ವಚನಗಳಲ್ಲಿ ಅಂತರಂಗ – ಬಹಿರಂಗ ಶುದ್ಧಿ
Abstract
೧೨ನೇ ಶತಮಾನದಲ್ಲಿ ಶರಣರಿಂದ ನಡೆದ ಚಳುವಳಿ ವಿಶಾಲ ವ್ಯಾಪ್ತಿಯನ್ನೊಳಗೊಂಡಿತ್ತು. ಅದು ಜಾತಿವಿನಾಶ, ಸ್ತ್ರೀ ಸಮಾನತೆ, ಸಹಭೋಜನ, ಸಹೋದರತ್ವ, ಕಾಯಕದ ಮಹತ್ವ, ದಾಸೋಹ ಹೀಗೆ ನೂರಾರು ರೀತಿಯ ಮಜಲುಗಳನ್ನು ಸೃಷ್ಟಿಸಿಕೊಂಡು ಆ ಮೂಲಕ ಮನುಷ್ಯರೆಲ್ಲರನ್ನೂ ಸಮಾನವೇದಿಕೆಗೆ ತರುವ ಪರಿಕಲ್ಪನೆ ಬಸವಾದಿ ಶರಣರದ್ದು. ಶತಮಾನಗಳಿಂದ ಬೇರೂರಿದ್ದ ಮೌಢ್ಯಗಳನ್ನು ಹೋಗಾಲಾಡಿಸಿ ಜನರನ್ನು ವೈಚಾರಿಕ ಮಾರ್ಗದೆಡೆಗೆ ತರುವುದು ಅವರ ಪ್ರಧಾನ ಉದ್ದೇಶವಾಗಿತ್ತು.
ವಚನಗಳಲ್ಲಿ ಸತಿ-ಪತಿ ಭಾವ, ವಚನಗಳಲ್ಲಿ ಗುರು-ಲಿಂಗ-ಜಂಗಮ, ವಚನಗಳಲ್ಲಿ ನಡೆನುಡಿ ಸಿದ್ಧಾಂತ, ವಚನಗಳಲ್ಲಿ ಭಕ್ತಿ, ವಚನಗಳಲ್ಲಿ ಶರಣ, ವಚನಗಳಲ್ಲಿ ಪಂಚಾಚಾರ, ವಚನಗಳಲ್ಲಿ ಅಷ್ಟಾವರಣ, ವಚನಗಳಲ್ಲಿ ಸಾಮಾಜಿಕ ಸಮಾನತೆ, ವಚನಗಳಲ್ಲಿ ಜಾತಿವಿನಾಶ ಹೀಗೆ ಹತ್ತು ಹಲವು ಸಂಗತಿಗಳನ್ನು ಇರಿಸಿಕೊಂಡು ವಚನಗಳನ್ನು ವಿಶ್ಲೇಷಣೆಗೆ ಒಳಗುಮಾಡಬಹುದು.
ವಚನ ಎಂದರೆ ಮಾತು, ಭಾಷೆ ಎಂದರ್ಥ. ಇದರಲ್ಲಿ ನಡೆನುಡಿಗೆ ಪ್ರಾಧಾನ್ಯತೆ ಇದೆ. ಯಾವುದೇ ಮನುಷ್ಯನು ಅಂತರಂಗ ಮತ್ತು ಬಹಿರಂಗವೆರಡರಲ್ಲಿಯೂ ಏಕತಾನತೆಯಿಂದ ನಡೆದುಕೊಳ್ಳಬೇಕೆಂಬುದನ್ನು ವಚನಗಳ ಹಿನ್ನೆಲೆಯಿಂದ ಪ್ರತಿಪಾದಿಸಬಹುದು. ಒಳಹೊರಗೆರಡರಲ್ಲಿಯೂ ಪರಿಶುದ್ಧತೆಯನ್ನು ಕಾಯ್ದುಕೊಳ್ಳಬೇಕಾದ್ದು ಶರಣನ ಅದ್ಯ ಕರ್ತವ್ಯ ಎಂದೇ ಬಸವಾದಿ ಶರಣರು ತಿಳಿಸಿದ್ದಾರೆ.
ಅಂತರಂಗ-ಬಹಿರಂಗ ಎಂಬ ಪದವು ೬೧ ಶರಣರ ೩೪೨ ವಚನಗಳಲ್ಲಿ ೪೧೬ ಕಡೆ ವಚನಗಳಲ್ಲಿ ಬಳಕೆಯಾಗಿದೆ. ಈ ವಚನಗಳು ಮಾತ್ರವಲ್ಲದೇ ಇನ್ನುಳಿದ ಬಹುತೇಕ ವಚನಗಳು ಅಂತರಂಗ ಬಹಿರಂಗ ಶುದ್ಧಿಯ ಬಗ್ಗೆ ಚರ್ಚಿಸಿವೆ ಎಂಬುದನ್ನೂ ನಾವಿಲ್ಲಿ ಮನಗಾಣಬೇಕಿದೆ. ವಚನಗಳ ಹಿನ್ನೆಲೆಯಲ್ಲಿಯೇ ಈ ವಿಚಾರವನ್ನು ಇಲ್ಲಿ ಶೋಧನಾತ್ಮಕವಾಗಿ ಚರ್ಚಿಸಲಾಗುವುದು.