ಕನ್ನಡ ಕಥಾ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆ ಮತ್ತು ಸಾಮಾಜಿಕ ಪರಿವರ್ತನೆಯ ಅಭಿವ್ಯಕ್ತಿ
Main Article Content
Abstract
ಕನ್ನಡ ಕಥಾ ಸಾಹಿತ್ಯವು ಕಾಲದ ಕನ್ನಡಿಯಂತೆ ಸಮಾಜದ ವಿವಿಧ ಮುಖಗಳನ್ನು ಪ್ರತಿಬಿಂಬಿಸುತ್ತದೆ, ವಿಶೇಷವಾಗಿ ಸ್ತ್ರೀ ಸಂವೇದನೆ, ಮಹಿಳೆಯ ಅನುಭವಗಳು, ಭಾವನೆಗಳು, ಹಕ್ಕುಗಳು ಮತ್ತು ಸಾಮಾಜಿಕ ಪರಿವರ್ತನೆಯ ಅಭಿವ್ಯಕ್ತಿ ಕಥೆಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಕನ್ನಡ ಕಥಾ ಸಾಹಿತ್ಯದಲ್ಲಿ ಮಹಿಳೆಯರ ಜೀವನ ಹೋರಾಟ, ಅವರ ಅಂತರಂಗದ ಭಾವನೆಗಳು ಮತ್ತು ಸಮಾಜದಲ್ಲಿ ಅವರಿಗೆ ದೊರಕುವ ಸ್ಥಾನ ಮುಖ್ಯ ವಿಷಯಗಳಾಗಿವೆ. ಹಳೆಯ ಕಥೆಗಳಲ್ಲಿ ಮಹಿಳೆಯರನ್ನು ಹೆಚ್ಚು ಮಿತಿಯೊಳಗಿನ ಪಾತ್ರಗಳಲ್ಲಿ ಚಿತ್ರಿಸಲಾಗಿದೆ. ಆದರೆ ನಂತರದ ಕಾಲದಲ್ಲಿ ಲೇಖಕರು ಮಹಿಳೆಯ ಸ್ವಾತಂತ್ರ್ಯ, ಆತ್ಮಗೌರವ ಮತ್ತು ಸ್ವಯಂ ನಿರ್ಧಾರ ಸಾಮರ್ಥ್ಯವನ್ನು ಒತ್ತಿ ಹೇಳಲು ಪ್ರಾರಂಭಿಸಿದರು. ಮಹಿಳೆಯರು ಕೇವಲ ಕುಟುಂಬದ ಪಾತ್ರಗಳಿಗೆ ಸೀಮಿತವಾಗದೆ ಸಮಾಜದಲ್ಲಿ ಸಮಾನ ಹಕ್ಕುಗಳಿಗಾಗಿ ಹೋರಾಡುವ ವ್ಯಕ್ತಿಗಳಾಗಿ ಚಿತ್ರಿಸಲ್ಪಟ್ಟರು.
ಕಥಾ ಸಾಹಿತ್ಯವು ಸಮಾಜದಲ್ಲಿ ನಡೆಯುವ ಬದಲಾವಣೆಗಳನ್ನು ಪ್ರತಿಬಿಂಬಿಸುವ ಪ್ರಮುಖ ಮಾಧ್ಯಮವಾಗಿ ಜಾತಿ ವ್ಯವಸ್ಥೆ, ಲಿಂಗ ಅಸಮಾನತೆ, ದಾರಿದ್ರ್ಯ, ಶಿಕ್ಷಣದ ಕೊರತೆ ಇತ್ಯಾದಿ ಸಮಸ್ಯೆಗಳ ವಿರುದ್ಧ ಲೇಖಕರು ತಮ್ಮ ಕಥೆಗಳ ಮೂಲಕ ಪ್ರಶ್ನೆ ಎತ್ತಿದ್ದಾರೆ. ಹೊಸ ಯುಗದ ಕಥೆಗಳು ಸಮಾನತೆ, ನ್ಯಾಯ ಮತ್ತು ಮಾನವೀಯ ಮೌಲ್ಯಗಳನ್ನು ಉತ್ತೇಜಿಸುತ್ತವೆ.
ಪರಂಪರೆಯಿಂದಲೂ ಸಮಾಜ ಹೆಣ್ಣನ್ನು ಶೋಷಿಸುತ್ತಾ ಬಂದಿದೆ. ಆದರೆ ಇದಕ್ಕೆ ಒಂದು ಆಂದೋಲನದ ಆಯಾಮ ಸಿಕ್ಕಿದ್ದು ಮಾತ್ರ 19ನೇ ಶತಮಾನದಿಂದೀಚೆಗೆ. ಹೆಣ್ಣಿನ ಆಂತರ್ಯದ ಬದುಕನ್ನು ಕಟ್ಟಿಕೊಡುವಲ್ಲಿ ಸಿಮೋನ್ ದ ಬೋವಾ, ಕೇಟ್ ಮಿಲ್ಲೆಟ್, ಡೇನಿಯಲ್ ಡಿಫೋ ಇತ್ಯಾದಿ ಪಾಶ್ಚಿಮಾತ್ಯ ಮಹಿಳಾ ಚಿಂತಕರು ಸ್ತ್ರೀ ಸಂವೇದನೆಗೆ ತಾತ್ವಿಕ ರೂಪವನ್ನು ನೀಡಿದರು. ಸ್ತ್ರೀಯರನ್ನು ಸಮಾಜವು ದ್ವಿತೀಯ ದರ್ಜೆಯ ಪ್ರಜೆಯೆಂದು ನೋಡುತ್ತಿರುವುದನ್ನು ಬಹಳ ಸೂಕ್ಷ್ಮವಾಗಿ ಗುರುತಿಸಿದರು. ಹೆಣ್ಣಿನ ಅಂತರಾಳದ ಬಯಕೆ ಮತ್ತು ನೋವು-ನಲಿವು, ಸಂಕಟ-ಯಾತನೆಗಳನ್ನು ಸಾಹಿತ್ಯದಲ್ಲಿ ಅಭಿವ್ಯಕ್ತಿಸಿದ್ದನ್ನು ನೋಡಬಹುದಾಗಿದೆ.
ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಸ್ತ್ರೀಪರ ಚಿಂತಕಿಯರಾದ ಡಾ. ವಿಜಯಾ ದಬ್ಬೆ, ಬಿ.ಟಿ. ಲಲಿತಾ ನಾಯಕ್, ಅನುಪಮಾ ನಿರಂಜನ, ನೇಮಿಚಂದ್ರ, ಹೆಚ್. ಎಸ್. ಶ್ರೀಮತಿ, ಕೆ. ಶರೀಫಾ, ಸಾರಾ ಅಬೂಬಕರ್, ಬಿ. ಟಿ. ಜಾಹ್ನವಿ, ಎಮ್. ಎಸ್. ವೇದಾ ಮತ್ತು ಸುಕನ್ಯಾ ಮಾರುತಿ ಮುಂತಾದ ಅನೇಕರು ಸ್ತ್ರೀ ಸಂವೇದನೆಗಳನ್ನೂ ಹಾಗೂ ತಾನು ಬದುಕಿನುದ್ದಕ್ಕೂ ವಿವಿಧ ರೀತಿಯಲ್ಲಿ ಅನುಭವಿಸಿದಂತಹ ಸಮಸ್ಯೆಗಳನ್ನು ಸಾಹಿತ್ಯದಲ್ಲಿ ಅಳವಡಿಸಿಕೊಂಡು ಚರ್ಚಿಸಿರುವುದನ್ನು ನೋಡಬಹುದು.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಅನುಪಮಾ ನಿರಂಜನ, (2008), ಸಾಹಿತ್ಯ ಮತ್ತು ಪ್ರಗತಿ, ಮೈಸೂರು: ಡಿ.ವಿ.ಕೆ. ಮೂರ್ತಿ ಪ್ರಕಾಶನ.
ನೇಮಿಚಂದ್ರ, (2011), ಮಹಿಳಾ ಅಧ್ಯಯನ, ಬೆಂಗಳೂರು: ಅಂಕಿತ ಪ್ರಕಾಶನ.
ಎಚ್. ಎಸ್. ಶ್ರೀಮತಿ, (2012), ಸ್ತ್ರೀವಾದಿ ಸಂಶೋಧನಾ ವಿಧಿ ವಿಧಾನಗಳು, ಬೆಂಗಳೂರು: ಬರಹ ಪಬ್ಲಿಷಿಂಗ್ ಹೌಸ್.
ಉಮಾ ದೇವಿ ಕೆ., (2000), ಭಾರತೀಯ ಸಮಾಜದಲ್ಲಿ ಮಹಿಳೆಯ ಸ್ಥಿತಿ (ಭಾರತದಲ್ಲಿ ಮಹಿಳಾ ಸಮಾನತೆ - ಒಂದು ಪುರಾಣ ಅಥವಾ ವಾಸ್ತವ?), ನವದೆಹಲಿ: ಡಿಸ್ಕವರಿ ಪಬ್ಲಿಷಿಂಗ್ ಹೌಸ್.
ಪ್ರಭಾವತಿ ಎಸ್.ವಿ., (2002), ಕನ್ನಡ ಮಹಿಳಾ ಸಾಹಿತ್ಯದಲ್ಲಿ ಸ್ತ್ರೀವಾದಿ ನೆಲೆಗಳು, ಬೆಂಗಳೂರು: ರವಿ ಪ್ರಿಂಟರ್ಸ್.