ತತ್ವ ಪದಗಳು ಸಮಾಜಕ್ಕೆ ಕನ್ನಡಿ; ಭವಿಷ್ಯಕ್ಕೆ ಮುನ್ನುಡಿ

Main Article Content

ಮಾಧವ ಎಂ.ಕೆ.

Abstract

ತತ್ವಪದಗಳು ತಾತ್ವಿಕ ಬದುಕಿನ ಅನುಭವಗಳ ಸಾರಸಂಗ್ರಹವಾಗಿದೆ. ತತ್ವಪದಗಳು ಭಾರತೀಯ ಸಂಸ್ಕೃತಿಗೆ ಒಂದು ಕನ್ನಡಿಯಾಗಿ ನೈತಿಕ ಮೌಲ್ಯಗಳ ಪ್ರತಿಬಿಂಬವಾಗಿ ಗೋಚರಿಸುತ್ತವೆ. ತತ್ವಪದ ಎಂಬ ಸಾಹಿತ್ಯ ಪ್ರಕಾರವು ಜನರ ವರ್ಗ, ವರ್ಣ, ಜಾತಿ, ಲಿಂಗ ಭೇದಗಳನ್ನು ಮೀರಿ ನಿಂತ ಸಮನ್ವಯದ ಬದುಕಿಗೆ ಸಂದೇಶ ಸಾರುವ ಮಹತ್ವದ ಸಾಹಿತ್ಯ ಪ್ರಕಾರವಾಗಿದೆ ಎಂದು ತಿಳಿಯಬಹುದು.
ತತ್ವಪದಗಳು ಸಮಾಜದ ಲೋಪದೋಷಗಳ ಮೇಲೆ ಕನ್ನಡಿ ಹಿಡಿಯುವ ಕಾರ್ಯವನ್ನು ಮಾಡುವುದಲ್ಲದೆ ನೈತಿಕ ಮತ್ತು ಮಾನವಿಕ ನೆಲೆಯಲ್ಲಿ ಸಮಾಜವನ್ನು ವಿಂಗಡಿಸದೆ ಏಕತ್ರಗೊಳಿಸಿ ಮಾನವ ಸಂಬಂಧವನ್ನು ಛಿದ್ರಗೊಳ್ಳದಂತೆ ಭದ್ರಗೊಳಿಸುವ ನಿಟ್ಟಿನಲ್ಲಿ ಪ್ರೇರಣೆ ಹಾಗೂ ಶಕ್ತಿ ತುಂಬುವಲ್ಲಿ ಸಹಕರಿಸುತ್ತವೆ.
ಭಾಷೆ ಸಂಸ್ಕೃತಿ ಪರಂಪರೆಯ ವಾಹಕ. ಈ ರಚನೆಗಳು ಮೇಲುನೋಟಕ್ಕೆ ‘ಕಾವ್ಯಾತ್ಮಕತೆ’ಯನ್ನು ಹೊಂದಿದಂತೆ ಕಾಣುವುದಿಲ್ಲ. ಈ ರಚನೆಯ ಶಾಬ್ದಿಕ ಮಾಧ್ಯಮವು ಗಾಯನದೊಂದಿಗೆ ಹೊಸ ಸಂವಿಧಾನವನ್ನು ಪಡೆದುಕೊಳ್ಳುತ್ತದೆ. ಸಾಮಾನ್ಯ ಅನುಭವಗಳಿಂದ ಬೇರೆಯಾದ ಅನುಭವಗಳನ್ನು ಬೇರೆಯಾದ ಅನುಭವಗಳನ್ನು ನಾವು ಪಡೆಯುವುದು ಭಾಷೆಯ ಮಾಧ್ಯಮದಿಂದ ಮಾತ್ರ ಸಾಧ್ಯ. ಆಗ ಭಾಷೆಯ ಸ್ವರೂಪ ಸಾಮಾನ್ಯ ಸ್ವರೂಪದ್ದಾಗಿರದೆ ವಿಶಿಷ್ಟವಾಗುತ್ತದೆ. ಸಾಮಾನ್ಯ ಭಾಷೆಯಿಂದ ಬೇರೆಯಾದ ಭಾಷಾಪ್ರಯೋಗದ ಕೌಶಲ ಒಂದು ಹಂತದ ಕಾವ್ಯಾತ್ಮಕತೆಯನ್ನು ಖಚಿತಗೊಳಿಸುತ್ತದೆ. ಅನುಭವದ ಕಥನಾತ್ಮಕವಾದ ಅಂಶವನ್ನು ಭಾಷೆಯ ಮತ್ತು ಛಂದೋವಿಧಾನದ ಲಕ್ಷಣದೊಂದಿಗೆ ಹೊಂದಿಸುವ ಅಭಿನ್ನವಾದ ಸಂಬಂಧವನ್ನು ಈ ಗೀತೆಗಳಲ್ಲಿ ಕಾಣುತ್ತೇವೆ. ಆದ್ದರಿಂದ ಇಲ್ಲಿ ಬಳಕೆಯಾಗುವ ಭಾಷಿಕ ವಿನ್ಯಾಸವು ಬಹುಮುಖಿಯಾದುದು.
ತತ್ವಪದಗಳು ಜನಸಾಮಾನ್ಯರಿಗೆ ಬದುಕಿನ ಬಗ್ಗೆ ಅರಿವು; ಆಧ್ಯಾತ್ಮಿಕ ಅರ್ಥ ನೀಡುತ್ತವೆ. ಅವುಗಳು ಜನರನ್ನು ನೈತಿಕ ಮಾರ್ಗದಲ್ಲಿ ನಡೆಯಲು ಬಲ ನೀಡುತ್ತವೆ. ತತ್ವಪದಕಾರರನ್ನು ಬಂಡಾಯ ಮನೋಧರ್ಮದ ಸ್ಥಾಪಕರೆಂದು ಭಾವಿಸುವುದುಂಟು. ಅವುಗಳಲ್ಲಿ ಮೌಲಿಕ ಅಂಶಗಳು ತುಂಬಿಕೊಂಡಿರುವುದು ನಮಗೆ ಗೋಚರಿಸುತ್ತದೆ. 17ನೇ ಶತಮಾನದಿಂದ ಕಂಡು ಬರುವ ತತ್ವಪದಕಾರರು ಆ ಹಿಂದಿನ ತತ್ವಪದಕಾರರಿಗಿಂತ ಭಿನ್ನವಾಗಿರುವುದನ್ನು ಗುರುತಿಸಬಹುದು.
ತತ್ವಪದಗಳು ಸಮಾಜದ ಅಂಕುಡೊಂಕುಗಳಿಗೆ ಕನ್ನಡಿಯಾಗಿ ಸದ್ಭವಿಷ್ಯಕ್ಕೆ ಮುನ್ನುಡಿ ಬರೆಯುವಲ್ಲಿ ಪ್ರಭಾವ ಬೀರಿರುವುದನ್ನು ನಾವು ಗಮನಿಸಬಹುದಾಗಿದೆ. ತತ್ವ ಎಂದರೆ ಅದು ಲೌಕಿಕ ಜಗತ್ತಿನ ವಸ್ತುವಿಷಯಗಳನ್ನು ಪಾರಲೌಕಿಕ ಮತ್ತು ಸಾರಸತ್ವದ ಸಾರ್ವಕಾಲಿಕ ನೆಲೆಯಲ್ಲಿ ಜನಸಾಮಾನ್ಯರಲ್ಲೂ ಜಾಗೃತಿ, ವಿವೇಕ, ಆಧ್ಯಾತ್ಮಿಕ ಚಿಂತನೆ ಒಟ್ಟಿನಲ್ಲಿ ಲೋಕಹಿತಕಾರಿ ಜನಸಮುದಾಯವನ್ನು ಸೃಷ್ಟಿಸುವ ಹಾಗೂ ಅದಕ್ಕಾಗಿ ಪ್ರೇರಣೆ ನೀಡುವ ಮಹತ್ಕಾರ್ಯವನ್ನು ನಿರ್ವಹಿಸುತ್ತದೆ.

Article Details

Section

Research Articles

Author Biography

ಮಾಧವ ಎಂ.ಕೆ.

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು.

How to Cite

ಮಾಧವ ಎಂ.ಕೆ. (2025). ತತ್ವ ಪದಗಳು ಸಮಾಜಕ್ಕೆ ಕನ್ನಡಿ; ಭವಿಷ್ಯಕ್ಕೆ ಮುನ್ನುಡಿ. ಅಕ್ಷರಸೂರ್ಯ (AKSHARASURYA), 7(03), 120 to 129. https://aksharasurya.com/index.php/latest/article/view/1195

References

ಜಗದೀಶ ಕೆರೆನಳ್ಳಿ, (2009), ತತ್ವಪದ ಅಧ್ಯಯನಗಳು: ವಿಮರ್ಶಾತ್ಮಕ ಸಮೀಕ್ಷೆ, ಪಿಎಚ್.ಡಿ. ಮಹಾಪ್ರಬಂಧ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ.

ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿ, (1997), ಗುರುಶಿಷ್ಯರ ತತ್ವಪದಗಳು, ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿ, ಬೆಂಗಳೂರು.

Most read articles by the same author(s)