ಅಲ್ಲಮನ ಕಾಯ ಸಿದ್ಧಾಂತ
Keywords:
ಅಲ್ಲಮ, ಕಾಶ್ಮೀರಶೈವ, ಕೌಳ ಪಂಥ, ಸಂಭೋಗ, ತಾಂತ್ರಿಕ ಪ್ರಯೋಗ, ಯೋಗಿಣಿಯಬಾಯಿAbstract
ಕನ್ನಡ ಪ್ರಜ್ಞಾವಲಯದ ವೈಶಾಲ್ಯತೆ-ವೈವಿಧ್ಯತೆಗಳ ಕೂಡಲಸಂಗಮ ಡಿ.ಆರ್.ನಾಗರಾಜ್
ಡಾ.ಡಿ.ಆರ್.ನಾಗರಾಜ್ ಅವರ ಹೆಸರು ಕೇಳಿದಾಕ್ಷಣ ಕನ್ನಡದ ಶ್ರೇಷ್ಠ ವಿಮರ್ಶಕರು ಎಂಬ ಪ್ರಶಂಸೆಯೇ ಮೊದಲಿಗೆ ನೆನಪಾಗುತ್ತದೆ. ಆದರೆ, ಡಿ.ಆರ್.ಎನ್ ಅವರು ವಿಮರ್ಶೆ ಎಂಬ ಪ್ರಾಕಾರಸೀಮೆಯನ್ನು ದಾಟಿಕೊಂಡು ನಿಸ್ಸೀಮರಾಗಿ ಸೃಜನಶೀಲ ಲೇಖಕರಾಗಿಯೂ ಸಾಂಸ್ಕೃತಿಕ ಸಂಶೋಧಕರಾಗಿಯೂ ಮಹತ್ತರವಾದ ಸಾಧನೆಯನ್ನು ಮಾಡಿದ್ದಾರೆ. ಬೈನರಿ ವಿಭಜನೆಯ ಚಿಂತನಕ್ರಮಗಳಿಂದಾಗಿ ಕನ್ನಡಕ್ಕೆ ಉಂಟಾಗುತ್ತಿರುವ ಧಕ್ಕೆಯನ್ನು ಮನಗಂಡು ಕನ್ನಡ ಪ್ರಜ್ಞಾವಲಯದ ವೈಶಾಲ್ಯತೆಯನ್ನೂ ವೈವಿಧ್ಯತೆಯನ್ನೂ ತನ್ಮೂಲಕ ಕೂಡಲಸಂಗಮಗೊಳಿಸಿದ ಅಪೂರ್ವ ಚಿಂತಕರಾಗಿದ್ದಾರೆ. ಭಾರತದ ಪ್ರಮುಖ ಚಿಂತಕರಲ್ಲಿ ಒಬ್ಬರಾಗುವ ಮಟ್ಟಿಗೆ ಬೆಳೆದ ಡಿ.ಆರ್.ನಾಗರಾಜ್ ಅವರ ಬರವಣಿಗೆಯು ಪ್ರಖರ ಚಿಂತನೆಗೆ ಹೆಸರುವಾಸಿಯಾಗಿದೆ. ನಟರಾಜ್ ಹುಳಿಯಾರ್ ಅವರು ದಾಖಲಿಸುವಂತೆ, ‘ಸಾಹಿತ್ಯ ವಿಮರ್ಶೆ, ಸಂಶೋಧನೆ, ಸಂಸ್ಕೃತಿ ವಿಮರ್ಶೆ, ಸಾಮಾಜಿಕ ಸಿದ್ಧಾಂತಗಳು, ಚಳುವಳಿಗಳು, ಥಿಯರಿ ಮುಂತಾದ ಹಲವು ವಲಯಗಳಲ್ಲಿ ಆಳವಾಗಿ ತೊಡಗಿದ್ದ ಡಿ.ಆರ್.ನಾಗರಾಜ್ ಕನ್ನಡದಲ್ಲಿ ಅನನ್ಯ ಚಿಂತನಾ ಮಾರ್ಗಗಳನ್ನು ರೂಪಿಸಿದವರು. ಇಂಗ್ಲಿಷ್ ಭಾಷೆಯಲ್ಲೂ ಬರೆಯುತ್ತಿದ್ದ ಡಿ. ಆರ್. ನಾಗರಾಜರ ಕೃತಿಗಳು ಸಾಹಿತ್ಯ ವಿಮರ್ಶೆ, ಸಂಸ್ಕೃತಿ ಚಿಂತನೆ ಹಾಗೂ ಸಂಶೋಧನಾ ವಲಯಗಳಲ್ಲಿ ಮಹತ್ವದ ಸ್ಥಾನ ಪಡೆದಿವೆ. ಮಾರ್ಕ್ಸ್ ವಾದ, ಗಾಂಧೀವಾದ, ಲೋಹಿಯಾವಾದ, ಅಂಬೇಡ್ಕರ್‌ವಾದಗಳ ಗಂಭೀರ ಅನುಸಂಧಾನದಿಂದ ರೂಪುಗೊಂಡಿದ್ದ ಡಿ.ಆರ್. ನಾಗರಾಜರ ಚಿಂತನೆ ಎಲ್ಲ ಕಾಲಕ್ಕೂ ಪ್ರಬುದ್ಧ ಸಂಸ್ಕೃತಿ ನಿರ್ಮಾಣದ ಸಖನಂತಿದೆ’.
ನಾಡು ಕಂಡ ಪ್ರಸಿದ್ಧ ಚಿಂತಕರಾದ ಡಿ.ಆರ್.ನಾಗರಾಜು ಅವರು ಹುಟ್ಟಿದ್ದು 1954ರ ಫೆಬ್ರವರಿ 20ರಂದು ದೊಡ್ಡಬಳ್ಳಾಪುರದಲ್ಲಿ. ತಂದೆ ರಾಮಯ್ಯ, ತಾಯಿ ಅಕ್ಕಯ್ಯಮ್ಮ. ದೊಡ್ಡಬಳ್ಳಾಪುರದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ನಾಗರಾಜ್ ಪ್ರೌಢ ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಬಂದರು. ಅಂದಿನ ಸರ್ಕಾರಿ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜಿನ ವಿದ್ಯಾರ್ಥಿಯಾದ ಅವರು ಆನರ್ಸ್ ಪದವಿಯನ್ನು ಪಡೆದು, ಮುಂದೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಎ ಪದವಿ ಮತ್ತು ಪಿಎಚ್.ಡಿ ಪದವಿ ಪಡೆದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಯನ ವಿಭಾಗದಲ್ಲಿ ಅಧ್ಯಾಪಕರಾಗಿ ಸೇರಿದ್ದ ಅವರು ಅಮೆರಿಕೆಯ ಶಿಕಾಗೋ ವಿಶ್ವವಿದ್ಯಾನಿಲಯದ ಭಾರತೀಯ ಭಾಷೆಗಳ ವಿಭಾಗದಿಂದಲೂ ಆಹ್ವಾನಿತರಾಗಿದ್ದರು; ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ವಿಭಾಗದ ನಿರ್ದೆಶಕರಾಗಿ, ಸಿಮ್ಲಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ ಸ್ಟಡೀಸ್ ಫೆಲೋ ಆಗಿ, ಬೆಂಗಳೂರು ವಿಶ್ವವಿದ್ಯಾನಿಲಯದ ತೌಲನಿಕ ಸಾಹಿತ್ಯ ಅಧ್ಯಯನ ಕೇಂದ್ರದ ಸಂಶೋಧಕ ವಿದ್ವಾಂಸರಾಗಿ ಹಾಗೂ ಕೈಲಾಸಂ ಪೀಠದ ಸಂದರ್ಶಕ ಪ್ರಾಧ್ಯಾಪಕರಾಗಿ, ದೆಹಲಿಯ ವಿಕಾಸಶೀಲ ಸಮಾಜಗಳ ಅಧ್ಯಯನ ಕೇಂದ್ರದ ಸೀನಿಯರ್ ಫೆಲೋ ಆಗಿ ಸೇವೆ ಸಲ್ಲಿಸಿದ್ದರು.
ಅತ್ಯುತ್ತಮ ಚರ್ಚಾಪಟುವಾಗಿದ್ದ ಡಿ.ಆರ್.ಎನ್ ಅವರನ್ನು ಕುರಿತು ಪ್ರೊ.ಜಿ.ಸಿದ್ದಲಿಂಗಯ್ಯನವರು ಹೇಳಿರುವ ಮಾತುಗಳಿವು: “ವಿದ್ಯಾರ್ಥಿ ಜೀವನದಿಂದಲೂ ಅಧ್ಯಯನಶೀಲರೂ ಚಿಂತನಪರರೂ ಆದ ನಾಗರಾಜ್ ನಿರಂತರ ಅಧ್ಯಯನಶೀಲತೆಯನ್ನು ಕೊನೆಯವರೆಗೂ ಉಳಿಸಿಕೊಂಡು ಬಂದವರು... ಅಧ್ಯಯನದ ಅವಧಿ ಯಲ್ಲಿ ಚರ್ಚಾಸ್ಪರ್ಧೆ ಸಂವಾದಗಳಲ್ಲಿ ವಿಶೇಷವಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದ ನಾಗರಾಜರಿಗೆ ಅವು ತಮ್ಮ ವ್ಯಾಪಕವಾದ ಅಧ್ಯಯನವನ್ನು ಒರೆಹಚ್ಚುವ ಸಾಣೆಗಲ್ಲಾದದ್ದು ಒಂದು ವಿಶಿಷ್ಟ ಅಂಶವಾಗಿದೆ. ಕನ್ನಡ, ಸಂಸ್ಕೃತ ಹಾಗೂ ಇಂಗ್ಲಿಷ್‌ಗಳಲ್ಲಿ ಅವರು ಪಡೆದಿದ್ದ ಪ್ರಭುತ್ವ ಅವರನ್ನು ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಉತ್ತಮ ವಾಗ್ನಿಯಾಗಿಸಿತ್ತು. ಹೀಗಾಗಿ ಅವರು ಎರಡೂ ಭಾಷೆಗಳಲ್ಲಿ ವಿಮರ್ಶಿಸುವ ಸಾಮರ್ಥ್ಯವನ್ನು ಪಡೆದಿದ್ದರು..”
ಡಿ.ಆರ್.ಎನ್ ಅವರ ವಿದ್ಯಾರ್ಥಿಗಳ ಅನುಭವದಲ್ಲಿ, ಡಿ.ಆರ್.ತರಗತಿಗಳೆಂದರೆ, ಅದು ಒಂದು ಗಂಟೆಯ ಕಾಲದ ನಿರಂತರವಾದ ವಾಕ್ ಪ್ರವಾಹ, ಆಧುನಿಕ ಪಾಶ್ಚಾತ್ಯ ತತ್ವಶಾಸ್ತ್ರ, ಭಾರತೀಯ ಕಾವ್ಯಮೀಮಾಂಸೆ, ಆಗ ಕನ್ನಡದ ಕಥನಗಳಲ್ಲಿ ವ್ಯಕ್ತವಾಗುತ್ತಿದ್ದ ದೇಸಿ ತಾತ್ವಿಕತೆ - ಎಲ್ಲವನ್ನೂ ಒತ್ತೊತ್ತಾಗಿ ನೇಯುತ್ತಾ, ಸಿದ್ಧಾಂತಗಳಾಗಿ ರೂಪಿಸುತ್ತಾ ತಿಳಿದ ತಿಳಿವನ್ನು ನಿರಂತರವಾಗಿ ಬೆಳಗುವಂಥವಾಗಿದ್ದವು. ಡಿ.ಆರ್.ಎನ್ ಅವರಿಗಿದ್ದ ಕನ್ನಡ, ಇಂಗ್ಲೀಷ್ ಮತ್ತು ಸಂಸ್ಕೃತ ಭಾಷಾ ಪ್ರೌಢಿಮೆಯಿಂದಾಗಿ ಅವರು ಮಂಡಿಸುತ್ತಿದ್ದ ವಿಚಾರಗಳನ್ನು ಆಲಿಸುವ ಯಾರನ್ನಾದರೂ ಅಹುದು ಅಹುದು ಎನ್ನಿಸುವಂತಿತ್ತೆಂದು ಬಲ್ಲವರು ದಾಖಲಿಸಿದ್ದಾರೆ. ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಹಲವು ವಿಚಾರ ಸಂಕಿರಣಗಳಲ್ಲಿ ಇವರು ತಮ್ಮ ಪ್ರೌಢ ಚಿಂತನೆಗಳನ್ನು ಪ್ರಕಟಿಸಿದ್ದಾರೆ. ನಿರ್ಲಕ್ಷಿತ ಸಾಂಸ್ಕೃತಿಕ ವಾಚಿಕೆಗಳ ಪುನರ್ ವ್ಯಾಖ್ಯಾನದ ಕಾಳಜಿ ಹೊಂದಿದ್ದ ಇವರು ಸಮಸ್ತ ಜ್ಞಾನವೂ ಒಂದು ಬಗೆಯ ಕಥನವೇ ಮತ್ತು ಎಲ್ಲಾ ಜ್ಞಾನಗಳನ್ನು ಸಾಹಿತ್ಯ ಮೀಮಾಂಸೆಯ ಮೂಲಕ ಪ್ರವೇಶಿಸಲು ಸಾಧ್ಯ ಎಂಬ ನಿಲುವುಳ್ಳವರಾಗಿದ್ದರು. ವಿಮರ್ಶೆಯ ಸಂದರ್ಭದಲ್ಲಿ ವಸ್ತುನಿಷ್ಟ ದೃಷ್ಟಿಕೋನ ಮತ್ತು ತಟಸ್ಥ ಮನೋಭಾವ ಹೊಂದಿದ್ದ ಇವರು ವ್ಯಕ್ತಿ ವಿಶಿಷ್ಟ ಲೋಕಜ್ಞಾನ, ಮಾರ್ಕ್ಸ್ವಾದೀ ಚಿಂತನೆ, ಫ್ರಾಯ್ಡ್ ಚಿಂತನೆ ಮತ್ತು ಭಾರತೀಯ ದೇಸೀ ಚಿಂತನೆಗಳಿಂದ ಪಡೆದ ಜ್ಞಾನವನ್ನು ತಮ್ಮ ಬರೆವಣಿಗೆಯಲ್ಲಿ ಧಾರೆ ಎರೆದಿದ್ದಾರೆ.
ಡಿ.ಆರ್.ಎನ್ ವಿರಚಿತ ಕೃತಿಗಳು: ಅಮೃತ ಮತ್ತು ಗರುಡ (1983), ಶಕ್ತಿ ಶಾರದೆಯ ಮೇಳ (1987), ಪಾಶ್ಚಾತ್ಯ ಸಾಹಿತ್ಯ ಮಾರ್ಗದರ್ಶಿ-ಸಂಪುಟ 1: ಗ್ರೀಕ್ ಸಾಹಿತ್ಯ (1987), Recreating eachother (1987), Shiva’s Plight (1987), ಉರ್ದು ಸಾಹಿತ್ಯ ಸಂಕಲನ (1990), ವಸಂತ ಸ್ಮೃತಿ (ಪರ್ಶಿಯನ್ ಸೂಫಿ ಕವಿ ರೂಮಿಯ ಕಾವ್ಯಾನುವಾದ-1992), ನಾಗಾರ್ಜುನ (1993), The Flaming Feet (=ಉರಿಚಮ್ಮಾಳಿಗೆ, 1993 - ದಲಿತ ಚಳವಳಿ ಕುರಿತ ಪುಸ್ತಕ), ಸಾಹಿತ್ಯ ಕಥನ (1996), ಅಲ್ಲಮಪ್ರಭು ಮತ್ತು ಶೈವ ಪ್ರತಿಭೆ (1998), ‘ಸಂಸ್ಕೃತಿ ಕಥನ’ (2002). ‘ಸಮಾಜವಾದಿ ಆಚಾರ್ಯ’ ಎಂಬುದು ಆಚಾರ್ಯ ನರೆಂದ್ರದೇವರ ಲೇಖನಗಳ ಸಂಕಲನವಾಗಿದ್ದು, ಇದನ್ನು ಕಿ.ರಂ.ನಾಗರಾಜರೊಂದಿಗೆ ಸಂಪಾದಿಸಿದ್ದಾರೆ. ಕನ್ನಡದ ಮೂಲಕವೇ ಸಮಸ್ತ ವಿಶ್ವವನ್ನು ಕಂಡುಕೊಳ್ಳುವ ಮಹತ್ವಾಕಾಂಕ್ಷೆಯ ‘ಅಕ್ಷರ ಚಿಂತನ ಮಾಲೆ’ಯ ಸಂಪಾದಕರಾಗಿ ಸತ್ಯದ ನವದರ್ಶನ, ಆಶೀಶ್‍ನಂದಿ ವಿಚಾರಗಳು, ವಾಕ್ಯಪದೀಯ, ದಾರಾಶಿಖೊ, ದಾವ್‍ದಜಂಗ್, ಅಭಿನವಗುಪ್ತ, ಭಾರತೀಯ ಸ್ತ್ರೀವಾದ, ಆನಂದಕುಮಾರಸ್ವಾಮಿ, ಪ್ರತಿಭೆಯ ಒಂದು ಪ್ರವಾಹ ಮೊದಲಾದ ಅಮೂಲ್ಯ ಪುಸ್ತಿಕೆಗಳನ್ನು ಹೊರತಂದಿದ್ದಾರೆ. ಶ್ರೀಯುತರ ‘ಸಾಹಿತ್ಯ ಕಥನ’ ಎಂಬ ಕೃತಿಗೆ ೧೯೯೮ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರವು ಮರಣೋತ್ತರವಾಗಿ ಲಭಿಸಿದೆ. ‘ಅಲ್ಲಮಪ್ರಭು ಮತ್ತು ಶೈವ ಪ್ರತಿಭೆ’ ಕೃತಿಗೆ ಡಾ.ಜಿ.ಎಸ್.ಎಸ್ ವಿಶ್ವಸ್ತ ಮಂಡಳಿ ಪ್ರಶಸ್ತಿ ದೊರೆತಿದೆ. ಇದರೊಂದಿಗೆ ವರ್ಧಮಾನ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಸೇರಿದಂತೆ ನೂರಾರು ಗೌರವ ಪುರಸ್ಕಾರಗಳು ಸಂದಿವೆ. ಡಿ.ಆರ್.ನಾಗರಾಜರು ಬಹುಬೇಗ ಕಾಲವಶವಾದರೂ ಬಹುಕಾಲ ಬೆಲೆಬಾಳುವಂಥ ಸಾಹಿತ್ಯ ಚಿಂತನ ಕಥನವನ್ನು ಕೊಟ್ಟುಹೋಗಿರುವುದು ಅವಿಸ್ಮರಣೀಯ.
ಡಿ.ಆರ್.ಎನ್. ಅವರು ಸಂಶೋಧನ ವಿದ್ಯಾರ್ಥಿಯಾಗಿದ್ದಾಗ ಪಿಎಚ್.ಡಿ. ಪದವಿಗಾಗಿ ೧೯೮೧ರಲ್ಲಿ ಸಲ್ಲಿಸಿದ ಮಹಾಪ್ರಬಂಧದ ಪರಿಷ್ಕೃತ ರೂಪವೇ ‘ಶಕ್ತಿಶಾರದೆಯ ಮೇಳ’(1987), ಕನ್ನಡ ಅಧ್ಯಯನ ಕೇಂದ್ರದಲ್ಲಿ ಡಿ.ಆರ್.ನಾಗರಾಜರು ಅಧ್ಯಾಪಕರಾಗಿ ಸೇವೆಯಲ್ಲಿದ್ದಾಗ ೧೯೮೩ರಲ್ಲಿ ಹೊರತಂದ ವಿಮರ್ಶಾ ಕೃತಿಯೇ ‘ಅಮೃತ ಮತ್ತು ಗರುಡ’. ‘ಶಕ್ತಿ ಶಾರದೆಯ ಮೇಳ’ದ ಮೂಲ ಶೀರ್ಷಿಕೆ ‘ಆಧುನಿಕ ಕನ್ನಡ ಕಾವ್ಯದ ನಾಲ್ಕು ವಸ್ತುಗಳು - ಒಂದು ಪರಿಶೀಲನೆ’ ಎಂಬುದಾಗಿತ್ತು ಈ ವಿಷಯ ಸೂಚಕರು ಮತ್ತು ಮಾರ್ಗದರ್ಶಕರು ಡಾ.ಜಿ. ಎಸ್. ಶಿವರುದ್ರಪ್ಪನವರು. ಜಿ.ಎಸ್.ಎಸ್. ಸೂಚಿಸಿದ ನಾಲ್ಕು ವಸ್ತುಗಳಿವು : ಭೂಮಿ ಮತ್ತು ಮನುಷ್ಯ, ಕಾಲ ಮತ್ತು ಮನುಷ್ಯ, ಕಾಮ ಮತ್ತು ಮನುಷ್ಯ, ಸಮಾಜ ಮತ್ತು ಮನುಷ್ಯ. ಹೀಗೆ, ಮನುಷ್ಯ ಕೇಂದ್ರಿತ ದೃಷ್ಟಿಕೋನದಿಂದ ಕೂಡಿ ಚತುರ್ಮುಖ ವಸ್ತು ತತ್ವವನ್ನು ದೃಷ್ಟಿಯಲ್ಲಿಟ್ಟುಕೊಂಡು ಆಧುನಿಕ ಕನ್ನಡ ಕಾವ್ಯದ ಎರಡು ಪ್ರಧಾನ ಧಾರೆಗಳಾದ ನವೋದಯ ಮತ್ತು ನವ್ಯಗಳ ಚೌಕಟ್ಟಿನಲ್ಲಿ ನಡೆಸಿದ ಅಧ್ಯಯನವಿದು. ಕನ್ನಡ ಕಾವ್ಯದ ಮುಖ್ಯ ಕಾಳಜಿಗಳನ್ನು ಪರೀಕ್ಷಿಸುವುದರ ಜೊತೆಯಲ್ಲೆ, ಕನ್ನಡದ ಎಲ್ಲ ಮುಖ್ಯ ಆಧುನಿಕ ಕವಿಗಳ ಮೇಜರ್ ಎನ್ನಬಹುದಾದ ಕೃತಿಗಳೆಲ್ಲವನ್ನೂ ಆಳವಾಗಿ, ಸೂಕ್ಷ್ಮವಾಗಿ ಒಂದು ಕೇಂದ್ರ ದೃಷ್ಟಿಕೋನದ ಪ್ರವೇಶಕ್ಕೆ ಸಿಕ್ಕುವಂತೆ ಚರ್ಚಿಸಲು ಪ್ರಬಂಧದಲ್ಲಿ ಅವಕಾಶ ಮಾಡಿಕೊಳ್ಳುತ್ತಾ ಡಿ.ಆರ್.ನಾಗರಾಜ್ ಅವರ ಸಂಶೋಧನೆಯು ಅನೇಕ ಮಹತ್ವದ ಒಳನೋಟಗಳನ್ನು ನೀಡಿದೆ.
ವಿಮರ್ಶಕರಾದ ಪ್ರೊ.ಚಂದ್ರಶೇಖರ ನಂಗಲಿ ಅವರು ದಾಖಲಿಸುವಂತೆ, ಡಿ.ಆರ್.ನಾಗರಾಜರ ಅಮೃತ ಮತ್ತು ಗರುಡ (೧೯೮೩) ಪ್ರಕಟವಾಗುವುದಕ್ಕೆ ಮುಂಚೆ, ೧೯೨೦ರ ದಶಕದಿಂದ ಆರಂಭಿಸಿ ೧೯೭೦ರ ದಶಕದವರೆಗೆ ಕನ್ನಡದಲ್ಲಿ ಪ್ರಕಟವಾದ ಸಾಹಿತ್ಯ ವಿಮರ್ಶೆಯ ಗ್ರಂಥಗಳು ವಿಮರ್ಶೆಯೆಂದರೆ ಶಾಸ್ತ್ರೀಯವಾದ ಅಧ್ಯಯನವೆಂಬ ಅಥವಾ ವಾಗರ್ಥಗಳ ಅನುಸಂಧಾನವೆಂಬ ಪೂರ್ವಾಭಿಪ್ರಾಯಕ್ಕೆ ಬದ್ಧವಾದ ಶೀರ್ಷಿಕೆಗಳೇ ಆಗಿವೆ. ಈ ದೃಷ್ಟಿಯಿಂದ ನೋಡಿದರೆ ಕೀರ್ತಿನಾಥ ಕುರ್ತಕೋಟಿಯವರಂತೆಯೇ ಕಾವ್ಯಾತ್ಮಕವಾದ ಶೀರ್ಷಿಕೆಯನ್ನಿತ್ತು ಸಾಹಿತ್ಯ ವಿಮರ್ಶೆಯನ್ನು ತನ್ನದೇ ಆದ ವಿಶಿಷ್ಟತೆಯೊಂದಿಗೆ ಪರಿಣಾಮಕಾರಿಯಾಗಿ ನಡೆಸಿದ ಶ್ರೇಯಸ್ಸಿಗೆ ಡಿ.ಆರ್.ನಾಗರಾಜ ಪಾತ್ರರಾಗುತ್ತಾರೆ. ಅಮೃತ ಮತ್ತು ಗರುಡ (೧೯೮೩), ಶಕ್ತಿಶಾರದೆಯ ಮೇಳ (೧೯೮೭), ಎಂಬ ಶೀರ್ಷಿಕೆಗಳೆರಡೂ ಬೇಂದ್ರೆ ಕಾವ್ಯಚಿಂತನದ ಪರಿಣಾಮ ಫಲಗಳು : ಕಾವ್ಯವೆನ್ನುವುದು ಅಮೃತಕ್ಕೆ ಹಾರುವ ಗರುಡ’’ ಎಂಬ ದ.ರಾ.ಬೇಂದ್ರೆಯವರ ನುಡಿಯನ್ನು ಆಧರಿಸಿ ‘ಅಮೃತ ಮತ್ತು ಗರುಡ’ ಮೂಡಿಬಂದಿದೆ. ‘ನೃತ್ಯಯಜ್ಞ’ ಕವಿತೆಯಲ್ಲಿರುವ ಕಾರ್ತಿಕದಲ್ಲಿ ಭೂಮಿಕಾಂಬ ಶಾರದೀಯ ಕಳೆ’’ (= ಕಾರ್ತಿಕೇಯ ಮತ್ತು ಸಾರಸ್ವತ ಕಲೆಯ ಮೇಳನದ ಧ್ವನಿ) ಚಿಂತನೆಯಿಂದ ಶಕ್ತಿ ಶಾರದೆಯ ಮೇಳ ಮೂಡಿಬಂದಿದೆ. ಕೀರ್ತಿನಾಥ ಕುರ್ತಕೋಟಿಯವರ ‘ನಡೆದು ಬಂದದಾರಿ’ ಮತ್ತು ‘ಶೃಂಗದ ಬೆನ್ನೇರಿ’ ಕೃತಿಗಳಿಂದ ಪಡೆದ ನಾಮಕರಣ ಸೂಚನೆಗಳನ್ನಾಧರಿಸಿ ಡಿ. ಆರ್. ನಾಗರಾಜ ಅವರಿಟ್ಟ ಈ ಶೀರ್ಷಿಕೆಗಳು, ಇಲ್ಲಿರುವ ರೂಪಕಾತ್ಮಕ ಶೈಲಿಯ ಪ್ರಭಾವವನ್ನು ಮುಂದೆ ಬಂದ ವಿಮರ್ಶಾಕೃತಿ ಸಂಶೋಧನೆಗಳಲ್ಲಿ ನಿಚ್ಚಳವಾಗಿ ಮನಗಾಣಬಹುದು. ಡಿ.ಆರ್.ಎನ್. ಅವರೇ ಹೇಳಿಕೊಂಡಿರುವಂತಹ, “... ಏನೇ ಬರೆದರೂ ತೀವ್ರವಾಗಿ ರೂಪಕಾತ್ಮಕವಾಗಿ ಸರಳವಾಗಿ ಬರೀಬೇಕು ಅನ್ನುವುದು ನನ್ನ ಆದರ್ಶ...’ ಎಂಬುದು ಅವರ ವಿಮರ್ಶಾ ಮಾರ್ಗದ ಮ್ಯಾನಿಫೆಸ್ಟೋ ಎನ್ನಬಹುದು. ಡಿ.ಆರ್.ಎನ್ ಅವರ ಚಿಂತನೆಗಳು ಬೆಳೆದು ಬಂದ ರೀತಿಯು ಒಂದರ್ಥದಲ್ಲಿ ನಮ್ಮ ಸಂಸ್ಕೃತಿಯ, ಅಂದರೆ ಯಾವುದನ್ನು ನಾವು ತೃತೀಯ ಜಗತ್ತಿನ ಸಂಸ್ಕೃತಿಗಳೆಂದು ವಿಶಾಲಾರ್ಥದಲ್ಲಿ ಗುರುತಿಸುತ್ತೇವೋ ಅಂಥ ಸಂಸ್ಕೃತಿಯ, ಆತಂಕ-ತಲ್ಲಣ-ಬಯಕೆ-ವಿಷಾದಗಳೆಲ್ಲದರ ಜತೆಗೆ ನಡೆಸಿದ ಮುಖಾಮುಖಿಯೂ ಹೌದು.
ವಿದ್ವಾಂಸರ ಅಭಿಮತದಂತೆ, ವಿಮರ್ಶೆಯ ‘ಪೂರ್ವ’ ಪರಿಕರಗಳು ಮತ್ತು ಸಿದ್ಧ’ ಉಪಕರಣಗಳನ್ನು ಪರಿತ್ಯಜಿಸಿ ಕೃತಿ ಪ್ರವೇಶ ಮಾಡಬೇಕೆಂಬ ಒಲವು-ನಿಲುವುಗಳು ಕೂಡ ‘ಅಮೃತ ಮತ್ತು ಗರುಡ’ ಕೃತಿಯಲ್ಲಿ ಕಂಡು ಬರುವುದು ಬಹುಮುಖ್ಯವಾಗಿದೆ. ಕೃತಿಯ ಕೊನೆಯಲ್ಲಿರುವ ‘ಪ್ರಾಯೋಗಿಕ ವಿಮರ್ಶೆ’ ಭಾಗದಲ್ಲಿ ಕವಿ ಬೇಂದ್ರೆಯವರ ‘ನೃತ್ಯಯಜ್ಞ’, ಕಂಬಾರರ ನೆರಳಿನ ಜೋಡಿ’ ಮತ್ತು ಎಚ್.ಎಸ್.ಶಿವಪ್ರಕಾಶರ ‘ಸಮಗಾರ ಭೀಮವ್ವ’ ಕವನಗಳನ್ನು ಕುರಿತು ಅಪೂರ್ವ ಒಳನೋಟಗಳನ್ನೇ ಡಿ.ಆರ್.ಎನ್. ನೀಡಿದ್ದಾರೆ. ಈ ಭಾಗದ ವ್ಯಾಖ್ಯಾನಗಳೇ ಮುಂದೆ ಅವರ ‘ವಸಂತ ಸ್ಮೃತಿ’, ‘ಅಲ್ಲಮಪ್ರಭು ಮತ್ತು ಶೈವ ಪ್ರತಿಭೆ’, ‘ದಿ ಪ್ಲೇಮಿಂಗ್ ಫೀಟ್ (=ಉರಿ ಚಮ್ಮಾಳಿಗೆ)ಗಳಲ್ಲಿ ಹದವಾದ ನಿರೂಪಣೆಗಳು ಎನ್ನಲಾಗಿದೆ. ವಸಂತ ಸ್ಮೃತಿ (೧೯೯೨) ಮತ್ತು ನಾಗಾರ್ಜುನ (೧೯೯೩) ಎಂಬ ಕೃತಿಗಳು ಜ್ಞಾನದಾಹದ ಪಯಣದಲ್ಲಿ ಡಿ.ಆರ್. ಸ್ಥಾಪಿಸಿಕೊಂಡ ಸೂಫಿ ಮತ್ತು ಬೌದ್ಧ ಗೆಳೆತನದ ನಿರೂಪಣೆಗಳೆಂದು ಹೇಳಬಹುದು. ಮತ್ತೊಂದು ದೃಷ್ಟಿಯಲ್ಲಿ ಮುಂದೆ ಮರಣೋತ್ತರವಾಗಿ ಪ್ರಕಟಗೊಂಡ ‘ಅಲ್ಲಮಪ್ರಭು ಮತ್ತು ಶೈವ ಪ್ರತಿಭೆ’ ಎಂಬ ಧೀಮಂತ ಕೃತಿಯನ್ನು ರೂಪಿಸಲು ನೆರವಾದ ‘ರಿಹರ್ಸಲ್’ಗಳೆಂದು ಗುರುತಿಸಲಾಗಿದೆ. ‘ನಾಗಾರ್ಜುನ’ ಕೃತಿಯಲ್ಲಿ ನಾಗಾರ್ಜುನನ ವಿಶಿಷ್ಟ ಕೃತಿಯಾದ ವಿಗ್ರಹ ವ್ಯಾವರ್ತಿನಿಯ ಭಾಷಾಂತರವಿದೆ. ಜೊತೆಗೆ, ಸಂಸ್ಕೃತದಲ್ಲಿ ಲಭ್ಯವಿರದ ಆತನ ಕೃತಿ ಸುಹೃಲ್ಲೇಖದ ಆಯ್ದ ಭಾಗಗಳ ಭಾಷಾಂತರೂ ಇದೆ. ಈ ಅನುವಾದಗಳ ಜೊತೆಗೆ ನಾಗಾರ್ಜುನನ ಮುಖ್ಯ ತಾತ್ವಿಕ ಸಾಧನೆ ಮತ್ತು ಪರಿಕಲ್ಪನೆಗಳನ್ನು ಸರಳವಾಗಿ ಪರಿಚಯ ಮಾಡಿಕೊಡುವ ಒಂದು ಲೇಖನವೂ ಇದೆ. ಕನ್ನಡ ಚಿಂತನೆಗೆ ಇದೊಂದು ಮುಖ್ಯ ಕೊಡುಗೆಯಾಗಿದೆ.
ಡಿ.ಆರ್.ಎನ್. ಅವರ ಮರಣೋತ್ತರವಾಗಿ ಪ್ರಕಟಗೊಂಡ ವಿಮರ್ಶಾ ಕೃತಿ ‘ಸಂಸ್ಕೃತಿ ಕಥನ’. ಇಲ್ಲಿ, ಪೂರ್ವಿಕರನ್ನು ತೀವ್ರವಾಗಿ ವಿಮರ್ಶಿಸುವ ಪಿತೃಹತ್ಯೆಯಂತೆಯೇ, ಸ್ವತಃ ತನ್ನದೇ ಪೂರ್ವಾಭಿಪ್ರಾಯಗಳನ್ನು ತಾನೆ ಮುರಿದು ಹಾಕುವ ಡಿ. ಆರ್. ಎನ್. ವಿಮರ್ಶೆಗೆ ಸ್ವಹತ್ಯೆಯ ಗುಣವೂ ಮೇಲೈಸಿಕೊಂಡಿದೆ. ಸಂಸ್ಕೃತಿ ಕಥನದಲ್ಲಿ, ಸಾಹಿತ್ಯ ಕೃತಿಗಳ ವಿಶ್ಲೇಷಣೆ, ಒಳನೋಟಗಳ ಗ್ರಹಿಕೆ ಮತ್ತು ಮೌಲ್ಯಮಾಪನಕ್ಕಿಂತಲೂ ಡಿ.ಆರ್.ಎನ್. ಸಂಸ್ಕೃತಿ ಚಿಂತನೆಯಲ್ಲಿ ಹೆಚ್ಚು ಖಚಿತವಾಗಿದ್ದಾರೆ. ಇದರಲ್ಲಿ ಗೊಂದಲಗಳಾಗಲಿ ಅಥವಾ ಆತುರದ ನಡೆಯಾಗಲಿ ಕಂಡುಬರುವುದಿಲ್ಲ, ಸಮಕಾಲೀನ ಕರ್ನಾಟಕ, ಮೆಕಾಲೆಯ ಮಕ್ಕಳು, ಜೂನ್ ತಿಂಗಳ ಶಿಕ್ಷಣ ಸಂತೆ, ಚಲಿಸುವ ಧರ್ಮ ಮರೆತು ನಿಂತ ಕಟ್ಟಡಕ್ಕಾಗಿ ಸಾಯುವವರು, ಆತಂಕಿತ ಹಿಂದೂ ಮತ್ತು ಕುಪಿತ ರೈತ, ಮಣ್ಣಿನ ಪವಿತ್ರೀಕರಣ ಮುಂತಾದ ಲೇಖನಗಳು ಕನ್ನಡ ವಿಮರ್ಶೆಯ ಪ್ರಬುದ್ಧತೆಯ ಪ್ರತೀಕಗಳಾಗಿವೆ. ಇವು ಪತ್ರಿಕೆಗಳಿಗೆ ಬರೆದ ಅಂಕಣ ಬರಹಗಳಾಗಿದ್ದರೂ ತಾಕ್ಷಣಿಕಕ್ಕೆ ವಶವಾಗದ ನಿತ್ಯನೂತನ ಚಿಂತನೆಗಳಾಗಿವೆ. ವಸ್ತುವಿಷಯವಿರಲಿ ಅಥವಾ ವ್ಯಕ್ತಿಚಿತ್ರವಿರಲಿ ಅದನ್ನು ಒಳಹೊಕ್ಕು ನೋಡುವ ಡಿ.ಆರ್.ಎನ್. ಅವರ ಕಾಣೆಗಳು ಇಲ್ಲೆಲ್ಲ ಹರಳುಗಟ್ಟಿವೆ.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಗಳಿಸಿದ ಡಿ.ಆರ್.ಎನ್. ಅವರ ಕೃತಿಯೇ ‘ಸಾಹಿತ್ಯ ಕಥನ’. ಈಗ ಬರಿಯ ಭೌಗೋಲಿಕ ವಿಂಗಡನೆಗಳಾಗಿ ಉಳಿದಿಲ್ಲದ ಪೂರ್ವ-ಪಶ್ಚಿಮಗಳು, ಮೇಲುಜಾತಿ, ಮೇಲುವರ್ಗ ಮತ್ತು ಶೂದ್ರಾತಿಶೂದ್ರರು, ಶಿಷ್ಟ ಮತ್ತು ಜನಪ್ರಿಯ, ಶಿಷ್ಟ ಮತ್ತು ಜಾನಪದ, ಬ್ರಾಹ್ಮಣ್ಯ ಮತ್ತು ದಲಿತತ್ವಗಳನ್ನು ಚರ್ಚಿಸುತ್ತಾ ನಮ್ಮ ಸಾಂಸ್ಕೃತಿಕ ಅಧ್ಯಯನದಲ್ಲಿ ಎಲ್ಲ ಬಗೆಯ ದ್ವಿತೀಯ ಕಲ್ಪನೆಗಳಿಂದ ಮುಕ್ತವಾಗಬೇಕಿದೆ ಎಂದು ಈ ಕೃತಿಯಲ್ಲಿ ಡಿ.ಆರ್.ಎನ್. ಕರೆಕೊಟ್ಟಿದ್ದಾರೆ. ಶೂದ್ರಾತಿಶೂದ್ರರಿಗೆ ಸ್ವಂತ ಸಾಂಸ್ಕೃತಿಕ ಬದುಕೇ ಇರಲಿಲ್ಲ ಎಂಬ ವಿಕಲ್ಪವೂ ನೂರು ವರ್ಷಗಳಷ್ಟು ಹಳೆಯದು. ಕೆಲವು ಬಗೆಯ ಅಧಿಕಾರ, ಯಜಮಾನಿಕೆ, ಆತ್ಮವಿಕಾಸಗಳ ಪರಿಕಲ್ಪನೆಗಳಿಂದ ರೂಪುಗೊಂಡ ಕೀಳರಿಮೆ ಇದು... ಶಿಷ್ಟ ಮತ್ತು ಜನಪ್ರಿಯಗಳೆಂಬ ವ್ಯತ್ಯಾಸಗಳು, ಸದೃಢ ಮತ್ತು ಸಾರ್ವಕಾಲೀನ ಎಂಬ ಇನ್ನೊಂದು ವಿಕಲ್ಪವೂ ಕನ್ನಡ ಪ್ರತಿಭೆಗೆ ಸಾಕಷ್ಟು ಹಾನಿಮಾಡಿದೆ... ಇದಕ್ಕಿಂತ ಹೆಚ್ಚಾಗಿ, ಕನ್ನಡ ಚಿಂತನೆಯನ್ನು ಸೀಮಿತಗೊಳಿಸಿರುವ ಸಂಗತಿ ಎಂದರೆ ಆಧುನಿಕರಲ್ಲಿ ಜನಪ್ರಿಯ ಕಲಾರೂಪಗಳ ಬಗ್ಗೆ ಬೇರೂರಿರುವ ತಾತ್ಸಾರ... ನಮ್ಮ ಸಾಂಸ್ಕೃತಿಕ ಅಧ್ಯಯನದಲ್ಲಿ ಎಲ್ಲ ಬಗೆಯ ದ್ವೈತೀಯ ಕಲ್ಪನೆಗಳಿಂದ ಮುಕ್ತವಾಗಬೇಕಿದೆ. ಇದೇ ನಿಟ್ಟಿನಲ್ಲಿ ಡಿ.ಆರ್. ನಾಗರಾಜರ ‘ಸಾಹಿತ್ಯ ಕಥನ’ವು ಕನ್ನಡ ಚಿಂತನೆಯ ವೈಶ್ವಿಕಯಾನಕ್ಕೆ ಮಾರ್ಗದರ್ಶಿಯಾಗಿದೆ.
‘ಅಲ್ಲಮಪ್ರಭು ಮತ್ತು ಶೈವ ಪ್ರತಿಭೆ’ ಕೃತಿಯಲ್ಲಿ ಡಿ.ಆರ್.ಎನ್. ಅವರು ಅಲ್ಲಮನ ವಚನಗಳ ರೂಪಕಾತ್ಮಕ ಮಾದರಿ ಮತ್ತು ಪ್ರತಿಮಾ ಸಾಹಸಗಳನ್ನು ಮೌಲ್ಯೀಕರಿಸುತ್ತಾ ಸಮಗ್ರ ದೃಷ್ಟಿಕೋನದ ವಿಮರ್ಶೆಯನ್ನು ಸಂಶೋಧನಾತ್ಮಕವಾಗಿ ನಡೆಸಿರುವುದು ಕಂಡುಬರುತ್ತದೆ. ಪಿಎಚ್.ಡಿ ಮಹಾಪ್ರಬಂಧವಾದ ‘ಶಕ್ತಿಶಾರದೆಯ ಮೇಳ’ದ ನಂತರ ಮೂಡಿಬಂದಿರುವ ಪ್ರಬುದ್ಧ ಸಂಶೋಧನೆ ಆಚಾರ್ಯಕೃತಿ ಇದಾಗಿದೆ. ಯು.ಆರ್.ಅನಂತಮೂರ್ತಿ ಅವರು ಹೇಳಿದಂತೆ, ಅಲ್ಲಮನನ್ನು ಅವನ ಕಾಲದಲ್ಲಿಟ್ಟು ನೋಡುವಂತೆಯೇ, ನನ್ನ ಕಾಲದ ದೃಷ್ಟಿಯಿಂದಲೂ ವಿಶ್ಲೇಷಿಸುವ ನಾಗರಾಜರ ಪ್ರತಿಭೆ ಅಸಾಮಾನ್ಯ ಶಕ್ತಿಯುಳ್ಳದ್ದು. ಎಕಕಾಲದಲ್ಲಿ ದಾರ್ಶನಿಕನೂ, ಕವಿಯೂ ಆದ ಅಲ್ಲಮನನ್ನು ತತ್ಪರವಾಗಿ ಅರಿಯುವ ಪ್ರಯತ್ನದಲ್ಲಿ ಭಾರತೀಯ ದರ್ಶನಗಳ ಬಗ್ಗೆ ನಮ್ಮ ತಿಳುವಳಿಕೆಯೂ, ಜೊತೆಗೆ ಭಾರತೀಯ ಕಾವ್ಯಮೀಮಾಂಸೆಯ ಗೃಹೀತಗಳೂ ಯಾಕೆ ಬದಲಾಗಬೇಕಾಗುತ್ತವೆ ಎಂಬುದನ್ನು ಈ ಕೃತಿಯ ಉದ್ದಕ್ಕೂ ಸೂಕ್ಷ್ಮವಾಗಿ ವಿದ್ವತ್ಪೂರ್ಣವಾಗಿ ನಾಗರಾಜರು ಪರಿಶೀಲಿಸಿದ್ದಾರೆ. ಗಾಢವಾದ ಒಳನೋಟಗಳಿಂದ ಬೆಳಗುವ ನಾಗರಾಜರ ಗದ್ಯಶೈಲಿಯೂ ಇಲ್ಲಿ ಕನ್ನಡ ಸಾಹಿತ್ಯವಿಮರ್ಶೆಯ ಇತಿಹಾಸದಲ್ಲಿ ತಾನು ಏರಿದ ಎತ್ತರವನ್ನು ಸೂಚಿಸುವಂತಿದೆ. ಓದುಗನ ಪ್ರಜ್ಞೆಯನ್ನೇ ಪರಿಷ್ಕರಿಸಿ ಉಲ್ಲಾಸದಲ್ಲಿ ಹಿಗ್ಗುವಂತೆ ಮಾಡುವ ಈ ಕೃತಿ ಪ್ರಪಂಚದ ಯಾವ ಭಾಷೆಯಲ್ಲಾದರೂ ಉತ್ಕೃಷ್ಟ ಕೃತಿ ಎನ್ನಿಸಿಕೊಂಡೀತು. ಕನ್ನಡದ ಒಂದು ಮನಸ್ಸು ಐರೋಪ್ಯಪ್ರಣೀತವಾದ ಆಧುನಿಕತೆಯನ್ನು ಅಲ್ಲಮನ ಮೂಲಕ ಮೀರಿ ನಮ್ಮ ಪ್ರಸ್ತುತ ಸಾಂಸ್ಕೃತಿಕ ಸಂದರ್ಭಕ್ಕೆ ಚೈತನ್ಯಪೂರ್ಣವಾಗಿ ಎದುರಾಗುವ ಪ್ರಕ್ರಿಯೆಯನ್ನು ಪ್ರತಿನಿಧಿಸುವ ಈ ಕೃತಿ ಕನ್ನಡ ಸಾರಸ್ವತ ಲೋಕದಲ್ಲಿ ಗಂಭೀರವಾದ ಚರ್ಚೆಗೆ ಅರ್ಹವಾಗಿದೆ.
ಪ್ರಸ್ತುತ ನೀಡಲಾಗಿರುವ ಸಂಶೋಧನ ಪ್ರಬಂಧವು ಡಿ.ಆರ್.ಎನ್. ಅವರ ‘ಅಲ್ಲಮಪ್ರಭು ಮತ್ತು ಶೈವ ಪ್ರತಿಭೆ’ ಕೃತಿಯಲ್ಲಿನ ಆಯ್ದ ಭಾಗವಾಗಿದೆ. ವಿದ್ವಾಂಸರು ಗುರ್ತಿಸುವಂತೆ, ‘ಚಾರಿತ್ರಿಕ ಸಂದರ್ಭಮೂಲ’ದ (Historical Genesis) ಸುಳುಹನ್ನೇ ನೀಡದ ಮಂಟೇಸ್ವಾಮಿ ಕಾವ್ಯದ ರೂಪಕ ನಿರ್ಮಿತಿ ಪ್ರತಿಮಾ ಸಿದ್ಧಿಗಳನ್ನು ವಿವರಿಸುವಾಗ, ಅಲ್ಲಮನ ‘ವಿದ್ರೋಹಿ ನಾವೀನ್ಯತೆ’ಗೆ ಚ್ಯುತಿಯಾಗದ ಜಾನಪದ ಅನುಭಾವವನ್ನು ಎಳೆ-ಎಳೆಯಾಗಿ ಡಿ.ಆರ್.ಎನ್. ನಿರೂಪಿಸಿರುವುದು ಹೃದ್ಯವಾಗಿದೆ. ಪಂಪನಿಂದ ಹಿಡಿದು ಪು.ತಿ.ನ.ವರೆಗೆ, ಕಿರ್ಕ್ ಗಾರ್ಡ್‌ನಿಂದ ಹಿಡಿದು ಅಭಿನವ ಗುಪ್ತನವರೆಗೆ, ಕಬೀರನಿಂದ ಹಿಡಿದು ನಾರಾಯಣಗುರುಗಳವರೆಗೆ ತೌಲನಿಕ ವಿಶ್ಲೇಷಣೆ ನಡೆಸುತ್ತಾ ರಷ್ಯನ್ ಸಾಹಿತ್ಯ ಚಿಂತಕ ಬಾಖಿನ್, ಎಡ್ವರ್ಡ್ ಸೈದ್, ಶೆಲ್ಡನ್ ಪೊಲಾಕ್ ಮುಂತಾದವರನ್ನೆಲ್ಲ ಜಮಾಯಿಸಿ ಅತ್ಯಾಧುನಿಕವಾದ ‘ಸರ್ವ ದರ್ಶನ’ ಸಮೀಕ್ಷೆಯೊಂದನ್ನು ಮಂಡಿಸುತ್ತಾ ಡಿ.ಆರ್.ಎನ್ ಅವರು ಅಲ್ಲಮನ ವಚನಗಳನ್ನು ತನಿತನಿಯಾಗಿ, ಸಾಹಿತ್ಯದ ಗಂಭೀರ ವಿದ್ಯಾರ್ಥಿಯಾಗಿ ಪ್ರವೇಶಿಸಿ ಬಹು ಅಮೂಲ್ಯವಾದ ಒಳನೋಟಗಳನ್ನು ನೀಡಿದ್ದಾರೆ. ಈ ಮೂಲಕ ಅಂತರ್ ಶಿಸ್ತೀಯ ಅಧ್ಯಯನದ ಹರಹು ಹಾಗೂ ಅಪಾರವಾದ ವಿದ್ವತ್ತಿನ ಆಳವುಳ್ಳ ಡಿ.ಆರ್.ಎನ್ ಸಂಶೋಧನೆಗೆ ತನ್ನದೇ ಆದ ಚಾರಿತ್ರಿಕ ಮಹತ್ವ ಸ್ವಯಂ ವೇದ್ಯವಾಗಿರುವುದು ಕಂಡುಬರುತ್ತದೆ.
References
Gavine D. Flood, Body and Cosmology in Kashmir Saivism, Mellen Research University Press, Sanfrancico, 1993. P. 291
ಅಭಿನವಗುಪ್ತನ ʼತಂತ್ರಾಲೋಕʼದ ಪ್ರಥಮಾಹ್ನಿಕದಲ್ಲಿ ಬರುವ ಉಲ್ಲೇಖ ಹೀಗಿದೆ: “ವೇದ ಆದಿಯಿಂದ ಶ್ರೇಷ್ಠಶೈವಶಾಸ್ತ್ರ. ಶೈವದಲ್ಲೂ ಉತ್ತರ ಮತ್ತು ದಕ್ಷಿಣಾ ಪಥಗಳಿವೆ” ಅಭಿನವಗುಪ್ತ, ತಂತ್ರಾಲೋಕ, ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯ, ವಾರಣಾಸಿ, 1992. ಪು. 46
ಶೈವ ತಂತ್ರದಲ್ಲಿ ದಕ್ಷಿಣಾ ಮತ್ತು ವಾಮ (ಉತ್ತರ) ಎಂಬ ಪರಿಕಲ್ಪನೆಗಳು ರೂಪುಗೊಂಡ ಬಗೆಯನ್ನು ಅಭಿನವ ಗುಪ್ತನ ಮೇಲೆ ಮುಖ್ಯ ಪುಸ್ತಕವೊಂದನ್ನು ಬರೆದಿರುವ ಕೆ.ಸಿ. ಪಾಂಡೆ ಹೀಗೆ ವಿವರಿಸುತ್ತಾರೆ: “ದಕ್ಷಿಣಾಪಥ ಎಂದು ಹೆಸರು ಬಂದಿರುವುದು, ಅದರ ಆಧಾರವಾದ ಆಗಮಗಳು ಅಘೋರನ ಮುಖದಿಂದ ಬಂದದ್ದರಿಂದ. ಅಘೋರನ ಮುಖ ದಕ್ಷಿಣಕ್ಕಿದೆ. ವಾಮಮಾರ್ಗ ಎಂದರೆ, ಉತ್ತರಕ್ಕೆ ಮುಖಮಾಡಿರುವ ವಾಮದೇವ ಮುಖದಿಂದ ಬಂದ ಶೈವಾಗಮಗಳ ಮೇಲೆ ಆಧರಿತವಾದದ್ದು” (ಕೆ.ಸಿ. ಪಾಂಡೆ, ಅಭಿನವಗುಪ್ತ, ಪು. 611)
ಪ್ರಭುವಿನ ವಚನಗಳಲ್ಲಿ ಬೇಟೆಯ ರೂಪಕಗಳಿಗೆ ನೋಡಿ: ವಚನ 557, 561, 408
ಅಭಿನವಗುಪ್ತ, ಪರಾತ್ರಿಂಶಿಕಾ ವಿವರಣಾ, ಅನು: ಜೈದೇವಸಿಂಹ, ಮೋತಿಲಾಲ್ ಬನಾರಸಿದಾಸ್, ದೆಹಲಿ, 1988. ಪು. 70
ಅದೇ. ಪು. 98
ಅದೇ. ಪು. 127-129
ಅದೇ. ಪು. 243
ಅದೇ. ಪು. 200
ಅದೇ. ಪು. 262-264
ಈ ಬಗೆಗೆ ನಾನು ಬೇರೆ ಕಡೆ ಚರ್ಚಿಸಿದ್ದೇನೆ. ನೋಡಿ - ʼದೈವಸಂಕರʼ, ನೀನಾಸಮ್ ಮಾತುಕತೆ, ಸಂ. 37, ಫೆಬ್ರವರಿ 1996
ಪ್ರ.ವ. ಪು. 290
ಪ್ರ.ವ. ಪು. 369
ಪ್ರ.ವ. ಪು. 368
ಪೆರಿಯಪುರಾಣಂ, ಸಂ. 2, ಅನು. ಡಾ. ಎ ಶಂಕರಕೆದಿಲಾಯ, ಮದುರೈ ವಿಶ್ವವಿದ್ಯಾಲಯ, 1980 ಪು. 108-111
ಪ್ರ.ವ. ಪು. 367
ಪ್ರ.ವ. ಪು. 368
ಪ್ರ.ವ. ಪು. 368
ಪ್ರ.ವ. ಪು. 374
ಪ್ರ.ವ. ಪು. 389
Downloads
Published
How to Cite
Issue
Section
License
Copyright (c) 2024 AKSHARASURYA
This work is licensed under a Creative Commons Attribution 4.0 International License.