Table of Contents
Research Articles
ಗುಮ್ಮಳಾಪುರದ ಸಿದ್ಧಲಿಂಗ ಯತಿಗಳ ಶೂನ್ಯ ಸಂಪಾದನೆ: ಕೆಲವು ಟಿಪ್ಪಣಿಗಳು
01 to 19
ಅಭಿನವ ಅಲ್ಲಮರೆಂದು ಖ್ಯಾತರಾದ ತೋಂಟದ ಸಿದ್ಧಲಿಂಗಯತಿಗಳು, ತಮ್ಮ ಶಿಷ್ಯ-ಪ್ರಶಿಷ್ಯ ಪರಂಪರೆಯ ಮೂಲಕ, ಗ್ರಂಥಸಂಪಾದನೆಯ ವಿಧಿವಿಧಾನಗಳನ್ನು ಅನ್ವಯಿಸಿ ವಚನಗಳನ್ನು ಸಂಕಲಿಸುವ ವ್ಯಾಖ್ಯಾನಿಸುವಂತಹ ಸಾಹಿತ್ಯಕ ಚಟುವಟಿಕೆಗಳನ್ನು ಕೈಗೊಂಡಿರುವುದು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿಯೇ ವಿಶಿಷ್ಟವಾದುದಾಗಿದೆ. ವಚನ ರಚನೆ ಹಾಗೂ ವಚನ ರಕ್ಷಣೆ, ವ್ಯಾಖ್ಯಾನ ಎರಡರಲ್ಲಿಯೂ ಸ್ಥಾನ ಪಡೆದಿದ್ದಾರೆ. ವಚನಗಳನ್ನು ಸಂಕಲಿಸುವ, ವ್ಯಾಖ್ಯಾನಿಸುವಂತಹ ಸಾಹಿತ್ಯಕ ಚಟುವಟಿಕೆಗಳನ್ನು ತಮ್ಮ ಶಿಷ್ಯ ಪ್ರಶಿಷ್ಯ ಪರಂಪರೆಯ ಮೂಲಕ ಅನುಷ್ಠಾನಗೊಳಿಸಿದರು. “ಕಲ್ಯಾಣ ಕ್ರಾಂತಿಯ ವಿಪ್ಲವದ ನಂತರ ಅಳಿದುಳಿದ ವಚನ ಸಾಹಿತ್ಯವನ್ನು ಸಂರಕ್ಷಿಸುವ ಶೋಧಿಸುವ, ಸಂಕಲಿಸುವ, ವ್ಯಾಖ್ಯಾನಿಸುವ ಮೂಲಕ ಕಾಪಾಡಿಕೊಂಡು ಬರಲು 15 ಮತ್ತು 16 ನೇ ಶತಮಾನದ ಸಂಕಲನಕಾರರು ಕಾರಣರಾಗಿದ್ದಾರೆ. ಈ ಕಾರ್ಯ ವಿಧಾನದಲ್ಲಿ ಆಧುನಿಕ ಸಂಶೋಧನೆ ವಿಧಿವಿಧಾನಗಳಾದ ಆಕರ ಸಂಗ್ರಹ, ಸಂಯೋಜನೆ, ವಿಶ್ಲೇಷಣೆ ಎಂಬ ಮೂರು ಹಂತಗಳನ್ನು ಗುರುತಿಸಬಹುದಾಗಿದೆ. ಅಲ್ಲಲ್ಲಿ ಅಡಗಿದ್ದ ವಚನಗಳನು ಶೋಧಿಸುವಲ್ಲಿ, ಸಂಗ್ರಹಿಸುವಲ್ಲಿ, ನಾಮಾನುಗುಣವಾಗಿ, ವಿಷಯಾನುಗುಣವಾಗಿ ಜೋಡಿಸುವಲ್ಲಿ, ತಾತ್ವಿಕ ದೃಷ್ಟಿಯಿಂದ ಸಂಕಲಿಸುವಲ್ಲಿ, ಸಂವಾದ ರೂಪದಲ್ಲಿ ಸಂಯೋಜಿಸಿ ಸಂಪಾದಿಸುವಲ್ಲಿ, ವಚನಗಳ ಅಂತರಾರ್ಥ ಅರಿತು ವ್ಯಾಖ್ಯಾನಿಸುವಲ್ಲಿ ಆಧುನಿಕ ಗ್ರಂಥ ಸಂಪಾದನೆಯ ಸರ್ವ ಸಾಮಾನ್ಯ ತತ್ವಗಳನ್ನೇ ಅನುಸರಿಸಿದ್ದಾರೆ.” (ಸಿ. ನಾಗಭೂಷಣ; ಶರಣ ಸಾಹಿತ್ಯ ದೀಪಿಕೆ, ಪು. 204) “ಶೂನ್ಯಸಂಪಾದನೆ” ಕೃತಿಯು ಶರಣರ ವಚನಗಳನ್ನು ಬಳಸಿಕೊಂಡು ಶರಣರ ಜೀವನ ಚಿತ್ರವನ್ನು ಬಿಡಿಸುವ ಹಾಗೂ ಶರಣತತ್ವವನ್ನು ಪ್ರತಿಪಾದಿಸುವುದಾಗಿದೆ. ಶೂನ್ಯಸಂಪಾದನೆಯು ತನ್ನ ಸಮಕಾಲೀನ ಸಂದರ್ಭದ ಅಗತ್ಯಗಳಿಗೆ ಸ್ಪಂದಿಸಿದರೆ, ಶರಣರು ರಚಿಸಿದ ಮೂಲ ವಚನಗಳು ಸಮಕಾಲೀನತೆಯ ಜತೆಗೆ ಸಾರ್ವಕಾಲಿಕ ಸತ್ಯಗಳ ಪ್ರತಿಪಾದನೆಗಳನ್ನು ಒಳಗೊಂಡಿವೆ. ಹಾಗೆಯೇ ಮಾನವನ ಬದುಕಿಗೆ ಮೂಲವಾಗಿ ಬೇಕಾಗಿರುವ ಆಧ್ಯಾತ್ಮದ ತಿರುಳನ್ನು ತಿಳಿಸಿಕೊಡುತ್ತದೆ.
ತುಳು ನಾಟಕ ಆಧಾರಿತ ಚಲನಚಿತ್ರಗಳು: ಪ್ರೇರಣೆ ಮತ್ತು ಅನನ್ಯತೆ
20 to 30
ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಅತೀ ಪ್ರಾಚೀನ ಭಾಷೆ. ವರ್ತಮಾನದಲ್ಲಿ ವಿಶ್ಲೇಷಣೆ ಮಾಡಿದರೆ ತುಳು ಹೊರತಾಗಿ ಇತರ ನಾಲ್ಕು ದ್ರಾವಿಡ ಭಾಷೆಗಳಾದ ಕನ್ನಡ, ಮಲೆಯಾಳಂ, ತಮಿಳು ತೆಲುಗು ಭಾಷೆಗಳು ತಮ್ಮ ವ್ಯಾಪ್ತಿಯ ರಾಜ್ಯವನ್ನೇ ಹೊಂದಿವೆ. ಆದರೆ ತುಳು ಭಾಷೆಯು ಕನ್ನಡ ಭಾಷೆಯೊಂದಿಗೆ ಸೌಹಾರ್ದವಾಗಿದ್ದು ಆತ್ಮೀಯವಾಗಿದೆ. ಇತಿಹಾಸಕಾಲದ ತುಳುನಾಡಿನ ವಿಸ್ತಾರ ಕಾಲಕ್ರಮೇಣ ಕುಂದುತ್ತಾ ಬಂತು. ಈಗ ತುಳುನಾಡೆಂದರೆ ದಕ್ಷಿಣಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳೆಂದು ತಿಳಿಯಬಹುದು. ಈ ಭಾಗದಲ್ಲಿ ಭಾಷೆ, ಸಂಸ್ಕೃತಿ, ಉಡುಗೆ ತೊಡುಗೆ, ಹಬ್ಬ ಹರಿದಿನಗಳು, ತಿಂಡಿ-ತಿನಿಸುಗಳು ಕೌಟುಂಬಿಕ ಪದ್ಧತಿ, ಕೃಷಿ ಚಟುವಟಿಕೆಗಳು ಎಲ್ಲವೂ ಪರಂಪರೆಯೊಂದಿಗೆ ಸಾಗಿಬಂದಿದೆ. ಸಹಸ್ರಾರು ವರ್ಷಗಳಿಂದ ಪರಂಪರೆ, ಸಂಪ್ರದಾಯ ತಲೆಮಾರುಗಳೊಂದಿಗೆ ಅಂತರ್ಗತವಾಗಿದೆ. ಆಧುನಿಕತೆಯ ಪ್ರಭಾವಕ್ಕೊಳಗಾದರೂ ಸಂಪ್ರದಾಯದ ನೆಲೆಗಟ್ಟು ಭದ್ರವಾಗಿದೆ.
ಮಂಕುತಿಮ್ಮನ ಕಗ್ಗ: ಆದರ್ಶ ಮತ್ತು ನೈತಿಕ ಮೌಲ್ಯಗಳ ಸಮನ್ವಯ
31 to 44
ಡಿ.ವಿ.ಜಿ.ಯವರ ʼಮಂಕುತಿಮ್ಮನ ಕಗ್ಗ’ವು ಕನ್ನಡ ಸಾಹಿತ್ಯದ ಅನನ್ಯ ಪಂಕ್ತಿಯು, ತತ್ವಪೂರ್ಣವೂ, ಜೀವನಕ್ಕೆ ದಾರಿದೀಪವಾಗಿದೆ. ಡಿ.ವಿ.ಜಿ ಅವರು ರಚಿಸಿದ ಈ ಕೇವಲ ಕಾವ್ಯಕೃತಿಯಲ್ಲ, ಜೀವನದ ಸಾರ್ಥಕತೆಯನ್ನು ಅರಿತುಕೊಳ್ಳಲು ಮಾರ್ಗದರ್ಶನ ನೀಡುವ ತತ್ತ್ವಚಿಂತನೆಯ ಗ್ರಂಥವಾಗಿದೆ. ಮಂಕುತಿಮ್ಮನ ಕಗ್ಗದಲ್ಲಿ ವ್ಯಕ್ತವಾಗಿರುವ ಚಿಂತನಶೀಲತೆ, ತಾತ್ತ್ವಿಕ ದೃಷ್ಟಿಕೋನ ಹಾಗೂ ಆಧ್ಯಾತ್ಮಿಕ ಅರಿವು, ಮಾನವ ಮೌಲ್ಯಗಳನ್ನು ಪ್ರತಿಪಾದಿಸುವ ಸಿದ್ಧಾಂತಗಳಾಗಿವೆ.
ಈ ಕಾವ್ಯಕೃತಿಯಲ್ಲಿ ಜೀವನದ ನೈಜತೆಯನ್ನು ಮನಗಾಣಿಸುವಂತೆ ಮಾಡುವ ತತ್ವೋಪದೇಶಗಳು ಸಂಕಲಿತವಾಗಿವೆ. ಜೀವನದಲ್ಲಿ ಏರಿಳಿತಗಳು ಸಹಜ, ಆದರೆ ಮಾನವನ ಹೊಣೆಗಾರಿಕೆ, ಶ್ರದ್ಧೆ, ತಾಳ್ಮೆ ಮತ್ತು ನೈತಿಕತೆ ಅವಶ್ಯಕವೆಂಬ ವಿಚಾರವನ್ನು ಕವಿ ಬಹಳ ಸರಳ ಹಾಗೂ ಗಂಭೀರ ರೀತಿಯಲ್ಲಿ ಪ್ರತಿಪಾದಿಸುತ್ತಾರೆ. ಆಧ್ಯಾತ್ಮಿಕತೆಯೊಂದಿಗೆ ತತ್ತ್ವಶಾಸ್ತ್ರದ ಅವಗಾಹನ, ಜೀವನದ ಪಾಠಗಳನ್ನು ಹೃದಯಂಗಮಿಸುವ ಅಗತ್ಯತೆ, ನಿಜವಾದ ಮೌಲ್ಯಪ್ರದ ಜೀವನದ ರೂಪಶಿಲ್ಪ ಹೇಗಿರಬೇಕು ಎಂಬುದನ್ನು ಪ್ರತಿ ಕಗ್ಗವೂ ಅರ್ಥಪೂರ್ಣವಾಗಿ ಪ್ರತಿಬಿಂಬಿಸುತ್ತದೆ.
ಡಿ.ವಿ. ಗುಂಡಪ್ಪ ಅವರು ಈ ಕೃತಿಯ ಮೂಲಕ ಮೌಲ್ಯಮಯ ಬದುಕಿನ ಸ್ಥಾಪನೆಯನ್ನು ಸನಾತನ ತತ್ತ್ವಗಳ ಮೂಲಕ ವಿಶ್ಲೇಷಿಸಿದ್ದಾರೆ. ಭಕ್ತಿಯ ದಾರಿಯಲ್ಲಿ ಅನುಸರಣೀಯವಾದ ಮಾರ್ಗ, ಚಾತುರ್ಯಯುತ ತತ್ತ್ವಗಳನ್ನು ಅಳವಡಿಸಿಕೊಳ್ಳುವ ಜೀವನಪದ್ಧತಿ, ದೈಹಿಕ-ಮಾನಸಿಕ ಶಕ್ತಿಯ ಸಮತೋಲನ, ಹಾಗೂ ಆಧ್ಯಾತ್ಮಿಕತೆ ಮತ್ತು ಜಾಗೃತಿಯ ಅವಶ್ಯಕತೆಗಳನ್ನು ಇಲ್ಲಿನ ಕಾವ್ಯಗಳು ಸ್ಪಷ್ಟವಾಗಿ ಸಾರುತ್ತವೆ. ಕವಿಯ ಮನೋಭಾವ ಅವನಂತಹ ವಿದ್ವಾಂಸನ ತತ್ತ್ವಪ್ರಜ್ಞೆಯನ್ನು ವ್ಯಕ್ತಪಡಿಸುವ ಮೂಲಕ, ಜೀವನದ ಸೂಕ್ಷ್ಮತೆಯನ್ನು ತೆರೆದಿಡುತ್ತದೆ.
ಈ ಲೇಖನವು ʼಮಂಕುತಿಮ್ಮನ ಕಗ್ಗ’ ಕೃತಿಯಾದ್ಯಂತ ಹರಡಿರುವ ಆದರ್ಶ ಮತ್ತು ನೈತಿಕ ಮೌಲ್ಯಗಳನ್ನು ವಿಶ್ಲೇಷಿಸುತ್ತಾ, ಅವುಗಳ ಮಹತ್ವವನ್ನು ಪ್ರಸ್ತುತ ಸಮಾಜದ ಅಗತ್ಯಗಳಿಗೆ ಪರಿಕಲ್ಪಿಸುತ್ತಿದೆ. ಮನುಷ್ಯನ ಬದುಕಿನಲ್ಲಿ ತತ್ತ್ವಚಿಂತನೆಯ ಪಾತ್ರ, ಮಾನವೀಯ ಹಿತದೃಷ್ಟಿಯ ಬೆಳವಣಿಗೆ, ಮಾನವ ಸಂಬಂಧಗಳ ಶ್ರೇಷ್ಠತೆ, ಮತ್ತು ಜೀವನದ ಸಹಜ ತಾತ್ತ್ವಿಕ ಪರಂಪರೆಯ ಅರ್ಥವನ್ನು ಈ ಅಧ್ಯಯನ ಸೂಕ್ಷ್ಮವಾಗಿ ಒಳಗೊಂಡಿದೆ. ಈ ಕೃತಿಯು ಕೇವಲ ಓದುವಂತಹ ಸಾಹಿತ್ಯವಲ್ಲ, ಬದುಕಿನಲ್ಲಿ ಅನುಸರಿಸಬಹುದಾದ ಮಾರ್ಗದರ್ಶಿಯಾಗಿದೆ.
ಹೀಗಾಗಿ, ʼಮಂಕುತಿಮ್ಮನ ಕಗ್ಗ’ ಕೇವಲ ಭಾವನಾತ್ಮಕ ಕಾವ್ಯವು ನಿಜವಾದ ಜೀವನದ ಸ್ಪಷ್ಟ ಚಿತ್ರಣ ನೀಡುವ ತತ್ತ್ವಮಯ ಪ್ರವಚನವಾಗಿದೆ. ಮಾನವೀಯ ಮೌಲ್ಯಗಳ ಚಿಂತನೆಗೆ ಹೊಸ ಆಯಾಮವನ್ನು ನೀಡುವ ಈ ಕೃತಿ, ಪ್ರತಿಯೊಬ್ಬರಿಗೂ ಜೀವನವನ್ನು ಹೊಸ ದೃಷ್ಟಿಕೋನದಿಂದ ಅರ್ಥೈಸುವ ವಿಕಸನಾತ್ಮಕತೆಯನ್ನು ಉಣಬಡಿಸುತ್ತದೆ.
ಗಿರೀಶ್ ಕಾಸರವಳ್ಳಿ ಸಿನೇಮಾಗಳಲ್ಲಿ ಜನಪದ ಕಲೆಗಳು: ಒಂದು ವಿಶ್ಲೇಷಣಾತ್ಮಕ ಅಧ್ಯಯನ
45 to 60
ಪ್ರಸ್ತುತ ಲೇಖನದಲ್ಲಿ ಭಾರತೀಯ ಚಿತ್ರರಂಗದ ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಎರಡು ಪ್ರಸಿದ್ಧ ಸಿನೇಮಾಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಜನಪದ ಕಲೆಗಳನ್ನು ಸಾಂಸ್ಕೃತಿಕ ಮತ್ತು ಸಾಮಾಜಿಕ ಸ್ತಿತ್ಯಂತರಗಳ ಮೂಲಕ ಅವರು ಹೇಗೆ ಬಿಂಬಿಸಿದ್ದಾರೆ ಮತ್ತು ಆಳವಾಗಿ ಬೇರೂರಿರುವ ಮಲೆನಾಡಿನ ಗ್ರಾಮೀಣ ಬದುಕಿನ ಸನ್ನಿವೇಶಗಳನ್ನು ಸಿನೇಮಾದ ಮೂಲಕ ಗಿರೀಶ್ ಕಾಸರವಳ್ಳಿ ಹೇಗೆ ಚಿತ್ರಿಸಿದ್ದಾರೆ ಎಂಬುದನ್ನು ಅಧ್ಯಯನ ಮಾಡಲಾಗಿದೆ. ಅವರ ಬಣ್ಣದ ವೇಷ ಮತ್ತು ದ್ವೀಪ ಚಿತ್ರಗಳು ಜನಪದ ಕಲೆಗಳ ಸಾರವನ್ನು ಮತ್ತು ಸಮಕಾಲೀನ ಸಮಸ್ಯೆಗಳೊಂದಿಗೆ ಅವುಗಳ ಪರಸ್ಪರ ಕ್ರಿಯೆಯನ್ನು ಸ್ಪಷ್ಟವಾಗಿ ಸಂಯೋಜಿಸುವ ಮಾದರಿ ಸಿನೇಮಾಗಳಾಗಿವೆ. ಬಣ್ಣದ ವೇಷ ಸಿನೇಮಾ ಮಲೆನಾಡಿನಲ್ಲಿನ ಯಕ್ಷಗಾನದ ಧಾರ್ಮಿಕ ಸಂಪ್ರದಾಯಗಳನ್ನು ನೈಜವಾಗಿ ತೋರಿಸುತ್ತದೆ. ಇದು ಒಂದು ರೋಮಾಂಚಕ ನಾಟಕೀಯ ಕಲಾ ಪ್ರಕಾರವೊಂದರ ಪ್ರಭಾವವನ್ನು, ಆಧುನಿಕತೆಯನ್ನು ಅಳವಡಿಸಿಕೊಂಡ ಹೊಸ ತಲೆಮಾರಿಗೆ ಒಂದು ದಾಖಲೆಯಾಗಿರಬಹುದಾಗುವ ಬಗೆಗೆ ಸಿನೇಮಾ ಮಾತನಾಡುವುದನ್ನು ಪ್ರಸ್ತುತ ಲೇಖನದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಅಂತೆಯೇ ದ್ವೀಪವು ಮುಳುಗಿದ ಹಳ್ಳಿಯ ಹಿನ್ನೆಲೆಯಲ್ಲಿ ತೆರೆದುಕೊಳ್ಳುತ್ತದೆ. ಸ್ಥಳಾಂತರ ಮತ್ತು ಉಳಿವಿನ ಅಸ್ತಿತ್ವದ ಸಂದಿಗ್ಧತೆಗಳೊಂದಿಗೆ ಜನಪದ ಲಕ್ಷಣಗಳನ್ನು ಬಿಂಬಿಸಿದ ಬಗೆಗೆ ಲೇಖನದಲ್ಲಿ ಹೇಳಲಾಗಿದೆ. ಈ ಅಧ್ಯಯನದಲ್ಲಿ ಗುಣಾತ್ಮಕ ವಿಷಯ ವಿಶ್ಲೇಷಣೆ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ. ಸಾಂಸ್ಕೃತಿಕ ನಿರಂತರತೆ, ಸಾಮಾಜಿಕ-ಆರ್ಥಿಕ ಅಸಮಾನತೆಗಳು ಮತ್ತು ಮಾನವನ ಸ್ಥಿತಿಸ್ಥಾಪಕತ್ವದ ವಿಶಾಲ ವಿಷಯಗಳನ್ನು ಪರಿಹರಿಸಲು ಕಾಸರವಳ್ಳಿ ಜನಪದ ಕಲೆಗಳನ್ನು ನಿರೂಪಣಾ ಸಾಧನವಾಗಿ ಮತ್ತು ದೃಶ್ಯರೂಪಕವಾಗಿ ಹೇಗೆ ಬಳಸುತ್ತಾರೆ ಎಂಬುದನ್ನು ಈ ಲೇಖನವು ಪರಿಶೀಲಿಸುತ್ತದೆ. ಸಂಪ್ರದಾಯ ಮತ್ತು ಆಧುನಿಕತೆಯನ್ನು ಸೇತುವೆ ಮಾಡುವ ಚಲನಚಿತ್ರಗಳ ಸಾಮರ್ಥ್ಯವನ್ನು ಅಧ್ಯಯನವು ಎತ್ತಿತೋರಿಸುತ್ತದೆ. ಲೇಖನವು ವೇಗವಾಗಿ ಪರಿವರ್ತನೆಗೊಳ್ಳುತ್ತಿರುವ ಸಮಾಜದಲ್ಲಿ ಜನಪದ ಕಲೆಗಳ ಪ್ರಸ್ತುತತೆಯ ಬಗ್ಗೆ ಕಟುವಾದ ವ್ಯಾಖ್ಯಾನಗಳನ್ನು ಮಾಡುತ್ತದೆ.
ಮಲೆಮಹದೇಶ್ವರ ಕಾವ್ಯದ ಮಹಿಳಾ ಪಾತ್ರಗಳ ವಿಶ್ಲೇಷಣೆ
61 to 74
ಭಾರತ ಬಹು ಸಂಸ್ಕೃತಿಗಳಿಂದ ಕೂಡಿದೆ. ಭಾರತವನ್ನು ಸಂಸ್ಕೃತಿ ಮತ್ತು ಉಪಸಂಸ್ಕೃತಿಗಳ ನೆಲೆಗಟ್ಟಿನಲ್ಲಿ ಗ್ರಹಿಸುವುದಾದರೆ, ಜನಪದ ಕಥನಗಳು ಉಪಸಂಸ್ಕೃತಿಗಳ ಭಾಗಗಳಾಗಿವೆ. ಇದರ ಭಾಗವಾಗಿ ನಮಗೆ ಕನ್ನಡದಲ್ಲಿ ಮಲೆಮಹದೇಶ್ವರ, ಮಂಟೇಸ್ವಾಮಿ, ಜುಂಜಪ್ಪ, ಮೖಲಾರಲಿಂಗ ಇವರೆಲ್ಲರೂ ಕೂಡ ಮುಖ್ಯವಾಗಿ ಕಾಣುತ್ತಾರೆ. ಮಾತೃಮೂಲ ಸಂಸ್ಕೃತಿಯ ಅನೇಕ ಪಳೆಯುಳಿಕೆಗಳು ಈ ಕಾವ್ಯಗಳಲ್ಲಿ ದಟ್ಟವಾಗಿ ಕಂಡುಬರುತ್ತವೆ. ನನ್ನ ಅಧ್ಯಯನಕ್ಕೆ ಮಲೆಮಹದೇಶ್ವರ ಕಾವ್ಯವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಮಲೆಮಹದೇಶ್ವರ ಕಾವ್ಯದಲ್ಲಿ ಸಂಕಮ್ಮನ ಸಾಲು ಬಹಳ ವಿಶಿಷ್ಟವಾಗಿದೆ. ನನ್ನ ಅನುಪಸ್ಥಿತಿಯಲ್ಲಿ ಪರ ಪುರುಷರಿಗೆ ಒಲಿಯುವುದಿಲ್ಲ ಎಂದು ಬಲಗೖ ಭಾಷೆಯನ್ನು ನೀಡಬೇಕು ಎಂದು ನೀಲಯ್ಯ ಕೇಳಿದಾಗ, ಭಾಷೆ ನೀಡಲು ಒಪ್ಪದ ಸಂಕಮ್ಮ ʼಕೊಟ್ಟಿದ ತೆರವನ್ನು ಹಿಂತೆಗೆದುಕೊಂಡು ನನ್ನನ್ನುಬಿಟ್ಟು ಬಿಡುʼ ಎಂದು ವಿರೋಧಿಸುತ್ತಾಳೆ. ಅವಳಿಗೆ ಘೋರತರವಾದ ಹಿಂಸೆಯನ್ನು ನೀಡಿ, ಹೆಜ್ಜೇನು ಮಲೆ ಭೇಟೆಗೆ ಹೊರಡುತ್ತಾರೆ. ಅವನು ಹೊರಟ ಮೇಲು ಅವನು ನೀಡಿದ ಹಿಂಸೆಯ ಪರಿಣಾಮವನ್ನು ಅನುಭವಿಸುತ್ತಿರುತ್ತಾಳೆ. ಹಿಂಸೆಯನ್ನು ತಾಳಲಾರದೆ, ಅದರಿಂದ ಪಾರು ಮಾಡುವಂತೆ ಮಹದೇಶ್ವರನಲ್ಲಿ ಮೊರೆ ಹಿಡುತ್ತಾಳೆ. ಮಹದೇಶ್ವರ ಸಂಕಮ್ಮನನ್ನು ಕಷ್ಟದಿಂದ ಪಾರು ಮಾಡಿ, ಅವಳಿಗೆ ಮಕ್ಕಳ ಫಲವನ್ನು ನೀಡುತ್ತಾರೆ. ಹೆಣ್ಣಾದವಳು ಮಕ್ಕಳನ್ನು ಪಡೆಯಲೇಬೇಕೆಂಬ ಒತ್ತಡದ ಪರಿಣಾಮವಾಗಿ ಸಂಕಮ್ಮನು ಮಹದೇಶ್ವರ ವರಪ್ರಸಾದದಿಂದ ಕಾರಯ್ಯ ಮತ್ತು ಬಿಲ್ಲಯ್ಯ ಎಂಬ ಇಬ್ಬರು ಮಕ್ಕಳಿಗೆ ಜನ್ಮ ನೀಡುತ್ತಾಳೆ. ಆ ಇಬ್ಬರು ಮಕ್ಕಳನ್ನು ಮಹದೇಶ್ವರ ಶಿಶುಮಕ್ಕಳಾಗಿ ಸ್ವೀಕರಿಸಿ, ತನ್ನೊಡನೆ ಕರೆದುಕೊಂಡು ಹೋಗುವುದು ಪುರುಷ ಪ್ರಧಾನ ವ್ಯವಸ್ಥೆಯ ಕೈವಾಡವೆಂದು ಹೇಳಬಹುದು. ಏಕೆಂದರೆ ತಾಯಿ ಮತ್ತು ಮಕ್ಕಳ ನಡುವೆ ಇರಬೇಕಾದ ಕರುಳ ಬಳ್ಳಿಯ ಸಂಬಂಧವನ್ನು ಕತ್ತರಿಸಿ, ತನ್ನ ಕಾರ್ಯಸಾಧನೆ ಮಾಡಿಕೊಳ್ಳುವುದನ್ನು ಕಾಣಬಹುದು. ಮಲೆ ಮಹದೇಶ್ವರ ಕಾವ್ಯದ ಮತ್ತೊಂದು ಮಹಿಳಾ ಪಾತ್ರವಾದ ಬೇವಿನಹಟ್ಟಿ ಕಾಳಮ್ಮಳನ್ನು ಏನಾದರೂ ಮಾಡಿ ತನ್ನ ಒಕ್ಕಲಾಗಿಸಿಕೊಳ್ಳಬೇಕು, ಅವಳನ್ನು ಮಣಿಸಬೇಕು ಎಂಬ ಹಠ ಮಹದೇಶ್ವರನಲ್ಲಿದೆ. ನಾಸ್ತಿಕವಾದಿಯಾಗಿ ಕಾಳವ್ವೆ ರೂಪುಗೊಳ್ಳುತ್ತಿರಬೇಕಾದರೆ ಅವಳನ್ನು ಆಸ್ತಿಕರಾಗಿ ಇರಿಸುವ ಪ್ರಯತ್ನ ಮಹದೇಶ್ವರನಲ್ಲಿದೆ. ಬೇವಿನಹಟ್ಟಿ ಕಾಳಮ್ಮನನ್ನು ತನ್ನ ಪಂಥದ ಅನುಯಾಯಿಯಾಗಿ ಮಾಡಿಕೊಳ್ಳುವ ವ್ಯವಸ್ಥೆಯನ್ನು ಮಹದೇಶ್ವರ ಸೃಷ್ಟಿಸಿದ್ದಾನೆ. ಇಲ್ಲಿ ಮಾತೃಮೂಲ ಸಂಸ್ಕೃತಿ ದಮನ, ಪಿತೃಮೂಲ ಸಂಸ್ಕೃತಿಯ ಸ್ಥಾಪನೆಯನ್ನು ಕಾಣಬಹುದು. ಮೂಗಯ್ಯ-ರಾಮವ್ವೆ ದಂಪತಿಗಳನ್ನು ಮಹದೇಶ್ವರ ತನ್ನ ಒಕ್ಕಲಾಗಿಸಿಕೊಳ್ಳಲು ಪ್ರಯತ್ನಿಸಿದಾಗ ರಾಮವ್ವೆ ವಿರೋಧಿಸುತ್ತಾಳೆ. ಆದಿಶಕ್ತಿ ತನಗೆ ಸುಖಭೋಗವನ್ನು, ಯವ್ವನವನ್ನು ತೀರಿಸುವುದಕ್ಕೆ ಇಬ್ಬರು ಮಕ್ಕಳನ್ನು ಪಡೆದು, ನನಗೆ ನೀವು ಗಂಡನಾಗಬೇಕು ಎಂದಾಗ ಅವರು ಒಪ್ಪುವುದಿಲ್ಲ. ಮೂರನೇ ಮಗನಾಗಿ ಮಹದೇಶ್ವರನ್ನು ಪಡೆದು ನನಗೆ ಪತಿಯಾಗು ಎಂದಾಗ ಮಹದೇಶ್ವರ ಅದಕ್ಕೆ ಒಪ್ಪಿಕೊಂಡು, ಆದಿಶಕ್ತಿಯಲ್ಲಿ ವಿಶೇಷವಾದ ವಿದ್ಯೆಗಳನ್ನೆಲ್ಲ ಅವಳಿಂದಲೇ ವಶ ಮಾಡಿಕೊಳ್ಳುತ್ತಾನೆ. ಕೊನೆಗೆ ಅವಳನ್ನು ಸುಟ್ಟು ಭಸ್ಮ ಮಾಡುತ್ತಾನೆ. ಮಾತೃಪ್ರಧಾನ ನೆಲೆಯೊಂದನ್ನು ಪಿತೃಪ್ರಧಾನ ನೆಲೆಯನ್ನಾಗಿ ಪರಿವರ್ತಿಸಿದ ಕಾಲಘಟ್ಟದ ರೂಪಕವಾಗಿ ಮಲೆಮಹದೇಶ್ವರ ಕಾವ್ಯದ ಆದಿಶಕ್ತಿ ಪ್ರಸಂಗವನ್ನು ಗ್ರಹಿಸಬಹುದು. ಮೖಸೂರಿನಲ್ಲಿ ಮಹಿಷಾಸುರ, ಐಹಿಷಾಸುರ ಈ ಇಬ್ಬರೂ ರಾಕ್ಷಸರ ಹಾವಳಿ ಹೆಚ್ಚಿದಾಗ, ಪಾರ್ವತಿ ಶಿವನಿಗೆ ಈ ಇಬ್ಬರನ್ನು ಕೊಲ್ಲಲು ತಿಳಿಸಿದಾಗ, ಶಿವನು ಅದಕ್ಕೆ ಒಪ್ಪುವುದಿಲ್ಲ. ಶಿವನಿಂದ ವರವನ್ನು ಪಡೆದ,ಪಾರ್ವತಿ ರಾಕ್ಷಸ ರೂಪವನ್ನು ತಾಳಿ, ಆ ರಾಕ್ಷಸರನ್ನು ಸಂಹಾರ ಮಾಡುತ್ತಾಳೆ. ಹಿಡಿಂಬೆ ತನಗೆ ಸಂತಾನ ಭಾಗ್ಯ ಬೇಕೆಂದು ಶಿವನನ್ನು ಕುರಿತು ತಪಸ್ಸು ಮಾಡಿದಾಗ, ಮಹದೇಶ್ವರ ವಿಕಾರವಾದ ಮಗುವಾಗಿ ಹಿಡಿಂಬೆ ಹೊಟ್ಟೆಯಲ್ಲಿ ಜನಿಸಿದಾಗ, ವಿಕಾರವಾದ ಮಗುವನ್ನು ಹಿಡಿಂಬೆ ಒಪ್ಪದೆ, ಅದನ್ನು ಮೆಳೆಯಲ್ಲಿ ಬಿಸಾಡುತ್ತಾಳೆ. ಮಲೆ ಮಹದೇಶ್ವರ ಕಾವ್ಯದ ಈ ಎಲ್ಲಾ ಪಾತ್ರಗಳನ್ನು ಹೆಣ್ಣಿನ ಅಸ್ಮಿತೆಯ ಭಾಗವಾಗಿ ನೋಡಬಹುದು.
ನಿರಂಜನರ ಬರವಣಿಗೆಯಲ್ಲಿ ಮಾರ್ಕ್ಸ್‌ವಾದ
75 to 83
ನಿರಂಜನರು ಸಾಹಿತ್ಯವಲಯದಲ್ಲಿ ಉಂಟುಮಾಡಿದ ಸಾಮಾಜಿಕ ಹೋರಾಟ ಬಹಳ ಮುಖ್ಯವಾದುದು. ಸಾಹಿತ್ಯ ಮತ್ತು ಬದುಕನ್ನು ಏಕ ರೀತಿಯಲ್ಲಿ ಕಂಡುಕೊಂಡವರು. ಸಾಮಾಜಿಕ ಬದ್ಧತೆಯನ್ನು ಕೊನೆಯವರೆಗೂ ಉಳಿಸಿಕೊಂಡವರು. ಬಾಲ್ಯದಲ್ಲಿ ಗಾಂಧಿವಾದಕ್ಕೆ ಮನಸೋತು, ಅನಂತರ ಸಮಾಜವಾದದತ್ತ ಒಲವು ಬೆಳಸಿಕೊಂಡರು. ಹರೆಯದಲ್ಲಿ ಸಮತಾವಾದದ ಸಿದ್ದಾಂತಗಳಿಂದ ಪ್ರಭಾವಿತರಾಗಿ ಮಾರ್ಕ್ಸ್‌ವಾದಿಯಾಗಿ ಕಮ್ಯೂನಿಸ್ಟ್ ಪಕ್ಷದ ಸಕ್ರಿಯ ಸದಸ್ಯರಾಗಿ ದುಡಿದವರು ನಿರಂಜನರು. ʼಸ್ವಾತಂತ್ರ್ಯ ಚಳವಳಿ, ಏಕೀಕರಣ ಚಳವಳಿ, ಹಿಂದೂ ಸಾಂಸ್ಕೃತಿಕ ಪುನರುಜ್ಜೀವನ ಚಳವಳಿಗಳು ಸೊಕ್ಕೇರಿ ಒಟ್ಟಿಗೆ ಕ್ರಿಯಾನಿರತವಾಗಿದ್ದಾಗ, ಮಾರ್ಕ್ಸ್‌ವಾದದಿಂದ ಆಕರ್ಷಿತವಾಗಿ, ಅಖಿಲಭಾರತ ಚಳವಳಿಯ ಒಂದು ಭಾಗವಾಗಿ ಕನ್ನಡ ಪ್ರಗತಿಶೀಲ ಚಳವಳಿಯು ಹುಟ್ಟಿಕೊಂಡಿತು.
ಶಿವರಾಯರು ಬೆಳೆಬೆಳೆಯುತ್ತಾ ಗಾಂಧೀ ಪ್ರಭಾವ ಹೆಚ್ಚಾಗ ತೊಡಗಿತ್ತು ಸಾಮ್ರಾಜ್ಯಶಾಹಿಯನ್ನು ಖಂಡಿಸುತ್ತಿದ್ದು ಹರಿಜನ ಕೇರಿಗಳಲ್ಲಿ ನೈಮರ್ಲ್ಯದ ಕೆಲಸವನ್ನು ಕೈಗೊಂಡದ್ದು ಎಲ್ಲೆಡೆ ಧೈರ್ಯದಿಂದ ಬಂಡವಾಳಶಾಹಿ ವಿರುದ್ಥ ಕಿಡಿಕಾರುತ್ತ ಮುನ್ನೆಡೆಯುತ್ತಿದ್ದು ನೀಲೇಶ್ವರ ಮೊದಲ ಬಾರಿಗೆ ಕೇಳಿದ ʼಇಂಕ್ವಿಲಾಬ್ ಜಿಂದಾಬಾದ್’ ಕಾರ್ಮಿಕ ವಿದ್ಯಾರ್ಥಿಗಳನ್ನು ಸಂಘಟಿಸುವ ರೀತಿ ಹೊಸದಾಗಿ ಕಂಡದ್ದು ಗಾಂಧೀವಾದದ ಬಗೆಗಿನ ಮೋಹಕ ಕೊನೆಗೊಂಡು ಬ್ರಿಟಿಷರಿಂದ ಮುಕ್ತಿ ಹೊಂದಿದ ಭಾರತ ದೇಶದಲ್ಲಿ ಹೊಸ ವ್ಯವಸ್ಥೆಯ ನಿರ್ಮಾಣಕ್ಕೆ ಹಾತೊರೆದು ಮಾರ್ಕ್ಸ್‌ವಾದವನ್ನು ಅವಲಂಭಿಸಿದರು. ಮಾರ್ಕ್ಸ್‌ವಾದ ಎಂದರೆ ಮಾನವೀಯತೆ ಶೋಷಣೆ ವಿರುದ್ಧ ಬಂಡೆದ್ದ ನ್ಯಾಯವಾದ ಒಂದು ಪಥ ದುಡಿಯುವ ಕೆಲಸಕ್ಕೆ ಸೂಕ್ತವಾದ ಕೂಲಿ ಕೇಳುವ ಹಕ್ಕು, ಬಸವಣನ ಸಮಾನತಾ ಧರ್ಮ ಸಕಲ ಜೀವಿಗಳಿಗೆ ಲೇಸನೇ ಬಯಸುವ ಮನುಷ್ಯತ್ವ ಎಲ್ಲವನ್ನು ಮಾರ್ಕ್ಸ್‌ವಾದ ಒಳಗೊಂಡಿದೆ. ನಮ್ಮ ಸುತ್ತ ಪ್ರಪಂಚವನ್ನು ಜಾಗೃಕತೆಯಿಂದ ಪರಿಶೀಲಿಸಿದರೆ ಅದರಲ್ಲಿ ಅಡಕವಾಗಿರುವ ಎಲ್ಲಾ ವಸ್ತುಗಳು ಅದರಲ್ಲಿ ಸಂಭವಿಸುವ ಎಲ್ಲ ಇಂದ್ರೀಯ ಗೋಚರ ಘಟನೆಗಳೂ ಭೌತಿಕವಾದವು ಅಥವಾ ಮಾನಸಿಕವಾದವು ಎಂದು ತಿಳಿದುಬರುತ್ತದೆ. ಮಾರ್ಕ್ಸ್‌ವಾದವು ಅರಿವಿನ ವಿಧಾನವನ್ನು ಪ್ರಭಾವಿಸುವ ನಿಯಮವನ್ನು ಸಹ ಪರಿಶೀಲಿಸುತ್ತದೆ. ಸಾಮಾಜಿಕ ಜೀವನದಲ್ಲಿ ಪ್ರಗತಿಪರ ಮತ್ತು ಪ್ರತಿಗಾಮಿ ಶಕ್ತಿಗಳ ಒಂದನ್ನೊಂದು ಸಂಘರ್ಷಿಸುತ್ತಲೇ ಇರುತ್ತವೆ. ಮಾರ್ಕ್ಸ್‌ವಾದ ಎಲ್ಲ ರೀತಿಯ ಸಮಾಜಗಳ ಮೂಲಾಧಾರವಾದ ಅಂದರೆ ಜನರು ತಮ್ಮ ಜೀವನ ಸಾಗಿಸಲು ಕೈಗೊಳ್ಳಬೇಕಾದ ಚಟುವಟಿಕೆಗಳನ್ನು ಪರಿಶೀಲಿಸಿ ಅದರ ಮೂಲಕ ಮಾನವ ಉತ್ಪಾದನಾ ವಿಧಿಯಲ್ಲಿ ಇತರರೊಡನೆ ಯಾವ ರೀತಿಯ ಸಂಬಂಧ ಹೊಂದಿರುತ್ತಾನೆ ಎಂಬುದನ್ನು ಪರಿಶೀಲಿಸುತ್ತದೆ.
ದಲಿತ ಆತ್ಮಕತೆಗಳಲ್ಲಿ ಬಾಲ್ಯ ಮತ್ತು ಶಾಲಾ ಶಿಕ್ಷಣದ ನಿರೂಪಣೆಗಳು
84 to 91
ಮನುಷ್ಯನ ಬದುಕಿನಲ್ಲಿ ಬಾಲ್ಯದ ಅನುಭವವು ತುಂಬಾ ಮುಖ್ಯವಾದದ್ದು. ಬಾಲ್ಯದ ಬದುಕು ಎಲ್ಲರಿಗೂ ಒಂದೇ ರೀತಿಯದಾಗಿರುವುದಿಲ್ಲ. ಆ ವಯಸ್ಸಿನ ಶಿಕ್ಷಣವೂ ಕೂಡ ಬಾಲ್ಯದ ಅನುಭವವಗಳನ್ನು ದಟ್ಟವಾಗಿ ಆವರಿಸಿಕೊಂಡಿರುತ್ತದೆ. ಜಾತಿಯಾಧಾರಿತ ಸಾಮಾಜಿಕ ವ್ಯವಸ್ಥೆಯೂ ಕೂಡ ಈ ಬಾಲ್ಯದ ಮೇಲೆ ಪ್ರಭಾವವನ್ನು ಬೀರುತ್ತದೆ. ಮೇಲ್ಜಾತಿ, ಮಧ್ಯಮ ಜಾತಿಗಳು ಮೂಲಭೂತ ಸೌಕರ್ಯಗಳು ಮತ್ತು ಶಿಕ್ಷಣದ ಕುರಿತಂತೆ ಎಚ್ಚರಿಕೆಯಿಂದಿದ್ದರೆ, ತಳ ಸಮುದಾಯಗಳು ಮತ್ತು ಶ್ರಮಿಕ ವರ್ಗ ಮೂಲಭೂತ ಸೌಕರ್ಯಗಳಿಗಾಗಿಯೇ ಹೋರಾಟ ನಡೆಸುತ್ತಿರುವುದನ್ನು ಕಾಣಬಹುದು. ಈ ಸಂಧರ್ಭದಲ್ಲಿ ಶಿಕ್ಷಣದ ಕುರಿತ ಮಾತು ಕನಸಿನ ಪಯಣವೇ ಸರಿ. ಹಸಿವು ಮತ್ತು ಅವಮಾನಗಳಾಚೆಗಿನ ಬದುಕನ್ನು ದಲಿತ ಆತ್ಮಕಥೆಗಳಲ್ಲಿ ಕಾಣಬಹುದು. ಶಾಲೆಯ ಕುರಿತಂತೆ, ಶಿಕ್ಷಕರ ಕುರಿತಂತೆ ದಲಿತ ಆತ್ಮಕತೆಗಳು ಚಿತ್ರಿಸುವ ಸೂಕ್ಷ್ಮ ಪ್ರಜ್ಞೆಯು ಶಿಕ್ಷಣ ವ್ಯವಸ್ಥೆ ಕುರಿತ ಹೊಸ ಆಯಾಮವನ್ನು ತೆರೆದಿಡುತ್ತವೆ. ಆ ಕುರಿತ ಒಂದು ಸೂಕ್ಷ್ಮ ಚಿತ್ರಣವನ್ನು ಇಲ್ಲಿ ವಿಶ್ಲೇಷಿಸ ಲಾಗಿದೆ.
ರಾಮನಗರ ತಾಲ್ಲೂಕಿನ ಜನಪದ ಕಲೆಗಳು: ಒಂದು ನೋಟ
92 to 104
ಜನಪದ ಕಲೆಯು ಮಾನವನ ಅಂತರಾಳದ ಭಾವನೆಯನ್ನು ವ್ಯಕ್ತಪಡಿಸುವಂತಹ ಒಂದು ಮಾಧ್ಯಮವಾಗಿದೆ. ಜೊತೆಗೆ ಮಾನವ ಜೀವನದ ಅವಿಭಾಜ್ಯವಾದ ಅಂಗವಾಗಿದೆ. ಗಾಳಿ, ನೀರು, ಆಹಾರ ಹೇಗೆ ಮುಖ್ಯವೋ ಹಾಗೇ ಜನಪದ ಕಲೆಯೂ ಸಹ ಅಷ್ಟೇ ಮುಖ್ಯವಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ಮಾನವನು ಪ್ರಾಣಿ, ಪಕ್ಷಿಗಳಂತೆ ಮಾತು ಬಾರದೇ ಅವುಗಳಲ್ಲಿ ಒಂದಾದ ಜೀವಿಯಾಗಿ ಜೀವನವನ್ನು ಸಾಗಿಸುತ್ತಿದ್ದ ಕಾಲದಲ್ಲಿಯೇ ತನ್ನ ಮನಸ್ಸಿನಲ್ಲಿ ಮೂಡಿದ ಭಾವನೆಗಳಿಗೆ ಅನುಗುಣವಾಗಿ ವರ್ತಿಸುವಂತ ಬುದ್ದಿಶಕ್ತಿಯನ್ನು ಪಡೆದ ನಂತರ, ಅವನ ಆಲೋಚನ ಶಕ್ತಿ, ತಾರ್ಕಿಕ ಶಕ್ತಿ ಮತ್ತು ಸೃಜನಶೀಲ ಶಕ್ತಿಗಳಿಂದಾಗಿ ಅವನು ಪ್ರಾಣಿ, ಪಕ್ಷಿಗಳಿಗಿಂತ ಭಿನ್ನವಾದ ಜೀವಿಯಾಗಿ ಬೆಳೆಯತೊಡಗಿದ ಕಾರಣದಿಂದ ತನ್ನ ಸುತ್ತಲಿನ ಪರಿಸರಕ್ಕೆ ಅನುಗುಣವಾಗಿ ತಾನು ವರ್ತಿಸಲಾರಂಭಿಸಿದನು. ಇದರಿಂದಾಗಿ ಆತನ ಮನಸ್ಸಿನಲ್ಲಿ ಅಡಗಿದ್ದ ಸುಪ್ತವಾದ ಭಾವನೆಗಳು ಕಲೆಯ ಹುಟ್ಟಿಗೆ ಕಾರಣವಾಗಿರಬಹುದಾಗಿದೆ.
ಮಲಬಾರ್ ಮಾಪಿಳ್ಳೆ ಬಂಡಾಯಗಳು: ಧರ್ಮ, ಭೂಮಿ ಮತ್ತು ಹಕ್ಕುಗಳಿಗಾಗಿ ಹೋರಾಟ
105 to 116
19ನೆಯ ಶತಮಾನದಾದ್ಯಂತ ಸ್ಫೋಟಗೊಂಡು 20ನೇಯ ಶತಮಾನದ ಮೊದಲ ಭಾಗವು ಉಗ್ರ ಹೋರಾಟದೊಂದಿಗೆ ಅಳಿದುಹೋದವು. ಕೇರಳದ ಮಲಬಾರ್ ಪ್ರದೇಶದಲ್ಲಿ ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯ ವಿರುದ್ಧ ಪ್ರತಿರೋಧವಾಗಿ ಪ್ರಾರಂಭವಾಯಿತು. ಮಲೆಯಾಳಿ ಸಮಾಜದ ಜೊತೆಗಿನ ಅರಬರ ವ್ಯಾಪಾರೀ ಸಂಬಂಧದ ಚರಿತ್ರೆ ಸುಮಾರು 9ನೇ ಶತಮಾನದಷ್ಟು ಹಿಂದಿನಿಂದ ಪ್ರಾರಂಭವಾಗುತ್ತದೆ. ಕರಾವಳಿ ಪ್ರಾಂತ್ಯದಲ್ಲಿದ್ದ ಹಿಂದೂ ಮುಖಂಡರುಗಳಿಗೆ ಶ್ರೀಮಂತ ಅರಬ ವ್ಯಾಪಾರಿಗಳ ಬೆಂಬಲ ಯಾವಾಗಲೂ ಬೇಕಾಗುತ್ತಿತ್ತು. ಮಲಬಾರಿನಲ್ಲೇ ಕ್ರಮೇಣ ಉಳಿದುಕೊಂಡ ಅರಬ ವ್ಯಾಪಾರಿಗಳು ಪ್ರಮುಖವಾಗಿ ನಾಯರ್ ಮತ್ತು ತಿಯಾ ಜಾತಿಯ ಹೆಂಗಸರನ್ನೇ ಮದುವೆಯಾದರು. ಕಾಲಾಂತರದಲ್ಲಿ ಇವರೇ ಮಾಪಿಳ್ಳೆಗಳಾದರು. ಮತಾಂತರಗೊಂಡು ಹೊಸದಾಗಿ ಸೇರ್ಪಡೆಗೊಳ್ಳುವ ಪ್ರತಿಯೊಬ್ಬ ಸದಸ್ಯನನ್ನು ಮಾಪಿಳ್ಳೆಗಳು ಸಂತೋಷದಿಂದ ಸ್ವೀಕರಿಸಿದರೂ ಮೇಲ್ವಾತಿಯ ಹಿಂದೂಗಳು ಮಾತ್ರ ಅವರನ್ನು ಅಸ್ಪೃಶ್ಯರಂತೆ ನಡೆಸಿಕೊಳ್ಳುತ್ತಿದ್ದರು. ತಮ್ಮ ಆರ್ಥಿಕ ಹಿತಾಸಕ್ತಿಗಳನ್ನು ಬಲಪಡಿಸಿಕೊಳ್ಳಲು ಕೆಲವು ಮಾಪಿಳ್ಳೆ ರೈತರು 1785ರಲ್ಲಿ ಭೂಕಂದಾಯ ಹೇರಿಕೆಯನ್ನು ಪ್ರತಿಭಟಿಸಿ ಟಿಪ್ಪುವಿನ ವಿರುದ್ಧದ ದಂಗೆಯಾಗಿರುವುದು. ಬ್ರಿಟೀಷರು ಮಲಬಾರ್ ಪ್ರಾಂತದಲ್ಲಿದ್ದ ಭೂಸ್ವಾಮ್ಯದ ಹಕ್ಕುಗಳನ್ನು ಅರ್ಥೈಸಿಕೊಂಡ ರೀತಿ ಮತ್ತು ಹೊಸ ಕಾನೂನುಗಳನ್ನು ಜಾರಿಗೊಳಿಸಿದ ಕ್ರಮಗಳೇ ಮಾಪಿಳ್ಳೆಗಳು ದಂಗೆಯೇಳಲು ಕಾರಣವಾಗಿವೆ. ಹಕ್ಕುಗಳ ಪುನರ್ ಸ್ಥಾಪನೆಯ ಈ ಬ್ರಿಟಿಷ್ ನೀತಿಯನ್ನು ʼಒಳ್ಳೆಯ ಸರಕಾರದ ಉನ್ನತ ಸಾಧನೆ ಹಾಗೂ ಉತ್ತಮ ಭವಿಷ್ಯಕ್ಕೆ ಭರವಸೆ’ ಎಂಬುದಾಗಿ ಪ್ರಚಾರ ಮಾಡಲಾಯಿತು. ಸಾಮಾಜಿಕ ವ್ಯವಸ್ಥೆಗೆ ಖಿಲಾಫತ್ ಎನ್ನುವ ಶಬ್ದ ಆಗ ಅನ್ವಯವಾದ ನೆಲೆಯಲ್ಲಿ ಭಾವನಾತ್ಮಕ, ಆವೇಶಯುಕ್ತ ಮತ್ತು ಕ್ರಾಂತಿಕಾರೀಯಾಗಿತ್ತು. ಮಲಬಾರ್‌ನಲ್ಲಿ ದೀರ್ಘಕಾಲೀನ ರೈತ ಸಂಘರ್ಷಗಳು ನಡೀತಿದ್ದರೂ ಕೂಡಾ, ದಮನಿತ ಮೋಪ್ಲಾ ರೈತರು ಪ್ರವಾದಿಯ ಮನವಿಯ ಹೊರತು ಬಂಡೇಳುವುದು ಅಸಾಧ್ಯವಾಗಿತ್ತು.
ತತ್ವಪದಗಳ ಪ್ರಾಯೋಗಿಕ ನೆಲೆಗಳು
117 to 123
ಕನ್ನಡ ಸಾಹಿತ್ಯದಲ್ಲಿ ತತ್ವಪದ ಸಾಹಿತ್ಯವು ಒಂದಾಗಿದ್ದು, 18 ಮತ್ತು 19 ನೇ ಶತಮಾನದ ಕಾಲಾವಧಿಯನ್ನು ʼತತ್ವಪದ ಸಾಹಿತ್ಯದ ಸುವರ್ಣಯುಗ’ವೆಂದು ಕರೆಯಲಾಗಿದೆ. ನಿಜಗುಣ ಶಿವಯೋಗಿ, ಸರ್ಪಭೂಷಣ, ಸಂತ ಶಿಶುನಾಳ ಶರೀಫ, ಕಡಕೋಳ ಮಡಿವಾಳಪ್ಪನಂತವರು ತತ್ವಪದ ಸಾಹಿತ್ಯವನ್ನು ಬೆಳಸಿಕೊಂಡು ಬಂದಿದ್ದಾರೆ. ಇದೊಂದು ನಡೆ-ನುಡಿಯ ಪರಂಪರೆಯಾಗಿದೆ. ಇಲ್ಲಿನ ತತ್ವಪದಗಳು ಏಕತಾರಿ, ಭಜನೆ, ಜಾನಪದ ಹಾಗೂ ಸಂಗೀತದ ಮಾದರಿಯಲ್ಲಿ ಹಾರ್ಮೋನಿಯಂ, ತಾಳ, ಡಗ್ಗಾ, ತಬಲ, ದಮ್ಮಡಿ ಮುಂತಾದ ವಾದ್ಯ ಪರಿಕರಗಳಿಂದ ತತ್ವಪದಗಳು ಪ್ರಯೋಗಗೊಳ್ಳುತ್ತಾ ಬಂದಿವೆ. ಪ್ರಸ್ತುತ ಲೇಖನದಲ್ಲಿ ತತ್ವಪದಗಳು ಏಕತಾರಿ ಹಾಡು, ಭಜನಾಪದಗಳಾಗಿ ವೃತ್ತಿ ಕಲಾವಿದರು ಮತ್ತು ಹವ್ಯಾಸಿ ಕಲಾವಿದರ ಮೂಲಕ ಪ್ರಯೋಗಗೊಳ್ಳುವ ಬಗೆಯ ಕುರಿತಾಗಿ ಪ್ರಸ್ತುತಪಡಿಸಲಾಗಿದೆ.
ಸರ್ವಜ್ಞನ ವಚನಗಳಲ್ಲಿ ಕೃಷಿವಿಜ್ಞಾನ
124 to 132
ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣ ಸನ್ನಿವೇಶದ ಪ್ರಭಾವದಿಂದಾಗಿ ಗ್ರಾಮೀಣ ಜನತೆ ಮತ್ತು ಯುವಕರು ಕೃಷಿಯಿಂದ ವಿಮುಖರಾಗಿ ನಗರ ಬದುಕಿಗೆ ಆಕರ್ಷಿತರಾಗಿ ನಗರಗಳನ್ನು ಸೇರುತ್ತಿದ್ದಾರೆ. ಇನ್ನೂ ಕೆಲ ಪ್ರಯೋಗಶೀಲ ಯುವ ಮನಸ್ಸುಗಳು, ಇಂಜಿನಿಯರ್‌ಗಳು ಕೃಷಿಗೆ ಆಕರ್ಷಿತರಾಗಿ ಹಳ್ಳಿಗಳಿಗೆ ಬಂದು ನೆಲೆಸಿ, ಕೃಷಿಯಲ್ಲಿ ಅನೇಕ ಪ್ರಯೋಗಗಳನ್ನು ನಡೆಸಿ ಯಶಸ್ವಿಯಾಗುತ್ತಿದ್ದಾರೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ನಮ್ಮ ಯುವಕರು ಮತ್ತು ಗ್ರಾಮೀಣ ಜನತೆ ಹೆಜ್ಜೆಹಾಕುತ್ತಿದ್ದಾರೆ. ನಮ್ಮ ಹಳ್ಳಿಗಳಲ್ಲಿ ಬಹುಪಾಲು ಕೂಲಿಕಾರ್ಮಿಕರಿಲ್ಲದೆ, ಕೆಲ ಕುಟುಂಬದಲ್ಲಿ ಸದಸ್ಯರೂ ಇಲ್ಲದೆ ಇಂದು ನಮ್ಮ ಹಳ್ಳಿಗಳು ವೃದ್ಧರ ಆಶ್ರಯ ತಾಣಗಳಾಗಿ ಮಾರ್ಪಡುತ್ತಿವೆ. ಇಂದು ಕೃಷಿಯನ್ನು ಉಳಿಸಿಕೊಳ್ಳುವುದು ನಮ್ಮ ಹಳ್ಳಿಗಳ ಅಸ್ತಿತ್ವದ ಪ್ರಶ್ನೆಯಾಗಿ ಕಾಡುತ್ತಿದೆ. ನಮ್ಮ ಜನಪದರ, ವಚನಕಾರರ ದೇಸಿ ಕೃಷಿ ಜ್ಞಾನ ಮತ್ತು ಪರಂಪರೆಯ ಕೃಷಿ ಇಂದಿಗೂ ನಮಗೆ ಪ್ರಜ್ಞೆಯಾಗಿ ಮತ್ತೆ ಮತ್ತೆ ಕಾಡುತ್ತಿದೆ.
ನಾಡಿನೆಲ್ಲೆಡೆ ಏಕ ಬೆಳೆ ಪದ್ಧತಿ ಅನುಸರಿಸುತ್ತಿರುವುದು, ಹೆಚ್ಚಾಗಿ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಾ, ಲಾಭದಾಯಕ ಬೆಳೆಗಳನ್ನಷ್ಟೆ ಬೆಳೆದು ಹೆಚ್ಚಿನ ಆದಾಯವನ್ನು ಗಳಿಸಬೇಕೆಂಬ ಆಸೆಯು ನಮ್ಮ ನೆಲದ ಆಹಾರ ಸಂಸ್ಕೃತಿಯ ಬೆಳೆಗಳು ಮರೆಯಾಗುವಂತೆ ಮಾಡುತ್ತಿದೆ. ನಮ್ಮ ಜನಪದರು ಕೃಷಿಯನ್ನು ಎಂದೂ ಲಾಭದಾಯಕವಾಗಿ ನೋಡಿದವರಲ್ಲ. ಕೃಷಿಯನ್ನು ನಮ್ಮ ಆಹಾರದ ಭಾಗವಾಗಿ, ಸಂಸ್ಕೃತಿಯ ಭಾಗವಾಗಿ ನೋಡಿದವರು. ಇಂದು ಅಧಿಕ ಇಳುವರಿ ಪಡೆಯಲು ಬೆಳೆಗಳಿಗೆ ಹೆಚ್ಚು ಹೆಚ್ಚು ರಾಸಾಯನಿಕ ಗೊಬ್ಬರಗಳನ್ನು, ಕೀಟ-ಪೀಡೆನಾಶಕಗಳನ್ನು ಬಳಸಿಕೊಂಡು ನೆಲಜಲವನ್ನು ಕಲುಷಿತಗೊಳಿಸಲಾಗುತ್ತಿದೆ. ಇಂದು ಯಂತ್ರ-ತಂತ್ರಜ್ಞಾನಗಳನ್ನು ಬಳಸಿಕೊಂಡು ಕೃಷಿಯಲ್ಲಿ ಪ್ರಗತಿಯನ್ನು ಸಾಧಿಸಲಾಗುತ್ತಿದೆ. ಕೃಷಿಗೆ ಇಂತಹ ಆಧುನಿಕತೆ ಬೇಕು. ಆದರೆ ಇದನ್ನು ಎಷ್ಟು ಬೇಕೊ ಅಷ್ಟನ್ನು ಮಾತ್ರ ಬಳಕೆ ಮಾಡಿಕೊಂಡರೆ ಅನುಕೂಲವಾಗುತ್ತದೆ. ನಮ್ಮ ಹಳ್ಳಿಗಳಲ್ಲಿ ಅನೇಕ ಪ್ರಗತಿಪರ ರೈತರು, ಯುವ ರೈತರು ಇಂದಿಗೂ ದುಡಿಮೆಗೆ ಬದ್ದರಾಗಿ ನಮ್ಮ ಹಳ್ಳಿಗಳಲ್ಲಿ ದುಡಿಯುತ್ತಿರುವುದರಿಂದ, ನಮ್ಮ ರೈತರು ದೇಶಕ್ಕೆ ಅನ್ನ ಕೊಡುವ ಅನ್ನದಾತರಾಗಿದ್ದಾರೆ.
ಭಾರತೀಯ ಸಂಸ್ಕೃತಿಯಲ್ಲಿ ಮಣ್ಣಿನ ಹಬ್ಬಗಳ ಮಹತ್ವ
133 to 140
ಭರತಭೂಮಿಯನ್ನು ಹಬ್ಬಗಳ ನಾಡು ಎಂದು ಕರೆಯಬಹುದಾಗಿದೆ. ಗ್ರಾಮೀಣ ಹಬ್ಬಗಳ ರಾಷ್ಟ್ರವಾಗಿರುವುದರಿಂದ ಋತುಮಾನ, ಸುಗ್ಗಿ, ಮಳೆ ಮತ್ತು ಹುಣ್ಣಿಮೆಯಂತಹ ದಿನಗಳಲ್ಲಿ ಹಬ್ಬಗಳನ್ನು ಹರುಷದಿಂದ ಆಚರಿಸುವ ಸಂಪ್ರದಾಯ ಇನ್ನೂ ಜೀವಂತವಾಗಿದೆ. ವಿಭಿನ್ನ ಸಂಸ್ಕೃತಿ, ಭಾಷೆ ಮತ್ತು ಧರ್ಮಗಳ ಸಮ್ಮಿಲನಗೊಂಡಿರುವ ಈ ನಾಡಿನಲ್ಲಿ ಕಾಲಮಾನಕ್ಕನುಸಾರ ಇಲ್ಲಿಯ ಜನರು ಮಣ್ಣನ್ನೇ ನಂಬಿ, ಮಣ್ಣೇ ದೇವರೆಂದು ಬಗೆದು ದೈವತ್ವದ ಭಾವದಲ್ಲಿ ಬದುಕುತ್ತಿದ್ದಾರೆ. ಮಣ್ಣಿನೊಂದಿಗೆ ಅವಿನಾಭಾವ ಬಾಂಧವ್ಯ ಹೊಂದಿದಂತಹ ನಮ್ಮ ಜನಪದರು ಕಾರಹುಣ್ಣಿಮೆ, ಗುಳ್ಳವ್ವನ ಪೂಜೆ, ನಾಗರಪಂಚಮಿ, ಗಣೇಶ ಚವತಿ, ಜೋಕುಮಾರ, ವಿಜಯದಶಮಿ, ಶಿಗವ್ವ-ಗೌರವ್ವ, ದೀಪಾವಳಿ, ಭಾರತ ಹುಣ್ಣಿಮೆ, ಶಿವರಾತ್ರಿ, ಹೋಳಿ ಹುಣ್ಣಿಮೆಯಂತಹ ಹಬ್ಬಗಳನ್ನು ಆಚರಣೆಗೈಯುತ್ತಾ ಬಂದಿರುವ ನಾಡಿನ ಭವ್ಯ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರಸ್ತುತ ಲೇಖನ ಪ್ರಚುರಪಡಿಸುತ್ತದೆ.
ಕನ್ನಡ ಸಾಹಿತ್ಯದಲ್ಲಿ ಪುರಾಣೀಕರಣ: ಒಂದು ವಿಮರ್ಶಾತ್ಮಕ ವಿಶ್ಲೇಷಣೆ
141 to 147
ಪುರಾಣೀಕರಣ (Mythification) ಎಂದರೆ ಐತಿಹಾಸಿಕ ಘಟನೆಗಳು, ಪಾತ್ರಗಳು ಅಥವಾ ಕಥೆಗಳನ್ನು ಪುರಾಣಗಳಾಗಿ ರೂಪಾಂತರಿಸುವ ಪ್ರಕ್ರಿಯೆ. ಕನ್ನಡ ಸಾಹಿತ್ಯದಲ್ಲಿ ಪುರಾಣೀಕರಣವು ಒಂದು ಪ್ರಬಲ ಸಾಹಿತ್ಯಿಕ ತಂತ್ರವಾಗಿದೆ, ಇದರ ಮೂಲಕ ಸಾಹಿತಿಗಳು ಸಾಂಪ್ರದಾಯಿಕ ಪುರಾಣಗಳನ್ನು ಪುನರ್ವ್ಯಾಖ್ಯಾನಿಸಿ, ಸಮಕಾಲೀನ ಸಾಮಾಜಿಕ-ರಾಜಕೀಯ, ತಾತ್ತ್ವಿಕ ಮತ್ತು ಸಾಂಸ್ಕೃತಿಕ ಪ್ರಶ್ನೆಗಳನ್ನು ಎತ್ತಿಹಿಡಿಯುತ್ತಾರೆ. ಈ ಲೇಖನವು ಕನ್ನಡ ಸಾಹಿತ್ಯದಲ್ಲಿ ಪುರಾಣೀಕರಣದ ವಿಕಾಸವನ್ನು ಪರಿಶೀಲಿಸುತ್ತದೆ.
ಮೊದಲನೇ ತಲೆಮಾರಿನ ಸವಾಲುಗಳು: ಕರೋನಾ ಹಿನ್ನೆಲೆಯಲ್ಲಿ
148 to 154
ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಪ್ರಮುಖ ಆಶಯವೇ ಅಸಮಾನತೆ ನಿವಾರಿಸಿ ಎಲ್ಲರಿಗೂ ಸಾಮಾಜಿಕ ಆರ್ಥಿಕ ರಾಜಕೀಯ ಪ್ರಕ್ರಿಯೆಗಳಲ್ಲಿ ಸಮಾನ ಅವಕಾಶ ಒದಗಿಸುವುದು. ಹೀಗಾಗಿ ಕರೋನಾ ತಂದ ಬಿಕ್ಕಟ್ಟುಗಳನ್ನು ವಿವಿದ ಆಯಾಮಗಳನ್ನು ಸಾಮಾಜಿಕ ನ್ಯಾಯ ಪರಿಕಲ್ಪನೆಯಲ್ಲಿ ಚರ್ಚಿಸುವ ಅಗತ್ಯವಿದೆ. ಕರೋನಾ ಸನ್ನಿವೇಶದಲ್ಲಿ ಶ್ರೀಸಾಮಾನ್ಯರ ಹಕ್ಕುಗಳನ್ನು ಮರೆಮಾಚಲಾಗುತ್ತಿದೆ. ಈ ಸಾಂಕ್ರಾಮಿಕವು ಹರಡುವಲ್ಲಿ ಯಾವುದೇ ಆರ್ಥಿಕ ತಾರತಮ್ಯ ಮಾಡುತ್ತಿಲ್ಲ ಆದರೆ, ಇದರಿಂದ ಮುಕ್ತಿ ಪಡೆಯಲು ದೊರೆಯುವ ಆರೋಗ್ಯ ಸೌಲಭ್ಯಗಳು ಶ್ರೇಣಿಕೃತವಾಗಿವೆ. ಈ ಮೂಲಕ ಸಮ ಸಮಾಜವನ್ನು ನಿರ್ಮಾಣ ಮಾಡಲು ಬೇಕಾಗುವ ಪರಿಭಾಷೆಗಳ ಮುಖಾಂತರ ಅರ್ಥೈಸಿಕೊಳ್ಳುವ ಜರೂರು ಇದೆ. ಕೇಂದ್ರದಿಂದ ಅಂಚೆಗೆ ತಳ್ಳಲ್ಪಟ್ಟ ಶೋಷಿತ ಸಮುದಾಯಗಳ ಸವಾಲುಗಳನ್ನು ಮರು ಚಿಂತನೆಗೆ ಒಳಪಡಿಸಲಾಗಿದೆ.
ಶತಕಗೈದ ತಡಹಾಳ ಸಹಕಾರಿ ಸಂಘ
155 to 158
ಜನರ ಸೇವೆಯೇ ಜನಾರ್ಧನನ ಸೇವೆ ಎಂಬಂತೆ ಪ್ರಾಚೀನ ಕಾಲದಿಂದಲೂ ಭಾರತ ಸೇವೆಯಲ್ಲಿ ಎತ್ತಿದ ಕೈ. ಅಂತೆಯೇ ಕರ್ನಾಟಕದಲ್ಲಿಯೂ ಕೂಡಾ ಸಹಕಾರ ಸಂಘಗಳು ಸ್ವಾತಂತ್ರ್ಯಪೂರ್ವದಿಂದಲೂ ಸೇವೆಗೆ ಸಿದ್ಧವಾಗಿವೆ. ಅನೇಕ ಬಡ ಮತ್ತು ಮಧ್ಯಮ ವರ್ಗದ ಜನರು ಹಾಗೂ ಅಂಚೀಕರಣಗೊಂಡ ಸಮೂಹಗಳು ಇದರ ಲಾಭ ಪಡೆದುಕೊಳ್ಳುತ್ತಿವೆ. ಗದಗ ಜಿಲ್ಲೆಯ ಕಣಗಿನಹಾಳದಲ್ಲಿ ಇಡೀ ಭಾರತದಲ್ಲಿಯೇ ಪ್ರಥಮ ಕೃಷಿಪತ್ತಿನ ಸಹಕಾರಿ ಸಂಘ ಸ್ಥಾಪನೆಯಾಯಿತು. ರೈತರ ಏಳಿಗೆ ಬಯಸಲು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ತಡಹಾಳ ಗ್ರಾಮದಲ್ಲಿ 1922ರಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಸ್ಥಾಪನೆಯಾಯಿತು. ಇಂದು ಅನೇಕ ರೀತಿಯ ಆರ್ಥಿಕ ಸಾಮಾಜಿಕ ಸರಕಾರಿ ಯೋಜನೆಗಳ ಸಹಾಯವನ್ನು ಗ್ರಾಮೀಣ ಜನರಿಗೆ ನೀಡುವಲ್ಲಿ ಯಶಸ್ವಿಯಾದ ಕೃಷಿಪತ್ತಿನ ಸಹಕಾರಿ ಸಂಘದ ಕುರಿತಾದ ಮಾಹಿತಿ ಪ್ರಸ್ತುತ ಲೇಖನದಲ್ಲಿದೆ.
Artificial Intelligence in Women Empowerment
159 to 167
In recent years, Artificial Intelligence (AI) has emerged as a powerful tool with the potential to transform various aspects of society. In India, where women have historically faced gender disparities and social challenges, AI has the potential to play a significant role in promoting women’s empowerment. This article explores the background and impact of AI on women empowerment in India. India, as a diverse and culturally rich country, has made significant strides towards women empowerment. However, gender inequality persists in various domains, including education, employment, and healthcare. Discriminatory social norms, limited access to resources, and lack of opportunities have hindered the progress of women across the nation. The role of AI in women empowerment is very important.AI is study the impact of AI on women empowerment. To assess the potential of AI for women empowerment. To examine the gender biases in AI algorithms. To explore the challenges and opportunities for future growth.