ಚಾಜ ನಾಟಕದಲ್ಲಿ ಮಹಿಳಾ ಸಂವೇದನೆ

Main Article Content

ಸುಮಾ ವಸಂತ ಸಾವಂತ

Abstract

ಆಧುನಿಕ ಸಾಹಿತ್ಯದ ಸಂದರ್ಭದಲ್ಲಿ ಮಹಿಳೆಯರು ಕಥೆ-ಕಾದಂಬರಿ ಪ್ರಕಾರಗಳಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಆದರೆ ರಂಗಭೂಮಿಯಲ್ಲಿ ನಾಟಕರಚನೆಗೆ ಸಂಬಂಧಿಸಿದಂತೆ ಅಂತಹ ದೊಡ್ಡಸಾಧನೆ ಕಾಣಿಸುವುದಿಲ್ಲ. ಆದರೆ ಇತ್ತೀಚಿನ ದಶಕಗಳಲ್ಲಿ ಮಹಿಳೆ ಅನೇಕ ಮಹತ್ವದ ನಾಟಕ ಕೃತಿಗಳನ್ನು ಕೊಟ್ಟಿದ್ದಾಳೆ. ಅಂತಹ ನಾಟಕಗಳಲ್ಲಿ ಚಾಜ ನಾಟಕವು ಒಂದಾಗಿದೆ. ಹಿಂದಿನ ಕಾಲದಿಂದಲೂ ಪುರುಷ ಪ್ರಧಾನತೆ, ಸಾಮ್ರಾಜ್ಯಶಾಹಿಗಳು, ಮತ್ತು ಪುರೋಹಿತಶಾಹಿತ್ವಗಳು ಎಲ್ಲವೂ ಒಟ್ಟಾಗಿಯೇ ಮಹಿಳೆಯರ ಮೇಲೆ ಹಲವಾರು ಕಟ್ಟುಪಾಡುಗಳನ್ನು ಹೊರಿಸಿವೆ. ಹೆಣ್ಣು ಭೋಗದ ವಸ್ತು ಎಂದು ಪುರುಷಪ್ರಧಾನ ವ್ಯವಸ್ಥೆಯು ಭಾವಿಸುತ್ತದೆ. ಪುರುಷನ ಅಧಿಕಾರತ್ವದಿಂದ ಅವನೇ ಹುಟ್ಟು ಹಾಕಿದ ಧರ್ಮ, ನಿಯಮಗಳು, ಗೊಡ್ಡು ಸಂಪ್ರದಾಯಗಳು, ಕಟ್ಟುಪಾಡುಗಳು ಹೆಣ್ಣನ್ನು ನಿರ್ದಾಕ್ಷಿಣ್ಯವಾಗಿ ನಡೆಸಿಕೊಳ್ಳುತ್ತವೆ. ಕುಟುಂಬ, ಉತ್ಪಾದನೆ, ಆಸ್ತಿ ಹೀಗೆ ಎಲ್ಲದರ ಮೇಲೆ ಪುರಷಾಧಿಪತ್ಯವೇ ಇರುತ್ತದೆ. ಈ ಕಾರಣದಿಂದಾಗಿ ದೇವದಾಸಿ ಪದ್ಧತಿ, ಬಾಲ್ಯವಿವಾಹ, ವಿಧವಾ ಸಮಸ್ಯೆ, ವರದಕ್ಷಿಣೆ, ಬೆತ್ತಲೆ ಸೇವೆ, ಸತಿಪದ್ಧತಿ, ಬಹುಪತ್ನಿತ್ವ ಮುಂತಾದ ಅನಿಷ್ಟ ಸಂಪ್ರದಾಯಗಳಿಗೆ ಹೆಣ್ಣನ್ನು ಸಿಲುಕಿಸಿ ಅವಳನ್ನು ನಿರಂತರ ಶೋಷಣೆಗೆ ಒಳಗುಮಾಡಲಾಗಿದೆ. ಮನುಸ್ಮೃತಿ ಮೊದಲಾದ ಕೃತಿಗಳಿಂದ ಹೆಣ್ಣಿನ ಸ್ವಾತಂತ್ರ್ಯಹರಣ ಮಾಡಿ ಪುರುಷಾಧೀನಗೊಳಿಸಲಾಯಿತು. ಇದು ಹೆಣ್ಣನ್ನು ಸಮಾಜದಲ್ಲಿ ಅತ್ಯಂತ ಕನಿಷ್ಠ ಸ್ಥಾನಕ್ಕೆ ಇಳಿಸಲು ಕಾರಣವಾಯಿತು.
ಯಾವುದೇ ಒಂದು ಸಂಸ್ಕೃತಿಯು ಮನುಷ್ಯರನ್ನು ಸಮಾಜ ಸಂಘಜೀವಿಯನ್ನಾಗಿ ಮಾಡಬೇಕು, ಅದು ಉತ್ತಮ ಸಂಸ್ಕೃತಿ. ಆದರೆ ಸಮಾಜದಲ್ಲಿ ಹಲವು ಆಚರಣೆ ಪದ್ಧತಿಗಳ ಮೂಲಕ ಜನರನ್ನು ದೌರ್ಜನ್ಯ, ತಾರತಮ್ಯಕ್ಕೆ ಒಳಗಾಗುವಂತೆ ಮಾಡುವ ಕೆಲವು ನಂಬಿಕೆಯ ಆಚರಣೆಗಳು ಹೀನವಾಗಿ ಅಸಹ್ಯವಾಗಿ ಕಂಡುಬರುತ್ತವೆ. ಈ ನಿಟ್ಟಿನಲ್ಲಿ ಮಲ್ಲಿಕಾ ಘಂಟಿಯವರ ಚಾಜ ನಾಟಕವು ಪುರುಷ ಪ್ರಧಾನತೆಯು ಹೆಣ್ಣನ್ನು ಸಾಂಸ್ಕೃತಿಕತೆಯ ನೆಲೆಯನ್ನು ಬಳಸಿಕೊಂಡು ಅನುಭೋಗಿಸುವ ನಡೆಯನ್ನು ಕಥಾವಸ್ತುವಾಗಿಸಿಕೊಂಡಿದೆ. ದ್ವೇಷವನ್ನು ಪ್ರೀತಿಯಿಂದ ಗೆಲ್ಲುವ, ದೌರ್ಜನ್ಯವನ್ನು ಉಧಾರತೆಯ ಮೂಲಕ ಸೋಲಿಸುವ, ಹಿಂಸೆಯನ್ನು ಉದಾತ್ತ ಮೌಲ್ಯಗಳ ಮೂಲಕ ಎದುರಾಗುವ ಆಶಯ ಇಂದು ನಿನ್ನೆಯದ್ದಲ್ಲ ಹಿಂದಿನಿಂದಲೂ ರೂಢಿಯಲ್ಲಿದೆ. ‘ಚಾಜ’ ಎಂದರೆ ‘ನಿಯಮ’ ‘ಪದ್ಧತಿ’ ಎಂದರ್ಥ. ಉತ್ತರ ಕರ್ನಾಟಕದ ಹೆಚ್ಚಿನ ಹಳ್ಳಿಗಳಲ್ಲಿ ಈ ಚಾಜ ಪದ ಬಳಕೆಯಲ್ಲಿದೆ. ಜಮೀನ್ದಾರಿ ವ್ಯವಸ್ಥೆಯಲ್ಲಿ ಮದುವೆ ನಂತರ ಮನೆಗೆ ಬರಬೇಕಾದ ಸೊಸೆ ಊರ ಗೌಡನ ಅಥವಾ ದೇಸಾಯಿ ಮನೆಯಲ್ಲಿ ಅವನ ತೆಕ್ಕೆಯಲ್ಲಿ ಮೊದಲ ರಾತ್ರಿ ಕಳೆಯಬೇಕಾಗಿತ್ತು. ಹಬ್ಬ-ಹರಿದಿನದ ಎಲ್ಲಾ ಕ್ರಿಯೆಗಳು ಗೌಡ, ದೇಸಾಯಿಗಳ ಮನೆಯಿಂದ ಮತ್ತು ಅವರ ನಾಯಕತ್ವದಲ್ಲಿಯೇ ಆರಂಭಗೊಳ್ಳಬೇಕಾಗಿತ್ತು. ಮಹಿಳಾ ಸಂಘರ್ಷವನ್ನು ಬಿಂಬಿಸುವುದು ಈ ಲೇಖನದ ಉದ್ದೇಶವಾಗಿದೆ.

Article Details

Section

Book Review

Author Biography

ಸುಮಾ ವಸಂತ ಸಾವಂತ

ಪ್ರಾಚಾರ್ಯರು, ಎ.ಜಿ.ಎಂ ಪದವಿ ಕಾಲೇಜು, ವರೂರ, ಧಾರವಾಡ.

How to Cite

ಸುಮಾ ವಸಂತ ಸಾವಂತ. (2024). ಚಾಜ ನಾಟಕದಲ್ಲಿ ಮಹಿಳಾ ಸಂವೇದನೆ . ಅಕ್ಷರಸೂರ್ಯ (AKSHARASURYA), 5(02), 123 to 130. https://aksharasurya.com/index.php/latest/article/view/1020

References

ಮಲ್ಲಿಕಾ ಘಂಟಿ. (2015). ಚಾಜ. ಗೌತಮ ಪ್ರಕಾಶನ. ಬಳ್ಳಾರಿ.

Most read articles by the same author(s)