Published: 2026-10-02

Table of Contents

Table of Contents

I to III

ಕನ್ನಡ ಸಾಹಿತ್ಯದ ಜಾನಪದ ಕ್ಷೇತ್ರದಲ್ಲಿ ಡಾ. ಡಿ.ಕೆ.ರಾಜೇಂದ್ರ ಅವರ ಪಾತ್ರ, ಕೊಡುಗೆ ಮತ್ತು ಚಿಂತನೆಗಳ ಒಂದು ನೋಟ

ಡಾ. ಎಂ. ಎನ್. ದಿನೇಶ್‌

01 to 07

ಕನ್ನಡ ಜಾನಪದ ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರಕ್ಕೆ ಡಾ. ಡಿ.ಕೆ. ರಾಜೇಂದ್ರ ಅವರ ಕೊಡುಗೆ ಅತ್ಯಮೂಲ್ಯವಾದದ್ದು. ತುಮಕೂರು ಜಿಲ್ಲೆಯವರಾದ ಇವರು ದಕ್ಷಿಣ ಕರ್ನಾಟಕದ ಜನಪದ ರಂಗಭೂಮಿ ಹಾಗೂ ವಿಶೇಷವಾಗಿ ‘ಕರಪಾಲ ಮೇಳ’ದ ಕುರಿತು ಆಳವಾದ ಅಧ್ಯಯನ ನಡೆಸಿ, ಜನಪದ ಕಲೆಯನ್ನು ಶಾಸ್ತ್ರೀಯ ನೆಲೆಯಲ್ಲಿ ವಿಶ್ಲೇಷಿಸಿದ್ದಾರೆ. ವಿಮರ್ಶೆ, ಪ್ರಬಂಧ, ಸಮೀಕ್ಷೆ ಮತ್ತು ಸಂಪಾದನಾ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಅವರು, ಜನಪದವನ್ನು ಕೇವಲ ಗತಕಾಲದ ಇತಿಹಾಸವಾಗಿ ನೋಡದೆ ಜೀವಂತ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿ ಗುರುತಿಸಿದ್ದಾರೆ. ಸಸ್ಯ, ಪ್ರಾಣಿ ಮತ್ತು ಆಕಾಶ ಜಾನಪದದಂತಹ ಹೊಸ ಆಯಾಮಗಳತ್ತ ಸಂಶೋಧನೆ ವಿಸ್ತರಿಸಬೇಕೆಂಬ ಅವರ ವೈಚಾರಿಕ ನಿಲುವುಗಳು ಹಾಗೂ ಸಾಂಸ್ಕೃತಿಕ ಚಿಂತನೆಗಳನ್ನು ಇಲ್ಲಿ ಸವಿವರವಾಗಿ ಕಟ್ಟಿಕೊಡಲಾಗಿದೆ. ಮೌಖಿಕ ಪರಂಪರೆಯನ್ನು ಅಕ್ಷರ ಮಾಧ್ಯಮಕ್ಕೆ ಇಳಿಸುವಲ್ಲಿ ಅವರ ಶೈಕ್ಷಣಿಕ ಬದ್ಧತೆ ಮತ್ತು ಸಾಧನೆಗಳ ಸಮಗ್ರ ಚಿತ್ರಣವನ್ನು ಒದಗಿಸಲಾಗಿದೆ.

Read More »

ಗಂಗಾಮತಸ್ಥ ಮಹಿಳೆಯರ ಆಚರಣೆಗಳು ಹಾಗೂ ಆಹಾರ ಪದ್ಧತಿ

ಪವಿತ್ರ ಹೆಚ್.ಸಿ.

08 to 14

ಗಂಗಾಮತಸ್ಥ ಸಮುದಾಯದ ಮಹಿಳೆಯರು ಪಿತೃಪ್ರಧಾನ ವ್ಯವಸ್ಥೆಯಲ್ಲಿ ಹಿಂದಿನಿಂದಲೂ ಎದುರಿಸುತ್ತಿರುವ ಸವಾಲುಗಳು, ಅವರ ಸಾಮಾಜಿಕ ಸ್ಥಾನಮಾನ ಹಾಗೂ ದೈನಂದಿನ ಜೀವನಶೈಲಿಯನ್ನು ಇಲ್ಲಿ ಸವಿವರವಾಗಿ ವಿಶ್ಲೇಷಿಸಲಾಗಿದೆ. ವಿಶೇಷವಾಗಿ ಹೆಣ್ಣುಮಕ್ಕಳಿಗೆ ಸಂಬಂಧಿಸಿದ ಆಚರಣೆಗಳಾದ ಸೀಮಂತ, ನಾಮಕರಣ, ಋತುಮತಿಯಾದಾಗಿನ ಶಾಸ್ತ್ರಗಳು ಹಾಗೂ ಬಾಣಂತನದಲ್ಲಿ ತಾಯಿ ಮತ್ತು ಮಗುವಿಗೆ ನೀಡುವ ಪೌಷ್ಟಿಕಾಂಶಯುಕ್ತ ಸಾಂಪ್ರದಾಯಿಕ ಆರೈಕೆಯ ಹಿಂದಿರುವ ನಂಬಿಕೆಗಳನ್ನು ದಾಖಲಿಸಲಾಗಿದೆ. ರಾಗಿಮುದ್ದೆ ಹಾಗೂ ಮಾಂಸಾಹಾರವನ್ನು ಪ್ರಧಾನವಾಗಿ ಹೊಂದಿರುವ ಇವರ ವಿಶಿಷ್ಟ ಆಹಾರ ಪದ್ಧತಿಯನ್ನು ಪರಿಚಯಿಸಲಾಗಿದೆ. ಕುಟುಂಬದ ನಿರ್ವಹಣೆ, ಕೃಷಿ, ರೇಷ್ಮೆ ಕೃಷಿ ಹಾಗೂ ಕೂಲಿ ಕೆಲಸಗಳಲ್ಲಿ ಮಹಿಳೆಯರು ಅವಿರತವಾಗಿ ಶ್ರಮಿಸಿದರೂ, ಆಸ್ತಿಯ ಹಕ್ಕು, ಊಟೋಪಚಾರ ಮತ್ತು ಆರ್ಥಿಕ ಪಾಲುದಾರಿಕೆಯಲ್ಲಿ ಅವರಿಗಾಗುತ್ತಿರುವ ತಾರತಮ್ಯವನ್ನು ಎತ್ತಿತೋರಿಸಲಾಗಿದೆ. ಒಟ್ಟಾರೆಯಾಗಿ, ಶ್ರಮಜೀವಿ ಮಹಿಳೆಯ ನೈಜ ಬದುಕಿನ ಚಿತ್ರಣವನ್ನು ಸಾಂಸ್ಕೃತಿಕ ನೆಲೆಯಲ್ಲಿ ಕಟ್ಟಿಕೊಡಲಾಗಿದೆ.

Read More »

ರೇಮಂಡ್ ಎಫ್.ಸಿ. ಮಸ್ಕರೇನ್ಹಸ್ ಅವರ ಸಾಹಿತ್ಯದಲ್ಲಿ ಧಾರ್ಮಿಕ ಚಿಂತನೆ: ಮೌನ

ಪ್ರೇಮಲತಾ, ಡಾ. ರಾಜಶೇಖರ ಜಮದಂಡಿ

15 to 21

ರೇಮಂಡ್ ಎಫ್.ಸಿ. ಮಸ್ಕರೇನ್ಹಸ್ ಅವರ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆಗಳಲ್ಲಿ ‘ಮೌನ’ಕ್ಕಿರುವ ವಿಶಿಷ್ಟ ಸ್ಥಾನ ಹಾಗೂ ಮಹತ್ವವನ್ನು ಇಲ್ಲಿ ತಾತ್ವಿಕವಾಗಿ ವಿಶ್ಲೇಷಿಸಲಾಗಿದೆ. ಮೌನವೆಂದರೆ ಕೇವಲ ಶಬ್ದದ ಅನುಪಸ್ಥಿತಿಯಲ್ಲ; ಅದು ಮನಸ್ಸಿನ ಚಂಚಲತೆಯನ್ನು ನಿಯಂತ್ರಿಸಿ, ದೇವರ ಸನ್ನಿಧಿಯನ್ನು ಆಲಿಸುವ ಹಾಗೂ ಆತ್ಮಾವಲೋಕನ ಮಾಡಿಕೊಳ್ಳುವ ಆಂತರಿಕ ಶಿಸ್ತಾಗಿದೆ. ಬೈಬಲ್‌ನ ಮರಿಯ ಮಗ್ದಲೆಯ ಆದರ್ಶವನ್ನು ಮುಂದಿಟ್ಟುಕೊಂಡು, ಮೌನವನ್ನು ಕ್ರಿಯಾಶೀಲ ಆಧ್ಯಾತ್ಮಿಕ ಆಲಿಸುವಿಕೆಯಾಗಿ ನಿರೂಪಿಸಲಾಗಿದೆ. ವಿನಯ, ವಿಧೇಯತೆ, ತಾಳ್ಮೆ, ಪಾವಿತ್ರ್ಯ ಮತ್ತು ವಿವೇಕದ ಮೌನ ಎಂಬ ಐದು ಪ್ರಮುಖ ಮಜಲುಗಳನ್ನು ಪರಿಚಯಿಸುತ್ತಾ, ಇವು ಮಾನವನ ಆಂತರಿಕ ಶುದ್ಧೀಕರಣ, ಭಾವನಾತ್ಮಕ ಸಮತೋಲನ ಮತ್ತು ನೈತಿಕ ಬೆಳವಣಿಗೆಗೆ ಹೇಗೆ ಪೂರಕವಾಗಿವೆ ಎಂಬುದನ್ನು ಚರ್ಚಿಸಲಾಗಿದೆ. ಅಂತಿಮವಾಗಿ, ಮೌನವು ನಿಷ್ಕ್ರಿಯತೆಯಲ್ಲ, ಬದಲಾಗಿ ಸಮಯೋಚಿತ ಮಾತು ಮತ್ತು ಅಂತರಂಗದ ಶಾಂತಿಯ ನಡುವಿನ ವಿವೇಕಪೂರ್ಣ ಸಮನ್ವಯ ಎಂಬ ಸತ್ಯವನ್ನು ಕಟ್ಟಿಕೊಡಲಾಗಿದೆ.

Read More »

ಕನ್ನಡ ಶಾಸನ ಮತ್ತು ಸಾಹಿತ್ಯ: ಜೈನ ಶಿಕ್ಷಣ ಪರಂಪರೆ

ಡಾ. ಬಾಬುರಾಯ ದೊರೆ, ಡಾ. ಬಸಯ್ಯ ಸ್ವಾಮಿ

22 to 35

ನಾವು ಪ್ರಾಚೀನ ಮತ್ತು ಮಧ್ಯಕಾಲೀನ ಸಂದರ್ಭದ ಕರ್ನಾಟಕದ ಬಹು ಸಾಂಸ್ಕೃತಿಕ ಇತಿಹಾಸದಲ್ಲಿ ಜೈನಧರ್ಮವು ವಹಿಸಿದಂತಹ ಪಾತ್ರ ಮಹತ್ವವಾದದ್ದು. ಸುಮಾರು ಒಂದು ಸಾವಿರ ವರ್ಷಗಳ ಸುದೀರ್ಘ ಕಾಲದಲ್ಲಿ ಅನೇಕ ರಾಜಮನೆತನಗಳ ಆಶ್ರಯದಲ್ಲಿ ಬೆಳೆದ ಈ ಜೈನ ಧರ್ಮವು, ಕೇವಲ ಆಧ್ಯಾತ್ಮಿಕ ಕ್ಷೇತ್ರಕ್ಕೆ ಸೀಮಿತವಾಗದೆ ಶಿಕ್ಷಣ ಕ್ಷೇತ್ರದಲ್ಲಿಯೂ ಕ್ರಾಂತಿಕಾರಕ ಬದಲಾವಣೆಗಳನ್ನು ತಂದಿತು. ಇಲ್ಲಿ ಶ್ರವಣಬೆಳಗೊಳ ಪ್ರದೇಶ ಸೇರಿದಂತೆ ಕರ್ನಾಟಕದ ಅನೇಕ ಪ್ರದೇಶಗಳಲ್ಲಿ ಸಿಕ್ಕಿರುವ ಶಾಸನಗಳು ಹಾಗೂ ಕನ್ನಡದ ಮೊದಲ ಗದ್ಯ ಗ್ರಂಥ ವಡ್ಡಾರಾಧನೆಯಂತಹ ಪ್ರಾಚೀನ ಕನ್ನಡ ಸಾಹಿತ್ಯ ಕೃತಿಗಳನ್ನು ಅನುಲಕ್ಷಿಸಿ ಜೈನ ಶಿಕ್ಷಣ ಪರಂಪರೆಯನ್ನು ಸಮಗ್ರವಾಗಿ ವಿಶ್ಲೇಷಿಸಲು ಪ್ರಯತ್ನಿಸಲಾಗಿದೆ. ರಾಜಾಶ್ರಯದ ಚಾರಿತ್ರಿಕ ಹಿನ್ನೆಲೆ, ಬಸದಿ-ಚೈತ್ಯಾಲಯಗಳು ವಿದ್ಯಾಕೇಂದ್ರಗಳಾಗಿ ರೂಪುಗೊಂಡ ಬಗೆ, ವಿದ್ಯಾಭ್ಯಾಸ ಆರಂಭದ ವಯೋಮಿತಿ, ಗುರು-ಶಿಷ್ಯ ಪರಿಭಾಷೆ, ಬೋಧನಾ ವಿಧಾನ, ಪಠ್ಯಕ್ರಮದ ವ್ಯಾಪ್ತಿ ಮತ್ತು ಸಹ ಶಿಕ್ಷಣ ಪದ್ಧತಿ ಎಂಬ ಆರು ಆಯಾಮಗಳ ಮೂಲಕ ಈ ಅಧ್ಯಯನ ರೂಪುಗೊಂಡಿದೆ. ವೈದಿಕ ಪರಂಪರೆಯ ಜಾತಿ-ಲಿಂಗಾಧಾರಿತ ಶೈಕ್ಷಣಿಕ ನಿರ್ಬಂಧಗಳಿಗೆ ಪ್ರತಿಕ್ರಿಯೆಯಾಗಿ ರೂಪುಗೊಂಡ ಜೈನ ಶಿಕ್ಷಣ ಪದ್ಧತಿ, ಎಲ್ಲರಿಗೂ ಪ್ರವೇಶ, ಸ್ಥಳೀಯ ಭಾಷೆ, ಮತ್ತು ಎಲ್ಲರನ್ನು ಒಳಗೊಳ್ಳುವ ಮೂಲಕ ಕರ್ನಾಟಕದ ಸಾಂಸ್ಕೃತಿಕ ಸಾಮಾಜಿಕ ಇತಿಹಾಸದಲ್ಲಿ ಶಾಶ್ವತ ಗುರುತನ್ನು ಮೂಡಿಸಿತು ಎಂಬುದರ ಕುರಿತು ಈ ಅಧ್ಯಯನ ನಡೆಸಿದೆ.

Read More »

ಕೆ.ಶಿವರಾಮ ಕಾರಂತರ ‘ಕಿಸಾಗೋತಮಿ’: ತಾತ್ವಿಕ ವಿಶ್ಲೇಷಣೆ

ಭಂತೆ ಡಾ. ಕಲ್ಯಾಣ ಸಿರಿ

36 to 41

ಕೆ. ಶಿವರಾಮ ಕಾರಂತರ ಪ್ರಥಮ ಬೌದ್ಧ ಗೀತನಾಟಕ ‘ಕಿಸಾಗೋತಮಿ’ಯ ತಾತ್ವಿಕ ಹಾಗೂ ಮನೋವೈಜ್ಞಾನಿಕ ಆಯಾಮಗಳನ್ನು ಇಲ್ಲಿ ಸೂಕ್ಷ್ಮವಾಗಿ ವಿಶ್ಲೇಷಿಸಲಾಗಿದೆ. ಮಗುವನ್ನು ಕಳೆದುಕೊಂಡು ಶೋಕತಪ್ತಳಾದ ತಾಯಿ ಕಿಸಾಗೋತಮಿಗೆ, ಬುದ್ಧರು ‘ಸಾವಿಲ್ಲದ ಮನೆಯ ಸಾಸಿವೆ’ ತರುವಂತೆ ಸೂಚಿಸುತ್ತಾರೆ. ಆ ಮೂಲಕ ಸಾವಿನ ಸಾರ್ವತ್ರಿಕ ಹಾಗೂ ಅನಿವಾರ್ಯ ಸತ್ಯವನ್ನು ಆಕೆ ಸ್ವತಃ ಅರಿತುಕೊಳ್ಳುವಂತೆ ಮಾಡುವ ಈ ಪ್ರಾಯೋಗಿಕ ವಿಧಾನವನ್ನು, ಆಧುನಿಕ ಮನಃಶಾಸ್ತ್ರದ ‘ಜ್ಞಾನ ಗ್ರಹಣದ ವರ್ತನೆಯ ಚಿಕಿತ್ಸೆ’ಗೆ (CBT) ಸಮೀಕರಿಸಿರುವುದು ವೈಶಿಷ್ಟ್ಯಪೂರ್ಣವಾಗಿದೆ. ಜಾನಪದ ಮತ್ತು ಮಾರ್ಗ ಪದ್ಧತಿಗಳ ಸುಂದರ ಸಂಯೋಜನೆಯಿರುವ ಈ ಕೃತಿಯು ಬೌದ್ಧ ಧರ್ಮದ ‘ಅನಿತ್ಯತೆ’ಯ ತತ್ವವನ್ನು ಕಾವ್ಯಾತ್ಮಕವಾಗಿ ಕಟ್ಟಿಕೊಡುತ್ತದೆ. ತಾಯಿಯ ಕರುಳಿನ ತವಕ, ಆನಂದನ ಸಾಂತ್ವನ ಹಾಗೂ ಬುದ್ಧರ ವೈಚಾರಿಕ ಚಿಕಿತ್ಸೆಯ ಹಿನ್ನೆಲೆಯಲ್ಲಿ ಮನುಷ್ಯನಿಗೆ ಅಂಟಿರುವ ಮೋಹ, ದುಃಖ ಮತ್ತು ಭ್ರಾಂತಿಯನ್ನು ಕಳಚಿ ವಾಸ್ತವದ ಬದುಕಿಗೆ ಮುಖಮಾಡುವ ಬಗೆಯನ್ನು ಬಹು ಮಾರ್ಮಿಕವಾಗಿ ತೆರೆದಿಡಲಾಗಿದೆ.

Read More »

ವಿಜಯನಗರ ಸಾಮ್ರಾಜ್ಯದಲ್ಲಿ ಪೋರ್ಚುಗೀಸ್ ಪ್ರವಾಸಿಗರು ಮತ್ತು ರಾಯಭಾರಿಗಳು (1500–1565): ಒಂದು ಐತಿಹಾಸಿಕ ವಿಶ್ಲೇಷಣೆ

ಯಲ್ಲಪ್ಪ

42 to 52

16ನೇ ಶತಮಾನದ ಯುರೋಪಿಯನ್ ಇತಿಹಾಸ ಮತ್ತು ದಕ್ಷಿಣ ಭಾರತದ ಸಾಮ್ರಾಜ್ಯಶಾಹಿ ವಾಸ್ತವದ ಸಂಧಿಸ್ಥಳವನ್ನು ಪರೀಕ್ಷಿಸುತ್ತದೆ. ಡೊಮಿಂಗೊ ಪೇಸ್ ಮತ್ತು ಫೆರ್ನಾವೊ ನೂನೀಸ್ ಅವರ ಪ್ರಾಥಮಿಕ ವರದಿಗಳನ್ನು ವಿಶ್ಲೇಷಿಸುವ ಮೂಲಕ, ಈ ಅಧ್ಯಯನವು ಸಾಮ್ರಾಟ ಕೃಷ್ಣದೇವರಾಯ ಹಾಗೂ ಅಚ್ಯುತರಾಯನ ಕಾಲದ ವಿಜಯನಗರ ಸಾಮ್ರಾಜ್ಯದ ನಗರ ಜೀವನ, ಮಿಲಿಟರಿ ಲಾಜಿಸ್ಟಿಕ್ಸ್ ಮತ್ತು ರಾಜತಾಂತ್ರಿಕ ಸಂಬಂಧಗಳನ್ನು ಮರುನಿರ್ಮಾಣ ಮಾಡುತ್ತದೆ. ಈ ಅಧ್ಯಯನವು ಪೋರ್ಚುಗೀಸ್ ‘ಎಸ್ಟಾಡೊ ಡಾ ಇಂಡಿಯಾ’ ಮತ್ತು ‘ವಿಜಯನಗರ ಸಾಮ್ರಾಜ್ಯ’ ನಡುವಿನ ಪರಸ್ಪರ ಸಂಬಂಧವನ್ನು ತೋರಿಸುತ್ತದೆ, ವಿಶೇಷವಾಗಿ ಅರೇಬಿಯನ್-ಪರ್ಷಿಯನ್ ಕುದುರೆ ವ್ಯಾಪಾರ ಮತ್ತು ಆ ಕಾಲದ ವಾಸ್ತುಶಿಲ್ಪದ ಅದ್ಭುತಗಳ ಮೇಲೆ ಕೇಂದ್ರೀಕರಿಸುತ್ತದೆ. ವಿಜಯನಗರ ಸಾಮ್ರಾಜ್ಯದ ಜೊತೆಗಿನ ವಾಣಿಜ್ಯ ಮೈತ್ರಿಯು ಹೇಗೆ ಒಂದು ಶತಮಾನಗಳ ಕಾಲ ಹಿಂದೂ ಮಹಾಸಾಗರದ ವ್ಯಾಪಾರದ ಮೇಲೆ ಪೋರ್ಚುಗೀಸರು ಹಿಡಿತ ಸಾಧಿಸಲು ನೆರವಾಯಿತು ಎಂಬುದನ್ನು ಇದು ವಿವರಿಸುತ್ತದೆ. ಇದರೊಂದಿಗೆ, ವಿಜಯನಗರದ ಮೇಲೆ ಪೋರ್ಚುಗೀಸರ ವ್ಯಾಪಾರದ ಅವಲಂಬನೆಯ ಕಾರಣಗಳನ್ನು ಹಾಗೂ ಕ್ರಿ.ಶ. 1565ರ ಪತನದ ನಂತರ ಪೋರ್ಚುಗೀಸರ ವಾಣಿಜ್ಯ ಪ್ರಭುತ್ವವು ಕುಂಠಿತಗೊಂಡ ಹಿನ್ನೆಲೆಯನ್ನು ವಸ್ತುನಿಷ್ಠವಾಗಿ ವಿಶ್ಲೇಷಿಸುತ್ತದೆ. ಕ್ರಿ.ಶ. 1500 ರಿಂದ 1565ರ ವರೆಗಿನ ವಿಜಯನಗರದ ರಾಜಕೀಯ, ವಾಣಿಜ್ಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸವನ್ನು ವಿದೇಶಿ ಮೂಲಗಳ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಲು ಈ ಅಧ್ಯಯನವು ಸಹಾಯಕವಾಗಿದೆ.

Read More »

ರಂಗಭೂಮಿ ಮತ್ತು ಚಲನಚಿತ್ರ

ಲೋಕೇಶ ಎಂ. ಆರ್.

53 to 58

ಕನ್ನಡ ಚಲನಚಿತ್ರ ರಂಗದ ಉಗಮ ಮತ್ತು ವಿಕಾಸದಲ್ಲಿ ವೃತ್ತಿ ರಂಗಭೂಮಿಯ ಪಾತ್ರ ಹಾಗೂ ಪ್ರಭಾವವನ್ನು ಇಲ್ಲಿ ಐತಿಹಾಸಿಕ ಹಿನ್ನೆಲೆಯಲ್ಲಿ ವಿಶ್ಲೇಷಿಸಲಾಗಿದೆ. ನಾಟಕದ ಮೂಲದಿಂದ ಬಂದ ಸಿನಿಮಾವು ಹೇಗೆ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಪ್ರಭಾವಿ ಮಾಧ್ಯಮವಾಗಿ ಬೆಳೆಯಿತು ಎಂಬುದನ್ನು ವಿವರಿಸಲಾಗಿದೆ. ‘ಸತಿ ಸುಲೋಚನಾ’, ‘ಭಕ್ತ ಧ್ರುವ’, ‘ಸಂಸಾರ ನೌಕೆ’ಯಂತಹ ಆರಂಭಿಕ ವಾಕ್ಚಿತ್ರಗಳು ಸಂಪೂರ್ಣವಾಗಿ ರಂಗಭೂಮಿಯ ಕಥೆ, ಹಾಡು ಮತ್ತು ಕಲಾವಿದರನ್ನೇ ನೆಚ್ಚಿಕೊಂಡಿದ್ದವು. ಗುಬ್ಬಿ ವೀರಣ್ಣ, ಸುಬ್ಬಯ್ಯ ನಾಯ್ಡು ಅವರಂತಹ ರಂಗ ದಿಗ್ಗಜರು ಬೆಳ್ಳಿತೆರೆಗೆ ಭದ್ರ ಬುನಾದಿ ಹಾಕಿಕೊಟ್ಟರು. ನಾಟಕ ಮತ್ತು ಚಲನಚಿತ್ರಗಳ ನಡುವಿನ ಪ್ರಾಯೋಗಿಕ ವ್ಯತ್ಯಾಸಗಳನ್ನು ಗುರುತಿಸುವ ಜೊತೆಗೆ, ಕಾಲಘಟ್ಟದಲ್ಲಿ ಸಿನಿಮಾವು ರಂಗಭೂಮಿಗೆ ಮತ್ತು ಪ್ರಸ್ತುತ ದೂರದರ್ಶನ ವಾಹಿನಿಗಳು ಸಿನಿಮಾಗೆ ಒಡ್ಡಿರುವ ಸವಾಲುಗಳನ್ನು ಚರ್ಚಿಸಲಾಗಿದೆ. ಪ್ರೇಕ್ಷಕರ ಬದಲಾಗುವ ಅಭಿರುಚಿಗೆ ತಕ್ಕಂತೆ ಈ ಕಲಾಮಾಧ್ಯಮಗಳು ಕಾಲಕಾಲಕ್ಕೆ ಒಗ್ಗಿಕೊಳ್ಳಬೇಕಾದ ಅನಿವಾರ್ಯತೆಯನ್ನು ನಿರೂಪಿಸಲಾಗಿದೆ.

Read More »

ಕ್ಯಾತನಹಳ್ಳಿ ರಾಮಣ್ಣ ಅವರ ಬಹುಮುಖಿ ನೆಲೆಯ ‘ಎರಡು ಅಧ್ಯಯನಗಳು’

ಡಾ. ಶಿಲ್ಪಶ್ರೀ ಹೆಚ್. ವಿ., ಡಾ. ಶಿವಕುಮಾರ ಸಿ.

59 to 68

ಡಾ. ಕ್ಯಾತನಹಳ್ಳಿ ರಾಮಣ್ಣ ಅವರ ಜಾನಪದ ಸಂಶೋಧನಾ ಕೃತಿ ‘ಎರಡು ಅಧ್ಯಯನಗಳು’ ಗೊಂದಲಿಗರು ಮತ್ತು ಕೊಂತಿಪೂಜೆಯ ಕುರಿತಾದ ಸಮಗ್ರ ವಿಶ್ಲೇಷಣೆಯನ್ನು ಒಳಗೊಂಡಿದೆ. ಉತ್ತರ ಕರ್ನಾಟಕದ ವೃತ್ತಿಗಾಯಕರಾದ ಗೊಂದಲಿಗರ ಮೂಲ ಮಹಾರಾಷ್ಟ್ರವೆಂದು ಐತಿಹಾಸಿಕ ಆಧಾರಗಳೊಡನೆ ನಿರೂಪಿಸುವ ಅವರು, ಅವರ ಕಲಾ ವಿಧಾನ, ವಲಸೆ ಮತ್ತು ಜೀವನಶೈಲಿಯನ್ನು ವಿಸ್ತೃತವಾಗಿ ದಾಖಲಿಸಿದ್ದಾರೆ. ಮತ್ತೊಂದೆಡೆ, ದಕ್ಷಿಣ ಕರ್ನಾಟಕದಲ್ಲಿ ಮಹಿಳೆಯರು ಆಚರಿಸುವ ಕೊಂತಿಪೂಜೆಯ ಹಿನ್ನೆಲೆ, ಆಚರಣೆಯ ಹಂತಗಳು ಮತ್ತು ಹಾಡುಗಳನ್ನು ವಿವರಿಸುತ್ತಾ, ಮಹಾಭಾರತದ ಕುಂತಿಯನ್ನು ಫಲವತ್ತತೆಯ ಹಾಗೂ ಕಷ್ಟಸಹಿಷ್ಣುತೆಯ ಸಂಕೇತವಾಗಿ ಜನಪದರು ಆರಾಧಿಸುವ ಬಗೆಯನ್ನು ಕಟ್ಟಿಕೊಟ್ಟಿದ್ದಾರೆ. ಕಣ್ಮರೆಯಾಗುತ್ತಿರುವ ಈ ವಿಶಿಷ್ಟ ಜಾನಪದ ಆಚರಣೆಗಳ ಹಿಂದಿನ ಸಾಂಸ್ಕೃತಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಶೋಧಿಸುವ ಈ ಕೃತಿಯು, ತನ್ನ ನಿಖರವಾದ ಕ್ಷೇತ್ರಕಾರ್ಯ ಮತ್ತು ಅಂತರ್‌ಶಿಸ್ತೀಯ ದೃಷ್ಟಿಕೋನದಿಂದಾಗಿ ಮುಂದಿನ ತಲೆಮಾರಿನ ಜಾನಪದ ಅಧ್ಯಯನಕಾರರಿಗೆ ಒಂದು ಶ್ರೇಷ್ಠ ಮಾದರಿಯಾಗಿದೆ ಎಂಬುದನ್ನು ಇಲ್ಲಿ ತಾರ್ಕಿಕವಾಗಿ ಚರ್ಚಿಸಲಾಗಿದೆ.

Read More »

ಬೆಟ್ಟದ ಜೀವ: ಒಂದು ರೂಪಾತ್ಮಕ ವಿಶ್ಲೇಷಣೆ

ಸಂಜಯ ಉಪ್ಪಿನ

69 to 77

ಶಿವರಾಮ ಕಾರಂತರ ‘ಬೆಟ್ಟದ ಜೀವ’ ಕಾದಂಬರಿಯ ಕಥಾವಸ್ತು ಹಾಗೂ ನಿರೂಪಣಾ ತಂತ್ರಗಳನ್ನು ರೂಪಾತ್ಮಕ ವಿಶ್ಲೇಷಣೆಯ ನೆಲೆಯಲ್ಲಿ ಇಲ್ಲಿ ಪರಿಶೀಲಿಸಲಾಗಿದೆ. ಕಾರಂತರು ತಮ್ಮ ವೈಯಕ್ತಿಕ ಆದರ್ಶಗಳನ್ನು ಪಾತ್ರಗಳ ಮೇಲೆ ಹೇರದೆ, ಸಮಷ್ಟಿಯ ಜೀವನ ವ್ಯಾಪಾರದಿಂದ ಹೊಮ್ಮುವ ನೈಜ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಕೃತಿಯಲ್ಲಿ ನಿರೂಪಕ ‘ಶಿವರಾಮಯ್ಯ’ನ ಪಾತ್ರವು ವಾಸ್ತವವನ್ನು ಮೀರದ, ನಿರ್ಲಿಪ್ತ ಹಾಗೂ ವಸ್ತುನಿಷ್ಠ ಸಾಕ್ಷಿಪ್ರಜ್ಞೆಯಾಗಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಗುರುತಿಸಲಾಗಿದೆ. ಪ್ರಕೃತಿ ಮತ್ತು ಮನುಷ್ಯನ ನಡುವಿನ ನಿರಂತರ ಹೋರಾಟವನ್ನು ಅತಿರಂಜಿತವಾಗಿ ನಾಟಕೀಯಗೊಳಿಸದೆ (Undramatized narration), ಸಾವಯವ ನೆಲೆಯಲ್ಲಿ ಹಾಗೂ ರೂಪರಹಿತ ಸಂವೇದನೆಯಾಗಿ ಅಭಿವ್ಯಕ್ತಿಸಿರುವ ಕಾರಂತರ ಕಲಾತ್ಮಕ ಎಚ್ಚರಿಕೆಯನ್ನು ಈ ಬರಹವು ಶೋಧಿಸುತ್ತದೆ. ಕಥನ ಕೌಶಲ್ಯವು ಕೃತಕವಾಗದೆ, ಪ್ರಾದೇಶಿಕ ಅನುಭವಗಳು ಹೇಗೆ ಸಾರ್ವತ್ರಿಕ ಮೌಲ್ಯಗಳಾಗಿ ಮಾರ್ಪಟ್ಟಿವೆ ಎಂಬ ತಾತ್ವಿಕ ಚರ್ಚೆಯನ್ನು ಮಂಡಿಸಲಾಗಿದೆ.

Read More »