಿಡ ಭಾಷಾ ವರ್ಗದ ಪ್ರಮುಖ ಭಾಷೆಯಾಗಿರುವ ಕನ್ನಡವು ಭಾರತದ ಸಂವಿಧಾನ ಮಾನ್ಯತೆ ಪಡೆದ 22 ಭಾಷೆಗಳಲ್ಲಿ ಒಂದಾಗಿದೆ. ಕರ್ನಾಟಕದ ಪ್ರಾಚೀನತೆ, ಕನ್ನಡ ಭಾಷೆಯ ಉಗಮ ಮತ್ತು ಬೆಳವಣಿಗೆ ಹಾಗೂ ‘ಕರ್ನಾಟಕ’, ‘ಕರ್ಣಾಟಕ’, ‘ಕರುನಾಡು’ ಮುಂತಾದ ಪದಗಳ ನಿಷ್ಪತ್ತಿಯ ಕುರಿತು ಈ ಲೇಖನವು ಚರ್ಚಿಸುತ್ತದೆ. ರಾಮಾಯಣ ಮತ್ತು ಮಹಾಭಾರತಗಳೊಂದಿಗೆ ಕರ್ನಾಟಕದ ವಿವಿಧ ಸ್ಥಳಗಳನ್ನು ಬೆಸೆಯುವ ಐತಿಹ್ಯಗಳು, ಪೌರಾಣಿಕ ನಂಬಿಕೆಗಳು ಹಾಗೂ ಜನಪದ ಪರಂಪರೆಗಳು ಕನ್ನಡಿಗರ ಸಾಂಸ್ಕೃತಿಕ ಅಭಿಮಾನವನ್ನು ಪ್ರತಿಬಿಂಬಿಸುತ್ತವೆ. ಮಹಾಕಾವ್ಯಗಳು, ಪುರಾಣಗಳು, ಶಾಸನಗಳು ಮತ್ತು ಪ್ರಾಚೀನ ಸಾಹಿತ್ಯ ಕೃತಿಗಳಲ್ಲಿ ದೊರೆಯುವ ಕರ್ನಾಟಕದ ಉಲ್ಲೇಖಗಳು ನಾಡಿನ ಪ್ರಾಚೀನ ಪರಂಪರೆಯ ಅಧ್ಯಯನಕ್ಕೆ ಮಹತ್ವದ ಆಧಾರಗಳಾಗಿವೆ. ಪಂಪ, ನಾಗವರ್ಮ, ಕೇಶಿರಾಜ, ಕುಮಾರವ್ಯಾಸ ಮೊದಲಾದ ಕವಿಗಳ ಕೃತಿಗಳಲ್ಲಿ ಕರ್ನಾಟಕದ ಭಾಷೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ವೈಶಿಷ್ಟ್ಯಗಳು ಅಭಿವ್ಯಕ್ತಗೊಂಡಿವೆ. ಪ್ರಾಚೀನ ಗ್ರಂಥಗಳಲ್ಲಿನ ಉಲ್ಲೇಖಗಳು, ಶಾಸನಾಧಾರಗಳು ಮತ್ತು ಜನಪ್ರಚಲಿತ ಐತಿಹ್ಯಗಳನ್ನು ಪ್ರತ್ಯೇಕವಾಗಿ ಗುರುತಿಸುವ ಮೂಲಕ ಕನ್ನಡ ನಾಡಿನ ಪರಂಪರೆಯನ್ನು ಸಮಗ್ರವಾಗಿ ಅರ್ಥೈಸುವುದು ಈ ಲೇಖನದ ಮುಖ್ಯ ಉದ್ದೇಶವಾಗಿದೆ. 

Read More »

ಕರ್ನಾಟಕದ ರಾಜಕೀಯ ಮತ್ತು ಸಾಮಾಜಿಕ ಪರಿವರ್ತನೆಯಲ್ಲಿ ಕನ್ನಡ ಸಾಹಿತ್ಯದ ಪಾತ್ರ: ಒಂದು ಅಧ್ಯಯನ

ನಾಗೇಶ ಶೆಟ್ಟಿ

36 to 46

ಸಾಹಿತ್ಯವು ಸಮಾಜದ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಬದುಕಿನ ಪ್ರತಿಬಿಂಬ ಮಾತ್ರವಲ್ಲದೆ, ರಾಜಕೀಯ ಮತ್ತು ಸಾಮಾಜಿಕ ಪ್ರಜ್ಞೆಯನ್ನು ರೂಪಿಸುವ ಹಾಗೂ ಸಮಾಜದ ಪರಿವರ್ತನೆಗೆ ಪ್ರೇರಣೆ ನೀಡುವ ಸಾಧನವಾಗಿದೆ. ಕರ್ನಾಟಕದಲ್ಲಿ ಕನ್ನಡ ಸಾಹಿತ್ಯವು ಕಲಾತ್ಮಕ ಅಭಿವ್ಯಕ್ತಿಯ ಮಾಧ್ಯಮವನ್ನು ಮೀರಿ ರಾಜಕೀಯ ಜಾಗೃತಿ, ಸಾಮಾಜಿಕ ಸುಧಾರಣೆ, ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಪ್ರಜಾಸತ್ತಾತ್ಮಕ ಚಟುವಟಿಕೆಯಲ್ಲಿ ಭಾಗವಹಿಸಲು ಉತ್ತೇಜಿಸುವ ಪ್ರಮುಖ ಶಕ್ತಿಯಾಗಿ ಬೆಳೆದಿದೆ. ಹನ್ನೆರಡನೇ ಶತಮಾನದ ವಚನ ಚಳವಳಿಯಿಂದ ಪ್ರಾರಂಭವಾಗಿ ಪ್ರಗತಿಶೀಲ, ನವ್ಯ, ಬಂಡಾಯ ಮತ್ತು ದಲಿತ ಸಾಹಿತ್ಯ ಚಳವಳಿಗಳವರೆಗೆ ಕನ್ನಡ ಸಾಹಿತ್ಯವು ಸಮಾಜದಲ್ಲಿನ ಅಸಮಾನತೆ, ಜಾತಿ ವ್ಯವಸ್ಥೆ, ಅಸ್ಪೃಶ್ಯತೆ, ಲಿಂಗ ತಾರತಮ್ಯ, ಶೋಷಣೆ, ರಾಜಕೀಯ ಅಧಿಕಾರದ ದುರುಪಯೋಗ ಮತ್ತು ಸಾಮಾಜಿಕ ಬಹಿಷ್ಕಾರಗಳನ್ನು ಪ್ರಶ್ನಿಸುವ ಮೂಲಕ ತನ್ನ ಜವಾಬ್ದಾರಿಯನ್ನು ವ್ಯಕ್ತಪಡಿಸಿದೆ.
ಈ ಸಂಶೋಧನಾ ಲೇಖನದಲ್ಲಿ ಕರ್ನಾಟಕದಲ್ಲಿ ಕನ್ನಡ ಸಾಹಿತ್ಯವು ರಾಜಕೀಯ ಮತ್ತು ಸಾಮಾಜಿಕ ಸುಧಾರಣೆಗೆ ನೀಡಿದ ಕೊಡುಗೆಯನ್ನು ಐತಿಹಾಸಿಕ ಮತ್ತು ವಿಶ್ಲೇಷಣಾತ್ಮಕ ದೃಷ್ಟಿಕೋನದಿಂದ ಅಧ್ಯಯನ ನಡೆಸಲಾಗಿದೆ. ಬಸವಣ್ಣ, ಕುವೆಂಪು, ಡಿ. ಆರ್. ಬೇಂದ್ರೆ, ಯು. ಆರ್. ಅನಂತಮೂರ್ತಿ, ಸಿದ್ದಲಿಂಗಯ್ಯ ಮತ್ತು ದೇವನೂರು ಮಹಾದೇವ ಮುಂತಾದ ಪ್ರಮುಖ ಸಾಹಿತಿಗಳ ಚಿಂತನೆ ಹಾಗೂ ಸಾಹಿತ್ಯಿಕ ಕೊಡುಗೆಗಳನ್ನು ಅಧ್ಯಯನಕ್ಕೆ ಪ್ರಮುಖ ಆಧಾರವಾಗಿ ಪರಿಗಣಿಸಲಾಗಿದೆ. ವಚನ ಸಾಹಿತ್ಯವು ಸಮಾನತೆ ಮತ್ತು ಕಾಯಕದ ಗೌರವವನ್ನು ಪ್ರತಿಪಾದಿಸಿದರೆ, ಪ್ರಗತಿಶೀಲ ಸಾಹಿತ್ಯವು ಬಡತನ ಮತ್ತು ಆರ್ಥಿಕ ಶೋಷಣೆಯನ್ನು ಪ್ರಶ್ನಿಸಿತ್ತು. ನವ್ಯ ಸಾಹಿತ್ಯವು ವ್ಯಕ್ತಿ, ಸಮಾಜ, ಪರಂಪರೆ ಮತ್ತು ಅಧಿಕಾರದ ನಡುವಿನ ಸಂಘರ್ಷಗಳನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿತು. ಬಂಡಾಯ ಮತ್ತು ದಲಿತ ಸಾಹಿತ್ಯವು ಕೆಳಸಮುದಾಯಗಳ ಧ್ವನಿಯನ್ನು ತೆರೆಯುವ ಮೂಲಕ ಸಾಮಾಜಿಕ ನ್ಯಾಯ ಮತ್ತು ರಾಜಕೀಯ ಸಬಲೀಕರಣಕ್ಕೆ ಹೊಸ ಆಯಾಮ ನೀಡಿತು.
ಈ ಅಧ್ಯಯನವು ಗುಣಾತ್ಮಕ ಮತ್ತು ವಿಶ್ಲೇಷಣಾತ್ಮಕ ಸಂಶೋಧನಾ ವಿಧಾನವನ್ನು ಅಳವಡಿಸಿಕೊಂಡಿದ್ದು, ಪುಸ್ತಕಗಳು, ಸಂಶೋಧನಾ ಲೇಖನಗಳು, ಸಾಹಿತ್ಯ ವಿಮರ್ಶೆಗಳು, ಐತಿಹಾಸಿಕ ದಾಖಲೆಗಳು ಮತ್ತು ಇತರ ಮೂಲಗಳನ್ನು ಆಧರಿಸಿ ವಿಷಯಾಧಾರಿತ ವಿಶ್ಲೇಷಣೆ ನಡೆಸಲಾಗಿದೆ. ಕನ್ನಡ ಸಾಹಿತ್ಯವು ರಾಜಕೀಯ ಜಾಗೃತಿ ಮತ್ತು ಸಾಮಾಜಿಕ ಸುಧಾರಣೆಯ ಮೇಲೆ ಗಮನಾರ್ಹ ಪ್ರಭಾವ ಬೀರಿದೆ ಎಂಬುದು ಅಧ್ಯಯನದ ಪ್ರಮುಖ ಅಂಶವಾಗಿದೆ. ಸಮಕಾಲೀನ ಕರ್ನಾಟಕದ ಸಾಹಿತ್ಯವು ಸಾಮಾಜಿಕ ನ್ಯಾಯ, ಮಾನವ ಹಕ್ಕುಗಳು, ಪರಿಸರ, ಲಿಂಗ ಸಮಾನತೆ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ಕುರಿತು ಸಾರ್ವಜನಿಕ ಚರ್ಚೆಯನ್ನು ಪ್ರಾರಂಭಿಸಲು ಕಾರಣವಾಗಿದೆ.

Read More »

ಸ್ವಾಮಿ ರೇಮಂಡ್ ಅವರ ಚಿಂತನೆಗಳಲ್ಲಿ ಮಾತೆ ಮರಿಯಮ್ಮ

ಪ್ರೇಮಲತಾ, ಡಾ. ರಾಜಶೇಖರ ಜಮದಂಡಿ

47 to 60

ಸ್ವಾಮಿ ರೇಮಂಡ್ ಅವರ ಆಧ್ಯಾತ್ಮಿಕ ಚಿಂತನೆಗಳ ಹಿನ್ನೆಲೆಯಲ್ಲಿ ಮಾತೆ ಮರಿಯಮ್ಮನವರ ವ್ಯಕ್ತಿತ್ವವನ್ನು ಮಹಿಳಾ ವಿಕಾಸ ಹಾಗೂ ಜೀವನ ಮೌಲ್ಯಗಳ ದೃಷ್ಟಿಯಿಂದ ಇಲ್ಲಿ ಸಮಗ್ರವಾಗಿ ವಿಶ್ಲೇಷಿಸಲಾಗಿದೆ. ಮರಿಯಮ್ಮ ಕೇವಲ ಧಾರ್ಮಿಕ ಭಕ್ತಿಯ ಸಂಕೇತವಲ್ಲ; ಬದಲಾಗಿ ವಿಶ್ವಾಸ, ತ್ಯಾಗ, ಸೇವೆ ಮತ್ತು ಸಾಮಾಜಿಕ ಕಾಳಜಿಯ ಮೂರ್ತರೂಪ. ದೇವರ ಕರೆಯನ್ನು ಸ್ವೀಕರಿಸಿದ ರೀತಿ, ಕಾನಾದಲ್ಲಿ ತೋರಿದ ವಿವೇಚನಾಶೀಲ ನಾಯಕತ್ವ ಹಾಗೂ ಕಷ್ಟಕಾಲದ ಸ್ಥೈರ್ಯವು ಇಂದಿನ ಆಧುನಿಕ ಮಹಿಳೆಯರಿಗೆ ಶ್ರೇಷ್ಠ ಆದರ್ಶವಾಗಿದೆ. ಮಹಿಳೆಯರು ಕೇವಲ ಕೌಟುಂಬಿಕ ಪಾತ್ರಗಳಿಗೆ ಸೀಮಿತವಾಗದೆ ನೈತಿಕ, ಮಾನವೀಯ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜದಲ್ಲಿ ಸಕ್ರಿಯವಾಗಿ ಹಾಗೂ ಘನತೆಯಿಂದ ಬದುಕಲು ಮರಿಯಮ್ಮನ ಬದುಕು ಹೇಗೆ ದಾರಿದೀಪವಾಗಿದೆ ಎಂಬುದನ್ನು ರೇಮಂಡರ ವಿಚಾರಧಾರೆ ಹಾಗೂ ಧಾರ್ಮಿಕ ಆಕರಗಳ ಆಧಾರದ ಮೇಲೆ ಸ್ಪಷ್ಟಪಡಿಸಲಾಗಿದೆ.

Read More »

ಧಾರ್ಮಿಕ ಸಾಮರಸ್ಯದ ಚಿಂತಕ - ದಾರಾ ಶಿಕೋಹ

ಡಾ. ಬಸೀರಾಬಾನು ನಿಡಗುಂದಿ

61 to 69

ದಾರಾ ಶಿಕೋಹ ಭಾರತೀಯ ಇತಿಹಾಸದಲ್ಲಿ ಧಾರ್ಮಿಕ ಸಾಮರಸ್ಯ, ಸಹಿಷ್ಣುತೆ ಮತ್ತು ಆಧ್ಯಾತ್ಮಿಕ ಚಿಂತಕರಾಗಿ ಗುರುತಿಸಿಕೊಂಡಿದ್ದಾರೆ. ಇಸ್ಲಾಮಿನ ಸೂಫಿ ಪರಂಪರೆ ಹಾಗೂ ಹಿಂದೂ ಧರ್ಮದ ತಾತ್ವಿಕ ಚಿಂತನೆಗಳ ನಡುವೆ ಸಾಮ್ಯತೆಯನ್ನು ಗುರುತಿಸುವುದು ಅವರ ಮುಖ್ಯ ಉದ್ದೇಶವಾಗಿತ್ತು. ವಿವಿಧ ಧರ್ಮಗಳ ಮೂಲತತ್ವಗಳನ್ನು ಅರಿತುಕೊಳ್ಳುವ ಮೂಲಕ ಮಾನವೀಯ ಏಕತೆಯನ್ನು ಸಾಧಿಸಬಹುದು ಎಂಬ ನಂಬಿಕೆ ಅವರದಾಗಿತ್ತು. ಉಪನಿಷತ್ತುಗಳನ್ನು ಪರ್ಷಿಯನ್ ಭಾಷೆಗೆ ಅನುವಾದಿಸುವ ಮೂಲಕ ಭಾರತೀಯ ತಾತ್ವಿಕ ಚಿಂತನೆಗಳನ್ನು ಇತರ ಭಾಷಿಕರಿಗೂ ಪರಿಚಯಿಸಿದರು. ಧರ್ಮಗಳ ಬಾಹ್ಯ ಆಚರಣೆಗಳಿಗಿಂತ ಅವುಗಳ ಆಂತರಿಕ ಆಧ್ಯಾತ್ಮಿಕ ಮೌಲ್ಯಗಳಿಗೆ ಹೆಚ್ಚಿನ ಮಹತ್ವ ನೀಡಿದರು. ಅವರ ಚಿಂತನೆಗಳು ಧಾರ್ಮಿಕ ಸಹಬಾಳ್ವೆ, ಪರಸ್ಪರ ಗೌರವ ಮತ್ತು ಸಾಮರಸ್ಯದ ಮಹತ್ವವನ್ನು ಸಾರುತ್ತವೆ. ಇಂದಿನ ಬಹುಧರ್ಮೀಯ ಸಮಾಜದಲ್ಲಿಯೂ ದಾರಾ ಶಿಕೋಹ ವಿಚಾರಗಳು ಪ್ರಸ್ತುತವಾಗಿವೆ. ಧರ್ಮಗಳ ನಡುವಿನ ಭಿನ್ನತೆಗಳಿಗಿಂತ ಸಾಮಾನ್ಯ ಮಾನವೀಯ ಮೌಲ್ಯಗಳನ್ನು ಗುರುತಿಸುವುದು ಅವರ ಚಿಂತನೆಯ ವೈಶಿಷ್ಟ್ಯವಾಗಿದೆ. 

Read More »

ವಚನಕಾರರ ಪ್ರಮಾಣ ಮೀಮಾಂಸೆ

ಡಾ. ಮಲ್ಲಪ್ಪ ಎನ್. ಬಂಡಿ

70 to 82

ವಚನಕಾರರ ಜ್ಞಾನಮೀಮಾಂಸೆಯು ಭಾರತೀಯ ದಾರ್ಶನಿಕ ಪರಂಪರೆಗಳ ಸಾಂಪ್ರದಾಯಿಕ ಜ್ಞಾನಮಾರ್ಗಗಳಿಗಿಂತ ತೀರಾ ಭಿನ್ನವಾದ ಹಾಗೂ ವಿಶಿಷ್ಟವಾದ ನೆಲೆಯನ್ನು ಹೊಂದಿದೆ. ಪ್ರತ್ಯಕ್ಷ, ಅನುಮಾನ, ಶಬ್ದ ಮತ್ತು ಉಪಮಾನ ಪ್ರಮಾಣಗಳನ್ನು ವಚನಕಾರರು ಜಡ ಹಾಗೂ ಸ್ಥಿರ ಸಾಧನಗಳೆಂದು ತಿರಸ್ಕರಿಸಿದ್ದಾರೆ. ಭಾಷೆಯ ಮಿತಿಗಳು ಹಾಗೂ ವೇದ, ಶಾಸ್ತ್ರ, ಪುರಾಣಗಳಂತಹ ಶಬ್ದಪ್ರಮಾಣಗಳು ಕಾಲಾನಂತರದಲ್ಲಿ ಸಾಮಾಜಿಕ ಅಸಮಾನತೆಯನ್ನು ಪೋಷಿಸಿದ ಕಾರಣಕ್ಕೆ ಅವುಗಳನ್ನು ಕಟುವಾಗಿ ನಿರಾಕರಿಸಲಾಗಿದೆ. ಬದಲಾಗಿ, ನಿರಂತರ ಚಲನಶೀಲವಾದ ‘ಅನುಭಾವ’ವನ್ನೇ ಅವರು ಪರಮ ಪ್ರಮಾಣವೆಂದು ಒಪ್ಪುತ್ತಾರೆ. ಇಂದ್ರಿಯಗಳ ಮಿತಿಯನ್ನು ಅರಿತಿದ್ದ ಅವರು, ಹಳೆಯ ಪ್ರಮಾಣಗಳನ್ನು ಕೆಡವುತ್ತಾ ಷಟ್ಸ್ಥಲ, ಅಷ್ಟಾವರಣಗಳಂತಹ ಹೊಸ ಚಲನಶೀಲ ಪ್ರಮಾಣಗಳನ್ನು ಸೃಷ್ಟಿಸಿದರು. ಹೀಗೆ ರಚನೆ ಮತ್ತು ನಿರಚನೆಯ ಪ್ರಕ್ರಿಯೆಯ ಮೂಲಕ ಲೋಕವನ್ನು ಗ್ರಹಿಸಿದರೂ, ಅಂತಿಮವಾಗಿ ಪರಶಿವ ಅಥವಾ ಪರತತ್ವವನ್ನು ‘ಅಪ್ರಮಾಣ’, ‘ಅಗಮ್ಯ’ ಹಾಗೂ ‘ಅಗೋಚರ’ ಎಂದೇ ದಾರ್ಶನಿಕವಾಗಿ ಪ್ರತಿಪಾದಿಸಿದ್ದಾರೆ. ಇದು ವಚನಕಾರರ ತರ್ಕಾತೀತವಾದ ಹಾಗೂ ಅನುಭಾವಿಕವಾದ ನಿಲುವನ್ನು ಎತ್ತಿಹಿಡಿಯುತ್ತದೆ.

Read More »

ವಚನಕಾರ್ತಿಯರ ವಚನಗಳಲ್ಲಿ ಭಕ್ತಿ ರೂಪಕದ ಪರಿಕಲ್ಪನೆ

ಮಹಾಲಿಂಗ ಪ್ರಭು

83 to 92

ವಚನಕಾರ್ತಿಯರ ಸಾಹಿತ್ಯದಲ್ಲಿ ‘ಭಕ್ತಿ’ಯ ಕಲ್ಪನೆಯು ಸಾಂಪ್ರದಾಯಿಕ ಮತ್ತು ಆಚರಣಾತ್ಮಕ ನೆಲೆಗಳನ್ನು ಮೀರಿ ವಿಶಿಷ್ಟ ರೂಪಕವಾಗಿ ಬೆಳೆದಿದೆ. ಉಪನಿಷತ್ತು ಹಾಗೂ ಪುರಾಣಗಳ ಕಾಲದ ಕರ್ಮಠ ಭಕ್ತಿಯ ವ್ಯಾಖ್ಯಾನಗಳನ್ನು ಬದಿಗೊತ್ತಿ, ಶರಣೆಯರು ಕಾಯಕ, ದೇಹ ಮತ್ತು ಅನುಭಾವಗಳ ಮೂಲಕ ಭಕ್ತಿಗೆ ಹೊಸ ಭಾಷ್ಯ ಬರೆದರು. ಅಕ್ಕಮಹಾದೇವಿ, ಮೋಳಿಗೆ ಮಹಾದೇವಿ, ಅಮ್ಮುಗೆ ರಾಯಮ್ಮ ಮುಂತಾದವರು ಗುಡಿ-ಗೋಪುರಗಳ ಸ್ಥಾವರ ಭಕ್ತಿಯನ್ನು ತಿರಸ್ಕರಿಸಿ, ‘ದೇಹವೇ ದೇಗುಲ’ ಎಂಬ ತತ್ವವನ್ನು ಪ್ರತಿಪಾದಿಸಿದ್ದಾರೆ. ಪ್ರಾಪಂಚಿಕ ಡಂಬಾಚಾರಗಳು ಹಾಗೂ ವ್ರತ-ನೇಮಗಳನ್ನು ಅಲ್ಲಗಳೆದು, ದೈನಂದಿನ ಬದುಕು, ವೃತ್ತಿ ನಿಷ್ಠೆ ಮತ್ತು ಕಾಯಕಗಳಲ್ಲೇ ದೇವರನ್ನು ಕಾಣುವ ಅವರ ನಿಲುವುಗಳು ಅನನ್ಯವಾಗಿವೆ. ಭಕ್ತಿಯನ್ನು ಕೇವಲ ಪೂಜಾವಿಧಾನವಾಗಿ ನೋಡದೆ, ಅದನ್ನು ಬದುಕಿನ ಅವಿಭಾಜ್ಯ ಅಂಗವಾಗಿ ಹಾಗೂ ಲಿಂಗಭೇದವಿಲ್ಲದ ಸಮಾನತೆಯ ಸಾಧನವಾಗಿ ಕಟ್ಟಿಕೊಟ್ಟ ಸ್ತ್ರೀ ಸಂವೇದನೆಯ ತಾತ್ವಿಕ ನೆಲೆಗಳನ್ನು ಇಲ್ಲಿ ವಿಸ್ತೃತವಾಗಿ ವಿಶ್ಲೇಷಿಸಲಾಗಿದೆ.

Read More »

‘ಊರುಕೇರಿ’ ಆತ್ಮಕತೆಗಳ ಒಳನೋಟ

ಮಹೇಶ್ ಯು.ಸಿ.

93 to 101

ಡಾ. ಸಿದ್ದಲಿಂಗಯ್ಯನವರ ‘ಊರುಕೇರಿ’ (ಭಾಗ 1 ಮತ್ತು 2) ಕೃತಿಯು ಕನ್ನಡ ದಲಿತ ಆತ್ಮಕಥನಗಳ ಪರಂಪರೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ದಲಿತ ಮತ್ತು ಬಂಡಾಯ ಸಾಹಿತ್ಯದ ಉತ್ತುಂಗದ ಕಾಲದಲ್ಲಿ ರಚಿತವಾದರೂ, ಕಾವ್ಯದ ರೊಚ್ಚಿನ ಭಾಷೆಯ ಬದಲಿಗೆ ವ್ಯಂಗ್ಯ, ಹಾಸ್ಯ ಹಾಗೂ ನಿರ್ಲಿಪ್ತ ಶೈಲಿಯಲ್ಲಿ ನೋವು-ಅಪಮಾನಗಳನ್ನು ಇದರಲ್ಲಿ ಅಭಿವ್ಯಕ್ತಿಸಲಾಗಿದೆ. ಇದು ಕೇವಲ ವೈಯಕ್ತಿಕ ಯಶೋಗಾಥೆಯಾಗದೆ, ಇಡೀ ದಲಿತ ಸಮುದಾಯದ ಬಡತನ, ಹಸಿವು, ಅಸ್ಪೃಶ್ಯತೆ ಹಾಗೂ ಸಾಮಾಜಿಕ ಸಂಘರ್ಷಗಳ ಸಾಂಸ್ಕೃತಿಕ ಮತ್ತು ಚಾರಿತ್ರಿಕ ದಾಖಲೆಯಾಗಿದೆ. ಮಾಗಡಿಯಿಂದ ಬೆಂಗಳೂರಿನ ಕೊಳಚೆಪ್ರದೇಶದವರೆಗಿನ ಬದುಕು, ಕುಡಿಯುವ ನೀರಿನ ಸಮಸ್ಯೆ, ಜಾತೀಯತೆಯ ಕ್ರೌರ್ಯ ಹಾಗೂ ನಂತರದ ದಿನಗಳಲ್ಲಿ ಅಂಬೇಡ್ಕರ್, ಲೋಹಿಯಾ, ಮಾರ್ಕ್ಸ್‌ವಾದದ ಪ್ರಭಾವದಿಂದ ಮೂಡಿದ ವೈಚಾರಿಕ ಎಚ್ಚರ, ಬೂಸಾ ಚಳವಳಿಯಂತಹ ಐತಿಹಾಸಿಕ ಘಟನಾವಳಿಗಳನ್ನು ಇದು ಕಟ್ಟಿಕೊಡುತ್ತದೆ. ತೀವ್ರ ಶೋಷಣೆಯ ನಡುವೆಯೂ ಬದುಕನ್ನು ಪ್ರೀತಿಸುತ್ತಾ ಸಮಾಜವನ್ನು ಎದುರಿಸಿದ ದಲಿತರ ಅಸ್ಮಿತೆ ಮತ್ತು ಹೋರಾಟದ ದಿಕ್ಸೂಚಿಯಾಗಿ ಈ ಕೃತಿಯ ಮಹತ್ವವನ್ನು ಇಲ್ಲಿ ವಿಶ್ಲೇಷಿಸಲಾಗಿದೆ.

Read More »