Table of Contents
Research Articles
ಕನ್ನಡ ಸಾಹಿತ್ಯಕ್ಕೆ ತಂತ್ರಜ್ಞಾನ ವಿಸ್ತರಿಸಿರುವ ಸಾಧ್ಯತೆಗಳು: ಒಂದು ಅವಲೋಕನ
01 to 08
ವಿಶ್ವದಾದ್ಯಂತ ಇಂದು ಬದಲಾವಣೆಗೆ ಒಳಪಡುತ್ತಿರುವ ಮಾಹಿತಿ ಲೋಕ, ಅಪಾರವಾದ ಪ್ರಗತಿಯತ್ತ ಮುನ್ನುಗ್ಗುತ್ತಿರುವ ತಂತ್ರಜ್ಞಾನ ಎಲ್ಲಾ ಕ್ಷೇತ್ರಗಳನ್ನು ಗಣನೀಯವಾಗಿ ಪ್ರಭಾವಿಸುತ್ತಿದೆ. ಈ ಆಧುನಿಕ ಪ್ರಜ್ಞೆಯಿಂದ ಕನ್ನಡ ಸಾಹಿತ್ಯವೂ ಹಿಂದೆ ಉಳಿಯಲು ಸಾಧ್ಯವಿಲ್ಲ. ಇಂದಿನ ಆಧುನಿಕ ತಂತ್ರಜ್ಞಾನದ ಜಗತ್ತಿನಲ್ಲಿ ಕನ್ನಡ ಸಾಹಿತ್ಯದ ಅಸ್ತಿತ್ವ, ಸ್ಥಾನಮಾನಗಳೇನು ಎಂಬ ವಿವೇಚನೆ ಪ್ರತಿಯೊಬ್ಬ ಕನ್ನಡಿಗನದ್ದೂ ಆಗಬೇಕಿದೆ. ಡಿಜಿಟಲ್ ಯುಗದಲ್ಲಿ ‘ಕನ್ನಡ ಸಾಹಿತ್ಯʼದ ಅಸ್ಮಿತೆ, ಅನನ್ಯತೆಗಳನ್ನು ಕಾಯ್ದುಕೊಳ್ಳುವುದು ನಮ್ಮ ಆದ್ಯ ಕರ್ತವ್ಯವೂ ಹೌದು. ಕನ್ನಡ ಸಾಹಿತ್ಯದಲ್ಲಿ ತಂತ್ರಜ್ಞಾನದ ಬಳಕೆಗೆ ತೊಡಕುಗಳಿರುವಂತೆಯೇ, ವಿಸ್ತರಿಸಲ್ಪಟ್ಟಿರುವ ಅವಕಾಶಗಳನ್ನು ನಾವು ಅಲ್ಲಗಳೆಯುವಂತಿಲ್ಲ. ಡಿಜಿಟಲ್ ಸಹಾಯಕರುಗಳ ಮೂಲಕ ಕನ್ನಡ ಸಾಹಿತ್ಯ, ಕೋಟ್ಯಾಂತರ ಜನರನ್ನು ತಲುಪಲು ಇಂದು ಸಾಧ್ಯವಾಗಿದೆ. ಆಡಿಯೋ ಪುಸ್ತಕ, ಇ-ಪುಸ್ತಕ, ಪಾಡ್‌ಕಾಸ್ಟ್, ಬ್ಲಾಗ್‌ಗಳ ಮೂಲಕ ಕನ್ನಡ ಸಾಹಿತ್ಯ ಪ್ರಸರಣ ಮುಂದುವರೆಯುತ್ತಿದೆ. ಸಾವಿರಾರು ವರ್ಷಗಳಿಂದ ಅನೂಚಾನವಾಗಿ ಬಂದಿರುವ ಕನ್ನಡ ಸಾಹಿತ್ಯ ಮತ್ತು ತಂತ್ರಜ್ಞಾನದ ಸಂಬಂಧ ಯಾವ ಬಗೆಯದ್ದು, ಕನ್ನಡ ಸಾಹಿತ್ಯಕ್ಕೆ ತಂತ್ರಜ್ಞಾನ ಸೃಷ್ಟಿಸಿರುವ ಸಾಧ್ಯತೆಗಳೇನು? ಎಂಬುದನ್ನು ಅರಿಯುವ ಪ್ರಯತ್ನವೇ ಈ ಸಂಶೋಧನಾ ಲೇಖನ.
ಬಂಜಾರ ಭಾಷೆಯಲ್ಲಿ ಕ್ರಿಯಾಪದಗಳು
09 to 16
ಮಾನವ ಸಮುದಾಯ ಮತ್ತು ಸಂಸ್ಕೃತಿಯನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಭಾಷಾಧ್ಯಯನ ಅತ್ಯಗತ್ಯ. ಯಾವುದೇ ಭಾಷೆಯ ಮೂಲ ಬೇರುಗಳು ಅದರ ಕ್ರಿಯಾಪದಗಳಲ್ಲಿ ಅಡಗಿರುತ್ತವೆ. ಲಿಪಿ ರಹಿತವಾದ ಬಂಜಾರ ಭಾಷೆಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ನೆಲೆಗಟ್ಟನ್ನು ಶೋಧಿಸಲು ಅದರ ಕ್ರಿಯಾಪದಗಳ ವಿಶ್ಲೇಷಣೆ ಬಹುಮುಖ್ಯ. ಬಂಜಾರ ಭಾಷೆಯಲ್ಲಿ ಬಳಕೆಯಲ್ಲಿರುವ ಏಕಾಕ್ಷರ (ಉದಾ: ಪಿ, ಸೋ, ಜೋ) ಹಾಗೂ ಬಹು-ಅಕ್ಷರಗಳ ಮೂಲಧಾತುಗಳನ್ನು ಗುರುತಿಸಿ, ಅವುಗಳಿಗೆ ಕಾಲ, ಲಿಂಗ ಮತ್ತು ಪುರುಷವಾಚಕ ಪ್ರತ್ಯಯಗಳು ಸೇರಿದಾಗ ಆಗುವ ರೂಪಾಂತರಗಳನ್ನು ಇಲ್ಲಿ ಸೈದ್ಧಾಂತಿಕವಾಗಿ ಚರ್ಚಿಸಲಾಗಿದೆ. ವರ್ತಮಾನ, ಅಪೂರ್ಣ-ಪೂರ್ಣ ಭೂತಕಾಲ ಮತ್ತು ಭವಿಷ್ಯತ್ ಕಾಲಗಳಲ್ಲಿ ಕ್ರಿಯಾಪದಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಉದಾಹರಣೆಗಳ ಮೂಲಕ ವಿಶ್ಲೇಷಿಸಲಾಗಿದೆ. ಭಾಷಾಶಾಸ್ತ್ರದ ಹಿನ್ನೆಲೆಯಲ್ಲಿ ಬಂಜಾರ ಭಾಷೆಯ ವ್ಯಾಕರಣದ ಚೌಕಟ್ಟನ್ನು ಅರ್ಥಮಾಡಿಕೊಳ್ಳುವ ಮತ್ತು ಮುಂದಿನ ಆಳವಾದ ಅಧ್ಯಯನಗಳಿಗೆ ಬುನಾದಿ ಹಾಕುವ ಪ್ರಾಥಮಿಕ ಶೋಧನೆ ಇದಾಗಿದೆ.
ವೆಂಕಾಮಾತ್ಯ ರಾಮಾಯಣದ ಬಾಲಕಾಂಡದ ವೈಶಿಷ್ಟ್ಯತೆ
17 to 31
18ನೇ ಶತಮಾನದ ಕವಿ ಹಾಗೂ ಬಹುಭಾಷಾ ವಿದ್ವಾಂಸ ವೆಂಕಾಮಾತ್ಯನು ವಾರ್ಧಕ ಷಟ್ಪದಿಯಲ್ಲಿ ರಚಿಸಿದ ‘ಶ್ರೀರಾಮಕಥಾಮೃತʼವು ಕೇವಲ ವಾಲ್ಮೀಕಿ ರಾಮಾಯಣದ ಅನುವಾದವಲ್ಲ; ಅದೊಂದು ವಿಶಿಷ್ಟ ಹಾಗೂ ಸ್ವತಂತ್ರ ಭಕ್ತಿಕಾವ್ಯ. ವಾಲ್ಮೀಕಿ ರಾಮಾಯಣದ ಬಾಲಕಾಂಡಕ್ಕೂ ವೆಂಕಾಮಾತ್ಯನ ಬಾಲಕಾಂಡಕ್ಕೂ ಇರುವ ನಿರೂಪಣಾ ವ್ಯತ್ಯಾಸಗಳು, ತಾತ್ವಿಕ ಚಿಂತನೆ ಹಾಗೂ ಭಕ್ತಿಪಾರಮ್ಯವನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಕವಿಯು ಶ್ರೀರಾಮನನ್ನು ಸಾಮಾನ್ಯ ಮಾನವನನ್ನಾಗಿ ಚಿತ್ರಿಸದೆ, ಆರಂಭದಿಂದಲೇ ಸಾಕ್ಷಾತ್ ಪರಬ್ರಹ್ಮನೆಂದು ಶಿವ-ಪಾರ್ವತಿಯರ ಸಂವಾದದ ಮೂಲಕ ಪ್ರತಿಷ್ಠಾಪಿಸುತ್ತಾನೆ. ದಶರಥನ ಪುತ್ರಕಾಮೇಷ್ಟಿ, ಅಹಲ್ಯಾ ಶಾಪವಿಮೋಚನೆ, ಸೀತಾ ಸ್ವಯಂವರ ಮತ್ತು ಪರಶುರಾಮ ಗರ್ವಭಂಗದಂತಹ ಪ್ರಮುಖ ಪ್ರಸಂಗಗಳಲ್ಲಿ ವೆಂಕಾಮಾತ್ಯನು ಮಾಡಿರುವ ಸೃಜನಶೀಲ ಮಾರ್ಪಾಡುಗಳು ಆತನ ವೈಷ್ಣವ ನಿಲುವು ಹಾಗೂ ಸ್ವಂತಿಕೆಯನ್ನು ಅನಾವರಣಗೊಳಿಸುತ್ತವೆ. ವಾಲ್ಮೀಕಿಯ ಕಥಾಹಂದರವನ್ನು ಉಳಿಸಿಕೊಂಡು, ಪೌರಾಣಿಕ ಕಥೆಗಳು ಹಾಗೂ ಮಾನವೀಯ ಸಂವೇದನೆಗಳ ಸಮನ್ವಯದೊಂದಿಗೆ ರೂಪುಗೊಂಡಿರುವ ವೆಂಕಾಮಾತ್ಯನ ಬಾಲಕಾಂಡದ ಸಾಹಿತ್ಯಕ ಮೌಲ್ಯವನ್ನು ಇಲ್ಲಿ ಕಟ್ಟಿಕೊಡಲಾಗಿದೆ.
ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ಜಾತಿ-ಮತ-ಧರ್ಮ ಸಾಮರಸ್ಯದ ನೆಲೆಗಳು
32 to 39
‘ಸಾಮರಸ್ಯʼ ಎಂಬ ಪದ ಅಥವಾ ಪರಿಕಲ್ಪನೆಗೆ ಅರ್ಥ ಕೋಶದಲ್ಲಿ ಹೊಂದಾಣಿಕೆ, ಸಹೋದರತೆ, ಸಮರಸ, ಹಿತ, ಸಾಂಗತ್ಯ, ಐಕ್ಯಮತ, ಸಹಬಾಳ್ವೆ, ಸಮಾನತೆ ಎಂಬ ಅರ್ಥಗಳನ್ನು ನೀಡಲಾಗಿದೆ. ಎಲ್ಲವನ್ನು ಎಲ್ಲರಿಗೂ ಹಂಚುವುದು ಅಥವಾ ಎಲ್ಲರನ್ನೂ ಸಮಾನವಾಗಿ ನೋಡುವುದು ಅಥವಾ ಎಲ್ಲ ಧರ್ಮಗಳನ್ನು ಸಮಾನ ಅಂತರದಲ್ಲಿಟ್ಟು ನೋಡುವುದು ಸಾಮರಸ್ಯ ಎನಿಸಿಕೊಳ್ಳುತ್ತದೆ. ಕೇವಲ ನೋಡಿದ ಮಾತ್ರಕ್ಕೆ ಸಾಮರಸ್ಯ ಸಾಧಿಸಲು ಸಾಧ್ಯವಾಗುವುದಿಲ್ಲ. ಸಹ ಹಿತಕ್ಕಾಗಿ ಒಂದಾಗಿ ಬದುಕಿದಾಗ ಮಾತ್ರ ಸಾಮರಸ್ಯ ಪ್ರಜ್ಞೆ ಹುಟ್ಟಲು ಸಾಧ್ಯ. ‘ಸಾಮರಸ್ಯʼ ಎಂಬ ಪದವು ವಿಶಾಲ ಅರ್ಥದ ಮನೋಭಾವದಲ್ಲಿ ಮನುಷ್ಯ ಪ್ರಜ್ಞೆಯ ಸ್ಥಿತಿಯಾಗಿದೆ. ಸುತ್ತಮುತ್ತಲಿನ ಎಲ್ಲದಕ್ಕೂ ಪ್ರೀತಿಯ ಭಾವನೆ, ಶುದ್ಧತೆಯ ಮನಸ್ಸು, ಆರೋಗ್ಯಕರ ಮಾತು, ಸಕಾರಾತ್ಮಕ ಭಾವನೆಗಳ ಜೊತೆಯಲ್ಲಿ ಸ್ಥಾಪಿತವಾದ ಪ್ರಜ್ಞೆಯಲ್ಲಿ ಸಾಮರಸ್ಯ ಎಂಬ ಪರಿಸರ ಪ್ರಜ್ಞೆಯು ನಿರ್ಮಾಣವಾಗುತ್ತದೆ. ಒಂದು ರೀತಿಯಲ್ಲಿ ಸಾಮರಸ್ಯ ಎಂಬ ಪರಿಸರ ಪ್ರಜ್ಞೆಯು ಮನುಷ್ಯ ಸಂಬಂಧದಿಂದ ಒಂದು ರೀತಿಯಲ್ಲಿ ಸಾಮರಸ್ಯ ಪ್ರಜ್ಞೆಯು ಮನುಷ್ಯ ಸಂಬಂಧದಿಂದ ಹುಟ್ಟಿದ ಬದುಕಿನ ಲಯವಾಗಿದೆ. ಲ್ಯಾಟಿನ್ ಭಾಷೆಯ ‘ಹಾರ್ಮೋನಿʼ ಎಂಬ ಶಬ್ದ ಯಥಾ ಸ್ಥಿತಿಯಲ್ಲಿ ಇಂಗ್ಲಿಷಿನಲ್ಲಿ ಬಳಕೆಯಾಗುತ್ತಿದ್ದು ಇದಕ್ಕೆ ಸಂವಾದಿಯಾಗಿ ಕನ್ನಡದಲ್ಲಿ ‘ಸಾಮರಸ್ಯʼ ಪದ ಬಳಕೆಯಾಗುತ್ತಿದೆ.
ವಚನಕಾರ್ತಿಯರ ವಚನಗಳಲ್ಲಿ ಪ್ರೇಮದ ಪರಿಕಲ್ಪನೆ
40 to 47
ಹನ್ನೆರಡನೆಯ ಶತಮಾನದ ವಚನ ಚಳವಳಿಯು ಕೇವಲ ಒಂದು ಧಾರ್ಮಿಕ ಸುಧಾರಣೆಯಲ್ಲ, ಅದು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಚರಿತ್ರೆಯಲ್ಲಿ ಅಸ್ತಿತ್ವಕ್ಕೆ ಬಂದ ಒಂದು ಬೃಹತ್ ವೈಚಾರಿಕ ಪಲ್ಲಟ. ಈ ಚಳವಳಿಯು ವ್ಯಕ್ತಿಗತ ಆರಾಧನೆಯನ್ನು ಸಾಮಾಜಿಕ ಸಮಾನತೆಯೊಂದಿಗೆ ಸಮೀಕರಿಸಿದ ರೀತಿ ಅನನ್ಯವಾದುದು. ಈ ಸಂದರ್ಭದಲ್ಲಿ ‘ಪ್ರೇಮʼ ಎನ್ನುವ ಪರಿಕಲ್ಪನೆಯು ಲೌಕಿಕದ ಸೀಮಿತ ಚೌಕಟ್ಟನ್ನು ಮೀರಿ, ಒಂದು ಕ್ರಾಂತಿಕಾರಿ ಮತ್ತು ಪಾರಮಾರ್ಥಿಕ ಶಕ್ತಿಯಾಗಿ ರೂಪಾಂತರಗೊಂಡಿತು. ವಿಶೇಷವಾಗಿ ವಚನಕಾರ್ತಿಯರ ಅಭಿವ್ಯಕ್ತಿಯಲ್ಲಿ ಪ್ರೇಮವು ಕೇವಲ ಭಾವನಾತ್ಮಕ ಸೆಳೆತವಾಗಿ ಉಳಿಯದೆ, ಸ್ತ್ರೀ ಅಸ್ಮಿತೆಯ ಹುಡುಕಾಟವಾಗಿ ಮತ್ತು ದೈವದೊಂದಿಗಿನ ಸಮನ್ವಯದ ಹಾದಿಯಾಗಿ ಗೋಚರಿಸುತ್ತದೆ.
ಪಂಪಪೂರ್ವ ಮತ್ತು ಪಂಪಯುಗದ ಕಾವ್ಯಗಳಲ್ಲಿ ಪ್ರೇಮವು ಹೆಚ್ಚಾಗಿ ರಾಜಾಶ್ರಯದ, ಶೃಂಗಾರ ಪ್ರಧಾನವಾದ ಮತ್ತು ಪುರುಷಕೇಂದ್ರಿತ ದೃಷ್ಟಿಕೋನದಿಂದ ಚಿತ್ರಿಸಲ್ಪಟ್ಟಿತ್ತು. ಆದರೆ ಶರಣೆಯರ ವಚನಗಳಲ್ಲಿ ಪ್ರೇಮವು ತನ್ನ ಸ್ವರೂಪವನ್ನು ಬದಲಿಸಿಕೊಂಡು ‘ಅನುಭಾವʼದ (Mysticism) ತಳಹದಿಯ ಮೇಲೆ ನಿಂತಿದೆ. ಇಲ್ಲಿ ಲೌಕಿಕ (Mundane) ಜಗತ್ತಿನ ಕಟ್ಟುಪಾಡುಗಳಿಂದ ವಿಮೋಚನೆ ಪಡೆಯಲು ಪ್ರೇಮವು ಒಂದು ಪ್ರಬಲ ಆಯುಧವಾಗಿದೆ. ಶರಣೆಯರ ಪಾಲಿಗೆ ಪ್ರೇಮವೆಂದರೆ ಅದು ಆತ್ಮ ಮತ್ತು ಪರಮಾತ್ಮನ ನಡುವಿನ ನಿರಂತರ ಸಂವಾದ. ಇದು ಲೌಕಿಕ ವಿವಾಹದ ಸಂಕೋಲೆಗಳನ್ನು ಸಡಿಲಗೊಳಿಸಿ, ಅಲೌಕಿಕದ ಅನಂತತೆಗೆ ತೆರೆದುಕೊಳ್ಳುವ ಪ್ರಕ್ರಿಯೆಯಾಗಿದೆ.
ಈ ಪ್ರಬಂಧವು ವಚನಕಾರ್ತಿಯರ ಪ್ರೇಮವನ್ನು ಹೇಗೆ ಗ್ರಹಿಸಿದರು, ಅದು ಅವರ ಸಾಮಾಜಿಕ ಸ್ಥಾನಮಾನಗಳನ್ನು ಹೇಗೆ ಮರುನಿರೂಪಿಸಿತು ಮತ್ತು ಅವರ ಆಧ್ಯಾತ್ಮಿಕ ಉನ್ನತಿಗೆ ಹೇಗೆ ಕಾರಣವಾಯಿತು ಎಂಬುದನ್ನು ಈ ಕೆಳಗಿನ ಪ್ರಮುಖ ವಚನಕಾರ್ತಿಯರ ಹಿನ್ನೆಲೆಯಲ್ಲಿ ವಿಶ್ಲೇಷಿಸುತ್ತದೆ: ಅಕ್ಕಮಹಾದೇವಿ, ಮೊಳಿಗೆ ಮಹಾದೇವಿ, ಮುಕ್ತಾಯಕ್ಕ, ಆಯ್ದಕ್ಕಿ ಲಕ್ಕಮ್ಮ, ಸತ್ಯಕ್ಕ, ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ ಪ್ರಿಯದೇವಮ್ಮ.
ಕನ್ನಡ ಸಾಹಿತ್ಯ ವಚನಕಾರ್ತಿಯರ ವಚನಗಳಲ್ಲಿ ಪ್ರಕೃತಿ
48 to 57
ಹನ್ನೆರಡನೆಯ ಶತಮಾನದ ವಚನ ಚಳವಳಿಯು ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ದಾರ್ಶನಿಕ ಪರಂಪರೆಯಲ್ಲಿ ಅಪ್ರತಿಮ ಕ್ರಾಂತಿಯನ್ನು ಉಂಟುಮಾಡಿದ ಕಾಲಘಟ್ಟ. ಈ ಕಾಲದ ಶಿವಶರಣೆಯರು ಅಥವಾ ವಚನಕಾರ್ತಿಯರು ತಮ್ಮ ಆಧ್ಯಾತ್ಮಿಕ ಅನುಭವಗಳನ್ನು ಅಭಿವ್ಯಕ್ತಿಸಲು ಪ್ರಕೃತಿಯನ್ನು ಪ್ರಬಲ ಮಾಧ್ಯಮವನ್ನಾಗಿ ಬಳಸಿಕೊಂಡಿದ್ದಾರೆ. ಪ್ರಸ್ತುತ ಸಂಶೋಧನಾ ಪ್ರಬಂಧವು ವಚನಕಾರ್ತಿಯರ ದೃಷ್ಟಿಕೋನದಲ್ಲಿ ಪ್ರಕೃತಿಯು ಕೇವಲ ಭೌತಿಕ ಪರಿಸರವಾಗಿರದೆ, ಅದು ಹೇಗೆ ಲೌಕಿಕದಿಂದ ಪಾರಮಾರ್ಥಿಕದತ್ತ ಸಾಗುವ ಒಂದು ಆಧ್ಯಾತ್ಮಿಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಕೂಲಂಕಷವಾಗಿ ವಿಶ್ಲೇಷಿಸುತ್ತದೆ.
ಅಕ್ಕಮಹಾದೇವಿ, ಮುಕ್ತಾಯಕ್ಕ, ಸತ್ಯಕ್ಕ, ಆಯ್ದಕ್ಕಿ ಲಕ್ಕಮ್ಮ ಮುಂತಾದ ಪ್ರಮುಖ ವಚನಕಾರ್ತಿಯರ ವಚನಗಳನ್ನು ಆಧಾರವಾಗಿಟ್ಟುಕೊಂಡು, ಇಲ್ಲಿನ ಪ್ರಕೃತಿ ಚಿತ್ರಣವನ್ನು ವಿಶ್ಲೇಷಣಾತ್ಮಕ ಹಾಗೂ ವಿವರಣಾತ್ಮಕ ಸಂಶೋಧನಾ ವಿಧಾನದ ಮೂಲಕ ಅಧ್ಯಯನ ಮಾಡಲಾಗಿದೆ. ಈ ವಚನಕಾರ್ತಿಯರು ಗಿಡ, ಮರ, ಪ್ರಾಣಿ-ಪಕ್ಷಿ, ಪರ್ವತ ಹಾಗೂ ಪಂಚಭೂತಗಳ ಮೂಲಕ ಅಂತರಂಗದ ಅನ್ವೇಷಣೆಯನ್ನು ನಡೆಸಿದ್ದಾರೆ. ಪ್ರಕೃತಿಯನ್ನು ‘ಮಾಯೆʼ ಎಂದು ನಿರಾಕರಿಸುವ ಸಂಪ್ರದಾಯವನ್ನು ಮೀರಿ, ಅದನ್ನು ಶಿವನ ಲೀಲೆ ಮತ್ತು ದೈವಿಕ ಅಭಿವ್ಯಕ್ತಿಯೆಂದು ಪರಿಗಣಿಸಿದ ಇವರ ದೃಷ್ಟಿಕೋನವು ವಿಶಿಷ್ಟವಾದುದು. ಈ ಪ್ರಬಂಧವು ಪರಿಸರ ಪ್ರಜ್ಞೆ ಮತ್ತು ಆಧ್ಯಾತ್ಮಿಕ ಮುಕ್ತಿಯ (Mukti) ನಡುವಿನ ಅವಿನಾಭಾವ ಸಂಬಂಧವನ್ನು ಗುರುತಿಸುತ್ತದೆ. ಅಲ್ಲದೆ, ಸ್ತ್ರೀ ಸಂವೇದನೆಯು ಪ್ರಕೃತಿಯ ವಿಶಾಲತೆಯಲ್ಲಿ ಹೇಗೆ ತನ್ನ ಅಸ್ತಿತ್ವದ ವಿಸ್ತರಣೆಯನ್ನು ಕಂಡುಕೊಳ್ಳುತ್ತದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.
ಹನ್ನೆರಡನೆಯ ಶತಮಾನದ ಶರಣ ಚಳುವಳಿಯು ವಿಶ್ವ ಸಾಹಿತ್ಯದ ಚರಿತ್ರೆಯಲ್ಲಿಯೇ ಒಂದು ಅಪೂರ್ವ ವಿದ್ಯಮಾನ. ಈ ಆಂದೋಲನವು ಕೇವಲ ಸಾಮಾಜಿಕ ಸಮಾನತೆಯನ್ನು ಪ್ರತಿಪಾದಿಸದೆ, ಸ್ತ್ರೀ ಸಂವೇದನೆಯನ್ನು ಪರಿಸರ ಪ್ರಜ್ಞೆಯೊಂದಿಗೆ ಬೆಸೆದ ಪರಿಯು ಅನನ್ಯವಾದುದು. ಈ ಪ್ರಬಂಧವು ವಚನಕಾರ್ತಿಯರ ವಚನಗಳಲ್ಲಿ ಪ್ರಕೃತಿಯು ಹೇಗೆ ಕೇವಲ ಒಂದು ಹಿನ್ನೆಲೆಯಾಗಿ ಉಳಿಯದೆ, ಆಧ್ಯಾತ್ಮಿಕ ವಿಕಾಸದ ಅವಿಭಾಜ್ಯ ಅಂಗವಾಗಿ, ಸ್ತ್ರೀ ಅಸ್ಮಿತೆಯ ರೂಪಕವಾಗಿ ಮತ್ತು ಪರಮ ಸತ್ಯದ ಅಭಿವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ವಿಶ್ಲೇಷಿಸುತ್ತದೆ. ಅಕ್ಕಮಹಾದೇವಿ, ಮುಕ್ತಾಯಕ್ಕ, ಸತ್ಯಕ್ಕ ಮುಂತಾದವರ ವಚನಗಳನ್ನು ಪರಿಸರ ಕೇಂದ್ರಿತ ವಿಮರ್ಶೆ (Ecocriticism) ಮತ್ತು ಸ್ತ್ರೀವಾದಿ ದೃಷ್ಟಿಕೋನದ ಹಿನ್ನೆಲೆಯಲ್ಲಿ ಇಲ್ಲಿ ಅಭ್ಯಾಸ ಮಾಡಲಾಗಿದೆ. ಪ್ರಕೃತಿಯನ್ನು ‘ಪುರುಷʼನ ಅಧೀನದಲ್ಲಿರುವ ವಸ್ತುವೆಂದು ಕಾಣದೆ, ಅದನ್ನು ಜೀವಾತ್ಮನ ಉನ್ನತೀಕರಣಕ್ಕೆ ಪೂರಕವಾದ ಚೈತನ್ಯದಾಯಕ ಸಂಗಾತಿಯನ್ನಾಗಿ ಶರಣೆಯರು ಕಂಡುಕೊಂಡಿದ್ದಾರೆ. ಸಸ್ಯಸಂಕುಲ, ಪ್ರಾಣಿಸಂಕುಲ ಮತ್ತು ಪಂಚಭೂತಗಳ ಸಂಕೇತಗಳ ಮೂಲಕ ‘ಲಿಂಗಾಂಗ ಸಾಮರಸ್ಯʼದ ಪಾರಮಾರ್ಥಿಕ ಪಥವನ್ನು ಈ ಸಂಶೋಧನೆಯು ಅನಾವರಣಗೊಳಿಸುತ್ತದೆ.
ನೀಲಗಿರಿಯಲ್ಲಿ ಸ್ವಿಟ್ಜರ್‌ಲ್ಯಾಂಡ್‌ಗಳು
58 to 66
ತಮಿಳು ನಾಡಿನ ನೀಲಗಿರಿ ಜಿಲ್ಲೆಯ ಪ್ರಮುಖ ಗಿರಿಧಾಮಗಳಾದ ಊಟಿ, ಕುನ್ನೂರು, ಕೋತಗಿರಿ, ಕುಂದಾ ಮತ್ತು ಪಂದಲೂರು ಪ್ರದೇಶಗಳ ಐತಿಹಾಸಿಕ ಬೆಳವಣಿಗೆ, ಭೌಗೋಳಿಕ ಮಹತ್ವ ಹಾಗೂ ನೈಸರ್ಗಿಕ ಸೌಂದರ್ಯದ ಸಮಗ್ರ ಚಿತ್ರಣವನ್ನು ಇಲ್ಲಿ ಕಟ್ಟಿಕೊಡಲಾಗಿದೆ. ಬ್ರಿಟಿಷ್ ಆಡಳಿತಾವಧಿಯಲ್ಲಿ ಜಾನ್ ಸಲ್ಲಿವನ್ ಮುಂತಾದವರಿಂದ ಅಭಿವೃದ್ಧಿಗೊಂಡ ಈ ತಾಣಗಳು, ಯುರೋಪಿನ ‘ಸ್ವಿಟ್ಜರ್‌ಲ್ಯಾಂಡ್ʼಗೆ ಹೋಲಿಕೆಯಾಗುವಷ್ಟರ ಮಟ್ಟಿಗೆ ಪ್ರಕೃತಿ ಸೌಂದರ್ಯವನ್ನು ಹೊಂದಿವೆ. ಆಡಳಿತ ಕೇಂದ್ರಗಳ ಸ್ಥಾಪನೆ, ರಸ್ತೆ ಸಂಪರ್ಕ, ಚಹಾ-ಕಾಫಿ ತೋಟಗಳ ವಿಸ್ತರಣೆ ಹಾಗೂ ಶೈಕ್ಷಣಿಕ ಸಂಸ್ಥೆಗಳ ಉದಯವು ಈ ಪ್ರದೇಶಗಳ ಚಿತ್ರಣವನ್ನೇ ಬದಲಿಸಿತು. ಇದರ ಜೊತೆಗೆ, ವಲಸಿಗರ ಹರಿವು ಮತ್ತು ಪಣಿಯ, ಕುರುಬ, ಕೋತ ಮುಂತಾದ ಮೂಲನಿವಾಸಿಗಳ ಸಾಂಸ್ಕೃತಿಕ ಹಾಗೂ ಆರ್ಥಿಕ ಸ್ಥಿತಿಗತಿಗಳ ಮೇಲೆ ಉಂಟಾದ ಪಲ್ಲಟಗಳ ಮೇಲೂ ಬೆಳಕು ಚೆಲ್ಲಲಾಗಿದೆ. ಒಟ್ಟಾರೆಯಾಗಿ, ನೀಲಗಿರಿಯ ನೈಸರ್ಗಿಕ ರಮಣೀಯತೆ ಮತ್ತು ಅದರೊಡನೆ ಬೆಸೆದುಕೊಂಡಿರುವ ಚಾರಿತ್ರಿಕ ಹಾಗೂ ಸಾಮಾಜಿಕ ಆಯಾಮಗಳನ್ನು ಇದು ತೆರೆದಿಡುತ್ತದೆ.
ಆಡಳಿತದಲ್ಲಿ ಕನ್ನಡ ಬಳಕೆ: ಚಾರಿತ್ರಿಕ ಸಮೀಕ್ಷೆ
67 to 73
ಕನ್ನಡ ಭಾಷೆಯು ಹಲ್ಮಿಡಿ ಶಾಸನದಿಂದ ಹಿಡಿದು ಪ್ರಸ್ತುತ ಜಾಗತೀಕರಣದವರೆಗೂ ಆಡಳಿತ ಭಾಷೆಯಾಗಿ ಬೆಳೆದುಬಂದ ಹಾದಿಯನ್ನು ಹಾಗೂ ಅದು ಎದುರಿಸಿದ ತಲ್ಲಣಗಳನ್ನು ಐತಿಹಾಸಿಕ ನೆಲೆಗಟ್ಟಿನಲ್ಲಿ ಇಲ್ಲಿ ವಿಶ್ಲೇಷಿಸಲಾಗಿದೆ. ಕದಂಬರು, ರಾಷ್ಟ್ರಕೂಟರು ಮತ್ತು ವಿಜಯನಗರದ ಅರಸರ ಕಾಲದಲ್ಲಿ ಸಾರ್ವಭೌಮ ಭಾಷೆಯಾಗಿದ್ದ ಕನ್ನಡ, ತರುವಾಯ ಮರಾಠಿ, ಉರ್ದು ಹಾಗೂ ಬ್ರಿಟಿಷ್ ಆಡಳಿತದಲ್ಲಿಯೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡ ಬಗೆಯನ್ನು ದಾಖಲಿಸಲಾಗಿದೆ. ಬ್ರಿಟಿಷ್ ಅಧಿಕಾರಿಗಳು ಕನ್ನಡದಲ್ಲಿಯೇ ಆಡಳಿತ, ಕಾನೂನು ಮತ್ತು ಶಿಕ್ಷಣಕ್ಕೆ ನೀಡಿದ ಒತ್ತು ಗಮನಾರ್ಹವಾಗಿದೆ. ಪ್ರಜಾಪ್ರಭುತ್ವದ ಯಶಸ್ಸಿಗೆ ಜನಸಾಮಾನ್ಯರ ಭಾಷೆಯೇ ಆಡಳಿತ ಭಾಷೆಯಾಗಬೇಕೆಂಬ ಗಾಂಧೀಜಿ ಹಾಗೂ ರೂಸೋ ಅವರ ಆಶಯಗಳನ್ನು ಉಲ್ಲೇಖಿಸುತ್ತಾ, ಪ್ರಸ್ತುತ ಆಡಳಿತ, ನ್ಯಾಯದಾನ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಹೆಚ್ಚಾಗುತ್ತಿರುವ ಇಂಗ್ಲಿಷ್ ವ್ಯಾಮೋಹವು ಕನ್ನಡಿಗರ ಅಸ್ಮಿತೆಗೆ ಒಡ್ಡುತ್ತಿರುವ ಅಪಾಯಗಳ ಕುರಿತು ಗಂಭೀರವಾದ ಕಾಳಜಿಯನ್ನು ಅಭಿವ್ಯಕ್ತಪಡಿಸಲಾಗಿದೆ.
ಡಾ. ಸಿದ್ಧಲಿಂಗಯ್ಯನವರ ಸದನದ ಭಾಷಣಗಳು: ಅಲಕ್ಷಿತ ಸಮುದಾಯಗಳ ದನಿ
74 to 79
ಡಾ. ಸಿದ್ಧಲಿಂಗಯ್ಯನವರು ಯಾರ ದನಿಯನ್ನು ಕೇಳಿಸಿಕೊಳ್ಳಲು ಪ್ರಭುತ್ವ ಇಚ್ಛಿಸುವುದಿಲ್ಲವೋ ಅಂತಹ ಅಲಕ್ಷಿತ ಸಮುದಾಯಗಳ ಪ್ರತಿನಿಧಿಯಂತೆ, ದಮನಿತರ ಪರವಾದ ಕಾಳಜಿಯಿಂದ ದನಿಯೆತ್ತಿದ್ದಾರೆ. ವಿಧಾನ ಪರಿಷತ್ತಿನ ಸದಸ್ಯರಾಗಿ ಅವರು ಸದನದಲ್ಲಿ ಪ್ರಸ್ತಾಪಿಸಿರುವ ವಿಷಯಗಳು ಯಾವುದನ್ನು ಆಳುವ ವರ್ಗ ಜನಸಮುದಾಯದ ಅಂಚಿಗೆ ತಳ್ಳಿದೆಯೋ, ಯಾರ ವಿಚಾರಗಳಿಗೆ, ಬದುಕಿಗೆ ಮನ್ನಣೆ ಸಿಗದೆ ಮೂಲೆಗುಂಪು ಮಾಡಲಾಗಿದೆಯೋ, ಸಮಾಜದ ಆದ್ಯತೆಯ ದೃಷ್ಟಿಯಿಂದ ಕಡೆಗಣಿಸಿ ನಗಣ್ಯ ಎಂದು ಅಧಿಕಾರಶಾಹಿಗಳು, ಪ್ರತಿಷ್ಠಿತ ಗಣ್ಯವರ್ಗ ನಿರ್ಲಕ್ಷಿಸಿ ವಂಚಿಸಿದೆಯೋ ಅಂತಹ ಕಣ್ಣಿಗೆ ಸಹಜವಾಗಿ ಕಾಣದ ಬಹಿಷ್ಕೃತ ನೆಲೆಗಳಿಗೆ ಕಣ್ಣುಹಾಯಿಸಿ ಜನಪ್ರತಿನಿಧಿಗಳನ್ನು ಹಕ್ಕೊತ್ತಾಯದ ಧಾಟಿಯಲ್ಲಿ ಮನವೊಲಿಸುವ, ಸಮಾಜದ ಕಣ್ತೆರೆಸುವ ಕಾರ್ಯವನ್ನು ಮಾಡುತ್ತವೆ.
ಡಿ.ಎಸ್. ವೀರಯ್ಯನವರ ರಾಜಕೀಯ ವಿಚಾರಗಳು
80 to 89
ಡಿ.ಎಸ್. ವೀರಯ್ಯನವರ ರಾಜಕೀಯ ನಿಲುವುಗಳು ಅಂಬೇಡ್ಕರ್ ಅವರ ಸಮಾನತೆಯ ಆಶಯಗಳು, ದಲಿತ ಸಂವೇದನೆ ಹಾಗೂ ಎಡಪಂಥೀಯ ಚಿಂತನೆಗಳಿಂದ ರೂಪುಗೊಂಡಿವೆ. ಸತತ 12 ವರ್ಷಗಳ ಕಾಲ ವಿಧಾನಪರಿಷತ್ ಸದಸ್ಯರಾಗಿದ್ದ ಇವರು, ರಾಜಕಾರಣವನ್ನು ಸಮುದಾಯದ ಉದ್ಧಾರ ಮತ್ತು ಜನಸೇವೆಯ ಸಾಧನವನ್ನಾಗಿ ಕಂಡರೇ ವಿನಃ ಕೇವಲ ಅಧಿಕಾರದ ಮೆಟ್ಟಿಲನ್ನಾಗಿಯಲ್ಲ. ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಹಾಸುಹೊಕ್ಕಾಗಿರುವ ಭ್ರಷ್ಟಾಚಾರ, ಜಾತಿ-ಹಣದ ಪ್ರಭಾವ ಹಾಗೂ ಸಂಸದೀಯ ಕಲಾಪಗಳ ಅಧೋಗತಿಯನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ. ಪ್ರಜಾಪ್ರಭುತ್ವದ ಮೂಲ ಆಶಯಗಳು ಈಡೇರಲು ಹಾಗೂ ರಾಜಕೀಯವು ಕೇವಲ ‘ದುಡ್ಡು ಮಾಡುವ ಕಾರ್ಖಾನೆʼಯಾಗುವುದನ್ನು ತಪ್ಪಿಸಲು, ಮತದಾರರು ವೈಚಾರಿಕ ಪ್ರಜ್ಞೆ ಬೆಳೆಸಿಕೊಂಡು ಜವಾಬ್ದಾರಿಯುತವಾಗಿ ಹಕ್ಕು ಚಲಾಯಿಸಬೇಕಾದ ಅನಿವಾರ್ಯತೆಯನ್ನು ಅವರು ದೃಢವಾಗಿ ಪ್ರತಿಪಾದಿಸಿದ್ದಾರೆ.
ದೂರ ಸಂವೇದಿ ಮತ್ತು ಭೌಗೋಳಿಕ ಮಾಹಿತಿ ವ್ಯವಸ್ಥೆಯನ್ನು ಬಳಸಿಕೊಂಡು ಯರಗೇರಾ ಉಪ-ಜಲಾನಯನ ಪ್ರದೇಶದಲ್ಲಿನ ಮಾರ್ಫೊಮೆಟ್ರಿಕ್ ನಿಯತಾಂಕಗಳ ಮೌಲ್ಯಮಾಪನ
90 to 101
ಪ್ರಸ್ತುತ ಅಧ್ಯಯನವು ದೂರ ಸಂವೇದಿ ಮತ್ತು ಭೌಗೋಳಿಕ ಮಾಹಿತೆ ವ್ಯವಸ್ಥೆ ತಂತ್ರಗಳನ್ನು ಬಳಸಿ, ಕರ್ನಾಟಕದ ರಾಯಚೂರು ಜಿಲ್ಲೆಯ ಯರಗೇರಾ ಉಪ-ಜಲಾನಯನ ಪ್ರದೇಶದ ಮಾರ್ಫೋಮೆಟ್ರಿಕ್ ನಿಯತಾಂಕಗಳ ವಿವರವಾದ ಮೌಲ್ಯಮಾಪನದ ಮೇಲೆ ಕೇಂದ್ರೀಕರಿಸುತ್ತದೆ. ಉಪ-ಜಲಾನಯನ ಪ್ರದೇಶದ ಗಡಿಯನ್ನು ASTER ಡಿಜಿಟಲ್ ಎಲಿವೇಶನ್ ಮಾದರಿ (DEM) ಬಳಸಿ ವ್ಯಾಖ್ಯಾನಿಸಲಾಗಿದೆ, ಭೌಗೋಳಿಕ ಮಾಹಿತಿ ವ್ಯವಸ್ಥೆ ಯನ್ನು ಮೂಲ, ರೇಖೀಯ, ಪ್ರದೇಶ ಮತ್ತು ಭೂ ಲಕ್ಷಣ ಅಂಶಗಳನ್ನು ಒಳಗೊಂಡಂತೆ ವಿವಿಧ ಮಾರ್ಫೊಮೆಟ್ರಿಕ್ ನಿಯತಾಂಕಗಳನ್ನು ಮೌಲ್ಯಮಾಪನ ಮಾಡಲು ಬಳಸಲಾಗಿದೆ. ಯರಗೇರಾ ಉಪ-ಜಲಾನಯನ ಪ್ರದೇಶವು 50.01 ಕಿಮೀ² ವಿಸ್ತೀರ್ಣವನ್ನು ಹೊಂದಿದೆ ಮತ್ತು ಡೆಂಡ್ರಿಟಿಕ್ ಬಸಿಗಾಲುವೆ ಮಾದರಿಯನ್ನು ಹೊಂದಿದೆ. ಉಪ-ಜಲಾನಯನ ಪ್ರದೇಶವನ್ನು ನಾಲ್ಕನೇ ಕ್ರಮಾಂಕದ ಜಲಾನಯನ ಪ್ರದೇಶ ಎಂದು ವರ್ಗೀಕರಿಸಲಾಗಿದೆ, ಇದು ಪ್ರಾಥಮಿಕವಾಗಿ ಕೆಳ ಮತ್ತು ಮಧ್ಯಮ ಕ್ರಮಾಂಕದ ತೊರೆಗಳಿಂದ ಪ್ರಾಬಲ್ಯ ಹೊಂದಿದೆ. ಉಪ-ಜಲಾನಯನ ಪ್ರದೇಶದ ಬಸಿಗಾಲುವೆ ಸಾಂದ್ರತೆಯು 1.52 ಕಿಮೀ/ಕಿಮೀ² ಆಗಿದ್ದು, ಇದು ಸೌಮ್ಯದಿಂದ ಮಧ್ಯಮ ಇಳಿಜಾರುಗಳು ಮತ್ತು ಮಧ್ಯಮ ಸಸ್ಯವರ್ಗ ಸಾಂದ್ರತೆಯನ್ನು ಹೊಂದಿರುವ ಭೂಪ್ರದೇಶವನ್ನು ಪ್ರತಿಬಿಂಬಿಸುತ್ತದೆ. ಸರಾಸರಿ ಕವಲೊಡೆಯುವಿಕೆಯ ಅನುಪಾತವು 4.22 ಆಗಿದ್ದು, 4.7, 5 ಮತ್ತು 3 ರ ವೈಯಕ್ತಿಕ ಮೌಲ್ಯಗಳೊಂದಿಗೆ, ಬಸಿಗಾಲುವೆ ಜಾಲವು ಕನಿಷ್ಠ ಟೆಕ್ಟೋನಿಕ್ ಪ್ರಭಾವದೊಂದಿಗೆ ತುಲನಾತ್ಮಕವಾಗಿ ಏಕರೂಪದ ಭೂವೈಜ್ಞಾನಿಕ ರಚನೆಗಳ ಮೇಲೆ ವಿಕಸನಗೊಂಡಿದೆ ಎಂದು ಸೂಚಿಸುತ್ತದೆ. 0.66 ರ ಉದ್ದನೆಯ ಅನುಪಾತವು ಮಧ್ಯಮ ವೃತ್ತಾಕಾರದ ಆಕಾರವನ್ನು ಸೂಚಿಸುತ್ತದೆ, ಇದು ಕಡಿಮೆ ಉದ್ದವಾದ ಜಲಾನಯನ ಪ್ರದೇಶವನ್ನು ಸೂಚಿಸುತ್ತದೆ. ಉಪ-ಜಲಾನಯನ ಪ್ರದೇಶದ ಮಾರ್ಫೊಮೆಟ್ರಿಕ್‌ನ ಗುಣಲಕ್ಷಣಗಳ ಫಲಿತಾಂಶಗಳು ಜಲಾನಯನ ನಿರ್ವಹಣಾ ತಂತ್ರಗಳನ್ನು ಅಭಿವೃದ್ಧಿಪಡಿಸಲು ಬಹಳ ಪ್ರಯೋಜನಕಾರಿಯಾಗಿದೆ.
ಕೊಡಗಿನ ಗೌರಮ್ಮ ಅವರ ಕಥೆಗಳಲ್ಲಿ ಸಾಂಪ್ರದಾಯಿಕ ಪದ್ಧತಿಗಳ ಸಂಕೋಲೆ ಮತ್ತು ಬಿಡುಗಡೆಯ ತುಡಿತಗಳು
102 to 112
ನವೋದಯ ಕಾಲದ ಪ್ರಮುಖ ಲೇಖಕಿ ಕೊಡಗಿನ ಗೌರಮ್ಮ ಅವರ ಕಥೆಗಳಲ್ಲಿ ಹೆಣ್ಣುಮಕ್ಕಳು ಎದುರಿಸುವ ಸಾಂಪ್ರದಾಯಿಕ ಕಟ್ಟುಪಾಡುಗಳು ಮತ್ತು ಆ ಸಂಕೋಲೆಗಳಿಂದ ಬಿಡುಗಡೆಯಾಗುವ ತುಡಿತಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ‘ವಾಣಿಯ ಸಮಸ್ಯೆʼ, ‘ಅವಳಭಾಗ್ಯʼ, ‘ಮನುವಿನರಾಣಿʼ, ‘ಆಹುತಿʼ, ‘ಹೋಗಿಯೇ ಬಿಟ್ಟಿದ್ದʼ ಮತ್ತು ‘ಪುನರ್ವಿವಾಹʼ ಕಥೆಗಳ ಮುಖಾಂತರ ಬಾಲ್ಯವಿವಾಹ, ವರದಕ್ಷಿಣೆ, ವಿಧವಾ ಸಮಸ್ಯೆ, ವೇಶ್ಯಾವಾಟಿಕೆ ಹಾಗೂ ಜಾತಿ-ಧರ್ಮದಂತಹ ಸಾಮಾಜಿಕ ಪಿಡುಗುಗಳನ್ನು ಮಾರ್ಮಿಕವಾಗಿ ಅನಾವರಣಗೊಳಿಸಲಾಗಿದೆ. ಪುರುಷಪ್ರಧಾನ ಸಮಾಜದಲ್ಲಿ ನಾನಾ ಬಗೆಯ ಶೋಷಣೆಗೆ ಒಳಗಾದ ಸ್ತ್ರೀಯರು ಅನುಭವಿಸುವ ಮಾನಸಿಕ ತಲ್ಲಣಗಳು ಹಾಗೂ ಸ್ವತಂತ್ರ ಬದುಕಿಗಾಗಿ ಅವರು ನಡೆಸುವ ಹೋರಾಟವನ್ನು ಈ ಅಧ್ಯಯನವು ಕಟ್ಟಿಕೊಡುತ್ತದೆ. ಸ್ತ್ರೀ ಸಮಾನತೆ ಮತ್ತು ಮಾನವೀಯ ಮೌಲ್ಯಗಳ ಅತ್ಯಗತ್ಯವನ್ನು ಎತ್ತಿಹಿಡಿಯುವ ಮೂಲಕ, ಸರ್ವರೂ ಸಮಾನರೆಂಬ ಆಶಯವನ್ನು ಇದರಲ್ಲಿ ವ್ಯಕ್ತಪಡಿಸಲಾಗಿದೆ.