ವಚನಕಾರ್ತಿಯರ ವಚನಗಳಲ್ಲಿ ಗುರು, ಲಿಂಗ, ಜಂಗಮದ ಕಲ್ಪನೆ

Main Article Content

ಮಹಾಲಿಂಗಪ್ರಭು

Abstract

ಕನ್ನಡ ಸಾಹಿತ್ಯವು ಅಪಾರ ಸಂಪತ್ತನ್ನು ಒಳಗೊಂಡ ಶ್ರೇಷ್ಠ ಪರಂಪರೆಯನ್ನು ಹೊಂದಿದೆ. 12ನೇ ಶತಮಾನವು ಎಲ್ಲಾ ಶಿವಶರಣರು ನಿರ್ಭಯವಾಗಿ ತಮ್ಮ ಆಲೋಚನೆಗಳನ್ನು, ಭಾವನೆಗಳನ್ನು ವಚನಗಳ ಮೂಲಕ ಹಂಚಿಕೊಳ್ಳಲು ಅವಕಾಶ ದೊರೆತ ಕಾಲ. ರಾಜರ ಆಶ್ರಯವಿಲ್ಲದೆ, ತಮ್ಮನ್ನು ತಾವು ತೊಡಗಿಸಿಕೊಂಡು, ಯಾರ ಆಶ್ರಯವೂ ಇಲ್ಲದೆ, ಜಾತಿ, ಧರ್ಮ, ಸ್ತ್ರೀ-ಪುರುಷ ಎಂಬ ಎಲ್ಲಾ ಭೇದಗಳನ್ನು ಮರೆತು ಆತ್ಮವಿಶ್ವಾಸದ ಮೂಲಕ ಪರಿವರ್ತನೆಗೆ ನಾಂದಿ ಹಾಡಿದ ಕಾಲವದು. ಭಾರತೀಯ ಪರಂಪರೆಯಲ್ಲಿ ಹೆಣ್ಣಿಗೆ ಪೂಜ್ಯ ಭಾವನೆಯಿದೆ. ಹೆಣ್ಣನ್ನು ದೇವತೆಗೆ ಹೋಲಿಸುತ್ತಾರೆ, ಆದರೂ ಕೂಡ ಹೆಣ್ಣಿಗೆ ಯಾವುದೇ ಸ್ವಾತಂತ್ರ್ಯವಿಲ್ಲ, ಗಂಡಿನ ಗುಲಾಮಳಾಗಿ ಇರಬೇಕು ಎಂಬುದನ್ನು ದಿಕ್ಕರಿಸಿ ಹೆಣ್ಣಿಗೆ ಸ್ವಾತಂತ್ರ್ಯವನ್ನು ವಚನ ಚಳುವಳಿಯಲ್ಲಿ ನೀಡಲಾಯಿತು. ಧಾರ್ಮಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಪುರುಷನಷ್ಟೇ ಸ್ತ್ರೀಯು ಕೂಡ ಸಮಾನಳು ಎಂಬುದನ್ನು ವಚನಗಳ ಮೂಲಕ ಸಾರಿ ಹೇಳಿದರು.
“ಸತಿಪತಿಗಳೊಂದಾದ ಭಕ್ತಿ, ಹಿತದಾಗಿಪ್ಪುದು ಶಿವಂಗೆ. ಸತಿಪತಿಗಳೊಂದಾಗದವನ ಭಕ್ತಿ ಅಮೃತದೊಳು ವಿಷ ಬೆರೆದಂತೆ” ಎಂದು ಜೇಡರ ದಾಸಿಮಯ್ಯನು ಕೂಡ ಹೆಣ್ಣಿನ ಅವಶ್ಯಕತೆ ಮತ್ತು ಗೌರವಗಳನ್ನು ತನ್ನ ವಚನದಲ್ಲಿ ಎತ್ತಿ ಹಿಡಿದಿದ್ದಾರೆ.
ಅನುಭವಮಂಟಪದಲ್ಲಿ ಸ್ತ್ರೀ-ಪುರುಷ ಎಂಬ ತಾರತಮ್ಯವಿಲ್ಲದೆ ಎಲ್ಲರೂ ನಿರ್ಭಯವಾಗಿ ತಮ್ಮ ಎಲ್ಲಾ ವಿಚಾರಗಳನ್ನು, ಅಭಿಪ್ರಾಯಗಳನ್ನು ಮಂಡಿಸುವ ಅವಕಾಶ ದೊರೆಯಿತು. ಅಕ್ಕಮಹಾದೇವಿ ಕೂಡ ತನ್ನ ನಿಷ್ಠೆಯನ್ನು ಅನುಭವಮಂಟಪದಲ್ಲಿ ನಿರೂಪಿಸಿದ್ದಾಳೆ. ಹಾಗೆಯೇ ಪುರುಷ ಪ್ರಧಾನ ವ್ಯವಸ್ಥೆಯನ್ನೇ ಧಿಕ್ಕರಿಸಿ ತನ್ನ ಮಲ್ಲಿಕಾರ್ಜುನನ್ನೇ ಗಂಡನೆಂದು ಭಾವಿಸಿದ ಅಕ್ಕನ ಆತ್ಮಸ್ಥೈರ್ಯವು ಮೆಚ್ಚುವಂತದ್ದು.
“ಲೋಕದ ಗಂಡರನೊಯ್ದು ಒಲೆಯೊಳಗಿಕ್ಕು” ಎಂಬ ಮಾತು, ತನ್ನ ಗಂಡ ಕೌಶಿಕನನ್ನು ಬಿಟ್ಟು ದಿಗಂಬರಳಾಗಿ ಶಿವನನ್ನು ಅರಸುತ್ತಾ ಹೊರಟಳು. ಹಾಗೆಯೇ ಆಯ್ದಕ್ಕಿ ಲಕ್ಕಮ್ಮ, ಗಂಗಾಂಬಿಕೆ, ನೀಲಾಂಬಿಕೆ, ಕಾಳವ್ವೆ, ಮುಕ್ತಾಯಕ್ಕ, ಸತ್ಯಕ್ಕ, ಅಮುಗೆ ರಾಯಮ್ಮ ಮುಂತಾದ ಅನೇಕ ವಚನಕಾರ್ತಿಯರು ಸ್ವತಂತ್ರವಾಗಿ ವಚನಗಳನ್ನು ರಚಿಸಿ ಗುರು, ಲಿಂಗ, ಜಂಗಮದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಗುರು, ಲಿಂಗ, ಜಂಗಮದ ಕಲ್ಪನೆಯು 12ನೇ ಶತಮಾನದಲ್ಲಿ ಕಲ್ಪಿತವಾಗಿದ್ದರೂ ಕೂಡ ಪ್ರಸ್ತುತ ಸಂದರ್ಭದಲ್ಲಿ ಆಕರ್ಷಕವೂ, ಅವಶ್ಯಕತೆಯೂ ಇದೆ ಎಂಬುದನ್ನು ಕಾಣಬಹುದು.

Article Details

Section

Research Articles

Author Biography

ಮಹಾಲಿಂಗಪ್ರಭು

ಸಹಾಯಕ ಅಧ್ಯಾಪಕರು, ಕನ್ನಡ ವಿಭಾಗ, ದಯಾನಂದ ಸಾಗರ್ ಬಿಸಿನೆಸ್ ಅಕಾಡೆಮಿ, ಉದಯಪುರ, ಬೆಂಗಳೂರು.

How to Cite

ಮಹಾಲಿಂಗಪ್ರಭು. (2025). ವಚನಕಾರ್ತಿಯರ ವಚನಗಳಲ್ಲಿ ಗುರು, ಲಿಂಗ, ಜಂಗಮದ ಕಲ್ಪನೆ. ಅಕ್ಷರಸೂರ್ಯ (AKSHARASURYA), 7(03), 144 to 148. https://aksharasurya.com/index.php/latest/article/view/1197

References

ಬಸವರಾಜು ಎಲ್., (2016), ಅಕ್ಕನ ವಚನಗಳು, ಸ್ವಪ್ನ ಬುಕ್ ಹೌಸ್, ಬೆಂಗಳೂರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, (2012-2022), ಸಮಗ್ರ ವಚನ ಸಾಹಿತ್ಯ, ಕಣಜ ಕೃತಿಸ್ವಾಮ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು.

https://kanaja.karnataka.gov.in/vachanasahitya/

ಗಿರಿಜಾಪತಿ ಎಸ್.ಎಂ., (2022) ವಚನ ರತ್ನತ್ರಿಯರು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

Most read articles by the same author(s)