Table of Contents
Trodden Path
ಔತ್ತರೇಯ ಸಂತರ ಮೇಲೆ ವೀರಶೈವ ಪ್ರಭಾವ
01 to 36
ಮನುಕುಲವನ್ನು ಇಡಿಯಾಗಿ ಕಾಣುವ ಮನಸ್ಸು, ಕನ್ನಡ-ಹಿಂದಿ ಭಾಷೆ-ಸಾಹಿತ್ಯಗಳ ಸೇತುವೆ, ಎರಡು ಭಾಷೆಗಳಲ್ಲೂ ಬರೆದ ಸವ್ಯಸಾಚಿ, ಬಹುಪ್ರಕಾರಗಳ ಸಾಹಿತ್ಯಕೃಷಿಕ, ಭಾರತೀಯ ಅಧ್ಯಾತ್ಮ ಪರಂಪರೆಯ ಮಹಾಶೋಧಕ ಮೊದಲಾದ ಪ್ರಸಿದ್ಧಿಗೆ ಭಾಜನರಾದ ಸಾಹಿತಿ ಮ.ಸು.ಕೃಷ್ಣಮೂರ್ತಿ ಅವರು. ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿರುವ ಶ್ರೀಯುತರ ಒಂದೊಂದು ಪುಸ್ತಕವೂ ಇವರ ಆಳವಾದ ವಿದ್ವತ್ತಿಗೆ ಸಾಕ್ಷಿಯಾಗಿವೆ. ಕಾದಂಬರಿ, ಕವಿತೆ, ಜೀವನ ಚರಿತ್ರೆ, ಸಣ್ಣಕಥೆ, ನಾಟಕ, ಲಲಿತ ಪ್ರಬಂಧ, ವಚನಗಳು, ಮಕ್ಕಳ ಸಾಹಿತ್ಯ, ಸಂಪಾದನೆ, ಸಂಶೋಧನೆ - ಈ ಎಲ್ಲ ಕ್ಷೇತ್ರಗಳನ್ನು ಸಮೃದ್ಧಗೊಳಿಸುವುದರ ಜೊತೆಗೆ ಎಂ.ಎಸ್.ಕೆ.. ಅವರು ಹಿಂದಿಯಿಂದ ಹಾಗೂ ಇಂಗ್ಲಿಷ್‌ನಿಂದ ಕನ್ನಡಕ್ಕೆ ವಿಪುಲವಾಗಿ ಅನುವಾದಿಸಿದ್ದಾರೆ; ಕನ್ನಡದಿಂದ ಹಿಂದಿಗೂ ಪರಿವರ್ತಿಸಿದ್ದಾರೆ. ಸೃಜನಶೀಲ ಮತ್ತು ವೈಚಾರಿಕ ಲೇಖನಗಳಲ್ಲಿ ಕ್ರಿಯಾಶೀಲರಾಗಿ ಇವರು ಕನ್ನಡದಿಂದ ಹಿಂದಿಗೂ, ಹಿಂದಿಯಿಂದ ಕನ್ನಡಕ್ಕೂ ಯಶಸ್ವಿಯಾದ ಅನುವಾದ ಕಾರ್ಯವನ್ನೂ ಮಾಡಿದ್ದಲ್ಲದೇ, ಹಿಂದಿಯಲ್ಲಿ ಸ್ವತಂತ್ರ ಕೃತಿಗಳನ್ನೂ ಪ್ರಕಟಿಸಿದ್ದಾರೆ. ತಮ್ಮ ಅನುವಾದಗಳ ಮೂಲಕ ಕನ್ನಡ ಮತ್ತು ಹಿಂದಿ ಭಾಷಾ-ಸಂಸ್ಕೃತಿಗಳ ನಡುವೆ ಸೌಹಾರ್ದ ಸೇತುವಾಗಿ ಹಲವು ದಶಕಗಳ ಕಾಲ ಅವರು ಅವಿರತವಾಗಿ ದುಡಿದವರು. ಎಂ.ಎಸ್.ಕೆ.. ತರಹದ ವಿದ್ವಾಂಸರು ಇಲ್ಲದೇ ಹೋದರೆ ನಮ್ಮ ಸಾಹಿತ್ಯಗಳಲ್ಲಿ ಬಹುಭಾಷಾ ಕೊಳುಕೊಡುವಿಕೆಯ ಕೊರತೆಯಿಂದಾಗಿ ಅವು ಸೊರಗಬೇಕಾದಂಥ ಪರಿಸ್ಥಿತಿ ಉದ್ಭವವಾಗುತ್ತಿತ್ತು ಎಂದಿದ್ದಾರೆ ವಿಮರ್ಶಕರು. ಒಂದು ಸಾಹಿತ್ಯ ಎಷ್ಟೇ ದೊಡ್ಡದಿರಲಿ, ಪ್ರಾಚೀನವಾಗಿರಲಿ ಇತರ ಸಾಹಿತ್ಯಗಳೊಡನೆ ಸಂಪರ್ಕ ಹೊಂದದಿದ್ದರೆ ಅದು ಪಲ್ಲವಿಸಲಾರದು ಮತ್ತು ಅದರ ಎತ್ತರ ಬಿತ್ತರಗಳೂ ತಿಳಿಯಲಾರವು. ಈ ದೃಷ್ಟಿಯಿಂದ ಗಮನಿಸಿದರೆ ಎಂ.ಎಸ್.ಕೆ.. ಅವರ ಕೊಡುಗೆ ಅಪಾರವಾಗಿದೆ.
ಮ.ಸು.ಕೃಷ್ಣಮೂರ್ತಿ ಅವರು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಮಂದಗೆರೆ ಗ್ರಾಮದವರು. 1931ರ ಜೂನ್ 16 ರಂದು ಜನಿಸಿದರು. ತಂದೆ ಎಂ.ಸುಬ್ಬರಾವ್, ತಾಯಿ ನಂಜಮ್ಮ. ಬನಾರಸ ವಿ.ವಿ.ಯಿಂದ ಹಿಂದಿ ಎಂ.ಎ. ಹಾಗೂ ಮೈಸೂರು ವಿ.ವಿ.ಯಿಂದ ಪಿಎಚ್.ಡಿ. ಪದವಿಯನ್ನು ಪಡೆದವರು. 1967ರಲ್ಲಿ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಹಿಂದಿ ಉಪನ್ಯಾಸಕರಾಗಿ ತಮ್ಮ ಶೈಕ್ಷಣಿಕ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಮೈಸೂರು ವಿ.ವಿ. ಹಿಂದಿ ವಿಭಾಗದ ಪ್ರಾಧ್ಯಾಪಕರಾಗಿ ಹಾಗೂ ಮುಖ್ಯಸ್ಥರಾಗಿ ಸೇವೆಸಲ್ಲಿಸಿದವರು. ಕನ್ನಡ, ಸಂಸ್ಕೃತ ಹಾಗೂ ಹಿಂದಿ ಭಾಷೆಗಳಲ್ಲಿ ಬೋಧನೆ ಮಾಡಿದ ಕೀರ್ತಿ ಇವರದು. 1988ರಿಂದ 1991ರವರೆಗೆ ಭಾರತ ಸರ್ಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಲ್ಲಿ ಹಿಂದಿ ಸಲಹಾ ಮಂಡಳಿಯ ಸದಸ್ಯರಾಗಿ ಶ್ರೀಯುತರು ಸಲ್ಲಿಸಿದ ಸೇವೆಯು ಗಣನೀಯವಾದುದು.
ಶ್ರೀಯುತರು ಫಲ್ಗುಣಿ, ರಥಚಕ್ರ, ಕಸ್ತೂರಿ ಮೃಗ, ನಾದ ಸೇತು, ಹಡಗಿನ ಹಕ್ಕಿ, ಕುರಿ ಸಾಕಿದ ತೋಳ, ಪರಶುರಾಮನ ತಂಗಿಯರು, ಚತುರ್ಮುಖ, ರಥಚಕ್ರ, ಒಂಟಿಸಲಗ ಸೇರಿದಂತೆ 60ಕ್ಕೂ ಅಧಿಕ ಕಾದಂಬರಿಗಳನ್ನು ಮತ್ತು ಯುಗಾಂತ, ರತ್ನಕಂಕಣ, ರಂಗಸಪ್ತಕ, ನಾಟ್ಯಪಂಚಕ ಹೀಗೆ ಒಟ್ಟು 27 ನಾಟಕಗಳನ್ನು ರಚಿಸಿದ್ದಾರೆ. ವ್ಯೋಮಕೇಶನ ವಚನಗಳು (ಆಧುನಿಕ ವಚನಗಳು), ಸಮುದ್ರ ಸಂಗಮ (ಕಾಲ್ಪನಿಕ ಸಂದರ್ಶನ), ಬಿತ್ತಭಿತ್ತಿಯ ಚಿತ್ರಗಳು, ಗೋಪುರದ ದೀಪ, ಚಿತ್ರಕೂಟ (ರೇಖಾಚಿತ್ರ ಸಂಗ್ರಹ), ಗಂಧಮಾಧವ, ಏಕಾಂತ ಸಂಗೀತ, ಹಾದಿಪುರಾಣ, ಚಂಕ್ರಮಣ (ಪ್ರಬಂಧ), ಸಿದ್ಧಸಾಹಿತ್ಯ, ಪರಿಶೋಧನ, ಮುಕ್ತಚಿಂತನ, ಹಿಂದಿ ಸಾಹಿತ್ಯ, ಉತ್ತರದ ಸಂತ ಪರಂಪರೆ, ಸೂಫಿ ಪ್ರೇಮಕಾವ್ಯ, ಮುಸಲ್ಮಾನ ಭಾಗವತರು, ಬಸವರಾಜಮಾರ್ಗ (ಸಂಶೋಧನೆಗಳು), ಕೋಗಿಲೆಯ ಚಿಕ್ಕವ್ವ, ಚಂದಮಾಮನ ಅಳಿಯ, ಚೈತ್ರಪಲ್ಲವಿ, ಮೀರಾಬಾಯಿ, ಮೆಣಸಿನಕಾಯಿ ಸಾಹಸ, ಸಂತ ರೈದಾಸ, ಮಹರ್ಷಿ ಕರ್ವೆ, ಕಿತ್ತೂರ ರಾಣಿ ಚೆನ್ನಮ್ಮ, ಕಾಲುಗಳ ಜಗಳ, ಗೋರಾ ಬಾದಲ್, ಚೈತ್ರ ಪಲ್ಲವ, ವೈಶಾಖ ಪ್ರಭ, ಆಷಾಢ ಸೋನೆ, ಮಕ್ಕಳ ಅಕ್ಕ-ಇವು ಮಕ್ಕಳ ಸಾಹಿತ್ಯ. ಬಾಣಭಟ್ಟನ ಆತ್ಮಕಥೆ, ಅನಾಮದಾಸನ ಕಡತ, ಮೇಘದೂತ, ಒಂದು ಕಳೆಯ ಕಥೆ, ಮೃಗನಯನಿ, ಜೈಸೋಮನಾಥ, ಕಬೀರ ಪದಾವಲೀ, ಮೀರಾ ಪದಾವಲೀ, ರಾಮಚರಿತ ಮಾನಸ, ವಿನಯ ಪತ್ರಿಕಾ, ಮೇಘದೂತ, ಕೋಮಲ ಗಾಂಧಾರ, ಬಿಹಾರೀ ಸಪ್ತಶತೀ, ಸೂರ್ಯನ ಏಳನೇ ಕುದುರೆ, ಚಿದಂಬರಾ ಸಂಚಯನ (ಹಿಂದಿಯಿಂದ ಕನ್ನಡಕ್ಕೆ ಅನುವಾದಿತ) ರಾಗಕಾನಡಾ, ಅಪರಾಜಿತ, ಜ್ಯೋತಿ, ಕಲಶ್ (ಹಿಂದಿ ಕಾದಂಬರಿಗಳು), ಅರಣ್ಯಕ, ಬೆಟ್ಟಕ್ಕೆ ಚಳಿಯಾದಡೆ, ಪುನರಾಗಮನ (ಕಥಾ ಸಂಕಲನ), ಸಂಪಾದನೆ: ನಳ ಚಂಪೂ ಸಂಗ್ರಹ ಮೊದಲಾದವು ಎಂ.ಎಸ್.ಕೆ.. ಅವರ ಕೃತಿಗಳಾಗಿವೆ.
ಮ.ಸು.ಕೃಷ್ಣಮೂರ್ತಿ ಅವರ ಸಾಹಿತ್ಯ ಕೃಷಿಯನ್ನು ಗುರುತಿಸಿ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ನೀಡಲಾಗಿದೆ. ತಾಮ್ರಪತ್ರ-ಹಿಂದಿಯಲ್ಲಿನ ಸಾಹಿತ್ಯದ ಕೆಲಸಕ್ಕಾಗಿ ಭಾರತ ಸರ್ಕಾರದಿಂದ ಪ್ರಶಸ್ತಿ, ಕನ್ನಡದಲ್ಲಿ ಅವರ ಸಾಹಿತ್ಯಿಕ ಕೆಲಸಕ್ಕಾಗಿ ದಕ್ಷಿಣ ಕೇಸರಿ ಸಾಹಿತ್ಯ ಪ್ರಶಸ್ತಿ–2010, ಬಸವರಾಜು ಪ್ರಶಸ್ತಿ-2008ರ ಕನ್ನಡ ಸಾಹಿತ್ಯ ಸೇವೆಗಾಗಿ, ಕುವೆಂಪು ಪ್ರಶಸ್ತಿ, ಕರ್ನಾಟಕ ಸಂಘ, ಶಿವಮೊಗ್ಗ–2010, ಕೇಂದ್ರೀಯ ಹಿಂದಿ ನಿರ್ದೇಶನಾಲಯದಿಂದ ಸತತ 3 ವರ್ಷಗಳ ಗೌರವ, ಬಾಬು ಗಂಗಾಶರಣ ಪ್ರಶಸ್ತಿ, ಕೇಂದ್ರೀಯ ಹಿಂದಿ ಸಂಸ್ಥಾನ, ಆಗ್ರಾ–1996, ಆನಂದ ಋಷಿ ಪ್ರಶಸ್ತಿ, ಹೈದರಾಬಾದ್–1992, ಹಿಂದಿ ಪ್ರತಿಷ್ಠಾನ್ ಪ್ರಶಸ್ತಿ, ಹೈದರಾಬಾದ್–1990, ಮಹಾತ್ಮ ಗಾಂಧಿ ಪ್ರಶಸ್ತಿ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು–1990, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರಶಸ್ತಿ–2000, ಕರ್ನಾಟಕ ರಾಜ್ಯ ಸರ್ಕಾರ ಪ್ರಶಸ್ತಿ, ಉತ್ತರಪ್ರದೇಶ ಸರ್ಕಾರದಿಂದ ಸೌಹಾರ್ದ ಸನ್ಮಾನ–1999, ರಾಷ್ಟ್ರ ಧರ್ಮ ಸೇವಾ ಸನ್ಮಾನ, ಲಕ್ನೋ–2008, ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸತತ ಎರಡು ವರ್ಷ, ನೃಪತುಂಗ ಪ್ರಶಸ್ತಿ–2001, ಸ್ವರ್ಣ ಜಯಂತಿ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾನಿಲಯ–1998, ಕರ್ನಾಟಕ ವಿದ್ಯಾವರ್ಧಕ ಸಂಘ ಪ್ರಶಸ್ತಿ, ಧಾರವಾಡ–1998, ಟಿಎನ್‌ಶ್ರೀ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾನಿಲಯ–1980, ಅವರ ಹಿಂದಿ ಕಾದಂಬರಿ ‘ಅಪರಾಜಿತಾ’ ಕೇಂದ್ರ ಹಿಂದಿ ನಿರ್ದೇಶನಾಲಯದಲ್ಲಿ ಪ್ರಥಮ ಸ್ಥಾನ ಗಳಿಸಿತು–1973, ಮತ್ತೊಂದು ಹಿಂದಿ ಕಾದಂಬರಿ ‘ರಾಗ ಕಾನಡ’ ಬೆಂಗಳೂರು ವಿಶ್ವವಿದ್ಯಾನಿಲಯದ ಮಹಾತ್ಮಾ ಗಾಂಧಿ ಪ್ರಶಸ್ತಿಗೆ ಭಾಜನವಾಗಿದೆ. ಹಿಂದಿ ಕಾದಂಬರಿ ‘ಪರಶುರಾಮ್ ಕಿ ಬೆಹೆನೆ’ಗೆ ಕೇಂದ್ರ ಹಿಂದಿ ನಿರ್ದೇಶನಾಲಯ ಪ್ರಶಸ್ತಿ – 1983 ಹಾಗೂ ಹಿಂದಿ ಕಾದಂಬರಿ ‘ಜ್ಯೋತಿ ಕಲಶ’ ಕೇಂದ್ರ ಹಿಂದಿ ನಿರ್ದೇಶನಾಲಯ ಪ್ರಶಸ್ತಿ–1988 ದೊರೆತಿದೆ. ಶ್ರೀಯುತರ ಸಾಹಿತ್ಯ ಸೇವೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2011ನೇ ಸಾಲಿನ ಗೌರವ ಪ್ರಶಸಿಯನ್ನು ನೀಡಿ ಪುರಸ್ಕರಿಸಿದೆ.
ಭಾರತೀಯ ಹಿಂದಿ ಮತ್ತಿತರ ಭಾಷೆಯ ತಿಳಿವು ಮತ್ತು ಅನುಸಂಧಾನದ ಮೂಲಕ ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿ ಪರಂಪರೆಗೆ ಮತ್ತಷ್ಟು ಮೆರುಗು ನೀಡಿದ ಎಂ.ಎಸ್.ಕೆ.. ಅವರು ಕನ್ನಡ ಸಂಶೋಧನ ಕ್ಷೇತ್ರಕ್ಕೆ ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ. ಸಿದ್ಧಸಾಹಿತ್ಯ, ಪರಿಶೋಧನ, ಮುಕ್ತಚಿಂತನ, ಹಿಂದಿ ಸಾಹಿತ್ಯ, ಉತ್ತರದ ಸಂತ ಪರಂಪರೆ, ಸೂಫಿ ಪ್ರೇಮಕಾವ್ಯ, ಮುಸಲ್ಮಾನ ಭಾಗವತರು, ಬಸವರಾಜಮಾರ್ಗ ಎಂಬ ಸಂಶೋಧನ ಕೃತಿಗಳು ಇದುವರೆಗಿನ ಕನ್ನಡ ಬಗೆಗಿನ ತಿಳಿವನ್ನು ವೈಶಾಲ್ಯಗೊಳಿಸುವ ಮಹತ್ವಪೂರ್ಣ ರಚನೆಗಳಾಗಿವೆ. ‘ಸೂಫೀ ಪ್ರೇಮಕಾವ್ಯ’ ಕೃತಿಯು ಎಂ.ಎಸ್.ಕೆ. ಅವರ ಸುಮಾರು 25 ವರ್ಷಗಳಿಗೂ ಮೀರಿದ ಸಾರಸ್ವತ ತಪಸ್ಸಿನ ಫಲ. ಭಾರತೀಯ ಸಾಹಿತ್ಯದಲ್ಲಿ ಒಂದು ಹೊಸ ದನಿಯನ್ನು ಮಿಡಿದ ಸೂಫೀಧರ್ಮ ದರ್ಶನದ ಬಗೆಗೆ ಪ್ರಪ್ರಥಮವಾಗಿ ಕನ್ನಡಕ್ಕೆ ಈ ಸಂಶೋಧನಾತ್ಮಕ ಮಹಾಗ್ರಂಥ ಹೊರ ಬಂದಿತು. ಉತ್ತರ ಭಾರತದಲ್ಲಿ ಸಂತ ಪರಂಪರೆಯ ಸ್ವರೂಪ ಹೇಗಿತ್ತು, ಪ್ರಮುಖರಾದ ಸಂತರ ಸಾಮಾಜಿಕ ದೃಷ್ಟಿಕೋನ ಯಾವ ಬಗೆಯದಾಗಿತ್ತು. ಸಾಮಾಜಿಕ ಬದುಕಿನ ಮುನ್ನಡೆಗೆ ಅವರ ವಿಚಾರಧಾರೆಯ ಕೊಡುಗೆ ಏನು? ಇಂದು ಹೊಸ ಬಗೆಯ ಸಮಾಜವನ್ನು ಕಟ್ಟುವ ಆಕಾಂಕ್ಷೆಯನ್ನು ಹೊಂದಿರುವ ಮನಸ್ಸುಗಳು ಈ ಸಂತ ಪರಂಪರೆಯ ಮೂಲದಿಂದ ತಮ್ಮ ವಿಚಾರಧಾರೆಗಳಿಗೆ ಏನು ಪುಷ್ಟಿಗಳನ್ನು ಪಡೆಯಬಹುದು? ಈ ನಿಟ್ಟಿನಲ್ಲಿ ನಡೆಸಿದ, ಉತ್ತರ ಭಾರತದ ಸಂತಪರಂಪರೆಯನ್ನ ಕುರಿತ ಒಂದು ವಿಸ್ತಾರವಾದ ಅಧ್ಯಯನ ಇಲ್ಲಿರುವುದನ್ನು ಗಮನಿಸಬಹುದಾಗಿದೆ. ಸೂಫೀ ಸಂತರನ್ನು ಕುರಿತು ಎಂ.ಎಸ್.ಕೆ. ಅವರು ಬಹಳ ಗಾಢವಾಗಿ ಚಿಂತಿಸಿ ಬರೆದಿದ್ದಾರೆ. ಎಲ್ಲ ಉಪಾಧಿಗಳನ್ನು ಮೀರಿ ವಿಕಸಿಸಬೇಕೆಂದು ಸೂಫಿಗಳು ನೀಡಿದ ಸಂದೇಶದ ಮಹತ್ವವನ್ನು ಅರಿತವರಾಗಿದ್ದಾರೆ. ಪ್ರಾಯಶಃ ಈ ಹೃದಯ ವೈಶಾಲ್ಯದ, ದೃಷ್ಟಿ ವೈಶಾಲ್ಯದ ಸಂಕೇತವಾಗಿಯೇ ಕಟ್ಟುಕಟ್ಟಳೆಗಳನ್ನು ಮೀರಿ ಮಾನವಹಿತವೊಂದನ್ನೇ ಲಕ್ಷದಲ್ಲಿರಿಸಿಕೊಂಡು ಬಾಳಬೇಕೆಂಬ ಆಶಯವನ್ನು ಎಂ.ಎಸ್.ಕೆ. ಅವರ ಹಲವಾರು ಪ್ರಚುರಪಡಿಸುತ್ತವೆ.
ವಿಮರ್ಶಕರಾದ ಸಿ.ನಾಗಣ್ಣ ಅವರು ಹೇಳುವಂತೆ, “ಸಂತ ಸಾಹಿತ್ಯವನ್ನು, ಉಪನಿಷತ್ತುಗಳನ್ನು ಕುರಿತು ಆಳವಾಗಿ ಅಧ್ಯಯನ ಮಾಡಿರುವ ಎಂ.ಎಸ್.ಕೆ. ಅವರು ಈ ರೀತಿ ಒಬ್ಬ ವಿಶ್ವಾತ್ಮಕವಾದಿಯಾಗಿ ಎಲ್ಲ ಕಾಲದ ದೇಶದ ವ್ಯಕ್ತಿಗಳನ್ನು ಏಕತ್ರಗೊಳಿಸಿ ಮೆಚ್ಚುವುದು ಆಶ್ಚರ್ಯವಲ್ಲದಿದ್ದರೂ ಸೂಕ್ಷ್ಮ ಪರಿಶೀಲನೆಯ ಆಧುನಿಕ ಮಾದರಿಯಲ್ಲಿ ಅಖಂಡ ಪರಿಪ್ರೇಕ್ಷಕ್ಕಿಂತ ಸಮುದಾಯಗಳ ಸಮೀಪ ದರ್ಶನ ಮತ್ತು ಅವಲೋಕನದ ವಿಧಾನ ಹೆಚ್ಚು ಲಾಭದಾಯಕವೆಂಬ ತಿಳುವಿಕೆಯಿದೆ.” ಎಂ.ಎಸ್.ಕೆ. ಅವರು ಅಖಂಡ ಭಾರತದ ಸಿದ್ಧ ಪರಂಪರೆಯನ್ನು ಈ ಬಗೆಯಲ್ಲಿ ಸಂಶೋಧನೆಗೆ ಒಳಗು ಮಾಡಿ “ಸಿದ್ಧಸಾಹಿತ್ಯ” ಎಂಬ ಅಮೂಲ್ಯಗ್ರಂಥವನ್ನು ಲೋಕಾರ್ಪಣೆ ಮಾಡಿದ್ದಾರೆ. ಭಾರತದ ದಾರ್ಶನಿಕ ಪರಂಪರೆಯಲ್ಲಿ ತಮ್ಮದೇ ಆದ ಅಸ್ಮಿತೆ ಹಾಗೂ ಅಸ್ತಿತ್ವದ ಮೂಲಕ ನವಧಾರೆಯಾಗಿ ಮೂಡಿಬಂದ ಸಿದ್ಧಪರಂಪರೆಯು ಬೌದ್ಧ-ಜೈನ-ಶೈವಾದಿಗಳ ಆಂತರ್ಯವನ್ನು ನಿಕಷಕ್ಕೆ ಒಡ್ಡಿದ ಬಗೆ, ಶಿಷ್ಪ ಸಂಸ್ಕೃತಿ-ಪರಿಶಿಷ್ಟ ಸಂಸ್ಕೃತಿಗಳಲ್ಲಿ ಏಕವಾಗಿರುವ ಸಿದ್ಧಸಾಹಿತ್ಯ, ಭಾರತದ ಶ್ರಮಣಧಾರೆಯ ತಲಕಾವೇರಿಯಂತೆ ಹರಿದು ವೈವಿಧ್ಯಮಯವಾಗಿ ಹರಿದ ಸಿದ್ಧಧಾರೆಯನ್ನು ಅಮೂಲಾಗ್ರವಾಗಿ ಶೋಧಿಸಿ ಮಂಡಿಸಿರುವ ಮಹತ್ವದ ಗ್ರಂಥವಿದು.
“ಮುಕ್ತ ಚಿಂತನ” ಎಂಬುದು ಭಾರತದ ಬಹುಸಂಸ್ಕೃತಿಗಳ ಸಮಾಗಮ ಹಾಗೂ ಸಂಘರ್ಷ ಸಂಗತಿಗಳನ್ನು ಕುರಿತು ಸಾಂಸ್ಕೃತಿಕ ಸಂಶೋಧನೆಯ ವೈಧಾನಿಕತೆಯಲ್ಲಿ ರಚಿಸಿರುವ ಶೋಧನಗ್ರಂಥವಾಗಿದೆ. ಎಂ.ಎಸ್.ಕೆ. ಅವರಾದಿಯಾಗಿ ವಿಶ್ವದಾದ್ಯಂತ ಸಂಸ್ಕೃತಿಶೋಧಕರಿಗೆ ಅರಿವಾದಂತೆ, ಸಂಸ್ಕೃತಿ ಎನ್ನವುದು ಒಂದು ಮಧುವಿದ್ಯೆ, ಮಧುಕರೀವೃತ್ತಿ. ಅದು ಇರುವೆ ಗೂಡಲ್ಲ, ಇಟ್ಟಿಗೆಗೂಡಲ್ಲ, ಜೇನುಗೂಡು, ಇರುವೆ ಗೂಡಿನಲ್ಲಿ ಅಕ್ಕಿಯ ನುಚ್ಚು, ಸಕ್ಕರೆಯ ಕಣ, ಬೇಳೆಯ ತುಣುಕು, ಹೀಗೆ ಹಲವಾರು ವಸ್ತುಗಳ ಕಲಬೆರಕೆಯ, ಮಿಶ್ರಣವನ್ನು ಕಾಣಬಹುದು. ಇಟ್ಟಿಗೆಗೂಡಿಗೆ ಅಗ್ನಿಸಂಸ್ಕಾರವಾದರೂ ಇಟ್ಟಿಗೆಗಳು ತಮ್ಮ ವ್ಯಕ್ತಿತ್ವವನ್ನು ವಿಲೀನಗೊಳಿಸುವುದಿಲ್ಲ, ತಮ್ಮ ದ್ವೈತ ಭಾವವನ್ನು ಬಿಟ್ಟುಕೊಡುವುದಿಲ್ಲ, ಬದಲಾಗಿ ಇನ್ನೂ ದೃಢವಾಗುತ್ತದೆ. ಆದರೆ ಸಂಸ್ಕೃತಿ ಒಂದು ಮಿಶ್ರಣವಲ್ಲ, ರಾಸಾಯನಿಕ ಸಂಯುಕ್ತ. ದುಂಬಿಗಳು ಹಲವಾರು ಹೂಗಳಿಂದ ರಸವನ್ನು ಹೀರಿ ತಮ್ಮದೇ ಆದ ಮಧುವನ್ನು ನಿರ್ಮಿಸುತ್ತವೆ. ಈ ಮಧುವನ್ನು ವಿಶ್ಲೇಷಿಸಿ ಇದು ಗುಲಾಬಿಯ ರಸ, ಇದು ಮಲ್ಲಿಗೆಯದು, ಇದು ಇರುವಂತಿಗೆಯದು, ಇದು ತುಂಬೆಯದು ಎಂದು ಹೇಳಲು ಸಾಧ್ಯವೆ? ಈ ರೀತಿ ಹಲವು ಕುಸುಮರಸಗಳು ಸೇರಿ ತಮ್ಮ ಸ್ವಂತ ಅಸ್ತಿತ್ವವನ್ನು ಕಳೆದುಕೊಂಡು ಮಧುವಾಗಿ ಪರಿಣಮಿಸುತ್ತವೆ. ಎಂ.ಎಸ್.ಕೆ. ಅವರಿಗೆ ಭಾರತೀಯ ಸಂಸ್ಕೃತಿಯನ್ನು ನೆನೆದಾಗಲೆಲ್ಲ ಈ ಮಧುವಿದ್ಯೆ ನೆನಪಾದ್ದರಿಂದ ಹಾಗೂ ಜೇನುಗೂಡು ಅವರ ಚಿತ್ತಭಿತ್ತಿಯ ಮೇಲೆ ಮತ್ತೆ ಮತ್ತೆ ಸುಳಿದಾಡಿದ್ದರಿಂದ ಅವರು ಇಲ್ಲಿ ಮುಕ್ತವಾಗಿ ಭಾರತೀಯ ಸಂಸ್ಕೃತಿಯ “ವೈವಿಧ್ಯತೆಯೊಳಗಣ ಏಕತೆ”ಯನ್ನು ಕುರಿತು ಸಂಶೋಧನೆ ನಡೆಸಿದ್ದಾರೆ. ಭಾರತೀಯ ಸಂಸ್ಕೃತಿಯನ್ನು ಕುರಿತು ಯಾವುದೇ ವಿಕಾರಗಳಿಲ್ಲದೆ ಅರಿಯಬೇಕಾದ ಅಮೂಲ್ಯವಾದ ವಿಚಾರಗಳು ಇಲ್ಲಿವೆ.
‘ಪರಿಶೋಧನ’ ಎಂಬುದು ಎಂ.ಎಸ್.ಕೆ. ಅವರು ಕಾಲುಶತಮಾನ ಕಾಲದಲ್ಲಿ ಬರೆದು, ಪ್ರಕಟಿಸಿದ ಸಂಶೋಧನ ಲೇಖನಗಳ ಕೃತಿಯಾಗಿದೆ. ಕನ್ನಡ ಸಾಹಿತ್ಯ ಸಂಸ್ಕೃತಿಗಳ ಮೂಲಾನ್ವೇಷಣೆಗೆ ತೊಡಗಿದಾಗ ನಾವು ಪರಭಾಷೆಗಳ ಪರಪ್ರಾಂತ್ಯಗಳಷ್ಟೇ ಅಲ್ಲ ಪರಕಾಯ ಪ್ರವೇಶವನ್ನೂ ಮಾಡಬೇಕಾಗುತ್ತದೆ. ಕನ್ನಡ ಸಂಸ್ಕೃತಿಯ ಬೇರುಗಳನ್ನು ಸಂಸ್ಕೃತ, ಪ್ರಾಕೃತ, ತಮಿಳು, ತೆಲುಗು, ಮರಾಠಿ ಮೂಲದಲ್ಲಿ ಹುಡುಕಿದ್ದುಂಟು. ಆದರೆ ಮಧ್ಯಕಾಲೀನ ಆರ್ಯಭಾಷೆಯ ಅಂತಿಮ ಹಂತವಾದ ಅಪಭ್ರಂಶ ಮತ್ತು ಇತ್ತೀಚಿನ ಹಿಂದಿ ಮೊದಲಾದ ಮೂಲಗಳು ನಮ್ಮ ವಿದ್ವಾಂಸರ ಕಣ್ಣು ಅಷ್ಟಾಗಿ ಹರಿದಿಲ್ಲ. ಅಂಥ ಪ್ರಯತ್ನವೊಂದನ್ನು ವಿದ್ವಾಂಸರಾದ ಎಂ.ಎಸ್.ಕೆ. ಅವರು ಇಲ್ಲಿ ಮಾಡಿರುವುದು ಮಹತ್ವಪೂರ್ಣವಾದುದಾಗಿದೆ. ಸಿದ್ಧರು ಮತ್ತು ನಾಥರ ಸಾಹಿತ್ಯದ ಶೋಧನೆಗೆ ಇಳಿದಂತೆ ಅವರಿಗೆ ಅರಿವಾದ ವಸ್ತು-ವಿಚಾರಗಳು ಅಮೂಲ್ಯ. ಹೀಗೆ ಹುಡುಕುತ್ತ ಹೋದಾಗ ಬೌದ್ಧ ಸಿದ್ಧರ ಮೂಲಪುರುಷ ನಾಗಾರ್ಜುನ ಕನ್ನಡಿಗ ಎಂಬ ಅಂಶ ಅರಿವಾದುದೇ ಅಲ್ಲದೆ, ಆತನದೆಂದು ಹೇಳಲಾಗುವ ಎರಡು ಕನ್ನಡ ಪದ್ಯಗಳು ದೊರೆತವು. ಹೀಗೆ, ಇದೇ ರೀತಿ ಭಾಷಿಕ ಕೊಳ್ಕೊಡೆಯ ಬಗೆಗೂ ಚಿಂತನ, ಮಂಥನ ನಡೆದಾಗ ನಮ್ಮಲ್ಲಿ ಹಿಂದೆ ಇದ್ದು ಈಗ ಕಣ್ಮರೆಯಾಗಿರುವ ಹಲವು ಶಬ್ದಗಳು ವೇಷಾಂತರದಿಂದ ಬೇರೆ ಭಾಷೆಗಳಲ್ಲಿ ಸೇರಿಕೊಂಡಿರುವ ಅಂಶ ಕಂಡುಬಂದಿತು. ಅಂಥವುಗಳನ್ನು ಪತ್ತೆಹಚ್ಚಿ ಮತ್ತೆ ಅವುಗಳನ್ನು ಪಡೆದುಕೊಳ್ಳುವ ಪ್ರಯತ್ನ ನಡೆಯಬೇಕೆಂದು ಹೊರಟ ಎಂ.ಎಸ್.ಕೆ. ಅವರು, ‘ಹಿಂದಿಯಲ್ಲಿ ಕನ್ನಡ ಶಬ್ದಗಳು’, ‘ಕಬೀರನಲ್ಲಿ ಕನ್ನಡ ಶಬ್ದಗಳು’, ‘ಅಪಭ್ರಂಶ ಸಾಹಿತ್ಯಕ್ಕೆ ಕನ್ನಡದ ಕೊಡುಗೆ’, ‘ಹಿಂದಿಯ ಪ್ರೇಮಾಖ್ಯಾನವೊಂದರಲ್ಲಿ ಹೊಯ್ಸಳ ರಾಜಕುಮಾರ’ ಮೊದಲಾದ ಲೇಖನಗಳ ಮೂಲಕ ಕನ್ನಡಿಗರಲ್ಲಿ ಕುತೂಹಲವನ್ನು ಕೆರಳಿಸಬಲ್ಲಂಥ ಸಂಗತಿಗಳನ್ನು ಇಲ್ಲಿ ಶೋಧಿಸಿಕೊಟ್ಟಿದ್ದಾರೆ.
ಮ.ಸು.ಕೃಷ್ಣಮೂರ್ತಿ ಅವರ ಸಂಶೋಧನಾ ವೈಶಾಲ್ಯತೆ, ಬಹುಅಭಿಜ್ಞತೆ ಹಾಗೂ ಕನ್ನಡಪ್ರಾಜ್ಞತೆಗೆ “ಔತ್ತರೇಯ ಸಂತರ ಮೇಲೆ ವೀರಶೈವ ಪ್ರಭಾವ” ಎಂಬ ಲೇಖನವೂ ಸಾಕ್ಷಿಯಾಗಿದೆ. ಈ ಲೇಖನವು ಅವರ ‘ಬಸವರಾಜಮಾರ್ಗ’ ಎಂಬ ಸಂಶೋಧನ ಗ್ರಂಥದಲ್ಲಿದೆ. ಕನ್ನಡನಾಡಿನ 12ನೇ ಶತಮಾನದ ಶರಣಮಹಾನದಿಯು ಬಹುಮುಖವಾಗಿ ಪ್ರವಹಿಸಿದ ಹಾಗೂ ಪ್ರಭಾವಿಸಿದ ಬಹುಸಾಂಸ್ಕೃತಿಕ ಸಂಬಂಧಗಳ ಅನುಸಂಧಾನವನ್ನು ಇಲ್ಲಿ ಆಧಾರಸಮೇತ ಪ್ರಸ್ತುತಪಡಿಸಲಾಗಿದೆ. ಈಗಾಗಲೇ, ಕನ್ನಡ ಮರಾಠಿಗಳು ಭಿನ್ನ ಭಾಷೆಗಳಾಗಿದ್ದರೂ ಮರಾಠಿಯ ಮೇಲೆ ಕನ್ನಡದ ಪ್ರಭಾವ ಎಷ್ಟು ವಿಫುಲವಾಗಿದೆ ಎಂಬುದನ್ನು ವಿದ್ವಾಂಸರು ಸಪ್ರಮಾಣವಾಗಿ ತೋರಿಸಿಕೊಟ್ಟಿದ್ದಾರೆ. ಇಂದಿನ ಮಹಾರಾಷ್ಟ್ರದ ಬಹುಭಾಗ ಕರ್ನಾಟಕದ ಗಂಡುಮೆಟ್ಟಾಗಿತ್ತು ಎಂಬುದು ಸಂಶೋಧನೆಯಿಂದ ವ್ಯಕ್ತವಾಗಿದೆ. ಮಹಾರಾಷ್ಟ್ರ ಸಂತರ ಅಧಿದೈವನಾದ ವಿಟ್ಠಲ ಕನ್ನಡದೇವತೆ, ‘ಪಂಢರಪುರ ಕನ್ನಡಿಗರ ಪಂಢರಿಗೆ’ ಎಂಬುದಕ್ಕೆ ಮಹಾರಾಷ್ಟ್ರ ಸಂತರ ವಾಣಿಯೇ ಸಾಕ್ಷಿ ನುಡಿಯುತ್ತದೆ. ಈ ಸಂಬಂಧವಾಗಿ ಕನ್ನಡದ ಮೇರು ಸಂಶೋಧಕರಾದ ಶಂ.ಬಾ.ಜೋಷಿ, ಎಂ.ಚಿದಾನಂದಮೂರ್ತಿ ಮೊದಲಾದವರು ನಡೆಸಿದ್ದ ಶೋಧನಸಂಗತಿಗಳಿಗೆ ಮತ್ತಷ್ಟು ಬಲಬರುವಂತೆ ಎಂ.ಎಸ್.ಕೆ. ಅವರು ತಮ್ಮ ವಿಚಾರಗಳನ್ನು ನಿರೂಪಿಸಿರುವುದು ವಿಶೇಷ. ಔತ್ತರೇಯ ಸಂತರ ಮೇಲೆ ಕನ್ನಡ ಶಿವಶರಣರ ಪ್ರಭಾವ ಕುರಿತು ಬುದ್ಧಯ್ಯ ಪುರಾಣಿಕರು, ಶ್ರೀ ಜಿ.ವಿ.ಸರ್ದಾರ್, ಪ್ರಭಾಕರ ಮಾಚ್ವೆ, ಫಾರ್ಕುಹರ್ ಅವರ ಚಿಂತನೆಗಳನ್ನು ಪರಾಮರ್ಶಿಸುತ್ತಾ, ಎಂ.ಎಸ್.ಕೆ. ಅವರು ಮಹಾರಾಷ್ಟ್ರದ ತುಕಾರಾಂ, ಏಕನಾಥ, ನಿವೃತ್ತಿನಾಥ, ಜ್ಞಾನದೇವ, ನಾಮದೇವ, ಕಬೀರ ಮೊದಲಾದ ಸಂತರ ಮೇಲೆ ಬಸವಾದಿ ಶರಣರ ಚಳವಳಿ-ಸಾಹಿತ್ಯ ಬೀರಿರುವ ಪ್ರಭಾವವನ್ನು ಭಾಷಿಕ-ಸಾಹಿತ್ಯಕ-ಅಧ್ಯಾತ್ಮಿಕ-ಚಾರಿತ್ರಿಕ ತುಲನೆಯಲ್ಲಿ ಅಮೂಲ್ಯವಾದ ವಿಚಾರಗಳನ್ನು ಮಂಡಿಸಿದ್ದಾರೆ.
ಎಂ.ಎಸ್.ಕೆ. ಅವರ ಅಭಿಮತದಂತೆ, ಒಂದು ಭಾಷೆಯಲ್ಲಿ ನಡೆದ ವಿಚಾರಕ್ರಾಂತಿ ಅನ್ಯಭಾಷಾ ಪ್ರದೇಶವನ್ನು ಮುಟ್ಟುತ್ತಿತ್ತು. ಇಂಥ ಪರಿಸ್ಥಿತಿಯಲ್ಲಿ ವಿವಿಧ ಪ್ರಾಂತಗಳ, ಭಾಷೆಗಳ ಸಂತರೂ ಮಹಂತರೂ ಅನ್ಯಪ್ರಾಂತ್ಯಗಳ ಸಂತರ ಸಂಪರ್ಕ ಪಡೆಯುತ್ತಿರಲಿಲ್ಲ ಎಂದು ಹೇಳಲು ಹೇಗೆ ಸಾಧ್ಯ? ಒಂದು ಭಾಷಾ ಸಮುದಾಯದ ಮೇಲೆ ಮತ್ತೊಂದು ಭಾಷಾ ಸಮುದಾಯದ ಪ್ರಭಾವ ಉಂಟಾಯಿತು ಎಂದ ಮಾತ್ರಕ್ಕೆ ಕೊಟ್ಟವನು ಹಿರಿಯ, ಕೊಂಡವನು ಕಿರಿಯ ಎಂಬ ತಾರತಮ್ಯವೇನೂ ಇಲ್ಲ. ಸಂಗಮೋತ್ಸವಕತೆ ಜೀವಂತ ನದಿಯ ಲಕ್ಷಣ. ರವೀಂದ್ರನಾಥ ಠಾಕೂರರು ಹೇಳುವಂತೆ ಭಾರತ ಮಾನವತೆಯ ಒಂದು ಮಹಾಸಾಗರ. ಅದರಲ್ಲಿ ಅದೆಷ್ಟು ಕಿರಿದೊರೆಗಳು, ಮಹಾನದಿಗಳು ಸಂಗಮಗೊಂಡಿವೆಯೋ ಯಾರು ಬಲ್ಲರು? ಈ ಸಂಸ್ಕೃತಿ ಸಂಗಮಕ್ಕೆ ಕನ್ನಡ ನಾಡಿನ ಕೊಡುಗೆ ಗಣನೀಯವಾದುದು. ಭಾರತ ದೇಶದಲ್ಲಿ ಕಾಲಾನುಕಾಲದಿಂದಲೂ ಸಂತರ ಸಂಗಮ, ಸಮಾಗಮ ನಡೆಯುತ್ತಿತ್ತು, ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ಈ ಮಹಾತ್ಮರ ಸತ್ಸಂಗದಿಂದ ಜನಸಾಮಾನ್ಯರಿಗೆ ಆಗುವ ಉಪಕಾರ ಅಷ್ಟಿಷ್ಟಲ್ಲ. ಸತ್ಸಂಗದ ಉತ್ಸಂಗದಲ್ಲಿ ಸಾಹಿತ್ಯವೂ ಪಾರಸ್ಪರಿಕ ಕೊಳ್ಕೊಡೆಯಿಂದ ಬೆಳೆದಿರಬೇಕು, ಸಮೃದ್ಧವಾಗಿರಬೇಕು. ಈ ಸತ್ಸಂಗಕ್ಕೆ, ವಿಚಾರವಿನಿಮಯಕ್ಕೆ ಭಾಷೆಯಾಗಲಿ, ದೇಶವಾಗಲಿ, ಪರ್ವತಾರಣ್ಯಗಳಾಗಲಿ ಅಡ್ಡಿಯಾಗಿರಲಿಲ್ಲ ಎಂಬ ಅಂಶ ಭರತಖಂಡದ ಎಲ್ಲ ಭಾಷೆಗಳ ಸಂತ ಸಾಹಿತ್ಯದ ತುಲನಾತ್ಮಕ ವ್ಯಾಸಂಗದಿಂದ ಸ್ಪಷ್ಟವಾಗುತ್ತವೆ ಎಂದು ಎಂ.ಎಸ್.ಕೆ. ಅವರು ನಡೆಸಿರುವ ಸಂಶೋಧನೆಯು ಭಾರತದ ಬಹುಸಾಂಸ್ಕೃತಿಕ ಸಂರಚನೆಗಳೊಂದಿಗೆ ಕನ್ನಡಕ್ಕಿರುವ ಸಾಹಚರ್ಯವನ್ನು ತೌಲನಿಕ ಸಂಶೋಧನೆಯ ಮೂಲಕ ಕಂಡುಕೊಳ್ಳುವುದಕ್ಕೆ ಮಹತ್ತರ ಮಾದರಿಯಾಗಿದೆ.
Byway
Life Skill Education for Adolescents
37 to 43
Adolescence represents a transitional phase from childhood to adulthood during which young individuals encounter significant physical, psychological, and social transformations that can potentially hinder their healthy development. It is crucial to provide adolescents with appropriate guidance and direction. It is essential to thoroughly grasp their difficulties and requirements and provide them with education on essential life skills. This paper concentrates on addressing the key issues and concerns faced by adolescent students, emphasize the significance of imparting life skills education to them, and explores various approaches and techniques to effectively teach these essential life skills.
Research Articles
ಮಲೆನಾಡಿನ ಜನಪದ: ಅಭಿವ್ಯಕ್ತಿ ಮೀಮಾಂಸೆ (ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕನ್ನು ಅನುಲಕ್ಷಿಸಿ)
44 to 54
‘ಮಲೆನಾಡಿನ ಜನಪದ: ಅಭಿವ್ಯಕ್ತಿ ಮೀಮಾಂಸೆ’ ಈ ಲೇಖನವು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಜನಪದೀಯ ಸಂಸ್ಕೃತಿ ಸಮೀಕ್ಷೆಯಾಗಿದೆ. ಪ್ರತಿಯೊಂದು ಸ್ಥಳವೂ ತನ್ನದೇ ಆದ ಆಧೀಮ ಸಂಸ್ಕೃತಿಯಿಂದ ಗುರುತಿಸಿಕೊಳ್ಳುವ ಹಾಗೆ ಅಪ್ಪಟ ಮಲೆನಾಡಿನ ಸೊಗಡನ್ನು, ಕಂಪನ್ನು ಹೊಂದಿದ ಸಾಗರ ತಾಲ್ಲೂಕಿನ ಪರಿಸರವು ಜೀವವೈವಿಧ್ಯತೆ, ಜನವೈವಿಧ್ಯತೆಯ ಜೊತೆಗೆ ಬದುಕಿನ ವೈವಿಧ್ಯತೆಗಳಿಂದ ಕೂಡಿದೆ. ಇಲ್ಲಿನ ಜನರ ಆಚರಣೆ, ಆರಾಧನೆ, ದೈವ, ಹಬ್ಬ, ಕೃಷಿ, ಪಶುಪಾಲನೆ, ಅಡುಗೆ, ಉಡುಗೆ, ತೊಡುಗೆ, ಸಂಪ್ರದಾಯ, ಪದ್ಧತಿ, ಮದುವೆ, ಹುಟ್ಟು, ಸಾವು ಮುಂತಾದ ಸಂದರ್ಭಗಳಲ್ಲಿ ಸಮುದಾಯಗಳ ಬದುಕಿನ ವಿನ್ಯಾಸದ ಸ್ವರೂಪಗಳು ಭಿನ್ನತೆಗಳಿಂದ ಕೂಡಿವೆ. ಇಲ್ಲಿನ ಜನರ ಆಚರಣೆಗಳು ಆರಿದ್ರಾಮಳೆ ಹಬ್ಬ, ಕೂರಿಗೆ ಹಬ್ಬ, ಪಂಚಮಿ, ಗಣೇಶ ಚತುರ್ಥಿ, ಭೂಮಿ ಹುಟ್ಟಿಮೆ, ದೀಪಾವಳಿ, ಕಣಬ್ಬ, ಸುಗ್ಗಿ ಹಬ್ಬಗಳು, ಊರ ಹಬ್ಬಗಳಾದ ಮಾರಿಜಾತ್ರೆ, ಬೀರನ ಜಾತ್ರೆ, ದ್ಯಾಮವ್ವನ ಜಾತ್ರೆ, ಮಲಕವ್ವನ ಜಾತ್ರೆ ಇತ್ಯಾದಿಗಳಾಗಿವೆ. ಹಾಗೆಯೇ ವಿಶೇಷ ಸಂದರ್ಭಗಳಲ್ಲಿ ಕುರಿ, ಕೋಳಿ, ಮೀನಿನ ಖಾಧ್ಯಗಳು, ಅಕ್ಕಿರೊಟ್ಟಿ, ಕಜ್ಜಾಯ, ಕೊಟ್ಟೆ ಕಡುಬು ಇಲ್ಲಿನ ತಿನಿಸುಗಳಾಗಿವೆ. ಮದುವೆ, ಜಾತ್ರೆ, ಹಬ್ಬದ ಸಂದರ್ಭಗಳಲ್ಲಿ ಡೊಳ್ಳು ಕುಣಿತ, ತಮಟೆ ವಾದ್ಯ, ಕೋಲಾಟ, ಸೋಬಾನೆ ಪದ, ಯಕ್ಷಗಾನ, ಚಾಪೆ ಹೆಣೆಯುವುದು, ಅಂಟಿಗೆ ಪಿಂಟಿಗೆ, ಹಾಡು-ಹಸೆ, ಮುಂತಾದವುಗಳು ಗಮನ ಸೆಳೆಯುತ್ತವೆ.
ಕನ್ನಡ ಜೈನಕಾವ್ಯಗಳ ಪರಂಪರೆ
55 to 60
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹತ್ತನೇ ಶತಮಾನದಿಂದ ಸುಮಾರು ಹನ್ನೆರಡನೇ ಶತಮಾನದ ವರೆಗಿನ ಕಾಲಘಟ್ಟವನ್ನು ಹಳೆಗನ್ನಡ ಎಂದು ಗುರುತಿಸಬಹುದು. ಈ ಕಾಲದ ಸಾಹಿತ್ಯ ಮುಖ್ಯವಾಗಿ ಜೈನ ಧರ್ಮವನ್ನು ಅವಲಂಬಿಸಿದೆ. ಕನ್ನಡ ಸಾಹಿತ್ಯ ಚರಿತ್ರೆಯ ಈ ಘಟ್ಟಕ್ಕೆ ಆದಿ-ಕಾವ್ಯ ಎಂದೂ ಸಹ ಕರೆಯಬಹುದು. ಈ ಕಾಲದ ಅತಿ ಪ್ರಸಿದ್ಧ ಕವಿಯೆಂದರೆ ಆದಿಕವಿಪಂಪ.
ಪಂಪನ ‘ವಿಕ್ರಮಾರ್ಜುನ ವಿಜಯ’ ಅಥವಾ ‘ಪಂಪ ಭಾರತ’ ಇಂದಿಗೂ ಮೇರು ಕೃತಿಯೆಂದು ಪರಿಗಣಿತವಾಗಿದೆ. ಪಂಪ ಭಾರತ ಮತ್ತು ತನ್ನ ಇನ್ನೊಂದು ಮುಖ್ಯಕೃತಿಯಾದ ಆದಿಪುರಾಣದ ಮೂಲಕ ಪಂಪ ಕನ್ನಡ ಕಾವ್ಯಪರಂಪರೆಯ ದಿಗ್ಗಜರಲ್ಲಿ ಒಬ್ಬನಾಗಿದ್ದಾನೆ. ಪಂಪ ಭಾರತ ಸಂಸ್ಕೃತ ಮಹಾಭಾರತದ ಕನ್ನಡ ರೂಪಾಂತರ. ತನ್ನ ಮಾನವತಾವಾದ ಹಾಗೂ ಗಂಭೀರ ಲೇಖನ ಶೈಲಿಯ ಮೂಲಕ ಕನ್ನಡದ ಅತ್ಯಂತ ಪ್ರಭಾವಶಾಲಿ ಲೇಖಕರಲ್ಲಿ ಒಬ್ಬನಾಗಿದ್ದಾನೆ. ‘ಮಾನವ ಕುಲ ತಾನೊಂದೇ ವಲಂ’ ಎಂದು ವಿಶ್ವಮಾನವ ತತ್ವವನ್ನು ಸಾರಿದ ಜಗದ ಕವಿ ಪಂಪ.
ಇದೇ ಕಾಲದ ಇನ್ನೊಬ್ಬ ಪ್ರಮುಖ ಲೇಖಕನೆಂದರೆ ಶಾಂತಿನಾಥ ಪುರಾಣವನ್ನು ರಚಿಸಿದ ಪೊನ್ನ (939-966). ಈ ಕಾಲದ ಮತ್ತೊಬ್ಬ ಹೆಸರಾಂತ ಕವಿ ರನ್ನ (949-?). ರನ್ನನ ಪ್ರಮುಖ ಕೃತಿಗಳು ಜೈನ ಧರ್ಮೀಯವಾದ ಅಜಿತ ತೀರ್ಥಂಕರ ಪುರಾಣ ಮತ್ತು ಗದಾಯುದ್ಧಂ ಅಥವಾ ಸಾಹಸಭೀಮ ವಿಜಯ.
ಹೆಣ್ಣು ಹದ್ದಿನ ಸ್ವಯಂವರ: ಆಧುನಿಕತೆ ಹಾಗೂ ಸ್ತ್ರೀ ವಾದವನ್ನು ಅನುಲಕ್ಷಿಸಿ
61 to 67
ಬಾನು ಮುಶ್ತಾಕ್ ರವರ ಬಹುತೇಕ ಕತೆಗಳು ಮಹಿಳೆಯ ಬದುಕಿನ ಕುರಿತು ಆಶಾವಾದವನ್ನು ಹೊಂದಿವೆ. ಇತ್ತೀಚೆಗೆ ಬಿಡುಗಡೆಯಾದ ಅವರ ಕಥಾಸಂಕಲನ ‘ಹೆಣ್ಣು ಹದ್ದಿನ ಸ್ವಯಂವರ’ ದಲ್ಲಿನ ಇದೇ ಶಿರ್ಷಿಕೆಯ ಕತೆ ಆಧುನಿಕತೆ ಹಾಗೂ ಸ್ತ್ರೀವಾದಗಳ ನೈತಿಕತೆಯ ಹುಡುಕಾಟದಲ್ಲಿ ತೊಡಗಿರುವ ಆಶಾವಾದವನ್ನು ಝಳಪಿಸಿದ ಕತೆಯೆಂದೆ ಅನಿಸಿದೆ. ಇಲ್ಲಿ ಅನ್ಯ ಬದುಕಿನಿಂದ ಪಡೆದುಕೊಂಡ ಆಧುನಿಕತೆ ಹಾಗೂ ಸಹಜ ಸಂವೇದಿತ ಆಧುನಿಕತೆ – ಇವೆರಡೂ ಸಹ ಪರಸ್ಪರ ಪ್ರಭಾವಕ್ಕೆ, ಪ್ರಚೋದನೆಗೆ ಒಳಗಾಗಿರುವಂತಿದೆ. ಇಂದು ಕಂಡುಬರುತ್ತಿರುವ ಸೃಜನಶೀಲತೆ ಮತ್ತು ಸ್ವಂತಿಕೆಯ ಹೊಸ ಬದುಕಿನ ದೃಷ್ಟಿಕೋನವು ಇಲ್ಲಿದೆ. ಅಲ್ಲದೆ, ಸ್ತ್ರೀವಾದಿ ಚಿಂತನೆಯ ತಾತ್ವಿಕತೆಯಾದ ಪ್ರಜ್ಞೆಯ ಜಾಗೃತಿ ಹಾಗೂ ಸ್ವಾಭಿವ್ಯಕ್ತಿಯ ಜಿಜ್ಞಾಸೆಯೂ ಇಲ್ಲಿ ಒಡಮೂಡಿದೆ. ಲೇಖಕಿಯ ಹೆಣ್ಣಿನ ಅಸ್ತಿತ್ವದ ಭರವಸೆಯ ಕನಸು ಹಾಗೂ ಬದಲಾಗಬಹುದಾದ ಭವಿಷ್ಯದ ಎಚ್ಚರಿಕೆ ಇಲ್ಲಿದೆ. ಒಂದು ಕಾಲದಲ್ಲಿ ಗಂಡಿನ ಮೇಲುಗೈ, ಮತ್ತೊಂದು ಕಾಲಕ್ಕೆ ಹೆಣ್ಣಿಗೆ ಮನ್ನಣೆ. ಮನುಷ್ಯನ ಪ್ರಜ್ಞಾ ಪೂರ್ವಕ ಪ್ರಯತ್ನದಿಂದ ಮಾತ್ರ ಇಬ್ಬರೂ ಸಮಾನರು ಎಂಬ ಚಿಂತನೆಯನ್ನು ನೆಲೆಗೊಳಿಸಲು ಸಾಧ್ಯ.
ಕೋವಿಡ್ ಸಂದರ್ಭದಲ್ಲಿ ಚಿಂಚೋಳಿ ತಾಲೂಕಿನ ಮಹಿಳಾ ವಲಸೆ ಕಾರ್ಮಿಕರ ಮೇಲೆ MGNREGA ದ ಪಾತ್ರ
68 to 77
COVID-19 ಸಾಂಕ್ರಾಮಿಕವು ಸಮಾಜಗಳಲ್ಲಿ ಅಭೂತಪೂರ್ವ ಬದಲಾವಣೆಯನ್ನು ತಂದಿದೆ ಮತ್ತು ಅನೇಕ ಸಾಮಾಜಿಕ-ಆರ್ಥಿಕ ಬಿಕ್ಕಟ್ಟುಗಳನ್ನು ವರ್ಧಿಸಿದೆ. ಭಾರತವು ವಲಸೆ ಕಾರ್ಮಿಕರ ನಡುವೆ ಭಾರಿ ಬಿಕ್ಕಟ್ಟಿಗೆ ಸಾಕ್ಷಿಯಾಗಿದೆ. ಇದರ ಪರಿಣಾಮವಾಗಿ ಲಕ್ಷಾಂತರ ವಲಸೆ ಕಾರ್ಮಿಕರ ಜೀವನೋಪಾಯಕ್ಕೆ ವಿಶೇಷವಾಗಿ ಮಹಿಳಾ ವಲಸೆ ಕಾರ್ಮಿಕರಿಗೆ ತೀವ್ರ ಹೊಡೆತ ಬಿದ್ದಿದೆ. ಈ ಸಾಂಕ್ರಾಮಿಕ ರೋಗದಿಂದ ಹೊರಹೊಮ್ಮುತ್ತಿರುವ ಪುರಾವೆಗಳು ಮತ್ತು ಹಿಂದಿನ ರೋಗದ ಏಕಾಏಕಿ ಅನುಭವದಿಂದ ಉಂಟಾಗುವ ಸಾಮಾಜಿಕ-ಆರ್ಥಿಕ ಸಂಕಷ್ಟಗಳನ್ನು ಅಸಮಾನವಾಗಿ ಅನುಭವಿಸಿರುವವರು ಮಹಿಳೆಯರು ಎಂದು ತೋರಿಸುತ್ತದೆ. UN 2019ರ ಅಂದಾಜಿನ ಪ್ರಕಾರ, 90% ಮಹಿಳಾ ಉದ್ಯೋಗಿಗಳು ಅನೌಪಚಾರಿಕ ವಲಯ ಮತ್ತು ವಲಸೆ ಕಾರ್ಮಿಕರ ಭಾಗವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾಗಿ ಕೋವಿಡ್ ಸಂದರ್ಭದಲ್ಲಿ ಚಿಂಚೋಳಿ ತಾಲೂಕಿನ ವಲಸೆ ಕಾರ್ಮಿಕರ ಮೇಲೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (MGNREGA) ಯ ಪಾತ್ರವನ್ನು ಕುರಿತು ಇಲ್ಲಿ ಚರ್ಚಿಸಲಾಗಿದೆ.
Book Review
‘ವೀಸಾದ ನಿರೀಕ್ಷಣೆಯಲ್ಲಿ ಆತ್ಮಕಥನ’: ಡಾ.ಬಿ.ಆರ್. ಅಂಬೇಡ್ಕರ ಜೀವನ ಮತ್ತು ಪ್ರಯೋಗಗಳು
78 to 87
ಆತ್ಮಕಥೆ ಬರೆದುಕೊಳ್ಳುವುದು ಮನುಷ್ಯ ಬದುಕಿನ ಪ್ರಮುಖ ಬೆಳವಣಿಗೆಯಾಗಿದೆ. ಈ ಕಾರಣವಾಗಿಯೆ ಮನುಷ್ಯ ತನ್ನ ಸರಿ ತಪ್ಪುಗಳನ್ನು ನಿವೇದಿಸಿಕೊಂಡು ಬದುಕಿನ ವಿಕಾಸದತ್ತ ದಾಪುಗಾಲಿಡುವುದು ಕಾಣಬಹುದು. ಮಾನವ ಬೆಳವಣಿಗೆ ಮತ್ತು ವಿಕಾಸ ಕ್ರಮದಲ್ಲಿ ತನ್ನ ಬದುಕಿನ ಅನುಭವಗಳನ್ನು ಮನೆ, ಸಮಾಜ, ಪರಿಸರ, ಸಂಸ್ಕೃತಿಗಳಿಂದ ರೂಪುಗೊಂಡಿವೆ. ಅವುಗಳು ಮನುಷ್ಯ ಒಳ ಹೊರಗನ್ನು ಅರಿತುಕೊಳ್ಳಲು ಸಹಾಯ ಮಾಡುತ್ತವೆ. ಇಲ್ಲಿ ಪ್ರಮುಖವಾಗಿ ಡಾ.ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಬದುಕಿನುದ್ದಕ್ಕೂ ಅನುಭವಿಸಿದ ದುಖಃ ದುಮ್ಮಾನಗಳು, ಸಂಕಟಗಳು ಮತ್ತು ಅವುಗಳಿಂದ ಬಿಡುಗಡೆಗೆ ಹಾತೋರೆಯುವ ಮನಸ್ಥಿತಿ ಪ್ರಕಟಗೊಳ್ಳುತ್ತದೆ. ಅಲ್ಲದೆ ಅವರು ಕಂಡುಕೊಳ್ಳುವ ಪರಿಹಾರೋಪಾಯಗಳು ಎಲ್ಲವೂ ಒಂದೊಂದು ಹೊಸ ಪ್ರಯೋಗದಂತೆ ಗೋಚರಿಸುತ್ತದೆ. ಅಲ್ಲದೆ ಅವು ಓದುಗರಿಗೆ ಸಂದೇಶಗಳಾಗಿ ಮಾರ್ಪಡುತ್ತವೆ.
ಮಲ್ಲಿಕಾ ಘಂಟಿಯವರ ‘ಚಾಜ’ ನಾಟಕದಲ್ಲಿ ಸಾಂಸ್ಕೃತಿಕ ಸಂಘರ್ಷ
88 to 94
ಪುರಾತನ ಕಾಲದಿಂದಲೂ ಸಾಮ್ರಾಜ್ಯಶಾಹಿಗಳು, ಪುರುಷಪ್ರಧಾನತೆ ಮತ್ತು ಪುರೋಹಿತಶಾಹಿತ್ವಗಳು ಒಟ್ಟಾಗಿಯೇ ಮಹಿಳೆಯರ ಮೇಲೆ ನೂರಾರು ಕಟ್ಟುಪಾಡುಗಳನ್ನು ಹೇರಿವೆ. ಹೆಣ್ಣು ಒಂದು ವಸ್ತು ಎಂದು ಪುರುಷಪ್ರಧಾನ ವ್ಯವಸ್ಥೆಯ ಧರ್ಮವು ನಿರ್ವಹಿಸುತ್ತದೆ. ಪುರುಷನ ಅಧಿಕಾರ ಸ್ಥಾಪನೆಯ ಕಾರಣದಿಂದ ಅವನೇ ಹುಟ್ಟು ಹಾಕಿದ ಧರ್ಮ, ಕಾನೂನು, ನಿಯಮಗಳು, ಕಟ್ಟುಪಾಡುಗಳು ಹೆಣ್ಣನ್ನು ನಿರ್ದಾಕ್ಷಿಣ್ಯವಾಗಿ ನಡೆಸಿಕೊಳ್ಳುತ್ತವೆ. ಕುಟುಂಬ, ಆಸ್ತಿ, ಉತ್ಪಾದನೆ ಹೀಗೆ ಎಲ್ಲದರ ಮೇಲೆ ಪುರಷಾಧಿಪತ್ಯವೇ ಇರುತ್ತದೆ. ಈ ಕಾರಣದಿಂದಾಗಿ ಬಾಲ್ಯವಿವಾಹ, ಸತಿಪದ್ಧತಿ, ವಿಧವಾ ಸಮಸ್ಯೆ, ದೇವದಾಸಿ ಪದ್ಧತಿ, ಬೆತ್ತಲೆ ಸೇವೆ, ಬಹುಪತ್ನಿತ್ವ, ವರದಕ್ಷಿಣೆ ಮುಂತಾದ ಕ್ರೂರ ಸಂಪ್ರಧಾಯಗಳಿಗೆ ಹೆಣ್ಣನ್ನು ಸಿಲುಕಿಸಿ ಅವಳನ್ನು ನಿರಂತರ ಶೋಷಣೆಗೆ ಒಳಗುಮಾಡಲಾಗಿದೆ. ಮನುಸ್ಮೃತಿ ಮೊದಲಾದ ಕೃತಿಗಳಿಂದ ಹೆಣ್ಣಿನ ಸ್ವಾತಂತ್ರ್ಯಹರಣ ಮಾಡಿ ಪುರುಷಾಧೀನಗೊಳಿಸಲಾಯಿತು. ಇದು ಹೆಣ್ಣನ್ನು ಸಮಾಜದಲ್ಲಿ ಅತ್ಯಂತ ಕನಿಷ್ಠ ಸ್ಥಾನಕ್ಕೆ ಇಳಿಸಲು ಕಾರಣವಾಯಿತು.
ಯಾವುದೇ ಒಂದು ಸಂಸ್ಕೃತಿಯು ಮನುಷ್ಯರನ್ನು ಸದ್ಗುಣಶೀಲರನ್ನಾಗಿ ಮಾಡಬೇಕು, ಅದು ಉತ್ತಮ ಸಂಸ್ಕೃತಿ. ಆದರೆ ಸಮಾಜದಲ್ಲಿ ಹಲವು ಆಚರಣೆ ಪದ್ಧತಿಗಳ ಮೂಲಕ ಜನರನ್ನು ದೌರ್ಜನ್ಯ, ತಾರತಮ್ಯಕ್ಕೆ ಒಳಗಾಗುವಂತೆ ಮಾಡುವ ಕೆಲವು ನಂಬಿಕೆಯ ಆಚರಣೆಗಳು ಹೀನವಾಗಿ ಅಸಹ್ಯವಾಗಿ ಕಂಡುಬರುತ್ತವೆ. ಈ ನಿಟ್ಟಿನಲ್ಲಿ ಮಲ್ಲಿಕಾ ಘಂಟಿಯವರ ಚಾಜ ನಾಟಕವು ಪುರುಷಪ್ರಧಾನತೆಯು ಹೆಣ್ಣನ್ನು ಸಾಂಸ್ಕೃತಿಕತೆಯ ನೆಲೆಯನ್ನು ಬಳಸಿಕೊಂಡು ಅನುಭೋಗಿಸುವ ನಡೆಯನ್ನು ಕಥಾವಸ್ತುವಾಗಿಸಿಕೊಂಡಿದೆ. ‘ಚಾಜ’ ಎಂದರೆ ‘ನಿಯಮ’ ‘ಪದ್ಧತಿ’ ಎಂದರ್ಥ. ವಿಜಾಪುರ ಜಿಲ್ಲೆಯ ತುಂಬಾ ಹಾಗೂ ಉತ್ತರ ಕರ್ನಾಟಕದ ಹೆಚ್ಚಿನ ಹಳ್ಳಿಗಳಲ್ಲಿ ಈ ಚಾಜ ಪದ ಬಳಕೆಯಲ್ಲಿದೆ. ಜಮೀನ್ದಾರಿ ವ್ಯವಸ್ಥೆಯಲ್ಲಿ ಮದುವೆ ನಂತರ ಮನೆಗೆ ಬರಬೇಕಾದ ಸೊಸೆ ಊರ ಗೌಡನ ಅಥವಾ ದೇಸಾಯಿ ಮನೆಯಲ್ಲಿ ಅವನ ತೆಕ್ಕೆಯಲ್ಲಿ ಮೊದಲ ರಾತ್ರಿ ಕಳೆಯಬೇಕಾಗಿತ್ತು. ಅದು ಒಂದು ಚಾಜ. ಹಬ್ಬ ಹರಿದಿನಗಳ ಎಲ್ಲಾ ಕ್ರಿಯೆಗಳು ದೇಸಾಯಿಗಳ ಮನೆಯಲ್ಲಿ ಅವರ ನಾಯಕತ್ವದಲ್ಲಿ ಆರಂಭವಾಗುತ್ತದೆ ಇದೆಲ್ಲ ಚಾಜ.
ಡಾ. ಡಿ. ಕೆ. ಚಿತ್ತಯ್ಯ ಪೂಜಾರ್ ಅವರ ಹೊಟ್ಟಣ್ಣ ನಾಯಕನ ಕಥನ ಕಾವ್ಯದ ಅವಲೋಕನ
95 to 102
ಒಂದು ನಿರ್ಧಿಷ್ಟ ಜನಸಮೂಹವನ್ನು ಸಂಕೇತಿಸುವುದು ಜನಪದ. ಜನಪದರು ಮೌಖಿಕ ಮಾಧ್ಯಮದಲ್ಲಿ ಉಳಿಸಿಕೊಂಡು ಬಂದ ಜ್ಞಾನವನ್ನು ಜಾನಪದ ಎಂದು ಕರೆಯಬಹುದು. ಜಾನಪದ ಸಮಸ್ತ ಜನತೆಯ ಸಂಸ್ಕೃತಿಗೆ ಸಂಬಂಧಿಸಿದ ಒಂದು ಪರಂಪರೆ. ಇಂತಹ ಜನಪದವು ಅನೇಕ ಪ್ರಕಾರಗಳನ್ನು ಹೊಂದಿದ್ದು ಕಥನ ಕಾವ್ಯವೂ ಒಂದಾಗಿದೆ. ಅಂತಹ ಪ್ರಮುಖ ಕಥನ ಕಾವ್ಯಗಳಲ್ಲಿ ಡಾ. ಚಿತ್ತಯ್ಯ ಪೂಜಾರ್ ಅವರು ಸಂಶೋಧಿಸಿ ಸಂಪಾದಿಸಿರುವ ‘ಮುಮ್ಮಡಿ ಹೊಟ್ಟಣ್ಣ ನಾಯಕನ ಕಥನ ಕಾವ್ಯ’ವೂ ಒಂದು.
ಕಥನ ಕಾವ್ಯಗಳನ್ನು ಸಂಶೋಧಿಸಿ, ಸಂಗ್ರಹಿಸಿ, ಪರಿಷ್ಕರಿಸಿ ಪ್ರಕಟಿಸುವುದು ಸುಲಭದ ಮಾತಲ್ಲ. “ಇದು ಒಂದು ರೀತಿ ಕುಮಾರವ್ಯಾಸ ಭಾರತದ ಅಧ್ಯಯನ ಇದ್ದ ಹಾಗೆ. ‘ಕಲಿಯದವರಿಗೆ ಕಾಮಧೇನು ಕಲಿತವರಿಗೆ ಗಂಟಲು ಗಾಣ’. ಈ ಕಥನ ಕಾವ್ಯದ ಸಂಶೋಧನೆಯೂ ಹಾಗೆಯೇ. ಇದರ ಆಳ, ಅಗಲ, ಎತ್ತರ ಮತ್ತು ಬಹುಮುಖ್ಯ ಅರ್ಥಗಳು ಗಂಭೀರವಾಗಿ ಪರಿಭಾವಿಸಿದಷ್ಟು ವಿಸ್ತಾರವಾಗುತ್ತಿರುತ್ತವೆ. ಏಕೆಂದರೆ ಒಂದು ಕಲೆ, ಒಂದು ಆಚರಣೆ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗುತ್ತಾ ಅರ್ಥ ವಿಸ್ತಾರಗಳನ್ನು ಪಡೆದುಕೊಳ್ಳುತ್ತಾ ಸಂಶೋಧಕರಿಗೆ ಸವಾಲಾಗಿ ಪರಿಣಮಿಸುತ್ತದೆ.” ಅಂತಹ ಸವಾಲನ್ನು ಸ್ವೀಕರಿಸಿ ಇಲ್ಲಿ ಎದುರಾಗುವ ಸವಾಲುಗಳನ್ನು ಪರಿಹರಿಸಿ ಪ್ರಕಟಿಸಿರುವುದು ಚಿತ್ತಯ್ಯ ಪೂಜಾರ್‌ರವರ ಶ್ರಮಕ್ಕೆ ಹಿಡಿದ ಕೈಗನ್ನಡಿ. ಈ ಕಥನ ಕಾವ್ಯದ ಕೊನೆಯಲ್ಲಿ ಕೊಟ್ಟಿರುವ ಪಾರಿಭಾಷಿಕ ಪದಗಳ ಅರ್ಥ ಅವರ ಶ್ರಮಕ್ಕೆ ಇನ್ನೊಂದು ಸಾಕ್ಷಿ. ಆದ್ದರಿಂದ ಇದರ ಸಾಂಸ್ಕೃತಿಕ ಮಹತ್ವ ಗುರುತಿಸಿ, ಅದರ ಸಾಧ್ಯಾನುಸಾಧ್ಯತೆಗಳನ್ನು ಪತ್ತೆ ಹಚ್ಚುವುದೇ ಈ ಲೇಖನದ ಉದ್ದೇಶ.
ಡಾ. ಅರ್ಜುನ ಗೊಳಸಂಗಿಯವರ ಕವಿತೆಗಳಲ್ಲಿ ಹೆಣ್ಣಿನ ಭಿನ್ನ ನೆಲೆಗಳು
103 to 108
ಎಪ್ಪತ್ತನೆಯ ದಶಕದಲ್ಲಿ ಕನ್ನಡದಲ್ಲಿ ಆರಂಭವಾದ ದಲಿತ ಮತ್ತು ಬಂಡಾಯ ಸಾಹಿತ್ಯ ಪಂಥ ನೊಂದವರ ದನಿಯಾಗಿ ಮೂಡಿ ಬಂದವು. ಆರಂಭದಲ್ಲಿ ‘ಇಕ್ರಲಾ ಒದಿರಲ’ ಎಂಬಂತಹ ಆಕ್ರೋಶ ಭರಿತ ಮಾತುಗಳನ್ನು ಆಡುತ್ತಲೇ ತನ್ನ ಸುತ್ತಲಿನವರು ತನ್ನ ಮೇಲೆ ಶತಮಾನಗಳ ಕಾಲ ಮಾಡುತ್ತಾ ಬಂದ ಅನ್ಯಾಯವನ್ನು ಜಾತಿ ವ್ಯವಸ್ಥೆಯ ಹೆಸರಿನಲ್ಲಿ ಮಾಡಿದ ಶೋಷಣೆಯನ್ನೂ ವಿರೋದಿಸಲೆಂದೇ ಈ ಸಾಹಿತ್ಯ ಪಂಥಗಳು ಮೂಡಿ ಬಂದವು. ನಂತರದಲ್ಲಿ ಆಕ್ರೋಶ ತುಸು ಕಡಿಮೆಯಾದಂತೆನಿಸಿದರೂ ಅದರ ಸ್ವರೂಪ ಬದಲಾಯಿತೇ ಹೊರತು ಆಳದ ಅಕ್ರೋಶ ಹೋಗಲಿಲ್ಲ.
ದಲಿತ ಸಾಹಿತ್ಯದ ಎರಡನೆಯ ತಲೆಮಾರಿನಲ್ಲಿ ಬಂದ ಲೇಖಕರು ಆಕ್ರೋಶಕ್ಕಿಂತ ಬದುಕನ್ನು ನಿರುಮ್ಮಳವಾಗಿ ಆದರೆ ಒಂದು ಅಭಿಮಾನ ತುಂಬಿದ ದನಿಯಲ್ಲಿ ಬಿತ್ತರಿಸಿದರು. ಅವರ ಸಾಲಿನಲ್ಲಿ ಬಂದ ಪ್ರಮುಖ ಕವಿ ಡಾ. ಅರ್ಜುನ ಗೊಳಸಂಗಿಯವರು. ಕರ್ನಾಟಕ ರಾಜ್ಯ ದಲಿತ ಸಾಹಿತ್ಯ ಪರಿಷತ್ತು ಕಟ್ಟಿ ಕಳೆದ ಎರಡು ದಶಕಗಳಿಂದ ಅದರ ಅಧ್ಯಕ್ಷರೂ ಅಗಿರುವ ಅವರು ಎರಡು ಕವನ ಸಂಕಲನಗಳನ್ನು ಪ್ರಕಟಿಸಿ ದಲಿತ ಕಾವ್ಯದ ಮುಖ್ಯ ಧ್ವನಿಯಾದವರು. ‘ಬುದ್ಧ ಬೆಳಕು’ ಮತ್ತು ‘ನನ್ನಜ್ಜಿ ನನ್ನವ್ವ ಮತ್ತು ನನ್ನಾಕೆ’ ಎಂಬ ಎರಡು ಕವನ ಸಂಕಲನಗಳನ್ನು ರಚಿಸಿದ್ದಾರೆ.
Essay
ಕುಲಕ್ಕೆ ತಿಲಕ ನಮ್ಮ ಮಾದರ ಚೆನ್ನಯ್ಯ
109 to 116
ಮಾದರ ಚೆನ್ನಯ್ಯ 12ನೇ ಶತಮಾನಕ್ಕಿಂತಲೂ ಹಿಂದೆ ಜೀವಿಸಿದ್ದವನು. ಮಾದರ ಚೆನ್ನಯ್ಯನು ಹಲವಾರು ವಚನಗಳನ್ನು ರಚಿಸಿದ್ದಿರಬಹುದು ಆದರೆ ಚೆನ್ನಯ್ಯನು ಬರೆದ ವಚನಗಳಲ್ಲಿ ಸದ್ಯಕ್ಕೆ 10 ವಚನಗಳು ದೊರೆತಿರುತ್ತವೆ. “ಕೈಯುಳಿ ಕತ್ತಿ ಅಡಿಗೂಟಕ್ಕಡಿಯಾಗಬೇಡ” ಎಂಬುದು ಚೆನ್ನಯ್ಯನ ವಚನಗಳ ಅಂಕಿತವಾಗಿದೆ. ಚೆನ್ನಯ್ಯನು ಚೋಳ ರಾಜನ ಆಸ್ಥಾನದಲ್ಲಿ ಲಾಯದ ಕುದುರೆಗಳಿಗೆ ಹುಲ್ಲು ತರುವ ಕೆಲಸ ಮಾಡುತ್ತಿದ್ದನು. ಚೆನ್ನಯ್ಯ ಗುಪ್ತ ಶಿವಭಕ್ತನಾಗಿದ್ದನು. ಅದೇ ರೀತಿ ಚೋಳರಾಜನು ಮಹಾಶಿವ ಭಕ್ತನಾಗಿದ್ದನು. ಪ್ರತಿದಿನ ಚೋಳ ರಾಜನ ಮನೆಯಲ್ಲಿ ದಿವ್ಯವಾದ ಅನ್ನವನ್ನು ಶಿವನುಂಡು ತೃಪ್ತ ನಾಗುವವರೆಗೂ ಕಾದಿರುತ್ತಿದ್ದನು. ಒಮ್ಮೆ ಚೋಳನ ಮನೆಗೆ ಶಿವನು ಊಟ ಸವಿಯಲು ಬಂದಿರುವುದಿಲ್ಲ. ಅಂದು ಶಿವನು ಚೆನ್ನಯ್ಯನ ಮನೆಯಲ್ಲಿ ಅಂಬಲಿ ರುಚಿಸವಿದು ಸಂತೃಪ್ತನಾಗಿರುತ್ತಾನೆ. ಚೋಳ ರಾಜನ ಮನೆಗೆ ಶಿವನು ಬರದ ಕಾರಣ ತನ್ನ ಭಕ್ತಿಯಲ್ಲಿ ಲೋಪವಾಗಿದೆ ಎಂದುಕೊಂಡು ತನ್ನ ಕತ್ತಿಯಿಂದ ತಲೆ ಕತ್ತರಿಸಿಕೊಳ್ಳಲು ಮುಂದಾಗುವನು. ಆಗ ಶಿವನು ಪ್ರತ್ಯಕ್ಷನಾಗಿ ನಡೆದ ವಿಚಾರಗಳನ್ನು ತಿಳಿಸುವನು. ಚೋಳರಾಜ ಆಗ ನನಗಿಂತಲೂ ಅಪ್ರತಿಮ ಶಿವಭಕ್ತನಿದ್ದಾನೆಂದು ತಿಳಿದುಕೊಂಡು ಶಿವನನ್ನು ಅಂಬಲಿಗೆ ಒಲಿಸಿದ ಶಿವ ಭಕ್ತನಾದ ಚೆನ್ನಯ್ಯನ ಮನೆ ಬಾಗಿಲಿಗೆ ಬರುತ್ತಾನೆ. ಚೋಳ ರಾಜ ಚೆನ್ನಯ್ಯನನ್ನು ಕಂಡು ಆತನ ಕಾಲಿಡಿದು ನಿಮ್ಮ ಕೆರ ನನ್ನ ಶಿರಕ್ಕೆ ಸಮಾನವೆಂದು ನುಡಿದು ಶಿವನೊಲಿಸಿದ ನಿನ್ನ ಕುಲ ಸತ್ಕುಲ ವೆಂದು ನುಡಿಯುತ್ತಾನೆ. ಚೆನ್ನಯ್ಯನ ಗುಪ್ತ ಭಕ್ತಿಯನ್ನು ಚೋಳ ರಾಜನು ಇಡೀ ಜಗತ್ತಿಗೆ ಪರಿಚಯಿಸುತ್ತಾನೆ. ಬಸವಣ್ಣನವರು ತಮ್ಮ ಅನೇಕ ವಚನಗಳಲ್ಲಿ ಮಾದರ ಚೆನ್ನಯ್ಯನವರನ್ನು ಉಲ್ಲೇಖಿಸಿದ್ದಾರೆ. “ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯ”, “ಅಪ್ಪನು ನಮ್ಮ ಮಾದಾರ ಚೆನ್ನಯ್ಯ”, “ಚೆನ್ನಯ್ಯನ ಮನೆಯ ದಾಸನ ಮಗನು” ಎಂದು ಚೆನ್ನಯ್ಯನವರನ್ನು ಉಲ್ಲೇಖಿಸಿದ್ದಾರೆ. ಆ ಮೂಲಕ 12ನೇ ಶತಮಾನಕ್ಕಿಂತಲೂ ಹಿಂದೆಯೇ ಚೆನ್ನಯ್ಯನವರು ಜೀವಿಸಿದ್ದರು ಎಂದು ತಿಳಿಯುತ್ತದೆ. ಅಲ್ಲದೆ ಚೆನ್ನಯ್ಯನವರು ಬಸವಣ್ಣನವರಿಗಿಂತಲೂ ಹಿರಿಯ ವಚನಕಾರರು ಎಂದು ಈ ಲೇಖನದಲ್ಲಿ ಅರಿತುಕೊಳ್ಳಬಹುದಾಗಿದೆ.
ಬಾಚಿಕಾಯಕದ ಕಾಳವ್ವೆಯ ವಚನದಲ್ಲಿ ಕಾಯಕ, ಮಾತು ಮತ್ತು ವ್ರತ ಪ್ರಜ್ಞೆ
117 to 124
ವಚನಗಳಲ್ಲಿ ನಾವು ವಿಚಾರ ಸ್ವಾತಂತ್ರ್ಯದ ಪರಾಕಾಷ್ಟೆಯನ್ನು ಕಾಣುತ್ತೇವೆ. “ಉದರ ನಿಮಿತ್ತಂ ಬಹುಕೃತ ವೇಷಂ” ಎಂಬ ಮಾತೊಂದಿದೆ. ಹೊಟ್ಟೆ ಹೊರೆಯುವುದಕ್ಕಾಗಿ ಮಾನವ ಅನೇಕ ವೇಷಗಳನ್ನು ಕೈಗೊಳ್ಳುತ್ತಾನೆ. ಆದರೆ ಶರಣರು ಹೊಟ್ಟೆ ಹೊರೆಯುವ ಕಾಯಕದ ಮೂಲಕ ದಾಸೋಹ ಸಿದ್ಧಾಂತವನ್ನು ಅನುಭಾವದ ಮೂಲಕ ಸಮಾಜಕ್ಕೆ ಸಾರಿದವರು. ಅಸಮಾನತೆಯ ಸಮಾಜದಲ್ಲಿ ಶೂದ್ರರಿಗೆ, ಅಸ್ಪೃಶ್ಯರಿಗೆ, ಹೆಣ್ಣಿಗೆ ಸಮಾನ ಸ್ಥಾನಮಾನವನ್ನು ತಂದುಕೊಟ್ಟ ಕೀರ್ತಿ ಬಸವಣ್ಣನರಿಗೆ ಸಲ್ಲುತ್ತದೆ. ೧೨ನೇ ಶತಮಾನದ ಸಮಾಜದಲ್ಲಿ ಅಕ್ಷರ ಕ್ರಾಂತಿಯ ಮೂಲಕ ಸ್ತ್ರೀ-ಪುರುಷ ಸಮಾನತೆಯನ್ನು ಪಡೆದದ್ದು ಪವಾಡವೇ ಸರಿ. ಅದರಲ್ಲೂ ನಾಲ್ಕು ಗೋಡೆಗಳಿಗೆ ಸೀಮಿತವಾಗಿದ್ದ ಮಹಿಳೆ ಅನುಭವ ಮಂಟಪದ ಗೋಷ್ಠಿಯಲ್ಲಿ ಪುರುಷನಷ್ಟೇ ಸಮಾನತೆಯನ್ನು ಕೈಗೊಂಡಿದ್ದು ಸಮಾಜಿಕ ಕ್ರಾಂತಿ ಎನ್ನಬಹುದು. ಅವರಲ್ಲಿ ಒಬ್ಬರು ಬಾಚಿ ಕಾಯಕದ ಬಸವಯ್ಯಗಳವರ ಪುಣ್ಯಸ್ತ್ರೀ ಕಾಳವ್ವೆ. ಈಕೆಯ ಎರಡು ವಚನಗಳು ಮಾತ್ರ ನಮಗೆ ದೊರೆತ್ತಿದ್ದು, ಈಕೆಯ ಕಾಲ ೧೧೬೦ ಬಸವಣ್ಣನವರ ಸಮಕಾಲೀನರಾದ ಈಕೆಯ ಎರಡೂ ವಚನಗಳು ಕಾಯಕ, ವ್ರತ ಹಾಗೂ ಮಾತಿನ ಮಹತ್ವವನ್ನು ಸಮಾಜಕ್ಕೆ ಸಾರುತ್ತದೆ. ಈಕೆಯ ಅಂಕಿತನಾಮ ಕರ್ಮಹರ ಕಾಳೇಶ್ವರ. ಪ್ರತಿಯೊಬ್ಬ ಮನುಷ್ಯ ಸಮಾಜದಲ್ಲಿ ಜೀವನ ನಡೆಸಬೇಕಾದರೆ ಯಾವುದಾದರೂ ಒಂದು ಕಾಯಕದಲ್ಲಿ ತೊಡಗಿರಲೇ ಬೇಕು. ಕಾಯಕದಲ್ಲಿ ಮೇಲಿಲ್ಲ-ಕೀಳಿಲ್ಲ. ಆದರೆ ಮಾಡುವ ಕಾಯಕ ಮಾತ್ರ ಶಿವನಿಗೆ ಮೆಚ್ಚುವಂತಿರಬೇಕು. ಅಷ್ಟೇ ಅಲ್ಲ ವ್ರತವೆಂದರೆ ಪೂಜೆಯಲ್ಲ, ನಮ್ಮ ನಡತೆ, ಆಚರಣೆ, ಭಕ್ತಿ, ಪ್ರತಿಜ್ಞೆ ಹಾಗೂ ಪಾಪಕರ್ಮಗಳಿಂದ ದೂರವಿರುವುದು ವ್ರತವನ್ನು. ಆಚರಿಸಬೇಕೆಂದರೆ ನಮ್ಮ ಮನಸ್ಸು ಶದ್ಧವಾಗಿದ್ದರೆ ಮಾತ್ರ ಸಾಧ್ಯವಾಗುವುದು. ಕಾಯಕ ತಪ್ಪಿದಡೆ ಸೈರಿಸಬಾರದು. ವ್ರತ ತಪ್ಪಲೆಂತೂ ಸೈರಿಸಬಾರದು. ಕಾಳವ್ವೆಯ ಈ ವಚನದಂತೆ ಕಾಯಕವೆಷ್ಟು ಮಹತ್ವವೋ ಅದಕ್ಕಿಂತಲೂ ಹೆಚ್ಚು ಮಹತ್ವದ್ದು ವ್ರತ. ಆದ್ದರಿಂದಲೆ, ವ್ರತವನ್ನು ಆಚರಿಸುವುದು ಅಷ್ಟು ಸುಲಭವಲ್ಲ. ಮಾತು ಮನುಷ್ಯನ ಗೌರವವನ್ನು ಸೂಚಿಸುತ್ತದೆ. ಆದ್ದರಿಂದಲೇ ಜನಪದರ ನಾಣ್ಣುಡಿಯಂತೆ ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಎನ್ನುತ್ತಾರೆ. ಮಾತು ತಪ್ಪಿ ನುಡಿಯಲು ಬಾಯಿಗೆ ಮೂಲ ಎನ್ನುವ ಕಾಳವ್ವೆಯ ಈ ವಚನ ಮಾತೇ ಮುತ್ತು ಮಾತೇ ಮೃತ್ಯು ಎನ್ನುವಂತಿದೆ. ಮನುಷ್ಯನ ಅಂದವನ್ನು ಹೆಚ್ಚಿಸುವ ಸಾಧನಗಳಲ್ಲಿ ಮಾತಿಗೆ ಮೊದಲ ಸ್ಥಾನವಿದೆ. ಬಾಚಿಕಾಯಕದ ಕಾಳವ್ವೆಯ ವಚನಗಳು ಎರಡೇ ಆದರೂ, ಮನುಷ್ಯನ ಮಾತಿನಿಂದ ಪ್ರಾರಂಭವಾಗಿ, ಕಾಯಕದ ಮಹತ್ವವನ್ನು ತಿಳಿಸಿ, ಕಾಯಕಕ್ಕಿಂತಲೂ ವ್ರತದ ಶ್ರೇಷ್ಠತೆನ್ನು ತಿಳಿಸುವಲ್ಲಿ ಮುಕ್ತಾಯವಾಗುತ್ತದೆ.
ಕನ್ನಡ ನಾಡು ನುಡಿಗೆ ನಾಲ್ವಡಿ ಕೃಷ್ಣರಾಜ ಒಡೆಯರ ಕೊಡುಗೆಗಳು
125 to 132
ನಾಲ್ವಡಿ ಕೃಷ್ಣರಾಜ ಒಡೆಯರು ಆಧುನಿಕ ಕನ್ನಡ ನಾಡಿನ ನಿರ್ಮಾತೃ ಆಗಿದ್ದು ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರನ್ನು ಬಹಳಷ್ಟು ಅಭಿವೃದ್ಧಿ ಪಡಿಸುವ ಮೂಲಕ ಸಿಲಿಕಾನ್ ಸಿಟಿಯನ್ನಾಗಿ ಜನಪ್ರಿಯಗೊಳಿಸಿದ್ದಾರೆ. ಕನ್ನಡ ನಾಡಿನ ಮೈಸೂರು ಸಂಸ್ಥಾನದ 24ನೇಯ ರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರು ಸಂಗೀತ ಮತ್ತು ಕುದುರೆ ಸವಾರಿಯನ್ನು ಕಲಿತಿದ್ದರು. ಇವರು 1902ರಲ್ಲಿ ಕರ್ನಾಟಕದ ಶಿವನಸಮುದ್ರದಲ್ಲಿ ಜಲ ವಿದ್ಯುತ್ ಯೋಜನೆಯನ್ನು, 1903ರಲ್ಲಿ ಮಿಂಟೋ ಕಣ್ಣಿನ ಆಸ್ಪತ್ರೆಯನ್ನು, 1905ರಲ್ಲಿ ಬೆಂಗಳೂರಿನಲ್ಲಿ ಬೀದಿ ದೀಪಗಳನ್ನು ಸ್ಥಾಪನೆ ಮಾಡುವ ಮೂಲಕ ಬೆಂಗಳೂರನ್ನು ಏಷ್ಯಾದಲ್ಲಿಯೇ ಮೊದಲ ನಗರವನ್ನಾಗಿ ಮಾಡಿ ಅಪಾರವಾದ ಕೊಡುಗೆಗಳನ್ನು ನೀಡಿದ್ದಾರೆ. ಇಷ್ಟೇ ಅಲ್ಲದೇ ನಾಲ್ವಡಿ ಕೃಷ್ಣರಾಜ ಒಡೆಯರು ಕನ್ನಡ ನುಡಿಯನ್ನು ಬೆಳೆಸಿ ಉಳಿಸಬೇಕೆಂಬ ಮಹಾದಾಸೆಯಿಂದ 1915ರಲ್ಲಿ ಮೊಟ್ಟ ಮೊದಲಿಗೆ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿ ಹಲವಾರು ಕವಿಗಳನ್ನು ಗುರುತಿಸುತ್ತಾರೆ. 1916 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯವನ್ನು, 1917ರಲ್ಲಿ ಮೈಸೂರು ಮಹಾರಾಣಿ ಕಾಲೇಜನ್ನು, ಮೈಸೂರು ಪೇಪರ್ಸ್ ಮಿಲ್ ಅನ್ನು ಸ್ಥಾಪಿಸಿ ಬೆಳೆಸುವಲ್ಲಿ ಮುಂದಾಗುತ್ತಾರೆ. ಕನ್ನಡ ನಾಡು ನುಡಿಗಾಗಿ ಮಾಡಿದ ಸೇವೆಗಳಿಂದ ಅವರು ನವ ಕರ್ನಾಟಕದ ಪಿತಾಮಹ ಎಂಬ ಬಿರುದಿಗೆ ಭಾಜನರಾಗುತ್ತಾರೆ. ನಾಲ್ವಡಿ ಕೃಷ್ಣರಾಜ ಒಡೆಯರು ಕನ್ನಡ ನಾಡು ನುಡಿಗಾಗಿ ಸಲ್ಲಿಸಿದ ಕೊಡುಗೆಗಳನ್ನು ಕುರಿತಂತೆ ಸವಿಸ್ತಾರವಾಗಿ ವಿಶ್ಲೇಷಣೆ ಮಾಡುವುದೇ ಈ ಲೇಖನದ ಪ್ರಧಾನ ಧೋರಣೆಯಾಗಿದೆ.
ಸಂಸತ್ತಿನ ಪ್ರಶ್ನಾವಳಿ
133 to 137
ಭಾರತದ ಸಂವಿಧಾನ ವಿಶ್ವದ ಅತ್ಯಂತ ಬೃಹತ್ ಸಂವಿಧಾನ ಮತ್ತು ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು ಆಡಳಿತದ ಅನುಕೂಲಕ್ಕಾಗಿ ದ್ವಿಸದನಗಳನ್ನೊಳಗೊಂಡ ಸಂಸತ್ ವ್ಯವಸ್ಥೆ ರಚನೆಯಾಗಿದೆ. ಪಾರ್ಲಿಮೆಂಟ್‌ನಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯ ರ ಅಧಿಕಾರ ದುರುಪಯೋಗ ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಸಂಬಂಧ ಎಲ್ಲಾ ಸದಸ್ಯರು ಸಾರ್ವಜನಿಕ ಮಸೂದೆಯಾಗಲಿ ಖಾಸಗಿ ಮಸೂದೆಯಾಗಲಿ ವಿಷಯಕ್ಕೆ ಸಂಬಂಧಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪಾರ್ಲಿಮೆಂಟ್ ನಲ್ಲಿ ಸಭೆಯ ನಿರ್ಣಯಗಳನ್ನು ಗೌರವಿಸುವ ಉದ್ದೇಶ ಹಾಗೂ ವ್ಯವಸ್ಥಿತ ರೀತಿಯಲ್ಲಿ ಸಭೆಯ ನಡಾವಳಿಗಳನ್ನು ಪಾಲಿಸಬೇಕು ಎಂಬ ಉದ್ದೇಶದಿಂದ ಪ್ರಶ್ನೆ ಕೇಳುವ ಅವಕಾಶ ಮತ್ತು ಉತ್ತರ ನೀಡಲು ಬೇಕಾಗುವ ಸುವ್ಯವಸ್ಥಿತ ಕ್ರಿಯೆಯಾಗಿದೆ.
ಕುವೆಂಪು ಕವಿತೆಗಳಲ್ಲಿ ಸಂಧ್ಯಾ ಸೊಬಗು
138 to 143
ಕವಿ ಎಂದರೆ ಕಲ್ಪನಾ ವಿಹಾರಿ. ಮನುಷ್ಯ ಭಾವನೆಗಳನ್ನು ವ್ಯಕ್ತಪಡಿಸುವ ಪರಿಯೇ ಕವಿತ್ವ. ಮನಸ್ಸು ಪ್ರಶಾಂತವಾಗಿ ಇರುವಲ್ಲಿ ಸಾಹಿತ್ಯ ಉತ್ತಮವಾಗಿ ಹೊರಹೊಮ್ಮುತ್ತದೆ. ನೈಸರ್ಗಿಕವಾಗಿ ಇರುವ ಪ್ರಕೃತಿಯ ಸೊಬಗನ್ನು ಆದಿಕವಿಗಳಿಂದ ಹಿಡಿದು ಇತ್ತೀಚಿನವರೆಗೆ ಬರಹಗಾರರು ವೈಭವದಿಂದ ಬಣ್ಣಿಸಿದ್ದಾರೆ. ಅದರಲ್ಲಿ ಕುವೆಂಪುರವರು ಪ್ರಮುಖರು. ಮಲೆನಾಡಿನಲ್ಲಿ ಹುಟ್ಟಿ ಬೆಳೆದ ರಸಋಷಿ ತಮ್ಮ ಸಾಹಿತ್ಯ ಚಟುವಟಿಕೆಗಳಲ್ಲಿ ಪ್ರಕೃತಿಯ ಚಿತ್ರಣವನ್ನು ಬಿಂಬಿಸಿದ್ದಾರೆ. ಮಲೆನಾಡಿನ ಗಿರಿಶಿಖರಗಳು, ಸಾಲು ಸಾಲು ಮರಗಳು, ಬೆಟ್ಟಗುಡ್ಡಗಳು, ಕವಿಶೈಲ, ಸಹ್ಯಾದ್ರಿಯ ತಪ್ಪಲು ಎಲ್ಲವೂ ಒಳಗೊಂಡಂತೆ ರಮಣೀಯ ನೊಟದ ಪರಿಸರವನ್ನು ಶ್ರೀಯುತರು ಕಾವ್ಯದಲ್ಲಿ ಹರಡಿದ್ದಾರೆ. ‘ಸೂರ್ಯೋದಯ, ಚಂದ್ರೋದಯ ದೇವರ ದಯ ಕಾಣೋ’ ಎಂದು ಹೇಳುತ್ತಾ, ಸೂರ್ಯೋದಯದ ಜೊತೆಗೆ, ಸೂರ್ಯಾಸ್ತದ ಸಂಜೆಯ ಸೊಬಗನ್ನು ವರ್ಣಿಸುತ್ತಾರೆ. ಕುವೆಂಪು ಅವರ ಕವನಗಳಲ್ಲಿ ಎದ್ದು ಕಾಣುವ ಅಂಶವೆಂದರೆ ಸೌಂದರ್ಯ ಮತ್ತು ಚೈತನ್ಯ. ಪ್ರಕೃತಿಯ ಸೌಂದರ್ಯದಿಂದ ಆನಂದ ಮತ್ತು ಚೈತನ್ಯದಿಂದ ಶಕ್ತಿ ದೊರಕುತ್ತದೆ ಎಂಬುದು ಕವಿಯ ನಂಬಿಕೆ.