Table of Contents
Research Articles
ಚಂದ್ರಕಾಂತ ಕುಸನೂರರ ಕಥೆಗಳಲ್ಲಿ ಸಾಮಾಜಿಕ ಮೌಲ್ಯಗಳ ಪರಿಶೋಧ
01 to 05
ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಕಥೆಗಳಿಗೆ ತನ್ನದೇ ಆದ ವಾಸ್ತವಿಕ ಚಿತ್ರಣಗಳಿವೆ. ಈ ಚಿತ್ರಣಗಳು ಸಾಂಸ್ಕೃತಿಕ ಲೋಕದ ತಲ್ಲಣಗಳನ್ನು ವಿವರಿಸುತ್ತವೆ. ಸಮುದಾಯದಲ್ಲಿರುವ ಸಾಮಾಜಿಕ ಮೌಲ್ಯ ಅಪಮೌಲ್ಯಗಳ ಕುರಿತು ಚರ್ಚೆ ನಡೆಸುತ್ತವೆ. ಬೇಕು ಬೇಡುಗಳ ಇತ್ಯರ್ಥವನ್ನು ಸಿದ್ಧಪಡಿಸುತ್ತವೆ. ಒಂದು ಆಯಾಮಕ್ಕಿಂತ ವಿಭಿನ್ನ ಆಯಾಮಗಳ ಚಿತ್ರಣವೇ ಕಥೆಗಳ ಮೊದಲ ಆದ್ಯತೆ. ಅದು ಕಥೆಗಳ ಮೌಲ್ಯವು ಹೌದು, ಜವಾಬ್ದಾರಿಯು ಹೌದು. ಒಬ್ಬ ಕಥೆಗಾರ ಚಿತ್ರಿಸುವ ಪಾತ್ರಗಳು ಸಮಾಜಕ್ಕೆ ಸಾಣೆ ಹಿಡಿಯುತ್ತವೆ. ಚಂದ್ರಕಾಂತ ಕುಸನೂರರ ಕಥೆಗಳು ವೈಯಕ್ತಿಕ ನೆಲೆಯಲ್ಲಿ ಚರ್ಚಿಸಿದರೂ ಕೂಡ ಅದು ಸಮಷ್ಟಿ ಪ್ರಜ್ಞೆಯನ್ನು ಒಳಗೊಂಡಿರುತ್ತದೆ ಎಂಬುದನ್ನು ಪಾತ್ರಗಳ ಮೂಲಕ ಗ್ರಹಿಸುವ ಸಾಧ್ಯತೆಗಳಿವೆ. ಈ ಸಂಶೋಧನಾ ಲೇಖನವು ಕುಸನೂರರ ‘ಅಸಹಜ’ ಮತ್ತು ‘ಎಲ್ಲಿಗೆ’ ಕಥೆಗಳಲ್ಲಿನ ಸಾಮಾಜಿಕ ಮೌಲ್ಯಗಳನ್ನು ಪರಿಶೋಧಿಸುವುದು. ಇಲ್ಲಿನ ಪಾತ್ರಗಳು ಹೇಗೆ ಸಮಾಜಕ್ಕೆ ಸ್ಪಂದಿಸುತ್ತವೆಯೋ ಅಥವಾ ಇಲ್ಲವೋ ಎಂಬುದನ್ನು ಗ್ರಹಿಸಬೇಕು.ಕತೆಗಾರರು ಸೃಷ್ಟಿಸುವ ಪಾತ್ರಗಳ ಮನೋಭೂಮಿಕೆಯನ್ನು ಅರಿಯಬೇಕಿದೆ. ಕಥೆಯ ಆರಂಭ ಹಾಗೂ ಅಂತ್ಯ ಕತೆಗಾರರು ನಿರ್ಣಯಿಸುತ್ತಾರೋ ಅಥವಾ ಓದುಗರಿಗೆ ಬಿಡುತ್ತಾರೋ ಅಥವಾ ಪಾತ್ರಗಳಿಗೆ ಬಿಡುತ್ತಾರೋ ಎಂಬ ಕುತೂಹಲ ಇವರ ಕಥೆಗಳಲ್ಲಿ ಕಂಡುಕೊಳ್ಳಬಹುದು.
ಕತೆಗಾರರು ‘ಮೌಲ್ಯ’ ಎಂಬ ಪದವನ್ನು ಯಾವ ನಿಟ್ಟಿನಲ್ಲಿ ಪ್ರತಿಪಾದಿಸಲು ಹೊರಟಿದ್ದಾರೆ ಎಂಬುದನ್ನು ಗಮನಿಸಬೇಕಾಗಿದೆ. ಕಥೆಗಳಲ್ಲಿನ ಪಾತ್ರಗಳು ಏಕಮುಖಿಯಾಗಿವೆಯೋ, ಬಹುಮುಖಿಯಾಗಿ ಇವೆಯೋ, ಯಾರಿಂದಲು ಪ್ರೇರಣೆ ಪಡೆದಿವೆಯೋ, ಸ್ವ ಚಿಂತನೆಗೆ ಒಳಗಾಗಿದಿಯೋ ಎಂಬುದನ್ನು ವಿವರಿಸುವುದು ಲೇಖನದ ಮೂಲ ಉದ್ದೇಶ.
ಮಕ್ಕಳ ಕಥಾ ಸಾಹಿತ್ಯಕ್ಕೆ ಎಚ್ಚೆಸ್ವಿ ಅವರ ಕೊಡುಗೆ
06 to 14
ಮಕ್ಕಳ ಕಥೆಗಳಲ್ಲಿ ನಾವು ಗಮನಿಸಬಹುದಾದಂತಹ ಪ್ರಮುಖವಾದ ಅಂಶಗಳು ಕುತೂಹಲ, ಆಶ್ಚರ್ಯ, ವಿಸ್ಮಯ, ವಿನೋದ, ಬೆರಗು, ಭಯ, ಉತ್ಸಾಹ, ಮನೋರಂಜನೆ, ಛಲ, ಹಟ, ಆವೇಶ, ಚಾಕಚಕ್ಯತೆ ಇತ್ಯಾದಿಗಳಾಗಿವೆ. ಮಕ್ಕಳ ಕಥಾ ಸಾಹಿತ್ಯದಲ್ಲಿ ದೇವುಡು ಅವರ ʼಕನ್ನಡಿಯ ಕಥೆʼ, ಪಂಜೆ ಅವರ `ಒಡ್ಡನ ಆಟ’ ಪಂಡಿತ ಕವಲಿ ಅವರ `ಪುಟ್ಟಣ್ಣನ ಪಂಚತಂತ್ರ’, ಗೌರೀಶರ `ನಾಡನೆಲೆಗಾರ’, ದಾಮೋದರ ಬಾಳಿಗರ `ಇಲಿಮನೆ ಗಲಿಬಲಿ’, ಹೊಯ್ಸಳರ `ಆನೆ-ಇರುವೆ’, ಭಾರತೀಸುತರ `ಬೆಳೆಯಿತು ಮೂಗು ನೋಡಣ್ಣ’, ಶಂಕರಭಟ್ಟರ `ಪ್ರಾಣಿಗಳ ಪ್ರವಾಸ’, ಮೇವುಂಡಿ ಮಲ್ಲಾರಿ ಅವರ `ಕಳೆದ ಕಡಲೆ’, ಜಿ.ಪಿ.ರಾಜರತ್ನಂ ಅವರ `ಗೋಳೂರಿನ ಗಾಯಕರು’, ವಿಶ್ವಾಮಿತ್ರ ಅವರ `ತುಂಟ ಬೋರಣ್ಣ’, ಕುವೆಂಪು ಅವರ `ನರಿಗಳಿಗೇಕೆ ಕೋಡಿಲ್ಲ?’, ಪಾಂಡುರಂಗರಾಯರ ಸಕ್ಕರೆಬೆಟ್ಟ, ಸಿಸು ಸಂಗಮೇಶ `ಅವರ ನರಿಯ ಫಜೀತಿ’, ಜಯವಂತ ಕಾಡದೇವರ `ಮಾತಾಡುವ ಗಿಳಿ’, ಎ. ವಿ. ನಾವಡ ಅವರ ʼರಾಜಹಂಸʼ, ʼಮಧುಚಂದ್ರʼ, ʼಪೇಟೆಗೆ ಬಂದ ಪುಟ್ಟಿʼ ಇವು ಪ್ರಮುಖವಾದ ಕೃತಿಗಳಾಗಿವೆ. ಇತ್ತೀಚೆಗೆ ಸಮಕಾಲೀನ ಸಂದರ್ಭದ ಮಹತ್ವದ ಕವಿ ಮತ್ತು ಪ್ರಯೋಗಶೀಲ ನಾಟಕಕಾರ ಎಂದು ಗುರುತಿಸಲ್ಪಟ್ಟಿರುವ ಎಚ್. ಎಸ್.ವೆಂಕಟೇಶಮೂರ್ತಿ ಅವರು ಅನೇಕ ವರ್ಷಗಳಿಂದ ಮಕ್ಕಳಿಗಾಗಿ ಕವಿತೆ, ನಾಟಕ, ಕಥೆಗಳನ್ನು ರಚಿಸುತ್ತ, ಪ್ರಕಾಶಿಸುತ್ತ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ. ಇವರ ಅಮಾನುಷರು, ಕದಿರನಕೋಟೆ, ಅಗ್ನಿಮುಖಿ, ಚಿನ್ನಾರಿಮುತ್ತ, ತಾಪಿ ಕೃತಿಗಳು ಮಕ್ಕಳಿಗಾಗಿಯೇ ರಚಿತವಾದುವಾಗಿವೆ.
ಈ ಲೇಖನದಲ್ಲಿ ಎಚ್ಚೆಸ್ವಿ ಅವರ ಅಗ್ನಿಮುಖಿ, ಕದಿರನಕೋಟೆ, ಅಮಾನುಷರು ಕಥೆಗಳಲ್ಲಿ ಬಿಂಬಿತವಾಗಿರುವ ಕಥಾವಸ್ತುವನ್ನು ವಿವೇಚನೆಗೆ ಒಳಪಡಿಸಲಾಗಿದೆ.
ಮಕ್ಕಳ ಕಥಾ ಸಾಹಿತ್ಯ
15 to 23
ನಮ್ಮ ಕನ್ನಡ ಸಾಹಿತ್ಯಕ್ಕೆ ಸುದೀರ್ಘವಾದ ಇತಿಹಾಸವಿದೆ. ಪೂರ್ವದ ಹಳೆಗನ್ನಡ, ಹಳೆಗನ್ನಡ, ನಡುಗನ್ನಡ, ಹೊಸಗನ್ನಡ, ನವೋದಯ, ಪ್ರಗತಿಶೀಲ, ನವ್ಯ, ದಲಿತ-ಬಂಡಾಯ ಸಾಹಿತ್ಯ ಎಂಬ ಕಾಲಘಟ್ಟದಲ್ಲಿ ಇಂದು ಹೆಮ್ಮರವಾಗಿ ಬೆಳೆದು ನಿಂತಿರುವುದನ್ನು ನಾವು ಕಾಣಬಹುದು. ಇಪ್ಪತ್ತನೆಯ ಶತಮಾನ ʼಅತ್ಯಂತ ವಿಶಿಷ್ಟವಾದ’ ಯುಗ ಎಂದು ಪರಿಗಣಿತವಾಗಿದ್ದು, ಈ ಕಾಲಘಟ್ಟದಲ್ಲಿ ಮಹಾಕಾವ್ಯ, ಭಾವಗೀತೆ, ಸಣ್ಣಕಥೆ, ಕಾದಂಬರಿ, ಪ್ರಬಂಧ, ನಾಟಕ, ಪ್ರವಾಸ ಸಾಹಿತ್ಯ, ವಿಚಾರಸಾಹಿತ್ಯ ಆತ್ಮಕಥೆ, ಜೀವನಚರಿತ್ರೆ ಇತ್ಯಾದಿ ಪ್ರಕಾರಗಳೆಲ್ಲವನ್ನು ಮೈಗೂಡಿಸಿಕೊಂಡು ಸಮೃದ್ಧವಾಗಿ ಬೆಳೆಯುತ್ತಿದೆ. ಇವುಗಳಲ್ಲಿ “ಮಕ್ಕಳ ಸಾಹಿತ್ಯ”ವೂ ಒಂದು.
ಕನ್ನಡ ಸಾಹಿತ್ಯದಲ್ಲಿ ʼಮಕ್ಕಳ ಸಾಹಿತ್ಯದ’ ಬೇರನ್ನು ಜಾನಪದ ಪರಂಪರೆಯಲ್ಲಿಯೇ ಕಾಣಬಹುದಾದರೂ ʼಮಕ್ಕಳ ಸಾಹಿತ್ಯ’ ಎಂಬ ಹೆಸರನ್ನು ಹೊತ್ತು ಪ್ರತ್ಯೇಕ ಸಾಹಿತ್ಯ ಪ್ರಕಾರವಾಗಿ ಬೆಳೆದು ಬಂದದ್ದು ʼನವೋದಯ ಸಾಹಿತ್ಯ’ದ ಕಾಲಘಟ್ಟದಲ್ಲಿ. ʼಮಕ್ಕಳ ಸಾಹಿತ್ಯ ಎಂದರೇನು?’ ಮಕ್ಕಳ ಸಾಹಿತ್ಯವನ್ನು ಏಕೆ ಪ್ರತ್ಯೇಕ ಪ್ರಕಾರವಾಗಿ ನೋಡಬೇಕು? ಮಕ್ಕಳ ಸಾಹಿತ್ಯದ ಮಹತ್ವ, ಮಕ್ಕಳ ಸಾಹಿತ್ಯದ ಉಗಮ, ಬೆಳವಣಿಗೆ, ಮಕ್ಕಳ ಸಾಹಿತ್ಯದ ಸ್ವರೂಪ ಈ ಅಂಶಗಳನ್ನು ಆಧರಿಸಿ ಬರೆದ ಲೇಖನ ಇದಾಗಿದೆ.
ಕನ್ನಡ ಸಾಹಿತ್ಯ ಪರಂಪರೆ ಮತ್ತು ಜನಪರ ಆಲೋಚನ ಕ್ರಮಗಳು
24 to 32
ಕನ್ನಡ ಸಾಹಿತ್ಯ ಚರಿತ್ರೆಗೆ ತನ್ನದೇ ಆದ ಶ್ರೇಷ್ಠತಮವಾದ ಸಾಹಿತ್ಯ ಪರಂಪರೆಯಿದೆ. ಜನಪರ ಆಲೋಚನಾ ಕ್ರಮಗಳನ್ನು ಹೊಂದಿದ್ದು ಜೀವನಾನುಭವದ ಗಟ್ಟಿ ಸೆಲೆಯೊಂದಿಗೆ ಈ ಮಣ್ಣಿನ ನಾಡಿಮಿಡಿತವನ್ನು ಅರಿಯುವ ಶಕ್ತಿ ಇದೆ. ಯಾವುದೇ ಭಾಷೆಯ ಸಾಹಿತ್ಯ ಚರಿತ್ರೆಗೆ ತನ್ನದೇ ಆದ ಸ್ವರೂಪ, ಸಂಸ್ಕೃತಿಯ ಮನೋಹಿರಿಮೆ ಹಾಗೂ ಜನಪರ ಆಲೋಚನ ಪರಂಪರೆ ಮತ್ತು ಚಹರೆಗಳಿರುವಂತೆ ಕನ್ನಡ ಸಾಹಿತ್ಯಕ್ಕೂ ಕೂಡ ತನ್ನದೇ ಸಾಮಾಜಿಕ ಆಯಾಮಗಳಿವೆ.
ಒಂದು ನಾಗರಿಕತೆಯ ಪರಂಪರೆಯ ಪ್ರಭಾವಳಿಯಲ್ಲಿ ಬೆಳೆದ ಸಾಹಿತ್ಯ ತನ್ನ ಸಮಾಜದ ನಾಡಿಮಿಡಿತದೊಂದಿಗೆ ಅಗಾಧವಾದ ಜೀವನ ರಸಗಂಗೆಯೊಂದಿಗೆ ಅನಂತಕಾಲ ಪಯಣಿಸಿ; ಹಲವು ಕಾಲಘಟ್ಟದಲ್ಲಿ ಅನಂತ ಬದುಕಿಗೆ ಮಾರ್ಗದರ್ಶಿಯಾಗಿ ತನ್ನೊಡಲನ್ನು ತೆರೆದಿಡುವ ಕೆಲಸ ಮಾಡುತ್ತದೆ. ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಅಖಂಡ ಪರಂಪರೆ ಇದೆ. ವಿವಿಧ ಕಾಲ ಘಟ್ಟಗಳ ಸಾಹಿತ್ಯ ಕೊಡುಗೆಗಳಿವೆ. ಸಾಹಿತ್ಯ ಒಂದು ಕಾಲದ ಜೀವನಾನುಭಸಾರ. ಜನಜೀವನದ ಕ್ರಿಯಾಶೀಲತೆಯ ಧ್ಯೋತಕ. ಭಾಷೆಯ ಕಾಲ, ದೇಶ, ಸಮಾಜಗಳಿಗೆ ಅನುಗುಣವಾಗಿ ಬಹುಮುಖಿ ಸಮಾಜವನ್ನು ಕಟ್ಟಿ ಬೆಳೆದು ಬರಬೇಕಾದರೆ ಅದು ತಮ್ಮ ಚಿಂತನೆಗಳಲ್ಲಿ ಹೊಂದಿರಬಹುದಾದ ಸಮಾಜ ಮುಖಿತ್ವದ ಧೋರಣೆಯೇ ಕಾರಣ.
ಗೀತಾ ನಾಗಭೂಷಣ ಅವರ ಸಣ್ಣ ಕಥೆಗಳಲ್ಲಿ ತಾಯ್ತನ
33 to 39
ಗೀತಾ ನಾಗಭೂಷಣ ಅವರು ಮುಖ್ಯವಾಗಿ ಸ್ತ್ರೀ ನೆಲೆಯಲ್ಲಿ ಕಥೆಗಳನ್ನು ಕಟ್ಟಿಕೊಟ್ಟಿದ್ದಾರೆ. ಅಸಾಹಯಕತೆ, ಶೋಷಣೆ, ತುಡಿತ, ಅವಮಾನ, ಸಮಸ್ಯೆಗಳನ್ನು ಎದುರಿಸುವ ಧೈರ್ಯ, ಸಾಧಿಸುವ ಛಲ, ಸಂಕಟ, ತಾಯ್ತನದ ಪ್ರೀತಿ ಹೀಗೆ ಅನೇಕ ಬಗೆಯ ಕಥೆಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ. ಅವರ ಮಹಿಳಾ ಪರ ಚಿಂತನೆಗಳು ಅವರ ಕಥೆಗಲ್ಲಿ ವ್ಯಕ್ತವಾಗುತ್ತದೆ.
ಕನ್ನಡ ಅನುವಾದಿತ ಆಫ್ರಿಕನ್ ಕಥಾ ಸಾಹಿತ್ಯ
40 to 44
ಕಥೆಗಾರರು ಕಥೆಗಳನ್ನು ಬರೆಯುತ್ತಿದ್ದದ್ದು ಮತ್ತು ಓದುಗರು ಅವುಗಳನ್ನು ಓದುತ್ತಿದ್ದದ್ದು ಕಾಲಕಳೆಯುವ ಸಲುವಾಗಿ ಮತ್ತು ಮನೋರಂಜನೆಯ ಮುಖ್ಯ ಉದ್ದೇಶದಿಂದಾಗಿ. ಹಾಗಿದ್ದಾಗ್ಯೂ ಅತಿದೊಡ್ಡ ಸಾಹಿತ್ಯ ವಿಮರ್ಶೆಗಳು ಬಂದದ್ದೂ ಕೂಡ ಇಂತಹ ಕಥಾಸಾಹಿತ್ಯದ ಹಿನ್ನಲೆಯಲ್ಲಿಯೇ ಎಂಬುದು ಗಮನಾರ್ಹ. ಕೆಲವು ಬಾರಿ ಇಂತಹ ಸಾಹಿತ್ಯಗಳು ಸಾಮಾಜಿಕ ದೃಷ್ಟಿಕೋನವನ್ನೇ ಬದಲಾಯಿಸಿಬಿಡಬಹುದು. ಮರಾಠಿ ದಲಿತ ಆತ್ಮಕಥೆಗಳು ಇದಕ್ಕೆ ಒಳ್ಳೆಯ ಉದಾಹರಣೆಯಾಗಬಹುದು. ಆಫ್ರಿಕಾದ ಸಾಹಿತ್ಯವು ಕನ್ನಡಕ್ಕೆ ಅನುವಾದವಾಗುವಾಗ ದಲಿತ ಮತ್ತು ಬಂಡಾಯ ಸಾಹಿತ್ಯದ ಮತ್ತು ಅಂತಹ ಸಾಹಿತ್ಯಾಸಕ್ತರ ಅಗತ್ಯಗಳಿಗಾಗಿ ಬಂದವು ಎಂಬ ವಾದ ಸಾಹಿತಿಗಳಲ್ಲಿ ಮತ್ತು ವಿಮರ್ಶಕರಲ್ಲಿ ಇದೆ. ಬಹುಶಃ ಅದು ಹಾಗಿರಲಿಕ್ಕು ಸಾಕು. ಆದರೆ ಕನ್ನಡಕ್ಕೆ ಅನುವಾದಗೊಂಡ ಆಫ್ರಿಕಾ ಮೂಲದ ಎಲ್ಲಾ ಸಾಹಿತ್ಯವೂ ಈ ಅಗತ್ಯಗಳನ್ನು ಪೂರೈಸಲು ಮಾತ್ರ ಕನ್ನಡಕ್ಕೆ ಬಂತು ಎಂದು ಹೇಳುವುದಾದರೆ ಅದು ಸಂಪೂರ್ಣ ತಪ್ಪು ಕಲ್ಪನೆಯಾದೀತು.
‘ತಮಂಧದ ಕೇಡು’ ಕಥೆಯಲ್ಲಿ ಚಿತ್ರಣಗೊಂಡಿರುವ ಸಾಮಾಜಿಕ ವ್ಯವಸ್ಥೆ
45 to 52
ಭಾರತೀಯ ಸಾಮಾಜಿಕ ವ್ಯವಸ್ಥೆಯು ಬಹುತ್ವದ ನೆಲೆಯಿಂದ ಕೂಡಿದೆ. ಶೋಷಣೆಗೊಳಗಾದವರ ನೋವು, ಆಕ್ರೋಶ, ಸಂವೇದನೆಗಳನ್ನು ಪ್ರತಿಭಟನೆ, ಹೋರಾಟದ ಮೂಲಕ ಅಭಿವ್ಯಕ್ತಿಸುವ ಬಂಡಾಯ ಸಾಹಿತ್ಯ ಪಂಥದ ಆರಂಭಿಕ ಕಥೆಗಳು ಸಿಟ್ಟು, ಅವಮಾನ, ಹತಾಶೆ, ಆಕ್ರೋಶಗಳನ್ನು ರೋಷಾವೇಶದ ಭಾಷೆಯಲ್ಲಿಯೇ ಹೊರಹಾಕಿದೆ. ಈ ಕಾಲಘಟ್ಟದಲ್ಲಿ ಕಂಡುಬರುವ ಅಮರೇಶ ನುಗಡೋಣಿ ತಮ್ಮ ಕಥೆಗಳಲ್ಲಿ ಸಾಮಾಜಿಕ ಕಳಕಳಿ, ರಾಜಕೀಯಪ್ರಜ್ಞೆ ಹಾಗೂ ಪ್ರತಿಭಟನೆಯ ಮೂಲಕ ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿದ್ದಾರೆ. ಹಾಗೂ ತಮ್ಮ ಕಥೆಗಳಲ್ಲಿ 12ನೇ ಶತಮಾನದ ಬಸವಣ್ಣನ ಕಾಯಕ ವೃತ್ತಿಯ ಸಮಸಮಾಜದ ಕನಸಿನ ಸಮಾಜವನ್ನು ಮರುನಿರ್ಮಾಣ ಮಾಡಲು ಪ್ರಯತ್ನಿಸಿದ್ದಾರೆ.
ದೇವನೂರು ಮಹಾದೇವ ಅವರ ಕಥೆಗಳನ್ನು ನೆನಪಿಸುವ ಇವರ ಕಥೆಗಳು ಅಲ್ಲಿನ ಪಾತ್ರಗಳಂತೆ ತಾತ್ವಿಕವಾಗಿ ಪ್ರತಿಭಟಿಸುವುದಿಲ್ಲ; ಮೃದುಧೋರಣೆಯಲ್ಲಿ ಸಾತ್ವಿಕವಾಗಿ ಸಾಗುತ್ತ ಶೋಷಣೆಯನ್ನು ಪರಂಪರಾಗತ ಸಂಪ್ರದಾಯ ಎನ್ನುವಂತೆ ಒಪ್ಪಿಕೊಂಡಿವೆ. ‘ತಮಂಧದ ಕೇಡು’ ಕಥೆಯ ನಾಯಕ ಚೆನ್ನಮಲ್ಲಯ್ಯ ಉರುಫ್ ಚೆನ್ನ. ಕಥಾನಾಯಕಿ ಅಕ್ಕಮಹಾದೇವಿ ಉರುಫ್ ‘ಅಕ್ಕ’. ಈ ಎರಡು ಹೆಸರುಗಳು, ಕಥೆಗಾರರು ದೇಮ ಅವರಿಂದ ಪ್ರೇರಿತವಾಗಿರುವುದನ್ನು ಹಾಗೂ 12ನೇ ಶತಮಾನದ ಶರಣ ಚಳವಳಿಯಿಂದ ಪ್ರಭಾವಿತರಾಗಿರುವುದನ್ನು ಕಂಡರಿಸುತ್ತವೆ.
ಪ್ರತಿಭಟನಾತ್ಮಕ ಸಂಘರ್ಷ ಮತ್ತು ಸಾತ್ವಿಕ ಸಿಟ್ಟನ್ನು ಇಡೀ ಕಥೆಯಲ್ಲಿ ತರುವ ಮೂಲಕ ಅಮರೇಶ ನುಗಡೋಣಿ ದಲಿತ ಮತ್ತು ಲಿಂಗಾಯತ ಸಮುದಾಯದ ಸಾಮರಸ್ಯವನ್ನು ದುರುಗಾ ಮತ್ತು ಶಾಂತಗೌಡ ಪಾತ್ರಗಳ ಮೂಲಕ ಕಟ್ಟಿಕೊಡುತ್ತಲೇ ಚೆನ್ನ ಮತ್ತು ಅಕ್ಕಮಹಾದೇವಿ ಪಾತ್ರಗಳ ಮೂಲಕ ಜಾತಿ ವಿನಾಶದಂತ ಕ್ರಾಂತಿಯನ್ನು ಆಹ್ವಾನಿಸಿರುವುದು ಕಥೆಯನ್ನು ಗಟ್ಟಿಗೊಳಿಸುತ್ತದೆ.
ಸುನಂದಾ ಕಡಮೆ ಅವರ ಕಥೆಗಳಲ್ಲಿ ಮಹಿಳೆ ಮತ್ತು ವೈಚಾರಿಕ ಪ್ರಜ್ಞೆ
53 to 60
ಸುನಂದಾ ಪ್ರಕಾಶ ಕಡಮೆ ಅವರ ಪುಟ್ಟ ಪಾದದ ಗುರುತು, ಗಾಂಧಿ ಚಿತ್ರದ ನೋಟು, ಕಂಬಗಳ ಮರೆಯಲ್ಲಿ ಹಾಗೂ ತುದಿ ಮಡಚಿಟ್ಟ ಪುಟ-ಕಥಾ ಸಂಕಲನಗಳ ಕಥೆಗಳಲ್ಲಿ ಕಂಡುಬರುವ ಸಂಪ್ರದಾಯ, ಆಚರಣೆ, ವೈಚಾರಿಕತೆ ಇವುಗಳನ್ನು ಈ ಲೇಖನದಲ್ಲಿ ವಿವರಣಾತ್ಮಕವಾಗಿ ವಿಶ್ಲೇಷಿಸಲಾಗಿದೆ. ಸುನಂದಾ ಪ್ರಕಾಶ ಕಡಮೆ ಅವರ ಬಹುತೇಕ ಕತೆಗಳ ಧಾತು ಕುಟುಂಬ ಮತ್ತು ಸಮಾಜದೊಳಗೆ ಗಿರಕಿ ಹೊಡೆಯುತ್ತದೆ. ಕುಟುಂಬದೊಳಗೆ ಹುಟ್ಟುವ ಕಥೆ ಸಾಮಾಜಿಕ ಆಯಾಮ ಪಡೆದುಕೊಳ್ಳುತ್ತಾ ಸಮಕಾಲೀನ ಸಮಾಜ, ಮಾನವೀಯ ಸಂಬಂಧಗಳನ್ನು ಕುರಿತು ಚಿಂತಿಸುತ್ತದೆ. ಹಾಗಾಗಿ ಕಥನ ಲೋಕದ ವಿಸ್ತಾರವನ್ನು ತೆರೆದಿಡುವ ಸುನಂದಾ ಪ್ರಕಾಶ ಕಡಮೆ ಅವರ ಕತೆಗಳಲ್ಲಿ ಬಲವಾದ ಆತ್ಮವಿಶ್ವಾಸ ಮತ್ತು ಪ್ರಬುದ್ಧಗೊಂಡ ಕಥನ ಕೌಶಲ್ಯ ಕಾಣುತ್ತದೆ.
ಸಂಸಾರ ನಿತ್ಯದ ವಿವರಗಳೇ ಸುನಂದಾ ಅವರ ಬಹುಪಾಲು ಕತೆಗಳ ಇಟ್ಟಿಗೆ, ಮಣ್ಣು, ಗಾರೆ ಇತ್ಯಾದಿ ಎಂದು ವಿವೇಕಶಾನಭಾಗ ಅವರು ಸುನಂದಾ ಕಥೆಗಳನ್ನು ಕುರಿತು ಅತ್ಯಂತ ಮೌಲಿಕವಾದ ಮಾತುಗಳನ್ನಾಡಿದ್ದಾರೆ. ಅಂದರೆ ಇವರ ಹೆಚ್ಚಿನ ಕಥೆಗಳಲ್ಲಿ ಬರುವ ಸಂಬಂಧಗಳ ನಡುವಿನ ತಿಕ್ಕಾಟಗಳ ಸೂಕ್ಷ್ಮತೆ, ಲೌಕಿಕ ಸೆಳೆತಗಳು, ಕುಟುಂಬ ಮತ್ತು ಸಮಾಜ-ಇವುಗಳ ನಡುವೆ ಅಂತಸ್ಥವಾಗಿರುವ ಸಂಬಂಧಗಳು ಮತ್ತು ಜವಾಬ್ದಾರಿಗಳು, ಆದರ್ಶ ಮತ್ತು ವಾಸ್ತವ, ವೈಚಾರಿಕತೆ ಆಧುನಿಕತೆಯ ವ್ಯಾಮೋಹ, ಮನುಷ್ಯಪ್ರೀತಿ, ತಾಕಲಾಟ, ಬದುಕಿನ ಬಗೆಗಿನ ಕಕ್ಕೂಲಾತಿ – ಇವೇ ಮೊದಲಾದ ಅಂಶಗಳು ಇವರ ಕಥೆಗಳಲ್ಲಿ ಕಾಣಸಿಗುತ್ತವೆ.
ನವೋದಯ ಮಹಿಳಾ ಕಥೆಗಳಲ್ಲಿ ಸ್ತ್ರೀನಿಷ್ಟತೆ
61 to 67
ನವೋದಯ ಕಾಲಘಟ್ಟದ ಪ್ರಮುಖ ಲೇಖಕಿಯರಾದ ಕೊಡಗಿನ ಗೌರಮ್ಮ, ಕಲ್ಯಾಣಮ್ಮ, ಸರಸ್ವತಿ ಬಾಯಿ ರಾಜವಾಡೆ(ಗಿರಿಬಾಲೆ), ಶ್ಯಾಮಲಾ ಬೆಳಗಾವಂಕರ ಮೊದಲಾದ ಲೇಖಕಿಯರ ಕತೆಗಳಲ್ಲಿ ವ್ಯಕ್ತವಾಗಿರುವ ಸ್ತ್ರೀಪರ ನಿಲುವುಗಳನ್ನು ಕುರಿತಿದೆ. ಗೌರಮ್ಮ ಅವರ ಪುರ್ನವಿವಾಹ ಕತೆಯ ನಾಯಕಿ ರಾಜಿಯ ಮನಸ್ಸಿನಲ್ಲಿರು ಪುರುಷ ನಡವಳಿಕೆಯ ಬಗೆಗಿನ ಅಸಹನೆ, ʼವಾಣಿಯ ಸಮಸ್ಯೆʼ ಕತೆಯಲ್ಲಿ ಇಂದುವಿಯ ನೈತಿಕ ಚೌಕಟ್ಟು, ಹೋಗಿಯೇ ಬಿಟ್ಟಿದ್ದ ಕತೆಯಲ್ಲಿನ ಅಂರ್ತಧರ್ಮೀಯ ಪ್ರೇಮದ ಕರಾಳತೆ, ಗಿರಿಬಾಲೆ ಅವರ ʼಅವಳ ಉದ್ದಾರʼ ಕತೆಯಲ್ಲಿ ಹೆಣ್ಣಿನ ಕೌಟುಂಬಿಕ ಹಾಗೂ ಸಾಮಾಜಿಕ ಶೋಷಣೆ ಪರಿ, ಕಲ್ಯಾಣಮ್ಮ ಅವರ ʼನನ್ನ ಧನವ ನನಗೆ ತಾʼ ಕತೆಯಲ್ಲಿನ ಮಾತೃ ವಾತ್ಸಲ್ಯ, ʼಒಲ್ಲದ ಹೆಂಡತಿʼ ಕತೆಯಲ್ಲಿ ಮಕ್ಕಳ್ಳನ್ನು ಬೆಳೆಸುವಲ್ಲಿ ತಾಯಿಯ ಹೊಣೆ ಎಷ್ಟು ಮುಖ್ಯವಾದದ್ದು, ಶ್ಯಾಮಲಾ ಅವರ ʼಕಂತಿಯ ದೇಶಾಂತರʼ ಕತೆಯಲ್ಲಿ ಹೆಣ್ಣಿನ ದೈರ್ಯ ಹೀಗೆ ಇವರ ಕಥಾ ಸಾಹಿತ್ಯವು ಮಹಿಳೆಯರ ಅಭಿವ್ಯಕ್ತಿಯ ನೆಲೆಗಳಾಗಿವೆ. ಸಾಮಾಜಿಕ ಸಮಸ್ಯೆಗಳ ಕುರಿತ ಚಿಂತನೆ, ಮಹಿಳಾ ಸಂವೇದನೆಯನ್ನು ಪ್ರಸ್ತುತ ಪಡಿಸುವಲ್ಲಿ ಇವರ ಕಥೆಗಳು ಮಹತ್ವದ್ದಾಗಿವೆ. ಇವರು ಅಸ್ಪೃಷ್ಯತೆ, ವಿಧವಾ ಸಮಸ್ಯೆ, ವರದಕ್ಷಿಣೆ ಕಿರುಕುಳ, ವೇಶ್ಯಾಸಮಸ್ಯೆ ಮೊದಲಾದ ಸಾಮಾಜಿಕ ಹಾಗೂ ಕೌಟುಂಬಿಕವಾದ ಸವಾಲುಗಳ ಬಗೆಗೆ ದೃತಿಗೆಡದೆ ಬರೆದಿದ್ದಾರೆ. ಪ್ರಸ್ತುತ ಲೇಖನದಲ್ಲಿ ಮೇಲಿನ ಕಥೆಗಳಲ್ಲಿ ಮೂಡಿಬಂದಿರುವ ಸ್ತ್ರೀಪರವಾದ ನಿಲುವುಗಳನ್ನ ವಿಮರ್ಶಾತ್ಮಕವಾಗಿ ಅಭಿವ್ಯಕ್ತಿಸಿದ್ದೇನೆ.
ಜನಪದ ಕಥೆಗಳಲ್ಲಿ ಪ್ರತಿನಿಧೀಕರಣಗೊಂಡ ಸಾಂಸ್ಕೃತಿಕ ಮೌಲ್ಯಗಳು
68 to 75
ಜನಪದ ಸಾಹಿತ್ಯ ಸಂಸ್ಕೃತಿಯ ಒಂದು ಅಂಗವಾಗಿದ್ದು, ಇದು ಕೇವಲ ಸಾಹಿತ್ಯಿಕವಾಗಿ ಮಹತ್ವದ್ದಾಗದೆ ಅದನ್ನು ಮೀರಿದ ಸಾಂಸ್ಕೃತಿಕ ಮಹತ್ವಉಳ್ಳದ್ದು. ಇದು ವ್ಯವಸ್ಥೆಯ ಮೌಲ್ಯವನ್ನು ಹೇಳುತ್ತದೆ, ಅನಿಸಿಕೆಗಳನ್ನು ಅಭಿವ್ಯಕ್ತಿಸುತ್ತದೆ, ಅಲ್ಲಿನ ಬದುಕನ್ನು ಪ್ರತಿಬಿಂಬಿಸುತ್ತದೆ. ಈ ನೆಲೆಯಲ್ಲಿ ಜನಪದ ಕತೆ ಇತರ ಸಾಹಿತ್ಯ ಪ್ರಕಾರಗಳಿಗಿಂತ ಹೆಚ್ಚು ಉಪಯುಕ್ತವಾಗಿದೆ. ಸಂಸ್ಕೃತಿಯ ಅನೇಕ ವಿವರಗಳನ್ನು ಒಳಗೊಂಡಿರುವ ಕತೆಯ ಇಂತಹ ಅಧ್ಯಯನ ಮಾನವನ ಸಾಂಸ್ಕೃತಿಕ ಚರಿತ್ರೆಯನ್ನು ತಿಳಿಯುವಲ್ಲಿ ಅತ್ಯಂತ ಸಹಕಾರಿಯಾಗಬಲ್ಲದು.
ಗೊರೂರರ ‘ವೈಯ್ಯಾರಿ’ ಕಥಾಸಂಕಲನದಲ್ಲಿನ ಮಹಿಳಾ ಪಾತ್ರಗಳು
76 to 83
ಆಧುನಿಕ ಕನ್ನಡ ಸಾಹಿತ್ಯದ ನವೋದಯ ಕಾಲಘಟ್ಟದಲ್ಲಿ ಕಥಾಪ್ರಕಾರದಲ್ಲಿ ಸಾಧನೆ ಮಾಡಿದ ಹಿರಿಯ ಕಥೆಗಾರರ ಪೈಕಿ ಗೊರೂರು ರಾಮಸ್ವಾಮಿ ಅಯ್ಯಂಗಾರ್‌ರವರು ಒಬ್ಬರು. ಇವರ 140ಕ್ಕೂ ಹೆಚ್ಚಿನ ಕಥೆಗಳು ಆರು ಕಥಾ ಸಂಕಲನಗಳಲ್ಲಿ ಹರಡಿಕೊಂಡಿವೆ. ಇವರ ‘ವೈಯ್ಯಾರಿ’ ಕಥಾ ಸಂಕಲನದಲ್ಲಿನ ‘ಭೂತಯ್ಯನ ಮಗ ಅಯ್ಯು’, ‘ಗಂಡುಬೀರಿ ಹೊಸಬಿ’, ‘ಪುಟ್ಟ ಮಲ್ಲಿಗೆ’, ‘ಈಡಿಗರ ಹೆಣ್ಣು’, ‘ಲಕ್ಕಿಯ ಗಂಡಂದಿರು’ ಎಂಬ ಕಥೆಗಳ ವ್ಯಾಪ್ತಿಯಲ್ಲಿ ಬರುವ ಮಹಿಳಾ ಪಾತ್ರಗಳನ್ನು ವಿವೇಚನೆ ಮಾಡುವುದು ಪ್ರಸ್ತುತ ಲೇಖನದ ಉದ್ದೇಶ. ಕೌಟುಂಬಿಕ ಜೀವನದಲ್ಲಿ ತಾಯಿಯಾಗಿ, ಸೊಸೆಯಾಗಿ, ಮಗಳಾಗಿ ಎಲ್ಲಾ ಅವಸ್ಥೆಗಳಲ್ಲಿ ತನ್ನ ಅಸ್ಮಿತೆಯ ಮುದ್ರೆಯನ್ನು ಒತ್ತುವ ಮಹಿಳೆ ಸಮಾಜದಲ್ಲಿ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಂಡು ಸಾಮಾಜಿಕ ವ್ಯವಸ್ಥೆಯೊಳಗೆ ಪುರುಷನಿಗೆ ದಾಸಳಾಗಿ ಅಸಹಾಯಕತೆಯಲ್ಲಿ ಇರುವುದು ಹೊಸದೇನಲ್ಲ. ಹಾಗೆಯೇ ಪುರುಷ ಪ್ರಧಾನ ವ್ಯವಸ್ಥೆ ಪರಂಪರೆ, ಸಂಪ್ರದಾಯದ ಹೆಸರಿನಲ್ಲಿ ಹೆಣ್ಣನ್ನು ಬಂಧಿಸಿದ್ದರೂ ಸಾಮಾಜಿಕ ಕಟ್ಟುಪಾಡುಗಳಿಗೆ ಸಿಕ್ಕಿಬಿದ್ದು ನಲುಗದೆ ಬಂಡಾಯ ಮನೋಧರ್ಮವನ್ನೊಂದಿರುವುದು ವಿಶಿಷ್ಟವಾಗಿದೆ. ಈ ಮೇಲಿನ ಕಥೆಗಳಲ್ಲಿ ಇಂತಹ ಎರಡೂ ಬಗೆಯ ಪಾತ್ರಗಳನ್ನು ಲೇಖನದ ಮೂಲಕ ವಿವೇಚಿಸುವ ಪ್ರಯತ್ನ ಮಾಡಲಾಗಿದೆ.
ಕಥಾ ಸಾಹಿತ್ಯದಲ್ಲಿ ಮಹಿಳೆ
84 to 89
ಸಾಹಿತ್ಯ ಪ್ರಪಂಚದಲ್ಲಿ ಕಥನ ಸಾಹಿತ್ಯ ತನ್ನದೇ ಆದ ವಿಶಿಷ್ಟ ಸ್ಧಾನಮಾನವನ್ನು ಹೊಂದಿದೆ. ಇದು ಬಹಳಷ್ಟು ಜನಪ್ರಿಯವಾದ ಮಾಧ್ಯಮ ಎಂದು ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಅದರಲ್ಲಿ ವಿಶೇಷವಾಗಿ ನಾವುಆಧುನಿಕ ಕನ್ನಡ ಸಾಹಿತ್ಯದ ಪ್ರಮುಖ ಪ್ರಕಾರಗಳಲ್ಲಿ ಕಥಾಸಾಹಿತ್ಯವು ಒಂದಾಗಿದೆ. ಮಹಿಳಾ ಸಾಹಿತ್ಯವನ್ನು ಗಮನಿಸಿದಾಗ ಆಯಾಕಾಲಕ್ಕೆಅನುಗುಣವಾಗಿ ತಮ್ಮ ಅನುಭವಗಳನ್ನು,ಭಾವನೆಗಳನ್ನು ಅವಮಾನಗಳನ್ನು ಅಭಿವ್ಯಕ್ತ ಪಡಿಸಿರುವುದು ಕಂಡು ಬರುತ್ತದೆ. ಕಥಾ ಸಾಹಿತ್ಯದಲ್ಲಿ ಮಹಿಳೆಯರು ಬಹಳ ಪ್ರಮುಖವಾಗಿ ತಮ್ಮ ನೋವು-ದುಃಖ ದುಮ್ಮಾನಗಳನ್ನು ಹೇಳಿಕೊಳ್ಳುವ ಸಲುವಾಗಿ ಕಥನ ಸಾಹಿತ್ಯವನ್ನು ಮಾಧ್ಯವಾಗಿಸಿಕೊಂಡಿದ್ದಾರೆ. ಈ ಪ್ರಪಂಚವನ್ನು ನೋಡುವ ದೃಷ್ಟಿಯಲ್ಲಿ ಸ್ತ್ರೀ ಪುರುಷರ ನಡುವೆ ಆಳವಾದ ಮೂಲಭೂತವಾದ ಅಂತರವಿರುವುದನ್ನು ಕಾಣಬಹುದಾಗಿದೆ.
ಕನ್ನಡ ಅನುವಾದಿತ ಓಲ್ಗಾ ಸಾಹಿತ್ಯ
90 to 96
ತೆಲುಗು ಸಾಹಿತ್ಯದಲ್ಲಿ ಹೆಸರುವಾಸಿಯಾದ ಸ್ತ್ರೀವಾದಿ ಚಿಂತಕಿ ಓಲ್ಗಾ ಇವರು 80ರ ದಶಕದ ತೆಲುಗು ಸಾಹಿತ್ಯದಲ್ಲಿ ‘ಓಲ್ಗಾ’ ಎಂಬ ಕಾವ್ಯನಾಮದಿಂದ ಸ್ತ್ರೀವಾದಿ ಚಿಂತಕಿ, ಮಾರ್ಕ್ಸ್‌ವಾದಿ, ರಾಜಕೀಯ ಹೋರಾಟಗಾರ್ತಿ ಎಂದು ಹೆಸರುವಾಸಿಯಾಗಿ ಗುರುತಿಸಿಕೊಂಡವರು. ಇವರ ಚಿಂತನೆಯ ಬರಹವನ್ನು ಹಲವು ಲೇಖಕರು ಕನ್ನಡ ಸಾಹಿತ್ಯಕ್ಕೆ ಪರಿಚಯಿಸಿದ್ದಾರೆ. ಓಲ್ಗಾ ಅವರ ಸಾಹಿತ್ಯವನ್ನು ಕನ್ನಡ ಅನುವಾದ ಸಂದರ್ಭದಲ್ಲಿ ಕೂಡ ಮೂಲ ಕೃತಿಯಾಗಿ ಓದಿಸಿಕೊಳ್ಳುವ ರೀತಿಯಲ್ಲಿ ಹಲವಾರು ಕೃತಿಗಳು ಕನ್ನಡಕ್ಕೆ ಬಂದಿವೆ. ಇದೆ ದೃಷ್ಟಿಕೋನದಿಂದ ಓಲ್ಗಾ ಅವರ ತೆಲುಗು ಸ್ತ್ರೀವಾದಿ ರಚನೆಯನ್ನು ಮೂಲ ಆಶಯದಂತೆ ಕನ್ನಡದ ಲೇಖಕರು ಅನುಸೃಷ್ಟಿಸಿದ್ದಾರೆ.
ಓಲ್ಗಾ ಅವರ ಸ್ತ್ರೀವಾದಿ ಚಿಂತನೆಗಳ ಕುರಿತಾಗಿ ನಡೆಸುವ ಈ ಅಧ್ಯಯನವು ಬಹುಮುಖ್ಯವಾಗುತ್ತದೆ. ಏಕೆಂದರೆ ತೆಲುಗುನಿಂದ ಕನ್ನಡಕ್ಕೆ ಹಾಗೂ ಕನ್ನಡದಿಂದ ತೆಲುಗು ಸಾಹಿತ್ಯಕ್ಕೆ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಈ ಲೇಖನವು ಓದುಗರಿಗೆ ಎರಡು ಭಿನ್ನ ಕ್ಷೇತ್ರಗಳ ವಿಭಿನ್ನ ವಿಷಯಗಳನ್ನು ತಿಳಿಯಲು ಸಹಾಯಕವಾಗುತ್ತದೆ. ಹೀಗೆ ಒಂದು ಭಾಷೆಯ ಸಾಹಿತ್ಯವನ್ನು ಇನ್ನೊಂದು ಭಾಷೆಯಲ್ಲಿ ಪರಿಚಯಿಸುವುದು ಮತ್ತು ಆ ಭಾಷೆಯನ್ನು ಬೆಳೆಸುವುದು, ಆ ಸಾಹಿತ್ಯದ ಚಿಂತನೆಗಳನ್ನು, ಸಾಮ್ಯತೆಗಳನ್ನು ಸಮಾಜಕ್ಕೆ ಪರಿಚಯಿಸುವುದು ಇದರ ಉದ್ದೇಶವಾಗಿದೆ.
ಕನ್ನಡದಲ್ಲಿ ಬಹುಭಾಷಂತರ ಕಥೆಗಳು
97 to 103
ಪಾಶ್ಚಾತ್ಯರ ಪ್ರೇರಣೆಯಿಂದ ಕನ್ನಡ ಸಾಹಿತ್ಯದಲ್ಲಿ ಸ್ವತಂತ್ರವಾಗಿ ರೂಪು ಪಡೆದ ಸಣ್ಣ ಕಥೆಗಳು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿ ಬಹುಜನಪ್ರಿಯತೆ ಪಡೆದ ಒಂದು ವಿಶಿಷ್ಟ ಬಗೆಯ ಸಾಹಿತ್ಯ ಪ್ರಕಾರವಾಗಿದೆ. ಹಲವಾರು ವಿಭಿನ್ನ ಕಥಾವಸ್ತು, ಆಶಯ, ತಂತ್ರಗಾರಿಕೆಯಿಂದ ಸಾಹಿತ್ಯ ಕ್ಷೇತ್ರದಲ್ಲಿ ಭದ್ರವಾಗಿ ಬೇರೂರಿದೆ. ಕನ್ನಡ ಸಾಹಿತ್ಯದಲ್ಲಿ ಸ್ವತಂತ್ರವಾಗಿ ಬರೆದ ಕಥೆಗಳು ಎಷ್ಟು ಜನಪ್ರಿಯತೆ ಪಡೆದಿವೆಯೋ ಅಷ್ಟೇ ಜನಪ್ರಿಯತೆನ್ನು ಅನುವಾದಿತ ಕಥೆಗಳು ಕೂಡ ಪಡೆದುಕೊಂಡಿವೆ. ಕನ್ನಡಕ್ಕೆ ಕಾವ್ಯಗಳು, ಕಾದಂಬರಿಗಳು, ನಾಟಕಗಳಂತೆ ಅನುವಾದಿತ ಕಥೆಗಳು ಕೂಡ ಬಂದಿವೆ. ಅವು ಕೇವಲ ಒಂದೇ ಅನುವಾದಕ್ಕೆ ಸೀಮಿತವಾಗದೆ ತಮ್ಮ ಅನುವಾದವನ್ನು ವಿಸ್ತರಿಸಿಕೊಂಡು ಬಹುಭಾಷಾಂತರಕ್ಕೆ ತಮ್ಮನ್ನು ತೆರೆದುಕೊಂಡಿವೆ. ಬಹುಭಾಷಾಂತರ ಎಂದರೆ ಒಂದು ಕೃತಿಯು ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಒಂದಕ್ಕಿಂತ ಹೆಚ್ಚಿನ ಬಾರಿ ಅನುವಾದ ವಾಗುವುದೇ ಆಗಿದೆ. ಹಲವಾರು ಕಾರಣಗಳಿಂದ ಕನ್ನಡದಲ್ಲಿ ಒಂದೇ ಕೃತಿಯು ಪ್ರಾಚೀನ ಕಾಲದಿಂದಲೂ ಒಂದಕ್ಕಿಂತ ಹೆಚ್ಚಿನ ಬಾರಿ ಅನುವಾದವಾಗಿವೆ. ಹೀಗೆ ಒಂದಕ್ಕಿಂತ ಹೆಚ್ಚಿನ ಬಾರಿ ಅನುವಾದವಾದ ಕಥೆಗಳ ಬಗ್ಗೆ ತಿಳಿದುಕೊಳ್ಳುವ ಉದ್ದೇಶವನ್ನು ಈ ಲೇಖನ ಪ್ರಸ್ತುತ ಪಡಿಸುತ್ತದೆ.
ಅನುಪಮಾ ನಿರಂಜನ ಮತ್ತು ತ್ರಿವೇಣಿಯವರ ಕಥೆಯಲ್ಲಿ ಮಹಿಳೆಯ ಪಾತ್ರ
104 to 110
ನಮ್ಮ ನಾಡು ಸುಸಂಸ್ಕೃತವಾದ ತಾಣ ನಮ್ಮ ಮಹಾಕಾವ್ಯವಾದ “ರಾಮಾಯಣದಲ್ಲಿ” ಒಂದು ಶ್ಲೋಕ ಬರುತ್ತದೆ ಅದು “ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ” ಅಂತ ಸಂಸ್ಕೃತ ಶ್ಲೋಕ ತಾತ್ಪರ್ಯ ನೋಡುವುದಾದರೆ “ತಾಯಿ ಮತ್ತು ಮಾತೃಭೂಮಿ ಸ್ವರ್ಗಕ್ಕಿಂತ ದೊಡ್ಡದು” ಎಂದು ಅರ್ಥ. ಇದನ್ನು ಅರಿತ ಸ್ತ್ರೀ ನಮ್ಮ ಸಮಾಜದಲ್ಲಿ ಪುರುಷರಿಗೆ ಗೌರವಿಸುವುದು. ಒಂದು ಧರ್ಮ ಮತ್ತು ಕರ್ತವ್ಯ. ಹಾಗಾಗಿ ನಮ್ಮ ಸಮಾಜ ಪುರುಷ ಪ್ರಧಾನವಾಗಿ ನೋಡುತ್ತದೆ. ಸಹಜವಾಗಿ ಸ್ತ್ರೀಯು ಕೂಡಾ ಪ್ರಧಾನವಾಗಿ ನೋಡುವುದು ಅವಳ ವಿಶಾಲ ಮನೋಭಾವವಾಗುತ್ತದೆ. ಜೊತೆಗೆ ಕುಟುಂಬವನ್ನು ಜವಾಬ್ದಾರಿಯುತವಾಗಿ ನಿಭಾಯಿಸುವ ಆದ್ಯ ಕರ್ತವ್ಯಗಳನ್ನು ಈ ಕಥೆಗಳಲ್ಲಿ ನಾವು ಕಾಣುತ್ತೇವೆ. ತನ್ನ ಆಸೆ ಆಕಾಂಕ್ಷೆಗಳು ಬದಿಗೆ ಸರಿಸಿ ತನ್ನ ಪರಿವಾರವನ್ನು ಪ್ರೀತಿ, ಮಮತೆ, ವಾತ್ಸಲ್ಯದಿಂದ ಪಾಲಿಸುವ ಪೋಷಿಸುವ ಮಾತೃಮಯಿ ಸ್ತ್ರೀಯ ಕುರಿತು ಇರ್ವರು ಲೇಖಕಿಯರ ಕಥೆಗಳಲ್ಲಿ ಕಾಣುತ್ತೇವೆ.